Thursday, September 30, 2010

ಅಯೋಧ್ಯಾ ವಿವಾದ: ಮುಗಿಯದ ಕಗ್ಗಂಟು....!



ಅಯೋಧ್ಯಾ ಪ್ರಕರಣ ಕುರಿತು ಅಲಹಾಬಾದ್ ಮಹತ್ವದ ತೀರ್ಪನ್ನು ತನ್ನ ಪರಿಧಿಯಲ್ಲಿ ಪ್ರಕಟಿಸಿದೆ, ಆದರೆ ಸದರಿ ತೀರ್ಪಿನಿಂದ ಸಮಸ್ಯೆ ಇನ್ನೂ ಜಟಿಲವಾಗುವ ಅಪಾಯ ಎದುರಾಗಿದೆ. ಸದರಿ ವಿವಾದಿತ ಜಾಗವನ್ನು ರಾಮನ ದೇಗುಲಕ್ಕೆ, ನಿರ್ಮೋಹಿ ಅಖಾಡಕ್ಕೆ ಹಾಗೂ ಬಾಬರಿ ಮಸೀದಿ ಕ್ರಿಯಾ ಸಮಿತಿಗೆ ಹಂಚಿ ಸಾಮಾಜಿಕ ನ್ಯಾಯ ದೊರಕಿಸಲಾಗಿದೆ ಎಂದು ಹೇಳಲಾಗುತ್ತಿದೆಯಾದರೂ ಆ ಮೂಲಕ ಸರಳವಾಗಿದ್ದ ಸಮಸ್ಯೆಯನ್ನು ಮತ್ತಷ್ಟು ಕಗ್ಗಂಟಾಗಿಸಿದೆ. ಬಹುಶ: ವಾದಿ-ಪ್ರತಿವಾದಿಗಳ ವಾದ, ಸಾಕ್ಷ್ಯಗಳನ್ನು ಮಾತ್ರವೇ ಪರಿಗಣಿಸಿ ತನ್ನ ಚೌಕಟ್ಟಿನೊಳಗೆ ಲಖನೌ ಪೀಠ ತೀರ್ಪು ನೀಡಿದಂತಾಗಿದೆ. ಇಲ್ಲಿ ವಿವಾದಿತ ಸ್ಥಳ ಯಾರಿಗೆ ಸೇರಬೇಕು ಎನ್ನುವುದಕ್ಕಿಂತ ವಾಸ್ತವ ನೆಲೆಗಟ್ಟಿನಲ್ಲಿ ಪ್ರಸಕ್ತ ಸಂಧರ್ಭಕ್ಕೆ ಪೂರಕವಾಗಿ ದೇಶದ ಸಾಂಸ್ಕೃತಿಕ ಒಗ್ಗಟ್ಟನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹಾಕುವ ಪ್ರಯತ್ನ ಬಹು ಮುಖ್ಯವಾದುದು ಎಂದು ಅನಿಸುತ್ತದೆ.
ನಮ್ಮ ದೇಶ ಸಾವಿರಾರು ವರ್ಷಗಳ ಕಾಲ ಪರಕೀಯರ ಆಳ್ವಿಕೆಗೆ ದೌರ್ಜನ್ಯಕ್ಕೆ ಸಿಲುಕಿ ನಲುಗಿದೆ. ಆದರೆ ಭರತ ಖಂಡವನ್ನು ಸುಮಾರು 300ವರ್ಷಗಳ ಕಾಲ ಆಳಿದ ಮುಸಲ್ಮಾನರು ಹಿಂದೂಗಳ ಸಾಮಾಜಿಕ ಮತ್ತು ಸಾಂಸ್ಕೃತಿಕ ಬದುಕು ಮತ್ತು ಭಾವನೆಗಳ ಮೇಲೆ ಎಸಗಿದ ಆಕ್ರಮಣ, ದೌರ್ಜನ್ಯ ಎಂದಿಗೂ ಮರೆಯಲಾಗದಂತಹುದು. ಇವತ್ತು ಭರತ ಖಂಡವೇನಾದರೂ ಛಿದ್ರವಾಗಿದೆ ಎಂದರೆ ಅದಕ್ಕೆ ಪ್ರಮುಖ ಕಾರಣ ಇತಿಹಾಸದ ಪುಟಗಳಲ್ಲಿ ಸೇರಿ ಹೋದ ಮುಸಲ್ಮಾನರು!ಹರಿದು ಹಂಚಿ ಹೋದ ರಾಷ್ಟ್ರಗಳಾದ ಭಾಂಗ್ಲಾ, ಪಾಕೀಸ್ತಾನ, ಕಾಬೂಲ್, ಬರ್ಮಾ, ಜಾವಾ, ಸುಮಾತ್ರ, ಕಾಂಬೋಡಿಯಾ ಇತ್ಯಾದಿಗಳಲ್ಲಿ ಇವತ್ತಿಗೂ ಹಿಂದೂಗಳ ಮೇಲೆ ನಿರಂತರವಾದ ಹಲ್ಲೆ ಜಾಗೃತ ಸ್ಥಿತಿಯಲ್ಲಿದೆ,ಧರ್ಮ ಬದಲಿಸುವ ಕ್ರಿಯೆಗೆ ಒಪ್ಪದ ಹಿಂದೂಗಳ ಮಾರಣ ಹೋಮ ನಡೆಯುತ್ತಿದೆ, ಇದಕ್ಕೆ ಸಾಕ್ಷ್ಯಧಾರಗಳು ಸಹಾ ಜಾಗತಿಕ ಮಟ್ಟದಲ್ಲಿ ಲಭ್ಯವಿದೆ . ಹಿಂದೂಗಳ ಭಾವನೆಯ ಸಂಕೇತವಾದ ಸಾಂಸ್ಕೃತಿಕ ಸ್ಮಾರಕಗಳು, ದೇಗುಲಗಳನ್ನು ನಾಶಪಡಿಸುವ ಕ್ರಿಯೆ ಜಾರಿಯಲ್ಲಿದೆ. ಹೀಗಿದ್ದಾಗ್ಯೂ ಭಾರತದಲ್ಲಿ ಮತೀಯವಾದವನ್ನು ತೊಡೆದು ಹಾಕುವ ರೀತಿಯಲ್ಲಿ ಸಾಂಸ್ಕೃತಿಕ-ಸಾಮಾಜಿಕ ಒಗ್ಗಟ್ಟು ಇರುವುದನ್ನು ಕಾಣಬಹುದು. ಭಾವೈಕ್ಯತೆಯ ಮಂದಿರಗಳು, ಗುಮ್ಮಟಗಳು ಧಾರ್ಮಿಕ ಕೇಂದ್ರಗಳನ್ನು ಸಹಜೀವನದ ಬದುಕುಗಳನ್ನು ಭಾರತದಲ್ಲಿ ಮಾತ್ರ ಕಾಣಲು ಸಾಧ್ಯ. ವಿಶಾಲವಾಗಿ ಆಲೋಚಿಸುವವರನ್ನ, ಹೃದಯ ವೈಶಾಲ್ಯವನ್ನ ಹೊಂದಿದ, ಪರಸ್ಪರರ ಭಾವನೆಗಳನ್ನು ಗೌರವಿಸುವ ಜನರಿರುವುದು ಬಾರತದಲ್ಲೇ ಅಂದರೆ ತಪ್ಪಾಗಲಾರದೇನೋ. ಆದರೆ ಪ್ರಸಕ್ತ ಸನ್ನಿವೇಶದಲ್ಲಿ ಆಗುತ್ತಿರುವುದೇನು? ಸದ್ದಿಲ್ಲದೇ ಗರಿಗೆದರುತ್ತಿರುವ ಕೋಮು ಶಕ್ತಿಗಳು ಮತ್ತು ಆ ಮೂಲಕ ರಾಜಕೀಯ ಲಾಭ ಮಾಡಿಕೊಳ್ಳಲು ಹವಣಿಸುವ ರಾಜಕೀಯ ಪಕ್ಷಗಳು ಪ್ರಜಾತಾಂತ್ರಿಕ ವ್ಯವಸ್ಥೆಯನ್ನು ಆತಂಕದಲ್ಲಿ ಸಿಲುಕುವಂತೆ ಮಾಡಿವೆ. ಪರಿಣಾಮ ಚದುರಿಹೋದ ದುಷ್ಟರು ದೇಶದ ಬಾಹ್ಯ ಮತ್ತು ಆಂತರಿಕ ಭದ್ರತೆಗೆ ನಿರಂತರವಾಗಿ ಅಪಾಯವನ್ನು ತಂದೊಡ್ಡಿದ್ದಾರೆ. ಈ ಹಿನ್ನೆಲೆಯಲ್ಲಿ ಅಯೋಧ್ಯಾ ವಿವಾದವನ್ನು ಪರಿಗಣಿಸುವುದಾದರೆ ಕೆಲವು ವಿಚಾರಗಳ ಮಂಥನ ಅಗತ್ಯವಾದೀತೇನೋ. ಹಿಂದೂ ಪರಂಪರೆಯನ್ನು ಸಾರುವ ರಾಮಾಯಣ-ಮಹಾಭಾರತ ಐತಿಹಾಸಿಕವಾದ ಸಂಗತಿ. ಇದರ ವಾಸ್ತವತೆಗೆ ಅಖಂಡ ಭಾರತದ ವಿವಿದೆಡೆ ಇಂದಿಗೂ ಕಂಡು ಬರುವ ಐತಿಹಾಸಿಕ ಕುರುಹುಗಳು ಸಾಕ್ಷಿಯಾಗಿ ನಿಂತಿವೆ. ಅವು ಒಂದು ದೇಶದ ಜನರ ಭಾವನೆಗಳಿಗೆ, ಬದುಕಿಗೆ ಸಂಬಂಧಿಸಿದ ಅತಿ ಮುಖ್ಯ ವಿಚಾರಗಳು ಹೌದು. ಆದರೆ ಅಖಂಡ ಭಾರತದ ಮೇಲೆ ಧಾಳಿ ಮಾಡಿದ ಮತ್ತು ಆಳ್ವಿಕೆ ನಡೆಸಿದ ಘಜನಿ ಮಹಮ್ಮದ್, ಮಹ್ಮದ್ ಘೋರಿ,ಬಾಬರ್, ಅಲೆಕ್ಸಾಂಡರ್, ಔರಂಗಜೇಬ ಮತ್ತು ತೊಘಲಕ್ ಅರಸರು ಗಳು ಶತಮಾನಗಳ ಹಿಂದೆ ನಮ್ಮ ಸಾಂಸ್ಕೃತಿಕ ಐತಿಹ್ಯಗಳ ಮೇಲೆ ನಡೆಸಿದ ಧಾಳಿಯ ಪರಿಣಾಮ ಇವತ್ತಿಗೂ ಹಿಂದೂಗಳು ಚೇತರಿಸಿಕೊಳ್ಳಲಾಗದಂತಹ ಸ್ಥಿತಿಯನ್ನು ನಿರ್ಮಿಸಿದೆ. ಹಿಂದೂಗಳ ಅನೇಕ ಭಾವನಾತ್ಮಕ ಐತಿಹ್ಯಗಳ ಮೇಲೆ ಅಳಿದು ಹೋದ ಮುಸ್ಲಿಂ ಅರಸರು ದಬ್ಬಾಳಿಕೆಯ ಸಂಕೇತವಾಗಿ ಮಸೀದಿ-ದರ್ಗಾ ಮತ್ತಿತರ ಸ್ಮಾರಕಗಳನ್ನು ನಿರ್ಮಿಸಿದ್ದಾರೆ. ಇದು ಅಂದಿನವರ ಪೈಶಾಚಿಕ ಕೃತ್ಯವೇ ಸರಿ, ಆದರೆ ಈಗೇನಾಗಿದೆ ? ಇದು ನಾಗರೀಕ ಜಗತ್ತು, ಮತೀಯವಾದ, ಸಂಘರ್ಷಕ್ಕೆ ಎಡೆಮಾಡುವಂತ ವಿಚಾರಗಳು ಅನಪೇಕ್ಷಿತವಾದವುಗಳಾಗಿವೆ. ಬಾಬರಿ ಮಸೀದಿ ಜಾಗ ಶ್ರೀ ರಾಮನ ಜನ್ಮಭೂಮಿಯೇ ಇದ್ದಿರಬಹುದು ಹಾಗೆಯೇ ಅಲ್ಲಿ ರಾಮದೇಗುಲವನ್ನು ಧ್ವಂಸಗೊಳಿಸಿ ಬಾಬರನು ಮಸೀದಿಯನ್ನು ನಿರ್ಮಿಸಿರಬಹುದು ಈ ಕುರಿತು ವಿಚಾರ ಇತ್ಯರ್ಥ ಕಾಣುವ ಮುಂಚೆಯೇ ಬಿಜೆಪಿ ಮತ್ತು ಸಂಘ ಪರಿವಾರದವರು ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿದ್ದು ತಪ್ಪು ಆ ಮೂಲಕ ಮಹ್ಮದೀಯ ದೊರೆಗಳಿಗಿಂತ ತಾವೇನೂ ಭಿನ್ನವಲ್ಲ ಎಂದು ತೋರಿದಂತಾಗಿದೆ. ಇಲ್ಲಿ ಮಸೀದಿ ಉರುಳಿಸಿದ್ದು ಹಿಂದೂಗಳಿಗೆ ದೊರೆತ ಜಯವೆಂದೇ ಅವರು ಭಾವಿಸಬಹುದೇನೋ ಆದರೆ ಅದರ ನಂತರದ ಪರಿಣಾಮ ಬಾಂಗ್ಲಾ,ಪಾಕೀಸ್ತಾನ್, ಕಾಬೂಲ್ ಮತ್ತಿತರೆಡೆಗಳಲ್ಲಿರುವ ಹಿಂದೂಗಳ ಮೇಲೆ ತೀವ್ರತರವಾದ ಪರಿಣಾಮವನ್ನೆ ಬೀರಿದೆ ಮತ್ತು ಈಗಲೂ ಬೀರುತ್ತಿದೆ. 1528ರಲ್ಲಿ ನಿರ್ಮಾಣವಾಗಿದೆಯೆನ್ನಲಾದ ಮಸೀದಿಯಲ್ಲಿ 1949ರ ಸುಮಾರಿಗೆ ಪ್ರಾರ್ಥನೆ ನಿಂತಿದೆ, ನಂತರ ಹಿಂದೂಗಳು ಅಲ್ಲಿ ರಾಮನ ವಿಗ್ರಹವನ್ನು ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಿದ್ದಾರೆ ಅಲ್ಲಿಂದ ಶುರುವಾದ ವಿವಾದ ಅಲಹಾಬಾದ್ ಕೋರ್ಟಿನಲ್ಲಿ ತಾರ್ಕಿಕ ಅಂತ್ಯವನ್ನು ಸಾಕ್ಷ್ಯಗಳ ಆಧಾರದಲ್ಲಿ ಕೋರ್ಟಿನ ಇತಿಮಿತಿಯಲ್ಲಿ ಪ್ರಕಟವಾಗಿದೆ. ನಾನು ಈ ಮೊದಲೇ ಹೇಳಿದಂತೆ ಇದು ಸಾಕ್ಷ್ಯ ಮತ್ತು ಆಧಾರಗಳ ಮೇಲೆ ಮಾತ್ರ ತೀರ್ಮಾನಿಸ ಬಹುದಾದ ವಿಚಾರವಲ್ಲ. ಪ್ರಸಕ್ತ ಸಂಧರ್ಭದ ಸ್ಥಿತಿ, ದೇಶದ ಭಾವೈಕ್ಯತೆ ಹಿನ್ನೆಲೆಯಲ್ಲಿ ತೀರ್ಪು ಬಂದಿದ್ದರೆ ಚೆನ್ನಾಗಿರುತ್ತಿತ್ತು. ಈಗ ದೊರೆತ ತೀರ್ಪಿನಿಂದ ಬಾಬರಿ ಕ್ರಿಯಾ ಸಮಿತಿ ಮತ್ತು ವಿಶ್ವ ಹಿಂದೂ ಪರಿಷತ್ ಮತ್ತು ಸಂಘ ಪರಿವಾರಿಗಳಿಗೆ ಅತೃಪ್ತಿ ಉಂಟಾಗಿದೆ. ಹಂಚುವ ಪ್ರಕ್ರಿಯೆ ಮತ್ತುಷ್ಟು ಕಗ್ಗಂಟನ್ನು ಹೆಚ್ಚಿಸಿದೆ , ಸದರಿ ತೀರ್ಪನ್ನು ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸುವ ಮಾತನ್ನು ಎರಡೂ ಕಡೆಯವರು ಮಾದ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ. ವಿವಾದ ಮುಂದುವರೆಯುವ ಬಗ್ಗೆ ಸರ್ವರಲ್ಲೂ ಆತಂಕವನ್ನುಂಟು ಮಾಡಿದೆ. ವಿವಿಧತೆಯಲ್ಲಿ ಏಕತೆಯನ್ನು ಮೆರೆಯುವ ಭಾರತದಂತಹ ದೇಶದಲ್ಲಿ ಇತಿಹಾಸದಲ್ಲಿ ಗತಿಸಿ ಹೋದ ವಿಚಾರಗಳನ್ನು ಕೆದಕುವ ಬದಲಿಗೆ ವಾಸ್ತವ ಜಗತ್ತಿನ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ನಿಲುವುಗಳು ವ್ಯಕ್ತವಾದರೆ ದೇಶದ ಜನ ನೆಮ್ಮದಿಯ ಬದುಕು ಕಾಣಲು ಸಾಧ್ಯವಾಗಬಹುದೇನೋ. ಆದರೆ ಇದು ಸಾಧ್ಯವೇ?

Sunday, September 19, 2010

ಇಂಥ ಗಣೇಶೋತ್ಸವಗಳು ಬೇಕಾ??


ದು ಗಣೇಶೋತ್ಸವ ಆಚರಣೆಯ ಸಂಧರ್ಭ, ನಗರಗಳಲ್ಲಿ,ಪಟ್ಟಣಗಳಲ್ಲಿ,ಗಲ್ಲಿಗಳಲ್ಲಿ, ಹಳ್ಳಿಗಳಲ್ಲಿ, ಕೇರಿಗಳಲ್ಲಿ ಹೀಗೆ ಎಲ್ಲೆಂದರಲ್ಲಿ ಪ್ರತಿಷ್ಟಾಪನೆಯಾಗಿಬಿಡುವ ಗಣೇಶ ಇತ್ತೀಚಿನ ವರ್ಷಗಳಲ್ಲಿ ವ್ಯಾಪಾರೀಕರಣದ, ಕಂಡವರ ಸ್ವ-ಹಿತಾಸಕ್ತಿಯ ಉತ್ಸವ ಮೂರ್ತಿಯಾಗಿರುವದು ಅತ್ಯಂತ ವಿಷಾಧದ ಸಂಗತಿ. ಇವತ್ತು ಜಾಗತಿಕವಾಗಿ ವರಸಿದ್ದಿ ವಿನಾಯಕನ ಜನಪ್ರಿಯತೆ ಪಸರಿಸಿದೆ. ಭಾರತದಲ್ಲಿ ಪ್ರಧಾನ ಪೂಜೆ ಹಾಗೂ ವೈಭವದ ಉತ್ಸವ ನಡೆಯುವುದು ಮಾತ್ರ ಗಣೇಶನಿಗೆ ಆಗಿದೆ. ಎರಡನೇ ಸ್ಥಾನದಲ್ಲಿ ದುರ್ಗಿ, ಕಾಳೀ ಉತ್ಸವಗಳು ಜರುಗುತ್ತವೆ. ಐತಿಹಾಸಿಕ ಹಿನ್ನೆಲಯ ಗಣೇಶನ ಪ್ರಾಮುಖ್ಯತೆ ಮತ್ತು ಆತನ ಉತ್ಸವಗಳು ಇಂದಿನ ದಿನಗಳಲ್ಲಿ ಸಾಗಿರುವ ದಿಕ್ಕು ಹೇಗಿದೆ? ಗಣೇಶ ಎಂದರೆ ಯಾರು? ಇತರೆ ದೇವರುಗಳಿಗಿಂತ ಈತನ ಹೆಚ್ಚುಗಾರಿಕೆ ಏನು? ಗಣೇಶ ಪೂಜೆ ಆರಂಭವಾಗಿದ್ದು ಯಾವಾಗ? ವಿದೇಶಗಳಿಗೆ ಗಣೇಶ ಕಾಲಿಟ್ಟಿದ್ದು ಹೇಗೆ? ಸಾರ್ವಜನಿಕ ಗಣೇಶ ಉತ್ಸವಗಳು ಯಾಕೆ ಬೇಕು ? ಅದು ಶುರುವಾಗಿದ್ದು ಹೇಗೆ? ಎಂಬೆಲ್ಲ ಪ್ರಶ್ನೆಗಳು ನಮ್ಮನ್ನು ಆವರಿಸುವುದು ಸಹಜವೇ.
ಗಣೇಶ ಎಂದರೆ ಯಾರು ಎಂಬ ಪ್ರಶ್ನೆಗೆ ಎಂತಹ ಚಿಕ್ಕಮಕ್ಕಳು ಸಹಾ ಥಟ್ಟಂತ ಉತ್ತರಿಸಿ ಬಿಡುತ್ತವೆ ಆದರೆ ಗಣೇಶನ ಕುರಿತು ಸಾಮಾನ್ಯವಾಗಿರುವ ಕಥೆಗಳನ್ನು ಹೊರತು ಪಡಿಸಿ ವಿಭಿನ್ನ ರೀತಿಯ ಕಥೆಗಳು ಸಹಾ ಇವೆ. ಇರಲಿ ಅದನ್ನು ತಿಳಿಯುವ ಮುನ್ನ ಒಂದಷ್ಟು ವಿಚಾರಗಳನ್ನು ತಿಳಿಯೋಣ. ಗಣೇಶ ಎಂಬ ಪದ ಸಂಸ್ಕೃತದ ಗಣೇಸ ಎಂಬ ಪದದಿಂದ ಎರವಲಾಗಿ ಪಡೆದುದಾಗಿದೆ. ಗಣ ಗಳ ಅಧಿಪತಿ ಗಣೇಶ ಹಾಗಾಗಿ ಗಣೇಶ ಎಂದಾಗಿದೆ, ಅಷ್ಟೇ ಅಲ್ಲ ಆತ ಗಜ ಮುಖವನ್ನು ಹೊಂದಿರುವುದರಿಂದ ಗಜಮುಖ ಹೀಗೆ ಸಾಗುವ ಗಣೇಶನ ಹೆಸರಿನ ಪುರಾಣಕ್ಕೆ ಅಂತ್ಯವಿಲ್ಲ. ನಿಮಗೆ ಗೊತ್ತೆ ಗಣೇಶ ನಿಗೆ ಸಾವಿರಕ್ಕೂ ಮಿಕ್ಕಿದ ಹೆಸರುಗಳು ಇವೆ. ಗಣೇಶನಿಗೆ ಪೂಜಿಸಲು ಗಣೇಶ ಸಹಸ್ರನಾಮವೇ ಇದೆ! ಗಣೇಶ, ಶಿವ-ಪಾರ್ವತಿಯ ಮಗ, ಆತ ಹುಟ್ಟಿದ್ದು, ಗಜಮುಖ ಬಂದಿದ್ದಕ್ಕೆ ಇರುವ ಸಾಧಾರಣ ಕಥೆಗಿಂತ ವಿಭಿನ್ನ ಕಥೆಯೊಂದಿದೆ. ಗಣೇಶ ಹುಟ್ಟಿದಾಗ ಅಶ್ವಿನಿ ದೇವತೆಗಳು ಬಾಲಗಣಪನ್ನ ನೊಡಲು ಬರುತ್ತಾರೆ, ಹೀಗೆ ಬಂದವರಲ್ಲಿ ಛಾಯಾದೇವಿಯ ಮಗ ಶನಿಯು ಸಹಾ ಇರುತ್ತಾನೆ. ಆತನ ಮರೆಯಲ್ಲಿ ನಿಂತು ಬಾಲಗಣಪನ್ನು ನೋಡುವಾಗ ಪಾರ್ವತಿಗಮನಿಸಿ ಗಣಪನ್ನನು ತೊಡೆಯ ಮೇಲೆ ಹಾಕಿಕೊಳ್ಳುತ್ತಾಳಂತೆ, ಆಗ ಮನಸ್ಸು ಬೇಡವೆಂದರೂ ಕುತೂಹಲ ತಡೆಯದ ಶನಿಯು ಗಣೇಶನನ್ನು ನೇರ ನೋಟದಿಂದ ನೋಡಿದ ಪರಿಣಾಮ ಗಣೇಶನ ಮುಖ ಸುಟ್ಟು ಬೂದಿಯಾಗುತ್ತದೆ.. ಆಗ ಪಾರ್ವತಿಯು ಶನಿಗೆ ಹೆಳವನಾಗುವಂತೆ ಶಾಪಕೊಟ್ಟು ತೆವಳಿಕೊಂಡು ಹೋಗುವಂತೆ ಮಾಡುತ್ತಾಳಂತೆ, ಇದಕ್ಕೆ ಪ್ರತಿಯಾಗಿ ಸಿಟ್ಟಿಗೆದ್ದ ಶನಿಯ ತಾಯಿ ಛಾಯಾದೇವಿ ಗಣೇಶನಿಗೆ ಡೊಳ್ಳುಹೊಟ್ಟೆ ಬಂದು ಆತನು ನಿಧಾನವಾಗಿ ಸಂಚರಿಸುವಂತೆ ಶಪಿಸುತ್ತಾಳೆ. ನಂತರ ಶಿವನು ಗಜಮುಖವನ್ನು ತರಿಸಿ ಬಾಲಗಣೇಶನಿಗೆ ಜೀವ ತರಿಸುತ್ತಾನಂತೆ ಗಜಮುಖವನ್ನೇ ಏಕೆ ಆಯ್ಕೆ ಮಾಡಿದೆ ಎಂದರೆ ರಾಕ್ಷಸ ಗಣಗಳನ್ನು ಹೆದರಿಸಲು ಆ ಮುಖ ಎನ್ನುತ್ತಾನೆ. ಈ ಕಥೆ ಕೇಳಲು ವಿನೋದವಾಗಿದೆ. ಅತ್ಯಂತ ಬುದ್ದಿವಂತನಾದ ಗಣಪ ತಂದೆ-ತಾಯಿಯರ ಮನವನ್ನು ಗೆಲ್ಲುತ್ತಾನೆ ಆ ಮೂಲಕ ಶಿವನಿಂದ ಸಮಸ್ತರ ವರಸಿದ್ದಿಸುವ ಶಕ್ತಿಯನ್ನು ಪಡೆದು ವರಸಿದ್ದಿ ವಿನಾಯಕನಾಗುತ್ತಾನೆ ಎಂಬ ಮಾತಿದೆ. ಇಂದಿಗೂ ವಿವಾದಾತ್ಮಕವಾಗಿ ಚರ್ಚಿಸುವ ವಿಚಾರವೆಂದರೆ ಗಣೇಶ ಬ್ರಹ್ಮಚಾರಿ ಇಲ್ಲವೇ ಇಬ್ಬರು ಹೆಂಡಿರ ಗಂಡ ಎಂಬ ಮಾತಿದೆ. ಅದಕ್ಕೆ ಪೂರಕವಾಗಿರುವ ಕಥೆಯೊಂದರ ಪ್ರಕಾರ ಗಣೇಶನಿಗೆ ಸಿದ್ದಿ ಮತ್ತು ಬುದ್ದಿ,ರಿದ್ದಿ ಎಂಬ ಪತ್ನಿಯರಿದ್ದು ಶುಭ-ಲಾಭ ಹಾಗೂ ಜೈ ಸಂತೋಷಿಮಾ ಎಂಬ ಮಕ್ಕಳು ಇದ್ದರು ಎನ್ನಲಾಗುತ್ತದೆ. ಕೆಲವು ಉಲ್ಲೇಖಗಳಲ್ಲಿ ಗಣೇಶ ಆನೆ ಮುಖದೊಂದಿಗೆ ಹುಟ್ಟಿದ ಆದ್ದರಿಂದಲೇ 'ಗಜಮುಖ'ನೆಂಬ ಹೆಸರು ಬಂದಿದೆ ಎಂದು ಹೇಳಲಾಗುತ್ತದೆ. ಈ ಬಗೆಗೆ ಗಣೇಶನ ಕುರಿತ ಲಭ್ಯವಿರುವ ಮುದ್ಗಲ್ ಪುರಾಣ ಮತ್ತು ಗಣೇಸ ಪುರಾಣ, ಶಿವಪುರಾಣ ಗಳಲ್ಲಿ ಮಾಹಿತಿ ಇದೆ.'ಬ್ರಹ್ಮಾನಂದ ಪುರಾಣದಲ್ಲಿ 'ಭೂತ-ವರ್ತಮಾನ-ಭವಿಷ್ಯತ್' ಮಾನದ ಸಂಕೇತವೇ ಗಣೇಶ ಹಾಗಾಗಿ ಆತನಿಗೆ 'ಲಂಬೋದರ'/ಮಹೊದರ ಎನ್ನಲಾಗುವುದಂತೆ. ಇನ್ನೊಂದು ವಿಶೇಷವೆಂದರೆ ಗಣೇಶನನ್ನು 32ಮಾದರಿಗಳಲ್ಲಿ ಕಾಣಬಹುದು!
ಗಣೇಶನ ಪೂಜೆ ಮೊದಲಿಗೆ ಆರಂಭವಾದ ಬಗ್ಗೆ ಮಾಹಿತಿ ಲಭ್ಯವಾಗುವುದು ಗುಪ್ತರ ಕಾಲದಲ್ಲಿ, ಅದಕ್ಕು ಮುಂಚೆ 4 ಮತ್ತು 5ನೇ ಶತಮಾನದಲ್ಲಿ ಗಣೇಶನ ಆರಾಧನೆಯ ಬಗ್ಗೆ ಸುಳುಹು ಲಭ್ಯವಾಗುತ್ತದೆ. ಗುಪ್ತರ ಆಡಳಿತಾವದಿಯಲ್ಲಿ ಬರ್ಮಾ ದಲ್ಲಿ ಸ್ಥಾಪಿತವಾದ ಶಿವ ದೇಗುಲದ ಆವರಣದಲ್ಲಿ ಸಿಗುವ ಗಣೇಶ ನೇ ಮೊದಲ ಅಸ್ತಿತ್ವದ ಕುರುಹು. ಪುರಾತನ ಕಾಲದ ಪಳೆಯುಳಿಕೆಗಳಾದ ಎಲ್ಲೋರ ಗುಹೆಗಳಲ್ಲು ಗಣೇಶನ ಚಿತ್ರಗಳು ಕಾಣ ಸಿಗುತ್ತವೆ. ಇದಕ್ಕೂ ಮುನ್ನ ಬುಡಕಟ್ಟು ಜನಾಂಗದ ಮಂದಿ ಆನೆಮುಖದ ಗಣೇಶನನ್ನು ಪೂಜಿಸುತ್ತಿದ್ದ ಬಗ್ಗೆಯೂ ಸುಳುಹು ಲಭಿಸುತ್ತವೆಯಾದರೂ ನಿಖರವಾಗಿ ಯಾವಾಗ ಎಂಬುದು ಮಾತ್ರ ಇಂದಿಗೂ ನಿಗೂಢವೇ!ಪ್ರಸಕ್ತ ಸಂಧರ್ಬದಲ್ಲಿ ಗಣೇಶ ಜಾತಿ-ಮತ-ಪಂಥವನ್ನು ಮೀರಿ ಬೆಳೆದಿದ್ದಾನೆ. ದೇಶದಲ್ಲಷ್ಟೇ ಅಲ್ಲ ದಕ್ಷಿಣ ಆಪ್ರಿಕಾ, ಜಾವಾ, ಸುಮಾತ್ರ, ಕಾಂಬೋಡಿಯಾ, ಪ್ರಾನ್ಸ್, ಶ್ರೀಲಂಕಾ, ಜಪಾನ್, ಮಲೇಷಿಯಾ ಹೀಗೆ 100ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಹಿಂದೂಗಳಲ್ಲದ ಭಕ್ತರನ್ನು ಸಂಪಾದಿಸಿದ್ದಾನೆ. ಗಣೇಶ ಮೊದಲಿಗೆ ದ್ರಾವಿಡರ ದೇವರೆಂದು ಪರಿಗಣಿತವಾದರೂ ನಂತರದ ದಿನಗಳಲ್ಲಿ ಆತ ಆರ್ಯರ ದೇವರೆಂದೇ ಬಿಂಬಿತನಾಗಿದ್ದಾನೆ. ಬ್ರಾಹ್ಮಣ ಸಮುದಾಯದವರು ಮಾತ್ರ ಮನೆಯಲ್ಲಿರಿಸಿ ಪೂಜಿಸುತ್ತಿದ್ದ ವಿಘ್ನೇಶ್ವರನನ್ನು 1893ರಲ್ಲಿ ದೇಶಭಕ್ತ ಲೋಕಮಾನ್ಯ ಬಾಲಗಂಗಾಧರ ತಿಲಕರು ಸ್ವಾತಂತ್ರ್ಯದ ಜಾಗೃತಿಗಾಗಿ ಬ್ರಾಹ್ಮಣರು/ ಅಬ್ರಾಹ್ನಣರನ್ನು ಬ್ರಿಟೀಷರ ವಿರುದ್ದ ಒಂದುಗೂಡಿಸುವ ಸಲುವಾಗಿ ಗಣೇಶನನ್ನು ಸೀಮಿತವಲಯದಿಂದ ಮುಕ್ತಗೊಳಿಸಿ ಸಾರ್ವಜನಿಕವಾಗಿ ಪ್ರತಿಷ್ಠಾಪಿಸಿದರು. ಪರಿಣಾಮವಾಗಿ ಇವತ್ತು ದೇಶದ ಉದ್ದಗಲಕ್ಕೂ ಸಾರ್ವಜನಿಕವಾಗಿ ಗಣೇಶನನ್ನು ಪ್ರತಿಷ್ಠಾಪಿಸಲಾಗುತ್ತಿದೆ. ಅಂದು ತಿಲಕರು ಅಂದುಕೊಂಡ ಉದ್ದೇಶ ಗಣೇಶನ ಮೂಲಕ ಸಾಧ್ಯವಾಯಿತು. ಆದರೆ ಇವತ್ತೇನಾಗಿದೆ? ಗಣೇಶ ಸ್ವಾರ್ಥದ ಹಿತಾಸಕ್ತಿಗಳ ಕೈಗೊಂಬೆಯಾಗಿದ್ದಾನೆ ಎಂದು ಹೇಳಲು ವಿಷಾಧವಾಗುತ್ತದೆ. ಇವತ್ತು ಪ್ರತಿ ಊರುಗಳಲ್ಲಿ ಅಲ್ಲಿನ ಗಲ್ಲಿಗಳಲ್ಲಿ ಸ್ಥಾಪಿತವಾಗುವುದು ಜಾತಿ ಗಣೇಶ, ರಾಜಕೀಯದ ಗಣೇಶ, ಸಂಘದ ಪ್ರತಿಷ್ಠೆಯ ಗಣೇಶ, ಹಣ ಉಳ್ಳವರ ಪ್ರದರ್ಶನದ ಗಣೇಶ, ಹಪ್ತಾ ವಸೂಲಿಯ ಗಣೇಶ, ಪೋರ್ಕಿಗಳ ಗಣೇಶ ಹೀಗೆ ಒಂದೇ ಎರಡೇ. ನಾನು ಈಗಾಗಲೇ ಹೇಳಿದಂತೆ ಗಣೇಶನ ಮಹಿಮೆಗಳನ್ನು ಸಾರುವ ಹಿನ್ನೆಲೆಯಲ್ಲಿ 32ಮಾದರಿಯ ಗಣೇಶ ಇದ್ದರೆ ಇವತ್ತು ವೀರಪ್ಪನ್ ಗಣೇಶ, ಬಿನ್ ಲಾಡೆನ್ ಗಣೇಶ ನಕ್ಸಲೈಟ್ ಗಣೇಶ, ಭಯೋತ್ಪಾದಕ ಗಣೇಶ, ವಿದೇಶಗಳಲ್ಲಿ ಬಫೂನ್ ಗಣೇಶನ ಮೂರ್ತಿಗಳನ್ನು ಸ್ಥಾಪಿಸಿದರೆ ವಿದೇಶೀಯರು ಚಪ್ಪಲಿಯ ಮೇಲೆ, ಬೆತ್ತಲೆ ಬೆನ್ನು, ಹೊಟ್ಟೆ, ತೊಡೆ ಇತ್ಯಾದಿಗಳ ಮೇಲೆಲ್ಲ ಗಣೇಶನ ಚಿತ್ತಾರವನ್ನು ಹಾಕಿಕೊಳ್ಳುವುದು ಅತ್ಯಂತ ಬೇಸರದ ಸಂಗತಿ. ಗಣಪತಿ ಭಾವೈಕ್ಯತೆಯ ಶಕ್ತಿಯ ಸಂಕೇತ ಅದು ನಂಬಿದ ಜನರ ಭಾವನಾ ಸಂಕೇತವೂ ಹೌದು ಹೀಗಿರುವಾಗ ಇದನ್ನೆಲ್ಲ ಸಹಿಸಲಾದೀತೆ? ಗಣಪತಿಯ ಹೆಸರು ಹೇಳಿ ಬೋಗಸ್ ಲಾಟರಿ ಮಾಡುವುದು, ಬಲವಂತದ ಚಂದಾ ವಸೂಲು ಮಾಡುವುದು, ಬೇಕಿಲ್ಲದ ಅದ್ದೂರಿತನ ಪ್ರದರ್ಶಿಸಿ ಹಣ ಪೋಲು ಮಾಡುವುದು ಬೇಕಾ ಹೇಳಿ? ಅತ್ತ ವೇದಿಕೆಯಲ್ಲಿ ಗಣೇಶನನ್ನು ಕೂರಿಸಿ ಆತನ ಎದುರು ಭಾಗದ ವೇದಿಕೆಯಲ್ಲಿ ಮೈಮಾಟ ಪ್ರದರ್ಶಿಸುವ ನಂಗಾನಾಚ್ ನೃತ್ಯ ವೈಭವ, ಪೋಲಿ ಹಾಡುಗಳ ಸುಗಮ ಸಂಗೀತ ಇವೆಲ್ಲಾ ಬೇಕೇನ್ರಿ? ಯಾವುದೋ ಜಾಗ ಕಬಳಿಸುವ ಸಲುವಾಗಿ ಗಣೇಶ ಸಮಿತಿ ಮಾಡಿ ಎಡವಟ್ಟು ಜಾಗದಲ್ಲಿ ಗಣೇಶನ್ನು ಪ್ರತಿಷ್ಠಾಪಿಸುವುದು, ಹಾದಿ-ಬಿದಿ ಬದಿ ಗಣೇಶನನ್ನು ಕೂರಿಸುವುದು, ಚರಂಡಿ ದುರ್ವಾಸನೆ ಬಳಿ ಗಣೇಶನನ್ನು ಪ್ರತಿಷ್ಠಾಪಿಸುವುದು ಎಷ್ಟು ಸರಿ ಸ್ವಾಮಿ? ಇನ್ನು ಕೆಲವೆಡೆಗಳಲ್ಲಿ ಗಣೇಶನನ್ನು ಕೂರಿಸಲು ಚೀಟಿ ಹಾಕಿ 'ಚೀಟಿ ಗಣೇಶ'ನನ್ನು ಸಹಾ ಕೂರಿಸುವ ಪ್ರವೃತ್ತಿ ಉಂಟು. ಒಟ್ಟಾರೆ ಹೇಳುವುದಾದರೆ ಗಣೇಶನ ಹೆಸರಿನಲ್ಲಿ ಪ್ರತೀ ವರ್ಷ ಕೋಟ್ಯಾಂತರ ರೂಪಾಯಿಗಳು ವ್ಯಯ ಮತ್ತು ಪರಿಸರ ಮಾಲಿನ್ಯ ಆಗುತ್ತಿದೆ. ಭಕ್ತಿ-ಭಾವದ ವರಸಿದ್ದಿ ವಿನಾಯಕನಿಗೆ ಇಂತದ್ದೆಲ್ಲಾ ಅವಾಂತರ ಬೇಕೇನ್ರಿ? ನೀವೇನಂತೀರಿ???

Sunday, September 12, 2010

ಬೇಕಾಗಿದೆ ಮೌಲ್ಯಾಧಾರಿತ ರಾಜಕಾರಣ..!

ಬಿಜೆಪಿ ಸರ್ಕಾರ ಮತ್ತೊಮ್ಮೆ ಮುಜುಗುರಕ್ಕೆ ಸಿಲುಕಿದೆ, ಮತ್ತು ಇದು ಹೊಸತೇನೂ ಅಲ್ಲ ಬಿಡಿ. ಪರಮ ಭ್ರಷ್ಟಾಚಾರ ಬಯಲಾಗುತ್ತಿದ್ದಂತೆ ಅನಿವಾರ್ಯವಾಗಿ ಸರ್ಕಾರದ ವೈದ್ಯಕೀಯ ಶಿಕ್ಷಣ ಸಚಿವ ರಾಮಚಂದ್ರಗೌಡ ರಾಜೀನಾಮೆ ನೀಡಿದ್ದಾರೆ.ಬಿಜೆಪಿ ಸರ್ಕಾರದಲ್ಲಿ ಇದು ಮೂರನೆಯ ರಾಜೀನಾಮೆ. ಮೊದಲನೆಯವರು ಮುಜುರಾಯಿ ಖಾತೆ ಸಚಿವ ಕೃಷ್ಣಶೆಟ್ಟಿ, ಎರಡನೆಯವರು ಸಮಾಜ ಕಲ್ಯಾಣ ಇಲಾಖೆ ಸಚಿವ ಡಿ ಸುಧಾಕರ್ ಮೂರನೆಯವರು ವೈದ್ಯಕೀಯ ಶಿಕ್ಷಣ ಸಚಿವ ರಾಮಚಂದ್ರಗೌಡ. ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ ಪದೇ ಪದೇ ಇಂತಹ ಅವಸ್ಥೆಗೆ ಗುರಿಯಾದ ಸರ್ಕಾರವೆಂದರೆ ಸಧ್ಯದ ಬಿಜೆಪಿ ಸರ್ಕಾರ.ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಕೇವಲ 3ವರ್ಷಗಳಷ್ಟೇ ಕಳೆದಿದೆ ಈ ಅವಧಿಯಲ್ಲಿ ಇಷ್ಟೆಲ್ಲ ಅಸಹ್ಯಗಳು ಬೇಕಿತ್ತಾ?
ಒಂದರೆಕ್ಷಣ ನೆನಪಿಸಿಕೊಳ್ಳಿ ಪಕ್ಷ ಅಧಿಕಾರಕ್ಕೆ ಬಂದ ಆರಂಭದಲ್ಲೇ ಹೊನ್ನಾಳಿ ಶಾಸಕ ರೇಣುಕಾಚಾರ್ಯ ನರ್ಸು ಜಯಲಕ್ಷ್ಮಿ ಜೊತೆ ಚಕ್ಕಂದ ಆಡಿದ ವಿವರಗಳು ಬಹಿರಂಗಕ್ಕೆ ಬಂದಿದ್ದು, ದಾವಣಗೆರೆಯಲ್ಲಿ ಪುಂಡಾಟಿಕೆ ತೋರಿಸಲು ಹೋಗಿ ಎಸ್ಪಿ ಸೋನಿಯಾ ನಾರಂಗ್ ರಿಂದ ಅಂಡಿನ ಮೇಲೆ ರೇಣುಕಾಚಾರ್ಯ ಒದೆ ತಿಂದದ್ದು, ರೆಡ್ಡಿಗಳನ್ನು ನಿರ್ಲಕ್ಷಿಸಿದರೆಂಬ ಆರೋಪ ಹೊತ್ತ ಸಿಎಂ ಯಡಿಯೂರಪ್ಪ ಅಧಿಕಾರ ಹೋಯಿತು ಎನ್ನುವಷ್ಟರಲ್ಲಿ ಸ್ವಾಭಿಮಾನವನ್ನು ಗಾಳಿಗೆ ತೂರಿ ಸಿಎಂ ಗದ್ದುಗೆ ಉಳಿಸಿಕೊಂಡದ್ದು, ಕೆಜಿಎಫ್ ನ ಶಾಸಕ ಸಂಪಂಗಿಯ ಭ್ರಷ್ಟಾಚಾರದಿಂದ ಲೋಕಾಯುಕ್ತ ಬಲೆಗೆ ಸಿಲುಕಿದ್ದು, ಮುಜುರಾಯಿ ಖಾತೆಯ ಸಚಿವರಾಗಿದ್ದ ಕೃಷ್ಣಶೆಟ್ಟಿ ಸರ್ಕಾರ ಸ್ವಾಧಿನಕ್ಕೆ ತೆಗೆದುಕೊಂಡ ನೂರಾರು ಎಕರೆ ಕೃಷಿ ಭೂಮಿಗೆ ಸರ್ಕಾರದಲ್ಲಿ ಅಧಿಕ ವೆಚ್ಚ ತೋರಿಸಿ ರೈತರಿಗೆ ಕಡಿಮೆ ಬೆಲೆ ನೀಡಿ ವಂಚಿಸಿದ್ದು, ಪ್ರತಿಫಲವಾಗಿ ರಾಜೀನಾಮೆ,ಶಾಸಕ ಹರತಾಳು ಹಾಲಪ್ಪ ಅತ್ಯಾಚಾರ ಕಾಂಡದಲ್ಲಿ ಸಿಲುಕಿದ್ದು,ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ದಿ ನಿಗಮದ ಅಧ್ಯಕ್ಷೆ ಚಿತ್ರ ನಟಿ ಶೃತಿಯ ಖಾಸಗಿ ಬದುಕಿನ ರಂಪಾಟ ಬಹಿರಂಗವಾಗಿದ್ದು, ನರ್ಸು ಜಯಲಕ್ಷ್ಮಿ ಸರ್ಕಾರದಲ್ಲಿ ಸಚಿವನಾಗಿರುವ ರೇಣುಕಾಚಾರ್ಯನ ಖಾಸಗಿ ಬದುಕನ್ನು ಹಾದಿರಂಪ ಬೀದಿರಂಪ ಮಾಡಿ ಕೋರ್ಟು ಮೆಟ್ಟಿಲು ಹತ್ತಿಸಿದ್ದು, ವಿಧಾನ ಸಭೆಯಲ್ಲಿ ರೆಡ್ಡಿ ಸಹೋದರರ ವಾಗ್ದಾಳಿಯಿಂದ ಪ್ರತಿಪಕ್ಷಗಳು ಧರಣಿ ನಡೆಸಿ ಪಾದಯಾತ್ರೆ ಮಾಡಿದ್ದು, ಬೇಲೇಕೇರಿ ಬಂದರಿನ ಅದಿರು ನಾಪತ್ತೆಯಾಗಿದ್ದು, ಲೋಕಾಯುಕ್ತರು ಹೆಚ್ಚಿನ ಅಧಿಕಾರಕ್ಕೆ ಆಗ್ರಹಿಸಿ ರಾಜೀನಾಮೆ ನೀಡಿದ್ದು, ಮೈಸೂರು ವಿವಿ ಭ್ರಷ್ಟಾಚಾರ ಕುರಿತು ಸರ್ಕಾರದ ಎಡಬಿಡಂಗಿ ದೋರಣೆ, ರಾಜ್ಯಪಾಲರ ಅಸಹಾಯಕ ಹೇಳಿಕೆ, ಪ್ರತಿ ಪಕ್ಷದವರ ಮಾತಿನ ವಿರುದ್ದ ಆಡಳಿತ ಪಕ್ಷದವರ ಕ್ರಿಮಿನಲ್ ಹೇಳಿಕೆಗಳು, ಬಿಕ್ಷುಕರ ಪುನರ್ವಸತಿ ಕೇಂದ್ರದ ಅಕ್ರಮ-ಅವ್ಯವಸ್ಥೆ, ಹೊಣೆಹೊತ್ತು ಸಮಾಜ ಕಲ್ಯಾಣ ಇಲಾಖೆಯ ಸಚಿವ ಸುಧಾಕರ್ ರಾಜೀನಾಮೆ, ಹಾಸನ-ಮೈಸೂರು ವೈದ್ಯಕೀಯ ಮಹಾವಿದ್ಯಾಲಯಗಳ ಸಿಬ್ಬಂದಿ ನೇಮಕಾತಿಯ ಅಕ್ರಮ-ಭ್ರಷ್ಟಾಚಾರ, ನೇಮಕಾತಿ ರದ್ದು, ಹೈಕೋರ್ಟಿನಿಂದ ಸಚಿವರಿಗೆ ಛೀಮಾರಿ, ಅಂತಿಮವಾಗಿ ಹೊಣೆ ಹೊತ್ತು ಸಚಿವ ಸ್ಥಾನಕ್ಕೆ ರಾಮಚಂದ್ರಗೌಡ ರಾಜೀನಾಮೆ ಹೀಗೆ ಹೇಳುತ್ತಾ ಹೋದರೆ ಒಂದೇ ಎರಡೇ?
ಯಾವುದೇ ಸರ್ಕಾರಕ್ಕೆ ಒಂದು ಅಭಿವೃದ್ದಿಯ ಬದ್ದತೆ ಬೇಕು , ಬದ್ದತೆ ಜೊತೆಗೆ ನೈತಿಕ ಮೌಲ್ಯಗಳು ಬೇಕು. ಚುನಾವಣೆಯಲ್ಲಿ ಗೆಲ್ಲುವವರೆಗೆ ಮಾತ್ರ ಪಕ್ಷ ರಾಜಕಾರಣ ಬೇಕು. ಗೆದ್ದ ಮೇಲೆ ಎಲ್ಲರನ್ನು ಸಲಹುವ ಆಡಳಿತ ಪಕ್ಷ ಆಗಬೇಕು, ಜನ ಸಾಮಾನ್ಯರ ಹಿತದೃಷ್ಟಿಯಿಂದ ಸರ್ಕಾರವನ್ನು ಜಾಗೃತಾವಸ್ಥೆಯಲ್ಲಿರಿಸುವ ವಿರೋಧ ಪಕ್ಷವಾಗಬೇಕು. ಆದರೆ ಈಗ ಆಗುತ್ತಿರುವುದೆಲ್ಲವೂ ತದ್ವಿರುದ್ದ. ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಅಷ್ಟೂ ಪಕ್ಷಗಳಿಗೂ ವೈಯುಕ್ತಿಕ ಹಿತಾಸಕ್ತಿಗಳು ಮುಖ್ಯವಾಗಿದೆ, ಕಾಂಗ್ರೆಸ್ ಗೆ ರೆಡ್ಡಿಗಳನ್ನು ತೆಗೆಯುವ ಹುನ್ನಾರ ಬಿಟ್ಟರೆ ಬೇರೆ ವಿಚಾರಗಳಿಲ್ಲ, ಅದಕ್ಕಾಗಿ ವಿಧಾನಸಭೆ/ಪರಿಷತ್ ಅಧಿವೇಶನಗಳನ್ನು ಬಲಿಗೊಟ್ಟು ಧರಣಿ-ಪಾದಯಾತ್ರೆ ಮಾಡಿ ಮುಗುಮ್ಮಾಗಿ ಕುಳಿತಿದ್ದಾರೆ. ಉತ್ತರ ಕರ್ನಾಟಕ ನೆರೆ ಸಂತ್ರಸ್ತರಿಗೆ ಸಂಗ್ರಹಿಸಿದ 70ಕೋಟಿ ದುಡ್ಡು ತಿಂದು ಅರಗಿಸಿಕೊಳ್ಳುತ್ತಿದ್ದಾರೆ, ಸಧ್ಯಕ್ಕೆ ಆ ಪ್ರಕರಣ ಮುಚ್ಚಿ ಹೋಗಿದೆ. ಜೆಡಿಎಸ್ ಪಾಳೆಯದಲ್ಲಿ ದೇವೇಗೌಡ 'ನೈಸ್' ವಿವಾದ ಕುರಿತು ತಲೆ ಕೆಡಿಸಿಕೊಂಡಿದ್ದರೆ, ಮಗ ಕುಮಾರಸ್ವಾಮಿ ರೆಡ್ಡಿಗಳನ್ನು ಹಣಿಯುವ ಕುರಿತು ಆಸಕ್ತಿ ತೋರುತ್ತಿದ್ದಾರೆ. ಈ ಪ್ರತಿ ಪಕ್ಷಗಳಿಗೆ ರಾಜ್ಯದ ಜನತೆಯ ಕಷ್ಟ ಸುಖಗಳು ಬೇಕಿಲ್ಲ, ತಮ್ಮ ರಾಜಕೀಯ ಬೇಳೆಯನ್ನು ಬೇಯಿಸಿ ಕೊಳ್ಳುವಲ್ಲಿ ನಿರತವಾಗಿವೆ ಮತ್ತು ಆ ಮೂಲಕ ರಾಜ್ಯದ ಜನರನ್ನ ವಂಚಿಸಿವೆ. ರಾಜ್ಯದಲ್ಲಿ ಆಡಳಿತ ಹದಗೆಟ್ಟಿದೆ, ಭ್ರಷ್ಟಾಚಾರ ಮೇರೆ ಮೀರಿದೆ. ಮೈಸೂರು ವಿವಿ ಮಾಜಿ ಕುಲಪತಿ ವಿರುದ್ದ ವ್ಯಾಪಕವಾದ ಭ್ರಷ್ಟಾಚಾರ ಆರೋಪ ಕೇಳಿ ಬಂದರೂ ಕ್ರಮತೆಗೆದು ಕೊಳ್ಳದೇ ಹೇಡಿತನ ಮೆರೆದಿದೆ ಸರ್ಕಾರ! ಆದರೆ ವೈದ್ಯಕೀಯ ಮಹಾವಿದ್ಯಾಲಯಗಳ ಭೋಧಕೇತರ ಸಿಬ್ಬಂದಿ ನೇಮಕಾತಿ ಅಕ್ರಮ ಕುರಿತು ಸಿಎಂ ಯಡಿಯೂರಪ್ಪ ದಿಟ್ಟತನ ಪ್ರದರ್ಶಿಸಿದ್ದಾರೆ. ಅತ್ತೂ ಕರೆದು ಸಂಪುಟ ದರ್ಜೆಯ ಭ್ರಷ್ಟ ಸಚಿವ ರಾಮಚಂದ್ರಗೌಡರಿಂದ ರಾಜೀನಾಮೆ ಕೊಡಿಸಲಾಗಿದೆ. ಹಾಸನ-ಮೈಸೂರು ವೈದ್ಯಕೀಯ ಕಾಲೇಜಿನ ಭೋಧಕೇತರ ಸಮಿತಿಯನ್ನು ಮಾತ್ರ ರದ್ದು ಪಡಿಸಿರುವ ಸರ್ಕಾರ ನೇಮಕಾತಿ ಸಮಿತಿಯ ವಿರುದ್ದವೂ ಕಠಿಣ ನಿಲುವು ಪ್ರಕಟಿಸ ಬೇಕಾಗಿದೆ. ಈ ವಿದ್ಯಾಲಯಗಳ ಭೋಧಕೇತರ ಸಿಬ್ಬಂದಿ ಮಾತ್ರವಲ್ಲ ಭೋಧಕ ಸಿಬ್ಬಂದಿ, ಪರಿಕರಗಳ ಖರೀದಿಯಲ್ಲೂ ಅಕ್ರಮ ನಡೆದಿರುವ ಸಾಧ್ಯತೆಗಳಿವೆ,ಅವು ಕೂಡ ಸಮಗ್ರ ತನಿಖೆಯಿಂದ ಬಯಲಿಗೆ ಬರಬೇಕಿದೆ. ಲೆಕ್ಕಪತ್ರವಿಲ್ಲದಂತೆ ಕಾನೂನುಗಳನ್ನು ಗಾಳಿಗೆ ತೂರಿ ಹಲವು ಇಂಜಿನಿಯರಿಂಗ್ ಕಾಲೇಜುಗಳು, ನರ್ಸಿಂಗ್ ಕಾಲೇಜುಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಔದ್ಯೋಗೀಕರಣದ ನೆಪದಲ್ಲಿ ರೈತರ ಕೃಷಿ ಜಮೀನುಗಳನ್ನು ಸ್ವಾಧೀನ ಪಡಿಸಿಕೊಂಡು ಉದ್ಯಮಿಗಳಿಗೆ ನೀಡಲಾಗಿದೆ, ಅಭಿವೃದ್ದಿಯ ವಿಚಾರದಲ್ಲಿ ವಿವಿಧ ಜಿಲ್ಲೆಗಳಿಗೆ ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ. ಕಳ್ಳರು, ಸುಳ್ಳರು, ವಂಚಕರು, ಅತ್ಯಾಚಾರಿಗಳು, ವ್ಯಭಿಚಾರಿಗಳಿಗೆ ಆಢಳಿತ-ವಿಪಕ್ಷದಲ್ಲಿ ಆದ್ಯತೆ ನೀಡಲಾಗಿದೆ. ಉತ್ತರ ಕರ್ನಾಟಕದ ಸಂತ್ರಸ್ತರಿಗೆ ಮನೆ ಕಟ್ಟಿ ಕೊಡುತ್ತೇನೆಂದು ಹೇಳಿ 1 1/2 ವರ್ಷವಾಗಿದೆ, ಅವರಿಗೆ ತಲೆಯ ಮೇಲೊಂದು ಸೂರು ಕಲ್ಪಿಸಲಾಗಿಲ್ಲ! ಐಎಎಸ್-ಐಪಿಎಸ್-ಕೆಎಎಸ್ ಅಧಿಕಾರಿಗಳ ವರ್ಗಾವಣೆಗೆ ಕಡಿವಾಣ ಬಿದ್ದಿಲ್ಲ, ಹೇಳಿ ಇದನ್ನೆಲ್ಲಾ ನಿಬಾಯಿಸಲು ಸಾಧ್ಯವಿಲ್ಲದ ಆಡಳಿತ ಪಕ್ಷಗಳು-ವಿಪಕ್ಷಗಳು ಬೇಕಾ? ರಾಜಕಾರಣದಲ್ಲಿ ಮೌಲ್ಯವಿಲ್ಲದಿದ್ದರೆ ಆಗೋದೆ ಹೀಗೆ ಸ್ವಾಮಿ. ಕಳೆದ 5-6 ದಶಕಗಳಲ್ಲಿ ಅದೆಷ್ಟೋ ರಾಜಕೀಯ ಪಕ್ಷಗಳು ಸರ್ಕಾರ ನಡೆಸಿವೆ, ವಿರೋಧ ಪಕ್ಷಗಳು ಸಮರ್ಥವಾಗಿ ಕಾರ್ಯ ನಿರ್ವಹಿಸಿವೆ ಆದರೆ ಈ ಮೂರು ವರ್ಷದಲ್ಲಿ ರಾಜಕೀಯ ಪಕ್ಷಗಳ ಆದ್ಯತೆ-ಬದ್ದತೆ ಮಾತ್ರ ಸಂಪೂರ್ಣವಾಗಿ ಜನವಿರೋಧಿ ಧೋರಣೆಯವೇ ಆಗಿವೆ. ಸ್ವಾರ್ಥ ರಾಜಕಾರಣ ಪ್ರಧಾನ ಪಾತ್ರ ವಹಿಸಿದೆ, ಮೌಲ್ಯಾಧಾರಿತ ರಾಜಕಾರಣ ಕಳೆದು ಹೋಗಿದೆ ಪ್ರಜಾ ತಾಂತ್ರಿಕ ವ್ಯವಸ್ಥೆಯ ಸುಲಲಿತ ಮುನ್ನಡೆಗೆ ನೈತಿಕತೆಯ ರಾಜಕಾರಣವಿಲ್ಲದಿದ್ದರೆ ಅದು ವ್ಯವಸ್ಥೆಯ ಅಧ:ಪತನಕ್ಕೆ ಕಾರಣವಾಗುತ್ತದೆ. ಅರಾಜಕತೆ ಜನರ ಶಾಂತಿ ನೆಮ್ಮದಿಯನ್ನು ಹಾಳು ಮಾಡುತ್ತದೆ ಆದ್ದರಿಂದ ನಮ್ಮ ರಾಜಕಾರಣಿಗಳು ಎಚ್ಚೆತ್ತು ಕೊಳ್ಳದಿದ್ದರೆ ಜನ ಪಾಠ ಕಲಿಸುತ್ತಾರೆ.

Sunday, September 5, 2010

ಹೇಗಿದೆ ನಮ್ಮ ಆಧುನಿಕ ಗುರು ಪರಂಪರೆ?


"ಟೀಚರ್ ಗಳು ಸರಿ ಇಲ್ಲ ! ಮೊದಲು ನೀವು ಸರಿಯಾಗಿ. ಇವತ್ತು ಸಮಾಜದಲ್ಲಿ ಭ್ರಷ್ಟಾಚಾರ ಇದೆ,ವ್ಯವಸ್ಥೆ ಹಾಳಾಗಿದೆ, ಭ್ರಷ್ಟ ಅಧಿಕಾರಿಗಳು/ರಾಜಕಾರಣಿಗಳು ಇದ್ದಾರೆಂದರೆ ಅದಕ್ಕೆ ನೀವೆ ನೇರ ಹೊಣೆ, ಫೀಸು ಕಟ್ಟಿ ಶಾಲೆಗೆ ಬರುವ ಮುಗ್ದ ಬಾಲಕ ಶಾಲೆ ಬಿಡುವ ವೇಳೆಗೆ ಕೆಟ್ಟು ಹೋಗುತ್ತಾನೆ ಎಂದರೆ ಸಮಸ್ಯೆಯ ತೀವ್ರತೆ ಗೊತ್ತಾಗುತ್ತದಲ್ವಾ? ಬರೀ ಪಾಠ ಪ್ರವಚನ ಮಾಡೋದ್ರಿಂದ ಪ್ರಯೋಜನವಿಲ್ಲ ಬದುಕುವುದನ್ನು ಕಲಿಸಿ, ನೈತಿಕ ಶಿಕ್ಷಣ ನೀಡಿ, ದಕ್ಷತೆಯಿಂದ ಕೆಲಸ ಮಾಡಿ, ಒಮ್ಮೆ ಆತ್ಮ ವಿಮರ್ಶೆ ಮಾಡಿಕೊಳ್ಳಿ ತಿದ್ದಿಕೊಳ್ಳಲು ಆಗದಿದ್ದರೆ ಕೆಲಸ ಬಿಟ್ಟು ಹೋಗಿ" ಎಂದು ಖಡಕ್ಕಾಗಿ ನೇರಾ ನೇರಾ ಮಾತುಗಳಲ್ಲಿ ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡದ್ದು ಖ್ಯಾತ ನಟ, ರಂಗಕರ್ಮಿ ಮತ್ತು ನಿವೃತ್ತ ಇಂಗ್ಲೀಷ್ ಪ್ರೊಫೆಸರ್ ಟಿ ಎಸ್ ಲೋಹಿತಾಶ್ವ. ಅವರಿಗೀಗ 68ರ ಪ್ರಾಯ ಆದರೂ ಪ್ರಬುಧ್ದ ಮನಸ್ಥಿತಿಯ ಕ್ರಿಯಾಶೀಲ ಮೇಷ್ಟ್ರು ಅವರು!
ಅಸಲು ವಿಚಾರಕ್ಕೆ ಬರುವ ಮುನ್ನ ಪ್ರೊಫೆಸರ್ ಬಗ್ಗೆ ಒಂದು ಪುಟ್ಟ ಪರಿಚಯ. ತುಮಕೂರು ಜಿಲ್ಲೆಯ ತೊಂಡೆಕೆರೆ ಗ್ರಾಮ ದಿಂದ ಬಂದ ಲೋಹಿತಾಶ್ವ ಎಡಪಂಥೀಯ ಧೋರಣೆ ಹೊಂದಿದ ಪ್ರಗತಿಶೀಲ ವ್ಯಕ್ತಿತ್ವದವರು. ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಇಂಗ್ಲೀಷ್ ಸ್ನಾತಕಪಧವೀಧರರು. ನೇರ ಹಾಗೂ ದಿಟ್ಟ ನಡವಳಿಕೆಯ ಲೋಹಿತಾಶ್ವ ಅನಿಸಿದ್ದನ್ನು ಯಾರ ಮುಲಾಜಿಗೂ ಕಾಯದೇ ಹೇಳುವ ಗುಣದವರು. ಇದುವರೆಗೂ 500ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ನಟಿಸಿರುವ ಅವರು ಸಾಹಿತ್ಯ ವಲಯದಲ್ಲೂ ಕೃಷಿ ಮಾಡಿದ್ದಾರೆ. ನಾಟಕ ರಚನೆ, ಗದ್ಯ-ಪದ್ಯ ರಚನೆ, ಕವನ ಸಂಕಲನ, ಅನುವಾದ ಹೀಗೆ ವಿಭಿನ್ನ ವಲಯಗಳಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಪ್ರಗತಿ ಪರ ಧೋರಣೆ ಬಿಂಬಿಸುವ ಹಲವು ಸಮಾಜ ಮುಖಿ ನಾಟಕಗಳಲ್ಲಿ ಲೋಹಿತಾಶ್ವ ನಟಿಸಿದ್ದಾರೆ.ಚಲನಚಿತ್ರಗಳಲ್ಲಿ ಕಿರುತೆರೆಯಲ್ಲಿ ಅಭಿನಯಿಸಿದ್ದಾರೆ. ಸಾಹಿತ್ಯ-ಸಂಸ್ಕೃತಿ ಸೇವೆಗಾಗಿ ರಾಜ್ಯ ನಾಟಕ ಅಕಾಡೆಮಿ ಹಾಗೂ ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳು ಅವರನ್ನರಸಿ ಬಂದಿವೆ. ಅವರ ಪುತ್ರ ಶರತ್ ಲೋಹಿತಾಶ್ವ ಕೂಡಾ ಅಪ್ಪನ ಹಾದಿಯಲ್ಲೇ ಸಾಗಿದ್ದಾರೆ.
ಇಂತಹ ಲೋಹಿತಾಶ್ವ ಶಿಕ್ಷಕರ ದಿನಾಚರಣೆಗಾಗಿ ಆಗಮಿಸಿದ್ದ ವೇಳೆ ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡು ಎಚ್ಚರಿಸಿದ ಪರಿ ನಿಜಕ್ಕೂ ಪ್ರಸಕ್ತ ಸನ್ನಿವೇಶದಲ್ಲಿ ಶಿಕ್ಷಕರ ಆದ್ಯತೆ, ಗುರಿ ಮತ್ತು ಪರಿಣಾಮದ ಬಗ್ಗೆ ಯೋಚಿಸುವಂತೆ ಮಾಡುತ್ತದೆ. ನೆನ್ನೆ ರಾಷ್ಟ್ರದಾದ್ಯಂತ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಗಿದೆ, ಶಿಕ್ಷಕರ ದಿನಾಚರಣೆ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅತಿಥಿ ಗಣ್ಯರೆನಿಸಿಕೊಂಡವರು ದಾವಂತಕ್ಕೆ ಬಿದ್ದವರಂತೆ ಶಿಕ್ಷಕರನ್ನು ಹಾಡಿ ಹೊಗಳಿ ಅಟ್ಟಕ್ಕೇರಿಸಿ ಬಿಟ್ಟಿರುತ್ತಾರೆ. ಆದರೆ ಅದರ ಜೊತೆಗೆ ಶಿಕ್ಷಕರನ್ನ ಮೌಲ್ಯಮಾಪನ ಮಾಡುವಂತಹ ಮಾತುಗಳು ಬರುವುದು ಕಡಿಮೆಯೇ ಯಾಕೆ ಹೀಗೆ? ಇವತ್ತು ಶಿಕ್ಷಣ ಕ್ಷೇತ್ರದಲ್ಲಿ ಗುರುಗಳ ಪಾತ್ರವೇನು? ಸಮಾಜಕ್ಕೆ ಅವರ ಕೊಡುಗೆ ಏನು? ಎಂತಹ ಸಂದೇಶ ಅವರಿಂದ ಹೋಗುತ್ತಿದೆ? ಬದಲಾವಣೆಯ ಕಾಲಘಟ್ಟದಲ್ಲಿ ಅವರ ಹೊಣೆಗಾರಿಕೆ ಏನು?ಎಂತಹವರು 'ಗುರು' ಪಟ್ಟವನ್ನು ಅಲಂಕರಿಸುತ್ತಿದ್ದಾರೆ? ಅವರ ನಡವಳಿಕೆ ಹೇಗಿದೆ? ಅವರ ಸಂಸ್ಕೃತಿ ಹೇಗಿದೆ? ಅವರ ಬುದ್ದಿಮಟ್ಟ ಹೇಗಿದೆ? ಎಂತಹ ವ್ಯಕ್ತಿತ್ವವನ್ನು ಅವರು ರೂಪಿಸುತ್ತಿದ್ದಾರೆ ? ಸಮಾಜಕ್ಕೆ ಅವರ ಪ್ರಸ್ತುತತೆ ಏನು? ಇತ್ಯಾದಿಗಳನ್ನು ಅಗತ್ಯವಾಗಿ ವಿಚಾರ ಮಾಡಬೇಕಾದ ಸಂಧರ್ಭವಿದು.
ಹಿಂದಿನ ದಶಕಗಳಲ್ಲಿ ಶಿಕ್ಷಣದ ಬೋಧನೆಯ ಪರಿಪೂರ್ಣತೆ ಉಚ್ಚ್ರಾಯ ಸ್ಥಿತಿಯಲ್ಲಿದ್ದಂತೆ ಇವತ್ತು ಇಲ್ಲ. ಭಾವ ತೀವ್ರತೆಯಾಗಲೀ ಸ್ವಾಭಿಮಾನದ ಶಿಸ್ತಿನ ಬದುಕು ಕಲಿಸುವ ಮನೋಸ್ಥಿತಿಯಲ್ಲಿ ಶಿಕ್ಷಕರಿಲ್ಲ ಯಾಕೆ ಹೀಗೆ? ಶಿಕ್ಷಣಕ್ಕೆ ಸರಿಯಾದ ಚೌಕಟ್ಟಿಲ್ಲದ ದಿನಗಳಲ್ಲಿ, ಸವಲತ್ತುಗಳಿಲ್ಲದ ದಿನಗಳಲ್ಲಿ ಸಮಾಜದಲ್ಲಿ ಹೆಚ್ಚಿನ ಅಪರಾಧಗಳು ಘಟಿಸುತ್ತಿರಲಿಲ್ಲ ಆದರೆ ಇವತ್ತೇನಾಗಿದೆ? ಸಕಲ ಸವಲತ್ತುಗಳ ನಡುವೆ ನೀಡುತ್ತಿರುವ ಶಿಕ್ಷಣವಿದ್ದರೂ ಅಪರಾಧ ಹೆಚ್ಚಿನ ರೀತಿಯಲ್ಲಾಗುತ್ತಿದೆ. ಭ್ರಷ್ಟಾಚಾರ ಮೇರೆ ಮೀರಿದೆ, ಸಾಮಾಜಿಕ ಬದುಕುಗಳಲ್ಲಿ ಅಪಸವ್ಯ ಮೂಡಿದೆ ಒಟ್ಟಾರೆ ಜಾಗೃತ ಸ್ಥಿತಿಯಲ್ಲಿ ಏರುಪೇರಾಗಿದೆ. ನೆನಪಿರಲಿ ಸಮಾಜದ ಎಲ್ಲಾ ಸ್ಥಿತಿಗತಿಗೂ ಶಿಕ್ಷಣವೇ ಮೂಲ ಕಾರಣ! ಅಂದ ಮೇಲೆ ಅದನ್ನು ಕಲಿಸುವವರು (ಕ್ಷಮಿಸಿ ಎಲ್ಲರೂ ಅಲ್ಲ) ದಿಕ್ಕುತಪ್ಪಿದ್ದಾರೆ, ತಮ್ಮ ಹೊಣೆ ಮರೆತಿದ್ದಾರೆ ಎಂದೇ ಅರ್ಥವಲ್ಲವೇ? ಇವತ್ತು ಗುಣಮಟ್ಟದ ಶಿಕ್ಷಣ-ನೈತಿಕತೆಯ ಶಿಕ್ಷಣ ನೀಡುತ್ತಿದ್ದರೂ ಅನುಷ್ಠಾನ ಹಂತದ ಲೋಪಗಳು ಪ್ರಸಕ್ತ ಸ್ಥಿತಿಗತಿಗೆ ಕಾರಣವಲ್ಲವೇ?
ಕಳೆದ 2-ದಶಕಗಳ ಹಿಂದೆ ಗುರು ಪರಂಪರೆ ಹೇಗಿತ್ತು? ಕಲಿಸುವವರ ಅಧ್ಯಯನಶೀಲತೆ, ಭಾವ ತೀವ್ರತೆ, ಕಾಳಜಿ, ಪರಿಶೀಲನಾ ಗುಣ ಈಗ ಯಾಕಿಲ್ಲ? ಕಾರಣ ಮುಖ್ಯವಾಗಿ ಪ್ರಾಥಮಿಕ ಹಂತದ ಶಿಕ್ಷಣ ದಿಕ್ಕು ತಪ್ಪಿದೆ. ಶಿಕ್ಷಕರಿಗೆ ಸವಲತ್ತುಗಳು ಜಾಸ್ತಿಯಾಗಿವೆ ಆದರೆ ಅದರ ಬೆನ್ನಲ್ಲೆ ಒತ್ತಡದ ಸಮಸ್ಯೆಗಳು ಹೆಗಲಿಗೇರಿವೆ. ಸಾಂಪ್ರದಾಯಿಕ ಕಲಿಕೆ ಬಿಟ್ಟು ಕೆಲಸಕ್ಕೆ ಬಾರದ ನಲಿಕಲಿ ಹಾಳುಮೂಳು ಹತ್ತೊಂಬತ್ತು ಎಂದು ವರ್ಷವಿಡೀ ಶಿಕ್ಷಕರಿಗೆ ತರಬೇತಿ, ಮಾಹಿತಿ ಎಂದು ಸಾಯಿಸಲಾಗುತ್ತಿದೆ. ಶಿಕ್ಷಕರನ್ನು ಕಾಯಲು ಸಿಆರ್ ಪಿ-ಬಿಆರ್ ಪಿ, ಸಿಎಇಓ ಇತ್ಯಾದಿ ಮಾಡಲಾಗಿದೆ, ಅದು ಸಾಲದೆಂಬಂತೆ ಸರ್ಕಾರದ ರಾಷ್ಟ್ರೀಯ ಕಾರ್ಯಕ್ರಮಗಳು ಅಂದರೆ ಜನಗಣತಿ, ದನಗಣತಿ, ಜಾತಿಗಣತಿ ಚುನಾವಣೆ, ಕಟ್ಟಡ ನಿರ್ಮಾಣ, ಬಿಸಿಯೂಟ ಹೀಗೆ ಜವಾಬ್ದಾರಿಗಳ ಪಟ್ಟಿಯೂ ಹೆಗಲೇರಿದೆ. ಸಿಆರ್ ಪಿ-ಬಿಆರ್ ಪಿ ಗಳಾದವರು ತಾವು ಶಿಕ್ಷಕರೆಂಬುದನ್ನು ಮರೆತು ಇತರೆ ಶಿಕ್ಷಕರನ್ನು ಗೋಳು ಹುಯ್ದು ಕೊಳ್ಳುವ, ಶೋಷಿಸುವ ಪೀಡೆಗಳಾಗಿ ಬಿಟ್ಟಿದ್ದಾರೆ! ಹೀಗಾಗಿ 7ನೇ ತರಗತಿ ಮುಗಿಸಿ ಬರುವ ವಿದ್ಯಾರ್ಥಿಗೆ ಪ್ರೌಢಶಾಲಾ ಹಂತದಲ್ಲಿ ಹೊಸದಾಗಿ ಅ, ಆ, ಇ ಈ ಇಂದ ಪಾಠ ಹೇಳಿಕೊಡುವ ಪರಿಸ್ಥಿತಿಯಿದೆ. ಅಂದ ಮಾತ್ರಕ್ಕೆ ಶಿಕ್ಷಕರಿಗೆ ಸಮಸ್ಯೆಗಳು ಮಾತ್ರ ಅಡ್ಡಿಯಾಗಿವೆ ಅಂತಲ್ಲ ಅವರ ಸ್ವಯಂಕೃತಾಪರಾಧಗಳು ಸಹಾ ವಿದ್ಯಾರ್ಥಿ/ಶಿಕ್ಷಣದ ಮೇಲೆ ಆಘಾತಕಾರಿ ಪರಿಣಾಮ ಉಂಟುಮಾಡುತ್ತಿದೆ. ಇದಕ್ಕೂ ಮೂಲ ಕಾರಣ ಶಿಕ್ಷಣದ ಜೊತೆಗೆ ರಾಜಕಾರಣ ಬೆರೆತಿರುವುದು, ಆಯ್ಕೆಯಾಗುವಾಗಲೇ ಅನೇಕ ಅಡ್ಡನಾಡಿಗಳು ಪ್ರಭಾವದ ಮೂಲಕ ಶಿಕ್ಷಕರಾಗಿ ಆಯ್ಕೆಯಾಗುತ್ತಿದ್ದಾರೆ. ಇಂತಹವರ ಸೋಂಬೇರಿತನ, ಬೇಜವಾಬ್ದಾರಿ, ಕಳ್ಳಾಟ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರುತ್ತಿದೆ. ಇವತ್ತು ಶಿಕ್ಷಕರಾಗಿ ಆಯ್ಕೆಯಾಗುವವರು ಸಾಧಾರಣವಾಗಿ ಮೆರಿಟ್ ಪಾಸಾದವರಾಗಿರುತ್ತಾರೆ. ಆದರೂ ಅವರಿಂದ ಗುಣ ಮಟ್ಟದ ಶಿಕ್ಷಣ ಸಿಗುತ್ತಿಲ್ಲವೆಂದರೆ ಅದರ ಮೂಲಕ್ಕೆ ಹೋಗಬೇಕು. ಇವತ್ತು ಲಕ್ಷ ಸಂಖ್ಯೆಯಲ್ಲಿ ಶಿಕ್ಷಕರನ್ನು ತಯಾರು ಮಾಡುತ್ತಿರುವ ಸಂಸ್ಥೆಗಳು ದೊಡ್ಡ ಅನೈತಿಕತೆಯ ಕೇಂದ್ರ ಸ್ಥಾನಗಳಾಗಿವೆ!ಶಿಕ್ಷಣಾರ್ಥಿಗಳಾಗಿ ಬರುವವರನ್ನು ಅಂಕಗಳ ಹೊಂದಾಣಿಕೆಗೆ ಲೈಂಗಿಕವಾಗಿ ಶೋಷಿಸುವ,ದುಡ್ಡು ಪಡೆಯುವ ಪೀಡಕ ಪ್ರವೃತ್ತಿಯಿಂದಾಗಿ ಶಿಕ್ಷಕರಾಗುವವರ ಪಾವಿತ್ರ್ಯ ಕೆಡುತ್ತಿದೆ. ಶಿಕ್ಷಕ ಶಿಕ್ಷಣಾರ್ಥಿಯಾಗಿ ಬರುವವರು ವಾಸ್ತವದಲ್ಲಿ ಹೇಗೆ ನಡೆದು ಕೊಳ್ಳುತ್ತಿದ್ದಾರೆ ಎಂಬುದು ತಿಳಿಯದ ವಿಷಯವೇನಲ್ಲ. ತಮ್ಮನ್ನು ಯಾರು ಗಮನಿಸುತ್ತಿದ್ದಾರೆ? ತಮ್ಮ ನಡವಳಿಕೆ ಹೇಗಿದೆ? ಎಂಬ ಸೂಕ್ಷ್ಮವೇ ಅವರಿಗಿರುವುದಿಲ್ಲ ಹೀಗಿರುವಾಗ ಅಂತಹವರು ಶಿಕ್ಷಕರಾಗಿ ಬಂದು ಕಟ್ಟೆ ಹಾಕುವುದೇನು? ಇದು ಪ್ರಾಥಮಿಕ/ಪ್ರೌಡಶಾಲ ಶಿಕ್ಷಕರನ್ನು ಮಾತ್ರ ಕುರಿತು ಹೇಳುವ ಮಾತಲ್ಲ ಕಾಲೇಜು/ವಿವಿಗಳ ಉಪನ್ಯಾಸಕರು/ಅದ್ಯಾಪಕರು/ಪ್ರಾದ್ಯಾಪಕರುಗಳು ಸಹಾ ಇಲ್ಲಿ ಉಲ್ಲೇಖನೀಯ. ಶಿಕ್ಷಕರು ರೂಡಿಸಿಕೊಂಡ ಸಂಸ್ಕೃತಿ, ಉಡುವ ಬಟ್ಟೆ, ಮಾತು, ಹಾವ-ಭಾವ ಎಲ್ಲವೂ ಸಮಾಜದಲ್ಲಿ ಗಮನಿಸಲ್ಪಡುತ್ತದೆ. ಹೀಗಿರುವಾಗ ಅವರು ಹೇಗಿರಬೇಕು ಅಲ್ಲವೇ? ಪ್ರೌಡಶಾಲೆ/ಕಾಲೇಜು ಮಟ್ಟದಲ್ಲಿ ತಮ್ಮ ಬೇಳೆ ಬೇಯಿಸಿ ಕೊಳ್ಳಲು ವಿದ್ಯಾರ್ಥಿಗಳನ್ನು ಎತ್ತಿ ಕಟ್ಟುವುದು,ಗುಂಪುಗಾರಿಕೆ ಪ್ರಚೋದಿಸುವುದು, ಸಲ್ಲದ ಚಟುವಟಿಕೆಗಳಿಗೆ ಪುಸಲಾಯಿಸುವುದು ಶೈಕ್ಷಣಿಕ ವ್ಯವಸ್ಥೆಗೆ ಕೊಡಲಿ ಪೆಟ್ಟಲ್ಲವೇ? ಇವತ್ತಿಗೂ ಎಷ್ಟೋ ಮಂದಿ ಶಿಕ್ಷಕರುಗಳಿಗೆ/ಉಪನ್ಯಾಸಕರುಗಳಿಗೆ
ನೆಟ್ಟಗೆ ಒಂದು ವ್ಯಾಕರಣ ಬದ್ದ ಬರವಣಿಗೆ ಬರುವುದಿಲ್ಲ, ವಾಸ್ತವ ಜಗತ್ತಿನ ವಿದ್ಯಮಾನಗಳ ಅರಿವಿಲ್ಲ ಎನ್ನುವುದಾದರೆ ಅಂತಹ ಪುಂಗಿದಾಸರು ಬೇಕಾ ಹೇಳಿ? ಶಿಕ್ಷಕರಾಗಿ ಬರುವವರು ಶಿಕ್ಷಣ ಕಲಿಸುವ ಬದಲಿಗೆ ಅನ್ಯ ವಿಚಾರ-ವಿದ್ಯಮಾಗಳತ್ತಲೇ ಒಲವು ತೋರುವುದು ವಿದ್ಯಾರ್ಥಿಗಳಿಗೆ ಮಾಡುವ ಘೋರ ಅನ್ಯಾಯವಲ್ಲವೇ? ಇಂತಹವರಿಂದ ಆರೋಗ್ಯವಂತ ಸಮಾಜ ಕಟ್ಟುವುದು ಸಾಧ್ಯವೇ? ಎಲ್ಲೋ ಕೆಲವರು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾರಾದರೂ ಅಂತಹವರು ಬಹುಸಂಖ್ಯಾತ ಕೆಟ್ಟು ಹೋಗಿರುವ ಶಿಕ್ಷಕರಿಂದ ಅಪಮಾನ ಎದುರಿಸುತ್ತಿರುವ ಸನ್ನಿವೇಶವೂ ಇದೆ. ನೆನಪಿರಲಿ ಒಬ್ಬ ಶಿಕ್ಷಕ ಕೆಟ್ಟರೇ ಸಮಾಜವೂ ಕೆಡುತ್ತದೆ ಅದಕ್ಕೆ ಅವನೇ ಹೊಣೆಗಾರನೂ ಆಗಿರುತ್ತಾನೆ ನೀವೇನಂತೀರಿ??

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...