Thursday, August 20, 2009

ಶಿಕ್ಷಣ ಕ್ಷೇತ್ರದಲ್ಲಿ ಬುರ್ಕಾ ವಿವಾದ: ರಗಳೆ ಬೇಕಿತ್ತಾ?

ದು 13ವರ್ಷಗಳ ಹಿಂದಿನ ಸಂಗತಿ, ಬಿಜೆಪಿಯ ರಾಜ್ ನಾಥ್ ಸಿಂಗ್ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ಸಂಧರ್ಭ. ಈಗಿನಂತೆ ದೇಶದೆಲ್ಲೆಡೆಯೂ ಬಿಜೆಪಿಗೆ ಅಧಿಕಾರವಿರಲಿಲ್ಲ. ಆದರೆ ಅಧಿಕಾರಕ್ಕೆ ಬಂದ ರಾಜ್ಯಗಳಲ್ಲಿ ಏನನ್ನಾದರೂ ಹೊಸತನ್ನು ಮಾಡುವ, ಜನತೆಯ ಗಮನವನ್ನು ತಮ್ಮೆಡೆಗೆ ಸೆಳೆಯುವ ಉತ್ಸಾಹವಿತ್ತು. ಅದಕ್ಕೆ ತಕ್ಕಂತೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಚಿಂತಕರ ಚಾವಡಿಯ ಸಲಹೆ ಮಾರ್ಗದರ್ಶನವೂ ಇರುತ್ತಿತ್ತು. ಇಂಥಹ ಸಂಧರ್ಭದಲ್ಲಿಯೇ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ರಾಜನಾಥ್ ಸಿಂಗ್ ದೆಹಲಿಯ ಕಾಲೇಜು ವಿದ್ಯಾರ್ಥಿಗಳಿಗೆ ವಸ್ತ್ರನೀತಿ ಸಂಹಿತೆಯನ್ನು ಜಾರಿಗೆ ತಂದಿದ್ದರು. ದೇಶದಲ್ಲಿ ಪ್ರಥಮ ಭಾರಿಗೆ ಜಾರಿಗೆ ಬಂದ ಈ ನೀತಿ ಅಂದು ರಾಷ್ಟ್ರಾಧ್ಯಂತ ಚರ್ಚೆಗೊಳಪಟ್ಟಿತ್ತು. ಇಂತಹ ನಿಲುವಿನ ಹಿಂದೆ ಸಿಂಗ್ ರ ಒತ್ತಾಸೆಯೂ ಸೂಕ್ತವಾಗಿಯೇ ಇತ್ತು. ವಯಸ್ಸಿಗೆ ಬಂದ ವಿದ್ಯಾರ್ಥಿಗಳು ಅದರಲ್ಲೂ ವಿದ್ಯಾರ್ಥಿನಿಯರು ಕಾಲೇಜಿಗೆ ಬರುವಾಗ ತಮ್ಮ ಕಾಲು-ತೊಡೆ-ಹೊಟ್ಟೆ-ಬೆನ್ನು ಕಾಣಿಸುವಂತೆ ಬಟ್ಟೆ ಧರಿಸುವುದು, ಬಿಗ್ಗ ಬಿಗಿಯಾದ ಜೀನ್ಸ್ -ಟೀ ಶರ್ಟು ಧರಿಸಿ ಅಂಗಸೌಷ್ಟವ ತೋರಿಸುತ್ತಾ ಬಳುಕುತ್ತಾ ಬರುವುದು ವಿವಿಧ ರೀತಿಯ ಭಾವನೆಗಳಿಗೆ ಆಸ್ಪದ ನೀಡುತ್ತದೆ ಎಂಬುದೇ ವಸ್ತ್ರ ನೀತಿ ಸಂಹಿತೆಗೆ ಕಾರಣವಾಗಿತ್ತು. ಆಗ ದೇಶದ ಆಂಗ್ಲ ಪತ್ರಿಕೆಗಳು ಹಾಗೂ ಬೆರಳೇಣಿಕೆಯ ಸಂಖ್ಯೆಯಲ್ಲಿದ್ದ ದೃಶ್ಯ ವಾಹಿನಿಗಳು ಇಂತಹ ನೀತಿಸಂಹಿತೆಯೇ ತಪ್ಪು ಎಂಬಷ್ಟರ ಮಟ್ಟಿಗೆ ಚರ್ಚೆಯನ್ನು ತಂದಿದ್ದವು. ನಮ್ಮ ಯುವಜನರ ಮನಸ್ಥಿತಿಯೂ ಆ ಸಂಧರ್ಭಕ್ಕೆ ಪೂರಕವಾಗಿತ್ತು, ಅಷ್ಟೊತ್ತಿಗಾಗಲೇ ಜಾಗತೀಕರಣದ ಗಾಳಿ ದೇಶಕ್ಕೆ ಕಾಲಿಡಲಾರಂಬಿಸಿತ್ತು.!
ಹೌದು ಇದೆಲ್ಗ್ಯಾ ಈಗ್ಯಾಕೆ ನೆನಪಾಯ್ತು ಅಂತೀರಾ? ಕಳೆದ 2-3ದಿನಗಳಿಂದ ಕೋಮುಸೂಕ್ಷ್ಮ ಜಿಲ್ಲೆಯಾಗಿರುವ ದಕ್ಷಿಣ ಕನ್ನಡದ ಬಂಟ್ವಾಳದ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುರ್ಕಾ ಧರಿಸಿ ಬರುತ್ತಿದ್ದ ವಿದ್ಯಾರ್ಥಿನಿಯೊಬ್ಬಳಿಗೆ ಬುರ್ಕಾ ತೆಗೆದು ಬರುವಂತೆ ಸಹಪಾಠಿ ಬಿದ್ಯಾರ್ಥಿಗಳು ಸೂಚಿಸಿದ್ದಾರೆ. ಆದರೆ ಮರುದಿನ ತಲೆಗೆ ಸ್ಕಾರ್ಪ ಧರಿಸಿ ಬಂಧಿದ್ದಾಳೆ, ಅದನ್ನು ತೆಗೆದು ಬರದಿದ್ದರೆ ಹುಡುಗರು ಕೇಸರಿ ಪಟ್ಟಿ ಮತ್ತು ಕೇಸರಿ ಬಟ್ಟೆ ಧರಿಸಿ ಬರುವ ಮಾತನಾಡಿದ್ದಾರೆ. ಪರಿಸ್ಥಿತಿ ಹದಗೆಡುತ್ತಿರುವುದನ್ನು ಗಮನಿಸಿದ ಕಾಲೇಜಿನ ಪ್ರಾಂಶುಪಾಲರು ಸದರಿ ವಿದ್ಯಾರ್ಥಿನಿಯ ಪೋಷಕರನ್ನು ಕರೆಸಿ ಪರಿಸ್ಥಿತಿಯನ್ನು ಅರುಹಿ ಎಲ್ಲ ವಿದ್ಯಾರ್ಥಿಗಳಂತೆ ಬರದಿದ್ದರೆ ವರ್ಗಾವಣೆ ಪತ್ರ ಪಡೆಯುವಂತೆ ತಿಳಿಸಿದ್ದಾರೆ. ಆದರೆ ಅವರ ಮನವಿಗೆ ಕೇರ್ ಮಾಡದ ವಿದ್ಯಾರ್ಥಿನಿ ವಿಷಯವನ್ನು ದೊಡ್ಡದು (ಅದರ ಹಿಂದಿನ ಶಕ್ತಿಗಳು ಬೇರೆಯದೇ ಇರಬಹುದೇನೋ) ವಿಶ್ವ ವಿದ್ಯಾನಿಲಯಕ್ಕೆ ಹಾಗೂ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದಾರೆ.. ಈಗ ಈ ಬಗ್ಗೆ ಉತ್ತರಿಸುವಂತೆ ಕಾಲೇಜು ಪ್ರಾಂಶುಪಾಲರಿಗೆ ಮತ್ತು ಆಡಳಿತ ಮಂಡಳಿಗೆ ನೋಟೀಸು ಜಾರಿ ಮಾಡಲಾಗಿದೆ. ಇಂತಹ ಸಂಧರ್ಭದಲ್ಲಿ ನಮ್ಮ ಮುಂದಿರುವ ಪ್ರಶ್ನೆ ಇಷ್ಟೇ.. ಯಾವ ಸಂಸ್ಕೃತಿಯೇ ಇರಲಿ ಅದು ಅವರವರ ಖಾಸಗಿ ಜೀವನಕ್ಕೆ ಮಾತ್ರ ಸೀಮಿತವಾಗಿರಬೇಕೆ ವಿನಹ ಬಹಿರಂಗ ಪ್ರದರ್ಶನವಾಗಬೇಕಿಲ್ಲ ಅಲ್ಲವೇ? ಒಂದು ವೇಳೆ ಪ್ರದರ್ಶನವಾದರೂ ಅದು ಪ್ರಶ್ನಾತೀತವಾಗಿರಬೇಕೇ ವಿನಹ ಪ್ರಶ್ನೆಗೆ ಎಡೆ ಮಾಡುವಂತಿರಬಾರದು. ಅದರಲ್ಲೂ ಕೋಮು ಭಾವನೆಗಳು ಪದೇ ಪದೇ ಜಾಗೃತಾವಸ್ಥೆಯಲ್ಲಿರುವ ಪ್ರದೇಶಗಳಲ್ಲಿ ಎಚ್ಚರಿಕೆ ಅಗತ್ಯ. ಇಷ್ಟು ದಿನಗಳು ಇಲ್ಲದ ವಿವಾದ ಈಗೇಕೆ ಇದು ವಿವಾದ ರೂಪ ಪಡೆದುಕೊಂಡಿದೆ ಎಂಬ ಪ್ರಶ್ನೆಗೆ ಉತ್ತರವೂ ಅಲ್ಲೇ ಇದೆ..!
ಕಳೆದ 7-8ವರ್ಷಗಳಿಂದಲೂ ದ.ಕ. ಜಿಲ್ಲೆಯ ಪರಿಸ್ಥಿತಿ ಹದಗೆಟ್ಟಿರುವುದು ಯಾರಿಗೂ ತಿಳಿಯದ ವಿಷಯವೇನಲ್ಲ. ಇರಲಿ ಆ ವಿಷಯ ಮತ್ತೊಮ್ಮೆ ಚರ್ಚಿಸೋಣ., ಈಗ ಒಂದು ಘಟನೆಯನ್ನು ನಿಮ್ಮ ಮುಂದಿಡುತ್ತೇನೆ. ಮೊನ್ನೆ ಮೊನ್ನೆ ನಡೆದ ಸ್ವಾತಂತ್ರ್ಯ ದಿನಾಚರಣೆ ಉತ್ಸವದ ಸಂಧರ್ಭದಲ್ಲಿ ಭಾಗವಹಿಸಿದ್ದ ಶಾಲಾ ತಂಡದ ಬಾಲಕಿಯರು ದ್ವಜವಂದನೆ ಪರೇಡ್ ನಲ್ಲಿ ಭಾಗವಹಿಸಿದ್ದಾಗಲೂ ತಲೆಗೆ ಕಪ್ಪು ಸ್ಕಾರ್ಫ ಕಟ್ಟಿದ್ದರು.., ಈ ಬಗ್ಗೆ ಶಾಲಾ ಮುಖ್ಯೋಪಾಧ್ಯಾಯರನ್ನು ಪ್ರಶ್ನಿಸಿದಾಗ ಅವರು ಅಸಹಾಯಕತೆ ವ್ಯಕ್ತಪಡಿಸಿದರು. ಹಲವಾರು ಬಾರಿ ಗೌಸು ಮತ್ತು ಸ್ಕಾರ್ಫ ತೆಗೆಯುವಂತೆ ಸೂಚಿಸಿದರು ಸಹ ಕೇರ್ ಮಾಡದ ವಿದ್ಯಾರ್ಥಿನಿಯರು ಹಾಗೆಯೇ ಬಂದಿದ್ದರಂತೆ. ಇದನ್ನೆ ಯಾರಾದರೂ ಸೂಕ್ಷ್ಮವಾಗಿ ಗಮನಿಸಿದ್ದರೆ ಪರಿಸ್ಥಿತಿ ಏನಾಗುತ್ತಿತ್ತು? ಸ್ವಾತಂತ್ರ್ಯ ದಿನದಂದು ಸಾರ್ವಜನಿಕ ಕಾರ್ಯಕ್ರಮದಲ್ಲಿ ಕಪ್ಪು ಬಾವುಟ ಹಿಡಿದವರನ್ನು ಬಂದಿಸುವ ಪೊಲೀಸರು , ಮತ್ತು ಕಂದಾಯ ಇಲಾಖೆ ಇಂತಹ ಸನ್ನಿವೇಶಗಳಲ್ಲಿ ಮೌನವಹಿಸುವುದು ಯಾಕೆ? ಇನ್ನೊಂದು ಪ್ರಕರಣದಲ್ಲಿ ಕ್ರೈಸ್ತ ಧರ್ಮಿಯರ ಶಾಲೆಯಲ್ಲಿ ಹಣೆಗೆ ಕುಂಕುಮ ಇಡುವ ಮಕ್ಕಳು ಕಡ್ಡಾಯವಾಗಿ ಬಿಂದಿ ಇಡುವಂತೆ ಸೂಚಿಸಲಾಗಿದೆ, ಶಾಲೆಗೆ ಬಂದ ತಕ್ಷಣ ಬಿಂದಿ , ಹೂವು ತೆಗೆದಿರಿಸಿ, ದೇಶಗೀತೆ ಗೆ ಮುನ್ನ ಏಸು ಪ್ರಾರ್ಥನೆ ಮಾಡಿಸುವ ಶಾಲೆಗಳು ನಮ್ಮ ನಡುವೆಯೇ ಇವೆ. ಇದು ನಮ್ಮ ಭಾರತೀಯ ಸಂಸ್ಕೃತಿಯೇ? ಬಹುಸಂಖ್ಯಾತ ಹಿಂದುಗಳಿರುವ ದೇಶದಲ್ಲಿ ಪರಸ್ಪರರ ನಡುವೆ ಸೌಹಾರ್ಧಯುತವಾದ ವಾತಾವರಣವಿದೆ. ಇಲ್ಲಿ ಹೂವು ಮುಡಿಯುವುದು, ಬಿಂದಿ ಇಡುವುದು ಮತ್ತು ಇವೆರಡನ್ನು ಮಾಡದಿರುವುದಕ್ಕೆ ಯಾವುದೇ ಆಕ್ಷೇಪಣೆ ಇಲ್ಲ. ಇವು ತೀರಾ ಡಾಳಾಗಿ ಪ್ರದರ್ಶಿತವಾಗದ ವಿಚಾರಗಳು ಆದರೆ ವಸ್ತ್ರ ಧರಿಸುವ ವಿಚಾರವಿದೆಯಲ್ಲ ಇದು ಕಡ್ಡಾಯವಾಗಿ ಏಕರೂಪದ್ದಾಗಿರಬೇಕು ಅನಿಸುವುದಿಲ್ಲವೇ? ಶಾಲೆಗೆ ಬರುವವರೆಗೆ ಬುರ್ಕಾ ಧರಿಸಲು ಆಬ್ಯಂತರವಿಲ್ಲ ಆದರೆ ಶಾಲಾವರಣಕ್ಕೆ ಬಂದ ಮೇಲೇ ಬುರ್ಕಾ ತೆಗೆಯಲೇಬೇಕಾಗುತ್ತದೆ. ಇಲ್ಲದಿದ್ದರೆ ಸರ್ಕಾರದ ಸಮಾನ ಸಮವಸ್ತ್ರ ನೀತಿಗೆ, ಭಾವನೆಗಳಿಗೆ ಧಕ್ಕೆ ಯಾಗುತ್ತದೆ. ರಾಜ್ಯದ ಕಾಲೇಜುಗಳಲ್ಲಿ ಸಮವಸ್ತ್ರ ನೀತಿ ಇಲ್ಲ ಇಲ್ಲಿಯೂ ಶಿಕ್ಷಣದ ಎಲ್ಲ ಹಂತಗಳಲ್ಲು ಕಡ್ಡಾಯ ಸಮವಸ್ತ್ರನೀತಿ ಜಾರಿಗೆ ಬರಬೇಕಾಗುತ್ತದೆ. ನಮ್ಮ ಮುಸಲ್ಮಾನ ಭಾಂಧವರು ಸಹಾ ಈ ನಿಟ್ಟಿನಲ್ಲಿ ಸಹಕರಿಸಬೇಕಾದ ಅಗತ್ಯವಿದೆ. ಮುಸ್ಲಿಂ ಕಾನೂನು ಸಹಾ ಬುರ್ಕಾ ಸಂಸ್ಕೃತಿಯೇ ಭಾಗವೇ ವಿನಹ ಇದನ್ನು ಸಾರ್ವಜನಿಕವಾಗಿ ಪ್ರದರ್ಶಿಸಬೇಕೆಂದು ಎಲ್ಲಿಯೂ ಹೇಳುವುದಿಲ್ಲ. ವಿವಾದ ಕುರಿತಂತೆ ಗಮನ ಸೆಳೆದಾಗ ಮುಸ್ಲಿಂ ಬುದ್ದಿ ಜೀವಿ ಖ್ಯಾತ ಲೇಖಕ ಮೌಲಾನಾ ಮೊಹಿಯುದ್ದೀನ್ ಖಾನ್ ಸಹಾ ಇದನ್ನೆ ಹೀಗೆ ಹೇಳಿದ್ದಾರೆ "Burqa is not a Part of Islam. It is a part of culture that the people of subcontinent havebeen folloing since ages. Nobody can enforce a dress code in the name of Islam. It is categorically Un-Islamic ".
ಇನ್ನೊಂದು ವಿಚಾರ ರಾಜ್ಯ ಸರ್ಕಾರ ಈಗಾಗಲೇ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಮತ್ತು ಶಿಕ್ಷಕರಿಗೆ ಸಮವಸ್ತ್ರ ನೀತಿ ಜಾರಿಗೆ ತರಲು ನಿರ್ದರಿಸಿದೆ. ಮುಂದಿನ ಶೈಕ್ಷಣಿಕ ಸಾಲಿನಿಂದ ಇಲ್ಲವೇ ಈ ವರ್ಷದ ಅಂತ್ಯದಿಂದಲೇ ಈ ನೀತಿ ಜಾರಿಯಾದರೆ ಅಚ್ಚರಿಯಿಲ್ಲ. ಮುಖ್ಯವಾಗಿ ಶಾಲಾ ಶಿಕ್ಷಕರಿಗೆ ಸಮವಸ್ತ್ರ ನೀತಿ ಜಾರಿಯಾಗಬೇಕಾಗಿದೆ, ವಿದ್ಯಾರ್ಥಿಗಳು ಶಿಕ್ಷಕರನ್ನೇ ವಿಚಾರ ಚಿಂತನೆಗಳಲ್ಲಿ , ಸಮವಸ್ತ್ರ ಧರಿಸುವ ವಿಧಾನಗಳಲ್ಲಿ ಅನುಸರಿಸುವ ಗಮನಿಸುವ ಸನ್ನಿವೇಶಗಳಿರುವುದರಿಂದ ಶಿಕ್ಷಕರು ಶಿಸ್ತಿನಿಂದ ಶಾಲೆಗಳಿಗೆ ಬರಬೇಕಾಗುತ್ತದೆ. ಇತ್ತೀಚೆಗೆ ಶಾಲಾ ಕಾರ್ಯಕ್ರಮಕ್ಕೆ ಭೇಟಿ ನೀಡಿದ ಸಂಧರ್ಭ ಡಿ ಇಡಿ/ಬಿಇಡಿ ಪ್ರಶಿಕ್ಷಣಾರ್ಥಿಗಳಿಬ್ಬರು ರೌಡಿ ಗ್ಯಾಂಗಿನ ಸದಸ್ಯರಂತೆ ಜುಟ್ಟು ಬಿಟ್ಟುಕೊಂಡು ಫ್ಯಾಶನ್ ಶರ್ಟು-ಪ್ಯಾಂಟು ಹಾಕಿಕೊಂಡು ವಿದ್ಯಾರ್ಥಿನಿಯರ ಹೆಗಲ ಮೇಲೆ ಕೈಹಾಕಿಕೊಂಡು ಓಡಾಡುತ್ತಿದ್ದರು. ಇನ್ನು ಕೆಲವು ಶಾಲೆಗಳಿಗೆ ಭೇಟಿ ನೀಡಿದಾಗ ಶಿಕ್ಷಕ/ಶಿಕ್ಷಕಿಯರೇ ಅತಿಯಾದ ವೇಷಭೂಷಣ ಮಾಡಿಕೊಂಡು ಡಾಳಾಗಿ ಕಾಣುತ್ತಿದ್ದರು. ತಲೆಗೆ ಕ್ಯಾಪು, ಕೈಗೆ ದಾರ, ಕೊರಳಿಗೆ ದೊಡ್ಡ ಡಾಲರ್ (ಸಿನಿಮಾ ಹೀರೋಗಳು/ಪಡ್ಡೆಗಳು ಹಾಕುವಂತಹದ್ದು) 8ಜೇಬಿನ ಪ್ಯಾಂಟು, ಹೆಗಲಮೇಲಿನ ಪಟ್ಟಿಯ ಶರ್ಟು, ಕಣ್ಣಿಗೆ ಸ್ಟ್ಯಲು ಗ್ಲಾಸು,ಎದ್ಸು ಕಾಣುವ ಲಿಪ್ ಸ್ಟಿಕ್, ಮೆತ್ತಿಕೊಂಡಂತಿರುವ ಪೌಡರು, ಚೂಡಿದಾರ ಅಲಿಯಾಸ್ ಪಂಜಾಬಿ ಡ್ರೆಸ್, ತೊಳಿಲ್ಲದ ರವಿಕೆ ಇವನ್ನೆಲ್ಲ ಶಾಲೆಗೆ ಶಿಕ್ಷಕ/ಶಿಕ್ಷಕಿಯರು ಧರಿಸಿ ಬಂದರೆ ಮಕ್ಕಳ ಪರಿಸ್ಥಿತಿಯಾದರೂ ಏನಾಗಬೇಕು ಹೇಳಿ? ಅದಕ್ಕೆಂದೇ ಹೇಳಿದ್ದು ಶಿಕ್ಷಣ ಕ್ಷೇತ್ರದಲ್ಲಿ ಕಡ್ಡಾಯವಾಗಿ ಸಮಸ್ತರಿಗೂ ಏಕರೂಪ ಸಮವಸ್ತ್ರ ಸಂಹಿತೆ ಜಾರಿಯಾಗಬೇಕು.
ಸಧ್ಯ ಬಂಟ್ವಾಳದಲ್ಲಿ ಉದ್ಭವಿಸಿರುವ ಸಮಸ್ಯೆಯನ್ನು ಜಿಲ್ಲಾಡಳಿತ ಸೂಕ್ಷ್ಮವಾಗಿ ನಿಭಾಯಿಸಿ ಸಂಬಂಧಿತರಿಗೆ ತಿಳುವಳಿಕೆ ಹೇಳಬೇಕು. ಈ ವಿಚಾರದಲ್ಲಿ ಯಾವುದೇ ಧಾರ್ಮಿಕ ವಿಚಾರಗಳಿಗೆ ಆದ್ಯತೆ ನೀಡಬೇಕಾದ ಮತ್ತು ಓಲೈಸಬೇಕಾದ ಅಗತ್ಯವೂ ಇಲ್ಲ. ಯಾರದ್ದು ಸರಿ ಯಾರದ್ದು ತಪ್ಪು ಎಂಬ ವಿಮರ್ಶೆಯೂ ಅನಗತ್ಯ, ಏಕೆಂದರೆ ವಿಚಾರ ಸಮರ್ಥನೆಗೆ ಅವರವರದ್ದೇ ನೆಲೆಗಟ್ಟಿನಲ್ಲಿ ತಾತ್ವಿಕ ಅಭಿಪ್ರಾಯಗಳು ಇರುತ್ತವೆ. ಅವು ಸಮಸ್ಯೆ ಪರಿಹಾರದ ಬದಲು ಉಲ್ಭಣವಾಗುವಂತೆ ಮಾಡಬಹುದಲ್ಲವೇ? ಇಲ್ಲದಿದ್ದಲ್ಲಿ ಇದು ರಾಜ್ಯಾಧ್ಯಂತ ಹಬ್ಬಿ ಇನ್ನೊಂದು ದೊಡ್ಡ ತಲೆನೋವಾಗುವುದು ಖಚಿತ.ಈ ವಿಚಾರದಲ್ಲಿ ನಿಮ್ಮ ಅನಿಸಿಕೆಗಳನ್ನು ಹೇಳಲು ನೀವೂ ಮುಕ್ತರು. ಒಂದು ಆರೋಗ್ಯವಂತ ಚರ್ಚೆಯೂ ಸಹಾ ಉತ್ತಮ ವಾತಾವರಣಕ್ಕೆ ನಾಂದಿಯಾಗ ಬಹುದು.

Sunday, August 9, 2009

ತಿರುವಳ್ಳುವರ್ ಪ್ರತಿಮೆ ಸ್ಥಾಪನೆ ಯಾಕಿಷ್ಟು ಗೋಂದಲ?

ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಬಿಸಿಬಿಸಿ ವಾತಾವರಣ. ರಾಜ್ಯ ವಿಧಾನಸಭೆ ಅಧಿವೇಶನ ಮುಗಿಯುತ್ತಿದ್ದಂತೆ ರಾಜ್ಯದ ಜನತೆಯ ಗಮನ ಸೆಳೆದದ್ದು ದೇಶದ ಮಹಾನ್ ದಾರ್ಶನಿಕ, ಕವಿ, ಸಂತ ತಿರುವಳ್ಳುವರ್ ಪ್ರತಿಮೆ ಸ್ಥಾಪನೆಯ ವಿಚಾರ.!
ಹೌದು ಪ್ರತಿಮೆ ಸ್ಥಾಪನೆಯ ವಿಚಾರ ಯಾಕಿಷ್ಟು ಕಗ್ಗಂಟಾಗಬೇಕು? ಪ್ರತಿಮೆ ಸ್ಥಾಪಿಸುವುದರಿಂದ ಆಗುವ ಅನುಕೂಲಗಳೇನು? ಅನಾನುಕೂಲಗಳೇನು? ಉಪಯೋಗ ಯಾರಿಗೆ ? ಪ್ರತಿಮೆ ಸ್ಥಾಪನೆಗೆ ವಿರೋಧ ಯಾಕೆ? ಅಷ್ಟಕ್ಕೂ ಈ ತಿರುವಳ್ಳುವರ್ ಯಾರು? ಎಂಬೆಲ್ಲ ಪ್ರಶ್ನೆಗಳು ನಿಮ್ಮನ್ನು ಕಾಡಿರಲಿಕ್ಕೆ ಸಾಕು. ಸರಿ ಹಾಗಾದರೆ ವಿಚಾರಕ್ಕೆ ಬರೋಣ ಅಂತೀರಾ. ಆಗಲಿ ರಾಜ್ಯದಲ್ಲಿ ತಿರುವಳ್ಳುವರ್ ಪ್ರತಿಮೆ ಸ್ಥಾಪನೆ ವಿಚಾರ ಹೊಸದೇನಲ್ಲ, ಕಳೆದ ೧೮-20ವರ್ಷಗಳಿಂದ ಇಂತಹದ್ದೊಂದು ಪ್ರಸ್ತಾಪವಿತ್ತು. ದೇಶದ ಮಹಾನ್ ಸಂತರು, ದಾರ್ಶನಿಕರ ಶ್ರೇಷ್ಠರ ಪೈಕಿ ಒಬ್ಬರೆನಿಸಿಕೊಳ್ಳುವ ತಿರುವಳ್ಳುವರ್ ಬರೆದ ಪ್ರಸಿದ್ದ ಕೃತಿ ತಿರುಕ್ಕುರಲ್ ಜಗತ್ತಿನ ಹಲವು ಭಾಷೆಗಳಿಗೆ ಅನುವಾದಗೊಂಡಿದೆ. ನಮ್ಮಲ್ಲಿ ಹಲವು ಸಂತರು, ತತ್ವ ಪದಗಳನ್ನುಪ್ರಚುರ ಪಡಿಸಿದಂತೆ ಸರ್ವಜ್ಙ ಬದುಕಿನ ತತ್ವ ಸಿದ್ದಾಂತಗಳನ್ನು ಜಗತ್ತಿಗೆ ಸಾರಿದಂತೆ ತಿರುವಳ್ಳುವರ್ ಕೂಡ ಬಡತನ, ಸಂಪತ್ತು, ಅದೃಷ್ಠ, ಅವಿವೇಕತನ, ಗೆಳೆತನ, ಮಾತು, ನ್ಯಾಯ, ಅವಕಾಶ, ಬುದ್ದಿವಂತಿಕೆ, ಒಳ್ಳೆಯತನ, ಪ್ರೀತಿ, ಸತ್ಯ, ಸಸ್ಯಾಹಾರ, ಪಾಪ, ಸಾಮರಸ್ಯ, ಕುಟುಂಬ ಮತ್ತು ಸದ್ಗುಣ ಹೀಗೆ ೧೭ ವಿಚಾರಗಳ ಬಗೆಗೆ ವಿಸ್ತ್ರತವಾಗಿ ವ್ಯಾಖ್ಯಾನ ಮಾಡಿದ್ದಾರೆ. ಬೈಬಲ್, ಕುರಾನ್, ಭಗವದ್ಗೀತೆಗಳ ರೀತಿ ಈ ತಿರುಕ್ಕುರಲ್ ಒಂದು ಪ್ರಮುಖ ಗ್ರಂಥ. ತಿರುವಳ್ಳುವರ್ ಯಾವ ಕಾಲದಲ್ಲಿ ಬದುಕಿದ್ದ ಎಂಬ ಬಗ್ಗೆ ಎಲ್ಲಿಯೂ ಸ್ಪಷ್ಠ ಉಲ್ಲೇಖಗಳು ಸಿಗುತ್ತಿಲ್ಲವಾದರೂ ಲಭ್ಯ ಮಾಹಿತಿಗಳ ಪ್ರಕಾರ 2ನೇ ಶತಮಾನದಲ್ಲಿ ದಕ್ಷಿಣ ಭಾರತದಲ್ಲಿ ಜೀವಿಸಿದ್ದ ಎಂಬ ಮಾಹಿತಿಯಿದೆ. ತಮಿಳುನಾಡಿನಲ್ಲಿ ಪಾಂಡ್ಯರು ಆಡಳಿತ ನಡೆಸಿದ ಸಂಧರ್ಭದಲ್ಲಿ ಕವಿಗಳಿಗೆ ಸಾಹಿತಿಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಮತ್ತು ಪ್ರೋತ್ಸಾಹ ಸಿಕ್ಕಿತ್ತು. ಹಾಗಾಗಿ ಅದೇ ಅವಧಿಯಲ್ಲಿ ತಿರುವಳ್ಳುವರ್ ಬದುಕಿದ್ದಿರಬಹುದು ಎಂದೂ ಹೇಳಲಾಗುತ್ತದೆ. ತಿರುವಳ್ಳುವರ್ ತಮಿಳುನಾಡಿನ ಮೈಲಾಪುರಂ ನಲ್ಲಿ ಜನಿಸಿ ಮಧುರೈಗೆ ತೆರಳಿ ಸಾಧನೆಗೈಯುತ್ತಾರೆ, ಮುಂದೆ ಚೆನ್ನೈನಲ್ಲಿ ನೆಲೆಸಿರುತ್ತಾರೆ ಎಂಬ ಐತಿಹ್ಯವೂ ಇದೆ. ಇವರ ಪತ್ನಿ ವಾಸುಕಿ ಎಂದು ಇವರದ್ದು ಅಂತರ್ಜಾತಿಯ ವಿವಾಹವು ಆಗಿದೆ ಹಾಗಾಗಿ ಜಾತಿ ಮತಗಳ ಎಲ್ಲೆಯನ್ನು ಮೀರಿದ ಮಹಾನ್ ದಾರ್ಶನಿಕ ಎಂದು ಬಣ್ಣಿಸಲಾಗುತ್ತದೆ. ಈಗ ತಮಿಳುನಾಡಿನ ಮುಖ್ಯಮಂತ್ರಿಯಾಗಿರುವ ಕರುಣಾನಿಧಿ ಕನ್ಯಾಕುಮಾರಿಯಲ್ಲಿ 133ಅಡಿ ಎತ್ತರದ ತಿರುವಳ್ಳುವರ್ ಪ್ರತಿಮೆಯನ್ನು ಸ್ಥಾಪನೆ ಮಾಡಿದ್ದಾರೆ. ತಿರುವಳ್ಳುವರ್ ರ ಆತಿಕರ್ಮ ಎಂಬ ಕೃತಿಯ 133ಅದ್ಯಾಯಗಳನ್ನು ಪ್ರತಿನಿಧಿಸುವಂತೆ ಈ ಎತ್ತರದ ಮೂರ್ತಿಯನ್ನು ಸ್ಥಾಪಿಸಲಾಗಿದೆಯಂತೆ. ಸಧ್ಯ ರಾಜ್ಯದ ಕೋಲಾರ ಜಿಲ್ಲೆಯಲ್ಲೂ ಇವರ ಮೂರ್ತಿ ಪ್ರತಿಷ್ಠಾಪಿತವಾಗಿದೆ. ಹೀಗಿರುವಾಗ ಬೆಂಗಳೂರಿನ ಹಲಸೂರಿನಲ್ಲಿ ಪ್ರತಿಮೆಸ್ಥಾಪನೆಗೆ ಏಕಿಷ್ಟು ವಿರೋಧ ಎಂದು ತಿಳಿಯೋಣ, ಇದು ಉಪಚುನಾವಣೆಯ ಸಂಧರ್ಬ, ಹಾಗೂ ಸಧ್ಯದಲ್ಲಿಯೇ ಬೆಂಗಳೂರಿನಲ್ಲಿ ಮಹಾನಗರಪಾಲಿಕೆಯ ಚುನಾವಣೆಗಳು ಸನಿಹದಲ್ಲಿವೆ. ಈ ಸಂಧರ್ಭ ಏಕಾಏಕಿ ತಮಿಳುನಾಡಿಗೆ ಭೇಟಿ ನೀಡಿದ ಸಿಎಂ ಯಡಿಯೂರಪ್ಪ, ಕರುಣಾನಿಧಿಯವರನ್ನು ಭೇಟಿಯಾಗಿ ತಮಿಳುನಾಡಿನಲ್ಲಿ ಸರ್ವಜ್ಞ ನ ಮೂರ್ತಿ ರಾಜ್ಯದಲ್ಲಿ ತಿರುವಳ್ಳುವರ್ ಪ್ರತಿಮೆ ಸ್ಥಾಪಿಸುವ ಪ್ರಸ್ತಾವ ಮಾಡಿದರು. ಮಾಡಲಿ ಬೇಡ ಅಂತ ಅಲ್ಲ ಆದರೆ ಪ್ರತಿಮೆ ಸ್ಥಾಪನೆ ವಿಚಾರ ಖಂಡಿತವಾಗಿ ಸಾರ್ವತ್ರೀಕರಣ ವಾಗಬೇಕಿರಲಿಲ್ಲ ಅಲ್ಲವೇ? ಪ್ರತಿಮೆ ಸ್ಥಾಪನೆ ಸಂಬಂಧ ಮಾದ್ಯಮಗಳಲ್ಲಿ ವ್ಯಾಪಕವಾಗಿ ಪ್ರಚಾರ ಸಿಗುವಂತೆ ನೋಡಿಕೊಂಡು ಪ್ರತಿಮೆ ಸ್ಥಾಪಿಸ ಹೊರಟರೆ ಏನಾಗುತ್ತದೆ ಇದರ ಹಿಂದಿನ ರಾಜಕೀಯ ಉದ್ದೇಶ ಯಾರಿಗೂ ತಿಳಿಯದ್ದೇನಲ್ಲ. ವಿರೋಧ ಪಕ್ಷಗಳ ಮುಖಂಡರುಗಳು ಕೂಡ ತುಟಿಪಿಟಕ್ಕೆನ್ನದೇ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ನೋಡಿ ಕನ್ನಡ ಅಂದರೆ ಅದು ಅನ್ನದ ಭಾಷೆ, ಅದು ನಮ್ಮ ಭಾವನಾತ್ಮಕ ಸಂಗತಿ ಕೂಡಾ. ಇಲ್ಲಿ ಪ್ರತಿಮೆ ಸ್ಥಾಪಿಸುವುದು, ಸಮಾನ ಗೌರವ ನೀಡುವುದು, ಆದರ ಸ್ಥಾಪನೆಯಿಂದ ಆಗುವ ಅನುಕೂಲ/ಅನಾನುಕೂಲ ಒತ್ತಟ್ಟಿಗಿರಲಿ. ಮೊದಲನೆಯದಾಗಿ ತರಾತುರಿಯಲ್ಲಿ ಪ್ರತಿಮೆ ಸ್ಥಾಪನೆ ಸಧ್ಯದ ಪರಿಸ್ಥಿತಿಯಲ್ಲಿ ಸೂಕ್ತವಾಗಿರಲಿಲ್ಲ,ಹೋಗಲಿ ಕಳೆದ 20ವರ್ಷಗಳಿಂದ ವಿವಾದಾತ್ಮಕವಾಗಿದ್ದ ಪ್ರತಿಮೆ ಸ್ಥಾಪನೆ ವಿಚಾರ ಬಗೆಹರಿಯಿತೆಂದೇ ಸಂತಸಪಡೋಣ, ಆದರೆ ಅದಕ್ಕೆ ವ್ಯಾಪಕ ಪ್ರಚಾರ ಸಿಗುವಂತೆ ನೋಡಿಕೊಂಡ ಸರ್ಕಾರ ಪ್ರತಿಮೆ ಸ್ಥಾಪನೆ ವಿಚಾರವನ್ನು ಸಾರ್ವತ್ರೀಕರಣ ಮಾಡುವ ಅವಶ್ಯಕತೆ ಇತ್ತೇ? ರಾಜ್ಯದ ವಿರುದ್ದ ಸದಾ ದುಂಡಾವರ್ತನೆ ನಡವಳಿಕೆಯನ್ನೇ ಪ್ರದರ್ಶಿಸುತ್ತಿರುವ ತಮಿಳುನಾಡು, ತಿರುವಳ್ಳುವರ್ ಪ್ರತಿಮೆ ಸ್ಥಾಪನೆ ಮಾಡುವುದರಿಂದ ರಾಜ್ಯದ ಜೊತೆ ಸಹಕಾರ ಮನೋಭಾವನೆ ಹೊಂದುತ್ತದೆ ಎಂಬುದೇ ಅಪನಂಬಿಕೆ ಅಲ್ಲವೇ? ಶತಶತಮಾನಗಳಿಂದ ತಮಿಳು ಮತ್ತು ಕನ್ನಡಿಗರ ನಡುವೆ ಕಾವೇರಿ ನದಿ ನೀರಿನ ಹಂಚಿಕೆ ವ್ಯಾಜ್ಯ ಇನ್ನು ಬಗೆಹರಿದಿಲ್ಲ, ಹೊಗೆನ್ಕಲ್ ನಡುಗಡ್ಡೆಯ ಜಂಟಿ ಸರ್ವೆಗೆ ತಮಿಳುನಾಡು ಒಪ್ಪಿಲ್ಲ, ಕೇಂದ್ರ ಸರ್ಕಾರ ಕನ್ನಡಕ್ಕೆ ನೀಡಿದ ಶಾಸ್ತ್ರೀಯ ಭಾಷೆ ಸ್ಥಾನಮಾನಕ್ಕೆ ತೊಡರುಗಾಲಾದ ತಮಿಳುನಾಡು ಸುಪ್ರೀಂ ಕೋರ್ಟ ನಲ್ಲಿ ಅರ್ಜಿಸಲ್ಲಿಸಿದೆ, ಬೆಂಗಳೂರನ್ನು ಕೇಂದ್ರಾಢಲಿತ ಪ್ರದೇಶ ಮಾಡಿ ಕೇಂದ್ರದ ಪೋಲೀಸ್ ಠಾಣೆ ತೆಗೆಯಿರಿ ಎಂದು ಕಪ್ಪು ಬಾವುಟ ಪ್ರದರ್ಶನ ಮಾಡುವ ತಮಿಳರ ವರ್ತನೆ ಸರಿಹೋಗಿಲ್ಲ, ರಾಜ್ಯದ ಪಾಲಿಗೆ ಬರಬೇಕಾದ ಆಟೋಮೊಬೈಲ್ ಸಂಶೋಧನಾ ಕೇಂದ್ರಗಳು, ಅನೇಕ ಉದ್ದಿಮೆಗಳು , ಕಾರಿಡಾರು ಯೋಜನೆಗಳು ರೈಲುಯೋಜನೆಗಳು, ತಂತ್ರಜ್ಞಾನ ಪಾರ್ಕುಗಳು ಹೀಗೆ ದಕ್ಕಿಸಿಕೊಂಡ ತಮಿಳುನಾಡು ವಂಚಿಸಿದ್ದು ಕಣ್ಣೆದುರಿಗಿರುವ ಸತ್ಯ ಹಾಗೆಂದು ತಿರುವಳ್ಳುವರ್ ಪ್ರತಿಮೆ ಸ್ಥಾನೆ ವಿಚಾರವನ್ನು ಇದಕ್ಕೆ ಥಳುಕು ಹಾಕಬೇಕೆ ಎಂಬ ಪ್ರಶ್ನೆ ಬರುವುದು ಸಹಜ. ಪ್ರತಿಮೆ ವಿಚಾರ ರಾಜಕೀಯ ಕಾರಣಗಳಿಗಾಗಿ ಸಾರ್ವತ್ರೀಕರಣವಾದಾಗ ಈ ಪ್ರಶ್ನೆಗಳನ್ನು ಎತ್ತುವುದು ಅನಿವಾರ್ಯವಲ್ಲವೇ? ಇನ್ನೊಂದು ವಿಚಾರ ಕಳೆದ 10-15ವರ್ಷಗಳಲ್ಲಿ ಪ್ರತಿಮೆ ಸ್ಥಾಪಿಸುವುದರಿಂದ ಏನೇನು ತೊಡಕುಗಳಾಗಿವೆ ಎಂಬುದು ಮಾಧ್ಯಮ ಮಿತ್ರರಿಗೆ ತಿಳಿಯದ ವಿಚಾರವೇನಲ್ಲ, ಹಾಗಿದ್ದಾಗ್ಯೂ ಒಂದು ಪ್ರತಿಮೆ ಸ್ಥಾಪಿಸುವುದರಿಂದ ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಂಡಂತಾಯಿತೆ ವಿನಹ ಸಮಾನ ಗೌರವ ನೀಡಿದಂಗೆ ಆಗಲಿಲ್ಲ ಏನಂತೀರಿ?

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...