Wednesday, January 25, 2012

ಗಣತಂತ್ರ ಸಾಧನೆಯೇನು?ಸಾಗಿದ್ದೆಲ್ಲಿಗೆ?

(ಡಾ|| ಬಿ ಆರ್ ಅಂಬೇಡ್ಕರ, ನೆಹರೂ ಮತ್ತು ಸರ್ದಾರ್ ವಲ್ಲಭಾ ಬಾಯಿ ಪಟೇಲ್)
ಇದು 62ನೇ ಗಣರಾಜ್ಯೋತ್ಸವ ದಿನ, ಭಾರತ ದೇಶ ಜಗತ್ತಿನಲ್ಲಿಯೇ ಅತೀ ದೊಡ್ಡ ಪ್ರಜಾಪ್ರಭುತ್ವವನ್ನು ಹೊಂದಿದೆ ದೇಶವಾಗಿದೆ. ಈ ದೇಶದ ರೀತಿ ರಿವಾಜುಗಳನ್ನು ಪ್ರತಿನಿಧಿಸುವ ಸಂವಿಧಾನವು ಪ್ರಜಾಪ್ರಭುತ್ವ ವ್ಯವಸ್ಥೆಗೆ ಅರ್ಪಣೆಯಾದ ಮಹತ್ವದ ದಿನವೂ ಹೌದು. ದೇಶದ ಮಹಾನ್ ಮಾನವತಾ ವಾದಿ ಡಾ ಅಂಬೇಡ್ಕರ್ ಮತ್ತು ತಂಡದ ಪರಿಶ್ರಮದಿಂದ ರೂಪಿಸಿದ ಸಂವಿಧಾನ ಜಾರಿಗೆ ಬಂದ ದಿನವಾದ್ದರಿಂದ ಇದನ್ನು 'ಸಂವಿಧಾನ ದಿನಾಚರಣೆ' ಎಂದು ಸಹಾ ಆಚರಿಸಲಾಗುತ್ತದೆ. ಮಹತ್ವದ 'ಜಾತ್ಯಾತೀತತೆ'ಯ ತಿರುಳನ್ನು ಹೊಂದಿರುವ ಭಾರತದ ಸಂವಿಧಾನ ಜಾಗತಿಕವಾಗಿಯೂ ಗಮನ ಸೆಳೆದಿದ್ದು ಇದೇ ಆಶಯಗಳನ್ನು ಜಗತ್ತಿನ 98ಕ್ಕೂ ಹೆಚ್ಚು ರಾಷ್ಟ್ರಗಳು ಅನುಸರಿಸಿವೆ ಎಂಬುದು ಹೆಮ್ಮೆ ಪಡಬೇಕಾದ ವಿಚಾರ. ದೇಶಕ್ಕೆ ಸ್ವಾತಂತ್ರ್ಯ ದೊರೆತ ನಂತರ ಸ್ವಾಯತ್ತತೆ ಹಾಗೂ ಆಡಳಿತಾತ್ಮಕ, ಅಭಿವೃದ್ದಿ ಪರ ಸಾಧನೆಗೆ ಮಹತ್ವದ ಅಡಿಗಲ್ಲು ಹಾಕಿದ ದಿನ ಕೂಡಾ ಗಣರಾಜ್ಯೋತ್ಸವ ದಿನವಾಗಿದೆ. ಆದರೆ ನಾವೆಷ್ಟರ ಮಟ್ಟಿಗೆ ಈ ದಿನದ ಆಶಯಗಳನ್ನು ಸಾದಿಸಿದ್ದೇವೆ, ಎಲ್ಲಿ ಎಡವಿದ್ದೇವೆ ಎಂದು ನೋಡಿಕೊಳ್ಳಬೇಕಾದ ದಿನವೂ ಹೌದು!

ಒಂದು ರಾಷ್ಟ್ರ ಅಭಿವೃದ್ದಿಯಾಗ ಬೇಕಾದರೆ ಒಂದು 'ಮಿತಿ'ಯ ವ್ಯವಸ್ತೆ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಭಾರತ ದೇಶದ ಪ್ರಧಾನಿ ಜವಾಹರಲಾಲ್ ನೆಹರು, ರಾಜೇಂದ್ರ ಪ್ರಸಾದ್, ಡಾ|| ಬಿಆರ್ ಅಂಬೇಡ್ಕರ್ ಮತ್ತು  'ಉಕ್ಕಿನ ಮನುಷ್ಯ'ಎಂದೇ ಖ್ಯಾತರಾಗಿರುವ ಸರ್ದಾರ್ ವಲ್ಲಭಭಾಯಿ ಪಟೇಲರು ಅಚ್ಚುಕಟ್ಟಾಗಿ ರೂಪಿಸಿದ ಪ್ರಾಂತೀಯ ವ್ಯವಸ್ಥೆಯು ಸ್ಥಾನಿಕವಾಗಿ ರಾಜ್ಯಗಳು ಒಕ್ಕೂಟ ವ್ಯವಸ್ಥೆಗೆ ಸೇರ್ಪಡೆಗೊಂಡ ದಿನವೂ ಹೌದು. ರಾಜ ಮಹಾರಾಜರ ಆಳ್ವಿಕೆಗೆ ಒಳಪಟ್ಟಿದ್ದ ಪ್ರದೇಶಗಳು/ಸಂಸ್ಥಾನಗಳನ್ನು ಒಗ್ಗೂಡಿಸಿ ದೇಶದ ಒಕ್ಕೂಟ ವ್ಯವಸ್ಥೆಗೆ ಸೇರ್ಪಡೆ ಮಾಡುವ ಮೂಲಕ ಐತಿಹಾಸಿಕ ಕ್ಷಣ ತಂದುಕೊಟ್ಟ ದಿನವಾಗಿಯೂ ಗಣರಾಜ್ಯೋತ್ಸವವನ್ನು ನೆನಪಿನಲ್ಲಿಟ್ಟು ಕೊಳ್ಳಬೇಕಾಗಿದೆ. ಈ ದಿಸೆಯಲ್ಲಿ ಅನೇಕ ಮಹನೀಯರು ಪ್ರಾತ:ಸ್ಮರಣೀಯವಾಗುತ್ತಾರೆ. 
    
ನಮ್ಮ ದೇಶದ ಗಣತಂತ್ರ ವ್ಯವಸ್ಥೆ ಸರ್ವ ಸಮಾನತೆಯ ದ್ಯೇಯೋದ್ದೇಶವನ್ನು ಹೊಂದಿದೆ. ಇಲ್ಲಿ ವೈವಿದ್ಯಮಯ ಸಂಸ್ಕೃತಿ,ಧಾರ್ಮಿಕ ಆಚರಣೆ ಹಾಗೂ ಮತಪಂಥಗಳ ವೈವಿದ್ಯತೆಯಲ್ಲಿ ಏಕತೆಯನ್ನು ಸಾರುವ ಮಹತ್ವದ ಅಂಶವೇ ದೇಶದ ಕೀರ್ತಿಯನ್ನು ಜಾಗತಿಕ ಮಟ್ಟದಲ್ಲಿ ಪಸರಿಸುವಂತೆ ಮಾಡಿದೆ. ಅಮೇರಿಕಾದ ಚಿಕಾಗೊದಲ್ಲಿ ನಡೆದ ಸರ್ವಧರ್ಮ ಸಮ್ಮೇಳನದಲ್ಲಿ ದೇಶದ ಹಿರಿಮೆಯನ್ನು ಎತ್ತಿ ಹಿಡಿದ ಸ್ವಾಮಿ ವಿವೇಕಾನಂದರಂತಹ ಶ್ರೇಷ್ಠ ದಾರ್ಶನಿಕರನ್ನು ಈ ದೇಶ ಕೊಡುಗೆಯಾಗಿ ನೀಡಿದೆ. ಅಹಿಂಸೆಯ ಮೂಲಕ ಸ್ವಾತಂತ್ರ್ಯ ಪಡೆಯುವ ಮೂಲಕ ಜಗತ್ತಿಗೆ ಮಾದರಿಯಾದ ಮಹಾತ್ಮ ಗಾಂಧಿ, ಸಮಾನತೆಯನ್ನು ಎತ್ತಿ ಹಿಡಿಯುವ ಮೊತ್ತ ಮೊದಲ ಸಂವಿಧಾನವನ್ನು ಕೊಟ್ಟ ಅಂಬೇಡ್ಕರ್ ಹೀಗೆ ಸಾವಿರಾರು ಶ್ರೇಷ್ಠರು ಆಗಿ ಹೋಗಿದ್ದಾರೆ, ಅವರ ವಿಚಾರದ ಕಾವು ಮಾತ್ರ ಎಲ್ಲೆಡೆ ಕಿಚ್ಚು ಹಚ್ಚಿದೆ. ಪ್ರಸಕ್ತ ಸಂಧರ್ಭದಲ್ಲಿ ದೇಶದ ಏಕತೆಗೆ ಭಂಗ ತರುವ ಕೃತ್ಯಗಳು ಜರುಗುತ್ತಿವೆ. ರಾಷ್ಟ್ರೀಯತೆಯ ಮನೋಭಾವದ ಕೊರತೆ ಇದಕ್ಕೆ ಕಾರಣವಾಗಿರಬಹುದು. ಇಂತಹ ಕ್ರಿಯೆಗಳು ಸಂವಿಧಾನದ ಆಶಯಗಳಿಗೆ ಧಕ್ಕೆ ಉಂಟು ಮಾಡುವುದಲ್ಲದೇ ಆಂತರಿಕ ವ್ಯವಸ್ಥೆಗೂ ಪೆಟ್ಟು ನೀಡುತ್ತಿದೆ. ಶಿಕ್ಷಣ,ಆರೋಗ್ಯ ಮತ್ತು ರಾಜಕೀಯ ಜಾಗತೀಕರಣದ ಈ ದಿನಗಳಲ್ಲಿ ವಾಣಿಜ್ಯೀಕರಣ ಗೊಂಡಿವೆ. ಇದರಿಂದ ಭ್ರಷ್ಟಾಚಾರ ಹೆಚ್ಚಿದ್ದು ಜನಸಾಮಾನ್ಯರ ಬದುಕು ದುರ್ಬರವಾಗಿದೆ, ಕಾರ್ಪೊರೇಟ್  ಶಕ್ತಿಗಳು ವಿಜೃಂಭಿಸುತ್ತಿರುವುದು ಸಂವಿಧಾನ ವಿರೋಧಿ ಪ್ರಕ್ರಿಯೆಗಳು ಜಾಗೃತಾವಸ್ಥೆಯಲ್ಲಿವೆ ಸಮಾನತೆಯ ಅಂಶಗಳು ಕಡೆಗಣನೆಯಾಗಿವೆ. ಜನರ ಹಿತಕ್ಕಿಂತ ಆಳುವವರ ಹಿತಾಸಕ್ತಿಗಳು ಹೆಚ್ಚಿನ ಆದ್ಯತೆ ಪಡೆಯಲಾರಂಭಿಸಿವೆ. ಚುನಾವಣೆಗಳು ಭ್ರಷ್ಟ ವ್ಯವಸ್ಥೆಯ ಕೂಪಗಳಾಗಿವೆ. ಹಾಗಾಗಿ ಆಯ್ಕೆಯಾಗುವ ಜನಪ್ರತಿನಿಧಿಗಳಿಂದ ಾರೋಗ್ಯಕರವಾದ ಆಡಳಿತಗಳನ್ನು ನಿರೀಕ್ಷಿಸಲು ಸಾಧ್ಯವಾಗುತ್ತಿಲ್ಲ. ದೇಶದ ಸಂಸತ್ ವ್ಯವಸ್ಥೆ, ವಿಧಾನಸಭೆ ಹಾಗೂ ವಿಧಾನ ಪರಿಷತ್ ಗಳಿಗೆ ಆಯ್ಕೆಯಾಗುವ ಮಂದಿ ಭ್ರಷ್ಟಾಚಾರದಲ್ಲಿ ಸಿಲುಕಿ ಜೈಲು ಪಾಲಾಗುತ್ತಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಮತದಾರರಿಗೆ ವಿಶ್ವಸನೀಯವಾಗಿ ನಡೆದುಕೊಳ್ಳಬೇಕಾದವರೇ ಅನೈತಿಕ ರಾಜಕೀಯ ಹೊಂದಾಣಿಕೆಗಳನ್ನು ಮಾಡಿಕೊಳ್ಳುವ ಮೂಲಕ ಮತದಾರರಿಗೆ ವಂಚನೆ ಮಾಡುತ್ತಿದ್ದಾರೆ. ಅಧಿಕಾರ ಶಾಹಿ ರಾಜಕೀಯದ ತೆಕ್ಕೆಯಲ್ಲಿ ಸಿಲುಕಿ ಹಣದಾಸೆಗೆ ಬಿದ್ದು ಜನರನ್ನು ಶೋಷಿಸುವ ವ್ಯವಸ್ಥೆಯಾಗಿ ಪರಿವರ್ತನೆಗೊಂಡಿವೆ. ಇಂತಹ ಸಂಧಿಗ್ಧ ಸನ್ನಿವೇಶದಲ್ಲೂ ದೇಶದ ಹಿತಕ್ಕೆ ಇಂದಿಗೂ ವಿಶ್ವಾಸಾರ್ಹೆತೆಯನ್ನು ಕಾಯ್ದುಕೊಂಡು ಕಾನೂನು ಕಾಯುವ ಕೆಲಸವನ್ನು ನ್ಯಾಯಾಂಗ ವ್ಯವಸ್ಥೆ ಉಳಿಸಿಕೊಂಡಿದೆ. ಹೀಗಿರುವಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯ ಕಾವಲು ನಾಯಿಯಾಗಿ ಪ್ರಭಲ ಲೋಕಪಾಲ ಮಸೂದೆಯ ಜಾರಿಗೆ ಪ್ರಯತ್ನಗಳು ನಡೆಯುತ್ತಿವೆ. ಆದರೆ ಅದಕ್ಕೂ ರಾಜಕೀಯ ಪ್ರೇರಿತ ಬಣ್ಣ ಬಂದಿರುವುದು ಮತ್ತು ಸರ್ವ ಸಮ್ಮತವಲ್ಲದ ನಿಲುವುಗಳು ವ್ಯಕ್ತವಾಗುತ್ತಿರುವುದರಿಂದ ಲೋಕಪಾಲ ಮಸೂದೆಯ ಆಸೆ ಕ್ಷೀಣಿಸುವ ಸಾಧ್ಯತೆ ಇದೆ. ದೇಶದ ಯುವ ಜನತೆ ಹಾಗೂ ಜನಸಾಮಾನ್ಯರೂ ಈ ದಿಸೆಯಲ್ಲಿ ಎಚ್ಚೆತ್ತು ಕೊಳ್ಳಬೇಕಾದ ಅಗತ್ಯತೆ ಇದೆ. ಆಧುನೀಕರಣದ ಈ ದಿನಗಳಲ್ಲಿ ಕೇವಲ ದುಡಿಮೆ-ಬದುಕು ಮಾತ್ರ ಮುಖ್ಯ ಅಲ್ಲ, ರಾಜಕೀಯ ಪ್ರಜ್ಞೆಯೂ ಬೇಕು, ಆಗ ಮಾತ್ರ ಈ ಪ್ರಜಾಪ್ರಬುತ್ವ ವ್ಯವಸ್ಥೆಗೆ ಒಂದು ಅರ್ಥ ಸಿಗಲು ಸಾಧ್ಯ. 

ರಾಜಕೀಯ ಪಕ್ಷಗಳು ಅಧಿಕಾರ ಹಿಡಿಯುವ ಆಸೆಗೆ ಬಿದ್ದು ಜನರನ್ನು ಮರುಳು ಮಾಡುವ ಅಗ್ಗದ ಆಮಿಷಗಳನ್ನು ಒಡ್ಡದೇ ಜವಾಬ್ದಾರಿಯುತವಾಗಿ ನಡೆದುಕೊಳ್ಳುವ ಮೂಲಕ ಜನಹಿತ ಕಾಯಬೇಕಿದೆ ಆ ಮೂಲಕ ಪ್ರಜಾತಂತ್ರಕ್ಕೆ ಗೌರವ ಸಲ್ಲಿಸಬೇಕಿದೆ. ಇವೆಲ್ಲ ಸರಿಯಾಗಬೇಕಾದರೆ ಕಳಂಕ ರಹಿತ ಚುನಾವಣೆಯೊಂದೇ ಮಾರ್ಗ, ಅದು ಸಾಕಾರವಾಗಬೇಕಾದರೆ ನಮ್ಮ ಜನ ಪ್ರಜ್ಞಾವಂತರಾಗಬೇಕಲ್ಲವೇ?

Sunday, January 22, 2012

ಭಗವದ್ಗೀತೆಯ ನೆಪದಲ್ಲಿ ಶಿಕ್ಷಣದ ಕೇಸರಿಕರಣ!


ವಿದ್ಯೆ ಇದೆ ಎಂದ ಮಾತ್ರಕ್ಕೆ ವಿವೇಕ ಇರುತ್ತೆ ಅಂತ ಭಾವಿಸಬಾರದು, ಅಲ್ಲಿ ಅವಿವೇಕವೂ ಇರುತ್ತೆ ಎಂದದ್ದು ಆಕಾಶವಾಣಿಯ ವಿಜಯ ಅಂಗಡಿ.ಪ್ರಸಕ್ತ ದಿನಗಳಲ್ಲಿ ತುಂಬಾ ಜನರಿಗೆ ವಿಚಾರ ಶಕ್ತಿ ಇರೋಲ್ಲ ಮುಖ್ಯವಾಗಿ ಗ್ರಹಿಕೆ ಮತ್ತು ವ್ಯಕ್ತಪಡಿಸುವಿಕೆ ಸಮುದಾಯದಲ್ಲಿ ಎಲ್ಲಾ ಹಂತದಲ್ಲೂ ಕಾಣಲು ಸಾಧ್ಯವಿಲ್ಲ, ಕಾರ್ಪೋರೇಟ್ ಜಗತ್ತಿನಲ್ಲಿ ಚಿಂತನೆ ಮತ್ತು ಗ್ರಹಿಕೆಗಳಿಗೆ ಬರಗಾಲ ಬಂದಿದೆ ಅದೂ ಮಾರಾಟದ ಸರಕಾಗಿದೆ ಇಲ್ಲವೇ ಏಕದೃಷ್ಠಿಕೋನದಲ್ಲೇ ಅಭಿವ್ಯಕ್ತವಾಗುತ್ತದೆ ಹೀಗಾಗಿ ಸಮಾಜದಲ್ಲಿ ಹತ್ತು ಹಲವು ವಿಚಾರಗಳಲ್ಲಿ ಒಮ್ಮತ ಮೂಡುವುದೇ ಇಲ್ಲ. ಇದನ್ನು ಪುಷ್ಟಿಕರಿಸುವಂತೆ ಕಳೆದ ಒಂದೆರೆಡು ತಿಂಗಳಿನಿಂದ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಸಾರ್ವಜನಿಕವಾಗಿ ನಡೆಯುತ್ತಿರುವ ಘಟನೆಗಳು ಜರುಗುತ್ತಿವೆ. 
         ಮೊನ್ನೆ ಸ್ವಾಮಿವಿವೇಕಾನಂದರ ಕುರಿತು ಪ್ರಜಾವಾಣಿಯ ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಅಂಕಣವೊಂದರಲ್ಲಿ ವಿಶದಪಡಿಸಿದ ಸಂಗತಿಗಳು ವಿಭಿನ್ನ ಧಾಟಿಯಲ್ಲಿ ಚರ್ಚೆಗೊಳಪಟ್ಟಿವೆ. ಪ್ರಜ್ಞಾವಂತರೆನಿಸಿಕೊಂಡವರೇ ಮೂರ್ಖರ ಧಾಟಿಯಲ್ಲಿ ಅಮೀನ್ ಮಟ್ಟು ಹೇಳಿದ ಸತ್ಯಗಳನ್ನು ಅರಗಿಸಿಕೊಳ್ಳಲಾಗದೇ ವಿತಂಡವಾದ, ಇಲ್ಲವೇ ಸಮಂಜಸವಲ್ಲದ ಧಾಟಿಯಲ್ಲಿ ಪ್ರತಿವಾದವನ್ನು ಮುಂದಿಟ್ಟಿದ್ದಾರೆ. ನನಗೆ ಜ್ಞಾನ ಬಂದಾಗಿನಿಂದ ವಿವೇಕಾನಂದರ ಬಗ್ಗೆ ಪಠ್ಯದಲ್ಲಿ ಓದಿದ್ದನ್ನು ಬಿಟ್ಟರೆ ಅವರ ಕುರಿತ ಸಾಹಿತ್ಯ ಓದಿದ್ದು ಮತ್ತು ತಿಳಿದದ್ದು ಕೇಸರಿ ಸಂಘಟನೆಗಳು ಪ್ರಕಟಿಸಿದ ಪುಸ್ತಕಗಳಲ್ಲಿ ಅದೂ ಸೀಮಿತ ಚೌಕಟ್ಟಿನಲ್ಲಿ. ಹೀಗಾಗಿ ವಿವೇಕಾನಂದರ ಕುರಿತು ಎಲ್ಲೋ ಒಂದು ಕಡೆ ಭ್ರಮನಿರಸನ ವಾಗಿಬಿಟ್ಟಿತ್ತು. ಯುವ ಜನತೆಗೆ ಮಾದರಿಯಾಗಿ ಸರ್ವಧರ್ಮದ ಪ್ರಾತಿನಿಧಿಕ ವ್ಯಕ್ತಿಯಾಗಿ ವಿಶ್ವಮಾನವ ಸಂದೇಶ ಸಾರಿದ ಶ್ರೇಷ್ಠ ದಾರ್ಶನಿಕರಲ್ಲೊಬ್ಬರಾದ  ವಿವೇಕಾನಂದ, ಕೇಸರಿ ಚೌಕಟ್ಟಿನಲ್ಲಿ ಸೀಮಿತ ನೆಲೆಗಟ್ಟಿನಲ್ಲಿ  ಆರಾಧ್ಯ ದೈವವಾಗಿ ಬಿಂಬಿತವಾಗಿದ್ದು ಈ ದೇಶದ ದುರಂತವೂ ಹೌದು. ವಿಪರ್ಯಾಸವೆಂದರೆ ಸಂನ್ಯಾಸಿ ವಿವೇಕಾನಂದರನ್ನು ಹಿಂದೂ ಧರ್ಮದ ಪ್ರವರ್ತಕನೆಂದು ಬಿಂಬಿಸಿದ್ದು. ಇವತ್ತು ದೇಶದಲ್ಲಿ ವಿವೇಕಾನಂದ ಮಾತ್ರವಲ್ಲ ಇನ್ನೂ ಅನೇಕ ಮಂದಿ ಶ್ರೇಷ್ಠ ನಾಯಕರನ್ನು,ಐತಿಹಾಸಿಕ ಮಹಾ ಪುರುಷರನ್ನು ಸೀಮಿತ ನೆಲೆಗಟ್ಟಿನಲ್ಲಿ ಹಾಗೂ ಶ್ರೇಣೀಕೃತ ವ್ಯವಸ್ಥೆಯಲ್ಲಿ ಗುರುತಿಸುವುದು ಮತ್ತೂ ದುರಂತದ ಸಂಗತಿ. ಇದು ಬಸವಣ್ಣ,ಅಂಬೇಡ್ಕರ್,ಬುದ್ದ,ಕನಕದಾಸ,ಕೆಂಪೇಗೌಡ,ಪುರಂದರದಾಸ,ವಾಲ್ಮೀಕಿ,ಭಗೀರಥ ಹೀಗೆ ಯಾರನ್ನೂ ಬಿಟ್ಟಿಲ್ಲ. ಇರಲಿ ಮುಖ್ಯವಾಗಿ ದಿನೇಶ್ ಅಮೀನ್ ಮಟ್ಟು ಲೇಖನದಲ್ಲಿ ಹೇಳಿದ್ದಾದರೂ ಏನು ? 
          ವಿಶ್ವಮಾನವ ಧರ್ಮದ ಪ್ರತೀಕವಾಗಿದ್ದ ಸ್ವಾಮಿ ವಿವೇಕಾನಂದರನ್ನು ಹೈಜಾಕ್ ಮಾಡಿದ ಕೇಸರಿ ಬಳಗ ವಿವೇಕಾನಂದರನ್ನು ಹಿಂದೂ ಧರ್ಮದ ಅಧಿನಾಯಕನಂತೆ ಬಿಂಬಿಸುತ್ತಾ ಜಾತ್ಯಾತೀತ ರಾಷ್ಟ್ರದಲ್ಲಿ  ವಿವೇಕಾನಂದರ ಬಗೆಗಿನ ವಿಶ್ವ ಭಾವನೆಗಳನ್ನ ಸಂಕುಚಿತಗೊಳಿಸಿದ್ದು ಎಷ್ಟು ಸರಿ? ವಿವೇಕಾನಂದರು ಶೂದ್ರರೂ, ಚಿಕ್ಕ ವಯಸ್ಸಿಗೆ ಸಂನ್ಯಾಸ ಸ್ವೀಕಾರ ಮಾಡಿದರು, ದಡ್ಡ ವಿದ್ಯಾರ್ಥಿಯಾಗಿದ್ದರು, ಪಾಠ ಮಾಡಲು ಅಸಮರ್ಥರಾಗಿದ್ದರು, ಮಾಂಸಹಾರಿಗಳಾಗಿದ್ದರು, ಮೈತುಂಬಾ 31ಬಗೆಯ ರೋಗಗಳಿಂದ ಪೀಡಿತರಾಗಿದ್ದರು ಆದಾಗ್ಯೂ ಬದುಕಿದ ಅಲ್ಪಾವಧಿಯಲ್ಲಿ ವಿಶ್ವ ಮೆಚ್ಚುವ ಸಾಧನೆಗೈದರು ಇಂತಹ ವಿಚಾರಗಳು ತಿಳಿದರೆ ಅವರನ್ನು ಕೇಸರಿ ಬಳಗ ಹಿಂದೂ ಧರ್ಮದ ಪ್ರತಿನಿಧಿಯೆಂದು ಒಪ್ಪಿಕೊಳ್ಳಬಲ್ಲುದೇ ? ಎಂದು ಪ್ರಶ್ನಿಸಿದ ಅಮೀನ್ ಮಟ್ಟು ಬಹಳ ಸೂಕ್ಷ್ಮವಾಗಿ ಕೇಸರಿ ಬಳಗಕ್ಕೆ ಚುರುಕು ಮುಟ್ಟಿಸಿದ್ದಾರಲ್ಲದೇ ,ವಿವೇಕಾನಂದರನ್ನು ಸೀಮಿತ ಚೌಕಟ್ಟಿನಲ್ಲಿಡದೇ ವಿಶ್ವಮಾನವರಾಗಿಯೇ ಇರಲು ಬಿಡಿ ಎಂಬ ಪ್ರಜ್ಞಾವಂತಿಕೆಯ ಸಂದೇಶವನ್ನು ಮನಮುಟ್ಟುವಂತೆ ಹೇಳಿದ್ದಾರಷ್ಟೆ. ಇದರಲ್ಲಿ ವಿವಾದಾತ್ಮಕವಾಗಿ ಚರ್ಚೆ ಮಾಡುವಂತಹದ್ದು ಏನು ಇಲ್ಲ ಮತ್ತು ವಿವೇಕಾನಂದರ ಬಗೆಗಿನ ವಿಚಾರಗಳು ಅವರ ತೇಜೋವಧೆಗಾಗಿ ಹೇಳಿದುದ್ದಲ್ಲ ಎಂಬುದನ್ನು ಅರಿಯಬೇಕಲ್ಲವೇ?

        ಇನ್ನು ರಾಜ್ಯದ ಪಠ್ಯದಲ್ಲಿ ಭಗವದ್ಗೀತೆಯನ್ನು ಅನುಷ್ಠಾನಗೊಳಿಸುವ ವಿಚಾರ, ರಾಜ್ಯದಲ್ಲಿ 10ಸಾವಿರಕ್ಕೂ ಹೆಚ್ಚು ಕನ್ನಡ ಶಾಲೆಗಳನ್ನು ಮುಚ್ಚಲಾಗುತ್ತಿದೆ ಎಂದು ಪ್ರಕಟಿಸಿದ ರಾಜ್ಯ ಸರ್ಕಾರ ಅದನ್ನು ಜಾರಿಗೆ ತರಲು ಮುಂದಾದಾಗ ಎದ್ದ ಪ್ರತಿಭಟನೆಗಳ ಬಿಸಿ ಆರುವ ಮುನ್ನವೇ ಭಗವದ್ಗಿತೆಯನ್ನು ಪಠ್ಯದ ಭಾಗವಾಗಿ ಮಾಡುವ ಹುನ್ನಾರವನ್ನು ಕೇಸರಿ ಸರ್ಕಾರ ಪ್ರಕಟಿಸಿದೆ. ದೇಶದ ಸಂವಿಧಾನದ ಆಶಯಗಳನ್ನು ಜಾತ್ಯಾತೀತತೆಯ ನೆಲೆಗಟ್ಟಿನಲ್ಲಿ ಹೇಳಬೇಕಾದ ಪ್ರಜಾತಂತ್ರದ ಮುಖ್ಯಮಂತ್ರಿ, ಸಚಿವರು ಮತ್ತು ಅಧಿಕಾರಸ್ಥರೇ ತದ್ವಿರುದ್ದವಾಗಿ ಈ ವಿಚಾರದಲ್ಲಿ ಸಮರ್ಥನೆಗೆ ಮುಂದಾಗುತ್ತಿದ್ದಾರೆ. ಈಗಾಗಲೇ ಬಿಜೆಪಿ ಆಡಳಿತದಲ್ಲಿದ್ದ ಮದ್ಯಪ್ರದೇಶದಲ್ಲಿ ಭಗವದ್ಗಿತೆಯನ್ನು ಪಠಯವನ್ನಾಗಿ ಮಾಡಲಾಗಿದೆ. ಅದರಂತೆ ರಾಜ್ಯದಲ್ಲಿ ಭಗವದ್ಗೀತೆಯನ್ನು ಪಠ್ಯವನ್ನಾಗಿ ಮಾಡಬೇಕೆಂದು ಹೇಳಲಾಗುತ್ತಿದೆ. ಅಸಲಿಗೆ ಭಗವದ್ಗಿತೆ ಎಂದರೆ ಅದರಲ್ಲಿ ಏನಿದೆ ? ಅದು ಯಾಕೆ ಪಠ್ಯವಾಗ ಬೇಕು/ಬೇಡ? ಎಂಬ ವಿಚಾರಗಳ ಮಂಥನ ಅತ್ಯಗತ್ಯವಾಗಿದೆ. 
       ಭಗವದ್ಗೀತೆ ಹಿಂದೂಗಳ ಪವಿತ್ರಗ್ರಂಥ, ಮಹಾಭಾರತದ ಯುದ್ಧದ ಸಂಧರ್ಭದಲ್ಲಿ ಕೌರವ ಸೇನೆ ಮಂಚೂಣಿಯಲ್ಲಿದ್ದ ಕರ್ಣನೊಡನೆ ಯುದ್ಧ ಮಾಡಲು ಅರ್ಜುನ ಹಿಂಜರಿದಾಗ ಸಾರಥಿಯಾಗಿದ್ದ ಕೃಷ್ಣ, ಅರ್ಜುನನಿಗೆ ಮಾಡಲ್ಪಟ್ಟ ಧರ್ಮೊಪದೇಶವೇ ಭಗವದ್ಗಿತೆಯ ರೂಪದಲ್ಲಿದೆ, ಇದು ಸಂಸ್ಕೃತ ಭಾಷೆಯಲ್ಲಿರುವ 700ಶ್ಲೋಕಗಳ ಗ್ರಂಥ. ಇದರಲ್ಲಿ ನಾಲ್ಕು ಯೋಗಮಾರ್ಗಗಳಾದ ಭಕ್ತಿ-ಕರ್ಮ-ಧ್ಯಾನ-ಜ್ಞಾನದ ಕುರಿತ ಭೋಧನೆಯನ್ನ ಕಾಣಬಹುದು. ಹಾಗೆಯೇ ರಾಜಕೀಯ ಧರ್ಮದ ಎಲ್ಲಾ ಪಟ್ಟುಗಳನ್ನು ಇದು ಒಳಗೊಂಡಿದೆ. ಹಿಂದೂ ಚಿಂತನೆ, ವೈದಿಕ, ಆಧ್ಯಾತ್ಮಿಕ,ಯೋಗಿಕ ಮತ್ತು ತಾಂತ್ರಿಕ ತತ್ವಶಾಸ್ತ್ರಗಳ ಬಗೆಗೂ ವಿಸ್ತ್ರುತವಾಗಿ ಹೇಳಲಾಗಿದೆ. ಇದು ವಿದ್ಯಾರ್ಥಿಗಳು ತಿಳಿಯಲೇ ಬೇಕಾದ ಮತ್ತು ಓದಿಕೊಳ್ಳಬೇಕಾದ  ಅತ್ಯುತ್ತಮ ಗ್ರಂಥವೆನ್ನುವುದರಲ್ಲಿ ಯಾವುದೇ ಭಿನ್ನಾಬಿಪ್ರಾಯಗಳು ಬೇಕಿಲ್ಲ. ಆದರೆ ಜಾತ್ಯಾತೀತ ನಿಲುವನ್ನು ಹೊತ್ತ ಪ್ರಜಾಪ್ರಭುತ್ವ ರಾಷ್ಟದ ಶೈಕ್ಷಣಿಕ ವ್ಯವಸ್ಥೆಯಲ್ಲಿ NCF(National Curriculum Framework) ಮಾರ್ಗಸೂಚಿಗನುಗುಣವಾಗಿ ಪಠ್ಯವನ್ನು ಅನುಷ್ಠಾನಕ್ಕೆ ತರಬೇಕಾಗಿರುತ್ತದೆ ಹೀಗಿರುವಲ್ಲಿ ಅದಕ್ಕೆ ವಿರುದ್ದವಾದ ರೀತಿಯಲ್ಲಿ ಪಠ್ಯಗಳನ್ನು ಅಳವಡಿಸಲು ಬರುವುದಿಲ್ಲ. ಭಗವದ್ಗಿತೆಯಲ್ಲಿ ಹಿಂದೂ ಧರ್ಮದ ಪ್ರತಿಪಾದನೆ ಇರುವುದರಿಂದ ಸಹಜವಾಗಿಯೇ ಅದನ್ನು ಪಠ್ಯವಾಗಿಸಲು ವಿರೋಧ ವ್ಯಕ್ತವಾಗುತ್ತದೆ. ಆದ್ದರಿಂದ ಪ್ರಗತಿಪರ ಸಾಹಿತಿ ಬರಗೂರು ರಾಮಚಂದ್ರಪ್ಪ ಅಭಿಪ್ರಾಯಿಸುವಂತೆ ಭಗವದ್ಗೀತೆಯ ಆಯ್ದ ಭಾಗಗಳು ಪಠ್ಯದಲ್ಲಿ ಪಾಠವಾಗಿ ಅಳವಡಿಕೆಯಾಗಬೇಕೆ ವಿನಹ ಪಠ್ಯವಾಗಿ ಅಲ್ಲ ಎಂಬುದನ್ನು ಒಪ್ಪಬೇಕಲ್ಲವೇ? ಒಂದು ವೇಳೆ ಹಠ ಹಿಡಿದು ಇದನ್ನು ಪಠ್ಯವಾಗಿ ಅಳವಡಿಕೆ ಮಾಡಿದರೆ ಇತರೆ ಧರ್ಮೀಯರಿಗೆ "ಹೇರಿಕೆ" ಎನಿಸುವುದಿಲ್ಲವೇ? ಆಗ ಆ ಧರ್ಮೀಯರ ಧರ್ಮಗ್ರಂಥಗಳನ್ನು ಪಠ್ಯ ಮಾಡಲು ಬೇಡಿಕೆ ಮಂಡನೆ ಆಗುತ್ತದಲ್ಲವೇ? ಇಂತಹ ಬೆಳವಣಿಗೆ ಸಂವಿಧಾನದ ಜಾತ್ಯಾತೀತ ಆಶಯಕ್ಕೆ ಧಕ್ಕೆ ತಂದಂತಾಗುವುದಿಲ್ಲವೇ? ಹಿಂದೆ ವಿಶ್ವ ಹಿಂದೂ ಪರಿಷತ್ ಶಾಲಾ-ಕಾಲೇಜು ಮಕ್ಕಳಿಗೆ ರಾಮಾಯಣ/ಮಹಾಭಾರತ ಪುಸ್ತಕಗಳನ್ನು ನೀಡಿ ಪರೀಕ್ಷೆ ಕೊಡುತ್ತಿತ್ತು ಆ ಮೂಲಕ ಆ ಗ್ರಂಥಗಳ ಮಹತ್ವವನ್ನು ಅಪೇಕ್ಷೆ ಪಟ್ಟವರು ಮಾತ್ರವೇ ತಿಳಿಯಲು ಸಾಧ್ಯವಾಗುತ್ತಿತ್ತು ಅದು ಹೇರಿಕೆ ಎನಿಸುತ್ತಿರಲಿಲ್ಲ, ಅದೇ ರೀತಿ 'ಭಗವದ್ಗಿತೆಯನ್ನು ಪಠ್ಯ ಮಾಡುವ ಬದಲು ಅಪೇಕ್ಷೆ ಅನುಸಾರ ತಿಳಿಯಲು ಅವಕಾಶ ಮಾಡಿಕೊಟ್ಟರೆ ಯಾವುದೇ ವಿವಾದ ಇರಲಾರದು ಅನಿಸುತ್ತದೆ.  

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...