Sunday, June 27, 2010

ಲೋಕಾಯುಕ್ತರ ಪರಮಾಧಿಕಾರ ಜಿಜ್ಞಾಸೆ ಏಕೆ?

"ಎಲ್ಲಿದೆ ರೀ ಭ್ರಷ್ಟಾಚಾರ? ಹಿಂದಿನ ಸರ್ಕಾರಗಳು ಲೋಕಾಯುಕ್ತರ ಪರಮಾಧಿಕಾರಕ್ಕೆ ತಡೆಗೋಡೆ ಹಾಕಿಕೊಂಡು ಬಂದಿವೆ ವಿನಹ, ನಮ್ಮ ಸರ್ಕಾರದಿಂದ ತೊಂದರೆ ಆಗಿಲ್ಲ " ಎಂದು ಪ್ರತಿಕ್ರಿಯೆ ನೀಡಿದ್ದು ರಾಜ್ಯ ಸಚಿವ ಸಂಪುಟದ ಹಿರಿಯ ಸದಸ್ಯ ರಾಮಚಂದ್ರಗೌಡ..! ಆ ಮೂಲಕ ತನ್ನ ಸರ್ಕಾರ ದ ನೈತಿಕ ಅಧ:ಪತನವನ್ನು ಈ ಮಂತ್ರಿ ವ್ಯಕ್ತಪಡಿಸಿದ್ದಾರೆ. ಇವತ್ತು ಭ್ರಷ್ಟಾಚಾರ ಎಷ್ಟು ಬೃಹತ್ತಾಗಿ ಬೆಳೆದಿದೆ ಎಂದರೆ ಅದನ್ನು ಮಟ್ಟ ಹಾಕಲು ಅಸಾಧ್ಯವೇನೋ ಎಂಬಷ್ಟರ ಮಟ್ಟಿಗೆ ಇದೆ.ಭ್ರಷ್ಟಾಚಾರ ಈ ದೇಶದ ಆಢಳಿತ ವ್ಯವಸ್ಥೆಯೊಟ್ಟಿಗೆ ಕರ್ಣನ ಕವಚ ಕುಂಡಲದಂತೆ ಬೆಳೆದು ಬಂದಿದೆ. ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನ್ಯಾಯಾಂಗ-ಕಾರ್ಯಾಂಗ-ಶಾಸಕಾಂಗ ಗಳು ಜನರ ಸೇವೆಗಾಗಿಯೇ ಇವೆ. ಇವುಗಳ ಕಾವಲು ನಾಯಿಯಾಗಿ ಪತ್ರಿಕಾ ರಂಗ ಇದ್ದರೂ ಸರ್ಕಾರಿ ವ್ಯವಸ್ಥೆಯ ಕಾವಲು ನಾಯಿಯಾಗಿ ಲೋಕಾಯುಕ್ತ ವ್ಯವಸ್ಥೆ ಇದೆ. ಇದು ಸರ್ಕಾರಿ ವ್ಯವಸ್ಥೆಯ ಅಧೀನದಲ್ಲಿರುವುದರಿಂದ ಹಲ್ಲಿಲ್ಲದ ನಾಯಿಯ ಸ್ಥಿತಿಯಲ್ಲಿರುವುದು ದುರದೃಷ್ಟಕರ ಸಂಗತಿಯಾಗಿದೆ. ಲೋಕಾಯುಕ್ತರಿಗೆ ಪರಮಾಧಿಕಾರ ಏಕೆ? ಕೊಟ್ಟರೆ ಏನಾಗುತ್ತೆ? ಕೊಡದಿದ್ದರೆ ಏನಾಗಬಹುದು? ಇದರ ಹಿಂದಿನ ಶಕ್ತಿಗಳು ಯಾವುವು? ಅವುಗಳ ಹಿತಾಸಕ್ತಿ ಏನು? ಅಷ್ಟಕ್ಕು ಪರಮಾಧಿಕಾರ ಇಲ್ಲದ ಲೋಕಾಯುಕ್ತ ನಮಗೆ ಬೇಕೆ/ಬೇಡವೇ ? ಇಂದಿನ ಗೋಂದಲಕ್ಕೆ ಬಿಜೆಪಿ ಸರ್ಕಾರ ಮಾತ್ರ ಕಾರಣವೇ? ಎಂಬೆಲ್ಲಾ ಪ್ರಶ್ನೆಗಳು ಕಾಡುತ್ತವೆ? ಈ ಪ್ರಶ್ನೆಗಳಿಗೆ ಉತ್ತರ ಕಂಡು ಕೊಳ್ಳು ವ ಮೊದಲು ಕೆಲವು ಸಂಗತಿಗಳನ್ನು ಗಮನಿಸೋಣ.
ಲೋಕಾಯುಕ್ತ ಎಂದರೆ ಸರ್ಕಾರ ವ್ಯವಸ್ಥೆಯ ಭ್ರಷ್ಟಾಚಾರವನ್ನು ನಿಯಂತ್ರಿಸುವ ಅಧಿಕಾರವುಳ್ಳವನು ಎಂದರ್ಥ. ಸ್ಕಾಂಡಿನೇವಿಯಾ ದೇಶದಲ್ಲಿ ಈ ವ್ಯವಸ್ಥೆಗೆ Ombudsmen ಎನ್ನಲಾಗುತ್ತೆ, ಅದೇ ರೀತಿ ನ್ಯೂಜಿಲ್ಯಾಂಡಿನಲ್ಲಿ Parlimentary Commissioner ಎಂದು ಕರೆಯಲಾಗುತ್ತದೆ. ನಮ್ಮ ದೇಶದಲ್ಲಿ ಈವ್ಯವಸ್ಥೆ ಜಾರಿಗೆ ಬರುವ ಮುನ್ನ ಭ್ರಷ್ಟಾಚಾ ರ ಕುರಿತ ಸಾರ್ವಜನಿಕ ಅಹವಾಲುಗಳನ್ನು ಸ್ವೀಕರಿಸಲು ಒಂದು ಸರ್ಕಾರಿ ವ್ಯವಸ್ಥೆಯ ಸೃಷ್ಟಿಗಾಗಿ ಚಿಂತನೆ ನಡೆದಿತ್ತು. ಇದಕ್ಕೆ ಪೂರಕವಾಗಿ ವರದಿಯೊಂದನ್ನು ನೀಡಲು ಭಾರತದ ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿಯವರ ನೇತೃತ್ವದಲ್ಲಿ ಆಡಳಿತ ಸುಧಾರಣಾ ಆಯೋಗವನ್ನು ರಚಿಸಲಾಯಿತು. ಆಗ ಮೊರಾರ್ಜಿ ದೇಸಾಯಿಯವರು ನ್ಯೂಜಿಲ್ಯಾಂಡ್-ಸ್ಕಾಂಡಿನೇವಿಯ ದೇಶಗಳ ಮಾದರಿಯಲ್ಲಿಯೇ ಭಾರತದಲ್ಲೂ 'ಲೋಕಪಾಲ' ಮತ್ತು 'ಲೋಕಾಯುಕ್ತ' ವ್ಯವಸ್ಥೆ ಮತ್ತು ಹುದ್ದೆ ಯಸೃಷ್ಟಿಗೆ ಮಧ್ಯಂತರ ವರದಿ ನೀಡಿ ಶಿಫಾರಸ್ಸು ಮಾಡಿತು. ಅದರ ಫಲವಾಗಿ ದೇಶದ ವಿವಿಧ ರಾಜ್ಯಗಳಲ್ಲಿ ಭ್ರಷ್ಟಾಚಾರ ನಿಯಂತ್ರಣಕ್ಕೆ ಲೋಕಾಯುಕ್ತ ವ್ಯವಸ್ಥೆ ಜಾರಿಗೆ ಬಂತು. ನ್ಯಾಯಾಂಗ ವ್ಯವಸ್ಥೆಯಲ್ಲಿ ಉತ್ತಮ ಹಿನ್ನೆಲೆಯುಳ್ಳ ನಿವೃತ್ತ ನ್ಯಾಯಾಧೀಶರು ಸದರಿ ಲೋಕಾಯುಕ್ತ ಹುದ್ದೆಗೆ ಆಯ್ಕೆಯಾಗುತ್ತಾರೆ ಹಾಗಾಗಿ ಆ ವ್ಯವಸ್ಥೆಯ ಬಗೆಗೆ ಜನರಿಗೆ ಇನ್ನೂ ವಿಶ್ವಾಸ ಉಳಿದಿದೆ. ಸದರಿ ಲೋಕಾಯುಕ್ತರು ಭ್ರಷ್ಟ ಅಧಿಕಾರಿಗ ಳ ಆಸ್ತಿ-ಪಾಸ್ತಿಯ ಮೇಲೆ ಖಚಿತ ಮಾಹಿತಿಯ ಮೇರೆಗೆ ಧಾಳಿ ನಡೆಸಬಹುದು, ಆದರೆ ಅದು ಅನಿರೀಕ್ಷಿತ ಧಾಳಿಯಾಗಿರಬೇಕು ಆದರೆ ಹಾಗೆ ಧಾಳಿಗೊಳಗಾ ದಭ್ರಷ್ಟರ ವಿರುದ್ದ ಕ್ರಮಕ್ಕೆ ಶಿಫಾರಸ್ಸು ಮಾಡಬಹುದೇ ವಿನಹ ಶಿಕ್ಷಿಸುವ ಅಧಿಕಾರವಿಲ್ಲ. ಅದೇ ರೀತಿ ಲಂಚಕೋರ ಅಧಿಕಾರಿ/ನೌಕರರ ವಿರುದ್ದವು ಕ್ರಮಕ್ಕೆ ಶಿಫಾರಸ್ಸು ಮಾಡಬಹುದು ಆದರೆ ನೇರವಾಗಿ ಶಿಕ್ಷೆ ವಿಧಿಸಿ ಆದೇಶ ನೀಡಲು ಅವಕಾಶವಿಲ್ಲ. ಮೊರಾರ್ಜಿ ದೇಸಾಯಿಯವರು ಸಲ್ಲಿಸಿದ ವರದಿಯಲ್ಲಿ ಈ ಬಗ್ಗೆ ಏನು ಹೇಳಲಾಗಿತ್ತು ಎಂಬ ವಿವರ ಸಧ್ಯಕ್ಕೆ ಲಭ್ಯವಿಲ್ಲ. ಈ ವ್ಯವಸ್ಥೆ ಜಾರಿಗೆ ಬಂದು 5ದಶಕಗಳೇ ಸಂದಿವೆ ಆದರೆ ವಾಸ್ತವ ಜಗತ್ತಿಗೆ ಇದರ ಪರಿಚಯವಾಗುತ್ತಿರುವುದು ಒಂದೂವರೆ ದಶಕಗಳಿಂದೀಚೆಗೆ.ರಾಜ್ಯದ ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆಯವರ ಕಾಲದಲ್ಲಿಯೇ ಲೋಕಾಯುಕ್ತ ವ್ಯವಸ್ಥೆಗೆ ಒಂದು ರೂಪು ಸಿಕ್ಕಿತಾದರೂ ಅವರ ವೈಯುಕ್ತಿಕ ರಾಜಕೀಯ ಹಿತಾಸಕ್ತಿಯಿಂದ ಸರ್ಕಾರದ ಉನ್ನತ ಸ್ಥಾನಗಳಾದ ಮುಖ್ಯ ಕಾರ್ಯದರ್ಶಿ/ಮುಖ್ಯಮಂತ್ರಿ ಮತ್ತು ಇತರೆ ಹುದ್ದೆಗಳ ಮೇಲೆ ಲೋಕಾಯುಕ್ತದ ಅಧಿಕಾರ ಹೊರತಾಗಿರುವಂತೆ ನೋಡಿಕೊಳ್ಳಲಾಯಿತು. ನಂತರದ ವರ್ಷಗಳಲ್ಲಿ ಲೋಕಾಯುಕ್ತದ ಅಸ್ತಿತ್ವದ ಬಗ್ಗೆ ಜನರಿಗೆ ತಿಳಿದಿರಲಿಲ್ಲ. ಎಸ್ ಎಂ ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಹಾರನಹಳ್ಳಿ ರಾಮಸ್ವಾಮಿ ನೇತೃತ್ವದ ಆಡಳಿತ ಸುಧಾರಣಾ ಆಯೋಗ ನೀಡಿದ ವರದಿಯ ಹಿನ್ನೆಲೆಯಲ್ಲಿ ರಾಜ್ಯ ಲೋಕಾಯುಕ್ತಕ್ಕೆ ಮರುಜೀವ ಬಂತು. ಸುಪ್ರಿಂಕೋರ್ಟಿನ ನಿವೃತ್ತ ಮುಖ್ಯ ನ್ಯಾಯಾಧೀಶ ವೆಂಕಟಾಚಲ ರಾಜ್ಯ ಲೋಕಾಯುಕ್ತ ಹುದ್ದೆ ಅಲಂಕರಿಸಿದರು. ತಮ್ಮ ಇತಿಮಿತಿಗಳನ್ನು ಮೀರಿಯೂ ಅವರದೇ ಆದ ಕಾರ್ಯ ಶೈಲಿಯ ಮೂಲಕ ಭ್ರಷ್ಟರಿಗೆ ಸಿಂಹ ಸ್ವಪ್ನರಾದರು ಜನರಿಗೆ ನ್ಯಾಯದ ಆಶಾಕಿರಣ ಸಿಗುವಂತೆ ಮಾಡಿದರು. ಅವರ ನಂತರ ಬಂದ ನಿಟ್ಟೆ ಸಂತೋಷ್ ಹೆಗ್ಡೆ ತಮ್ಮದೇ ಕಾರ್ಯಶೈಲಿಯ ಮೂಲಕ ಕಾನೂನು ಮಿತಿಯರಿತು ಭ್ರಷ್ಟಾಚಾರದ ಬುಡಕ್ಕೆ ಕೈ ಹಾಕಿದರು, ಪರಿಣಾಮ ತಾವೇ ರಾಜೀನಾಮೆ ನೀಡುವ ಪರಿಸ್ಥಿತಿ ಸೃಷ್ಟಿಯಾಗಿದೆ. ಜನಬೆಂಬಲಕ್ಕಾಗಿ ತನ್ನ ಪ್ರಣಾಳಿಕೆಯಲ್ಲಿ ಲೋಕಾಯುಕ್ತರಿಗೆ ಪರಮಾಧಿಕಾರ ನೀಡಲಾಗುತ್ತದೆ ಎಂದು ಬಿಜೆಪಿ ತುತ್ತೂರಿ ಊದಿತ್ತು.. ಆದರೆ ಈಗ ಆಗಿದ್ದೇನು? ಬಹುಶ: ರಾಜ್ಯದ ಇತಿಹಾಸದಲ್ಲಿ ಹಿಂದಿನ ಅರಸು ಸರ್ಕಾರದ ಭ್ರಷ್ಟಾಚಾರವನ್ನು ಮೀರಿಸುವಂತೆ ಇವತ್ತು ಸರ್ಕಾರದ ಆಡಳಿತ ಇದೆ. ಗಣಿ ಮಾಫಿಯಾ, ವರ್ಗಾವಣೆ ದಂಧೆ, ಭೂಸ್ವಾಧೀನ ಅಕ್ರಮ, ನೆರೆ ಸಂತ್ರಸ್ತ ಪರಿಹಾರ ದಲ್ಲಿ ಅಕ್ರಮ, ಸುಧಾರಿಸದ ಆಡಳಿತ ಬಿಜೆಪಿ ಸರ್ಕಾರವನ್ನು ಹಿಂಡಿ ಹಿಪ್ಪೆ ಮಾಡಿದೆ. ಪರಿಸ್ಥಿತಿ ಹೀಗಿರುವಾಗ ನೈತಿಕತೆ ಇಲ್ಲದ ಸರ್ಕಾರಕ್ಕೆ ಲೋಕಾಯುಕ್ತರಿಗೆ ಪರಮಾಧಿಕಾರ ಕೊಡುವ ಯೋಗ್ಯತೆ ಇದೆಯೇ? ಲೋಕಾಯುಕ್ತರ ರಾಜೀನಾಮೆ ಕುರಿತು ಪ್ರತಿಕ್ರಿಯಿಸಲು ಮುಖವಿಲ್ಲದ ಒಬ್ಬ ಮುಖ್ಯಮಂತ್ರಿಯನ್ನ, ಪರಿಸ್ಥಿತಿ ಗಂಬೀರತೆ ಅರಿಯದೆ ಮನಸ್ಸಿಗೆ ಬಂದಂತೆ ಮಾತನಾಡುವ ಮೂರ್ಖ ಸಚಿವರುಗಳನ್ನು ಹೊಂದಿದ ಸರ್ಕಾರದಿಂದ ಲೋಕಾಯುಕ್ತ ಪರಮಾಧಿಕಾರ ನಿರೀಕ್ಷಿಸಲು ಸಾಧ್ಯವೇ?
ಭ್ರಷ್ಟ ವ್ಯವಸ್ಥೆಯಿಂದ ನೊಂ ದಜನರಿಗೆ ಹುಲ್ಲು ಕಡ್ಡಿ ಯ ಆಸರೆಯಂತಿರುವ ಲೋಕಾಯುಕ್ತರು ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸಿ ತಮ್ಮ ಅಧಿಕಾರದ ಮಿತಿಯಲ್ಲೆ ಭ್ರಷ್ಟ ವ್ಯವಸ್ಥೆಯ ಬುಡವನ್ನು ಅಲುಗಿಸಬಲ್ಲರು ಎಂಬುದು ಸಾಬೀತಾಗಿದೆ. ಹಾಗಾಗಿ ಶಾಶಕಾಂಗ-ಕಾರ್ಯಾಂಗದ ಲ್ಲಿರುವ ಭ್ರಷ್ಟ ಜನರಿಗೆ ಲೋಕಾಯುಕ್ತ ವ್ಯವಸ್ಥೆ ಪರಮಾಧಿಕಾರ ದೊರಕದಂತೆ ತೆರೆಯ ಹಿಂದೆ ಸಂಚು ನಡೆಸಿವೆ.ಲೋಕಾಯುಕ್ತರ ನಿರ್ಭಿತ ಕಾರ್ಯದಿಂದ ನಡುಗಿರುವ ರಾಜಕಾರಣಿಗಳು-ಅಧಿಕಾರಿಗಳು ಲೋಕಾಯುಕ್ತರಿಗೆ ನೀಡುವ ಪರಮಾಧಿಕಾರದಿಂದ ತಮಗೆ ಅಂತ್ಯ ಎಂಬುದು ನಿಚ್ಚಳವಾಗಿ ಗೋಚರಿಸಿದೆ ಇದು ಇವತ್ತು ಲೋಕಾಯುಕ್ತರು ರಾಜೀನಾಮೆ ನೀಡುವಂತೆ ಮಾಡುವಲ್ಲಿ ಸಫಲವಾಗಿದೆ. ಒಂದಂತೂ ಸತ್ಯ ಒಳ್ಳೆಯ ಕೆಲಸಕ್ಕೆ ಯಾವ ದೊಣ್ಣೆ ನಾಯಕನ ಅಪ್ಪಣೆಯೂ ಬೇಕಿಲ್ಲ. ಜನ ವಿಶ್ವಾಸ ಇರಿಸಿಕೊಂಡಿರುವ ಲೋಕಾಯುಕ್ತರಿಗೆ ಪರಮಾಧಿಕಾರ ನೀಡುವಂತೆ ಜನತೆ ಬೀದಿಗಿಳಿಯಬೇಕಾಗಿದೆ, ಸಾರ್ವಜನಿಕವಾಗಿ ನಡೆಯುವ ಚಳುವಳಿಗಳಿಂದ ಕ್ರಾಂತಿ ಖಂಡಿತ ಸಾಧ್ಯ ಜನ ಮನಸ್ಸು ಮಾಡ ಬೇಕಷ್ಟೆ. ಒಂದು ಒಳ್ಳೆಯ ವ್ಯವಸ್ಥೆ ಮಾತ್ರ ಆರೋಗ್ಯವಂತ ಸಮಾಜವನ್ನು ನೀಡಬಲ್ಲದು. ಈ ಸಂಧರ್ಭ ಒಂದು ಮಾತು ನೆನಪಿಗೆ ಬರುತ್ತಿದೆ. ದುಷ್ಟ ಜನರ ದುಷ್ಟತನಕ್ಕಿಂತ ಸಜ್ಜನರ ಮೌನ ಅತ್ಯಂತ ಅಪಾಯಕಾರಿ ಹೌದೋ ಅಲ್ವೋ?

1 comment:

ಸಾಗರದಾಚೆಯ ಇಂಚರ said...

ಸರ್
ತುಂಬಾ ಚೆನ್ನಾಗಿ ಬರೆದಿದ್ದಿರಾ
ಪ್ರಸ್ತುತ ಸ್ಥಿತಿಯ ಸಮಗ್ರ ಚಿತ್ರಣವಿದೆ
ತುಂಬಾ ಹಿಡಿಸಿತು

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...