Sunday, August 28, 2011

ಗಾಂಧೀ ಮಾರ್ಗಕ್ಕೆ ದಕ್ಕಿದ ಗೆಲುವು!

ಗಾಂಧೀ ಮಾರ್ಗದ ಅಹಿಂಸಾತ್ಮಕ ಹೋರಾಟಕ್ಕೆ ಆರೂವರೆ ದಶಕಗಳ ನಂತರ ಮೊದಲ ಹಂತದ ಗೆಲುವು ದಕ್ಕಿದೆ. ಅಷ್ಟರಮಟ್ಟಿಗೆ ಅಣ್ಣಾ ಹಜಾರೆ ನೇತೃತ್ವದ ಭ್ರಷ್ಟಾಚಾರ ವಿರೋಧಿ ಹೋರಾಟ ಮತ್ತು ಜನಲೋಕಪಾಲ್ ಮಸೂದೆಯ ಅನುಷ್ಠಾನದ ಆಗ್ರಹ ಗಟ್ಟಿತನವನ್ನ ಉಳಿಸಿಕೊಂಡಿದೆ. ಕಳೆದ ಏಪ್ರಿಲ್ ನಲ್ಲಿ ಜನಲೋಕಪಾಲ್ ಮಸೂದೆಯ ಕರಡು ರಚನೆಗೆ ಆಗ್ರಹಿಸಿ ಅಣ್ಣಾ ನೇತೃತ್ವದ ತಂಡ ಚಳುವಳಿ ನಡೆಸಿತ್ತು. ಆಗ ದೊರೆತ ಅಭೂತ ಪೂರ್ವ ಬೆಂಬಲವನ್ನ ಅನಾಮತ್ತಾಗಿ ಹೈಜಾಕ್ ಮಾಡಲು ಹೊರಟ ಯೋಗ ಗುರು ಬಾಬಾ ರಾಮದೇವ ನೈತಿಕತೆ ಕಳೆದುಕೊಂಡು ಮೂಲೆಗುಂಪಾಗಿದ್ದು ಈಗ ಇತಿಹಾಸ. ನೈತಿಕತೆಯನ್ನ, ಸಿದ್ದಾಂತವನ್ನ ಯಾವ ಚಳುವಳಿಗಳು ಉಳಿಸಿಕೊಳ್ಳುತ್ತವೋ ಅದಕ್ಕೆ ಯಾವತ್ತಿದ್ದರೂ ಗೆಲುವು ಎಂಬುದಕ್ಕೆ ಅಣ್ಣಾ ಹಜಾರೆಯ 13ದಿನಗಳ ಶಾಂತಿಯುತ ಉಪವಾಸ ಸತ್ಯಾಗ್ರಹ ಇವತ್ತು ನಮ್ಮ ಕಣ್ಣೆದುರಿಗಿದೆ. ಈ ಸಂಧರ್ಭದಲ್ಲಿ ಚಳುವಳಿಯ ಕುರಿತು ಬುದ್ದಿ ಜೀವಿಗಳೆನಿಸಿಕೊಂಡವರಿಂದ, ರಾಜಕೀಯ ಪಕ್ಷಗಳ ಮುಖಂಡರಿಂದ, ಅಧಿಕಾರ ರೂಢರಿಂದ ನಾನಾ ರೀತಿಯ ಟೀಕೆಗಳು ಮತ್ತು ವಿಮರ್ಶೆಗಳು ಬಂದಿವೆ. ಚಳುವಳಿಗಳಲ್ಲಿ ಎಂಥಹವರು ಪಾಲ್ಗೊಂಡರು? ಯಾರು ಎಷ್ಟೆಷ್ಟು ವಿಚಾರ ಅರಿತಿದ್ದರು?ಅಂಥಹವರು ಚಳುವಳಿಗೆ ಯಾಕೆ ಬಂದರು? ಅಷ್ಟಕ್ಕೂ ಲೋಕಪಾಲ ಮಸೂದೆ ಜಾರಿಗೆ ಬಂದ ತಕ್ಷಣ ಭ್ರಷ್ಟಾಚಾರದ ಭೂತ ಓಡಿಸಲು ಸಾಧ್ಯವಾದೀತೆ? ಎಂಬೆಲ್ಲಾ ಪ್ರಶ್ನೆಗಳಿಗೆ ಉತ್ತರ ಕಂಡು ಕೊಳ್ಳುವ ಅವಶ್ಯಕತೆ ಇದೆ.


ಇವತ್ತು ವ್ಯಾಪಕವಾಗಿ ಚರ್ಚೆಯಾಗುತ್ತಿರುವ ಜನಲೋಕಪಾಲ್ ಮಸೂದೆಗೆ ನಾಲ್ಕೂವರೆ ದಶಕಗಳ ಇತಿಹಾಸವಿದೆ. ಆದಾಗ್ಯೂ ಅಧಿಕಾರ ಷಾಹಿಗಳ ಕುತಂತ್ರದಿಂದಾಗಿ ಅದಕ್ಕೊಂದು ಸ್ಪಷ್ಟರೂಪ ಕೊಡುವ ಪ್ರಯತ್ನಕ್ಕೆ ಸರಿಯಾದ್ದೊಂದು ಅವಕಾಶ ದಕ್ಕಿರಲಿಲ್ಲ.ಆದರೆ ಅಣ್ಣಾ ಹಜಾರೆ ನೇತೃತ್ವದಲ್ಲಿ ಬದ್ದತೆಯ ಹೋರಾಟಕ್ಕೆ ಕೊಂಚ ಮಟ್ಟಿಗೆ ಗೆಲುವು ಸಿಕ್ಕಿದೆ. ಜನಲೋಕಪಾಲ ಮಸೂದೆ ಜಾರಿಗೆ ಬಂದಾಕ್ಷಣ ದೇಶದ ಆಡಳಿತ ವ್ಯವಸ್ತೆಯಲ್ಲಿ ಅಭೂತಪೂರ್ವ ಬದಲಾವಣೆ ಆಗಿಬಿಡುತ್ತದೆ ಲಂಚದ ಸಮಸ್ಯೆ ನಿವಾರಣೆಯಾಗುತ್ತದೆ, ಸ್ವಿಸ್ ಬ್ಯಾಂಕಿನಲ್ಲಿ ಇಟ್ಟಿರುವ 1461ಕೋಟಿಗೂ ಹೆಚ್ಚಿನ ಬೇನಾಮಿ ಹಣ ಪುಕ್ಕಟ್ಟೆಯಾಗಿ ಸಿಕ್ಕುಬಿಡುತ್ತೆ ಅದನ್ನು ಪ್ರತೀ ಹಳ್ಳಿಗೆ ತಲಾ 61ಕೋಟಿಯಂತೆ ಹಂಚಬಹುದು, ಅಬಿವೃದ್ದಿ ಕಾರ್ಯಕ್ಕೆ ಬಳಸಬಹುದು, ಅದೆಷ್ಟೋ ವರ್ಷ ಪುಕ್ಕಟ್ಟೆಯಾಗಿ ವಿದ್ಯುತ್ ಸರಬರಾಜು ಮಾಡಬಹುದು ಆಗ ಭಾರತ ದೇಶದ ಭವಿಷ್ಯ ಉಜ್ವಲವಾಗಿ ಬಿಡುತ್ತೆ ಅನ್ನೊ ಮೂರ್ಖತನದ ಮೂರ್ಖರ ಎಸ್ ಎಂ ಎಸ್ ಗಳು ಹರಿದಾಡಿ ಬಿಟ್ಟವು ಲಾಭವಾಗಿದ್ದು ಮಾತ್ರ ಮೆಸೆಜು ಸರ್ವಿಸ್ ನೀಡಿದ ಮೊಬೈಲು ಕಂಪೆನಿಗಳಿಗೆ! ಅದೇ ರೀತಿ ಇನ್ನೊಂದು ಮೂರ್ಖರ ಗುಂಪು ಅಣ್ಣಾ ಹಜಾರೆ ಕೇವಲ 7ನೇ ತರಗತಿ ಓದಿದ ನಿರಕ್ಷರಕುಕ್ಷಿ, ಭೂಮಿಯ ಮೇಲಿನ ರಕ್ಕಸ! ಸಂವಿಧಾನ ಶಿಲ್ಪಿ ಅಂಬೇಡ್ಕರ್ ಬರೆದಿರುವ ಸಂವಿಧಾನವನ್ನೇ ತಿದ್ದಲು ಆರ್ ಎಸ್ ಎಸ್ ನೊಂದಿಗೆ ರಹಸ್ಯ ಒಪ್ಪಂದ ಮಾಡಿಕೊಂಡ ಒಬ್ಬ ಕೋಮುವಾದಿ ಎಂದು ಜರೆಯುವ ಮೆಸೆಜನ್ನು ಕಿಡಿಗೇಡಿಗಳು ಹರಿಯ ಬಿಟ್ಟಿದ್ದರು. ವಿ.ಕ ದ ದೆಹಲಿಯ ಹಿರಿಯ ವರದಿಗಾರ ಉಮಾಪತಿ, ರಾಮಲೀಲಾ ಮೈದಾನದಲ್ಲಿ ಭ್ರಷ್ಟಾಚಾರ ವಿರೋಧಿ ಹೋರಾಟದ ಸದವಕಾಶವನ್ನ ಮೀಸಲು ವಿರೋಧಿ ಗುಂಪು ಹೇಗೆ ಬಳಸಿಕೊಂಡು ಹೋರಾಟದ ಆಶಯವನ್ನು ದಿಕ್ಕು ತಪ್ಪಿಸಲಾಗುತ್ತಿದೆ ಎಂಬ ವಿಚಾರವನ್ನ ಬರೆದಿದ್ದರು. ಅಷ್ಟೇ ಅಲ್ಲ ವೈಯುಕ್ತಿವಾಗಿ ಭ್ರಷ್ಟರಾದವರು ಸಾರ್ವಜನಿಕವಾಗಿ ಸಾಮೂಹಿಕವ ನೆಲೆಗಟ್ಟಿನಲ್ಲಿ ಹೇಗೆ ಮುಖವಾಡ ಧರಿಸಿ ಬರುತ್ತಿದ್ದಾರೆ ಎಂಬ ಸಾಕಷ್ಟು ವಿಚಾರಗಳು ನಮ್ಮ ಕಣ್ಣೆದುರಿಗೆ ಬಂದು ಹೋದವು ತಾತ್ವಿಕ ನೆಲೆಗಟ್ಟಿಗೆ, ತಾರ್ಕಿದ ಸಂಘರ್ಷಕ್ಕೆ ಎಣೆಯಿಲ್ಲದಂತೆ ವಿವಿಧ ಮಜಲುಗಳಿಂದ ಹರಿದು ಬಂದ ಬೆಂಬಲ ಅಂತಿಮವಾಗಿ ಯಾವ ರೂಪ ತಳೆಯುತ್ತಿತ್ತೋ ಗೊತ್ತಿಲ್ಲ ಆದರೆ ಸ್ವತಂತ್ರ ಭಾರತದಲ್ಲಿ ಒಂದು ಜೆಪಿ ಚಳುವಳಿಯ ನಂತರ ನಡೆದ ದೊಡ್ಡ ಹೋರಾಟ ಇದು.

ನಮ್ಮ ಜನ ಸಿನಿಕರು, ಕಲ್ಪನೆಗಳ ಸಾಮ್ರಾಜ್ಯದಲ್ಲಿ ವಾಸ್ತವತೆಯನ್ನು ಮೀರಿ ನಿಂತ ವಿಚಾರಗಳನ್ನ ಅರ್ಥೈಸಿಕೊಳ್ಳಲಾಗದವರು ಏಕಾಏಕಿ ಬದಲಾವಣೆಗಳನ್ನು ನಿರೀಕ್ಷಿಸಿ ಬಿಡುತ್ತಾರೆ. ನಿಮಗೆ ನೆನಪಿರಲಿ ಇವತ್ತು ದೇಶದಲ್ಲಿ ಭ್ರಷ್ಟಾಚಾರ ನಿಯಂತ್ರಣಕ್ಕೆಂದೇ ಸರಿ ಸುಮಾರು 6 ಸಂಸ್ಥೆಗಳಿವೆ. ಆದಾಗ್ಯೂ ಭ್ರಷ್ಟಾಚಾರ ಎಂಬುದು ಇಲ್ಲಿಂದ ಖಾಲಿ ಆಗಿಲ್ಲ ಏಕೆಂದರೆ ಇವೆಲ್ಲಾ ಹಲ್ಲು ಕಿತ್ತ ಹಾವುಗಳು! ಇವನ್ನು ಮೀರಿದ ಲೋಕಪಾಲ ಸಮಿತಿ ಅಸ್ತಿತ್ವಕ್ಕೆ ಬಂದರೆ ಅದಕ್ಕೊಂದು ಸ್ಪಷ್ಟ ನೀತಿ ನಿಯಮ ಸಂಸತ್ ನಲ್ಲಿ ಕಾನೂನಾಗಿ ಮಾರ್ಪಟ್ಟರೆ ಕೊಂಚ ಮಟ್ಟಿಗೆ ಭ್ರಷ್ಟಾಚಾರವನ್ನು ತಹಬಂದಿಗೆ ತರಬಹುದೇನೋ ಎನ್ನುವ ನಿರೀಕ್ಷೆಯಿದೆ. ಎಲ್ಲವೂ ಅಂದುಕೊಂಡಂತೆ ಆದರೂ ಶೇ.2ರಷ್ಟು ಭ್ರಷ್ಟಾಚಾರ ನಿಯಂತ್ರಣ ಆಡಳಿತ ವ್ಯವಸ್ಥೆಯಲ್ಲಿ ಕಾಣಬಹುದೇ ವಿನಹ ಬಾಕಿಯಂತೆ ಯಥಾಸ್ಥಿತಿಯೇ ಉಳಿದು ಬಿಡುವ ಅಪಾಯವಿದೆ. ಹಾಗಾಗಿ ಸ್ವಿಸ್ ಬ್ಯಾಂಕಿನಿಂದ ಹಣ ತರುವುದು, ಭ್ರಷ್ಟರನ್ನ ಹಿಡಿದು ಮಟ್ಟಹಾಕುತ್ತೇವೆ ಎಂದು ಹೇಳಲ್ಪಡವುದು ಸಧ್ಯಕ್ಕೆ ಹಾಸ್ಯಾಸ್ಪದವೇ ಆಗಿದೆ. ಸ್ವತ: ಅಣ್ಣಾ ಹಜಾರೆ ಹೇಳುವಂತೆ ಇನ್ನು ಹತ್ತು ವರ್ಷಗಳಲ್ಲಷ್ಟೇ ಇದರ ಪರಿಣಾಮವನ್ನು ನಿರಿಕ್ಷಿಸಬಹುದು.

ಅಣ್ಣಾ ಹಜಾರೆ ಜನಲೋಕಪಾಲ್ ಮಸೂದೆಯಲ್ಲಿ ಸಂಸತ್ ಮೀರಿದ ಮತ್ತು ಪ್ರಧಾನ ಮಂತ್ರಿ,ನ್ಯಾಯಾಧೀಶರನ್ನು ಹದ್ದುಬಸ್ತಿನಲ್ಲಿಡುವ ಸೂಪರ್ ಪವರ್ ಲೋಕಪಾಲಕ್ಕೆ ಬೇಕೆಂದು ಪಟ್ಟು ಹಿಡಿದದ್ದು ನಿಜ. ಇದು ತುಂಬಾ ಸೂಕ್ಷ್ಮ ವಿಚಾರವೂ ಹೌದು ಭಾರತದ ದೇಶ ಸಂವಿಧಾನಕ್ಕೆ ಜಾಗತಿಕವಾಗಿ ಅತ್ಯಂತ ಮಹತ್ವದ ಸ್ಥಾನವಿದೆ. ಸಂವಿಧಾನದ ಆಶಯದಂತೆ ರಚನೆಯಾಗುವ ನ್ಯಾಯಾಂಗ/ಕಾರ್ಯಾಂಗ/ಶಾಸಕಾಂಗ ಗಳ ಪೈಕಿ ಶಾಸಕಾಂಗ ಮತ್ತು ಕಾರ್ಯಾಂಗ ನೈತಿಕತೆ ಕಳೆದುಕೊಂಡಿವೆ ಜನಸಾಮಾನ್ಯರ ವಿಶ್ವಾಸ ಗಳಿಸುವಲ್ಲಿ ವಿಫಲವಾಗಿವೆ ಆದರೆ ನ್ಯಾಯಾಂಗ ಇನ್ನೂ ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡಿವೆ. ಹೀಗಿರುವಾಗ ಲೋಕಪಾಲ ವ್ಯವಸ್ಥೆ ನ್ಯಾಯಾಂಗವನ್ನು ಆಳುವಂತಾಗಬಾರದಲ್ಲವೇ? ಅದೇ ರೀತಿ ಸಂವಿಧಾನದ ಆಶಯದಂತೆ ಸಂಸತ್ ನ ಮುಖ್ಯಸ್ಥನಾಗುವ ಪ್ರಧಾನಿ ಹೆಚ್ಚ ಶಕ್ತಿಶಾಲಿ. ಆ ಸ್ಥಾನಕ್ಕೆ ತನ್ನದೇ ಆದಂತಹ ಘನತೆ ಗೌರವಗಳಿವೆ ಮತ್ತು ರಿಯಾಯ್ತಿಗಳಿವೆ. ಹಾಗಾಗಿ ಪ್ರಧಾನಿಯನ್ನು ಸಹಾ ಲೋಕಪಾಲ ನಿಯಂತ್ರಿಸುವ ವ್ಯವಸ್ಥೆ ಸಂವಿಧಾನ ವಿರೋಧಿಯಾಗಿದೆಯಲ್ಲವೇ?

ಈಗಾಗಲೇ ದೇಶದಲ್ಲಿ ನಡೆದಿರುವ 2ಜಿ ಸ್ಪೆಕ್ಟ್ರಂ ಹಗರಣ, ಕಾಮನ್ ವೆಲ್ತ್ ಗೇಮ್ ಹಗರಣದ ಕೇಂದ್ರ ಬಿಂದುವಾಗಿ ಪ್ರಧಾನ ಮಂತ್ರಿಯವರನ್ನ ನೋಡಲಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಸಿಬಿಐ ಮತ್ತು ಸಿಎಜಿ ನೇರ ವರದಿಯನ್ನು ನೀಡಿವೆ ಅಂದ ಮೇಲೆ ಭ್ರಷ್ಟಾಚಾರ ನಿಯಂತ್ರಣ ಕಾನೂನು ಅವರಿಗೂ ಅನ್ವಯವಾಗಬೇಕಲ್ಲವೇ ಎಂಬ ಪ್ರಶ್ನೆ ಎದುರಾಗಬಹುದು ಆದರೆ ಪ್ರಧಾನಿಗೆ ಅತಿ ದೊಡ್ಡ ಹೊಣೆಗಾರಿಕೆಯಿದೆ ತನ್ನ ಕರ್ತವ್ಯವನ್ನು ನೋಡಿಕೊಳ್ಳಲು ಅನೇಕ ಮಂದಿ ಮಂತ್ರಿ ಮಾಗಧರು ಇರುತ್ತಾರೆ, ಐಎಎಸ್ ಅಧಿಕಾರಿಗಳಿರುತ್ತಾರೆ ಅವರು ಪ್ರಧಾನಿಗೆ ಆಗುಹೋಗುಗಳನ್ನು ಮನವರಿಕೆ ಮಾಡುವ, ದುರ್ವಿನಿಯೋಗವಾಗದಂತೆ ಹದ್ದಿನ ಕಣ್ಣಿಡುವ ವ್ಯವಸ್ಥೆಯನ್ನು ಮಾಡಬಹುದಲ್ಲವೇ ? ಇವುಗಳನ್ನು ನಿಯಂತ್ರಿಸಲು ಪ್ರಧಾನಿ ಅಸಮರ್ಥನಾದಾಗ ಆತ ರಾಜೀನಾಮೆ ಕೊಡಬಹುದು ಆಗ ಆತನ ಮೇಲೆ ಲೋಕಪಾಲ ಮಸೂದೆಯನ್ವಯ ಕ್ರಮ ಜರುಗಿಸಲು ಅವಕಾಶವಿದೆ. ಆದರೆ ಈ ವಿಚಾರದಲ್ಲಿ ಅಣ್ಣಾ ಕೊಂಚ ಬಿಗಿಪಟ್ಟು ಹಿಡಿದ ಮಾತ್ರಕ್ಕೆ ಹಿರಿಯ ಜೀವವನ್ನು ವಿನಾ ಕಾರಣ ಜರಿದು ಅಪಮಾನಿಸುವುದು ಸರಿಯೇ? ಸದರಿ ವಿಚಾರಗಳಲ್ಲಿ ಆಡಳಿತ ಪಕ್ಷವಿರಲಿ ವಿರೋಧ ಪಕ್ಷಗಳು ಕೂಡಾ ಅಣ್ಣಾ ಮನವಿಗೆ ಸ್ಪಂದಿಸಿಲ್ಲ ಮತ್ತು ಅಣ್ಣಾ ಕೂಡ ಸದರಿ ನಿಲುವಿನಿಂದ ಹಿಂದೆ ಸರಿದಿದ್ದಾರೆ ಹೀಗಿರುವಾಗ ಅವರನ್ನ ದೂಷಣೆ ಮಾಡುವುದು ಸರಿಯಲ್ಲ.

ಇನ್ನು ಹೋರಾಟ ವೀರರ ಕಥೆ. ನೈತಿಕತೆಯ ಚಳುವಳಿಯ ಬೆಂಬಲಕ್ಕೆ ಬಂದ ಅನೇಕ ರಾಜಕೀಯ ಪಕ್ಷಗಳು, ಸಂಘಟನೆಗಳು, ವಿದ್ಯಾರ್ಥಿಗಳು ಮತ್ತು ಶ್ರೀ ಸಾಮಾನ್ಯರಲ್ಲಿ ಬಹುತೇಕರಿಗೆ ಚಳುವಳಿಯ ಆಶಯಗಳೇ ತಿಳಿಯದೇ ಹೋದುದು ದುರಂತದ ಸಂಗತಿ. ವಿದ್ಯಾರ್ಥಿಗಳ ಚಳುವಳಿಯಲ್ಲಿ ಗಾಂಭೀರ್ಯತೆ ಕಾಣಲಿಲ್ಲ ಜೋಶ್ ಎಂಬಂತೆ ಪ್ರತಿಬಿಂಬಿತವಾಯಿತು.ಕೆಲವು ಸಂಘಟನೆಗಳು ಪ್ರಚಾರದ ಸಲುವಾಗಿ ಬಂದು ಹೋದವು, ಬುದ್ದಿಜೀವಿಗಳೆನಿಸಿಕೊಂಡವರು ಕೆಲವರು ತಮ್ಮದೇ ಧಾಟಿಯಲ್ಲಿ ಬುದ್ದಿಹೀನರಂತೆ ಹೇಳಿಕೆ ನೀಡಿದರು.ರಾಜಕೀಯ ಪಕ್ಷಗಳು ಕೇಂದ್ರ ಸರ್ಕಾರ ಬೀಳಿಸಲು ಪ್ರತಿಭಟನೆಗೆ ಬಂದರು. ಎಲ್ಲಕ್ಕಿಂತ ಮುಖ್ಯವಾಗಿ ವ್ಯವಸ್ಥೆಯ ಭ್ರಷ್ಟರು ಸಾಮೂಹಿಕ ನೆಲೆಗಟ್ಟಿನಲ್ಲಿ ಅಣ್ಣಾ ಗೆ ಜೈ ಎಂದದ್ದು ವಿಷಾಧವಲ್ಲದೇ ಮತ್ತೇನು.? ಜೆಪಿ ಚಳುವಳಿ ನಡೆದಾಗ ಅದರಲ್ಲಿದ್ದ ಬುದ್ದಿ ಜೀವಿಗಳು ಮತ್ತು ಮುತ್ಸದ್ದಿಗಳಂತಹವರು ಅಣ್ಣಾ ಹೋರಾಟದಲ್ಲಿ ಕಾರಬರಲಿಲ್ಲ ಆದರು ದೇಶದಲ್ಲಿ ರಕ್ತ ರಹಿತ ಕ್ರಾಂತಿಗೆ ಮತ್ತು ಗಾಂಧಿವಾದಕ್ಕೆ ಅಂತಿಮ ಜಯ ದೊರೆಯಿತಲ್ಲ ಎಂಬುದಷ್ಟೇ ಸಮಾಧಾನಕರ ಸಂಗತಿಯಲ್ಲವೇ?

Sunday, August 21, 2011

ಅಣ್ಣಾ ಹಜಾರೆ ಅಂದ್ರೆ ಯಾರು ಗೊತ್ತೇನ್ರೀ??

ಅದು 1962 ವರ್ಷ.ಭಾರತ ಮತ್ತು ಚೈನಾ ದೇಶದ ನಡುವಣ ಯುದ್ದದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಾರತೀಯ ಸೈನಿಕರು ಹತರಾಗಿದ್ದರು. ಆಗ ಭಾರತ ಸರ್ಕಾರ ದೇಶಪ್ರೇಮ ಹೊಂದಿದ ಉತ್ಸಾಹಿ ಯುವಜನರನ್ನು ಭಾರತೀಯ ಸೇನೆಗೆ ಸೇರುವಂತೆ ಕರೆ ನೀಡಿತ್ತು. ಸರ್ಕಾರದ ಕರೆಗೆ ಒಗೊಟ್ಟ ರಾಲೇಗಾಂವ್ ಸಿದ್ದಿ ಗ್ರಾಮದ ಉತ್ಸಾಹಿ ಯುವ ತರುಣನೊಬ್ಬ 1963ರಲ್ಲಿ ಸೇನೆಗೆ ಸೇರಿದ. ಸಿಪಾಯಿಯಾಗುವ ಕನಸು ಹೊತ್ತಿದ್ದ ಆ ತರುಣ ತನ್ನ ಕಡಿಮೆ ಎತ್ತರದ ಕಾರಣದಿಂದಾಗಿ ಸೇನೆಯ ಟ್ರಕ್ ನಡೆಸುವ ಚಾಲಕನಾದ, ಆ ಮೂಲಕ ಭಾರತೀಯ ಸೇನೆಯ ಯೋಧನಾಗಿ ರೂಪುಗೊಂಡವನು ಸತತವಾಗಿ 15ವರ್ಷಗಳ ಸೇವೆಯಲ್ಲಿ ಸಿಕ್ಕಿಂ, ಭೂತಾನ್, ಜಮ್ಮು-ಕಾಶ್ಮೀರ, ಅಸ್ಸಾಂ ಮತ್ತು ಮಿಜೋರಾಂ, ಲೇಹ್-ಲಡಾಕ್ ಗಳಲ್ಲಿ ಅವಿಸ್ಮರಣೀಯ ಸೇವೆ ಸಲ್ಲಿಸಿದ. ಅದೊಂದು ದಿನ ತನ್ನ ಸೇವಾವಧಿಯಲ್ಲೇ ವ್ಯವಸ್ಥೆಯ ಹುಳುಕುಗಳ ಬಗ್ಗೆ ಜಿಗುಪ್ಸೆ-ಅಸಹನೆಯನ್ನು ಹೊಂದಿದ್ದ, ಜೀವನದ ಪ್ರತೀ ಘಟ್ಟದಲ್ಲೂ ಎದುರಾಗುತ್ತಿದ್ದ ವ್ಯತಿರಿಕ್ತ ಪರಿಣಾಮಗಳು ಆ ಯೋಧನಿಗೆ ತೀವ್ರ ರೇಜಿಗೆ ಹುಟ್ಟಿಸಿಬಿಟ್ಟಿತ್ತು. ತನ್ನೆಲ್ಲ ಪ್ರಶ್ನೆಗಳನ್ನು ಸೇರಿದಂತೆ 2ಪುಟಗಳ ದೀರ್ಘ ಪತ್ರವನ್ನು ಬರೆದು ಆತ್ಮಹತ್ಯೆಗೆ ಯೋಜಿಸಿದ ಯುವಕನಿಗೆ ಹೊಸದೆಹಲಿಯ ರೈಲ್ವೇ ಸ್ಟೇಷನ್ ಬೀದಿಯೊಂದರಲ್ಲಿ ನಡೆದು ಹೋಗುತ್ತಿದ್ದಾಗ ಬುಕ್ ಸ್ಟಾಲ್ ಒಂದರಲ್ಲಿ ನೇತುಹಾಕಿದ್ದ ಪುಸ್ತಕ ಆಕರ್ಷಿಸಿತು. ಅದು ಸ್ವಾಮಿವಿವೇಕಾನಂದರು ಜೀವನದ ಉದಾತ್ತ ದ್ಯೇಯಗಳ ಬಗೆಗೆ ಬರೆದ ಪುಸ್ತಕ. ಪುಸ್ತಕ ಕೊಂಡು ಓದಿದ ಯುವಕನಿಗೆ ಆತ್ಮಹತ್ಯೆಗೆ ಮುನ್ನ ಬರೆದ 2ಪುಟಗಳ ಪತ್ರದಲ್ಲಿ ಎತ್ತಿದ್ದ ಹಲವು ಪ್ರಶ್ನೆಗಳಿಗೆ ಪುಸ್ತಕದಲ್ಲಿ ಉತ್ತರ ಲಭಿಸಿತ್ತು. ಪುಸ್ತಕ ಓದಿದ ಆತ ತನ್ನ ನಿಲುವು ಬದಲಿಸಿಕೊಂಡ ಹೊಸ ಜೀವನಕ್ಕೆ ತನ್ನನ್ನು ತೊಡಗಿಸಿಕೊಳ್ಳಲು ಅನುವಾದ. ಜೀವನವೆಂದರೆ ಅದು ವ್ಯರ್ಥವಲ್ಲ, ಸಾರ್ಥಕತೆಯನ್ನು ಕಾಣುವ ಬದುಕು ಎಂದು ಆಗ ಅವನಿಗೆ ಅನಿಸಲಾರಂಭಿಸಿತು. ಇದು ಆತನ ಯೋಚನಾ ಲಹರಿಯನ್ನು ಬದುಕಿನ ದಿಕ್ಕನ್ನು ಸಂಪೂರ್ಣವಾಗಿ ಯು ಟರ್ನ್ ತೆಗೆದುಕೊಳ್ಳುವಂತೆ ಮಾಡಿಬಿಟ್ಟಿತು. ಜನರ ಸೇವೆಗೆ ತನ್ನ ಜೀವನ ಮುಡಿಪು, ಅದರಲ್ಲೆ ನನ್ನ ಬದುಕಿನ ಸೇವೆ ಅಡಗಿದೆ ಎಂದು ಆತನಿಗೆ ಅನಿಸಿದ್ದೇ ತಡ ತನ್ನ ನಿರ್ಧಾರಕ್ಕೆ ಗಟ್ಟಿತನ ದೊರಕಿಸಿಕೊಂಡು ಬಿಟ್ಟ ಯೋಧ, ನವ ತರುಣನೇ ಅಣ್ಣಾ ಸಾಹೇಬ್ ಹಜಾರೆ!


ಇವತ್ತು ದೇಶದ ಉದ್ದಗಲಕ್ಕೂ ಭ್ರಷ್ಟಾಚಾರ ವಿರೋಧಿ ಆಂಧೋಲನದ ಕ್ರಾಂತಿಯ ಕಿಡಿಯನ್ನು ಹೊತ್ತಿಸಿರುವ 74ರ ವಯೋವೃದ್ದ ಅಣ್ಣಾ ಹಜಾರೆ ತನ್ನ ಜೀವನದಲ್ಲಿ ಸಾಗಿ ಬಂದ ಹಾದಿ ತೋರುತ್ತಿರುವ ಬದ್ದತೆ ಇದೆಯಲ್ಲ ಅದು ಪ್ರಶ್ನಾತೀತವಾದುದು ಮತ್ತು ಯುವ ಜನತೆಗೆ ಆದರ್ಶಯುತವಾದುದು. ತನ್ನ 26ನೇ ವಯಸ್ಸಿನಲ್ಲೇ ಸಾರ್ವಜನಿಕ ಸೇವೆಗೆ ತನ್ನ ನಿರ್ಧಾರ ತೆಗೆದುಕೊಂಡು ಬ್ರಹ್ಮಚಾರಿಯಾಗಿಯೇ ಉಳಿಯುವ ಅಚಲ ನಿರ್ಧಾರ ಕೈಗೊಂಡ ಅಣ್ಣಾ 15ವರ್ಷಗಳ ಸೇನಾ ಸೇವೆಯ ನಂತರ ಸ್ವಯಂ ನಿವೃತ್ತಿ ಪಡೆದು ಅಹಮ್ಮದ್ ನಗರ ಜಿಲ್ಲೆಯ ರಾಲೇ ಗಾಂವ್ ಸಿದ್ದಿ ಎಂಬ ಬರಪೀಡಿತ ಹಳ್ಳಿಗೆ ಬಂದು ನೆಲೆನಿಂತ. ಆ ಹಳ್ಳಿಯಲ್ಲಿ ವಾರ್ಷಿಕವಾಗಿ 400-500ಮಿಮಿ ಮಳೆಯಾಗುತ್ತಿದ್ದರೂ ಕೃಷಿ ಚಟುವಟಿಕೆ ಮಾಡಲು ಸಾಧ್ಯವಾಗುತ್ತಿರಲಿಲ್ಲ, ಹಲವು ಕಿಮಿಗಳ ದೂರದಿಂದ ಕುಡಿಯುವ ನೀರನ್ನು ತರಬೇಕಾದ ಅನಿವಾರ್ಯತೆ ಸೃಷ್ಟಿಯಾಗಿತ್ತು, ಆಹಾರ ಧಾನ್ಯಗಳಿಗೆ ಅಕ್ಕಪಕ್ಕದ ಗ್ರಾಮದವರನ್ನ ಅವಲಂಬಿಸಬೇಕಾಗಿತ್ತು. ಅರಾಜಕತೆಯ ತಾಣವಾಗಿದ್ದ ಗ್ರಾಮದಲ್ಲಿ ಸಲೀಸಾಗಿ ಸಿಗುತ್ತಿದ್ದುದು ಸಾರಾಯಿ ಮಾತ್ರ! ಇದೆಲ್ಲವನ್ನೂ ಮನಗಂಡ ಅಣ್ಣಾ ಗ್ರಾಮದ ಜನರನ್ನೆಲ್ಲ ಒಗ್ಗೂಡಿಸಿದರು. ದೊರೆಯುತ್ತಿದ್ದ ಅಲ್ಪ ನೀರನ್ನೇ ಸಂರಕ್ಷಣೆ ಮಾಡುವುದು ಹೇಗೆ,ಆಹಾರ ಧಾನ್ಯ ಸ್ವಾವಲಂಬನೆ ಸಾಧಿಸುವುದು ಹೇಗೆ?ಸಾಮಾಜಿ ಅನಿಷ್ಠಗಳನ್ನು ತಡೆಯಲು ಏನು ಮಾಡಬೇಕು ಎಂದೆಲ್ಲಾ ಚಿಂತಿಸಿದರು ಅದಕ್ಕೆ ಪೂರಕವಾದ ಮಾರ್ಗೋಪಾಯಗಳನ್ನು ರೂಪಿಸುವ ಮೂಲಕ ಅಭಿವೃದ್ದಿಯ ಮುನ್ನುಡಿಯನ್ನು ಬರೆದರು. 50ಕ್ಕೂ ಹೆಚ್ಚು ನಾಲಾ ಬಂಡಿಂಗ್ ನಿರ್ಮಾಣವಾಯಿತು. ನೀರು ಸಂಗ್ರಹಕ್ಕೆ ಬ್ಯಾರೇಜ್ ನಿರ್ಮಾಣ ಮಾಡಲಾಯಿತು. ಅನಾಮತ್ತಾಗಿ 500ಎಕರೆ ಪ್ರದೇಶದಲ್ಲಿ ಗಿಡ ನೆಟ್ಟು ಅರಣ್ಯವನ್ನು ಬೆಳೆಸಲಾಯಿತು. ಗ್ರಾಮ ಪಂಚಾಯ್ತಿಗೆ ಪುನಶ್ಚೇತನ ನೀಡಿದ ಅಣ್ಣಾ ಅದನ್ನು ಶಕ್ತಿಯುತ ಕೇಂದ್ರವಾಗಿ ರೂಪುಗೊಳಿಸಿದರು. ಗ್ರಾಮಕ್ಕೆ ಬೇಕಾದ ಸ್ಕೂಲು, ಆಸ್ಪತ್ರೆ, ಹಾಸ್ಟೆಲುಗಳನ್ನು ಸಹಾ ಕಟ್ಟಿದ ಅಣ್ಣಾ ಇದಕ್ಕಾಗಿ ಬಳಸಿದ್ದು ಒನ್ಸ್ ಎಗೇನ್ ಅದೇ ಗ್ರಾಮದ ಜನರನ್ನು! ಅಂದರೆ ಜನಶಕ್ತಿಯನ್ನೆ ಬಂಡವಾಳ ಮಾಡಿಕೊಂಡ ಅಣ್ಣಾ ತಾನಂದುಕೊಂಡಿದ್ದನ್ನೆಲ್ಲ ಸಾಕಾರ ಮಾಡಿಕೊಂಡರು. ಇದೀಗ ಅಣ್ಣಾ ಹಜಾರೆಯ ಗ್ರಾಮದ ದೇಶದ ಆದರ್ಶ ಗ್ರಾಮವಾಗಿ ಮಾರ್ಪಟ್ಟದೆ ದೇಶ ವಿದೇಶಗಳಿಂದ ಜನ ಅಲ್ಲಿಗೆ ಬರುತ್ತಿದ್ದಾರೆ. ಅಭಿವೃದ್ದಿಗೆ ಅದು ಮಾದರಿಯಾಗಿ ನಿಂತಿದೆ.

1991ರಲ್ಲಿ ಅಣ್ಣಾ ಭ್ರಷ್ಟಾಚಾರ ವಿರೋಧಿ ಆಂಧೋಲನವನ್ನು ಸಂಘಟಿಸಿದರು. ಆಗ ಮಹಾರಾಷ್ಟ್ರದಲ್ಲಿ 42ಜನ ಅರಣ್ಯಾದಿಕಾರಿಗಳು ಸರ್ಕಾರಕ್ಕೆ ಸುಳ್ಳು ಮಾಹಿತಿ ನೀಡಿ ಹಲವು ಕೋಟಿ ರೂಪಾಯಿಗಳನ್ನು ವಂಚಿಸಿದ್ದರು. ಈ ವಂಚನೆಯ ವಿರುದ್ದ ದಾಖಲೆಗಳೊಂದಿಗೆ ಹೋರಾಡಿದ ಅಣ್ಣಾ ನಿಗೆ ಸೋಲು ಕಾದಿತ್ತು. ಯಾಕೆಂದರೆ ಸದರಿ ಹಗರಣದಲ್ಲಿ ಪ್ರಭಾವ ಶಾಲಿ ಮಂತ್ರಿಯೋರ್ವನ ಕೈವಾಡವೂ ಇತ್ತು.ಬೇಸತ್ತ ಅಣ್ಣಾ ಆಗ ತಮಗೆ ಕೊಡಮಾಡಿದ್ದ ಪದ್ಮಶ್ರೀ ಪುರಸ್ಕಾರ ಹಾಗೂ ಪ್ರಧಾನ ಮಂತ್ರಿ ರಾಜೀವ್ ಗಾಂಧಿ ನೀಡಿದ್ದ ವೃಕ್ಷಮಿತ್ರ ಪ್ರಶಸ್ತಿಗಳನ್ನು ಕೇಂದ್ರ ಸರ್ಕಾರಕ್ಕೆ ಹಿಂತಿರುಗಿಸಿದರು, ಧೃತಿಗೆಡದ ಅಣ್ಣಾ ಅಪರಾಧಿಗಳಿಗೆ ಶಿಕ್ಷೆ ನೀಡುವಂತೆ ಒತ್ತಾಯಿಸಿ ಉಪವಾಸ ಕುಳಿತರು ಕಡೆಗೆ ಮಣಿದ ಸರ್ಕಾರ ಸದರಿ ಹಗರಣಕ್ಕೆ ಸಂಬಂದಿಸಿದಂತೆ 6ಮಂದಿ ಮಂತ್ರಿಗಳನ್ನು 400ಮಂದಿ ಸರ್ಕಾರಿ ನೌಕರರನ್ನು ಕೆಲಸದಿಂದ ವಜಾಮಾಡಿತು. ಈ ಪ್ರಕರಣದಲ್ಲಿ ಅಗತ್ಯ ಮಾಹಿತಿಗಳ ಅವಶ್ಯಕತೆಯನ್ನು ಮನಗಂಡ ಅಣ್ಣಾ ಮಾಹಿತಿ ಹಕ್ಕು ಕಾಯ್ದೆಯನ್ನು ಜಾರಿಗೆ ತರುವಂತೆ 1997ರಲ್ಲಿ ಚಳುವಳಿ ಆರಂಭಿಸಿದರು. ತೀವ್ರ ಒತ್ತಡದ ಪರಿಣಾಮ 2003ರಲ್ಲಿ ರಾಷ್ಟ್ರಪತಿಯವರು ಮಾಹಿತಿ ಹಕ್ಕು ಕಾಯ್ದೆಯನ್ನು ದೇಶಾಧ್ಯಂತ ಜಾರಿಗೆ ತರಲು ಅಂಕಿತ ಹಾಕಬೇಕಾಯ್ತು. ಇಂತಹ ಅಣ್ಣಾ ಹಜಾರೆ ಇವತ್ತು ಪ್ರಬಲ ಲೋಕಪಾಲ ಮಸೂದೆಗೆ ಪಟ್ಟು ಹಿಡಿದು ಕುಳಿತಿದ್ದಾರೆ ಇಡೀ ದೇಶದ ಜನತೆ ಇವತ್ತು ಅಣ್ಣಾ ಹಿಂದೆ ಹೊರಟಿದೆ, ಜಾಗತಿಕವಾಗಿ ಯಾವ ದೇಶದಲ್ಲೂ ಈ ಮಟ್ಟಿಗಿನ ಭ್ರಷ್ಟಾಚಾರದ ವಿರುದ್ದದ ಹೋರಾಟ ನಡೆದಿರಲಾರದು. 2ನೇ ಸ್ವಾತಂತ್ರ್ಯ ಸಂಗ್ರಾಮವನ್ನು ನೆನಪಿಸುವಂತೆ ಆಂಧೋಲನ ನಡೆಯುತ್ತಿದೆ. ಇಂತಹ ಸಂಧರ್ಭದಲ್ಲಿ ಅಣ್ಣಾ ಹಜಾರೆಯ ಬೆಂಬಲಕ್ಕೆ ನಾವೂ ಕೈ ಜೋಡಿಸಬೇಕಲ್ಲವೇ???? (ಸಶೇಷ)

Sunday, August 14, 2011

ಸ್ವಾತಂತ್ರ್ಯ ಎಲ್ಲಿಗೆ ಬಂತು ? ಯಾರಿಗೆ ಬಂತು?

ಇವತ್ತು 64ನೇ ಸ್ವಾತಂತ್ರ್ಯ ದಿನಾಚರಣೆ,ದೇಶಕ್ಕೆ ಸ್ವಾತಂತ್ರ್ಯ ಬಂದು 6ವರೆ ದಶಕಗಳು ಸದ್ದಿಲ್ಲದಂತೆ ಸರಿದು ಹೋಗಿವೆ. ಸತತವಾಗಿ 90ವರ್ಷಗಳಿಗೂ ಅಧಿಕ ಕಾಲ ನೆತ್ತರು ಹರಿಸಿ, ಮಾನಸಿಕ ತೊಳಲಾಟಕ್ಕೆ ಸಿಲುಕಿ , ಅಪಮಾನವನ್ನೆದುರಿಸಿ ಗಳಿಸಿದ ಸ್ವಾತಂತ್ರ್ಯದ ಪರಿಕಲ್ಪನೆ ಇವತ್ತು ಹೇಗಿದೆ? ಸ್ವಾತಂತ್ರ್ಯಾ ನಂತರದ ದಿನಗಳಲ್ಲಿ ದೇಶದಲ್ಲಿ ಆಗಿಹೋದ ಘಟನೆಗಳು, ಪ್ರಸಕ್ತ ರಾಜಕೀಯ,ಸಾಮಾಜಿಕ ಮತ್ತು ಆರ್ಥಿಕ ವಿದ್ಯಮಾನಗಳು ಹೇಗಿವೆ? ನಿಜವಾದ ಸ್ವಾತಂತ್ರ್ಯ ಸಿಕ್ಕಿರುವುದು ಯಾರಿಗೆ ? ಸ್ವತಂತ್ರ ಭಾರತದಲ್ಲಿ ಆಗುತ್ತಿರುವುದೇನು? ಎಂಬೆಲ್ಲ ಪ್ರಶ್ನೆಗಳು ನಮ್ಮೆದುರಿಗಿವೆ. 

       ಭಾರತೀಯ  ಎನಿಸಿಕೊಂಡ ಪ್ರತಿಯೊಬ್ಬರು ಪ್ರಜ್ಞಾಪೂರ್ವಕವಾಗಿ ಸ್ವಾತಂತ್ರ್ಯದ  ಆಶೋತ್ತರಗಳನ್ನು ಅರಿಯುವುದು ಅನಿವಾರ್ಯವಾಗಿದೆ. ಪ್ರಸಕ್ತ ವಿದ್ಯಮಾನಗಳು ನಮ್ಮ ಹಿರಿಯುರು  ಕಷ್ಟಪಟ್ಟು ದೊರಕಿಸಿಕೊಟ್ಟ ನೈಜ ಆಶಯಗಳಿಗೆ ಪೂರಕವಾಗಿ ನಡೆಯುವ ಬದಲಾಗಿ ತದ್ವಿರುದ್ದದ ದಿಕ್ಕಿನಲ್ಲಿ ಸಾಗಿವೆ. ಸಧ್ಯ ದೇಶದಲ್ಲಿ 2001ರ ಜನಗಣತಿ ಅಂಕಿಅಂಶಗಳ ಪ್ರಕಾರ ಹಿಂದೂಗಳೂ ಶೇ.80.5ರಷ್ಟು,ಮುಸ್ಲಿಂ ಶೇ.13.4%,ಕ್ರಿಶ್ಚಿಯನ್ ಶೇ.2.3%, ಸಿಖ್ಖರು 1.9% ಮಂದಿ ಇದ್ದಾರೆ.2011ರ ಜನಗಣತಿಯ ಪ್ರಕಾರ ದೇಶದಲ್ಲಿ 35 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು, 640ಜಿಲ್ಲೆಗಳೂ,5924 ಉಪಜಿಲ್ಲೆಗಳು,7935ನಗರಗಳು,6,40,867ಹಳ್ಳಿಗಳು ದಾಖಲಾಗಿವೆ. ಅಂದರೆ 10ವರ್ಷಗಳಲ್ಲಿ 47ರಾಜ್ಯಗಳು,461ಉಪ ಜಿಲ್ಲೆಗಳು, 224ನಗರಗಳು, 2279ಹಳ್ಳಿಗಳು ಹೊಸದಾಗಿ ಸೇರ್ಪಡೆಗೊಂಡಿವೆ. ಅನಾಮತ್ತು 1,210ಮಿಲಿಯನ್ ಜನಸಂಖ್ಯೆ ಯನ್ನು ಹೊಂದಿರುವ ದೇಶ ಜಾಗತಿಕವಾಗಿ ಜನಸಂಖ್ಯೆಯಲ್ಲಿ 2ನೇ ಸ್ಥಾನ ಗಿಟ್ಟಿಸಿದೆ. ಕಳೆದ ಒಂದು ಶತಮಾನದ ಜನಸಂಖ್ಯೆಗೆ ಇದನ್ನು ಹೋಲಿಕೆ ಮಾಡುವುದಾದರೆ 4ಪಟ್ಟು ಜನಸಂಖ್ಯೆ ಏರಿಕೆ ಕಂಡಿದೆ. 1901ರಲ್ಲಿ ಇದ್ದ ಜನಸಂಖ್ಯೆ ಪ್ರಮಾಣ 238.4ಮಿಲಿಯನ್! 
            ದೇಶದಲ್ಲಿ 6000ಕ್ಕೂ ಮಿಕ್ಕಿದ ವಿವಿಧ ವರ್ಗದ ಜನಾಂಗದವರಿದ್ದಾರೆ ಸಂಸ್ಕೃತಿಯ ನೂರಾರು ವಿಧಗಳು ಇಲ್ಲಿ ಕಾಣುತ್ತವೆ. ದೇಶದ ಸಾಂಸ್ಕೃತಿಕ ಪರಂಪರೆಗೆ 5500ವರ್ಷಗಳಿಗೂ ಮಿಕ್ಕಿದ ಇತಿಹಾಸವಿದೆ. ಧಾರ್ಮಿಕ/ದಾರ್ಶನಿಕ ಪರಂಪರೆಯ ವಿಚಾರಕ್ಕೆ ಬಂದರೆ  ಜಾಗತಿಕವಾಗಿ ಸಮಸ್ತ ದೇಶಗಳಿಗೂ ಸಡ್ಡು ಹೊಡೆದು ಸವಾಲಾಗಿ ನಿಲ್ಲಬಲ್ಲ ಛಾತಿ ಭಾರತಕ್ಕಿದೆ.ಸ್ವಾತಂತ್ರ್ಯ ಪೂರ್ವದಲ್ಲಿ ಕೇವಲ ಶೇ.5ರಷ್ಟು ಜಿಡಿಪಿ ಯನ್ನು ಆರ್ಥಿಕ ಕ್ಷೆತ್ರದ ಹಿನ್ನೆಡೆ ಇವತ್ತು ಜಗತ್ತಿಗೆ ಸವಾಲಾಗುವಂತೆ ಶೇ.10ಕ್ಕೇರಿದೆ, ದೇಶದ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವನ್ನೇ ನಮ್ಮಡೆಗೆ ನೋಡುವಂತೆ ಮಾಡಿದೆ. ಕಂಪ್ಯೂಟರ್ ಕ್ಷೇತ್ರದ ಸಾಧನೆ ಜಗತ್ತಿನಲ್ಲಿ ಸಾರ್ವಕಾಲಿಕವಾದ ಛಾಪು ಮೂಡಿಸಿದೆ. ಜಗತ್ತಿನ ಯಾವುದೇ ರಾಷ್ಟ್ರ ಕಂಪ್ಯೂಟರ್ ಕ್ಷೇತ್ರಕ್ಕೆ ಸಂಬಂಧಿಸಿದ ಸೇವೆಗಳಿಗಾಗಿ ಭಾರತದ ಯುವ ಜನಾಂಗದತ್ತ ನೋಡುವಂತಹ ಹೆಮ್ಮೆಯ ಸಾಧನೆಯಿದೆ. ಅಮೇರಿಕಾದಂತಹ ದೇಶದ ಬಲಿಷ್ಠ ಅಧ್ಯಕ್ಷ ಬಾರಕ್ ಒಬಾಮ ಭಾರತೀಯ ತರುಣರ ಕುರಿತು ಎಷ್ಟರ ಮಟ್ಟಿಗೆ disturb ಆಗುತ್ತಾನೆಂದರೆ  ಅಧಿಕಾರಕ್ಕೆ ಬಂದ ತಕ್ಸಣ ಭಾರತೀಯರಿಗೆ ಹೊರಗುತ್ತಿಗೆ ಸೇವೆಯನ್ನು ರದ್ದು ಗೊಳಿಸುತ್ತಾನೆ. ತನ್ನ ದೇಶದ ಆರ್ಥಿಕತೆ ಮತ್ತು ನಿರುದ್ಯೋಗ ಸಮಸ್ಯೆಯನ್ನು ಸರಿದೂಗಿಸುಲು ಹರ ಸಾಹಸ ಮಾಡುತ್ತಾನೆಂದರೆ ಅದಕ್ಕೆ ಭಾರತ ದೇಶ ಮತ್ತು ಇಲ್ಲಿನ್ ವಿದ್ವತ್,ಶೈಕ್ಷಣಿಕ ಸಂಪನ್ನರಾದ ಯುವ ಭಾರತದ ತರುಣರು ಕಾರಣವಲ್ಲವೇ?

              ಆದರೆ ಇಂತಹ ದೇಶದಲ್ಲಿ ಕಳೆದ 6ದಶಕಗಳಲ್ಲಿ ಆಗಿರುವುದೇನು?  ಸ್ವಾತಂತ್ರ್ಯದ ಪರಿಕಲ್ಪನೆ ಎಷ್ಟರ ಮಟ್ಟಿಗಿದೆ? ಎಂಬ ವಿಚಾರಗಳು ಗಹನವಾಗಿ ಚರ್ಚೆಯಾಗಬೇಕು. ದೇಶದಲ್ಲಿ ಕೋಮುಗಲಭೆಗಳಾಗಿವೆ, ಇನ್ನಿಲ್ಲದಂತ 'ಬರ' ನಮ್ಮನ್ನಾವರಿಸಿದೆ, ಕೃಷಿ ಕ್ಷೇತ್ರಗಳು ಕೈಗಾರಿಕ ಆರ್ಥಿಕ ವಲಯಗಳಿಂದಾಗಿ ಕಡಿಮೆಯಾಗುತ್ತಿವೆ, ಭೂಮಿ ಕಳೆದುಕೊಂಡ ರೈತ ನಗರ ಪ್ರದೇಶಗಳಲ್ಲಿ ಬಂಡವಾಳಶಾಹಿಗಳ ಗುಲಾಮ ಗಿರಿ ಮಾಡಲು ಹೊರಟ್ಟಿದ್ದಾನೆ.  ರಾಜಕೀಯ ಅರ್ಥ ಕಳೆದುಕೊಂಡಿದ್ದು ಬಂಡವಾಳ ಶಾಹಿಗಳು ರಾಜಕೀಯಕ್ಕೆ ಬಂದ ಮೇಲೆ ಪ್ರಜಾಪ್ರಭುತ್ವ ವ್ಯವಸ್ಥೆ ಅರ್ಥ ಹೀನವಾಗಿ ಹೋಗಿದೆ.  ರಾಜಕೀಯ ನೇತಾರರ ಪರಿಪಕ್ವವಿಲ್ಲದ ನಿಲುವುಗಳೂ, ಸ್ವಾರ್ಥ ಸಾಧನೆಯ ಹಪಾಹಪಿ ದೇಶವನ್ನೇ ಬಂಡವಾಳಶಾಹಿಗಳಿಗೆ ಒಪ್ಪಿಸುವ ಮೂಲಕ ಮತ್ತೆ ಸ್ವಾತಂತ್ರ್ಯ ಭಾರತದ  ಆಶೋತ್ತರಗಳಿಗೆ ಧಕ್ಕೆ ತಂದಿದ್ದಾರೆ. ನಮಗೆ ಗೊತ್ತಿಲ್ಲದಂತೆ ಬಂಡವಾಳ ಶಾಹಿಗಳೂ ಎಲ್ಲ ದಿಕ್ಕುಗಳಿಂದಲೂ ಶ್ರೀ''ಸಾಮಾನ್ಯ'' ನನ್ನು ಆಳಲಾರಂಭಿಸಿದ್ದಾರೆ.ಸಾಮಾಜಿಕ/ ಧಾರ್ಮಿಕ ವ್ಯವಸ್ಥೆಯ ಕಟ್ಟುಪಾಡುಗಳೂ ಕೊಂಚವೂ ಬದಲಾಗದೇ ಹಾಗೆಯೇ ಉಳಿದುಕೊಂಡಿವೆ. ಧಾರ್ಮಿಕ ವ್ಯವಸ್ಥೆ ಕೂಡಾ ಬಂಡವಾಳಶಾಹಿ ಎಲ್ಲ ಗುಣಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ದೊಡ್ಡ ನಿರಾಶೆಯನ್ನು ಹುಟ್ಟುಹಾಕಿದೆ. ಸಾಮಾಜಿಕ ಅನಿಷ್ಠಗಳನ್ನು ತೊಡೆಯಲು ಸಂವಿಧಾನ  ಎಲ್ಲ ರೀತಿಯ ರಕ್ಷಣೆ ಒದಗಿಸಿದ್ದರೂ ಕೂಡ ಅದು ಪುಸ್ತಕದ ಬದನೇಕಾಯಿ ಆಗಿದೆ. ಇವತ್ತಿಗೂ ಜೀತಪದ್ದತಿ, ಮಲಹೊರುವ ಪದ್ದತಿ , ಜಾತಿ ಪದ್ದತಿ ಹಿಂದೆಂದಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಬೂದಿ ಮುಚ್ಚಿದ ಕೆಂಡದಂತೆ ನಡೆಯುತ್ತಿವೆ. ಆದರೆ ಪ್ರಗತಿ ಪರ ಮುಖವಾಡಗಳ ಮರೆಯಲ್ಲಿ ಇವಕ್ಕೆ ಹೆಚ್ಚಿನ ಪ್ರಾಶಸ್ತ್ಯ ಸಿಗುತ್ತಿಲ್ಲವಷ್ಡೆ. 
          ಇವತ್ತು ದೇಶದಲ್ಲಿ ನಿರುದ್ಯೋಗ ಸಮಸ್ಯೆ, ಬಡತನ, ಹಸಿವು, ಜಾತೀಯತೆಯ ಪ್ರಮಾಣ ನಿರೀಕ್ಷಿತ ಪ್ರಮಾಣದಲ್ಲಿ ಕಡಿಮೆಯಾಗಿಲ್ಲ ಕಾರಣ ಅನುಷ್ಠಾನ ಹಂತದಲ್ಲಿ ಆಗುತ್ತಿರುವ ಲೋಪದೋಷಗಳು, ಮಿತಿಮೀರಿದ ಭ್ರಷ್ಟಾಚಾರ ಪಕ್ಷಪಾತ ಧೋರಣೆ ಕಾರಣವಾಗಿವೆ. ಜನರ ಮೂಲಭೂತ ಸಮಸ್ಯೆಗಳನ್ನೆ ಬಂಡವಾಳ ಮಾಡಿಕೊಂಡು ಅಧಿಕಾರಕ್ಕೆ ಬರುವ ರಾಜಕೀಯ ನೇತಾರರು ಅಧಿಕಾರ ಸಿಕ್ಕ ತಕ್ಷಣ ಮೂಲ ವಿಷಯಗಳನ್ನು ಬದಿಗೆ ಸರಿಸಿ ಭ್ರಷ್ಟಾಚಾರಕ್ಕೆ ಒತ್ತಾಸೆಯಾಗಿ ನಿಲ್ಲುತ್ತಿದ್ದಾರೆ. ದೇಶದ ರಕ್ಷಣೆಗಾಗಿ ಶಸ್ತ್ರಾಸ್ತ್ರ ಖರೀದಿ, ಭೋಫೋರ್ಸ್ ಹಗರಣ, ಭೂಪಾಲ್ ಅನಿಲ ದುರಂತ, 70ರ ದಶಕದ ತುರ್ತು ಪರಿಸ್ಥಿತಿ, ಕಾಮನ್ ವೆಲ್ತ್ ನ ಹಗರಣ, 2ಜಿ ಸ್ಪೆಕ್ರ್ಟ್ಂ ಹಗರಣ  ಇತ್ಯಾದಿಗಳು ನಮ್ಮ ನೈತಿಕ ದಿವಾಳಿತನವನ್ನು, ನಿರ್ವಹಣೆಯ ಅಸಮರ್ತತೆಯನ್ನು ಎತ್ತಿ ತೋರಿಸುತ್ತಿವೆ. 70ರ ದಶಕದಲ್ಲಿ ಸ್ವತಂತ್ರ ಭಾರತ ಪ್ರಗತಿಗೆ ಪೂರಕವಾದ ಚಳುವಳಿಗಳು ಬಂದವಾದರೂ ಮುಂದಿನ ದಿನಗಳಲ್ಲಿ ದಿಕ್ಕು ತಪ್ಪಿದ ನಾವೆಯಂತಾದ ಚಳುವಳಿಗಳು ಪರಿಸ್ಥಿತಿಯ ಕೈಗೊಂಬೆಯಾಗಿದ್ದು ದುರಂತವೇ ಸರಿ. ಸ್ವಾತಂತ್ರ್ಯ ಎಂದರೆ ಸ್ವೇಚ್ಚಾಚಾರವಲ್ಲ ಅದರ ಹಿಂದೆ ಕೋಟ್ಯಾಂತ ಜೀವಗಳ ಭಾವನೆಯಿದೆ ಸುಂದರ ರಾಷ್ಟ್ರದ ಪರಿಕಲ್ಪನೆಯಿದೆ, ಅದಕ್ಕೆ ಪೂರಕವಾದ ವಿಚಾರಗಳ ಸಾಂಗತ್ಯವಿದೆ ಆದರೆ ಅವನ್ನೆಲ್ಲ ಕಡೆಗಣಿಸುವ ಮೂಲಕ ಮಸಿಬಳಿಯಲಾಗುತ್ತಿದೆ. ಶ್ರೀ ಸಾಮಾನ್ಯನ ಜಾಗೃತಿ ಮತ್ತು ಪಾಲ್ಗೊಳ್ಳುವಿಕ ಮಾತ್ರ ಸಧೃಢ ರಾಷ್ಟ್ರದ ನಿರ್ಮಾಣಕ್ಕೆ ತಳಹದಿಯನ್ನು ಭದ್ರಪಡಿಸಬಲ್ಲದು. ರಾಷ್ಟ್ರೀಯತೆಯ ಕೆಚ್ಚು ಪ್ರತಿಯೊಬ್ಬ ಭಾರತೀಯನಿಗೆ ಬಂದಾಗ ಮಾತ್ರ ಅದು ಸಾಧ್ಯವಾದೀತು ಅಲ್ಲವೇ?

Wednesday, August 3, 2011

ಕೋಲ್ಗೇಟ್ ನಗೆಯ ಸರದಾರ,ಈಗ ರಾಜ್ಯದ ನೇತಾರ!

ಕರ್ನಾಟಕ ರಾಜ್ಯದ ಒಬ್ಬ ಪರಮ ಭ್ರಷ್ಟ ಮುಖ್ಯಮಂತ್ರಿಯ ನಿರ್ಗಮನದ ನಂತರ ಶ್ರಮಿಕ ವರ್ಗದ ನೇತಾರ, ವಿದ್ಯಾರ್ಥಿ ಪರಿಷತ್ ನ ಯೂತ್ ಐಕಾನ್ , ವಕೀಲ, ಸಂಸದ ಹಾಗೂ ಶುದ್ದ ಹಸ್ತರೆನಿಸಿದ ಡಿ ವಿ ಸದಾನಂದ ಗೌಡ ರಾಜ್ಯದ 26ನೇ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಅಷ್ಟರ ಮಟ್ಟಿಗೆ ಭಾರತೀಯ ಜನತಾ ಪಕ್ಷ ದಕ್ಷಿಣ ಭಾರತದಲ್ಲಿ ತನ್ನ ವರ್ಚಸ್ಸಿಗೆ ಉಂಟಾಗಿದ್ದ  ಹಾನಿಯನ್ನು ಸ್ವಲ್ಪಮಟ್ಟಿಗಾದರೂ ತೊಡೆದುಕೊಳ್ಳುವ ಪ್ರಯತ್ನ ಮಾಡುತ್ತಿದೆ ಎಂಬ ಆಶಾಭಾವನೆ ಮೂಡಿಸಿದೆಯಾದರೂ ಆತ ಮಾಜಿ ಮುಖ್ಯ ಮಂತ್ರಿ ಯಡಿಯೂರಪ್ಪನ ಹಾಟ್ ಫೇವರಿಟ್ ಎಂಬುದು ಮಾತ್ರ ಬೇಸರ ಭಾವ ಮೂಡಿಸಿದೆ. ಶತಾಯ ಗತಾಯ ಪಕ್ಷದ ವರ್ಚಸ್ಸು ಕಾದುಕೊಳ್ಳುವ ನಿಟ್ಟಿನಲ್ಲಿ ಬಾಜಪ ತೆಗೆದುಕೊಂಡ ಕಠಿಣ ನಿಲುವು ನಾಯಕತ್ವ ಬದಲಾವಣೆಗೆ ನಾಂದಿ ಹಾಡಿದೆ. ಇಂತಹ ಸನ್ನಿವೇಶದಲ್ಲಿ ಮುಳ್ಳು ಹಾದಿಯನ್ನು ಕ್ರಮಿಸಬೇಕಿರುವ ಡಿ ವಿ ಸದಾನಂದಗೌಡ ಆದ್ಯತೆಗಳೇನು? ಅವರು ಸಾಗಿಬಂದ ಹಿನ್ನೆಲೆ ಏನು? ಮಾಜಿ ಮುಖ್ಯಮಂತ್ರಿಯ ಅಡಿಯಾಳಾಗುವ ಮೂಲಕ ರಾಜ್ಯದಲ್ಲಿ ತಮಿಳುನಾಡು ಮಾದರಿಯ ಮತ್ತೊಬ್ಬ ಸೆಲ್ವಂ ಆಗುವರೇ? ಗಣಿ ವರದಿ ಕುರಿತು ಎಂತಹ ನಿಲುವು ತಳೆಯಬಹುದು? ಪಕ್ಷದ ಭ್ರಷ್ಟರನ್ನು ಮಟ್ಟ ಹಾಕುವರೇ? ರಾಜ್ಯದ ಜನತೆಗೆ ಉತ್ತಮ ಆಡಳಿತ ನೀಡಬಲ್ಲರೇ ಎಂಬುದು ಸಧ್ಯ ನಮ್ಮೆದುರಿಗಿರುವ ಪ್ರಶ್ನೆಗಳು.
              ಡಿ ವಿ ಸದಾನಂದ ಗೌಡ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಮಂಡೇಕೋಲು ಗ್ರಾಮದ ದೇವರಗುಂಡ ಕುಟುಂಬದ ಸಾಮಾನ್ಯ ಕುಟುಂಬಕ್ಕೆ ಸೇರಿದವರು. ತಂದೆ ವೆಂಕಪ್ಪಗೌಡ, ತಾಯಿ ಕಮಲ, ಜನನ 1953ರಲ್ಲಿ.ಪುತ್ತೂರು ತಾಲೂಕಿನ ಕೆಯ್ಯೂರು ಮತ್ತು ಸುಳ್ಯದಲ್ಲಿ ಪ್ರಾಥಮಿಕ ಹಾಗೂ ಪ್ರೌಡಶಿಕ್ಷಣವನ್ನು ಮುಗಿಸಿದ ಗೌಡರು ಕಾಲೇಜು ವಿದ್ಯಾಭ್ಯಾಸ ಮುಂದುವರೆಸಿದ್ದು ಪುತ್ತೂರಿನ ಸಂತಫಿಲೋಮಿನಾ ಕಾಲೇಜಿನಲ್ಲಿ. ಅದೇ ಕಾಲೇಜಿನಿಂದ ಬಿಎಸ್ಸಿ ಪಧವೀಧರರಾದ ಗೌಡರು ಮುಂದೆ ಉಡುಪಿಯ ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದಿಂದ ಕಾನೂನು ಶಿಕ್ಷಣ ಪೂರೈಸಿದರು. ವಿದ್ಯಾರ್ಥಿ ದೆಸೆಯಲ್ಲಿಯೇ ವಿಧ್ಯಾರ್ಥಿ ಚಳುವಳಿಗಳಲ್ಲಿ ಸಕ್ರಿಯವಾಗಿ ಕಾಣಿಸಿಕೊಳ್ಳಲಾರಂಭಿಸಿದ ಗೌಡರಿಗೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್  ನಾಯಕನಾಗಿ ರೂಪುಗೊಳ್ಳಲು ಅತ್ಯತ್ತಮ ವೇದಿಕೆಯನ್ನು ಒದಗಿಸಿತು. ನಂತರದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಕ್ರಿಯ ಕಾರ್ಯಕರ್ತನಾಗಿ ರೂಪುಗೊಂಡ ಗೌಡರು 1976ರಲ್ಲಿ ಸುಳ್ಯ ಮತ್ತು  ಪುತ್ತೂರಿನಲ್ಲಿ ವಕೀಲಿಕೆ ವೃತ್ತಿಯನ್ನು ಆರಂಭಿಸಿದರು. ಕೆಲವೇ ವರ್ಷಗಳಲ್ಲಿ ಉತ್ತರ ಕನ್ನಡ ಜಿಲ್ಲೆಯ ನ್ಯಾಯಾಲಯದಲ್ಲಿ ಸರ್ಕಾರಿ ಅಭಿಯೋಜಕರಾಗಿಯೂ ಕಾರ್ಯ ನಿರ್ವಹಿಸಿದ ಗೌಡರಿಗೆ ರಾಜಕೀಯ ಸೆಳೆತವೂ ಆಗಾಗ್ಯೆ ಕಾಡುತ್ತಲೇ ಇತ್ತು. ವಕೀಲಿಕೆಯ ದಿನಗಳಲ್ಲೇ ಸಾರ್ವಜನಿಕ ಮತ್ತು ಸಾಮಾಜಿಕ ಕಳಕಳಿಯ ಹೋರಾಟಗಳಲ್ಲಿ ಪಾಲ್ಗೊಳ್ಳುತ್ತಿದ್ದ  ಡಿವಿಎಸ್ ಸರ್ಕಾರಿ ಅಭಿಯೋಜಕರಾಗಿ ನಿಯುಕ್ತಿಗೊಂಡ ಅಲ್ಫಾವಧಿಯಲ್ಲೇ ತಮ್ಮ ಸರ್ಕಾರಿ ನೌಕರಿಗೆ ರಾಜೀನಾಮೆ ನೀಡಿಬಿಟ್ಟರು. ಅಷ್ಟರಮಟ್ಟಿಗೆ ಅವರ ರಾಜಕೀಯ ಸೆಳೆತ ಅವರನ್ನು ಆಕರ್ಷಿಸಿತ್ತು. 1981ರಲ್ಲಿ ಡಾಟಿ ಎಂಬುವವರನ್ನು ವರಿಸಿದ ಗೌಡರಿಗೆ ತಾಂತ್ರಿಕ ಶಿಕ್ಷಣ ಪೂರೈಸಿರುವ ಕಾರ್ತಿಕ್ ಎಂಬ ಪುತ್ರನೂ ಇದ್ದಾನೆ. 
           ಸಹಕಾರಿ ಚಳುವಳಿಗಳಲ್ಲಿ ತೊಡಗಿಕೊಂಡ ಗೌಡರು ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾ ಸಹಕಾರಿ  ಬ್ಯಾಂಕಿನ ಉಪಾಧ್ಯಕ್ಷರೂ ಕೂಡ ಆಗಿದ್ದರು ಎಂಬುದು ಗಮನಾರ್ಹ. ಕೃಷಿ ಮತ್ತು ಗ್ರಾಮೀಣಾಭಿವೃದ್ದಿ ಬ್ಯಾಂಕ್, ಕ್ಯಾಂಪ್ಕೋ ಮತ್ತಿತರ ಸಹಕಾರಿ ವಲಯಗಳಲ್ಲಿ ಸಾರ್ವಜನಿಕ ಪ್ರತಿನಿಧಿಯಾಗಿ ಸೇವೆಗೈದ ಗೌಡರು ಶ್ರಮಿಕ ವರ್ಗದ ನ್ಯಾಯೋಚಿತ ಹೋರಾಟಗಳಿಗೆ ಧ್ವನಿಯಾಗುವ ಮೂಲಕ ಕಾರ್ಮಿಕ ವರ್ಗದ ನೇತಾರರಾಗಿಯೂ ರೂಪುಗೊಂಡರು. ಭಾರತೀಯ ಮಜ್ದೂರ್ ಸಂಘ, ಆಟೋ ರಿಕ್ಷಾ ಮತ್ತು ಮಾಲೀಕರ ಸಂಘದ ಅಧ್ಯಕ್ಷ , ಬೀಡಿ ಮಜ್ದೂರ್ ಸಂಘದ ಅಧ್ಯಕ್ಷ, ಕರ್ನಾಟಕ ಕೈಗಾರಿಕೆಗಳ ಸಿಬ್ಬಂದಿ ಯೂನಿಯನ್ ಅಧ್ಯಕ್ಷ ರಾಗಿದ್ದುದನ್ನು ಗಣನೆಗೆ ತೆಗೆದುಕೊಳ್ಳುವುದಾದರೆ ಗೌಡರು ಸುಖಾ ಸುಮ್ಮನೆ ಪ್ರವರ್ಧಮಾನಕ್ಕೆ ಬಂದವರಲ್ಲವೆಂಬುದನ್ನು ಸಾಕ್ಷೀಕರಿಸುತ್ತವೆ. ರಾಜಕೀಯದ ಒಳ ಹೊರಗುಗಳನ್ನು ಅರಿಯುವ ಸಲುವಾಗಿ ಜನಸಂಘದ ಪ್ರಾಥಮಿಕ ಸದಸ್ಯತ್ವ ಪಡೆದ ಗೌಡರು ಮುಂದೆ ಸುಳ್ಯದ ಭಾಜಪ ಕ್ಷೇತ್ರ ಅಧ್ಯಕ್ಷರಾಗಿ ಆಯ್ಕೆಯಾದರು. ಹಾಗೆಯೇ ಯುವಮೋರ್ಚಾದ ನಾಯಕರಾಗಿ ರಾಜ್ಯದ ಮಟ್ಟದಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ, ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿಯೂ ವಿವಿಧ ಸ್ಥಾನಗಳನ್ನು ಪಕ್ಷದಲ್ಲಿ ಅಲಂಕರಿಸಿ 2006ರಲ್ಲಿ ಮೊದಲ ಭಾರಿಗೆ ರಾಜ್ಯ ಭಾಜಪ ಅಧ್ಯಕ್ಷರಾಗುವ ಮೂಲಕ ಭಾಜಪದ ಮಂಚೂಣಿ ನಾಯಕರೆನಿಸಿದರು. 1989ರಲ್ಲಿ ಮೊದಲ ಬಾರಿಗೆ ಪುತ್ತೂರಿನಿಂದ ವಿಧಾನ ಸಭಾ ಸದಸ್ಯ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಚುನಾವಣೆಗಳಿಗೆ ಕಾಲಿರಿಸಿದ ಗೌಡರು 1994ರಲ್ಲಿ ಮೊದಲ ಭಾರಿಗೆ ವಿಧಾನ ಸಭಾ ಸದಸ್ಯರಾಗಿ ಚುನಾಯಿತರಾದರು ಗೆಲುವಿನ ನಗೆ ಬೀರಿದರು. ಎರಡನೇ ಭಾರಿಗೆ ಎಂಎಲ್ ಎ ಆಗಿ ಆಯ್ಕೆಯಾಗುತ್ತಿದ್ದಂತೆ ವಿಧಾನ ಸಭೆಯಲ್ಲಿ ಶಾಸಕಾಂಗ ಪಕ್ಷದ ಉಪನಾಯಕನಾಗುವ ಮೂಲಕ ತಾನೊಬ್ಬ ಸಮರ್ಥ ನಾಯಕ ಎಂಬುದನ್ನು ಸಾಬೀತುಪಡಿಸಿದರು.ಸುಧೀರ್ಘ 10ವರ್ಷಗಳ ಶಾಸಕತ್ವದ ಸೇವೆಯಲ್ಲಿ ಅಡಿಕೆ ಬೆಳೆಗಾರರ ಸಮಸ್ಯೆಗಳಿಗೆ ನ್ಯಾಯ ದೊರಕಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದರಲ್ಲದೇ ಅಡಿಕೆ ಬೆಳೆಗಾರರಿಗೆ ನಾಯಕತ್ವ ಒದಗಿಸಿದರು. ಸಂಸದರಾಗಿ ಆಯ್ಕೆಯಾದಾಗ ಕಾಫಿ ಬೆಳೆಗಾರಿರಿಗೆ ವಿಶೇಷ ಪ್ಯಾಕೇಜ್ ಒದಗಿಸುವ ಜೊತೆಗೆ ಕಡೂರು-ಚಿಕ್ಕಮಗಳೂರು ಮತ್ತು ಮಂಗಳೂರು ನಡುವಣ ರೈಲ್ವೇ ಮಾರ್ಗದ  ಕೆಲಸ ಪೂರ್ಣಗೊಳಿಸಲು ಪ್ರಮುಖ ಕಾರಣಕರ್ತರೆನಿಸಿದ್ದಾರೆ. ಅತ್ಯುತ್ತಮ ಜನಾನುರಾಗಿ, ಪ್ರಾಮಾಣಿಕ ಹೋರಾಟಗಾರ,ನಿಷ್ಪೃಹ ಸಮಾಜ ಸೇವಕ, ಅಧ್ಯಯನ ಶೀಲ ಹಾಗೂ ರಾಷ್ಟ್ರೀಯವಾದಿಯೂ ಆಗಿರುವ ಸದಾನಂದಗೌಡ ನಿಜಕ್ಕೂ ಭಾಜಪದ ಅತ್ಯುತ್ತಮ ನಾಯಕ ಎನ್ನುವುದರಲ್ಲಿ ಸಂದೇಹವಿಲ್ಲ.
         ಸಂಸತ್ ನ ಮುಂಗಾರು ಅಧಿವೇಶನದಲ್ಲಿ ಆಗಬಹುದಾದ ಮುಖಭಂಗ ತಪ್ಪಿಸಿಕೊಳ್ಳುವ ಉದ್ದೇಶದಿಂದ ಪಕ್ಷದ ಮಂಚೂಣಿ ನಾಯಕ ಲಾಲ್ ಕೃಷ್ಣ ಅಡ್ವಾಣಿ ತೆಗೆದುಕೊಂಡ ಕಠಿಣ ಹಾಗೂ ಸೂಕ್ತ ನಿಲುವಿನಿಂದ ಯಡಿಯೂರಪ್ಪ ರಾಜೀನಾಮೆ ನೀಡುವಂತಾಗಿದೆ. ಇಂತಹ ಸಂಧರ್ಭದಲ್ಲಿ ಪಕ್ಷದ ನಾಯಕನ ಆಯ್ಕೆ ಯಡಿಯೂರಪ್ಪನ ಬಿಗಿಪಟ್ಟಿನಿಂದಾಗಿ ಕಷ್ಟ ಎನಿಸಿದಾಗ ಮುಖ್ಯ ಮಂತ್ರಿ ಅಭ್ಯರ್ಥಿಯ ಆಯ್ಕೆಗೆ ಮತದಾನ ನಡೆದಿದೆ. ಈ ಸಂಧರ್ಭದಲ್ಲಿ ಎರಡು ಬಣಗಳಾಗಿ ಒಡೆದು ಹೋದ ಬಿಜೆಪಿಗೆ ಜಗದೀಶ್ ಶೆಟ್ಟರ್ ಮತ್ತು ಸದಾನಂದ ಗೌಡ ಇಬ್ಬರು ಸಮರ್ಥ ನಾಯಕರೆನಿಸಿದರೂ ಸಹಾ ಅವರಿಬ್ಬರ ಬೆಂಬಲಕ್ಕೆ ನಿಂತವರ ಹುನ್ನಾರಗಳು ಮಾತ್ರ ಅಸಹ್ಯ ಹುಟ್ಟಿಸುವಂತಿವೆ. ಇದ್ದುದರಲ್ಲಿ ಜಗದೀಶ್ ಶೆಟ್ಟರ್ ಪರವಾಗಿ ಇದ್ದವರು ಪರವಾಗಿಲ್ಲ ಎನಿಸಿದರೂ ಸಹಾ ಜಾತಿ ರಾಜಕಾರಣ ಅಲ್ಲಿ ನೆಲೆ ನಿಂತದ್ದು ಮಾತ್ರ ಒಪ್ಪಿಕೊಳ್ಳುವಂತಿರಲಿಲ್ಲ.ಇನ್ನು ಸಂಘದ ಹುರಿಯಾಳು ಸದಾನಂದಗೌಡ ರ ಬೆನ್ನ ಹಿಂದೆ ನಿಂತದ್ದು ಖುದ್ದು ಯಡಿಯೂರಪ್ಪ ಮತ್ತು ಗಣಿ ಹಗರಣದಲ್ಲಿ ಕೊಚ್ಚಿ ಹೋಗುತ್ತಿರುವ ರೆಡ್ಡಿ ಬ್ರದರ್ಸ್. ತಮ್ಮ ಬೆಂಬಲದ ಅಭ್ಯರ್ಥಿ ಗೆಲುವಿಗೆ ಅನಾಮತ್ತು 500ಕೋಟಿ ಹೂಡಿಕೆ ಮಾಡಲು ಸಜ್ಜಾಗಿದ್ದ ರೆಡ್ಡಿಗಳ ಹುನ್ನಾರ ಯಾರಿಗೂ ತಿಳಿಯದ್ದೇನಲ್ಲ, ಅದೇ ರೀತಿ ಇನ್ನಾರು ತಿಂಗಳಲ್ಲಿ ತಾವೇ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಬರುವುದಾಗಿ ಹೇಳಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಸದಾನಂದ ಗೌಡರನ್ನು ಆಟಿಕೆ ಬೊಂಬೆಯಂತೆ ಆಡಿಸುವರೆ ? ತಮಿಳುನಾಡಿನಲ್ಲಿ ಮುಖ್ಯ ಮಂತ್ರಿಯಾಗಿದ್ದ ಜಯಲಲಿತ ಹಿಂದೊಮ್ಮೆ ತಮ್ಮ ರಬ್ಬರ್ ಸ್ಟಾಂಪ್ ಮುಖ್ಯಮಂತ್ರಿಯನ್ನಾಗಿ ಸೆಲ್ವಂ ನನ್ನು ಆಯ್ಕೆ ಮಾಡಿಕೊಂಡಂತೆ ರಾಜ್ಯದಲ್ಲೂ ಡಿವಿಎಸ್ ಆಯ್ಕೆಯಾಗಿದ್ದರೆ ಅದಕ್ಕಿಂತ ದುರಂತ ಮತ್ತೊಂದಿರಲಾರದು.ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಮಂದಿ ಬುದ್ದಿವಂತರು ಹಾಗೂ ಪ್ರಾಮಾಣಿಕರು ಎಂಬ ಭಾವನೆಯಿದೆ, ದಕ್ಷಿಣ ಕನ್ನಡ ಜಿಲ್ಲೆಯಿಂದ ಎರಡನೇ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಡಿವಿಎಸ್ ತಮ್ಮ ಮುಂದಿರುವ ಅಡ್ಡಿ ಆತಂಕಗಳನ್ನು ಮೀರುವರೆಂಬ ನಿರೀಕ್ಷೆಯಿದೆ. ಆದಾಗ್ಯೂ ಒಬ್ಬ ಪರಿಪೂರ್ಣ ನಾಯಕನಾಗಿ ರೂಪುಗೊಂಡಿರುವ ಡಿವಿಎಸ್ ಅಧಿಕಾರ ಸ್ಥಾನದಲ್ಲಿ ಕುಳಿತುಕೊಂಡಾಗ  ಆದರ್ಶವನ್ನೇ ಹೊದ್ದುಕೊಂಡು ಪ್ರಾಮಾಣಿಕವಾಗಿ ಕೆಲಸಮಾಡಲು ಸಧ್ಯದ ಪರಿಸ್ಥಿತಿ ಪೂರಕವಾಗಿಲ್ಲ ಆದಾಗ್ಯೂ ಇವೆಲ್ಲವನ್ನು  ಮೆಟ್ಟಿ ನಿಂತು ಸದಾನಂದಗೌಡ ರಾಜ್ಯಕ್ಕೆ ಉತ್ತಮ ಆಡಳಿತ ನೀಡುವರೇ ಕಾದು ನೋಡಬೇಕು.

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...