Wednesday, September 5, 2012

ಸುವರ್ಣ ಸಂಭ್ರಮದಲ್ಲಿ ಶಿಕ್ಷಕ ದಿನ ಮತ್ತು ಜಿಜ್ಞಾಸೆ!



 ಇದು ಶಿಕ್ಷಕರ ದಿನಾಚರಣೆಯ ಸುವರ್ಣ ಸಂಭ್ರಮದ ಆಚರಣೆ ಅಂದರೆ ದೇಶದಲ್ಲಿ ಶಿಕ್ಷಕರ ದಿನಾಚರಣೆ ಆರಂಭವಾಗಿ 50ವರ್ಷಗಳು ಸಂದಿವೆ. ಮೊದಲ ಶಿಕ್ಷಕರ ದಿನಾಚರಣೆ ನಡೆದದ್ದು ಸೆ.5, 1962. ಅದು ಸರ್ವೆಪಲ್ಲಿ ರಾಧಾಕೃಷ್ಣನ್ ಭಾರತದ ಉಪ ರಾಷ್ಟ್ರಪತಿಯಾಗಿ ನೇಮಕವಾದ ವರ್ಷ ಅಷ್ಟೇ ಅಲ್ಲ ರಾಧಾಕೃಷ್ಣನ್ ಜನಿಸಿದ ದಿನಾಂಕವೂ ಹೌದು. ಆದರೆ ಈ ಕುರಿತು ಜಿಜ್ಞಾಸೆ ಇರುವುದನ್ನು ಅವರ ಜೀವನ ಕುರಿತ ಪುಸ್ತಕದಲ್ಲಿ ಡಾ ಸರ್ವೆಪಲ್ಲಿ ಗೋಪಾಲ್ ಉಲ್ಲೇಖಿಸಿದ್ದಾರೆ. ಹಾಗಾಗಿ ಯುನೆಸ್ಕೋ ಘೋಷಿಸಿರುವಂತೆ ಅಕ್ಟೋಬ್ 5ರಂದು ಶಿಕ್ಷಕರ ದಿನಾಚರಣೆ ಆಚರಿಸಬೇಕೆಂಬ ಕೂಗು ಕೇಳಿ ಬರುತ್ತಿದೆ. ಏನೇ ವೈರುಧ್ಯಗಳಿದ್ದರೂ ಈ ದಿನಕ್ಕೆ 50ವರ್ಷ ಸಂದಿರುವುದರಿಂದ ಇದನ್ನೆ ಶಿಕ್ಷಕರ ದಿನವೆಂದು ಆಚರಿಸಿಕೊಂಡು ಬರಲಾಗುತ್ತಿದೆ. ಈ ಸಂಧರ್ಭದಲ್ಲಿ ಶಿಕ್ಷಕರ ಮತ್ತು ಶೈಕ್ಷಣಿಕ ವಾತಾವರಣದ ಕುರಿತು ಮಾತನಾಡಬೇಕಾದ ಅಗತ್ಯವಿದೆ.

 ಅದಕ್ಕೂ ಮುನ್ನ ಡಾ ಸರ್ವೆಪಲ್ಲಿ ರಾಧಾಕೃಷ್ಣನ್ ಕುರಿತ ಪುಟ್ಟ ಮಾಹಿತಿ ನಿಮಗಾಗಿ. ಸರ್ವೆಪಲ್ಲಿ ರಾಧಾಕೃಷ್ಣನ್  ತೆಲುಗು ಬ್ರಾಹ್ಮಣ ಬಡ ಕುಟುಂಬದಲ್ಲಿ ಹುಟ್ಟಿದ್ದು ತಮಿಳುನಾಡಿನ ತಿರುತ್ತಾನಿ ಎಂಬ ಗ್ರಾಮದಲ್ಲಿ. ಒಬ್ಬ ತತ್ವಜ್ಞಾನಿಯಾಗಿ ಆದರ್ಶ ಪ್ರಾಧ್ಯಾಪಕನಾಗಿ ಬೆಳೆದ ಸರ್ವಪಲ್ಲಿ ರಾಧಾಕೃಷ್ಣನ್ ಸಾಧನೆಯ ಶೃಂಗಕ್ಕೇರಿ ಅಂತಿಮವಾಗಿ ಭಾರತದ ಉಪರಾಷ್ಟ್ರಪತಿ ಮತ್ತು ರಾಷ್ಟ್ರಪತಿ ಪದವಿಗೇರಿದರು. ಆ ಮೂಲಕ ಒಬ್ಬ ಸಾಮಾನ್ಯ ಶಿಕ್ಷಕ ವ್ಯಕ್ತಿಯ ನಿರ್ಮಾಣ ಮಾತ್ರವಲ್ಲದೇ ರಾಷ್ಟ್ರದ ಆಡಳಿತವನ್ನು ನಿಭಾಯಿಸುವ ಪರಮೋಚ್ಚ ಪದವಿಗೇರಬಹುದು ಎಂಬುದನ್ನು ಸಾಬಿತು ಪಡಿಸಿದರು.1909ರಲ್ಲಿ ಮದ್ರಾಸ್ ನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ವೃತ್ತಿ ಜೀವನ ಆರಂಭಿಸಿದರು. 1918ರಲ್ಲಿ ಮೈಸೂರು ವಿವಿಯಲ್ಲಿ ಪ್ರೋಫೆಸರ್ ಆದರು. ನಂತರ ದೇಶ ಮತ್ತು ವಿದೇಶಗಳ ಹಲವು ವಿವಿ ಗಳಲ್ಲಿ ಅವಕಾಶ ಗಿಟ್ಟಿಸುವ ಮೂಲಕ ಸಾಧನೆ ಗೈದರು. ಪೌರಾತ್ಯ ಮತ್ತು ಪಾಶ್ಚಿಮಾತ್ಯ ತತ್ವ ಜ್ಞಾನದ ಪದ್ದತಿಗಳನ್ನು ವಿವರವಾಗಿ ರಚಿಸಿದ ರಾಧಾಕೃಷ್ಣನ್ ತನ್ನ ವಿದ್ವತ್ ನಿಂದಾಗಿ ಕಲ್ಕತ್ತಾ ಮತ್ತು ಆಕ್ಸ್ ಫರ್ಡ್ ವಿವಿಗಳಲ್ಲಿ ಅವಕಾಶ ಪಡೆದಿದ್ದರು. ಸ್ವಾತಂತ್ರ್ಯ ಪೂರ್ವದಲ್ಲಿಯೇ ಬಿಟ್ರೀಷ್ ಸಂಸ್ಥಾನ ನೀಡುತ್ತಿದ್ದ ಸರ್ ಪದವಿ ಪಡೆದಿದ್ದರು. 1954ರಲ್ಲಿ ಅವರಿಗೆ ಭಾರತ ಸರ್ಕಾರ ಜೀವಿತಾವಧಿಯಲ್ಲೇ ಭಾರತ ರತ್ನ ಪ್ರಶಸ್ತಿಯನ್ನೂ ಸಹಾ ನೀಡಿ ಗೌರವಿಸಿದೆ. ಬರಿಟೀಷ್ ಅಕಾಡೆಮಿ ಫೆಲೋಶಿಪ್ ನೀಡಿದೆಯಲ್ಲದೇ ಜರ್ಮನಿಯ ಪ್ರತಿಷ್ಟಿತ ಟೆಂಪ್ಲೆಟಾನ್ ಪ್ರಶಸ್ತಿ ಅವರ ಮುಡಿಗೇರಿದೆ. ತತ್ವಶಾಸ್ತ್ರದಲ್ಲಿನ ಅವರ ಅನುಪಮ ಸೇವೆಗಾಗಿ ಸತತವಾಗಿ 5ರವರ್ಸಗಳ ಕಾಲ ಅವರ ಹೆಸರು ನೋಬೆಲ್ ಪ್ರಶಸ್ತಿಗಾಗಿ ಶಿಫಾರಸ್ಸಾಗಿತ್ತು ಎಂಬುದು ಗಮನಾರ್ಹ. ಅವರು ರಾಷ್ಟ್ರಪತಿ ಹುದ್ದೆಗೇರುವ ಮುನ್ನ ಯುನೆಸ್ಕೋ ದಲ್ಲಿ ಭಾರತದ ಪ್ರತಿನಿಧಿಯಾಗಿ ಕಾರ್ಯ ನಿರ್ವಹಿಸಿದರಲ್ಲದೇ ಸೋವಿಯತ್ ಯೂನಿಯನ್ ನಲ್ಲಿ ಭಾರತದ ರಾಯಭಾರಿಯಾಗಿಯೂ ಕಾರ್ಯ ನಿರ್ವಹಿಸಿದರು.ರಾಷ್ರ್ಟಪತಿಯಾಗಿದ್ದಾಗ ಅವರ ಹುಟ್ಟಿದ ಹಬ್ಬವನ್ನು ಆಚರಿಸಲು ಬಂಧುಗಳು ಮತ್ತು ಸ್ನೇಹಿತರು ಮುಂದಾದಾಗ ಅದನ್ನು ಶಿಕ್ಷಕರ ದಿನವನ್ನಾಗಿ ಆಚರಿಸುವಂತೆ ಅವರು ಸೂಚಿಸಿದ್ದರಲ್ಲದೇ ಆ ಮೂಲಕ ಸಮಸ್ತ ಶಿಕ್ಷಕ ಸಮುದಾಯಕ್ಕೆ ಗೌರವವನ್ನು ಅರ್ಪಣೆ ಮಾಡಿದ್ದಾರೆ.

            ಈ ನಡುವೆ ರಾಧಾಕೃಷ್ಣನ್ ಹೆಸರಿನಲ್ಲಿ ಶಿಕ್ಷಕರ ದಿನಾಚರಣೆ ಮಾಡುವುದರ ಕುರಿತು ಹಲವು ಆಕ್ಷೇಪಣೆಗಳು ಕೇಳಿ ಬಂದಿವೆ. ನೇರ ನಡೆ ನುಡಿಯ ದಿಟ್ಟ ವಿಮರ್ಶಕ ಪ್ರೊ. ಜಿ ಎಚ್ ನಾಯಕ ಈ ಕುರಿತ ಪ್ರಸ್ತಾವಗಳನ್ನು ಪತ್ರಿಕೆಯೊಂದರ ಮೂಲಕ ಹೊರಗೆಡವಿದ್ದಾರೆ. ರಾಧಾಕೃಷ್ಣನ್ ರ ಪುತ್ರ ಇತಿಹಾಸಕಾರ,ಇತಿಹಾಸ ಪ್ರಾಧ್ಯಾಪಕ,ಅಂತರಾಷ್ಟ್ರೀಯ ಖ್ಯಾತಿಯ ಇತಿಹಾಸಕಾರ  ಡಾ ಸರ್ವೆಪಲ್ಲಿ ಗೋಪಾಲ್  ಬರೆದಿರುವ  "ರಾಧಾಕೃಷ್ಣನ್ -ಎ ಭಯಾಗ್ರಫಿ" ಪುಸ್ತಕದಲ್ಲಿ ಜನ್ಮ ದಿನದ ಗೋಂದಲ, ರಾಧಾಕೃಷ್ಣನ್ ಜನ್ಮದ ಕುರಿತ ಅಶ್ಲೀಲ ಕಥೆ, ಅದೇ ಕಾರಣಕ್ಕಾಗಿ ತಾಯಿಯನ್ನು ದೂರವಿರಿಸಿದ್ದು, ಅವರು ಪ್ರಾಧ್ಯಾಪಕರಾಗಿದ್ದಾಗ ಮೈಸೂರಿನಲ್ಲಿ ಪಕ್ಕದ ಮನೆಯವನ ಹೆಂಡತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದು ಅದೇ ಆರಂಭವಾಗಿ ಮುಂದೆ ಹಲವು ಹೆಂಗೆಳೆಯರ ಸಹವಾಸ ಮಾಡಿದ್ದು, ಅವರ ಭಾಷಣಗಳಲ್ಲಿ ಆತ್ಮವಂಚನೆಯ ಭಾಷಣಗಳನ್ನು ಮಾಡುತ್ತಿದ್ದುದು, ತನ್ನ ಐವರು ಹೆಣ್ಣು ಮಕ್ಕಳನ್ನು ಬಾಲ್ಯ ವಿವಾಹ ಮಾಡಿದ್ದು, ವೃತ್ತಿಯ ಬಗೆಗಿನ ಪ್ರೇಮದಿಂದ ಅಧಿಕಾರಕ್ಕೆ ಅಂಟಿಕೊಳ್ಳುವ ನೀತಿಯನ್ನು ಪ್ರದರ್ಶಿಸಿದ್ದು ಒಂದೇ ಎರಡೇ ಹೀಗೆ ರಾಧಾಕೃಷ್ಣನ್ ರ ನೆಗೆಟೀವ್ ಅಂಶಗಳನ್ನು ಪ್ರಸ್ಥಾಪಿಸುವ ಮೂಲಕ ಇಂತಹವರ ಹೆಸರಿನಲ್ಲಿ ಶಿಕ್ಷಕರ ದಿನಾಚರಣೆ ಮಾಡುವುದು ಎಷ್ಟು ಸರಿ ಎಂಬ ಪ್ರಶ್ನೆಯನ್ನು ಎತ್ತಲಾಗಿದೆ. ಅದು ಸಮಂಜಸವೂ ಇರಬಹುದು ಆದರೆ ಅದೇ ಅಂತಿಮವೂ ಆಗಬೇಕಿಲ್ಲ. ಈ ಹಿಂದೆಸ್ವಾಮಿ ವಿವೇಕಾನಂದರ ಕುರಿತು ಇಂತಹುದ್ದೇ ಸತ್ಯಗಳು ಅನಾವರಣಗೊಂಡಿದ್ದವು ಅವರೊಬ್ಬ ದಡ್ಡ ಮತ್ತು ಮೂರ್ಖ, ವಾಸಿಯಾಗದ ಕಾಯಿಲೆಗಳಿದ್ದವು ಮತ್ತು ಆತ ಶುದ್ದ ಮಾಂಸಹಾರಿ ಇತ್ಯಾದಿ.ಆದರೆ ಸಮಾಜದಲ್ಲಿ ಉನ್ನತ ಧ್ಯೇಯ ಮತ್ತು ಆದರ್ಶ ಪುರುಷರಂತೆ ಕಾಣಿಸುವ ವ್ಯಕ್ತಿಗಳ ವೈಯುಕ್ತಿಕ ಬದುಕು ಏನೇ ಆಗಿದ್ದರೂ ಸಹಾ ಸಮಾಜ ಮುಖಿಯಾಗಿ ಕಾಣಿಸಿಕೊಳ್ಳುವ ವ್ಯಕ್ತಿತ್ವಗಳು ಮತ್ತು ವಿಚಾರಗಳು ಹೆಚ್ಚು ಆಧ್ಯತೆ ಪಡೆಯುತ್ತವೆ.

            ಇನ್ನು ಪ್ರಸಕ್ತ ವಿಷಯಕ್ಕೆ ಬರುವುದಾದರೆ ಶಿಕ್ಷಕ ದಿನಾಚರಣೆ ಶಿಕ್ಷಕ ಸ್ಥಾನದ ಪಾವಿತ್ರ್ಯತೆಯನ್ನು ಎತ್ತಿ ಹಿಡಿಯುವ ಗೌರವವನ್ನು ಸಾರಿ ಹೇಳುವ ದಿನ. ಹಿಂದಿನ ದಶಕಗಳಲ್ಲಿ ಗುರು ಮತ್ತು ಶಿಷ್ಯರ ನಡುವೆ ಇದ್ದ ಬಾಂಧವ್ಯಗಳು ಈಗ ಇಲ್ಲ. ಆಧುನೀಕರಣದ ಪ್ರವಾಹದಲ್ಲಿ ಶಿಕ್ಷಕ ವೃತ್ತಿಯ ಪಾವಿತ್ರ್ಯತೆಯೂ ಈಗ ಉಳಿದಿಲ್ಲ, ಶಿಕ್ಷಣ ವ್ಯಾಪಾರೀಕರಣವಾಗಿದೆ ಶಾಲೆಗಳಿಗೆ ಅಗತ್ಯಕ್ಕಿಂತ ಹೆಚ್ಚು ಸೌಲಭ್ಯಗಳು ಬಂದಿವೆ, ಸಂಬಳ-ವಗೈರೆಗಳು ಹೆಚ್ಚಿವೆ. ಜೊತೆಗೆ ಶಿಕ್ಷಕರ ಕಾರ್ಯಗಳು ವಿಸ್ತೃತವಾಗಿವೆ. ಶಿಕ್ಷಕರು ಈಗ ಮಕ್ಕಳಿಗೆ ಪಾಠ ಹೇಳುವ ಗುರುಗಳಾಗಿ ಮಾತ್ರ ಉಳಿಯದೇ ಬೇರೆ ಚಟುವಟಿಕೆಗಳು ಅವರ ಹೆಗಲೇರಿವೆ. ಕಲಿಸುವ ಉತ್ಸಾಹ ಕುಂದಿದೆ, ವಿದ್ಯಾರ್ಥಿಗಳೂ ಈಗ ಹಿಂದಿನಂತೆ ಉಳಿದಿಲ್ಲ ಶಿಕ್ಷಕರನ್ನೆ ನಿಯಂತ್ರಿಸುವ ಅಗೌರವ ತೋರುವ ಪ್ರವೃತ್ತಿಯೂ ಬೆಳೆದಿದೆ. ಇದಕ್ಕೆ ಶಿಕ್ಷಕರು ಪರೋಕ್ಷವಾಗಿ ಕಾರಣ ಎಂಬ ಮಾತನ್ನು ಅಲ್ಲಗೆಳೆಯುವಂತಿಲ್ಲ. ಶಿಕ್ಷಕರು ತಮ್ಮ ವೃತ್ತಿಯ ಗಾಂಭಿರ್ಯತೆಯನ್ನು ಅರಿಯದೇ ತೋರುವ ನಡವಳಿಕೆಗಳು, ಬಾಹ್ಯ ಚಟುವಟಿಕೆಗಳು, ಅಭಿರುಚಿಗಳು ಆ ಸ್ಥಾನದ ಪಾವಿತ್ಯತೆಯನ್ನು ಕಳೆದಿವೆ.ಪ್ರಾಮಾಣಿಕವಾಗಿ ವೃತ್ತಿಯನ್ನು ನಿರ್ವಹಿಸುವ ಪ್ರಜ್ಞೆಯನ್ನು ತೋರದೇ ರಾಜಕೀಯ, ಪುಡಾರಿತನ, ವ್ಯವಹಾರ ಮತ್ತು ಸಮಾಜ ಹೇಸಿಗೆ ಪಟ್ಟುಕೊಳ್ಳುವ ಚಟುವಟಿಕೆಗಳಲ್ಲಿ ತೊಡಗಿಕೊಂಡು ಮಾದ್ಯಮಗಳಲ್ಲಿ ಸುದ್ದಿಯಾಗುತ್ತಿರುವುದು ದುರಂತದ ಸಂಗತಿ. ಹತ್ತು ಶಿಕ್ಷಕರಲ್ಲಿ ಒಬ್ಬಿಬ್ಬರು ಪ್ರಾಮಾಣಿಕವಾಗಿ ಕೆಲಸ ಮಾಡಲು ಮುಂದಾಗುತ್ತಾರಾದರೂ ಇತರ ಶಿಕ್ಷಕರು ಅಡ್ಡಗಾಲು ಹಾಕುವ ಪ್ರವೃತ್ತಿಯಿಂದಾಗಿ ಅವರು ತಟಸ್ಥರಾಗಿ ಉಳಿಯುವ ಸಂಭವವೇ ಹೆಚ್ಚು ಇಂತಹದ್ದನ್ನು ಪ್ರತೀ ಶಾಲೆ ಮತ್ತು ಕಾಲೇಜುಗಳಲ್ಲೂ ಕಾಣಬಹುದು. ಕಲಿಕೆಯಲ್ಲೂ ಅಂತಹ ಗುಣಾತ್ಮಕ ಅಂಶಗಳನ್ನು ಕಾಣಲಾಗುತ್ತಿಲ್ಲ,  ಅಧ್ಯಯನದ ಕೊರತೆ, ಅನುಭವದ ಕೊರತೆ ಎದ್ದು ಕಾಣುತ್ತಿದ್ದು ವೈಯುಕ್ತಿಕ ಹಿತಾಸಕ್ತಿಗಳೂ ಕೂಡಾ ಶೈಕ್ಷಣಿಕ ಪ್ರಗತಿಯ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡುತ್ತಿವೆ. ಇಂತಹ ಸಂಧಿಗ್ಧ ಪರಿಸ್ಥಿತಿಯಲ್ಲಿ ಶಿಕ್ಷಕರು ಜಾಗೃತರಾಗಬೇಕಿದೆ. ತಮ್ಮ ಸ್ತಾನದ ಘನತೆ ಗೌರವಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಎಚ್ಚರಿಕೆಯ ಹೆಜ್ಜೆ ಇಡಬೇಕಾಗಿದೆ.
           
            

Sunday, August 5, 2012

ಯಾವುದ್ರೀ ಅದು "ನೈತಿಕ ಪೋಲೀಸ್ ಗಿರಿ"?



ಕಳೆದ ಶನಿವಾರ ಮಾರ್ನಿಂಗ್ ಮಿಸ್ಟ್ ಹೋಂ ಸ್ಟೇ ನಲ್ಲಿ ನಡೆದ ಹಿಂದೂ ಜಾಗರಣ ವೇದಿಕೆಯ ದಾಳಿಯ ಪ್ರಕರಣದ ಕುರಿತು ಪ್ರತಿಭಟನೆಗಳು ನಡೆಯುತ್ತಿವೆ ಮಾದ್ಯಮಗಳಲ್ಲಿ ಚರ್ಚೆಗಳು ಆಗುತ್ತಿವೆ ಫೇಸ್ ಬುಕ್ ನಂತಹ ಸಾಮಾಜಿಕ ತಾಣಗಳಲ್ಲಿ ಪರ-ವಿರೋಧದ ಚರ್ಚೆಗಳು ಜಾರಿಯಲ್ಲಿವೆ, ಯೂಟ್ಯೂಬ್ ನಲ್ಲಿ ಘಟನೆಯ ತುಣುಕುಗಳನ್ನು ಪದೇ ಪದೇ ಮುಗಿಬಿದ್ದು ನೋಡಲಾಗುತ್ತಿದೆ. ಘಟನೆಯ ಕುರಿತು ಸರ್ಕಾರ ಜಾಣತನದ ನಿರ್ಲಕ್ಷ್ಯ ತೋರಿದರೂ ಒತ್ತಡ ಹೆಚ್ಚಾದಂತೆ ಅಪರಾಧಿಗಳನ್ನು ಬಂಧಿಸುತ್ತಿದ್ದಾರೆ. ಈ ಘಟನೆಯಲ್ಲಿ ಬಳಕೆ ಯಾಗುತ್ತಿರುವ ಪುಂಡರ ನೈತಿಕ "ಪೋಲೀಸ್ ಗಿರಿ", ಘಟನೆ ಕುರಿತು ಪೋಲೀಸರ ವರ್ತನೆಗಳು, ಮಾದ್ಯಮದ ಹೊಣೆಗಾರಿಕೆಗಳು, ಸರ್ಕಾರದ ನಿರ್ಲಕ್ಷ್ಯ ಧೋರಣೆಗಳು, ಪೋಷಕರ ನಿರ್ಲಕ್ಷ್ಯತನ, ಪ್ರಕರಣದ ವಾಸ್ತವತೆ ಅರಿಯದೇ ಬೀದಿಗಿಳಿದು ಪ್ರತಿಭಟಿಸುತ್ತಿರುವವರ ಧೋರಣೆಗಳು ಸಧ್ಯ ಚರ್ಚೆಗೆ ಬರುವುದು ಅವಶ್ಯವಾಗಿದೆ.  

ಅವತ್ತು ಶನಿವಾರ ರಾತ್ರಿ ಮಂಗಳೂರಿನ ಕಾರ್ಪೋರೇಟರ್ ಮೋಹನ್ ಪಡೀಲ್ ಎಂಬ ಚಡ್ಡಿಯ ನೇತೃತ್ವದಲ್ಲಿ ಹಿಂದೂ ಜಾಗರಣಾ ವೇದಿಕೆ ಹೆಸರಿನಡಿಯಲ್ಲಿ ಪುಂಡರು ಮಾರ್ನಿಂಗ್ ಮಿಸ್ಟ್ ಹೋಂ ಸ್ಟೇ ಮೇಲೆ ನಡೆಸಿದ ದಾಳಿಯ ಸಂಧರ್ಭದಲ್ಲಿ ಪಾರ್ಟಿ ನಡೆಸುತ್ತಿದ್ದವರ ಬಳಿ ನಡೆದುಕೊಂಡ ರೀತಿ ಖಂಡನೀಯ ಹಾಗೂ ಶಿಕ್ಷಾರ್ಹ. ಅದೇ ರೀತಿ ಅನೈತಿಕತೆಯ ಪಾರ್ಟಿ ನಡೆಸುತ್ತಿದ್ದವರು ಕೂಡಾ ಶಿಕ್ಷಾರ್ಹರು ಎಂಬುದು ಅಷ್ಟೇ ಸತ್ಯ. ಮಂಗಳೂರಿನಲ್ಲಿ ಇಂತಹ ಘಟನೆಗಳು ನಡೆಯುತ್ತಿರುವುದು ಇದೇ ಮೊದಲೇನಲ್ಲ ಈ ಹಿಂದೆ ನಡೆದ ಪಬ್ ಅಟ್ಯಾಕ್ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಿತ್ತು ತೀರ ಈಚೆಗೆ ಅಸ್ಸಾಂನ ಗುರ್ ಗಾಂವ್ ನಲ್ಲಿ 16ರ ಬಾಲೆಯನ್ನು ಗುಂಪೊಂದು ನಡು ರಸ್ತೆಯಲ್ಲಿ ಸಾರ್ವಜನಿಕವಾಗಿ ಬಟ್ಟೆ ಬಿಚ್ಚಿ ಅನಾಚಾರ ಎಸಗಲು ಪ್ರಯತ್ನಿಸಿದ ಘಟನೆ ರಾಷ್ಟ್ರಾದ್ಯಂತ ಚರ್ಚೆಯಾಗುತ್ತಿರುವ ಸಂಧರ್ಭದಲ್ಲೇ ಮಂಗಳೂರಿನ ಹೋಂ ಸ್ಟೇ ಪ್ರಕರಣ ನಡೆದದ್ದು ರಾಜ್ಯದ ಜನತೆ ತಲೆ ತಗ್ಗಿಸುವಂತೆ ಮಾಡಿದೆ. ಏಕೆಂದರೆ ರಾಜ್ಯದಲ್ಲಿ ಆಡಳಿತದಲ್ಲಿರುವ ಬಿಜೆಪಿ ಪಕ್ಷದ ಕೃಪಾ ಪೋಷಿತ ಸಂಘಟನೆಯೊಂದು ಈ ಕೃತ್ಯದಲ್ಲಿ ಭಾಗಿಯಾಗಿದ್ದು ಮತ್ತು ತಕ್ಷಣ ಕೃತ್ಯದ ಕುರಿತು ಕ್ರಮ ಜರುಗಿಸುವಲ್ಲಿ ವಿಫಲವಾಗಿದ್ದು ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ. ಹೇಳಿ ಕೇಳಿ ಮಂಗಳೂರು ಪಾಶ್ಚಾತ್ಯ ಸಂಸ್ಕೃತಿಗೆ ಹೆಚ್ಚು ಒಗ್ಗಿಕೊಂಡ ಕಡಲ ತಡಿಯ ಪ್ರದೇಶ, ವಿದೇಶಗಳಲ್ಲೂ ಹೆಚ್ಚಿನವರು ನೆಲೆಸಿರುವುದು ಅಲ್ಲಿನವರೇ ಗೊತ್ತಿದ್ದೊ ಗೊತ್ತಿಲ್ಲದೇಯೋ ದೇಸೀ ಸಂಸ್ಕೃತಿಗಿಂತ ಅಲ್ಲಿ ಬೇರೆ ಸಂಸ್ಕೃತಿಗಳ ಪ್ರಭಾವವೇ ಹೆಚ್ಚಾಗಿದೆ. ಪರಿಣಾಮ ಅನೈತಿಕತೆಯಂತಹ ಸಂಗತಿಗಳು ಅಲ್ಲಿ ನಿತ್ಯ ನೂತನ.! ಉದ್ದಿಮೆಗಳಿಗೆ, ಶಿಕ್ಷಣ ಸಂಸ್ಥೆಗಳಿಗೆ ಮತ್ತು ಸೇವಾ ಸಂಸ್ಥೆಗಳಿಗೆ, ಧಾರ್ಮಿಕತೆಗೆ ಹೆಚ್ಚು ಒತ್ತು ನೀಡುವ ಮಂಗಳೂರು ಅತ್ಯಂತ ಪ್ರಬುದ್ದರನ್ನು ಸಹಾ ನೀಡಿದೆ ಆದರೆ ಅದೇ ನೆಲದಲ್ಲಿ ಇದಕ್ಕೆ ವ್ಯತಿರಿಕ್ತವಾದ ಅಂಶಗಳನ್ನು ತನ್ನ ನೆರಳಲ್ಲಿಯೇ ಪೋಷಿಸುತ್ತಿದೆ ಎನ್ನುವುದು ಸಹಾ ದುರಂತದ ಸಂಗತಿ. ಸಂಘ ಪರಿವಾರದ ಪ್ರಾಬಲ್ಯ ವಿರುವ ಮಂಗಳೂರಿನಲ್ಲಿ ಸಭ್ಯತೆ, ಶಿಷ್ಠಾಚಾರ ಮತ್ತು ಪ್ರಾಮಾಣಿಕತೆಗಳು ಇರುವ ಜೊತೆಗೆ ಕೋಮು ಕಲಹ ಹರಡುವ ಪುಂಡರ ಹಾವಳಿಯನ್ನು ಪೋಷಿಸುವ ಪ್ರಕ್ರಿಯೆಗಳು ಜಾರಿಯಲ್ಲಿವೆ. ವಿಪರ್ಯಾಸವೆಂದರೆ ಅದೇ ನೆಲದಲ್ಲಿ ಹಿಂದುತ್ವ/ಕ್ರೈಸ್ತ/ಮುಸಲ್ಮಾನರ ಮೂಲಭೂತ ವಾದದದ ಪ್ರತಿಪಾದನೆಯಂತೆಯೇ ಕಮ್ಯುನಿಸಂ ಧೋರಣೆಯ ಜನರು ಇದ್ದಾರಾದರೂ ಮೂಲಭೂತವಾದಿಗಳದ್ದೇ ಇಲ್ಲಿ  ಕೈ ಮೇಲಾಗಿರುವುದು ಕಾಣ ಸಿಗುತ್ತದೆ. ಆದ್ದರಿಂದಲೇ ಅದು ಸದಾ ಹೊತ್ತಿ ಉರಿಯುವ ಸೂಕ್ಷ್ಮ ಪ್ರದೇಶವೂ ಹೌದು.ಇದೆಲ್ಲಾ ರಾಜಕಾರಣಕ್ಕೆ ಮತ್ತು ವ್ಯವಸ್ಥೆಯನ್ನು ಪಟ್ಟಭದ್ರರು ಹಿಡಿತಕ್ಕೆ ತೆಗೆದುಕೊಳ್ಳಲು ಅನುವು ಮಾಡಿಕೊಟ್ಟಿದೆ. ಅಲ್ಲಿನ ಶಿಕ್ಷಣ ಸಂಸ್ಥೆಗಳಿಗೆ ದೇಶ-ವಿದೇಶಗಳಿಂದ ಮತ್ತು ಹೊರ ರಾಜ್ಯಗಳಿಂದ ವಿದ್ಯಾರ್ಥಿಗಳ ದಂಡೇ ಹರಿದು ಬರುತ್ತದೆ. ಶಿಕ್ಷಣ ಅಲ್ಲಿ ವ್ಯಾಪಾರೀಕರಣದ ಅಡ್ಡೆಯಾಗಿದೆ ಅದೇ ನೆರಳಲ್ಲಿ ಅನಾಚಾರಗಳಿಗೂ ವೇದಿಕೆಯಾಗಿರುವುದು ನೋವಿನ ಸಂಗತಿ. ಕಲಿಯಲು ಬರುವ ಕೆಲವು ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ನೈತಿಕತೆಯ ಅಂಶಗಳನ್ನು ಮರೆಸುವ ವಿಚಾರಗಳತ್ತಲೂ ಆಕರ್ಷಿತರಾಗಿ ಬಿಡುತ್ತಾರೆ. ಮಾದಕ ದ್ರವ್ಯಗಳ ವ್ಯಸ್ನನ,ಕುಡಿತ, ಸೆಕ್ಸ್, ಬಿಡಾಡಿ ವರ್ತನೆಗಳೆಲ್ಲವನ್ನೂ ರೂಡಿಸಿಕೊಂಡು ವ್ಯವಸ್ಥೆಯಲ್ಲಿ ಕಂಟಕಪ್ರಾಯವಾಗಿಬಿಡುತ್ತಾರೆ, ಹೆತ್ತವರಿಗೆ ತಿಳಿಯದಂತೆ ಲಿವಿಂಗ್ ಟುಗೆದರ್ ಬದುಕು ನಡೆಸಿ ಕೋರ್ಸ್ ಪೂರೈಸಿದ ನಂತರ ಅವರವರ ಪಾಡಿಗೆ ಬೇರೆ ಹೋಗಿ ಬಿಡುತ್ತಾರೆ.  ಎಷ್ಟೋ ಪೋಷಕರಿಗೆ ತಮ್ಮ ಮಕ್ಕಳು ಏನು ಮಾಡುತ್ತಿದ್ದಾರೆಂಬ ಅರಿವು ಇರುವುದಿಲ್ಲ. ಇಂತಹದ್ದೆಲ್ಲ ಮೇಳೈಸಿ ಪಬ್ ಅಟ್ಯಾಕ್ ಮತ್ತು ಮಾರ್ನಿಂಗ್ ಮಿಸ್ಟ್ ಹೋಂ ನಂತಹ ಘಟನೆಗಳು ಜರುಗಲು ಕಾರಣವಾಗಿ ಬಿಡುತ್ತವೆ ಎಂಬುದು ಸತ್ಯ ಅಲ್ಲವೇ?

http://www.youtube.com/watch?v=22czcPNG-3M&feature=player_embedded#!

ಇನ್ನು ಪಬ್ ಅಟ್ಯಾಕ್ ವಿಷಯಕ್ಕೆ ಬರೋಣ ಹೋಂ ಸ್ಟೇ ಮೇಲೆ ಧಾಳಿ ಮಾಡಿದ ಪುಂಡರು ಅರೆ ನಗ್ನ ಸ್ಥಿತಿಯಲ್ಲಿದ್ದ ಯುವತಿಯರನ್ನು ಮುಟ್ಟಬಾರದ ಜಾಗದಲ್ಲಿ ಮುಟ್ಟಿ ಹೊಡೆದು ಬಡಿದು ರಾಕ್ಷಸಿ ಕೃತ್ಯವನ್ನು ಎಸಗಿದ್ದು ಕ್ಷಮಿಸಲಾಗದ ದುರ್ವರ್ತನೆ, ಪುಂಡರ ಇಂತಹ ಕೃತ್ಯವನ್ನ ನೈತಿಕ ಪೋಲೀಸ್ ಗಿರಿ ಎಂದು ಹೇಳುವುದು ತಪ್ಪು, ವಿಕೃತ ಮನೋಭಾವದವರು ನೈತಿಕತೆಯ ಅಂಶಗಳನಿಟ್ಟುಕೊಂಡು ಅಲ್ಲಿಗೆ ಧಾಳಿ ನಡೆಸಿರಲಿಲ್ಲ ಅದರ ಹಿಂದಿನ ಉದ್ದೇಶಗಳೇ ಬೇರೆ ಎಂಬುದು ಬೆಳಕಿಗೆ ಬರುತ್ತಿದೆ.ನಗರದ ಹೊರವಲಯದಲ್ಲಿ  ಅನಧಿಕೃತ ಹೋಂ ಸ್ಟೇ ನಡೆಯುತ್ತಿದ್ದರೂ ಪೋಲೀಸ್ ಮತ್ತು ಜಿಲ್ಲಾ ಆಡಳಿತ ವ್ಯವಸ್ಥೆ ಕಂಡರೂ ಕಾಣದಂತಿತ್ತು ಇದನ್ನು ದುರುಪಯೋಗ ಪಡಿಸಿಕೊಂಡ ಪುಂಡ ಚಡ್ಡಿ ಲೀಡರ್ ಅಲ್ಲಿಂದ 5000ರೂಗಳ ಮಾಮೂಲಿ ಹಫ್ತಾ ಪಡೆಯುತ್ತಿದ್ದ ಅದು ಸಿಗದಿದ್ದಾಗ ಹಿಂದೂ ಸಂಸ್ಕೃತಿಯ ಹೆಸರಿನಲ್ಲ ತನ್ನ ಪಟಾಲಂ ಅನ್ನು ಛೂ ಬಿಟ್ಟ ಅಹಿತಕರ ಘಟನೆಗೆ ಕಾರಣನಾಗಿದ್ದಾನೆ ಹೀಗಿರುವಾಗ ಅದು ನೈತಿಕ ಪೋಲೀಸ್ ಗಿರಿ ಹೇಗಾದೀತು? ಇನ್ನು ಅಲ್ಲಿ ಪಾರ್ಟಿ ನಡೆಸಿದವರ ಕಥೆ, ಪಾರ್ಟಿಯ ಕೇಂದ್ರ ಬಿಂದುಗಳು ವಿದ್ಯಾರ್ಥಿಗಳಲ್ಲ ಎಂಬುದು ಜಗಜ್ಜಾಹಿರಾಗಿರುವ ಸತ್ಯ ಮತ್ತು ಅವರ ಸಾರ್ವಜನಿಕ ನಡವಳಿಕೆಗಳ ಕುರಿತು ಒಳ್ಳೆಯ ಮಾತುಗಳಿಲ್ಲ. ಮದ್ಯಾಹ್ನವೇ ಬರ್ತ್ ಡೇ ಪಾರ್ಟಿ ಏರ್ಪಾಡಾಗಿದ್ದರೂ ಕತ್ತಲಾಗುವ ವೇಳೆಗೆ ಅಲ್ಲಿ ಉಳಿದದ್ದು 4-5 ಹುಡುಗಿಯರು ಮತ್ತು ಹುಡುಗರು. ಮಹಿಳಾ ಆಯೋಗದ ಅಧ್ಯಕ್ಷೆ ಸಿ ಮಂಜುಳಾ ಹೇಳುವ ಪ್ರಕಾರ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ತನ್ನ ಹುಟ್ಟು ಹಬ್ಬ ಆಚರಣೆಗೆ ಪಿಯುಸಿ ಓದುತ್ತಿದ್ದ ಸ್ನೇಹಿತೆಯರನ್ನು ಆಹ್ವಾನಿಸಿದ್ದರು. ಉಳಿದ ಯುವತಿಯರು ಕಾಲೇಜು ಯುನಿಫಾರಂ ನಲ್ಲೆ ಹೋಂ ಸ್ಟೇ ಗೆ ಬಂದಿದ್ದರು, ಅಲ್ಲಿ ಅವರಿಗಾಗಿ ಪಾರ್ಟಿ ಡ್ರೆಸ್ ಸಿದ್ದಪಡಿಸಲಾಗಿತ್ತು, ಅವರೆಲ್ಲ ಯೂನಿಫಾರಂ ಕಳಚಿ ಪಾರ್ಟಿ ಡ್ರೆಸ್ ಧರಿಸಿದ್ದರು(ಅವು ಎಂತಹ ಡ್ರೆಸ್ ಗಳು ಎಂಬುದು ಜನತೆ ಈಗಾಗಲೆ ನೊಡಿದ್ದಾರೆ) ಮತ್ತು ಪಾರ್ಟಿ ಆಯೋಜಿಸಿದ್ದ ಯುವಕರಿಗೆ ಆ ಯುವತಿಯರ ಬಗ್ಗೆ ತಿಳಿದಿರಲಿಲ್ಲ! ಬರ್ತ್ ಡೇ ಗೆ ಬಿಯರ್ ತರಲಾಗಿತ್ತು ಪಾರ್ಟಿಯಲ್ಲಿ ಪಾಲ್ಗೊಂಡ ಬಹುತೇಕ ಹುಡುಗಿಯರ ಮನೆಗಳಲ್ಲಿ ತಮ್ಮ ಮಕ್ಕಳು ಅಲ್ಲಿಗೆ ಹೋಗಿದ್ದಾರೆ ಎಂಬುದು ತಿಳಿದಿರಲಿಲ್ಲ ಅಂದರೆ ಇದನ್ನ ಏನೆಂದು ತಿಳಿಯಬೇಕು ? ಇದೇನು ಸೆಕ್ಸ್ ಟೂರಿಸಂ ? ಇದು ಅನೈತಿಕತೆಯಲ್ಲದೇ ಮತ್ತೇನು? ಅಂದು ಸ್ಥಳಕ್ಕೆ ಬಂದ ಪೋಲೀಸರಿಗೆ ಸುತ್ತಮುತ್ತಲ ನಿವಾಸಿಗಳು ಹಲವಾರು ಭಾರಿ ಹೋಂ ಸ್ಟೇ ಮುಚ್ಚಿಸುವಂತೆ ದೂರು ನೀಡಿದ್ದರೂ ಕ್ರಮವಾಗಿರಲಿಲ್ಲ ಮತ್ತು ಘಟನೆ ನಡೆದಾಗ ಸ್ಥಳಕ್ಕೆ ಬಂದರೂ ದಾಳಿಕೋರ ಪುಂಡರನ್ನು ವಶಕ್ಕೆ ಪಡೆಯಲಿಲ್ಲ! ಅಂದರೆ ಇದರ ಹಿಂದಿನ ಹುನ್ನಾರವೇನು? ಮಾಧ್ಯಮಗಳು ಸಾಮಾಜಿಕ ಕಳಕಳಿಯಿಲ್ಲದೇ ಘಟನೆಯನ್ನು ಪ್ರಸಾರ ಮಾಡಿವೆ ಎಂಬ ಹುಯಿಲೆದ್ದಿದೆ ಆದರೆ ಈ ಕುರಿತು ಮಾಧ್ಯಮಗಳಲ್ಲಿ ಪ್ರಸಾರವಾಗದಿದ್ದರೆ ಇಂತಹ ವಾದಗಳಿಗೆ ಮಾನ್ಯತೆ ಇರುತ್ತಿರಲಿಲ್ಲ ಮಾಧ್ಯಮಗಳ ಕುರಿತು ಒಂದೇ ಆಕ್ಷೇಪಣೆಯೆಂದರೆ ಅರೆನಗ್ನ ಸ್ಥಿತಿ ಯನ್ನು ಮತ್ತು ದಾಳಿಗೀಡಾದವರ ಮುಖಗಳಮರೆಮಾಚಿ ತೋರಿಸಬಹುದಿತ್ತು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹೇಳುವುದಾದರೆ ಚಡ್ಡಿಗಳ ತುತ್ತೂರಿ ಆಗಿರುವ ಹೊಸದಿಗಂತ ಪತ್ರಿಕೆ ಬದ್ಧತೆ ಮರೆತು ಪುಂಡರನ್ನು ಸಮರ್ಥಿಸುವ ಧಾಟಿಯಲ್ಲಿ ವರದಿಗಳನ್ನು ಪ್ರಕಟಿಸುತ್ತಿರುವುದು ಮಾಧ್ಯಮ ಲೋಕದ ದುರಂತದ ಸಂಗತಿ. ಸಾಮಾಜಿಕ ಬದ್ಧತೆ ಉಳ್ಳ ಯಾವ ಪೋಷಕರಾದರೂ ತಮ್ಮ ಹೆಣ್ಣು ಮಕ್ಕಳನ್ನು ಹೊರವಲಯದ ಪಾರ್ಟಿಗಳಿಗೆ ಹೋಗಿ ಬಿಯರ್ ಕುಡೀರಿ, ಅರೆನಗ್ನ ಬಟ್ಟೆ ಧರಿಸಿ ಬೇಕಾದಂತೆ ನಡೆದುಕೊಳ್ಳಿ ಹುಟ್ಟುಹಬ್ಬ ಆಚರಿಸಿಕೊಳ್ಳಿ ಎನ್ನುವುದಿಲ್ಲ, ಅದು ನೈತಿಕ ನೆಲೆಗಟ್ಟಿನ ಸಂಗತಿಯೂ ಅಲ್ಲ. ಘಟನೆ ನಡೆಯುತ್ತಿದ್ದಂತೆ ಘಟನೆಯ ಒಮ್ಮುಖವನ್ನು ಮಾತ್ರ ಖಂಡಿಸಿ ಬೀದಿಗಿಳಿಯುವುದು ಸರಿಯಲ್ಲ ಪ್ರಚಾರವನ್ನೆ ಮುಖ್ಯವಾಗಿರಿಸಿಕೊಂಡು ಹೊರಟಾಗ ಇಂತಹ ಎಡವಟ್ಟುಗಳಾಗುತ್ತವೆ ಎಂಬುದನ್ನು ಸಂಘಟನೆಗಳು ಮತ್ತು ಮುಖಂಡರು ಅರಿಯಬೇಕು. ಪ್ರಕರಣವೊಂದನ್ನೇ ಗುರಿಯಾಗಿಸಿಕೊಂಡು ಅಸಹನೆಯನ್ನು ಪ್ರದರ್ಶಿಸುವಾಗ ಅನೈತಿಕತೆಯನ್ನು ಪೋಷಿಸಬಾರದಲ್ಲವೇ? 

Sunday, June 24, 2012

ಕನ್ನಡ ಅನ್ನದ ಭಾಷೆಯಾಗದಿದ್ದರೆ... ಹೀಗೆ!


ರಾಜ್ಯದಲ್ಲಿ ಕನ್ನಡ ಶಾಲೆಗಳನ್ನು ಮುಚ್ಚುತ್ತಿರುವ ಸಂಧರ್ಭದಲ್ಲೇ,ಸರ್ಕಾರಿ ಶಾಲೆಗಳಲ್ಲಿ ಆಂಗ್ಲಮಾಧ್ಯಮ ಆರಂಭಿಸಬಾರದೆಂದು ಕನ್ನಡ ಸಾಹಿತ್ಯ ಪರಿಷತ್ತು ನಿರ್ಣಯ ಕೈಗೊಂಡಿದೆ. ಈ ನಡುವೆ ಪರ-ವಿರೋಧದ ಚಟುವಟಿಕೆಗಳು ಚಾಲ್ತಿಗೆ ಬಂದಿವೆ.ಆದರೆ ಬದಲಾದ ಕಾಲಘಟ್ಟದಲ್ಲಿ ಆಂಗ್ಲ ಮಾಧ್ಯಮ ಎಷ್ಟು ಪ್ರಸ್ತುತ ಮತ್ತು ಅಪ್ರಸ್ತುತ ಇದರಿಂದ ಯಾರಿಗೆ ಅನುಕೂಲ ಮತ್ತು ಅನಾನುಕೂಲ ? ಈ ನಡುವೆ ಕನ್ನಡ ಅನ್ನದ ಭಾಷೆಯಾಗಲು ಇರುವ ಅಡ್ಡಿ ಏನು ಎಂಬುದರ ವಿಸ್ತೃತ ಚರ್ಚೆ ಆಗಬೇಕಿದೆ. ಈ ಹಿನ್ನೆಲೆಯಲ್ಲಿ ಪರವೂ ಅಲ್ಲದ ವಿರೋಧವೂ ಅಲ್ಲದ ವಸ್ತು ನಿಷ್ಠವಾದ ವಿಚಾರದ ಅವಲೋಕನದ ಅಗತ್ಯತೆ ಇದೆ.
ಪ್ರಾಥಮಿಕ ಶಾಲಾ ಹಂತದಲ್ಲಿ ಆಂಗ್ಲ ಭಾಷಾ ಕಲಿಕೆಗೆ ಒತ್ತು ನೀಡಿದ ಸರ್ಕಾರ ಇದೀಗ ಆಂಗ್ಲ ಮಾಧ್ಯಮ ಆರಂಭಿಸುವ ಉತ್ಸಾಹದಲ್ಲಿದೆ. ರಾಜ್ಯದಲ್ಲಿ ಕಳೆದ 3-4ವರ್ಷಗಳಲ್ಲಿ 10000ಕ್ಕೂ ಹೆಚ್ಚು ಕನ್ನಡ ಶಾಲೆಗಳು ಕಣ್ಮುಚ್ಚಿವೆ ಈ ಕುರಿತು ಸಾಹಿತಿಗಳು ಮತ್ತು ಚಿಂತಕರು ಆಂಧೋಲನವನ್ನೇ ಆರಂಬಿಸಿದ್ದಾರೆ ಹೀಗಿರುವಾಗ ಆಂಗ್ಲ ಮಾಧ್ಯಮ ಶಾಲೆಗಳನ್ನು ಆರಂಬಿಸಿದರೆ ಕನ್ನಡ ಶಾಲೆಗಳ ಕತ್ತು ಹಿಸುಕಿದಂತಾಗುತ್ತದೆ ಅಲ್ಲವೇ, ಕನ್ನಡ ಭಾಷೆಗೆ ಆಧ್ಯತೆ ಕೊಡಬೇಕಾದ ಸರ್ಕಾರವೇ ಮುಂದಾಗಿ ಕನ್ನಡ ಶಾಲೆಗಳನ್ನು ಕೊಲ್ಲುವ ಕೆಲಸ ಯಾಕೆ ಮಾಡುತ್ತಿದೆ? ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. ಕನ್ನಡ ಅತ್ಯಂತ ಪ್ರಾಚೀನ ಭಾಷೆ ಅದಕ್ಕೆ ತನ್ನದೇ ಆದ ವೈಶಿಷ್ಟ್ಯವಿದೆ ಮೊಗೆದಷ್ಟು ಉಕ್ಕುವ ಉತ್ಸಾಹವೂ ಇದೆ, ಆದರೆ ಕಾಲ ಬದಲಾದಂತೆ ಜನರ ಮನಸ್ಥಿತಿಗಳು ಮತ್ತು ಆಧ್ಯತೆಗಳು ಬದಲಾಗುತ್ತಿವೆ. ಬದಲಾದ ಸಂಸ್ಕೃತಿ ಮತ್ತು ಆರ್ಥಿಕತೆ, ಬದುಕಿನ ಸ್ಥಿರತೆಗಾಗಿ ಕನ್ನಡದ ಆಯ್ಕೆಯ ಬದಲಿಗೆ ಇಂಗ್ಲೀಷ್ ಮಾಧ್ಯಮದೆಡೆಗೆ ಆಕರ್ಷಿಸುವಂತೆ ಮಾಡಿದೆ. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಕ್ಕಿದೆ, ಅನುಷ್ಠಾನದ ಹಂತದಲ್ಲಿದೆ, ಅದಕ್ಕಾಗಿ ಸಮ್ಮೇಳನಗಳು ಮತ್ತು ನಿರ್ಣಯಗಳು , ಕನ್ನಡ ಹಬ್ಬಗಳು, ಚಳುವಳಿಗಳು ನಡೆಯುತ್ತಿವೆ ಆದರೆ ಬದುಕನ್ನು ಕಟ್ಟಿಕೊಡುವ ಭಾಷೆಯನ್ನಾಗಿ ಕನ್ನಡವನ್ನು ರೂಪಿಸುವಲ್ಲಿ ಅಡ್ಡಿ ಉಂಟಾಗಿದೆ. ಅದಕ್ಕೆ ಸ್ಥಳಿಯ ಕಾರಣಗಳು ಇಲ್ಲವಾದರೂ ಜಾಗತಿಕ ಮಟ್ಟದ ನಿರ್ಣಯಗಳು ಅನಿವಾರ್ಯವೆನಿಸುವ ಅಭಿವೃದ್ದಿ ಪ್ರಕ್ರಿಯೆಗಳು ಕನ್ನಡದ ಬದುಕು ಕಟ್ಟಲು ನಮ್ಮ ನೆಲದಲ್ಲಿಯೇ ತಡೆವೊಡ್ಡಿರುವುದು ವಿಷಾಧನೀಯಕರ ಸಂಗತಿ. 
ಇಡೀ ಜಗತ್ತಿನಲ್ಲಿ ಅತೀ ಹೆಚ್ಚು ಮಾತನಾಡಲ್ಪಡುವ 40ಭಾಷೆಗಳ ಪೈಕಿ ಕನ್ನಡಕ್ಕೂ ಒಂದು ಸ್ಥಾನವಿದೆ ಎಂಬುದನ್ನು ಮರೆಯುವಂತಿಲ್ಲ, ಜಗತ್ತಿನಾಧ್ಯಂತ 38ಮಿಲಿಯನ್ ಮಂದಿ ಕನ್ನಡ ಭಾಷಿಕರಿದ್ದಾರೆಂಬುದು ಅಷ್ಟೆ ಸಂತಸದಾಯಕವಾದ ವಿಚಾರ. 5ನೇ ಶತಮಾನದಲ್ಲಿ ಕನ್ನಡ ಭಾಷೆಯ ಬೆಳವಣಿಗೆಯನ್ನು ಕಾಣಬಹುದು, ಇವತ್ತು ರಾಜ್ಯದಲ್ಲಿ ಪ್ರತೀ 20ಕಿ.ಮಿಗೆ ಕನ್ನಡದ ಭಾಷೆಯ ವೈವಿದ್ಯವನ್ನು ಕಾಣಬಹುದು ರಾಜ್ಯಾದಾಧ್ಯಂತ 22ಕ್ಕೂ ಹೆಚ್ಚು ರೀತಿಯ ವಿಭಿನ್ನ ಶೈಲಿಯ ಕನ್ನಡ ಭಾಷೆ ಮಾತನಾಡುವುದನ್ನು ಕಾಣಬಹುದು. ಭಾವನೆಗಳ ಹಂಚಿಕೆಗೆ ಮತ್ತು ಚಿಂತನಾಕ್ರಮಕ್ಕೆ ಸಾಥ್ ನೀಡುವ ಕನ್ನಡದ ಕೃತಿಗಳು ರಾಷ್ಟ್ರೀಯ ಹಾಗೂ ಅಂತರ ರಾಷ್ಟ್ರೀಯ ಮಟ್ಟದಲ್ಲೂ ತನ್ನ ಛಾಪನ್ನು ಮೂಡಿಸಿವೆ. ಸಾಹಿತ್ಯ, ಸಿನಿಮಾ, ಕಾರ್ಪೋರೇಟ್ ಕ್ಷೇತ್ರ ಹಾಗೂ ರಾಜಕೀಯ, ಸಾಪ್ಟ್ ವೇರ್ ಉದ್ಯಮ ಎಲ್ಲೆಡೆಯೂ ಕನ್ನಡಿಗರ ಕೀರ್ತಿ ಪತಾಕೆ ಇದೆ ಆದರೆ ಅದು ವ್ಯಕ್ತಿಗತವಾಗಿ ಅವರು ಕನ್ನಡಿಗರು ಎಂಬಷ್ಟಕ್ಕೆ ಮಾತ್ರ ಸೀಮಿತವಾಗಿದೆ. ಪರಿಮಿತ ವಲಯವನ್ನು ಮೀರಿ ಜಾಗತಿಕ ಸ್ಥಾನ ಗಳಿಸಿಕೊಳ್ಳುವಲ್ಲಿ ಸ್ಥಾನಿಕ ಭಾಷೆ ಕನ್ನಡಕ್ಕೆ ಸಾಧ್ಯವಾಗಿಲ್ಲ ಬಹುಶ ಈ ಕಾರಣಕ್ಕೆ ಅನೇಕ ಮಂದಿ ಆಂಗ್ಲ ಮಾಧ್ಯಮದೆಡೆಗೆ ತಮ್ಮ ಒಲವು ತೋರಿಸಲಾರಂಬಿಸಿದ್ದಾರೆ. 
ಒಂದೆಡೆ ಖಾಸಗಿ ಲಾಬಿ ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಆರಂಭಿಸುವುದಕ್ಕೆ ಅಡ್ಡಿಯಾಗಿದ್ದರೆ ಮತ್ತೊಂದೆಡೆ ದೇಶದಲ್ಲಿ ಜಾರಿಯಲ್ಲಿರುವ ಆರ್ಥಿಕ ಉದಾರೀಕರಣ ನೀತಿ ನಮ್ಮ ಮೂಲ ಸಂಸ್ಕೃತಿಗೆ ಧಕ್ಕೆ ಉಂಟು ಮಾಡುತ್ತಿರುವುದಲ್ಲದೇ ಭಾಷೆಯ ಬೆಳವಣಿಗೆಯ ಮೇಲೂ ಅಡ್ಡ ಪರಿಣಾಮ ಬೀರಿದೆ, ಹಾಗಾಗಿ ಕನ್ನಡ ಭಾಷಿಕರಿಗೆ ಅಲ್ಲಿ ಅವಕಾಶಗಳು ಕಡಿಮೆಯಾಗಿವೆ. ಈ ಆಧುನಿಕ ಜಗತ್ತಿನಲ್ಲಿ ಬದುಕಲು ಹಣದ ಹಿಂದೆ ಓಡಬೇಕಾದ ಅನಿವಾರ್ಯ ಸ್ಥಿತಿ ಸೃಷ್ಠಿಯಾಗಿರುವುದು ಕನ್ನಡದ ತೀವ್ರೆತೆಯನ್ನು ಕಡಿಮೆ ಮಾಡಿದೆ ಎನ್ನಲಡ್ಡಿಯಿಲ್ಲ ಅಲ್ಲವೇ. ಒಬ್ಬ ಕೂಲಿ ಕಾರ್ಮಿಕನ ಮಗನೂ ಸಹಾ ಕೂಡಿಟ್ಟ ಜೋಳಿಗೆಯನ್ನು ಮಕ್ಕಳ ಗುಣಾತ್ಮಕ ಶಿಕ್ಷಣಕ್ಕೆ ಹಾಗೂ ಆಂಗ್ಲ ಮಾಧ್ಯಮ ಶಾಲೆಗಳಿಗೆ ಸೇರಿಸಲು ವೆಚ್ಚ ಮಾಡುತ್ತಾನೆಂದರೆ ಆತನ ಮನಸ್ಥಿತಿ ಹೇಗಿದೆ? ತನ್ನ ತಲೆಮಾರಿಗೆ ಶ್ರಮದ ದುಸ್ಥಿತಿಯ ಜೀವನ ಸಾಕು ತನ್ನ ಮಕ್ಕಳಾದರೂ ಉನ್ನತ ಸ್ಥಾನಗಳನ್ನು ಗಳಿಸಲಿ ದುಡಿದು ಬದುಕಲಿ ಎಂಬ ಅಪೇಕ್ಷೆ ಹೊಂದುವುದು ಅದಕ್ಕೆ ಕಾರಣವಿರಬಹುದು. ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಶಾಲೆಗಳನ್ನು ಆರಂಭಿಸಿದಾಗ ಶ್ರಮಿಕ ವರ್ಗಕ್ಕೆ, ಕಾರ್ಮಿಕ ವರ್ಗಕ್ಕೆ ಅವಕಾಶ ಕಲ್ಪಿಸಿಕೊಟ್ಟಂತಾಗುತ್ತದೆ. ಅಂದರೆ ಕನ್ನಡದಲ್ಲಿ ಶಿಕ್ಷಣದ ಗುಣಮಟ್ಟವಿಲ್ಲವೆ ಎಂಬ ಪ್ರಶ್ನೆ ಏಳಬಹುದು? ಕನ್ನಡದ ಗುಣಾತ್ಮಕತೆ ಇದ್ದರೂ ಅದು ಅನ್ನದ ಭಾಷೆ ಆಗಬೇಕಲ್ಲವೇ ? ಅದು ಅನ್ನದ ಭಾಷೆಯಾಗ ಬೇಕಾದರೆ ಪೂರಕ ವಾತಾವರಣ ಬೇಕಲ್ಲವೇ ಅದೇ ಇಲ್ಲದ ಮೇಲೆ ಯಾವ ಗುಣಾತ್ಮಕ ಶಿಕ್ಷಣ ನೀಡಿದರೂ ಪ್ರಯೋಜನವೇನು? ಇಂಗ್ಲೀಷ್ ಜಾಗತಿಕ ಭಾಷೆ, ಅದರ ವಿಸ್ತೃತತೆ ಜಾಗತಿಕವಾಗಿ ಎಲ್ಲಾ ಆಯಾಮಗಳನ್ನು ಮೀರಿ ಸಾಗಿದೆ ಹೀಗಿರುವಾಗ ಅದನ್ನು ಅನಿವಾರ್ಯವೆನ್ನುವಂತೆ ಅಪ್ಪಿಕೊಂಡರು ಕನ್ನಡತನಕ್ಕೆ ಧಕ್ಕೆಯಾಗದಂತೆ ವೈಯುಕ್ತಿಕ ನೆಲೆಗಟ್ಟಿನಲ್ಲಿ ಕಾಪಾಡಿಕೊಂಡಲ್ಲಿ ಸೂಕ್ತ ವಾಗಬಹುದೇನೋ.
ಈ ಲೇಖನವನ್ನು ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಪತ್ರಕರ್ತ ಮಿತ್ರರಾದ ಪ್ರಿಯ ಚಾಮರಾಜಸವಡಿ ಯವರು ಪ್ರಕಟಿಸಿದ್ದಾರೆ ಅದನ್ನು ಈ ಲಿಂಕ್ ನಲ್ಲಿ ನೋಡಬಹುದು ಅವರಿಗೆ ಧನ್ಯವಾದಗಳು
http://www.rediffmail.com/cgi-bin/red.cgi?red=http%3A%2F%2Fepaper%2Esamyukthakarnataka%2Ecom%2F44198%2FSamyuktha%2DKarnataka%2Fjune%2D26%2D2012%2DHU%23page%2F13%2F1&isImage=0&BlockImage=0&rediffng=0

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...