Sunday, August 8, 2010

ಕನ್ನಡ ಚಿತ್ರರಂಗದಲ್ಲಿ 'ಮತ್ತೆ ಮುಂಗಾರು'!

ಕನ್ನಡ ಚಿತ್ರರಂಗದ ಸ್ಥಿತಿ ಇವತ್ತು ಹೇಗಿದೆ? ಸಿದ್ದ ಮಾದರಿಯ ಕಥೆ, ಮಚ್ಚು-ಕತ್ತಿ-ಲಾಂಗು, ಅದೇ ಡೈಲಾಗು, ಅದೇ ಹಾಡು, ಅದೇ ಹಾಸ್ಯ, ರಿಮೇಕ್ ಚಿತ್ರಾನ್ನ, 4ಹಾಡು1ಫೈಟು1ಮಸಾಲೆ ಹಾಕಿ ಯಾವ್ದಾದ್ರೂ ಒಂದು ಥೇಟರಲ್ಲಿ ಬಿಡುಗಡೆ ಮಾಡಿದ್ರೆ ಸಾಕು ಒಂದಿಷ್ಟು ಹಕ್ಕುಗಳನ್ನ ಟಿವಿ ಯವರಿಗೆ ಮಾರಿಕೊಂಡ್ರೆ ಮುಗೀತು.ಪ್ರೇಕ್ಷಕರನ್ನ ಕುರಿತು ಈ ನನ್ನ ಮಕ್ಳು ಥೇಟರಿಗೆ ಬಂದು ಚಿತ್ರ ನೋಡಲ್ಲ ನಾವು ಉದ್ದಾರ ಆಗಲ್ಲ ಅಂತ ಡೈಲಾಗು ಬಿಸಾಕೋರು ಒಂದು ಕಡೆ ಆದ್ರೆ ನಾನೇ ಸುಪ್ರೀಂ ಎಂದು ಬೀಗುವ ನಿರ್ದೇಶಕರ ಸಂಘ, ಕಲಾವಿದರ ಸಂಘ,ಚಲನ ಚಿತ್ರ ವಾಣಿಜ್ಯ ಮಂಡಳಿ ದಿನಕ್ಕೊಂದು ರಾಧ್ದಾಂತ ಎಬ್ಬಿಸಿಕೊಂಡು ಪರಸ್ಪರರ ಮೇಲೆ ಕೆಸರೆರಚಾಡಿಕೊಂಡು ಸಾರ್ವಜನಿಕ ವಲಯದಲ್ಲಿ ನಗೆಪಾಟಲಿಗೀಡಾಗುತ್ತಿವೆ. ನಾಯಕ ನಟರುಗಳೂ ಒಂದೇ ಮಾದರಿಯ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಾ ಬದಲಾವಣೆಗಳಿಗೆ, ಪ್ರಯೋಗಗಳಿಗೆ ಒಡ್ಡಿಕೊಳ್ಳದೇ ಜಿಡ್ಡುಗಟ್ಟಿದ ಪರಿಸ್ಥಿತಿಯಲ್ಲಿದ್ದಾರೆ. ಹೊಸ ಅಲೆಯ ಕಥೆಗಳು, ಮನಕಲಕುವ ವಿಚಾರಗಳ ಸಂಕೀರ್ಣತೆ ಅದನ್ನು ತೆರೆಯ ಮೇಲೆ ಮೂಡಿಸುವ ಪ್ರಬುದ್ದತೆ ಕೊರತೆ ಇವತ್ತು ಕನ್ನಡ ಚಿತ್ರರಂಗದಲ್ಲಿದೆ. ಒಬ್ಬ ಪುಟ್ಟಣ್ಣ, ಒಬ್ಬ ಶಂಕರ್ ನಾಗ್,ಒಬ್ಬ ಗಿರೀಶ್ ಕಾಸರವಳ್ಳಿ, ಏಕಮೇವಾದ್ವಿತಿಯರೆನಿಸಿದ ರಾಜ್, ವಿಷ್ಣು, ಅಶ್ವಥ್ ಹೀಗೆ ಕನ್ನಡ ಚಿತ್ರರಂಗದಲ್ಲಿ ಛಾಪು ಉಳಿಸಿದ ಹಳಬರನ್ನು ಬಿಟ್ಟರೆ ಹೊಸಬರಲ್ಲಿ ಅಂತಹ ಗಟ್ಟಿತನ ಕೊರತೆ ಇವತ್ತಿಗೂ ಇದ್ದೇ ಇದೆ.
ಇದನ್ನೆಲ್ಲಾ ಇವತ್ತು ನಿಮ್ಮ ಮುಂದೆ ಹೇಳಲು ಕಾರಣವೂ ಇದೆ. ಕನ್ನಡ ಚಿತ್ರರಂಗಕ್ಕೆ ತನ್ನದೇ ಆದ ಸ್ವಂತಿಕೆ ಇದೆ, ರಾಷ್ಟ್ರೀಯ ಮಟ್ಟದಲ್ಲಿ ತನ್ನ ಛಾಪನ್ನು ಮೂಡಿಸಿದ ಕನ್ನಡ ಚಿತ್ರರಂಗದಲ್ಲಿ ಕಳೆದ 2ದಶಕಗಳಿಂದ ಗುಣಮಟ್ಟದ ಚಿತ್ರಗಳ ಕೊರತೆ ಇದೆ. ಇಲ್ಲಿ ಪ್ರಯೋಗಶೀಲತೆಗೆ ಅವಕಾಶಗಳಿದ್ದರೂ ಅದನ್ನು ಬಳಸಿಕೊಳ್ಳುವವರಿಲ್ಲ, ಸಂತೆಗೆ ಮೂರು ಮೊಳ ನೇಯುವವರದ್ದೇ ಕಾರುಬಾರು, ಸಂಘ-ಸಂಸ್ಥೆ ಹಾಗೂ ಮಂಡಳಿಗಳಲ್ಲೂ ಅವರದ್ದೇ ಆಟಾಟೋಪ. ಮೊನ್ನೆ ಮೊನ್ನೆ 92.7 ಬಿಗ್ ಎಫ್ ಎಂ ಮನರಂಜನಾ ರೇಡಿಯೋ ಪ್ರಸಾರದಲ್ಲಿ ಕನ್ನಡ ಚಿತ್ರರಂಗದ ಛತ್ರಿ ಯಾರು? ಎಂಬ ತರ್ಲೆ ಪ್ರಶ್ನೆಯನ್ನು ಇಟ್ಟು ಕನ್ನಡದ ಹಾಸ್ಯ ನಟರ ಪಟ್ಟಿ ನೀಡಿ ಆರಿಸುವಂತೆ ಕೋರಿತ್ತು. ಇದರಿಂದ ಸಿಟ್ಟಿಗೆದ್ದ ಚಲನ ಚಿತ್ರ ಮಂಡಳಿ ಸದರಿ ರೇಡಿಯೋ ವಿರುದ್ದ ಪ್ರತಿಭಟನಾರ್ಥವಾಗಿ ಚಲನಚಿತ್ರ ಚಟುವಟಿಕೆಗಳನ್ನು ಬಂದ್ ಮಾಡುವ ಬೆದರಿಕೆ ಒಡ್ಡಿತ್ತು. ಆಗ ಸಂಧಾನಕ್ಕೆ ಬಂದ ಖಾಸಗಿ ರೇಡಿಯೋದ ಮುಖ್ಯಸ್ಥರು ಕ್ಷಮೆಯಾಚಿಸಿದರು. ಅದಕ್ಕೆ ಮಂಡಳಿ ವಿಧಿಸಿದ ಶಿಕ್ಷೆ ಒಂದು ದಿನ ರೇಡಿಯೋ ಬಂದ್ ಮಾಡಬೇಕು, ಪ್ರತೀ ಅರ್ಧ ಗಂಟೆಗೊಮ್ಮೆ ಕ್ಷಮೆಯಾಚಿಸಬೇಕು ಇತ್ಯಾದಿ. ಇದ್ಯಾವ ಸೀಮೆಯ ಶಿಕ್ಷೆ ಸ್ವಾಮಿ.? ಇದು ಶಿಕ್ಷೆಯ ಹುಟ್ಟಾ? ಅದ್ಯಾವುದೋ ಒಂದು ರೇಡಿಯೋ ನಟರನ್ನ ಅಪಮಾನಿಸಿದೆ ಎಂದಾದರೆ ಅದಕ್ಕೆ ಕಾನೂನಿನಡಿ ಶಿಕ್ಷೆ ಕೊಡಿಸುವ ಅವಕಾಶವಿದೆ ಹೀಗಿರುವಾಗ ಅರ್ಧ ಗಂಟೆಗೊಮ್ಮೆ ಕ್ಷಮೆಯಾಚಿಸುವುದು ಅಂದರೆ ಅದೆಂಥದ್ದು. ಇದೇ ಮಂಡಳಿ ತಿಂಗಳ ಹಿಂದೆ 'ರಾವಣ್' ಹಿಂದಿ ಚಿತ್ರ ರಾಜ್ಯದಲ್ಲಿ ಬಿಡುಗಡೆ ಯಾದಾಗ ಬಾಲ ಮುದುರಿಕೊಂಡು ತನ್ನ ನಿಯಮಗಳನ್ನು ಸಡಿಲಿಸಿತು. ಕನ್ನಡ ಚಿತ್ರ ರಂಗದ 75ರ ಸಂಭ್ರಮವನ್ನು ಅರ್ಥಪೂರ್ಣ ರೀತಿಯಲ್ಲಿ ಸಮರ್ಪಕವಾಗಿ ಆಚರಿಸಲು ಸಾಮರ್ತ್ಯವಿಲ್ಲದ ಚಿತ್ರರಂಗದ ಮಂದಿಗೆ ತನ್ನದೇ ನಟರು,ನಟಿಯರು,ನಿರ್ದೇಶಕರು ಕೆಸರೆರಚಾಡಿಕೊಂಡಾಗ ಸರಿಯಾದ್ದೊಂದು ಖಾಜಿ ನ್ಯಾಯ ಮಾಡಲು ಆಗಲಿಲ್ಲ, ಅನೇಕ ದಶಕಗಳಿಂದ ಕನ್ನಡದಲ್ಲಿ ಪೈರಸಿ ತಡೆಗೆ ಕಟ್ಟುನಿಟ್ಟಾದ ಒಂದು ನಿಯಮ ಹೊರಡಿಸಲು ಆಗಲಿಲ್ಲ, ಹೊಡಿ-ಬಡಿ-ಕೊಚ್ಚು-ಕೊಲ್ಲು-ಸುಂದರ ಹೊರಾಂಗಣ,ಮಧುರ ಹಾಡುಗಳು, ಕೆಟ್ಟುಕೆರ ಹಿಡಿದ ಕಥೆ, ಸವಕಲು ನಿರೂಪಣೆ ಇಂಥಹದ್ದನ್ನು ವಿಮರ್ಶಿಸಿದರೆ ಪತ್ರಕರ್ತರ ವಿರುದ್ದ ಹರಿಹಾಯುವ ಸ್ಥಿತಿ ಇದೆ. ಇಂಥಹ ವೈರುದ್ಯ ಪರಿಸ್ಥಿತಿಯಲ್ಲಿ ಕನ್ನಡ ಚಿತ್ರರಂಗದಲ್ಲಿ ಮತ್ತೆ ಬದಲಾವಣೆ ಗಾಳಿ ಬೀಸುವುದೇ? ಹೌದು ಖಂಡಿತವಾಗಿಯೂ ಒಂದು ಹಂತದಲ್ಲಿ ಇಂತಹದ್ದನ್ನ ನಿರೀಕ್ಷಿಸಲು ಸಾಧ್ಯವಿದೆ. ಹಳೆ ದಿನಗಳ ಮಾಧುರ್ಯವನ್ನ ತುಂಬಲು ಜಯಂತ್ ಕಾಯ್ಕಿಣಿ, ಯೋಗರಾಜ ಭಟ್ ರಂತಹವರ ಸಾಹಿತ್ಯ ಶ್ರೀಮಂತಿಕೆ, ಹರಿಕೃಷ್ಣ,ಮನೋಮೂರ್ತಿ, ಅನೂಪ್ ಸಿಳೀನ್, ರಿಕಿಕೇಜ್, ರಘು ದೀಕ್ಷಿತ್ ರಂತಹ ಹೊಸ ಅಲೆಯ ಸಂಗೀತ ನಿರ್ದೇಶಕರು, ಜೇಕಬ್ ವರ್ಗೀಸ್,ಸೈನೈಡ್ ನ ರಮೇಶ್, ಯೋಗರಾಜಭಟ್, ಸೂರಿ, ರಾಘವ(ದ್ವಾರ್ಕಿ), ಶಶಾಂಕ್, ಚಂದ್ರು, ಗುರುಪ್ರಸಾದ್ ರಂತಹ ಹೊಸ ತುಡಿತದ ನಿರ್ದೇಶಕರು ಮನಸ್ಸು ಮಾಡಿದರೇ ಮತ್ತೆ ಹಳೇ ದಿನಗಳ ವೈಭವ ಕನ್ನಡಕ್ಕೆ ಮರಳಬಹುದು. ಇಂತಹದ್ದೊಂದು ಬೆಳಕು ಕಾಣಿಸಿದ್ದು ಕಳೆದೆರೆಡು ವಾರಗಳಿಂದ ಬಿಡುಗಡೆಯಾದ ಕೆಲವು ಚಿತ್ರಗಳ ವಿಭಿನ್ನತೆಯಿಂದಾಗಿ. ಶಶಾಂಕ್ ರ ಕೃಷ್ಣನ್ ಲವ್ ಸ್ಟೋರಿ, ಮೊನ್ನೆ ಮೊನ್ನೆಯಷ್ಟೇ ಬಿಡುಗಡೆಯಾದ ಮತ್ತೆ ಮುಂಗಾರು ಅಂತಹ ಭರವಸೆಯನ್ನು ದಕ್ಕಿಸಿಕೊಟ್ಟಿವೆ ಎಂದರೆ ತಪ್ಪಾಗಲಾರದು. ಅದರಲ್ಲೂ ಮತ್ತೆ ಮುಂಗಾರು ಕಥಾವಸ್ತುವಿನಿಂದಾಗಿ ಕನ್ನಡದ ಮಟ್ಟಿಗೆ ಒಂದು ವಿಶಿಷ್ಠ ಚಿತ್ರ.
'ಮತ್ತೆ ಮುಂಗಾರು' ಈ . ಕೃಷ್ಣಪ್ಪ ನಿರ್ಮಾಣದ ಹೊಸ ಚಿತ್ರ. ಮುಂಗಾರು ಮಳೆಯಂತಹ ಉತ್ತಮ ಮನರಂಜನಾ ಚಿತ್ರ ಮೊಗ್ಗಿನ ಮನಸ್ಸು ವಿನಂತಹ ಪ್ರಬುದ್ದ ಚಿತ್ರಗಳು ಇವರ ನಿರ್ಮಾಣದಲ್ಲೇ ಬಂದಿತ್ತು. ಈಗ ಮತ್ತೆ ಮುಂಗಾರು ಬಂದಿದೆ, ಇದು ಮೇಲ್ನೋಟಕ್ಕೆ ಪ್ರೇಮ ಕಥಾವಸ್ತುವಿನಂತಹ ಚಿತ್ರದಂತೆ ಬಿಂಬಿತವಾದರೂ ಆಂತರ್ಯದಲ್ಲಿ ಬೇರೆಯದೇ ಆದ ಕಥೆಯನ್ನು ಹೊಂದಿದೆ. ನಿರ್ದೇಶಕರು, ದೃಶ್ಯನಿರೂಪಣೆ ಹಾಗೂ ಸಂಭಾಷಣೆಯಲ್ಲಿ ಸ್ವಲ್ಪ ಪ್ರಬುದ್ದತೆ ತೋರಿದ್ದರೆ ಇದು ಅಂತರಾಷ್ಟ್ರೀಯ ಗುಣಮಟ್ಟದ ಚಿತ್ರ ವಾಗಿ ರೂಪುಗೊಳ್ಳುವುದು ನಿಸ್ಸಂದೇಹ.ಅಂತಹ ಲೋಪಗಳ ನಡುವೆಯೂ ಮಾತೃ ಪ್ರೇಮೆ, ದೇಶಭಕ್ತಿ, ಪ್ರೇಮ, ಬದುಕಿನ ಅನಿವಾರ್ಯ ಸಂಕಟ ಹಾಗೂ ತಲ್ಲಣವನ್ನು ಮತ್ತೆ ಮುಂಗಾರು ಪ್ರೇಕ್ಷಕರಿಗೆ ಹಿಡಿ ಹಿಡಿಯಾಗಿ ಕಟ್ಟಿಕೊಡುತ್ತದೆ. ಮುಂಬೈ ಕಡಲತೀರದಲ್ಲಿ ಬದುಕುವ ವಲಸಿಗ ಮೀನುಗಾರರ ಬವಣೆ, ಅಲ್ಲಿ ನಾಯಕ-ನಾಯಕಿಯ ನಡುವೆ ನಡೆಯುವ ಪ್ರೇಮ, ತೆಗೆದುಕೊಳ್ಳುವ ಅನಿರೀಕ್ಷಿತ ತಿರುವು, ಕಡಲಿನಲ್ಲಿ ಉಂಟಾಗುವ ಚಂಡಮಾರುತದ ಸುಳಿಗೆ ಸಿಕ್ಕ ಭಾರತೀಯ ಮೀನುಗಾರರು ತಮಗೆ ತಿಳಿಯದಂತೆ ಪಾಕಿಸ್ತಾನದ ಸರಹದ್ದು ಮೀರಿದಾಗ ಅನುಭವಿಸುವ ಕಷ್ಟ, ಕತ್ತಲ ಕಾರಾಗೃಹದಲ್ಲಿ ಅನುಭವಿಸುವ ಪಡಿಪಾಟಲು, ಇಂದಿರಾಗಾಂದಿ-ರಾಜೀವ್ ಗಾಂಧಿ ಹತ್ಯೆ, ಬಾಬರಿ ಮಸೀದಿ ಧ್ವಂಸ, ಕಾರ್ಗಿಲ್ ಯುದ್ದ ತದನಂತರ ವಾಜಪೇಯಿ ಸರ್ಕಾರದಲ್ಲಿ ಎರಡೂ ದೇಶಗಳ ನಡುವೆ ನಡೆಯುವ ಒಪ್ಪಂದದಿಂದ 21ವರ್ಷಗಳ ನಂತರ ಬಿಡುಗಡೆಯಾಗುವ ಮೀನುಗಾರರು ನಂತರದ ಕಥೆ ಪ್ರೇಕ್ಷಕರ ಕಣ್ಣಾಲಿಗಳು ನೀರು ತುಂಬುವಂತೆ ಮಾಡಿಬಿಡುತ್ತವೆ. ಅಷ್ಟರ ಮಟ್ಟಿಗೆ ನಿರ್ದೇಶಕ ರಾಘವ (ದ್ವಾರ್ಕಿ) ತನ್ನ ಶ್ರಮವನ್ನ ವಿಭಿನ್ನ ಕಥಾವಸ್ತುವಿನ ಮೂಲಕ ಕಟ್ಟಿಕೊಟ್ಟಿದ್ದಾರೆ. ನಾಯಕ ಶ್ರೀನಗರ ಕಿಟ್ಟಿ ಸೇರಿದಂತೆ ಚಿತ್ರದ ಪ್ರತಿಯೊಂದು ಪಾತ್ರವೂ ಸಹಜತೆಗೆ ಒತ್ತುಕೊಡುವ ರೀತಿಯಲ್ಲಿ ಮೂಡಿಬಂದಿವೆ. ಎಷ್ಟೋ ದಿನಗಳ ನಂತರ ಕಾಡುವ ಚಿತ್ರವನ್ನು ರಾಘವ ಕೊಟ್ಟಿದ್ದಾರೆ. ಚಿತ್ರ ಹಲವು ಪ್ರಶ್ನೆಗಳನ್ನು ಮೂಡಿಸಿ ತಾರ್ಕಿಕ ವಾದ ುತ್ತರ ಕಂಡುಕೊಳ್ಳಲು ಪ್ರಯತ್ನಿಸುತ್ತದೆ. ಕನ್ನಡದಲ್ಲಿ ಇಂತಹ ಕಥೆ ಬಂದು ಎಷ್ಟೋ ವರ್ಷಗಳಾಗಿತ್ತು. ಇರಲಿ ಕನ್ನಡ ಚಿತ್ರ ರಂಗದ ಸಧ್ಯದ ಪರಿಸ್ಥಿತಿ ಸುಧಾರಿಸಬೇಕಿದೆ, ಚಿತ್ರರಂಗದ ಮಂದಿ ವೈಯುಕ್ತಿಕ ತಗಾದೆ-ಸಂಘರ್ಷಕ್ಕೆ ಮಹತ್ವ ನೀಡದೇ ಗಂಭೀರವಾಗಿ ಸದಭಿರುಚಿಯ, ವಿಚಾರದ ತುಡಿತ, ಹದವರಿತ ಮನರಂಜನೆಗೆ ಆದ್ಯತೆ ನೀಡುವ ಚಿತ್ರಗಳ ನಿರ್ಮಾಣದಲ್ಲಿ ತೊಡಗುವ ಮೂಲಕ ಕನ್ನಡ ಚಿತ್ರರಂಗಕ್ಕೆ 'ಮತ್ತೆ ಮುಂಗಾರು' ಬರುವುದೇ ಕಾದು ನೋಡಬೇಕು.

Saturday, July 31, 2010

ಬಚಾವೋ ಯಾತ್ರೆ ಅಂತೆ ಏನ್ರಿ ಇದೆಲ್ಲಾ?

ಬಚಾವೋ ಯಾತ್ರೆ ಅಂತೆ ಯಾರನ್ನ ಯಾರು ಬಚಾವ್ ಮಾಡ್ಬೇಕ್ರಿ? ಬಳ್ಳಾರಿ ಬಚಾವ್ ಮಾಡ್ಬೇಕೋ? ಬೆಂಗಳೂರು ಬಚಾವ್ ಮಾಡ್ಬೇಕೋ, ರೆಡ್ಡಿಗಳನ್ನು ರಾಜ್ಯ ರಾಜಕೀಯದಿಂದ ಬಚಾವ್ ಮಾಡ್ಬೇಕೋ, ರೆಡ್ಡಿಗಳಿಂದ ಬಿಜೆಪಿ ಸರ್ಕಾರ ಬಚಾವ್ ಮಾಡ್ಬೇಕೋ,ಅಥ್ವ ಬಿಜೆಪಿ ಸರ್ಕಾರದಿಂದ ರೆಡ್ಡಿಗಳನ್ನು ಬಚಾವ್ ಮಾಡ್ಬೇಕೋ? ರೆಡ್ಡಿಗಳಿಂದ ಸಿದ್ದರಾಮಯ್ಯನವರನ್ನ ಬಚಾವ್ ಮಾಡ್ಬೇಕೋ, ಇಲ್ಲ ವಿಧಾನ ಸೌಧನಾ ರಾಜಕೀಯ ಪುಡಾರಿಗಳಿಂದ ಗೂಂಡಾಗಳಿಂದ ಬಚಾವ್ ಮಾಡಬೇಕೋ ,ಕಾಂಗ್ರೆಸ್-ಜೆಡಿಎಸ್ ನವರಿಂದ ಸರ್ಕಾರಾನ ಬಚಾವ್ ಮಾಡಬೇಕೋ? ಯಡಿಯೂರಪ್ಪನವರನ್ನ ರೆಡ್ಡಿಗಳಿಂದ ಬಚಾವ್ ಮಾಡಬೇಕೋ, ಅಂತಿಮವಾಗಿ ರಾಜ್ಯದ ಜನತೆಯನ್ನು ಈ ರಾಜಕಾರಣಿಗಳಿಂದ ಬಚಾವ್ ಮಾಡಬೇಕೋ? ಒಂದೂ ತಿಳಿತಿಲ್ಲ.ಅಧಿಕಾರದ ಹವಣಿಕೆಗೆ ಬಿದ್ದ ಪುಡಾರಿಗಳು ವಿಧಾನಸೌಧದಲ್ಲಿ ಕಿಸಿದಿದ್ದು ಸಾಕಲ್ಲ ಅಂತ ಬೀದಿಗಿಳಿದಿದ್ದಾರೆ ಆ ಮೂಲಕ ಪರಸ್ಪರರನ್ನ ಬೆತ್ತಲು ಮಾಡುತ್ತಿದ್ದಾರೆ. ಈ ನಡುವೆ ಮುಗುಮ್ಮಾಗಿ ಕುಳಿತವರು ಪರಸ್ಪರರನ್ನು ಹಣಿಯುವ, ವೈಯುಕ್ತಿಕ ರಾಜಕೀಯ ಲಾಭ ಪಡೆಯುವ ನಿಟ್ಟಿನಲ್ಲಿ ಅಕ್ರಮ ರಾಜಕೀಯ ಸಂಭಂಧಗಳಿಗೆ ಮುಂದಾಗಿದ್ದಾರೆ. ಇವತ್ತು ಕರ್ನಾಟಕದಲ್ಲಿ ನೈತಿಕವಾಗಿ ಮತ್ತು ಸೈದ್ದಾಂತಿಕವಾಗಿ ಬಡಿದಾಡಲು ರಾಜಕಾರಣಿಗಳಿಗೆ ಹಲವು ವಿಚಾರಗಳಿವೆ, ವಿಧಾನ ಸಭೆಯಲ್ಲಿ, ವಿಧಾನ ಪರಿಷತ್ ನಲ್ಲಿ ಜನರ ಹಿತಾಸಕ್ತಿಗೆ ಧ್ವನಿಯೆತ್ತಲು ಸಮಸ್ಯೆಗಳು ಹಾಸು ಬಿದ್ದಿವೆ ಹೀಗಿರುವಾಗ ರೆಡ್ಡಿಗಳನ್ನು ಕಿತ್ತೆಸೆಯುವ ಜೊತೆಗೆ ಅಧಿಕಾರ ಹಿಡಿಯುವ ಏಕೈಕ ಅಜೆಂಡಾದೊಂದಿಗೆ ಕಾಂಗ್ರೆಸ್ ಬೀದಿಗೆ ಬಂದಿದ್ದರೆ ಹತಾಶರಾದ ರೆಡ್ಡಿಗಳು ಶ್ರೀರಾಮುಲು ತಲೆಬೋಳಿಸಿ ಸ್ವಾಭಿಮಾನ ಯಾತ್ರೆ ಕೈಗೊಂಡಿದ್ದಾರೆ ಆ ಮೂಲಕ ರಾಜ್ಯದಲ್ಲಿ ರಾಜಕೀಯ ಸಂಘರ್ಷದ ವೇದಿಕೆ ಸಿದ್ದಗೊಂಡಿದೆ.
ರಾಜ್ಯದಲ್ಲಿ ಈ ಹೊತ್ತಿಗೆ ತುಂಬಿ ತುಳುಕಬೇಕಾಗಿದ್ದ ಜಲಾಶಯಗಳು ಬರಿದಾಗಿವೆ, ವಿದ್ಯುತ್ ಉತ್ಪಾದನೆ ಸ್ಥಗಿತಗೊಂಡಿದೆ, ಗ್ರಾಮೀಣ ರೈತರಿಗೆ ವಿದ್ಯುತ್ ಒದಗಿಸುವ ಟ್ರಾನ್ಸ್ಫಾರ್ಮರ್ ಗಳ ವಿತರಣೆಗೆ ಬಜೆಟ್ ಕೊರತೆ ಇದೆ, ಜಲಾಶಯದ ನೀರು ಅವಲಂಬಿಸಿರುವ ಹಲವು ನಗರಗಳಿಗೆ ಕುಡಿಯುವ ನೀರಿನ ತತ್ವಾರ ಎದುರಾಗಿದೆ. ರೈತರಿಗೆ ಇದು ಕೃಷಿ ಆರಂಭದ ಸಮಯ, ನಕಲಿ ಬಿತ್ತನೆ ಬೀಜ ಮಾರುಕಟ್ಟೆಗೆ ಬಂದಿದೆ, ರಸಗೊಬ್ಬರ ಕೊರತೆ ಅಲ್ಲಲ್ಲಿ ಇದೆ, ತಂಬಾಕು ಬೆಳೆಗಾರರಿಗೆ ಸಾವಿರಾರು ಟನ್ ನಕಲಿ ಗೊಬ್ಬರ ವಿತರಣೆಯಾಗಿದೆ, ವಾಣಿಜ್ಯ ಬೆಳೆಗಳಿಗೆ ರೋಗ ತಗುಲಿದೆ, ಈಗ ಆರಂಭವಾಗಿರುವ ಮಳೆಯ ಬಿರುಸಿಗೆ ದಕ್ಷಿಣದಲ್ಲಿ ಪ್ರವಾಹ ಪರಿಸ್ಥಿತಿಯಿದೆ. ಉತ್ತರದಲ್ಲಿ ಕಳೆದ ವರ್ಷ ನೆರೆಗೆ ತುತ್ತಾಗಿದ್ದ ಮಂದಿ ಆಸರೆಯಿಲ್ಲದೇ ನರಳುವ ಪರಿಸ್ಥಿತಿ ಇದೆ, ಈ ಗ ಮತ್ತೆ ಅಲ್ಲಿ ಪ್ರವಾಹ ಭೀತಿ ಇದೆ, ರಾಜ್ಯದ ಕೆಲವೇ ಪ್ರದೇಶಗಳಲ್ಲಿ ಮೊಡಬಿತ್ತನೆ ಆಗಬೇಕಿದೆ, ಹಲವು ಮೂಲಭೂತ ಸೌಕರ್ಯ ಅಭಿವೃದ್ದಿ ಕೆಲಸಗಳಿಗೆ ಅನುದಾನ/ಯೋಜನೆ ಮಂಜೂರಾಗಬೇಕಿದೆ, ಕೇಂದ್ರ ಸರ್ಕಾರದ ಮಹತ್ವದ ಯೋಜನೆ ಉದ್ಯೋಗ ಖಾತ್ರಿ ಹಳ್ಳ ಹಿಡಿದಿದೆ, ಹತ್ತು ಹಲವು ಆಶ್ರಯ ಯೋಜನೆಗಳಿದ್ದರೂ ಎಷ್ಟೋ ಮಂದಿಗೆ ಸೂರು ಸಿಕ್ಕಿಲ್ಲ ಬೆಳಕೂ ದಕ್ಕಿಲ್ಲ, ಶಾಲೆಗೆ ಸೇರಿದ ಮಕ್ಕಳಿಗೆ ಪುಸ್ತಕ-ಸೈಕಲ್ ಸಿಕ್ಕಿಲ್ಲ, ಅರೆಕಾಲಿಕ ಉದ್ಯೋಗಿಗಳಿಗೆ ಬದುಕಿನ ಭರವಸೆ ಸಿಕ್ಕಿಲ್ಲ, ನಿರುದ್ಯೋಗಿಗಳಿಗೆ ಬದುಕಿನ ಆಶಾಕಿರಣ ಕಾಣುತ್ತಿಲ್ಲ, ಕಾಡಾನೆಗಳ ಹಾವಳಿ ಹೆಚ್ಚಿದೆ, ಕಾಡಿನ ಆನೆಗಳು ನಾಡಿಗೆ ಬಂದಿವೆ, ಕಾಡಿನ ನಾಶವಾಗುತ್ತಿದೆ, ಅಭಿವೃದ್ದಿಯ ಹೆಸರಿನಲ್ಲಿ ಕೃಷಿ ಜಮೀನು ಕಡಿಮೆಯಾಗುತ್ತಿದೆ, ಔದ್ಯೋಗಿಕರಣಕ್ಕೆ ಮಣೆಹಾಕಲಾಗುತ್ತಿದೆ, ಜಮೀನು ಕಳೆದು ಕೊಂಡ ರೈತ ಸ್ವಾವಲಂಬಿ ಬದುಕು ಕಳೆದುಕೊಂಡು ಕೂಲಿಗೆ ನಗರ ಪ್ರದೆಶಗಳಿಗೆ ಹೋಗಬೇಕಾದ ಪರಿಸ್ಥಿತಿ ಇದೆ, ಜನತೆ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗಿದ್ದಾರೆ ಇಂತಹ ಹೊತ್ತಿನಲ್ಲಿ ಪಾದಯಾತ್ರೆ/ ಪ್ರತಿಭಟನೆಯ ನಾಟಕ ಬೇಕಿತ್ತಾ??
ನೀವೆ ಯೋಚಿಸಿ ಮುಂಗಾರು ಅಧಿವೇಶನ ರಾಜ್ಯದ ಜನತೆಯ ದೃಷ್ಟಿಯಿಂದ ಅತ್ಯಂತ ಮಹತ್ವದ ಅಧಿವೇಶನ, ಜನತೆಗೆ ಅನುಕೂಲ ಕಲ್ಪಿಸುವ ಯಾವುದೇ ಯೋಜನೆಗಳು, ಆಡಳಿತಾತ್ಮಕವಾದ ವಿಚಾರಗಳ ಆಗುಹೋಗುಗಳ ಚರ್ಚೆ ಅತೀ ಗಹನವಾದುದು ಆದರೆ 5-6 ದಿನಗಳು ನಡೆದ ಮುಂಗಾರು ಅಧಿವೇಶನದಲ್ಲಿ ನಡೆದದ್ದೇನು? ಅಧಿವೇಶನದ ಆರಂಭದಲ್ಲಿ ಲೋಕಾಯುಕ್ತರಿಗೆ ನೀಡಬೇಕಾದ ಅಧಿಕಾರದ ಬಗ್ಗೆ ಗದ್ದಲ, ಸಿಎಂ ಯಡಿಯೂರಪ್ಪ ಗಟ್ಟಿ ನಿರ್ಧಾರದೊಂದಿಗೆ ಅಧಿಕಾರ ನೀಡುವ ಚರ್ಚೆಗೆ ಮುಂದಾದಾಗ ರಾಜಕಾರಣಿಗಳ ವಿರುದ್ದ ತನಿಖೆ ಮಾಡುವ ಅಧಿಕಾರ ಒಂದನ್ನು ಬಿಟ್ಟು ಉಳಿದ ವಿಚಾರಗಳ ಬಗ್ಗೆ ಮಾತ್ರ ಆಸ್ಥೆ ವಹಿಸುವ ಮೂಲಕ ರಾಜಕಾರಣಿಗಳೆಲ್ಲ ಒಂದೇ ಎಂಬುದನ್ನು ಸಾಬೀತು ಪಡಿಸಿಬಿಟ್ಟರು. ನಂತರದಲ್ಲಿ ಸಿಎಂ ಯಡಿಯೂರಪ್ಪ ಸಿದ್ದು ಕೇಳಿದ ಪ್ರಶ್ನೆಗೆ ತಾಳ್ಮೆ ಕಳೆದುಕೊಂಡು ನಡೆದುಕೊಂಡ ರೀತಿ ಆಡಳಿತ ಪಕ್ಷದವರನ್ನು ಪ್ರಚೋದಿಸಿಬಿಟ್ಟಿತು, ದಿನೇಶ್ ಗುಂಡೂರಾವ್ ಆಡಿದ ಮಾತಿಗೆ ಸಿಟ್ಟಿಗೆದ್ದ ರೆಡ್ಡಿಗಳು ಗೂಂಡಾಗಳಂತೆ ನಡೆದುಕೊಂಡಿದ್ದು ಈಗ ಇತಿಹಾಸ. ಅದೇ ದಿನ CNN IBN ಚಾನೆಲ್ ನಲ್ಲಿ ಪ್ರತಿಪಕ್ಷದವರ ಧರಣಿ ಪ್ರತಿಭಟನೆ 'ಕರ್ನಾಟಕದಲ್ಲಿ ನಾಟಕ' ಎಂಬ ಶೀರ್ಷಿಕೆಯಲ್ಲಿ ಪ್ರಸಾರವಾಗುತ್ತಿತ್ತು. ಪ್ರತಿಭಟನಾ ನಿರತ ಶಾಸಕರುಗಳು ಹಾಡು-ಹಸೆ ಹೇಳಿಕೊಂಡು ಜೋಕು ಮಾಡುತ್ತಾ ಕಾಲ ಕಳೆಯುತ್ತಿದ್ದರು. ಇದೇ ಸಂಧರ್ಭಕ್ಕೆ ಸರಿಯಾಗಿ ಆಸರೆ ಕಳೆದುಕೊಳ್ಳುವ ಭೀತಿಯಲ್ಲಿ ಹಾವೇರಿಯ ಭಂಗಿ ಸಮುದಾಯದ ಜನರು ಸರ್ಕಾರದ ವಿರುದ್ದ ಪ್ರತಿಭಟಿಸಿ ಮೈಮೇಲೆ ಮಲ ಸುರಿದುಕೊಂಡ ಅತ್ಯಂತ ಭೀಬತ್ಸ ಘಟನೆ ಜರುಗಿತ್ತು. ಮನುಕುಲದ ಅತ್ಯಂತ ಹೇಯವಾದ ಘಟನೆ ನಡೆದ ಸಂಧರ್ಭ ವಿಧಾನ ಸಭೆ/ಪರಿಷತ್ ನಲ್ಲಿ ರಾಜಕೀಯ ಲಾಭಕ್ಕಾಗಿ ಹಣಾಹಣಿ ನಡೆಯುತ್ತಿತ್ತು ಇದು ಪ್ರಜಾಪ್ರಭುತ್ವದ ಕಗ್ಗೊಲೆಯಲ್ಲದೇ ಮತ್ತೇನು? ಅಧಿವೇಶನ ಶುರುವಿಗೆ ಮಾಜಿ ಶಾಸಕ ಎ ಟಿ ರಾಮಸ್ವಾಮಿ ಬಿತ್ತನೆ ಬೀಜ ಬೆಲೆ ನಿಗದಿಯ ಭಾರೀ ಅವ್ಯವಹಾರವನ್ನು ಬಯಲಿಗೆ ತಂದಿದ್ದರು, ನಂತರ ಮಾಜಿ ಸ್ಪೀಕರ್ ಕೃಷ್ಣ, ಮತ್ತು ಸಚಿವ ಕಾಂತಾ ಜೊತೆಗೆ ಸೇರಿ ಉದ್ಯೋಗ ಖಾತ್ರಿ ಅಕ್ರಮದ ವಿರುದ್ದ ಧ್ವನಿಯೆತ್ತಿದರು ಇವಿಷ್ಟು ಅಧಿವೇಶನ ಹೊರಗೆ ನಡೆಯುತ್ತಿದ್ದರೆ ಒಳಗಡೆ ನಡೆಯುತ್ತಿದ್ದ ನಾಟಕವೇ ಬೇರೆ. ಪುಡಾರಿಗಳ ವೈಯುಕ್ತಿಕ ತೆವಲಿಗೆ ಮಹತ್ವದ ಅಧಿವೇಶನ ಬಲಿಗೊಟ್ಟರಲ್ಲ ಜನತೆಯ ಶಾಪ ಇವರಿಗೆ ತಟ್ಟದಿರದೇ?
ಇವತ್ತು ರೆಡ್ಡಿಗಳ ವಿರುದ್ದ ಕಾಂಗ್ರೆಸ್-ಜೆಡಿಎಸ್ ಸಮಾನವಾಗಿ ವಿರೋಧ ವ್ಯಕ್ತಪಡಿಸುತ್ತಿವೆ, ಮೊದಲೇ ಹದಗೆಟ್ಟಿದ್ದ ರಾಜ್ಯ ರಾಜಕೀಯದ ಅಳಿದುಳಿದ ಮೌಲ್ಯಗಳನ್ನು ಹೊಸಕಿ ಹಾಕಿದ್ದು.ರಾಜಕೀಯದಲ್ಲಿ ಅಸಾಧಾರಣವಾದುದನ್ನು ಗಣಿ ಹಣದ ಮೂಲಕ ಸಾಧಾರಣ ವಿಚಾರವನ್ನಾಗಿ ಮಾಡಿದ್ದು ಸರ್ಕಾರವನ್ನೇ ಹೈಜಾಕ್ ಮಾಡಿದ್ದು ಗಣಿಧಣಿಗಳ ಹೆಗ್ಗಳಿಕೆ ಹಾಗೂ ರಾಜಕೀಯ ಪರಂಪರೆಯಲ್ಲಿ ಕರ್ನಾಟಕದ ಮಟ್ಟಿಗೆ ಕೆಟ್ಟ ಸ್ವಪ್ನವೇ ಸರಿ. ಸಿನಿಮಾ ಥಿಯೇಟರಿನಲ್ಲಿ ಬ್ಲಾಕ್ ಟಿಕೇಟ್ ಮಾರುತ್ತಿದ್ದ ಭೂಪನೋರ್ವ ಕೇವಲ 10ವರ್ಷಗಳಲ್ಲಿ 50ಸಾವಿರ ಕೋಟಿಗೂ ಮೀರಿದ ಧನಿಕನಾಗುತ್ತಾನೆಂದರೆ ಅದು ಸುಮ್ಮನೇ ಆಗಿ ಬರುವ ಮಾತಲ್ಲ,ಅಕ್ರಮ ಗಣಿಗಾರಿಕೆ ಮೂಲಕ ರಾಜ್ಯದ ಗಡಿಯನ್ನು ಆಂಧ್ರಕ್ಕೆ ಸೇರುವ ಸ್ಥಿತಿ ತಂದಿದ್ದು ಇದೇ ರೆಡ್ಡಿಗಳು, ನೆರೆ ಸಂತ್ರಸ್ಥರಿಗೆ ಗಣಿ ದುಡ್ಡಿನಲ್ಲಿ ಆಸರೆ ಒದಗಿಸುತ್ತೇವೆಂದು ಬಂಬಡಾ ಬಜಾಯಿಸಿದ ರೆಡ್ಡಿಗಳು ಈಗ ಯಾವ ಆಸರೆ ಎಂದದ್ದು ಅವರ ಬದ್ದತೆಯನ್ನು ಪ್ರಶ್ನಿಸುತ್ತದೆ. ಇಂತಹ ದುಷ್ಟ ಶಕ್ತಿಗಳ ವಿರುದ್ದ ಒಂದು ಬೃಹತ್ ಹೋರಾಟ ಅಗತ್ಯವಾಗಿ ಬೇಕಿತ್ತು ಆದರೆ ಅಧಿವೇಶನವನ್ನು ಬಲಿಗೊಟ್ಟು ಪ್ರತಿಭಟನೆಗಿಳಿಯ ಬೇಕಿರಲಿಲ್ಲ. ಕೇಂದ್ರದಲ್ಲಿ ಅತಿ ಹೆಚ್ಚಿನ ಅವಧಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ, ಅವರ ಪಕ್ಷದಲ್ಲೆ ಶಾಸಕರಾಗಿ,ಸಂಸದರಾಗಿ, ಸಚಿವರಾದ ಎಷ್ಟೋ ಮಂದಿ ಹಲವು ದಶಕಗಳಿಂದ ಗಣಿಯನ್ನು ಲೂಟಿ ಮಾಡಿಕೊಂಡೇ ಬಂದಿದ್ದಾರೆ, ಆ ಸಂಧರ್ಭದಲ್ಲಿ ಇವರಿಗೆ ಬಳ್ಳಾರಿ ಬಚಾವು ಮಾಡುವ ಐಡಿಯಾ ಬರಲಿಲ್ಲ, ಇವತ್ತು ಒಂದು ಟನ್ ಅದಿರಿಗೆ 20ರೂ ತೆರಿಗೆ ಇದೆ ಆದರೆ ಮಾರುಕಟ್ಟೆಯಲ್ಲಿ ಟನ್ ಗೆ 2000 ದಿಂದ 6000ದವರೆಗೆ ಮಾರಿಕೊಳ್ಳಲಾಗುತ್ತಿದೆ, ಬಳ್ಲಾರಿಯಾಧ್ಯಂತ ಗಣಿಗಾರಿಕೆ ವ್ಯಾಪಕವಾಗಿದೆ ಅಲ್ಲಿನ ಪರಿಸರ ಹದಗೆಟ್ಟಿದೆ, ಕಳೆದ 50ವರ್ಷಗಳಿಂದ ಗಣಿನೀತಿ ಬದಲಾಗಿಲ್ಲ. ಈ ಕುರಿತು ಕೇಂದ್ರ ಸರ್ಕಾರ ನಿಯಂತ್ರಣ ಹೇರಲು ಸರ್ವಾಧಿಕಾರವನ್ನು ಪಡೆದಿದೆ ಗಣಿಧಣಿಗಳನ್ನು ಮಟ್ಟ ಹಾಕುವ ಸಾಮರ್ತ್ಯ ಹೊಂದಿದೆ ಆದರೆ ಕಾಂಗ್ರೆಸ್ ಪಕ್ಷ ಕೇಂದ್ರದಲ್ಲಿ ಒತ್ತಡ ಹೇರದೇ ಬಿದಿಗಿಳಿದಿದೆ ಎಂದರೆ ಅದರ ಹಿಂದಿನ ಉದ್ದೇಶ ಸ್ಪಷ್ಟವಲ್ಲವೇ? ಹೇಳಿ ಇವರಿಗೆ ರಾಜ್ಯದ ಜನತೆಯ ಹಿತಾಸಕ್ತಿ ಬೇಕಾ? ಇನ್ನೂ ಯಡಿಯೂರಪ್ಪ ಪಂಚರಂಗಿ ಆಟ ಪ್ರದರ್ಶಿಸುತ್ತಾ ಮುಗುಮ್ಮಾಗಿ ರಾಜಕೀಯ ಲೆಕ್ಕಾಚಾರ ಹಾಕುತ್ತಾ ಸುರಕ್ಷಿತವಾಗುವುದು ಹೇಗೆಂದು ಚಿಂತಿಸುತ್ತಿದ್ದರೆ ಜೆಡಿಎಸ್ ಅಪವಿತ್ರ ಮೈತ್ರಿಗೆ ಮತ್ತೆ ಸಜ್ಜಾಗುತ್ತಿದೆ. ಅತ್ತ ಬಳ್ಳಾರಿಯಲ್ಲಿ ಬೇಸತ್ತ ರೆಡ್ಡಿಗಳು ರಾಮುಲು ತಲೆಬೋಳಿಸಿ ಸ್ವಾಭಿಮಾನಿ ಯಾತ್ರೆ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಜನತೆ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗಿದ್ದಾರೆ, ಸರ್ಕಾರಿ ಆಸ್ಪತ್ರೆಗಳು ರೋಗಗ್ರಸ್ತವಾಗಿವೆ ಆದರೆ ರಾಮುಲು ಮಾತ್ರ ತಲೆಬೋಳಿಸಿಕೊಂಡು ರೆಡ್ಡಿಗಳ ರಕ್ಷಣೆಗೆ ನಿಂತುಬಿಟ್ಟಿದ್ದಾರೆ. ಈಗಲಾದ್ರೂ ಹೇಳ್ರಿ ರಾಜ್ಯದ ಜನತೆಯನ್ನ ಯಾರು ರಕ್ಷಿಸಬೇಕು? ಯಾರಿಂದ ರಕ್ಷಿಸಬೇಕು ? ಯಾಕೆ ರಕ್ಷಿಸಬೇಕು ಅಂತ

Sunday, July 11, 2010

ಸರ್ಕಾರದ ರಿಮೋಟ್ ಕಂಟ್ರೋಲ್ ಎಲ್ಲಿದೆ???


ಸರ್ಕಾರದ ರಿಮೋಟ್ ಕಂಟ್ರೋಲ್ ಎಲ್ಲಿದೆ?? ಇಂತಹದ್ದೊಂದು ಪ್ರಶ್ನೆ ಕಳೆದ ಎರಡು ವರ್ಷಗಳಿಂದ ಅದೆಷ್ಟೋ ಬಾರಿ ಕೇಳಿಕೊಂಡಿದ್ದೇನೆ. ಬಹುಶಹ ನಿಮಗೂ ಅಂತಹ ಅನುಮಾನಗಳು ಎದ್ದಿರಲಿಕ್ಕೆ ಸಾಕು.ಬಿಜೆಪಿಯ ರಿಮೋಟ್ ಕಂಟ್ರೋಲ್ ಸಂಘಪರಿವಾರದ ಬಳಿ ಇದೆಯೇ? ದೆಹಲಿಯ ಹೈಕಮಾಂಡ್ ಬಳಿ ಇದೆಯೇ? ಇಲ್ಲಬಿಜೆಪಿ ಮಹಿಳಾ ಅಧಿನಾಯಕಿ ಸುಷ್ಮಾ ಸ್ವರಾಜ್ ಬಳಿ ಇದೆಯೇ? ಅಡ್ವಾಣಿ ಬಳಿ ಇದೆಯೇ? ಬಳ್ಳಾರಿ ಗಣಿಧಣಿಯ ಬಳಿ ಇದೆಯೇ? ಸಚಿವ ಸಂಪುಟದ ನರ್ಸ್ ಖ್ಯಾತಿಯ ರೇಣುಕಾಚಾರ್ಯನ ಬಳಿ ಇದೆಯೇ? ಇಲ್ಲ ಅಂತಿಮವಾಗಿ ಕರ್ನಾಟಕ ರಾಜ್ಯಪಾಲರ ಬಳಿ ಇದೆಯೇ? ಎಲ್ಲವೂ ಅಯೋಮಯ ಅಲ್ವಾ? ಹೌದು ಇಂತಹದ್ದೊಂದು ಹೀನ ಪರಿಸ್ಥಿತಿಯ ಸರ್ಕಾರವನ್ನ ನಾವು ನೀವು ನೋಡುತ್ತಿದ್ದೇವೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು 2ವರ್ಷಗಳು ಸಂದಿವೆ. ಸರ್ಕಾರ ಸಾಧನಾ ಸಮಾವೇಶದ ಜೊತೆಗೆ ಹತ್ತು ಹಲವು ಜಾತಿ ಸಮಾವೇಶಗಳನ್ನು ಮಾಡುತ್ತಿದೆ, ಯಡಿಯೂರಪ್ಪ ಆ ಮೂಲಕ ಜಾತಿಗಳನ್ನು ಒಲಿಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಇವತ್ತು ದಕ್ಷಿಣ ಭಾರತದಲ್ಲಿ ಮೊದಲ ಭಾರಿಗೆ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಅಬಿವೃದ್ದಿಯ ನಿಟ್ಟಿನಲ್ಲಿ ಹಲವು ಉತ್ತಮ ಕೆಲಸಗಳನ್ನು ಮಾಡಿದೆ. ಈ ಸಂಧರ್ಭ ಈ ಮೇಲಿನಂತೆ ಪ್ರಶ್ನೆ ಕೇಳಿಕೊಳ್ಳಬೇಕಾದ ಸಂಧರ್ಭ ಮತ್ತೆ ಒದಗಿದೆ ಈಗ ನಡೆಯುತ್ತಿರುವ ವಿಧಾನ ಸಭೆ ಅಧಿವೇಶನ, ಅಲ್ಲಿ ಸರ್ಕಾರ ತನ್ನ ಹೊಣೆಗಾರಿಕೆಯನ್ನು ನಿಭಾಯಿಸುತ್ತಿರುವ ರೀತಿ ಇದಕ್ಕೆ ಕಾರಣ.
ಹೌದು ಯಾಕೆ ಹೀಗೆ ಸಂಘ ಪರಿವಾರ ಕಂಡ ಕನಸು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ಮೂಲಕ ಈಡೇರಿದೆಯಾದರೂ ಸಂಘದ ಆಶೋತ್ತರಗಳನ್ನು ಸರ್ವ ಸಮ್ಮತವಾಗಿ ಈಡೇರಿಸುವ ರೀತಿಯಲ್ಲಿ ಸರ್ಕಾರ ನಡೆಯುತ್ತಿಲ್ಲ? ಮುಖ್ಯಮಂತ್ರಿ ಯಡಿಯೂರಪ್ಪ ಪದೇ ಪದೇ ಮುಖೇಡಿಯಂತೆ ಕಣ್ಣೀರು ಹಾಕುತ್ತ ಅಸಹಾಯಕನ ರೀತಿ ನಡೆದುಕೊಳ್ಳುತ್ತಿರುವುದು, ಸಾರ್ವಜನಿಕವಾಗಿ ಸಿಟ್ಟನ್ನು ಪ್ರದರ್ಶಿಸುವುದು, ಬಳ್ಳಾರಿಯ ಗಣಿಧಣಿಗಳನ್ನು ಓಲೈಸುವುದು, ಪರಮ ಭ್ರಷ್ಟರನ್ನೂ ಕೂಡ ಸಚಿವ ಸಂಪುಟದೊಳಕ್ಕೆ ಬಿಟ್ಟು ಕೊಂಡು ಅಸಹ್ಯ ಸೃಷ್ಟಿಸಿಕೊಳ್ಳುತ್ತಿರುವುದು ಎಷ್ಟು ಸರಿ? ಅಧಿಕಾರ ಸ್ವೀಕರಿಸುವಾಗ ರೈತರ ಹೆಸರು ಹೇಳಿ ಅಧಿಕಾರಕ್ಕೆ ಬಂದ ಯಡಿಯೂರಪ್ಪ ನಂತರ ಹೇಗೆ ನಡೆದುಕೊಳ್ಳುತ್ತಿದ್ದಾರೆ? ಈ ಸರ್ಕಾರದಲ್ಲಿ ರೈತನ ಸ್ಥಿತಿ ಹೇಗಿದೆ ಎಂಬುದನ್ನು ಬೇರೆ ವಿವರಿಸಿ ಹೇಳಬೇಕಿಲ್ಲ.
ಈಗ ವಿಚಾರಕ್ಕೆ ಬರೋಣ, ಜೆಡಿಎಸ್ ಸಮ್ಮಿಶ್ರ ಸರ್ಕಾರದ ತಪ್ಪು ನಿರ್ಧಾರದಿಂದ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಆರಂಭದಿಂದಲೇ ತನ್ನ ತಪ್ಪು ಹೆಜ್ಜೆಗಳನ್ನು ಇಟ್ಟದ್ದು ರೆಡ್ಡಿಗಳನ್ನು ಓಲೈಸುವ ಮೂಲಕ. ಬಳ್ಳಾರಿಯ ಗಣಿಧಣಿಗಳ ಆಶಯದಂತೆ ರಚನೆಯಾದ ಮಂತ್ರಿ ಮಂಡಲದಿಂದ ಹಿಡಿದು ಪ್ರತಿ ಹೆಜ್ಜೆಯಲ್ಲೂ ಅವರನ್ನು ಬೆನ್ನಿಗಿಟ್ಟುಕೊಂಡ ಫಲವಾಗಿ ಮೊನ್ನೆಯ ಸದನ ಕಲಹದ ಮೂಲಕ ಅಸಹ್ಯ ಬೀದಿಗೆ ಬಿದ್ದಿದೆ. ಮೊನ್ನೆ ವಿರೋಧ ಪಕ್ಷದ ಕಾಂಗ್ರೆಸ್ ಮುಖಂಡ ಸಿದ್ಧರಾಮಯ್ಯ ಸದನದಲ್ಲಿ ಹೇಳಿದ ಸತ್ಯವನ್ನು ಅರಗಿಸಿಕೊಳ್ಳಲಾಗದ ಮುಖ್ಯ ಮಂತ್ರಿ ಯಡಿಯೂರಪ್ಪ ತಾಳ್ಮೆ ಕಳೆದು ಏರಿ ಹೋದದ್ದು ತನ್ನ ಸಹ ಸಚಿವರನ್ನು, ಶಾಸಕರುಗಳನ್ನು ತನ್ನೊಂದಿಗೆ ಕೈ ಜೋಡಿಸುವಂತಹ ಅನಾಹುತಕಾರಿ ಸಂಧರ್ಭ ಸೃಷ್ಟಿಸಿಕೊಂಡು ಬಿಟ್ಟರು. ಗಣಿಧಣಿಗಳ ಎಂಜಲು ತಿಂದು ಪಕ್ಷ ಸೇರುವ ಕಾಂಗೈ-ದಳ ಪಕ್ಷಗಳ ಪಕ್ಷಾಂತರಿಗಳನ್ನು ಇಟ್ಟುಕೊಂಡು, ಅವರ ಅವಶ್ಯಕತೆಗಳನ್ನು ಪೂರೈಸುತ್ತಾ ಒಂದು ಸರ್ಕಾರ ಎಷ್ಟು ಸುಭದ್ರವಾಗಿ ಮತ್ತು ಎಷ್ಟು ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸಲು ಸಾಧ್ಯ? ಜನಮೆಚ್ಚುವಂತೆ ಸರ್ಕಾರ ಅಭಿವೃದ್ದಿ ಕೆಲಸಗಳನ್ನೆನೋ ಮಾಡುತ್ತಿದೆ ಆದರೆ ಅದಕ್ಕಿಂತ ಹೆಚ್ಚಾಗಿ ಸರ್ಕಾರದ ನೈತಿಕತೆ ಪ್ರಾಧಾನ್ಯತೆ ಪಡೆಯುವುದಿಲ್ಲವೇ? ಮೌಲ್ಯಾಧಾರಿತವಾಗಿ ಕಾರ್ಯ ನಿರ್ವಹಿಸದ ಸರ್ಕಾರ ಯಾವತ್ತಿಗೂ ಸ್ಥಿರವಾಗಿರಲಾರದು. ಈ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರೈತರ ಮೇಲೆ ಅತೀ ಹೆಚ್ಚು ಲಾಠೀಚಾರ್ಚುಗಳಾಗಿವೆ, ದೂರು ದಾಖಲಾಗಿವೆ, ಅದೇ ರೀತಿ ಕನ್ನಡ ಪರ ಹೋರಾಟ ಮಾಡುವ ಸಂಘಟನೆಗಳನ್ನು ಬಗ್ಗುಬಡಿದು ಕೇಸು ಜಡಿದು ಕನ್ನಡದ ಸೊಲ್ಲಡಗಿಸಿದೆ. ವರ್ಗಾವಣೆ ಮಾರ್ಗದರ್ಶಿ ಸೂತ್ರಗಳನ್ನು ಬದಿಗಿಟ್ಟು ಬೇಕಾಬಿಟ್ಟಿ ವರ್ಗಾವಣೆಯಾಗುತ್ತಿವೆ.ಸರ್ಕಾರದಲ್ಲಿ ಮಂತ್ರಿಗಳಾಗಿದ್ದವರೇ ರೈತರಿಂದ ಸ್ವಾಧೀನ ಪಡಿಸಿಕೊಂಡ ಭೂಮಿಯನ್ನು ನುಂಗಿ ನೀರು ಕುಡಿದ ಉದಾಹರಣೆ ಕಣ್ಣೆದುರಿಗಿದೆ. ರಾಜ್ಯ ಪಾಲ ಹಂಸರಾಜ ಭಾರದ್ವಜ್ ಹಲವಾರು ಭಾರಿ ಸರ್ಕಾರದ ನಡವಳಿಕೆಗಳ ವಿರುದ್ದ, ಸಚಿವ ಸಂಪುಟದ ಮಂತ್ರಿಗಳ ವಿರುದ್ದ ಗುಡುಗಿದ್ದಾರೆ, ಆದರೂ ಪ್ರಯೋಜನವಾಗಿಲ್ಲ.ಬಳ್ಳಾರಿ ಗಣಿಧಣಿಗಳು ಸಿಡಿದೆದ್ದಾಗ ಸುಷ್ಮಾಸ್ವರಾಜ್ , ಸಂತೋಷ್ ಹೆಗಡೆ ರಾಜೀನಾಮೆ ನೀಡಿದಾಗ ಇಕ್ಕಟ್ಟು ತಪ್ಪಿಸಲು ದೆಹಲಿಯ ಹೈಕಮಾಂಡ್ ನಿತಿನ್ ಗಡ್ಕರಿ, ಅಡ್ವಾಣಿ ಪ್ರಭಾವ ಬೇಕು, ಹಾಲಪ್ಪ-ಸರ್ಸು ರೇಣುಕಾಚಾರ್ಯ,ಸಂಪಗಿ ಭ್ರಷ್ಟತನ, ರೆಡ್ಡಿಗಳ ವರ್ತನೆ ಇತ್ಯಾದಿ ಸಾರ್ವಜನಿಕವಾಗಿ ಬೀದಿಗೆ ಬಿದ್ದಾಗ ಸಂಘ ಪರಿವಾರದ ಗದರಿಕೆ ಬೇಕು. ಸದನದ ಗದ್ದಲ ಶುರುವಾಗಿದೆ ಈಗ ಪರಿಹಾರಕ್ಕೆ ಯಾರು ಬರುತ್ತಾರೋ ನೋಡಬೇಕು. ಇಂತಹ ಪರಿಸ್ಥಿತಿ ಸರ್ಕಾರಕ್ಕಿದ್ದರೆ ಆಡಳಿತ ನಿರ್ವಹಣೆ ಮಾಡುವವರಾದರೂ ಯಾರು? ಎಂಬಲ್ಲಿಗೆ ಪ್ರಶ್ನೆ ಬಂದು ನಿಲ್ಲುತ್ತದೆ.
ಸಾರ್ವಜನಿಕರ ನಡುವೆ ಚಾಲ್ತಿಯಲ್ಲಿರುವ ಮಾತಿನಂತೆ ಇವತ್ತು ಕಾಂಗೈ-ದಳ ಇತ್ಯಾದಿ ಯಾವುದೇ ಪಕ್ಷದಲ್ಲಿರುವ ಮುಖಂಡರುಗಳು, ಶಾಸಕರು, ಮರಿ ಪುಡಾರಿಗಳು ಜಾತಿಯ ಆಧಾರದಲ್ಲಿ ಸಾಮೂಹಿಕವಾಗಿ ಯಡಿಯೂರಪ್ಪನವರ ಬೆಂಬಲಕ್ಕೆ ನಿಲ್ಲುತ್ತಾರೆ, ಇಂತಹ ಸಾರ್ವಜನಿಕ 'ಒಲವು'ಗಳೇ ಇತ್ತಿಚೆಗೆ ಬಿಜೆಪಿ ಎದುರಿಸಿದ ಅಷ್ಟು ಚುನಾವಣೆಗಳಲ್ಲಿ ಗೆಲುವು ಸಾಧಿಸಲು ಕಾರಣ ಎನ್ನಲಾಗುತ್ತದೆ. ಆದರೆ ಇಂತಹ ಒಗ್ಗಟ್ಟು ಜಾತಿಯ ಆಧಾರದಲ್ಲಿ ಒಬ್ಬ ರಾಮಕೃಷ್ಣ ಹೆಗಡೆ, ದೇವೇಗೌಡ, ಕುಮಾರಸ್ವಾಮಿ, ಎಸ್ ಎಂ ಕೃಷ್ಣ, ದೇವರಾಜ ಅರಸು, ವೀರೇಂದ್ರಪಾಟೀಲ್ ಇದ್ದಾಗ ಕಂಡು ಬರಲಿಲ್ಲ. ಇದು ಯಡಿಯೂರಪ್ಪನವರ ಮಟ್ಟಿಗೆ ವೈಯುಕ್ತಿಕವಾಗಿ ಪ್ಲಸ್ ಪಾಯಿಂಟು ಆದರೂ ಸಾರ್ವಜನಿಕವಾಗಿ ಮಾತ್ರ ಅತ್ಯಂತ ಅಪಾಯಕಾರಿಯಾದುದು. ಅಂತಿಮವಾಗಿ ಒಂದು ಮಾತು ಈಗ ನಡೆಯುತ್ತಿರುವ ಸದನ ಜನಪರವಾದ ವಿಚಾರಗಳನ್ನು ಚರ್ಚೆಗೆ ತರುತ್ತದೆ ಎಂದು ರಾಜ್ಯದ ಕೋಟ್ಯಾಂತರ ಜನತೆ ಕಾಯುತ್ತಿದ್ದರೆ ಈ ಶಾಸಕರುಗಳು-ಮಂತ್ರಿಗಳು ಕಿಸಿಯುತ್ತಿರುವುದು ಏನು? ಮೊದಲ ಎರಡು ದಿನ ಸಂತೋಷ್ ಹೆಗಡೆ ವಿಚಾರವಾಗಿ ಗದ್ದಲ ಎಬ್ಬಿಸಿದರು, ಅಧಿಕಾರ ಕೊಡುವ ವಿಚಾರ ಬಂದಾಗ ಮಾತ್ರ ತಮ್ಮ ಮಾಮೂಲು ಖಯಾಲಿ ಪ್ರದರ್ಶಿಸಿದರು, ರೇವಣ್ಣ-ಕುಮಾರಸ್ವಾಮಿ-ಸಿದ್ದರಾಮಯ್ಯ ಮಾತೆತ್ತಿದರೆ ಗಣಿವಿಚಾರ ಬಿಟ್ಟರೆ ನೈಸ್ ವಿಚಾರದ ಬಗ್ಗೆ ಮಾತ್ರ ಮಾತನಾಡುತ್ತಿದ್ದಾರೆ. ಆದರೆ ಒಬ್ಬನೇ ಒಬ್ಬಶಾಸಕ, ರೈತರು ಎದುರಿಸುತ್ತಿರುವ ವಿದ್ಯುತ್ ಸಮಸ್ಯೆ, ಬಿತ್ತನೆ ಬೀಜ ಸಮಸ್ಯೆ, ಬೆಂಬಲ ಬೆಲೆ, ಸಹಾಯಧನ ಇತ್ಯಾದಿಗಳ ಬಗ್ಗೆ ಚಕಾರವೆತ್ತುತ್ತಿಲ್ಲ. ಹೀಗಾದರೆ ಕೋಟ್ಯಾಂತರ ರೂ ವೆಚ್ಚ ಮಾಡಿ ನಡೆಸುವ ಸದನ ಕಲಾಪಗಳು ಯಾಕೆ ಬೇಕು??
ಈ ಅಂಕಣ ಬರಹವನ್ನು ದಟ್ಸ್ ಕನ್ನಡ ಡಾಟ್ ಕಾಂ ನಲ್ಲಿ ಪ್ರಕಟಿಸಿದ ಸಂಪಾದಕರಾದ ಶ್ಯಾಮಸುಂದರ್ ಅವರಿಗೆ ಧನ್ಯವಾದಗಳು.
Click on the following to read same article in ದಟ್ಸ್ ಕನ್ನಡ ಡಾಟ್ ಕಾಂ http://thatskannada.oneindia.in/news/2010/07/12/bjp-sangh-pariwar-karnataka-politics.html

Sunday, July 4, 2010

ಯುವ ಮನಸ್ಸು ಹೇಗಿದೆ ಗೊತ್ತಾ???



"ಎಲ್ಲಿಯೂ ಸಲ್ಲದ ಕಟ್ಟಕಡೆಯ ವಿದ್ಯಾರ್ಥಿ ಅಂತಿಮವಾಗಿ ಐಟಿಐ ಗೆ ಬರುತ್ತಾನೆ, ಅವನಿ/ಳಿಗೆ ಪರಿಶ್ರಮದ ಮೂಲಕ ಬದುಕಿನ ಹಾದಿ ತೋರಿಸೋಕೆ ಭಾರೀ ಪ್ರಯತ್ನವನ್ನೇ ಮಾಡ್ಬೇಕು ಸಾರ್" ಅಂದ್ರು ಮಿತ್ರ ಗುರುರಾಜ್. ಸಾರ್ ನಂದು ಬಿಇ ನಲ್ಲಿ ಇಲೆಕ್ಟ್ರಿಕಲ್ ಹೈ ಫಸ್ಟ್ ಕ್ಲಾಸ್ ಪಾಸಾಗಿದ್ದೀನಿ, ಈ ಬೆಂಗಳೂರಿಗೆ ಬಂದು ಪಿಜಿ ಲಿ ಉಳ್ಕೊಂಡು 6ತಿಂಗಳಿಂದ ಕೆಲ್ಸ ಹುಡುಕ್ತಿದೀನಿ , ಯಾವ ಕಂಪನಿಗೆ ಅರ್ಜಿ ಹಾಕಿದ್ರೂ ಎಕ್ಸ್ ಪೀರಿಯನ್ಸ್ ಕೇಳ್ತಾರೆ ಇಲ್ಲಾಂದ್ರೆ ಬಾಂಡ್ ಕೇಳ್ತಾರೆ ಓವರ್ ಟೈಮ್ ಡ್ಯೂಟಿ ಮಾಡ್ಬೇಕಂತೆ ಏನ್ಮಾಡ್ಬೇಕೋ ಗೊತ್ತಾಗ್ತಿಲ್ಲ ಅಂದದ್ದು ಪರಿಚಿತರ ಹುಡುಗಿ ಲಾವಣ್ಯ. ಇನ್ನೊಬ್ಬ ಚಿಗುರು ಮೀಸೆಯ ಹುಡುಗ ಮಂಜುನಾಥ ತಲೆಕೆಡಿಸಿಕೊಂಡು ಕುಂತಿದ್ದ, ಆತ ಈಗಷ್ಟೇ ವಾಣಿಜ್ಯ ಪದವಿಗೆ ಸೇರಿದ್ದ ಬುದ್ದಿವಂತ ಹುಡುಗ, ಅವನ ರಿಲೇಟೀವ್ಸ್ ಯಾರೋ ಸಿಎ ಮಾಡಿದ್ದಾರಂತೆ ಈಗ ಇವ್ನು ಸಿಎ ಮಾಡ್ತಾನಂತೆ ಹಾಗಾಗಿ ಆ ಕಡೆ ಕಾನ್ಸೆಂಟ್ರೇಶನ್ ಮಾಡ್ಬೇಕೋ ಪದವಿ ಕಡೆಗೆ ಗಮನ ನೀಡಬೇಕೋ ಅಂತ ತಿಳೀಯದೇ ತಲೆಕೆಡಿಸಿಕೊಂಡಿದ್ದ. ಈಗ್ಯೆ ತಿಂಗಳ ಹಿಂದೆ ಪದವಿ ಅರ್ಧಂಬರ್ದ ಮುಗಿಸಿ ಸಿಎ ಮಾಡ್ತೀನಿ ಅಂತ ಹೋಗಿ ನಾಲ್ಕಂಕಿ ಸಂಬಳ ಕೈಗೆ ಬರುತ್ತಿದ್ದಂತೆ ಪದವಿಗೆ ಗುಡ್ ಬೈ ಹೇಳಿ ಅತ್ತ ಸಿಎ ಅನ್ನು ಮುಗಿಸದೇ ಅಲ್ಲಿ ಇಲ್ಲಿ ಲೆಕ್ಕ ಬರೆಯವ ಚಾಕರಿ ಮಾಡುತ್ತಿರುವ ಯುವತಿಯನ್ನ ಆಕೆಯ ತಾಯಿ ಕರೆತಂದು ಬೇಸರಿಸಿಕೊಂಡಿದ್ದರು. ಮಗ ಡಾಕ್ಟರ್ ಆಗಬೇಕು, ಇಂಜಿನಿಯರೇ ಆಗಬೇಕು ಅಂತ ಕನಸು ಕಂಡ ತಂದೆ/ತಾಯಿ ಗಳಿಸಿದ ಅಷ್ಟೂ ಸಂಪತ್ತನ್ನು ದುಡ್ಡಾಗಿ ಪರಿವರ್ತಿಸಿಕೊಂಡು ಮಕ್ಕಳ ಮೇಲೆ ಹೂಡಿ ಅವನು/ಅವಳು ಕೇಳಿದ್ದನ್ನ ಕೊಡಿಸಿ ಅವನ ಆಸಕ್ತಿ ಏನೆಂಬುದನ್ನು ಅರಿಯದೇ ಕಡೆಗೆ ಪರಿತಾಪ ಪಡುವ ಮಂದಿಯೂ ಇವತ್ತು ಕಾಣ ಸಿಗುತ್ತಾರೆ. ಇವತ್ತು ಬಹುತೇಕ ಮಂದಿ ಪೋಷಕರಿಗೆ/ವಿದ್ಯಾರ್ಥಿಗಳಿಗೆ ತಾವು ಸಾಗಬೇಕಾದ ಗುರಿಯ ನಿಖರತೆಯಾಗಲೀ ಅಂದಾಜಾಗಲಿ ಇರುವುದೇ ಇಲ್ಲ. ಹಾಗಾಗಿ ಗೋಂದಲದ ಸ್ತಿತಿಯಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರು ಸಿಲುಕುವುದನ್ನು ಕಾಣಬಹುದು. ಅಷ್ಟಕ್ಕೂ ವಿದ್ಯಾರ್ಥಿಗಳಿಗೆ/ಪೋಷಕರಿಗೆ/ಶಿಕ್ಷಕರಿಗೆ ಇರಬೇಕಾದ ಗುರಿಗಳೇನು? ಬದ್ದತೆ ಹೇಗಿರಬೇಕು? ಗುರಿಯ ನಿರ್ದಿಷ್ಟತೆ, ಅದನ್ನು ತಲುಪುವ ಬಗೆ, ಅದಕ್ಕಾಗಿ ಅನುಸರಿಸುವ ರೀತಿ-ರಿವಾಜುಗಳು ಏನು ಎಂಬುದನ್ನು ಅರಿಯಬೇಕಾದ ಅಗತ್ಯವಿದೆ.
ಪ್ರಸಕ್ತ ಸಮಾಜದಲ್ಲಿ ನಮಗೆ ಬದುಕಿನ ಶಿಕ್ಷಣ ಅತ್ಯಂತ ಅಗತ್ಯವಾಗಿ ದಕ್ಕಬೇಕಿದೆ. ಆದರೆ ಹಾಲಿ ನಮ್ಮ ಶಿಕ್ಷಣ ಕ್ರಮದಲ್ಲಿ ಬದುಕು ರೂಪಿಸುವ ಶಿಕ್ಷಣಕ್ಕಿಂತ ಬೇರೆಯದೇ ಧಾಟಿಯ ಶಿಕ್ಷಣವಿದೆ. ಇಂತಹ ಶಿಕ್ಷಣ ವ್ಯವಸ್ಥೆಯೇ ನಿರುದ್ಯೋಗ, ಬಡತನ ಇತ್ಯಾದಿ ಸಮಸ್ಯೆಗಳಿಗೆ ಕಾರಣವಾಗಿದೆ.

Sunday, June 27, 2010

ಲೋಕಾಯುಕ್ತರ ಪರಮಾಧಿಕಾರ ಜಿಜ್ಞಾಸೆ ಏಕೆ?

"ಎಲ್ಲಿದೆ ರೀ ಭ್ರಷ್ಟಾಚಾರ? ಹಿಂದಿನ ಸರ್ಕಾರಗಳು ಲೋಕಾಯುಕ್ತರ ಪರಮಾಧಿಕಾರಕ್ಕೆ ತಡೆಗೋಡೆ ಹಾಕಿಕೊಂಡು ಬಂದಿವೆ ವಿನಹ, ನಮ್ಮ ಸರ್ಕಾರದಿಂದ ತೊಂದರೆ ಆಗಿಲ್ಲ " ಎಂದು ಪ್ರತಿಕ್ರಿಯೆ ನೀಡಿದ್ದು ರಾಜ್ಯ ಸಚಿವ ಸಂಪುಟದ ಹಿರಿಯ ಸದಸ್ಯ ರಾಮಚಂದ್ರಗೌಡ..! ಆ ಮೂಲಕ ತನ್ನ ಸರ್ಕಾರ ದ ನೈತಿಕ ಅಧ:ಪತನವನ್ನು ಈ ಮಂತ್ರಿ ವ್ಯಕ್ತಪಡಿಸಿದ್ದಾರೆ. ಇವತ್ತು ಭ್ರಷ್ಟಾಚಾರ ಎಷ್ಟು ಬೃಹತ್ತಾಗಿ ಬೆಳೆದಿದೆ ಎಂದರೆ ಅದನ್ನು ಮಟ್ಟ ಹಾಕಲು ಅಸಾಧ್ಯವೇನೋ ಎಂಬಷ್ಟರ ಮಟ್ಟಿಗೆ ಇದೆ.ಭ್ರಷ್ಟಾಚಾರ ಈ ದೇಶದ ಆಢಳಿತ ವ್ಯವಸ್ಥೆಯೊಟ್ಟಿಗೆ ಕರ್ಣನ ಕವಚ ಕುಂಡಲದಂತೆ ಬೆಳೆದು ಬಂದಿದೆ. ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನ್ಯಾಯಾಂಗ-ಕಾರ್ಯಾಂಗ-ಶಾಸಕಾಂಗ ಗಳು ಜನರ ಸೇವೆಗಾಗಿಯೇ ಇವೆ. ಇವುಗಳ ಕಾವಲು ನಾಯಿಯಾಗಿ ಪತ್ರಿಕಾ ರಂಗ ಇದ್ದರೂ ಸರ್ಕಾರಿ ವ್ಯವಸ್ಥೆಯ ಕಾವಲು ನಾಯಿಯಾಗಿ ಲೋಕಾಯುಕ್ತ ವ್ಯವಸ್ಥೆ ಇದೆ. ಇದು ಸರ್ಕಾರಿ ವ್ಯವಸ್ಥೆಯ ಅಧೀನದಲ್ಲಿರುವುದರಿಂದ ಹಲ್ಲಿಲ್ಲದ ನಾಯಿಯ ಸ್ಥಿತಿಯಲ್ಲಿರುವುದು ದುರದೃಷ್ಟಕರ ಸಂಗತಿಯಾಗಿದೆ. ಲೋಕಾಯುಕ್ತರಿಗೆ ಪರಮಾಧಿಕಾರ ಏಕೆ? ಕೊಟ್ಟರೆ ಏನಾಗುತ್ತೆ? ಕೊಡದಿದ್ದರೆ ಏನಾಗಬಹುದು? ಇದರ ಹಿಂದಿನ ಶಕ್ತಿಗಳು ಯಾವುವು? ಅವುಗಳ ಹಿತಾಸಕ್ತಿ ಏನು? ಅಷ್ಟಕ್ಕು ಪರಮಾಧಿಕಾರ ಇಲ್ಲದ ಲೋಕಾಯುಕ್ತ ನಮಗೆ ಬೇಕೆ/ಬೇಡವೇ ? ಇಂದಿನ ಗೋಂದಲಕ್ಕೆ ಬಿಜೆಪಿ ಸರ್ಕಾರ ಮಾತ್ರ ಕಾರಣವೇ? ಎಂಬೆಲ್ಲಾ ಪ್ರಶ್ನೆಗಳು ಕಾಡುತ್ತವೆ? ಈ ಪ್ರಶ್ನೆಗಳಿಗೆ ಉತ್ತರ ಕಂಡು ಕೊಳ್ಳು ವ ಮೊದಲು ಕೆಲವು ಸಂಗತಿಗಳನ್ನು ಗಮನಿಸೋಣ.
ಲೋಕಾಯುಕ್ತ ಎಂದರೆ ಸರ್ಕಾರ ವ್ಯವಸ್ಥೆಯ ಭ್ರಷ್ಟಾಚಾರವನ್ನು ನಿಯಂತ್ರಿಸುವ ಅಧಿಕಾರವುಳ್ಳವನು ಎಂದರ್ಥ. ಸ್ಕಾಂಡಿನೇವಿಯಾ ದೇಶದಲ್ಲಿ ಈ ವ್ಯವಸ್ಥೆಗೆ Ombudsmen ಎನ್ನಲಾಗುತ್ತೆ, ಅದೇ ರೀತಿ ನ್ಯೂಜಿಲ್ಯಾಂಡಿನಲ್ಲಿ Parlimentary Commissioner ಎಂದು ಕರೆಯಲಾಗುತ್ತದೆ. ನಮ್ಮ ದೇಶದಲ್ಲಿ ಈವ್ಯವಸ್ಥೆ ಜಾರಿಗೆ ಬರುವ ಮುನ್ನ ಭ್ರಷ್ಟಾಚಾ ರ ಕುರಿತ ಸಾರ್ವಜನಿಕ ಅಹವಾಲುಗಳನ್ನು ಸ್ವೀಕರಿಸಲು ಒಂದು ಸರ್ಕಾರಿ ವ್ಯವಸ್ಥೆಯ ಸೃಷ್ಟಿಗಾಗಿ ಚಿಂತನೆ ನಡೆದಿತ್ತು. ಇದಕ್ಕೆ ಪೂರಕವಾಗಿ ವರದಿಯೊಂದನ್ನು ನೀಡಲು ಭಾರತದ ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿಯವರ ನೇತೃತ್ವದಲ್ಲಿ ಆಡಳಿತ ಸುಧಾರಣಾ ಆಯೋಗವನ್ನು ರಚಿಸಲಾಯಿತು. ಆಗ ಮೊರಾರ್ಜಿ ದೇಸಾಯಿಯವರು ನ್ಯೂಜಿಲ್ಯಾಂಡ್-ಸ್ಕಾಂಡಿನೇವಿಯ ದೇಶಗಳ ಮಾದರಿಯಲ್ಲಿಯೇ ಭಾರತದಲ್ಲೂ 'ಲೋಕಪಾಲ' ಮತ್ತು 'ಲೋಕಾಯುಕ್ತ' ವ್ಯವಸ್ಥೆ ಮತ್ತು ಹುದ್ದೆ ಯಸೃಷ್ಟಿಗೆ ಮಧ್ಯಂತರ ವರದಿ ನೀಡಿ ಶಿಫಾರಸ್ಸು ಮಾಡಿತು. ಅದರ ಫಲವಾಗಿ ದೇಶದ ವಿವಿಧ ರಾಜ್ಯಗಳಲ್ಲಿ ಭ್ರಷ್ಟಾಚಾರ ನಿಯಂತ್ರಣಕ್ಕೆ ಲೋಕಾಯುಕ್ತ ವ್ಯವಸ್ಥೆ ಜಾರಿಗೆ ಬಂತು. ನ್ಯಾಯಾಂಗ ವ್ಯವಸ್ಥೆಯಲ್ಲಿ ಉತ್ತಮ ಹಿನ್ನೆಲೆಯುಳ್ಳ ನಿವೃತ್ತ ನ್ಯಾಯಾಧೀಶರು ಸದರಿ ಲೋಕಾಯುಕ್ತ ಹುದ್ದೆಗೆ ಆಯ್ಕೆಯಾಗುತ್ತಾರೆ ಹಾಗಾಗಿ ಆ ವ್ಯವಸ್ಥೆಯ ಬಗೆಗೆ ಜನರಿಗೆ ಇನ್ನೂ ವಿಶ್ವಾಸ ಉಳಿದಿದೆ. ಸದರಿ ಲೋಕಾಯುಕ್ತರು ಭ್ರಷ್ಟ ಅಧಿಕಾರಿಗ ಳ ಆಸ್ತಿ-ಪಾಸ್ತಿಯ ಮೇಲೆ ಖಚಿತ ಮಾಹಿತಿಯ ಮೇರೆಗೆ ಧಾಳಿ ನಡೆಸಬಹುದು, ಆದರೆ ಅದು ಅನಿರೀಕ್ಷಿತ ಧಾಳಿಯಾಗಿರಬೇಕು ಆದರೆ ಹಾಗೆ ಧಾಳಿಗೊಳಗಾ ದಭ್ರಷ್ಟರ ವಿರುದ್ದ ಕ್ರಮಕ್ಕೆ ಶಿಫಾರಸ್ಸು ಮಾಡಬಹುದೇ ವಿನಹ ಶಿಕ್ಷಿಸುವ ಅಧಿಕಾರವಿಲ್ಲ. ಅದೇ ರೀತಿ ಲಂಚಕೋರ ಅಧಿಕಾರಿ/ನೌಕರರ ವಿರುದ್ದವು ಕ್ರಮಕ್ಕೆ ಶಿಫಾರಸ್ಸು ಮಾಡಬಹುದು ಆದರೆ ನೇರವಾಗಿ ಶಿಕ್ಷೆ ವಿಧಿಸಿ ಆದೇಶ ನೀಡಲು ಅವಕಾಶವಿಲ್ಲ. ಮೊರಾರ್ಜಿ ದೇಸಾಯಿಯವರು ಸಲ್ಲಿಸಿದ ವರದಿಯಲ್ಲಿ ಈ ಬಗ್ಗೆ ಏನು ಹೇಳಲಾಗಿತ್ತು ಎಂಬ ವಿವರ ಸಧ್ಯಕ್ಕೆ ಲಭ್ಯವಿಲ್ಲ. ಈ ವ್ಯವಸ್ಥೆ ಜಾರಿಗೆ ಬಂದು 5ದಶಕಗಳೇ ಸಂದಿವೆ ಆದರೆ ವಾಸ್ತವ ಜಗತ್ತಿಗೆ ಇದರ ಪರಿಚಯವಾಗುತ್ತಿರುವುದು ಒಂದೂವರೆ ದಶಕಗಳಿಂದೀಚೆಗೆ.ರಾಜ್ಯದ ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆಯವರ ಕಾಲದಲ್ಲಿಯೇ ಲೋಕಾಯುಕ್ತ ವ್ಯವಸ್ಥೆಗೆ ಒಂದು ರೂಪು ಸಿಕ್ಕಿತಾದರೂ ಅವರ ವೈಯುಕ್ತಿಕ ರಾಜಕೀಯ ಹಿತಾಸಕ್ತಿಯಿಂದ ಸರ್ಕಾರದ ಉನ್ನತ ಸ್ಥಾನಗಳಾದ ಮುಖ್ಯ ಕಾರ್ಯದರ್ಶಿ/ಮುಖ್ಯಮಂತ್ರಿ ಮತ್ತು ಇತರೆ ಹುದ್ದೆಗಳ ಮೇಲೆ ಲೋಕಾಯುಕ್ತದ ಅಧಿಕಾರ ಹೊರತಾಗಿರುವಂತೆ ನೋಡಿಕೊಳ್ಳಲಾಯಿತು. ನಂತರದ ವರ್ಷಗಳಲ್ಲಿ ಲೋಕಾಯುಕ್ತದ ಅಸ್ತಿತ್ವದ ಬಗ್ಗೆ ಜನರಿಗೆ ತಿಳಿದಿರಲಿಲ್ಲ. ಎಸ್ ಎಂ ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಹಾರನಹಳ್ಳಿ ರಾಮಸ್ವಾಮಿ ನೇತೃತ್ವದ ಆಡಳಿತ ಸುಧಾರಣಾ ಆಯೋಗ ನೀಡಿದ ವರದಿಯ ಹಿನ್ನೆಲೆಯಲ್ಲಿ ರಾಜ್ಯ ಲೋಕಾಯುಕ್ತಕ್ಕೆ ಮರುಜೀವ ಬಂತು. ಸುಪ್ರಿಂಕೋರ್ಟಿನ ನಿವೃತ್ತ ಮುಖ್ಯ ನ್ಯಾಯಾಧೀಶ ವೆಂಕಟಾಚಲ ರಾಜ್ಯ ಲೋಕಾಯುಕ್ತ ಹುದ್ದೆ ಅಲಂಕರಿಸಿದರು. ತಮ್ಮ ಇತಿಮಿತಿಗಳನ್ನು ಮೀರಿಯೂ ಅವರದೇ ಆದ ಕಾರ್ಯ ಶೈಲಿಯ ಮೂಲಕ ಭ್ರಷ್ಟರಿಗೆ ಸಿಂಹ ಸ್ವಪ್ನರಾದರು ಜನರಿಗೆ ನ್ಯಾಯದ ಆಶಾಕಿರಣ ಸಿಗುವಂತೆ ಮಾಡಿದರು. ಅವರ ನಂತರ ಬಂದ ನಿಟ್ಟೆ ಸಂತೋಷ್ ಹೆಗ್ಡೆ ತಮ್ಮದೇ ಕಾರ್ಯಶೈಲಿಯ ಮೂಲಕ ಕಾನೂನು ಮಿತಿಯರಿತು ಭ್ರಷ್ಟಾಚಾರದ ಬುಡಕ್ಕೆ ಕೈ ಹಾಕಿದರು, ಪರಿಣಾಮ ತಾವೇ ರಾಜೀನಾಮೆ ನೀಡುವ ಪರಿಸ್ಥಿತಿ ಸೃಷ್ಟಿಯಾಗಿದೆ. ಜನಬೆಂಬಲಕ್ಕಾಗಿ ತನ್ನ ಪ್ರಣಾಳಿಕೆಯಲ್ಲಿ ಲೋಕಾಯುಕ್ತರಿಗೆ ಪರಮಾಧಿಕಾರ ನೀಡಲಾಗುತ್ತದೆ ಎಂದು ಬಿಜೆಪಿ ತುತ್ತೂರಿ ಊದಿತ್ತು.. ಆದರೆ ಈಗ ಆಗಿದ್ದೇನು? ಬಹುಶ: ರಾಜ್ಯದ ಇತಿಹಾಸದಲ್ಲಿ ಹಿಂದಿನ ಅರಸು ಸರ್ಕಾರದ ಭ್ರಷ್ಟಾಚಾರವನ್ನು ಮೀರಿಸುವಂತೆ ಇವತ್ತು ಸರ್ಕಾರದ ಆಡಳಿತ ಇದೆ. ಗಣಿ ಮಾಫಿಯಾ, ವರ್ಗಾವಣೆ ದಂಧೆ, ಭೂಸ್ವಾಧೀನ ಅಕ್ರಮ, ನೆರೆ ಸಂತ್ರಸ್ತ ಪರಿಹಾರ ದಲ್ಲಿ ಅಕ್ರಮ, ಸುಧಾರಿಸದ ಆಡಳಿತ ಬಿಜೆಪಿ ಸರ್ಕಾರವನ್ನು ಹಿಂಡಿ ಹಿಪ್ಪೆ ಮಾಡಿದೆ. ಪರಿಸ್ಥಿತಿ ಹೀಗಿರುವಾಗ ನೈತಿಕತೆ ಇಲ್ಲದ ಸರ್ಕಾರಕ್ಕೆ ಲೋಕಾಯುಕ್ತರಿಗೆ ಪರಮಾಧಿಕಾರ ಕೊಡುವ ಯೋಗ್ಯತೆ ಇದೆಯೇ? ಲೋಕಾಯುಕ್ತರ ರಾಜೀನಾಮೆ ಕುರಿತು ಪ್ರತಿಕ್ರಿಯಿಸಲು ಮುಖವಿಲ್ಲದ ಒಬ್ಬ ಮುಖ್ಯಮಂತ್ರಿಯನ್ನ, ಪರಿಸ್ಥಿತಿ ಗಂಬೀರತೆ ಅರಿಯದೆ ಮನಸ್ಸಿಗೆ ಬಂದಂತೆ ಮಾತನಾಡುವ ಮೂರ್ಖ ಸಚಿವರುಗಳನ್ನು ಹೊಂದಿದ ಸರ್ಕಾರದಿಂದ ಲೋಕಾಯುಕ್ತ ಪರಮಾಧಿಕಾರ ನಿರೀಕ್ಷಿಸಲು ಸಾಧ್ಯವೇ?
ಭ್ರಷ್ಟ ವ್ಯವಸ್ಥೆಯಿಂದ ನೊಂ ದಜನರಿಗೆ ಹುಲ್ಲು ಕಡ್ಡಿ ಯ ಆಸರೆಯಂತಿರುವ ಲೋಕಾಯುಕ್ತರು ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸಿ ತಮ್ಮ ಅಧಿಕಾರದ ಮಿತಿಯಲ್ಲೆ ಭ್ರಷ್ಟ ವ್ಯವಸ್ಥೆಯ ಬುಡವನ್ನು ಅಲುಗಿಸಬಲ್ಲರು ಎಂಬುದು ಸಾಬೀತಾಗಿದೆ. ಹಾಗಾಗಿ ಶಾಶಕಾಂಗ-ಕಾರ್ಯಾಂಗದ ಲ್ಲಿರುವ ಭ್ರಷ್ಟ ಜನರಿಗೆ ಲೋಕಾಯುಕ್ತ ವ್ಯವಸ್ಥೆ ಪರಮಾಧಿಕಾರ ದೊರಕದಂತೆ ತೆರೆಯ ಹಿಂದೆ ಸಂಚು ನಡೆಸಿವೆ.ಲೋಕಾಯುಕ್ತರ ನಿರ್ಭಿತ ಕಾರ್ಯದಿಂದ ನಡುಗಿರುವ ರಾಜಕಾರಣಿಗಳು-ಅಧಿಕಾರಿಗಳು ಲೋಕಾಯುಕ್ತರಿಗೆ ನೀಡುವ ಪರಮಾಧಿಕಾರದಿಂದ ತಮಗೆ ಅಂತ್ಯ ಎಂಬುದು ನಿಚ್ಚಳವಾಗಿ ಗೋಚರಿಸಿದೆ ಇದು ಇವತ್ತು ಲೋಕಾಯುಕ್ತರು ರಾಜೀನಾಮೆ ನೀಡುವಂತೆ ಮಾಡುವಲ್ಲಿ ಸಫಲವಾಗಿದೆ. ಒಂದಂತೂ ಸತ್ಯ ಒಳ್ಳೆಯ ಕೆಲಸಕ್ಕೆ ಯಾವ ದೊಣ್ಣೆ ನಾಯಕನ ಅಪ್ಪಣೆಯೂ ಬೇಕಿಲ್ಲ. ಜನ ವಿಶ್ವಾಸ ಇರಿಸಿಕೊಂಡಿರುವ ಲೋಕಾಯುಕ್ತರಿಗೆ ಪರಮಾಧಿಕಾರ ನೀಡುವಂತೆ ಜನತೆ ಬೀದಿಗಿಳಿಯಬೇಕಾಗಿದೆ, ಸಾರ್ವಜನಿಕವಾಗಿ ನಡೆಯುವ ಚಳುವಳಿಗಳಿಂದ ಕ್ರಾಂತಿ ಖಂಡಿತ ಸಾಧ್ಯ ಜನ ಮನಸ್ಸು ಮಾಡ ಬೇಕಷ್ಟೆ. ಒಂದು ಒಳ್ಳೆಯ ವ್ಯವಸ್ಥೆ ಮಾತ್ರ ಆರೋಗ್ಯವಂತ ಸಮಾಜವನ್ನು ನೀಡಬಲ್ಲದು. ಈ ಸಂಧರ್ಭ ಒಂದು ಮಾತು ನೆನಪಿಗೆ ಬರುತ್ತಿದೆ. ದುಷ್ಟ ಜನರ ದುಷ್ಟತನಕ್ಕಿಂತ ಸಜ್ಜನರ ಮೌನ ಅತ್ಯಂತ ಅಪಾಯಕಾರಿ ಹೌದೋ ಅಲ್ವೋ?

Wednesday, June 23, 2010

ಬಿಂದಾಸ್ ತಾರೆ ಸಂಜನಾ ಜೊತೆ ಕೆಲ ಹೊತ್ತು!


ಸಂಜನಾ ಅಲಿಯಾಸ್ ಸಂಜನಾ ಗಾಂಧಿ ಅಲಿಯಾಸ್ ಅರ್ಚನಾ ಗಲ್ ರಾಣಿ... ! ಅಬ್ಬಬ್ಬಾ ಇದೇನಿದು ಹೆಸರು ಇಷ್ಟುದ್ದ ಇದೆ ಅಂತ ಹುಬ್ಬೇರಿಸದಿರಿ. ಅದೇ ರೀ ನಮ್ಮ ಕನ್ನಡ ಚಿತ್ರರಂಗದ ಸೆಕ್ಸಿ ಇಮೇಜಿನ ನಾಯಕಿ ಸಂಜನಾ ಹೆಸರು. ಸಂಜನಾ ಮೂಲ ಹೆಸರು ಅರ್ಚನಾ ಗಲ್ ರಾಣಿ, ಕನ್ನಡ ಸಿನಿಮಾಕ್ಕೆ ಬಂದಾಗ ಆಗಲೆ ಮುಂಗಾರು ಮಳೆಯ ನಾಯಕಿ ಪೂಜಾಗಾಂದಿ ಇದ್ದರು ಆಕೆಯ ಮೂಲ ಹೆಸರು ಸಂಜನಾ ಗಾಂಧಿ, ಹಾಗಾಗಿ ಗಂಡ-ಹೆಂಡತಿ ಸಿನಿಮಾದ ಸಂಜನಾ ಗಾಂಧಿ , ಸಂಜನಾ ಆಗಿ ತಮ್ಮ ಹೆಸರನ್ನು ಬದಲಾಯಿಸಬೇಕು. ಈಗಲೂ ಬಹುತೇಕರಿಗೆ ಸಂಜನಾ ಎಂದರೆ ಅರ್ಥವಾಗುವುದಿಲ್ಲ. ಅದೇ ಗಂಡ-ಹೆಂಡತಿ ಚಿತ್ರದ ಸಂಜನಾ ಅಂದರೆ ಮಾತ್ರ ಬೇಗ ಪ್ಲಾಶ್ ಆಗಿ ಬಿಡುತ್ತೆ. ಸಂಜನಾ ಹುಟ್ಟಿದ್ದು ಬೆಂಗಳೂರಿನಲ್ಲಿ ಅಕ್ಟೋಬರ್ 9ನೇ 1989ರಂದು. ತಂದೆ ಬ್ಯುಸಿನೆಸ್ ಮನ್, ತಾಯಿ ಚನ್ನೈ ಮೂಲದವರು. ತಂದೆ ಮಾತ್ರ ಉತ್ತರ ಭಾರತದ ಸಿಂಧಿ ಮನೆತನದವರು. ಬೆಂಗಳೂರಿನಲ್ಲೇ ಹುಟ್ಟಿ ಬೆಳೆದರೂ ಈಕೆಯ ಮೂಲ ಮಾತ್ರ ಮುಂಬೈ. ಹೈ-ಫೈ ಸೊಸೈಟಿಯಲ್ಲೇ ಬೆಳೆದ ಹುಡುಗಿ ಸಂಜನಾ, ಪಿಯುಸಿ ಓದುವ ವೇಳೆಗಾಗಲೇ ಮಾಡೆಲಿಂಗ್ ಸಂಜನಾರನ್ನು ಕೈ ಬೀಸಿ ಕರೆಯಿತು. ಈ ನಡುವೆ 2006ರಲ್ಲಿ ತಮಿಳಿನ "ಒರು ಕಾದಲ್ ಸೇವಿಯರ್" ಮೂಲಕ ಚಿತ್ರ ಜಗತ್ತಿಗೆ ಅಡಿಯಿರಿಸಿದ ಸಂಜನಾ ಗಮನ ಸೆಳೆದಳು. ಆ ಹೊತ್ತಿಗೆ ಬಾಲಿವುಡ್ ನ "ಮರ್ಡರ್" ಚಿತ್ರದಲ್ಲಿ ತನ್ನ ಮಾದಕ ಮೈ ಮಾಟ ಪ್ರದರ್ಶಿಸಿ ಚಿತ್ರ ರಸಿಕರನ್ನು ಬೆಚ್ಚಿ ಬೀಳಿಸಿದ್ದ ಮಲ್ಲಿಕಾಶೆರಾವತ್ ಸುದ್ದಿಯಲ್ಲಿರುವಾಗಲೇ ಕನ್ನಡದಲ್ಲಿ ಸದರಿ ಚಿತ್ರದ ರೀಮೇಕ್ ಮಾಡಲು ನಿರ್ದೇಶಕ ರವಿ ಶ್ರೀವತ್ಸ ಸಿದ್ದತೆ ನಡೆಸಿದ್ದ. ಹಿಂದಿಯ ಮರ್ಡರ್ ಕನ್ನಡದಲ್ಲಿ "ಗಂಡ-ಹೆಂಡತಿ" ಯಾಗಿ ಹಸಿಬಿಸಿ ಚಿತ್ರವಾಯಿತು. ಆ ಚಿತ್ರದಲ್ಲಿ ನಾಯಕಿಯಾಗಿ ಸಂಜನಾ ನಾಯಕಿಯಾಗಿ ನಟಿಸಿದ್ದರು. 18ಹರೆಯದ ಬಾಲೆ ಸಂಜನಾಎಂತಹವರು ಹುಬ್ಬೇರಿಸುವಂತೆ ಸದರಿ ಚಿತ್ರದಲ್ಲಿ ಮಾದಕ ಮೈಮಾಟ ಪ್ರದರ್ಶಿಸಿ ಪಡ್ಡೆಗಳ ಕನಸಿನ ಕಣ್ಮಣಿಯಾದರು. 2008ರಲ್ಲಿ ತೆಲುಗಿನ ಖ್ಯಾತ ನಿರ್ದೇಶಕ ಪೂರಿ ಜಗನ್ನಾಥ್ ಕಣ್ಣಿಗೆ ಬಿದ್ದ ಈ ಬಾಲೆ ತೆಲುಗು ಚಿತ್ರ "ಬುಜ್ಜಿಗಾಡು" ಚಿತ್ರದ ನಾಯಕಿಯಾಗಿ ಆಯ್ಕೆಯಾದಳು. ತೆಲುಗಿನಲ್ಲಿ ನಟಿಸಿದ ಮೊದಲ ಚಿತ್ರದಲ್ಲೇ ಯುವ ಹೃದಯಗಳನ್ನು ಸೂರೆ ಮಾಡಿದ ಈ ಬೆಡಗಿ ನಂತರ ಕನ್ನಡದ ಆಟೊಗ್ರಾಫ್ ಪ್ಲೀಸ್, 2007-08ರಲ್ಲಿ ರಕ್ಷಕ, ದರ್ಶನ್ ಜೊತೆ ಅರ್ಜುನ್,ತೆಲುಗಿನಲ್ಲಿ ಸತ್ಯಮೇವ ಜಯತೇ, ಸಮರ್ಥುಡು, ಪೋಲೀಸ್ ಪೋಲೀಸ್ ನಲ್ಲಿ ನಟಿಸಿದ್ದಾರೆ. ಆದರೆ ಕನ್ನಡದಲ್ಲಿ ಹೇಳಿಕೊಳ್ಳುವಂತಹ ಅವಕಾಶಗಳು ಸಿಗದಿದ್ದರು 2010ರಲ್ಲಿ ಸಾಲು ಸಾಲಾಗಿ 4ಚಿತ್ರಗಳಲ್ಲಿ ಸಂಜನಾ ಅವಕಾಶ ಪಡೆದಿದ್ದಾಳೆ. ಸುದೀಪ್ ಸಂಬಂಧಿಕ ನಾಯಕನಾಗಿರುವ "ಈ ಸಂಜೆ", "ಶ್ಲೋಕ", ಶಿವರಾಜ್ ಕುಮಾರ್ ಜೊತೆ ಮೈಲಾರಿ ಮತ್ತು ಹೆಸರಿಡದ ಚಿತ್ರವೊಂದರಲ್ಲಿ ನೆನಪಿರಲಿ ಪ್ರೇಮ್ ಜೊತೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಮಲೆಯಾಳಂ ನಲ್ಲೂ ಅವಕಾಶಗಳು ಅರಸಿ ಬಂದಿದ್ದು "ಕ್ಯಾಸನೋವ" ಎಂಬ ಚಿತ್ರದಲ್ಲಿ ಅವಕಾಶ ಗಿಟ್ಟಿಸಿದ್ದಾರೆ.ಕನ್ನಡ ಸೇರಿದಂತೆ ಸುಮಾರು 7ಭಾಷೆಗಳಲ್ಲಿ ಮಾತನಾಡುವ ಸಂಜನಾ ರ ಮೂಲ ಮಾತೃಭಾಷೆ ಸಿಂಧಿ-ಮಾರವಾಡಿ. ಸಧ್ಯ ದೂರ ಶಿಕ್ಷಣ ಪದ್ದತಿಯಲ್ಲಿ ಬಿಬಿಎಂ ವ್ಯಾಸಂಗ ಮಾಡುತ್ತಿರುವ ಸಂಜನಾ ಬ್ಯೂಟಿಪುಲ್ ಅಂಡ್ ಬೋಲ್ಡ್ ನಡವಳಿಕೆಯವರು. ಆದರೆ ಪತ್ರಕರ್ತರೊಂದಿಗೆ ಮಾತಿಗೆ ಸಿಲುಕುವುದು ಕಡಿಮೆ. "ಗಂಡ ಹೆಂಡತಿ" ಸಿನಿಮಾದ ಬಿಂದಾಸ್ ನಟನೆಯ ನಂತರ ಪತ್ರಕರ್ತರಿಂದ ಎದುರಾಗುತ್ತಿದ್ದ ಪ್ರಶ್ನೆಗಳಿಂದ ತಪ್ಪಿಸಿಕೊಳ್ಳುವ ಸಲುವಾಗಿ ಮಾಧ್ಯಮಗಳಿಂದ ದೂರವಿದ್ದುದೇ ಹೆಚ್ಚು . ಮಾಡೆಲಿಂಗ್ ಜೊತೆಗೆ ಫಿಲ್ಮಿ ಡ್ಯಾನ್ಸ್ ನಲ್ಲೂ ಸೈ ಎನಿಸಿರುವ ಸಂಜನಾ ವಿದೇಶದಲ್ಲಿ ಅತಿ ಹೆಚ್ಚು ಶೋಗಳನ್ನು ನೀಡಿದ್ದಾರಂತೆ ಹಾಗಾಗಿಯೇ ಕನ್ನಡದ ಜನಪ್ರಿಯ ಕಿರುತೆರೆ ಝೀ ಕನ್ನಡದಲ್ಲಿ ಎರಡನೇ ಬಾರಿಗೆ "ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ " ರಿಯಾಲಿಟಿ ಶೋ ನಲ್ಲಿ ತೀರ್ಪುಗಾರರಾಗಿ ಪಾಲ್ಗೊಳ್ಳುತ್ತಿದ್ದಾರೆ
ಕಿರುತೆರೆಯಲ್ಲಿ ಗುಣಾತ್ಮಕವಾದ ಮನರಂಜನಾ ಕಾರ್ಯಕ್ರಮಗಳನ್ನು ರೂಪಿಸುತ್ತಿರುವ ಚಾನೆಲ್ ಗಳ ಸಾಲಿನಲ್ಲಿ ಅಗ್ರಪಂಕ್ತಿಯಲ್ಲಿ ಬರುವುದು ಝೀ ಕನ್ನಡ. ಹೊಸತನ ಮತ್ತು ಅದ್ದೂರಿತನ ಝೀ ಕನ್ನಡದ ಮಟ್ಟಿಗೆ ಇತರೆ ಚಾನಲ್ ಗಳಿಗಿಂತ ಹೆಚ್ಚಾಗಿಯೇ ಇದೆ. ಅದರಲ್ಲೂ ರಿಯಾಲಿಟಿ ಶೋಗಳ ಬಗ್ಗೆ ಹೇಳುವುದಾದರೆ ಹಿಂದಿಯಲ್ಲಿ ಝೀ ಟಿವಿ ಹುಟ್ಟುಹಾಕಿರುವ ಡ್ಯಾನ್ಸ್-ಹಾಡುಗಳ ಹೊಸ ಕಾರ್ಯಕ್ರಮಗಳ ಅಲೆಯನ್ನೇ ಕನ್ನಡದಲ್ಲೂ ತಂದಿದೆ. ಅದರ ಫಲವೇ "ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್" ಇಂತಹ ಸನ್ನಿವೇಶದಲ್ಲಿ ಸಂಜನಾ ರನ್ನು ಮಾತನಾಡಿಸುವ ಅವಕಾಶ ಒದಗಿದ್ದು ಹೀಗೆ.
ಸಂಜನಾ ಅವರನ್ನು ಮಾತಾಡಿಸ್ತೀರಾ? ಅತ್ತಲಿಂದ ಮಿತ್ರ ಮಧುಸೂಧನ್ ಕೇಳಿದರು.. ಹೌದಾ ಎಲ್ಲಿದಾರೆ? ಯಾವಾಗ ಮಾತಾಡಿಸ್ ಬಹುದು?ಅಂದೆ ಈಗ್ಲೇ ಭೇಟಿಯಾಗಿ ಮಾತಾಡಿಸಬಹುದು, ಫೋನ್ ಮಾಡಿ ಅಂತ ನಂಬರ್ ಕೊಟ್ಟು ಡಿಸ್ ಕನೆಕ್ಟ್ ಮಾಡಿದರು. ಸಂಜನಾ ಗಂಡ-ಹೆಂಡತಿಯಲ್ಲಿ ಬಿಂದಾಸ್ ಆಗಿ ನಟಿಸಿ ಹೆಸರು ಮಾಡಿದ್ದು ಮತ್ತು ಝೀ ಕನ್ನಡದ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ನಲ್ಲಿ ಜಡ್ಜ್ ಆಗಿರೋದು ಗೊತ್ತಿತ್ತೆ ವಿನಹ ಅವರನ್ನ ಅತ್ಯಂತ ಕಡಿಮೆ ಅವಧಿಯಲ್ಲಿ ಮಾಹಿತಿ ಕಲೆಹಾಕಿ ಮಾತನಾಡಿಸೋದು ಹೇಗಪ್ಪ ಅಂತ ಯೋಚಿಸುತ್ತಲೇ ಹೇಗಾದ್ರೂ ಇರ್ಲಿ ಅಂತ ಸಂಜನಾ ಗೆ ಮೊಬೈಲು ಮೆಸೇಜ್ ಕಳುಹಿಸಿದೆ, ಕೆಲ ಹೊತ್ತಿನ ನಂತರ ಓಕೆ ಕಾಲ್ ಮಾಡಿ ಅಂತ ರಿಪ್ಲೈ..ಬಂತು. ನಾನು ಮಾತಿಗೆ ಅಣಿಯಾದೆ.
*ಝೀ ಕನ್ನಡದ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋ ಹೇಗನ್ನಿಸುತ್ತೆ?
-ನೀವ್ ನೋಡಿದಿರಾ ? Ok Ok It's a great Experience, Kannada Industryಲಿ ಈಂತಹ ಶೋ ನಡಿಬೇಕಿತ್ತು, ಇಲ್ಲಿವರೆಗೂ ನಡೆದಿರಲಿಲ್ಲ. ಡ್ಯಾನ್ಸ್ ನಲ್ಲಿ different different style ಇದೆ. ಇಲ್ಲಿ plotform ಗೆ ಇಂಥ ಶೋ ಅವಶ್ಯಕತೆ ಇತ್ತು ಇಮ್ರಾನ್ ಜೊತೆ ತೀರ್ಪುಗಾರಳಾಗಿ ಕಾರ್ಯ ನಿರ್ವಹಿಸುತ್ತಿದ್ದೀನಿ. here enjoyment level is very high. ಎಷ್ಟು hectic ಆಗಿರುತ್ತೆ ಅಂದ್ರೆ ಬೆಳಗ್ಗೆ 9ಗಂಟೆಯಿಂದ ರಾತ್ರಿಕಳೆದು ಮತ್ತೆ ಬೆಳಗ್ಗೆ 3ಗಂಟೆವರೆಗೂ ಶೋಟಿಂಗ್ ಇರುತ್ತೆ. ಅದರಲ್ಲು pressure ನಮಗೆ ಗೊತ್ತೇ ಆಗಲ್ಲ.
**ಚಿಕ್ಕಮಕ್ಕಳ ರಿಯಾಲಿಟಿ ಶೋ ಮಾಡ್ತಿದ್ರಿ ಇಲ್ಲಿ ದೊಡ್ಡವರು ಹೇಗನ್ನಿಸುತ್ತೆ?
_ ಇಲ್ಲಿ ಚಿಕ್ಕ ಮಕ್ಕಳು ಯಾರೂ ಇಲ್ಲ, ಎಲ್ಲಾ ದೊಡ್ಡವರೆ. ಅದ್ರಲ್ಲೂ ನನಗಿಂತ ತುಂಬಾ ದೊಡ್ಡವರಿದ್ದಾರೆ. ಎಲ್ಲರೂ ಡೆಡಿಕೇಶನ್ ನಿಂದ ಮಾಡ್ತಿದಾರೆ. ಹಿಂದಿನ ಶೋ ನಲ್ಲಿ ಚಿಕ್ಕ ಚಿಕ್ಕ ಮಕ್ಕಳು ಮಾಡ್ತಿದ್ದರು. ಅದಕ್ಕೆ ಹೋಲಿಕೆ ಮಾಡಿದ್ರೆ ಇದು 5ಟೈಮ್ಸ್ bigger show. Killer performance ಇರುತ್ತೆ ಇಲ್ಲಿ. ನಾನು ಅಮೇರಿಕಾ, ಇಂಗ್ಲೆಂಡ್ ಹೀಗೆ ಬೇರೆ ದೇಶಗಳಿಗೆಲ್ಲಾ ತೆಲುಗು Industry ಮೂಲಕ ಹೋಗಿ I have done a lot of stage performances ಮತ್ತು ನೋಡಿದೀನಿ ಹಾಗಾಗಿ ನನಗೆ ಇಲ್ಲಿ ಜಡ್ಜ್ ಮಾಡೋದು ಏನು ಅನಿಸ್ತಿಲ್ಲ.Stage ಮೇಲೆ ಹೇಗೆ perform ಮಾಡಬೇಕು ಒಬ್ಬ ಒಳ್ಳೆ ಡ್ಯಾನ್ಸ್ perform er ನಲ್ಲಿ ಎಂಥ qualities ಇರ್ಬೇಕು ಅನ್ನೋದು ನನಗೆ ಗೊತ್ತಿದೆ. I love dancing, because when we are performing live dancing ಏನು ತಪ್ಪಾದರೂ ತಕ್ಷಣ ಗೊತ್ತಾಗುತ್ತೆ. ಹಾಗಾಗಿ ನನಗೆ stage ಬಗ್ಗೆ ಒಂದು ಟೋಟಲ್ ಐಡಿಯಾ ಇದೆ. ಇಲ್ಲಿ ದೊಡ್ಡವರು ಚಿಕ್ಕವರು ಅಂತ ತೀರ್ಪು ಕೊಡೋಕಾಗಲ್ಲ mainly ಬಂದು ನಾನು ಆಕ್ಟರ್ ಇರೋದ್ರಿಂದ ಡ್ಯಾನ್ಸ್ ಮಾಡೋವರ facial expression and body language ಹೇಗಿರುತ್ತೆ ಅಂತ ನೋಡ್ತೀನಿ. ಬಾಕಿ ದನ್ನು ಕೋರಿಯಾಗ್ರಾಫರ್ ಇಮ್ರಾನ್ ಸಾರ್ ನೋಡ್ತಾರೆ. I am there to watch especially body language.
ಮತ್ತೆ ಇನ್ನೊಂದು ಅಂದ್ರೆ ಮಕ್ಕಳ ಶೋ ನಲ್ಲಿ very small competition ಇರುತ್ತೆ ಅಲ್ಲಿ ಹೊಸತನವನ್ನು ನಿರೀಕ್ಷೆ ಮಾಡೋಕೆ ಸಾಧ್ಯವಾಗಲ್ಲ, ಮಕ್ಕಳು ರಜಾ ಇರೋವಾಗ ಮುದ್ದು ಮುದ್ದಾಗಿ ಡ್ಯಾನ್ಸ್ ಮಾಡಿ ಸ್ವಲ್ಪ popular ಆಗಿ ಹೋಗೋಣ ಅಂತ ಬಂದಿರ್ತಾರೆ ಆದ್ರೆ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ programme ನಲ್ಲಿ ಹಾಗಾಗೋಲ್ಲ because ಇಲ್ಲಿ ತುಂಬಾ ಎಕ್ಸ್ಪೆರಿಮೆಂಟ್ ಮಾಡಿರ್ತಾರೆ, guys are very sereous ಒಬ್ರಿಗಿಂತ ಒಬ್ರು ಜೋರಾಗಿರ್ತಾರೆ, ಕಿಲ್ಲರ್ ಪರ್ಫರ್ಪಾಮೆನ್ಸ್ ಬರುತ್ತೆ Really It's a bigger show. ವೀಕ್ಷಕರಿಗೆ ಒಳ್ಳೆ entertainment ಕೊಡುತ್ತೆ.
***ಝೀ ಕನ್ನಡದ ಪ್ಲಾಟ್ ಫಾರ್ಮ ನೃತ್ಯ ಪಟುಗಳಿಗೆ ಎಂತಹ ಅವಕಾಶ ತಂದು ಕೊಡಬಹುದು?
-ಹಾಗೇನಿಲ್ಲ, ತುಂಬಾ ಪ್ರೊಫೆಷನಲ್ ಆಗಿ ತಗೊಂಡು ಚೆನ್ನಾಗಿ ಮಾಡೋವ್ರಿಗೆ ಖಂಡಿತ ಸಿನಿಮಾದಲ್ಲಿ ಅವಕಾಶ ಸಿಗಬಹುದು. ಆದ್ರೆ ನೆರವಾಗಿ ಇಲ್ಲಿಂದ ಸಿನಿಮಾಗೆ ಹೋಗೋಕಾಗಲ್ಲ. ಅದು ಅವರವರ ಪ್ರತಿಭೆಯನ್ನ ಆದರಿಸಿರುತ್ತೆ, ಅಂತಹ ಪ್ರತಿಭೆಯನ್ನು ಬೆಳಕಿಗೆ ತರೋ ಕೆಲಸವನ್ನು ಝೀ ಕನ್ನಡ ಮಾಡ್ತಿದೆ. ಖಂಡಿತವಾಗಿ ಆ ಮೂಲಕ ಸಿನಿಮಾದವರನ್ನು ಈ ಪ್ರತಿಭೆಗಳು ಸೆಳೆಯೋಕೆ ಝೀ ಕನ್ನಡ ಪ್ಲಾಟ್ ಫಾರ್ಮ ಸಹಾಯ ಮಾಡ್ತಿದೆ.
****ಸಿನಿಮಾಗೆ ಪ್ರವೇಶ ಆಗಿದ್ದು ಹೇಗೆ?ಅವಕಾಶಗಳು ಹೇಗಿವೆ?
-Actually ನಾನು ತಮಾಷೆಗೆ ಅಂತ ಮಾಡೆಲಿಂಗ್ ನಲ್ಲಿ ಮಾಡ್ತಿದ್ದೆ, ಆದ್ರೆ ಒಂದ್ಸಲ ಅಕಸ್ಮಿಕವಾಗಿ ಸಿನಿಮಾದಲ್ಲಿ ಮಾಡುವ ಅವಕಾಶ ಅರಸಿ ಬಂತು. ಮೊದಲಿಗೆ ತಮಿಳು ಸಿನಿಮಾದಲ್ಲಿ ಮಾಡಿದೆ ಆಮೇಲೆ ಕನ್ನಡ-ತೆಲುಗು ಆಯ್ತು. ನಾವು ಬಂದು ಉತ್ತರ ಭಾರತದ ಸಿಂಧಿ ಫ್ಯಾಮಿಲಿಯವರು. ನಮ್ ತಂದೆ ಬ್ಯುಸಿನೆಸ್ ಮನ್. ಮನೇಲಿ ಸಿನಿಮಾ ರಂಗಕ್ಕೆ ಬರೋದು ಇಷ್ಟ ಇರ್ಲಿಲ್ಲ ಮೊದಲಿಗೆ. ಆದ್ರೆ ಈಗ ಹಾಗೇನಿಲ್ಲ ಮನೇಲಿ parents support ಮಾಡ್ತಾರೆ. ಈಗಾಗಲೆ ಕನ್ನಡದಲ್ಲಿ ನಾಲ್ಕು ಸಿನಿಮಾ ಮಾಡ್ತಿದ್ದೀನಿ, ಶಿವಣ್ಣ ಜೊತೆ ಮೈಲಾರಿ ಮಾಡ್ತಿದಿನಿ, ಅದರ ಹಾಡು ಶೂಟಿಂಗ್ ಆಯ್ತು. ಈ ಸಂಜೆ ಅಂತ ಸಿನಿಮಾ ಮುಗಿದಿದೆ, ನೆನಪಿರಲಿ ಪ್ರೇಮ್ ಜೊತೆ ಹೊಸ ಸಿನಿಮಾದಲ್ಲಿ ಮಾಡೋಕೆ ಸೈನ್ ಮಾಡಿದೀನಿ. ಹೊಸ ನಾಯಕನ ಜೊತೆ "ಶ್ಲೋಕ" ಮಾಡಿದೀನಿ ಸುಮಾರು 70ಪರ್ಸೆಂಟ್ ಶೂಟಿಂಗ್ ಮುಗಿದಿದೆ.ಮಲೆಯಾಳಂ ನಲ್ಲೂ ಅವಕಾಶ ಇದೆ. ಮತ್ತೆ ಸಿಗ್ತೀನಿ ಶೂಟಿಂಗ್ ಇದೆ ಎಂದು ಒಂದೇ ಉಸುರಿಗೆ ಮಾತು ಮುಗಿಸಿದರು ಸಂಜನಾ.
ಈ ಸಂದರ್ಶನ ಲೇಖನವನ್ನು ಯಥಾವತ್ತಾಗಿ ಪ್ರಕಟಿಸಿದ thatskannada.com ನ ಸಂಪಾದಕರಾದ ಶ್ಯಾಮಸುಂದರ್ ರಿಗೆ ಕೃತಜ್ಞತೆಗಳು ನೀವೂ ಆ ಲೇಖನವನ್ನು ಈ ಲಿಂಕಿನಲ್ಲಿ ಕ್ಲಿಕ್ಕಿಸಿ ಓದಬಹುದು http://thatskannada.oneindia.in/movies/interview/2010/06/24-ganda-hendathi-sanjana-interview.html

Sunday, June 20, 2010

ವಿಶ್ವವಿದ್ಯಾಲಯಗಳ ಕರ್ಮಕಾಂಡ ಎಲ್ಲಿಗೆ ಬಂತು?

ಸೇವಾ ವಲಯದಲ್ಲಿರುವ ಶಿಕ್ಷಣ ಕ್ಷೇತ್ರ ಸುಧಾರಿಸಲಾಗದಷ್ಟು ಹದಗೆಟ್ಟಿದೆ, ಶಿಕ್ಷಣ ವ್ಯಾಪಾರೀಕರಣವಾಗಿ ಮಾರ್ಪಟ್ಟಿದೆ, ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದರು ಒಬ್ಬ ಸೂಕ್ಷ್ಮ ಮನಸ್ಥಿತಿಯ ಮಾಜಿ ಶಾಸಕರು. ಹೌದು ಅವರ ಮಾತಿನಲ್ಲಿ ಸತ್ಯವಿದೆ ಅನಿಸಿತು. ಇವತ್ತು ನಮ್ಮ ಆಶಯಗಳನ್ನು ಸಾಕಾರ ಮಾಡುವ ನಿಟ್ಟಿನಲ್ಲಿ, ನಾಗರೀಕತೆಯ ಹೆಜ್ಜೆ ಗುರುತು ಮೂಡಿಸುವ ದಿಸೆಯಲ್ಲಿ ಅತ್ಯಂತ ಮಹತ್ವದ ಹೊಣೆಗಾರಿಕೆ ಹೊತ್ತಿರುವುದು ಶಿಕ್ಷಣ ಕ್ಷೇತ್ರವೇ ಆಗಿದೆ. ಇವೇ ಕೆಟ್ಟು ಕೆರ ಹಿಡಿದರೆ ಏನು ಮಾಡಬೇಕು? ನಮ್ಮ ಶಿಕ್ಷಣ ವ್ಯವಸ್ಥೆಯಲ್ಲೇ ನಂಬಿಕೆ ಕಳೆದು ಕೊಂಡರೆ ಆತ್ಮ ವಿಶ್ವಾಸವನ್ನು ಹುಡುಕುವುದೆಲ್ಲಿ? ಬದುಕಿನ ಹಾದಿಯನ್ನು ನಿರೂಪಿಸುವ ಸಂಸ್ಥೆಗಳೇ ಅಡ್ಡಹಾದಿ ಹಿಡಿದರೆ ಹೇಗೆ? ಅದರ ನಿರ್ವಾಹಕರು ದಿಕ್ಕು ತಪ್ಪಿದರೆ ಎಚ್ಚರಿಸುವವರಾರು? ಇಂತಹದ್ದೊಂದು ಸ್ಥಿತಿಗೆ ಕಾರಣಗಳೇನು? ಪರಿಸ್ಥಿತಿ ಸುಧಾರಣೆ ಹೇಗೆ ಸಾಧ್ಯವಾಗಬಹುದು? ಎಂಬೆಲ್ಲಾ ಪ್ರಶ್ನೆಗಳು ಹುಟ್ಟುವುದು ಸಹಜ.
ಮೊನ್ನೆ ಮೊನ್ನೆ ಮೈಸೂರು ವಿವಿ ಯ ಮಾಜಿ ಕುಲಪತಿ ಜೆ ಶಶಿಧರ ಪ್ರಸಾದ್ ವಿರುದ್ದ ಭ್ರಷ್ಟಾಚಾರ-ಸ್ವಜನ ಪಕ್ಷಪಾತ, ಅಕ್ರಮ ನೇಮಕಾತಿ ಕುರಿತು ಕೇಸು ದಾಖಲಾಗಿದೆ. ಈಗ್ಯೆ 10ವರ್ಷಗಳಿಂದ ವಿವಿ ಹಗರಣಗಳು ಒಂದಿಲ್ಲೊಂದು ರೀತಿಯಲ್ಲಿ ಬಯಲಿಗೆ ಬರುತ್ತಿದ್ದವಾದರೂ ಕ್ರಿಮಿನಲ್ ಕೇಸು ದಾಖಲಾಗುವ ಮಟ್ಟಿಗೆ ಹೋಗಿರಲಿಲ್ಲ. ಈ ವಿಚಾರದಲ್ಲಿ ರಾಜ್ಯಪಾಲರ ದಿಟ್ಟಕ್ರಮ ಮೆಚ್ಚುವಂತಹುದು. ಸರಕಾರಗಳ ಅಂಕೆಗೆ ಸಿಲುಕದೇ ಅಟಾನಮಸ್ ಬಾಡಿ ಎಂಬ ಹಣೆಪಟ್ಟಿಯೊಂದಿಗೆ ಕಾರ್ಯ ನಿರ್ವಹಿಸುವ ವಿವಿಗಳು ವಿವಾದಕ್ಕೆ ಸಿಲುಕುತ್ತಿರುವುದು ಇದೇ ಮೊದಲೇನಲ್ಲ ಬಿಡಿ. ನೋಡಿ ನಮ್ಮ ರಾಜ್ಯದಲ್ಲಿ ಉನ್ನತ ಶಿಕ್ಷಣನೀಡುವ ದಿಸೆಯಲ್ಲಿ ಸುಮಾರು 21 ಅಧಿಕೃತ ವಿವಿಗಳು ಕಾರ್ಯನಿರ್ವಹಿಸುತ್ತವೆ. 8ಕ್ಕೂ ಹೆಚ್ಚು ಖಾಸಗಿ ವಾರ್ಸಿಟಿಗಳಿವೆ. ಈ ಪೈಕಿ ವಿಜಾಪುರದಲ್ಲಿ ಸ್ಥಾಪನೆಗೊಂಡ ಮಹಿಳಾ ವಿವಿ ಯಲ್ಲಿ ಅರ್ಹತೆಯಿಲ್ಲದವರನ್ನು ನೇಮಕ ಮಾಡಿಕೊಳ್ಳಲಾಗಿದೆ, ಹಲವು ಬಾಬ್ತುಗಳಿಗೆ ಸಿಕಾಪಟ್ಟೆ ಖರ್ಚು ತೋರಿಸಲಾಗಿದೆ ಎಂಬ ಆರೋಪವಿದೆ. ದಾವಣಗೆರೆ ವಿವಿಯಲ್ಲಿ ಅರ್ಹತೆಯಿಲ್ಲದವರನ್ನು ಕುಲಪತಿಗಳನ್ನಾಗಿ ಮಾಡಲಾಗಿದೆ,ಅಕ್ರಮ ನೇಮಕಾತಿ ಹಗರಣ, ಮೈಸೂರು ವಿವಿಯಲ್ಲಿ ಸ್ವಜನ ಪಕ್ಷಪಾತ, ಅಕ್ರಮ ನೇಮಕಾತಿ, ದುಂದುವೆಚ್ಚ, 400ಕ್ಕೂ ಅಧಿಕ ನಕಲಿ ಪದವಿ ಸರ್ಟಿಫಿಕೇಟ್ ಪತ್ತೆ, ಶಿವಮೊಗ್ಗ ವಿವಿಯಲ್ಲಿ ಪರೀಕ್ಷಾ ಅಕ್ರಮ , ನಕಲಿ ಅಂಕಪಟ್ಟಿ ಹಂಪೆ ಕನ್ನಡ ವಿವಿಯಲ್ಲಿ ಕೋಟಿ ಅನುದಾನ ಕೊಟ್ಟರು ಪ್ರಯೋಜನವಿಲ್ಲದ ಕಾರ್ಯ, ತುಮಕೂರು ವಿವಿ ಯಲ್ಲಿ ಪದವಿ ಪ್ರವೇಶ ಕುರಿತ ಗೋಂದಲ, ಬೆಂಗಳೂರು ವಿವಿಯಲ್ಲಿ ಜಾತಿ ರಾಜಕೀಯ, ಸ್ವಜನ ಪಕ್ಷಪಾತ, ಪರೀಕ್ಷಾ ಅಕ್ರಮ, ನೇಮಕಾತಿ ಹಗರಣ, ಸೆಕ್ಸು ಹೀಗೆ ಪಟ್ಟಿ ಮಾಡುತ್ತಾ ಹೋದರೆ ಅದರದ್ದೇ ಒಂದು ಚರಿತ್ರೆಯಾದೀತು.
ರಾಜ್ಯದ 21ವಿವಿಗಳ ಪೈಕಿ 15ಕ್ಕೂ ಹೆಚ್ಚು ಮಂದಿ ಲಿಂಗಾಯಿತ ವರ್ಗದ ಜನರ ಉಪಕುಲಪತಿಗಳಾಗಿದ್ದರೆ, 2ರಲ್ಲಿ ಪ.ಜಾ, 1ರಲ್ಲಿ ಒಕ್ಕಲಿಗ ಮತ್ತಿತರ ಜಾತಿಗಳವರು ಸ್ಥಾನ ಪಡೆದಿದ್ದಾರೆ ಅಂದರೆ ಉಪ ಕುಲಪತಿಯ ಸ್ಥಾನಕ್ಕೂ ಜಾತಿ ಲಾಬಿ ಎಷ್ಟರ ಮಟ್ಟಿಗೆ ಕೆಲಸ ಮಾಡುತ್ತದೆ ಎಂಬುದನ್ನು ಅರಿಯಬಹುದು. ಪ್ರಸಕ್ತ ದಿನಗಳಲ್ಲಿ ಸರ್ಕಾರಿ ವಿವಿಗಳಲ್ಲಿ ಇರುವ ವಿಷಯವಾರು ಕೇಂದ್ರಗಳಿಗೆ ವರ್ಷಕ್ಕೊಬ್ಬರು ಜಾತಿಯಾಧರಿಸಿ ಮುಖ್ಯಸ್ಥರ ಸ್ಥಾನವನ್ನು ಅಲಂಕರಿಸುತ್ತಾರೆ. ಇದೇ ಮಾನದಂಡವನ್ನು ವಿದ್ಯಾರ್ಥಿಗಳಿಗೂ ಅನ್ವಯಿಸಿ ಜಾತಿವಾರು ಅಂಕ, Rank , ಚಿನ್ನದ ಪದಕಗಳನ್ನು ನೀಡಲಾಗುತ್ತದೆ, ಇಲ್ಲಿ ಪ್ರತಿಭೆಗೆ ಮನ್ನಣೆಯಿಲ್ಲ! ಪ್ರೊಫೆಸರನಿಗೆ, ಅದ್ಯಾಪಕನಿಗೆ ಓಲೈಸುವ ವಿದ್ಯಾರ್ಥಿಗಳಿಗೆ ಮಾತ್ರವೇ ಪ್ರಾಶಸ್ತ್ಯ. ಎಂಫಿಲ್, ಪಿಎಚ್ ಡಿ ಮಾಡಲು ಬರುವ ವಿದ್ಯಾರ್ಥಿಗಳ ಗೋಳಂತೂ ಹೇಳ ತೀರದು, ಸದರಿ ಪದವಿಗಳನ್ನು ಪಡೆಯುವ ವೇಳೆಗೆ ಹೆಣ ಹೋಗುತ್ತದೆ. ವಿದ್ಯಾರ್ಥಿನಿಯಾಗಿದ್ದರಂತೂ ತನು-ಮನ-ಧನ ಎಲ್ಲವನ್ನು ಅರ್ಪಿಸ ಬೇಕಾದ ಸನ್ನಿವೇಶಗಳೂ ಹಲವರಿಗೆ ಎದುರಾಗಿವೆ. ಇಷ್ಟೆಲ್ಲ ಹೈರಾಣಗಳಿಗೆ ಸಿಲುಕಿ ಸುಧಾರಿಸಿ ಕೊಳ್ಳಲಾಗದವರು ಪದವಿಯನ್ನೇ ಮರೆತ ಸಂಧರ್ಭಗಳೂ ಇವೆ. ಎಸ್ ಸಿ /ಎಸ್ಟಿ ವಿದ್ಯಾರ್ಥಿಗಳಿಗೆ ಪ್ರತಿ ವಿವಿಗಳು ಕಡ್ಡಾಯವಾಗಿ ವರ್ಷದಲ್ಲಿ ಒಬ್ಬರಿಗೆ ಪಿಎಚ್ಡಿ ಮಾರ್ಗದರ್ಶನ ನೀಡುವ ಆದೇಶವಿದೆ ಹಾಗಾಗಿ ಅದೊಂದು ಅವಕಾಶ ಬಿಟ್ಟರೆ ಸದರಿ ಜಾತಿಯವರಿಗೆ ಪಿ ಎಚ್ ಡಿ ಪದವಿಗೆ ಅವಕಾಶ ಲಭಿಸುವುದು ಕಡಿಮೆ. ಇತ್ತೀಚೆಗೆ ಬೆಂಗಳೂರು ವಿವಿಗೆ ಸರ್ಕಾರ ಇಬ್ಬರು ಪ.ಜಾತಿಯ ರಿಜಿಸ್ಟ್ರಾರ್ ಗಳನ್ನು ನೇಮಿಸಿತು ಆದರೆ ವಿವಿಯ ಆಡಳಿತ ಅವರಿಗೆ ಅವಕಾಶವನ್ನೇ ನೀಡಲಿಲ್ಲ. ಮುಂದೆ ಇದು ನ್ಯಾಯಾಲಯದ ಮೆಟ್ಟಿಲು ಹತ್ತಿದಾಗ ಸದರಿ ಹುದ್ದೆಗಳನ್ನೇ ವಿವಿ ರದ್ದು ಮಾಡಿತು. ಇನ್ನೂ ರಾಜ್ಯದಲ್ಲಿರು ವ 8ಕ್ಕೂ ಹೆಚ್ಚಿನ ಖಾಸಗಿ ವಿವಿಗಳು ಬಹುತೇಕ ರಾಜ್ಯದ ಪ್ರಬಲ ರಾಜಕಾರಣಿಗಳ ಅಂಕೆಯಲ್ಲಿವೆ. ಅಲ್ಲಿ ಶಿಕ್ಷಣವನ್ನು ವ್ಯವಸ್ಥಿತವಾಗಿ ಮಾರಾಟಕ್ಕಿಡಲಾಗಿದೆ, ಮಂಗಳೂರಿನ ಯಾನೆ ಪೋಯಿ ಎಂಬ ವಿವಿ ಕಳೆದ ಎರಡು ವರ್ಷಗಳಿಂದ ಸರ್ಕಾರ ಪ್ರವೇಶ ಪರೀಕ್ಷೆಯ ಮೂಲಕ ಪ್ರತಿಭಾವಂತರನ್ನು ವೃತ್ತಿ ಶಿಕ್ಷಣ ಪ್ರವೇಶಕ್ಕೆ ಆಯ್ಕೆ ಮಾಡಿದ್ದರೂ ಅವರಿಗೆ ಪ್ರವೇಶ ನಿರಾಕರಿಸಲಾಗಿದೆ ಈ ಬಗ್ಗೆ ಸರ್ಕಾರ ಯಾವುದೇ ಕ್ರಮ ಜರುಗಿಸಿಲ್ಲ. ಖಾಸಗಿ ವಿವಿಗಳು ಭಾರೀ ಮೊತ್ತದ ಹ ಣ ಪಡೆದು ಎಂಫಿಲ್, ಹಾಗೂ ಪಿಎಚ್ ಡಿ ಪದವಿ ಪ್ರಧಾನ ಮಾಡುವ ಕಾರ್ಖಾನೆಗಳಾಗಿ ಮಾರ್ಪಟ್ಟಿವೆ. ವೃತ್ತಿ ಶಿಕ್ಷಣ ಪ್ರವೇಶದ ಸಂಧರ್ಭದಲ್ಲ ಸರ್ಕಾರವನ್ನೇ ಹೇಳಿದಂತೆ ಕೇಳಿಸುವ ಮಟ್ಟಿಗೆ ಖಾಸಗಿ ವಿವಿಗಳ ಲಾಬಿ ಬೆಳೆದು ನಿಂತಿದೆ. ಆದರೆ ಕೇಳುವವರು ಯಾರು? ನ್ಯಾಯವನ್ನು ಹುಡುಕುವುದೆಲ್ಲಿ?
ಜ್ಞಾನ ಆಯೋಗದ ಶಿಫಾರಸ್ಸಿನಂತೆ ಉನ್ನತ ಶಿಕ್ಷಣ ದಗುಣಮಟ್ಟ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ಹಣದ ಹೊಳೆಯನ್ನೆ ಹರಿಸುತ್ತಿದೆ. 2020ರ ವೇಳೆಗೆ ಭಾರತವನ್ನು ಸೂಪರ್ ಪವರ್ ಮಾಡು ವನಿಟ್ಟಿನಲ್ಲಿ ಮೂಲಭೂತ ಸೌಕರ್ಯಗಳನ್ನು ವಿವಿಗಳಿಗೆ ನೀಡಲಾಗುತ್ತಿದ. ಐ ಎ ಎಸ್ ಅಧಿಕಾರಿಗ ಳರೇಂಜಿಗೆ ಪದವಿ ಕಾಲೇಜುಗಳ ಅದ್ಯಾಪಕರ ವೇತನವನ್ನ ಏರಿಸಲಾಗಿದೆ. ಸುಸಜ್ಜಿತ ಕಟ್ಟಡಗಳಿಗೆ ಅನುದಾ ನನೀಡಲಾಗುತ್ತಿದೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳ ಹಿತ ಕಾಯುವ ದೃಷ್ಟಿಯಿಂದ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ವ್ಯಕ್ತಿ ವಿಕಸನದ ಮಾದರಿಯಲ್ಲ ವಿವಿ ಧರೀತಿಯ ಶಿಕ್ಷಣ ನೀಡಲು ಯುಜಿಸಿ ಅನುದಾನ ನೀಡಲಾಗುತ್ತಿದೆ. ಇವತ್ತು ಎಷ್ಟು ಕಾಲೇಜುಗಳಲ್ಲಿ ಇವುಗಳ ಬಳಕೆಯಾಗುತ್ತಿದೆ ಕೇಳುವವರಾರು?ಈ ಬಗ್ಗೆ ಎಷ್ಟು ಜನರಿಗೆ, ವಿದ್ಯಾರ್ಥಿಗಳಿಗೆ ತಿಳುವಳಿಕೆ ಇದೆ? ಈ ರೀತಿ ಶಿಕ್ಷಣ ವ್ಯವಸ್ಥೆಯೇ ಹದಗೆಟ್ಟರೆ ಭವಿಷ್ಯದ ಭಾರತ ದಕಲ್ಪನೆ ಏನು? ನೀವೇ ಹೇಳಿ?

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...