Saturday, July 31, 2010

ಬಚಾವೋ ಯಾತ್ರೆ ಅಂತೆ ಏನ್ರಿ ಇದೆಲ್ಲಾ?

ಬಚಾವೋ ಯಾತ್ರೆ ಅಂತೆ ಯಾರನ್ನ ಯಾರು ಬಚಾವ್ ಮಾಡ್ಬೇಕ್ರಿ? ಬಳ್ಳಾರಿ ಬಚಾವ್ ಮಾಡ್ಬೇಕೋ? ಬೆಂಗಳೂರು ಬಚಾವ್ ಮಾಡ್ಬೇಕೋ, ರೆಡ್ಡಿಗಳನ್ನು ರಾಜ್ಯ ರಾಜಕೀಯದಿಂದ ಬಚಾವ್ ಮಾಡ್ಬೇಕೋ, ರೆಡ್ಡಿಗಳಿಂದ ಬಿಜೆಪಿ ಸರ್ಕಾರ ಬಚಾವ್ ಮಾಡ್ಬೇಕೋ,ಅಥ್ವ ಬಿಜೆಪಿ ಸರ್ಕಾರದಿಂದ ರೆಡ್ಡಿಗಳನ್ನು ಬಚಾವ್ ಮಾಡ್ಬೇಕೋ? ರೆಡ್ಡಿಗಳಿಂದ ಸಿದ್ದರಾಮಯ್ಯನವರನ್ನ ಬಚಾವ್ ಮಾಡ್ಬೇಕೋ, ಇಲ್ಲ ವಿಧಾನ ಸೌಧನಾ ರಾಜಕೀಯ ಪುಡಾರಿಗಳಿಂದ ಗೂಂಡಾಗಳಿಂದ ಬಚಾವ್ ಮಾಡಬೇಕೋ ,ಕಾಂಗ್ರೆಸ್-ಜೆಡಿಎಸ್ ನವರಿಂದ ಸರ್ಕಾರಾನ ಬಚಾವ್ ಮಾಡಬೇಕೋ? ಯಡಿಯೂರಪ್ಪನವರನ್ನ ರೆಡ್ಡಿಗಳಿಂದ ಬಚಾವ್ ಮಾಡಬೇಕೋ, ಅಂತಿಮವಾಗಿ ರಾಜ್ಯದ ಜನತೆಯನ್ನು ಈ ರಾಜಕಾರಣಿಗಳಿಂದ ಬಚಾವ್ ಮಾಡಬೇಕೋ? ಒಂದೂ ತಿಳಿತಿಲ್ಲ.ಅಧಿಕಾರದ ಹವಣಿಕೆಗೆ ಬಿದ್ದ ಪುಡಾರಿಗಳು ವಿಧಾನಸೌಧದಲ್ಲಿ ಕಿಸಿದಿದ್ದು ಸಾಕಲ್ಲ ಅಂತ ಬೀದಿಗಿಳಿದಿದ್ದಾರೆ ಆ ಮೂಲಕ ಪರಸ್ಪರರನ್ನ ಬೆತ್ತಲು ಮಾಡುತ್ತಿದ್ದಾರೆ. ಈ ನಡುವೆ ಮುಗುಮ್ಮಾಗಿ ಕುಳಿತವರು ಪರಸ್ಪರರನ್ನು ಹಣಿಯುವ, ವೈಯುಕ್ತಿಕ ರಾಜಕೀಯ ಲಾಭ ಪಡೆಯುವ ನಿಟ್ಟಿನಲ್ಲಿ ಅಕ್ರಮ ರಾಜಕೀಯ ಸಂಭಂಧಗಳಿಗೆ ಮುಂದಾಗಿದ್ದಾರೆ. ಇವತ್ತು ಕರ್ನಾಟಕದಲ್ಲಿ ನೈತಿಕವಾಗಿ ಮತ್ತು ಸೈದ್ದಾಂತಿಕವಾಗಿ ಬಡಿದಾಡಲು ರಾಜಕಾರಣಿಗಳಿಗೆ ಹಲವು ವಿಚಾರಗಳಿವೆ, ವಿಧಾನ ಸಭೆಯಲ್ಲಿ, ವಿಧಾನ ಪರಿಷತ್ ನಲ್ಲಿ ಜನರ ಹಿತಾಸಕ್ತಿಗೆ ಧ್ವನಿಯೆತ್ತಲು ಸಮಸ್ಯೆಗಳು ಹಾಸು ಬಿದ್ದಿವೆ ಹೀಗಿರುವಾಗ ರೆಡ್ಡಿಗಳನ್ನು ಕಿತ್ತೆಸೆಯುವ ಜೊತೆಗೆ ಅಧಿಕಾರ ಹಿಡಿಯುವ ಏಕೈಕ ಅಜೆಂಡಾದೊಂದಿಗೆ ಕಾಂಗ್ರೆಸ್ ಬೀದಿಗೆ ಬಂದಿದ್ದರೆ ಹತಾಶರಾದ ರೆಡ್ಡಿಗಳು ಶ್ರೀರಾಮುಲು ತಲೆಬೋಳಿಸಿ ಸ್ವಾಭಿಮಾನ ಯಾತ್ರೆ ಕೈಗೊಂಡಿದ್ದಾರೆ ಆ ಮೂಲಕ ರಾಜ್ಯದಲ್ಲಿ ರಾಜಕೀಯ ಸಂಘರ್ಷದ ವೇದಿಕೆ ಸಿದ್ದಗೊಂಡಿದೆ.
ರಾಜ್ಯದಲ್ಲಿ ಈ ಹೊತ್ತಿಗೆ ತುಂಬಿ ತುಳುಕಬೇಕಾಗಿದ್ದ ಜಲಾಶಯಗಳು ಬರಿದಾಗಿವೆ, ವಿದ್ಯುತ್ ಉತ್ಪಾದನೆ ಸ್ಥಗಿತಗೊಂಡಿದೆ, ಗ್ರಾಮೀಣ ರೈತರಿಗೆ ವಿದ್ಯುತ್ ಒದಗಿಸುವ ಟ್ರಾನ್ಸ್ಫಾರ್ಮರ್ ಗಳ ವಿತರಣೆಗೆ ಬಜೆಟ್ ಕೊರತೆ ಇದೆ, ಜಲಾಶಯದ ನೀರು ಅವಲಂಬಿಸಿರುವ ಹಲವು ನಗರಗಳಿಗೆ ಕುಡಿಯುವ ನೀರಿನ ತತ್ವಾರ ಎದುರಾಗಿದೆ. ರೈತರಿಗೆ ಇದು ಕೃಷಿ ಆರಂಭದ ಸಮಯ, ನಕಲಿ ಬಿತ್ತನೆ ಬೀಜ ಮಾರುಕಟ್ಟೆಗೆ ಬಂದಿದೆ, ರಸಗೊಬ್ಬರ ಕೊರತೆ ಅಲ್ಲಲ್ಲಿ ಇದೆ, ತಂಬಾಕು ಬೆಳೆಗಾರರಿಗೆ ಸಾವಿರಾರು ಟನ್ ನಕಲಿ ಗೊಬ್ಬರ ವಿತರಣೆಯಾಗಿದೆ, ವಾಣಿಜ್ಯ ಬೆಳೆಗಳಿಗೆ ರೋಗ ತಗುಲಿದೆ, ಈಗ ಆರಂಭವಾಗಿರುವ ಮಳೆಯ ಬಿರುಸಿಗೆ ದಕ್ಷಿಣದಲ್ಲಿ ಪ್ರವಾಹ ಪರಿಸ್ಥಿತಿಯಿದೆ. ಉತ್ತರದಲ್ಲಿ ಕಳೆದ ವರ್ಷ ನೆರೆಗೆ ತುತ್ತಾಗಿದ್ದ ಮಂದಿ ಆಸರೆಯಿಲ್ಲದೇ ನರಳುವ ಪರಿಸ್ಥಿತಿ ಇದೆ, ಈ ಗ ಮತ್ತೆ ಅಲ್ಲಿ ಪ್ರವಾಹ ಭೀತಿ ಇದೆ, ರಾಜ್ಯದ ಕೆಲವೇ ಪ್ರದೇಶಗಳಲ್ಲಿ ಮೊಡಬಿತ್ತನೆ ಆಗಬೇಕಿದೆ, ಹಲವು ಮೂಲಭೂತ ಸೌಕರ್ಯ ಅಭಿವೃದ್ದಿ ಕೆಲಸಗಳಿಗೆ ಅನುದಾನ/ಯೋಜನೆ ಮಂಜೂರಾಗಬೇಕಿದೆ, ಕೇಂದ್ರ ಸರ್ಕಾರದ ಮಹತ್ವದ ಯೋಜನೆ ಉದ್ಯೋಗ ಖಾತ್ರಿ ಹಳ್ಳ ಹಿಡಿದಿದೆ, ಹತ್ತು ಹಲವು ಆಶ್ರಯ ಯೋಜನೆಗಳಿದ್ದರೂ ಎಷ್ಟೋ ಮಂದಿಗೆ ಸೂರು ಸಿಕ್ಕಿಲ್ಲ ಬೆಳಕೂ ದಕ್ಕಿಲ್ಲ, ಶಾಲೆಗೆ ಸೇರಿದ ಮಕ್ಕಳಿಗೆ ಪುಸ್ತಕ-ಸೈಕಲ್ ಸಿಕ್ಕಿಲ್ಲ, ಅರೆಕಾಲಿಕ ಉದ್ಯೋಗಿಗಳಿಗೆ ಬದುಕಿನ ಭರವಸೆ ಸಿಕ್ಕಿಲ್ಲ, ನಿರುದ್ಯೋಗಿಗಳಿಗೆ ಬದುಕಿನ ಆಶಾಕಿರಣ ಕಾಣುತ್ತಿಲ್ಲ, ಕಾಡಾನೆಗಳ ಹಾವಳಿ ಹೆಚ್ಚಿದೆ, ಕಾಡಿನ ಆನೆಗಳು ನಾಡಿಗೆ ಬಂದಿವೆ, ಕಾಡಿನ ನಾಶವಾಗುತ್ತಿದೆ, ಅಭಿವೃದ್ದಿಯ ಹೆಸರಿನಲ್ಲಿ ಕೃಷಿ ಜಮೀನು ಕಡಿಮೆಯಾಗುತ್ತಿದೆ, ಔದ್ಯೋಗಿಕರಣಕ್ಕೆ ಮಣೆಹಾಕಲಾಗುತ್ತಿದೆ, ಜಮೀನು ಕಳೆದು ಕೊಂಡ ರೈತ ಸ್ವಾವಲಂಬಿ ಬದುಕು ಕಳೆದುಕೊಂಡು ಕೂಲಿಗೆ ನಗರ ಪ್ರದೆಶಗಳಿಗೆ ಹೋಗಬೇಕಾದ ಪರಿಸ್ಥಿತಿ ಇದೆ, ಜನತೆ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗಿದ್ದಾರೆ ಇಂತಹ ಹೊತ್ತಿನಲ್ಲಿ ಪಾದಯಾತ್ರೆ/ ಪ್ರತಿಭಟನೆಯ ನಾಟಕ ಬೇಕಿತ್ತಾ??
ನೀವೆ ಯೋಚಿಸಿ ಮುಂಗಾರು ಅಧಿವೇಶನ ರಾಜ್ಯದ ಜನತೆಯ ದೃಷ್ಟಿಯಿಂದ ಅತ್ಯಂತ ಮಹತ್ವದ ಅಧಿವೇಶನ, ಜನತೆಗೆ ಅನುಕೂಲ ಕಲ್ಪಿಸುವ ಯಾವುದೇ ಯೋಜನೆಗಳು, ಆಡಳಿತಾತ್ಮಕವಾದ ವಿಚಾರಗಳ ಆಗುಹೋಗುಗಳ ಚರ್ಚೆ ಅತೀ ಗಹನವಾದುದು ಆದರೆ 5-6 ದಿನಗಳು ನಡೆದ ಮುಂಗಾರು ಅಧಿವೇಶನದಲ್ಲಿ ನಡೆದದ್ದೇನು? ಅಧಿವೇಶನದ ಆರಂಭದಲ್ಲಿ ಲೋಕಾಯುಕ್ತರಿಗೆ ನೀಡಬೇಕಾದ ಅಧಿಕಾರದ ಬಗ್ಗೆ ಗದ್ದಲ, ಸಿಎಂ ಯಡಿಯೂರಪ್ಪ ಗಟ್ಟಿ ನಿರ್ಧಾರದೊಂದಿಗೆ ಅಧಿಕಾರ ನೀಡುವ ಚರ್ಚೆಗೆ ಮುಂದಾದಾಗ ರಾಜಕಾರಣಿಗಳ ವಿರುದ್ದ ತನಿಖೆ ಮಾಡುವ ಅಧಿಕಾರ ಒಂದನ್ನು ಬಿಟ್ಟು ಉಳಿದ ವಿಚಾರಗಳ ಬಗ್ಗೆ ಮಾತ್ರ ಆಸ್ಥೆ ವಹಿಸುವ ಮೂಲಕ ರಾಜಕಾರಣಿಗಳೆಲ್ಲ ಒಂದೇ ಎಂಬುದನ್ನು ಸಾಬೀತು ಪಡಿಸಿಬಿಟ್ಟರು. ನಂತರದಲ್ಲಿ ಸಿಎಂ ಯಡಿಯೂರಪ್ಪ ಸಿದ್ದು ಕೇಳಿದ ಪ್ರಶ್ನೆಗೆ ತಾಳ್ಮೆ ಕಳೆದುಕೊಂಡು ನಡೆದುಕೊಂಡ ರೀತಿ ಆಡಳಿತ ಪಕ್ಷದವರನ್ನು ಪ್ರಚೋದಿಸಿಬಿಟ್ಟಿತು, ದಿನೇಶ್ ಗುಂಡೂರಾವ್ ಆಡಿದ ಮಾತಿಗೆ ಸಿಟ್ಟಿಗೆದ್ದ ರೆಡ್ಡಿಗಳು ಗೂಂಡಾಗಳಂತೆ ನಡೆದುಕೊಂಡಿದ್ದು ಈಗ ಇತಿಹಾಸ. ಅದೇ ದಿನ CNN IBN ಚಾನೆಲ್ ನಲ್ಲಿ ಪ್ರತಿಪಕ್ಷದವರ ಧರಣಿ ಪ್ರತಿಭಟನೆ 'ಕರ್ನಾಟಕದಲ್ಲಿ ನಾಟಕ' ಎಂಬ ಶೀರ್ಷಿಕೆಯಲ್ಲಿ ಪ್ರಸಾರವಾಗುತ್ತಿತ್ತು. ಪ್ರತಿಭಟನಾ ನಿರತ ಶಾಸಕರುಗಳು ಹಾಡು-ಹಸೆ ಹೇಳಿಕೊಂಡು ಜೋಕು ಮಾಡುತ್ತಾ ಕಾಲ ಕಳೆಯುತ್ತಿದ್ದರು. ಇದೇ ಸಂಧರ್ಭಕ್ಕೆ ಸರಿಯಾಗಿ ಆಸರೆ ಕಳೆದುಕೊಳ್ಳುವ ಭೀತಿಯಲ್ಲಿ ಹಾವೇರಿಯ ಭಂಗಿ ಸಮುದಾಯದ ಜನರು ಸರ್ಕಾರದ ವಿರುದ್ದ ಪ್ರತಿಭಟಿಸಿ ಮೈಮೇಲೆ ಮಲ ಸುರಿದುಕೊಂಡ ಅತ್ಯಂತ ಭೀಬತ್ಸ ಘಟನೆ ಜರುಗಿತ್ತು. ಮನುಕುಲದ ಅತ್ಯಂತ ಹೇಯವಾದ ಘಟನೆ ನಡೆದ ಸಂಧರ್ಭ ವಿಧಾನ ಸಭೆ/ಪರಿಷತ್ ನಲ್ಲಿ ರಾಜಕೀಯ ಲಾಭಕ್ಕಾಗಿ ಹಣಾಹಣಿ ನಡೆಯುತ್ತಿತ್ತು ಇದು ಪ್ರಜಾಪ್ರಭುತ್ವದ ಕಗ್ಗೊಲೆಯಲ್ಲದೇ ಮತ್ತೇನು? ಅಧಿವೇಶನ ಶುರುವಿಗೆ ಮಾಜಿ ಶಾಸಕ ಎ ಟಿ ರಾಮಸ್ವಾಮಿ ಬಿತ್ತನೆ ಬೀಜ ಬೆಲೆ ನಿಗದಿಯ ಭಾರೀ ಅವ್ಯವಹಾರವನ್ನು ಬಯಲಿಗೆ ತಂದಿದ್ದರು, ನಂತರ ಮಾಜಿ ಸ್ಪೀಕರ್ ಕೃಷ್ಣ, ಮತ್ತು ಸಚಿವ ಕಾಂತಾ ಜೊತೆಗೆ ಸೇರಿ ಉದ್ಯೋಗ ಖಾತ್ರಿ ಅಕ್ರಮದ ವಿರುದ್ದ ಧ್ವನಿಯೆತ್ತಿದರು ಇವಿಷ್ಟು ಅಧಿವೇಶನ ಹೊರಗೆ ನಡೆಯುತ್ತಿದ್ದರೆ ಒಳಗಡೆ ನಡೆಯುತ್ತಿದ್ದ ನಾಟಕವೇ ಬೇರೆ. ಪುಡಾರಿಗಳ ವೈಯುಕ್ತಿಕ ತೆವಲಿಗೆ ಮಹತ್ವದ ಅಧಿವೇಶನ ಬಲಿಗೊಟ್ಟರಲ್ಲ ಜನತೆಯ ಶಾಪ ಇವರಿಗೆ ತಟ್ಟದಿರದೇ?
ಇವತ್ತು ರೆಡ್ಡಿಗಳ ವಿರುದ್ದ ಕಾಂಗ್ರೆಸ್-ಜೆಡಿಎಸ್ ಸಮಾನವಾಗಿ ವಿರೋಧ ವ್ಯಕ್ತಪಡಿಸುತ್ತಿವೆ, ಮೊದಲೇ ಹದಗೆಟ್ಟಿದ್ದ ರಾಜ್ಯ ರಾಜಕೀಯದ ಅಳಿದುಳಿದ ಮೌಲ್ಯಗಳನ್ನು ಹೊಸಕಿ ಹಾಕಿದ್ದು.ರಾಜಕೀಯದಲ್ಲಿ ಅಸಾಧಾರಣವಾದುದನ್ನು ಗಣಿ ಹಣದ ಮೂಲಕ ಸಾಧಾರಣ ವಿಚಾರವನ್ನಾಗಿ ಮಾಡಿದ್ದು ಸರ್ಕಾರವನ್ನೇ ಹೈಜಾಕ್ ಮಾಡಿದ್ದು ಗಣಿಧಣಿಗಳ ಹೆಗ್ಗಳಿಕೆ ಹಾಗೂ ರಾಜಕೀಯ ಪರಂಪರೆಯಲ್ಲಿ ಕರ್ನಾಟಕದ ಮಟ್ಟಿಗೆ ಕೆಟ್ಟ ಸ್ವಪ್ನವೇ ಸರಿ. ಸಿನಿಮಾ ಥಿಯೇಟರಿನಲ್ಲಿ ಬ್ಲಾಕ್ ಟಿಕೇಟ್ ಮಾರುತ್ತಿದ್ದ ಭೂಪನೋರ್ವ ಕೇವಲ 10ವರ್ಷಗಳಲ್ಲಿ 50ಸಾವಿರ ಕೋಟಿಗೂ ಮೀರಿದ ಧನಿಕನಾಗುತ್ತಾನೆಂದರೆ ಅದು ಸುಮ್ಮನೇ ಆಗಿ ಬರುವ ಮಾತಲ್ಲ,ಅಕ್ರಮ ಗಣಿಗಾರಿಕೆ ಮೂಲಕ ರಾಜ್ಯದ ಗಡಿಯನ್ನು ಆಂಧ್ರಕ್ಕೆ ಸೇರುವ ಸ್ಥಿತಿ ತಂದಿದ್ದು ಇದೇ ರೆಡ್ಡಿಗಳು, ನೆರೆ ಸಂತ್ರಸ್ಥರಿಗೆ ಗಣಿ ದುಡ್ಡಿನಲ್ಲಿ ಆಸರೆ ಒದಗಿಸುತ್ತೇವೆಂದು ಬಂಬಡಾ ಬಜಾಯಿಸಿದ ರೆಡ್ಡಿಗಳು ಈಗ ಯಾವ ಆಸರೆ ಎಂದದ್ದು ಅವರ ಬದ್ದತೆಯನ್ನು ಪ್ರಶ್ನಿಸುತ್ತದೆ. ಇಂತಹ ದುಷ್ಟ ಶಕ್ತಿಗಳ ವಿರುದ್ದ ಒಂದು ಬೃಹತ್ ಹೋರಾಟ ಅಗತ್ಯವಾಗಿ ಬೇಕಿತ್ತು ಆದರೆ ಅಧಿವೇಶನವನ್ನು ಬಲಿಗೊಟ್ಟು ಪ್ರತಿಭಟನೆಗಿಳಿಯ ಬೇಕಿರಲಿಲ್ಲ. ಕೇಂದ್ರದಲ್ಲಿ ಅತಿ ಹೆಚ್ಚಿನ ಅವಧಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ, ಅವರ ಪಕ್ಷದಲ್ಲೆ ಶಾಸಕರಾಗಿ,ಸಂಸದರಾಗಿ, ಸಚಿವರಾದ ಎಷ್ಟೋ ಮಂದಿ ಹಲವು ದಶಕಗಳಿಂದ ಗಣಿಯನ್ನು ಲೂಟಿ ಮಾಡಿಕೊಂಡೇ ಬಂದಿದ್ದಾರೆ, ಆ ಸಂಧರ್ಭದಲ್ಲಿ ಇವರಿಗೆ ಬಳ್ಳಾರಿ ಬಚಾವು ಮಾಡುವ ಐಡಿಯಾ ಬರಲಿಲ್ಲ, ಇವತ್ತು ಒಂದು ಟನ್ ಅದಿರಿಗೆ 20ರೂ ತೆರಿಗೆ ಇದೆ ಆದರೆ ಮಾರುಕಟ್ಟೆಯಲ್ಲಿ ಟನ್ ಗೆ 2000 ದಿಂದ 6000ದವರೆಗೆ ಮಾರಿಕೊಳ್ಳಲಾಗುತ್ತಿದೆ, ಬಳ್ಲಾರಿಯಾಧ್ಯಂತ ಗಣಿಗಾರಿಕೆ ವ್ಯಾಪಕವಾಗಿದೆ ಅಲ್ಲಿನ ಪರಿಸರ ಹದಗೆಟ್ಟಿದೆ, ಕಳೆದ 50ವರ್ಷಗಳಿಂದ ಗಣಿನೀತಿ ಬದಲಾಗಿಲ್ಲ. ಈ ಕುರಿತು ಕೇಂದ್ರ ಸರ್ಕಾರ ನಿಯಂತ್ರಣ ಹೇರಲು ಸರ್ವಾಧಿಕಾರವನ್ನು ಪಡೆದಿದೆ ಗಣಿಧಣಿಗಳನ್ನು ಮಟ್ಟ ಹಾಕುವ ಸಾಮರ್ತ್ಯ ಹೊಂದಿದೆ ಆದರೆ ಕಾಂಗ್ರೆಸ್ ಪಕ್ಷ ಕೇಂದ್ರದಲ್ಲಿ ಒತ್ತಡ ಹೇರದೇ ಬಿದಿಗಿಳಿದಿದೆ ಎಂದರೆ ಅದರ ಹಿಂದಿನ ಉದ್ದೇಶ ಸ್ಪಷ್ಟವಲ್ಲವೇ? ಹೇಳಿ ಇವರಿಗೆ ರಾಜ್ಯದ ಜನತೆಯ ಹಿತಾಸಕ್ತಿ ಬೇಕಾ? ಇನ್ನೂ ಯಡಿಯೂರಪ್ಪ ಪಂಚರಂಗಿ ಆಟ ಪ್ರದರ್ಶಿಸುತ್ತಾ ಮುಗುಮ್ಮಾಗಿ ರಾಜಕೀಯ ಲೆಕ್ಕಾಚಾರ ಹಾಕುತ್ತಾ ಸುರಕ್ಷಿತವಾಗುವುದು ಹೇಗೆಂದು ಚಿಂತಿಸುತ್ತಿದ್ದರೆ ಜೆಡಿಎಸ್ ಅಪವಿತ್ರ ಮೈತ್ರಿಗೆ ಮತ್ತೆ ಸಜ್ಜಾಗುತ್ತಿದೆ. ಅತ್ತ ಬಳ್ಳಾರಿಯಲ್ಲಿ ಬೇಸತ್ತ ರೆಡ್ಡಿಗಳು ರಾಮುಲು ತಲೆಬೋಳಿಸಿ ಸ್ವಾಭಿಮಾನಿ ಯಾತ್ರೆ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಜನತೆ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗಿದ್ದಾರೆ, ಸರ್ಕಾರಿ ಆಸ್ಪತ್ರೆಗಳು ರೋಗಗ್ರಸ್ತವಾಗಿವೆ ಆದರೆ ರಾಮುಲು ಮಾತ್ರ ತಲೆಬೋಳಿಸಿಕೊಂಡು ರೆಡ್ಡಿಗಳ ರಕ್ಷಣೆಗೆ ನಿಂತುಬಿಟ್ಟಿದ್ದಾರೆ. ಈಗಲಾದ್ರೂ ಹೇಳ್ರಿ ರಾಜ್ಯದ ಜನತೆಯನ್ನ ಯಾರು ರಕ್ಷಿಸಬೇಕು? ಯಾರಿಂದ ರಕ್ಷಿಸಬೇಕು ? ಯಾಕೆ ರಕ್ಷಿಸಬೇಕು ಅಂತ

Sunday, July 11, 2010

ಸರ್ಕಾರದ ರಿಮೋಟ್ ಕಂಟ್ರೋಲ್ ಎಲ್ಲಿದೆ???


ಸರ್ಕಾರದ ರಿಮೋಟ್ ಕಂಟ್ರೋಲ್ ಎಲ್ಲಿದೆ?? ಇಂತಹದ್ದೊಂದು ಪ್ರಶ್ನೆ ಕಳೆದ ಎರಡು ವರ್ಷಗಳಿಂದ ಅದೆಷ್ಟೋ ಬಾರಿ ಕೇಳಿಕೊಂಡಿದ್ದೇನೆ. ಬಹುಶಹ ನಿಮಗೂ ಅಂತಹ ಅನುಮಾನಗಳು ಎದ್ದಿರಲಿಕ್ಕೆ ಸಾಕು.ಬಿಜೆಪಿಯ ರಿಮೋಟ್ ಕಂಟ್ರೋಲ್ ಸಂಘಪರಿವಾರದ ಬಳಿ ಇದೆಯೇ? ದೆಹಲಿಯ ಹೈಕಮಾಂಡ್ ಬಳಿ ಇದೆಯೇ? ಇಲ್ಲಬಿಜೆಪಿ ಮಹಿಳಾ ಅಧಿನಾಯಕಿ ಸುಷ್ಮಾ ಸ್ವರಾಜ್ ಬಳಿ ಇದೆಯೇ? ಅಡ್ವಾಣಿ ಬಳಿ ಇದೆಯೇ? ಬಳ್ಳಾರಿ ಗಣಿಧಣಿಯ ಬಳಿ ಇದೆಯೇ? ಸಚಿವ ಸಂಪುಟದ ನರ್ಸ್ ಖ್ಯಾತಿಯ ರೇಣುಕಾಚಾರ್ಯನ ಬಳಿ ಇದೆಯೇ? ಇಲ್ಲ ಅಂತಿಮವಾಗಿ ಕರ್ನಾಟಕ ರಾಜ್ಯಪಾಲರ ಬಳಿ ಇದೆಯೇ? ಎಲ್ಲವೂ ಅಯೋಮಯ ಅಲ್ವಾ? ಹೌದು ಇಂತಹದ್ದೊಂದು ಹೀನ ಪರಿಸ್ಥಿತಿಯ ಸರ್ಕಾರವನ್ನ ನಾವು ನೀವು ನೋಡುತ್ತಿದ್ದೇವೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು 2ವರ್ಷಗಳು ಸಂದಿವೆ. ಸರ್ಕಾರ ಸಾಧನಾ ಸಮಾವೇಶದ ಜೊತೆಗೆ ಹತ್ತು ಹಲವು ಜಾತಿ ಸಮಾವೇಶಗಳನ್ನು ಮಾಡುತ್ತಿದೆ, ಯಡಿಯೂರಪ್ಪ ಆ ಮೂಲಕ ಜಾತಿಗಳನ್ನು ಒಲಿಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಇವತ್ತು ದಕ್ಷಿಣ ಭಾರತದಲ್ಲಿ ಮೊದಲ ಭಾರಿಗೆ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಅಬಿವೃದ್ದಿಯ ನಿಟ್ಟಿನಲ್ಲಿ ಹಲವು ಉತ್ತಮ ಕೆಲಸಗಳನ್ನು ಮಾಡಿದೆ. ಈ ಸಂಧರ್ಭ ಈ ಮೇಲಿನಂತೆ ಪ್ರಶ್ನೆ ಕೇಳಿಕೊಳ್ಳಬೇಕಾದ ಸಂಧರ್ಭ ಮತ್ತೆ ಒದಗಿದೆ ಈಗ ನಡೆಯುತ್ತಿರುವ ವಿಧಾನ ಸಭೆ ಅಧಿವೇಶನ, ಅಲ್ಲಿ ಸರ್ಕಾರ ತನ್ನ ಹೊಣೆಗಾರಿಕೆಯನ್ನು ನಿಭಾಯಿಸುತ್ತಿರುವ ರೀತಿ ಇದಕ್ಕೆ ಕಾರಣ.
ಹೌದು ಯಾಕೆ ಹೀಗೆ ಸಂಘ ಪರಿವಾರ ಕಂಡ ಕನಸು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ಮೂಲಕ ಈಡೇರಿದೆಯಾದರೂ ಸಂಘದ ಆಶೋತ್ತರಗಳನ್ನು ಸರ್ವ ಸಮ್ಮತವಾಗಿ ಈಡೇರಿಸುವ ರೀತಿಯಲ್ಲಿ ಸರ್ಕಾರ ನಡೆಯುತ್ತಿಲ್ಲ? ಮುಖ್ಯಮಂತ್ರಿ ಯಡಿಯೂರಪ್ಪ ಪದೇ ಪದೇ ಮುಖೇಡಿಯಂತೆ ಕಣ್ಣೀರು ಹಾಕುತ್ತ ಅಸಹಾಯಕನ ರೀತಿ ನಡೆದುಕೊಳ್ಳುತ್ತಿರುವುದು, ಸಾರ್ವಜನಿಕವಾಗಿ ಸಿಟ್ಟನ್ನು ಪ್ರದರ್ಶಿಸುವುದು, ಬಳ್ಳಾರಿಯ ಗಣಿಧಣಿಗಳನ್ನು ಓಲೈಸುವುದು, ಪರಮ ಭ್ರಷ್ಟರನ್ನೂ ಕೂಡ ಸಚಿವ ಸಂಪುಟದೊಳಕ್ಕೆ ಬಿಟ್ಟು ಕೊಂಡು ಅಸಹ್ಯ ಸೃಷ್ಟಿಸಿಕೊಳ್ಳುತ್ತಿರುವುದು ಎಷ್ಟು ಸರಿ? ಅಧಿಕಾರ ಸ್ವೀಕರಿಸುವಾಗ ರೈತರ ಹೆಸರು ಹೇಳಿ ಅಧಿಕಾರಕ್ಕೆ ಬಂದ ಯಡಿಯೂರಪ್ಪ ನಂತರ ಹೇಗೆ ನಡೆದುಕೊಳ್ಳುತ್ತಿದ್ದಾರೆ? ಈ ಸರ್ಕಾರದಲ್ಲಿ ರೈತನ ಸ್ಥಿತಿ ಹೇಗಿದೆ ಎಂಬುದನ್ನು ಬೇರೆ ವಿವರಿಸಿ ಹೇಳಬೇಕಿಲ್ಲ.
ಈಗ ವಿಚಾರಕ್ಕೆ ಬರೋಣ, ಜೆಡಿಎಸ್ ಸಮ್ಮಿಶ್ರ ಸರ್ಕಾರದ ತಪ್ಪು ನಿರ್ಧಾರದಿಂದ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಆರಂಭದಿಂದಲೇ ತನ್ನ ತಪ್ಪು ಹೆಜ್ಜೆಗಳನ್ನು ಇಟ್ಟದ್ದು ರೆಡ್ಡಿಗಳನ್ನು ಓಲೈಸುವ ಮೂಲಕ. ಬಳ್ಳಾರಿಯ ಗಣಿಧಣಿಗಳ ಆಶಯದಂತೆ ರಚನೆಯಾದ ಮಂತ್ರಿ ಮಂಡಲದಿಂದ ಹಿಡಿದು ಪ್ರತಿ ಹೆಜ್ಜೆಯಲ್ಲೂ ಅವರನ್ನು ಬೆನ್ನಿಗಿಟ್ಟುಕೊಂಡ ಫಲವಾಗಿ ಮೊನ್ನೆಯ ಸದನ ಕಲಹದ ಮೂಲಕ ಅಸಹ್ಯ ಬೀದಿಗೆ ಬಿದ್ದಿದೆ. ಮೊನ್ನೆ ವಿರೋಧ ಪಕ್ಷದ ಕಾಂಗ್ರೆಸ್ ಮುಖಂಡ ಸಿದ್ಧರಾಮಯ್ಯ ಸದನದಲ್ಲಿ ಹೇಳಿದ ಸತ್ಯವನ್ನು ಅರಗಿಸಿಕೊಳ್ಳಲಾಗದ ಮುಖ್ಯ ಮಂತ್ರಿ ಯಡಿಯೂರಪ್ಪ ತಾಳ್ಮೆ ಕಳೆದು ಏರಿ ಹೋದದ್ದು ತನ್ನ ಸಹ ಸಚಿವರನ್ನು, ಶಾಸಕರುಗಳನ್ನು ತನ್ನೊಂದಿಗೆ ಕೈ ಜೋಡಿಸುವಂತಹ ಅನಾಹುತಕಾರಿ ಸಂಧರ್ಭ ಸೃಷ್ಟಿಸಿಕೊಂಡು ಬಿಟ್ಟರು. ಗಣಿಧಣಿಗಳ ಎಂಜಲು ತಿಂದು ಪಕ್ಷ ಸೇರುವ ಕಾಂಗೈ-ದಳ ಪಕ್ಷಗಳ ಪಕ್ಷಾಂತರಿಗಳನ್ನು ಇಟ್ಟುಕೊಂಡು, ಅವರ ಅವಶ್ಯಕತೆಗಳನ್ನು ಪೂರೈಸುತ್ತಾ ಒಂದು ಸರ್ಕಾರ ಎಷ್ಟು ಸುಭದ್ರವಾಗಿ ಮತ್ತು ಎಷ್ಟು ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸಲು ಸಾಧ್ಯ? ಜನಮೆಚ್ಚುವಂತೆ ಸರ್ಕಾರ ಅಭಿವೃದ್ದಿ ಕೆಲಸಗಳನ್ನೆನೋ ಮಾಡುತ್ತಿದೆ ಆದರೆ ಅದಕ್ಕಿಂತ ಹೆಚ್ಚಾಗಿ ಸರ್ಕಾರದ ನೈತಿಕತೆ ಪ್ರಾಧಾನ್ಯತೆ ಪಡೆಯುವುದಿಲ್ಲವೇ? ಮೌಲ್ಯಾಧಾರಿತವಾಗಿ ಕಾರ್ಯ ನಿರ್ವಹಿಸದ ಸರ್ಕಾರ ಯಾವತ್ತಿಗೂ ಸ್ಥಿರವಾಗಿರಲಾರದು. ಈ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರೈತರ ಮೇಲೆ ಅತೀ ಹೆಚ್ಚು ಲಾಠೀಚಾರ್ಚುಗಳಾಗಿವೆ, ದೂರು ದಾಖಲಾಗಿವೆ, ಅದೇ ರೀತಿ ಕನ್ನಡ ಪರ ಹೋರಾಟ ಮಾಡುವ ಸಂಘಟನೆಗಳನ್ನು ಬಗ್ಗುಬಡಿದು ಕೇಸು ಜಡಿದು ಕನ್ನಡದ ಸೊಲ್ಲಡಗಿಸಿದೆ. ವರ್ಗಾವಣೆ ಮಾರ್ಗದರ್ಶಿ ಸೂತ್ರಗಳನ್ನು ಬದಿಗಿಟ್ಟು ಬೇಕಾಬಿಟ್ಟಿ ವರ್ಗಾವಣೆಯಾಗುತ್ತಿವೆ.ಸರ್ಕಾರದಲ್ಲಿ ಮಂತ್ರಿಗಳಾಗಿದ್ದವರೇ ರೈತರಿಂದ ಸ್ವಾಧೀನ ಪಡಿಸಿಕೊಂಡ ಭೂಮಿಯನ್ನು ನುಂಗಿ ನೀರು ಕುಡಿದ ಉದಾಹರಣೆ ಕಣ್ಣೆದುರಿಗಿದೆ. ರಾಜ್ಯ ಪಾಲ ಹಂಸರಾಜ ಭಾರದ್ವಜ್ ಹಲವಾರು ಭಾರಿ ಸರ್ಕಾರದ ನಡವಳಿಕೆಗಳ ವಿರುದ್ದ, ಸಚಿವ ಸಂಪುಟದ ಮಂತ್ರಿಗಳ ವಿರುದ್ದ ಗುಡುಗಿದ್ದಾರೆ, ಆದರೂ ಪ್ರಯೋಜನವಾಗಿಲ್ಲ.ಬಳ್ಳಾರಿ ಗಣಿಧಣಿಗಳು ಸಿಡಿದೆದ್ದಾಗ ಸುಷ್ಮಾಸ್ವರಾಜ್ , ಸಂತೋಷ್ ಹೆಗಡೆ ರಾಜೀನಾಮೆ ನೀಡಿದಾಗ ಇಕ್ಕಟ್ಟು ತಪ್ಪಿಸಲು ದೆಹಲಿಯ ಹೈಕಮಾಂಡ್ ನಿತಿನ್ ಗಡ್ಕರಿ, ಅಡ್ವಾಣಿ ಪ್ರಭಾವ ಬೇಕು, ಹಾಲಪ್ಪ-ಸರ್ಸು ರೇಣುಕಾಚಾರ್ಯ,ಸಂಪಗಿ ಭ್ರಷ್ಟತನ, ರೆಡ್ಡಿಗಳ ವರ್ತನೆ ಇತ್ಯಾದಿ ಸಾರ್ವಜನಿಕವಾಗಿ ಬೀದಿಗೆ ಬಿದ್ದಾಗ ಸಂಘ ಪರಿವಾರದ ಗದರಿಕೆ ಬೇಕು. ಸದನದ ಗದ್ದಲ ಶುರುವಾಗಿದೆ ಈಗ ಪರಿಹಾರಕ್ಕೆ ಯಾರು ಬರುತ್ತಾರೋ ನೋಡಬೇಕು. ಇಂತಹ ಪರಿಸ್ಥಿತಿ ಸರ್ಕಾರಕ್ಕಿದ್ದರೆ ಆಡಳಿತ ನಿರ್ವಹಣೆ ಮಾಡುವವರಾದರೂ ಯಾರು? ಎಂಬಲ್ಲಿಗೆ ಪ್ರಶ್ನೆ ಬಂದು ನಿಲ್ಲುತ್ತದೆ.
ಸಾರ್ವಜನಿಕರ ನಡುವೆ ಚಾಲ್ತಿಯಲ್ಲಿರುವ ಮಾತಿನಂತೆ ಇವತ್ತು ಕಾಂಗೈ-ದಳ ಇತ್ಯಾದಿ ಯಾವುದೇ ಪಕ್ಷದಲ್ಲಿರುವ ಮುಖಂಡರುಗಳು, ಶಾಸಕರು, ಮರಿ ಪುಡಾರಿಗಳು ಜಾತಿಯ ಆಧಾರದಲ್ಲಿ ಸಾಮೂಹಿಕವಾಗಿ ಯಡಿಯೂರಪ್ಪನವರ ಬೆಂಬಲಕ್ಕೆ ನಿಲ್ಲುತ್ತಾರೆ, ಇಂತಹ ಸಾರ್ವಜನಿಕ 'ಒಲವು'ಗಳೇ ಇತ್ತಿಚೆಗೆ ಬಿಜೆಪಿ ಎದುರಿಸಿದ ಅಷ್ಟು ಚುನಾವಣೆಗಳಲ್ಲಿ ಗೆಲುವು ಸಾಧಿಸಲು ಕಾರಣ ಎನ್ನಲಾಗುತ್ತದೆ. ಆದರೆ ಇಂತಹ ಒಗ್ಗಟ್ಟು ಜಾತಿಯ ಆಧಾರದಲ್ಲಿ ಒಬ್ಬ ರಾಮಕೃಷ್ಣ ಹೆಗಡೆ, ದೇವೇಗೌಡ, ಕುಮಾರಸ್ವಾಮಿ, ಎಸ್ ಎಂ ಕೃಷ್ಣ, ದೇವರಾಜ ಅರಸು, ವೀರೇಂದ್ರಪಾಟೀಲ್ ಇದ್ದಾಗ ಕಂಡು ಬರಲಿಲ್ಲ. ಇದು ಯಡಿಯೂರಪ್ಪನವರ ಮಟ್ಟಿಗೆ ವೈಯುಕ್ತಿಕವಾಗಿ ಪ್ಲಸ್ ಪಾಯಿಂಟು ಆದರೂ ಸಾರ್ವಜನಿಕವಾಗಿ ಮಾತ್ರ ಅತ್ಯಂತ ಅಪಾಯಕಾರಿಯಾದುದು. ಅಂತಿಮವಾಗಿ ಒಂದು ಮಾತು ಈಗ ನಡೆಯುತ್ತಿರುವ ಸದನ ಜನಪರವಾದ ವಿಚಾರಗಳನ್ನು ಚರ್ಚೆಗೆ ತರುತ್ತದೆ ಎಂದು ರಾಜ್ಯದ ಕೋಟ್ಯಾಂತರ ಜನತೆ ಕಾಯುತ್ತಿದ್ದರೆ ಈ ಶಾಸಕರುಗಳು-ಮಂತ್ರಿಗಳು ಕಿಸಿಯುತ್ತಿರುವುದು ಏನು? ಮೊದಲ ಎರಡು ದಿನ ಸಂತೋಷ್ ಹೆಗಡೆ ವಿಚಾರವಾಗಿ ಗದ್ದಲ ಎಬ್ಬಿಸಿದರು, ಅಧಿಕಾರ ಕೊಡುವ ವಿಚಾರ ಬಂದಾಗ ಮಾತ್ರ ತಮ್ಮ ಮಾಮೂಲು ಖಯಾಲಿ ಪ್ರದರ್ಶಿಸಿದರು, ರೇವಣ್ಣ-ಕುಮಾರಸ್ವಾಮಿ-ಸಿದ್ದರಾಮಯ್ಯ ಮಾತೆತ್ತಿದರೆ ಗಣಿವಿಚಾರ ಬಿಟ್ಟರೆ ನೈಸ್ ವಿಚಾರದ ಬಗ್ಗೆ ಮಾತ್ರ ಮಾತನಾಡುತ್ತಿದ್ದಾರೆ. ಆದರೆ ಒಬ್ಬನೇ ಒಬ್ಬಶಾಸಕ, ರೈತರು ಎದುರಿಸುತ್ತಿರುವ ವಿದ್ಯುತ್ ಸಮಸ್ಯೆ, ಬಿತ್ತನೆ ಬೀಜ ಸಮಸ್ಯೆ, ಬೆಂಬಲ ಬೆಲೆ, ಸಹಾಯಧನ ಇತ್ಯಾದಿಗಳ ಬಗ್ಗೆ ಚಕಾರವೆತ್ತುತ್ತಿಲ್ಲ. ಹೀಗಾದರೆ ಕೋಟ್ಯಾಂತರ ರೂ ವೆಚ್ಚ ಮಾಡಿ ನಡೆಸುವ ಸದನ ಕಲಾಪಗಳು ಯಾಕೆ ಬೇಕು??
ಈ ಅಂಕಣ ಬರಹವನ್ನು ದಟ್ಸ್ ಕನ್ನಡ ಡಾಟ್ ಕಾಂ ನಲ್ಲಿ ಪ್ರಕಟಿಸಿದ ಸಂಪಾದಕರಾದ ಶ್ಯಾಮಸುಂದರ್ ಅವರಿಗೆ ಧನ್ಯವಾದಗಳು.
Click on the following to read same article in ದಟ್ಸ್ ಕನ್ನಡ ಡಾಟ್ ಕಾಂ http://thatskannada.oneindia.in/news/2010/07/12/bjp-sangh-pariwar-karnataka-politics.html

Sunday, July 4, 2010

ಯುವ ಮನಸ್ಸು ಹೇಗಿದೆ ಗೊತ್ತಾ???



"ಎಲ್ಲಿಯೂ ಸಲ್ಲದ ಕಟ್ಟಕಡೆಯ ವಿದ್ಯಾರ್ಥಿ ಅಂತಿಮವಾಗಿ ಐಟಿಐ ಗೆ ಬರುತ್ತಾನೆ, ಅವನಿ/ಳಿಗೆ ಪರಿಶ್ರಮದ ಮೂಲಕ ಬದುಕಿನ ಹಾದಿ ತೋರಿಸೋಕೆ ಭಾರೀ ಪ್ರಯತ್ನವನ್ನೇ ಮಾಡ್ಬೇಕು ಸಾರ್" ಅಂದ್ರು ಮಿತ್ರ ಗುರುರಾಜ್. ಸಾರ್ ನಂದು ಬಿಇ ನಲ್ಲಿ ಇಲೆಕ್ಟ್ರಿಕಲ್ ಹೈ ಫಸ್ಟ್ ಕ್ಲಾಸ್ ಪಾಸಾಗಿದ್ದೀನಿ, ಈ ಬೆಂಗಳೂರಿಗೆ ಬಂದು ಪಿಜಿ ಲಿ ಉಳ್ಕೊಂಡು 6ತಿಂಗಳಿಂದ ಕೆಲ್ಸ ಹುಡುಕ್ತಿದೀನಿ , ಯಾವ ಕಂಪನಿಗೆ ಅರ್ಜಿ ಹಾಕಿದ್ರೂ ಎಕ್ಸ್ ಪೀರಿಯನ್ಸ್ ಕೇಳ್ತಾರೆ ಇಲ್ಲಾಂದ್ರೆ ಬಾಂಡ್ ಕೇಳ್ತಾರೆ ಓವರ್ ಟೈಮ್ ಡ್ಯೂಟಿ ಮಾಡ್ಬೇಕಂತೆ ಏನ್ಮಾಡ್ಬೇಕೋ ಗೊತ್ತಾಗ್ತಿಲ್ಲ ಅಂದದ್ದು ಪರಿಚಿತರ ಹುಡುಗಿ ಲಾವಣ್ಯ. ಇನ್ನೊಬ್ಬ ಚಿಗುರು ಮೀಸೆಯ ಹುಡುಗ ಮಂಜುನಾಥ ತಲೆಕೆಡಿಸಿಕೊಂಡು ಕುಂತಿದ್ದ, ಆತ ಈಗಷ್ಟೇ ವಾಣಿಜ್ಯ ಪದವಿಗೆ ಸೇರಿದ್ದ ಬುದ್ದಿವಂತ ಹುಡುಗ, ಅವನ ರಿಲೇಟೀವ್ಸ್ ಯಾರೋ ಸಿಎ ಮಾಡಿದ್ದಾರಂತೆ ಈಗ ಇವ್ನು ಸಿಎ ಮಾಡ್ತಾನಂತೆ ಹಾಗಾಗಿ ಆ ಕಡೆ ಕಾನ್ಸೆಂಟ್ರೇಶನ್ ಮಾಡ್ಬೇಕೋ ಪದವಿ ಕಡೆಗೆ ಗಮನ ನೀಡಬೇಕೋ ಅಂತ ತಿಳೀಯದೇ ತಲೆಕೆಡಿಸಿಕೊಂಡಿದ್ದ. ಈಗ್ಯೆ ತಿಂಗಳ ಹಿಂದೆ ಪದವಿ ಅರ್ಧಂಬರ್ದ ಮುಗಿಸಿ ಸಿಎ ಮಾಡ್ತೀನಿ ಅಂತ ಹೋಗಿ ನಾಲ್ಕಂಕಿ ಸಂಬಳ ಕೈಗೆ ಬರುತ್ತಿದ್ದಂತೆ ಪದವಿಗೆ ಗುಡ್ ಬೈ ಹೇಳಿ ಅತ್ತ ಸಿಎ ಅನ್ನು ಮುಗಿಸದೇ ಅಲ್ಲಿ ಇಲ್ಲಿ ಲೆಕ್ಕ ಬರೆಯವ ಚಾಕರಿ ಮಾಡುತ್ತಿರುವ ಯುವತಿಯನ್ನ ಆಕೆಯ ತಾಯಿ ಕರೆತಂದು ಬೇಸರಿಸಿಕೊಂಡಿದ್ದರು. ಮಗ ಡಾಕ್ಟರ್ ಆಗಬೇಕು, ಇಂಜಿನಿಯರೇ ಆಗಬೇಕು ಅಂತ ಕನಸು ಕಂಡ ತಂದೆ/ತಾಯಿ ಗಳಿಸಿದ ಅಷ್ಟೂ ಸಂಪತ್ತನ್ನು ದುಡ್ಡಾಗಿ ಪರಿವರ್ತಿಸಿಕೊಂಡು ಮಕ್ಕಳ ಮೇಲೆ ಹೂಡಿ ಅವನು/ಅವಳು ಕೇಳಿದ್ದನ್ನ ಕೊಡಿಸಿ ಅವನ ಆಸಕ್ತಿ ಏನೆಂಬುದನ್ನು ಅರಿಯದೇ ಕಡೆಗೆ ಪರಿತಾಪ ಪಡುವ ಮಂದಿಯೂ ಇವತ್ತು ಕಾಣ ಸಿಗುತ್ತಾರೆ. ಇವತ್ತು ಬಹುತೇಕ ಮಂದಿ ಪೋಷಕರಿಗೆ/ವಿದ್ಯಾರ್ಥಿಗಳಿಗೆ ತಾವು ಸಾಗಬೇಕಾದ ಗುರಿಯ ನಿಖರತೆಯಾಗಲೀ ಅಂದಾಜಾಗಲಿ ಇರುವುದೇ ಇಲ್ಲ. ಹಾಗಾಗಿ ಗೋಂದಲದ ಸ್ತಿತಿಯಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರು ಸಿಲುಕುವುದನ್ನು ಕಾಣಬಹುದು. ಅಷ್ಟಕ್ಕೂ ವಿದ್ಯಾರ್ಥಿಗಳಿಗೆ/ಪೋಷಕರಿಗೆ/ಶಿಕ್ಷಕರಿಗೆ ಇರಬೇಕಾದ ಗುರಿಗಳೇನು? ಬದ್ದತೆ ಹೇಗಿರಬೇಕು? ಗುರಿಯ ನಿರ್ದಿಷ್ಟತೆ, ಅದನ್ನು ತಲುಪುವ ಬಗೆ, ಅದಕ್ಕಾಗಿ ಅನುಸರಿಸುವ ರೀತಿ-ರಿವಾಜುಗಳು ಏನು ಎಂಬುದನ್ನು ಅರಿಯಬೇಕಾದ ಅಗತ್ಯವಿದೆ.
ಪ್ರಸಕ್ತ ಸಮಾಜದಲ್ಲಿ ನಮಗೆ ಬದುಕಿನ ಶಿಕ್ಷಣ ಅತ್ಯಂತ ಅಗತ್ಯವಾಗಿ ದಕ್ಕಬೇಕಿದೆ. ಆದರೆ ಹಾಲಿ ನಮ್ಮ ಶಿಕ್ಷಣ ಕ್ರಮದಲ್ಲಿ ಬದುಕು ರೂಪಿಸುವ ಶಿಕ್ಷಣಕ್ಕಿಂತ ಬೇರೆಯದೇ ಧಾಟಿಯ ಶಿಕ್ಷಣವಿದೆ. ಇಂತಹ ಶಿಕ್ಷಣ ವ್ಯವಸ್ಥೆಯೇ ನಿರುದ್ಯೋಗ, ಬಡತನ ಇತ್ಯಾದಿ ಸಮಸ್ಯೆಗಳಿಗೆ ಕಾರಣವಾಗಿದೆ.

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...