Wednesday, July 29, 2009

ಸತ್ಯವನ್ನು ಹೇಳಿ, ಮಾನ-ಮರ್ಯಾದೆ ಹರಾಜಿಗಿಡಿ!

"ನಾನು ಟಿವಿ ದಾರವಾಹಿಗಳನ್ನು ಮಾಡುವ ಮೊದಲ ಉದ್ದೇಶ ದುಡ್ಡು ಮಾಡುವುದು, ಆದರೆ ಅದರ ಜೊತೆಯಲ್ಲೆ ಸಾರ್ಥಕ ಬದುಕಿನ ಅಂಶವನ್ನು ಧಾರಾವಾಹಿಗಳ ಮೂಲಕ ಅಭಿವ್ಯಕ್ತಿಸುವುದು ನನ್ನ ಎರಡನೇ ಗುರಿ"
- ಟಿ ಎನ್ ಸೀತಾರಾಮ್, ನಿರ್ದೇಶಕರು
ಪ್ರಸಕ್ತ ಸಂಧರ್ಭದಲ್ಲಿ ಭಾರತದಲ್ಲಿ ನೂರಾರು ಟಿವಿ ಚಾನಲ್ ಗಳು ಕಾರ್ಯ ನಿರ್ವಹಿಸುತ್ತಿವೆ, ಇವುಗಳಲ್ಲಿ ವಿಚಾರ-ಮಂಥನ, ಸುದ್ದಿ, ದಾರವಾಹಿ, ಸಿನಿಮಾ ಆಧಾರಿತ ಕಾರ್ಯಕ್ರಮಗಳು, ಹಾಡುಗಳು, ಸಿನಿಮಾಗಳು, ಪ್ರವಾಸ, ಅಡುಗೆ, ಕ್ರೈಂ ಸ್ಟೋರಿ, ಕ್ರೈಂ ಡೈರಿ ಹೀಗೆ ನಾನಾ ರೀತಿಯ ವಗ್ಗರಣೆಯನ್ನು ಮನೆಮನೆಗೆ ತಲುಪಿಸುತ್ತಿವೆ. ಈ ನಡುವೆ ಹಾಡು, ನೃತ್ಯ ದ ಸ್ಫರ್ಧೆಗಳು ರಿಯಾಲಿಟಿ ಶೋ ಹೆಸರಿನಲ್ಲಿ ಬರುತ್ತಿವೆ. ಆದರೆ ಇದು ಎಷ್ಟರ ಮಟ್ಟಿಗೆ ಅತಿಯಾಗುತ್ತಿದೆ ಎಂದರೆ ದೇಶದ ಜನರ ಭಾವನೆಗಳಿಗೆ, ಸಂಸ್ಕೃತಿಗೆ ಧಕ್ಕೆ ಉಂಟು ಮಾಡುವಷ್ಟರ ಮಟ್ಟಿಗೆ ಬೃಹತ್ತಾಗಿ ಬೆಳೆಯುತ್ತಿದೆ.1993-94 ರಸುಮಾರಿಗೆ ಬೆರಳೇಣಿಕೆಯ ಸಂಖ್ಯೆಯಲ್ಲಿದ್ದ ಟಿವಿ ಚಾನಲ್ ಗಳು ಈಗ ಸಾವಿರದ ಸಂಖ್ಯೆಯ ಹತ್ತಿರಕ್ಕೆ ಬೆಳೆದು ನಿಂತಿದೆ. ಕೇವಲ 200ಕೋಟಿ ಯಷ್ಟು ಬಂಡವಾಳ ಹೂಡುವ ಯಾವುದೇ ವ್ಯಕ್ತಿ ತನಗೆ ಬೇಕಾದ ಟಿವಿ ಚಾನಲ್ ಶುರು ಮಾಡಬಹುದು. ಪರಿಣಾಮ ತಮಿಳುನಾಡಿನಲ್ಲಿ, ಆಂದ್ರಪ್ರದೇಶಗಳಲ್ಲಿ ಒಂದೊಂದು ಪಕ್ಷದ ರಾಜಕಾರಣಿಗೆ, ಬಂಡವಾಳ ಶಾಹಿಗೆ ತನ್ನದೇ ಆದ ಟಿವಿ ಚಾನಲ್ ಗಳಿವೆ.ಮತ ಪ್ರಚಾರ, ಧಾರ್ಮಿಕ ಸಂಘಟನೆಗಳು ಸಹಾ ತಮ್ಮದೇ ಚಾನಲ್ ಹೊಂದುವಷ್ಟರ ಮಟ್ಟಿಗೆ ಬೆಳೆದು ಬಿಟ್ಟಿವೆ. ಇಂತಹ ಚಾನಲ್ ಗಳಲ್ಲಿ ವಿದೇಶಿ ಸಂಸ್ಕೃತಿ, ವಿದೇಶಿ ದಿನಬಳಕೆ ಉತ್ಪನ್ನಗಳು, ಎಂಎನ್ಸಿ ಕಂಪನಿಗಳ ಜಾಹೀರಾತು ನಮ್ಮ ಮನೆಯಂಗಳಕ್ಕೆ ಬರುತ್ತಿದೆ ಮತ್ತು ಆ ಮೂಲಕ ನಮ್ಮ ದೇಶಿತನವನ್ನು ಹಂತಹಂತವಾಗಿ ಕೊಂದಿದೆ! ಇಂಥಹದ್ದಕ್ಕೆಲ್ಲ ಅವಕಾಶ ಮಾಡಿಕೊಟ್ಟಿದ್ದು ಒನ್ಸ್ ಎಗೈನ್ ಮತ್ತದೇ ಜಾಗತೀಕರಣ.
ಇರಲಿ ನಾನೀಗ ಪ್ರಸ್ತಾಪಿಸ ಹೊರಟಿದ್ದು ಟಿವಿ ಉದ್ಯಮದ ಬೆಳವಣಿಗೆಯ ಬಗ್ಗೆಯಲ್ಲ, ಆದರೆ ಉದ್ಯಮ ಬೆಳೆಸುವ ನಿಟ್ಟಿನಲ್ಲಿ ಅನುಸರಿಸುತ್ತಿರುವ ವಿಧಾನಗಳ ಬಗ್ಗೆ. ಬಹುಶ: ನೀವೆಲ್ಲ ನೋಡಿರಬಹುದು ಸ್ಟಾರ್ ಪ್ಲಸ್ ಎಂಬ ಛಾನಲ್ ಪ್ರತೀ ದಿನ ರಾತ್ರಿ 10ಗಂಟೆಗೆ ಸಚ್ ಕಾ ಸಾಮ್ ನಾ ಎಂಬ ಕಾರ್ಯಕ್ರಮವನ್ನು ಪ್ರಸಾರ ಮಾಡುತ್ತಿದೆ. ಇದು ಸಾರ್ವಜನಿಕ ಜೀವನದಲ್ಲಿ ಇರುವ ಪ್ರಮುಖ ವ್ಯಕ್ತಿಗಳು, ನಾಗರಿಕರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುತ್ತದೆ. ಮೊದಲಿಗೆ ಅವರನ್ನು ಪಾಲಿಗ್ರಫಿ ಪರೀಕ್ಷೆಗೆ ಒಳಪಡಿಸಿ ಅವರ ಸಾರ್ವಜನಿಕ ಬದುಕು, ವೈಯುಕ್ತಿಕ ಬದುಕಿನ ಬಗೆಗೆ ಪ್ರಶ್ನೆಗಳನ್ನು ಕೇಳಲಾಗುತ್ತದೆ. ನಂತರ ಅವರ ಪ್ರೀತಿ ಪಾತ್ರರು ಮತ್ತು ಕುಟುಂಬವರ್ಗದವರನ್ನು ಸ್ಟುಡಿಯೋ ಸೆಟ್ಗೆ ಆಹ್ವಾನಿಸಲಾಗುತ್ತಿದೆ. ಪಾಲಿಗ್ರಪಿ ಪರೀಕ್ಷೆಗೆ ಒಳಪಟ್ಟ ವ್ಯಕ್ತಿಯನ್ನು ಹಾಟ್ ಸೀಟ್ ನಲ್ಲಿ ಕೂರಿಸಿ ಪಾಲಿಗ್ರಫಿ ಪರೀಕ್ಷೆ ವೇಳೆ ಕೇಳಿದ ಪ್ರಶ್ನೆಗಳನ್ನೇ 6ಹಂತಗಳಲ್ಲಿ ಕೇಳಲಾಗುತ್ತದೆ. ಮೊದಲ ಹಂತದಲ್ಲಿ 1ಲಕ್ಷದಿಂದ ಆರಂಭವಾಗುವ ಸ್ಫರ್ಧೆ ಅಂತಿಮ ಹಂತ ತಲುಪುವ ವೇಳೆಗೆ 1ಕೋಟಿ ಇರುತ್ತದೆ. ಕಾರ್ಯಕ್ರಮದಲ್ಲಿ ಕೇಳುವ ಪ್ರಶ್ನೆಗಳಿಗೆ ಅಭ್ಯರ್ಥಿ ಉತ್ತರ ನೀಡುತ್ತಾ ಹೋದಂತೆ, ಅದೇ ಪ್ರಶ್ನೆಗಳಿಗೆ ಪಾಲಿಗ್ರಫಿ ಪರೀಕ್ಷೆ ವೇಳೆ ನೀಡಿದ ಉತ್ತರಗಳ ಜೊತೆ ಹೋಲಿಸಿ ನೋಡಲಾಗುತ್ತದೆ. ಎರಡು ತಾಳೆಯಾದರೆ ಆತ ಮುಂದಿನ ಹಂತಕ್ಕೆ ಪಾಸಾಗುತ್ತಾನೆ ಮತ್ತು ಲಕ್ಷಗಳಲ್ಲಿ ಹಣ ಗಳಿಸುತ್ತಾನೆ. ಉತ್ತರ ತಾಳೆಯಾಗದಿದ್ದರೆ ಕಾರ್ಯಕ್ರಮದಿಂದ ಹೊರಗುಳಿಯುತ್ತಾನೆ ಅಷ್ಟೇ ಅಲ್ಲ ತನ್ನ ಮಾನ ಮರ್ಯಾದೆಯನ್ನು ಕೋಟ್ಯಾಂತರ ವೀಕ್ಷಕರೆದುರು ಮತ್ತು ತನ್ನ ಪ್ರೀತಿ ಪಾತ್ರ ಕುಟುಂಬದವರ ಮುಂದೆ ಹರಾಜು ಹಾಕಿಕೊಂಡು ಮಾನಸಿಕ ವೇದನೆ ಅನುಭವಿಸುತ್ತಾನೆ..! ಕಾರಣ ಇಷ್ಟೇ ಆತನಿಗೆ ಕೇಳಲ್ಪಡುವ ಎಲ್ಲ ಪ್ರಶ್ನೆಗಳು ಆತನ ವೈಯುಕ್ತಿಕ ಮತ್ತು ಸಾರ್ವಜನಿಕ ಬದುಕಿನ ಕುರಿತಾದ ಪ್ರಶ್ನೆಗಳು, ಅದರಲ್ಲೂ ಆತನ/ಆಕೆಯ ಲೈಂಗಿಕ ಬದುಕಿನ ಪ್ರಶ್ನೆ.
ಉದಾಹರಣೆಗೆ : ಕಂಪೆನಿಯೊಂದರ ಬಾಸ್ಸ್ಗೆ ದೃಶ್ಯ-1
ಪ್ರ: ನಿಮ್ಮ ಕಂಪೆನಿಯಲ್ಲಿ ಯಾವ ಯಾವ ವಯೋಮಾನದವರು ಕೆಲಸ ನಿರ್ವಹಿಸುತ್ತಾರೆ?
ಉ:ಹೆ.. ಹೆ... ಹೆ.. ಹಾಗೆನಿಲ್ಲ ಯುವಕ-ಯುವತಿಯರು ಮಹಿಳೆಯರು ಎಲ್ಲ ವಯೋಮಾನದವರು ಕೆಲಸ ನಿರ್ವಹಿಸುತ್ತಾರೆ.
ಪ್ರ: ಓಕೆ ನೀವು ನಿಮ್ಮ ಕಂಪನಿಯಲ್ಲಿ ಕೆಲಸ ಮಾಡುವ ಯಾವುದಾದರಂದು ಯುವತಿಯೊಂದಿಗೆ ಲೈಂಗಿಕ ಸಂಪರ್ಕ ಇಟ್ಟು ಕೊಂಡಿದ್ದೀರ ?
ಉ: ಇಲ್ಲ.. ಆಗ ಪಾಲಿಗ್ರಪಿ ಪರೀಕ್ಷೆಯ ಫಲಿತಾಂಶವನ್ನು ನೋಡಲಾಗುತ್ತದೆ "ಅವರು ಸುಳ್ಳು ಹೇಳುತ್ತಿದ್ದಾರೆ" ಎಂಬುದನ್ನು ಸತ್ಯ/ಸುಳ್ಳು ಎಂದು ತೋರಿಸುತ್ತದೆ.
ದೃಶ್ಯ-೨
ಆಕೆ ಸಾರ್ವಜನಿಕ ಜೀವನದ ಪ್ರಮುಖ ವ್ಯಕ್ತಿ ಮತ್ತು ನವವಿವಾಹಿತೆ
ಪ್ರ: ನೀವು ವಿವಾಹ ಪೂರ್ವ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದೀರ?
ಉ: ಇಲ್ಲ... ಪಾಲಿಗ್ರಫಿ ಪರೀಕ್ಷೆ : ಇಲ್ಲ ಸುಳ್ಳು ಹೇಳುತ್ತಿದ್ದಾರೆ, ಆಕೆ ವಿವಾಹ ಪೂರ್ವ ಲೈಂಗಿಕ ಕ್ರಿಯೆ ನಡೆಸಿ ಒಂದು ಮಗು ಅಬಾರ್ಷನ್ ಆಗಿದೆ.
ಅಲ್ಲಿಗೆ ಆಕೆಯ ವೈವಾಹಿಕ ಜೀವನದ ಬದುಕು ಮುಗಿಯಿತು. ಇದು ಉತ್ತರ ಪ್ರದೇಶದಲ್ಲಿ ಬಾರಿ ಕೋಲಾಹಲವೆಬ್ಬಿಸಿತು. ಜುಲೈ 29ರಂದು ಸಂಸತ್ ನಲ್ಲೂ ಈ ವಿಚಾರ ಚರ್ಚೆಗೆ ಬಂತು ಸಚ್ ಕಾ ಸಾಮ್ ನಾ ಕಾರ್ಯಕ್ರಮ ರದ್ದು ಪಡಿಸಿ ಎಂದು ಸಂಸದರು ಆಗ್ರಹಿಸಿದರು. ಈಗ ನಾವು ಯೋಚನೆ ಮಾಡಬೇಕಾದ್ದು ಇಷ್ಟೇ ಅಗ್ಗದ ಜನಪ್ರಿಯತೆಗೆ, ದುಡ್ಡು ಮಾಡುವ ತವಕಕ್ಕೆ ಇಂಥಹ ಕಾರ್ಯಕ್ರಮಗಳು ಬೇಕಾ? ಟಿ ಆರ್ ಪಿ ಒಂದನ್ನೇ ಮಾನದಂಡವಾಗಿ ಇಟ್ಟುಕೊಂಡು ನಮ್ಮ ಚಾನಲ್ ಗಳು ಸಚ್ ಕಾ ಸಾಮ್ನಾ ದಂತಹ ಅಭಿರುಚಿ ಹೀನ ಕಾರ್ಯಕ್ರಮಗಳನ್ನು ಮಾಡಿದರೆ ಅದು ನಮ್ಮ ಸಂಸ್ಕೃತಿ ಉಳಿದೀತೆ? ಇನ್ನು ಕನ್ನಡದಲ್ಲಿ ಜೀ ಕನ್ನಡದವರು ಬದುಕು ಜಟಕಾ ಬಂಡಿ ಕಾರ್ಯಕ್ರಮ, ಸುವರ್ಣ ದವರು ಕಥೆ ಅಲ್ಲ ಜೀವನ ದಂತಹ ಕಾರ್ಯಕ್ರಮಗಳನ್ನು ಪ್ರಾಯೋಜಿಸುತ್ತಿವೆ. ಇಂತಹ ಕಾರ್ಯಕ್ರಮಗಳಿಂದ ಪ್ರಯೋಜನವೇನು? ಜನರ ಖಾಸಗಿ ಬದುಕಿನ ತಲ್ಲಣಗಳನ್ನು, ಸಾರ್ವಜನಿಕ ಅವಗಾಹನೆಗೆ ಬರಬಾರದಂತಹ ವಿಚಾರಗಳನ್ನು ಇಂತಹ ಕಾರ್ಯಕ್ರಮಗಳಲ್ಲಿ ಪ್ರಸ್ತುತ ಪಡಿಸುವುದರಿಂದ ಜನರ ಖಾಸಗಿ ಬದುಕು ಬಯಲಿಗೆ ಬಂದು ಬದುಕು ಮೂರಾಬಟ್ಟೆಯಾಗುವುದಿಲ್ಲವೇ ? ಇವರಿಗೆ ಯಾವ ಸಾಮಾಜಿಕ ಕಳಕಳಿಯಿದೆ? ಕೆಲ ವರ್ಷಗಳ ಹಿಂದೆ ಕ್ರೈಂ ಡೈರಿ/ ಸ್ಟೋರಿ ಪ್ರಸಾರವಾಗುತ್ತಿದ್ದಾಗಲು ಇಂಥಹ ಪ್ರಶ್ನೆಗಳಿದ್ದವು. ಒಬ್ಬ ವ್ಯಕ್ತಿ ಆರೋಪಿ ಎಂದು ಕೋರ್ಟ್ ಗಳು ಡಸೈಡ್ ಮಾಡುವ ಮುಂಚೆಯೇ ಚಾನಲ್ ಗಳು ಆರೋಪಿಗಳನ್ನಾಗಿ ಮಾಡಿಬಿಡುತ್ತಿದ್ದವು, ಮಾನಸಿಕವಾಗಿ ಜರ್ಝರಿತರಾಗುವಂತೆ ಮಾಡುತ್ತಿದ್ದವು. ಅಂತಹುದೇ ಪರಿಸ್ಥಿತಿ ಸ್ಟಾರ್ ಪ್ಲಸ್ ನ ಸಚ್ ಕಾ ಸಾಮ್ನಾಕಾರ್ಯಕ್ರಮದಲ್ಲಿ ಆಗುತ್ತಿದೆ. ವಿದೇಶದಲ್ಲಿ ಹಳಸಲಾಗಿರುವ ಈ ಕಾರ್ಯಕ್ರಮ ಈಗ ನಮ್ಮ ಮನೆಯಂಗಳಕ್ಕೆ ಬಂದಿದೆ. ಹಿಂದೆ ಬಿಗ್ ಬ್ರದರ್ ರಿಯಾಲಿಟಿ ಶೋ ನಲ್ಲಿ ಜನಾಂಗೀಯ ಅವಹೇಳನವಾಗಿತ್ತು, ಮತ್ತೊಂದು ಕಾರ್ಯಕ್ರಮದಲ್ಲಿ ಮದುವೆಯಾಗುವ ಗಂಡು - ಹೆಣ್ಣುಗಳನ್ನು ಹುಡುಕಿಕೊಳ್ಳುವ ಕಾರ್ಯಕ್ರಮ, ಜೀ ಟಿವಿಯಲ್ಲಿ ಪ್ರಸಾರವಾಗುವ ಡ್ಯಾಡಿ ನಂ.1ರಲ್ಲಿ ಅಪ್ಪಂದಿರು ಪ್ರಶಸ್ತಿ ಗೆಲ್ಲಲು ಕೋಡಂಗಿಗಳಂತೆ ಆಟವಾಡುವ ಕಾರ್ಯಕ್ರಮ ಥೂ.. ಇವೆಲ್ಲ ಬೇಕಾ? ಟಿವಿ ಕಾರ್ಯಕ್ರಮಗಳಿಗೆ ಒಂದು ಮಾರ್ಗಸೂಚಿ ಬೇಕೇ ಬೇಕು. ಎಲ್ಲ ಕಾರ್ಯಕ್ರಮ ನಿರ್ಮಾಪಕರು, ನಿರ್ದೇಶಕರು ಮತ್ತು ಚಾನಲ್ ಧಣಿಗಳು ಟಿ ಎನ್ ಸೀತಾರಾಂ ರಂತೆ ಯೋಚಿಸಿದ್ದರೆ ಎಷ್ಟು ಚೆನ್ನ ಅಲ್ವಾ? ನೀವೇನಂತೀರಿ..?

Sunday, July 26, 2009

ಕಾವೇರಿ ಕುಟುಂಬದ ಸಭೆ ಇಂದು, ಜಲವಿವಾದ ಪರಿಹಾರ ಕಂಡೀತೆ?

ಕಾವೇರಿ ಜಲವಿವಾದಕ್ಕೆ ಶತಮಾನಗಳ ಇತಿಹಾಸವಿದೆ. Madras Presidency and the Princely State of ಮೈಸೂರ್ ನಡುವೆ ಕ್ರಮವಾಗಿ ೧೮೯೨ ಹಾಗೂ 1924ರಲ್ಲಿ ಆದ ಒಪ್ಪಂದಗಳು ಈಗ ಜಾರಿಯಲ್ಲಿವೆ. ಕಾವೇರಿ ಜಲವಿವಾದಕ್ಕೆ ಸರಿಯಾದ ನ್ಯಾಯ ರಾಜ್ಯಕ್ಕೆ ದೊರಕಿಲ್ಲ. ರಾಜಕಾರಣಿಗಳ ಇಚ್ಚಾಶಕ್ತಿಯ ಕೊರತೆ ಹಾಗೂ ನ್ಯಾಯಾಲಯಗಳಲ್ಲಿ ರಾಜ್ಯದ ರೈತರ ಹಿತಾಸಕ್ತಿಯನ್ನು ಸರಿಯಾದ ರೀತಿಯಲ್ಲಿ ಮನವರಿಕೆ ಮಾಡಿಕೊಡುವಲ್ಲಿ ವೈಫಲ್ಯತೆ ಕಂಡಿರುವುದು ನಮ್ಮ ರೈತರಿಗೆ ಮುಳುವಾಗಿ ಪರಿಣಮಿಸಿದೆ. ಇದುವರೆಗೂ ಹಲವಾರು ಸರ್ಕಾರಗಳು ಮುಖ್ಯಮಂತ್ರಿಗಳು ಆಗಿ ಹೋಗಿದ್ದಾರೆ. ಆದರೆ ಯಾರೂ ಸಮರ್ಥವಾದ ರಾಜಕೀಯ ಇಚ್ಚಾಶಕ್ತಿ ಪ್ರದರ್ಶಿಸದೇ ಜಲವಿವಾದ ಜೀವಂತವಾಗಿರುವಂತೆ ನೋಡಿಕೊಂಡಿದ್ದಾರೆ. ಇದೆಲ್ಲ ಯಾಕೆ ನೆನಪಾಯಿತೆಂದರೆ, ನಾಳೆ ಕರ್ನಾಟಕ, ಕೇರಳ, ತಮಿಳುನಾಡು ಮತ್ತು ಪಾಂಡಿಚೆರಿ ರಾಜ್ಯಗಳ ಕಾವೇರಿ ಕುಟುಂಬದ ಮಹತ್ವದ ಸಭೆ ನಡೆಯಲಿದೆ. ಜಲವಿವಾದ ಬಗೆಹರಿಸಲು ಟ್ರಿಬ್ಯೂನಲ್ ರಚನೆಯಾಗಿದ್ದರೂ ಸಹಾ ಜಲವಿವಾದ ಬಗೆ ಹರಿಯುವ ಲಕ್ಷಣಗಳಿಲ್ಲ. ಹೀಗಿರುವಾಗ ನಾಲ್ಕು ರಾಜ್ಯಗಳ ಸಮಾನ ಮನಸ್ಕರು ಕಾವೇರಿ ಕುಟುಂಬ ರಚಿಸಿಕೊಂಡು ಜಲವಿವಾದ ಪರಿಹಾರಕ್ಕೆ
ಕಂಡು ಹಿಡಿಯಲು ಮುಂದಾಗಿದ್ದಾರೆ.
ಮೈಸೂರು ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ವಿಬಾಗದಲ್ಲಿರುವ ಪ್ರೊ. ಕೆ ಸಿ ಬಸವರಾಜು ಕರ್ನಾಟಕ ಕಾವೇರಿ ಕುಟುಂಬದ ನಾಯಕರು. ಜಲವಿವಾದಕ್ಕೆ ಪರಿಹಾರ ಕಂಡು ಹಿಡಿಯಲು ಕಾವೇರಿ ಕುಟುಂಬದೊಂದಿಗೆ ಹಲವಾರು ಭಾರಿ ತಮಿಳುನಾಡು, ಕೇರಳ ಹಾಗೂ ಪಾಂಡಿಚೆರಿಗೆ ಭೇಟಿ ನೀಡಿದ್ದಾರೆ. ಮೊನ್ನೆ ಮಾತಿಗೆ ಸಿಕ್ಕ ಅವರು ಕಾವೇರಿ ವಿವಾದಕ್ಕೆ ಕಾವೇರಿ ಕುಟುಂಬ ಅಂತಿಮ ರೂಪ ನೀಡುತ್ತಿದೆ, ಕುಟುಂಬದ ಸದಸ್ಯರು 6ಮಾಡ್ಯುಲ್ ಗಳಲ್ಲಿ ವಿಚಾರವನ್ನು ಪ್ರಸ್ತಾಪಿಸಿ ವಿವಾದ ಇತ್ಯರ್ಥ್ಯಕ್ಕೆ ಮುಂದಾಗಿದ್ದೇವೆ ಎಂದರು. ನಾಳೆ ಸಭೆ ಇದೆ ಎಂದರು. ಮುಂದಿನ ಮಾರ್ಚ್ ವೇಳೆಗೆ ಎಲ್ಲ ರಾಜ್ಯಗಳಲ್ಲು ಸಭೆ ನಡೆಸಿ ಅಂತಿಮ ತೀರ್ಮಾನಕ್ಕೆ ಬರಲಿದ್ದೇವೆ ಎಂದರಾದರೂ ಸಮನ್ವಯದ ಯಾವ ಆಂಶ ನಿಮ್ಮ ಮುಂದಿದೆ ಎಂಬ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದರು.
ಸಧ್ಯ ಕರ್ನಾಟಕಕ್ಕೆ 270ಟಿಎಂಸಿ, ತಮಿಳುನಾಡಿಗೆ 192ಟಿಎಂಸಿ ನೀರು ಹಂಚಿಕೆ ಇದೆ. ಆದರೆ ತಮಿಳುನಾಡು 410ಟಿಎಂಸಿ, ಕರ್ನಾಟಕ 500ಟಿಎಂಸಿ ಬೇಡಿಕೆ ಇರಿಸಿದೆ.

Saturday, July 25, 2009

ಕಾರ್ಗಿಲ್ ವಿಜಯಕ್ಕೆ ದಶಕದ ನಮನ..


ದು ಫೆಬ್ರುವರಿ ಮಾಹೆ ೧೯೯೯ ಭಾರತದ ಪ್ರಧಾನಿ ಎ ಬಿ ವಾಜಪೇಯಿ, ಎರಡೂ ದೇಶಗಳ ಗಡಿಯಲ್ಲಿ ಅನಗತ್ಯವಾದ ಸೇನಾ ಜಮಾವಣೆ ಶೀತಲ ಸಮರಕ್ಕೆ ಕಾರಣವಾಗಿತ್ತು. ದೇಶದ ಗಡಿನಿಯಂತ್ರಣ ರೇಖೆಯಲ್ಲಿ ಜಮಾವಣೆಯಾಗುತ್ತಿದ್ದ ಮುಜಾಹಿದ್ದಿನ್ ಗಳ ನಿಯಂತ್ರಣ ಸಹಾ ಮಾತುಕತೆಯ ಒಂದು ಭಾಗವಾಗಿತ್ತು. ಹಲವು ದಶಕಗಳಿಂದ ಎರಡೂ ದೇಶಗಳ ನಡುವೆ ಸ್ಥಗಿತವಾಗಿದ್ದ ಸಾರಿಗೆ ಸಂಚಾರ ವ್ಯವಸ್ಥೆಯನ್ನು ಮೊದಲ ಹಂತದಲ್ಲಿ ಚಾಲನೆಗೊಳಿಸಿದ್ದರು. ನಂತರ ಲಾಹೋರ್ ಗೆ ತೆರಳಿ ಶಾಂತಿ ಮಾತುಕತೆಯ ಲಾಹೋರ್ ಒಪ್ಪಂದಕ್ಕೆ ಸಹಿಯನ್ನು ಹಾಕಿದ್ದರು. ಎರಡೂ ದೇಶಗಳ ನಡುವಿನ ಭಿನ್ನಮತ ಸರಿದಾರಿಗೆ ಬರುತ್ತಿದೆ ಎಂದು ಭಾವಿಸುವ ಹೊತ್ತಿಗೆ ಬೆನ್ನಲ್ಲೇ ಚೂರಿ ಇರಿಯುವ ಕೆಲಸ ಮಾಡಿದ ಪಾಕೀಸ್ತಾನ, ಪಾಕ್ ಉಗ್ರರನ್ನು ಪಾಕ್ ಅಕ್ರಮಿತ ಕಾಶ್ಮೀರದ ಲೈನ್ ಆಫ್ ಕಂಟ್ರೋಲ್ ನ ವಲಯಕ್ಕೆ ಕಳುಹಿಸುವ ಹೇಯ ಮತ್ತು ಹೇಡಿತನದ ಕೃತ್ಯಕ್ಕೆ ಕೈಹಚ್ಚಿತ್ತು. ಸಾಕಷ್ಟು ಮದ್ದು, ಗುಂಡು, ಆಯುಧಗಳನ್ನು ಸರಬರಾಜು ಮಾಡಿದ ಪಾಕೀ(ಪೀ)ಸ್ತಾನ ಮುಜಾಹಿದ್ದಿನ್ ಗಳ ಬೆಂಬಲಕ್ಕೆ ಪಾಕೀ ಸೈನಿಕರನ್ನು ಮಫತ್ತಾಗಿ ಕಳುಹಿಸಿತ್ತು.!
ಮೇ-ಜೂನ್ ತಿಂಗಳಲ್ಲಿ ಕಾಶ್ಮೀರದ ಗಡಿ ನಿಯಂತ್ರಣ ರೇಖೆಯ ಆಸುಪಾಸಿನ ವಲಯದಲ್ಲಿ ಮೈಕೊರೆಯುವ ಹಿಮಪಾತ, ಚಳಿ ಇರುತ್ತದೆ. ಕಷ್ಠವೋ ಸುಖವೋ ದೇಶ ಕಾಯುವ ಗಡಿ ಭದ್ರತಾ ಪಡೆಯ ಯೋಧರು ಅಲ್ಲಿ ನಿರ್ಮಿಸಲಾಗಿರುವ ಬಂಕರ್ ಗಳಲ್ಲಿ ಪಾಳಿಯನುಸಾರ ಗಡಿ ಕಾವಲು ಕಾಯುತ್ತಾರೆ. ಚಳಿಯ ಅಗಾಧತೆ ಇರುವುದರಿಂದ ಸಹಜವಾಗಿಯೇ ಈ ಸಂಧರ್ಭದಲ್ಲಿ ಎರಡೂ ಕಡೆಯ ಸೈನಿಕರು ಸ್ವಲ್ಪ ಸಡಿಲವಾಗಿಯೇ ಇರುತ್ತಾರೆ. ಇಂತಹದ್ದೊಂದು ಪರಿಸ್ಥಿತಿಯ ಲಾಭ ಪಡೆದ ಪಾಕೀಗಳು ಕಾರ್ಗಿಲ್ ವಲಯಕ್ಕೆ ನಿಧಾನವಾಗಿ ಸೇರಿಕೊಂಡರು. ಮೇ ಮಾಹೆಯಲ್ಲಿ ವಾಯುಪಡೆಯ ಫ್ಲೈಟ್ ಲೆ.ನಚಿಕೇತ ಮತ್ತು ಸ್ಕ್ವಾ.ಲೀ.ಅಜಯ್ ಅಹುಜಾ ನಿಯಂತ್ರಣ ರೇಖೆಯ ಬಳಿ ಹಾರಾಟ ನಡೆಸಿದ್ದಾಗ ಮೊದಲ ಅಪಾಯದ ಸುಳಿವು ದೊರಕಿತ್ತು. ಗಡಿ ಭದ್ರತಾ ಪಡೆ ಮತ್ತು ಸೇನೆ ಎಚ್ಚೆತ್ತು ಕೊಳ್ಳುವ ವೇಳೆಗಾಗಲೇ ಮುಷ್ಕೋ ಕಣಿವೆ, ಡ್ರಾಸ್, ಕಾರ್ಗಿಲ್, ಇಂದೂಸ್ ನದಿಯ ಸನಿಹದ ಪೂರ್ವ ವಲಯ ಮತ್ತು ಸಿಯಾಚಿನ್ ಪ್ರದೇಶಗಳನ್ನು ಉಗ್ರರು ಮತ್ತು ಪಾಕೀಸೈನಿಕರು ಸುತ್ತುವರೆದಿದ್ದರು. ಆರಂಭದಲ್ಲಿ ಪ್ರತಿದಾಳಿ ನಡೆಸುವಾಗ ನಮ್ಮ ಸೈನಿಕರು ಸಾವು ನೋವಿಗೆ ಸಿಲುಕಿದರಾದರೂ ಹಂತ ಹಂತವಾಗಿ ಟೈಗರ್ ಹಿಲ್, ಡ್ರಾಸ್, ಹೀಗೆ ಎಲ್ಲ ಪ್ರದೇಶಗಳಿಂದಲೂ ಉಗ್ರರನ್ನು, ಪಾಕೀ ಸೈನಿಕರನ್ನು ಹೊಡೆದಟ್ಟಿದರು. ಹಲವು ಮಂದಿ ಪಾಕೀಗಳನ್ನು ಹೆಡೆಮುರಿ ಕಟ್ಟುವ ಕೆಲಸ ಮಾಡಿದರು ಜುಲೈ 26 1999ರಂದು ಸಂಪೂರ್ಣವಾಗಿ ಶತ್ರುಗಳನ್ನು ಹಿಮ್ಮೆಟ್ಟಿಸಿ ಕಾರ್ಗಿಲ್ ನಲ್ಲಿ ವಿಜಯ ಪತಾಕೆ ಹಾರಿಸಿದರು. ಹಾಸನ ಜಿಲ್ಲೆಯ ವೀರ ಯೋಧ ಯೆಂಗಟ ಸಹಾ ಕಾರ್ಗಿಲ್ ಮೊದಲ ದಾಳಿಯಲ್ಲಿ ವೀರ ಬಲಿದಾನ ಗೈದಿದ್ದಾರೆ.ಈ ಯುದ್ಧದಲ್ಲಿ ದೇಶದ 523ಮಂದಿ ಯೋಧರು, ಸೇನಾಧಿಕಾರಿಗಳು ವೀರ ಬಲಿದಾನ ಮಾಡಿದರು.ತದನಿಮಿತ್ತ ಈ ದಿನವನ್ನು ವಿಜಯ ದಿವಸವಾಗಿ ಆಚರಿಸಲಾಗುತ್ತಿದೆ.
ಇಂದಿಗೆ ಕಾರ್ಗಿಲ್ ಯುದ್ಧ ನಡೆದು 10ವರ್ಷಗಳು ಸಂದಿವೆ, ಕಾಲು ಕೆರೆದು ಆಗಾಗ ಕ್ಯಾತೆ ತೆಗೆಯುವ ಪಾಕಿಸ್ತಾನಕ್ಕೆ ನಮ್ಮ ದೇಶದ ಸೈನಿಕರು ಸಮರ್ಥವಾಗಿ ಉತ್ತರಿಸಿದ್ದಾರೆ. ಪಾಕೀಸ್ತಾನಕ್ಕೆ ಅಂದು ಅಮೇರಿಕಾದ ಪರೋಕ್ಷ ಬೆಂಬಲವಿದ್ದಾಗ್ಯೂ ಬಾರತಕ್ಕೆ ಅಂತರರಾಷ್ಟ್ರೀಯ ಸಮುದಾಯ ನೀಡುತ್ತಿರುವ ಬೆಂಬಲ ನಮ್ಮ ಸಾಮರ್ಥ್ಯಕ್ಕೆ ಸಾಮು ಹಿಡಿದಂತಾಗಿದೆ. ದೇಶದ ಆಂತರಿಕ ಕಲಹಗಳನ್ನು, ಅಭದ್ರತೆಯನ್ನು ನಿವಾರಿಸಿಕೊಳ್ಳುವ ಯೋಗ್ಯತೆಯಿಲ್ಲದ ಪಾಕ್ ಸರ್ಕಾರ ಪದೇ ಪದೇ ಇಂತಹ ಕೃತ್ಯಕ್ಕೆ ಕೈ ಹಾಕುತ್ತಲೇ ಇರುತ್ತದೆ. 1994 ಮುಂಬೈ ಸ್ಫೋಟ, ತಾಜ್ ಹೋಟೆಲ್ ದಾಳಿ ಯಂತಹ ಕೃತ್ಯಗಳನ್ನು ನಿರಾತಂಕವಾಗಿ ಮಾಡುತ್ತಿದೆ, ಪ್ರತೀ ಬಾರಿಯೂ ತನ್ನ ಪಾತ್ರವಿಲ್ಲ ಎಂದು ಹೇಳುತ್ತಿದೆ, ಆದರೆ ಪ್ರತೀ ಬಾರಿಯೂ ಪಾಕ್ ಕೃತ್ಯಕ್ಕೆ ಪುಟಗಟ್ಟಲೆ ಸಾಕ್ಷ್ಯಗಳು ಸಿಗುತ್ತಿವೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಪಾಕ್ ಮುಜುಗುರ ಅನುಭವಿಸುತ್ತಿದೆ. ಆದರೆ ನಮ್ಮ ದೇಶ ಎಲ್ಲ ರೀತಿಯಲ್ಲೂ ಪಾಕ್ ಗೆ ಪ್ರತ್ಯುತ್ತರ ಕೊಡಲು ಸಮರ್ಥವಾಗಿದೆ. ದೇಶ ಕಾಯುವ ಸೈನಿಕರು ಇಂಥಹದ್ದೊಂದು ನಿಲುವಿಗೆ ಸಾಥ್ ನೀಡಿದ್ದಾರೆ. ಇದು ಕಾರ್ಗಿಲ್ ವೀರ ಬಲಿದಾನ ಮಾಡಿದ ಹುತಾತ್ಮರಿಗೆ ನಾವು ತೋರಿಸ ಬಹುದಾದ ಗೌರವ ಮತ್ತು ಸ್ಮರಣೆ.

Sunday, July 19, 2009

ಮಳೆ ಬಂತೂ ಮಳೆ..


ರಾಜ್ಯದ ವಿವಿದೆಡೆ ಸಮೃದ್ಧವಾಗಿ ಮಳೆಯಾಗುತ್ತಿದೆ. ಈ ಬಾರಿ ಮುಂಗಾರು ತಡವಾಗಿ ಆರಂಭವಾದರೂ ದಿನದಿಂದ ದಿನಕ್ಕೆ ಪಡೆದುಕೊಂಡ ಬಿರುಸು, ರಾಜ್ಯದ ಪ್ರಮುಖ ಜಲಾಶಯಗಳು ಮೈದುಂಬಿಕೊಳ್ಳಲು ಕಾರಣವಾಗಿದೆ. ಮುಂಗಾರು ತಡವಾದಾಗ ಅಲ್ಲಲ್ಲಿ ರೈತರ ಬೆಳೆಗಳಿಗೆ ರೋಗ ರುಜಿನ ತಗುಲುವ ಬೀತಿಯ ಜೊತೆಗೆ, ಬೆಳೆ ಒಣಗಿ ಹೋಗುವ ಸ್ಥಿತಿ ಸೃಷ್ಠಿಯಾಗಿತ್ತು. ಮುಂಗಾರು ಆರಂಬದ ಮುನ್ನ ದಿನಗಳ ಬಿಸಿಲ ತೀವ್ರತೆಯೂ ಸಹಾ ದಕ್ಷಿಣದ ಜಿಲ್ಲೆಗಳಲ್ಲಿ ಹಿಂದಿಗಿಂತ ಹೆಚ್ಚಾಗಿತ್ತು. ಮುಂದೇನೋ ಎಂದು ರೈತ ಇಲ್ಲಿ ಕೈ ಹೊತ್ತು ಕುಳಿತಿದ್ದರೆ, ಮುಂದಿನ ಪರಿಸ್ಥಿತಿ ಏನು? ಬಿತ್ತನೆ ಬೀಜ, ರಸಗೊಬ್ಬರ,ವಿದ್ಯುತ್ಕೊರತೆ ಬರಲಿರುವ ದಿನಗಳಿಗೆ ಹೇಗೆ ಸಜ್ಜಾಗಬೇಕು? ಎಂದು ಚಿಂತಿಸದೇ ಹೊಣೆಗೇಡಿ ಸರ್ಕಾರದ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಅವರ ಸಂಪುಟ ದರ್ಜೆ ಸಚಿವರು ಮಳೆಯ ಬಗೆಗೆ, ವಿದ್ಯುತ್ತಿನ ಬಗ್ಗೆ ದಿನಕ್ಕೊಂದು ಬಗೆಯ ಹೇಳಿಕೆಗಳನ್ನು ನೀಡುತ್ತಾ ಸಾರ್ವಜನಿಕ ಪ್ರಹಸನ ಆರಂಭಿಸಿದ್ದರು. ಸಿಎಂ ಯಡ್ಡಿಯೂರಪ್ಪ ತಿರುಪತಿಗೆ, ಚೆನ್ನೈ ಗೆ ಮಳೆಗಾಗಿ ಪ್ರಾರ್ಥಿಸಲು ಹೋಗಿದ್ದರು.! ಇನ್ನು ಒಂದು ಹೆಜ್ಜೆ ಮುಂದೆ ಹೋದ ಮೂರ್ಖರು ಸಾರ್ವಜನಿಕರ ತೆರಿಗೆ ಹಣದಲ್ಲಿ ಅನಾಮತ್ತು 33ಲಕ್ಷರೂಪಾಯಿಗಳನ್ನು ರಾಜ್ಯದ ವಿವಿಧ ದೇಗುಲಗಳಲ್ಲಿ ಮಳೆಗಾಗಿ ಪ್ರಾರ್ಥಿಸಲು ವೆಚ್ಚ ಮಾಡಿದರು..! ಕರೆಂಟ್ ಮಂತ್ರಿ ವಿದ್ಯುತ್ ಕಡಿತದ ಬಗ್ಗೆ ಒಂದು ಸ್ಪಷ್ಟ ನಿಲುವು ಪ್ರಕಟಿಸಲಾರದೇ ಹೋದರು. ಪರಿಣಾಮ ಜನ ಅನಿಯಮಿತ ವಿದ್ಯುತ್ ಕಡಿತದಿಂದ ತೊಂದರೆ ಪಡುವಂತಾಯಿತು. ಅಂತೂ ಇಂತೂ ಮುಂಗಾರು ಮಳೆ ಬಂತು ಇವರು ಬಚಾವಾದರು. ಇವರ ಮಂಗಾಟ ಇದೇ ಮೊದಲಲ್ಲ,ಸರ್ಕಾರದ ರಚನೆಯಾದಾಗ ಮುಜುರಾಯಿ ದೇಗುಲಗಳಲ್ಲಿ ಸಿಎಂ ಯಡಿಯೂರಪ್ಪನ ಹೆಸರಿನಲ್ಲಿ ಪ್ರಥಮ ಪೂಜೆ ಸಲ್ಲಿಸುವ ಪ್ರಸ್ತಾಪ ಮಾಡಿ ಮುಜುಗುರ ಅನುಭವಿಸಿದ್ದರು, ನಂತರ ತಿರುಪತಿ ಲಡ್ಡುಗಳನ್ನು ತಂದು ಹಂಚುವ ಕೆಲಸ ಮಾಡಿದರು, ಶಿವರಾತ್ರಿ ಸಂಧರ್ಭದಲ್ಲಿ ಗಂಗಾಜಲವನ್ನು ತಂದು ದೇಗುಲಗಳಿಗೆ ನೀಡಿದರು..! ಇಂತಹ ಮಹಾನ್ ಕಾರ್ಯಗಳಿಂದ ಸಾರ್ವಜನಿಕರಿಗೆ ಆದ ಪ್ರಯೋಜನವೇನು? ಈ ಯೋಜನೆಗಳಿಗೆ ಖಜಾನೆಯಿಂದ ಸಾರ್ವಜನಿಕರ ಎಷ್ಟು ಕೋಟಿ ಹಣ ವೆಚ್ಚವಾಗಿದೆ ಎಂಬುದು ಈಗ ಚರ್ಚೆಯಾಗ ಬೇಕಾಗಿದೆ. ರಾಜ್ಯದಲ್ಲಿ ಮುಜುರಾಯಿಗೆ ಸೇರಿದ ಸಾವಿರಾರು ದೇಗುಲಗಳಿವೆ, ಅವುಗಳ ಜೀರ್ಣೊದ್ದಾರಕ್ಕೆ, ಅದನ್ನು ನೋಡಿಕೊಳ್ಳುವ ಅರ್ಚಕರು, ಪಾರುಪತ್ತೆಗಾರರುಗಳಿಗೆ ಸರಿಯಾದ್ದೊಂದು ದಾರಿ ಮಾಡುವ ಯೋಗ್ಯತೆ ಇಲ್ಲದ ಈ ಸರ್ಕಾರಕ್ಕೆ ಲಾಡು, ಗಂಗಾಜಲ, ಮಳೆಪೂಜೆ ಇವೆಲ್ಲಾ ಬೇಕಾ? ಕಳೆದ ಬಾರಿ ಉತ್ತರ ಕರ್ನಾಟಕದಲ್ಲಿ ತೊಗರಿಗೆ ನಿಗದಿತವಾದ ಬೆಂಬಲ ಬೆಲೆ ಸಿಗಲಿಲ್ಲ, ಹಾಸನ ಜಿಲ್ಲೆಯ ರೈತ ಬೆಳೆದ 100ಕೋಟಿಗೂ ಹೆಚ್ಚು ಮೊತ್ತದ 40ಸಾವಿರ ಹೆಕ್ಟೇರುಗಳಲ್ಲಿ ಬೆಳೆದ ಬೆಳೆ ಹಾಳಾಯ್ತು, ರಾಜ್ಯಾಧ್ಯಂತ ರಸಗೊಬ್ಬರದ ಸಮಸ್ಯೆ ಉಲ್ಭಣಿಸಿತ್ತು, ಹೇಳುವವರು, ಕೇಳುವವರಿಲ್ಲದೇ ಅನಾಥನಾದ ರೈತ ಕಣ್ಣೀರಿಟ್ಟ, ಹತಾಶನಾಗಿ ನೇಣಿಗೆ ಶರಣಾದ ಈ ಬಗ್ಗೆ ಕಿಂಚಿತ್ತ ಕಾಳಜಿ ವಹಿಸದ ಸರ್ಕಾರ ಯಾತಕ್ಕೂ ಬೇಡದ ಯೋಜನೆಗಳನ್ನು ಪ್ರಕಟಿಸುತ್ತಾ ಜನರನ್ನು ವಂಚಿಸಿದೆ, ಕಳೆದ ಎರಡು ಸರ್ಕಾರಗಳಲ್ಲಿ ಬಿತ್ತನೆ ಗೊಬ್ಬರಕ್ಕೆ ಹೆಚ್ಚಿನ ರಿಯಾಯ್ತಿ ಇತ್ತು ಈ ಭಾರಿ ಅದು ಶೇ.25ಕ್ಕೆ ಇಳಿದಿದೆ, ಎತ್ತು ಗಾಡಿ ಯೋಜನೆ ಎಕ್ಕ ಎದ್ದು ಹೋಗಿದೆ. ಹೀಗೆ ವಾಸ್ತವ ನೆಲೆಗಟ್ಟಿನಲ್ಲಿ ಚರ್ಚೆಯಾದಗೆಲ್ಲ ಕೇಂದ್ರದ ಕಡೆಗೆ ಬೊಟ್ಟು ಮಾಡಿ ತೋರುವ ಚಾಳಿ ಬೆಳೆಸಿಕೊಂಡಿರುವ ರಾಜ್ಯ ಸರ್ಕಾರ ತನ್ನಲ್ಲಿ ಒಂದು ಗುಪ್ತಚರ ಇಲಾಖೆ ಇದೆ, ತನ್ನ ರಾಜ್ಯದ ರೈತರಿಗೆ ಯಾವ ಗೊಬ್ಬರ ಬೇಕು, ಯಾವಾಗ ಬೇಕು? ಎಂದೆಲ್ಲ ಯೋಚಿಸಿದ್ದರೆ ಸಮಸ್ಯೆ ನಿಬಾಯಿಸುವುದು ಯಾವುದೆ ಸರ್ಕಾರಕ್ಕೂ ಕಷ್ಠ ಸಾಧ್ಯವಲ್ಲ. ಈಗ ಸದನ ಕಲಾಪಗಳು ನಡೆಯಲಾರಂಭಿಸಿವೆ, ಮಾನ್ಯ ಚುನಾಯಿತ ಮಹನೀಯರುಗಳೇ ಸದನದಲ್ಲಿ ಈ ವಿಚಾರ ಚರ್ಚೆಯಾಗಲಿ.
ಇರಲಿ ಹಾಸನ ಜಿಲ್ಲೆ ಈಗ ರಾಜಕೀಯ ಅಸ್ಪೃಶ್ಯತೆಯನ್ನು ಎದುರಿಸುತ್ತಿದೆ, ಎಲ್ಲ ವಿಚಾರಗಳಲ್ಲು ಹಾಳು ರಾಜಕೀಯ ಮುಂದು ಮಾಡಿಕೊಂಡು ಸಾರ್ವಜನಿಕವಾದ, ಅವಶ್ಯಕವಾದ ಅಬಿವೃದ್ದಿ ಕೆಲಸಗಳಿಗೆ ಸಿ ಎಂ ಯಡಿಯೂರಪ್ಪ ಪಕ್ಷಪಾತ ಧೋರಣೆ ಅನುಸರಿಸುತ್ತಿದ್ದಾರೆ, ಇದು ಕೃಷಿ ಪ್ರಧಾನ ಜಿಲ್ಲೆ , ಆರ್ಥಿಕ ವಲಯದಲ್ಲಿ ಬರುವ ಪ್ರಮುಖ ಜಿಲ್ಲೆ ಹಾಗಿದ್ದಾಗ್ಯೂ ಇಲ್ಲಿನ ಜನರ ನೋವಿಗೆ ದನಿಯಾಗದ ಯಡಿಯೂರಪ್ಪ ಜಿಲ್ಲೆಯ ಜನರನ್ನು ನೋಡಲು ಬಂದಿದ್ದು ಮತಯಾಚನೆಗೆ ಮಾತ್ರ. ಚುನಾವಣೆಗಳಲ್ಲಿ ಜಿಲ್ಲೆಯ ಜನತೆ ಬೇರೆ ರಾಜಕೀಯ ಪಕ್ಷಗಳಿಗೆ ತೋರಿದಷ್ಟೇ ಆದರವನ್ನು ಬಿಜೆಪಿಗೂ ತೋರಿದ್ದಾರೆ. ಹಾಗಿದ್ದಾಗ್ಯೂ ಯಡಿಯೂರಪ್ಪ ಮಲತಾಯಿ ಧೋರಣೆ ತೋರಬಹುದೇ. ಸರ್ಕಾರ ರಚನೆಯಾಗಿ ಒಂದೂವರೆ ವರ್ಷವಾಗಿದೆ ಜಿಲ್ಲೆಗೆ ನೇಮಕವಾದ ಉಸ್ತುವಾರಿ ಸಚಿವರೇ ನಾಪತ್ತೆಯಾಗಿದ್ದಾರೆ..! ಜಿಲ್ಲೆಯಲ್ಲಿ ಅಧಿಕಾರಿಗಳದ್ದೇ ದರ್ಬಾರು, ಯಾವ ಅಭಿವೃದ್ದಿ ಕೆಲಸವಾಗಬೇಕು, ನಡೆಯುತ್ತಿರುವ ಕೆಲಸ ಯಾವ ಹಂತದಲ್ಲಿದೆ, ಏನು ಅಡಚಣೆಯಾಗಿದೆ, ಜಿಲ್ಲೆಯ ಜನರ ಸಂಕಷ್ಟಗಳೇನು?ಅವರ ನಿರೀಕ್ಷೆಗಳೇನು ಕೇಳಿಸಿಕೊಳ್ಳುವವರು ಯಾರು ಸ್ವಾಮಿ? ಜಿಲ್ಲೆಯ ಚುನಾಯಿತ ಪ್ರತಿನಿಧಿಗಳು ಈ ನಿಟ್ಟಿನಲ್ಲಿ ಸದನದಲ್ಲಿ ಏನು ಮಾಡುತ್ತಾರೋ ಕಾದು ನೋಡಬೇಕು. ಒಂದು ವೇಳೆ ಅಲ್ಲಿಯೂ ಜಿಲ್ಲೆಯ ಶಾಸಕರುಗಳು ಅಸ್ಪೃಶ್ಯತೆ ಅನುಭವಿಸಿದರೆ ಅದು ಜಿಲ್ಲೆಯ ಜನತೆಗೆ ಶಾಪವೇ...
ಜಿಲ್ಲೆಯ ಯಗಚಿ, ಹೇಮಾವತಿ, ವಾಟೆಹೊಳೆ ಅಣೆಕಟ್ಟೆಯ ಜೊತೆಜೊತೆಗೆ ಕಾವೇರಿ ನದಿಯ ಮೊದಲ ಕಟ್ಟೆ ಎಂದೇ ಹೆಸರಾಗಿರುವ ಕಟ್ಟೇಪುರ ಕಟ್ಟೆ ಭೋರ್ಗರೆದು ಹರಿಯುತ್ತಿವೆ. ಸ್ವಲ್ಪ ಪ್ರಮಾಣದಲ್ಲಿ ಬಿತ್ತನೆಯಾಗಿರುವ ಆಲೂಗಡ್ಡೆ ಯಥಾಪ್ರಕಾರ ರೋಗಕ್ಕೆ ತುತ್ತಾಗಿದೆ, ಉಳಿದಂತೆ ಅಡಿಕೆ,ತಂಬಾಕು, ಹೂವು, ತರಕಾರಿ ಬೆಳೆಗಳು, ಭತ್ತ, ಜೋಳ ಇತ್ಯಾದಿ ಉತ್ತಮವಾಗಿದೆ. ಸಧ್ಯ ಜಿಲ್ಲೆಯಲ್ಲಿ ಗೊಬ್ಬರ ಸಮಸ್ಯೆಯಾಗಿಲ್ಲ. ಅಷ್ಟರಮಟ್ಟಿಗೆ ರೈತ ಸಂತಸದಲ್ಲಿದ್ದಾನೆ.

Sunday, July 12, 2009

ವಿಧ್ಯಾರ್ಥಿ ಶಕ್ತಿ ಎಲ್ಲಿದೆ ಮಾರಾಯ್ರೆ?

ಅದು ಸ್ವಾತಂತ್ರ್ಯ ಚಳುವಳಿಯ ದಿನಗಳು, ಲಕ್ಷಾಂತರ ಮಂದಿ ಯುವಕರು ಸ್ವಾತಂತ್ರ್ಯ ಚಳುವಳಿಯ ಕರೆಗೆ ಒಗೊಟ್ಟಿದ್ದರು. ಈ ಪೈಕಿ ಹಲವು ಮಂದಗಾಮಿ ಗಳಾದರೆ, ಇನ್ನು ಕೆಲವರು ತೀವ್ರ ಗಾಮಿಗಳಾದರು. ಚಳುವಳಿಯ ಕಾವು ತೀವ್ರತೆ ಪಡೆದುಕೊಂಡಿತು. ಗಾಂಧೀಜಿಯವರ ನೇತೃತ್ವದ ಸ್ವಾತಂತ್ರ್ಯ ಹೋರಾಟ ನಿರ್ದಿಷ್ಠ ಗತಿಯನ್ನು ತಲುಪಿಕೊಂಡಿತು. ಅದರಲ್ಲಿ ಪಾಲ್ಗೊಂಡ ಎಷ್ಟೋ ಮಂದಿ ಯುವಜನರು ಅಮರರಾದರು. ಸ್ವಾಮಿ ವಿವೇಕಾನಂದರು, ಸುಬಾಸ್ ಚಂದ್ರ ಬೋಸ್, ಭಗತ್ ಸಿಂಗ್, ಚಂದ್ರಶೇಖರ ಅಜಾದ್ ಹೀಗೆ ಅನೇಕ ಮಹಾನ್ ವ್ಯಕ್ತಿಗಳು ಅಮರರಾಗುವ ಮೂಲಕ ಯುವಶಕ್ತಿಯ ಪ್ರೇರಕ ಶಕ್ತಿಯಾಗಿ ರೂಪು ಗೊಂಡರು. ಸ್ವಾತಂತ್ರ್ಯ ನಂತರದಲ್ಲೂ ಹಲವು ಚಳುವಳಿಗಳು ಹುಟ್ಟಿದ್ದು ಕಾಲೇಜು ಆವರಣದಲ್ಲೇ. ಅಲ್ಲಿ ಸಕ್ರಿಯವಾಗಿ ಪಾಲ್ಗೊಂಡ ಅನೇಕರು ಇಂದು ನಮ್ಮೆದುರಿನ ರಾಜಕಾರಣಿಗಳಾಗಿ, ಸಮಾಜದ ವಿವಿಧ ಸ್ಥರದ ಗಣ್ಯರಾಗಿ, ಎಲೆಮರೆಯ ಕಾಯಾಗಿಯೂ ಉಳಿದಿದ್ದಾರೆ. ಅಂದಿನ ದಿನಗಳ ಅವರ ಮನಸ್ಥಿತಿ
, ಅವರ ಮುಂದಿದ್ದ ಸಿದ್ದಾಂತಗಳು, ಬದ್ದತೆಗಳು ವಿದ್ಯಾರ್ಥಿ ಶಕ್ತಿಯ ಜಾಗೃತಿಗೆ, ಉಳಿವಿಗೆ ಪೂರಕವಾಗಿದ್ದವು. ಆದರೆ ಇಂದಿನ ಯುವಜನರ ಮನಸ್ಥಿತಿ, ಅವರ ಆಯ್ಕೆ, ಅಭಿರುಚಿಗಳು ದಿಕ್ಕೆಟ್ಟ ಸ್ಥಿತಿಯಲ್ಲಿವೆ. ಅದಕ್ಕೆ ಸೂಕ್ತ ಪರಿಸರದ ಕಾರಣವೂ, ಮಾರ್ಗದರ್ಶನದ ಕೊರತೆಯು ಇರಬಹುದು.
ಇರಲಿ ಈಗ ನಾನಿಲ್ಲಿ ಪ್ರಸ್ತಾಪಿಸ ಹೊರಟ್ಟಿದ್ದು ವಿದ್ಯಾರ್ಥಿ ಯುವಜನರ ಆಸಕ್ತಿ ಅಭಿರುಚಿ, ಅಧ್ಯಯನ ಶೀಲತೆ, ಚಳುವಳಿ ಮತ್ತು ಬದ್ದತೆಗಳ ಬಗ್ಗೆ. ಇಂತಹದೊಂದು ವಿಷಯ ಕಳೆದ ೭-೮ ವರ್ಷಗಳಲ್ಲಿ ನನ್ನನ್ನು ಅದೆಷ್ಟೋ ಬಾರಿ ಕಾಡಿಸಿದೆ. ಆದರೆ ಅದಕ್ಕೆ ರೂಪ ದೊರೆತದ್ದು ಮಾತ್ರ ಮುಕ್ತ ಮುಕ್ತ ದಾರವಾಹಿ ನಿರ್ದೇಶಕ ಟಿ. ಎನ್ ಸೀತಾರಾಂ ರವರ ಮಾತುಗಳನ್ನು ಆಲಿಸಿದ ನಂತರವಷ್ಠೇ."ಇಂದಿಗೂ ಯುವಜನರಿಗೆ ರಾಷ್ಟ್ರ ಭಕ್ತಿ, ಸಾಮಾಜಿದ ಪ್ರಜ್ನೆ ಸುಪ್ತವಾಗಿದೆ, ಆದರೆ ಅದನ್ನು ಸಂವಹನ ಮಾಡುವಲ್ಲಿ ನಾವು ಎಡವಿದ್ದೇವೆ, ಈ ನಿಟ್ಟಿನಲ್ಲಿ ಸರಿಯಾದ ಪ್ರಯತ್ನವಾಗಬೇಕಿದೆ"ಎಂದವರಯ ಸೀತಾರಾಮ್. ಪ್ರಸಕ್ತ ಸಂಧರ್ಭದಲ್ಲಿ ವಿದ್ಯಾರ್ಥಿ ಯುವಜನರ ಎಲ್ಲ ಚಟುವಟಿಕೆಗಳ ಮೇಲೂ ಜಾಗತೀಕರಣದ ನೆರಳಿದೆ. ಹಾಗಾಗಿ ಬದುಕಿನ ಓಟದಲ್ಲಿ, ಸಾಮಾಜಿಕ ಸ್ಥಿತಂತ್ಯರದ ಕಾಲಘಟ್ಟದಲ್ಲಿ ಅನೇಕ ಎಡರು-ತೊಡರುಗಳು ಬೃಹತ್ತಾಗಿ ನಮ್ಮೆದುರು ತೆರೆದುಕೊಳ್ಳುತ್ತಿವೆ. ಇವು ನಮ್ಮ ಸಮಾಜಿಕ ವ್ಯವಸ್ಥೆಯ ಮೇಲೆ ಗುರುತರವಾದ ವ್ಯತಿರಿಕ್ತ ಪರಿಣಾಮಗಳನ್ನು ಬೀರುತ್ತವೆ. ನಮ್ಮ ಶೈಕ್ಷಣಿಕ ವ್ಯವಸ್ಥೆಯ ಆಗುಹೋಗುಗಳು, ಮತ್ತು ಪರಿಸರ ಹಿಂದೆ ಹೇಗಿತ್ತು ? ಈಗ ಹೇಗಿದೆ? ಅಲ್ಲಿನ ಸಕಾರಾತ್ಮಕ ಅಂಶಗಳೇನು? ನಕಾರಾತ್ಮಕ ಅಂಶಗಳೇನು? ವ್ಯವಸ್ಥೆಯ ನಿಲುವು ಹೇಗಿದೆ? ಎಂಬ ಅಂಶಗಳು ಚರ್ಚೆಯಾಗಬೇಕು.
ಹಿಂದೆ ನಮ್ಮಲ್ಲಿ ಖಾಸಗಿ ಶಾಲೆಗಳ ಕೊರತೆಯಿತ್ತು, ಸರ್ಕಾರಿ ಶಾಲೆಗಳ ಅಸ್ತಿತ್ವವಿತ್ತು.ಸಿದ್ದಾಂತಳ ಬೆನ್ನು ಬಿದ್ದ, ಕನಸುಗಳನ್ನು ಬಿತ್ತುವ ಅದ್ಯಾಪಕ ವೃಂದವಿತ್ತು. ಜಾಗೃತಿಯ ತುಡಿತವಿತ್ತು. ಸಮಾಜದ ಸ್ಪಂದನೆಯ ಅಂಶಗಳಿಗೆ ತೆರೆದುಕೊಳ್ಳುವ ಅವಕಾಶವಿತ್ತು. ಆದರೆ ಈಗಿನ ಪರಿಸ್ಥಿತಿ ಹಾಗಿಲ್ಲ. ನರ್ಸರಿ ಕಿಂಡರ್ ಗಾರ್ಟನ್ ಗಳು, ಕೇಂದ್ರೀಯ ಶಾಲೆಗಳು, ಆಂಗ್ಲ ಶಿಕ್ಷಣದ ಶಾಲೆಗಳ ಹವಾ ಬೀಸಿದೆ. ಅಂತರರಾಷ್ಟ್ರೀಯ ಗುಣಮಟ್ಟದ ಶಿಕ್ಷಣದ ನೀಡುವ ಹೆಸರಿನ ಅನೇಕ ಶಾಲೆಗಳು ಎದ್ದು ನಿಂತಿವೆ. ದುಡ್ಡಿನ ಹಪಾಹಪಿಗೆ ಬಿದ್ದ ಗುರುವೃಂದ (ಕೆಲವರನ್ನು ಹೊರತು ಪಡಿಸಿ!) ಮನೆಪಾಠದ ನೆಪದಲ್ಲಿ ಸುಲಿಗೆಗೆ ನಿಂತು ಆದರ್ಶದ ಕನಸಿಗೆ, ಮಕ್ಕಳ ವ್ಯಕ್ತಿತ್ವ ವಿಕಾಸನದಂತಹ ವಿಚಾರಗಳಿಗೆ ತಿಲಾಂಜಲಿ ನೀಡಿದ್ದಾರೆ. ಇದು ಕೇವಲ ಗುರು ವೃಂದದ ತಪ್ಪಲ್ಲ, ಪೋಷಕರ ಸಂಪೂರ್ಣ ಪಾತ್ರವೂ ಇಲ್ಲಿದೆ. ಜಾಗತೀಕರಣದ ಪರಿಣಾಮ ಮನೆಯಂಗಳಕ್ಕೆ ಬಂದಿರುವ ನೂರಾರು ಟಿವಿ ವಾಹಿನಿಗಳು ಪೋಷಕರ, ಯುವ ಜನರ ಕನಸುಗಳು ದೇಶೀಯ ಹಿಡಿತದಿಂದ ದಿಕ್ಕು ತಪ್ಪಲು ಕಾರಣವಾಗಿವೆ. ಅದು ಓದಿನ ವಿಷಯದ ಆಯ್ಕೆ ಇರಬಹುದು, ಉದ್ಯೋಗದ ಆಯ್ಕೆ ಇರಬಹುದು, ತಾವು ಅನುಸರಿಸುವ ರೀತಿ-ರಿವಾಜುಗಳು, ಧರಿಸುವ ಉಡುಪು, ಮಾತುಗಳು ಹೀಗೆ ಎಲ್ಲವೂ ಒಂದು ಅಂಕೆಯನ್ನು ಮೀರಿ ಬೆಳೆದು ನಿಂತಿವೆ. ಪೋಷಕರ ಒತ್ತಾಸೆಯ ಮೇರೆಗೆ ಇಂತಹುದೆ ಕೋರ್ಸ್ ಗೆ ಸೇರಬೇಕು, ಇಂತಹುದ್ದೇ ಉದ್ಯೋಗ ಹಿಡಿಯಬೇಕು, ಇಂತಹ ಶಾಲೆಯಲ್ಲೇ ಓದಬೇಕು ಎಂಬ ಮನಸ್ಥಿತಿ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರಿದೆ. ಅದಕ್ಕೆ ತಕ್ಕನಾಗಿ ವರ್ತಿಸುವ ವಿದ್ಯಾರ್ಥಿಗಳು ಸ್ವಂತಿಕೆಯನ್ನು ಕಳೆದು ಕೊಂಡು ಒಂದೋ ಶತಾಯ ಗತಾಯ ಓದಿ ಗುರಿ ತಲುಪುತ್ತಾರೆ, ಇಲ್ಲ ಸಮಾಜ ಕಂಟಕರಾಗಿ ಉಳಿದು ಬಿಡುತ್ತಾರೆ. ಎರಡು ಸಂಧರ್ಭಗಳಲ್ಲಿ ಸೈದ್ದಾಂತಿಕ ನೆಲೆಗಟ್ಟು ಇಲ್ಲದಿರುವುದರಿಂದ ಅಂತಹವರು ಸಮಾಜ ವಿಮುಖಿಗಳಾಗಿ ವರ್ತಿಸುತ್ತಾರೆ. ಕಳೆದ ಎರಡು ದಶಕಗಳ ಹಿಂದೆ ಈಗಿರುವಷ್ಟರ ಮಟ್ಟಿಗೆ ಶಿಕ್ಷಣದ ಖಾಸಗಿಕರಣವಿರಲಿಲ್ಲ, ಹಾಗಾಗಿ ಅಲ್ಲಿ ಗುಣಾತ್ಮಕ ಅಂಶಗಳನ್ನು ಕಾಣಲು ಸಾಧ್ಯವಿತ್ತು. ಅರ್ಹರು ಮಾತ್ರ ಅರ್ಹ ಶಿಕ್ಷಣ ಹೊಂದುವ ಅವಕಾಶವಿತ್ತು. ಬದಲಾದ ಪರಿಸ್ಥಿತಿಯಲ್ಲಿ ಕ್ಯಾಪಿಟೇಶನ್, ಡೊನೇಶನ್ ಹಾವಳಿಯನ್ನು ಮಟ್ಟಹಾಕುವ ನಿಟ್ಟಿನಲ್ಲಿ ಸರ್ಕಾರವೆ ಹತ್ತು ಹಲವು ವೃತ್ತಿ ಶಿಕ್ಷಣ ಕಾಲೇಜುಗಳನ್ನು ತೆರೆದಿದ್ದರೂ ಅದು ಅತ್ಯಂತ ತಡವಾಗಿ ಆಗಿದ್ದರಿಂದ ನಿರಿಕ್ಷಿತ ಫಲವು ಸಿಗದಂತಾಗಿದೆ.
ಶಿಕ್ಷಣದ ಆಗುಹೋಗುಗಳಲ್ಲಿ ಕೇವಲ ಪ್ರಾಜ್ಞರಷ್ಟೆ ಕೂತು ಚರ್ಚಿಸಿದರೆ ಸಾಲದು ಅಲ್ಲಿ, ಪೋಷಕರು, ವಿದ್ಯಾರ್ಥಿಗಳು, ಶಿಕ್ಷಕರ ಪಾಲುದಾರಿಕೆ ಅವಶ್ಯವಿದೆ ಎಂಬ ಸತ್ಯವನ್ನು ಅಧಿಕಾರ ಶಾಹಿಗಳು ತಿಳಿದುಕೊಳ್ಳಬೇಕಿದೆ. ವಿದ್ಯಾರ್ಥಿಗಳು ಅಷ್ಟೇ ಅಧ್ಯಯನದ ಪ್ರಾಮುಖ್ಯತೆ, ಶೈಕ್ಷಣಿಕ ಪರಿಸರದ ವಿವಿಧ ಹಂತಗಳಲ್ಲಿ ತಾವು ಹೇಗೆ ನಡೆದುಕೊಳ್ಳಬೇಕು ಎಂಬ ಬದ್ದತೆಯನ್ನು ಪ್ರದರ್ಶಿಸಬೇಕಿದೆ. ಸಂವೇದನಾಶೀಲ ಮನ:ಸ್ಥಿತಿ ವಿದ್ಯಾರ್ಥಿಗಳಿಗೆ ಪರಿಪೂರ್ಣ ವ್ಯಕ್ತಿತ್ವವನ್ನು ತಂದು ಕೊಡಬಲ್ಲದು. ಬಾಹ್ಯ ಪ್ರಪಂಚಕ್ಕೆ ಅವರು ಪ್ರದರ್ಶಿಸುವ ರೀತಿ-ರಿವಾಜುಗಳು ಸಹಾ ಆರೋಗ್ಯ ಪೂರ್ಣವಾಗಿರಬೇಕಾಗುತ್ತದೆ.
ಕೆಟ್ಟ ಮೇಲೆ ಬುದ್ದಿ ಬಂತು ಎಂಬಂತೆ ಇವತ್ತು ಸರ್ಕಾರ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿದೆ. ಈ ನಿಟ್ಟಿನಲ್ಲಿ ಹತ್ತು ಹಲವು ಯೋಜನೆಗಳು ಜಾರಿಗೆ ಬಂದಿವೆ, ಶಾಲಾ-ಕಾಲೇಜುಗಳು ಸ್ಥಾಪನೆಯಾಗಿದೆ. ಹಲವೆಡೆ ಮೂಲ ಸೌಕರ್ಯಗಳ ಕೊರತೆಯಿದೆ. ಹೆಚ್ಚಿನ ದುಡ್ಡು ತೆತ್ತು ಹೋಗುವ ಶಾಲಾ -ಕಾಲೇಜುಗಳಲ್ಲು ಅಲ್ಲಲ್ಲಿ ಜೊಳ್ಳುತನವಿದೆ. ಆದರೆ ಇವುಗಳ ಬಗೆಗೆ ಪ್ರಶ್ನಿಸುವ ಜಾಗೃತಾವಸ್ಥೇ ಮಾತ್ರ ನಮ್ಮ ಯುವಜನರಲ್ಲಿ ಸತ್ತು ಹೋಗಿದೆ. ಎಲ್ಲರೂ ಸಿದ್ದಪಾಠಗಳ, ಟ್ಯೂಶನ್ ಸಂಸ್ಥೆಗಳ ಮೊರೆ ಹೋಗಿದ್ದಾರೆ. ದೇಶೀಯ ಸಂಸ್ಕ್ರತಿ ಮರೆತು ರಾಕ್-ಪಾಪ್ ಸಂಗೀತ, ಉಡುಪುಗಳು, ಅಭಿರುಚಿಗಳನ್ನು ಬದಲಿಸಿಕೊಂಡಿದ್ದಾರೆ.ಸಾಮಾನ್ಯರು ಸಹಾ ಸ್ವಲ್ಪ ಬುದ್ದಿವಂತಿಕೆಯಿದ್ದರೂ ಆಡಳಿತಸೇವೆಯ ಹುದ್ದೆಗಳಿಗೆ ಹೋಗುವ ಅವಕಾಶವಿದೆ, ಹೀಗಿದ್ದಾಗ್ಯೂ ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಶಿಕ್ಷಣದ ಮೊರೆ ಹೋಗಲಾರಂಬಿಸಿದ್ದಾರೆ. ಪರಿಣಾಮ ಪ್ರತಿಭಾ ಪಲಾಯನ ನಿರಂತರವಾಗಿ ಆಗುತ್ತಿದೆ. ಇಂತಹ ಕ್ರಿಯಿಗಳಿಗೆ ಕಡಿವಾಣ ಬೀಳಬೇಕಿದೆ, ವಿದ್ಯಾರ್ಥಿ ಯುವಜನರನ್ನು ಕಾಲದಿಂದ ಕಾಲಕ್ಕೆ ವಿವಿಧ ವಿಷಯಗಳ ಬಗ್ಗೆ ಜಾಗೃತಿಯ ಅರಿವಿನಲ್ಲಿ ಇರಿಸಲು ವಿದ್ಯಾರ್ಥಿ ಸಂಘಗಳು ಬೇಕಿವೆ. ಉತ್ತಮ ಸಿದ್ದಾಂತ ಬದ್ಧತೆ ಇರಿಸಿಕೊಂಡ ಶಿಕ್ಷಕರು ಈ ನಿಟ್ಟಿನಲ್ಲಿ ಪ್ರಯತ್ನ ಮಾಡಬೇಕಿದೆ. ನಮ್ಮ ದೇಶದಲ್ಲಿ 35ಕ್ಕೂ ಹೆಚ್ಚು ವಿದ್ಯಾರ್ಥಿ ಸಂಘಟನೆಗಳಿವೆ, ಅವುಗಳಲ್ಲಿ ಬಹುತೇಕವು ರಾಜಕೀಯ ಪಕ್ಷಗಳ ಅಂಗ ಸಂಸ್ಥೆಗಳು. ಕಾಲಾನು ಕಾಲಕ್ಕತಮ್ಮ ಬೇಳೆ ಬೇಯಿಸಿಕೊಳ್ಳಲು ವಿದ್ಯಾರ್ಥಿ ಶಕ್ತಿಗಳನ್ನು ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುವಂತಹ ಛಾತಿ ಇರುವಂತಹವು. ಇಂತಹದ್ದರಿಂದ ಹೊರತಾಗಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನಂತಹ ಸಂಘಟನೆ ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಪೂರಕವಾದಂತಹ ಅನೇಕ ವಿಚಾರಗಳನ್ನು ಇಟ್ಟುಕೊಂಡಿದೆ. 1948ರಲ್ಲಿ ಬಾಂಬೆಯ ಕಾಲೇಜೊಂದರ ಉಪನ್ಯಾಸಕ ಯಶವಂತರಾವ್ ಕೇಳ್ಕರ್ ಎಬಿವಿಪಿ ಸಂಘಟನೆಯನ್ನು ಆರಂಭಿಸಿದರು. 1949ರಲ್ಲಿ ಅಧಿಕೃತವಾಗಿ ಅದು ರಾಷ್ಟ್ರದ ಎಲ್ಲೆಡೆಯೂ ಕಾರ್ಯಾರಂಬಿಸಿತು. ವ್ಯಕ್ತಿತ್ವ ವಿಕಸನ, ಸಂಸ್ಕೃತಿ ಪರಿಚಯ, ವಿನಿಮಯ, ರಾಷ್ಟ್ರೀಯ ವಿಚಾರಗಳ ಅರಿವು, ಮೂಲಭೂತ ಸೌಕರ್ಯಗಳಿಗಾಗಿ ಚಳುವಳಿಯನ್ನು ಅದು ರೂಪಿಸಿತು. ಇದೇ ದಾರಿಯಲ್ಲಿ ಅಸ್ಸಾಂ ಗಣ ಪರಿಷತ್, ಸೋಷಲಿಷ್ಟ್ ಪಕ್ಷಗಳ ವಿದ್ಯಾರ್ಥಿ ಸಂಘಟನೆಗಳು ಕಾರ್ಯಾರಂಬಿಸಿದವು. ಆದರೆ ಇತ್ತೀಚಿನ ವರ್ಷಗಳಲ್ಲಿ ಅವುಗಳ ಚಟುವಟಿಕೆ ತೀವ್ರತೆ ಪಡೆದುಕೊಂಡಿಲ್ಲ. ಸಧ್ಯದ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳ ಜಾಗೃತಾವಸ್ಥೆಗೆ, ವಿದ್ಯಾರ್ಥಿ ಶಕ್ತಿಗೆ ಧ್ವನಿಯಾಗಲು ವಿದ್ಯಾರ್ಥಿ ಸಂಘಟನೆಗಳು ವೇದಿಕೆ ರೂಪಿಸಬೇಕಿದೆ.

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...