Wednesday, April 27, 2011

How to File a Complaint Against a TV and Radio Channel


ಇದು ಪತ್ರಕರ್ತ ಮಿತ್ರ ಶ್ರೀನಿವಾಸಗೌಡರು facebook ನಲ್ಲಿ ಕಳುಹಿಸಿದ ಲಿಂಕ್.. ಕಿರುತೆರೆಯ ಕಾರ್ಯಕ್ರಮಗಳಿಂದ ನೊಂದ ಮಂದಿ ಈ ಲಿಂಕ್ ನಲ್ಲಿ ನೀಡಿರುವ ಫಾರಂ ನಲ್ಲಿ ದೂರು ಸಲ್ಲಿಸಬಹುದಾಗಿದೆ.

 

How to File a Complaint Against a TV and Radio Channel   


ಅಪ್ಲಿಕೇಶನ್ ಫಾರ್ಮಾಟ್ ಗಾಗಿ Click Here

ಬನ್ನಿ ಕಿರುತೆರೆಯ ಕಪಟ ಜ್ಯೋತಿಷಿಗಳ ವಿರುದ್ದ ದ್ವನಿಯೆತ್ತೋಣ

ಇತ್ತೀಚಿನ ದಿನಗಳಲ್ಲಿ ಕಿರುತೆರೆಯಲ್ಲಿ ಕಪಟ ಜ್ಯೋತಿಷಿಗಳ ಹಾವಳಿ ಹೆಚ್ಚಾಗಿದೆ, ದಿನಬೆಳಗಾದರೆ ಲ್ಯಾಪುಟಾಪು ಮತ್ತುಢಾಳಾದ ವೇಷಭೂಷಣ ತೊಟ್ಟ ಕಪಟಿಗಳು ಜನಸಾಮಾನ್ಯರಲ್ಲಿ ಮೌಡ್ಯವನ್ನು ಬಿತ್ತುವ ಕೆಲಸವನ್ನು ಮಾಡುತ್ತಿದ್ದಾರೆ ಅವರ ವಿರುದ್ದ ಮಾಧ್ಯಮ ಲೋಕದ ಮೇಲೆ ಸದಾ ಹದ್ದಿನ ಕಣ್ಣಿಟ್ಟಿರುವ 'ಸಂಪಾದಕೀಯ' ಬ್ಲಾಗ್ ಒಂದು ಆಂಧೋಲನವನ್ನು ಆರಂಭಿಸಿದೆ ಈ ಆಂಧೋಲನಕ್ಕಾಗಿ ಬರೆದ ಪತ್ರ ಇದು ಇದನ್ನು ಜೀ ಕನ್ನಡ ದ ಮುಖ್ಯಸ್ಥರಿಗೆ ಬರೆಯೋಣ ಬನ್ನಿ ನೀವು ಸೇರಿ ನಮ್ಮ ಆಂಧೋಲನಕ್ಕೆ.
ಮಾನ್ಯರೆ,

ಈ ಪತ್ರವನ್ನು ಅತ್ಯಂತ ನೋವು, ವಿಷಾದ, ಕಳವಳದಿಂದ ನಿಮಗೆ ಬರೆಯುತ್ತಿದ್ದೇವೆ. ಪತ್ರ ಓದಿದ ನಂತರವಾದರೂ ನೀವು ನಮ್ಮ ಭಾವನೆಗಳಿಗೆ ಸ್ಪಂದಿಸುತ್ತೀರೆಂಬ ನಂಬಿಕೆ ಇದೆ. ಲಕ್ಷ-ಕೋಟಿ ಜನರನ್ನು ತಲುಪುವ ಮೀಡಿಯಾಗಳು ಸಾಮಾಜಿಕ ಹೊಣೆಗಾರಿಕೆಯನ್ನು ನಿಭಾಯಿಸಬೇಕು. ಇದು ಕಾನೂನಿನ ಪರಿಭಾಷೆಗಳಿಗೆ ಮಾತ್ರ ಒಳಪಡುವ ವಿಷಯ ಎಂದು ಯಾರೂ ಭಾವಿಸಬೇಕಾಗಿಲ್ಲ, ಕಾನೂನನ್ನೂ ಮೀರಿದ ನೈತಿಕತೆ, ಮಾನವೀಯತೆಯ ಹೊಣೆಗಾರಿಕೆಯನ್ನೂ ಒಪ್ಪಿ ಅನುಸರಿಸಬೇಕಾಗುತ್ತದೆ. ತಾವು ಇಡೀ ಪತ್ರವನ್ನು ಓದಿ, ಸೂಕ್ತ, ಅತ್ಯಗತ್ಯ, ಸಕಾಲಿಕ ನಿರ್ಧಾರಕ್ಕೆ ಬರುವಿರೆಂಬ ನಂಬುಗೆ ನಮಗಿದೆ.

ನಮ್ಮ ತಕರಾರು, ಸಿಟ್ಟು, ಆತಂಕ ಇರುವುದು ನಿಮ್ಮ ವಾಹಿನಿಯಲ್ಲಿ ಪ್ರತಿನಿತ್ಯ ಬೆಳಿಗ್ಗೆ ೯ ಗಂಟೆಗೆ ಪ್ರಸಾರವಾಗುವ ಬೃಹತ್ ಬ್ರಹ್ಮಾಂಡ ಎಂಬ ಜ್ಯೋತಿಷ್ಯ ಸಂಬಂಧಿ ಕಾರ್ಯಕ್ರಮದ ಕುರಿತು. ಈ ಕಾರ್ಯಕ್ರಮವನ್ನು ನಡೆಸಿಕೊಡುವವರು ಶ್ರೀ ನರೇಂದ್ರ ಬಾಬು ಶರ್ಮ ಎಂಬುವವರು. ಇವರು ನಿಮ್ಮ ಚಾನಲ್‌ನಲ್ಲಿ ಕಾರ್ಯಕ್ರಮ ನಡೆಸಿಕೊಡುವುದಕ್ಕೆ ಮುನ್ನ ಸುವರ್ಣ ವಾಹಿನಿಯಲ್ಲಿ ಭವ್ಯ ಬ್ರಹ್ಮಾಂಡ ಎಂಬ ಹೆಸರಿನಲ್ಲಿ, ಅದಕ್ಕೂ ಮುನ್ನ ಕಸ್ತೂರಿ ವಾಹಿನಿಯಲ್ಲಿ ಬ್ರಹ್ಮಾಂಡ ಎಂಬ ಹೆಸರಿನಲ್ಲಿ ಇದೇ ಸ್ವರೂಪದ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದರು. ಬಹಳಷ್ಟು ಜನರಿಗೆ ಗೊತ್ತಿರುವ ಪ್ರಕಾರ ತೀರಾ ಇತ್ತೀಚಿನವರೆಗೆ ನರೇಂದ್ರ ಶರ್ಮ ಅವರು ಕನ್ನಡ ಸಿನಿಮಾಗಳಲ್ಲಿ ಜೂನಿಯರ್ ಆರ್ಟಿಸ್ಟ್ ಆಗಿದ್ದವರು.

ನರೇಂದ್ರ ಶರ್ಮ ಅವರು ಕಸ್ತೂರಿ ವಾಹಿನಿ ಹಾಗು ಸುವರ್ಣ ವಾಹಿನಿಗಳಲ್ಲಿ ಬ್ರಹ್ಮಾಂಡ ನಡೆಸುತ್ತಿದ್ದಾಗಲೇ ಅವರು ಬಳಸುವ ಭಾಷೆ, ಹೇಳುವ ಹಸಿಹಸಿ ಸುಳ್ಳುಗಳು ಮಾನವಂತರ, ಪ್ರಜ್ಞಾವಂತರ ಆಕ್ರೋಶಕ್ಕೆ ಕಾರಣವಾಗಿತ್ತು. ಮಹಿಳೆಯರನ್ನು ವಿನಾಕಾರಣ ನಿಂದಿಸುವುದು-ಅವಹೇಳನ ಮಾಡುವುದು, ಕೆಳಜಾತಿಯ ಜನರನ್ನು ಗುರಿಪಡಿಸಿ ತಿರಸ್ಕಾರದಿಂದ ಮಾತನಾಡಿ ಅಪಮಾನಿಸುವುದು, ಜ್ಯೋತಿಷ್ಯದ ಹೆಸರಿನಲ್ಲಿ ಸುಳ್ಳುಗಳ ಕಂತೆ ಕಟ್ಟಿ ಜನರನ್ನು ಬೆದರಿಸುವುದು ಇವರು ಹಿಂದಿನಿಂದ ಮಾಡಿಕೊಂಡು ಬಂದಿರುವ ಕೆಲಸ. ಅದನ್ನು ಅವರು ನಿಮ್ಮ ಜೀ ವಾಹಿನಿಯಲ್ಲೂ ಮಾಡುತ್ತಿದ್ದಾರೆ ಹಾಗು ಅದು ಈಗ ಅತಿರೇಕಕ್ಕೆ ತಲುಪಿದೆ.

ನಿಮ್ಮ ಜೀ ವಾಹಿನಿಯ ವೇದಿಕೆಯನ್ನು ಬಳಸಿಕೊಂಡು ನರೇಂದ್ರ ಶರ್ಮ ಏನೇನು ಮಾತನಾಡಿದ್ದಾರೆ ಎಂಬುದಕ್ಕೆ ಕೆಲವು ಸ್ಯಾಂಪಲ್‌ಗಳನ್ನು ಇಲ್ಲಿ ಒದಗಿಸುತ್ತಿದ್ದೇವೆ. ದಯವಿಟ್ಟು ಗಮನವಿಟ್ಟು ಓದಬೇಕಾಗಿ ವಿನಂತಿ.

೧. ನಾನು ಜಗನ್ಮಾತೆಯ ಪುತ್ರ. ಆಕೆ ಮೇ.೧೨ರಂದು ಭೂಮಿಗೆ ಬರುತ್ತಿದ್ದಾಳೆ. ಬಂದವಳು ಭೂಮಿಯನ್ನು ನಾಶಪಡಿಸುತ್ತಾಳೆ. ನಾನು ಇದನ್ನು ಘೋಷಿಸಿರುವುದರಿಂದ, ಜಗನ್ಮಾತೆ ನನ್ನ ಮಾತು ಉಳಿಸುವ ದೃಷ್ಟಿಯಿಂದಲಾದರೂ ಪ್ರಳಯ ನಡೆಸುತ್ತಾಳೆ.

೨. ಕರ್ನಾಟಕದ ಯಾವ ದೇವಸ್ಥಾನಗಳಲ್ಲೂ ದೇವರಿಲ್ಲ. ಕರ್ನಾಟಕದಲ್ಲಿ ಸಾಧು ಸಂತರು ಮಾತ್ರ ಇದ್ದಾರೆ. ದೇವರು ಇರುವುದೆಲ್ಲ ತಮಿಳುನಾಡಿನಲ್ಲಿ. ಅಲ್ಲಿನ ಧರ್ಮಕ್ಷೇತ್ರಗಳಲ್ಲಿ. ಹಾಗಾಗಿ ನಾನು ತಮಿಳುನಾಡಿನ ದೇವಸ್ಥಾನಗಳಿಗೆ ಹೋಗುವಂತೆ ಭಕ್ತರಿಗೆ ಹೇಳುತ್ತೇನೆ.

೩. ಹೆಣ್ಣು ಮಕ್ಕಳು ನೈಟಿ ತೊಡಬಾರದು. ಸಲ್ವಾರ್ ಕಮೀಜ್ ಹಾಕಿದರೆ ಗರ್ಭಕೋಶದ ಕ್ಯಾನ್ಸರ್ ಬರುತ್ತೆ. ರಾತ್ರಿ ಗಂಡನ ಜತೆ ಮಲಗಿ ಬೆಳಿಗ್ಗೆ ಎದ್ದ ಕೂಡಲೇ ಅಡುಗೆ ಮನೆಗೆ ಹೋಗಬಾರದು. ಹೆಣ್ಣು ಮಕ್ಕಳು ಮನೆಯಲ್ಲಿ ಇದ್ದರೆ ಲಕ್ಷಣ. ಅಗಲವಾದ ಬಿಂದಿ ಇಟ್ಟುಕೊಳ್ಳಬೇಕು. ಇಲ್ಲವಾದಲ್ಲಿ ಬೂಬಮ್ಮಗಳ ಹಾಗೆ ಕಾಣುತ್ತೀರಿ. (ಬೂಬಮ್ಮ ಎಂದರೆ ಮುಸ್ಲಿಂ ಹೆಂಗಸು)

೪. ಬೆಳಿಗ್ಗೆ ಎದ್ದ ಕೂಡಲೇ ಪೊರಕೆಯನ್ನು, ಹಜಾಮರ ಮುಖವನ್ನು ನೋಡಬಾರದು. ನೋಡಿದರೆ ಕೆಟ್ಟದಾಗುತ್ತದೆ.

೫. ಇಡೀ ಜಗತ್ತು ಮುಳುಗಿ ಹೋಗುತ್ತದೆ, ಬೆಳಗಾವಿಯ ಒಂದು ಹಳ್ಳಿ ಮಾತ್ರ ಉಳಿದುಕೊಳ್ಳುತ್ತದೆ. ಪಾಪಿಗಳು ಮಾಡಿದ ತಪ್ಪಿಗಾಗಿ ಪಾಪಿಗಳಲ್ಲದವರೂ ನಾಶವಾಗುತ್ತಾರೆ.

೬. ಹಾವು ಎಂದರೆ ದೇವರು. ಜಪಾನ್ ದೇಶದವರು ಹಾವು ತಿನ್ನುತ್ತಾರೆ, ಅದಕ್ಕೆ ಸುನಾಮಿ ಬಂದಿದ್ದು.

ಇವು ಕೆಲವು ಸ್ಯಾಂಪಲ್‌ಗಳು ಮಾತ್ರ. ಈತನ ಇನ್ನಷ್ಟು ಭಯಾನಕ ಉಪದೇಶಗಳ ಕುರಿತು ಈ ಹಿಂದೆ ಇದೇ ಬ್ಲಾಗ್ ನಲ್ಲಿ ಪ್ರಸ್ತಾಪಿಸಿದ್ದೇವೆ. ಒಮ್ಮೆ ಓದಿ ನೋಡಲು ವಿನಂತಿ.  ಈ ಬಗೆಯ ದುರ್ಬೋಧನೆಗಳನ್ನು ನೀಚಾತಿನೀಚರಷ್ಟೆ ಸಮರ್ಥಿಸಿಕೊಳ್ಳಬಹುದು. ಹೀಗಾಗಿ ನೀವು ಇವುಗಳನ್ನೆಲ್ಲ ಒಪ್ಪಲಾರಿರಿ ಎಂದು ನಮ್ಮ ನಂಬಿಕೆ. ನರೇಂದ್ರ ಶರ್ಮ ಬಳಸುವ ಭಾಷೆ ಎಷ್ಟು ಕೊಳಕಾಗಿದೆಯೆಂದರೆ ಆತ ಪದೇಪದೇ ಮುಂಡೇವು, ಮುಂಡೆ (ಗಂಡ ಸತ್ತ ಹೆಂಗಸು), ಕಳ್ ನನ್ ಮಕ್ಕಳು, ಗೂಬೆ, ಗುಗ್ಗು, ದರಿದ್ರದವು.. ಇತ್ಯಾದಿ ಪದಗಳನ್ನೇ ಬಳಸುತ್ತಾರೆ. ವೇದೋಪನಿಷತ್ತುಗಳನ್ನು ಓದಿದ ವ್ಯಕ್ತಿ ಇಷ್ಟು ಅಸಭ್ಯವಾದ ಭಾಷೆಯಲ್ಲಿ ಸಾರ್ವಜನಿಕವಾಗಿ ಮಾತನಾಡಲು ಸಾಧ್ಯವೇ?

ಕಪಟ ಜ್ಯೋತಿಷಿಗಳು ಹರಡುವ ಮೂಢನಂಬಿಕೆಗಳ ಕುರಿತು ಸ್ವಾಮಿ ವಿವೇಕಾನಂದರು ಹೀಗೆ ಹೇಳಿದ್ದರು:

 ಜ್ಯೋತಿಷ್ಯ ಮುಂತಾದುವನ್ನು ಹೇಳಿ ಉದರಪೋಷಣೆ ಮಾಡಿಕೊಳ್ಳುವವರ ಹತ್ತಿರ ಸಂಬಂಧವನ್ನು ಇಟ್ಟುಕೊಳ್ಳಕೂಡದು ಎನ್ನುವನು ಬುದ್ಧ. ಅವನಿಗೆ ಇದರ ರಹಸ್ಯ ಚೆನ್ನಾಗಿ ಗೊತ್ತಾಗಿರಬೇಕು. ತಾರೆಯೊಂದು ನನ್ನ ಜೀವನದ ಮೇಲೆ ತನ್ನ ಪ್ರಭಾವವನ್ನು ಬೀರಿ ವ್ಯಥೆಯನ್ನು ತಂದರೆ ನನ್ನ ಜೀವನ ಕುರುಡು ಕಾಸಿಗೂ ಯೋಗ್ಯವಲ್ಲ. ಜ್ಯೋತಿಷ್ಯ ಮುಂತಾದ ರಹಸ್ಯಗಳನ್ನೆಲ್ಲಾ ನೆಚ್ಚುವುದು ದೌರ್ಬಲ್ಯದ ಚಿಹ್ನೆ. ಈ ಸ್ವಭಾವ ನಿಮ್ಮ ಮನಸ್ಸಿನಲ್ಲಿ ಬಲವಾಗುತ್ತಿದ್ದರೆ ನೀವು ಒಬ್ಬ ವೈದ್ಯನನ್ನು ನೋಡಿ; ಒಳ್ಳೆಯ ಆಹಾರ ಮತ್ತು ವಿಶ್ರಾಂತಿಯನ್ನು ತೆಗೆದುಕೊಳ್ಳಿ..... ಜ್ಯೋತಿಷ್ಯ ಮುಂತಾದವುಗಳಲ್ಲೆಲ್ಲಾ ಸ್ವಲ್ಪ ಸತ್ಯಾಂಶವಿದ್ದರೂ ಅದನ್ನು ನಾವು ನಿರ್ಲಕ್ಷ್ಯದಿಂದ ನೋಡಬೇಕು..... ಮೂಢಭಾವನೆಗಳು ನಾಯಿಕೊಡೆಯಂತೆ ನಮ್ಮ ದೇಶದಲ್ಲಿ ಹಬ್ಬುತ್ತಿವೆ. ವಿಚಾರ ಮಾಡದ ಸ್ತ್ರೀಯರು ಇನ್ನೂ ಸ್ವಾತಂತ್ರ್ಯಕ್ಕೆ ಹೋರಾಡುತ್ತಿರುವರು. ಒಬ್ಬ ಹಣಕ್ಕಾಗಿ ಮತ್ತೊಬ್ಬರನ್ನು ಮೋಸ ಮಾಡಿದರೆ ಅವನನ್ನು ಮೋಸಗಾರ ಎನ್ನುವಿರಿ. ಇತರರನ್ನು ಅಧ್ಯಾತ್ಮಿಕ ದೃಷ್ಟಿಯಿಂದ ಪಾಪಿಗಳು ಎಂದು ಮೋಸಗೊಳಿಸುವವರು ಎಂತಹ ಪಾಪಿಗಳಿರಬೇಕು? ಇದು ಪರಮಪಾತಕ. ಸತ್ಯ ನಿಮ್ಮನ್ನು ಧೀರರನ್ನಾಗಿ ಮಾಡಬೇಕು; ಮೌಢ್ಯತೆಯಿಂದ ಪಾರಾಗುವಂತೆ ಮಾಡಬೇಕು. ಇದೇ ಸತ್ಯದ ಪರೀಕ್ಷೆ.... ಬೇಕಾದರೆ ತಾರೆಗಳನ್ನು ನಿಮ್ಮ ಬೊಗಸೆಯಿಂದ ಎತ್ತಿ ನುಂಗಿಹಾಕಬಹುದು. ನಿಮ್ಮ ನೈಜಸ್ವಭಾವ ಅಂತಹುದು. ಧೀರರಾಗಿ, ಎಲ್ಲಾ ವಿಧದ ಮೂಢನಂಬಿಕೆಗಳಿಂದ ಪಾರಾಗಿ, ಮುಕ್ತರಾಗಿ.

ಇವತ್ತು ನಿಮ್ಮ ಚಾನಲ್ ಮೂಲಕ ನರೇಂದ್ರ ಶರ್ಮ ಅವರು ಇಡೀ ಕರ್ನಾಟಕವನ್ನು ಮೌಢ್ಯದಲ್ಲಿ ಮುಳುಗಿಸಲು ಯತ್ನಿಸುತ್ತಿದ್ದಾರೆ. ಅಮೆರಿಕದ ಕೆಲವು ಸ್ವತಂತ್ರ ಕ್ರಿಶ್ಚಿಯನ್ ಗುಂಪುಗಳು ಹರಡುತ್ತಿರುವ ಪ್ರಳಯದ ಥಿಯರಿಗಳನ್ನೇ (http://www.coffetoday.com/the-doomsday-is-on-may-21-2011/907618/
http://www.ebiblefellowship.com/may21/
http://en.wikipedia.org/wiki/Harold_Camping
http://www.allvoices.com/contributed-news/8599025-worlds-doomsday-fixed-for-6-pm-on-21st-may-2011)  ಕದ್ದು ತಂದು, ಅವುಗಳನ್ನು ಜಗನ್ಮಾತೆಯ ಹೆಸರಿನಲ್ಲಿ ಬದಲಾಯಿಸಿ, ಈ ವರ್ಷವೇ ಪ್ರಳಯವಾಗುತ್ತದೆ ಎಂದು ಭೀತಿ ಸೃಷ್ಟಿಸುತ್ತಿದ್ದಾರೆ. ಪ್ರಳಯವನ್ನು ತಪ್ಪಿಸಲು ಸಾಧ್ಯವಿರುವುದು ನನಗೆ ಮಾತ್ರ, ಹೀಗಾಗಿ ನಾನು ಹೇಳಿದಂತೆ ಕೇಳಿ ಎಂದು ಜನರನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಯತ್ನಿಸುತ್ತಿದ್ದಾರೆ.

ಹಿಂದೆ ಕಸ್ತೂರಿ ವಾಹಿನಿಯಲ್ಲಿದ್ದಾಗ ಸಹ ಲೋಕ ಕಲ್ಯಾಣ, ಇತ್ಯಾದಿ ಬೊಗಳೆ  ಮಾತುಗಳನ್ನು ಹೇಳಿ ಅರಮನೆ ಮೈದಾನದಲ್ಲಿ ದೊಡ್ಡ ಯಾಗವೊಂದನ್ನು ನಡೆಸಿದ ನರೇಂದ್ರ ಶರ್ಮ ಅವರು ಇದಕ್ಕಾಗಿ ಕೋಟ್ಯಂತರ ರೂಪಾಯಿ ಹಣವನ್ನು ಮುಗ್ಧ, ಅಮಾಯಕ ಜನಸಾಮಾನ್ಯರಿಂದ ಪಡೆದಿದ್ದರು. ಎಷ್ಟು ಹಣ ಪಡೆದಿದ್ದೀರಿ, ಸ್ವಲ್ಪ ಲೆಕ್ಕ ಕೊಡಿ ಎಂದು ಪತ್ರಕರ್ತರು ಪತ್ರಿಕಾಗೋಷ್ಠಿಯೊಂದರಲ್ಲಿ ಕೇಳಿದಾಗ ನರೇಂದ್ರ ಶರ್ಮ ಗೋಷ್ಠಿಯನ್ನೇ ನಿಲ್ಲಿಸಿ ಹೊರಟುಹೋಗಿದ್ದರು. ನರೇಂದ್ರ ಶರ್ಮ ಅವರು ಸಾರ್ವಜನಿಕರ ದೇಣಿಗೆ ಪಡೆಯಲೆಂದೇ ಎರಡು ಟ್ರಸ್ಟ್‌ಗಳನ್ನು ರಚಿಸಿಕೊಂಡಿದ್ದಾರೆ. ಈ ಟ್ರಸ್ಟ್‌ಗಳಿಗೂ ನಿಮ್ಮ ಚಾನಲ್‌ಗಳಿಗೂ ಯಾವ ಸಂಬಂಧವಿರುವುದಿಲ್ಲ. ಪ್ರಚಾರಕ್ಕೆ ನಿಮ್ಮ ಚಾನಲ್‌ಗಳು, ಹಣ ವಸೂಲಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸುವ ಟ್ರಸ್ಟ್‌ಗಳು! ಈ ದುರ್ ವ್ಯವಹಾರ ನಿಲ್ಲಿಸಲು ನೀವು ಹೇಳಿದರೆ, ಅವರು ಚಾನಲ್ ಬದಲಾಯಿಸುತ್ತಾರೆ.  ಬ್ರಹ್ಮಾಂಡ, ಭವ್ಯ ಬ್ರಹ್ಮಾಂಡ, ಬೃಹತ್ ಬ್ರಹ್ಮಾಂಡ ಆಯಿತು, ಇನ್ನು ಸೂಪರ್ ಬ್ರಹ್ಮಾಂಡ ಸೃಷ್ಟಿಯಾಗಬಹುದು ಅಷ್ಟೆ.

ಇಂಥ ಕಾರ್ಯಕ್ರಮ ಬೇಕೆ ಎಂದು ನೀವು ಯೋಚಿಸಲೇಬೇಕಾದ ಸಮಯವಿದು. ನಿಜ, ಈ ಕಾರ್ಯಕ್ರಮದಿಂದ ನಿಮಗೆ ಟಿಆರ್‌ಪಿ ಹೆಚ್ಚಾಗಿರಬಹುದು. ಆದರೆ ಜನ ಹೆಚ್ಚು ನೋಡುತ್ತಾರೆ ಎಂಬ ಕಾರಣಕ್ಕೆ ಅದು ಶ್ರೇಷ್ಠವಾದ ಕಾರ್ಯಕ್ರಮ ಎಂದು ಭಾವಿಸುವುದು ಮೂರ್ಖತನ. ಬೀದಿಯಲ್ಲಿ ಒಬ್ಬ ಹುಚ್ಚ ವಿಚಿತ್ರವಾಗಿ ಮಾತನಾಡುತ್ತ, ಬಟ್ಟೆ ಬಿಚ್ಚಿಕೊಂಡು ಓಡಾಡುತ್ತಿದ್ದರೆ ಆತನನ್ನು ಎಲ್ಲರೂ ನೋಡುತ್ತಾರೆ. ಮಾಮೂಲಿಯಂತೆ ಓಡಾಡುವ ನಮ್ಮ, ನಿಮ್ಮನ್ನು ಯಾರೂ ಗಮನಿಸುವುದಿಲ್ಲ. ಎಲ್ಲರೂ ನೋಡುತ್ತಾರೆ ಅನ್ನುವ ಕಾರಣಕ್ಕೆ ಬೆತ್ತಲೆ ಹುಚ್ಚನನ್ನು ಪ್ರೋತ್ಸಾಹಿಸುವುದು ಸರಿಯೇ? ಬೆತ್ತಲೆ ಓಡಾಡುವ ಹುಚ್ಚನಿಗೆ ಬಟ್ಟೆ ಕೊಡಿಸಿ, ಯಾವುದಾದರೂ ಆಸ್ಪತ್ರೆಗೆ ಸೇರಿಸುವ ಕೆಲಸ ಮಾಡಬೇಕೇ ಹೊರತು, ಹುಚ್ಚನೇ ಶ್ರೇಷ್ಠ ಎಂದು ಭಾವಿಸಬೇಕಾಗಿಲ್ಲ. ಒಬ್ಬ ಹುಚ್ಚನನ್ನು ಸಹಿಸಿಕೊಂಡ ಪರಿಣಾಮ ಈಗ ಬೀದಿ ತುಂಬ ಹುಚ್ಚರು ಸೇರಿಬಿಡುತ್ತಾರೆ. ಆ ಅಪಾಯವನ್ನೂ ನಾವು ಎದುರಿಸುತ್ತಿದ್ದೇವೆ.

ಇದೆಲ್ಲವನ್ನೂ ಗಮನಿಸಿ ತಾವು ದಯಮಾಡಿ ನರೇಂದ್ರ ಶರ್ಮ ಅವರ ಬ್ರಹತ್ ಬ್ರಹ್ಮಾಂಡ ಕಾರ್ಯಕ್ರಮವನ್ನು ಈಗಿಂದೀಗಲೇ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸುತ್ತೇವೆ. ಈ ಕಾರ್ಯಕ್ರಮ ಅನೈತಿಕ, ಅಪ್ರಜಾಸತ್ತಾತ್ಮಕ, ಮಾನವ ವಿರೋಧಿಯಾಗಿದೆ.

ಇದನ್ನು ನಾವು ನಿಮ್ಮ ಬೇಡಿಕೆ ಎಂದು ಹೇಳುತ್ತಿಲ್ಲ, ಆಗ್ರಹ ಎಂದೇ ಹೇಳುತ್ತಿದ್ದೇವೆ. ಯಾಕೆಂದರೆ ಇದು ಕಾನೂನು ಪ್ರಕಾರವೂ ಅಪರಾಧ. ನೀವು ಹಾಗು ನರೇಂದ್ರ ಶರ್ಮ ಸರ್ಕಾರ ರಚಿಸಿರುವ ನಿಯಮಾವಳಿಗಳನ್ನು ಗಾಳಿಗೆ ತೂರಿರುವುದು ಸ್ಪಷ್ಟ.

ನಿಮಗೆ ಚೆನ್ನಾಗಿ ಗೊತ್ತಿದೆ. ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಇಲಾಖೆ ಸಿದ್ಧಪಡಿಸಿರುವ ಮಾರ್ಗಸೂಚಿಗಳನ್ನು ನೀವು ತಪ್ಪದೇ ಪಾಲಿಸಬೇಕು. ಮಾರ್ಗಸೂಚಿಗಳನ್ನು ಅಲಕ್ಷ್ಯ ಮಾಡಿದ ಎಂಟಿವಿ, ಟಿವಿ೫ ಮುಂತಾದ ಚಾನಲ್‌ಗಳನ್ನು ಶಿಕ್ಷಿಸಲಾಗಿರುವ ಉದಾಹರಣೆಗಳೂ ನಮ್ಮ ಮುಂದಿವೆ. ಟಿವಿಗಳಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳು ಒಟ್ಟು ೧೩ ವಿವಿಧ ಕಾಯ್ದೆಗಳ ವ್ಯಾಪ್ತಿಗೆ ಒಳಪಡುತ್ತವೆ. ಹೀಗಾಗಿ ತಮಗೆ ಕಾನೂನಿನ ಹೊಣೆಗಾರಿಕೆಯೂ ಇದೆ. ಅವುಗಳನ್ನು ನಿಮಗೆ ನೆನಪಿಸಲು ಯತ್ನಿಸುತ್ತೇವೆ.

ಕಾಯ್ದೆಗಳು ಹೀಗಿವೆ.

1. Cable Television Network (Regulation) Act, 1995 and Certification Rules there under.
2. Drugs and Cosmetics Act, 1940.
3. Emblems and Names (Prevention of Improper Use) Act, 1950.
4. Drugs (Control) Act 1950.
5. Drugs and Magic Remedies (Objectionable Advertisements) Act, 1954.
6. Prevention of Food & Adulteration Act, 1954.
7. Prize Competitions Act, 1955.
8. Indecent Representation of Women (Prohibition) Act, 1986.
9. Trade and Merchandise Marks, Act 1999.
10. Copyright Act, 1957.
11. Cigarette and other Tobacco Products Act 2003.
12. Consumer Protection Act, 1986.
13. The Prevention of Cruelty to Animals Act, 1960


ಪ್ರಸಾರ ವೇಳೆ ಕಾನೂನು ಉಲ್ಲಂಘನೆಯನ್ನು ಮೂರು ಹಂತದಲ್ಲಿ ವಿಚಾರಣೆಗೆ ಒಳಪಡಿಸಬಹುದು. ಮೂರನೆ ಹಂತದಲ್ಲಿ ಸರಕಾರ ನೇಮಿಸಿದ ಸಮಿತಿ ಚಾನೆಲ್ ಮುಖ್ಯಸ್ಥ ತಪ್ಪಿತಸ್ಥ ಎಂದು ಕಂಡುಬಂದರೆ, ಪ್ರಸ್ತುತ ಕಾರ್ಯಕ್ರಮವನ್ನು ಪ್ರಸರಣ ಮಾಡದಂತೆ ನಿರ್ದೇಶಿಸಬಹುದು, ಕ್ಷಮಾಪಣೆಯನ್ನು ಬಿತ್ತರಿಸುವಂತೆ ಹೇಳಬಹುದು ಹಾಗೂ ದಂಡ ವಿದಿಸಬಹುದು. ಈ ಪ್ರಕ್ರಿಯೆಗೆ ದೂರು ದಾಖಲಿಸುವುದು ಮುಖ್ಯ.ಮಾರ್ಗಸೂಚಿ ಸ್ಪಷ್ಟ ಮಾತುಗಳಲ್ಲಿ ಕಾರ್ಯಕ್ರಮಗಳಲ್ಲಿ ಅವಹೇಳನಕಾರಿ ಭಾಷೆ, ಜಾತಿ ನಿಂದನೆ, ಮೂಢನಂಬಿಕೆ ವೈಭವೀಕರಣ ಹಾಗೂ ಜನರನ್ನು ದಿಕ್ಕುತಪ್ಪಿಸುವುದನ್ನು ಖಂಡಿಸುತ್ತದೆ.

ಕಂಟೆಂಟ್ ಸರ್ಟಿಫಿಕೇಷನ್ ನಿಯಮಾವಳಿ ೨೦೦೮ ಪ್ರಕಾರ ಯಾವುದೇ ನಿರ್ದಿಷ್ಟ ಜಾತಿ, ಕೋಮು ಅಥವಾ ನಂಬಿಕೆ ವಿರುದ್ಧ ಮಾತನಾಡುವುದು ಅಪರಾಧ. ಜೊತೆಗೆ ಯಾವುದೇ ಒಂದು ಆಚರಣೆಯನ್ನು ಶ್ರೇಷ್ಠ ಅಥವಾ ಕನಿಷ್ಟ ಎಂದು ಬಿಂಬಿಸುವಂತಿಲ್ಲ. ಹಾಗೆಯೇ ಲಿಂಗ ಅಸಮಾನತೆಯನ್ನು ಹೇಳುವಂತಿಲ್ಲ.

ನಿಮ್ಮ ಬೃಹತ್ ಬ್ರಹ್ಮಾಂಡ ಕಾರ್ಯಕ್ರಮ ಈ ಎಲ್ಲ ಕಾಯ್ದೆಗಳನ್ನು ಉಲ್ಲಂಘಿಸಿರುವುದು ಸ್ಪಷ್ಟ. ಈ ಕಾರ್ಯಕ್ರಮ ಸ್ತ್ರೀಯರನ್ನು ಕೆಟ್ಟದಾಗಿ ಚಿತ್ರಿಸುತ್ತದೆ. ಹಜಾಮರನ್ನು ನೋಡಬಾರದು ಎನ್ನುವ ಮೂಲಕ ಅಸ್ಪೃಶ್ಯತೆಯನ್ನು ಪ್ರಚಾರ ಮಾಡುತ್ತಿದೆ. ಜನರಲ್ಲಿ ಪ್ರಳಯದ ಭೀತಿಯನ್ನು ಸೃಷ್ಟಿಸುತ್ತಿದೆ. ಮಾಂಸಾಹಾರಿಗಳನ್ನು ಈತ ಕೀಳಾಗಿ ನಿಂದಿಸುವ ಮೂಲಕ ಜನಾಂಗೀಯ ನಿಂದನೆಯನ್ನು ಈ ಕಾರ್ಯಕ್ರಮ ಪೋಷಿಸುತ್ತಿದೆ.

ಭಾರತದ ಸಂವಿಧಾನವು ಜನರಲ್ಲಿ ವೈಜ್ಞಾನಿಕ ಮನೋಭಾವ ಹೆಚ್ಚಾಗಬೇಕು ಎನ್ನುತ್ತದೆ. ಆಧುನಿಕ ಕಾಲಘಟ್ಟದಲ್ಲಿ ನಾವು ಇನ್ನೂ ಕಂದಾಚಾರಗಳ ನರಕದಲ್ಲೇ ಕೊಳೆಯುತ್ತಿದ್ದೇವೆ. ಈ ಕೆಟ್ಟ ಬೆಳವಣಿಗೆಯನ್ನು ಟಿವಿ ಚಾನಲ್ ಗಳು ನಿರಂತರವಾಗಿ ಪೋಷಿಸುತ್ತಿವೆ. ಈ ನಿಟ್ಟಿನಲ್ಲಿ ನಿಮ್ಮ ಚಾನಲ್ ಸೇರಿದಂತೆ ಎಲ್ಲ ಚಾನಲ್ ಗಳು ಟಿಆರ್ಪಿ ಆಸೆಗೆ ಬಲಿಬೀಳದೆ ಕಾಲದ ಅಗತ್ಯಕ್ಕೆ ತಕ್ಕಂಥ, ಮನುಷ್ಯರನ್ನು ಎಲ್ಲ ಮೌಢ್ಯಗಳಿಂದ ಬಿಡುಗಡೆಗೊಳಿಸುವ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಅಗತ್ಯವಿದೆ.

ಈ ಕಾರ್ಯಕ್ರಮವನ್ನು ಕೂಡಲೇ ನಿಲ್ಲಿಸಬೇಕೆಂದು ಮತ್ತೊಮ್ಮೆ ಆಗ್ರಹಪಡಿಸುತ್ತೇವೆ. ಒಂದು ವೇಳೆ ನಿಲ್ಲಿಸದೇ ಹೋದಲ್ಲಿ ಸಂಬಂಧಪಟ್ಟ ಪ್ರಾಧಿಕಾರಗಳಿಗೆ ದೂರು ಸಲ್ಲಿಸುವುದೂ ಸೇರಿದಂತೆ, ಪ್ರಜಾಸತ್ತಾತ್ಮಕ ಹೋರಾಟಗಳನ್ನು ನಡೆಸಬೇಕಾಗುತ್ತದೆ ಎಂದು ತಿಳಿಸಲು ವಿಷಾದಿಸುತ್ತೇವೆ.

ಧನ್ಯವಾದಗಳು.
ಓದುಗರಿಗೊಂದು ಮನವಿ: ದಯಮಾಡಿ ಈ ಪತ್ರದ ಧಾಟಿಯ ಪತ್ರಗಳನ್ನು ಅಥವಾ ಇದೇ ಪತ್ರವನ್ನು ನಿಮ್ಮ ಐಡಿಗಳಿಂದ  ಈ feedbackzeekannada@zeenetwork.com  ಇಮೇಲ್ ಅಥವಾ ಜೀ ಕನ್ನಡ, ನಂ.೩೯, ಯುನೈಟೆಡ್ ಮ್ಯಾನ್ಷನ್, ಮೂರನೇ ಮಹಡಿ, ಮಹಾತ್ಮಗಾಂಧಿ ರಸ್ತೆ, ಬೆಂಗಳೂರು-೧ ಈ ವಿಳಾಸಕ್ಕೆ ಅಂಚೆ ಮೂಲಕ ಕಳುಹಿಸಬೇಕಾಗಿ ವಿನಂತಿ. ಸಾಧ್ಯವಾಗುವುದಾದರೆ ಈ ಅಭಿಯಾನವನ್ನು ಬೆಂಬಲಿಸುವ ಬ್ಲಾಗರ್‌ಗಳು ಈ ಪತ್ರವನ್ನು ಯಥಾವತ್ತಾಗಿ ತಮ್ಮ ಬ್ಲಾಗ್‌ಗಳಲ್ಲಿ ಪ್ರಕಟಿಸಬೇಕೆಂದು ಕೋರುತ್ತೇವೆ. ಹಾಗೆಯೇ ಇದನ್ನು ಫೇಸ್‌ಬುಕ್ ಹಾಗು ಇತರ ಸೋಷಿಯಲ್ ನೆಟ್‌ವರ್ಕ್‌ಗಳಲ್ಲಿ ಶೇರ್ ಮಾಡಲು ವಿನಂತಿಸುತ್ತೇವೆ

Sunday, April 24, 2011

"ಸನಾತನ ಧರ್ಮ"ದ ಬಾಬಾ ಅನಂತದೆಡೆಗೆ

ಬಡತನ, ಅಜ್ಞಾನ ಇರುವೆಡೆ ಮೂಡನಂಬಿಕೆ, ಅತಿಯಾದ ಧಾರ್ಮಿಕ ಆಚರಣೆ, ಕಂದಾಚಾರಗಳು ನೆಲಯೂರಿರುತ್ತವೆ, ಜಗತ್ತಿನ ವಿವಿಧ ಭಾಗಗಳಲ್ಲಿ ಇಂತಹ ಅಂಧಶ್ರದ್ದೆ, ಆಚರಣೆಯನ್ನೆ ಬಂಡವಾಳ ಮಾಡಿಕೊಂಡು ಬೆಳೆದು ನಿಂತವರಿದ್ದಾರೆ. ಜನ ಸಾಮಾನ್ಯರ ಸಂಕುಚಿತ ಧೋರಣೆ, ಅಮಾಯಕತೆಯನ್ನೆ ಎನ್ ಕ್ಯಾಶ್ ಮಾಡಿಕೊಳ್ಳುವ ಪದ್ಧತಿ ಆಧುನಿಕ ಜಗತ್ತು ಬೆಳೆದಂತೆಲ್ಲ ಬೇರೆ ಬೇರೆ ಮಾರ್ಗಗಳಲ್ಲಿ ಆವರಿಸಿಕೊಳ್ಳುತ್ತಾ ಸಾಗಿದೆ. ಇದರ ಬೆನ್ನಿಗೆ ಧಾರ್ಮಿಕತೆಯ ಹೆಸರು ಹೇಳಿಕೊಂಡು ಸ್ವಾಮೀಜಿಗಳು, ಬಾಬಾಗಳು, ದೇವಮಾನವರು, ಪೂಜಾರಿಗಳು ಇತ್ಯಾದಿಗಳು ಹುಟ್ಟಿಕೊಂಡಿದ್ದಾರೆ. ಇಂತಹ ಸನ್ನಿವೇಶದಲ್ಲಿ ಬಾಬಾ ಹೆಸರಿನಿಂದ ಕರೆಯಲ್ಪಡುತ್ತಿದ್ದ ಸತ್ಯನಾರಾಯಣ ರಾಜು ಅಲಿಯಾಸ್ ಸತ್ಯ ಸಾಯಿ ಬಾಬಾ ಇಹಲೋಕ ತ್ಯಜಿಸಿದ್ದಾರೆ.  ಸಮಾಜದಲ್ಲಿ ಎಷ್ಟೋ ಮಂದಿ ಬಾಬಾಗಳು ಇದ್ದಾರೆ ಆದರೆ ಈ ಸತ್ಯ ಸಾಯಿ ಬಾಬಾ ಕಥೆ ಏನು? ಈತ ಬೆಳಕಿಗೆ ಬಂದದ್ದು ಹೇಗೆ? ಇವರ ಸಮಾಜ ಮುಖಿ ಕೆಲಸಗಳೇನು? ಇವರ ಪ್ರಸ್ತುತತೆ ಏನು? ಎಂಬೆಲ್ಲ ಪ್ರಶ್ನೆಗಳು ಏಳುತ್ತವೆ. 

          ಈ ಬಾಬಾ ಬೆಳಕಿಗೆ ಬಂದ ಕಥೆಯೂ ವಿಚಿತ್ರವೂ ಆಗಿದೆ. ಈತ ಬೆಳೆಯುತ್ತಾ ಬಂದಂತೆಲ್ಲಾ ಸಮಾಜ ಮುಖಿಯಾದದ್ದು , ಸಮಾಜದ ವಿವಿಧ ಸ್ಥರಗಳ ಜನರನ್ನು ಆವರಿಸಿಕೊಂಡಿದ್ದು, ಅಂತರ ರಾಷ್ಟ್ರೀಯ ಮಟ್ಟದಲ್ಲಿ ತನ್ನ ಪ್ರಭಾವಳಿಯನ್ನು ಬೆಳೆಸಿಕೊಂಡದ್ದು, ವಿವಿಧ ಸಂಧರ್ಭಗಳಲ್ಲಿ ಪವಾಡಗಳ ಮೂಲಕ ಜನರನ್ನು ಮೋಡಿ ಮಾಡುವ ಮೂಲಕ ಸೆಳೆದದ್ದು ರೋಚಕ ಕಥೆಯೇ ಆಗಿದೆ. ಬಹುತೇಕ ಮಂದಿಗೆ ತಿಳಿದಿರುವಂತೆ ಪಕ್ಕದ ಆಂಧ್ರ ಜಿಲ್ಲೆಯ ಪುಟ್ಟಪರ್ತಿಯ ಈಶ್ವರಮ್ಮ ಮತ್ತು ಪೆದ್ದವೆಂಕಮ್ಮ ರಾಜು ರತ್ನಾಕರಂ ರ ಮಗನಾಗಿ 23, ನವೆಂಬರ್ 1926ರಲ್ಲಿ ಜನಿಸಿದವನೇ ಸತ್ಯನಾರಾಯಣ ರಾಜು. ಈತನ 16ನೇ ವಯಸ್ಸಿನಲ್ಲಿ ಸಹೋದರನೊಂದಿಗೆ ಆಟವಾಡುವಾಗ ಚೇಳು ಕುಟುಕಿದ್ದೇ ನೆಪವಾಗಿ ಅಂದಿನಿಂದ ತನ್ನ ನಡವಳಿಕೆಯಲ್ಲಿ ಸತ್ಯನಾರಾಯಣ ರಾಜು ಬದಲಾವಣೆ ತಂದು ಕೊಂಡನಲ್ಲದೇ ಅಸ್ಖಲಿತವಾಗಿ ಸಂಸ್ಕೃತ ಶ್ಲೋಕಗಳನ್ನು ಉಚ್ಚರಿಸಲಾರಂಭಿಸಿದನಂತೆ. ಆತನಿಗೆ ಸಂಸ್ಕೃತದ ಲವಲೇಶವೂ ಪರಿಚಯವಿಲ್ಲದಿದ್ದರೂ ಮಾತನಾಡಿದ್ದು ಮತ್ತು ಅನಂತದಿಂದ ಬೂದಿಯನ್ನು ಸೃಷ್ಟಿಸಿಕೊಟ್ಟನಂತೆ.ಈ ಘಟನೆಯಿಂದ ವಿಚಲಿತರಾದ ಸತ್ಯನಾರಾಯಣ ರಾಜುವಿನ ತಂದೆ ಬಾರು ಕೋಲು ಹಿಡಿದು ಹೆದರಿಸಿ ಕೇಳಿದಾಗ ನಾನು ಸಾಯಿಬಾಬಾ, ಸತ್ಯ ಸಾಯಿ ಬಾಬಾ, ಶಿರಡಿ ಸಾಯಿಬಾಬಾ ನ ಅಂಶವಾಗಿ ಜನ್ಮಿಸಿದ್ದೇನೆ ಎಂದನಂತೆ. ಅಂದಿನಿಂದ ತನ್ನ ಸಾಮಾಜಿಕ ಸಂಬಂಧಗಳಿಗೆ ಕಡಿವಾಣ ಹಾಕಿದ ಬಾಬಾ ಆಧ್ಯಾತ್ಮಿಕದತ್ತ ಒಲವು ತೋರಿಸಿದರಂತೆ. ಚೇಳು ಕುಟುಕಿದ ಘಟನೆಯ ನಂತರ ಕಣ್ಮರೆಯಾಗಿ ದೇಶಾಂತರ ಹೋಗುವ ಬಾಬಾ 3ವರ್ಷಗಳ ನಂತರ ವಾಪಾಸಾಗಿ ಪುಟ್ಟಪರ್ತಿಯಲ್ಲಿ ಆಧ್ಯಾತ್ಮಿಕ ವಿಚಾರಗಳೆಡೆಗೆ ಜನರನ್ನು ಆಕರ್ಷಿಸುತ್ತಾರೆ. ಇದೇ ಸಂಧರ್ಭದಲ್ಲಿ ಶೂನ್ಯದಿಂದ ಬೂದಿ, ಉಂಗುರ ಇತ್ಯಾದಿಗಳನ್ನು ತೆಗೆದುಕೊಡುವ ಮೂಲಕ ಭಕ್ತರನ್ನು ಮೋಡಿ ಮಾಡಿದ ಬಾಬಾನಿಗೆ 1944ರಲ್ಲಿ ಭಕ್ತರು ಮಂದಿರ ಕಟ್ಟಿದರು. 
       ಅಲ್ಲಿಂದ ಮುಂದೆ ದೇಶದಾಧ್ಯಂತ, ಜಗತ್ತಿನಾಧ್ಯಂತ ತನ್ನ ಪ್ರಭಾವಳಿಯನ್ನು ಬೆಳೆಸಿಕೊಂಡ ಬಾಬಾ ಅನಾಮತ್ತು 114 ದೇಶಗಳಲ್ಲಿ 1200 ಸಾಯಿಕೇಂದ್ರಗಳನ್ನು ಹೊಂದಿದ್ದಾರೆ.178ದೇಶಗಳಲ್ಲಿ 6ಮಿಲಿಯನ್ ಸಂಖ್ಯೆಯಲ್ಲಿ ಬಾಬಾನ ಅನುಯಾಯಿಗಳಿದ್ದಾರೆ. 6ಬಾರಿ ಹೃದಯಾಘಾತ ಹಾಗೂ ಒಮ್ಮೆ ಪಾರ್ಸ್ವವಾಯು ಆಗಿದ್ದರೂ ತನ್ನ ಆಧ್ಯಾತ್ಮಿಕ ಶಕ್ತಿಯಿಂದ ಬಾಬಾ ಬದುಕುಳೀದಿದ್ದರೆಂದು ಆತನ ಭಕ್ತರು ನಂಬುತ್ತಾರೆ. ಶೂನ್ಯದಿಂದ ಬೂದಿ ಇತ್ಯಾದಿ ಸೃಷ್ಟಿಸುತ್ತಿದ್ದ ಬಾಬಾನನ್ನು ಒಮ್ಮೆ ಎಚ್ ನರಸಿಂಹಯ್ಯ ವೈಚಾರಿಕ ದೃಷ್ಟಿಯಿಂದ ಪ್ರಶ್ನಿಸಿದ್ದಾಗ, ಸವಾಲನ್ನು ಸ್ವೀಕರಿಸಲೊಲ್ಲದ ಬಾಬಾ ಆಧ್ಯಾತ್ಮಿಕ ಶಕ್ತಿಯನ್ನು ಆಧ್ಯಾತ್ಮಿಕವಾಗಿಯೇ ತಿಳಿದುಕೊಳ್ಳಬೇಕೆ ವಿನಹ ವೈಜ್ಞಾನಿಕ ಪ್ರಯೋಗದಿಂದ ಪರಿಶೀಲಿಸಬಾರದು ಎಂದು ಹೇಳುವ ಮೂಲಕ ತಳ್ಳಿಹಾಕಿದ್ದರು. ಈ ವಿಚಾರಗಳೆಲ್ಲ ಒತ್ತಟ್ಟಿಗಿರಲಿ ಸತ್ಯ ಸಾಯಿಬಾಬಾ ಇಷ್ಟವಾಗುವುದು ಆತನ ಸಾರ್ವಜನಿಕ ಸೇವಾ ಕಾರ್ಯಗಳ ಮೂಲಕ. ಪುಟ್ಟಪರ್ತಿ ಹಾಗೂ ಬೆಂಗಳೂರಿನ ಆಡುಗೋಡಿಯಲ್ಲಿ ಬಾಬಾ ನಿರ್ಮಿಸಿರುವ ಉಚಿತ ಆಸ್ಪತ್ರೆಯಲ್ಲಿ ಇದುವರೆಗೂ 250,000ಅಧಿಕ ಸಂಖ್ಯೆಯ ರೋಗಿಗಳು ಚಿಕಿತ್ಸೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲಿ ಉಚಿತ ಸರ್ಜರ, ಉಪಚಾರ, ಔಷದೋಪಚಾರ ನಡೆಯುತ್ತಿರುವುದು ಪ್ರಶಂಸನೀಯವೇ ಆಗಿದೆ. ಧಾರ್ಮಿಕ ದತ್ತಿ ಸಂಸ್ಥೆಗಳು, ಉಚಿತ ಸೇವಾ ಕೇಂದ್ರಗಳು, ವಿಶ್ವವಿದ್ಯಾನಿಲಯ, ಶಾಲೆಗಳು ನಿರ್ಮಿಸಿದ ಬಾಬಾ ಆಂಧ್ರಪ್ರದೇಶದ ಅನಂತಪುರಂ ಜಿಲ್ಲೆಯಲ್ಲಿ 1.2ಮಿಲಿಯನ್ ಜನರಿಗೆ ಅನುಕೂಲವಾಗುವಂತೆ ಶುದ್ದ ಕುಡಿಯುವ ನೀರಿನ ಘಟಕ ಸ್ಥಾಪಿಸಿ ತನ್ನ ಸಾಮಾಜಕಿ ಕಳಕಳಿಯನ್ನು ಮೆರೆದಿದ್ದಾರೆ. ದಕ್ಷಿಣ ಆಫ್ರಿಕಾದ ವಿವಿಧ ದೇಶಗಳಿಗೆ ತೆರಳಿ ಆಧ್ಯಾತ್ಮಿಕವಾಗಿ ತನ್ನ ಸೇವೆಯನ್ನು ನೀಡಿರುವ ಬಾಬಾ ಜಗತ್ತಿನಾಧ್ಯಂತ ತನ್ನ ವರ್ಚಸ್ಸನ್ನು ಬೆಳೆಸಿದ್ದರು ಆ ಮೂಲಕ ಭಾರತೀಯ ಸನಾತನ ಧರ್ಮದ ಪ್ರತಿಪಾದಕರಾಗಿಯೂ ಇದ್ದರು ಎಂಬುದು ಇಲ್ಲಿ ಗಮನೀಯ ಅಂಶ. ಆದರೆ ಸದರಿ ಆತ ಬದುಕಿದ್ದಾಗಲೇ ಸತ್ಯ ಸಾಯಿ ಬಾಬಾ ನ ಹೆಸರಿನಲ್ಲಿ ಮನೆ ಮನೆಗಳಲ್ಲಿ ಪವಾಡ ನಡೆಯುತ್ತಿದೆಯೆಂಬ ಗುಲ್ಲು ಹಬ್ಬಿಸುತ್ತಿದ್ದ ಮಂದಿ ಬಾಬಾ ಅನಂತದೆಡೆಗೆ ಸರಿದ ನಂತರವೂ ಹೊಸ ವರಸೆಗಳನ್ನು ತೋರುವುದನ್ನ ಇನ್ನಾದರೂ ಕಡಿವಾಣ ಹಾಕಬೇಕು ಆ ನೆರಳಲ್ಲಿ ಬರುವ ಸಂತತಿಗಳನ್ನು ನಿರ್ಬಂದಿಸಬೇಕು.. ಯಾವುದೇ ಬಾಬಾ ಗಳು ಜನಸಾಮಾನ್ಯರ ಆಕರ್ಷಣೆಗೆ ಪವಾಡ ಮತ್ತಿತರ ವರಸೆಗಳನ್ನು ತೋರುತ್ತಾರಾದರೂ ಸಮಾಜ ಮುಖಿಯಾಗಿ ಅವರು ಮಾಡುವ ಕೆಲಸಗಳು ಮಾತ್ರ ಬಹುಕಾಲ ಉಳಿಯಬಲ್ಲದು. ಈ ನಿಟ್ಟಿನಲ್ಲಿ ಸತ್ಯ ಸಾಯಿ ಬಾಬಾ ಪ್ರಸ್ತುತವಾಗುತ್ತಾರೆ. ಇವತ್ತು ಜನಸಾಮಾನ್ಯರ ಮೌಡ್ಯಗಳನ್ನು ಬಂಡವಾಳ ಮಾಡಿಕೊಳ್ಳುವ ಅನೇಕ ಮಂದಿ ಸ್ವಾಮೀಜಿಗಳು ಬಾಬಾಗಳು ತಮ್ಮ ವೈಯುಕ್ತಿಕ ಪ್ರಭಾವಳಿಗೆ ಮಾತ್ರ ಸೀಮಿತ ಮಾಡಿಕೊಂಡಿರುತ್ತಾರೆ ಆದರೆ ಸಮಾಜ ಮುಖಿಯಾಗಿಯೂ ಸೇವಾ ಹಸ್ತವನ್ನು ಚಾಚುವ ಮೂಲಕ ತಮ್ಮ ಇನ್ನೊಂದು ಮುಖವನ್ನ ಮರೆಯಾಗಿಸುವ ಬಾಬಾಗಳು ಇದ್ದಾರೆ. ಆಧ್ಯಾತ್ಮಿಕವಾಗಿ ಭಾರತೀಯ ಪರಂಪರೆಯನ್ನು ಅಂತರ ರಾಷ್ರ್ಟೀಯ ಮಟ್ಟದಲ್ಲಿ ಪ್ರಚುರ ಪಡಿಸಿದ (ಪವಾಡ ಹೊರತು ಪಡಿಸಿ) ಸತ್ಯ ಸಾಯಿ ಬಾಬಾ ನಿಜಕ್ಕೂ ಸ್ಮರಣಾರ್ಹರು ಆಗಬಹುದಲ್ಲವೇ?

Sunday, April 10, 2011

ಭ್ರಷ್ಟ'ಭಾರತ'ವೂ... ಲೋಕಪಾಲ ಮಸೂದೆಯೂ..

"ಅಣ್ಣಾ ಹಜಾರೆ ನಿರಶನದಿಂದ ಲೋಕಪಾಲ್ ಬಿಲ್ ಪಾಸ್ ಆಗಬಹುದು, ಆದರೆ ಭಾರತದಿಂದ ಭ್ರಷ್ಠಾಚಾರ ತೊಲಗುತ್ತದೆ ಎಂಬುದು ಭ್ರಮೆ ಮಾತ್ರ" ಅಂತ ಫೇಸ್ ಬುಕ್ ನಲ್ಲಿ ಬರೆದದ್ದು ಪತ್ರಕರ್ತ ಮಿತ್ರ ಶ್ರೀನಿವಾಸಗೌಡ. ಇದು ಅವರೊಬ್ಬರ ಅಭಿಪ್ರಾಯವಲ್ಲ ಸಂವೇದನಾಶೀಲ ಮನಸ್ಸುಗಳೆಲ್ಲರ ಅಭಿಪ್ರಾಯವೂ ಅದೇ ಆಗಿದೆ ಎಂಬುದು ಮಾತ್ರ ಅತ್ಯಂತ ವಿಷಾಧನೀಯಕರ ಸಂಗತಿ. ಈ ಮಾತುಗಳಲ್ಲಿ ಭ್ರಷ್ಟಾಚಾರದ ಕಬಂಧಬಾಹುಗಳ ಬಂಧನ ಎಷ್ಟರ ಮಟ್ಟಿಗೆ ಬಿಗಿಯಾಗಿದೆ, ಅದನ್ನು ಮೀರಿ ನಿಲ್ಲಲು ಸಾಧ್ಯವೇ ಎಂಬ ಪ್ರಶ್ನೆಯೂ ಸಹಾ ಅಗೋಚರವಾಗಿ ಕಾಣಸಿಗುತ್ತದೆ. ಅಣ್ಣಾ ಹಜಾರೆ ಜನಲೋಕಪಾಲ ಮಸೂದೆಯ ಜಾರಿಗೆ ನಡೆಸಿದ 98ಘಂಟೆಗಳ ನಿರಶನ ಜಡ್ಡುಗಟ್ಟಿದ  ಸಂವೇದನಾಶೀಲ ಮನಸ್ಸುಗಳನ್ನು ಬಡಿದೆಬ್ಬಿಸಿದೆ, ಸಾರ್ವತ್ರಿಕವಾಗಿ ಜನಪರವಾದ ಚಳುವಳಿಗೆ 3ದಶಕಗಳ ನಂತರ ರಾಷ್ಟ್ರಾಧ್ಯಂತ ಪ್ರತಿಸ್ಪಂದನೆ ಸಿಕ್ಕಿದೆ ಎಂದರೆ ಅಷ್ಟರ ಮಟ್ಟಿಗೆ ಭ್ರಷ್ಟಾಚಾರದ ತೀವ್ರತೆ ಜನರನ್ನ ಕಾಡುತ್ತಿದೆ ಎಂದು ಅರ್ಥೈಸಬಹುದಾಗಿದೆ.ಹೀಗಿರುವಾಗ ಜನಲೋಕಪಾಲ್ ಮಸೂದೆ ಅಗತ್ಯತೆ ಏನು? ಅದರಿಂದ ನಾವು ಕಂಡ ಕನಸು ನನಸಾಗಲು ಸಾಧ್ಯವೇ? ಜನಲೋಕಪಾಲ ಮಸೂದೆ ಮಾತ್ರದಿಂದಲೇ ಭ್ರಷ್ಟಾಚಾರ ಮುಕ್ತ ವ್ಯವಸ್ಥೆ ಕಾಣಲು ಸಾಧ್ಯವೇ ಎಂಬ ವಿಚಾರಗಳನ್ನು ಅವಲೋಕಿಸಲು ಇದು ಪ್ರಶಸ್ತ ಕಾಲವೂ ಹೌದು.


         ಸ್ವತಂತ್ರ  ಭಾರತದ ಅಭಿವೃದ್ದಿಗೆ ಪ್ರಮುಖ ತೊಡಕು ಭ್ರಷ್ಟಾಚಾರ, ಭಾರತ ಭ್ರಷ್ಟ ದೇಶಗಳ ಸಾಲಿನಲ್ಲಿ 87ನೇ ಸ್ಥಾನದಲ್ಲಿ ಇದೆ. ಇವತ್ತು ದೇಶದ ಉದ್ದಗಲಕ್ಕೂ ಆಡಳಿತ ನಡೆಸುವ ಪ್ರಜಾ ಸರ್ಕಾರಗಳು ಮತ್ತು ಅಲ್ಲಿನ ಅಧಿಕಾರ ಶಾಹಿ ವ್ಯವಸ್ಥೆ ಸಾಮಾನ್ಯ ಜನರನ್ನ ಹರಿದು ತಿನ್ನುತ್ತಿವೆ. ಬಡವರಿಗೆ, ಅರ್ಹರಿಗೆ ತಲುಪಬೇಕಾದ ಸವಲತ್ತುಗಳು ತಲುಪುತ್ತಿಲ್ಲ, ಜನಸಾಮಾನ್ಯರಿಗೆ ದಕ್ಕಬೇಕಾದ ಯೋಜನೆಗಳು ಉಳ್ಳವರ ಪಾಲಾಗುತ್ತಿದೆ, ಅಧಿಕಾರಿಗಳು, ರಾಜಕಾರಣಿಗಳು ಹಗಲು ದರೋಡೆಕೋರರಾಗಿದ್ದಾರೆ. ಸ್ವತಂತ್ರ ಬಾರತದ ನಂತರ ದೇಶದ ಭ್ರಷ್ಟಾಚಾರವನ್ನು ನಿಯಂತ್ರಿಸಲು ಇರುವಂತಹ ಅನೇಕ ಸಂಸ್ಥೆಗಳು ಹಲ್ಲುಕಿತ್ತ ಹಾವಿನಂತಾಗಿವೆ. ನ್ಯಾಯದ ಪರಾಮರ್ಶೆಗೆ ವರ್ಷಗಟ್ಟಲೆ ಕಾಯಬೇಕಾಗಿದೆ, ಭ್ರಷ್ಟಾಚಾರ ನಿಯಂತ್ರಿಸುವ ಸಂಸ್ಥೆಗಳು ಆಡಳಿತಾರೂಢ ರಾಜಕಾರಣಿಗಳ ನಿಯಂತ್ರಣದಲ್ಲಿವೆ ಇಂತಹ ಸನ್ನಿವೇಶದಲ್ಲಿ ಭ್ರಷ್ಟಾಚಾರವನ್ನ ನಿಯಂತ್ರಿಸಲು ಯಾವ ಮಸೂದೆ ಬಂದರೂ ಯಾವ ಸಂಸ್ಥೆಗಳು ಬಂದರೂ ಅದು ಬೆಕ್ಕಿನ ಕೊರಳಿಗೆ ಕಟ್ಟುವ ಘಂಟೆಯಂತಾಗುತ್ತದೆ ಅಷ್ಟೆ. ಆದರೆ ಅಂತಹದ್ದೊಂದು ಸಂಸ್ಥೆ ಇದೆಯಲ್ಲ ಎಂಬ ಅಲ್ಪತೃಪ್ತಿ ಹಾಗೂ ಹುಸಿ ಭ್ರಮೆಯಲ್ಲಿ ನಮ್ಮ ಬದುಕುಗಳೂ ಮುಂದುವರೆಯುತ್ತವೆ ಎಂಬದೂ ಅರಗಿಸಿಕೊಳ್ಳಲಾಗದ ಸತ್ಯವೂ ಹೌದು. ಆದರೂ ಅಣ್ಣಾ ಹಜಾರೆ ಪ್ರತಿಪಾದಿಸುತ್ತಿರುವ ಜನ್ ಲೋಕಪಾಲ್ ಮಸೂದೆ ಪ್ರಾಮಾಣಿಕವಾಗಿ ಜಾರಿಗೆ ಬಂದುದೇ ಆದರೆ ಕಾಲಾನಂತರದಲ್ಲಿ ಬದಲಾವಣೆಯ ಪರ್ವ ಆರಂಭವಾಗುವುದೆನ್ನುವ ಅಂಶವನ್ನು ಪೂರ್ಣವಾಗಿ ತಳ್ಳಿಹಾಕುವಂತಿಲ್ಲ ಎಂಬುದು ತೃಪ್ತಿಯನ್ನು ನೀಡುತ್ತಿದೆ. 


        ಲೋಕಪಾಲ್ ಮಸೂದೆ ಹಾಗೂ ಅಣ್ಣಾ ಹಜಾರೆ  ಕುರಿತು ಮಾದ್ಯಮಗಳು ವ್ಯಾಪಕವಾಗಿ ಬರೆದಿವೆ ಆದರೂ 2010ರ ಲೋಕಪಾಲ ಮಸೂದೆ ಕುರಿತು ಕೆಲವಿಚಾರಗಳನ್ನು ಅವಲೋಕಿಸಿ ಮುಂದುವರಿಯೋಣ. ಬಹುತೇಕರಿಗೆ ತಿಳಿದಿರುವಂತೆ ಲೋಕಪಾಲ ಮಸೂದೆಗೆ 42ವರ್ಷಗಳ ಇತಿಹಾಸವಿದೆ. ಲೋಕಪಾಲ ಅಂದರೆ ಹಿಂದಿಯಲ್ಲಿ ಜನರಕ್ಷಣೆ ಎಂದಾಗುತ್ತೆ. ದೇಶದ ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ ಭ್ರಷ್ಟಾಚಾರವನ್ನು ನಿಯಂತ್ರಿಸುವ ನಿಟ್ಟಿನಲ್ಲಿ 1966ರಲ್ಲಿ ಆಡಳಿತ ಸುಧಾರಣಾ ಆಯೋಗದ ಶಿಫಾರಸ್ಸಿನಂತೆ ರಾಜ್ಯದಲ್ಲಿ ಲೋಕಾಯುಕ್ತ ಹಾಗೂ ಕೇಂದ್ರದಲ್ಲಿ 'ಲೋಕಪಾಲ' ವ್ಯವಸ್ಥೆ ತರಲು ನಿರ್ಧರಿಸಲಾಯಿತು.ಸದರಿ ಮಸೂದೆಯಲ್ಲಿ ಅದಿಕಾರಿಗಳು, ನೌಕರರು ಸೇರಿದಂತೆ ಪ್ರಧಾನಮಂತ್ರಿ, ಸಚಿವರು, ಮುಖ್ಯಮಂತ್ರಿಗಳ ವಿರುದ್ದವೂ ಭ್ರಷ್ಟಾಚಾರ ಕಂಡು ಬಂದಲ್ಲಿ ಕ್ರಮಜರುಗಿಸುವ ಅಧಿಕಾರಗಳನ್ನು ಸೇರಿಸಿತ್ತು. ಆದರೆ ಸದರಿ ಮಸೂದೆಯಿಂದ ರಾಜಕಾರಣಿಗಳನ್ನು ಕೈಬಿಟ್ಟು ಅಧಿಕಾರಿಗಳನ್ನು ಮಾತ್ರ ಬಗ್ಗು ಬಡಿಯುವ ಮಸೂದೆಗೆ ಪ್ರಸ್ತಾವನೆ ಸಲ್ಲಿಸಲಾಯಿತು.ಅದರನ್ವಯ ಲೋಕಾಯುಕ್ತ, ಸಿಎಜಿ, ಸಿವಿಸಿ, ಸಿಬಿಐ, ಚುನಾವಣಾ ಆಯೋಗ ಹೀಗೆ ಸುಮಾರು ಹತ್ತು  ಸಂಸ್ಥೆಗಳು ಕಾರ್ಯನಿರ್ವಹಿಸುವಂತೆ ಮಾಡಲಾಯಿತಾದರೂ ಅವುಗಳ ನಿಯಂತ್ರಣ ಹಾಗೂ ಅಧಿಕಾರದ ವ್ಯಾಪ್ತಿಯನ್ನು ಸೀಮಿತಗೊಳಿಸಲಾಗಿದೆ. ರಾಜಕಾರಣಿಗಳನ್ನು ಸೇರಿಸಿದ ಲೋಕಪಾಲ ಮಸೂದೆಗೆ ದೇಶದ ನಾಲ್ಕನೇ ಲೋಕಸಭೆಯಲ್ಲಿ ಅಂದರೆ 1968ರಲ್ಲಿ ಅನುಮೋದನೆ ದೊರೆಯಿತಾದರೂ ರಾಜ್ಯ ಸಭೆಯಲ್ಲಿ ಅದು ಬಿದ್ದು ಹೋಯಿತು. ಅಂದರೆ ರಾಜ್ಯ ಸಭೆಯಲ್ಲಿ ಮಂಡನೆಯಾಗುವ ವೇಳೆಗೆ 1968ರಲ್ಲಿದ್ದ ಸರ್ಕಾರ ವಿಸರ್ಜನೆಯಾಯಿತು. ನಂತರ ಅಲ್ಪಸ್ವಲ್ಪ ಬದಲಾವಣೆಗಳೊಂದಿಗೆ 1971, 1977, 1985, 1989, 1996, 1998, 2001, 2005 ಮತ್ತು 2008 ಸೇರಿದಂತೆ 10ಭಾರಿ ಲೋಕಸಭೆಯಲ್ಲಿ ಲೋಕಪಾಲ ಮಸೂದೆ ಮಂಡನೆಯಾಗಿದ್ದರೂ ಅನುಮೋದನೆಗೊಳ್ಳದೇ ಮುಂದೆ ಹೋಗಿದೆ. ಇದೀಗ 2010ರಲ್ಲಿ ಮಾಡಲಾದ ಬದಲಾವಣೆಗಳೊಂದಿಗೆ ಸದರಿ ಮಸೂದೆ ಲೋಕಸಭೆಯಲ್ಲಿ ಮಂಡನೆಗೆ ಸಿದ್ದವಾಗಿತ್ತು. ಇದರಲ್ಲಿ ಲೋಕಪಾಲ ಆಯೋಗಕ್ಕೆ ತಪ್ಪಿತಸ್ಥರ ವಿರುದ್ದ ನೇರವಾಗಿ ಕ್ರಮ ಜರುಗಿಸುವ ಹಕ್ಕು ಇಲ್ಲ, ಕೇವಲ ಸಲಹಾ ಸಮಿತಿ ಯಾಗಿ ಕಾರ್ಯ ನಿರ್ವಹಿಸುತ್ತದೆ, ಕ್ರಮಜರುಗಿಸಲು ಪ್ರಥಮ ಮಾಹಿತಿ ವರದಿ ತಯಾರಿಸಲು ಅವಕಾಶ ಇಲ್ಲ, ಕಡಿಮೆ ಕಾಲಾವಧಿಯ ಶಿಕ್ಷೆಗೆ ಮಾತ್ರ ಶಿಪಾರಸ್ಸು ಮಾಡಬಹುದಾಗಿರುತ್ತೆ ಎಂಬುದಾಗಿದೆ. ಆದರೆ ಸುಪ್ರೀಂಕೋರ್ಟು ನ್ಯಾಯಾಧಿಶ ಶಾಂತಿಭೂಷಣ್, ನಿವೃತ್ತ ಪೋಲೀಸ್ ಅಧಿಕಾರಿ ಕಿರಣ್ ಬೇಡಿ ಮತ್ತಿತರರು ರಚಿಸಿಕೊಂಡಿರುವ "ಭ್ರಷ್ಟಾಚಾರದ ವಿರುದ್ದದ ಭಾರತ" ಸಮಿತಿಯು ಲೋಕಪಾಲ ಮಸೂದೆಯ ಜನವಿರೋದಿ ನೀತಿಯನ್ನು ಬದಲಿಸಿ ಹೊಸ ನೀತಿಯನ್ನು ರೂಪಿಸಿದೆ. ಅದರಲ್ಲಿ ಪ್ರಮುಖವಾಗಿ ಭ್ರಷ್ಟಾಚಾರದಲ್ಲಿ ಪಾಲ್ಗೊಂಡ ಯಾವುದೇ ಜನಪ್ರತಿನಿಧಿ, ಅಧಿಕಾರಿ/ನೌಕರರ ವಿರುದ್ದ ಸ್ವತಂತ್ರವಾಗಿ ಕ್ರಮಜರುಗಿಸುವ ಹಕ್ಕು ಸೇರಿದಂತೆ ಜನಪ್ರತಿನಿಧಿಗಳನ್ನು ವಾಪಾಸು ಕರೆಸಿಕೊಳ್ಳುವ ಹಕ್ಕು ಮತ್ತು ಸಮಿತಿಯಲ್ಲಿ ಸಾಮಾನ್ಯ ಜನರಿಗೆ ಸ್ಥಾನಮಾನಗಳನ್ನು ನೀಡುವ ಬಗ್ಗೆ ಪ್ರತಿಪಾದಿಸಿದೆ. ಇಂತಹದ್ದೊಂದು ವ್ಯವಸ್ಥೆ ಹಾಂಕಾಂಗ್ ನಲ್ಲಿ ಜಾರಿಯಲ್ಲಿದ್ದು ಅದೇ ಮಾದರಿಯನ್ನು ಭಾರತೀಯ ಪ್ರಜಾತಾಂತ್ರಿಕ ವ್ಯವಸ್ಥೆಗೆ ಆಗುವಂತೆ ಒಗ್ಗಿಸಿಕೊಂಡು ನೀತಿ ನಿಯಮಗಳನ್ನು ಪರಿಣಾಮಕಾರಿಯಾಗಿ ವ್ಯಕ್ತಪಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅಣ್ಣಾ ಹಜಾರೆ ಸದರಿ ಪರಿಷ್ಕೃತ ಮಾದರಿಯ ಜನಲೋಕಪಾಲ ಮಸೂದೆ ಜಾರಿಗೆ ಬರಬೇಕೆಂದು ಜಂತರ್ ಮಂತರ್ ನಲ್ಲಿ ನಡೆಸಿದ ನಿರಶನ ಆಶಾದಾಯಕವಾದ ಫಲಿತಾಂಶವನ್ನು ನಿರೀಕ್ಷಿಸುವಂತೆ ಮಾಡಿದೆ. ಆಗಸ್ಟ್ 15ರವರೆಗೆ ನೀಡಲಾಗಿರುವ ಅಂತಿಮ ಗಡುವಿನಲ್ಲಿ ಜನಲೋಕಪಾಲ ಮಸೂದೆಯ ಸಮರ್ಪಕವಾಗಿ ಸಮಾಜ ಮುಖಿಯಾಗಿ ಜಾರಿಗೆ ಬರಬೇಕಾಗಿದೆ. 


          ಜನಲೋಕಪಾಲ ಮಸೂದೆ  ನಿರೀಕ್ಷಿತ ರೀತಿಯಲ್ಲಿ ಜಾರಿಗೆ ಬಂದರೂ ಅದರ ಪರಿಣಾಮಗಳು ಕೊಂಚ ಮಟ್ಟಿಗಾದರೂ ಜನಸಾಮಾನ್ಯರಿಗೆ ತಗುಲಿರುವ ಭ್ರಷ್ಟಾಚಾರದ ಬಿಸಿಯನ್ನು ತಗ್ಗಿಸಬಹುದು. ಯಾವುದೇ ವ್ಯವಸ್ಥೆ ಬಂದರೂ ಅಲ್ಲಿ ತೀವ್ರಗತಿಯ ಬದಲಾವಣೆಗಳನ್ನು ತತ್ ಕ್ಷಣದಿಂದ ನಿರೀಕ್ಷಿಸಲು ಸಾಧ್ಯವಿಲ್ಲ. ಇಲ್ಲಿ ಜನರ ಪಾಲ್ಗೊಳ್ಳುವಿಕೆ ಮತ್ತು ಪರಿವರ್ತಿತ ಜಾಗೃತ ಮನಸ್ಥಿತಿಯೂ ಅತ್ಯಗತ್ಯವಾಗಿದೆ. ಚಳುವಳಿಗಳು ಕ್ರಾಂತಿ ಮಾಡುತ್ತವೆ ಎಂಬುದು 4ದಶಕಗಳ ಹಿಂದಿನ ಮಾತು, ಆದರೆ ವ್ಯವಸ್ಥೆಯ ಕ್ರೂರ ನಡವಳೀಕೆಗಳು ಎಂಥಹ ಕಾಲಕ್ಕೂ ಕ್ರಾಂತಿ ಮಾಡಲು ಪ್ರೇರೇಪಣೆಯಾಗಿರುತ್ತವೆ ಎಂಬುದು ಸಹಾ ತಳ್ಳಿಹಾಕಲು ಆಗದ ಮಾತು. ಅದಕ್ಕೆ ಪೂರಕವಾದ ಮನಸ್ಥಿತಿಯನ್ನು ಸಹಾ ಈ ವ್ಯವಸ್ಥೆಯೇ ಸೃಜಿಸುತ್ತದೆ ಹಾಗಾಗಿಯೇ ಅಣ್ಣಾ ಹಜಾರೆಯಂತಹವರ ಹೋರಾಟಗಳು ಶಕ್ತಿ ತುಂಬುವ ಕ್ರಿಯೆಗಳಾಗುತ್ತವೆ, ಬದಲಾವಣೆಯ ಕನಸು ಕಾಣಲು ಅವಕಾಶ ಮಾಡುತ್ತವೆ. ವ್ಯವಸ್ಥೆಯ ಸುಧಾರಣೆ ಒಬ್ಬರಿಂದ ಸಾಧ್ಯವಿಲ್ಲ, ಅಲ್ಲಿನ ದೋಷಗಳ ವಿರುದ್ದ ಪ್ರತಿಭಟಿಸಲು ಸಂಘಟನಾತ್ಮಕ ಚಳುವಳಿ ಬೇಕು.  ಇಲ್ಲಿ ಅಣ್ಣಾ ಹಜಾರೆ ಒಂದು ನಿಮಿತ್ತ ಶಕ್ತಿಯಷ್ಟೇ, ಇದೇ ಚಳುವಳಿಯನ್ನ ದೇಶದ ಸಾಮಾನ್ಯ ಪ್ರಜೆ ಮಾಡಲು ಹೊರಟ್ಟಿದ್ದರೆ ಅದಕ್ಕೆ ಕಿಲುಬು ಕಾಸಿನ ಕಿಮ್ಮತ್ತು ಸಿಗುತ್ತಿರಲಿಲ್ಲ, ಆದರೆ ಅಣ್ಣಾಹಜಾರೆಯ ಹಿನ್ನೆಲೆ, ಗಟ್ಟಿತನ, ಪ್ರಾಮಾಣಿಕತೆ ಮತ್ತು ಹೋರಾಟ ಸಂವೇದನಾಶೀಲ ಮನಸ್ಸುಗಳನ್ನು ಒಗ್ಗೂಡಿಸಿದೆ. ಆ ಮೂಲಕ ಸತ್ತು ಮಲಗಿದ್ದ ಸ್ವಾಭಿಮಾನವನ್ನ ಜಾಗೃತಗೊಳಿಸಿದೆ ಅದಕ್ಕೆ ಎಷ್ಟು ಕೃತಜ್ಞತೆ ಹೇಳಿದರೂ ಸಾಲದು ಅಲ್ಲವೇ?

Sunday, April 3, 2011

ದೇಶಪ್ರೇಮವೆಂದರೆ ಕ್ರಿಕೆಟ್ ಆಟವೇ?



       ಅದು 1700ನೇ ಇಸ್ವಿ..ಮೊಘಲರು ಮತ್ತು ಪೋರ್ಚುಗೀಸರೂ ಬಂದು ಹೋದ ನಂತರ ಭಾರತಕ್ಕೆ ಬಂದ ಬ್ರಿಟೀಷರು ತಮ್ಮ ವ್ಯಾಪಾರ-ವಹಿವಾಟಿನ ಜೊತೆ ವಿದೇಶಿ ಆಟ ಕ್ರಿಕೇಟ್ ಅನ್ನು ಸಹಾ ಭಾರತಕ್ಕೆ ತಂದಿದ್ದರು. ಹಂತಹಂತವಾಗಿ ಬಂದು ತಳವೂರಿದ ಕೆಂಪುಮೂತಿಯ ಆಂಗ್ಲರು ಕ್ರಿಕೆಟ್ ಅನ್ನು ಸಹಾ ಭಾರತೀಯರಿಗೆ ಪರಿಚಯಿಸಿದರು. ಹೀಗೆ ನಮ್ಮ ನೆಲಕ್ಕೆ ಕ್ರಿಕೆಟ್ ತಂದ ಆಂಗ್ಲರು ಒಮ್ಮೆಯೂ ವಿಶ್ವ ಚಾಂಪಿಯನ್ ಆಗಲಿಲ್ಲ..ಆದರೆ ಭಾರತ 2ನೇ ಭಾರಿಗೆ ತನ್ನ ಚಕ್ರಾಧಿಪತ್ಯವನ್ನು ಸ್ಥಾಪಿಸಿದೆ. ಹೀಗೆ ನಮ್ಮ ದೇಶದ ಸಾಂಪ್ರದಾಯಿಕ ಆಟವೂ ಅಲ್ಲದ ಕ್ರಿಕೆಟ್ ನಲ್ಲಿ ಭಾರತ ಮೆರೆದದ್ದು ಹೇಗೆ? ಅದು ಕ್ರಿಕೆಟ್ ನಲ್ಲಿ ಸಾಗಿ ಬಂದ ಹಾದಿ ಏನು? ದೇಶದ ಕ್ರಿಕೆಟ್ ಆಟಕ್ಕೂ ದೇಶಭಕ್ತಿಗೂ ಏನು ಸಂಬಂಧ? ಸಾಂಪ್ರದಾಯಿಕ ಕ್ರೀಡೆಗಳು ಯಾಕೆ ದೇಶಪ್ರೇಮದ ಸಂಕೇತವಾಗಿ ಉಳಿದಿಲ್ಲ? ಬದಲಾದ ಮನಸ್ಥಿತಿಯಲ್ಲಿ ಕ್ರಿಕೆಟ್ ನ ಪ್ರಾಮುಖ್ಯತೆ ಏನು ಎಂಬ ಪ್ರಶ್ನೆಗಳು ಈ ಸಂಧರ್ಭದಲ್ಲಿ ಸಹಜವಾಗಿ ಬಂದು ನಿಲ್ಲುತ್ತಿವೆ. ಈ ಪ್ರಶ್ನೆಗಳಿಗೆ ಉತ್ತರ ಕಂಡು ಕೊಳ್ಳುವ ನಿಟ್ಟಿನಲ್ಲಿ ಸಾಗುವ ಮುನ್ನ ದೇಸೀ ಕ್ರಿಕೆಟ್ ನ ಒಂದು ಸಣ್ಣ ಅವಲೋಕನ ಮಾಡೋಣ.

           ಯುಗಾದಿಯ ಮುನ್ನಾ ದಿನ ಧೋನಿ ಪಡೆ ನಿರೀಕ್ಷಿತ ರೀತಿಯಲ್ಲಿ ಗೆಲುವು ದಾಖಲಿಸುವ ಮೂಲಕ ಕೋಟ್ಯಾಂತರ ಕ್ರಿಕೆಟ್ ಪ್ರೇಮಿಗಳಲ್ಲಿ ಪುಳಕ ಮೂಡಿಸಿದೆ. ಕ್ರಿಕೆಟ್ ಜಗತ್ತಿಗೆ ಅದ್ವಿತೀಯನಾಗಿ ಹೆಜ್ಜೆ ಗುರುತನ್ನು ಎರಡನೇ ಭಾರಿಗೆ ದಾಖಲಿಸಿದೆ. ಇವತ್ತು ಕ್ರಿಕೇಟ್ ಜಗತ್ತಿನ ಅತ್ಯಂತ ಶ್ರೀಮಂತ ಆಟ, ಜಾಗತಿಕವಾಗಿ ಕ್ರಿಕೆಟ್ ಆಟಕ್ಕೆ ಮಿಲಿಯನ್ ಲೆಕ್ಕದಲ್ಲಿ ಹಣದ ಹೊಳೆ ಹರಿಯುತ್ತದೆ. ಇಂತಿಪ್ಪ ಕ್ರಿಕೆಟ್ ಭಾರತದಲ್ಲಿ ಆರಂಭಗೊಂಡಿದ್ದು 1700ರಲ್ಲೇ ಆದರೂ ಮೊದಲ ಕ್ರಿಕೆಟ್ ಮ್ಯಾಚ್ ನಡೆದದ್ದು ಮಾತ್ರ 1721ರಲ್ಲಿ. 1848ರಲ್ಲಿ ಪಾರ್ಸಿ ಸಮುದಾಯದವರು ಬಾಂಬೆಯಲ್ಲಿ ಓರಿಯಂಟಲ್ ಕ್ರಿಕೆಟ್ ಕ್ಲಬ್ ಸ್ಥಾಪಿಸಿ ಕ್ರಿಕೆಟ್ ಆಟದ ಪ್ರೋತ್ಸಾಹಕ್ಕೆ ಮುನ್ನುಡಿ ಬರೆದರು. ಕಾಲಾನುಕ್ರಮದಲ್ಲಿ 1877ರ ಸುಮಾರಿಗೆ ಯೂರೋಪಿಯನ್ನರು ಭಾರತದಲ್ಲಿದ್ದ ಪಾರ್ಸಿಗಳನ್ನ (ಆಗಿನ್ನೂ ಅಖಂಡ ಭಾರತದ ಕಲ್ಪನೆ ಇರಲಿಲ್ಲ ಹಾಗಾಗಿ ಭಾರತೀಯ ಪದದ ಬಳಕೆ ಸರಿ ಕಾಣಲಾರದೇನೋ). ಮುಂದೆ 1912ರ ಹೊತ್ತಿಗೆ ಬಾಂಬೆಯ ಪಾರ್ಸಿಗಳು, ಮುಸ್ಲಿಂರು, ಹಿಂದೂಗಳು ಮತ್ತು ಸಿಖ್ಖರು ಪ್ರತ್ಯೇಕ ತಂಡಗಳನ್ನು ಮಾಡಿಕೊಂಡು ಯೂರೋಪಿಯನ್ನರ ಜೊತೆ ಕ್ರಿಕೆಟ್ ಆಡಲು ಆರಂಬಿಸಿದರು. 19ನೇ ಶತಮಾನದಲ್ಲಿ ಅನೇಕ ಭಾರತೀಯ ಪ್ರತಿಭಾವಂತ ಕ್ರಿಕೆಟಿಗರು ಇಂಗ್ಲೀಷ್ ಕ್ರಿಕೆಟ್ ಟೀಂ ನಲ್ಲಿ ಆಡಲಾರಂಭಿಸಿದರು, ಇವರಲ್ಲಿ ಪ್ರಮುಖರು ರಣಜಿತ್ ಸಿಂಹಜೀ ಮತ್ತು ಕೆ ಎಸ್ ದುಲೀಪ್ ಸಿಂಹಜೀ. ಇವರ ಆಟದ ಸೊಗಸು ಮತ್ತು ಸಾಧನೆಯೇ ಮುಂದೆ 'ರಣಜಿ ಟ್ರೋಫಿ' ಹಾಗೂ ದುಲೀಪ್ ಟ್ರೋಫಿ ಎಂಬ ಸರಣಿ ಟೆಸ್ಟ್ ಮ್ಯಾಚುಗಳ ಉಗಮಕ್ಕೆ ನಾಂದಿ ಹಾಡಿತು. ಇಂದಿಗೂ ರಣಜಿ ಟ್ರೋಫಿ ಮತ್ತು ದುಲೀಪ್ ಟ್ರೋಪಿಗಾಗಿ ಕ್ರಿಕೆಟ್ ತಂಡಗಳು ಸೆಣೆಸುವುದನ್ನು ಕಾಣಬಹುದು. 1911ರಲ್ಲಿ ಭಾರತದಿಂದ ಅಧಿಕೃತವಾಗಿ ಇಂಗ್ಲೆಂಡಿಗೆ ಹೋದ ಕ್ರಿಕೆಟ್ ತಂಡಕ್ಕೆ ಇಂಗ್ಲೀಷ್ ಕ್ರಿಕೆಟ್ ಟೀಮ್ ಜೊತೆ ಆಡುವ ಸದವಕಾಶ ಸಿಗದೇ ನಿರಾಶೆ ಅನುಭವಿಸ ಬೇಕಾಯಿತು  ಮತ್ತು ಇಂಗ್ಲೀಷ್ ಕೌಂಟಿ ಜೊತೆ ಆಟವಾಡಿ ಅಷ್ಟಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು. ನಂತರ 1926ರಲ್ಲಿ ಇಂಪೀರಿಯಲ್ ಕ್ರಿಕೆಟ್ ಕೌನ್ಸಿಲ್ ನಿಂದ ಆಹ್ವಾನಿತಗೊಂಡ ಭಾರತ ಕ್ರಿಕೆಟ್ ತಂಡ   ಸಿ ಕೆ ನಾಯ್ಡು ನಾಯಕತ್ವದಲ್ಲಿ ಮೊದಲ ಟೆಸ್ಟ್ ಪಂದ್ಯಗಳನ್ನು ಆಡಲು ಆರಂಭಿಸಿತು. ಆದರೆ ಗೆಲುವು ಬಿಸಿಲ್ಗುದುರೆಯಾಗಿ ಪರಿಣಮಿಸಿತ್ತು. 3ದಿನಗಳು ನಡೆಯುತ್ತಿದ್ದ ಮ್ಯಾಚುಗಳಲ್ಲಿ ರನ್ ಗಳಿಸಲು ಹರಸಾಹಸ ಮಾಡಬೇಕಾಗುತ್ತಿತ್ತ್ಗು.ಸ್ವಾತಂತ್ರ್ಯ ನಂತರ 1948ರಲ್ಲಿ ಅಧಿಕೃತವಾಗಿ ಆಸ್ಟ್ರೇಲಿಯ ವಿರುದ್ದ ಸರಣಿಯಲ್ಲೂ ಭಾರತ 4-0ಸಾಧನೆ ಮಾಡಿತ್ತು. 
            ಆದರೆ ಭಾರತದ ಪಾಲಿಗೆ ಸಂತಸದ ದಿನಗಳು ಬರಲೇ ಇಲ್ಲ ಅಂತಲ್ಲ, 1952ರಲ್ಲಿ ಮದ್ರಾಸ್ ನಲ್ಲಿ ಕ್ರಿಕೆಟ್ ತವರೂರಿನ ಇಂಗ್ಲೆಂಡ್ ತಂಡದ ವಿರುದ್ದ ಅಭೂತ ಪೂರ್ವ ಜಯವನ್ನು ಟೆಸ್ಟ್ ನಲ್ಲಿ ಮೊದಲ ಭಾರಿಗೆ ದಾಖಲಿಸಲಾಯಿತು. ನಂತರ ಗೆಲುವಿನ ಸಾಧನೆ ಮುಂದುವರೆಸಿದ ತಂಡ ಪಾಕೀಸ್ತಾನ, ನ್ಯೂಜಿಲೆಂಡ್ ಗಳ ವಿರುದ್ದವೂ ವಿಜಯ ಕಹಳೆಯನ್ನು ಮೊಳಗಿಸಿದ್ದು ಈಗ ಇತಿಹಾಸ. 1971ರಲ್ಲಿ ಆರಂಭಗೊಂಡ ಒಂದು ದಿನದ ಸೀಮಿತ ಓವರ್ ನ ಕ್ರಿಕೆಟ್ ಪಂದ್ಯಗಳು ಆರಂಭಗೊಂಡವು, 1975ರಲ್ಲಿ ಮೊದಲ ವಿಶ್ವಕಪ್ ಪಂದ್ಯ ನಡೆದಾಗ ಭಾರತ ಅಲ್ಲಿಯೂ ಇಂಗ್ಲೆಂಡನ್ನು ಎದುರಿಸಿತ್ತು. ಮುಂದೆ 1983ರಲ್ಲಿ ಪ್ರುಡೆನ್ಸಿಯಲ್ ವಿಶ್ವಕಪ್ ಅನ್ನು ಕಪಿಲ್ ದೇವ್ ನೇತೃತ್ವದಲ್ಲಿ ಭಾರತ ತನ್ನದಾಗಿಸಿಕೊಂಡು ಐತಿಹಾಸಿಕ ದಾಖಲೆ ನಿರ್ಮಿಸಿತು. ಈಗ 28ವರ್ಷಗಳ ನಂತರ ಕಪ್ತಾನ ಮಹೇಂದ್ರ ಸಿಂಗ್ ದೋನಿ ನಾಯಕತ್ವದಲ್ಲಿ ಪುನಹ ಕಪ್ ಪಡೆಯುವ ಮೂಲಕ ಕ್ರಿಕೆಟ್ ಜಗತ್ತಿನಲ್ಲಿ ದಿಗ್ವಿಜಯ ದಾಖಲಿಸಿದೆ. 
             ಭಾರತದ ರಾಷ್ಟ್ರೀಯ ಕ್ರೀಡೆ ಹಾಕಿ, ಆದರೆ ದೇಶದಲ್ಲಿ ಅತೀ ಹೆಚ್ಚು ಜನಪ್ರಿಯವಾಗಿರುವುದು ಕ್ರಿಕೆಟ್ ಅದಕ್ಕೆ ಕಾರಣ ಕ್ರಿಕೆಟ್ ನ ಜನಪ್ರಿಯತೆ. ಇವತ್ತು ಕ್ರಿಕೆಟ್ ಒಂದು ಅಂತರ ರಾಷ್ಟ್ರೀಯ ಕ್ರೀಡೆ, ಅದು ಸೋಮಾರಿಗಳ ಆಟ, 12ಜನ ಮೂರ್ಖರು ಆಡುವ ಆಟ ಎಂದೆಲ್ಲ ಜರಿದರೂ ಕ್ರಿಕೆಟ್ ನ ಪ್ರಾಶಸ್ತ್ಯ ಕಳೆದುಕೊಂಡಿಲ್ಲ. ಕ್ರಿಕೆಟ್ ಗೆ ಮಿಲಿಯನ್ ಡಾಲರ್ ವ್ಯವಹಾರ ಕುದುರಿಸುವ ಛಾತಿಯಿದೆ ಹಾಗಂತಲೇ ಅದು ಜಗತ್ತಿನ ಬಹುತೇಕ ಮನೆಗಳ ಅಂಗಳಕ್ಕೆ ಕ್ರಿಕೆಟ್ ಅನ್ನು ಜಾಹೀರಾತಿನ ಮೂಲಕ ತಲುಪಿಸುತ್ತಿದೆ. ಬಹುಶ ಕ್ರಿಡೆಗಳಲ್ಲಿ ಬೇರೆ ದೇಶಗಳೊಂದಿಗೆ ಭಾವನಾತ್ಮಕವಾಗಿ ಬೆಸೆದುಕೊಳ್ಳಲು ಕ್ರಿಕೆಟ್ ಮೂಲಕ ಸಾಧ್ಯವಾಗಿರುವುದರಿಂದ ಮತ್ತು ದೇಶದ ವಿರೋಧಿ ರಾಷ್ಟ್ರಗಳೆಂದೆ ಪರಿಗಣಿಸಲ್ಪಡುತ್ತಿದ್ದ ಇಂಗ್ಲೆಂಡ್, ಪಾಕೀಸ್ತಾನ ದಂತಹ ದೇಶಗಳ ಕ್ರಿಕೆಟ್ ತಂಡವನ್ನು ಸದೆ ಬಡಿಯುವ ಮೂಲಕ ಆತ್ಮತೃಪ್ತಿ ಹೊಂದುವ ಭಾರತ ದೇಶದ ಪ್ರಜೆಗಳು ಕ್ರಿಕೆಟ್ ಅನ್ನು ದೇಶಪ್ರೇಮದ ದ್ಯೋತಕವೆಂದೆ ಭಾವಿಸಬಹುದಲ್ಲವೇ? ಅದು ಅನ್ಯದೇಶದಿಂದ ಬಂದ ಆಟವಾದರೂ ಈಗ ಅದಕ್ಕೆ ದೇಶದಲ್ಲಿ 6ಶತಮಾನದ ಇತಿಹಾಸವಿರುವುದರಿಂದ ಮತ್ತು ಅದರ ಮೇಲೆ ಹಿಡಿತ ಸಾಧಿಸಿರುವುದರಿಂದ ಕೊಂಚಮಟ್ಟಿಗೆ ದೇಶಪ್ರೇಮದ ಭಾಗವಾಗಿ ಕ್ರಿಕೆಟ್ ಅಂದುಕೊಳ್ಳಬಹುದು. ನಮಗೆ ನೋವು ಕೊಟ್ಟವರು ಮತ್ತು ಕೊಡುತ್ತಿರುವವರ(ಇಂಗ್ಲೆಂಡ್ ಮತ್ತು ಪಾಕೀಸ್ತಾನ್)ವಿರುದ್ದ ಸರಿ ಸಾಟಿ ಅಂದುಕೊಳ್ಳಲು ಕ್ರಿಕೆಟ್ ಒಂದು ಅಸ್ತ್ರವಷ್ಟೆ. ಹಾಗಾಗಿಯೇ ಇವತ್ತು ದೇಶದ ಪ್ರತಿ ಮನೆ ಮನೆಗಳಲ್ಲಿಯೂ  ಕ್ರಿಕೆಟ್ ಆಡಲು, ನೋಡಲು ಹವಣಿಸುವ ಮಂದಿಯಿದ್ದಾರೆ. ಬಹುಶ: ಅಲ್ಲಿ ಸಿಗುವ ಜನಪ್ರಿಯತೆ, ದುಡ್ಡು, ಪ್ರಚಾರ, ಘನತೆ-ಗೌರವ ಕ್ರಿಕೆಟ್ ಸೆಳೆತಕ್ಕೆ ಕಾರಣ ಎಂದು ಕೆಲವರು ಹೇಳುತ್ತಾರಾದರೂ ಆಂತರಿಕವಾಗಿ, ಸ್ವಾಭಿಮಾನದ ಪ್ರತೀಕವಾಗಿ ದೇಶಪ್ರೇಮದ ಕಿಚ್ಚು ಬಡಿದೆಬ್ಬಿಸುವುದು ಮಾತ್ರ ಕ್ರಿಕೆಟ್ ಎಂಬುದು ಸತ್ಯವೇ ಆಗಿದೆ. ಸಾಂಪ್ರದಾಯಿಕ ಕ್ರೀಡೆಗಳಿಗೆ ಜಾಗತಿಕವಾಗಿ ಸೆಳೆಯುವ ಗುಣ ವಿಲ್ಲದಿರುವುದು, ಆರ್ಥಿಕ ಸಹಾಯದ ಪ್ರೋತ್ಸಾಹ ದೊರಕದಿರುವುದು, ಸರ್ಕಾರ ಮತ್ತು ವ್ಯಾವಹಾರಿಕ ವಲಯದ ಉದಾಸೀನ ಧೋರಣೆ ಕಾರಣವಾಗಬಹುದು. ಈ ನಡುವೆ ಜಾಗತಿಕವಾಗಿ ಎಲ್ಲೆಡೆಯೂ ಕ್ರಿಕೆಟ್ ಗೆ ಸ್ತಾನ ವಿರುವುದೇ ಅದನ್ನು ದೇಶಪ್ರೇಮದ ಭಾಗವಾಗಿಯೂ ಕಾಣಲು ಸಾಧ್ಯವಾಗಿದೆ.

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...