Sunday, June 12, 2011

ಬಾಬಾ ರಾಮದೇವರ ಉಪವಾಸವೆಂಬ ಪ್ರಹಸನವೂ

ಬಾಬಾ ರಾಮದೇವರ ಉಪವಾಸ ಅಂತ್ಯಗೊಂಡಿದೆ, ಕಳೆದ ಒಂದು ವಾರದಿಂದಲೂ ನಡೆಯುತ್ತಿದ್ದ ಹೈಡ್ರಾಮಾ ಸಧ್ಯಕ್ಕೆ ಮುಗಿದಂತೆ ಕಂಡರೂ ಈ ಹೋರಾಟದ ಆಜೂಬಾಜೂ ಹಲವಾರು ಅನುಮಾನಗಳನ್ನ ಮತ್ತು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಒಂದು ಹೋರಾಟಕ್ಕೆ ನಾಯಕನಿಗೆ ಇರಬೇಕಾದ ತಾತ್ವಿಕ ನೆಲೆಗಟ್ಟು, ನಿಖರತೆ, ಛಲ,ಗಟ್ಟಿತನ ಇಲ್ಲದಿದ್ದರೆ ಏನಾಗುತ್ತದೆ ಎಂಬುದಕ್ಕೆ ರಾಷ್ಟ್ರೀಯ ಮಟ್ಟದಲ್ಲಿ ನಡೆದ ಬಾಬಾ ನೇತೃತ್ವದ ಹೋರಾಟ ಜ್ವಲಂತ ಸಾಕ್ಷಿಯಾಗಿ ನಮ್ಮ ಮುಂದೆ ಅಣಕಿಸಿದಂತೆ ಭಾಸವಾಗುತ್ತಿದೆ. ಇವತ್ತು  ನೈಜ ನೆಲೆಗಟ್ಟಿನಲ್ಲಿ ಜರುಗುವ ಹೋರಾಟಗಳು ಸಹಾ ಇಂತಹ ನಾಯಕರುಗಳ  ಜೊಳ್ಳುತನದಿಂದಾಗಿ ಅರ್ಥ ಕಳೆದುಕೊಳ್ಳುತ್ತಿವೆ ಎಂದು ಅತ್ಯಂತ ವಿಷಾದದಿಂದ ಹೇಳಬೇಕಾಗಿದೆ. ಬಾಬಾ ರಾಮದೇವ ದೇಶದ ಶ್ರೇಷ್ಠ ಯೋಗಪಟು, ಆಧ್ಯಾತ್ಮಿಕ ಚಿಂತಕ ಆಗಾಗ ಭ್ರಷ್ಟಾಚಾರದ ವಿರುದ್ದ ಹೋರಾಟಕ್ಕೆ ಧುಮುಕುವ ಚಳುವಳಿಯ ನೇತಾರ, ರಾಜಕೀಯ ಪಕ್ಷ ಕಟ್ಟಿ ಚುನಾವಣೆಗೆ ಇಳಿಯುವ ಉತ್ಸಾಹ ಪ್ರದರ್ಶಿಸುವ ರಾಜಕೀಯ ಉತ್ಸಾಹಿ, ಯೋಗದ ಜೊತೆಗೆ ವಿವಿಧ ಮಾರಣಾಂತಿಕ ಕಾಯಿಲೆಗಳನ್ನು ಗುಣಪಡಿಸುತ್ತೇನೆ ಎಂದು ಔಷಧಗಳನ್ನು ಉತ್ಪಾದಿಸಿ ಮಾರಾಟ ಮಾಡುವ ಒಬ್ಬ ವ್ಯಾಪಾರಿ ಅಷ್ಟೇ ಅಲ್ಲ ಒಂದು ತಾತ್ವಿಕ ನೆಲೆಗಟ್ಟಿನಲ್ಲಿ ಒಮ್ಮತದ ನಾಯಕತ್ವದಲ್ಲಿ ಸಾಗುತ್ತಿದ್ದ ಭ್ರಷ್ಟಾಚಾರದ ವಿರುದ್ಧದ ಹೋರಾಟವನ್ನು ಒಮ್ಮೆಲೆ ಹೈಜಾಕ್ ಮಾಡಿದ ಖಳ'ನೇತಾರ' ನೂ ಹೌದು. ಇಂತಹ ಬಾಬಾ ರಾಮದೇವರ ವಿಚಾರಗಳೇನು? ಅಸಲಿಯತ್ತೇನು? ಇಂತಹವರನ್ನು ಬೆಂಬಲಿಸುವುದರಿಂದ ಆಗುವ ಪರಿಣಾಮಗಳೇನು ಎಂಬ ವಿಚಾರ ಅಗತ್ಯವಾಗಿ ಚರ್ಚೆಗೆ ಬರಬೇಕಾಗಿದೆ.

          ಬಾಬಾ ರಾಮದೇವ್ ಅಲಿಯಾಸ್ ರಾಮಕೃಷ್ಣ ಯಾದವ್ ಜನಿಸಿದ್ದು ಹರ್ಯಾಣ ರಾಜ್ಯದ ಮಹೇಂದ್ರಘರ್ ಜಿಲ್ಲೆಯಲ್ಲಿ.ಬಾಲ್ಯದಲ್ಲಿಯೇ  ಸ್ವಾತಂತ್ರ್ಯ ಚಳುವಳಿಯ ನೇತಾರ ರಾಮಪ್ರಸಾದ್ ಬಿಸ್ಮಿಲ್ಲಾ ರ ಜೀವನ ಚರಿತ್ರೆ ಓದಿ ಸ್ಪೂರ್ತಿಗೊಂಡ ರಾಮಕೃಷ್ಣಯಾದವ್ ಪ್ರೌಢಶಾಲೆಯ ಮೊದಲ ವರ್ಷಕ್ಕೆ ವಿದ್ಯೆಗೆ ಶರಣು ಹೊಡೆದು ಶಹಜಾದ್ ಪುರದ ಆರ್ಸ್ ಗುರುಕುಲಕ್ಕೆ ಸೇರಿ ಯೋಗ ಮತ್ತು ಸಂಸ್ಕೃತವನ್ನು ಕಲಿತರು. ನಂತರ ಆಚಾರ್ಯ ಬಲ್ ದೇವ್ ಜೀ ಯಿಂದ ಸನ್ಯಾಸ ದೀಕ್ಷೆ ಪಡೆದ ಬಾಬಾ , ಜಿಂದ್ ಜಿಲ್ಲೆಯ ಕಲ್ವಾ ಗುರುಕುಲದಲ್ಲಿ ಉಚಿತ ಯೋಗಾ ತರಗತಿಗಳನ್ನು ಹೇಳಿಕೊಡುವ ಮೂಲಕ ಹೊಸ ಬದುಕು ಆರಂಬಿಸಿದರು. ಆಗಲೇ ಆತನ ಹೆಸರು ಸ್ವಾಮಿ ರಾಮದೇವ ಅಥವಾ ಬಾಬಾ ರಾಮದೇವ ಎಂದು ಬದಲಾಯಿತು.೨೦೦೬ರಲ್ಲಿ ಪತಂಜಲಿ ಯೋಗ ಪೀಠ ಸ್ತಾಪಿಸಿದ ಬಾಬಾ ಯೋಗ, ಆಯುರ್ವೇದ ಕಾಲೇಜು, ಯೋಗ ಚಿಕಿತ್ಸೆ, ಗೋಶಾಲೆ, ಹರ್ಬಲ್ ಉದ್ಯಾನವನ ಹೀಗೆ ಸುಮಾರು ೩೦ಕ್ಕೂ ಹೆಚ್ಚು ಸಂಸ್ಥೆಗಳನ್ನು ಕಂಪನಿಗಳನ್ನ ಸ್ಥಾಪಿದ್ದಾರೆ.ಯೋಗ ಪೀಠದ ಚಟುವಟಿಕೆಗಳು ವಿದೇಶದಲ್ಲೂ ಹಬ್ಬಿವೆ ಕೇಂದ್ರಗಳು ಸ್ಥಾಪನೆಗೊಂಡಿವೆ.ಹಾಗಾಗಿ ಕೋಟ್ಯಾಂತ ರೂಪಾಯಿ ಆದಾಯವೂ ಇದೆ, ಬಾಬಾ ಹೇಳುವಂತೆ ಅಧಿಕೃತವಾಗಿ ೧೨೦೦ಕೋಟಿ ಮೌಲ್ಯದ ಆಸ್ತಿಪಾಸ್ತಿ ಇವೆ.  ಈ ನಡುವೆ ಬಾಬಾರಾಮದೇವರನ್ನು ಅವರು ನೀಡುವ ಔಷಧಗಳು ನಕಲಿ ಮತ್ತು ದನದ ಮೂಳೆಯನ್ನು ಬೆರೆಸಿ ಮಾರಲಾಗುತ್ತಿದೆ ಎಂಬ ಆಪಾದನೆಯೂ ಇದೆ. ಯೋಗ ಚಿಕಿತ್ಸೆಯಿಂದ ಕ್ಯಾನ್ಸರ್ ಇತ್ಯಾದಿ ಕಾಯಿಲೆಗಳನ್ನು ನಿವಾರಿಸುತ್ತೇನೆ ಎಂಬ ಮಾತುಗಳು ಪೊಳ್ಳಾಗಿವೆ, ಕಳೆದ ಚುನಾವಣೆಗಳಲ್ಲಿ  ದೇಶದ ರಾಜಕೀಯವನ್ನು ಸುಧಾರಿಸುವ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷವನ್ನು ಕಟ್ಟಿ ಚುನಾವಣೆಗೆ ಇಳಿಯುವ ಮಾತನ್ನೂ ಇದೇ ಬಾಬಾ ಆಡಿದ್ದಾರೆ. ಅಷ್ಟೇ ಅಲ್ಲ ದೇಶದ ಸಂವಿಧಾನಕ್ಕೆ ವಿರುದ್ದವಾದ ನಿಲುವುಗಳು ಅಂದರೆ ದೇಶದ ಪ್ರಧಾನಿ ನೇರವಾಗಿ ಜನರಿಂದ ಆಯ್ಕೆಯಾಗಬೇಕು, ಭಾರತ ಆಧ್ಯಾತ್ಮಕ ರಾಷ್ಟ್ರ, ದೇಶದ ಜನ ಚೀನಾ ಮತ್ತು ಜಪಾನ್ ದೇಶದ ಪ್ರಜೆಗಳು ಕಡ್ಡಾಯವಾಗಿ ಅಲ್ಲಿನ ಸ್ಥಳೀಯ ಭಾಷೆಯನ್ನು ಮಾತನಾಡುವಂತೆ ಭಾರತ ದೇಶದ ಜನರೆಲ್ಲ ಹಿಂದಿಯನ್ನು ಕಡ್ಡಾಯವಾಗಿ ಮಾತನಾಡಬೇಕು ಎಂಬ ಅವಿವೇಕದ ನಿಲುವುಗಳನ್ನು ವ್ಯಕ್ತಪಡಿಸುತ್ತಾರೆ. ಅಷ್ಟೇ ಅಲ್ಲ ನಿಜವಾದ ಒಬ್ಬ ದೇಶಭಕ್ತ, ಸ್ವಾತಂತ್ರ್ಯ ಯೋಧ, ಸಾರ್ವಜನಿಕ ಸೇವಕ ಅಣ್ನಾ ಹಜಾರೆ ನೇತೃತ್ವದಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರ ವಿರೋಧಿ ಆಂಧೋಲನವನ್ನೇ ಹೈಜಾಕ್ ಮಾಡಿ ಉಪವಾಸ ನಡೆಸಲು ಹೋಗುವ ಬಾಬಾ, ಪ್ರಚಂಡ ಯೋಗದ ಬೆಂಬಲವಿದ್ದರೂ ಕೇವಲ ೫-೬ದಿನಗಳಲ್ಲಿ ಉಪವಾಸ ಸತ್ಯಾಗ್ರಹ ನಡೆಸಲಾಗದೇ ಕುಸಿದು ಬಿದ್ದು ಆಸ್ಪತ್ರೆ ಸೇರುತ್ತಾರೆ. ಒಂದು ಹೋರಾಟವನ್ನು ಹತ್ತಿಕ್ಕುವ ದುಷ್ಟ ಕಾಂಗ್ರೆಸ್ ಸರ್ಕಾರದ ಪ್ರಯತ್ನದಿಂದ ತಪ್ಪಿಸಿಕೊಳ್ಳುವ ಸಲುವಾಗಿ ಮದ್ಯ ರಾತ್ರಿ ಮಹಿಳೆಯರ ಉಡುಪು ಧರಿಸಿ ಪರಾರಿಯಾಗಲು ಯತ್ನಿಸುತ್ತಾರೆ ಬಾಬಾ ಮತ್ತು ಆಮೂಲಕ ತನ್ನನ್ನೇ ನಂಬಿ ಹೋರಾಟ ಬೆಂಬಲಿಸಲು ಬಂದ ಲಕ್ಷಾಂತರ ಮಂದಿ ಬೆಂಬಲಿಗರ ಹಿತವನ್ನೇ ಕಡೆಗಣಿಸುವ ಪ್ರಯತ್ನ ಮಾಡುತ್ತಾರೆ ಈ ಬಾಬಾ, ಅಣ್ಣಾ ಹಜಾರೆ ದೂರವಿಟ್ಟ ರಾಜಕೀಯ ಮಂದಿಯನ್ನ ಸ್ವಾಗತಿಸಿ ಪಕ್ಕಕ್ಕಿಟ್ಟುಕೊಳ್ಳುವ ಬಾಬಾ ೧೧೦೦೦ಮಂದಿಯ ಸ್ತ್ರೀ-ಪುರುಷರ ಪಡೆ ರಚಿಸುವ ದೀಕ್ಷೆ ತೊಡುತ್ತಾರೆ. ಕೇಂದ್ರ ಸರ್ಕಾರದಿಂದ ಯೋಗ ಶಿಬಿರದ ಹೆಸರಲ್ಲಿ ಅನುಮತಿ ಪಡೆದು ಕಪ್ಪು ಹಣ ತರಬೇಕೆಂದು ಹೋರಾಟಕ್ಕಿಳಿಯುವ ಬಾಬಾ ಮೊದಲೇ ತನ್ನ ಬೆಂಬಲಿಗರಿಗೆ ತಿಳಿಯದಂತೆ ಕೇಂದ್ರಕ್ಕೆ ಹೋರಾಟ ಅಂತ್ಯಗೊಳಿಸುವ ಮುಚ್ಚಳಿಕೆ ಬರೆದುಕೊಡುತ್ತಾರೆ. ತನ್ನನ್ನು ಹೀನಾಯವಾಗಿ ಹತ್ತಿಕ್ಕುವ ಕೇಂದ್ರದ ಕೃತ್ಯದ ನಂತರವೂ ಪ್ರಧಾನಿ ಮನಮೋಹನ್ ಸಿಂಗರನ್ನು ಕ್ಷಮಿಸಿದ್ದೇನೆ ಎಂಬ ಮಾತು ಹೇಳುವ ಬಾಬಾ ತಾನು ಹೋರಾಟ ಕುಳಿತ ದಿನದಿಂದಲೂ ಪ್ರತೀ ದಿನ ಎಡಬಿಡದೇ ಮಾದ್ಯಮಗಳಿಗೆ ಸಂದರ್ಶನ ನೀಡುತ್ತಾರೆ ಅಂದರೆ ಇಷ್ಟು ಸಾಕಲ್ಲವೇ ಬಾಬಾನ ಅಸಲಿಯತ್ತು ತಿಳಿಯಲು. 
        ಬಾಬಾ ವಿದೇಶದಲ್ಲಿರುವ ಕಪ್ಪುಹಣವನ್ನು ವಾಪಾಸ್ಸು ತರಬೇಕೆಂದು ಹೇಳುವುದನ್ನು ಒಪ್ಪೋಣ ಆದರೆ ಆ ನಿಲುವಿಗೆ ಬದ್ದತೆಯನ್ನೇ ಪ್ರದರ್ಶಿಸದೇ ಎಳಸುತನವನ್ನೆ ಪ್ರದರ್ಶಿಸಿದರೆ, ನಾಟಕೀಯವಾಗಿ ನಡೆದುಕೊಂಡರೆ ಇದನ್ನು ಬೆಂಬಲಿಸಬೇಕಾ? ಹೋರಾಟದಲ್ಲಿ ನಿರತರಾಗಿದ್ದ ಬಾಬಾ ರಾಮದೇವನನ್ನು ಮದ್ಯರಾತ್ರಿ ಎತ್ತಿಹಾಕಿದ ಕೇಂದ್ರದ ಕ್ರಮ ಅತ್ಯಂತ ಅಮಾನುಷ ಆದರೆ ಈ ಕ್ರಮದಿಂದ ಗಟ್ಟಿತನ ಪ್ರದರ್ಶಿಸಬೇಕಿದ್ದ ಬಾಬಾ ಪ್ರದರ್ಶಿಸಿದ್ದು ಬಾಲಿಶತನವನ್ನ. ಈ ಘಟನೆಯ ನಂತರ ಬಾಬಾ ವಿಚಾರವನ್ನು ಕೆದಕುವ ಪ್ರಯತ್ನ ಮಾಡಲಾಗುತ್ತದೆ ಇದು ವೈಯುಕ್ತಿಕ ಮಟ್ಟದ ಹುನ್ನಾರವೇ ಸರಿ ಆದರೆ ಒಬ್ಬ ವ್ಯಕ್ತಿ ರಾಷ್ಟ್ರೀಯ ಮಟ್ಟದಲ್ಲಿ ಒಮ್ಮೆಗೆ ಚಲಾವಣೆಗೆ ಬಂದನೆಂದರೆ ಆತನ ಪೂರ್ವಾಪರ ತಿಳಿಯುವುದು ಅತ್ಯಂತ ಅಗತ್ಯವೇ ಆಗಿದೆ. ರಾಜಕೀಯದಲ್ಲಿ ಕಾರ್ಪೊರೇಟ್ ಮಂದಿ, ಭ್ರಷ್ಟರು, ಕಳ್ಳರು, ಸುಳ್ಳರು, ಮೋಸಗಾರರು ಪ್ರವೇಶಿಸಿ ಪ್ರಜಾಪ್ರಭುತ್ವ ಮೌಲ್ಯಗಳಿಗೆ ಧಕ್ಕೆ ತಂದಿರುವಾಗ ಒಂದು ಪ್ರಮುಖವಾದ ಜನಪರ ಹೋರಾಟದಲ್ಲಿ ನೇತೃತ್ವ ವಹಿಸಲು ಬರುವ ವ್ಯಕ್ತಿಯ ಪೂರ್ವಾಪರ ಮತ್ತು ಆತನ ನೈತಿಕತೆಗಳು ಕೂಡಾ ಪ್ರಶ್ನಾರ್ಹವಾಗಿರಬೇಕಾಗುತ್ತದೆ ಹೀಗಿರುವಾಗ ಆತನ ಬಗ್ಗೆ ತಿಳಿಯುವುದು ಅವಶ್ಯಕ ಮತ್ತು ಶುದ್ದತೆಯನ್ನು ಬಯಸುವುದು ಸಹಾ ಅಗತ್ಯವೇ ಆಗಿದೆಯಲ್ಲವೇ? ಬಾಬಾ ನಿಗೆ ಲಕ್ಷಾಂತರ ಮಂದಿಯನ್ನು ಸೇರಿಸುವ ತಾಕತ್ತಿದೆ ಎಂಬ ವಾದವೂ ಇದೆ. ನೋಡಿ ನಮ್ಮ ದೇಶದಲ್ಲಿ ಮೌಡ್ಯಗಳನ್ನು ಬೆಂಬಲಿಸುವಂತೆ ಇಂತಹ ಬಾಬಾಗಳ ಹಿಂದೆಯೂ ಜನಸಾಗರವಿರುತ್ತದೆ. ವ್ಯವಸ್ಥೆಯ ಚಲನಶೀಲತೆಯಲ್ಲಿ ಭ್ರಷ್ಟಾಚಾರದಂತಹ ವಿಚಾರಕ್ಕೆ ಈಗ ಪ್ರಾಮುಖ್ಯತೆ ಸಿಕ್ಕಿದೆ ಹೀಗಾಗಿ ಜನ ತಂಡೋಪತಂಡವಾಗಿ ಅವರನ್ನ ಹಿಂಬಾಲಿಸದ್ದಾರೆ ಆದರೆ ವಿಚಾರ ಸ್ಪಷ್ಟತೆ ಇಟ್ಟುಕೊಳ್ಳದೇ  ಗಟ್ಟಿತನ ಪ್ರದರ್ಶಿಸದೇ ನಡು ನೀರಿನಲ್ಲಿ ಬೆಂಬಲಿಗರನ್ನು ಕೈ ಬಿಡುವ ಮೂಲಕ ಒಂದು ಚಳುವಳಿಯನ್ನು ದಿಕ್ಕು ತಪ್ಪಿಸುವುದನ್ನು ಒಪ್ಪಲಾದೀತೆ ನೀವೇ ಹೇಳಿ?
           

Sunday, May 22, 2011

ಯಾರಿಗೆ ಬೇಕಾಗಿದೆ ಈ 'ರಾಜಕೀಯ'?

ಅಗಸನಿಗೆ ಅರಿವೆ ಚಿಂತೆ ಆದ್ರೆ ಮಗಳಿಗೆ ಮಿಂಡನ ಚಿಂತೆ ಅಂತೆ ಹಾಗೆ ರಾಜ್ಯದಲ್ಲಿ ಪ್ರಸಕ್ತ ರಾಜಕೀಯ ವಿಧ್ಯಮಾನಗಳು ರೇಜಿಗೆ ಹುಟ್ಟಿಸುವಂತೆ ನಡೆಯುತ್ತಿವೆ. ರಾಜ್ಯದ ಮುಖ್ಯ ಮಂತ್ರಿ ಯಡಿಯೂರಪ್ಪ ಮಾಡಿಕೊಂಡ  ಅವಾಂತರಗಳು ಆತನ ರಾಜಕೀಯ ನಡೆ, ವಿರೋಧ ಪಕ್ಷದ ಸ್ಥಿರವಿಲ್ಲದ ನಿಲುವುಗಳು ರಾಜ್ಯದ ರಾಜಕೀಯ ಪರಿಸ್ಥಿತಿಯನ್ನು ಅಯೋಮಯವನ್ನಾಗಿ ಮಾಡಿವೆ. ಈ ನಡುವೆ ಸಾಮಾನ್ಯ ಜನತೆ ತಲ್ಲಣಗೊಂಡಿದ್ದಾರೆ.ರೈತರು ಕಂಗೆಡುವ ಪರಿಸ್ತಿತಿ ಇದೆ, ಶಿಕ್ಷಣದ ಕವಲು ಹಾದಿಯಲ್ಲಿರುವ ಯುವ ಶಕ್ತಿ ದಿಕ್ಕು ತೋರದೇ ನಿಂತಿದ್ದಾರೆ.ಆದರೆ ರಾಜಕಾರಣಿಗಳಿಗೆ ಜನಸಾಮಾನ್ಯರ ಹಿತಾಸಕ್ತಿ ಬೇಕಿಲ್ಲ. ಇಂತಹ ಸನ್ನಿವೇಶದಲ್ಲಿ ಉಂಟಾಗಿರುವ ರಾಜಕೀಯ ಬಿಕ್ಕಟ್ಟು ಯಾರಿಗೆ ಬೇಕಿತ್ತು? ಜನಸಾಮಾನ್ಯರ ಹಿತಾಸಕ್ತಿ ಯಾವ ರಾಜಕಾರಣಿಗೆ ಬೇಕಾಗಿದೆ? ಇಂತಹವರು ಅಧಿಕಾರದಲ್ಲಿರಬೇಕಾ? ಅನಗತ್ಯ ರಾಜಕೀಯ ಚರ್ಚೆಗಳು ಬದುಕು ಕಟ್ಟಲು ಸಹಕರಿಸುತ್ತವಾ? ಸಧ್ಯ ನಮಗೆ ಎಂತಹ ಸನ್ನಿವೇಶ ಬರಬೇಕಾಗಿದೆ ಎಂಬುದು ಸಧ್ಯದ ಪ್ರಸ್ತಾವನೆ.
            ಕಳೆದ ವರ್ಷ ಹೆಚ್ಚು ಕಡಿಮೆ ಇದೇ ಸಮಯಕ್ಕೆ ರಾಜ್ಯದಲ್ಲಿ ನಕಲಿ ಬೀಜ ಮಾರಾಟ ಹಗರಣ ಬೆಳಕಿಗೆ ಬಂದಿತ್ತು, ಗೊಬ್ಬರ ಹಾಹಾಕಾರ ಇತ್ತು, ರಾಜ್ಸ ಸರ್ಕಾರ ರೆಡ್ಡಿಗಳ ಹೊಡೆತಕ್ಕೆ ಸಿಲುಕಿ ನಲುಗುತ್ತಿತ್ತು.ಬೀಜ ಕಂಪನಿಗಳೊಂದಿಗೆ ಕಮೀಷನ್ ವ್ಯವಹಾರ ಮಾಡಿಕೊಂಡ ಕೃಷಿ ಇಲಾಖೆಯ ಆಯುಕ್ತರು, ಅಧಿಕಾರಿಗಳೂ ರೈತರ ಹಿತ ಮರೆತು ಚೀನಾ ಪ್ರವಾಸಕ್ಕೆ ಹೋಗಿದ್ದರು. ಆದರೆ ಒಬ್ಬ ಮಾಜಿ ಶಾಸಕ ಎ ಟಿ ರಾಮಸ್ವಾಮಿ, ರಾಜ್ಯದ ರೈತರಿಗೆ ವಂಚಿಸುವ ಬೀಜ ಮಾರಾಟ ಕಂಪನಿಗಳ ಕುರಿತು ಧ್ವನಿಯೆತ್ತಿದ್ದರು.ಸರ್ಕಾರಕ್ಕೆ ಪತ್ರ ಬರೆದು ಬೀಜ ಕಂಪನಿಗಳೊಂದಿಗೆ ಅಧಿಕಾರಿಗಳ ಮಾಡಿಕೊಂಡ ಕಮಿಷನ್ ವ್ಯವಹಾರ, ನಕಲಿ ಬೀಜ, ಹೆಚ್ಚಿನ ಬೆಲೆಯ ಬೀಜದಿಂದಾಗುತ್ತಿರುವ ತೊಂದರೆಯನ್ನು ಸರ್ಕಾರಕ್ಕೆ ಎಳೆ ಎಳೆಯಾಗಿ ವಿವರಿಸಿದ್ದರು. ಆದರೆ ಸರ್ಕಾರ ಏನು ಕ್ರಮ ಕೈಗೊಂಡಿತು? ರೈತರ ಹಿತಾಸಕ್ತಿಯನ್ನು ಯಾವರೀತಿ ಕಾಪಾಡಿತು ಎಂಬುದು ಮಾತ್ರ ತಿಳಿಯಲಿಲ್ಲ, ಅದು ರಾಜ್ಯದ ರೈತರ ಮಟ್ಟಿಗೆ ದುರಂತದ ಸಂಗತಿಯೂ ಹೌದು. ಇದಕ್ಕೂ ಮುನ್ನ ಇದೇ ಮಾಜಿ ಶಾಸಕ ಎಟಿಆರ್ ಸರ್ಕಾರ ರೈತರ ಬಡ್ಡಿ ಮನ್ನಾ ಮಾಡಲು ನೀಡಿದ ಅವಕಾಶವನ್ನು ಬ್ಯಾಂಕ್ ಅಧಿಕಾರಿಗಳು ಮತ್ತು ಸ್ಥಳೀಯ ಪ್ರತಿನಿಧಿಗಳು ದುರುಪಯೋಗ ಪಡಿಸಿಕೊಳ್ಳುವ ಮೂಲಕ ಹೇಗೆ ಬಡರೈತರನ್ನು ವಂಚಿಸಿದ್ದಾರೆ ಎಂಬ ಬಗ್ಗೆಯೂ ದಾಖಲೆಗಳ ಸಮೇತ ಬಹಿರಂಗ ಪಡಿಸಿದ್ದರೂ ಏನೂ ಕ್ರಮ ಕೈಗೊಳ್ಳದ ಬಿಜೆಪಿ ಸರ್ಕಾರ ನಿರ್ಲಕ್ಷ್ಯ ಧೋರಣೆ ಅನುಸರಿಸಿತು. ರೈತರ ಹೆಸರು ಹೇಳಿ ಹಸಿರು ಶಾಲು ಹೊದ್ದು ಪ್ರಮಾಣ ವಚನ ಸ್ವೀಕರಿಸಿದ ಮುಖ್ಯ ಮಂತ್ರಿ ಬಿಎಸ್ ವೈ ಎಂದು ಹೇಳಿಕೊಳ್ಳುವ ಮೂಲಕ ರೈತರ ಹಿತಾಸಕ್ತಿಯ ನಾಟಕ ಪ್ರದರ್ಶಿಸಿದರು. ಅಸಲಿಗೆ ಜ್ಯೋತಿಷಿಯೊಬ್ಬ ಹೇಳಿದ ಮಾತಿನಂತೆ ಹಸಿರು ಶಾಲು ಹೊದ್ದು ಕಂಟಕ ನಿವಾರಣೆಗೆ ಹಾಗೆ ಮಾಡಿದರೆಂಬುದು ಈಗ ಎಲ್ಲರಿಗೂ ತಿಳಿದ ಸತ್ಯ. ಇಂತಹವರು ಬಂದು ಮಾಡಿದ್ದೇನು? ರೈತರಿಗೆ ಎತ್ತು-ಗಾಡಿ ಯೋಜನೆ, ಬಿತ್ತನೆ ಬೀಜ ಕೊಳ್ಳಲು ರೈತರಿಗೆ ಧನ ಸಹಾಯ, ಈಗ ಲಾಟರಿ ಮಾದರಿಯ ಸುವರ್ಣ ಭೂಮಿ ಯೋಜನೆ ಎಂಬ ಸತ್ವವಿಲ್ಲದ ಬಣ್ಣದ ಯೋಜನೆಗಳನ್ನು ಹೇಳುವ ಮೂಲಕ ವಂಚಿಸುತ್ತಿದ್ದಾರೆ. ಈ ಪೈಕಿ ಯಾವ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲದಿರುವುದು ಕಣ್ಣೆದುರಿಗಿರುವ ಸತ್ಯ. 
          ಇವತ್ತು ರಾಜ್ಯದಲ್ಲಿ ಮತ್ತೆ ಗೊಬ್ಬರದ ಸಮಸ್ಯೆ ತಲೆ ಎತ್ತಿದೆ, ಧೃಢೀಕೃತ ಬಿತ್ತನೆ ಬೀಜ ಇಲ್ಲ,ಕೃಷಿ/ತೋಟಗಾರಿಕೆ/ಮೀನುಗಾರಿಕೆ/ರೇಷ್ಮೆ/ಜಲಾನಯನ/ನೀರಾವರಿ/ಪಶು ಇಲಾಖೆಗಳು ನರಸತ್ತಂತಿವೆ, ರೈತರಿಗೆ ತಾಂತ್ರಿಕ ಮಾರ್ಗದರ್ಶನವನ್ನು ಕಾಲ ಕಾಲಕ್ಕೆ ಒದಗಿಸುವ, ಸೌಕರ್ಯ ಕಲ್ಪಿಸುವ  ಬದಲು ಅಧಿಕಾರಿಗಳು  ಇಲಾಖೆಯ ಮಾರ್ಗಸೂಚಿಗಳನ್ನು ಕಾಯುತ್ತಾ, ಅನುದಾನದ ಕಡೆಗೆ ಕೈ ತೋರಿಸುತ್ತಾ ನಿಸ್ತೇಜವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.ಕೇಂದ್ರ ಸರ್ಕಾರದ ಮಹತ್ವದ ಯೋಜನೆ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿಯಲ್ಲಿ ರೈತರಿಗೆ , ಕೂಲಿ ಕಾರ್ಮಿಕರಿಗೆ ಕೆಲಸ ಸಿಕ್ಕಿಲ್ಲ,ಅಧಿಕಾರಿಗಳು ಮತ್ತು  ಜನಪ್ರತಿನಿಧಿಗಳು ಕೋಟ್ಯಾಂತರ ರೂಪಾಯಿ ವಂಚಿಸಿದ್ದಾರೆ.ಸರ್ಕಾರ ಮಾತ್ರ ಕ್ರಮ ಕೈಗೊಳ್ಳದೇ ನಿರುಮ್ಮಳವಾಗಿದೆ.   ತೋರಿಕೆಯ 'ಕೃಷಿ ಬಜೆಟ್' ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ.ಹೀಗಾಗಿ ರಾಜ್ಯದ ರೈತ ಆಕಾಶ ನೋಡುವಂತಾಗಿದೆ.
              ಇನ್ನು ವೃತ್ತಿಪರ ಶಿಕ್ಷಣದ ಕುರಿತು ಸರಿಯಾದ್ದೊಂದು ನೀತಿ ಪ್ರಕಟಿಸದ ರಾಜ್ಯ ಸರ್ಕಾರದ ಧೋರಣೆಯಿಂದ ವಿದ್ಯಾರ್ಥಿಗಳು ಮತ್ತು ಪೋಷಕರು ಕಂಗಾಲಾಗುವಂತೆ ಮಾಡಿದೆ. ಸರ್ಕಾರಿ ಶಾಲೆಗಳಿಗೆ ಮಿತಿ ಮೀರಿದ ಸವಲತ್ತುಗಳಿದ್ದರೂ ಸರಿಯಾಗಿ ನಿರ್ವಹಿಸಲಾಗದೇ ಅನೇಕ ಶಾಲೆಗಳು ಮುಚ್ಚುವಂತಾಗುತ್ತಿದೆ, ಸರ್ಕಾರ ನೀತಿ ನಿಯಮಗಳನ್ನು ಬದಿಗಿರಿಸಿ ಹೊಸ  ಶಿಕ್ಷಣ ಸಂಸ್ಥೆಗಳಿಗೆ ನಾಯಿಕೊಡೆಗಳಂತೆ ತಲೆ ಎತ್ತಲು ಅವಕಾಶ ಮಾಡುತ್ತಿದೆ. ವೃತ್ತಿಪರ ಶಿಕ್ಷಣ ಕೇಂದ್ರಗಳು ವಸೂಲಿ ಕೇಂದ್ರಗಳಾಗಿ ಪರಿಣಮಿಸಿವೆ ಅವಕ್ಕೊಂದು ಅಂಕುಶ ಹಾಕುವ ಸಣ್ಣ ಪ್ರಯತ್ನವನ್ನು ಸರ್ಕಾರ ಮಾಡುತ್ತಿಲ್ಲ.
             ಆರೋಗ್ಯ ಇಲಾಖೆಯಲ್ಲಿ 108 ಅಂಬ್ಯುಲೆನ್ಸ್ ಸೇವೆ ಒದಗಿಸದ್ದೇವೆಂದು ಎದೆಯುಬ್ಬಿಸಿ ಹೇಳುವ ಸರ್ಕಾರ ಅದರ ನಿರ್ವಹಣೆ ಹಾಗೂ ಪ್ರತೀ ಕಿಮೀ ಗೆ ಅಳತೆ ಮೀರಿ ಸಾರ್ವಜನಿಕರ ಎಷ್ಟು ಹಣ ಪಾವತಿಸುತ್ತಿದೆ ಎಂಬುದನ್ನು ಮಾತ್ರ ಹೇಳುತ್ತಿಲ್ಲ, ಅದರ ಗುತ್ತಿಗೆ ಅವಧಿ ಇನ್ನೊಂದು ತಿಂಗಳಿಗೆ ಅಂತ್ಯಗೊಳ್ಳಲಿದೆ ನಂತರ ಸರ್ಕಾರಿ ಹೆಗ್ಗಣಗಳು ಅದನ್ನು ಸುಪರ್ದಿಗೆ ತೆಗೆದುಕೊಳ್ಳಲಿವೆ ಅಲ್ಲಿಗೆ ಅದರ ಪರಿಸ್ಥಿತಿ ಊಹಿಸಬಹುದು. ಅದೇ ರೀತಿ ಕಂಪ್ಯೂಟರ್ ಶಿಕ್ಷಣಕ್ಕೆ ಆದ್ಯತೆ ನೀಡಿ ಎಸ್ ಎಂ ಕೃಷ್ಣರ ಅವಧಿಯಲ್ಲಿ ಆರಂಭಿಸಿದ ಕೋಟ್ಯಾಂತರ ರೂಪಾಯಿ ವೆಚ್ಚದ ಕಂಪ್ಯೂಟರ್ ಗಳು ಸರ್ಕಾರದ ನಿಲುವುಗಳಿಂದಾಗಿ ಮಕ್ಕಳ ಶಿಕ್ಷಣಕ್ಕೆ ಲಬ್ಯವಾಗದೇ ಧೂಳು ತಿನ್ನುತ್ತಿವೆ .ನಾರಿಯರಿಗೆ ವಿತರಿಸಿದ ಭಾಗ್ಯಲಕ್ಷ್ಮಿ ಸೀರೆ ಯಲ್ಲಿ ಸರ್ಕಾರದ ಮಂದಿ ಪಡೆದ ಬಾಬತ್ತು ಎಷ್ಟೆಂಬುದರ ಲೆಕ್ಕ ಜನರಿಗೆ ತಿಳಿದಿದೆ. ರೈತರನ್ನು ವಂಚಿಸಿ ಪಡೆದ ಭೂಮಿಯನ್ನು ಮಾಜಿ ಸಚಿವನೋರ್ವ ಯಾವ ಮೊತ್ತಕ್ಕೆ ಮಾರಿ ದುಡ್ಡು ಮಾಡಿದ?ಬಣ್ಣ ಬಣ್ಣದ ಯೋಜನೆಗಳು ಮತ್ತು ಬಾಬತ್ತುಗಳಿಗೆ ಕೋಟಿಗಳ ಲೆಕ್ಕದಲ್ಲಿ ಹಣ ಪ್ರಕಟಿಸಿದ ಸರ್ಕಾರ ನಂತರ ಅದನ್ನೇ ವ್ಯಾಪಾರ ಮಾಡಿಕೊಂಡಿದ್ದು ಈಗ ಇತಿಹಾಸ.ಜಾಗತೀಕರಣದ ಹೆಬ್ಬಾಗಿಲು ತೆರೆದು ಅನಾಮತ್ತು 8ಕಂಪನಿಗಳಿಗೆ ಕೃಷಿಗೆ ಸಂಬಂಧಿಸಿದಂತೆ ಉದ್ದಿಮೆ ಸ್ಥಾಪಿಸಲು ಅನುವು ಮಾಡಿಕೊಡುವ ಹಿನ್ನೆಲೆಯಲ್ಲಿ ಮುಖ್ಯ ಮಂತ್ರಿ ಬಿಎಸ್ ವೈ ಕೃಷಿ ಬಜೆಟ್ ನಾಟಕವಾಡಿದ್ದು ಈಗ ಬಹಿರಂಗವಾಗುತ್ತಿರುವ ಸತ್ಯ.ತನ್ನ ಸಚಿವ ಸಂಪುಟದ ಶಾಸಕರುಗಳು ಸಚಿವರುಗಳ ಲಂಪಟತನ, ಭ್ರಷ್ಟಾಚಾರ, ಅಪ್ರಾಮಾಣಿಕತೆಗಳನ್ನು ಸಮರ್ಥಿಸಿಕೊಳ್ಳುವ, 800ಕೋಟಿ ಮೌಲ್ಯದ ಡಿನೋಟಿಫಿಕೇಶನ್ ಹಗರಣದ ಸೂತ್ರದಾರನಾದ ಮುಖ್ಯಮಂತ್ರಿ ಯಾವ ಎಗ್ಗು ತಗ್ಗಿಲ್ಲದೇ ಸತ್ಯ ಪ್ರಾಮಾಣಿಕತೆಯ ಮಾತುಗಳನ್ನಾಡುವುದು ಎಷ್ಟು ಸರಿ? ದೇಶದ ರಾಜಕಾರಣದ ಇತಿಹಾಸದಲ್ಲೇ ಕಂಡೂ ಕೇಳರಿಯದ ಪ್ರಮಾಣದಲ್ಲಿ ಶಾಸಕರುಗಳ ಕೊಳ್ಳುವಿಕೆ, ಆಮಿಷದಂತಹ ಅನಾಹುತಕಾರಿ ಬೆಳವಣಿಗೆಗೆ ನಾಂದಿ ಹಾಡಿದ ಇಂತಹ ಸರ್ಕಾರ ಬೇಕಾ ಸ್ವಾಮಿ? 
         ಇದೆಲ್ಲ ಸರಿ ಆದರೆ ಇವತ್ತು ರಾಜ್ಯ ಸರ್ಕಾರದ ಪತನಕ್ಕೆ ಸಂಚು ಹಾಕಿ ಕುಳಿತಿರುವ ವಿರೋಧ ಪಕ್ಷಗಳು ಪ್ರಸಕ್ತ ಸಂಧಿಗ್ಧ ಸನ್ನಿವೇಶದಲ್ಲಿ ನಡೆದುಕೊಳ್ಳುತ್ತಿರುವ ರೀತಿ ಅಸಹ್ಯ ಹುಟ್ಟಿಸುವಂತಿದೆ. ರಾಜ್ಯಪಾಲ ಮುಕ್ತವಾಗಿ ಕಾರ್ಯ ನಿರ್ವಹಿಸದೇ ಪಕ್ಕಾ ಕಾಂಗ್ರೆಸ್ ಏಜೆಂಟನಾಗಿ ನಡೆದುಕೊಳ್ಳುತ್ತಿರುವದು ರಾಜ್ಯಾಂಗದ ಮೇಲಿನ ಗೌರವವನ್ನು ಕಡಿಮೆ ಮಾಡುತ್ತಿದೆ. ಜನಸಾಮಾನ್ಯರ ಸಮಸ್ಯೆಗಳ ಬಗೆಗೆ ಧ್ವನಿಯೆತ್ತದ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರುಗಳು ಅಧಿಕಾರದ ಹವಣಿಕೆಗೆ ಬಿದ್ದು ಬಟ್ಟೆ ಹರಿದುಕೊಳ್ಳುತ್ತಿದ್ದಾರೆ.. ಒಳಗೊಳಗೆ ಬಿಎಸ್ ವೈ ವಿರುದ್ದ ಒಳಸಂಚು ನಡೆಸುತ್ತಿರುವ ಬಿಜೆಪಿಗಳು ಪ್ರತಿ ಹೋರಾಟ ನಡೆಸುತ್ತಿದ್ದಾರೆ. ಇವರಿಗೆಲ್ಲ ಜನರ ಹಿತಾಸಕ್ತಿ  ಬೇಕಿಲ್ಲ ಹೀಗಿರುವಾಗ ರಾಜ್ಯಪಾಲರನ್ನು ಮನೆಗೆ ಕಳುಹಿಸಿ ಸರ್ಕಾರವನ್ನು ವಿಸರ್ಜಿಸಿ ರಾಜಕೀಯ ಪಕ್ಷಗಳಿಗೆ ಪಾಠ ಕಲಿಸದಿದ್ದರೆ ರಾಜ್ಯದ ಜನತೆ ನೆಮ್ಮದಿಯಿಂದ ಇರಲಾಗದು ಅಲ್ಲವೇ?

Sunday, May 15, 2011

ಪಲಿತಾಂಶದಲ್ಲಿ ಸರ್ಕಾರಿ ಶಾಲೆಗಳೇಕೆ ಹಿಂದೆ?

ಸರ್ಕಾರಿ ಶಾಲೆಗಳು, ಖಾಸಗಿ ಶಾಲೆಗಳಿಗಿಂತ ಫಲಿತಾಂಶದಲ್ಲಿ ಯಾಕೆ ಹಿಂದುಳಿದಿವೆ ? "ಖಾಸಗಿ ಶಾಲೇಲಿ ಬುದ್ದಿವಂತರನ್ನೇ ಆಯ್ದುಕೊಂಡು ಪರೀಕ್ಷೆಗೆ ಕೂರಿಸ್ತಾರೆ, ಸರ್ಕಾರಿ ಶಾಲೆ ಅಂದ್ರೆ ಹಾಗಲ್ಲ ನೋಡಿ ಯಂಕ,ನಾಣಿ,ಸೀನಾ ಎಲ್ಲರಿಗೂ ಸೀಟು ಕೊಡ್ಬೇಕು  ಓದಿಸ್ಬೇಕಲ್ವಾ? ಆಯ್ತು ನಿಮ್ಮ ಮಾತು ಒಪ್ಕೊತೀನಿ ಮಕ್ಕಳ ಮಾತು ಹಂಗಿರ್ಲಿ ಸರ್ಕಾರಿ ಶಾಲೆಗೆ ಶಿಕ್ಷಕರಾಗಿ ಆಯ್ಕೆ ಆಗೋರು ಯಾರು ? ಎಲ್ಲರೂ ಪ್ರತಿಭಾವಂತರು, ಡಿಸ್ಟಿಂಕ್ಷನ್ ತಗೊಂಡಿರೋರು ಅಲ್ವಾ ? ಖಾಸಗಿ ಶಾಲೆ ಅಂದ್ರೆ ಅಲ್ಲಿ ಇರೋರು ಬಹುತೇಕ ಸರ್ಕಾರಿ ಕೆಲಸದ ಅವಕಾಶದಿಂದ ರಿಜೆಕ್ಟ್ ಆದೋರು, ಹೊಸದಾಗಿ ಶಿಕ್ಷಣ ಮುಗಿಸಿದವರು ಇತ್ಯಾದಿಗಳು ಹೀಗಿರುವಾಗ ಎಂಥಾ ಮಕ್ಕಳನ್ನಾದರೂ ಬುದ್ದಿವಂತರನ್ನಾಗಿ ಮಾಡೋ ಅವಕಾಶ ಇರುತ್ತಲ್ವಾ? ಅಂದೆ ಎದುರಿಗೆ ಕೂತ ಬಿಇಓ ಮೆತ್ತಗಾದ್ರು.  ನೋಡಿ ಸಾರ್ ಇದು ಆಫ್ ದಿ ರೆಕಾರ್ಡ್ ಹೇಳ್ತಿದಿನಿ ನಮ್ಮ ಶಿಕ್ಷಕರಿಗೆ ಅರ್ಪಣಾ ಮನೋಭಾವ ಇಲ್ಲ ಅದಕ್ಕೆ ಹೀಗೆ ಎಂದು ಅಸಹಾಯಕತೆ ತೋಡಿಕೊಂಡರು. ಇದು ಒಂದು ತಾಲೂಕಿನ ಪರಿಸ್ಥಿತಿ ಅಲ್ಲ ಇಡೀ ರಾಜ್ಯದ ಸ್ಥಿತಿ ! ಒಂದು ಕ್ಷಣ ನೀವೇ ಯೋಚನೆ ಮಾಡಿ ಇವತ್ತು ಸರ್ಕಾರಿ ಶಾಲೆಗಳು ಹೇಗಿವೆ? ಹಿಂದಿನ ಸರ್ಕಾರಿ ವ್ಯವಸ್ಥೆ ಹೇಗಿತ್ತು? ಸರ್ಕಾರಿ ಶಾಲೆಗಳಿಗೆ ಇರುವ ಸವಲತ್ತುಗಳೇನು? ಶಿಕ್ಷಕರ ಅನುಕೂಲತೆಗಳೇನು? ಖಾಸಗಿ ಶಾಲೆಗಳು ಹೇಗಿವೆ? ಅಲ್ಲಿನ ಗುಣಮಟ್ಟ ಏನು? ಪೋಷಕರ ಮನಸ್ತಿತಿ ಯಾಕೆ ಬದಲಾಗುತ್ತಿದೆ? ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗಿರುವ ಅನುಕೂಲತೆಗಳಾವುವು? ಗ್ರಾಮೀಣ ಮತ್ತು ನಗರ ಪರಿಸರದ ವಿದ್ಯಾರ್ಥಿಗಳಿಗೆ ಇರುವ ವ್ಯತ್ಯಾಸವೇನು?ಇವೆಲ್ಲಾ ಒಟ್ಟು ಸೇರಿ SSLC/PUCಯಲ್ಲಿ ಸರ್ಕಾರಿ/ಖಾಸಗಿ  ಶಾಲೆಗಳಲ್ಲಿ  ಫಲಿತಾಂಶಗಳ ಮೇಲೆ ಎಂತಹ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂಬುದು ಗಹನವಾಗಿ ಚರ್ಚೆಯಾಗ ಬೇಕಿದೆ.

          ಇವತ್ತು ಶಿಕ್ಷಣದ ವ್ಯಾಪಾರೀಕರಣವಾಗುತ್ತಿದೆ, ಸರ್ಕಾರದ ನೀತಿ ನಿಯಮಗಳನ್ನು ಗಾಳಿಗೆ ತೂರಿ ಖಾಸಗಿ ಶಾಲೆಗಳೆಂಬ ವ್ಯಾಪಾರದ ಅಡ್ಡೆಗಳು ಹೆಜ್ಜೆಗೊಂದರಂತೆ ತಲೆಯೆತ್ತುತ್ತಿವೆ. ಕೇಂದ್ರ ಸರ್ಕಾರ ಕೋಟ್ಯಾಂತರ ರೂಪಾಯಿಗಳನ್ನು ಶಿಕ್ಷಣಕ್ಕಾಗಿ ಮೀಸಲಿಡುವ ಜೊತೆಗೆ ವಿಶ್ವ ಬ್ಯಾಂಕ್ ಯೋಜನೆಯಿಂದಲೂ ಶಿಕ್ಷಣದ ಸುಧಾರಣೆಗೆ ಮುಂದಾಗಿದೆ. 
ರಾಜ್ಯ ಸರ್ಕಾರದೊಡನೆ ಸೇರಿ 30-40 ಯೋಜನೆಗಳನ್ನು ಅನುಷ್ಟಾನ ಗೊಳಿಸುತ್ತಿದೆ. ಬಹುಶ: ಇವತ್ತಿನ ಸರ್ಕಾರಿ  ಶಿಕ್ಷಣ ಸಕಲ ವ್ಯವಸ್ಥೆಗಳು ಅತ್ಯಾಧುನಿಕವಾಗಿವೆ ಮತ್ತು ಹೆಚ್ಚು ಸೌಲಭ್ಯಗಳಿಂದ ಕೂಡಿದುದಾಗಿದೆ. ಆದರೆ ನಿರೀಕ್ಷಿತ ರೀತಿಯ ಗುಣಾತ್ಮಕ ಫಲಿತಾಂಶವನ್ನು ಕಾಣಲು ಸಾದ್ಯವಾಗದಿರುವುದು ಅತ್ಯಂತ ವಿಷಾಧನೀಯ ಸಂಗತಿ. ಅದು 70-80ರ ದಶಕದ ಸಂಧರ್ಭ ಸರ್ಕಾರಿ ಶಾಲೆಗಳ ಶಿಕ್ಷಣ ಗುಣಾತ್ಮಕವಾಗಿ ಮತ್ತು ಶಾಲೆ/ಶಿಕ್ಷಣ/ಗುರುಗಳ ಬಗೆಗೆ ಗೌರವ ಪೂರ್ವಕವಾಗಿ ನಡೆದುಕೊಳ್ಳುವಂತಹ  ಪರಿಸ್ತಿತಿ ಇತ್ತು ಆದರೆ ಇವತ್ತೇನಾಗಿದೆ? ಶಾಲೆಗಳು ಅತ್ಯಂತ ಪರಿಪೂರ್ಣವಾದ ಸೌಲಭ್ಯಗಳನ್ನ ಪಡೆದಿವೆ, ಶಿಕ್ಷಣದ ಗುಣಮಟ್ಟ ಸುಧಾರಣೆಗೆ ವ್ಯಾಪಕ ಯೋಜನೆಗಳಿವೆ, ಶಿಕ್ಷಕರಿಗೆ ತರಬೇತಿ ಯೋಜನೆಗಳಿವೆ ಆದಾಗ್ಯೂ ಕಲಿಸುವ ಪ್ರಕ್ರಿಯೆ ತೃಪ್ತಿಕರವಾಗಿಲ್ಲ, ಪರಿಣಾಮ ಸರ್ಕಾರಿ ಶಾಲೆಗಳ ಫಲಿತಾಂಶದ ಮೇಲೆ ಆಗುತ್ತಿದೆ. 

           ಹೌದು ಇವತ್ತು ಸರ್ಕಾರಿ ಶಾಲೆಗೆ ಕುಡಿಯುವ ನೀರು ಬಂದಿದೆ, ಸುಸಜ್ಜಿತ ಕಟ್ಟಡ ಬಂದಿದೆ, ಬಿಸಿಊಟ, ಸಮವಸ್ತ್ರ, ಉಚಿತ ಪಠ್ಯ ಪುಸ್ತಕ, ಉಚಿತ ಶೈಕ್ಷಣಿಕ ಪ್ರವಾಸ, ಪಾಠೋಪಕರಣ, ಪೀಠೋಪಕರಣ, ಕ್ರೀಡೋಪಕರಣ, ವಿಜ್ಞಾನದ ಪ್ರಯೋಗಕ್ಕೆ ಪ್ರೋತ್ಸಾಹಧನ, ಸೈಕಲ್ಲು, ಸೆಮಿಸ್ಟರ್ ಪದ್ದತಿಯ ಪರೀಕ್ಷೆಗಳು, ಬಯೋಮೆಟ್ರಿಕ್ ಪದ್ದತಿ ಇತ್ಯಾದಿ ಇತ್ಯಾದಿ ಜೊತೆಗೆ ಬುದ್ದಿವಂತ ಶಿಕ್ಷಕರುಗಳು, ಕೊರತೆಯಾಗದಂತೆ ಕಾಯ್ದಿರಿಸಿದ ನಿಧಿ. ಅದೇ ಖಾಸಗಿ ಶಾಲೆಗಳಲ್ಲಿ ಉತ್ತಮ ದರ್ಜೆಯ (ಉತ್ತಮ ಅಂಕ ಪಡೆದವರು) ವಿದ್ಯಾರ್ಥಿಗಳು! ಕಡಿಮೆ ಅಂಕ ಪಡೆದ/ಹೊಸದಾಗಿ ಶಿಕ್ಷಣ ಪೂರೈಸಿದ/ಅರ್ಹ ಶಿಕ್ಷಣ ಪಡೆಯದ ಅಂದರೆ ಸಾಧಾರಣ ಪದವಿ ಪಡೆದ ಶಿಕ್ಷಕರು; ದುಬಾರಿ ಡೊನೇಷನ್, ಫೀಸು, ಪುಸ್ತಕ,ಸಮವಸ್ತ್ರ ಇವೆ. ಇಲ್ಲಿ ಶಿಕ್ಷಕರನ್ನ ಕತ್ತೆಗಳಂತೆ ದುಡಿಸಿಕೊಳ್ಳಲಾಗುತ್ತದೆ, ನಿಗದಿತ ಅವಧಿಗಿಂತ ಹೆಚ್ಚಿನ ಅವಧಿ ಕೆಲಸ ಮಾಡಬೇಕಾಗುತ್ತದೆ, ಮ್ಯಾನೇಜ್ ಮೆಂಟ್ ಆಶೋತ್ತರಗಳಿಗೆ ಪೂರಕವಾಗಿ ನಡೆಯುವ ಅನಿವಾರ್ಯತೆ  ಇರುತ್ತದೆ. ಮಕ್ಕಳ ಮೇಲೆ ಮತ್ತು ಪಾಲಕರ ಮೇಲೆ ಒತ್ತಡ ಹಾಕಲಾಗುತ್ತದೆ.ಹೀಗಾಗಿ ಖಾಸಗಿ ಶಾಲೆಗಳು ನಿರಾತಂಕವಾಗಿ ಫಲಿತಾಂಶದಲ್ಲಿ ಮುನ್ನೆಡೆ ಪಡೆಯುತ್ತವೆ. ಆದರೆ ಸರ್ಕಾರಿ ಶಾಲೆಗಳಲ್ಲಿ ಅತ್ಯುತ್ತಮ ಮಾನವ ಸಂಪನ್ಮೂಲ, ನಿಯಮಗಳು, ಹಣಕಾಸು, ಸೌಕರ್ಯಗಳು ಇದ್ದಾಗ್ಯೂ ಅವುಗಳನ್ನು ನಿರ್ವಹಿಸುವ ಮತ್ತು ನಿಬಾಯಿಸುವವರ ಹೊಣೆಗೇಡಿತನದಿಂದಾಗಿ ಪಲಿತಾಂಶದಲ್ಲಿ ಹಿಂದೆ ಬೀಳುವಂತಾಗಿದೆ. 

       ಇನ್ನು ಪೋಷಕರು, ತಮ್ಮ ಮಕ್ಕಳನ್ನು ಶತಾಯ ಗತಾಯ ಇಂಜಿನಿಯರುಗಳು , ಡಾಕ್ಟರುಗಳನ್ನಾಗಿ ಮಾಡಬೇಕು ಎಂಬ ಹಪಾಹಪಿಗೆ ಬಿದ್ದು ಖಾಸಗಿ ಶಾಲೆಗಳ ಮೊರೆ ಹೋಗುತ್ತಿದ್ದಾರೆ. ಅದರಲ್ಲೂ ಸೆಂಟ್ರಲ್ ಸಿಲಬಸ್ ಮತ್ತು ಇಂಗ್ಲೀಷ್ ವ್ಯಾಮೋಹ ಅವರನ್ನ ಹಗಲು ಕನಸು ಕಾಣುವಂತೆ ಮಾಡಿದೆ. ಮಕ್ಕಳ ಮೇಲೆ ಆಗುವ ಪರಿಣಾಮಗಳನ್ನ ಲೆಕ್ಕಿಸದೇ ಒತ್ತಡದ ಶಿಕ್ಷಣ ನೀಡಲು ರೆಡಿಯಾಗಿ ಬಿಡುತ್ತಾರೆ. ದುಬಾರಿ ಶುಲ್ಕ ತೆತ್ತು ಖಾಸಗಿ ಶಾಲೆ/ಕಾಲೇಜು ಗಳಿಗೆ ಸೇರಿಸುತ್ತಾರೆ.ಸದರಿ ಶಾಲೆ/ಕಾಲೇಜುಗಳಿಗೆ ಸೇರಿಸುವಾಗಲೇ ಮನೆ ಪಾಠಕ್ಕೆ ಅಂತ ಸಾವಿರಾರು ರೂಪಾಯಿ ಶುಲ್ಕವನ್ನು ಪಡೆಯಲಾಗುತ್ತದೆ. ಒಂದಕ್ಕೆ ಹತ್ತು ಪಟ್ಟು ಖರ್ಚಾದರೂ ಪರವಾಗಿಲ್ಲ ಎಂದು ಭಾವಿಸುವ ಪೋಷಕರು ಒಡವೆ-ಅಸ್ತಿ ಮಾರಿ, ತಾವು ಗಳಿಸಿಟ್ಟದ್ದನ್ನು ತಂದು ಖಾಸಗಿ ಶಿಕ್ಷಣಕ್ಕೆ ಸುರಿಯುತ್ತಾರೆ.ಇತರೆ ಪೋಷಕರಿರಲಿ ಶಿಕ್ಷಣ ಇಲಾಖೆಯ ಶಿಕ್ಷಕರುಗಳು/ಉಪನ್ಯಾಸಕರುಗಳು/ಅಧಿಕಾರಿಗಳು ಸಹಾ ತಮ್ಮ ಮಕ್ಕಳನ್ನು ಖಾಸಗಿ ಶಿಕ್ಷಣ ಸಂಸ್ಥೆಗೆ ಸೇರಿಸಲು ಮುಗಿ ಬೀಳುತ್ತಾರೆ. ಪರಿಣಾಮ ಇವತ್ತು ಕಳೆದ ಒಂದು ದಶಕದಿಂದ ಸಾವಿರಾರು   ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ. 

       ಗ್ರಾಮೀಣ ಪರಿಸರದ ಮಕ್ಕಳಿಗೆ ಇವತ್ತಿಗೂ ನಗರ ಪ್ರದೇಶದ ಮಕ್ಕಳಂತೆ ಸಮಾನವಾಗಿ ಶಿಕ್ಷಣ ಪಡೆಯಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಮೊದಲ ಕಾರಣ ಶಿಕ್ಷಕರು ಮತ್ತು ಅಧಿಕಾರಿಗಳೇ ಆಗಿದ್ದಾರೆ. ರಾಜ್ಯದ ಪ್ರಾಥಮಿಕ/ಮಾಧ್ಯಮಿಕ ಶಿಕ್ಷಣದಲ್ಲಿ, ನಲಿಕಲಿ ಎಂಬ ಪ್ಲಾಪ್ ಯೋಜನೆಯನ್ನು ಜಾರಿಗೆ ತರುವ ಮೂಲಕ ಹಳ್ಳ ಹಿಡಿಯುವಂತೆ ಮಾಡಲಾಗಿದೆ. ಪ್ರೌಢಶಾಲೆ/ಕಾಲೇಜುಗಳಲ್ಲಿ ಶಿಕ್ಷಕ/ಉಪನ್ಯಾಸಕರ ಇಚ್ಚಾಶಕ್ತಿ ಕೊರತೆಯಿಂದಾಗಿ ನಿರೀಕ್ಷಿತ ಪಲಿತಾಂಶ ದಕ್ಕುತ್ತಿಲ್ಲ. ಪ್ರತೀ ವಿದ್ಯಾರ್ಥಿಗೂ ಸಿಗಬೇಕಾದ ಪ್ರಾಮುಖ್ಯತೆ ಸಿಗುತ್ತಿಲ್ಲ. ಹಳ್ಳಿಯ ಮಕ್ಕಳು ಮನೆಕೆಲಸದ ಜೊತೆಗೆ ಹಾದಿ ಸವೆಸಿ ಓದುತ್ತಿದ್ದಾರಾದರು ಗುಣಾತ್ಮಕ ಪಲಿತಾಂಶವಿಲ್ಲ. ಈಗ ರಾಜ್ಯಕ್ಕೆ ಪ್ರಥಮ, ದ್ವಿತಿಯ, ತೃತೀಯ ಸ್ಥಾನ ಬರುತ್ತಿರುವವರಾದರೂ ಯಾರು ನಗರ ಪ್ರದೇಶದ ನೌಕರರು/ಅಧಿಕಾರಿಗಳ ಮಕ್ಕಳು, ಇವರಿಗೆ ಎಲ್ಲಾ ಸೌಕರ್ಯಗಳು ಇರುತ್ತವೆ ನಮ್ಮ ಗ್ರಾಮೀಣ ಪರಿಸರದ ಮಕ್ಕಳಿಗೆ ಅಂತಹ ಸವಲತ್ತಿಲ್ಲ ಹಾಗಾಗಿ ಅವರ ಸಾಧನೆಗಳು ಗ್ರಾಮೀಣ ಮಕ್ಕಳ ಸಾಧನೆಯ ಮುಂದೆ ನಗಣ್ಯ ಹೌದಲ್ಲವೇ? ಸರ್ಕಾರ ಸಂಪನ್ಮೂಲ/ನಿರ್ವಹಣೆ ಯನ್ನು ಸರಿಯಾಗಿ ನಿರ್ವಹಿದ್ದೇ ಆದಲ್ಲಿ ಸರ್ಕಾರಿ ಶಾಲೆಗಳು ಮುಂದೆ ಬರುವಲ್ಲಿ ಯಾವುದೇ ಸಂಶಯವಿಲ್ಲ, ಮೊದಲೇ ಹೇಳಿದಂತೆ ಸರ್ಕಾರಿ ಶಾಲೆಗಳ ಶಿಕ್ಷಕರಿಗೆ ಮುಖ್ಯವಾಗಿ ಅರ್ಪಣಾ ಮನೋಭಾವ ಬರಬೇಕು ಅಲ್ಲವೇ??

Wednesday, April 27, 2011

How to File a Complaint Against a TV and Radio Channel


ಇದು ಪತ್ರಕರ್ತ ಮಿತ್ರ ಶ್ರೀನಿವಾಸಗೌಡರು facebook ನಲ್ಲಿ ಕಳುಹಿಸಿದ ಲಿಂಕ್.. ಕಿರುತೆರೆಯ ಕಾರ್ಯಕ್ರಮಗಳಿಂದ ನೊಂದ ಮಂದಿ ಈ ಲಿಂಕ್ ನಲ್ಲಿ ನೀಡಿರುವ ಫಾರಂ ನಲ್ಲಿ ದೂರು ಸಲ್ಲಿಸಬಹುದಾಗಿದೆ.

 

How to File a Complaint Against a TV and Radio Channel   


ಅಪ್ಲಿಕೇಶನ್ ಫಾರ್ಮಾಟ್ ಗಾಗಿ Click Here

ಬನ್ನಿ ಕಿರುತೆರೆಯ ಕಪಟ ಜ್ಯೋತಿಷಿಗಳ ವಿರುದ್ದ ದ್ವನಿಯೆತ್ತೋಣ

ಇತ್ತೀಚಿನ ದಿನಗಳಲ್ಲಿ ಕಿರುತೆರೆಯಲ್ಲಿ ಕಪಟ ಜ್ಯೋತಿಷಿಗಳ ಹಾವಳಿ ಹೆಚ್ಚಾಗಿದೆ, ದಿನಬೆಳಗಾದರೆ ಲ್ಯಾಪುಟಾಪು ಮತ್ತುಢಾಳಾದ ವೇಷಭೂಷಣ ತೊಟ್ಟ ಕಪಟಿಗಳು ಜನಸಾಮಾನ್ಯರಲ್ಲಿ ಮೌಡ್ಯವನ್ನು ಬಿತ್ತುವ ಕೆಲಸವನ್ನು ಮಾಡುತ್ತಿದ್ದಾರೆ ಅವರ ವಿರುದ್ದ ಮಾಧ್ಯಮ ಲೋಕದ ಮೇಲೆ ಸದಾ ಹದ್ದಿನ ಕಣ್ಣಿಟ್ಟಿರುವ 'ಸಂಪಾದಕೀಯ' ಬ್ಲಾಗ್ ಒಂದು ಆಂಧೋಲನವನ್ನು ಆರಂಭಿಸಿದೆ ಈ ಆಂಧೋಲನಕ್ಕಾಗಿ ಬರೆದ ಪತ್ರ ಇದು ಇದನ್ನು ಜೀ ಕನ್ನಡ ದ ಮುಖ್ಯಸ್ಥರಿಗೆ ಬರೆಯೋಣ ಬನ್ನಿ ನೀವು ಸೇರಿ ನಮ್ಮ ಆಂಧೋಲನಕ್ಕೆ.
ಮಾನ್ಯರೆ,

ಈ ಪತ್ರವನ್ನು ಅತ್ಯಂತ ನೋವು, ವಿಷಾದ, ಕಳವಳದಿಂದ ನಿಮಗೆ ಬರೆಯುತ್ತಿದ್ದೇವೆ. ಪತ್ರ ಓದಿದ ನಂತರವಾದರೂ ನೀವು ನಮ್ಮ ಭಾವನೆಗಳಿಗೆ ಸ್ಪಂದಿಸುತ್ತೀರೆಂಬ ನಂಬಿಕೆ ಇದೆ. ಲಕ್ಷ-ಕೋಟಿ ಜನರನ್ನು ತಲುಪುವ ಮೀಡಿಯಾಗಳು ಸಾಮಾಜಿಕ ಹೊಣೆಗಾರಿಕೆಯನ್ನು ನಿಭಾಯಿಸಬೇಕು. ಇದು ಕಾನೂನಿನ ಪರಿಭಾಷೆಗಳಿಗೆ ಮಾತ್ರ ಒಳಪಡುವ ವಿಷಯ ಎಂದು ಯಾರೂ ಭಾವಿಸಬೇಕಾಗಿಲ್ಲ, ಕಾನೂನನ್ನೂ ಮೀರಿದ ನೈತಿಕತೆ, ಮಾನವೀಯತೆಯ ಹೊಣೆಗಾರಿಕೆಯನ್ನೂ ಒಪ್ಪಿ ಅನುಸರಿಸಬೇಕಾಗುತ್ತದೆ. ತಾವು ಇಡೀ ಪತ್ರವನ್ನು ಓದಿ, ಸೂಕ್ತ, ಅತ್ಯಗತ್ಯ, ಸಕಾಲಿಕ ನಿರ್ಧಾರಕ್ಕೆ ಬರುವಿರೆಂಬ ನಂಬುಗೆ ನಮಗಿದೆ.

ನಮ್ಮ ತಕರಾರು, ಸಿಟ್ಟು, ಆತಂಕ ಇರುವುದು ನಿಮ್ಮ ವಾಹಿನಿಯಲ್ಲಿ ಪ್ರತಿನಿತ್ಯ ಬೆಳಿಗ್ಗೆ ೯ ಗಂಟೆಗೆ ಪ್ರಸಾರವಾಗುವ ಬೃಹತ್ ಬ್ರಹ್ಮಾಂಡ ಎಂಬ ಜ್ಯೋತಿಷ್ಯ ಸಂಬಂಧಿ ಕಾರ್ಯಕ್ರಮದ ಕುರಿತು. ಈ ಕಾರ್ಯಕ್ರಮವನ್ನು ನಡೆಸಿಕೊಡುವವರು ಶ್ರೀ ನರೇಂದ್ರ ಬಾಬು ಶರ್ಮ ಎಂಬುವವರು. ಇವರು ನಿಮ್ಮ ಚಾನಲ್‌ನಲ್ಲಿ ಕಾರ್ಯಕ್ರಮ ನಡೆಸಿಕೊಡುವುದಕ್ಕೆ ಮುನ್ನ ಸುವರ್ಣ ವಾಹಿನಿಯಲ್ಲಿ ಭವ್ಯ ಬ್ರಹ್ಮಾಂಡ ಎಂಬ ಹೆಸರಿನಲ್ಲಿ, ಅದಕ್ಕೂ ಮುನ್ನ ಕಸ್ತೂರಿ ವಾಹಿನಿಯಲ್ಲಿ ಬ್ರಹ್ಮಾಂಡ ಎಂಬ ಹೆಸರಿನಲ್ಲಿ ಇದೇ ಸ್ವರೂಪದ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದರು. ಬಹಳಷ್ಟು ಜನರಿಗೆ ಗೊತ್ತಿರುವ ಪ್ರಕಾರ ತೀರಾ ಇತ್ತೀಚಿನವರೆಗೆ ನರೇಂದ್ರ ಶರ್ಮ ಅವರು ಕನ್ನಡ ಸಿನಿಮಾಗಳಲ್ಲಿ ಜೂನಿಯರ್ ಆರ್ಟಿಸ್ಟ್ ಆಗಿದ್ದವರು.

ನರೇಂದ್ರ ಶರ್ಮ ಅವರು ಕಸ್ತೂರಿ ವಾಹಿನಿ ಹಾಗು ಸುವರ್ಣ ವಾಹಿನಿಗಳಲ್ಲಿ ಬ್ರಹ್ಮಾಂಡ ನಡೆಸುತ್ತಿದ್ದಾಗಲೇ ಅವರು ಬಳಸುವ ಭಾಷೆ, ಹೇಳುವ ಹಸಿಹಸಿ ಸುಳ್ಳುಗಳು ಮಾನವಂತರ, ಪ್ರಜ್ಞಾವಂತರ ಆಕ್ರೋಶಕ್ಕೆ ಕಾರಣವಾಗಿತ್ತು. ಮಹಿಳೆಯರನ್ನು ವಿನಾಕಾರಣ ನಿಂದಿಸುವುದು-ಅವಹೇಳನ ಮಾಡುವುದು, ಕೆಳಜಾತಿಯ ಜನರನ್ನು ಗುರಿಪಡಿಸಿ ತಿರಸ್ಕಾರದಿಂದ ಮಾತನಾಡಿ ಅಪಮಾನಿಸುವುದು, ಜ್ಯೋತಿಷ್ಯದ ಹೆಸರಿನಲ್ಲಿ ಸುಳ್ಳುಗಳ ಕಂತೆ ಕಟ್ಟಿ ಜನರನ್ನು ಬೆದರಿಸುವುದು ಇವರು ಹಿಂದಿನಿಂದ ಮಾಡಿಕೊಂಡು ಬಂದಿರುವ ಕೆಲಸ. ಅದನ್ನು ಅವರು ನಿಮ್ಮ ಜೀ ವಾಹಿನಿಯಲ್ಲೂ ಮಾಡುತ್ತಿದ್ದಾರೆ ಹಾಗು ಅದು ಈಗ ಅತಿರೇಕಕ್ಕೆ ತಲುಪಿದೆ.

ನಿಮ್ಮ ಜೀ ವಾಹಿನಿಯ ವೇದಿಕೆಯನ್ನು ಬಳಸಿಕೊಂಡು ನರೇಂದ್ರ ಶರ್ಮ ಏನೇನು ಮಾತನಾಡಿದ್ದಾರೆ ಎಂಬುದಕ್ಕೆ ಕೆಲವು ಸ್ಯಾಂಪಲ್‌ಗಳನ್ನು ಇಲ್ಲಿ ಒದಗಿಸುತ್ತಿದ್ದೇವೆ. ದಯವಿಟ್ಟು ಗಮನವಿಟ್ಟು ಓದಬೇಕಾಗಿ ವಿನಂತಿ.

೧. ನಾನು ಜಗನ್ಮಾತೆಯ ಪುತ್ರ. ಆಕೆ ಮೇ.೧೨ರಂದು ಭೂಮಿಗೆ ಬರುತ್ತಿದ್ದಾಳೆ. ಬಂದವಳು ಭೂಮಿಯನ್ನು ನಾಶಪಡಿಸುತ್ತಾಳೆ. ನಾನು ಇದನ್ನು ಘೋಷಿಸಿರುವುದರಿಂದ, ಜಗನ್ಮಾತೆ ನನ್ನ ಮಾತು ಉಳಿಸುವ ದೃಷ್ಟಿಯಿಂದಲಾದರೂ ಪ್ರಳಯ ನಡೆಸುತ್ತಾಳೆ.

೨. ಕರ್ನಾಟಕದ ಯಾವ ದೇವಸ್ಥಾನಗಳಲ್ಲೂ ದೇವರಿಲ್ಲ. ಕರ್ನಾಟಕದಲ್ಲಿ ಸಾಧು ಸಂತರು ಮಾತ್ರ ಇದ್ದಾರೆ. ದೇವರು ಇರುವುದೆಲ್ಲ ತಮಿಳುನಾಡಿನಲ್ಲಿ. ಅಲ್ಲಿನ ಧರ್ಮಕ್ಷೇತ್ರಗಳಲ್ಲಿ. ಹಾಗಾಗಿ ನಾನು ತಮಿಳುನಾಡಿನ ದೇವಸ್ಥಾನಗಳಿಗೆ ಹೋಗುವಂತೆ ಭಕ್ತರಿಗೆ ಹೇಳುತ್ತೇನೆ.

೩. ಹೆಣ್ಣು ಮಕ್ಕಳು ನೈಟಿ ತೊಡಬಾರದು. ಸಲ್ವಾರ್ ಕಮೀಜ್ ಹಾಕಿದರೆ ಗರ್ಭಕೋಶದ ಕ್ಯಾನ್ಸರ್ ಬರುತ್ತೆ. ರಾತ್ರಿ ಗಂಡನ ಜತೆ ಮಲಗಿ ಬೆಳಿಗ್ಗೆ ಎದ್ದ ಕೂಡಲೇ ಅಡುಗೆ ಮನೆಗೆ ಹೋಗಬಾರದು. ಹೆಣ್ಣು ಮಕ್ಕಳು ಮನೆಯಲ್ಲಿ ಇದ್ದರೆ ಲಕ್ಷಣ. ಅಗಲವಾದ ಬಿಂದಿ ಇಟ್ಟುಕೊಳ್ಳಬೇಕು. ಇಲ್ಲವಾದಲ್ಲಿ ಬೂಬಮ್ಮಗಳ ಹಾಗೆ ಕಾಣುತ್ತೀರಿ. (ಬೂಬಮ್ಮ ಎಂದರೆ ಮುಸ್ಲಿಂ ಹೆಂಗಸು)

೪. ಬೆಳಿಗ್ಗೆ ಎದ್ದ ಕೂಡಲೇ ಪೊರಕೆಯನ್ನು, ಹಜಾಮರ ಮುಖವನ್ನು ನೋಡಬಾರದು. ನೋಡಿದರೆ ಕೆಟ್ಟದಾಗುತ್ತದೆ.

೫. ಇಡೀ ಜಗತ್ತು ಮುಳುಗಿ ಹೋಗುತ್ತದೆ, ಬೆಳಗಾವಿಯ ಒಂದು ಹಳ್ಳಿ ಮಾತ್ರ ಉಳಿದುಕೊಳ್ಳುತ್ತದೆ. ಪಾಪಿಗಳು ಮಾಡಿದ ತಪ್ಪಿಗಾಗಿ ಪಾಪಿಗಳಲ್ಲದವರೂ ನಾಶವಾಗುತ್ತಾರೆ.

೬. ಹಾವು ಎಂದರೆ ದೇವರು. ಜಪಾನ್ ದೇಶದವರು ಹಾವು ತಿನ್ನುತ್ತಾರೆ, ಅದಕ್ಕೆ ಸುನಾಮಿ ಬಂದಿದ್ದು.

ಇವು ಕೆಲವು ಸ್ಯಾಂಪಲ್‌ಗಳು ಮಾತ್ರ. ಈತನ ಇನ್ನಷ್ಟು ಭಯಾನಕ ಉಪದೇಶಗಳ ಕುರಿತು ಈ ಹಿಂದೆ ಇದೇ ಬ್ಲಾಗ್ ನಲ್ಲಿ ಪ್ರಸ್ತಾಪಿಸಿದ್ದೇವೆ. ಒಮ್ಮೆ ಓದಿ ನೋಡಲು ವಿನಂತಿ.  ಈ ಬಗೆಯ ದುರ್ಬೋಧನೆಗಳನ್ನು ನೀಚಾತಿನೀಚರಷ್ಟೆ ಸಮರ್ಥಿಸಿಕೊಳ್ಳಬಹುದು. ಹೀಗಾಗಿ ನೀವು ಇವುಗಳನ್ನೆಲ್ಲ ಒಪ್ಪಲಾರಿರಿ ಎಂದು ನಮ್ಮ ನಂಬಿಕೆ. ನರೇಂದ್ರ ಶರ್ಮ ಬಳಸುವ ಭಾಷೆ ಎಷ್ಟು ಕೊಳಕಾಗಿದೆಯೆಂದರೆ ಆತ ಪದೇಪದೇ ಮುಂಡೇವು, ಮುಂಡೆ (ಗಂಡ ಸತ್ತ ಹೆಂಗಸು), ಕಳ್ ನನ್ ಮಕ್ಕಳು, ಗೂಬೆ, ಗುಗ್ಗು, ದರಿದ್ರದವು.. ಇತ್ಯಾದಿ ಪದಗಳನ್ನೇ ಬಳಸುತ್ತಾರೆ. ವೇದೋಪನಿಷತ್ತುಗಳನ್ನು ಓದಿದ ವ್ಯಕ್ತಿ ಇಷ್ಟು ಅಸಭ್ಯವಾದ ಭಾಷೆಯಲ್ಲಿ ಸಾರ್ವಜನಿಕವಾಗಿ ಮಾತನಾಡಲು ಸಾಧ್ಯವೇ?

ಕಪಟ ಜ್ಯೋತಿಷಿಗಳು ಹರಡುವ ಮೂಢನಂಬಿಕೆಗಳ ಕುರಿತು ಸ್ವಾಮಿ ವಿವೇಕಾನಂದರು ಹೀಗೆ ಹೇಳಿದ್ದರು:

 ಜ್ಯೋತಿಷ್ಯ ಮುಂತಾದುವನ್ನು ಹೇಳಿ ಉದರಪೋಷಣೆ ಮಾಡಿಕೊಳ್ಳುವವರ ಹತ್ತಿರ ಸಂಬಂಧವನ್ನು ಇಟ್ಟುಕೊಳ್ಳಕೂಡದು ಎನ್ನುವನು ಬುದ್ಧ. ಅವನಿಗೆ ಇದರ ರಹಸ್ಯ ಚೆನ್ನಾಗಿ ಗೊತ್ತಾಗಿರಬೇಕು. ತಾರೆಯೊಂದು ನನ್ನ ಜೀವನದ ಮೇಲೆ ತನ್ನ ಪ್ರಭಾವವನ್ನು ಬೀರಿ ವ್ಯಥೆಯನ್ನು ತಂದರೆ ನನ್ನ ಜೀವನ ಕುರುಡು ಕಾಸಿಗೂ ಯೋಗ್ಯವಲ್ಲ. ಜ್ಯೋತಿಷ್ಯ ಮುಂತಾದ ರಹಸ್ಯಗಳನ್ನೆಲ್ಲಾ ನೆಚ್ಚುವುದು ದೌರ್ಬಲ್ಯದ ಚಿಹ್ನೆ. ಈ ಸ್ವಭಾವ ನಿಮ್ಮ ಮನಸ್ಸಿನಲ್ಲಿ ಬಲವಾಗುತ್ತಿದ್ದರೆ ನೀವು ಒಬ್ಬ ವೈದ್ಯನನ್ನು ನೋಡಿ; ಒಳ್ಳೆಯ ಆಹಾರ ಮತ್ತು ವಿಶ್ರಾಂತಿಯನ್ನು ತೆಗೆದುಕೊಳ್ಳಿ..... ಜ್ಯೋತಿಷ್ಯ ಮುಂತಾದವುಗಳಲ್ಲೆಲ್ಲಾ ಸ್ವಲ್ಪ ಸತ್ಯಾಂಶವಿದ್ದರೂ ಅದನ್ನು ನಾವು ನಿರ್ಲಕ್ಷ್ಯದಿಂದ ನೋಡಬೇಕು..... ಮೂಢಭಾವನೆಗಳು ನಾಯಿಕೊಡೆಯಂತೆ ನಮ್ಮ ದೇಶದಲ್ಲಿ ಹಬ್ಬುತ್ತಿವೆ. ವಿಚಾರ ಮಾಡದ ಸ್ತ್ರೀಯರು ಇನ್ನೂ ಸ್ವಾತಂತ್ರ್ಯಕ್ಕೆ ಹೋರಾಡುತ್ತಿರುವರು. ಒಬ್ಬ ಹಣಕ್ಕಾಗಿ ಮತ್ತೊಬ್ಬರನ್ನು ಮೋಸ ಮಾಡಿದರೆ ಅವನನ್ನು ಮೋಸಗಾರ ಎನ್ನುವಿರಿ. ಇತರರನ್ನು ಅಧ್ಯಾತ್ಮಿಕ ದೃಷ್ಟಿಯಿಂದ ಪಾಪಿಗಳು ಎಂದು ಮೋಸಗೊಳಿಸುವವರು ಎಂತಹ ಪಾಪಿಗಳಿರಬೇಕು? ಇದು ಪರಮಪಾತಕ. ಸತ್ಯ ನಿಮ್ಮನ್ನು ಧೀರರನ್ನಾಗಿ ಮಾಡಬೇಕು; ಮೌಢ್ಯತೆಯಿಂದ ಪಾರಾಗುವಂತೆ ಮಾಡಬೇಕು. ಇದೇ ಸತ್ಯದ ಪರೀಕ್ಷೆ.... ಬೇಕಾದರೆ ತಾರೆಗಳನ್ನು ನಿಮ್ಮ ಬೊಗಸೆಯಿಂದ ಎತ್ತಿ ನುಂಗಿಹಾಕಬಹುದು. ನಿಮ್ಮ ನೈಜಸ್ವಭಾವ ಅಂತಹುದು. ಧೀರರಾಗಿ, ಎಲ್ಲಾ ವಿಧದ ಮೂಢನಂಬಿಕೆಗಳಿಂದ ಪಾರಾಗಿ, ಮುಕ್ತರಾಗಿ.

ಇವತ್ತು ನಿಮ್ಮ ಚಾನಲ್ ಮೂಲಕ ನರೇಂದ್ರ ಶರ್ಮ ಅವರು ಇಡೀ ಕರ್ನಾಟಕವನ್ನು ಮೌಢ್ಯದಲ್ಲಿ ಮುಳುಗಿಸಲು ಯತ್ನಿಸುತ್ತಿದ್ದಾರೆ. ಅಮೆರಿಕದ ಕೆಲವು ಸ್ವತಂತ್ರ ಕ್ರಿಶ್ಚಿಯನ್ ಗುಂಪುಗಳು ಹರಡುತ್ತಿರುವ ಪ್ರಳಯದ ಥಿಯರಿಗಳನ್ನೇ (http://www.coffetoday.com/the-doomsday-is-on-may-21-2011/907618/
http://www.ebiblefellowship.com/may21/
http://en.wikipedia.org/wiki/Harold_Camping
http://www.allvoices.com/contributed-news/8599025-worlds-doomsday-fixed-for-6-pm-on-21st-may-2011)  ಕದ್ದು ತಂದು, ಅವುಗಳನ್ನು ಜಗನ್ಮಾತೆಯ ಹೆಸರಿನಲ್ಲಿ ಬದಲಾಯಿಸಿ, ಈ ವರ್ಷವೇ ಪ್ರಳಯವಾಗುತ್ತದೆ ಎಂದು ಭೀತಿ ಸೃಷ್ಟಿಸುತ್ತಿದ್ದಾರೆ. ಪ್ರಳಯವನ್ನು ತಪ್ಪಿಸಲು ಸಾಧ್ಯವಿರುವುದು ನನಗೆ ಮಾತ್ರ, ಹೀಗಾಗಿ ನಾನು ಹೇಳಿದಂತೆ ಕೇಳಿ ಎಂದು ಜನರನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಯತ್ನಿಸುತ್ತಿದ್ದಾರೆ.

ಹಿಂದೆ ಕಸ್ತೂರಿ ವಾಹಿನಿಯಲ್ಲಿದ್ದಾಗ ಸಹ ಲೋಕ ಕಲ್ಯಾಣ, ಇತ್ಯಾದಿ ಬೊಗಳೆ  ಮಾತುಗಳನ್ನು ಹೇಳಿ ಅರಮನೆ ಮೈದಾನದಲ್ಲಿ ದೊಡ್ಡ ಯಾಗವೊಂದನ್ನು ನಡೆಸಿದ ನರೇಂದ್ರ ಶರ್ಮ ಅವರು ಇದಕ್ಕಾಗಿ ಕೋಟ್ಯಂತರ ರೂಪಾಯಿ ಹಣವನ್ನು ಮುಗ್ಧ, ಅಮಾಯಕ ಜನಸಾಮಾನ್ಯರಿಂದ ಪಡೆದಿದ್ದರು. ಎಷ್ಟು ಹಣ ಪಡೆದಿದ್ದೀರಿ, ಸ್ವಲ್ಪ ಲೆಕ್ಕ ಕೊಡಿ ಎಂದು ಪತ್ರಕರ್ತರು ಪತ್ರಿಕಾಗೋಷ್ಠಿಯೊಂದರಲ್ಲಿ ಕೇಳಿದಾಗ ನರೇಂದ್ರ ಶರ್ಮ ಗೋಷ್ಠಿಯನ್ನೇ ನಿಲ್ಲಿಸಿ ಹೊರಟುಹೋಗಿದ್ದರು. ನರೇಂದ್ರ ಶರ್ಮ ಅವರು ಸಾರ್ವಜನಿಕರ ದೇಣಿಗೆ ಪಡೆಯಲೆಂದೇ ಎರಡು ಟ್ರಸ್ಟ್‌ಗಳನ್ನು ರಚಿಸಿಕೊಂಡಿದ್ದಾರೆ. ಈ ಟ್ರಸ್ಟ್‌ಗಳಿಗೂ ನಿಮ್ಮ ಚಾನಲ್‌ಗಳಿಗೂ ಯಾವ ಸಂಬಂಧವಿರುವುದಿಲ್ಲ. ಪ್ರಚಾರಕ್ಕೆ ನಿಮ್ಮ ಚಾನಲ್‌ಗಳು, ಹಣ ವಸೂಲಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸುವ ಟ್ರಸ್ಟ್‌ಗಳು! ಈ ದುರ್ ವ್ಯವಹಾರ ನಿಲ್ಲಿಸಲು ನೀವು ಹೇಳಿದರೆ, ಅವರು ಚಾನಲ್ ಬದಲಾಯಿಸುತ್ತಾರೆ.  ಬ್ರಹ್ಮಾಂಡ, ಭವ್ಯ ಬ್ರಹ್ಮಾಂಡ, ಬೃಹತ್ ಬ್ರಹ್ಮಾಂಡ ಆಯಿತು, ಇನ್ನು ಸೂಪರ್ ಬ್ರಹ್ಮಾಂಡ ಸೃಷ್ಟಿಯಾಗಬಹುದು ಅಷ್ಟೆ.

ಇಂಥ ಕಾರ್ಯಕ್ರಮ ಬೇಕೆ ಎಂದು ನೀವು ಯೋಚಿಸಲೇಬೇಕಾದ ಸಮಯವಿದು. ನಿಜ, ಈ ಕಾರ್ಯಕ್ರಮದಿಂದ ನಿಮಗೆ ಟಿಆರ್‌ಪಿ ಹೆಚ್ಚಾಗಿರಬಹುದು. ಆದರೆ ಜನ ಹೆಚ್ಚು ನೋಡುತ್ತಾರೆ ಎಂಬ ಕಾರಣಕ್ಕೆ ಅದು ಶ್ರೇಷ್ಠವಾದ ಕಾರ್ಯಕ್ರಮ ಎಂದು ಭಾವಿಸುವುದು ಮೂರ್ಖತನ. ಬೀದಿಯಲ್ಲಿ ಒಬ್ಬ ಹುಚ್ಚ ವಿಚಿತ್ರವಾಗಿ ಮಾತನಾಡುತ್ತ, ಬಟ್ಟೆ ಬಿಚ್ಚಿಕೊಂಡು ಓಡಾಡುತ್ತಿದ್ದರೆ ಆತನನ್ನು ಎಲ್ಲರೂ ನೋಡುತ್ತಾರೆ. ಮಾಮೂಲಿಯಂತೆ ಓಡಾಡುವ ನಮ್ಮ, ನಿಮ್ಮನ್ನು ಯಾರೂ ಗಮನಿಸುವುದಿಲ್ಲ. ಎಲ್ಲರೂ ನೋಡುತ್ತಾರೆ ಅನ್ನುವ ಕಾರಣಕ್ಕೆ ಬೆತ್ತಲೆ ಹುಚ್ಚನನ್ನು ಪ್ರೋತ್ಸಾಹಿಸುವುದು ಸರಿಯೇ? ಬೆತ್ತಲೆ ಓಡಾಡುವ ಹುಚ್ಚನಿಗೆ ಬಟ್ಟೆ ಕೊಡಿಸಿ, ಯಾವುದಾದರೂ ಆಸ್ಪತ್ರೆಗೆ ಸೇರಿಸುವ ಕೆಲಸ ಮಾಡಬೇಕೇ ಹೊರತು, ಹುಚ್ಚನೇ ಶ್ರೇಷ್ಠ ಎಂದು ಭಾವಿಸಬೇಕಾಗಿಲ್ಲ. ಒಬ್ಬ ಹುಚ್ಚನನ್ನು ಸಹಿಸಿಕೊಂಡ ಪರಿಣಾಮ ಈಗ ಬೀದಿ ತುಂಬ ಹುಚ್ಚರು ಸೇರಿಬಿಡುತ್ತಾರೆ. ಆ ಅಪಾಯವನ್ನೂ ನಾವು ಎದುರಿಸುತ್ತಿದ್ದೇವೆ.

ಇದೆಲ್ಲವನ್ನೂ ಗಮನಿಸಿ ತಾವು ದಯಮಾಡಿ ನರೇಂದ್ರ ಶರ್ಮ ಅವರ ಬ್ರಹತ್ ಬ್ರಹ್ಮಾಂಡ ಕಾರ್ಯಕ್ರಮವನ್ನು ಈಗಿಂದೀಗಲೇ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸುತ್ತೇವೆ. ಈ ಕಾರ್ಯಕ್ರಮ ಅನೈತಿಕ, ಅಪ್ರಜಾಸತ್ತಾತ್ಮಕ, ಮಾನವ ವಿರೋಧಿಯಾಗಿದೆ.

ಇದನ್ನು ನಾವು ನಿಮ್ಮ ಬೇಡಿಕೆ ಎಂದು ಹೇಳುತ್ತಿಲ್ಲ, ಆಗ್ರಹ ಎಂದೇ ಹೇಳುತ್ತಿದ್ದೇವೆ. ಯಾಕೆಂದರೆ ಇದು ಕಾನೂನು ಪ್ರಕಾರವೂ ಅಪರಾಧ. ನೀವು ಹಾಗು ನರೇಂದ್ರ ಶರ್ಮ ಸರ್ಕಾರ ರಚಿಸಿರುವ ನಿಯಮಾವಳಿಗಳನ್ನು ಗಾಳಿಗೆ ತೂರಿರುವುದು ಸ್ಪಷ್ಟ.

ನಿಮಗೆ ಚೆನ್ನಾಗಿ ಗೊತ್ತಿದೆ. ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಇಲಾಖೆ ಸಿದ್ಧಪಡಿಸಿರುವ ಮಾರ್ಗಸೂಚಿಗಳನ್ನು ನೀವು ತಪ್ಪದೇ ಪಾಲಿಸಬೇಕು. ಮಾರ್ಗಸೂಚಿಗಳನ್ನು ಅಲಕ್ಷ್ಯ ಮಾಡಿದ ಎಂಟಿವಿ, ಟಿವಿ೫ ಮುಂತಾದ ಚಾನಲ್‌ಗಳನ್ನು ಶಿಕ್ಷಿಸಲಾಗಿರುವ ಉದಾಹರಣೆಗಳೂ ನಮ್ಮ ಮುಂದಿವೆ. ಟಿವಿಗಳಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳು ಒಟ್ಟು ೧೩ ವಿವಿಧ ಕಾಯ್ದೆಗಳ ವ್ಯಾಪ್ತಿಗೆ ಒಳಪಡುತ್ತವೆ. ಹೀಗಾಗಿ ತಮಗೆ ಕಾನೂನಿನ ಹೊಣೆಗಾರಿಕೆಯೂ ಇದೆ. ಅವುಗಳನ್ನು ನಿಮಗೆ ನೆನಪಿಸಲು ಯತ್ನಿಸುತ್ತೇವೆ.

ಕಾಯ್ದೆಗಳು ಹೀಗಿವೆ.

1. Cable Television Network (Regulation) Act, 1995 and Certification Rules there under.
2. Drugs and Cosmetics Act, 1940.
3. Emblems and Names (Prevention of Improper Use) Act, 1950.
4. Drugs (Control) Act 1950.
5. Drugs and Magic Remedies (Objectionable Advertisements) Act, 1954.
6. Prevention of Food & Adulteration Act, 1954.
7. Prize Competitions Act, 1955.
8. Indecent Representation of Women (Prohibition) Act, 1986.
9. Trade and Merchandise Marks, Act 1999.
10. Copyright Act, 1957.
11. Cigarette and other Tobacco Products Act 2003.
12. Consumer Protection Act, 1986.
13. The Prevention of Cruelty to Animals Act, 1960


ಪ್ರಸಾರ ವೇಳೆ ಕಾನೂನು ಉಲ್ಲಂಘನೆಯನ್ನು ಮೂರು ಹಂತದಲ್ಲಿ ವಿಚಾರಣೆಗೆ ಒಳಪಡಿಸಬಹುದು. ಮೂರನೆ ಹಂತದಲ್ಲಿ ಸರಕಾರ ನೇಮಿಸಿದ ಸಮಿತಿ ಚಾನೆಲ್ ಮುಖ್ಯಸ್ಥ ತಪ್ಪಿತಸ್ಥ ಎಂದು ಕಂಡುಬಂದರೆ, ಪ್ರಸ್ತುತ ಕಾರ್ಯಕ್ರಮವನ್ನು ಪ್ರಸರಣ ಮಾಡದಂತೆ ನಿರ್ದೇಶಿಸಬಹುದು, ಕ್ಷಮಾಪಣೆಯನ್ನು ಬಿತ್ತರಿಸುವಂತೆ ಹೇಳಬಹುದು ಹಾಗೂ ದಂಡ ವಿದಿಸಬಹುದು. ಈ ಪ್ರಕ್ರಿಯೆಗೆ ದೂರು ದಾಖಲಿಸುವುದು ಮುಖ್ಯ.ಮಾರ್ಗಸೂಚಿ ಸ್ಪಷ್ಟ ಮಾತುಗಳಲ್ಲಿ ಕಾರ್ಯಕ್ರಮಗಳಲ್ಲಿ ಅವಹೇಳನಕಾರಿ ಭಾಷೆ, ಜಾತಿ ನಿಂದನೆ, ಮೂಢನಂಬಿಕೆ ವೈಭವೀಕರಣ ಹಾಗೂ ಜನರನ್ನು ದಿಕ್ಕುತಪ್ಪಿಸುವುದನ್ನು ಖಂಡಿಸುತ್ತದೆ.

ಕಂಟೆಂಟ್ ಸರ್ಟಿಫಿಕೇಷನ್ ನಿಯಮಾವಳಿ ೨೦೦೮ ಪ್ರಕಾರ ಯಾವುದೇ ನಿರ್ದಿಷ್ಟ ಜಾತಿ, ಕೋಮು ಅಥವಾ ನಂಬಿಕೆ ವಿರುದ್ಧ ಮಾತನಾಡುವುದು ಅಪರಾಧ. ಜೊತೆಗೆ ಯಾವುದೇ ಒಂದು ಆಚರಣೆಯನ್ನು ಶ್ರೇಷ್ಠ ಅಥವಾ ಕನಿಷ್ಟ ಎಂದು ಬಿಂಬಿಸುವಂತಿಲ್ಲ. ಹಾಗೆಯೇ ಲಿಂಗ ಅಸಮಾನತೆಯನ್ನು ಹೇಳುವಂತಿಲ್ಲ.

ನಿಮ್ಮ ಬೃಹತ್ ಬ್ರಹ್ಮಾಂಡ ಕಾರ್ಯಕ್ರಮ ಈ ಎಲ್ಲ ಕಾಯ್ದೆಗಳನ್ನು ಉಲ್ಲಂಘಿಸಿರುವುದು ಸ್ಪಷ್ಟ. ಈ ಕಾರ್ಯಕ್ರಮ ಸ್ತ್ರೀಯರನ್ನು ಕೆಟ್ಟದಾಗಿ ಚಿತ್ರಿಸುತ್ತದೆ. ಹಜಾಮರನ್ನು ನೋಡಬಾರದು ಎನ್ನುವ ಮೂಲಕ ಅಸ್ಪೃಶ್ಯತೆಯನ್ನು ಪ್ರಚಾರ ಮಾಡುತ್ತಿದೆ. ಜನರಲ್ಲಿ ಪ್ರಳಯದ ಭೀತಿಯನ್ನು ಸೃಷ್ಟಿಸುತ್ತಿದೆ. ಮಾಂಸಾಹಾರಿಗಳನ್ನು ಈತ ಕೀಳಾಗಿ ನಿಂದಿಸುವ ಮೂಲಕ ಜನಾಂಗೀಯ ನಿಂದನೆಯನ್ನು ಈ ಕಾರ್ಯಕ್ರಮ ಪೋಷಿಸುತ್ತಿದೆ.

ಭಾರತದ ಸಂವಿಧಾನವು ಜನರಲ್ಲಿ ವೈಜ್ಞಾನಿಕ ಮನೋಭಾವ ಹೆಚ್ಚಾಗಬೇಕು ಎನ್ನುತ್ತದೆ. ಆಧುನಿಕ ಕಾಲಘಟ್ಟದಲ್ಲಿ ನಾವು ಇನ್ನೂ ಕಂದಾಚಾರಗಳ ನರಕದಲ್ಲೇ ಕೊಳೆಯುತ್ತಿದ್ದೇವೆ. ಈ ಕೆಟ್ಟ ಬೆಳವಣಿಗೆಯನ್ನು ಟಿವಿ ಚಾನಲ್ ಗಳು ನಿರಂತರವಾಗಿ ಪೋಷಿಸುತ್ತಿವೆ. ಈ ನಿಟ್ಟಿನಲ್ಲಿ ನಿಮ್ಮ ಚಾನಲ್ ಸೇರಿದಂತೆ ಎಲ್ಲ ಚಾನಲ್ ಗಳು ಟಿಆರ್ಪಿ ಆಸೆಗೆ ಬಲಿಬೀಳದೆ ಕಾಲದ ಅಗತ್ಯಕ್ಕೆ ತಕ್ಕಂಥ, ಮನುಷ್ಯರನ್ನು ಎಲ್ಲ ಮೌಢ್ಯಗಳಿಂದ ಬಿಡುಗಡೆಗೊಳಿಸುವ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಅಗತ್ಯವಿದೆ.

ಈ ಕಾರ್ಯಕ್ರಮವನ್ನು ಕೂಡಲೇ ನಿಲ್ಲಿಸಬೇಕೆಂದು ಮತ್ತೊಮ್ಮೆ ಆಗ್ರಹಪಡಿಸುತ್ತೇವೆ. ಒಂದು ವೇಳೆ ನಿಲ್ಲಿಸದೇ ಹೋದಲ್ಲಿ ಸಂಬಂಧಪಟ್ಟ ಪ್ರಾಧಿಕಾರಗಳಿಗೆ ದೂರು ಸಲ್ಲಿಸುವುದೂ ಸೇರಿದಂತೆ, ಪ್ರಜಾಸತ್ತಾತ್ಮಕ ಹೋರಾಟಗಳನ್ನು ನಡೆಸಬೇಕಾಗುತ್ತದೆ ಎಂದು ತಿಳಿಸಲು ವಿಷಾದಿಸುತ್ತೇವೆ.

ಧನ್ಯವಾದಗಳು.
ಓದುಗರಿಗೊಂದು ಮನವಿ: ದಯಮಾಡಿ ಈ ಪತ್ರದ ಧಾಟಿಯ ಪತ್ರಗಳನ್ನು ಅಥವಾ ಇದೇ ಪತ್ರವನ್ನು ನಿಮ್ಮ ಐಡಿಗಳಿಂದ  ಈ feedbackzeekannada@zeenetwork.com  ಇಮೇಲ್ ಅಥವಾ ಜೀ ಕನ್ನಡ, ನಂ.೩೯, ಯುನೈಟೆಡ್ ಮ್ಯಾನ್ಷನ್, ಮೂರನೇ ಮಹಡಿ, ಮಹಾತ್ಮಗಾಂಧಿ ರಸ್ತೆ, ಬೆಂಗಳೂರು-೧ ಈ ವಿಳಾಸಕ್ಕೆ ಅಂಚೆ ಮೂಲಕ ಕಳುಹಿಸಬೇಕಾಗಿ ವಿನಂತಿ. ಸಾಧ್ಯವಾಗುವುದಾದರೆ ಈ ಅಭಿಯಾನವನ್ನು ಬೆಂಬಲಿಸುವ ಬ್ಲಾಗರ್‌ಗಳು ಈ ಪತ್ರವನ್ನು ಯಥಾವತ್ತಾಗಿ ತಮ್ಮ ಬ್ಲಾಗ್‌ಗಳಲ್ಲಿ ಪ್ರಕಟಿಸಬೇಕೆಂದು ಕೋರುತ್ತೇವೆ. ಹಾಗೆಯೇ ಇದನ್ನು ಫೇಸ್‌ಬುಕ್ ಹಾಗು ಇತರ ಸೋಷಿಯಲ್ ನೆಟ್‌ವರ್ಕ್‌ಗಳಲ್ಲಿ ಶೇರ್ ಮಾಡಲು ವಿನಂತಿಸುತ್ತೇವೆ

Sunday, April 24, 2011

"ಸನಾತನ ಧರ್ಮ"ದ ಬಾಬಾ ಅನಂತದೆಡೆಗೆ

ಬಡತನ, ಅಜ್ಞಾನ ಇರುವೆಡೆ ಮೂಡನಂಬಿಕೆ, ಅತಿಯಾದ ಧಾರ್ಮಿಕ ಆಚರಣೆ, ಕಂದಾಚಾರಗಳು ನೆಲಯೂರಿರುತ್ತವೆ, ಜಗತ್ತಿನ ವಿವಿಧ ಭಾಗಗಳಲ್ಲಿ ಇಂತಹ ಅಂಧಶ್ರದ್ದೆ, ಆಚರಣೆಯನ್ನೆ ಬಂಡವಾಳ ಮಾಡಿಕೊಂಡು ಬೆಳೆದು ನಿಂತವರಿದ್ದಾರೆ. ಜನ ಸಾಮಾನ್ಯರ ಸಂಕುಚಿತ ಧೋರಣೆ, ಅಮಾಯಕತೆಯನ್ನೆ ಎನ್ ಕ್ಯಾಶ್ ಮಾಡಿಕೊಳ್ಳುವ ಪದ್ಧತಿ ಆಧುನಿಕ ಜಗತ್ತು ಬೆಳೆದಂತೆಲ್ಲ ಬೇರೆ ಬೇರೆ ಮಾರ್ಗಗಳಲ್ಲಿ ಆವರಿಸಿಕೊಳ್ಳುತ್ತಾ ಸಾಗಿದೆ. ಇದರ ಬೆನ್ನಿಗೆ ಧಾರ್ಮಿಕತೆಯ ಹೆಸರು ಹೇಳಿಕೊಂಡು ಸ್ವಾಮೀಜಿಗಳು, ಬಾಬಾಗಳು, ದೇವಮಾನವರು, ಪೂಜಾರಿಗಳು ಇತ್ಯಾದಿಗಳು ಹುಟ್ಟಿಕೊಂಡಿದ್ದಾರೆ. ಇಂತಹ ಸನ್ನಿವೇಶದಲ್ಲಿ ಬಾಬಾ ಹೆಸರಿನಿಂದ ಕರೆಯಲ್ಪಡುತ್ತಿದ್ದ ಸತ್ಯನಾರಾಯಣ ರಾಜು ಅಲಿಯಾಸ್ ಸತ್ಯ ಸಾಯಿ ಬಾಬಾ ಇಹಲೋಕ ತ್ಯಜಿಸಿದ್ದಾರೆ.  ಸಮಾಜದಲ್ಲಿ ಎಷ್ಟೋ ಮಂದಿ ಬಾಬಾಗಳು ಇದ್ದಾರೆ ಆದರೆ ಈ ಸತ್ಯ ಸಾಯಿ ಬಾಬಾ ಕಥೆ ಏನು? ಈತ ಬೆಳಕಿಗೆ ಬಂದದ್ದು ಹೇಗೆ? ಇವರ ಸಮಾಜ ಮುಖಿ ಕೆಲಸಗಳೇನು? ಇವರ ಪ್ರಸ್ತುತತೆ ಏನು? ಎಂಬೆಲ್ಲ ಪ್ರಶ್ನೆಗಳು ಏಳುತ್ತವೆ. 

          ಈ ಬಾಬಾ ಬೆಳಕಿಗೆ ಬಂದ ಕಥೆಯೂ ವಿಚಿತ್ರವೂ ಆಗಿದೆ. ಈತ ಬೆಳೆಯುತ್ತಾ ಬಂದಂತೆಲ್ಲಾ ಸಮಾಜ ಮುಖಿಯಾದದ್ದು , ಸಮಾಜದ ವಿವಿಧ ಸ್ಥರಗಳ ಜನರನ್ನು ಆವರಿಸಿಕೊಂಡಿದ್ದು, ಅಂತರ ರಾಷ್ಟ್ರೀಯ ಮಟ್ಟದಲ್ಲಿ ತನ್ನ ಪ್ರಭಾವಳಿಯನ್ನು ಬೆಳೆಸಿಕೊಂಡದ್ದು, ವಿವಿಧ ಸಂಧರ್ಭಗಳಲ್ಲಿ ಪವಾಡಗಳ ಮೂಲಕ ಜನರನ್ನು ಮೋಡಿ ಮಾಡುವ ಮೂಲಕ ಸೆಳೆದದ್ದು ರೋಚಕ ಕಥೆಯೇ ಆಗಿದೆ. ಬಹುತೇಕ ಮಂದಿಗೆ ತಿಳಿದಿರುವಂತೆ ಪಕ್ಕದ ಆಂಧ್ರ ಜಿಲ್ಲೆಯ ಪುಟ್ಟಪರ್ತಿಯ ಈಶ್ವರಮ್ಮ ಮತ್ತು ಪೆದ್ದವೆಂಕಮ್ಮ ರಾಜು ರತ್ನಾಕರಂ ರ ಮಗನಾಗಿ 23, ನವೆಂಬರ್ 1926ರಲ್ಲಿ ಜನಿಸಿದವನೇ ಸತ್ಯನಾರಾಯಣ ರಾಜು. ಈತನ 16ನೇ ವಯಸ್ಸಿನಲ್ಲಿ ಸಹೋದರನೊಂದಿಗೆ ಆಟವಾಡುವಾಗ ಚೇಳು ಕುಟುಕಿದ್ದೇ ನೆಪವಾಗಿ ಅಂದಿನಿಂದ ತನ್ನ ನಡವಳಿಕೆಯಲ್ಲಿ ಸತ್ಯನಾರಾಯಣ ರಾಜು ಬದಲಾವಣೆ ತಂದು ಕೊಂಡನಲ್ಲದೇ ಅಸ್ಖಲಿತವಾಗಿ ಸಂಸ್ಕೃತ ಶ್ಲೋಕಗಳನ್ನು ಉಚ್ಚರಿಸಲಾರಂಭಿಸಿದನಂತೆ. ಆತನಿಗೆ ಸಂಸ್ಕೃತದ ಲವಲೇಶವೂ ಪರಿಚಯವಿಲ್ಲದಿದ್ದರೂ ಮಾತನಾಡಿದ್ದು ಮತ್ತು ಅನಂತದಿಂದ ಬೂದಿಯನ್ನು ಸೃಷ್ಟಿಸಿಕೊಟ್ಟನಂತೆ.ಈ ಘಟನೆಯಿಂದ ವಿಚಲಿತರಾದ ಸತ್ಯನಾರಾಯಣ ರಾಜುವಿನ ತಂದೆ ಬಾರು ಕೋಲು ಹಿಡಿದು ಹೆದರಿಸಿ ಕೇಳಿದಾಗ ನಾನು ಸಾಯಿಬಾಬಾ, ಸತ್ಯ ಸಾಯಿ ಬಾಬಾ, ಶಿರಡಿ ಸಾಯಿಬಾಬಾ ನ ಅಂಶವಾಗಿ ಜನ್ಮಿಸಿದ್ದೇನೆ ಎಂದನಂತೆ. ಅಂದಿನಿಂದ ತನ್ನ ಸಾಮಾಜಿಕ ಸಂಬಂಧಗಳಿಗೆ ಕಡಿವಾಣ ಹಾಕಿದ ಬಾಬಾ ಆಧ್ಯಾತ್ಮಿಕದತ್ತ ಒಲವು ತೋರಿಸಿದರಂತೆ. ಚೇಳು ಕುಟುಕಿದ ಘಟನೆಯ ನಂತರ ಕಣ್ಮರೆಯಾಗಿ ದೇಶಾಂತರ ಹೋಗುವ ಬಾಬಾ 3ವರ್ಷಗಳ ನಂತರ ವಾಪಾಸಾಗಿ ಪುಟ್ಟಪರ್ತಿಯಲ್ಲಿ ಆಧ್ಯಾತ್ಮಿಕ ವಿಚಾರಗಳೆಡೆಗೆ ಜನರನ್ನು ಆಕರ್ಷಿಸುತ್ತಾರೆ. ಇದೇ ಸಂಧರ್ಭದಲ್ಲಿ ಶೂನ್ಯದಿಂದ ಬೂದಿ, ಉಂಗುರ ಇತ್ಯಾದಿಗಳನ್ನು ತೆಗೆದುಕೊಡುವ ಮೂಲಕ ಭಕ್ತರನ್ನು ಮೋಡಿ ಮಾಡಿದ ಬಾಬಾನಿಗೆ 1944ರಲ್ಲಿ ಭಕ್ತರು ಮಂದಿರ ಕಟ್ಟಿದರು. 
       ಅಲ್ಲಿಂದ ಮುಂದೆ ದೇಶದಾಧ್ಯಂತ, ಜಗತ್ತಿನಾಧ್ಯಂತ ತನ್ನ ಪ್ರಭಾವಳಿಯನ್ನು ಬೆಳೆಸಿಕೊಂಡ ಬಾಬಾ ಅನಾಮತ್ತು 114 ದೇಶಗಳಲ್ಲಿ 1200 ಸಾಯಿಕೇಂದ್ರಗಳನ್ನು ಹೊಂದಿದ್ದಾರೆ.178ದೇಶಗಳಲ್ಲಿ 6ಮಿಲಿಯನ್ ಸಂಖ್ಯೆಯಲ್ಲಿ ಬಾಬಾನ ಅನುಯಾಯಿಗಳಿದ್ದಾರೆ. 6ಬಾರಿ ಹೃದಯಾಘಾತ ಹಾಗೂ ಒಮ್ಮೆ ಪಾರ್ಸ್ವವಾಯು ಆಗಿದ್ದರೂ ತನ್ನ ಆಧ್ಯಾತ್ಮಿಕ ಶಕ್ತಿಯಿಂದ ಬಾಬಾ ಬದುಕುಳೀದಿದ್ದರೆಂದು ಆತನ ಭಕ್ತರು ನಂಬುತ್ತಾರೆ. ಶೂನ್ಯದಿಂದ ಬೂದಿ ಇತ್ಯಾದಿ ಸೃಷ್ಟಿಸುತ್ತಿದ್ದ ಬಾಬಾನನ್ನು ಒಮ್ಮೆ ಎಚ್ ನರಸಿಂಹಯ್ಯ ವೈಚಾರಿಕ ದೃಷ್ಟಿಯಿಂದ ಪ್ರಶ್ನಿಸಿದ್ದಾಗ, ಸವಾಲನ್ನು ಸ್ವೀಕರಿಸಲೊಲ್ಲದ ಬಾಬಾ ಆಧ್ಯಾತ್ಮಿಕ ಶಕ್ತಿಯನ್ನು ಆಧ್ಯಾತ್ಮಿಕವಾಗಿಯೇ ತಿಳಿದುಕೊಳ್ಳಬೇಕೆ ವಿನಹ ವೈಜ್ಞಾನಿಕ ಪ್ರಯೋಗದಿಂದ ಪರಿಶೀಲಿಸಬಾರದು ಎಂದು ಹೇಳುವ ಮೂಲಕ ತಳ್ಳಿಹಾಕಿದ್ದರು. ಈ ವಿಚಾರಗಳೆಲ್ಲ ಒತ್ತಟ್ಟಿಗಿರಲಿ ಸತ್ಯ ಸಾಯಿಬಾಬಾ ಇಷ್ಟವಾಗುವುದು ಆತನ ಸಾರ್ವಜನಿಕ ಸೇವಾ ಕಾರ್ಯಗಳ ಮೂಲಕ. ಪುಟ್ಟಪರ್ತಿ ಹಾಗೂ ಬೆಂಗಳೂರಿನ ಆಡುಗೋಡಿಯಲ್ಲಿ ಬಾಬಾ ನಿರ್ಮಿಸಿರುವ ಉಚಿತ ಆಸ್ಪತ್ರೆಯಲ್ಲಿ ಇದುವರೆಗೂ 250,000ಅಧಿಕ ಸಂಖ್ಯೆಯ ರೋಗಿಗಳು ಚಿಕಿತ್ಸೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲಿ ಉಚಿತ ಸರ್ಜರ, ಉಪಚಾರ, ಔಷದೋಪಚಾರ ನಡೆಯುತ್ತಿರುವುದು ಪ್ರಶಂಸನೀಯವೇ ಆಗಿದೆ. ಧಾರ್ಮಿಕ ದತ್ತಿ ಸಂಸ್ಥೆಗಳು, ಉಚಿತ ಸೇವಾ ಕೇಂದ್ರಗಳು, ವಿಶ್ವವಿದ್ಯಾನಿಲಯ, ಶಾಲೆಗಳು ನಿರ್ಮಿಸಿದ ಬಾಬಾ ಆಂಧ್ರಪ್ರದೇಶದ ಅನಂತಪುರಂ ಜಿಲ್ಲೆಯಲ್ಲಿ 1.2ಮಿಲಿಯನ್ ಜನರಿಗೆ ಅನುಕೂಲವಾಗುವಂತೆ ಶುದ್ದ ಕುಡಿಯುವ ನೀರಿನ ಘಟಕ ಸ್ಥಾಪಿಸಿ ತನ್ನ ಸಾಮಾಜಕಿ ಕಳಕಳಿಯನ್ನು ಮೆರೆದಿದ್ದಾರೆ. ದಕ್ಷಿಣ ಆಫ್ರಿಕಾದ ವಿವಿಧ ದೇಶಗಳಿಗೆ ತೆರಳಿ ಆಧ್ಯಾತ್ಮಿಕವಾಗಿ ತನ್ನ ಸೇವೆಯನ್ನು ನೀಡಿರುವ ಬಾಬಾ ಜಗತ್ತಿನಾಧ್ಯಂತ ತನ್ನ ವರ್ಚಸ್ಸನ್ನು ಬೆಳೆಸಿದ್ದರು ಆ ಮೂಲಕ ಭಾರತೀಯ ಸನಾತನ ಧರ್ಮದ ಪ್ರತಿಪಾದಕರಾಗಿಯೂ ಇದ್ದರು ಎಂಬುದು ಇಲ್ಲಿ ಗಮನೀಯ ಅಂಶ. ಆದರೆ ಸದರಿ ಆತ ಬದುಕಿದ್ದಾಗಲೇ ಸತ್ಯ ಸಾಯಿ ಬಾಬಾ ನ ಹೆಸರಿನಲ್ಲಿ ಮನೆ ಮನೆಗಳಲ್ಲಿ ಪವಾಡ ನಡೆಯುತ್ತಿದೆಯೆಂಬ ಗುಲ್ಲು ಹಬ್ಬಿಸುತ್ತಿದ್ದ ಮಂದಿ ಬಾಬಾ ಅನಂತದೆಡೆಗೆ ಸರಿದ ನಂತರವೂ ಹೊಸ ವರಸೆಗಳನ್ನು ತೋರುವುದನ್ನ ಇನ್ನಾದರೂ ಕಡಿವಾಣ ಹಾಕಬೇಕು ಆ ನೆರಳಲ್ಲಿ ಬರುವ ಸಂತತಿಗಳನ್ನು ನಿರ್ಬಂದಿಸಬೇಕು.. ಯಾವುದೇ ಬಾಬಾ ಗಳು ಜನಸಾಮಾನ್ಯರ ಆಕರ್ಷಣೆಗೆ ಪವಾಡ ಮತ್ತಿತರ ವರಸೆಗಳನ್ನು ತೋರುತ್ತಾರಾದರೂ ಸಮಾಜ ಮುಖಿಯಾಗಿ ಅವರು ಮಾಡುವ ಕೆಲಸಗಳು ಮಾತ್ರ ಬಹುಕಾಲ ಉಳಿಯಬಲ್ಲದು. ಈ ನಿಟ್ಟಿನಲ್ಲಿ ಸತ್ಯ ಸಾಯಿ ಬಾಬಾ ಪ್ರಸ್ತುತವಾಗುತ್ತಾರೆ. ಇವತ್ತು ಜನಸಾಮಾನ್ಯರ ಮೌಡ್ಯಗಳನ್ನು ಬಂಡವಾಳ ಮಾಡಿಕೊಳ್ಳುವ ಅನೇಕ ಮಂದಿ ಸ್ವಾಮೀಜಿಗಳು ಬಾಬಾಗಳು ತಮ್ಮ ವೈಯುಕ್ತಿಕ ಪ್ರಭಾವಳಿಗೆ ಮಾತ್ರ ಸೀಮಿತ ಮಾಡಿಕೊಂಡಿರುತ್ತಾರೆ ಆದರೆ ಸಮಾಜ ಮುಖಿಯಾಗಿಯೂ ಸೇವಾ ಹಸ್ತವನ್ನು ಚಾಚುವ ಮೂಲಕ ತಮ್ಮ ಇನ್ನೊಂದು ಮುಖವನ್ನ ಮರೆಯಾಗಿಸುವ ಬಾಬಾಗಳು ಇದ್ದಾರೆ. ಆಧ್ಯಾತ್ಮಿಕವಾಗಿ ಭಾರತೀಯ ಪರಂಪರೆಯನ್ನು ಅಂತರ ರಾಷ್ರ್ಟೀಯ ಮಟ್ಟದಲ್ಲಿ ಪ್ರಚುರ ಪಡಿಸಿದ (ಪವಾಡ ಹೊರತು ಪಡಿಸಿ) ಸತ್ಯ ಸಾಯಿ ಬಾಬಾ ನಿಜಕ್ಕೂ ಸ್ಮರಣಾರ್ಹರು ಆಗಬಹುದಲ್ಲವೇ?

Sunday, April 10, 2011

ಭ್ರಷ್ಟ'ಭಾರತ'ವೂ... ಲೋಕಪಾಲ ಮಸೂದೆಯೂ..

"ಅಣ್ಣಾ ಹಜಾರೆ ನಿರಶನದಿಂದ ಲೋಕಪಾಲ್ ಬಿಲ್ ಪಾಸ್ ಆಗಬಹುದು, ಆದರೆ ಭಾರತದಿಂದ ಭ್ರಷ್ಠಾಚಾರ ತೊಲಗುತ್ತದೆ ಎಂಬುದು ಭ್ರಮೆ ಮಾತ್ರ" ಅಂತ ಫೇಸ್ ಬುಕ್ ನಲ್ಲಿ ಬರೆದದ್ದು ಪತ್ರಕರ್ತ ಮಿತ್ರ ಶ್ರೀನಿವಾಸಗೌಡ. ಇದು ಅವರೊಬ್ಬರ ಅಭಿಪ್ರಾಯವಲ್ಲ ಸಂವೇದನಾಶೀಲ ಮನಸ್ಸುಗಳೆಲ್ಲರ ಅಭಿಪ್ರಾಯವೂ ಅದೇ ಆಗಿದೆ ಎಂಬುದು ಮಾತ್ರ ಅತ್ಯಂತ ವಿಷಾಧನೀಯಕರ ಸಂಗತಿ. ಈ ಮಾತುಗಳಲ್ಲಿ ಭ್ರಷ್ಟಾಚಾರದ ಕಬಂಧಬಾಹುಗಳ ಬಂಧನ ಎಷ್ಟರ ಮಟ್ಟಿಗೆ ಬಿಗಿಯಾಗಿದೆ, ಅದನ್ನು ಮೀರಿ ನಿಲ್ಲಲು ಸಾಧ್ಯವೇ ಎಂಬ ಪ್ರಶ್ನೆಯೂ ಸಹಾ ಅಗೋಚರವಾಗಿ ಕಾಣಸಿಗುತ್ತದೆ. ಅಣ್ಣಾ ಹಜಾರೆ ಜನಲೋಕಪಾಲ ಮಸೂದೆಯ ಜಾರಿಗೆ ನಡೆಸಿದ 98ಘಂಟೆಗಳ ನಿರಶನ ಜಡ್ಡುಗಟ್ಟಿದ  ಸಂವೇದನಾಶೀಲ ಮನಸ್ಸುಗಳನ್ನು ಬಡಿದೆಬ್ಬಿಸಿದೆ, ಸಾರ್ವತ್ರಿಕವಾಗಿ ಜನಪರವಾದ ಚಳುವಳಿಗೆ 3ದಶಕಗಳ ನಂತರ ರಾಷ್ಟ್ರಾಧ್ಯಂತ ಪ್ರತಿಸ್ಪಂದನೆ ಸಿಕ್ಕಿದೆ ಎಂದರೆ ಅಷ್ಟರ ಮಟ್ಟಿಗೆ ಭ್ರಷ್ಟಾಚಾರದ ತೀವ್ರತೆ ಜನರನ್ನ ಕಾಡುತ್ತಿದೆ ಎಂದು ಅರ್ಥೈಸಬಹುದಾಗಿದೆ.ಹೀಗಿರುವಾಗ ಜನಲೋಕಪಾಲ್ ಮಸೂದೆ ಅಗತ್ಯತೆ ಏನು? ಅದರಿಂದ ನಾವು ಕಂಡ ಕನಸು ನನಸಾಗಲು ಸಾಧ್ಯವೇ? ಜನಲೋಕಪಾಲ ಮಸೂದೆ ಮಾತ್ರದಿಂದಲೇ ಭ್ರಷ್ಟಾಚಾರ ಮುಕ್ತ ವ್ಯವಸ್ಥೆ ಕಾಣಲು ಸಾಧ್ಯವೇ ಎಂಬ ವಿಚಾರಗಳನ್ನು ಅವಲೋಕಿಸಲು ಇದು ಪ್ರಶಸ್ತ ಕಾಲವೂ ಹೌದು.


         ಸ್ವತಂತ್ರ  ಭಾರತದ ಅಭಿವೃದ್ದಿಗೆ ಪ್ರಮುಖ ತೊಡಕು ಭ್ರಷ್ಟಾಚಾರ, ಭಾರತ ಭ್ರಷ್ಟ ದೇಶಗಳ ಸಾಲಿನಲ್ಲಿ 87ನೇ ಸ್ಥಾನದಲ್ಲಿ ಇದೆ. ಇವತ್ತು ದೇಶದ ಉದ್ದಗಲಕ್ಕೂ ಆಡಳಿತ ನಡೆಸುವ ಪ್ರಜಾ ಸರ್ಕಾರಗಳು ಮತ್ತು ಅಲ್ಲಿನ ಅಧಿಕಾರ ಶಾಹಿ ವ್ಯವಸ್ಥೆ ಸಾಮಾನ್ಯ ಜನರನ್ನ ಹರಿದು ತಿನ್ನುತ್ತಿವೆ. ಬಡವರಿಗೆ, ಅರ್ಹರಿಗೆ ತಲುಪಬೇಕಾದ ಸವಲತ್ತುಗಳು ತಲುಪುತ್ತಿಲ್ಲ, ಜನಸಾಮಾನ್ಯರಿಗೆ ದಕ್ಕಬೇಕಾದ ಯೋಜನೆಗಳು ಉಳ್ಳವರ ಪಾಲಾಗುತ್ತಿದೆ, ಅಧಿಕಾರಿಗಳು, ರಾಜಕಾರಣಿಗಳು ಹಗಲು ದರೋಡೆಕೋರರಾಗಿದ್ದಾರೆ. ಸ್ವತಂತ್ರ ಬಾರತದ ನಂತರ ದೇಶದ ಭ್ರಷ್ಟಾಚಾರವನ್ನು ನಿಯಂತ್ರಿಸಲು ಇರುವಂತಹ ಅನೇಕ ಸಂಸ್ಥೆಗಳು ಹಲ್ಲುಕಿತ್ತ ಹಾವಿನಂತಾಗಿವೆ. ನ್ಯಾಯದ ಪರಾಮರ್ಶೆಗೆ ವರ್ಷಗಟ್ಟಲೆ ಕಾಯಬೇಕಾಗಿದೆ, ಭ್ರಷ್ಟಾಚಾರ ನಿಯಂತ್ರಿಸುವ ಸಂಸ್ಥೆಗಳು ಆಡಳಿತಾರೂಢ ರಾಜಕಾರಣಿಗಳ ನಿಯಂತ್ರಣದಲ್ಲಿವೆ ಇಂತಹ ಸನ್ನಿವೇಶದಲ್ಲಿ ಭ್ರಷ್ಟಾಚಾರವನ್ನ ನಿಯಂತ್ರಿಸಲು ಯಾವ ಮಸೂದೆ ಬಂದರೂ ಯಾವ ಸಂಸ್ಥೆಗಳು ಬಂದರೂ ಅದು ಬೆಕ್ಕಿನ ಕೊರಳಿಗೆ ಕಟ್ಟುವ ಘಂಟೆಯಂತಾಗುತ್ತದೆ ಅಷ್ಟೆ. ಆದರೆ ಅಂತಹದ್ದೊಂದು ಸಂಸ್ಥೆ ಇದೆಯಲ್ಲ ಎಂಬ ಅಲ್ಪತೃಪ್ತಿ ಹಾಗೂ ಹುಸಿ ಭ್ರಮೆಯಲ್ಲಿ ನಮ್ಮ ಬದುಕುಗಳೂ ಮುಂದುವರೆಯುತ್ತವೆ ಎಂಬದೂ ಅರಗಿಸಿಕೊಳ್ಳಲಾಗದ ಸತ್ಯವೂ ಹೌದು. ಆದರೂ ಅಣ್ಣಾ ಹಜಾರೆ ಪ್ರತಿಪಾದಿಸುತ್ತಿರುವ ಜನ್ ಲೋಕಪಾಲ್ ಮಸೂದೆ ಪ್ರಾಮಾಣಿಕವಾಗಿ ಜಾರಿಗೆ ಬಂದುದೇ ಆದರೆ ಕಾಲಾನಂತರದಲ್ಲಿ ಬದಲಾವಣೆಯ ಪರ್ವ ಆರಂಭವಾಗುವುದೆನ್ನುವ ಅಂಶವನ್ನು ಪೂರ್ಣವಾಗಿ ತಳ್ಳಿಹಾಕುವಂತಿಲ್ಲ ಎಂಬುದು ತೃಪ್ತಿಯನ್ನು ನೀಡುತ್ತಿದೆ. 


        ಲೋಕಪಾಲ್ ಮಸೂದೆ ಹಾಗೂ ಅಣ್ಣಾ ಹಜಾರೆ  ಕುರಿತು ಮಾದ್ಯಮಗಳು ವ್ಯಾಪಕವಾಗಿ ಬರೆದಿವೆ ಆದರೂ 2010ರ ಲೋಕಪಾಲ ಮಸೂದೆ ಕುರಿತು ಕೆಲವಿಚಾರಗಳನ್ನು ಅವಲೋಕಿಸಿ ಮುಂದುವರಿಯೋಣ. ಬಹುತೇಕರಿಗೆ ತಿಳಿದಿರುವಂತೆ ಲೋಕಪಾಲ ಮಸೂದೆಗೆ 42ವರ್ಷಗಳ ಇತಿಹಾಸವಿದೆ. ಲೋಕಪಾಲ ಅಂದರೆ ಹಿಂದಿಯಲ್ಲಿ ಜನರಕ್ಷಣೆ ಎಂದಾಗುತ್ತೆ. ದೇಶದ ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ ಭ್ರಷ್ಟಾಚಾರವನ್ನು ನಿಯಂತ್ರಿಸುವ ನಿಟ್ಟಿನಲ್ಲಿ 1966ರಲ್ಲಿ ಆಡಳಿತ ಸುಧಾರಣಾ ಆಯೋಗದ ಶಿಫಾರಸ್ಸಿನಂತೆ ರಾಜ್ಯದಲ್ಲಿ ಲೋಕಾಯುಕ್ತ ಹಾಗೂ ಕೇಂದ್ರದಲ್ಲಿ 'ಲೋಕಪಾಲ' ವ್ಯವಸ್ಥೆ ತರಲು ನಿರ್ಧರಿಸಲಾಯಿತು.ಸದರಿ ಮಸೂದೆಯಲ್ಲಿ ಅದಿಕಾರಿಗಳು, ನೌಕರರು ಸೇರಿದಂತೆ ಪ್ರಧಾನಮಂತ್ರಿ, ಸಚಿವರು, ಮುಖ್ಯಮಂತ್ರಿಗಳ ವಿರುದ್ದವೂ ಭ್ರಷ್ಟಾಚಾರ ಕಂಡು ಬಂದಲ್ಲಿ ಕ್ರಮಜರುಗಿಸುವ ಅಧಿಕಾರಗಳನ್ನು ಸೇರಿಸಿತ್ತು. ಆದರೆ ಸದರಿ ಮಸೂದೆಯಿಂದ ರಾಜಕಾರಣಿಗಳನ್ನು ಕೈಬಿಟ್ಟು ಅಧಿಕಾರಿಗಳನ್ನು ಮಾತ್ರ ಬಗ್ಗು ಬಡಿಯುವ ಮಸೂದೆಗೆ ಪ್ರಸ್ತಾವನೆ ಸಲ್ಲಿಸಲಾಯಿತು.ಅದರನ್ವಯ ಲೋಕಾಯುಕ್ತ, ಸಿಎಜಿ, ಸಿವಿಸಿ, ಸಿಬಿಐ, ಚುನಾವಣಾ ಆಯೋಗ ಹೀಗೆ ಸುಮಾರು ಹತ್ತು  ಸಂಸ್ಥೆಗಳು ಕಾರ್ಯನಿರ್ವಹಿಸುವಂತೆ ಮಾಡಲಾಯಿತಾದರೂ ಅವುಗಳ ನಿಯಂತ್ರಣ ಹಾಗೂ ಅಧಿಕಾರದ ವ್ಯಾಪ್ತಿಯನ್ನು ಸೀಮಿತಗೊಳಿಸಲಾಗಿದೆ. ರಾಜಕಾರಣಿಗಳನ್ನು ಸೇರಿಸಿದ ಲೋಕಪಾಲ ಮಸೂದೆಗೆ ದೇಶದ ನಾಲ್ಕನೇ ಲೋಕಸಭೆಯಲ್ಲಿ ಅಂದರೆ 1968ರಲ್ಲಿ ಅನುಮೋದನೆ ದೊರೆಯಿತಾದರೂ ರಾಜ್ಯ ಸಭೆಯಲ್ಲಿ ಅದು ಬಿದ್ದು ಹೋಯಿತು. ಅಂದರೆ ರಾಜ್ಯ ಸಭೆಯಲ್ಲಿ ಮಂಡನೆಯಾಗುವ ವೇಳೆಗೆ 1968ರಲ್ಲಿದ್ದ ಸರ್ಕಾರ ವಿಸರ್ಜನೆಯಾಯಿತು. ನಂತರ ಅಲ್ಪಸ್ವಲ್ಪ ಬದಲಾವಣೆಗಳೊಂದಿಗೆ 1971, 1977, 1985, 1989, 1996, 1998, 2001, 2005 ಮತ್ತು 2008 ಸೇರಿದಂತೆ 10ಭಾರಿ ಲೋಕಸಭೆಯಲ್ಲಿ ಲೋಕಪಾಲ ಮಸೂದೆ ಮಂಡನೆಯಾಗಿದ್ದರೂ ಅನುಮೋದನೆಗೊಳ್ಳದೇ ಮುಂದೆ ಹೋಗಿದೆ. ಇದೀಗ 2010ರಲ್ಲಿ ಮಾಡಲಾದ ಬದಲಾವಣೆಗಳೊಂದಿಗೆ ಸದರಿ ಮಸೂದೆ ಲೋಕಸಭೆಯಲ್ಲಿ ಮಂಡನೆಗೆ ಸಿದ್ದವಾಗಿತ್ತು. ಇದರಲ್ಲಿ ಲೋಕಪಾಲ ಆಯೋಗಕ್ಕೆ ತಪ್ಪಿತಸ್ಥರ ವಿರುದ್ದ ನೇರವಾಗಿ ಕ್ರಮ ಜರುಗಿಸುವ ಹಕ್ಕು ಇಲ್ಲ, ಕೇವಲ ಸಲಹಾ ಸಮಿತಿ ಯಾಗಿ ಕಾರ್ಯ ನಿರ್ವಹಿಸುತ್ತದೆ, ಕ್ರಮಜರುಗಿಸಲು ಪ್ರಥಮ ಮಾಹಿತಿ ವರದಿ ತಯಾರಿಸಲು ಅವಕಾಶ ಇಲ್ಲ, ಕಡಿಮೆ ಕಾಲಾವಧಿಯ ಶಿಕ್ಷೆಗೆ ಮಾತ್ರ ಶಿಪಾರಸ್ಸು ಮಾಡಬಹುದಾಗಿರುತ್ತೆ ಎಂಬುದಾಗಿದೆ. ಆದರೆ ಸುಪ್ರೀಂಕೋರ್ಟು ನ್ಯಾಯಾಧಿಶ ಶಾಂತಿಭೂಷಣ್, ನಿವೃತ್ತ ಪೋಲೀಸ್ ಅಧಿಕಾರಿ ಕಿರಣ್ ಬೇಡಿ ಮತ್ತಿತರರು ರಚಿಸಿಕೊಂಡಿರುವ "ಭ್ರಷ್ಟಾಚಾರದ ವಿರುದ್ದದ ಭಾರತ" ಸಮಿತಿಯು ಲೋಕಪಾಲ ಮಸೂದೆಯ ಜನವಿರೋದಿ ನೀತಿಯನ್ನು ಬದಲಿಸಿ ಹೊಸ ನೀತಿಯನ್ನು ರೂಪಿಸಿದೆ. ಅದರಲ್ಲಿ ಪ್ರಮುಖವಾಗಿ ಭ್ರಷ್ಟಾಚಾರದಲ್ಲಿ ಪಾಲ್ಗೊಂಡ ಯಾವುದೇ ಜನಪ್ರತಿನಿಧಿ, ಅಧಿಕಾರಿ/ನೌಕರರ ವಿರುದ್ದ ಸ್ವತಂತ್ರವಾಗಿ ಕ್ರಮಜರುಗಿಸುವ ಹಕ್ಕು ಸೇರಿದಂತೆ ಜನಪ್ರತಿನಿಧಿಗಳನ್ನು ವಾಪಾಸು ಕರೆಸಿಕೊಳ್ಳುವ ಹಕ್ಕು ಮತ್ತು ಸಮಿತಿಯಲ್ಲಿ ಸಾಮಾನ್ಯ ಜನರಿಗೆ ಸ್ಥಾನಮಾನಗಳನ್ನು ನೀಡುವ ಬಗ್ಗೆ ಪ್ರತಿಪಾದಿಸಿದೆ. ಇಂತಹದ್ದೊಂದು ವ್ಯವಸ್ಥೆ ಹಾಂಕಾಂಗ್ ನಲ್ಲಿ ಜಾರಿಯಲ್ಲಿದ್ದು ಅದೇ ಮಾದರಿಯನ್ನು ಭಾರತೀಯ ಪ್ರಜಾತಾಂತ್ರಿಕ ವ್ಯವಸ್ಥೆಗೆ ಆಗುವಂತೆ ಒಗ್ಗಿಸಿಕೊಂಡು ನೀತಿ ನಿಯಮಗಳನ್ನು ಪರಿಣಾಮಕಾರಿಯಾಗಿ ವ್ಯಕ್ತಪಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅಣ್ಣಾ ಹಜಾರೆ ಸದರಿ ಪರಿಷ್ಕೃತ ಮಾದರಿಯ ಜನಲೋಕಪಾಲ ಮಸೂದೆ ಜಾರಿಗೆ ಬರಬೇಕೆಂದು ಜಂತರ್ ಮಂತರ್ ನಲ್ಲಿ ನಡೆಸಿದ ನಿರಶನ ಆಶಾದಾಯಕವಾದ ಫಲಿತಾಂಶವನ್ನು ನಿರೀಕ್ಷಿಸುವಂತೆ ಮಾಡಿದೆ. ಆಗಸ್ಟ್ 15ರವರೆಗೆ ನೀಡಲಾಗಿರುವ ಅಂತಿಮ ಗಡುವಿನಲ್ಲಿ ಜನಲೋಕಪಾಲ ಮಸೂದೆಯ ಸಮರ್ಪಕವಾಗಿ ಸಮಾಜ ಮುಖಿಯಾಗಿ ಜಾರಿಗೆ ಬರಬೇಕಾಗಿದೆ. 


          ಜನಲೋಕಪಾಲ ಮಸೂದೆ  ನಿರೀಕ್ಷಿತ ರೀತಿಯಲ್ಲಿ ಜಾರಿಗೆ ಬಂದರೂ ಅದರ ಪರಿಣಾಮಗಳು ಕೊಂಚ ಮಟ್ಟಿಗಾದರೂ ಜನಸಾಮಾನ್ಯರಿಗೆ ತಗುಲಿರುವ ಭ್ರಷ್ಟಾಚಾರದ ಬಿಸಿಯನ್ನು ತಗ್ಗಿಸಬಹುದು. ಯಾವುದೇ ವ್ಯವಸ್ಥೆ ಬಂದರೂ ಅಲ್ಲಿ ತೀವ್ರಗತಿಯ ಬದಲಾವಣೆಗಳನ್ನು ತತ್ ಕ್ಷಣದಿಂದ ನಿರೀಕ್ಷಿಸಲು ಸಾಧ್ಯವಿಲ್ಲ. ಇಲ್ಲಿ ಜನರ ಪಾಲ್ಗೊಳ್ಳುವಿಕೆ ಮತ್ತು ಪರಿವರ್ತಿತ ಜಾಗೃತ ಮನಸ್ಥಿತಿಯೂ ಅತ್ಯಗತ್ಯವಾಗಿದೆ. ಚಳುವಳಿಗಳು ಕ್ರಾಂತಿ ಮಾಡುತ್ತವೆ ಎಂಬುದು 4ದಶಕಗಳ ಹಿಂದಿನ ಮಾತು, ಆದರೆ ವ್ಯವಸ್ಥೆಯ ಕ್ರೂರ ನಡವಳೀಕೆಗಳು ಎಂಥಹ ಕಾಲಕ್ಕೂ ಕ್ರಾಂತಿ ಮಾಡಲು ಪ್ರೇರೇಪಣೆಯಾಗಿರುತ್ತವೆ ಎಂಬುದು ಸಹಾ ತಳ್ಳಿಹಾಕಲು ಆಗದ ಮಾತು. ಅದಕ್ಕೆ ಪೂರಕವಾದ ಮನಸ್ಥಿತಿಯನ್ನು ಸಹಾ ಈ ವ್ಯವಸ್ಥೆಯೇ ಸೃಜಿಸುತ್ತದೆ ಹಾಗಾಗಿಯೇ ಅಣ್ಣಾ ಹಜಾರೆಯಂತಹವರ ಹೋರಾಟಗಳು ಶಕ್ತಿ ತುಂಬುವ ಕ್ರಿಯೆಗಳಾಗುತ್ತವೆ, ಬದಲಾವಣೆಯ ಕನಸು ಕಾಣಲು ಅವಕಾಶ ಮಾಡುತ್ತವೆ. ವ್ಯವಸ್ಥೆಯ ಸುಧಾರಣೆ ಒಬ್ಬರಿಂದ ಸಾಧ್ಯವಿಲ್ಲ, ಅಲ್ಲಿನ ದೋಷಗಳ ವಿರುದ್ದ ಪ್ರತಿಭಟಿಸಲು ಸಂಘಟನಾತ್ಮಕ ಚಳುವಳಿ ಬೇಕು.  ಇಲ್ಲಿ ಅಣ್ಣಾ ಹಜಾರೆ ಒಂದು ನಿಮಿತ್ತ ಶಕ್ತಿಯಷ್ಟೇ, ಇದೇ ಚಳುವಳಿಯನ್ನ ದೇಶದ ಸಾಮಾನ್ಯ ಪ್ರಜೆ ಮಾಡಲು ಹೊರಟ್ಟಿದ್ದರೆ ಅದಕ್ಕೆ ಕಿಲುಬು ಕಾಸಿನ ಕಿಮ್ಮತ್ತು ಸಿಗುತ್ತಿರಲಿಲ್ಲ, ಆದರೆ ಅಣ್ಣಾಹಜಾರೆಯ ಹಿನ್ನೆಲೆ, ಗಟ್ಟಿತನ, ಪ್ರಾಮಾಣಿಕತೆ ಮತ್ತು ಹೋರಾಟ ಸಂವೇದನಾಶೀಲ ಮನಸ್ಸುಗಳನ್ನು ಒಗ್ಗೂಡಿಸಿದೆ. ಆ ಮೂಲಕ ಸತ್ತು ಮಲಗಿದ್ದ ಸ್ವಾಭಿಮಾನವನ್ನ ಜಾಗೃತಗೊಳಿಸಿದೆ ಅದಕ್ಕೆ ಎಷ್ಟು ಕೃತಜ್ಞತೆ ಹೇಳಿದರೂ ಸಾಲದು ಅಲ್ಲವೇ?

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...