Sunday, April 25, 2010

ಪಂಚಾಯ್ತಿ ಎಲೆಕ್ಷನ್ ಅಂದ್ರೆ ಸುಮ್ನೇನಾ?

ಮೊನ್ನೆ ಮೊನ್ನೆಯಷ್ಟೇ ಬೆಂಗಳೂರಿನ ಬಿಬಿಎಂಪಿ ಮಹಾಸಮರ ಅಂತ್ಯಗೊಂಡಿದೆ, ಬೆನ್ನಲ್ಲೇ ಗ್ರಾಮ ಪಂಚಾಯತ್ ಚುನಾವಣೆ ಎಂಬ ಮಹಾ ಸಮರ ಎದ್ದು ನಿಂತಿದೆ. ಎಂಪಿ ಚುನಾವಣೆ, ಎಂಎಲ್ ಎ ಚುನಾವಣೆ ಎಲ್ಲವನ್ನೂ ಮೀರಿದ ಪ್ರಾಶಸ್ತ್ಯ ಈ ಚುನಾವಣೆಗಿದೆ. ಚುನಾವಣೆಯ ಹೊಸ್ತಿಲಲ್ಲಿ ನಿಂತು ನೋಡುವುದಾದರೆ ಯಾಕೆ ಗ್ರಾಮ ಪಂಚಾಯ್ತಿ ಚುನಾವಣೆಗೆ ಮನ್ನಣೆ? ಇದರ ಮಹತ್ವ ಏನು? ಏನೆಲ್ಲಾ ಬದಲಾವಣೆಗಳು ಈ ಪಂಚಾಯ್ತಿಗಳಿಂದ ಆಗಿದೆ? ಕಳೆದ 2-3 ಟರ್ಮುಗಳಲ್ಲಿ ಈ ಚುನಾವಣೆಗಳಿಗೆ ಸಿಗದಿದ್ದ ಮಹತ್ವ ಈಗ ಯಾಕೆ ಬಂದಿದೆ? ಎಂಬೆಲ್ಲಾ ಪ್ರಶ್ನೆಗಳು ಸಹಜ ಯಾಕೆ ಗೊತ್ತಾ?
ಭಾರತ ಹಳ್ಳಿಗಳ ದೇಶ, ಇಲ್ಲಿ ಜಗತ್ತಿನ ಬಹು ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಅಸ್ತಿತ್ವದಲ್ಲಿದೆ. ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ ಪ್ರಜೆಯೇ ಪ್ರಭುವೂ ಹೌದು. ಹಳ್ಳಿಯಿಂದ ದಿಲ್ಲಿಗೆ ಹೋಗುವ ಪುಡಾರಿಗಳು ತಮ್ಮ ಹಿಂಬಾಲಕರಿಗೆ, ಕಾರ್ಯಕರ್ತರಿಗೆ ಜಾಗ ಮಾಡಿಕೊಡಲು ಅವಕಾಶ ಒದಗಿಸುವ ಅತ್ಯುತ್ತಮ ವೇದಿಕೆಯೂ ಸಹಾ ಗ್ರಾಮ ಪಂಚಾಯ್ತಿಗಳೇ ಆಗಿವೆ. ಹಿಂದೆಲ್ಲಾ ಹಳ್ಳಿಗಳಲ್ಲಿ ಅಶ್ವಥ್ತ ಕಟ್ಟೆ ಮೇಲೆ ಕುಳಿತು ನ್ಯಾಯ ಮಾಡುವ ಊರಗೌಡ, ಪಟೇಲ, ಶ್ಯಾನುಬೋಗರು ಇದ್ದರು. ಆದರೆ ಕಾಲ ಬದಲಾದಂತೆ ಹಳ್ಳಿಗಳಿಗೂ ಆಧುನೀಕರಣದ ಗಾಳಿ ಬೀಸಿ 'ಆವಯ್ಯನ ಮಾತು ಯಾಕ್ ಕೇಳಬೇಕು? ಅವನೇನು ದೊಡ್ಡಕೋಲಾ? ಎಂಬ ಧಾಟಿಯ ಮಾತುಗಳು, ಅಶಿಸ್ತಿನ ನಾಗರೀಕತೆ ಪ್ರದರ್ಶಿಸುವ ಮಂದಿ, ಅತ್ತ ಜಮೀನಿನಲ್ಲಿ ಗೆಯ್ಯದೇ ಇತ್ತ ಬೇರೆ ಕಡೆಯೂ ದುಡಿಯದೇ ಅವರಿವರ ಮಾತು,ಕೊಂಕುತನ ಬೆಳೆಸಿಕೊಂಡು ವೇಸ್ಟ್ ಬಾಡಿಗಳಾಗಿ ಮನೆಯವರಿಗೂ ಹೊರೆಯಾಗಿ ಕಾಲ ಕಳೆಯುವ ಮಂದಿ ಇವತ್ತು ನಮ್ಮ ಹಳ್ಳಿಗಳಲ್ಲಿ ಹೆಜ್ಜೆಗೂ ಕಾಣ ಸಿಗುತ್ತಾರೆ. ಮೈಗಳ್ಳತನ, ಪುಡಾರಿತನ ಮೇಳೈಸಿ ಹಳ್ಳಿಗಳ ನೆಮ್ಮದಿಯೂ ಕೆಟ್ಟು ಕೆರ ಹಿಡಿದಿದೆ. ಒಂದು ಶಾಲೆಯಲ್ಲಿ ಸಿಗುವ SDMC ಅಧ್ಯಕ್ಷ ಪದವಿಯನ್ನು, ಗ್ರಾಮ ಪಂಚಾಯ್ತಿಯ ಅಧ್ಯಕ್ಷ-ಸದಸ್ಯ ಸ್ಥಾನವನ್ನು ಪ್ರಧಾನಿ ಸ್ಥಾನ, ರಾಷ್ಟ್ರಪತಿ ಸ್ಥಾನದ ಮಟ್ಟಕ್ಕೆ ಕಲ್ಪಿಸಿಕೊಂಡು ಸದುದ್ದೇಶಕ್ಕಿಂತ ಸ್ವಾರ್ಥ ಬೆರೆತ ರಾಜಕೀಯ ಮಾಡುವುದನ್ನು ಹಳ್ಳಿಗಳಲ್ಲಿ ಕಾಣಬಹುದು. ಇಂತಹದ್ದೊಂದು ಪುಡಾರಿತನ ಇಡೀ ಗ್ರಾಮದ ಜನರಿಗೆ ಅನುಕೂಲ ಕಲ್ಪಿಸುವ ಬದಲು ಅಶಾಂತಿಗೆ ಕಾರಣವಾಗಿದೆ, ಪಕ್ಷರಾಜಕಾರಣ ಹೆಡೆಯಾಡಲಾರಂಬಿಸಿದೆ. ಅಕ್ಕಪಕ್ಕದ ಮನೆಯವರಿರಲಿ, ಅಣ್ಣ-ತಮ್ಮ-ಅಪ್ಪ ನೇ ಪರಸ್ಪರರ ವಿರುದ್ದ ಕತ್ತಿಮಸೆಯಲು ಈ ಗ್ರಾಮ ಪಂಚಾಯತ್ ಚುನಾವಣೆ ಅವಕಾಶ ಕಲ್ಪಿಸಿದೆ ಇದು ಈ ದೇಶದ ದುರಂತ ಸ್ವಾಮಿ. ಇರಲಿ ಈ ಪಂಚಾಯ್ತಿಳ ಅಸ್ತಿತ್ವ ಹೇಗೆ ಬಂತು ? ಇದರ ಅನುಕೂಲವೇನು? ಆದರೆ ಇದು ಹೇಗೆ ದಾರಿ ತಪ್ಪಿದೆ ಅನ್ನೊದನ್ನು ಸಂಕ್ಷಿಪ್ತವಾಗಿ ಹೇಳಿ ಬಿಡ್ತೀನಿ.
ನೋಡಿ ಈ ಪಂಚಾಯತ್ ರಾಜ್ ವ್ಯವಸ್ಥೆ ದಕ್ಷಿಣ ಏಷ್ಯಾದ ರಾಷ್ಟ್ರಗಳ ಒಂದು ಸ್ಥಳೀಯ ಸರ್ಕಾರದ ಆಡಳಿತ ವ್ಯವಸ್ಥೆ. ಸಧ್ಯ ಭಾರತ, ಪಾಕೀಸ್ತಾನ ಮತ್ತು ನೇಪಾಳ ರಾಷ್ಟ್ರಗಳಲ್ಲಿ ಪ್ರಮುಖವಾಗಿ ಅಸ್ತಿತ್ವದಲ್ಲಿವೆ. ಪಂಚಾಯತ್ ಅಂದ್ರೆ 'ಪಂಚ' ಐದು ಮಂದಿಯ 'ಯಾತ್' ಸದನ ಎಂದರ್ಥ. ಗ್ರಾಮೀಣ ಪ್ರದೇಶಗಳ ಸರ್ವತೋಮುಖ ಅಭಿವೃದ್ದಿಗೆ ಮಹತ್ಮಾಗಾಂದಿಯವರು ಕಂಡ ಸ್ವರಾಜ್ಯ ಕನಸಿನ ಫಲವೇ ನಮ್ಮಲ್ಲಿರುವ ಪಂಚಾಯತ್ ರೂಪದ ಆಡಳಿತ. 1950-60ರ ದಶಕದಲ್ಲಿ ದೇಶದ ಬೇರೆ ಬೇರೆ ರಾಜ್ಯಗಳಲ್ಲ ಪಂಚಾಯತ್ ಅಸ್ತಿತ್ವದಲ್ಲಿವೆ. ಸಾಮಾಜಿಕ ನ್ಯಾಯ, ಆರ್ಥಿಕ ಸ್ವಾವಲಂಬನೆ, ಗ್ರಾಮೀ ಣಮೂಲ ಸೌಕರ್ಯಾಭಿವೃದ್ದಿ, ಗ್ರಾಮೀಣ ಮಂದಿಗೆ ಉದ್ಯೋಗ,ಆಹಾರ ಭದ್ರತೆ ಮೂಡಿಸುವುದು ಹೀಗೆ ಹತ್ತು ಹಲವು ಉದ್ದೇಶಗಳು ಈ ಪಂಚಾಯ್ತಿಗಳಿಗಿದೆ. ದೇಶದಾಧ್ಯಂತ ಪಂಚಾಯತ್ ರಾಜ್ ವ್ಯವಸ್ಥೆ ಅಸ್ತಿತ್ವದಲ್ಲಿದ್ದರೂ ಸಮರ್ಪಕವಾಗಿ ನಡೆಯುತ್ತಿರುವದು ಕೆಲವೇ ರಾಜ್ಯಗಳಲ್ಲಿ ಮಾತ್ರ. ಬಿಹಾರ ದಂತಹ ರಾಜ್ಯದಲ್ಲಿ ಸ್ಥಳೀಯ ಸರ್ಕಾರದ ಅಸ್ತಿತ್ವವೇ ಇಲ್ಲದಂತಾಗಿದೆ, ಅಲ್ಲಿ ಚುನಾವಣೆಗಳೆ ನಡೆದಿಲ್ಲ. ಸಾಮಾಜಿಕ ನ್ಯಾಯದಂತಹ ಅಂಶಗಳಿಗೆ ಬೆಂಕಿ ಬಿದ್ದಿದೆ. ಅದೇ ಕೇರಳದಲ್ಲಿ ಇಡೀ ದೇಶಕ್ಕೆ ಮಾದರಿಯಾಗುವಂತಹ ಸ್ಥಳೀಯ ಸರ್ಕಾರ ವ್ಯವಸ್ಥೆ ಜಾರಿಯಲ್ಲಿದೆ. ಗ್ರಾಮ ಪಂಚಾಯ್ತಿ,ತಾಲ್ಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ ಹೀಗೆ ಮೂರು ಹಂತಗಳಲ್ಲಿ ಬರುವ ಸ್ಥಳೀಯ ಸರ್ಕಾರ ವ್ಯವಸ್ತೆ ಯಲ್ಲಿ ಪ್ರಧಾನವಾಗಿ ನಿಲ್ಲುವುದೇ ಗ್ರಾಮ ಪಂಚಾಯ್ತಿಗಳು. ಇಲ್ಲಿ ಅಧ್ಯಕ್ಷನಾಗುವವನು ಅಭಿವೃದ್ದಿ ಕಾರ್ಯಗಳಿಗೆ ಸಹಿ ಹಾಕುವ ಅವಕಾಶ ಪಡೆಯುತ್ತಾನೆ. ಇಂತಹ ಅವಕಾಶ ತಾಲ್ಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ ಯ ರಾಜಕಾರಣಿಗಳಿಗೆ, ಎಂಎಲ್ ಎ ಗೆ ಎಂಪಿಗೆ ಏಕೆ ಒಬ್ಬ ಸಚಿವನಿಗೂ ಸಹಾ ಅಂತಹ ಅವಕಾಶ ಲಭಿಸದು. ದೇಶದ ರಾಷ್ಟ್ರಪತಿಗೆ ಇರುವಷ್ಟೇ ವಿಶೇಷ ಅಧಿಕಾರಗಳನ್ನು ಪಡೆಯುವ 2ನೇ ಏಕೈಕ ವ್ಯಕ್ತಿ ಕೂಡಾ ಗ್ರಾಮ ಪಂಚಾಯ್ತಿ ಅಧ್ಯಕ್ಷನಿಗಿರುತ್ತದೆ. ಈಗ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳಿಂದಲೂ ಸಹಾ ಹೆಚ್ಚಿನ ಪ್ರಮಾಣದ ಅನುದಾನ ಗ್ರಾಮ ಪಂಚಾಯ್ತಿಗಳಿಗಿರುವುದು, ಇತರೆ 2ಪಂಚಾಯ್ತಿಗಳಿಗಿಂತ ಹೆಚ್ಚಿನ ರೀತಿಯಲ್ಲಿ ಜನರನ್ನು ಪರಿಣಾಮಕಾರಿಯಾಗಿ ತಲುಪುವ ಏಕೈಕ ಮಾದ್ಯಮ ಈ ಗ್ರಾಮ ಪಂಚಾಯ್ತಿ.
ಇಂತಹ ಪಂಚಾಯ್ತಿಗೆ ಖದರ್ರು ದಕ್ಕಿದ್ದು 1ದಶಕದ ಹಿಂದೆ, ಕೂಲಿಗಾಗಿ ಕಾಳು ಯೋಜನೆ, ಸ್ವಚ್ಚ ಗ್ರಾಮ ಯೋಜನೆ, ಗ್ರಾಮೀಣ ಸ್ವರೋಜ್ ಗಾರ್ ಯೋಜನೆ, ಇಂದಿರಾ ಅವಾಸ್, ಅಂಬೇಡ್ಕರ್, ರಾಜೀವ್ ಗಾಂದಿ ವಸತಿ ಯೋಜನೆ ಹೀಗೆ ಬಂದ ಯೋಜನೆಗಳು ಅಧಿಕಾರ ಹಿಡಿಯುವ ಮರಿ ಪುಡಾರಿಗಳಿಗೆ, ಅಧಿಕಾರಿಗಳಿಗೆ ಅಕ್ಷಯ ಪಾತ್ರೆಯಾಗಿತ್ತು. ಆದರೆ ಅದಕ್ಕಿಂತಲೂ ಹೆಚ್ಚಿನ ಬಲ ಬಂದಿದ್ದು ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಬಂದ ಮೇಲೆ. ಇದರ ಫೋರ್ಸ್ ಹೇಗಿತ್ತೆಂದರೆ ದುಡ್ಡು ಹೊಡೆಯುವ ಪಂಚಾಯ್ತಿಗಳ ಇತರೆ ಯೋಜನೆಗಳು ನೆನೆಗುದಿಗೆ ಬಿದ್ದು ಇದು ಸಿಕ್ಕಾಪಟ್ಟೆ ಮುಂದಿದೆ. ಇದಕ್ಕೂ ಮುನ್ನ ಸುವರ್ಣ ಗ್ರಾಮ ಯೋಜನೆ, ಸ್ವಚ್ಚ ಗ್ರಾಮ ಯೋಜನೆ ಸಮರ್ಪಕ ಅನುಷ್ಠಾನ ಕಾಣದೇ ಬೋಗಸ್ ಬಿಲ್-ವರದಿ ನೀಡಿ ಲಕ್ಷ ಲಕ್ಷಗಳಲ್ಲಿ ಲೂಟಿ ಮಾಡುತ್ತಿದ್ದ ಮಂದಿ ಈ ಉದ್ಯೋಗ ಖಾತ್ರಿಯಿಂದ ಕೋಟಿ ಕೋಟಿ ಗಳಲ್ಲಿ ಹಗಲು ದರೋಡೆಗಿಳಿದಿದ್ದಾರೆ. ಇದರಲ್ಲಿ ದುಡ್ಡು ತಿನ್ನದವನೇ ಪರಮ ಪಾಪಿ. PWD/ZP ಕಂಟ್ರಾಕ್ಟು ಮಾಡುತ್ತಿದ್ದವರು,ಗ್ರಾಮ ಪಂಚಾಯಿತಿ ಸದಸ್ಯರು-ಅಧ್ಯಕ್ಷರು, ಊರ ಮುಂದೆ ತೂಕಡಿಸುತ್ತಿದ್ದ ಮೈಗಳ್ಳ ಕೂ ಡ ಉದ್ಯೋಗ ಖಾತ್ರಿಯ ಅತಿಕ್ರಮ ಗುತ್ತಿಗೆದಾರರು. ಇಂಥಹ ಕೇಡಿಗಳೆಲ್ಲ ಒಟ್ಟಿಗೆ ಸೇರಿ ಗ್ರಾಮ ಪಂಚಾಯ್ತಿಯ ಅಖಾಡಕ್ಕಿಳಿದಿರುವುದು ಚುನಾವಣೆ ರಂಗೇರಲು ಕಾರಣವಾಗಿದೆ. ತಾಲ್ಲೂಕು ಪಂಚಾಯ್ತಿ-ಜಿಲ್ಲಾ ಪಂಚಾಯ್ತಿಗೆ ನಿಲ್ಲುವ ತಾಕತ್ತಿರುವವರು ಕೂಡಾ ಇವತ್ತು ಗ್ರಾಮ ಪಂಚಾಯ್ತಿಗೆ ಬರುತ್ತಿದ್ದಾರೆಂದರೆ ಅದರ ಮಹತ್ವ ಅರಿವಾದೀತು. ಇಂತಹ ಸನ್ನಿವೇಶವನ್ನು ಯಶಸ್ವಿಯಾಗಿ ಬಳಸಿಕೊಳ್ಳುವ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಗ್ರಾಮಗಳಲ್ಲೆ ಒಬ್ಬೊಬ್ಬರನ್ನು ಎತ್ತಿಕಟ್ಟಿ ವ್ಯವಸ್ಥೆಯನ್ನೇ ಹಾಳುಗೆಡವುತ್ತಾರೆ. ಅಲ್ಲಿ ಬೆಂಕಿ ಇದ್ದಷ್ಟು ದಿನ ಇವರ ಸ್ಥಾನ ಭದ್ರ. ನಾವು ಎಂಎಲ್ಎ ಎಲೆಕ್ಷನ್ ಗೆ ಹೆಚ್ಚು ದುಡ್ಡು ಖರ್ಚಾಗುತ್ತೆ ಅಂದುಕೊಂಡ್ರೆ ಅದಕ್ಕಿಂತ ಹೆಚ್ಚಿನ ಹಣದ ಹೊಳೆ ಈ ಚುನಾವಣೆಯಲ್ಲಿ ಕಾಣಬಹುದು. ಇದು ಒಂದು ಊರಿನ ನೆಮ್ಮದಿಯನ್ನು ಶಾಶ್ವತವಾಗಿ ಕೆಡಿಸಿ ಬಿಡುತ್ತದೆ, ಅದೂ ಸರಿಪಡಿಸಲಾಗದಷ್ಟು! ಯಾವುದೇ ರಾಜಕೀಯ ಪಕ್ಷಗಳ/ಪುಡಾರಿಗಳ ಹಂಗಿಲ್ಲದೆ ಸಮರ್ಥರನ್ನು ಆಯ್ಕೆ ಮಾಡುವ ಯೋಗ್ಯತೆ ನಮ್ಮ ಹಳ್ಳಿಗಳ ಜನರಿಗಿಲ್ಲವೇ? ಇಂಥಹದ್ದೊಂದು ಎಚ್ಚರಿಕೆಯ ಅರಿವನ್ನು ಆಯಾ ಗ್ರಾಮಗಳ ವಿದ್ಯಾವಂತ ಯುವಕರು, ಸಮಕಾಲೀನವಾಗಿ ಚಿಂತಿಸುವರು, ಹಳ್ಳಿ ತೊರೆದು ನಗರದಲ್ಲಿ ನೆಲೆಯಾಗಿರುವವರು ಮಾಡಲು ಸಾಧ್ಯವಿಲ್ಲವೇ? ಯೋಚಿಸಿ ಹಳ್ಳಿಗಳ ಉದ್ದಾರವೇ ದೇಶದ ಉದ್ದಾರ ಸ್ವಾಮಿ, ನೋಡಿ ನೀವು ನಿಮ್ಮ ಹಳ್ಳಿಗಳಿಗೆ ಹೋಗಿ ಸಾಧ್ಯವಾದಷ್ಟ ಮಟ್ಟಿಗೆ ಚುನಾವಣೆ ಅನಿಷ್ಟಗಳಿಗೆ ಮಂಗಳ ಹಾಡಿ, ಅವಿರೋಧ ಆಯ್ಕೆಗೆ ಮನಸ್ಸು ಕೊಡಿ ಇದು ನಿಮ್ಮಿಂದ ಖಂಡಿತಾ ಸಾಧ್ಯವಿದೆ ಅಲ್ವಾ?

Wednesday, April 14, 2010

ಸುಮ್ಶನಿರಲಾರದೆ ಇರುವೆ ಬಿಟ್ಕಂಡ ಶಶಿಥರೂರ್

'ಸುಮ್ಮನಿರಲಾರದವ ಇರುವೆ ಬಿಟ್ಕೊಂಡ' ಅಂತ ಕನ್ನಡದಲ್ಲಿ ಒಂದು ಗಾದೆ ಮಾತಿದೆ. ಅದು ದೇಶದ ವಿದೇಶಾಂಗ ಖಾತೆ ರಾಜ್ಯ ಸಚಿವ ಶಶಿಥರೂರನ ವಿಚಾರದಲ್ಲಿ ನಿಜವಾಗಿ ಬಿಟ್ಟಿದೆ. ದೊಡ್ಡವರ ಸಣ್ಣತನವೂ, ಹುಡುಗಾಟಿಕೆಯೂ ಸಾರ್ವಜನಿಕವಾದಾಗ ಅದು ಅಸಹ್ಯವಾಗಿ ಬಿಡುತ್ತೆ. ಈ ಶಶಿಥರೂರ್ ಆಗಬಾರದ ಕಾರಣಗಳಿಗೆ ಸುದ್ದಿ ಆಗುತ್ತಿರುವುದು ಇದೇ ಮೊದಲೇನಲ್ಲ. ಈತ ಬೆಳೆದು ಬಂದ ಹಿನ್ನೆಲೆ ವಹಿಸಿಕೊಂಡು ನಿರ್ವಹಿಸಿದ ಹೊಣೆಗಾರಿಕೆಗಳನ್ನು ಗಮನಿಸಿದಾಗ ಇಂಥಹದ್ದೆಲ್ಲಾ ಬೇಕಿತ್ತಾ ಈತನಿಗೆ ಅನಿಸದಿರದು. ಭಾರತದಂತಹ ಸದ್ಘೃಹಸ್ಥ ರಾಷ್ಟ್ರಗಳಲ್ಲಿ ಇಂತಹ ಕಿರಿಕಿರಿಗಳನ್ನು ಸಹಿಸುವುದು ಕಷ್ಟ. ಇರಲಿ ಈ ಶಶಿ ಥರೂರು ಯಾರು? ಈತನ ಹಿನ್ನೆಲೆ ಏನು? ಯಾಕೆ ವಿವಾದಗಳು ಈತನ ಬೆಂಬತ್ತಿವೆ? ಇದು ಸಮಾಜದ ಮೇಲೆ ಎಂತಹ ಪರಿಣಾಮ ಬೀರುತ್ತೆ ಅನ್ನೋದನ್ನು ನೋಡೋಣ.

ಕೇಂದ್ರ ಸಚಿವ,ಪತ್ರಕರ್ತ,ಅಂಕಣಕಾರ, ಮಾನವ ಹಕ್ಕುಗಳ ಹೋರಾಟಗಾರ,ವಿಶ್ವ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಸ್ಥಾನದ ಡಿಫೀಟೆಡ್ ಕ್ಯಾಂಡಿಡೇಟು,ಲೇಖಕ, ಅಂತರ ರಾಷ್ಟ್ರೀಯ ರೆಡ್ ಕ್ರಾಸ್ ಸಂಸ್ಥೆಯ ಸಲಹೆಗಾರ, ವಿಶ್ವ ಸಂಸ್ಥೆಯ ಸೆಕ್ರೆಟರಿ ಜನರಲ್, ಹಲವಾರು ಸಂಘ ಸಂಸ್ಥೆಗಳಿಗೆ ಟ್ರಸ್ಟಿ ಹೀಗೆ ಇನ್ನೂ ಏನೇನೊ ಉನ್ನತ ಹುದ್ದೆಗಳನ್ನು ನಿರ್ವಹಿಸುತ್ತಾ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದವರು ಈ ಶಶಿಥರೂರ್. ಇಂತಹ ಶಶಿಥರೂರು ಹುಟ್ಟಿದ್ದು ಲಂಡನ್ ನಲ್ಲಿ. ಕೇರಳದ ಪಾಲಕ್ಕಾಡ್ ನ ನಾಯರ್ ಕುಟುಂಬದ ಶಶಿಥರೂರ್ ರ ತಂದೆ ಥರೂರು ಚಂದ್ರಶೇಖರ್ ನಾಯರ್, ತಾಯಿ ಸುಲೇಖ ಮೆನನ್. ಮುಂಬೈನ ಮಾಂಟ್ ಫರ್ಡ್ ಸ್ಕೂಲ್ ನಲ್ಲಿ ಪ್ರಾಥಮಿಕ ವಿದ್ಯಬ್ಯಾಸ ಮಾಡಿದ ಥರೂರ್ ಕಲ್ಕತ್ತಾದ ಸೇಂಟ್ ಕ್ಷೇವಿಯರ್ ಹೈಸ್ಕೂಲ್ ನಲ್ಲಿ ಓದು ಮುಂದುವರೆಸಿದರು. ದೆಹಲಿಯ ಸ್ಟೀಫನ್ ಕಾಲೇಜಿನಲ್ಲಿ ಇತಿಹಾಸ ವಿಷಯದಲ್ಲಿ ಬಿಎ ಪದವಿ, ಮುಂದೆ ಫ್ಲೆಚರ್ ಸ್ಕೂಲ್ ಆಫ್ ಲಾನಲ್ಲಿ ಸ್ಕಾಲರ್ ಶಿಪ್ ಪಡೆದು ಕಾನೂನು ಹಾಗೂ ಅಂತರ ರಾಷ್ಟ್ರೀಯ ಸಂಬಂದಗಳಿಗೆ ಸಂಬಂದಿಸಿದಂತೆ ಎರಡೆರೆಡು ಸ್ನಾತಕ ಪದವಿ, ನಂತರ ಕೇವಲ 22ನೇ ವಯಸ್ಸಿಗೆ ಅದೇ ವಿಷಯದಲ್ಲಿ ಪಿಎಚ್ ಡಿ ಮಾಡಿದ ಹೆಗ್ಗಳಿಕೆ ಈತನದ್ದು.
ಕಾಲೇಜು ದಿನಗಳಲ್ಲಿ ತನ್ನ ಬುದ್ದಿವಂತಿಕೆ ಹಾಗೂ ಪಠ್ಯೇತರ ಚಟುವಟಿಕೆಗಳಿಂದ ಅತ್ಯಂತ ಜನಪ್ರಿಯ ನಾಗಿದ್ದ ಶಶಿಥರೂರು ಉತ್ತಮ ರಂಗನಟ. 70ರ ದಶಕದಲ್ಲಿ ಮೀರಾ ನಾಯರ್ ನಿರ್ದೇಶಿಸುತ್ತಿದ್ದ 'ಆಂಟೋನಿ ಕ್ಲಿಯೋಪಾತ್ರ' ನಾಟಕದಲ್ಲಿ ನಟಿಸಿ ಯಶಸ್ವಿ ನಟರೂ ಆಗಿದ್ದರು. ಕಾಲೇಜು ದಿನಗಳಲ್ಲಿ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿಯೂ ಮಿಂಚಿದ್ದ ಶಶಿಥರೂರು ಮುಂದೆ 1978ರಲ್ಲಿ ವಿಶ್ವಸಂಸ್ಥೆಯ ಸೇವೆಗೆ ಸೇರ್ಪಡೆಯಾದರು. ವಿಶ್ವಸಂಸ್ಥೆಯ ನಿರಾಶ್ರೀತರ ಪುನರ್ವಸತಿ ಹೈ ಕಮಿಷನರ್ ಆಗಿ ಸಿಂಗಾಪುರ್ ನಲ್ಲಿ ಕರ್ತವ್ಯ ನಿರ್ವಹಿಸಿ ಶಹಬ್ಬಾಸ್ ಗಿರಿ ಪಡೆದರು.ಆಗ ಇವರ ವಯಸ್ಸು ಕೇವಲ 25! ಹೀಗೆ ವೃತ್ತಿಯಲ್ಲಿ ಯಶಸ್ಸು ಸಾಧಿಸಿ ಮೇಲೆರುತ್ತ ವಿಶ್ವಸಂಸ್ಥೆಯ ಕಾರ್ಯದರ್ಶಿಯ ಮಾದ್ಯಮ ನಿರ್ದೇಶಕರಾಗಿ ನೇಮಕಗೊಂಡರು.2007ರಲ್ಲಿ Under Secretary General ಸ್ಥಾನಕ್ಕೆ ರಾಜೀನಾಮೆ ನೀಡಿದರು. ಅದಕ್ಕೂ ಮುನ್ನ 2006ರಲ್ಲಿ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೋಫಿ ಅನ್ನಾನ್ ನಿವೃತ್ತರಾಗುವಾಗ ಆ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಮೊಟ್ಟ ಮೊದಲ ಭಾರತೀಯನಾಗಿ ಅಭ್ಯರ್ಥಿಯಾದವರು ಇದೇ ಶಶಿಥರೂರು. ಇವರೊಂದಿಗೆ ಸ್ಪರ್ಧಿಸಿದ್ದ 7ಜನ ಅಭ್ಯರ್ಥಿಗಳಲ್ಲಿ ಕಡೆಯ ಕ್ಷಣದ ವರೆಗೂ ಉಳಿದು ಸೆಣಸಿದ ಥರೂರು ಭಾರತೀಯರ ಹೆಮ್ಮೆಯ ಪ್ರತೀಕವಾಗಿದ್ದರು.
ಇಂತಹ ಶಶಿಥರೂರು ವಿಶ್ವಸಂಸ್ಥೆಯ ಕೆಲಸ ತ್ಯಜಿಸಿದ ಮೇಲೆ ಭಾರತದಲ್ಲಿ ನಡೆಯುತ್ತಿದ್ದ ಲೋಕಸಭಾ ಚುನಾವಣೆಗೆ ಕೇರಳದ ತಿರುವನಂತ ಪುರಂನಿಂದ ಸ್ಪರ್ಧಿಸಿದರು. ಕಣದಲ್ಲಿದ್ದ ಘಟಾನುಘಟಿ ಸ್ಪರ್ಧಿಗಳೆದುರು ಸೆಣಸಿದ ಆತ ಬರೋಬ್ಬರಿ 1ಲಕ್ಷ ಮತಗಳ ಅಂತರದಿಂದ ದಾಖಲೆಯ ಗೆಲುವನ್ನು ದಾಖಲಿಸಿದರು. ಇದು ಕೇರಳದ 30ವರ್ಷಗಳ ರಾಜಕೀಯ ದಾಖಲೆಗಳಲ್ಲಿ ಇತಿಹಾಸವೆನಿಸಿದೆ. ಈ ಎಲ್ಲಾ ಸಾಧನೆಗಳ ಹಿನ್ನೆಲೆಯಲ್ಲಿ ಕೇಂದ್ರ ಮನಮೋಹನ ಸಿಂಗರ ಸರ್ಕಾರದಲ್ಲಿ ಶಶಿಥರೂರು ವಿದೇಶಾಂಗ ಖಾತೆಯ ರಾಜ್ಯ ಸಚಿವರಾಗಿ ಬಿಟ್ಟರು. ಈತ ಮೊದಲು ವಿವಾದಕ್ಕೆ ಸಿಲುಕಿದ್ದು ಭಾರತವು ಇಸ್ರೇಲ್ ಕುರಿತು ಹೊಂದಿರುವ ಧೋರಣೆಗಳ ಕುರಿತ ಹೇಳಿಕೆ ಮೂಲಕ. ಎಸ್ ಎಂ ಕೃಷ್ಣ ಹಾಗೂ ಶಶೀಥರೂರು ಮಂತ್ರಿಯಾದ ಮೇಲೂ ಅಧಿಕೃತ ನಿವಾಸಗಳಿಗೆ ತೆರಳದೆ ಪಂಚತಾರ ಹೋಟೆಲುಗಳಲ್ಲಿ ವಾಸ್ತವ್ಯ ಹೂಡಿ ಸರ್ಕಾರಿ ಹಣ ದುರ್ಬಳಕೆ ಮಾಡಿಕೊಂಡದ್ದು ದೊಡ್ಡ ಸುದ್ದಿಯಾಯ್ತು, ಆಗ ಶಶಿಥರೂರ್ ತನ್ನ ಸ್ವಂತ ಪಾಕೆಟ್ ನಿಂದ ಹೋಟೆಲ್ ವೆಚ್ಚ ಭರಿಸಿರುವುದಾಗಿ ಹೇಳಿದ್ದರು,ಜಾಗತಿಕ ಹಿಂಜರಿತದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಬಿಗು ನಿಲುವುಗಳನ್ನು ಪ್ರಕಟಿಸಿದಾಗ ಮೊದಲ ದರ್ಜೆಯ ರೈಲು ಪ್ರಯಾಣ ಸಚಿವರುಗಳಿಗೆ ಸಂಸದರುಗಳಿಗೆ ತಪ್ಪಿಹೋಗಿತ್ತು , ಸಾಮಾನ್ಯದರ್ಜೆಯ ಭೋಗಿಗಳಲ್ಲಿ ಪ್ರಯಾಣಿಸುವ ಸಂಧರ್ಭ ಬಂದಾಗ ಇದು ದನಗಳ ಕೊಟ್ಟಿಗೆಯಂತಿದೆ ಎಂದು ನೀಡಿದ ಹೇಳಿಕೆ ಕೇಂದ್ರಸರ್ಕಾರಕ್ಕೆ ಮುಜುಗುರ ಉಂಟುಮಾಡಿತ್ತು.ಮುಂಬೈ ನ 26/11ರ ದುರ್ಘಟನೆಗೆ ಸಂಬಂಧಿಸಿದಂತೆ ಡೇವಿಡ್ ಹೆಡ್ಲಿ ಯನ್ನು ಅಮೇರಿಕಾದಲ್ಲಿ ಬಂಧಿಸಿದಾಗ ವಿದೇಶಾಂಗ ಖಾತೆಯ ಸಂಪುಟ ದರ್ಜೆ ಸಚಿವ ಕೃಷ್ಣರಿಗಿಂತ ಮೊದಲೇ ಹೇಳಿಕೆ ನೀಡಿ ಮುಜುಗುರಕ್ಕೀಡು ಮಾಡಿದ್ದು ಇದೇ ಶಶಿಥರೂರು. ಇದೀಗ ಕೊಚ್ಚಿನ್ ಐಪಿಎಲ್ ಕ್ರಿಕೆಟ್ ಟೀಂ ಹರಾಜಿಗೆ ಸಂಬಂದಿಸಿದಂತೆ ಸುನಂದ ಪುಷ್ಖರ್ ಎಂಬುವವರ ಮೂಲಕ ತನ್ನ ಪ್ರಭಾವ ಬಳಸಿ ಹಣ ಹೂಡಿದ್ದಾರೆಂದು ಲಲಿತ್ ಮೋದಿ ನೀಡಿದ ಹೇಳಿಕೆಯಿಂದ ಮತ್ತೆ ಶಶಿಥರೂರು ವಿವಾದಕ್ಕೆ ಈಡಾಗಿದ್ದಾರೆ. ಶಶೀಥರೂರು ಈಗ 45ರ ಹೊಸ್ತಿಲಲ್ಲಿದ್ದಾರೆ2ನೇ ಪತ್ನಿಯ ಮಕ್ಕಳು ಉನ್ನತ ಹುದ್ದೆಗಳಲ್ಲಿದ್ದಾರೆ. ಹೀಗಿರುವಾಗ ಶಶಿಥರೂರು ಕಾಶ್ಮೀರ ಮೂಲಕ ಸುನಂದ ಪುಷ್ಖರ್ ಳ ಮೋಹಕ್ಕೆ ಸಿಲುಕಿ ಮತ್ತೆ ಅಸಹ್ಯವನ್ನು ಮಾಡಿಕೊಂಡಿದ್ದಾರೆ. ಪ್ರತಿ ಭಾರಿ ಎಡವಟ್ಟದಾಗಲೂ ಟ್ವಿಟ್ಟರ್ ನಂತಹ ಸಾಮಾಜಿಕ ಅಂತರ್ ಜಾಲ ತಾಣದ ಮೂಲಕ ತನ್ನ ವಿಚಾರವನ್ನು ಹರಿಯ ಬಿಡುತ್ತಿದ್ದ ಶಶಿಥರೂರು ಈಗ ತಲೆದಂಡ ಕೊಡಬೇಕಾದ ಸ್ಥಿತಿ ಬಂದಿದೆ.
ಅತ್ಯಂತ ಪ್ರಜ್ಞಾ ಪೂರ್ವಕವಾಗಿ ನಿಭಾಯಿಸ ಬೇಕಾದ ಮಹತ್ವದ ಮಂತ್ರಿ ಗಿರಿ ಇರುವಾಗ ತನ್ನ ಚೆಲ್ಲಾಟದ ವರ್ತನೆಗಳಿಂದ ಸಡಿಲವಾಗಿ ವರ್ತಿಸುತ್ತಿರುವ ಶಶಿಥರೂರು ಯಾವ ಜ್ಞಾನ, ಪದವಿ ಗಳಿಸಿದ್ದರೇನು ಸುಖ ಒಳ್ಳೆ ನಡತೆ ಇಲ್ಲದಿದ್ದ ಮೇಲೆ. ತನ್ನನ್ನು ಕೋಟ್ಯಾಂತರ ಜನ ಗಮನಿಸುತ್ತಿರುತ್ತಾರೆ, ನಾನು ಅವರ ಭಾವನೆಯ ಪ್ರತೀಕವಾಗಿದ್ದೇನೆ ಎಂಬ ಜವಾಬ್ದ್ದಾರಿಯೂ ಮರೆತು ಹೋದಾಗ ಇಂಥಹವೆಲ್ಲ ಜರುಗುತ್ತವೇನೋ. ಅದಕ್ಕೆ ಹೇಳಿದ್ದು ಓದಿ ಪದವಿ ಪಡೆದರೆ ಸಾಲದು,ಬದುಕಿಗೊಂದು ಸೈದ್ದಾಂತಿಕ ನೆಲಗಟ್ಟಿರಬೇಕು ಅದಿಲ್ಲದಿದ್ದರೆ ಇಂತಹ ನೂರಾರು ಶಶಿಥರೂರುಗಳು ಸೃಷ್ಟಿಯಾಗುತ್ತಾರೆ ನೆನಪಿರಲಿ, ಇದು ಸಮಾಜಕ್ಕೂ ಒಳ್ಳೆಯದಲ್ಲ.

Thursday, April 8, 2010

ಕನಸುಗಳು ಬೇಕು, ನಿರೀಕ್ಷೆಗಳು ಬೇಡ:ಛಾಯಾಸಿಂಗ್



ಒಂದು ಸಿನಿಮಾ ಪಾತ್ರ ಆಪ್ತವಾಗಬೇಕು ಅನಿಸಬೇಕಾದರೆ, ಸದರಿ ಪಾತ್ರಗಳು ನಮ್ಮ ಮಧ್ಯೆ ಇರಬೇಕು ಮತ್ತು ಆ ಪಾತ್ರಕ್ಕೆ ಜೀವಂತಿಕೆ ತುಂಬುವ ಅಭಿನಯ ಬೇಕೇ ಬೇಕು. ಈ ನಿಟ್ಟಿನಲ್ಲಿ ನನ್ನನ್ನು ಸೂಜಿಗಲ್ಲಿನಂತೆ ಸೆಳೆದದ್ದು ಪಂಚಭಾಷಾ ತಾರೆ ಛಾಯಾಸಿಂಗ್. ಕನ್ನಡ,ತಮಿಳು, ತೆಲುಗು, ಮಲೆಯಾಳಂ ಮತ್ತು ಬೋಜ್ ಪುರಿ ಭಾಷೆಯ ಚಿತ್ರಗಳಲ್ಲಿ ನಾಯಕಿಯಾಗಿ ಅಭಿನಯಿಸಿರುವ ಛಾಯಾಸಿಂಗ್ ಇದುವರೆಗೂ ಸರಾಸರಿ 50ಚಿತ್ರಗಳಲ್ಲಿ ನಟಿಸಿದ್ದಾರೆ. ಅವರ ಹೊಸ ತಮಿಳು ಚಿತ್ರವೊಂದು ಮುಂದಿನವಾರ ತೆರೆಗೆ ಬರುತ್ತಿದೆ. ಕನ್ನಡದಲ್ಲೂ ಅವಕಾಶಗಳು ಬರುತ್ತಿವೆ. ಸಧ್ಯ ಜೀ ಕನ್ನಡ ವಾಹಿನಿಯ ರಿಯಾಲಿಟಿ ಶೋ ಕುಣಿಯೋಣು ಭಾರಾ ಕಾರ್ಯಕ್ರಮದ ತೀರ್ಪುಗಾರರಾಗಿ ಜನಪ್ರಿಯರಾಗಿದ್ದಾರೆ. ಮೊನ್ನೆ ಅವರೊಂದಿಗೆ ಮಾತನಾಡಿದೆ. ಅವರ ಬಗೆಗೆ ಒಂದಿಷ್ಟು ಮಾಹಿತಿ ಹಾಗೂ ಮಾತು ಇಲ್ಲಿದೆ ಒಪ್ಪಿಸಿ ಕೊಳ್ಳಿ.

ಅದು ಸಂಪ್ರದಾಯಸ್ಥ ಕುಟುಂಬ ಹೆಣ್ಣು ಮಕ್ಕಳನ್ನು ನಾಟಕ-ಸಿನಿಮಾಗಳಿಂದ ದೂರವಿಡುವ ಜೊತೆಗೆ ನಿರ್ದಿಷ್ಠ ಚ್ಔಕಟ್ಟಿನಲ್ಲೇ ಸಾಗಬೇಕು ಎಂಬ ನಿಯಮ ಅಲ್ಲಿತ್ತು. ಹೀಗಿರುವಾಗ ಒಮ್ಮೆ ದೂರದರ್ಶನದಲ್ಲಿ ಬರುತ್ತಿದ್ದ ರಸ್ನಾ ಜಾಹೀರಾತು ಆ ಮನೆ ಮಂದಿಯವರಿಗೆಲ್ಲಾ ಇಷ್ಟವಾಗಿತ್ತು. ಅಮ್ಮನಿಗೆ ಆ ಜಾಹೀರಾತು ನೋಡಿದಾಗಲೆಲ್ಲ ತನ್ನ ಮಗಳು ಸಹಾ ಇಂತಹದ್ದೊಂದು ಜಾಹೀರಾತಿನಲ್ಲಿ ಬರಬೇಕಿತ್ತು ಅಂತ ಅನಿಸ್ತಿತ್ತು. ಮಗಳು ಆಗಿನ್ನೂ ಬೆಂಗಳೂರಿನ ಸೇಂಟ್ ಲೂರ್ಡ್ ಶಾಲೆಯಲ್ಲಿ ಕಲಿಯುತ್ತಿದ್ದಳು. ಅಕೆಗೆ ನೃತ್ಯವೆಂದರೆ ಪಂಚಪ್ರಾಣ. ಶಾಲೆಯಲ್ಲಿ ನಡೆಯುವ ಪ್ರತೀ ಸಾಂಸ್ಕೃತಿಕ ಕಾರ್ಯಕ್ರಮದಲ್ಲೂ ಆಕೆಗೆ ಅಗ್ರಸ್ಥಾನ. ಆ ಬಾಲೆ ಮುಂದೆ ಕಾಲೇಜು ಶಿಕ್ಷಣಕ್ಕೆ ಸೇರ್ಪಡೆಯಾಗಿದ್ದು ಶ್ರೀ ಅರಬಿಂದೋ ಶಾಲೆಗೆ. ಸದಾ ತುಡಿತದ ಉತ್ಸಾಹದ ಚಿಲುಮೆಯಾಗಿದ್ದ ಆಕೆ ತುಸು ತುಂಟ ಸ್ವಭಾವದವಳು. ಒಮ್ಮೆ ಪತ್ರಿಕೆಯೊಂದರಲ್ಲಿ ನಟ-ನಟಿಯರು ಬೇಕಾಗಿದ್ದಾರೆ ಎಂಬ ಜಾಹೀರಾತಿನೆಡೆಗೆ ಕಣ್ಣಾಡಿಸಿದ ಆಕೆ ಹುಡುಗಾಟಕ್ಕೆ ಅರ್ಜಿ ಸಲ್ಲಿಸಿದ್ದರು. ಸಂದರ್ಶನಕ್ಕೆ ಕರೆಯೂ ಬಂತು. ದೂರದರ್ಶನದವರು ನಿರ್ಮಿಸುತ್ತಿದ್ದ ಸಮಾಗಮ ಧಾರವಾಹಿ ಅದು. ಸ್ಕ್ರೀನ್ ಟೆಸ್ಟ್ ನಲ್ಲಿ ಆಕೆಗೆ ಅಭಿನಯ ಬರೊಲ್ಲ ಅಂತ ಸಾರಸಗಟಾಗಿ ತಿರಸ್ಕರಿಸಲಾಯಿತು. ಇದರಿಂದ ವಿಚಲಿತಳಾಗದ ಆಕೆ ತನ್ನ ಪ್ರಯತ್ನವನ್ನು ಮುಂದುವರೆಸಿದರು. ಮುಂದೆ ಅವರು ಈಟಿವಿ ಯ ಪ್ರೇಮಕಥೆಗಳು, ಸರೋಜಿನಿ, ಹದ್ದಿನ ಕಣ್ಣು ಹೀಗೆ ಸಾಲು ಸಾಲು ಧಾರವಾಹಿಗಳಲ್ಲಿ ಅವಕಾಶ ಗಿಟ್ಟಿಸಿದಳು. ಅದೊಂದು ದಿನ ಕಲಾತ್ಮಕ ಚಿತ್ರಗಳ ನಿರ್ದೇಶಕ ಪಿ ಶೇಷಾದ್ರಿ, "ಮುನ್ನುಡಿ" ಚಿತ್ರಕ್ಕಾಗಿ ನಾಯಕಿಯ ಮಗಳ ಪಾತ್ರಕ್ಕೆ ಅನ್ವೇಷಣೆಯಲ್ಲಿದ್ದರು. ಆಗ ಪರಿಚಿತರ ಮೂಲಕ ಅವರ ಸಂಪರ್ಕಕ್ಕೆ ಬಂದ ಆಕೆ ಮುನ್ನುಡಿ ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿರಿಸಿದರು. ತನ್ನ ಸ್ನಿಗ್ಧ ಸೌಂದರ್ಯ ಹಾಗೂ ತುಂಟತನದ ಹಾವಭಾವಗಳಿಂದ 'ಅಯ್ಯೋ ಇವಳು ನಮ್ಮ ಮನೆ ಹುಡುಗಿ ಅಲ್ವಾ' ಎಂದು ಉದ್ಘರಿಸುವಂತೆ ಕನ್ನಡ ಚಿತ್ರ ರಸಿಕರ ಮನಸೂರೆಗೈದುಬಿಟ್ಟರು. ಅವರೇ ನಮ್ಮ ಛಾಯಾಸಿಂಗ್.

ಛಾಯಾ ಸಿಂಗ್ ಪ್ರಬುದ್ಧ ಅಭಿನೇತ್ರಿ. ಇಂದ್ರಜಿತ್ ಲಂಕೇಶ್ ನಿರ್ದೇಶನದ 'ತುಂಟಾಟ', ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕಿಯಾದ ಅವರು, ಕನ್ನಡ ಚಿತ್ರರಂಗಕ್ಕೆ ದೊರಕಿದ ಅಪೂರ್ವ ಪ್ರತಿಭೆಯೂ ಹೌದು.ದಿನೇಶ್ ಬಾಬು ನಿರ್ದೇಶನದ ಚಿಟ್ಟೆ ಚಿತ್ರದಲ್ಲಿ ಹಿರಿಯ ನಟ ಅನಂತನಾಗ್ ರೊಂದಿಗೆ ನಟಿಸಿ ಸೈ ಎನಿಸಿಕೊಂಡ ಛಾಯಾಸಿಂಗ್ , ದಿವಂಗತ ಡಾವಿಷ್ಣುವರ್ಧನ್ ರಿಂದಲೂ ಇದೊಂದು ಅಪ್ಪಟ ಪ್ರತಿಭೆ ಎಂಬ ಪ್ರಶಂಸೆ ಪಡೆದಿದ್ದರು. ಆಮೇಲೆ ಅವರಿಗೆ ತಮಿಳಿನಲ್ಲಿ ಅವಕಾಶಗಳು ಬಂದವು, ಧನುಷ್ ಜೊತೆ ತಿರುಡಾ ತಿರುಡಿ' ಯಲ್ಲಿ ನಟಿಸಿದರು. ಅದರಲ್ಲಿನ ಮದರಾಸ ಹಾಡಿಗೆ ಮಾಡಿದ ನೃತ್ಯ ಅವರ ಕೆರಿಯರ್ ಗ್ರಾಫ್ ಅನ್ನು ಏರಿಸಿ ಬಿಟ್ಟಿತು.ವಿಕ್ರಂ, ಸೂರ್ಯ, ವಿಜಯ್ ಹೀಗೆ ತಮಿಳಿನ ಎಲ್ಲಾ ಸೂಪರ್ ಹೀರೋಗಳ ಜೊತೆಗೂ ಛಾಯಾ ನಾಯಕಿಯಾಗಿ ನಟಿಸಿದ್ದಾರೆ. ತೆಲುಗಿನಲ್ಲಿ ಎನ್ ಟಿ ಆರ್ ಮೊಮ್ಮಗ ನ ಜೊತೆಗೆ 'ನೋ', ಮಲೆಯಾಳಂನಲ್ಲಿ 'ಪೊಲೀಸ್' ಸೇರಿದಂತೆ ಎರಡು ಚಿತ್ರಗಳು, ಬೋಜ್ ಪುರಿ ಭಾಷೆಯಲ್ಲಿ ಒಂದು ಹೀಗೆ 5ಭಾಷೆಯ ಚಿತ್ರಗಳಲ್ಲಿ ನಟಿಸುವ ಮೂಲಕ ಛಾಯಾಸಿಂಗ್ ಪಂಚಭಾಷಾ ತಾರೆಯಾಗಿದ್ದಾರೆ. ಈ ಮಧ್ಯೆ ಕನ್ನಡದಲ್ಲಿ ಇಷ್ಟವಾಗುವ ಕಥೆಗಳು/ಪಾತ್ರಗಳು ಸಿಗದಿದುದರಿಂದ ಕೊಂಚ ಕಾಲ ಬಿಡುವಾಗಿದ್ದರಂತೆ. ಆದರೆ ಇದನ್ನೇ ತಪ್ಪಾಗಿ ತಿಳಿದುಕೊಂಡ ಕೆಲವು ಪತ್ರಕರ್ತರು ಆಕೆ ಇನ್ನು ಕನ್ನಡ ಚಿತ್ರಗಳಲ್ಲಿ ನಟಿಸಲ್ವಂತೆ, ಅವರು ಸತ್ತೇ ಹೋದರು ಎಂದೆಲ್ಲ ಇಂಡಸ್ಟ್ರಿಯಲ್ಲಿ ಸುದ್ದಿ ಹಬ್ಬಿಸಿ ಬಿಟ್ಟಿದ್ದರು. ಇಂತಹ ಬೆಳವಣಿಗೆಗಳೆಲ್ಲ ಛಾಯಾ ಅವರಿಗೆ ಬೇಸರ ಮೂಡಿಸಿದೆ. ನೃತ್ಯದ ಬಗ್ಗೆ ಹೆಚ್ಚು ಒಲವು ಇರಿಸಿಕೊಂಡ ಛಾಯಾಸಿಂಗ್ ಇದೀಗ ಜೀ ಕನ್ನಡ ವಾಹಿನಿಯ ರಿಯಾಲಿಟಿ ಶೋ ಕುಣಿಯೋಣು ಭಾರಾ ದಲ್ಲಿ ತೀರ್ಪುಗಾರರ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಅವರು ನಟಿಸಿದ ಬಹುತೇಕ ಚಿತ್ರಗಳಲ್ಲಿಯೂ ಬರುವ ಹಾಡಿನ ನೃತ್ಯಗಳಲ್ಲಿ ಅವರಿಗೆ ಅವರೇ ಸಾಟಿಯಾಗುವಂತೆ ನರ್ತಿಸಿದ್ದಾರೆ. ಅವರ ನೃತ್ಯಕ್ಕೆ ಅವರೇ ಸಾಟಿ ಎನಿಸುವಷ್ಟು. ಇದಕ್ಕೆ ತಮಿಳಿನ ತಿರುಡಾ ತಿರುಡಿ ಹಾಗೂ ಕನ್ನಡದ ಸಖ-ಸಖಿ ಉತ್ತಮ ಉದಾಹರಣೆ ಆಗಬಹುದು.


  • ಬಣ್ಣದ ಬದುಕಿನ ಪ್ರವೇಶ ಹೇಗಾಯ್ತು ?
- ನಾವು ಮೂಲತ: ಉತ್ತರಪ್ರದೇಶದವರು. ಆದ್ರೆ 25-30ವರ್ಷಗಳ ಹಿಂದೆ ನಮ್ಮ ಕುಟುಂಬ ಬೆಂಗಳೂರಿಗೆ ವಲಸೆ ಬಂದು ನೆಲೆಸಿದೆ. ನಾನು ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲೇ, ಹಾಗಾಗಿನಾನು ಕನ್ನಡಿಗಳು , ಅದು ಹೆಮ್ಮೆಯ ವಿಚಾರವೂ . ತಂದೆ ಗೋಪಾಲ್ ಸಿಂಗ್ ಬ್ಯುಸಿನೆಸ್ ಮನ್, ತಾಯಿ ಚಮನ್ ಲತಾ ಗೃಹಿಣಿ. ಅಣ್ಣ ಬ್ಯುಸಿನೆಸ್ ಮಾಡ್ತಾರೆ. ನಮ್ಮದು ತುಂಬಾ ಸಂಪ್ರದಾಯಸ್ಥರ ಕುಟುಂಬ. ನಾನು ಸಿನಿಮಾಕ್ಕೆ ಬರೋದು ಅಪ್ಪನಿಗೆ ಬಿಲ್ ಕುಲ್ ಇಷ್ಟ ಇರ್ಲಿಲ್ಲ, ಆದ್ರೆ ಅಮ್ಮ ಸಪೋರ್ಟ್ ಮಾಡೋರು. ಜಾಹೀರಾತು ನೋಡಿ ಅರ್ಜಿ ಸಲ್ಲಿಸಿದ್ದೆ, ನಿರಾಶೆ ಆಯ್ತು ಮುಂದೆ ಶೇಷಾದ್ರಿ ಅವರ ಮುನ್ನುಡಿಯಲ್ಲಿ ಚಿತ್ರರಂಗ ಪ್ರವೇಶ ಮಾಡಿದೆ. ಕನ್ನಡದಲ್ಲಿ ತುಂಟಾಟ, ಚಿಟ್ಟೆ, ರೌಡಿ ಅಳಿಯ, ಪ್ರೀತಿಸ್ಲೇ ಬೇಕು, ಆಕಾಶ ಗಂಗೆ, ಸಖ-ಸಖಿ ಹೀಗೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದೇನೆ. ಬೇರೆ ಬಾಷೆಗಳಲ್ಲೂ ಅನೇಕ ಹೆಸರಾಂತ ನಟರ ಜೊತೆ ನಟಿಸಿದ್ದೇನೆ. ಅದೊಂದು Wonderful Experience. ಸಿನಿಮಾಕ್ಕೆ ಬಂದ ಹೊಸದರಲ್ಲಿ ಅಪ್ಪ ಜೊತೆಗೆ ಬರೋರು. ಆಗ ನಾವು ಅಂದಕೊಂಡಂಗೆ ಇಲ್ಲ, ಇಲ್ಲಿಯೂ ವಾತಾವರಣ ಚೆನ್ನಾಗಿದೆ, ಅದು ಬಳಸಿಕೊಂಡ ಹಾಗೆ, ನಡೆದು ಕೊಂಡ ಹಾಗೆ ಅನ್ನೋದು ಗೊತ್ತಾಯಿತು. ಈಗ ಮನೇನಲ್ಲಿ ನನ್ನ ಸಿನಿಮಾ ಬದುಕಿಗೆ ಸಪೋರ್ಟು ಮಾಡ್ತಾರೆ.
  • ಸಿನಿಮಾದಲ್ಲಿ ಗಾಡ್ ಫಾದರ್ ಯಾರು? ನಿಮ್ಮ ಸಿನಿಮಾಗಳು ಈಚೆಗೆ ಕಡಿಮೆ ಆಗಿದೆಯಲ್ವಾ?
-ನನಗೆ ಸಿನಿಮಾದಲ್ಲಿ ಗಾಡ್ ಫಾದರ್ ಅಂತ ಯಾರೂ ಇಲ್ಲ, ನನ್ನ ಪ್ರಯತ್ನಗಳೇ ಮುಖ್ಯವಾಗಿ ಅವಕಾಶಗಳು ಒದಗಿ ಬಂದ್ವು. ನನಗೆ ಅವಕಾಶಗಳು ಬರ್ತಿಲ್ಲ ಅಂತ ಅಲ್ಲ, ಪಾತ್ರಕ್ಕೆ scope ಇಲ್ಲದಿದ್ದರೆ ಅದನ್ನ ಒಪ್ಪಕೊಳ್ಳೋದಾದ್ರು ಹೇಗೇ ಹೇಳಿ? ಹೀಗೆ ಬಂದು ಹಾಗೆ ಹೋಗುವಂತಹ ಅವಕಾಶಗಳು ಬೇಡ. ಮೊದಲಿಗೆ ಚಿತ್ರದ ಕಥೆ, ಚಿತ್ರಕಥೆ ನೋಡ್ತೀನಿ. ಇಷ್ಟ ಆದ್ರೆ ಮಾತ್ರ ಮಾಡ್ತೀನಿ. ಇದುವರೆ 5ಭಾಷೆಗಳಿಂದ ಸರಿಸುಮಾರು 50ಚಿತ್ರಗಳಲ್ಲಿ ನಟಿಸಿದ್ದೀನಿ.. ಮುಂದೇನೂ ನಟಿಸುತ್ತೇನೆ. ತಮಿಳಿನಲ್ಲಿ ನಾನು ನಾಯಕಿಯಾಗಿರುವ ಚಿತ್ರವೊಂದು ಈ ವಾರ ತೆರೆಗೆ ಬರ್ತಿದೆ. ಕನ್ನಡದಲ್ಲೂ ಅವಕಾಶಗಳಿವೆ. ಮಹಿಳೆ ನಿರ್ದೇಶಕರಾಗಿರುವ ಚಿತ್ರ ಮತ್ತೊಂದು ಚಿತ್ರ ಮಾತುಕಥೆಯ ಹಂತದಲ್ಲಿದೆ.
  • ಹಿರಿತೆರೆ ಹಾಗೂ ಕಿರುತೆರೆಯ ಅನುಭವ ಹೇಗಿದೆ?
-ಹಿರಿತೆರೆ ಅಂದ್ರೆ ಎತ್ತರದ ಅವಕಾಶ, ಕಿರುತೆರೆ ಅಂದ್ರೆ ವಿಶಾಲವಾದ ಅವಕಾಶ. ಆ ಅವಕಾಶಗಳನ್ನು ನಾವು ಹೇಗೆ ಬಳಸಿಕೊಳ್ತೀವೆ ಅನ್ನೋದ್ರ ಮೇಲೆ ನಮ್ಮ ಭವಿಷ್ಯ ನಿರ್ಧಾರವಾಗುತ್ತೆ. ಅದು ನಮ್ಮ ಅಸ್ತಿತ್ವದ ಪ್ರಶ್ನೆಯೂ ಹೌದು. ಎರಡೂ ಕಡೆಯ ಅವಕಾಶವನ್ನೂ ಸಮರ್ಪದಕವಾಗಿ ಬಳಸಿಕೊಳ್ಳುವ ಬಗ್ಗೆ ಮಾತ್ರ ಯೋಚಿಸುತ್ತೇನೆ.
  • ನಿಮ್ಮ ಮದುವೆ ಬಗ್ಗೆ ಗಾಸಿಪ್ ಹುಟ್ಟಿತ್ತಲ್ಲಾ ಏನಿದೆಲ್ಲಾ?
- ನೋಡಿ ಇದೇ ನನಗೆ ಬೇಜಾರಾಗೋದು. ಒಂದ್ಸಾರಿ ನಾನು ಶೂಟಿಂಗ್ ಸೆಟ್ ನಲ್ಲಿರೊವಾಗ ನನ್ನ ಫ್ರೆಂಡ್ಸ್ ಫೋನ್ ಮಾಡಿ ನಿಂದು ಮದ್ವೆ ಆಯ್ತಂತೆ , ಹೈದರಾಬಾದ್ ಹುಡುಗ ಸಾಪ್ಟ್ ಇಂಜಿನಿಯರ್ ಅಂತೆ ಅಂದ್ರು. ಆಗ ನಾನು ನಕ್ಕುಬಿಟ್ಟೆ, ಯಾಕೆ ಇಂತಹ ರೂಮರ್ ಗಳು ಹಬ್ಬುತ್ತವೋ ತಿಳಿಯುತ್ತಿಲ್ಲ. ನಾನು ಅದನ್ನೆಲ್ಲಾ ಸೀರಿಯಸ್ ಆಗಿ ತಗೊಳಲ್ಲ. ಪತ್ರಕರ್ತರು ಕೂಡ ಿಂತಹ ವಿಚಾರಗಳ ಬಗ್ಗೆ ಪೂರ್ಣ ವಿಚಾರ ತಿಳಿದು ಕೊಂಡು ಬರೆದ್ರೆ ಒಳ್ಳೆದಲ್ವಾ? ಇದೆಲ್ಲಕ್ಕಿಂತ ನನಗೆ ಶಾಕಿಂಗ್ ನ್ಯೂಸ್ ಅಂದ್ರೆ ನಾನು ಸತ್ತು ಹೋಗಿಬಿಟ್ಟಿದೀನಿ ಅಂತ ಸುದ್ದಿ ಬಂದಿತ್ತು. ಅದೇನಾದ್ರೂ ನಿಜ ಆಗಿದ್ರೆ ನೀವೀಗ ಛಾಯಾಸಿಂಗ್ ದೆವ್ವದ ಜೊತೆ ಮಾತಾಡ್ಬೇಕಿತ್ತು ಹ...ಹ..ಹ.ಹ...ಹಾ. ನೋಡಿ ಸಾರ್ ಇದು ತುಂಬಾ ಬೇಸರ ವಾಗುತ್ತೆ. ನಾನು ಇನ್ನೂ ಒಳ್ಳೊಳ್ಳೆ ಸಿನಿಮಾದಲ್ಲಿ ಮಾಡ್ಬೇಕು ಇಂಡಷ್ಟ್ರೀಲಿ ಇರಬೇಕು ಅಲ್ವಾ?
  • ಕುಣಿಯೋಣು ಬಾರ ರಿಯಾಲಿಟಿ ಶೋ ಬಗ್ಗೆ ಹೇಳಿ?
- ಆ ಶೋ ತುಂಬಾ ಇಷ್ಟವಾಗಿದೆ. ಮಕ್ಕಳ ಕಾರ್ಯಕ್ರಮ, ಅವರ ಪ್ರತಿಭಾ ಪ್ರದರ್ಶನ, ತಪ್ಪು-ಒಪ್ಪುಗಳನ್ನು ತಿದ್ದಿ ಹೇಳೋಕೆ ಖುಷಿ. ಮಕ್ಕಳು ಹೇಳಿದ್ದನ್ನು ಬಹಳ ಬೇಗ ಕಲಿಯುತ್ತಾರೆ. ಅವರ performance level super. ಅದ್ರಲ್ಲೂ ಅವರ ತಂದೆ - ತಾಯಿಗಳ ಜೊತೆ ಅವರು ಡ್ಯಾನ್ಸ್ ಮಾಡಿದ್ದು ನನಗೆ ಮರೆಯಲಾಗದ ಕ್ಷಣ. ಆಗೆಲ್ಲ ನಾನು ಅತ್ತು ಬಿಟ್ಟಿದ್ದೇನೆ, ಅಂತಹ ಅವಕಾಶ ಎಷ್ಟು ಮಕ್ಕಳಿಗೆ ಸಿಗುತ್ತೆ ಹೇಳಿ?
  • ಸಿನಿಮಾ ರಂಗದಲ್ಲಿ ನಿಮ್ಮ ಕನಸುಗಳ ಬಗ್ಗೆ ಹೇಳಿ?
-ನಿಜ ಜೀವನದಲ್ಲಿ ನಾವು ಏನಾಗಲು ಸಾಧ್ಯವಿಲ್ಲವೋ ಅದೆಲ್ಲಾ ಪಾತ್ರಗಳಲ್ಲಿ ನಾವು ಅಭಿನಯಿಸಬಹುದು ಅದು ಖುಷಿಯ ವಿಚಾರ, ನನಗೂ ಒಮ್ಮೆ ನಿರ್ದೇಶಕಿಯಾಗುವ ಕನಸಿದೆ. ಒಳ್ಳೊಳ್ಳೆ ಪಾತ್ರಗಳ ನಿರೀಕ್ಷೆಯೂ ಇದೆ. ಆದ್ರೆ ನಿರೀಕ್ಷೆಗಳು ನಿರಾಶೆ ಮಾಡ್ತಾವೆ. ಹಾಗಾಗಿ ಕನಸುಗಳು ಬೇಕು, ಪ್ರಯತ್ನ ಬೇಕು ಆದರೆ ಅತಿಯಾದ ನಿರೀಕ್ಷೆಗಳು ಖಂಡತ ಬೇಡ. ಅದು ತುಂಬಾ ದುಖ ತರುತ್ತೆ ಎಂದು ಮಾತು ಮುಗಿಸಿದರು.

Sunday, April 4, 2010

ಸಾನಿಯಾ-ಮಲ್ಲಿಕ್ ಬೆಸುಗೆಗೆ ಅಡ್ಡಿ ಯಾಕೆ?

ಅತಿಯಾದ ಧರ್ಮಾಂಧತೆ ಸಂಬಂಧಗಳನ್ನಷ್ಟೇ ಹಾಳು ಮಾಡುವುದಿಲ್ಲ, ಬೆಸುಗೆಯನ್ನೂ ಕಿತ್ತು ಹಾಕಿ ಬಿಡುತ್ತದೆ, ದ್ವೇಷವನ್ನು ಹಲವಾರು ವರ್ಷಗಳ ಕಾಲ ಕಾಯ್ದು ಬಿಡುತ್ತದೆ, ಇನ್ನು ಸರಿಹೋಗುವುದಿಲ್ಲವೇನೋ ಎಂಬಷ್ಟರ ಮಟ್ಟಿಗೆ ತಲುಪಿ ಕೊಳ್ಳುತ್ತದೆ. ಹೌದು ಇಂತಹದ್ದೊಂದು ಕ್ರಿಯೆ ಸೃಷ್ಟಿಸುವ ದೊಡ್ಡ ಕಂದರ ಮುಂದಿನ ತಲೆಮಾರಿಗೂ ಮಾಸದ ನೆನಪನ್ನು ಉಳಿಸುತ್ತದೆ. ಸಧ್ಯ ಇಂತಹ ಸಂಧರ್ಭ ಒದಗಿ ಬಂದಿರೋದು ಭಾರತದ ಖ್ಯಾತ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ಮಲ್ಲಿಕ್ ಮದುವೆ ಸುದ್ದಿ ಹೊರ ಬಿದ್ದಾಗ. ಹೌದಲ್ಲ ಇವರಿಬ್ಬರ ಮದುವೆಗೆ ಮೂರನೆಯವರ ಅಡ್ಡಿ ಯಾಕೆ ? ವರ ಪಾಕೀಸ್ತಾನದವನು, ವಧು ಭಾರತದವಳು ಎಂಬ ಕಾರಣಕ್ಕೆ ಅಡ್ಡಿ ವ್ಯಕ್ತಪಡಿಸಬಹುದೆ? ಅವರಿಬ್ಬರೂ ಮದುವೆಯಾದರೆ ಹೇಗೆ ನಡೆದು ಕೊಳ್ಳಬೇಕು ಎಂಬುದನ್ನು ನಿರ್ಧರಿಸುವುದಾದರೂ ಯಾರು? ಮದುವೆ ಅವರ ವೈಯುಕ್ತಿಕ ವಿಚಾರ ಇದರಲ್ಲಿ ಮೂರನೆಯವರು ಯಾಕೆ ತಲೆ ತೂರಿಸಬೇಕು? ಇವರ ಮದುವೆಗೆ ರಾಷ್ಟ್ರೀಯ ಹಿತಾಸಕ್ತಿ ಯಾಕೆ ಅಡ್ಡ ಬರಬೇಕು? ಅಷ್ಟಕ್ಕೂ ಯಾವುದೇ ಸ್ವತಂತ್ರ ನಿರ್ಧಾರ ತೆಗೆದು ಕೊಳ್ಳಲು ಅವರಿಗೆ ಹಕ್ಕಿಲ್ಲವೇ ?ಎಂಬಿತ್ಯಾದಿ ಪ್ರಶ್ನೆಗಳು ಈಗ ಚಾಲ್ತಿಯಲ್ಲಿವೆ. ಕಳೆದ ಎರಡು ಮೂರು ದಿನಗಳಿಂದ ಈ ಪರಿಸ್ಥಿತಿ ಉದ್ಭವಿಸಲು ಕಾರಣವಾಗಿರೋದು ಮತ್ತೆ ಅದೇ ಧರ್ಮಾಂಧತೆ!
ಹೌದು ಭಾರತ ಮತ್ತು ಪಾಕಿಸ್ಥಾನಗಳು 1947ರಲ್ಲಿ ಪ್ರತ್ಯೇಕ ಗೊಂಡ ಮೇಲೆ ಸೌಹಾರ್ಧ ಸಂಬಂಧಕ್ಕಿಂತ ಕಾಲು ಕೆರೆದು ಜಗಳ ಮಾಡಿಕೊಂಡದ್ದೆ ಹೆಚ್ಚು. ದೇಶ ವಿಭಜನೆಯಾದ ಮೇಲೆ ಅಲ್ಲಿ ನೆಲೆಸಿದ್ದ ಹಿಂದೂಗಳನ್ನು ಪಾಕಿಗಳು, ಇಲ್ಲಿ ನೆಲೆಸಿದ್ದ ಮುಸಲ್ಮಾನರನ್ನು ಹಿಂದೂಗಳು ಹೊಡೆದಟ್ಟಿದ್ದು ಈಗ ಇತಿಹಾಸ. ಈಗಲೂ ಎರಡೂ ದೇಶಗಳ ಪ್ರಮುಖ ನಾಯಕರ ಮೂಲ ವಾಸಸ್ಥಾನಗಳು ಇರುವುದು ಪಾಕಿಸ್ತಾನ ಹಾಗೂ ಭಾರತದಲ್ಲಿ. ಖ್ಯಾತ ಪತ್ರಕರ್ತ ಕುಲದೀಪ್ ನಯ್ಯರ್, ರಾಷ್ಟ್ರೀಯ ಮುಖಂಡ ಎಲ್ ಕೆ ಅಡ್ವಾಣಿ ಇತ್ಯಾದಿಗಳ ಮೂಲ ನೆಲೆ ಇಂದಿಗೂ ಪಾಕಿಸ್ತಾನದಲ್ಲಿದೆ, ಹಾಗೆಯೇ ಮಾಜಿ ಅಧ್ಯಕ್ಷ ಜನರಲ್ ಪರ್ವೆಜ್ ಮುಷರಫ್ ಮತ್ತಿತರರ ಮೂಲ ವಾಸಸ್ಥಾನ ಇಂದಿಗೂ ಭಾರತವೇ ಆಗಿದೆ. ಆದಾಗ್ಯೂ ಜಿಹಾದ್ ಮನಸ್ತತ್ವದ ಪಾಕೀಗಳ ಹೀನ ಕೃತ್ಯಗಳಿಂದಾಗಿ ಭಾರತ ಪದೇ ಪದೇ ಮುಜುಗುರಕ್ಕೆ ಮತ್ತು ಆತಂಕಕ್ಕೆ ಒಳಗಾಗುತ್ತಿದೆ, ಇಲ್ಲಿನ ಶಾಂತಿಗೆ ಭಂಗ ಬರುತ್ತಿದೆ.
ಇತ್ತೀಚೆಗಷ್ಟೆ ಭಾರತದಲ್ಲೇ ಹುಟ್ಟಿ ಬೆಳೆದು, ಇಲ್ಲೇ ವಾಸಿಸಿ, ಹೆಸರು ಮಾಡಿ, ಇಲ್ಲಿಯ ನೆಲದ ಅನ್ನವನ್ನು ಉಂಡು ಭಾರತದಲ್ಲಿ ತನಗೆ ಹಿಂಸೆಯಾಗುತ್ತಿದೆ ಎಂದು ಆರೋಪಿಸಿ ಎದ್ದು ಹೋದವರು ಎಂ ಎಫ್ ಹುಸೇನ್. ಕೆಲ ತಿಂಗಳುಗಳ ಹಿಂದೆ ಐಪಿಎಲ್ ಕ್ರಿಕೆಟ್ ತಂಡದ ಆಯ್ಕೆ ಸಂಧರ್ಭದಲ್ಲಿ ಪಾಕಿ ಆಟಗಾರರನ್ನು ಆಯ್ಕೆ ಮಾಡಿಕೊಳ್ಳಲಿಲ್ಲ ಎಂಬ ಕಾರಣಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದವನು ಖ್ಯಾತ ನಟ ಶಾರೂಖ್ ಖಾನ್. ಆಟಗಾರರು ಬೇಕಿದ್ದುದು ಆತನ ತಂಡಕ್ಕೆ ಆತನೇ ಸ್ವತ: ಪಾಕಿಗಳನ್ನು ಆಯ್ಕೆ ಮಾಡಿಕೊಂಡಿರಲಿಲ್ಲ! ಹಿಂದೆ ವಿ ಪಿ ಸಿಂಗ್ ದೇಶದ ಪ್ರಧಾನ ಮಂತ್ರಿಯಾಗಿದ್ದಾಗ ಗೃಹ ಸಚಿವನಾಗಿದ್ದು ಮಪ್ತಿ ಸಯಿದ್. ಆತನ ಮಗಳನ್ನು ಉಗ್ರರು ಅಪಹಿಸಿದಂತೆ ನಾಟಕವಾಡಿ ಜೈಲಿನಲ್ಲಿದ್ದ ಪಾಕಿ ಉಗ್ರರನ್ನು ಬಿಡುಗಡೆಗೊಳಿಸಿದ್ದು ಈಗ ಇತಿಹಾಸ. ಬೆಂಗಳೂರಿನಲ್ಲಿ ನಡೆದ ಸರಣಿ ಬಾಂಬ್ ದುಷ್ಕೃತ್ಯದ ಹಿಂದಿನ ಹೆಜ್ಜೆಗಳು ತಲುಪಿದ್ದು ಪಾಕೀಸ್ತಾನಕ್ಕೆ! ಮುಂಬೈನಲ್ಲಿ ನಡೆದ ತಾಜ್ ಹೋಟೆಲ್ ದಾಳಿಯ ರೂವಾರಿಯೂ ಪಾಕಿಸ್ತಾನವೇ ಆಗಿದೆ ಹೀಗಿರುವಾಗ ಮತೀಯ ದೇಶವೊಂದರ ಸಂಬಂಧವನ್ನು ಒಪ್ಪಿಕೊಳ್ಳಲು ಯಾರಿಂದಲೂ ಸಾಧ್ಯವಾಗಲಾರದು. ಹಾಗಂತ ವೈಯುಕ್ತಿಕ ನೆಲೆಗಟ್ಟಿನಲ್ಲಿ ನಡೆಯುವ ಸಂಬಂಧಗಳನ್ನು ಅಡ್ಡಿ ಪಡಿಸುವಂತೆಯೂ ಇಲ್ಲ. ಯಾಕೆಂದರೆ ಬಾಹ್ಯವಾಗಿ/ಪರೋಕ್ಷವಾಗಿ ನಡೆಯುವ ಕುಕೃತ್ಯಗಳಿಗೂ ವೈಯುಕ್ತಿಕ ನೆಲೆಗಟ್ಟಿನಲ್ಲಿ ನಡೆಯುವ ಸದುದ್ದೇಶದ ಕ್ರಿಯೆಗಳಿಗೂ ಅಜಗಜಾಂತರ ವ್ಯತ್ಯಾಸವಿದೆಯಲ್ಲವೇ?
ಇಲ್ಲಿ ಸಾನಿಯಾ ಮಿರ್ಜಾ , ಪಾಕಿಸ್ತಾನದ ಮಾಜಿ ಕ್ರಿಕೆಟ್ ಕಪ್ತಾನ ಶೋಯೆಬ್ ಮಲ್ಲಿಕ್ ನನ್ನು ಮುದುವೆಯಾಗುತ್ತಾರೆ ಎಂಬ ವಿಚಾರಕ್ಕಿಂತಲೂ ಅವರಿಬ್ಬರ ಮದುವೆ ವಿಚಾರ ಬಂದಾಗ ದರಿದ್ರ ಪಾಕೀ ಮುಸ್ಲ್ಮಾನರು ನಡೆದುಕೊಳ್ಳುತ್ತಿರುವ ರೀತಿ ರೊಚ್ಚಿಗೇಳಿಸುತ್ತದೆ. ಅವರಿಬ್ಬರ ಮದುವೆ ವಿಚಾರ ಬಹಿರಂಗವಾಗುತ್ತಿದ್ದಂತೆ ಸಾನಿಯಾ ಇನ್ನು ಮೇಲೆ ಪಾಕಿಸ್ತಾನದ ಪರವಾಗಿ ಆಡಬೇಕು ಎಂದು ಕಟಪ್ಪಣೆ ಹೊರಡಿಸುವ ಹುಂಬತನಕ್ಕೆ ಏನು ಮಾಡಬೇಕು ಹೇಳಿ? ಇದಕ್ಕೂ ಮುನ್ನ ಕೆಲ ವರ್ಷಗಳ ಹಿಂದೆ ಸಾನಿಯಾ ಮುಸಲ್ಮಾನಳಾಗಿರುವುದರಿಂದ ಟೆನ್ನಿಸ್ ಆಡುವಾಗ ತುಂಡುಗೆ ಧರಿಸಬಾರದು ಎಂದು ಮುಸ್ಲಿಂ ಮೌಲ್ವಿಗಳು ಫತ್ವಾ ಹೊರಡಿಸಿದ್ದರು. ಆದರೆ ಸಾನಿಯಾ ಅದಕ್ಕೆಲ್ಲಾ ಕ್ಯಾರೇ ಎಂದಿರಲಿಲ್ಲ. 23ರ ಹರೆಯದ ಮೂಗುತಿ ಸುಂದರಿ ಸಾನಿಯಾ ಮಿರ್ಜಾ ಮುಂಬೈನ ಕ್ರೀಡಾ ಪತ್ರಕರ್ತ ಇಮ್ರಾನ್ ಮಿರ್ಜಾನ ಪುತ್ರಿ. ಹುಟ್ಟಿದ್ದು ಬೆಳೆದಿದ್ದು ಆಂದ್ರಪ್ರದೇಶದ ಹೈದರಾಬಾದ್ ನಲ್ಲಿಯೇ. ತನ್ನ 6ನೇ ವಯಸ್ಸಿನಲ್ಲಿಯೇ ಟೆನ್ನಿಸ್ ಆಡಲಾರಂಭಿಸಿದ ಸಾನಿಯಾ ಟೆನ್ನಿಸ್ ನಲ್ಲಿ ಸಾಧನೆ ಗೈಯ್ಯವ ಮೂಲಕ ವೃತ್ತಿ ಜೀವನಕ್ಕೆ ಹೆಜ್ಜೆ ಇರಿಸಿದ್ದು 2003ರಲ್ಲಿ. ಈಕೆ ಹೈದರಾಬಾದ್ನಲ್ಲಿನ ಸೇಂಟ್ ಮ್ಯಾರಿಸ್ ಕಾಲೇಜಿನ ಪಧವೀಧರೆಯೂ ಹೌದು. ಟೆನ್ನಿಸ್ ಅಗ್ರ ಪಟ್ಟಿಯಲ್ಲಿ ಸಾನಿಯಾ 27ರಲ್ಲಿ ಸ್ಥಾನ ಪಡೆದಿದ್ದಾರೆ. ತಮಿಳುನಾಡಿನ ಎಂ ಜಿ ಆರ್ ಎಜುಕೇಶನಲ್ಲ ಅಂಡ್ ರೀಸರ್ಚ್ ಇನ್ಸ್ಟಿಟ್ಯೂಟ್ ವಿವಿ ಸಾನಿಯಾಗೆ ಡಿಲಿಟ್ ಪದವಿ ನೀಡಿ ಗೌರವಿಸಿದೆ. ದೇಶದ ಲಕ್ಷಾಂತರ ಮಂದಿಯ ಕಣ್ಮಣಿಯಾಗಿಯೂ ಸಾನಿಯಾ ಮಿರ್ಜಾ ಹೆಸರಾಗಿದ್ದಾರೆ. ಒಟ್ಟಾರೆ ಆಕೆ ದೇಶದ ಮಾದರಿ ಕ್ರೀಡಾಪಟು ಆಗಿದ್ದಾರೆ. ಮುಂದಿನ ಕಾಮನ್ ವೆಲ್ತ್ ಮತ್ತು ಏಸಿಯನ್ ಗೇಮ್ಸ್ ನಲ್ಲಿ ಸಾನಿಯಾ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಇಂತಹ ಸನ್ನಿವೇಶದಲ್ಲಿ ಅವರು ಒಬ್ಬ ಪಾಕಿಯನ್ನು ಮದುವೆಯಾಗುತ್ತಿದ್ದಾರೆ ಎಂಬ ಕಾರಣಕ್ಕೆ ಪಾಕೀಗಳು ಸಾನಿಯಾ ಭಾರತದ ಪರ ಆಡದಂತೆ ನಿರ್ಬಂದಿಸುವುದು ಸರಿಯೇ??? ಸಾನಿಯಾ, ಶೋಯೆಬ್ ಮಲ್ಲಿಕ್ ನನ್ನು ಮದುವೆಯಾಗುತ್ತಿದ್ದಾರೆ ಎಂದಾಗ ಭಾರತದಲ್ಲಿ ಅದಕ್ಕೆ ಯಾವುದೇ ರೀತಿಯ ವಿರೋಧಾಭಾಸದ ಘಟನೆಗಳು ನಡೆಯಲಿಲ್ಲ, ಆದರೆ ಪಾಕೀಗಳೇಕೆ ಹೀಗೆ ವರ್ತಿಸುತ್ತಾರೆ? ಶೋಯೆಬ್ ಮಲ್ಲಿಕ್ ಪಾಕೀಸ್ತಾನದ ಮಾದರಿ ವ್ಯಕ್ತಿಯೇ ಇರಬಹುದು ಹಾಗೆಂದ ಮಾತ್ರಕ್ಕೆ ಆತನ ಪರ ವಕಾಲತ್ತು ವಹಿಸುವ ಅಲ್ಲಿನ ಪ್ರಮುಖರು ಫತ್ವಾ ಮಾದರಿಯ ಹೇಳಿಕೆಗಳನ್ನು ನೀಡುವ ಮೂಲಕ ಭಾರತೀಯರನ್ನು ರೊಚ್ಚಿಗೇಳಿಸುವುದೆಕೆ? ಹೀಗಾದಾಗ ವ್ಯತಿರಿಕ್ತ ಘಟನೆಗಳು ನಡೆಯಲು ಆಸ್ಪದ ಮಾಡಿದಂತಾಗುವುದಿಲ್ಲವೇ? ಸಾನಿಯಾ-ಶೋಯೆಬ್ ಪರಸ್ಪರರನ್ನು ಕಳೆದ 6-7ತಿಂಗಳಿನಿಂದ ಪ್ರೀತಿಸಿದವರು, ಈಗ ಇದೇ ಏಪ್ರಿಲ್ ತಿಂಗಳಿನಲ್ಲಿ ನಿಕಾ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ ಮತ್ತು ದುಬೈನಲ್ಲಿ ನೆಲೆಸಲು ನಿರ್ದರಿಸಿದ್ದಾರೆ, ಮದುವೆಯ ನಂತರವೂ ಸಾನಿಯಾ ಭಾರತದ ಪರವಾಗಿ ಮಾತ್ರವೇ ಆಡುವಳು ಎಂದು ಅವರ ತಂದೆ ಇಮ್ರಾನ್ ಮಿರ್ಜಾ ಹೇಳಿದ್ದಾರೆ ಹೀಗಿರುವಾಗ ಆಕೆಯ ಮದುವೆಗೆ ಮುಸ್ಲಿಂ ಮೌಲ್ವಿಗಳ ಫತ್ವಾಗಳು, ಕೆಲ ಹಿಂದೂ ಗಳ ಕೋಡಂಗಿತನದ ವರ್ತನೆಗಳು ಅಡ್ಡಿಯಾಗದಿರಲಿ ಎಂದು ಆಶಿಸ ಬಹುದಲ್ಲವೇ?

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...