Wednesday, March 23, 2011

ಟಿಆರ್ ಪಿ ಎಂಬ ಹುಚ್ಚುಕುದುರೆಗೆ ಭಾವನೆಗಳ ಬಲಿಯಾಕೆ?

ನರಂಜನೆಯ ನೆಪದಲ್ಲಿ ಮನೆ-ಮನಗಳಿಗೆ ಎಡತಾಕುತ್ತಿರುವ  ಕಿರುತೆರೆಯ ರಿಯಾಲಿಟಿ  ಶೋಗಳೀಗೆ ಕಡಿವಾಣ ಹಾಕುವ ದಿನ ಹತ್ತಿರ ಬರುತ್ತಿದೆ. ಕಳೆದ ವಾರ ಕೇಂದ್ರ ಸರ್ಕಾರ ಕಿರುತೆರೆಯ ಅನಾರೋಗ್ಯಕರ ಕಾರ್ಯಕ್ರಮಗಳಿಗೆ ಕಡಿವಾಣ ಹಾಕುವ ಮಾರ್ಗದರ್ಶಿ ಸೂತ್ರಗಳನ್ನು ಪ್ರಕಟಿಸಿದೆ. ಈ ನಡುವೆ ಕನ್ನಡದ ಕಿರುತೆರೆಯೊಂದರಲ್ಲಿ ಪ್ರಸಾರವಾಗುತ್ತಿರುವ ಪ್ಯಾಟೇ ಹುಡ್ಗೀರ್ ಹಳ್ಳಿ ಲೈಫು-2 ಕಾರ್ಯಕ್ರಮದ ಕೆಲವು ಎಪಿಸೋಡ್ ಗಳಲ್ಲಿ ಪ್ರಸಾರವಾದ ಕಾರ್ಯಕ್ರಮಗಳ ಕುರಿತು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಈ ಸಂಗತಿಯನ್ನು ಮಾಧ್ಯಮದ ಆಗುಹೋಗುಗಳನ್ನು ಮುಕ್ತವಾಗಿ ತೆರೆದಿಡುತ್ತಿರುವ ಸಂಪಾದಕೀಯ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಗಮನಕ್ಕೆ ತರುವ ಮೂಲಕ ಆಶಾದಾಯಕ ಬೆಳವಣಿಗೆಗೆ ಕಾರಣವಾಗಿದೆ.  ಈ ಸಂಧರ್ಭದಲ್ಲಿ ಕಿರುತೆರೆಯ ಆಗು ಹೋಗುಗಳೇನು? ಅಲ್ಲಿ ಎಂತಹ ವಿಷಯ ಗಳಿಗೆ ಆದ್ಯತೆ ಸಿಗುತ್ತಿದೆ? ಮೌಡ್ಯದ ಕೂಪಕ್ಕೆ ಹೇಗೆ ಜನರನ್ನು ಸೆಳೆಯಲಾಗುತ್ತಿದೆ? ಇದರ ಪರಿಣಾಮಗಳೇನು? ಎಂಬುದು ಪ್ರಸಕ್ತ ದಿನಗಳಲ್ಲಿ ಅಗತ್ಯವಾಗಿ ಚರ್ಚೆಯಾಗಬೇಕಿದೆ.

       ಕನ್ನಡದ ಮಟ್ಟಿಗೆ ಟಿವಿಛಾನಲ್ ಗಳು ಬಂದದ್ದು 90ರ ದಶಕದ ಆರಂಭದಲ್ಲಿ.. ತಮಿಳರ ಉದಯ ವಾಹಿನಿ ಆರಂಭವಾದಾಗ ತಂತ್ರಜ್ನರು ಊರೂರು ಸುತ್ತುತ್ತಾ ಶಾಲಾ-ಕಾಲೇಜುಗಳನ್ನು ಮತ್ತು ಪೋಷಕರುಗಳನ್ನು ಸಂಪರ್ಕಿಸುತ್ತಾ ಇಂತಿಷ್ಟು ಎಂದು ಫೀಸು ನಿಗದಿ ಮಾಡಿ ಒಂದು ಡ್ಯಾನ್ಸ್ ಕಾರ್ಯಕ್ರಮ ಇಟ್ಟು ಕೆಮರಾದಲ್ಲಿ ಚಿತ್ರಿಸಿ ಕೆಲ ದಿನಗಳ ನಂತರ ಟಿವಿಯಲ್ಲಿ ಪ್ರಸಾರಿಸುತ್ತಿತ್ತು.ಮುಂದೆ ಸಿನಿಮಾ ಹಾಡುಗಳು ಬಂದವು, ಸಿನಿಮಾಗಳು ಬಂದವು, ಹಿಂದಿಯಲ್ಲಿ ಪ್ರಸಾರವಾಗುತ್ತಿದ್ದ ಧಾರವಾಹಿಗಳು ಕನ್ನಡಕ್ಕೆ ಬಂದವು ನಿಧಾನವಾಗಿ ಇತರೆ ಕಾರ್ಯಕ್ರಮಗಳು ಮೈದಳೆದವು. ದಿನಕಳೆದಂತೆ ಇವು ಜನರ ಮನಸ್ಸನ್ನ ಸೆಳೆಯುತ್ತಾ ಹೋದವು. ಈ ನಡುವೆ ನಿಧಾನವಾಗಿ ಹೊಸ ಛಾನಲ್ ಗಳ ಲಗ್ಗೆ ಇಟ್ಟವು ನೋಡಿ. ಆಗ ಶುರುವಾಗಿದ್ದು ನಿಜವಾದ ಪೈಪೋಟಿ. ಆದರೆ ಅಂತಹ ಪೈಪೋಟಿಗಳು ಹೋಗಿ ಮುಟ್ಟಿದ್ದು ಎಲ್ಲಿಗೆ ? ಜನರ ಮನಸ್ಸನ್ನ ಕೆರಳಿಸುವ, ಭಾವನೆಗಳನ್ನು ಬಡಿದೆಬ್ಬಿಸುವ ಅನಾರೋಗ್ಯಕರ ಕಾರ್ಯಕ್ರಮಗಳು ಮನೆಯಂಗಳಕ್ಕೆ ಬಂದಿಳಿದಿವೆ. ಇಂತಹ ಕಾರ್ಯಕ್ರಮಗಳಿಗೆ ಸಿಗುತ್ತಿರುವ ಭಾರಿ ಪ್ರಮಾಣದ ಜಾಹೀರಾತುಗಳು ಜಾಗತೀಕರಣದ ಕೊಡಗೆಯೇ ಆಗಿದೆ. 
                
            ಭಾರತ ದೇಶದ ಸನಾತನ  ಸಾಂಸ್ಕೃತಿಕ ಪರಂಪರೆಗೆ ತನ್ನದೇ ಆದ ಮಹತ್ವವಿದೆ., ಎಲ್ಲಕ್ಕಿಂತ ಹೆಚ್ಚಾಗಿ ಭಾವನೆಗಳಿಗೆ ಬೆಲೆ ಇದೆ. ಹೀಗಿರುವಾಗ ಕೀಳು ಅಭಿರುಚಿಯನ್ನು ಬಿಂಬಿಸುವ ಕಾರ್ಯಕ್ರಮಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಮೊದಲಾಗಿ ಕಿರುತೆರೆಯಲ್ಲಿ ಪ್ರಸಾರವಾಗುವ ಧಾರಾವಾಹಿಗಳಿಂದ ಮೊದಲುಗೊಂಡು  ಅನಾಚಾರ ಬಿತ್ತರವಾಗುತ್ತಿದೆ. ಕಿರುತೆರೆಯಲ್ಲಿ ಪ್ರಸಾರವಾಗುವ ಯಾವುದೇ ಧಾರಾವಾಹಿ ತೆಗೆದುಕೊಳ್ಳಿ ಅಲ್ಲಿ ಅನೈತಿಕ ಸಂಬಂಧಗಳ ಕಥೆ ಅನಾವರಣವಾಗುತ್ತದೆ. ಗಂಡಸರನ್ನು ಬಹುತೇಕ ಅಳುಬುರುಕರು ಮತ್ತು ಅಂಜುಬುರುಕರಂತೆ ತೋರಿಸಲಾಗುತ್ತದೆ, ಅತ್ತೆ-ಸೊಸೆ ರಗಳೆಯನ್ನು ಹಸಿ ಹಸಿಯಾಗಿ ತೆರೆದಿಡುತ್ತದೆ.ನಂತರದ್ದು ಪ್ರೈಮ್ ಟೈಮ್ ನಲ್ಲಿ ಪ್ರಸಾರವಾಗುವ ಕ್ರೈಂ ಸ್ಟೋರಿಗಳ ಹಸಿಯಾದ ಕಾರ್ಯಕ್ರಮ. ಅದಕ್ಕೆ ಮರುಸೃಷ್ಟಿಯ ಲೇಪನ ಬೇರೆ! ಇಂತಹ ಕಾರ್ಯಕ್ರಮಗಳಿಗೆ ಆಂಕರ್ ಗಳಾಗಿ ಬರುವ ಮಹಿಳಾ ವಾಚಕಿಯರಿಂದ ಕೇಳಿಸಲಾಗದ ಅಸಹ್ಯ ಮಾತುಗಳನ್ನ ರಸವತ್ತಾಗಿ ಹೇಳಿಸಲಾಗುತ್ತದೆ. (ಉದಾ: ಅತ್ಯಾಚಾರ,ಅಕ್ರಮ ಸಂಬಂಧಗಳೂ ಇತ್ಯಾದಿ) ಇದು ಕೇಳುಗರಿಗೆ ಮುಜುಗುರವಾಗಬೇಕಾದರೆ ಇನ್ನು ಓದುವವರಿಗೆ ಇನ್ನೆಷ್ಟು ಮುಜುಗುರವಾಗಬೇಕು ಊಹಿಸಿ. ಮಿತಿ ಮೀರಿದ ವರ್ತನೆಗಳು ಕಂಡು ಬರೋದು ನ್ಯೂಸ್ ಛಾನಲ್ ಗಳಿಂದ ಈಗ್ಯೆ ಕೆಲ ದಿನಗಳ ಹಿಂದೆ ಮಹಿಳೆಯೊಬ್ಬಳ ಮೇಲೆ ನಡೆದ ದೌರ್ಜನ್ಯದ ಕುರಿತ ಬಿಸಿ ಚರ್ಚೆಗೆ ವಕಾಲತ್ತು ವಹಿಸಿ ಬಂದದ್ದು ನರ್ಸು ಜಯಲಕ್ಷ್ಮಿ!ಈಕೆಯಿಂದ ಪ್ರವಾದಿಯಂತಹ ಮಾತು ಕೇಳುವ ಹಣೆ ಬರಹ ವೀಕ್ಷಕ ದೊರೆಯದ್ದು. ಮತ್ತೊಂದು ಪ್ರಕರಣದಲ್ಲಿ ಪುತ್ತೂರು ಕಾಲೇಜಿನ ವಿದ್ಯಾರ್ಥಿನಿಯೊಬ್ಬಳನ್ನು ಹೋಲುವ ಯುವತಿಯೊಬ್ಬಳು ಅಶ್ಲೀಲ ಸಿಡಿಯಲ್ಲಿ ಕಾಣಿಸಿಕೊಂಡಿರುವ ಕುರಿತು ಆಕೆಯ ಮುಖವನ್ನ ಮರೆಮಾಚಿ ಸುದ್ದಿ ಪ್ರಸಾರ ಮಾಡಿದ 'ಸಮಯ' ಹಾಟ್ ಡಿಸ್ಕಶನ್ ಟೇಬಲ್ ಗೆ ಆಕೆಯನ್ನು ನೇರವಾಗಿ ತೋರಿಸಿದ್ದು ಯಾವ ಉದ್ದೇಶವೋ ತಿಳಿಯಲಿಲ್ಲ. ಇನ್ನು ಮಹಿಳೆಯರಿಗಾಗಿ ಪ್ರಸಾರವಾಗುವ ಕಾರ್ಯಕ್ರಮಗಳಲ್ಲಿ ಲೈಂಗಿಕ ವಿಚಾರಗಳ ಚರ್ಚೆ, ಸಂವಾದಗಳ ಹೆಸರಿನಲ್ಲಿ ನಡೆಯುವ ಕಾಮ ಚರ್ಚೆಗಳು ವೀಕ್ಷಕರ ಹಿತಾಸಕ್ತಿಗಳೇ? 
        ಇತ್ತಿಚಿನ ದಿನಗಳಲ್ಲಿ ಅತೀ ಹೆಚ್ಚು ಚರ್ಚೆಯಾಗುತ್ತಿರುವುದು ಕಿರುತೆರೆಯಲ್ಲಿ ಜ್ಯೋತಿಷ್ಯ ಹೇಳುವ ಕಿರಾತಕರ ಬಗ್ಗೆ. (ಎಲ್ಲ ಜ್ಯೋತಿಷಿಗಳ ಬಗ್ಗೆ ಈ ಮಾತು ಹೇಳುತ್ತಿಲ್ಲ) ಬೆಳಿಗ್ಗೆ ಬೆಳಿಗ್ಗೆಯೇ ಛಾನಲ್ ಗಳಲ್ಲಿ ವಕ್ಕರಿಸುವ ಈ ಮಂದಿ ವಿವಿಧ ರೀತಿಯ ವೇಷಭೂಷಣಗಳೊಂದಿಗೆ ಕಾಣಿಸಿಕೊಳ್ಳುತ್ತಾ ಉಚಿತ ಸಲಹೆಗಳನ್ನು ತಮಗೆ ತೋಚಿದಂತೆ ನೀಡುತ್ತಾರೆ. ಲ್ಯಾಪ್ ಟಾಪ್ ಗಳನ್ನು ತರುವ ಮೂಲಕ ಇಲ್ಲೂ ಹೈಟೆಕ್ ಪ್ರದರ್ಶಿಸುವ ಸ್ವಾಮಿಗಳಿಗೆ ಈಗೀಗ ಸುಂದರ ತರುಣಿಯರು ನಿರೂಪಕರು. ಜೀ. ಕನ್ನಡದಲ್ಲಿ ಭವಿಷ್ಯ ನುಡಿಯುವ ನರೇಂದ್ರ ಶರ್ಮಎಂಬಾತನಂತೂ ಮನಸ್ಸಿಗೆ ಬಂದದ್ದನ್ನು ಒದರುತ್ತಾ ಮಹಿಳೆಯರನ್ನು ತುಚ್ಚವಾಗಿ ಬಯ್ಯುತ್ತಾ ಪ್ರಳಯಕ್ಕೆ ಸಲ್ಲದ ಕಾರಣಗಳನ್ನು ನೀಡುತ್ತಾ ಜನರ ಭಾವನೆಗಳೊಂದಿಗೆ ಆಟವಾಡುತ್ತಿದ್ದಾನೆ. ಈತನ ಕುಚೇಷ್ಟೆ ಹಾಗೂ ದುಡ್ಡು ಮಾಡುವ ಹಪಾಹಪಿಗೆ ವೀಕ್ಷಕ ಭಕ್ತರುಗಳು ಅಮಾಯಕವಾಗಿ ಬಲಿಯಾಗುತ್ತಿದ್ದಾರೆ. ಕಳೆದವಾರ ಈತ ಪ್ರಳಯವನ್ನ ತಡೆಯಲು ನಡೆಸಿದನೆನ್ನಲಾದ ಪೂಜೆಗೆ ಸಾವಿರಾರು ಮಂದಿ ಭಕ್ತರು ಸಾವಿರಾರು ಮೈಲುಗಳ ದೂರದಿಂದ ಬಂದಿದ್ದರಂತೆ. ಇಂತಹದ್ದಕ್ಕೆಲ್ಲ ಟಿವಿ ಚಾನಲ್ ಗಳು ಸಾಥ್ ನೀಡುತ್ತಾ ವೀಕ್ಷಕರ ಹಿತಾಸಕ್ತಿಯನ್ನ ಮರೆತಿವೆ. ಛಾನಲ್ ಗಳ ನಿರ್ವಾಹಕರಿಗೆ ತಕ್ಕ ಪಾಠ ಕಲಿಸದ ಹೊರತು ಇಂತಹ ಕಾರ್ಯಕ್ರಮಗಳಿಗೆ ಅಂತ್ಯವಿರುವುದಿಲ್ಲ. ದುಡ್ಡು ಮಾಡುವ ಭರದಲ್ಲಿ ಟಿಆರ್ ಪಿ ಎಂಬ ಹುಚ್ಚು ಕುದುರೆಗೆ ಜನರ ಭಾವನೆಗಳು ಯಾಕೆ ಬಲಿಯಾಗಬೇಕು? ಇದನ್ನ ವಿರೋಧಿಸುವ ಧೋರಣೆ ಬೆಳೆಯಬೇಕು ವೀಕ್ಷಕ ಪ್ರಭು ಇಂತಹದ್ದೊಂದು ಸಮರಕ್ಕೆ ಸಜ್ಜಾಗಲೇ ಬೇಕಲ್ಲವೇ?
'ಸಂವಾದ'ಡಾಟ್ ಕಾಂ ನಲ್ಲಿ ಈ ಲೇಖನವನ್ನು ಪ್ರಕಟಿಸಿದ ಸಂಪಾದಕರಾದ ರವಿಅರೇಹಳ್ಳಿಯವರಿಗೆ ಧನ್ಯವಾದಗಳು "ಸಂವಾದ"ಓದಿಗೆ ಇಲ್ಲಿ ಕ್ಲಿಕ್ಕಿಸಿ http://www.samvaada.com/themes/article/230/hightech_touch_asrologer.htm 

Thursday, February 24, 2011

ಇದು ಕುಮಾರಣ್ಣ-ರಾಧಿಕಾ "ಸಮಯ" ಕಣ್ರೀ

Picture Courtesy: Bangalore Mirror
ಕಸ್ತೂರಿ ಮನರಂಜನಾ ಛಾನಲ್, ಸುದ್ದಿ ಛಾನಲ್ ಆಗಿ ಬದಲಾಗ್ತಾ ಇದ್ಯಂತೆ, ಸುವರ್ಣದ ಕ್ಯಾಪ್ಟನ್ ರಂಗನಾಥ್ ಅದಕ್ಕೆ ಚೀಫ್ ಆಗಿ ಬರ್ತಾರಂತೆ ಎಂಬ ಸುದ್ದಿ, ಮಾಧ್ಯಮದ ವಲಯದಲ್ಲಿ ಈಗೊಂದು ತಿಂಗಳಿನಿಂದ ಕೇಳಿ ಬರುತ್ತಿತ್ತು, ಅದಕ್ಕೆ ಪೂರಕವಾಗಿ ಕಸ್ತೂರಿಯಲ್ಲೂ ರಿಪೋರ್ಟರುಗಳು, ನ್ಯೂಸ್ ಆಂಕರ್ ಗಳು ಇತ್ಯಾದಿಗಳು ಬೇಕು ಅಂತ ಸ್ಕ್ರಾಲಿಂಗ್ ಬರೋಕೆ ಶುರುವಾಗಿತ್ತು. ಈ ನಡುವೆ ಬೆಂಗಳೂರಿನ ಆಂಗ್ಲ ದೈನಿಕವೊಂದು ಫೆ.24ರಂದು ಮಾಜಿ ಮುಖ್ಯ ಮಂತ್ರಿ ಎಚ್  ಡಿ ಕುಮಾರಸ್ವಾಮಿ ಪಕ್ಷಕ್ಕೆ ಮತ್ತು ರಾಧಿಕಾ ಳಿಗಾಗಿ ಸಮಯ ಛಾನಲ್ ಕೊಳ್ಳುತ್ತಿದ್ದಾರೆ ಎಂಬ ಸುದ್ದಿಯನ್ನು ಬಹಿರಂಗ ಪಡಿಸಿದೆ. ಕುಮಾರಣ್ಣನ ರಾಜಕೀಯ ವಲಯದಲ್ಲೂ ಸದರಿ ಸುದ್ದಿಯನ್ನು ಖಚಿತ ಪಡಿಸಲಾಗುತ್ತಿದೆ. "ಕಸ್ತೂರಿ" ಅನಿತಕ್ಕ ನಿಗೆ "ಸಮಯ" ಚೋಟಿ  ಮೇಮ್ ಸಾಬ್ ರಾಧಿಕಾ ಳಿಗೆ ಎಂಬುದು ನಿರ್ಣಾಯಕ ಹಂತಕ್ಕೆ ಬಂದಂತಾಗಿದೆ. 
          ಕಸ್ತೂರಿ ಮನರಂಜನಾ ಛಾನಲ್ ಅನ್ನು ಪತ್ನಿ ಅನಿತಾ ಅವರಿಗಾಗಿ ಆರಂಭಿಸಿದ ಕುಮಾರಣ್ಣ ಒಂದು ಹಂತದಲ್ಲಿ ಸದರಿ ಛಾನಲ್ ನಿಂದ ನಷ್ಟವಾಗುತ್ತಿದೆ ಎಂಬ ಹಿನ್ನೆಲೆಯಲ್ಲಿ ಮಾರಲು ಯತ್ನಿಸಿದ್ದೂ ಉಂಟು, ಆರಂಭದಲ್ಲಿ ಹುರುಪಿನಿಂ ದ ಬೇರೆ ಮಾದ್ಯಮಗಳಿಂದ ವಲಸೆ ಬಂದವರಿಗೆ ಹೆಚ್ಚಿನ ಸಂಬಳದ ಆಮಿಷ ಇತ್ತಾದರೂ, ನಂತರದಲ್ಲಿ ಆಡಳಿತ ಮಂಡಳಿಯಲ್ಲಿದ್ದ  ಕೆಲವರ ನಿಲುವುಗಳಿಂದ ಕಸ್ತೂರಿ ಛಾನಲ್ ನಷ್ಟ ಅನುಭವಿಸುವಂತಾದ ಸಂಗತಿ ಈಗ ಗುಟ್ಟಾಗಿ ಉಳಿದಿಲ್ಲ. ಇತರೆ ಛಾನಲ್ ಗಳಲ್ಲಿ ಬರುವ ಜನಪ್ರಿಯ ಕಾರ್ಯಕ್ರಮಗ ಳನ್ನೆ ಹೋಲು ವ ನಕಲು ಕಾರ್ಯಕ್ರಮಗಳನ್ನೆ ಪ್ರಸಾರ ಮಾಡುತ್ತಿರುವ ಕಸ್ತೂರಿ ಸುದ್ದಿ ಪ್ರಸಾರ ದಲ್ಲೂ ನಗೆಪಾಟಲಿಗೀಡಾಗಿದ್ದು ಎಲ್ಲ ರಿಗೂ ತಿಳಿದ ಸಂಗತಿ. ಈ ಹಿನ್ನೆಲೆಯ ಲ್ಲಿ ಕಸ್ತೂರಿ ಸುದ್ದಿ ವಾಹಿನಿಯಾಗಿ ಬದಲಾಗುತ್ತಿದೆ ಎಂಬ ಸುದ್ದಿಯಿತ್ತು. ಕುಮಾರಣ್ಣ   ಬಹಳಹಿಂದೆಯೇಪಕ್ಷಕ್ಕೊಂದು ಮುಖವಾಣಿಯಂತಿರುವ ಸುದ್ದಿ ವಾಹಿನಿ ಮಾ  ಡಬೇಕುಎಂದುಯೋಚಿಸಿದ್ದರು.
            ಇದೇ ಸನ್ನಿವೇಶದಲ್ಲಿ .ಉ.ಕ. ಭಾಗದ ಸಕ್ಕರೆ ಕಾರ್ಖಾನೆಗಳ ಮೇಲೆ ಅಧಿಪತ್ಯ ಸ್ಥಾಪಿಸಿರುವ ಕಾಂಗ್ರೆಸ್ ಎಂಎಲ್ ಎ ಸತೀಶ್ ಜಾರಕಿಹೊಳಿ, ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಮತ್ತಿತರ ಹತ್ತು ಮಂದಿಸೇರಿ ಛಾನಲ್ ಹುಟ್ಟುಹಾಕಿದರಾದರೂ ಹೆಚ್ಚಿನ ಶೇರು ಹೊಂದಿರುವುದು ಸತೀಶ್ ಜಾರಕಿಹೊಳಿ.ಹೀಗೆ ಎಲ್ಲರೂ ಸೇರಿ  " ಸಮಯ" ಛಾನಲ್ ಹುಟ್ಟು ಹಾಕಿದರಾದರೂ ಸರಿಯಾದ ನಿರ್ವಹಣೆ ಯಿಲ್ಲದೇ ಸೊರಗಿದ್ದ ಚಾನಲ್  ಅನ್ನುಮೇಲೆ ತ್ತಲು ಶಶಿಧರ ಭಟ್ಟರನ್ನು ಕರೆತಂದರು, ಸಧ್ಯ "ಸಮಯ" ದ  ಕಾರ್ಯಕ್ರಮಗಳ ಪರಿಸ್ಥಿತಿ ಸುಧಾರಿಸಿತ್ತಿದೆ ಎಂಬಷ್ಟರಲ್ಲಿ ಜಾರಕಿಹೊಳಿ ಛಾನಲ್ ನಿರ್ವಹಣೆಯ ಉಸಾಬರಿ ಬೇಡವೆಂದು ನಿರ್ಧರಿಸಿದ್ದಾರೆ.ಲಾಭದಾಯಕವಾಗಿ ಛಾನೆಲ್ ನಡೆಯುವ ಲಕ್ಷಣ ಕಾಣದಿದ್ದುದರಿಂದ ನಷ್ಟಕ್ಕೆ ಬ್ರೇಕ್ ಹಾಕಲು ನಿರ್ಧರಿಸಿದ್ದಾರೆ. ಪರಿಣಾಮ   "ಸಮಯ" ದ ನಿರ್ವಹಣೆ ಹೊರೆಯಾಗಿದ್ದರಿಂದ ಉ.ಭಾ.ತದ ಚಾ  ನಲ್ಒಂದಕ್ಕೆ ಸಮಯ ವನ್ನು ಮಾರುವ ಸಿದ್ದತೆಯಲ್ಲಿದ್ದರು, ಸುಮಾರು 40ಕೋಟಿಗೆ ಮಾತುಕತೆಯೂ ನಡೆಯುತ್ತಿದೆ  ಎಂಬಮಾಹಿತಿಯೂ ಇತ್ತು.  ಎಲ್ಲಾಲೆಕ್ಕ ಹಾಕಿದರೂ
20 ರಿಂದ 30ಕೋಟಿಗೆ ಬಾಳುವ ಸಮಯ ವಾಹಿನಿಯನ್ನ  ತಮ್ಮ ರಾಜಕೀಯ ಜೀವನದ ಹಳೆಯ  ಗೆಳೆಯಕುಮಾರಣ್ಣನಿಗೆ ಜಾರಕಿ ಹೊಳಿ ಮಾರು ವ ನಿರ್ದಾರ ಕೈಗೊಂಡಿದ್ದಾರೆ. ಅದೂ ಅನಾಮತ್ತು ಸುಮಾರು 60ಕೋಟಿಗೆ ಸಮಯ  ಛಾನಲ್ಅನ್ನ ಕೊಳ್ಳಲು ಕುಮಾರಣ್ಣ ಮುಂದೆ ಬಂದಿದ್ದಾರೆ.
         "ಸಮಯ  ಛಾನೆಲ್ ಸೇಲಿಗಿದೆ ಎಂಬುದು ,  ತಿಳಿದಿ  ದೆ ಈ ಕುರಿತು ಅದರ ಮುಖ್ಯಸ್ಥರೊಂದಿಗೆ ಇನ್ನಷ್ಟೇ ಮಾತುಕತೆ ನಡೆಸುತ್ತಿದ್ದೇನೆ. ವ್ಯವಹಾರವಿನ್ನೂಮುಗಿದಿಲ್ಲ "   ಎಂದುಕುಮಾರಸ್ವಾಮಿ ಹೇಳುತ್ತಾರಾದರೂ ಅವರ ಆಪ್ತ ವಲಯಗಳ ಮಾಹಿತಿಯನುಸಾರ ಒಪ್ಪಂದ ಪತ್ರಕ್ಕೆ ಜಾರಕಿಹೊಳಿ-ಕುಮಾರಸ್ವಾಮಿ ಸಹಿ ಹಾಕಿದ್ದಾರೆ, ರಿಜಿಷ್ಟ್ರೇಷನ್ ಸಂಬಂಧಿ ಕೆಲಸ ಗಳು ಬಾಕಿ ಉಳಿದಿವೆ ಎನ್ನುತ್ತಾರೆ. ಪೂರ್ಣ ಹೊಣೆಗಾರಿಕೆಗಳು ಮುಗಿದ ನಂತರ ಹಿರಿಯ ಪತ್ರಕರ್ತರುಗಳನ್ನು ಛಾನೆಲ್ ಗೆ ಸೆಳೆಯಲು  ಕುಮಾರಣ್ಣ ಯತ್ನಿಸಬಹುದು. ಅಲ್ಲಿಗೆ ಮತ್ತೊಮ್ಮೆ ಶಶಿಧರಭಟ್ಟ ರಸ್ಥಾನ ಪಲ್ಲಟವಾಗುತ್ತದೆಯೇ ಕಾದು ನೋಡಬೇಕು. ಕುಮಾರಣ್ಣನ ಅಚ್ಚುಮೆಚ್ಚಿನ ಪತ್ರಕರ್ತ ರಂಗನಾಥ್ ಬಂದರೂ ಅಚ್ಚರಿಯೇನಿಲ್ಲ.
      ಅಂದಹಾಗೆ ಸದರಿ ಸಮಯ ವಾಹಿನಿಯನ್ನು ಕುಮಾರಣ್ಣ  ತಮ್ಮ ಪ್ರೇಯಸಿ ರಾಧಿಕಾ ರಾಣಿಯ  ಹೆಸರಿನಲ್ಲಿಖರೀದಿಸುತ್ತಿದ್ದಾರೆ ಎಂದು ಅವರ ಆಪ್ತ ವಲಯದ ಮಾಹಿತಿ ಹೇಳುತ್ತಿದೆ. ಕಸ್ತೂರಿ-ಸಮಯ ಎರಡೂ ಛಾನಲ್ ಗಳು  ಕಸ್ತೂರಭಾರಸ್ತೆಯ ಲ್ಲೆ ಇದ್ದು ಎರಡೂ ಕಟ್ಟಡಗಳ ನಡುವೆ ಒಂದು ಪೆಟ್ರೋಲ್ ಬಂಕ್ ಇದೆಯಂತೆ ಅಲ್ಲಿಗೆ ಎರಡೂ ಛಾನಲ್ ಗಳನ್ನು ನಿರ್ವಹಿಸಲು ಕುಮಾ ರಣ್ಣನಿಗೆಹೆಚ್ಚಿ ನಶ್ರಮವಾಗದು!  ಕನ್ನಡದಲ್ಲಿ ಈಗಾಗಲೇ 5ಸುದ್ದಿ ವಾಹಿನಿಗಳಿವೆ, ಈ ಪೈಕಿ ಸುದ್ದಿ ವಾಹಿನಿಗಳೀಗೆ ಒಂದು ಚೌಕಟ್ಟು ಹಾಕಿ ಕೊಟ ದ್ದು ಮಾತ್ರ ಟಿವಿ9 . ಆದರೆ ಕನ್ನಡದ ಎ   ಲ್ಲಾಛಾನಲ್ಗಳು ಸುದ್ದಿಪ್ರಸಾರದಲ್ಲಿ ಮತ್ತು ಗ್ರಾಫಿಕ್ಸ್ ನಲ್ಲಿ ಮೇಲ್ಪಂಕ್ತಿಯನ್ನು ಅನುಸಿರಿಸಿದ್ದು  ಮಾತ್ರ NDTV, CNNIBN,TIMES NOW ಗಳನ್ನ, ಕುಮಾರಣ್ಣನ ಹೊಸ ಛಾನಲ್ ನಲ್ಲೂ ಈ    ವಿಚಾರದಲ್ಲಿ ಅಂತಹ ಮಹತ್ವದ ಬದಲಾವಣೆಯಾಗದು ಆದರೆ ರಾಜಕಾರಣಿಗಳು ಛಾನಲ್ ಗಳನ್ನು ಹೊಂದುವ ಮೂಲಕ ಪಕ್ಕದ ತಮಿಳುನಾಡು ಮತ್ತು ಆಂದ್ರಪ್ರದೇಶದ   ರಾಜಕಾರಣಿಗಳ ಮಾದರಿ ಅನುಸಿ ರಿಸಿದ್ದು ಮಾತ್ರ ಸರಿಯಲ್ಲ. ಇ ದರಿಂ ದ ಸುದ್ದಿ ಛಾನಲ್ ಗಳ ವಿಶ್ವಾಸಾರ್ಹತೆ ಉಳಿ ಯುವುದೇ?

Sunday, January 16, 2011

ಕೋಡಿಮಠದ ಭವಿಷ್ಯ ನಿಜವಾದೀತೆ????

ತುಂಬಿದ ಕೆರೆಯಲ್ಲಿ ತಾಮ್ರದ ಕೊಡಗಳು ಮುಳುಗಿಯಾವು/ತಾವರೆಕೊಳದಲ್ಲಿ ಮೀನುಗಳೂ ಹಾರಾಡ್ಯಾವು. 
       ಮುಂದಿನ ವರ್ಷದ ಆರಂಭದಲ್ಲಿ ಅಗ್ನಿಯ ಪ್ರಭಾವದಿಂದ ಸಾವುನೋವಿನ ಘೋರ ದುರಂತ ಎದುರಾಗುತ್ತದೆ, ಜಲಪ್ರಳಯವೂ ಆಗಬಹುದು, ದೇಶದಲ್ಲಿ ಗಾಳಿಯ ಪ್ರಭಾವ ಜಾಸ್ತಿಯಾಗಲಿದೆ, ಉತ್ತರ ಭಾರತದಲ್ಲಿ ಹೆಸರು ಮಾಡಿದ ರಾಜಕಾರಣಿಗಳ ತಲೆ ಉರುಳುತ್ತದೆ, ರಾಜ್ಯದಲ್ಲಿ ಪ್ರಮುಖ ಅಧಿಕಾರ ಸ್ಥಾನಗಳು ಸ್ಥಿರತೆಯನ್ನು ಕಳೆದುಕೊಂಡು ವ್ಯವಸ್ಥೆಯಲ್ಲಿ ಅಸ್ಥಿರತೆ ಗೋಚರವಾಗಲಿದೆ ಎಂದು ಸ್ಪಷ್ಟವಾಗಿ ಹೇಳಿದ್ದು ಕೋಡಿ ಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾ ಸ್ವಾಮೀಜಿ!
           ಕೋಡಿಮಠದ ಕಾಲಜ್ಞಾನ ಮತ್ತೆ ನಿಜವಾಗುತ್ತಿದೆ, ಇಂದಿಗೆ ಸರಿಯಾಗಿ ಒಂದೂವರೆ ತಿಂಗಳ ಹಿಂದೆ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಸ್ವಾಮೀಜಿ ತುಂಬಿದ ಸಾರ್ವಜನಿಕ ಸಭೆಯಲ್ಲಿ ಒಗಟಿನ ಮಾದರಿಯಲ್ಲಿ ಹೇಳಿದಾಗ ಅದೇನು ಗಂಭೀರ  ಅಂತ ಅನ್ನಿಸಲಿಲ್ಲ, ಯಾಕೆಂದರೆ ನನಗೆ ಜ್ಯೋತಿಷ್ಯ-ಕಾಲಜ್ಞಾನದ ಬಗೆಗಿನ ಒಲವು ಅಷ್ಟಕ್ಕಷ್ಟೇ. ಆದರೆ ನಿಧಾನವಾಗಿ ಒಗಟಿನ ತಾತ್ಪರ್ಯ ತಿಳಿಯುವ, ಕಾಲಜ್ಞಾನವನ್ನು ಓರೆಗೆ ಹಚ್ಚುವ ಸಹಜ ಕುತೂಹಲ ಸ್ವಾಮೀಜಿ ಕಾರ್ಯಕ್ರಮ ಮುಗಿದ ನಂತರ ಕಾಳ ರಾತ್ರಿಯಲ್ಲಿ ಎಲ್ಲಿ ಹೋದರೆಂದು ಅರಸಿ ಹೋದರೆ ಮಠವೊಂದರಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ನೋಡುತ್ತಿದ್ದಂತೆ ಮುಗುಳ್ನಕ್ಕರು, ನನ್ನ ಕುತೂಹಲದ ಪ್ರಶ್ನೆಯನ್ನು ಮುಂದಿಟ್ಟೆ. ನೋಡಪ್ಪಾ ಕಾಲಜ್ಞಾನವನ್ನು ಯಾರೂ ಅಲ್ಲಗೆಳೆಯುವಂತಿಲ್ಲ ಏನಾಗಬೇಕೋ ಅದು ಆಗಿಯೇ ತೀರಬೇಕು ಎಂದು ನನ್ನ ಹೆಗಲ ಮೇಲೆ ಕೈಯಿಟ್ಟು ಕೊಂಡು ನಡೆದು ಬಂದ ಸ್ವಾಮೀಜಿ ಒಗಟಿನ ತಾತ್ಪರ್ಯವನ್ನು ಬಿಡಿಸಿ ಹೇಳಿದರು. ಅರೆಕ್ಷಣ ಮಂಕು ಕವಿದಂತಾಯಿತಾದರೂ ಸಾವರಿಸಿಕೊಂಡು ಬೀಳ್ಕೋಟ್ಟೆ .ಕೆಲಸದ ಒತ್ತಡದ ನಡುವೆ ಸ್ವಾಮೀಜಿಯ ಕಾಲಜ್ಞಾನ ಮರೆತೆ ಹೋಗಿತ್ತು!
          ಕಾಕತಾಳೀಯವೋ, ಕಾಲಜ್ಞಾನದ ಮಹತ್ವವೋ ಎಲ್ಲವೂ ಮತ್ತೆ ನೆನಪಾಗುತ್ತಿದೆ, ಕಣ್ಣೆದುರಿಗೆ ಶಬರಿಮಲೆಯ ದುರಂತವಿದೆ, ಅನಾಮತ್ತು ಸಾವನ್ನಪ್ಪಿದ 130ಕ್ಕೂ ಹೆಚ್ಚು ಅಯ್ಯಪ್ಪ ಭಕ್ತರ ಸಾವು ಬಿಟ್ಟರೂ ಬಿಡದೇ  ಕಾಡುತ್ತಿದೆ. ರಾಜ್ಯದಲ್ಲಿ ನಾಳೆಯಿಂದ ಮತ್ತೆ ರಾಜಕೀಯ ಸಂಕಟ ಪರ್ವ ಆರಂಭವಾಗುವ ಎಲ್ಲ ಸಾಧ್ಯತೆಗಳು ದಟ್ಟವಾಗಿವೆ. ರಾಜ್ಯದ ಜನರ ಹಿತಕಾಪಾಡ ಬೇಕಾಗಿದ್ದ ಸದನ, ರಾಜಕೀಯ ಹಿತಾಸಕ್ತಿಗೆ ಬಲಿಯಾಗಿದೆ. ವಿರೋಧ ಪಕ್ಷದ ಸದಸ್ಯರ ಅಮಾನತ್ತು ಕಾಂಗ್ರೆಸ್ ನಾಯಕರನ್ನು ಕೆರಳಿಸಿದೆ ವಿರೋಧ ಪಕ್ಷಗಳು ಸಾಮೂಹಿಕ ರಾಜೀನಾಮೆ ನೀಡಿ ರಾಜ್ಯ ಸರ್ಕಾರದ ವಿರುದ್ದ ಹೋರಾಟ ನಡೆಸಲು ಸಜ್ಜಾಗಿವೆ, ಜೆಡಿಎಸ್ ಸರ್ಕಾರದ ವಜಾಕ್ಕೆ ಒತ್ತಾಯಿಸಿ ರಾಜ್ಯಪಾಲರ ಬಳಿ ತೆರಳಿ ಪ್ರತಿಭಟನೆ ಸಲ್ಲಿಸಲು ನಿರ್ಧರಿಸಿದೆ ಈ ನಡುವೆ ಮುಖ್ಯ ಮಂತ್ರಿ  ಯಡಿಯೂರಪ್ಪ ಪರಿಸ್ಥಿತಿಯನ್ನು ನಿಭಾಯಿಸುವ ಬದಲು ದೇವೇಗೌಡ ಮತ್ತವರ ಕುಟುಂಬದ ಬಂಡವಾಳವನ್ನು ತೆರೆದಿಡುತ್ತೇನೆಂದು ಹೂಂಕರಿಸುತ್ತಿದ್ದಾರೆ ಅಲ್ಲಿಗೆ ಎಲ್ಲವೂ ಸುಸ್ಪಷ್ಟ ವಾದಂತಾಗಿದೆ. ರಾಜ್ಯ ರಾಜಕೀಯದಲ್ಲಿ ಮತ್ತೆ ಅಸ್ಥಿರತೆಯ ಪರ್ವ ಎದುರಾಗುತ್ತಿದೆ. ಇದು ಸ್ವಾಮೀಜಿಯವರ ಕಾಲಜ್ಞಾನವನ್ನು ಸಮರ್ಥಿಸುವ ಪ್ರಯತ್ನವಂತೂ ಖಂಡಿತಾ ಅಲ್ಲ ಆದರೆ ವಸ್ತುಸ್ಥಿತಿಯ ಸಮೀಕರಣ ಅಷ್ಟೇ!.

             ಹೌದು ಇಲ್ಲಿ ನಂಬಿಕೆಗಳಿಗೆ ಮೌಡ್ಯಗಳಿಗೆ ಹೆಚ್ಚಿನ ಆದ್ಯತೆಯಿದೆ, ವೈವಿದ್ಯಮಯ ಸಂಸ್ಕೃತಿಯ ಹೂರಣವಿದೆ, ಎಲ್ಲ  ಸಂಸ್ಕೃತಿಗಳನ್ನು ಒಂದೇ ವೇದಿಕೆಯಲ್ಲಿ ತರುವ ಆಚರಣೆಗಳಿವೆ. ಆಚರಣೆ ಮತ್ತು ನಂಬಿಕೆ ಸೀಮಿತ ವಲಯವನ್ನು ಬಿಟ್ಟು ಹೊರಕ್ಕೆ ಬಂದಿವೆಯಾದರೂ ಜಾಗತೀಕರಣದ ಪ್ರಭಾವ ಹಬ್ಬಗಳ ಆಚರಣೆ ಹಾಗೂ ಸಂಪ್ರದಾಯಗಳ ಮೇಲೆ ಪರಿಣಾಮ ಬೀರಿದೆ. ಅದನ್ನು ಹೇಳುವ ಮುನ್ನ ಸಂಕ್ರಾಂತಿಯ ಬಗ್ಗೆ ಒಂದಿಷ್ಟು ಮಾಹಿತಿ. ಮಕರ ಸಂಕ್ರಾಂತಿ ವರ್ಷದ ಆರಂಭದ ಹಬ್ಬ, ರೈತ ಸಂಸ್ಕೃತಿಯನ್ನು ಸಾರುವ ಸಮುದಾಯದ ಹಬ್ಬ. ಇದು ನಮ್ಮ ರಾಜ್ಯಕ್ಕೆ , ದೇಶಕ್ಕೆ ಮಾತ್ರ ಸೀಮಿತವಾದ ಹಬ್ಬವಲ್ಲ ವಿದೇಶಗಳಲ್ಲೂ ಈ ಹಬ್ಬದ ಆಚರಣೆಯಿದೆ. ಆಂದ್ರಪ್ರದೇಶ, ಬಿಹಾರ, ಗೋವಾ, ಸಿಕ್ಕಿಂ, ಜಾರ್ಖಾಂಡ್, ಕೇರಳ, ಮಧ್ಯಪ್ರದೇಶ,ಮಹಾರಾಷ್ಟ್ರ, ಮಣಿಪುರ, ಒರಿಸ್ಸಾ, ಉತ್ತರ ಪ್ರದೇಶ, ಉತ್ತರ ಖಂಡ, ಪ.ಬಂಗಾಳ, ಗುಜರಾತ್, ರಾಜಾಸ್ತಾನ್, ಹರ್ಯಾಣ, ಹಿಮಾಚಲ ಪ್ರದೇಶ, ಪಂಜಾಬ್, ತಮಿಳುನಾಡು, ಅಸ್ಸಾಂ, ಕಾಶ್ಮೀರ ಅಷ್ಟೇ ಅಲ್ಲ ಹಿಂದೂಗಳು ನೆಲೆಸಿರುವ ನೇಪಾಳ, ಥೈಲ್ಯಾಂಡ್, ಲಾವೋಸ್, ಮಯನ್ಮಾರ್, ಕಾಂಬೋಡಿಯಾ ದೇಶಗಳಲ್ಲೂ ವಿವಿಧ ಹೆಸರಿನಲ್ಲಿ ಈ ಹಬ್ಬದ ಆಚರಣೆಯಿದೆ. ಲಭ್ಯ ಮಾಹಿತಿಯನುಸಾರ ಸುಮಾರು 6000ವರ್ಷಗಳಷ್ಟು ಹಳೆಯದಾದ ಆಚರಣೆ ಈ ಸಂಕ್ರಾಂತಿ.ಪ್ರಾಚೀನ ಇತಿಹಾಸಗಳು ಹೇಳುವ ಪ್ರಕಾರ ಲ್ಯಾಟೀನ್ ಅಮೇರಿಕಾದ ಮಾಯನ್ನರು ಸಂಕ್ರಾಂತಿಯ ಆಚರಣೆಯನ್ನು ತಂದರು. ಸೂರ್ಯನು ಧನುರ್ ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವ ದಿನವೂ ಮಕರ ಸಂಕ್ರಾಂತಿಯೇ ಆಗಿದೆ. ಕುತೂಹಲದ ಸಂಗತಿಯೆಂದರೆ ಪುರಾಣಗಳ ಪ್ರಕಾರ ಸೂರ್ಯನ ಮಗನಾದ ಮಕರ ರಾಶಿಯ ಅಧಿಪತಿ ಶನಿಯ ಮನೆಗೆ ಬರುತ್ತಾನೆ ಆ ದಿನವೇ ಮಕರ ಸಂಕ್ರಾತಿ ಎಂಬ ಪ್ರತೀತಿ. ವಿಚಿತ್ರವೆಂದರೆ ಈ ಮಾಸವನ್ನು ತಂದೆ-ಮಕ್ಕಳ ಅವಿನಾಭಾವ ಸೌಹಾರ್ಧದ ದಿನವಾಗಿಯೂ ಇದನ್ನು ಆಚರಿಸುವುದನ್ನು ಕಾಣಬಹುದು. ಮಹಾವಿಷ್ಟು ಅಸುರರ ಹಾವಳಿಯನ್ನು ಕೊನೆಗೊಳಿಸಿ ಮಂದಾರ ಪರ್ವತದಲ್ಲಿ ಅಸುರರ ತಲೆಯನ್ನಿರಿಸಿದ ದಿನವೂ ಹೌದು.ಸಾಗರ ಮಹಾರಾಜನ 60ಸಾವಿರ ಮಕ್ಕಳು ಕಪಿಲ ಮಹಾಋಷಿಯ ಕೋಪಕ್ಕೆ ತುತ್ತಾಗಿ ಭಸ್ಮವಾದಾಗ ಅವರಿಗೆ ಮೋಕ್ಷ ಕರುಣಿಸಲು ಭಗೀರಥ ಮಹಾರಾಜ, ಶಿವನ್ನನ್ನು ಕುರಿತು ತಪಸ್ಸು ಮಾಡಿ ಗಂಗೆಯನ್ನು ಭೂಲೋಕ್ಕಕೆ ಕರೆತಂದು ಸತ್ತವರ ಆತ್ಮಗಳಿಗೆ ಮೋಕ್ಷ ಕರುಣಿಸಿದ ದಿನವೂ ಹೌದು.  ಅಂದು ಗಂಗೆ ಹರಿದ ಸ್ಥಳ ಇಂದಿಗೂ ಪ.ಬಂಗಾಳದಲ್ಲಿ ಕಾಣಬಹುದು ಮತ್ತು ಅದು 'ಗಂಗಾ ಸಾಗರ'ವೆಂದೆ ಹೆಸರಾಗಿದೆ. ಸತ್ತವರಿಗೆ ತರ್ಪಣ ಬಿಡುವ ಸಂಕ್ರಾಂತಿ ದಿನ ಸತ್ತುಹೋದ ಆತ್ಮಗಳಿಗೆ ಮೋಕ್ಷ ಕರುಣಿಸುವ ದಿನವೆಂದು ನಂಬಲಾಗುತ್ತದೆ. ಸದರಿ ದಿನದಂದು ಜೀವ ತೆತ್ತವರಿಗೆ ಮೋಕ್ಷ ದೊರೆಯುವುದಲ್ಲದೇ ಅತ್ಮಗಳಿಗೆ ಪುನರ್ಜನ್ಮವಿರುವುದಿಲ್ಲ ಎಂಬನೆಮ್ಮದಿಯ ನಂಬಿಕೆಯೂ ಉಂಟು. ಗಾಳೀಪಟ ಹಾರಿಸುವ ಹಬ್ಬ, ಬಸವಣ್ಣ ನ ಹಬ್ಬ, ಮಾಗಿ, ಬಿಹು ಹೀಗೆ ಹತ್ತಾರು ವಿಧಗಳಲ್ಲಿ ಸಂಕ್ರಾಂತಿಯ ಆಚರಣೆಯಿದೆ. ನಂಬಿಕೆಯ ಚೌಕಟ್ಟು ವಿವಿಧ ರೀತಿಯಲ್ಲಿ ಹಬ್ಬದ ಆಚರಣೆಗೆ ಕಾರಣವಾಗಿದೆ. 
       ಇನ್ನೊಂದು ಇಂಟರೆಸ್ಟಿಂಗ್ ಆದ ಸಂಗತಿಯೆಂದರೆ ಡಿಸೆಂಬರ್ 20-23 ರ ನಡುವೆ ಸೂರ್ಯ ಉತ್ತರದೆಡೆಗೆ ಚಲಿಸುತ್ತಾನೆ. ನಿಖರವಾಗಿ ಅದು 21-22ನೇ ದಿನಾಂಕವೂ ಆಗಬಹುದು, ಆ ದಿನ ವರ್ಷದಲ್ಲೇ ಅತೀ ಕಡಿಮೆ ಅವಧಿಯ ದಿನವೂ ಹೌದು. ಹೀಗಾಗಿ ಡಿಸೆಂಬರ್ 21ನೇ ದಿನಾಂಕವೇ ಮಕರ ಸಂಕ್ರಾಂತಿಯ ನೈಜ ದಿನವಾಗಿದೆ ಎಂಬ ಉಲ್ಲೇಖವಿದೆ.ಕಾಲಾನಂತರದ ಬದಲಾವಣೆಗಳಲ್ಲಿ ಕಾಣ ಬರುವ ವ್ಯತ್ಯಾಸಗಳಿಂದ ಸಾವಿರ ವರ್ಷಗಳ ಹಿಂದೆ ಡಿಸೆಂಬರ್ 31 ಸಂಕ್ರಾಂತಿ ಹಬ್ಬದ ದಿನ. ಕಾಲ ಸರಿದಂತೆ ಈಗ ಜನವರಿ 14ಕ್ಕೆ ಸಂಕ್ರಾಂತಿ ಆಚರಣೆ ನಡೆಯುತ್ತಿದೆ. ಮುಂದಿನ 5ಸಾವಿರ ವರ್ಷಗಳ ತರುವಾಯ ಫೆಬ್ರುವರಿ 28ಕ್ಕೆ ಸಂಕ್ರಾಂತಿ ಹಬ್ಬ ಬರಲಿದೆ ಇನ್ನೂ ಮುಂದುವರೆದು ಹೇಳುವುದಾದರೆ 9000ವರ್ಷಗಳ ನಂತರ ಮಕರ ಸಂಕ್ರಾಂತಿ ಜೂನ್ ತಿಂಗಳಲ್ಲಿ ಬರುವುದಂತೆ! ಬ್ರಹ್ಮಾಂಡದಲ್ಲಿ ಆಕಾಶಕಾಯಗಳ ಚಲನೆಯಲ್ಲಿ ಆಗುವ ಬದಲಾವಣೆಗಳು ಇದಕ್ಕೆ ಕಾರಣವಂತೆ.ಪ್ರಾದೇಶಿಕವಾಗಿ ಬೇರೆ ಬೇರೆ ರೀತಿಯಲ್ಲಿ ಹಬ್ಬದ ಆಚರಣೆಯಿದ್ದರೂ ಅಂತಿಮವಾಗಿ ಎಲ್ಲರ ಪೂಜೆ ಸಲ್ಲುವುದು ಸೂರ್ಯನಿಗೆ. ಸೂರ್ಯನನ್ನು ಬುದ್ದಿವಂತಿಕೆ,ಪರಿಶುದ್ದತೆ ಮತ್ತು ಶ್ರದ್ದೆಯ ಪ್ರತೀಕವಾಗಿ ಪೂಜಿಸಲಾಗುತ್ತದೆ. 
        ಎಳ್ಳು-ಬೆಲ್ಲ ಹಂಚುವ  ಸಮಾನತೆಯನ್ನ, ಒಳ್ಳೆಯ ಮಾತುಗಳನ್ನಾಡುವ ಸಂಕಲ್ಪವನ್ನ ತೊಡುವ ಆಚರಣೆ ಈ ಸಂದರ್ಭ ದಲ್ಲಿ ಕಾಣಬಹುದು. ಹಿಂದಿನ ದಿನಗಳಲ್ಲಿ ಆರ್ಥಿಕ ಕೊರತೆ, ಹಸಿವು, ಬಡತನಗಳ ಕಾರಣದಿಂದಾಗಿ ಬ್ರಾಹ್ಮಣೇತರರು ಈ ಹಬ್ಬದ ಸಂಧರ್ಭದಲ್ಲಿ ಸಕ್ರಿಯವಾಗಿ ಪಾಲುದಾರರಾಗುತ್ತಿರಲಿಲ್ಲ, ಆದರೆ ಕೆಲವು ದಶಕಗಳ ಹಿಂದಿನಿಂದ ಸಾಮೂಹಿಕವಾಗಿ ಹಬ್ಬದ ಆಚರಣೆ ಕಾಣಬರುತ್ತಿತ್ತು, ಹಬ್ಬದ ದಿನದಂದು ಸಂಜೆಯ ವೇಳೆಗೆ ಸಾಂಪ್ರದಾಯಿಕವಾದ ಲಂಗ-ದಾವಣಿ ತೊಟ್ಟ ಮಕ್ಕಳು ಮತ್ತು ಯುವತಿಯರು ಪ್ರತಿಯೊಬ್ಬರ ಮನೆಗೂ ತೆರಳಿ ಎಳ್ಳುಬೀರಿ ಆಶೀರ್ವಾದ ಪಡೆಯುವ ಸಂಪ್ರದಾಯವಿತ್ತು. ಆದರೆ ಕಳೆದ ಕೆಲವು ವರ್ಷಗಳಿಂದ ಇಂತಹ ಕ್ರಿಯೆಗೆ ತಡೆ ಬಿದ್ದಿದೆ. ಹಬ್ಬದ ಸಂಭ್ರಮ ನೀರಸವಾಗಿದೆ, ಹಳ್ಳಿಗಳಲ್ಲಿ ನಡೆಯುತ್ತಿದ್ದ ಹಳ್ಳಿ ಆಟಗಳಿಗೆ ಕಡಿವಾಣ ಬಿದ್ದಿದೆ, ಸಾಮೂಹಿಕವಾಗಿ ಕೊಂಡ ಹಾಯುವ ಜಾನುವಾರು ಆಕರ್ಷಣೆ, ಬಸವಣ್ಣನ ಪೂಜೆ, ಗಾಳಿ ಪಟ ಹಾರಿಸುವ ಸಂಭ್ರಮಗಳು ಮರೆಯಾಗುತ್ತಿವೆ ಎಂಬುದು ವಿಷಾಧನೀಯ ಸಂಗತಿ. ಜಾಗತೀಕರಣದ ಕಬಂಧ ಬಾಹು ಎಲ್ಲೆಡೆ ಆವರಿಸುವ ಮೂಲಕ ಸಂಸ್ಕೃತಿಯ ಮೇಲೂ ಪ್ರಭಾವ ಬೀರಿದೆ. ಜನರ ಭಾವನೆ-ಆಲೋಚನಾ ಕ್ರಮಗಳು ಬದಲಾಗುತ್ತಿವೆ 'ಜನಪದ' ಅಪಾಯದಂಚಿಗೆ ಸರಿದಿದೆ.

Friday, December 17, 2010

ನೀರಾವರಿ ತಜ್ಞ ಎಚ್ ಎನ್ ನಂಜೇಗೌಡ:ಒಂದು ನೆನಪು


ಅದು ಕಾವೇರಿ ನದಿ ನೀರಿನ ವಿವಾದ ಭುಗಿಲೆದ್ದ ಸಂಧರ್ಭ, ಸಲ್ಲದ ಕ್ಯಾತೆ ತೆಗೆಯುತ್ತಿದ್ದ ತಮಿಳುನಾಡು ತಾಂತ್ರಿಕ ಅಂಶಗಳನ್ನು ಆಧಾರವಾಗಿಟ್ಟುಕೊಂಡು ರಾಜ್ಯದ ರೈತರ  ಹಿತಾಸಕ್ತಿಗೆ ಕುಂದು ತರುವ ರೀತಿಯಲ್ಲಿ ನಡೆದುಕೊಳ್ಳುತ್ತಿತ್ತು. ನಮ್ಮ ರಾಜ್ಯದಲ್ಲಿ ಹುಟ್ಟಿ ಹರಿಯುವ ನದಿಯ ನೀರಿನ ಪ್ರಯೋಜನವನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಲಾರದೇ ಅಸಹಾಯಕತೆ ಪ್ರದರ್ಶಿಸಿದ ಸರ್ಕಾರಕ್ಕೆ ನೆರವಿಗೆ ಬಂದದ್ದು ಕರ್ನಾಟಕ ರಾಜ್ಯದ ನೀರಾವರಿ ಭಗೀರಥ ಎಚ್ ಎನ್ ನಂಜೇಗೌಡ. ನದಿ ನೀರು ವಿವಾದ ಕುರಿತಂತೆ ಹೋರಾಟ ನಡೆಸುತ್ತಿದ್ದ ಕನ್ನಡ ಸಂಘಟನೆಗಳ ಹೋರಾಟಕ್ಕೆ ನೈತಿಕ ಬಲ ತುಂಬಿದ್ದು ಎಚ್ ಎನ್ ನಂಜೇಗೌಡ, ನದಿ ನೀರಿನ ವಿವಾದ ಕುರಿತ ಪ್ರತ್ಯೇಕ ಪ್ರಾಧಿಕಾರದ ಮುಂದೆ ವಾದ ಮಂಡಿಸಲು ಹೆಗಲಿಗೆ ಹೆಗಲು ಕೊಟ್ಟು ಮಾಹಿತಿ ನೀಡಿದ್ದು ಅದೇ ಎಚ್ ಎನ್ ನಂಜೇಗೌಡ.! ಹೌದು ತನಗಾಗಿ ಏನನ್ನೂ ಮಾಡಿಕೊಳ್ಳದೇ ಜನರ ಸೇವೆಗಾಗಿ ತನ್ನ ವಿದ್ವತ್ತನ್ನು ಮುಡಿಪಾಗಿಟ್ಟ ಅಪರೂಪದ ರಾಜಕಾರಣಿ ಎಚ್ ಎನ್ ನಂಜೇಗೌಡ. ನೀರಾವರಿ ವಿಚಾರದಲ್ಲಿ ರಾಜ್ಯದ ಜನತೆ ಸದಾ ನೆನಪಿಟ್ಟುಕೊಳ್ಳ ಬೇಕಾದ ಎಚ್ ಎನ್ ನಂಜೇಗೌಡರು ಗತಿಸಿ ಇಂದಿಗೆ 3ವರ್ಷಸಂದಿದೆ. ಈ ಸಂಧರ್ಭ ದಲ್ಲಿ ಅವರ ಬಗೆಗೆ ಮೆಲುಕು ಹಾಕುವುದು ಅವರಿಗೆ ಸಲ್ಲಿಸುವ ಗೌರವವಾಗಬಹುದೇನೋ.
ಮಹಾರಾಜಾ ಕಾಲೇಜು ವಿದ್ಯಾರ್ಥಿ ಇವತ್ತು ರಾಜ್ಯದಲ್ಲಿ ಹಲವು ಮಂದಿ ರಾಜಕಾರಣಿಗಳನ್ನು ನೋಡಿದ್ದೀರಿ, ಹಿಂದಿನ ದಶಕಗಳಲ್ಲಿ ಇದ್ದ ರಾಜಕಾರಣಿಗಳಿಗೂ ಇಂದಿನ ರಾಜಕಾರಣಿಗಳಿಗೂ ರಾಜಕಾರಣಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಇಂತಹ ವ್ಯವಸ್ಥೆಯ ನಡುವೆ ಹಳೆ-ಹೊಸ ತಲೆಮಾರಿನ ರಾಜಕಾರಣಿಗಳ ನಡುವೆ ತಾನು ನಂಬಿದ ಸಿದ್ದಾಂತಗಳಿಗೆ, ನೈತಿಕ ಮೌಲ್ಯಗಳಿಗೆ ನಿಷ್ಟುರ ಬದ್ದತೆಯನ್ನು ಪ್ರದರ್ಶಿಸಿ ಬದುಕಿದ ಛಲಗಾರ ಎಚ್ ಎನ್ ನಂಜೇಗೌಡ. ಅವರ ಕುರಿತು ಮಾತನಾಡುವ ಮುನ್ನ ಚೂರು  ಮಾಹಿತಿ ನಿಮಗಾಗಿ. ಲಭ್ಯ ಮಾಹಿತಿಗಳನ್ನಾಧರಿಸಿ ಹೇಳುವುದಾದರೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ನಂಜೇಗೌಡರ ಎರಡನೇ ಪತ್ನಿ ಕಮಲಮ್ಮನವರ  ಪುತ್ರ ಎಚ್ ಎನ್ ನಂಜೇಗೌಡ. ತಾಯಿಯ ಊರು ಅರಕಲಗೂಡು ತಾಲೂಕಿನ ಗಂಗೂರು ಗ್ರಾಮ. ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾಭ್ಯಾಸಗಳನ್ನು ಪೂರೈಸಿದ ನಂಜೇಗೌಡರು ಬಿಎ ಪದವಿಗಾಗಿ ಮೈಸೂರಿಗೆ ತೆರಳಿದರು. ಮಹಾರಾಜ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಗೌಡರು ಕಾಲೇಜು ದಿನಗಳಲ್ಲೆ ಉತ್ತಮ ವಾಗ್ಮಿಯೂ ಆಗಿದ್ದರು, ವಿದ್ಯಾರ್ಥಿ ಸಂಘದ ಮುಖಂಡರೂ ಆಗಿ ಹೆಸರು ಗಳಿಸಿದ್ದ ಗೌಡರು ಸದಾ ಚಟುವಟಿಕೆಯ ಚಿಲುಮೆ. 
                ಅಂದಿನ ದಿನಗಳಲ್ಲಿಯೇ ವಿದ್ಯಾರ್ಥಿ ಚಳುವಳಿಗಳಲ್ಲೂ ಮುಂದಾಳಾಗಿರುತ್ತಿದ್ದರು. ಪದವಿಯ ನಂತರ ಕಾನೂನು ಪದವಿ ಕಲಿತ ಗೌಡರು 60ರ ದಶಕದ ಆರಂಭದಲ್ಲಿ ಅರಕಲಗೂಡಿಗೆ ವಾಪಾಸಾದರು. ಆ ವೇಳೆಗಾಗಲೇ ರಾಜಕಾರಣದ ಕಿಚ್ಚು ಹೊತ್ತಿಸಿಕೊಂಡಿದ್ದ ಗೌಡರು ತಾಲೂಕಿನಲ್ಲಿಯೂ ಚಳುವಳಿಗಳ ಮುಂದಾಳತ್ವ ವಹಿಸುತ್ತಿದ್ದರು. ರೈತರ ಬಗೆಗೆ ಅಪಾರ ಕಾಳಜಿ ಇಟ್ಟುಕೊಂಡಿದ್ದ ಅವರು ರೈತರಿಗಾಗಿ ಏನನ್ನಾದರೂ ಮಾಡಬೇಕೆಂಬ ತುಡಿತ ಹತ್ತಿಸಿಕೊಂಡಿದ್ದರು. 1960-61ರಲ್ಲಿ ಅರಕಗಲೂಡು ವಿದಾನಸಭಾ ಸದಸ್ಯ ಸ್ಥಾನಕ್ಕೆ  ಪಕ್ಷೇತರರಾಗಿ ಸ್ಪರ್ಧಿಸಿದ್ದ ಪುಟ್ಟೇಗೌಡರಿಗೆ ಸಾಥ್ ನೀಡಿದರು. ಮುಂದೆ 1962ರಲ್ಲಿ ಪ್ರಜಾಸೋಷಲಿಸ್ಟ್ ಪಕ್ಷದಿಂದ ಅಭ್ಯರ್ಥಿಯಾದ ಎಚ್ ಎನ್ ನಂಜೇಗೌಡ ಪ್ರತಿಸ್ಫರ್ಧಿಯಾಗಿದ್ದ ಕಾಂಗ್ರೆಸ್ ನ ಜಿ ಎ ತಿಮ್ಮಪ್ಪಗೌಡರ ವಿರುದ್ದ ಸ್ಪರ್ದಿಸಿ ಸೋಲುಂಡರು. ಮತ್ತೆ ರಾಜ್ಯದಲ್ಲಿ ನಿಜಲಿಂಗಪ್ಪನವರ ಸರ್ಕಾರವಿದ್ದಾಗ 1967ರಲ್ಲಿ ಸ್ವತಂತ್ರ ಪಕ್ಷದಿಂದ ಸ್ಪರ್ದಿಸಿ ಕೆ ಬಿ ಮಲ್ಲಪ್ಪನವರ ವಿರುದ್ದ ಗೆಲುವು ಸಾಧಿಸಿದರು. ಮತ್ತೆ 1972ರಲ್ಲಿ ಸಂಸ್ಥಾ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ದಿಸಿದ ನಂಜೇಗೌಡರು ಎದುರಾಳಿ ಕೆ ಬಿ ಮಲ್ಲಪ್ಪನವರನ್ನು ಎರಡನೇ ಭಾರಿಗೆ ಸೋಲಿಸಿದರು. ಆಗ ಆಡಳಿತಕ್ಕೆ ಬಂದ ಅರಸು ಸರ್ಕಾರದಲ್ಲಿ ಭಾರೀ ನೀರಾವರಿ ಖಾತೆಯ ಸಚಿವರಾದ ಗೌಡರಿಗೆ ತಾವು ಅಂದುಕೊಂಡಿದ್ದನ್ನು ಮಾಡುವ ಅವಕಾಶ ಸಿಕ್ಕಿತ್ತು. ಅಷ್ಟು ಹೊತ್ತಿಗಾಗಲೇ ಹೇಮಾವತಿ ಜಲಾಶಯ ಯೋಜನೆ ಜಾರಿಯಲ್ಲಿತ್ತು, ಸದರಿ ಜಲಾಶಯದ ಹಿನ್ನೀರಿನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಯೋಜನೆಗಳಿಗೆ ಚಾಲನೆ ನೀಡಿದ ಗೌಡರು ಹಾರಂಗಿ ಜಲಾಶಯ ಯೋಜನೆಯ ನೀರನ್ನು ತಾಲೂಕಿನ ರೈತರಿಗೆ ದೊರಕಿಸುವ ಸಾಹಸ ಮಾಡಿದರು. ತಾಲೂಕಿನ ಹಲವು ಗ್ರಾಮಗಳಿಗೆ ಸಂಪರ್ಕ ರಸ್ತೆಗಳಾದವು ಎಲ್ಲಕ್ಕಿಂತ ಮುಖ್ಯವಾಗಿ ಗ್ರಾಮೀಣ ಜನರ ಆರ್ಥಿಕಾಭಿವೃದ್ದಿಗೆ ಹೆಗಲು ನೀಡುವ ಬ್ಯಾಂಕಿಂಗ್ ಯೋಜನೆಯನ್ನು ಅನುಷ್ಠಾನಕ್ಕೆ ತಂದರು, ಪರಿಣಾಮ ತಾಲೂಕಿನ ಹಲವು ಗ್ರಾಮಗಳಲ್ಲಿ ಗ್ರಾಮೀಣ ಬ್ಯಾಂಕ್ ಸೇವೆಯನ್ನು ಪಡೆಯುವಂತಾಯಿತು.

ದಿಟ್ಟೆದೆಯ ರಾಜಕಾರಣಿ :ಅಧಿಕಾರದಲ್ಲಿದ್ದಾಗ ಯಾವುದಕ್ಕೂ ರಾಜೀ ಮಾಡಿಕೊಳ್ಳದ ಗೌಡರು ತಮ್ಮ ನಿರ್ದಾಕ್ಷ್ಯೀಣ್ಯ ನಡೆಗಳಿಂದಾಗಿ ರಾಜೀ ನೀಡಬೇಕಾಯಿತು. ಅಧಿಕಾರಕ್ಕೆ ಅಂಟಿ ಕೂರದೇ ಅಂದುಕೊಂಡದ್ದನ್ನು ಮಾಡಿ ಮುಗಿಸುವ, ಇದ್ದ್ದದ್ದನ್ನು ಇದ್ದಂತೆ ನೇರವಾಗಿ ಕಠಿಣವಾಗಿ ಹೇಳುವ ಛಾತಿಯಿಂದಾಗಿ ಮತ್ತು ಅಧಿಕಾರಕ್ಕೆ ಅಂಟಿಕೂರದ ನಡವಳಿಕೆ ಎಚ್ ಎನ್ ನಂಜೇಗೌಡರನ್ನು ಎತ್ತರದಲ್ಲಿ ಕೂರುವಂತೆ ಮಾಡಿದೆ. ಮುಂದೆ ಸರ್ಕಾರ ಪತನಗೊಂಡಾಗ 1978ರಲ್ಲಿ ಮತ್ತೆ ಸ್ಪರ್ದಿಸಿದ ನಂಜೇಗೌಡರು ಸೋಲನುಭವಿಸಿದರು. ನಂತರದ ದಿನಗಳಲ್ಲಿ ರಾಜಕೀಯದಲ್ಲಿ ಎತ್ತರಕ್ಕೇರಿದ ಅವರು 1980ರಲ್ಲಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾದರು. ಸಂಸತ್ ನಲ್ಲಿ ತಮ್ಮ ಪಕ್ಷದವರೇ ಆದ ಪ್ರಧಾನಿ ರಾಜೀವ್ ಗಾಂಧಿ ವಿರುದ್ದ ಬೋಫೋರ್ಸ್ ಹಗರಣ ಬಹಿರಂಗವಾದಾಗ ಅತ್ಯಂತ ಕಟುವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಪಕ್ಷದಿಂದಲೇ ಹೊರಬಿದ್ದರು. ರಾಜ್ಯದಲ್ಲಿ ಜೆಡಿಯು ತೆಕ್ಕೆಗೆ ಹೋಗಿ ಸೋಲನುಭವಿಸಿದರು ನಂತರ ಬಿಜೆಪಿಗೆ ಸೇರಿ ಬಸವನಗುಡಿಯಲ್ಲಿ ಸೋಲು ಕಂಡು 'ಗರ್ಭಗುಡಿಯ ಪಕ್ಷವೆಂದು ಜರಿದು ಪಕ್ಷ ತೊರೆದರು. ಗೌಡರು ಯಾವುದೇ ಪಕ್ಷದಲ್ಲಿದ್ದರು ನೀರಾವರಿ ಕುರಿತು ವಹಿಸಿದ್ದ ಆಸ್ಥೆ ಮತ್ತು ರೈತರ ಪರವಾಗಿದ್ದ ಕಾಳಜಿಯಿಂದಾಗಿ ಕಾಲಕಾಲಕ್ಕೆ ಸರ್ಕಾರಕ್ಕೆ ಮತ್ತು ಹೋರಾಟಗಾರರಿಗೆ ಮಾಹಿತಿ ನೀಡಿದರು. ಯಾವುದೇ ದಾಖಲೆಗಳನ್ನು ಎದುರಿಗಿಟ್ಟುಕೊಳ್ಳದೇ ಬ್ರಹ್ಮಾಂಡದಂತಹ ನೀರಾವರಿ ಅಂಕಿಅಂಶಗಳನ್ನು ಸುಲಲಿತವಾಗಿ ಹೇಳುತ್ತಿದ್ದ ಗೌಡರು ನೀರಾವರಿ ಕುರಿತು ಉಂಟಾದ ಸಂಕಟ ಸಮಯದ ಆಪದ್ಬಾಂದವನಾಗಿರುತ್ತಿದ್ದರು.

ಸ್ಮರಣೆ ಲೇಸು :  ವಕ್ಕಲಿಗ ಸಮುದಾಯಕ್ಕೆ ಸೇರಿದವರಾಗಿದ್ದರೂ ಎಂದಿಗೂ ಸಮುದಾಯದ ಚಟುವಟಿಕೆಗಳಿಂದ ದೂರವಿದ್ದ ಗೌಡರು ಎಲ್ಲ ಜನಾಂಗದ ಜನರ ಅನುರಾಗಿಯಾಗಿದ್ದರು. ಎಲ್ಲಾ ಪಕ್ಷಗಳ ರಾಜಕಾರಣಿಗಳು ಗೌಡರೊಂದಿಗೆ ಸೌಹಾರ್ಧಯುತ ಸಂಭಂಧವಿರಿಸಿಕೊಂಡಿದ್ದರು. ಗೌಡರ ನೀರಾವರಿ ಬಗೆಗಿನ ಕಾಳಜಿಗೆ ಹೆಚ್ ಕೆ ಪಾಟೀಲ್ ಮತ್ತು ನಿಜಲಿಂಗಪ್ಪನವರ ಸರ್ಕಾರದಲ್ಲಿ ಸಚಿವರಾಗಿದ್ದ ಬಸಪ್ಪನವರ ಮಾರ್ಗದರ್ಶನವೂ ಕಾರಣವಾಗಿತ್ತು. ಒಬ್ಬ ನಿಷ್ಟುರ, ಜನಪರ ಕಾಳಜಿಯ ನಂಬಿದ ಸಿದ್ದಾಂತಗಳನ್ನು ಪ್ರತಿಪಾದಿಸುವ ಸಾಧಕನ ನೆನಪು ನಮಗೆ ಸದಾ ಸ್ಮರಣೀಯ, ನಂಜೇಗೌಡರು ಸಿದ್ದಾಂತ ಮತ್ತು ಚಳುವಳಿಯ ವಿಚಾರದಲ್ಲಿ ಗೋಪಾಲಗೌಡರ ಮಟ್ಟಿಗೆ ಬೆಳೆಯುವ ಸಾಧ್ಯತೆಗಳಿತ್ತಾದರೂ ಒಂದು ಪಕ್ಷದಲ್ಲಿ ನೆಲೆ ನಿಲ್ಲದ ಗೌಡರಿಗೆ ಅದು ಸಾಧ್ಯವಾಗಲಿಲ್ಲ ಆದರೆ ಒಂದು ಶಕ್ತಿಯಾಗಿ, ಸಮೂಹದ ಪ್ರೇರಕ ಶಕ್ತಿಯಾಗಿ ಬದುಕಿದರೆಂಬುದು ಮಾತ್ರ ದಿಟವೇ ಹೌದು. ಇಂದು ಗೌಡರು ಬದುಕಿದ್ದಿದ್ದರೆ 77ವರ್ಷ ತುಂಬುತ್ತಿತ್ತು ಆದರೆ ಇವತ್ತು ಅವರಿಲ್ಲ ಆದರೆ ಅವರ ವಿಚಾರ ನಮ್ಮೊಂದಿಗಿದೆ, ರಾಜಧಾನಿ ಬೆಂಗಳೂರಿನಲ್ಲಿ ಹೆಚ್ ಎನ್ ಸಂಸ್ಮರಣೆ ಕರ್ನಾಟಕ ಸರ್ಕಾರದ ಸಚಿವಾಲಯದ ಟಿ ಚನ್ನಬಸಪ್ಪ ಸಭಾಂಗಣದಲ್ಲಿ ಸಂಜೆ 5.30ಕ್ಕೆ ಏರ್ಪಾಟಾಗಿದೆ. ಅರಕಲಗೂಡು ನಾಗರಿಕ ವೇದಿಕೆಯ ಯೋಗಾರಮೇಶ್ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಅವರ ಸಹವರ್ತಿಗಳು ಎಚ್ ಎನ್ ನಂಜೆಗೌಡರನ್ನು ಸ್ಮರಿಸಿಕೊಳ್ಳಲಿದ್ದಾರೆ.ನೀವೂ ಜೊತೆಯಾಗಿ ನುಡಿನಮನ ಸಲ್ಲಿಸಿ.
ಈ ಲೇಖನವನ್ನು ಸಾಂಧರ್ಭಿಕವಾಗಿ ದಟ್ಸ್ ಕನ್ನಡದಲ್ಲಿ ಸಾದ್ಯಂತವಾಗಿ ಪ್ರಕಟಿಸಿ ಉಪಯುಕ್ತ ಸಲಹೆ ನೀಡಿದ ಸಂಪಾದಕರಾದ ಶ್ಯಾಂಸುಂದರ್ ಅವರಿಗೆ ಧನ್ಯವಾದಗಳು. ದಟ್ಸ್ ಕನ್ನಡದಲ್ಲಿ ಈ ಲೇಖನವನ್ನು ಓದಲು ಈ ಲಿಂಕ್ ಕ್ಲಿಕ್ಕಿಸಿ http://thatskannada.oneindia.in/news/2010/12/18/tribute-to-hn-nange-gowda-irrigation-expert.html 
Thanks to "SAMPADA"  to publish this article with Special Category, Read more click on http://sampada.net/????????-?????-???-???-????????????-???????????? 

ಸ್ವಯಂಕೃಷಿ ನೂತನ ಕನ್ನಡ ಛಾನಲ್

ಸ್ವಯಂಕೃಷಿ ನೂತನ ಕನ್ನಡ ಛಾನಲ್

Sunday, December 5, 2010

ಇಂಥಾ ಅಯ್ಯಪ್ಪ ಭಕ್ತರುಗಳು ಬೇಕಾ ಸ್ವಾಮಿ?

ಮೊನ್ನೆ ಮೊನ್ನೆ ಸಿಎಂ ಯಡ್ಯೂರಪ್ಪನವರ ಸಿಎಂ ಕುರ್ಚಿ ಹೋಗಿಯೇ ಬಿಡ್ತು ಅಂತ ಅಂದುಕೊಂಡಿರುವಾಗಲೇ, ಈವಯ್ಯ  ಪೂಜೆ ಪುನಸ್ಕಾರ, ಯಜ್ಞ-ಯಾಗ ಅಂತೆಲ್ಲ ಮಾಡ್ಕಂಡು ಇದುವರೆಗೂ ರಾಜ್ಯದಲ್ಲಿ ಸಿಎಂ ಕುರ್ಚಿ ಏರಿದ ಮುಖ್ಯಮಂತ್ರಿಗಳ್ಯಾರು ನೋಡದಷ್ಟು ದೇವಾಲಯಗಳನ್ನು ದೇಶದ ಉದ್ದಗಲಕ್ಕೂ ಸಂದರ್ಶಿಸಿ, ಬಿಜೆಪಿ ಹೈ ಕಮಾಂಡ್ ಗೆ ಕ್ಯಾರೆ  ಅನ್ನದೇ ತನ್ನ ಸ್ಥಾನದಲ್ಲೇ ಉಳಿದು ಕೊಂಡದ್ದು ಈಗ ಇತಿಹಾಸ.ಕಾಕತಾಳಿಯವೋ, ಯಡಿಯೂರಪ್ಪನ ಪೂಜಾಫಲವೋ ಗೊತ್ತಿಲ್ಲ  ಅಧಿಕಾರ ಸಧ್ಯಕ್ಕೆ ಉಳಿದುಕೊಂಡಿದೆ, ಮುಂದಕ್ಕೆ ಅವರು ನಂಬಿದ ದೇವರೇ ಕಾಪಾಡಬೇಕು.ಸ್ವಾಮಿಯೇ ಶರಣಂ ಅಯ್ಯಪ್ಪ!
ಇದು ಅಯ್ಯಪ್ಪ ಸ್ವಾಮಿಯ ಭಕ್ತರ ಮಾಸ, ಇನ್ನು ಎರಡು ತಿಂಗಳು ಇವರ ಹಾವಳಿ ತಪ್ಪಿದ್ದಲ್ಲ. ಅಯ್ಯಪ್ಪ ಭಕ್ತರ ಹಾವಳಿ ನಿನ್ನೆ ಮೊನ್ನೆಯದಲ್ಲ  ಇದು ನಿರಂತರವಾಗಿ ದಶಕಗಳಿಂದ ಬಂದತದ್ದು. ಮನುಷ್ಯ ಹೆದರೋದು ಒಂದು ದೆವ್ವ, ಇನ್ನೊಂದು ದೇವರು. ಈ ಎರಡು ಹೆಸರನ್ನು ಬಳಸಿಕೊಂಡು ಜನರನ್ನು ಏನು ಬೇಕಾದರೂ ಮಾಡಿಬಿಡಬಹುದು. ಇದು ಭಾರತದಂತಹ ಸನಾತನ ಸಾಂಸ್ಕೃತಿಕ ಪರಂಪರೆಯ ದೇಶದಲ್ಲಿ ಮಾತ್ರ ಸಾಧ್ಯ. ಇಲ್ಲಿ ನಂಬಿಕೆಗೆ, ಬಾವನೆಗಳಿಗೆ, ಸಂಬಂಧಗಳಿಗೆ ಇನ್ನಿಲ್ಲದಷ್ಟು ಬೆಲೆ ಇದೆ. ಹಾಗಾಗಿಯೆ ಒಂದಷ್ಟು ನೆಮ್ಮದಿಯೂ ಇದೆ ಆದರೆ ಇದರ ನೆರಳಲ್ಲೆ ವಂಚನೆಯೂ ಜಾಗೃತಾವಸ್ಥೆಯಲ್ಲಿದೆ ಎಂಬುದನ್ನು ತಳ್ಳಿ ಹಾಕುವಂತಿಲ್ಲ. ಹೌದು ನಂಬಿಕೆಗಳಿಗೆ, ಭಾವನೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಸಿಕ್ಕಾಗ ಎಂತಹ ಪರಿಸ್ಥಿತಿ ಏರ್ಪಡುತ್ತದೆ ? ಇದರಿಂದ ಆಗುವ ಲಾಭ-ನಷ್ಟ ಏನು? ಸಾಮಾಜಿಕವಾಗಿ ಬೀರುವ ಪರಿಣಾಮವೇನು ? ಆಧುನಿಕತೆಗೆ ದಾಪುಗಾಲು ಹಾಕುತ್ತಿರುವ ದಿನಗಳಲ್ಲೂ ಇವೆಲ್ಲಾ ಬೇಕಾ? ಎಂಬೆಲ್ಲ ಪ್ರಶ್ನೆಗಳು ನಮ್ಮನ್ನಾವರಿಸುವುದು ಸಹಜವೇ. 
          
ಅಯ್ಯಪ್ಪ ಮಹಾತ್ಮೆ:ಇವತ್ತು  ದೇಶಾಧ್ಯಂತ ಅತೀ ಹೆಚ್ಚು ಭಕ್ತರನ್ನು ಹೊಂದಿದ ದೇವರು ತಿರುಪತಿಯ ಏಳು ಕುಂಡಲವಾಡ ಗೋವಿಂದ ಅಲಿಯಾಸ್ ತಿರುಪತಿ ವೆಂಕಟೇಶ್ವರ,ಎರಡನೇ ಸ್ಥಾನದಲ್ಲಿ ಬರುವುದೇ ಅಯ್ಯಪ್ಪ ಭಕ್ತರು, ಉಳಿದಂತೆ ದುರ್ಗಾದೇವಿ,ಸಂತೋಷಿಮಾತಾ,ಹೀಗೇಗೋ ನಾನಾ ಅವತಾರದ ಸಾವಿರಾರು ರೂಪಗಳಲ್ಲಿ ಬರುವ ದೇವರುಗಳು ಉಂಟು. ಅವರವರ ನಂಬಿಕೆ ಮತ್ತು ಶಕ್ತಾನುಸಾರ ಭಕ್ತಾದಿಗಳನ್ನು ಹೊಂದಿರುವ ಪ್ರತೀ ದೇವರುಗಳಿಗೂ ಒಂದೊಂದು ಹಿನ್ನೆಲೆಯಿದೆ. ಇರಲಿ ಅಯ್ಯಪ್ಪನ ಬಗ್ಗೆ ಹೇಳುವುದಾದರೆ ಈತನಿಗೆ ಸರಿಸುಮಾರು 50ಮಿಲಿಯನ್ ಭಕ್ತರು ಪ್ರತೀ ವರ್ಷವೂ ಶಬರಿಮಲೆಗೆ ತೆರಳಿ ಪೂಜೆ ಅರ್ಪಿಸುತ್ತಾರೆ! ತಿನ್ನಲು ಒಂದು ಹೊತ್ತಿನ ಅನ್ನ,ಸೂರು ಮತ್ತು ಒಂದು ನೆಮ್ಮದಿಯ ಬದುಕು ಇಲ್ಲದಿದ್ದರೂ ಭಕ್ತಿ ಭಾವದ ಹೆಸರಿನಲ್ಲಿ ಉಳಿಸಿದ ಹಣವೋ, ಸಾಲ-ಸೋಲವೋ ಮಾಡಿ  ಹಣ ಸಂಗ್ರಹಿಸಿ ಯಾತ್ರೆಗೆ ಹೊರಡುವ ಜನರಿಗೆ ಅಂತಿಮವಾಗಿಯಾದರೂ ನೆಮ್ಮದಿ ದಕ್ಕುತ್ತದಾ ಗೊತ್ತಿಲ್ಲ. ಅಯ್ಯಪ್ಪನ ವಿಷಯದಲ್ಲಿ ಮಾತ್ರ ಇಂತಹವೆಲ್ಲ ತಪ್ಪುವುದಿಲ್ಲ.
          ಸ್ವಾಮಿಯೇ ಶರಣಂ ಅಯ್ಯಪ್ಪ ಎಂದರೆ "ಆಶ್ರಯ ಕೊಡು ಭಗವಂತ"  ಎಂದು ಅರ್ಥೈಸಲಾಗುತ್ತದೆ. ಅಯ್ಯಪ್ಪನ ಕುರಿತು 2-3ರೀತಿಯ ಕತೆಗಳಿವೆ ಅದು ನಿಮಗೂ ತಿಳಿದದ್ದೇ. ಹರಿ-ಹರನ ಸಮಾಗಮದಿಂದ ಅಯ್ಯಪ್ಪ ಜನಿಸಿದ ಎನ್ನಲಾಗುತ್ತದೆ ಇದು ವೈಜ್ಞಾನಿಕವಾಗಿ ನಂಬಲು ಅಸಾಧ್ಯವಾದ ಮಾತು. ಕೇರಳದಲ್ಲಿ ಪ್ರಚಲಿತದಲ್ಲಿರುವಂತೆ ಪಂಡಾಲಂನ ರಾಜ ನಿಗೆ ಕಾಡಿನಲ್ಲಿ ಸಿಕ್ಕ ಮಗುವೇ ಅಯ್ಯಪ್ಪ,ಈತನಿಗೆ ಮಕ್ಕಳಿಲ್ಲದ ಕೊರತೆ. ಇವನೋ ಶಿವ ಭಕ್ತ ಈತನ ರಾಣಿ, ವಿಷ್ಣುವಿನ ಆರಾದಕಿ. ಹಾಗಾಗಿ ಹರಿ-ಹರ ಸಮಾಗಮದಿಂದ ಜನಿಸಿದ ಮಗು ರಾಜನಿಗೆ ವರದ ರೂಪದಲ್ಲಿ ದೊರಕಿತಂತೆ. ದೊರೆತ ಮಗುವಿನ ಕಂಠದಲ್ಲಿ ಹೊಳೆಯುವ ಮುತ್ತಿನ ಹಾರವಿದ್ದುದರಿಂದ ಮಣಿಕಂಠನೆಂಬ ಹೆಸರು ಬಂತೆಂಬ ಪ್ರತೀತಿಯೂ ಇದೆ. ಹೀಗಿರುವಾಗ ರಾಣಿಗೆ ಮಗು ಜನಿಸಿತು. ಆದರೆ ತನಗೆ ಕಾಡಿನಲ್ಲಿ ಸಿಕ್ಕ ಮಣಿಕಂಠನಿಗೆ ಯುವರಾಜನ ಪಟ್ಟವನ್ನು ಕಟ್ಟಲು ಪಂಡಾಲ ರಾಜ ಮುಂದಾಗಿದ್ದರಿಂದ  ಆತನ ಮಂತ್ರಿ ಕುತಂತ್ರ ನಡೆಸಿ ರಾಣಿಯ ತಲೆ ಕೆಡಿಸಿ ಮಣಿಕಂಠನಿಗೆ ಪಟ್ಟವನ್ನು ತಪ್ಪಿಸುವ ಸಲುವಾಗಿ ತಂತ್ರ ಹೂಡಿದ,ಅದರಂತೆ ಕಾಯಿಲೆ ಬಿದ್ದ ರಾಣಿಯ ಆರೋಗ್ಯ ಸುಧಾರಣೆಗೆ ಹುಲಿಯ ಹಾಲನ್ನು ತರುವಂತೆ ಮಣಿಕಂಠನಿಗೆ ಸೂಚಿಸಲಾಯಿತು.
             ಅಮ್ಮನ ಅಣತಿಯನ್ನು ಪಾಲಿಸಲು ಕಾಡಿಗೆ ಹೊರಟ ಮಣಿಕಂಠನಿಗೆ ಕಾಡಿನಲ್ಲಿ ಕಂಠಕ ಪ್ರಾಯಳಾಗಿದ್ದ ಮಹಿಷಿ ಎದುರಾದಳು ಆಕೆಯನ್ನು ಸಂಹಾರ ಮಾಡಿದಾಗ ಮಹಿಷಿಯ ಪೂರ್ವಜನ್ಮದ ಸುಂದರ ಯುವತಿ ರೂಪುತಳೆದಳು.ಋಷಿ ಮುನಿಯೊಬ್ಬರ ಶಾಪದಿಂದ ಆಕೆ ಮಹಿಷಿಯಾಗಿ ಜನ್ಮ ತಾಳಿದ್ದಳು. ಆ ಸುಂದರ ಯುವತಿ ಮಣಿಕಂಠನಿಗೆ ಮಾರುಹೋಗಿ ಮದುವೆಯಾಗುವಂತೆ ಪಟ್ಟುಹಿಡಿದಳು. ಆದರೆ ಅದನ್ನು ನಯವಾಗಿ ನಿರಾಕರಿಸಿದ ಅಯ್ಯಪ್ಪ ತಾನು ನೆಲೆಯಾಗುವ ಶಬರಿಮಲೈಗೆ ಭಕ್ತರು ಬರುವುದನ್ನು ನಿಲ್ಲಿಸಿದಾಗ ಆಕೆಯನ್ನು ವರಿಸುವ ಭಾಷೆಯನ್ನಿತ್ತನಂತೆ. ಹಾಗಾಗಿಯೇ ಆಕೆಯ ದೇಗುಲ ಇವತ್ತಿಗೂ ಅಯ್ಯಪ್ಪನ ದೇಗುಲದ ಪಕ್ಕದಲ್ಲೇ ಇದೆ.ಕಾಡಿಗೆ ಬಂದ ಮಣಿಕಂಠ ಹುಲಿಯನ್ನು ಪಳಗಿಸಿ ಹುಲಿಯ ಹಾಲನ್ನು ತಂದೂ ಬಿಟ್ಟ ಆ ಮೂಲಕ ತನ್ನ ಮಾತೃಭಕ್ತಿಯನ್ನು ಸಾಬೀತು ಪಡಿಸಿದ ಅಯ್ಯಪ್ಪ ಅಂತಾರ್ಧನನಾದ.
            ಅನ್ನಾಹಾರ ಬಿಟ್ಟ ರಾಜನಿಗೆ ಕನಸಿನಲ್ಲಿ ಕಾಣಿಸಿಕೊಂಡು ಶಬರಿಮಲೈನಲ್ಲಿ ನೆಲೆಸುವ ಮಾತು ಕೊಟ್ಟ ಅದರಂತೆ  ಮುಂದೆ  ಶಬರಿಮಲೈನಲ್ಲಿ ನೆಲೆ ನಿಂತ. ಇವತ್ತಿಗೂ ಮಣಕಂಠನನ್ನು ಇಷ್ಟಪಟ್ಟ ಆ ಸುಂದರ ಯುವತಿಯ ದೇಗುಲ, ಅಯ್ಯಪ್ಪನ ದೇಗುಲದ ಸನಿಹದಲ್ಲೇ ಇದೆ. ಆಕೆಯನ್ನು 'ಮಾಲಿಕಾಪುರತಮ್ಮ" ಎಂದೇ ಕರೆಯಲಾಗುತ್ತದೆ. ಶಬರಿಮಲೈ ಅಯ್ಯಪ್ಪನ ದರ್ಶನ ಪಡೆಯಲು 18ಮೆಟ್ಟಿಲುಗಳನ್ನು ಬೆಟ್ಟಕ್ಕೆ ನಿರ್ಮಿಸಲಾಗಿದೆ ಅವಕ್ಕೆ ಚಿನ್ನದ ಲೇಪನವಿದೆ. ಭಕ್ತಿ-ಶ್ರದ್ದೆಯಿಂದ ನಡೆದುಕೊಂಡವರು ಮಾತ್ರ ಅದನ್ನು ಹತ್ತಲು ಸಾಧ್ಯ ಎಂದೇ ನಂಬಿಕೆಯಿದೆ.

ಏನಿದು ಮಕರ ಜ್ಯೋತಿ  ಮಕರ ಸಂಕ್ರಾಂತಿಯ ದಿನದಂದು ಮಕರ ಜ್ಯೋತಿಯ ರೂಪದಲ್ಲಿ ಅಯ್ಯಪ್ಪನೇ ಇಂದಿಗೂ ದರ್ಶನ ಕೊಡುತ್ತಾನೆ ಎಂದು ನಂಬಲಾಗುತ್ತಿದೆ. ಈ ಬಗ್ಗೆ ಹಲವಾರು ವಾದ-ವಿವಾದಗಳು ಇವೆ. ಈ ವಿವಾದ ಕೋರ್ಟು ಮೆಟ್ಟಿಲು ಏರಿತ್ತು, ಅಲ್ಲಿ ಧಾರ್ಮಿಕ ವ್ಯವಸ್ಥೆಗಳನ್ನು ನೋಡುತ್ತಿರುವ 80ವಯಸ್ಸಿನ ಹಿರಿಯ ಮುಖಂಡರೊಬ್ಬರು ಹೇಳುವಂತೆ ದೇಗುಲದ ಆಡಳಿತ ಮಂಡಳಿಯೇ ಪ್ರತೀ ವರ್ಷ ಮಕರ ಸಂಕ್ರಮಣದ ದಿನದಂದು ಜ್ಯೋತಿಯ ರೂಪದಲ್ಲಿ ಕರ್ಪೂರ ಉರಿಸಲಾಗುತ್ತದೆ ಅದೇ ಸಮಯಕ್ಕೆ ಆಕಾಶದಲ್ಲಿ ಕಾಣುವ ಹೊಳೆಯುವ ನಕ್ಷತ್ರವೊಂದು ಬೆಟ್ಟದ ಸಾಲಿನಲ್ಲಿ ಉರಿಸುವ ಜ್ಯೋತಿಗೆ ಸಮನಾಗಿ ಕಾಣಿಸುವುದರಿಂದ ಅದು ಇನ್ನು ಹೆಚ್ಚು ಪ್ರಕಾಶಮಾನವಾಗಿ ಕಾಣುತ್ತದಂತೆ ಅದನ್ನು ನೋಡುವ ಭಕ್ತರು ಅಯ್ಯಪ್ಪನೇ ದರ್ಶನ ಕೊಟ್ಟ ನೆಂದು ಪುನೀತರಾಗುತ್ತಾರೆ ಇರಲಿ ಭಕ್ತಿ-ನಂಬಿಕೆ ಅವರವರ ಭಾವಕ್ಕೆ ಸಂಬಂಧಿಸಿದ್ದು.
ಮಾಲೆ ಧರಿಸುವವರು ಯಾರು? ಮುಖ್ಯವಾಗಿ ನಾವಿಲ್ಲಿ ಮಾತನಾಡಬೇಕಾದ್ದು ಅಯ್ಯಪ್ಪನ ಭಕ್ತರ ಬಗೆಗೆ. ಬದುಕಿನಲ್ಲಿ ಒಂದು ಶಿಸ್ತು ಕಂಡುಕೊಳ್ಳದ, ಸಮಾಜ ಕಂಟಕನಾದ, ಸೋಲಿನ ಸುಳಿಗೆ ಸಿಕ್ಕವರಿಗೆ ಅಯ್ಯಪ್ಪ ಮಾಲೆಯನ್ನು ಹಾಕಿಸಲಾಗುತ್ತದೆ. ಈ ಪೈಕಿ ಅತ್ಮವಿಶ್ವಾಸದ ಹುಕಿಗೆ, ಶೋಕಿಗೆ ಬಿದ್ದು ಮಾಲೆ ಹಾಕುವವರು ಉಂಟು. ಅಯ್ಯಪ್ಪ ಮಾಲೆ ಹಾಕಿದ ಮೇಲಾದರೂ ತನ್ನ ಬದುಕಿನಲ್ಲಿ ಭರವಸೆ ಮೂಡಿಸುವ ರೀತಿ ಎಲ್ಲರಿಗೂ ಬೇಕಾದವರಾಗಿ ಬದುಕುತ್ತಾರೆಂಬ ನಿರೀಕ್ಷೆ ಒಂದು 10ಪರ್ಸೆಂಟಿನಷ್ಟು ನಿಜವಾದರೆ ಬಾಕಿ 90ಪರ್ಸೆಂಟಿನಷ್ಟು ಜನ ಹುಟ್ಟುಗುಣ ಸುಟ್ಟರೂ ಹೋಗದೆನ್ನುವಂತೆ ಮಾಮೂಲಿಯಾಗಿ ಬದುಕಿ ಬಿಡುತ್ತಾರೆ. ಮಾಲೆ ಹಾಕಿದಷ್ಟು ದಿನ ಮಾತ್ರ ಅಚ್ಚರಿ ಹುಟ್ಟುವಷ್ಟು ಬದಲಾವಣೆ ಕಾಣುವ ಈ ಮಂದಿ ಉಳಿದಂತೆ ಮಾಮೂಲಿ ವರಸೆಗಳನ್ನು ಹಾಗೆಯೇ ಉಳಿಸಿಕೊಂಡಿರುತ್ತಾರೆ. ಹೀಗಿರುವಾಗ ಅಯ್ಯಪ್ಪ ಮಾಲೆ ಬೇಕಾ? ಎಂಬ ಪ್ರಶ್ನೆ ಹುಟ್ಟುತ್ತದೆ.
             ಅಯ್ಯಪ್ಪ ಮಾಲೆ ಧರಿಸಿದವನು 41ದಿನಗಳ ಕಾಲ ಕಠಿಣ ಶಿಸ್ತಿನಲ್ಲಿರಬೇಕಾಗುತ್ತದೆ. ಪ್ರತೀ ನಿತ್ಯ 108ಭಾರಿ ಅಯ್ಯಪ್ಪನ ನಾಮಸ್ಮರಣೆ ಮಾಡಬೇಕಾಗುತ್ತದೆಂಬ ನಿಯಮವಿದೆ, ಆದರೆ ಎಷ್ಟು ಮಂದಿ ಕೋಡಂಗಿಗಳಿಗೆ ಈ ಬಗ್ಗೆ ಅರಿವಿದೆ? ದೇವರ ಮಾಲೆಯ ಹೆಸರಿನಲ್ನಲಿ, ಭಕ್ತಿಯ ಹೆಸರಿನಲ್ಲಿ ನಯಾ ಪೈಸಾದ ಬದಲಾವಣೆಯೂ ಆಗದಿದ್ದರೆ ಅಯ್ಯಪ್ಪ ಮಾಲೆಯಾದರೂ ಏಕೆ ಬೇಕು? ಬಹುತೇಕ ಅಯ್ಯಪ್ಪ ಮಾಲೆ ಧರಿಸುವವರು ಗ್ರಾಮೀಣ ಪ್ರದೇಶದದವರು ಮತ್ತು ಶ್ರಮಿಕರು ಆಗಿರುತ್ತಾರೆ. ಮಾಲೆ ಧರಿಸಿ ಶಬರಿಮಲೈಗೆ ತೆರಳಲು ಸಾವಿರಾರು ರೂಪಾಯಿಗಳ ಚೀಟಿ ಹಾಕಿ ಅಯ್ಯಪ್ಪನ ದರ್ಶನವಾದ ಮೇಲೆ ಬರಗೆಟ್ಟವರಂತೆ ಕುಡಿತ-ಇಸ್ಪೀಟು-ಮಾಂಸಹಾರ-ಮೋಜಿನ ಪ್ರವಾಸ ಗಳಲ್ಲಿ ತೊಡಗುವ ಅನೇಕ ಮಂದಿ ಅಯ್ಯಪ್ಪ ಭಕ್ತಾದಿಗಳು ಸಾಧಿಸುವುದೇನನ್ನು? ವಿದ್ಯಾರ್ಥಿಗಳಿಗೆ ಪರೀಕ್ಷೆ ಸಮಯದಲ್ಲಿ ತೊಂದರೆ ಕೊಡಲೋ ಎಂಬಂತೆ  ಮಾಲೆ ಹಾಕುವ ಈ ಮಂದಿ ತಾವೇ ಹೇಳಿಕೊಂಡರೆ ಸಾಲದೆಂಬಂತೆ ಊರಿನ ನಾಲ್ಕು ದಿಕ್ಕಿಗೂ ಮೈಕು ಹಾಕಿ ರಾತ್ರಿಯಿಡೀ ಭಜನೆ ಮಾಡುವುದು ಪೂಜೆ ಸ್ನಾನದ ನೆಪದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಪರಿಸರವನ್ನು ಹಾಳು ಮಾಡುವುದು ಸರಿಯೇ?
            ಮನೆಯಲ್ಲಿ ತಿನ್ನಲು ಅನ್ನ-ಸೂರಿಗೆ ದಿಕ್ಕಿಲ್ಲದಿದ್ದರೂ ಕೂಡಿಟ್ಟ ಹಣವನ್ನು ಯಾತ್ರೆಗೆಂದು ವೆಚ್ಚಮಾಡಿ ಸಾಧಿಸುವುದೇನು?  ಪ್ರಸಕ್ತ ದಿನಗಳಲ್ಲಿ ದೇವರ ಮೇಲಿನ ನಂಬಿಕೆಗಳು ತಪ್ಪಬೇಕು ಎಂದು ನಾನು ಹೇಳುವುದಿಲ್ಲ ಆದರೆ ಭಕ್ತಿ ಭಾವ ನಮ್ಮನ್ನು ಒಂದು ಅನೂಹ್ಯ ಲೋಕಕ್ಕೆ ಕರೆದೊಯ್ಯುತ್ತದೆ, ಸಮಾಜದಲ್ಲಿನ ಅಶಾಂತಿಗೆ ತಾತ್ಕಾಲಿಕವಾಗಿಯಾದರೂ ತಡೆ ಹಾಕುತ್ತದೆ. ಕ್ರೂರ ಮನಸ್ಸುಗಳನ್ನು ಮಣಿಸುತ್ತದೆ ಆದರೆ ಭಕ್ತಿಭಾವದ ಹೆಸರಿನಲ್ಲಾದರೂ ಜನ ಬದಲಾಗಬೇಕು, ಸಮಾಜದ ಒಳಿತಿಗೆ ಪೂರಕವಾಗುವ ರೀತಿ ನಡವಳಿಕೆಗಳನ್ನಿಟ್ಟುಕೊಂಡಾಗ ಮಾತ್ರ ನಂಬಿದ ಭಕ್ತಿಗೆ ಚ್ಯುತಿ ಬಾರದು ಅಲ್ಲವೇ?

Sunday, November 14, 2010

ಎಡಬಿಡಂಗಿ ಸರ್ಕಾರಕ್ಕೆ ಮಗ್ಗುಲ ಮುಳ್ಳುಗಳು!

ಮಂಗನ ಕೈಗೆ ಮಾಣಿಕ್ಯ ಸಿಕ್ಕರೆ ಏನು ಮಾಡುತ್ತೆ? ಅಲ್ವಾ ಹಾಗೆ ಇವತ್ತಿನ ರಾಜ್ಯ ಸರ್ಕಾರದ ಸ್ಥಿತಿ ಇದೆ. ದಕ್ಷಿಣ ಭಾರತದಲ್ಲಿ ಪ್ರಥಮ ಭಾರಿಗೆ ಅಧಿಕಾರದ ಚುಕ್ಕಾಣಿ ಹಿಡಿದ ಬಿಜೆಪಿ ಸರ್ಕಾರ ಅದಕ್ಕೆ ತಕ್ಕುದಾದ ರೀತಿಯಲ್ಲಿ ನಡೆಯುತ್ತಿಲ್ಲ. ವಿರೋಧ ಪಕ್ಷದಲ್ಲಿ  ಹಲವು ದಶಕಗಳ ಕಾಲ ನಾಯಕನಾಗಿ ನುರಿತ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ತಮ್ಮ ಕರ್ತವ್ಯ ನಿರ್ವಹಿಸುವಲ್ಲಿ ವಿಫಲವಾಗಿದ್ದಾರೆ. ಇದಕ್ಕೆ ಪೂರಕವಾಗಿ ಸಮಯ ಸಾಧಕತನ ಪ್ರದರ್ಶಿಸುತ್ತಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರುಗಳು ಅಧಿಕಾರದ ವ್ಯಾಮೋಹಕ್ಕೆ ಬಿದ್ದು ಕಾಟ ಕೊಡುತ್ತಿದ್ದಾರೆ. ಎಲ್ಲಾ ಪಕ್ಷಗಳ ಶಾಸಕರುಗಳು ದುಡ್ಡಿಗೆ ತಮ್ಮನ್ನು ಮಾರಿಕೊಳ್ಳುತ್ತಾ ಪ್ರಜಾಪ್ರಭುತ್ವದ ಆಶಯಗಳನ್ನು ಗಾಳಿಗೆ ತೂರುತ್ತಿದ್ದಾರೆ. ದೊಡ್ಡಣ್ಣನಂತಿರ ಬೇಕಾಗಿದ್ದ ರಾಜ್ಯಪಾಲ ಕಾಂಗ್ರೆಸ್ ಪಕ್ಷದ ಏಜೆಂಟ್ ಆಗಿ ನಡೆದು ಕೊಳ್ಳುತ್ತಿದ್ದಾರೆ.  ಈ ನಡುವೆ ಮತದಾರ ದಿಗ್ಮೂಡನಾಗಿ ಇವನ್ನೆಲ್ಲಾ ನೋಡುವಂತಾಗಿದೆ. ಹಗರಣ ತಮಗೆ ಹೊಸದಲ್ಲ ಎನ್ನುವಂತೆ ಕೆಐಎಡಿಬಿ ಹಗರಣದ ಮೂಲಕ ಸ್ವಜನ ಪಕ್ಷಪಾತ ಆರೋಪಕ್ಕೆ ಸಿಎಂ ಯಡಿಯೂರಪ್ಪ ಸಿಲುಕಿದ್ದಾರೆ. ಇಂತಹ ಸಂಧಿಗ್ದ ಸನ್ನಿವೇಶದಲ್ಲಿ ರಾಜ್ಯದ ವಿಧಾನ ಸಭಾ ಚುನಾವಣೆಗಳು ಏಪ್ರಿಲ್-ಮೇ ವೇಳೆಗೆ ನಡೆದರೂ ಅಚ್ಚರಿ ಪಡಬೇಕಿಲ್ಲ.ಆಂತರಿಕ ಶಿಸ್ತಿಗೆ ಹೆಸರಾದ ಪಕ್ಷವಿದ್ದರೂ ಯಾಕೆ ಇಂತಹ ಅಭದ್ರತೆ ಕಾಡುತ್ತಿದೆ? ಬದಲಾದ ಸನ್ನಿವೇಶಗಳೇನು?ರಾಜ್ಯದ ರಾಜಕೀಯ ಎಲ್ಲಿಗೆ ಬಂದು ತಲುಪಿದೆ? ಎಂಬ ಪ್ರಶ್ನೆ ಉದ್ಭವಿಸುತ್ತದೆ. 
       ಮೊನ್ನೆ ನನ್ನ ಯುವ ಮಿತ್ರನೊಬ್ಬ 'ಇನ್ಮುಂದೆ ವೋಟ್ ಮಾಡಬಾರ್ದು ಅಂತ ನಿರ್ಧರಿಸಿ ಬಿಟ್ಟಿದೀನಿ, ಈ ರಾಜಕೀಯದೋರ ಆಟಗಳನ್ನು ನೋಡಿ ಸಾಕಾಗಿದೆ' ಎಂದ. ಇತ್ತೀಚೆಗೆ ಶಾಸಕರ ತಮಿಳುನಾಡು-ಹೈದರಾಬಾದ್-ಗೋವಾ ರೆಸಾರ್ಟ್ ಪ್ಯಾಕೇಜ್ ಪ್ರವಾಸ ಆತನನ್ನ ಕಂಗೆಡಿಸಿತ್ತು. ಪತ್ರಿಕೆ ತೆಗೆದರೂ ಅದೇ ಸುದ್ದಿ, ಟೀವಿ ಚಾನೆಲ್ ತಿರುಗಿಸಿದರೂ ಅದೇ ಸುದ್ದಿ ಬದುಕಿನ ಜಂಜಡದಲ್ಲಿ ತೀರಾ ರೇಜಿಗೆ ಹುಟ್ಟಿಸಿದ ಸದರಿ ಸುದ್ದಿ ಆತನ ಮನಸ್ಥಿತಿಗೆ ಕಾರಣವಾಗಿತ್ತು. ಯಾಕೆ ಹೀಗಾಗುತ್ತೆ? ರಾಜಕೀಯದಲ್ಲಿ ಸ್ಥಿತ್ಯಂತರಗಳು ಹೊಸದೇನಲ್ಲ,ಆದರೆ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಉಂಟಾದ ರಗಳೆಗಳಿವೆಯಲ್ಲ ಅಂತಹವು ಈ ಹಿಂದೆ ಘಟಿಸಿರಲಿಲ್ಲ. ಅಲ್ಪ ಬಹುಮತದಿಂದ ಅಧಿಕಾರಕ್ಕೆ ಬಂದ ಬಿಜೆಪಿ ಪಕ್ಷ, ಪಕ್ಷೇತರರನ್ನು ಒಲಿಸಿಕೊಂಡು ಸರ್ಕಾರ ರಚಿಸಿತು. ಆಮೇಲೆ ಸರ್ಕಾರವನ್ನು ಸುಭದ್ರ ಗೊಳಿಸಲು ಶಾಸಕರ ಬೇಟೆ ಆರಂಭಿಸಿತು. ಒಬ್ಬೊಬ್ಬ ಶಾಸಕನಿಗೂ ನಿಗಮ-ಮಂಡಳಿ ಅಧ್ಯಕ್ಷಗಿರಿ, ಸಚಿವ ಸಂಪುಟದಲ್ಲಿ ಸ್ಥಾನ ಪ್ಲಸ್ ಕೋಟಿ ಕೋಟಿ ದುಡ್ಡು ಕೊಟ್ಟು ಅನಿಷ್ಠ ಸಂಪ್ರದಾಯ ಹುಟ್ಟುಹಾಕಿದ ರೆಡ್ಡಿಗಳು ಮೊದಲಿಗೆ ಪ್ರಜಾಪ್ರಭುತ್ವದ ಆಶಯಕ್ಕೆ ಧಕ್ಕೆ ತಂದರು. ನಂತರ ಬ್ಲಾಕ್ ಮೇಲ್ ಶುರುವಿಟ್ಟುಕೊಂಡು ಸರ್ಕಾರವನ್ನು ಹೈರಾಣ ಮಾಡಿದರು. ಸಚಿವ ಸಂಪುಟದ ಸಚಿವರುಗಳೂ ದಿಕ್ಕು ದೆಸೆಯಿಲ್ಲದಂತೆ ಸರ್ಕಾರದ ಹಣವನ್ನು ಕೊಳ್ಳೆ ಹೊಡೆಯಲು ಶುರುವಿಟ್ಟರು. ಅನ್ನದಾತನಿಗೆ ವಂಚಿಸಿ ಆರ್ಥಿಕ ವಲಯದ ನೆಪದಲ್ಲಿ ದುಡ್ಡು ಮಾಡಿಕೊಂಡರು. ನೈತಿಕತೆಗೆ ಧಕ್ಕೆ ಬರುವ ರೀತಿಯಲ್ಲಿ  ಚಾರಿತ್ರ್ಯವನ್ನು ಬಹಿರಂಗವಾಗಿ ಹರಾಜಿಗಿಟ್ಟರು.ಮುಖೇಡಿ ಮುಖ್ಯಮಂತ್ರಿ ಕುರ್ಚಿಯ ಆಸೆಗೆ ಬಿದ್ದು ಭ್ರಷ್ಟಾಚಾರಕ್ಕೆ ಇಂಬು ಕೊಟ್ಟರು, ಹಗೆತನಕ್ಕೆ ಸಾಥ್ ನೀಡಿದರು. ಕನಿಷ್ಠ ತನ್ನ ಸಚಿವ ಸಂಪುಟದ ಸದಸ್ಯರನ್ನು ಹದ್ದುಬಸ್ತಿನಲ್ಲಿಟ್ಟು ಕೊಳ್ಳಲು ಆಗದ  ಮುಖ್ಯಮಂತ್ರಿಯಿಂದ ರಾಜ್ಯದ ಆಡಳಿತವನ್ನು ನಿಯಂತ್ರಿಸಲು ಸಾಧ್ಯವೇ? 
          ಕೆಲ ತಿಂಗಳ ಹಿಂದೆ ಮುಖ್ಯಮಂತ್ರಿಯ ವಿರುದ್ಧ ಬಂಡೆದ್ದು ರೆಸಾರ್ಟು ಪ್ರವಾಸಕ್ಕೆ ಹೋದ ಬಿಜೆಪಿಯ ಸಚಿವರುಗಳನ್ನು ಉರಿಯುವ ಮನೆಯ ಗಳ ಹಿರಿದಂತೆ ಸಮಯ ಸಾಧಕತನ ಪ್ರದರ್ಶಿಸಿ ಆಮಿಷವೊಡ್ಡಿ ಸೆಳೆದ ಜಾತ್ಯಾತೀತ ಜನತಾದಳದ ಕುಮಾರಸ್ವಾಮಿ ಸಾಧಿಸಿದ್ದೇನು? ಕಾಂಗ್ರೆಸ್ ನಲ್ಲಿ ಕಾಲೆಳೆಯುವವರ ಮಧ್ಯೆಯೂ ವರ್ಚಸ್ಸು ಪ್ರದರ್ಶಿಸಿ ಬಿಜೆಪಿಯ  ಆಂತರಿಕ ಬಿಕ್ಕಟ್ಟನ್ನು ಲಾಭಕ್ಕೆ ತಿರುಗಿಸಿ ಮುಖ್ಯಮಂತ್ರಿಯಾಗುವ ಕನಸು ಕಂಡ ಸಿದ್ಧರಾಮಯ್ಯಗೆ ಇಂತಹದ್ದೆಲ್ಲ ಬೇಕಿತ್ತಾ? ಹಿಂದೆ ಅಪ್ಪನ ಮಾತು ತಿರಸ್ಕರಿಸಿ  ಕುಮಾರಸ್ವಾಮಿ ಬಿಜೆಪಿಗೆ ಅಧಿಕಾರ ನೀಡಿದ್ದರೆ ಇವತ್ತು ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಿತ್ತೇ? ಒಂದಂತೂ ಸತ್ಯ ರಾಜಕೀಯದಲ್ಲಿ ಅಂತರ್ಗತವಾಗಿದ್ದ ಜಾತಿ ರಾಜಕೀಯ ಕುಮಾರಸ್ವಾಮಿಯ ತಪ್ಪು ಹೆಜ್ಜೆಯಿಂದಾಗಿ ಎದ್ದು ನಿಂತಿತು. ಪರಿಣಾಮ ಇವತ್ತು ಪಕ್ಷ ರಾಜಕೀಯಕ್ಕಿಂತ ಜಾತಿ ರಾಜಕೀಯ ಪ್ರಧಾನವಾಗಿದೆ. ಜಾತಿ ರಾಜಕೀಯದ ಪರಿಣಾಮ ಸರ್ಕಾರದ ಆಡಳಿತದ ಮೇಲೂ ಪರಿಣಾಮ ಬೀರುತ್ತದೆ. ಇವತ್ತು ಸರ್ಕಾರದ ಆಯಕಟ್ಟಿನ ಸ್ಥಳಗಳಲ್ಲಿ ಜಾತೀಯತೆಗೆ ಮನ್ನಣೆ ನೀಡಲಾಗಿದೆ, ಅನ್ಯ ಪಕ್ಷಗಳ ಶಾಸಕರುಗಳ ಕ್ಷೇತ್ರಕ್ಕೆ ಅಭಿವೃದ್ದಿಯ ಸೋಂಕು ಇಲ್ಲ. ದಿಕ್ಕು ದೆಸೆಯಿಲ್ಲದಂತೆ ಪದೇ ಪದೇ ನಡೆಯುತ್ತಿರುವ ಐಎಎಸ್-ಐಪಿಎಸ್-ಕೆಎಎಸ್ ಅಧಿಕಾರಿಗಳ ವರ್ಗಾವರ್ಗಿ, ಉಸ್ತುವಾರಿ ಸಚಿವರುಗಳ ಬದಲಾವಣೆ ಅನಿಶ್ಚಿತ ರಾಜಕೀಯ ನಡೆಗಳು ರಾಜ್ಯದ ಆಡಳಿತಕ್ಕೆ ಅಡ್ಡಗಾಲಾಗಿವೆ. ಈ ನಡುವೆ ಕಾಂಗ್ರೆಸ್ ಪಕ್ಷದ ಏಜೆಂಟ್ ಆಗಿರುವ ರಾಜ್ಯಪಾಲ ಬಿಜೆಪಿ ಸರ್ಕಾರಕ್ಕೆ ಮಗ್ಗುಲ ಮುಳ್ಳಾಗಿ ಕಾಂಗ್ರೆಸ್ ಧೋರಣೆಯ ನಿಲುವುಗಳನ್ನು ಪ್ರದರ್ಶಿಸುತ್ತಾ ಆ ಸ್ಥಾನದ ಘನತೆಯನ್ನು ಕಳೆದಿದ್ದಾರೆಂಬ ಆರೋಪ ಕೇಳಿಬರುತ್ತಿದೆ. ಅನುಕೂಲ ಸಿಂಧುವಿನಂತೆ ವರ್ತಿಸುತ್ತಿರುವ ರಾಜ್ಯಪಾಲರು ಪಕ್ಷಾತೀತವಾಗಿ ನಡೆಯದೇ ಇರುವುದು ಸಾರ್ವಜನಿಕವಾಗಿ ಅಸಹ್ಯ ಹುಟ್ಟಿಸುತ್ತಿದೆ.
ಈಗ ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯಬೇಕಿದೆ, ಈ ಸಂಧರ್ಭದಲ್ಲಿ ರಾಜ್ಯ ಚುನಾವಣಾ ಆಯೋಗ ಮುಕ್ತವಾಗಿ  ಮೀಸಲಾತಿ ನಿಯಮಗಳನ್ನು ಪ್ರಕಟಿಸಿ ಚುನಾವಣೆಗೆ ಮುಂದಾಗಬೇಕಾಗಿದೆ. ಆದರೆ ಅನಧಿಕೃತವಾಗಿ ಲಭ್ಯ ಮಾಹಿತಿಯ ಪ್ರಕಾರ  ಚುನಾವಣಾ ಆಯೋಗ ಮೀಸಲಾತಿ ನಿಗದಿ ಗೊಳಿಸಿ ಸರ್ಕಾರಕ್ಕೆ ಸಲ್ಲಿಸಿದೆ. ಸರ್ಕಾರ ಅದನ್ನು ತನಗೆ ಬೇಕಾದಂತೆ ಬದಲಾವಣೆ ಮಾಡಿ ಪಂಚಾಯತ್ ರಾಜ್ ಸುಗ್ರಿವಾಜ್ಞೆಯನ್ನು ರಾಜ್ಯಪಾಲರಿಗೆ ಕಳುಸಹಿದೆ. ಸುಗ್ರಿವಾಜ್ಞೆಯಲ್ಲಿ ಹಿಂದುಳಿದ ವರ್ಗಗಳಿಗೆ ಅನ್ಯಾಯವಾಗಿದೆಯೆಂದು ಪ್ರತಿಪಕ್ಷಗಳ ಬೆದರಿಕೆಯ ಹಿನ್ನೆಲೆಯಲ್ಲಿ ಯಡಿಯೂರಪ್ಪ ಮೀಸಲು ಬದಲಿಸಿ ರಾಜ್ಯಪಾಲರಿಗೆ ಕಳುಹಿಸಿದ್ದಾರೆ.ರಾಜ್ಯಪಾಲರು ಕಾನೂನು ಸೂಕ್ಷ್ಮ ತಿಳಿಸಿ ತಿರಸ್ಕರಿಸಿದ್ದಾರೆ. ವಾಸ್ತವವಾಗಿ ಆಯಕಟ್ಟಿನ ಕೆಲವು ಸ್ಥಳಗಳಲ್ಲಿ ಈಗಲೂ ಸಹಾ ಕಾಂಗ್ರೆಸ್ ಮತ್ತು ಜೆಡಿಎಸ್ ಒಲವಿನ ಕೆಲವು ಅಧಿಕಾರಿಗಳಿದ್ದು ಅವರುಗಳು ಬೇಕೆಂತಲೇ ಸೃಷ್ಟಿಸುತ್ತಿರುವ ಎಡವಟ್ಟುಗಳಿಂದ ಸಿಎಂ ಮುಖಭಂಗಕ್ಕೆ ಒಳಗಾಗುತ್ತಿದ್ದಾರೆ ಎಂಬ ಸುದ್ದಿಯಿದೆ. ಇನ್ನು ಸಚಿವ ಸಂಪುಟದ ಕಥೆ, ತನ್ನ ಒಟ್ಟು ಸದಸ್ಯ ಸ್ಥಾನಕ್ಕೆ ಅನುಗುಣವಾಗಿ ಅತೀ ಹೆಚ್ಚಿನ ಸಂಖ್ಯೆಯ ಸಚಿವರುಗಳನ್ನು ನೇಮಿಸಿಕೊಂಡಿರುವ ಯಡಿಯೂರಪ್ಪ ಮತ್ತಿಬ್ಬರು ಸಚಿವ ಸ್ಥಾನಗಳನ್ನು ತುಂಬಲು ರೆಡಿಯಾಗಿದ್ದಾರೆ, ಅಲ್ಲಿಗೆ ಸಚಿವ ಸ್ಥಾನಗಳ ಕೋಟಾ ತುಂಬುತ್ತದೆ ಆದರೂ ಇನ್ನೂ ಹತ್ತು ಹದಿನೈದು ಶಾಸಕರುಗಳು ಸಚಿವ ಪದವಿಯ ಕ್ಯೂ ನಲ್ಲಿ ಇರುವುದರಿಂದ ಯಡಿಯೂರಪ್ಪ ನವರಿಗೆ ಕಷ್ಟ ಕೈ ಹಿಡಿಯುವುದು ಖಚಿತ, ಇರುವವರನ್ನು ಕಿತ್ತು ಸಚಿವ ಸಂಪುಟಕ್ಕೆ ಹೊಸಬರನ್ನು ತೆಗೆದುಕೊಂಡರೆ ಅದು ಉರಿಯುವ ಭಿನ್ನಮತೀಯರ ಗುಂಪಿಗೆ ತುಪ್ಪ ಸುರಿದಂತಾಗುತ್ತದೆ.ಒಂದು ವೇಳೆ ನಾಯಕತ್ವ ಬದಲಾವಣೆ ಆಗಬೇಕು ಎಂಬುದಾದರೆ ಯಡಿಯೂರಪ್ಪ ಅದಕ್ಕೆ ಸಿದ್ದರಿಲ್ಲ, ಪರಿಸ್ಥಿತಿ ಕೈ ಮೀರಿದರೆ ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಹೋಗಲು ಸಿದ್ದರಿದ್ದಾರೆಂದು  ಮೂಲಗಳು ಹೇಳುತ್ತವೆ.ರಾಜ್ಯದ ರಾಜಕೀಯದಲ್ಲಿ ಇನ್ನು ಏನೇನು ನೋಡಬೇಕು.

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...