Sunday, October 30, 2011

'ನಮ್ಮ ಶಂಕರ'ನೆನಪಿಗೆ 'ನಮ್ಮ ಮೆಟ್ರೋ'!!

ವತ್ತು ಬೆಂಗಳೂರಿನ 'ಮೆಟ್ರೋ ರೈಲು' ಸಂಚಾರ ಉದ್ಘಾಟನೆಯ ದಿನ... ಜನ ಸಂಭ್ರಮದಿಂದ ಟಿಕೆಟ್ ಖರೀದಿಸಿ ಮೆಟ್ರೋ ಪ್ರಯಾಣದ ಸವಿ ಅನುಭವಿಸುವ ಖುಷಿಯಲ್ಲಿದ್ದರು..ನ್ಯೂಸ್ ಛಾನಲ್ ಒಂದು ಅದನ್ನ ಲೈವ್ ಆಗಿ ತೋರಿಸುತ್ತಿತ್ತು..  ಅಂತಹದ್ದೊಂದು ಗುಂಪಿನಲ್ಲಿ ಸಾಮಾನ್ಯ ಪ್ರಯಾಣಿಕರಂತೆ ಟಿಕೆಟ್ ಧರಿಸಿ ಸಂಭ್ರಮಿಸುತ್ತಿದ್ದ ಒಂದು ಹೆಣ್ಣು ಜೀವ ಕಾಣಿಸಿತು.. ಅದು ಸಂತೋಷವೋ, ಸಂತಸದ ದಿಗಿಲೋ ತಿಳಿಯುತ್ತಿರಲಿಲ್ಲ.. 'ಮೆಟ್ರೋ ನಮ್ಮ ಶಂಕರನ ಕನಸು ಅದು ಇವತ್ತು ನನಸಾಗಿದೆ ಅದಕ್ಕೆ ಟಿಕೆಟ್ ತಗೊಂಡಿದೀನಿ ನೋಡಿ, ಅವನ ನೆನಪಲ್ಲಿ ಪ್ರಯಾಣಿಸ್ತೀನಿ ಅಂತ ಹೇಳಿದ್ದು ಬೇರಾರು ಅಲ್ಲ, ಅವರೇ ಅರುಂಧತಿ ನಾಗ್!!ಒಂದೆಡೆ ಶಂಕರನ ಕನಸು ನನಸಾದ ಸಂಭ್ರಮ ಇನ್ನೊಂದೆಡೆ ಅದೇ ಸಮಯಕ್ಕೆ ಆತನಿಲ್ಲದ ದುಖ: ಅವರ ಮುಖಭಾವದಲ್ಲಿ ಬೇಡವೆಂದರೂ ಎದ್ದು ಕಾಣಿಸುತ್ತಿತ್ತು.  ಒಂದು ಕ್ಷಣ ನನಗೆ ತಿಳಿಯದಂತೆ ಕಣ್ಣಂಚು ಒದ್ದೆಯಾಯಿತು. ಹೌದು 'ನಮ್ಮ ಶಂಕರ'ನ ತಾಕತ್ತೇ ಅಂತಹುದು. 25ವರ್ಷಗಳ ಹಿಂದೆಯೇ ಇಂತಹದ್ದೊಂದು ಕನಸಿನ ಪ್ರಾಜೆಕ್ಟ್ ಸಿದ್ದಪಡಿಸಿ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದ ಸಂಧರ್ಭದಲ್ಲಿ ಪ್ರಸ್ತಾಪ ಮಾಡಿದ್ದು ನಮ್ಮ ವರ್ಕಾಲಿಕ್ ನಟ-ನಿರ್ದೇಶಕ-ನಾಟಕಕಾರ ಮಾನವೀಯ ಸೆಲೆಯ ಶಂಕರ್ ನಾಗ್.
         ಶಂಕರ್ ನಾಗ್ ನಮ್ಮನಗಲಿ ಸೆ.30ಕ್ಕೆ ಸರಿಯಾಗಿ 21ವರ್ಷಗಳು, ಆತ ಕೇವಲ ನಟನಾಗಿ, ನಿರ್ದೇಶಕನಾಗಿ ಉಳಿಯದೇ ಸಮಾಜ ಮುಖಿಯಾಗಿ ಚಿಂತಿಸುವ ಒಬ್ಬ ಶ್ರೇಷ್ಠ ವ್ಯಕ್ತಿಯಾಗಿ ಅಜರಾಮರ ಎನಿಸಿದ್ದಾರೆ. ಶಂಕರ್ ನಾಗರಕಟ್ಟೆ ಉತ್ತರ ಕರ್ನಾಟಕದ ಹೊನ್ನಾವರ ತಾಲೂಕಿನ ಮಲ್ಲಾಪುರ ಹಳ್ಳಿಯಲ್ಲಿ ಜನಿಸಿದ್ದು 9ನೇ ನವೆಂಬರ್ 1954ರಂದು. ಸಹಜಾಭಿನಯಕ್ಕೆ ಖ್ಯಾತಿ ಪಡೆದಿರುವ ಮೇರು ನಟ ಅನಂತ್ ನಾಗ್ ರ ಸಹೋದರಾಗಿದ್ದ ಶಂಕರ್ ನಾಗ್ ವಿದ್ಯಾಭ್ಯಾಸ ಮುಗಿದ ನಂತರ ಪ್ರಯಾಣ ಬೆಳೆಸಿದ್ದು ಮುಂಬೈಗೆ. ಅಲ್ಲಿ ಮರಾಠಿ ಹಾಗೂ ಕೊಂಕಣಿ ನಾಟಕಗಳಲ್ಲಿ ಭಾಗವಹಿಸುತ್ತಿದ್ದ ಶಂಕರ ಜೀವನೋಪಾಯಕ್ಕೆ ಬ್ಯಾಂಕ್ ನೌಕರಿಗೂ ಸೇರಿದ್ದರೂ. ಆದರೆ ರಂಗಭೂಮಿಯ ಸೆಳೆತ ಅವರನ್ನು ಕಲಾ ಲೋಕಕ್ಕೆ ಸೆಳೆದು ಬಿಟ್ಟಿತು. ಹೀಗಿರುವಾಗ ಅದೊಂದು ದಿನ ಗಿರಿಶ್ ಕಾರ್ನಾಡರು ದೆಹಲಿಯಲ್ಲಿ ನಡೆದ ಅಂತರ ರಾಷ್ಟ್ರಿಯ ಚಲನಚಿತ್ರೋತ್ಸವದಲ್ಲಿ ಶ್ರೆಷ್ಠ ಚಿತ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಿ ಪ್ರಶಸ್ತಿ ಪಡೆದ ಅಕಿರಾ ಕುರುಸೋವ ಅವರ ಜಪಾನಿ ಭಾಷೆಯ "ಸೆವೆನ್ ಸಮುರಾಯ್ಸ್" ಚಿತ್ರವನ್ನು ಕನ್ನಡದಲ್ಲಿ ತೆರೆಗೆ ತರಲು ಸಿದ್ದತೆ ನಡೆಸಿದ್ದರು. ಆ ಚಿತ್ರದ ಪ್ರಧಾನ ಪಾತ್ರಕ್ಕೆ ಸೂಕ್ತ ನಾಯಕನನ್ನು ಹುಡುಕುತ್ತಿದ್ದಾಗ ಮರಾಠಿ ರಂಗಭೂಮಿಯಲ್ಲಿ ಗಮನ ಸೆಳೆದಿದ್ದ ಶಂಕರ ಕಣ್ಣಿಗೆ ಬಿದ್ದಿದ್ದ. ಕಾರ್ನಾಡರು ಆಹ್ವಾನ ನೀಡಿದಾಗ ಮೊದಲಿಗೆ ನಿರಾಕರಿಸಿದ್ದ ಶಂಕರ್ ನಂತರ ಸಹೋದರನ ಒತ್ತಾಸೆಯ ಮೇರೆಗೆ 'ಒಂದಾನೊಂದು ಕಾಲದಲ್ಲಿ " ಚಿತ್ರವನ್ನು ಒಪ್ಪಿಕೊಂಡರು. ದೇಸೀ ನೆಲಕ್ಕೆ ಒಗ್ಗಿಸಿದ್ದ ಕಥೆಗೆ ಕೇವಲ ನಟನಾಗದೇ ತಾನೇ ಪಾತ್ರವಾಗಿ ಹೋದ ಶಂಕರ ಸಿನಿಮಾ ರಂಗದಲ್ಲಿ ತನ್ನ ಛಾಪನ್ನು ಮೂಡಿಸಿ ಬಿಟ್ಟಿದ್ದ, ಅಷ್ಟೇ ಅಲ್ಲ ಆ ಚಿತ್ರದ ನಟನೆಗಾಗಿ ಆತನಿಗೆ ರಾಷ್ಟ್ರಪತಿಗಳ ಗೋಲ್ಡನ್ ಪೀಕಾಕ್ ಅವಾರ್ಡ್ ನ ಗರಿಯನ್ನು ಮುಡಿಗೇರಿಸಿಕೊಂಡಿದ್ದ. ನೆನಪಿರಲಿ ಕನ್ನಡದಲ್ಲಿ ಅಂತಹ ಪುರಸ್ಕಾರ ಪಡೆದ ಏಕೈಕ ನಟ ಶಂಕರ್ ನಾಗ್. 1978ರಿಂದ ಆರಂಭವಾದ ಶಂಕರನ ಸಿನಿಮಾಯಾನ 1990ರ ವರೆಗೆ ಸತತವಾಗಿ 12ವರ್ಷ ಮುಂದುವರೆದಿತ್ತು. 90ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ನಟಿಸಿದ್ದ ಶಂಕರ ಒಂದು ಹಿಂದಿ ಸಿನಿಮಾದಲ್ಲೂ ನಟಿಸಿದ್ದಾರೆ. ನಟನಾಗಿ ಜನರನ್ನ ಆಕರ್ಷಿಸಿದ್ದಕ್ಕಿಂತ ನಿರ್ದೇಶಕನಾಗಿ ಹೆಚ್ಚು ಗಮನ ಸೆಳೆದ ಶಂಕರ್ ನಾಗ್ 70 ರ ದಶಕದಲ್ಲೇ ಅಡ್ವಾನ್ಸ್ ಆದ ಆಫ್ ಬೀಟ್ ಸಿನಿಮಾಗಳನ್ನು ನಿರ್ದೆಶಿಸಿದ್ದನಲ್ಲದೇ ಅದಕ್ಕಾಗಿ ಅಂತರ ರಾಷ್ಟ್ರೀಯ ಪುರಸ್ಕಾರಗಳನ್ನು ಪಡೆದರು. ಏಕ ಕಾಲದಲ್ಲಿ ರಂಗಭೂಮಿಗೂ ಗಮನ ನೀಡಿದ ಶಂಕರ್ ವಿದೇಶಿ ನೆಲದಲ್ಲೂ ತಮ್ಮ ಛಾಪನ್ನು ಮೂಡಿಸಿದ್ದರು. ಬಹುಶ: ರಂಗಭೂಮಿಯ ಮೂಲಕ ಶಂಕರ್ ವಿದೇಶಗಳಲ್ಲಿ ನೀಡಿದಷ್ಟು ಪ್ರದರ್ಶನಗಳನ್ನ ಮತ್ಯಾವ ಕಲಾವಿದನೂ ನೀಡಿರಲಾರ. ತನ್ನದೇ ನಿರ್ದೇಶನದ 'ಮಿಂಚಿನ ಓಟ' 'ಆಕ್ಸಿಡೆಂಟ್', 'ಗೀತಾ', 'ನೋಡೀಸ್ವಾಮಿ ನಾವಿರೋದೇ ಹೀಗೆ'  ಯಂತಹ ಹಲವು ವಿಭಿನ್ನ ಧಾಟಿಯ ಸಿನಿಮಾಗಳನ್ನು ನೀಡಿದ ಶಂಕರ್ ನಾಗ್ ತಾಂತ್ರಿಕವಾಗಿ ಅಂದಿನ ದಿನಗಳಲ್ಲಿ ಸವಾಲಾಗಿದ್ದ ಛಾಯಾಗ್ರಹಣದ ಸಾಧ್ಯತೆಗಳನ್ನು ಭಾರತೀಯ ಚಿತ್ರರಂಗದಲ್ಲಿ ಮೊದಲಭಾರಿಗೆ ಬಳಕೆಗೆ ತಂದದ್ದು ಇದೇ ಶಂಕರ್ ನಾಗ್.. 7ರಾಷ್ಟ್ರಗಳಿಗೆ ಭೇಟಿ ನೀಡಿ ತಂತ್ರಜ್ಣಾನದ ಸಾಧ್ಯತೆಗಳನ್ನು ಒಗ್ಗಿಸಿಕೊಂಡು ನಿರ್ದೇಶಿಸಿದ ಆ ಚಿತ್ರ ಡಾ|| ರಾಜ್ ನಟಿಸಿದ್ದ 'ಒಂದು ಮುತ್ತಿನ ಕಥೆ'. 
        ಶಂಕರ್ ಯೋಚಿಸುವ ಪರಿಯನ್ನ ಆತ ನಿರ್ದೇಶಿಸಿ ಚಿತ್ರಗಳನ್ನು ನೋಡಿದರೆ ತಿಳಿಯಬಹುದು, ಸಾಮಾಜಿಕ ಪರಿಣಾಮ ಬೀರುವ ಮತ್ತು ವಾಸ್ತವ ಜಗತ್ತಿನ ಅರಿವು ಮೂಡಿಸುವ ಮೂಲಕ ಚಿಂತನೆಗೆ ಹಚ್ಚುವ ಚಿತ್ರಗಳನ್ನು ನಿರ್ದೇಶಿಸಿದ ಶಂಕರ್, ಅಂತರ ರಾಷ್ಟ್ರೀಯ ಮಟ್ಟದಲ್ಲಿ ಧೃಢವಾಗಿ ತಮ್ಮನ್ನು ಪರಿಚಯಿಸಿ ಕೊಂಡದ್ದು 'ಮಾಲ್ಗುಡಿ ಡೇಸ್' ಎಂಬ ಕಿರುತೆರೆ ಸೀರಿಯಲ್ ಮೂಲಕ. ತಾನು ಬೆಳೆಯುವ ಜೊತೆಗೆ ಸಾವಿರಾರು ಕಲಾವಿದರು, ತಂತ್ರಜ್ಞರನ್ನು ಬೆನ್ನು ತಟ್ಟಿ ಉತ್ಸಾಹ ತುಂಬಿ ಬೆಳೆಸಿದ ಶಂಕರ್... ಮಾನವೀಯ ಸೆಲೆಯಿಂದಾಗಿ ಸಾಮಾನ್ಯ ಜನರ ಬದುಕಿನಲ್ಲೂ ಅಮರವಾಗಿ ಉಳಿದಿದ್ದಾರೆ. 'ಆಟೋ ರಾಜ' ಚಿತ್ರದ ನಂತರ ಖಾಯಂ ಆಗಿ ಆಟೋದವರ ಆರಾಧ್ಯ ಧೈವವಾಗಿ ಬೆಳೆದು ನಿಂತ ಶಂಕರ್ ನ ಎತ್ತರವನ್ನು ಎಷ್ಟೋ ಮಂದಿ ನಟರು ಬಂದು ಹೋದರು ಏರಲಾಗಿಲ್ಲವೆಂದರೆ ಅವನ ತಾಕತ್ತನ್ನು ಊಹಿಸಬಹುದು. ಇವತ್ತಿಗೂ ಕನ್ನಡ ಚಿತ್ರರಂಗದಲ್ಲಿ ಹಾಗೂ ಹಿಂದಿ ಸಿನಿಮಾ ರಂಗದಲ್ಲಿ ಶಂಕರ್ ನಿಂದ ಪ್ರೇರಿತರಾಗಿ ಯಶಸ್ಸು ಕಂಡಿರುವ ಹಲವಾರು ಮಂದಿ ಯನ್ನು ವಿವಿಧ ವಿಭಾಗಗಳಲ್ಲಿ ಕಾಣಬಹುದು. 
       ಸ್ವಾಭಿಮಾನದ ಸಂಕೇತದಂತಿದ್ದ ಶಂಕರ್ ನಾಗ್ ಕನ್ನಡ ಚಿತ್ರಗಳ ಧ್ವನಿ ಗ್ರಹಣ ಹಾಗೂ ಸಂಕಲನಕ್ಕಾಗಿ ತಮಿಳುನಾಡಿಗೆ ಹೋಗಬೇಕಾದಂತಹ ದಿನಗಳಲ್ಲಿ ಬೆಂಗಳೂರಿನಲ್ಲಿ ಸಂಕೇತ್ ಸ್ಟುಡಿಯೋ ಸ್ಥಾಪಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಆಸರೆಯಾದವರು ಶಂಕರ್ ನಾಗ್. ಅವತ್ತಿನ ದಿನಗಳಲ್ಲೇ ನಂದಿ ಬೆಟ್ಟಕ್ಕೆ ರೋಪ್ ವೇ, ನಗರದಲ್ಲಿ ಮೆಟ್ರೋ ರೈಲು ಯೋಜನೆ, ಬಡವರಿಗೆ ಕಡಿಮೆ ಬೆಲೆಯಲ್ಲಿ ನಿರ್ಮಿಸಿಬಹುದಾದಂತಹ ಮನೆಗಳನ್ನು ಹಾಲೆಂಡ್ ದೇಶದ ಮಾದರಿಯಲ್ಲಿ ನಿರ್ಮಿಸುವ ಪ್ರಸ್ತಾವ ಮುಂದಿರಿಸಿದ್ದು ಹಾಗು ದೇಶದಲ್ಲಿ ರೆಸಾರ್ಟ್ ಮಾದರಿ ಕಂಟ್ರಿ ಕ್ಲಬ್ ಸ್ತಾಪಿಸಿ ಅಲ್ಲಿ ನಿರಂತರ ರಂಗಭೂಮಿಗೆ ಉತ್ತೇಜನ ನೀಡುವ ಮಹತ್ವದ ಸಂಕಲ್ಪ ಮಾಡಿ ಶ್ರಮಿಸಿದ್ದು ಇದೇ ಶಂಕರ್ ನಾಗ್. 
        ಚಿತ್ರರಂಗದಲ್ಲಿರುವ ತೆರೆಯ ಹಿಂದಿನ ಮತ್ತು ಮೇಲಿನ ಸಾವಿರಾರು ಮಂದಿ ಇವತ್ತಿಗೂ ಶಂಕರ್ ನಾಗ್ ರನ್ನು ನೆನಪಿಸಿಕೊಂಡು ಕಣ್ಣೀರಾಗುತ್ತಾರೆಂದರೆ ಅದಕ್ಕೆ ಶಂಕರ್ ನಾಗ್ ರ ಆಲೋಚನ ಪರಿ ಹಾಗೂ ಆತನ ಕನಸುಗಳ ಮೂಟೆ, ಪ್ರೀತಿ ವಾತ್ಸಲ್ಯ, ಪ್ರೋತ್ಸಾಹ ಕಾರಣ. ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎಂಬ ಮಾತಿನಂತೆ ತಾನು ಕಂಡ ಕನಸುಗಳ ಸಾಕಾರಕ್ಕೆ ಇನ್ನಿಲ್ಲದ ಶ್ರಮ ಹಾಕುತ್ತಿದ್ದ ಶಂಕರ್ ನಾಗ್ ನಿದ್ರಿಸುತ್ತಿದುದು ತುಂಬಾ ಕಡಿಮೆ. ಅಂದರೆ ಸತ್ತ ಮೇಲೆ ದೀರ್ಘ ನಿದ್ದೆಗೆ ಅವಕಾಶವಿದೆ ಹಾಗಿರುವಾಗ ಬದುಕಿರುವಾಗ ದೀರ್ಘ ನಿದ್ರೆ ಮಾಡಿ ಸಮಯ ಹಾಳು ಮಾಡಬಾರದು ಎಂಬ ನಿಟ್ಟಿನಲ್ಲಿ ಶ್ರಮವನ್ನು ಧಾರೆಯೆರೆಯುತ್ತಿದ್ದ  ಶಂಕರ್ ನಾಗ್ ಯಾವತ್ತಿಗೂ ಜನಮಾನಸದಲ್ಲಿ ಅಜರಾಮರರೇ ಆಗಿದ್ದಾರೆ. ಒಂದು ಉತ್ತಮ ಅಭಿರುಚಿಯನ್ನ, ಅನುಭಾವವನ್ನ ನಮಗೆ ಉಳಿಸಿಹೋಗಿರುವ ಶಂಕರ್ ನಾಗ್ ಸದಾಕಾಲ ನೆನಪಿಗೆ ಅರ್ಹರೇ ಆಗಿದ್ದಾರೆ, ದೈಹಿಕಾವಾಗಿ ಇಲ್ಲದಿದ್ದರೂ ತಮ್ಮ ಕೆಲಸದ ಮೂಲಕ ನಮ್ಮೊಂದಿಗೆ ಇರುವ ಶಂಕರ್ ಹೆಸರನ್ನು 'ನಮ್ಮ ಮೆಟ್ರೋ'ಗೆ ಇಟ್ಟರೆ ಅದು ಸಾರ್ಥಕವಾದೀತು. ಸರ್ಕಾರ ದಿಸೆಯಲ್ಲಿ ಕ್ರಮ ವಹಿಸಬೇಕು, ಸಮಸ್ತ ಅಭಿಮಾನಿಗಳು ಮತ್ತು ಚಿತ್ರರಂಗದ ಒತ್ತಾಸೆ ಈ ನಿಟ್ಟಿನಲ್ಲಿ ಹೊರಹೊಮ್ಮಿದರೆ ಇದು ಸಾಧ್ಯವಾದೀತೇನೋ?

Sunday, October 16, 2011

'ಜ್ಞಾನ'ಪೀಠಕ್ಕೆ ಅಸಹನೆ ಯಾಕೆ?


ಮೊನ್ನೆ ಜಾನಪದ ವಿದ್ವಾಂಸ,ನಾಟಕಕಾರ, ಸಾಹಿತಿ,ನಿರ್ದೇಶಕ ಚಂದ್ರಶೇಖರ ಕಂಬಾರರಿಗೆ 8ನೇ ಜ್ಞಾನಪೀಠ ಪ್ರಶಸ್ತಿ ಪ್ರಕಟವಾದ ಸಂಧರ್ಭ..'ಯೋಗ್ಯತೆ ಇಲ್ಲದವರಿಗೆ ಜ್ಞಾನಪೀಠ ಪ್ರಶಸ್ತಿ ಬರುತ್ತಿದೆ, ಯೋಗ್ಯರು ಭಾಳಾ ಮಂದಿ ಅದಾರೆ ' ಎಂದು ಪ್ರತಿಕ್ರಿಯಿಸಿದ್ದು  ಪಾಟೀಲ ಪುಟ್ಟಪ್ಪ. "ಪ್ರಶಸ್ತಿ ಬಂದಾಗ ಪರ ವಿರೋಧ ಹೇಳಿಕೆ ನೀಡೋದು ಇರ್ತಾವಾ, ಅದು ಅವರವರ ಅಭಿಪ್ರಾಯ. ನಾನು ಅವರ ಹೇಳಿಕೆಗೆ ಹೆಚ್ಚಿನ ಪ್ರತಿಕ್ರಿಯೆ ನೀಡಲಾರೆ" ಎಂದು  ಡಾ. ಚಂದ್ರಶೇಖರ ಕಂಬಾರರು ಪ್ರತಿಕ್ರಿಯಿಸಿದ್ದರು. ನಂತರ ಪಾಟೀಲ ಪುಟ್ಟಪ್ಪನವರ ಧಾಟಿಯಲ್ಲೇ ಬೈರಪ್ಪನವರನ್ನು ಬೆಂಬಲಿಸುವ ಅದರಲ್ಲೂ ಜಾತಿಯ ಹಿನ್ನೆಲೆಯಲ್ಲಿ ಕಂಬಾರರ ಶ್ರೇಷ್ಠತೆಯನ್ನು ಪ್ರಶ್ನಿಸಲು ನಿಂತದ್ದು ಒಂದು ಸಮೂಹ! ಇದನ್ನು ವಿರೋಧಿಸುವ ಭರದಲ್ಲಿ ಎಸ್ ಎಲ್ ಬೈರಪ್ಪನವರನ್ನು ಸಾರ್ವತ್ರಿಕವಾಗಿ ತೆಗಳಿದ್ದಲ್ಲದೇ ಅವರಿಗೆ ಜ್ಞಾನಪೀಠ ಸಿಗುವುದೇ ಆದರೆ ಮರಣೋತ್ತರವಾಗಿ ಸಿಗಲಿ  ಎಂದು ನಿಡುಮಾಮಿಡಿ ಸ್ವಾಮೀಜಿ ಹಾಗೂ ಅಗ್ನಿ ಶ್ರೀಧರ್ ಇತರರು ಜರಿದದ್ದು ಕನ್ನಡ ಸಾರಸ್ವತ ಲೋಕದಲ್ಲಿ ಒಳ್ಳೆಯ ಬೆಳವಣಿಗೆಯೇನಲ್ಲ. 
        8ನೇ ಜ್ಞಾನಪೀಠ ಪ್ರಶಸ್ತಿ ಪಡೆಯುವ ಮೂಲಕ ಭಾರತೀಯ ಭಾಷೆಗಳ ಸಾಹಿತ್ಯ ವಲಯದಲ್ಲಿ ಉನ್ನತ ಸ್ಥಾನಕ್ಕೇರಿರುವ ಕನ್ನಡ ಭಾಷೆಯ ಶ್ರೇಷ್ಠತೆಗೆ ಸಮಸ್ತ ಕನ್ನಡಿಗರೂ ಸಂಭ್ರಮ ಪಡುವ ಕಾಲವಿದು. ಆದರೆ ಇದೇನಿದು? ಅತ್ಯುನ್ನತ ಪುರಸ್ಕಾರ ಲಭಿಸಿದಾಗ ಅದನ್ನು ಜಾತಿಯ ಹಿನ್ನೆಲೆಯಲ್ಲಿ, "ಲಾಬಿ" ಮಾಡಿ ಪಡೆದಿದ್ದಾರೆಂಬ ಅರ್ಥವಿಲ್ಲದ ವ್ಯಾಖ್ಯಾನ ಮಾಡುತ್ತಾ ಒಬ್ಬರ ಮೇಲೊಬ್ಬರು ಕೆಸರೆರಚಾಡುತ್ತಾ ಹಂಗಿಸುವ ಪರಂಪರೆ? ನಾಚಿಕೆಯಾಗ ಬೇಕು ಸದರಿ ಬುದ್ದಿಜೀವಿಗಳಿಗೆ ಮತ್ತು ತಲೆ ಬುಡ ತಿಳಿಯದೇ ಯಾವುದಾದರೊಂದು ಕಾರಣಕ್ಕೆ ಎರಡೂ ಪಕ್ಷಗಳನ್ನು ಬೆಂಬಲಿಸುವ ಮೂರ್ಖರಿಗೆ! ಕನ್ನಡ ಸಾಹಿತ್ಯ ಪರಂಪರೆ ಅತ್ಯಂತ ಶ್ರೀಮಂತವಾದದ್ದು ಇಲ್ಲಿ ಇನ್ನೂ ಹಲವಾರು ಮಂದಿ ಜ್ಞಾನಪೀಠಿಗಳಿದ್ದಾರೆ, ಪ್ರಶಸ್ತಿ ಬಾರದ ಮಾತ್ರಕ್ಕೆ ಅವರೆಲ್ಲ ತೃಣಕ್ಕೆ ಸಮಾನರೆಂದು ಯಾಕಾದರೂ ಭಾವಿಸಬೇಕು. ಕೆಲವು ಪ್ರಶಸ್ತಿಗಳಿಂದ ಯಾರೂ ದೊಡ್ಡವರಾಗುವುದಿಲ್ಲ, ಆದರೆ ಕೆಲವೊಮ್ಮೆ ಪುರಸ್ಕೃತರಾಗುವವರಿಂದ ಪ್ರಶಸ್ತಿಗೆ ಹೆಚ್ಚಿನ ಪ್ರಾಮುಖ್ಯತೆ ಸಿಕ್ಕುಬಿಡುತ್ತದೆ. ಈಗ ಜ್ಞಾನ ಪೀಠ ಪಡೆದ 8ಮಂದಿ ಜ್ಞಾನಪೀಠಿಗಳು ಅದ್ವಿತೀಯರೇ ಆಗಿದ್ದಾರೆ. ಆದರೆ ವ್ಯವಸ್ಥೆಯಲ್ಲಿ ದಿಕ್ಕುತಪ್ಪಿದ ಆಲೋಚನೆಗಳು ವಿನಾಕಾರಣ ಅಪಪ್ರಚಾರಕ್ಕೆ ಮುಂದಾಗಿ ಬಿಡುತ್ತವೆ ಇದು ಸಾರಸ್ವತ ಲೋಕಕ್ಕೆ ಅಪಾಯಕಾರಿ. 
       ಜ್ಞಾನಪೀಠ ಪ್ರಶಸ್ತಿ ಕುರಿತು ಚೂರು ಮಾಹಿತಿ ಹೇಳಿ ನಂತರ ಚರ್ಚೆಗೆ ಬರೋಣ, ಜ್ಞಾನಪೀಠ ಪ್ರಶಸ್ತಿ ಯಾವುದೇ ಸರ್ಕಾರ ಕೊಡುವ ಪ್ರಶಸ್ತಿಯಲ್ಲ! ಜ್ಞಾನಪೀಠ ಟ್ರಸ್ಟ್ ಇದನ್ನು ಕೊಡಮಾಡುತ್ತದೆ. ಜ್ಞಾನಪೀಠ ಟ್ರಸ್ಟ್ ನ ನಿರ್ವಹಣೆ ಜೈನ ಕುಟುಂಬ ಮಾಡುತ್ತದೆ, ಜ್ಞಾಪೀಠ ಟ್ರಸ್ಟ್ ನ ಒಡೆತನ ಟೈಂಸ್ ಆಫ್ ಇಂಡಿಯಾ ಗ್ರೂಪ್ ಗೆ ಸೇರಿದೆ. ಜ್ಞಾನಪೀಠ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ದೇಶದ ಅತ್ಯುತ್ತನ್ನತ ಪ್ರಶಸ್ತಿಯಾಗಿದೆ. ಈ ಪ್ರಶಸ್ತಿಯನ್ನು ಮೇ ೨೨ ೧೯೬೧ ರಲ್ಲಿ ಸ್ಥಾಪಿಸಲಾಯಿತು. ಈ ಪ್ರಶಸ್ತಿಯನ್ನು ಪ್ರಪ್ರಥಮವಾಗಿ ೧೯೬೫ ರಲ್ಲಿ ಮಲೆಯಾಳಂ ಲೇಖಕ ಜಿ. ಶಂಕರ ಕುರುಪರಿಗೆ ಪ್ರದಾನ ಮಾಡಲಾಯಿತು. ವಿಜೇತರಿಗೆ ಪ್ರಶಸ್ತಿ ಫಲಕ, ಐದು ಲಕ್ಷ ರುಪಾಯಿ ನಗದು ಹಾಗು ವಾಗ್ದೇವಿಯ ಕಂಚಿನ ವಿಗ್ರಹವನ್ನು ನೀಡಿ ಗೌರವಿಸಲಾಗುವುದು.
         ಅಂದ ಹಾಗೆ ಕನ್ನಡಕ್ಕೆ ಮೊದಲ ಜ್ಞಾನ ಪೀಠ ಪ್ರಶಸ್ತಿಯನ್ನು ತಂದು ಕೊಟ್ಟದ್ದು ಕುವೆಂಪು 1967ರಲ್ಲಿ. ಆ ದಿನಗಳಲ್ಲಿ ಇನ್ನೂ ಭಾರತೀಯ ಸಮಗ್ರ ಸಾಹಿತ್ಯಕ್ಕೆ ಕೊಡುಗೆ ನೀಡಿದವರಿಗೆ ಜ್ಞಾನಪೀಠ ಪ್ರಶಸ್ತಿಯನ್ನು ಕೊಡಲು ಆರಂಭಿಸಿರಲಿಲ್ಲ. ಆ ದಿನಗಳಲ್ಲಿ ತಮ್ಮ ಸಾಹಿತ್ಯ ಕೃತಿ ಶ್ರೀ ರಾಮಾಯಣ ದರ್ಶನಂ ಗೆ ಜ್ಞಾನಪೀಠ ಪ್ರಶಸ್ತಿಯನ್ನು ಕುವೆಂಪು ಪಡೆದಾಗ ಬೆಚ್ಚಿ ಬಿದ್ದದ್ದು ಪುರೋಹಿತ ಶಾಹಿ ವರ್ಗ.. ಒಬ್ಬ ಶೂದ್ರ ಜ್ಞಾನಪೀಠಕ್ಕೆ ಅರ್ಹವಾಗುವ ರಾಮಾಯಣ ದರ್ಶನಂ ಬರೆದನೋ ಎನ್ನುವ ಕಿಡಿಗೇಡಿ ಮಾತನ್ನು ಆಡಿ ಬಿಟ್ಟಿತ್ತು. ಅಂದು ಕುವೆಂಪು ತುಂಬ ನೊಂದು ಬಿಟ್ಟಿದ್ದರು. ಜ್ಞಾನಪೀಠ ಪ್ರಶಸ್ತಿ ಆರಂಭವಾದ ಕೆಲವೇ ವರ್ಷಗಳಲ್ಲಿ ಮೊಟ್ಟ ಮೊದಲ ಭಾರಿಗೆ  4ನೇ ಜ್ಞಾನಪೀಠ ಪ್ರಶಸ್ತಿಯನ್ನು ಕನ್ನಡಕ್ಕೆ ತಂದು ಕೊಟ್ಟ ಹೆಮ್ಮೆ ಕುವೆಂಪು ರವರದ್ದಾಗಿತ್ತು. ಆದರೆ ಜಾತೀಯ ಅಸಹನೇ ಮತ್ತು ಕೀಳು ಮನೋಭಾವ,  ಸಂಕುಚಿತ ಮನೋಭಾವ ಜ್ಞಾನಪೀಠದ ಸಂಭ್ರಮವನ್ನು ಅಂದು ಹೊಸಕಿ ಹಾಕಿತ್ತು. ಇವತ್ತು ಅದೇ ಮನಸ್ಸುಗಳು ಕಂಬಾರರನ್ನು ಜಾತಿಯ ಹಿನ್ನೆಲೆಯಲ್ಲಿ ಅಣಕಿಸಲು ಪ್ರಯತ್ನಿಸುತ್ತಿರುವುದು ವ್ಯವಸ್ಥೆಯ ದುರಂತವೇ ಸರಿ! 
       ಚಂದ್ರ ಶೇಖರ ಕಂಬಾರರಿಗೂ ಇದು ಹೊಸತೇನಲ್ಲ.  ಕಂಬಾರರು ಯುವಕರಾಗಿದ್ದಾಗ ದಾರವಾಡದ ಕವಿ ಸಮ್ಮೇಳನದಲ್ಲಿ ಕವಿತೆಯೊಂದನ್ನು ಓದಿದ್ದರಂತೆ,ಖ್ಯಾತ ಕವಿಗಳೊಬ್ಬರು ಅಧ್ಯಕ್ಷತೆ ವಹಿಸಿದ್ದರು,ಕಂಬಾರರ ಕವಿತೆ ಅಲ್ಲಿ ಓದಿದ ಎಲ್ಲ ಕವಿಗಳಿಗಿಂತ ಭಿನ್ನವಾಗಿದ್ದದ್ದು ಎಲ್ಲರ ಗಮನಕ್ಕೆ ಬಂದಿದ್ದರೂ,ಅದ್ಯಕ್ಷರು ಕಂಬಾರರ ಬಗ್ಗೆ ಕುಹಕದ ಮಾತು ಹೇಳಿದ್ದರು,"ಕಬ್ಬಿಣ ಕಾಸುವವರೂ ಈಗ ಕಾವ್ಯ ಬರೆಯುತ್ತಿದ್ದಾರೆ " ಎಂಬ ಅಧ್ಯಕ್ಷರ ಮಾತು ಕಂಬಾರರ ಸ್ವಾಭಿಮಾನವನ್ನೇ ಬಡಿದೆಬ್ಬಿಸಿತು,ಅಂದೇ ಕಂಬಾರ ಕಾವ್ಯವನ್ನು ಪಳಗಿಸಿಕೊಳ್ಳಲು ನಿರ್ಧರಿಸಿದರಂತೆ.ಅವರ ಅಚಲ ನಿರ್ಧಾರ ಹಾಗೂ ಪ್ರಯತ್ನಗಳು ಇವತ್ತು ಅವರ ಸಾಧನೆಯನ್ನು ಜ್ಞಾನಪೀಠದ ಅಂಚಿಗೆ ತಂದು ನಿಲ್ಲಿಸಿದೆ. ಚಂದ್ರ ಶೇಖರ ಕಂಬಾರ ಕನ್ನಡದ ವರಕವಿ ದ.ರಾ ಬೇಂದ್ರೆಯವರ ನಂತರ ಕನ್ನಡ ಭಾಷೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ದುಡಿಸಿಕೊಂಡು ಸಾಹಿತ್ಯ ರಚಿಸಿದ ಕೀರ್ತಿ ಕಂಬಾರರಿಗೆ ಸಲ್ಲುತ್ತದೆ. ಮೊಟ್ಟ ಮೊದಲ ಭಾರಿಗೆ ಕನ್ನಡದಲ್ಲಿ ಜಾನಪದ ವಿಶ್ವಕೋಶವನ್ನು ರಚಿಸಿದ ಕಂಬಾರ ಆ ಮೂಲಕ ಜಾನಪದ ಸಾಹಿತ್ಯ ಕ್ಷೇತ್ರಕ್ಕೆ ವಿಶೇಷವಾದ ಸ್ಥಾನವನ್ನು ಕಲ್ಪಿಸಿದ್ದಾರೆ. ಜಾನಪದದ ಜೊತೆಗೆ ವೈಚಾರಿಕತೆಯನ್ನು ಬೆಸೆಯುವ ಕಂಬಾರರ ಧಾಟಿ ಅವರಿಗೆ ಸರಿಸಾಟಿಯಾಗುವಂತಿದೆ. ಕಂಬಾರರು ಒಟ್ಟು ೨೨ ನಾಟಕಗಳು, ೮ ಕವನ ಸಂಕಲನಗಳು ಮತ್ತು ೪ ಕಾದಂಬರಿಗಳನ್ನು ರಚಿಸಿದ್ದಾರೆ. ಅಲ್ಲದೆ ಚಕೋರಿ ಎಂಬ ಮಹಾಕಾವ್ಯ, ಜಾನಪದ, ರಂಗಭೂಮಿ, ಸಾಹಿತ್ಯ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ೧೪ ಸಂಶೋಧನಾ ಕೃತಿಗಳನ್ನೂ ರಚಿಸಿದ್ದಾರೆ.ಏಲ್ಲಾ ಸೇರಿ ಸುಮಾರು ನಲವತ್ತಕ್ಕೂ ಮಿಕ್ಕಿ ಕೃತಿಗಳು ಹೊರಬಂದಿವೆ.ಇವರ ಅನೇಕ ಕೃತಿಗಳು ಹಿಂದಿ, ಇಂಗ್ಲೀಷ್ ಸಹಿತ ಹಲವು ಭಾಷೆಗಳಿಗೆ ಅನುವಾದಗೊಂಡಿವೆ.‘ಬೆಂಬತ್ತಿದ ಕಣ್ಣು’(೧೯೬೧) ಮತ್ತು ‘ನಾರ್ಸಿಸಸ್‌’(೧೯೬೯) ಹೆಸರು ಮಾಡಿದ ಇವರ ನಾಟಕಗಳು.ಪದ್ಮಶ್ರೀ, ನಾಡೋಜ, ಕಬೀರ್ ಸಮ್ಮಾನ್ ಹೀಗೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದಿರುವ ಕಂಬಾರರು ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅನನ್ಯವಾದದ್ದು. ಅದೇ ರೀತಿ ಸಂತೆ ಶಿವರ ಲಿಂಗಣ್ಣಯ್ಯ ಬೈರಪ್ಪ ಸಾಹಿತ್ಯ ಲೋಕದಲ್ಲಿ ವಿಶಿಷ್ಠ ರೀತಿಯಲ್ಲಿ ತಮ್ಮ ಅಸ್ತ್ವಿತ್ವ ದಾಖಲಿಸಿದವರು. ಆಧುನಿಕ ದಿನಗಳಲ್ಲಿ ಇವತ್ತಿಗೂ ಹೆಚ್ಚು ಓದಿಸಿಕೊಳ್ಳುವ ನಂ.1 ಸ್ಥಾನ ಅತಿಕ್ರಮಿಸಿದ ಹೆಗ್ಗಳಿಕೆ ಬೈರಪ್ಪನವರಿಗಿದೆ. 2010ರ ಸರಸ್ವತಿ ಸಮ್ಮಾನ್,ಪಂಪ ಪುರಸ್ಕಾರ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹೀಗೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿರುವ ಬೈರಪ್ಪನವರ ಸಾಹಿತ್ಯ ಉರ್ದು,ಸಂಸ್ಕೃತ,ಇಂಗ್ಲೀಷ್, ಮರಾಠಿ,ಗುಜರಾತಿ, ಬೆಂಗಾಲಿ ಸೇರಿದಂತೆ ಹಲವು ಭಾಷೆಗಳಿಗೆ ತರ್ಜುಮೆ ಗೊಂಡಿದೆ. ಹಿಂದಿ ಭಾಷೆಗೆ ಅನುವಾದಗೊಂಡ ಇವರ ಸಾಹಿತ್ಯ ಅಲ್ಲೂ ಇವರನ್ನು ಅತ್ಯುತ್ತಮ ಬರಹಗಾರರ ಸಾಲಿನಲ್ಲಿ ನಿಲ್ಲಿಸಿದೆ. 24ಕಾದಂಬರಿಗಳು, ಒಂದು ಆತ್ಮ ಕಥನ, 4ತತ್ವಶಾಸ್ತ್ರ ಸಾಹಿತ್ಯವನ್ನು ಬರೆದಿರುವ ಬೈರಪ್ಪ ನವರ "ಆವರಣ"ಮತ್ತು "ಕವಲು" ಕಾದಂಬರಿಗಳು ಬಿಡುಗಡೆಗೆ ಮುನ್ನವೇ ಸಂಚಲನ ಸೃಷ್ಟಿಸಿದವು. ಬಹುಶ: ಕನ್ನಡದ ಬೇರಾವ ಕೃತಿಗಳಿಗೆ ಮತ್ತು ಲೇಖಕರಿಗೆ ಈ ಮಟ್ಟದ ಪ್ರೋತ್ಸಾಹ ದೊರೆತಿರಲಾರದು.   ಸಾಹಿತ್ಯ ಕೃಷಿಗೂ ಮುನ್ನ ಬಾಲ್ಯದಲ್ಲಿಯೇ ಸ್ವಾತಂತ್ರ್ಯ ಸಂಗ್ರಾಮಕ್ಕೂ ದುಮುಕಿ ದೇಶ ಪ್ರೇಮ ಮೆರೆದ ಅಸೀಮ ವ್ಯಕ್ತಿತ್ವ ಬೈರಪ್ಪನವರದ್ದು.   ಇದು ಅಸಲು ಸಂಗತಿ ಹೀಗಿರುವಾಗ ಕವಿಗಳನ್ನು ಸಾಹಿತಿಗಳನ್ನು ಏಕ ದೃಷ್ಠಿಕೋನದಿಂದ ಅಳೆಯುವುದು ಸರಿಯೇ? 
           ಬೈರಪ್ಪ ಮತ್ತು ಕಂಬಾರ ಅವರವರ ನೆಲೆಗಟ್ಟಿನಲ್ಲಿ ಕನ್ನಡ ಸಾರಸ್ವತ ಲೋಕಕ್ಕೆ ಮಹತ್ವದ ಕೊಡುಗೆಗಳನ್ನು ನೀಡಿದ್ದಾರೆ ಆದರೆ ಅವರ ವೈಯುಕ್ತಿಕ ವಿಚಾರಗಳು, ಜಾತೀಯ ಹಿನ್ನೆಲೆ ಒಂದು ಸಂಭ್ರಮವನ್ನು ಹಾಳು ಮಾಡಬಾರದಲ್ಲವೇ? ಪ್ರಶಸ್ತಿ ದಕ್ಕಿದ ಸಂಧರ್ಭದಲ್ಲಿ ಇವೆಲ್ಲಾ ಬೇಕಾ ಹೇಳಿ? ಇದುವರೆಗೆ ಪ್ರಶಸ್ತಿ ದಕ್ಕಿಸಿಕೊಂಡವರಲ್ಲಿ ಇಂತಹ ಅಸಹಜವಾದ ಮುಜುಗುರಕ್ಕೆ ಒಳಗಾಗಿದ್ದು ಕುವೆಂಪು ಮತ್ತು ಕಂಬಾರ ಮಾತ್ರವಲ್ಲ ಯು ಆರ್ ಅನಂತ ಮೂರ್ತಿ ಹಾಗೂ ಗಿರೀಶ್ ಕಾರ್ನಾಡರಿಗೆ ಪ್ರಶಸ್ತಿ ಬಂದಾಗಲೂ ಹೊಟ್ಟೆಕಿಚ್ಚಿನ ಒಂದು ವರ್ಗ "ಲಾಬಿ" ಮಾಡಿ ಪ್ರಶಸ್ತಿ ಗಿಟ್ಟಿಸಿಕೊಂಡವರೆಂಬ ಹಣೆ ಪಟ್ಟಿ ಕಟ್ಟಿತ್ತು. ಕನ್ನಡಕ್ಕೆ ಇನ್ನೂ ಹೆಚ್ಚಿನ ಜ್ಞಾನಪೀಠಗಳು ಬರಬೇಕಿದೆ ಸಧ್ಯ ಜ್ಞಾನಪೀಠ ಪಡೆದಿರುವವರಲ್ಲಿ 2ನೇ ಸ್ಥಾನದಲ್ಲಿರುವ ಹಿಂದಿಗಿಂತಲೂ  ಕನ್ನಡ 2ಪ್ರಶಸ್ತಿಗಳಿಂದ ಮೇಲಿದೆ, ನಾವಿನ್ನೂ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನವನ್ನು ದಕ್ಕಿಸಿಕೊಳ್ಳಲಾಗಿಲ್ಲ, ಇಂತಹ ಸಂಧರ್ಭದಲ್ಲಾದರೂ ಒಗ್ಗೂಡಿ ಶಾಸ್ತ್ರೀಯ ಸ್ಥಾನಮಾನಕ್ಕೆ ಹಕ್ಕೊತ್ತಾಯ ಮಂಡಿಸುವುದನ್ನು ಬಿಟ್ಟು ಇದೆಂಥದು ಕೆಸರೆರಚಾಟ? ಇನ್ನಾದರೂ ಮೂರ್ಖರು ಬುದ್ದಿ ಕಲಿಯಬಾರದೇ?

Sunday, October 9, 2011

ಅಣ್ಣಾಹಜಾರೆ ಮತ್ತು ತಂಡಕ್ಕೆ ಇದೆಲ್ಲಾ ಬೇಕಿತ್ತಾ?

ಒಂದು ಕನಸು, ಒಂದು ನಿರೀಕ್ಷೆ, ಒಂದು ಕೆಚ್ಚು, ಒಂದು ನಂಬಿಕೆ ಹೀಗೆ ಎಲ್ಲವನ್ನೂ ಹುಸಿಗೊಳಿಸುವ ಮತ್ತು ಮನಸ್ಸಿಗೆ ಆಘಾತ ವಾಗುವಂತಹ ವಿದ್ಯಮಾನಗಳು ಈಗ ಘಟಿಸುತ್ತಿವೆ. ಗಾಂಧೀ ಮಾರ್ಗದಲ್ಲಿ ಆರಂಭಗೊಂಡ ಚಳುವಳಿಯೊಂದು ಇಷ್ಟು ಬೇಗ ದಿಕ್ಕು ತಪ್ಪ ಬಹುದೆಂದು ಯಾರೂ ನಿರೀಕ್ಷಿಸಿರಲಿಕ್ಕಿಲ್ಲ ಆದಾಗ್ಯೂ ಜನಲೋಕಪಾಲ ಮಸೂದೆ ಅನುಷ್ಠಾನಕ್ಕೆ ಒತ್ತಾಯಿಸಿ ನಡೆಯುತ್ತಿದ್ದ ಚಳುವಳಿ ಪೀಕ್ ಪಾಯಿಂಟ್ ತಲುಪಿದಾಗ, ಚಳುವಳಿಯ ಅಂತಿಮ ಸ್ವರೂಪ ಏನು? ಅಣ್ಣಾ ಮತ್ತು ತಂಡ ಚಳುವಳಿಗೆ ಸಿಕ್ಕಿರುವ ಅಭೂತಪೂರ್ವ ಬೆಂಬಲವನ್ನ ಹೇಗೆ ಕಾಯ್ದು ಕೊಳ್ಳುತ್ತದೆ? ಎಂಬ ಪ್ರಶ್ನೆಯನ್ನು ಕೆಲವು ಬುದ್ದಿ ಜೀವಿಗಳು ಎತ್ತಿದ್ದರು. ಹಾಗೆಯೇ ಚಳುವಳಿಯೊಂದು ದಿಕ್ಕು ತಪ್ಪಿ ಆಶಯಗಳು ನೆನೆಗುದಿಗೆ ಬೀಳುವ ಬಗ್ಗೆಯೂ ಆತಂಕವಿತ್ತು. ಈಗ ಅಣ್ಣಾ ತಂಡದ ಕ್ರೇಜಿವಾಲ್ ಮತ್ತು ಕಿರಣ್ ಬೇಡಿ ಸಾರ್ವಜನಿಕ ಆತಂಕವನ್ನು ನಿಜವಾಗಿಸುತ್ತಿದ್ದಾರೆ. ಇದರ ಹಿಂದೆ ಜನಸಾಮಾನ್ಯರಿಗೆ ತಿಳಿಯದ ಹುನ್ನಾರವೂ ಸಹಾ ಇರಬಹುದೆಂಬ ಅನುಮಾನ ವ್ಯಕ್ತವಾಗಲಾರಂಬಿಸಿದೆ. ನಮ್ಮ ದೇಶದ ಮಟ್ಟಿಗೆ ಇದು ಭ್ರಷ್ಟಾಚಾರದ ವಿರುದ್ದದ ಚಳುವಳಿ ಇರಬಹುದು ಇತರೆ ಚಳುವಳಿಗಳಿರಬಹುದು , ಎಲ್ಲವುಗಳ ಹಿಂದೆಯೂ ಅಪಾಯಕಾರಿ ಹಾಗೂ ಸರ್ವ ಸಮ್ಮತವಲ್ಲದ ಗುರಿಗಳ ಈಡೇರಿಕೆಗೆ ಕೆಲವು ಚಳುವಳಿಗಳು ಬಳಕೆಯಾಗುತ್ತಿರುವುದು ಅತ್ಯಂತ ವಿಷಾಧನೀಯಕರ ಸಂಗತಿ.
           ದೇಶದ 1,210,193,422ಮಿಲಿಯನ್ ಜನಸಂಖ್ಯೆಯ ಬಹುಪಾಲು ಜನರ ಆಶೋತ್ತರದ ಪ್ರತೀಕವಾಗಿದ್ದ ಅಣ್ಣಾ ತಂಡದ ನಿಲುವು ಈಗ ರಾಜಕೀಯ ಶಕ್ತಿಯಾಗಿ ಬದಲಾಗುವ ಸೂಚನೆ ನೀಡಿದೆ. ರಾಜಕೀಯ ಶಕ್ತಿ ಯಾವುದೇ ಹೋರಾಟಕ್ಕೆ ಹೆಚ್ಚಿನ ಒತ್ತು ನೀಡುತ್ತದೆ ಎಂಬುದು ಒಪ್ಪ ತಕ್ಕ ಮಾತೆ ಆಗಿದೆ. ಆದರೆ ರಾಜಕೀಯದ ನೆವದಲ್ಲಿ,ಸದುದ್ದೇಶಕ್ಕೆ ಒಗ್ಗೂಡಿಸಿದ ಶಕ್ತಿಯನ್ನು, ಜನರ ಭಾವನೆಗಳನ್ನು ಒಮ್ಮೆಲೆ ತೂರಿ ಬಿಡುವುದನ್ನು ಅರಗಿಸಿಕೊಳ್ಳಲಾಗದು ಹಾಗೂ ಒಪ್ಪಿಕೊಳ್ಳಲಾಗದು. ಅಣ್ಣಾ ತಂಡ ಜನ್ ಲೋಕಪಾಲ ಮಸೂದೆಯನ್ನು ಒಪ್ಪದ ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಿ ಎಂಬ ಘೋಷಣೆಯನ್ನು ಹೊರಡಿಸಿದೆ, ಇದಕ್ಕಾಗಿ ಕಿರಣ್ ಬೇಡಿ ಹಾಗೂ ಅರವಿಂದ ಕ್ರೇಜೀವಾಲ್ ಬೇರೆ ಬೇರೆ ರಾಜ್ಯಗಳಿಂದ ಆಂಧೋಲನ ಆರಂಭಿಸಿದ್ದಾರೆ. ಸದರಿ ಆಂಧೋಲನದಲ್ಲಿ ಕಾಂಗ್ರೆಸ್ ತಿರಸ್ಕರಿಸಿ ಎಂದು ಅಣ್ಣಾ ಭಾಷಣ ಮಾಡಿದ್ದಾರೆನ್ನಲಾದ ಧ್ವನಿ ಮುದ್ರಿಕೆಯನ್ನು ಬಳಸಿಕೊಳ್ಳಲಾಗುತ್ತ್ದೆದೆಯಂತೆ! ಕಾಂಗ್ರೆಸ್ ತಿರಸ್ಕರಿಸಿ ಎಂದರೆ ಯಾವುದನ್ನು ಪುರಸ್ಕರಿಸಬೇಕು? ಉತ್ತರ ಬಹಳ ಸರಳ, ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಹವಣಿಸುತ್ತಿರುವ ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸಬೇಕಾ? ಚುನಾವಣೆಗಳು ಹತ್ತಿರವಿರುವ ಸಂಧರ್ಭದಲ್ಲೇ ಅತ್ಯಂತ ಕೆಟ್ಟ ಆಡಳಿತ ನೀಡಿ ಕೋಮುವಾದಿ ಭಾವನೆಗಳನ್ನು ಪುರಸ್ಕರಿಸುವ ಮೂಲಕ  ಹೀನ ಚಾರಿತ್ರ್ಯ ಹೊಂದಿರುವ ಗುಜರಾತ್ ನ ಮುಖ್ಯ ಮಂತ್ರಿ ನರೇಂದ್ರ ಮೋದಿ, ತನ್ನ ಹೆಸರು ಪ್ರಧಾನಿ ಪಟ್ಟಕ್ಕೆ ಕೇಳಿ ಬರುತ್ತಿದ್ದಂತೆಯೇ  ಉಪವಾಸದ ಸೋಗಿನಲ್ಲಿ ತಾನೊಬ್ಬ ಸತ್ಪುರುಷನೆಂದು ತೋರಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.ಈ  ಮೂಲಕ ಬಿಜೆಪಿ ಮೋದಿಯನ್ನು ಪ್ರಧಾನಿ ಪಟ್ಟಕ್ಕೆ ಪ್ರಸ್ತಾಪಿಸುತ್ತಾ ಚುನಾವಣೆಗಳನ್ನು ಎದುರು ನೋಡುತ್ತಿದೆ, ಹೀಗಿರುವಾಗ ಅಣ್ಣಾ ಹಜಾರೆಯಂತಹವರೇ ಕಾಂಗ್ರೆಸ್ ತಿರಸ್ಕರಿಸಿ ಎಂದು ಊರೂರು ತಿರುಗಿದರೆ ಇವರ ಆಂಧೋಲನವನ್ನು ಬೆಂಬಲಿಸಿದವರ ಕಥೆ ಏನಾಗಬೇಕು? 
            ಅಸಲಿಗೆ ಜನ ಲೋಕಪಾಲ ಮಸೂದೆಯ ಕರಡನ್ನು ತಯಾರಿಸಿದ್ದು ಶಾಂತಿಭೂಷಣ್ ಆದರೂ ಸಹಾ ಅದನ್ನು ಅಗತ್ಯಕ್ಕೆ ತಕ್ಕಂತೆ ತಿದ್ದಿ ಅಣ್ಣಾ ಹಜಾರೆಯನ್ನು ಹೈಜಾಕ್ ಮಾಡಿದವರು ಅರವಿಂದ ಕ್ರೇಜಿವಾಲ್ ಮತ್ತು ಕಿರಣ್ ಬೇಡಿ, ಅತ್ಯಂತ ನಾಟಕೀಯವಾಗಿ ನಡೆದು ಕೊಳ್ಳುವ ಮೂಲಕ ಸಾರ್ವಜನಿಕ ಅವಗಣನೆಗೂ ತುತ್ತಾಗಿದ್ದರು, ನಂತರದ ಬೆಳವಣಿಗೆಗಳಲ್ಲಿ ತಾವು ಸಂಸತ್ ಗೆ ಸ್ಪರ್ದಿಸುವ ಇಂಗಿತವನ್ನು ವ್ಯಕ್ತಪಡಿಸುವ ಮೂಲಕ ಈಗ ಭ್ರಷ್ಟಾಚಾರ ವಿರೋಧಿ ಆಂಧೋಲನವನ್ನ ಬದಿಗಿರಿಸಿ ಕಾಂಗ್ರೆಸ್ ತಿರಸ್ಕರಿಸಿ ಆಂಧೋಲನವನ್ನು ಮುನ್ನೆಡೆಸಲು ನಿಂತಿದ್ದಾರೆ ಅಂದರೆ ಇವರ ಹಿಂದಿರುವ ಶಕ್ತಿಗಳು ಯಾವುದು ಎಂಬುದು ಯಾರಿಗೂ ತಿಳಿಯದ ಸಂಗತಿಯಲ್ಲ ಅಲ್ಲವೇ? ಅಣ್ಣಾ ಟೀಂ ಈಗ ಒಟ್ಟಾಗಿ ಉಳಿದಿಲ್ಲ ಎಂಬ ಸಂಗತಿಯೂ ಬೇಸರದ ಸಂಗತಿಯೇ ಆಗಿದೆ, ಸ್ಪಷ್ಟ ನಿಲುವಿಲ್ಲದೆ, ಒಗ್ಗೂಡಿದ ಶಕ್ತಿಯನ್ನು ವೈಯುಕ್ತಿಕ ಉದ್ದೇಶಕ್ಕೆ ಬಳಸಿಕೊಳ್ಳುವುದು ಎಷ್ಟು ಸರಿ? ಅಣ್ಣಾ ಮತ್ತು ಅವರ ತಂಡ ರಾಜಕೀಯ ಶಕ್ತಿಯಾಗಿ ಬದಲಾಗುವುದಾದರೆ ಜನ ಲೋಕಪಾಲ ಮಸೂದೆಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಲು ಒಮ್ಮತದ ನಿರ್ಣಯ ಕೈಗೊಂಡ ಎಲ್ಲಾ ರಾಜಕೀಯ ಪಕ್ಷಗಳ ವಿರುದ್ದವೂ ಸಮರ ಸಾರಬೇಕಲ್ಲವೇ? ಆದರೆ ವಾಸ್ತವದಲ್ಲಿ ಯಾಕೆ ಅಂತಹ ನಿಲುವು ವ್ಯಕ್ತವಾಗಿಲ್ಲ. ಅಣ್ಣಾ ಹಜಾರೆಯ ಉಪವಾಸದ ಅಂತಿಮ ದಿನಗಳಲ್ಲಿ ಪ್ರಧಾನಿ ಮತ್ತು ನ್ಯಾಯಾಂಗ ವ್ಯವಸ್ಥೆಗಿಂತ ಜನ ಲೋಕಪಾಲ ಸುಪ್ರೀಂ ಆಗುವುದು ಮತ್ತು ಆ ಮೂಲಕ ದೇಶದ ಸಂವಿಧಾನದ ಆಶಯಕ್ಕೆ ಪರ್ಯಾಯವನ್ನು ಸೃಷ್ಠಿಸುವ ಕ್ರಿಯೆಯನ್ನು ಪ್ರಮುಖ ವಿರೋಧ ಪಕ್ಷ ಬಿಜೆಪಿ ಯೂ ಸಹಾ ಒಪ್ಪಿಕೊಳ್ಳಲಿಲ್ಲ. ಅದರಂತೆ ಇತರೆ ರಾಜಕೀಯ ಪಕ್ಷಗಳು ಸಹಾ. ಹೀಗಿರುವಾಗ ಕೇವಲ ಕಾಂಗ್ರೆಸ್ ಒಂದನ್ನೇ ಯಾಕೆ ತಿರಸ್ಕರಿಸಬೇಕು? ಜನ ಲೋಕಪಾಲ ಮಸೂದೆ ತಿರಸ್ಕೃತವಾಗಿ ಪರಿಷ್ಕೃತ ಮಸೂದೆಯನ್ನು ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲು ಸರ್ವಸಮ್ಮತ ನಿಲುವಿನೊಂದಿಗೆ ಒಪ್ಪಿಕೊಳ್ಳಲಾಗಿದೆ. ಇದನ್ನು ಅಣ್ಣಾ ಮತ್ತವರ ತಂಡವು ಒಪ್ಪಿದೆ ಹೀಗಿರುವಾಗ ಏಕಾಏಕಿ ಪಕ್ಷವೊಂದರ ವಿರುದ್ದ ಆಂಧೋಲನ ನಡೆಸುವುದನ್ನು ಏನೆನ್ನಬೇಕು ಹೇಳಿ? ಅಂದರೆ ಚಳಿಗಾಲದ ಅಧಿವೇಶನಕ್ಕೂ ಮುನ್ನವೇ ಕಾಂಗ್ರೆಸ್ ವಿರೋಧಿ ಆಂಧೊಲನವನ್ನ ನಡೆಸಿದಲ್ಲಿ ಈ ಮೊದಲಿನ ಒಪ್ಪಂದದ ಕಥೆ ಏನಾಗುತ್ತೇ ಅನ್ನೋ ಪರಿಜ್ಞಾನವಿದ್ದರೂ ಲೋಕಪಾಲ ಮಸೂದೆ ಜಾರಿಯಾಗಬಾರದು ಎಂಬ ನಿಲುವನ್ನು ಅಣ್ಣಾ ತಂಡವೇ ತಳೆದಂತೆ ಆಗಲಿಲ್ಲವೇ? ಅಲ್ಲಿಗೆ ಕಳೆದ ನಾಲ್ಕು ದಶಕಗಳಿಂದ ನಡೆದುಕೊಂಡು ಬಂದ ಹೋರಾಟಕ್ಕೆ, ಗಾಂಧಿ ಮಾರ್ಗದ ಚಳುವಳಿಗೆ ಯಾವ ಮರ್ಯಾದೆ ಸಿಕ್ಕಂತಾಯಿತು? ಅಣ್ಣಾ ಹಜಾರೆಗೆ ಮತ್ತು ಅವರ ತಂಡಕ್ಕೆ ಇದೆಲ್ಲಾ ಬೇಕಿತ್ತಾ? 
          ಪ್ರಸಕ್ತ ದಿನಗಳಲ್ಲಿ ಚಳುವಳಿಗಳು ಮತ್ತು ಅದರ ಆಶಯಗಳು ಯಾಕೆ ಸಾಯುತ್ತಿವೆ ? ಎಂಬ ಪ್ರಶ್ನೆಗೆ ಅಣ್ಣಾಹಜಾರೆ ನಿಲುವು ಸದ್ಯದ ಪರಿಸ್ಥಿತಿಯಲ್ಲಿ ಉತ್ತರವಾಗ ಬಹುದೇನೋ. ಒಂದು ಪ್ರಾಮಾಣಿಕ ಚಳುವಳಿಯ ಹಿಂದೆ, ಅದನ್ನು ಬೆಂಬಲಿಸುವ ಮನಸ್ಸುಗಳ ಆಶಯವನ್ನು ದಿಕ್ಕುತಪ್ಪಿಸುವ ಪ್ರಕ್ರಿಯೆಗಳು ಯಾವ ಕಾರಣಕ್ಕೂ ನಡೆಯಬಾರದು. ಇದು ಅಭಿವೃದ್ದಿ ಶೀಲ ರಾಷ್ಟ್ರದ ಪ್ರಗತಿಗೂ ಕುಂಠಿತವಾಗುವುದಲ್ಲದೇ ದೇಶದಲ್ಲಿ ಅರಾಜಕತಗೆ ಸೃಷ್ಟಿಯಾಗುತ್ತದೆ ಅಲ್ಲವೇ?

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...