
- ಟಿ ಎನ್ ಸೀತಾರಾಮ್, ನಿರ್ದೇಶಕರು
ಪ್ರಸಕ್ತ ಸಂಧರ್ಭದಲ್ಲಿ ಭಾರತದಲ್ಲಿ ನೂರಾರು ಟಿವಿ ಚಾನಲ್ ಗಳು ಕಾರ್ಯ ನಿರ್ವಹಿಸುತ್ತಿವೆ, ಇವುಗಳಲ್ಲಿ ವಿಚಾರ-ಮಂಥನ, ಸುದ್ದಿ, ದಾರವಾಹಿ, ಸಿನಿಮಾ ಆಧಾರಿತ ಕಾರ್ಯಕ್ರಮಗಳು, ಹಾಡುಗಳು, ಸಿನಿಮಾಗಳು, ಪ್ರವಾಸ, ಅಡುಗೆ, ಕ್ರೈಂ ಸ್ಟೋರಿ, ಕ್ರೈಂ ಡೈರಿ ಹೀಗೆ ನಾನಾ ರೀತಿಯ ವಗ್ಗರಣೆಯನ್ನು ಮನೆಮನೆಗೆ ತಲುಪಿಸುತ್ತಿವೆ. ಈ ನಡುವೆ ಹಾಡು, ನೃತ್ಯ ದ ಸ್ಫರ್ಧೆಗಳು ರಿಯಾಲಿಟಿ ಶೋ ಹೆಸರಿನಲ್ಲಿ ಬರುತ್ತಿವೆ. ಆದರೆ ಇದು ಎಷ್ಟರ ಮಟ್ಟಿಗೆ ಅತಿಯಾಗುತ್ತಿದೆ ಎಂದರೆ ದೇಶದ ಜನರ ಭಾವನೆಗಳಿಗೆ, ಸಂಸ್ಕೃತಿಗೆ ಧಕ್ಕೆ ಉಂಟು ಮಾಡುವಷ್ಟರ ಮಟ್ಟಿಗೆ ಬೃಹತ್ತಾಗಿ ಬೆಳೆಯುತ್ತಿದೆ.1993-94 ರಸುಮಾರಿಗೆ ಬೆರಳೇಣಿಕೆಯ ಸಂಖ್ಯೆಯಲ್ಲಿದ್ದ ಟಿವಿ ಚಾನಲ್ ಗಳು ಈಗ ಸಾವಿರದ ಸಂಖ್ಯೆಯ ಹತ್ತಿರಕ್ಕೆ ಬೆಳೆದು ನಿಂತಿದೆ. ಕೇವಲ 200ಕೋಟಿ ಯಷ್ಟು ಬಂಡವಾಳ ಹೂಡುವ ಯಾವುದೇ ವ್ಯಕ್ತಿ ತನಗೆ ಬೇಕಾದ ಟಿವಿ ಚಾನಲ್ ಶುರು ಮಾಡಬಹುದು. ಪರಿಣಾಮ ತಮಿಳುನಾಡಿನಲ್ಲಿ, ಆಂದ್ರಪ್ರದೇಶಗಳಲ್ಲಿ ಒಂದೊಂದು ಪಕ್ಷದ ರಾಜಕಾರಣಿಗೆ, ಬಂಡವಾಳ ಶಾಹಿಗೆ ತನ್ನದೇ ಆದ ಟಿವಿ ಚಾನಲ್ ಗಳಿವೆ.ಮತ ಪ್ರಚಾರ, ಧಾರ್ಮಿಕ ಸಂಘಟನೆಗಳು ಸಹಾ ತಮ್ಮದೇ ಚಾನಲ್ ಹೊಂದುವಷ್ಟರ ಮಟ್ಟಿಗೆ ಬೆಳೆದು ಬಿಟ್ಟಿವೆ. ಇಂತಹ ಚಾನಲ್ ಗಳಲ್ಲಿ ವಿದೇಶಿ ಸಂಸ್ಕೃತಿ, ವಿದೇಶಿ ದಿನಬಳಕೆ ಉತ್ಪನ್ನಗಳು, ಎಂಎನ್ಸಿ ಕಂಪನಿಗಳ ಜಾಹೀರಾತು ನಮ್ಮ ಮನೆಯಂಗಳಕ್ಕೆ ಬರುತ್ತಿದೆ ಮತ್ತು ಆ ಮೂಲಕ ನಮ್ಮ ದೇಶಿತನವನ್ನು ಹಂತಹಂತವಾಗಿ ಕೊಂದಿದೆ! ಇಂಥಹದ್ದಕ್ಕೆಲ್ಲ ಅವಕಾಶ ಮಾಡಿಕೊಟ್ಟಿದ್ದು ಒನ್ಸ್ ಎಗೈನ್ ಮತ್ತದೇ ಜಾಗತೀಕರಣ.
ಇರಲಿ ನಾನೀಗ ಪ್ರಸ್ತಾಪಿಸ ಹೊರಟಿದ್ದು ಟಿವಿ ಉದ್ಯಮದ ಬೆಳವಣಿಗೆಯ ಬಗ್ಗೆಯಲ್ಲ, ಆದರೆ ಉದ್ಯಮ ಬೆಳೆಸುವ ನಿಟ್ಟಿನಲ್ಲಿ ಅನುಸರಿಸುತ್ತಿರುವ ವಿಧಾನಗಳ ಬಗ್ಗೆ. ಬಹುಶ: ನೀವೆಲ್ಲ ನೋಡಿರಬಹುದು ಸ್ಟಾರ್ ಪ್ಲಸ್ ಎಂಬ ಛಾನಲ್ ಪ್ರತೀ ದಿನ ರಾತ್ರಿ 10ಗಂಟೆಗೆ ಸಚ್ ಕಾ ಸಾಮ್ ನಾ ಎಂಬ ಕಾರ್ಯಕ್ರಮವನ್ನು ಪ್ರಸಾರ ಮಾಡುತ್ತಿದೆ. ಇದು ಸಾರ್ವಜನಿಕ ಜೀವನದಲ್ಲಿ ಇರುವ ಪ್ರಮುಖ ವ್ಯಕ್ತಿಗಳು, ನಾಗರಿಕರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುತ್ತದೆ. ಮೊದಲಿಗೆ ಅವರನ್ನು ಪಾಲಿಗ್ರಫಿ ಪರೀಕ್ಷೆಗೆ ಒಳಪಡಿಸಿ ಅವರ ಸಾರ್ವಜನಿಕ ಬದುಕು, ವೈಯುಕ್ತಿಕ ಬದುಕಿನ ಬಗೆಗೆ ಪ್ರಶ್ನೆಗಳನ್ನು ಕೇಳಲಾಗುತ್ತದೆ. ನಂತರ ಅವರ ಪ್ರೀತಿ ಪಾತ್ರರು ಮತ್ತು ಕುಟುಂಬವರ್ಗದವರನ್ನು ಸ್ಟುಡಿಯೋ ಸೆಟ್ಗೆ ಆಹ್ವಾನಿಸಲಾಗುತ್ತಿದೆ. ಪಾಲಿಗ್ರಪಿ ಪರೀಕ್ಷೆಗೆ ಒಳಪಟ್ಟ ವ್ಯಕ್ತಿಯನ್ನು ಹಾಟ್ ಸೀಟ್ ನಲ್ಲಿ ಕೂರಿಸಿ ಪಾಲಿಗ್ರಫಿ ಪರೀಕ್ಷೆ ವೇಳೆ ಕೇಳಿದ ಪ್ರಶ್ನೆಗಳನ್ನೇ 6ಹಂತಗಳಲ್ಲಿ ಕೇಳಲಾಗುತ್ತದೆ. ಮೊದಲ ಹಂತದಲ್ಲಿ 1ಲಕ್ಷದಿಂದ ಆರಂಭವಾಗುವ ಸ್ಫರ್ಧೆ ಅಂತಿಮ ಹಂತ ತಲುಪುವ ವೇಳೆಗೆ 1ಕೋಟಿ ಇರುತ್ತದೆ. ಕಾರ್ಯಕ್ರಮದಲ್ಲಿ ಕೇಳುವ ಪ್ರಶ್ನೆಗಳಿಗೆ ಅಭ್ಯರ್ಥಿ ಉತ್ತರ ನೀಡುತ್ತಾ ಹೋದಂತೆ, ಅದೇ ಪ್ರಶ್ನೆಗಳಿಗೆ ಪಾಲಿಗ್ರಫಿ ಪರೀಕ್ಷೆ ವೇಳೆ ನೀಡಿದ ಉತ್ತರಗಳ ಜೊತೆ ಹೋಲಿಸಿ ನೋಡಲಾಗುತ್ತದೆ. ಎರಡು ತಾಳೆಯಾದರೆ ಆತ ಮುಂದಿನ ಹಂತಕ್ಕೆ ಪಾಸಾಗುತ್ತಾನೆ ಮತ್ತು ಲಕ್ಷಗಳಲ್ಲಿ ಹಣ ಗಳಿಸುತ್ತಾನೆ. ಉತ್ತರ ತಾಳೆಯಾಗದಿದ್ದರೆ ಕಾರ್ಯಕ್ರಮದಿಂದ ಹೊರಗುಳಿಯುತ್ತಾನೆ ಅಷ್ಟೇ ಅಲ್ಲ ತನ್ನ ಮಾನ ಮರ್ಯಾದೆಯನ್ನು ಕೋಟ್ಯಾಂತರ ವೀಕ್ಷಕರೆದುರು ಮತ್ತು ತನ್ನ ಪ್ರೀತಿ ಪಾತ್ರ ಕುಟುಂಬದವರ ಮುಂದೆ ಹರಾಜು ಹಾಕಿಕೊಂಡು ಮಾನಸಿಕ ವೇದನೆ ಅನುಭವಿಸುತ್ತಾನೆ..! ಕಾರಣ ಇಷ್ಟೇ ಆತನಿಗೆ ಕೇಳಲ್ಪಡುವ ಎಲ್ಲ ಪ್ರಶ್ನೆಗಳು ಆತನ ವೈಯುಕ್ತಿಕ ಮತ್ತು ಸಾರ್ವಜನಿಕ ಬದುಕಿನ ಕುರಿತಾದ ಪ್ರಶ್ನೆಗಳು, ಅದರಲ್ಲೂ ಆತನ/ಆಕೆಯ ಲೈಂಗಿಕ ಬದುಕಿನ ಪ್ರಶ್ನೆ.
ಉದಾಹರಣೆಗೆ : ಕಂಪೆನಿಯೊಂದರ ಬಾಸ್ಸ್ಗೆ ದೃಶ್ಯ-1
ಪ್ರ: ನಿಮ್ಮ ಕಂಪೆನಿಯಲ್ಲಿ ಯಾವ ಯಾವ ವಯೋಮಾನದವರು ಕೆಲಸ ನಿರ್ವಹಿಸುತ್ತಾರೆ?
ಉ:ಹೆ.. ಹೆ... ಹೆ.. ಹಾಗೆನಿಲ್ಲ ಯುವಕ-ಯುವತಿಯರು ಮಹಿಳೆಯರು ಎಲ್ಲ ವಯೋಮಾನದವರು ಕೆಲಸ ನಿರ್ವಹಿಸುತ್ತಾರೆ.
ಪ್ರ: ಓಕೆ ನೀವು ನಿಮ್ಮ ಕಂಪನಿಯಲ್ಲಿ ಕೆಲಸ ಮಾಡುವ ಯಾವುದಾದರಂದು ಯುವತಿಯೊಂದಿಗೆ ಲೈಂಗಿಕ ಸಂಪರ್ಕ ಇಟ್ಟು ಕೊಂಡಿದ್ದೀರ ?
ಉ: ಇಲ್ಲ.. ಆಗ ಪಾಲಿಗ್ರಪಿ ಪರೀಕ್ಷೆಯ ಫಲಿತಾಂಶವನ್ನು ನೋಡಲಾಗುತ್ತದೆ "ಅವರು ಸುಳ್ಳು ಹೇಳುತ್ತಿದ್ದಾರೆ" ಎಂಬುದನ್ನು ಸತ್ಯ/ಸುಳ್ಳು ಎಂದು ತೋರಿಸುತ್ತದೆ.
ದೃಶ್ಯ-೨
ಆಕೆ ಸಾರ್ವಜನಿಕ ಜೀವನದ ಪ್ರಮುಖ ವ್ಯಕ್ತಿ ಮತ್ತು ನವವಿವಾಹಿತೆ
ಪ್ರ: ನೀವು ವಿವಾಹ ಪೂರ್ವ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದೀರ?
ಉ: ಇಲ್ಲ... ಪಾಲಿಗ್ರಫಿ ಪರೀಕ್ಷೆ : ಇಲ್ಲ ಸುಳ್ಳು ಹೇಳುತ್ತಿದ್ದಾರೆ, ಆಕೆ ವಿವಾಹ ಪೂರ್ವ ಲೈಂಗಿಕ ಕ್ರಿಯೆ ನಡೆಸಿ ಒಂದು ಮಗು ಅಬಾರ್ಷನ್ ಆಗಿದೆ.
ಅಲ್ಲಿಗೆ ಆಕೆಯ ವೈವಾಹಿಕ ಜೀವನದ ಬದುಕು ಮುಗಿಯಿತು. ಇದು ಉತ್ತರ ಪ್ರದೇಶದಲ್ಲಿ ಬಾರಿ ಕೋಲಾಹಲವೆಬ್ಬಿಸಿತು. ಜುಲೈ 29ರಂದು ಸಂಸತ್ ನಲ್ಲೂ ಈ ವಿಚಾರ ಚರ್ಚೆಗೆ ಬಂತು ಸಚ್ ಕಾ ಸಾಮ್ ನಾ ಕಾರ್ಯಕ್ರಮ ರದ್ದು ಪಡಿಸಿ ಎಂದು ಸಂಸದರು ಆಗ್ರಹಿಸಿದರು. ಈಗ ನಾವು ಯೋಚನೆ ಮಾಡಬೇಕಾದ್ದು ಇಷ್ಟೇ ಅಗ್ಗದ ಜನಪ್ರಿಯತೆಗೆ, ದುಡ್ಡು ಮಾಡುವ ತವಕಕ್ಕೆ ಇಂಥಹ ಕಾರ್ಯಕ್ರಮಗಳು ಬೇಕಾ? ಟಿ ಆರ್ ಪಿ ಒಂದನ್ನೇ ಮಾನದಂಡವಾಗಿ ಇಟ್ಟುಕೊಂಡು ನಮ್ಮ ಚಾನಲ್ ಗಳು ಸಚ್ ಕಾ ಸಾಮ್ನಾ ದಂತಹ ಅಭಿರುಚಿ ಹೀನ ಕಾರ್ಯಕ್ರಮಗಳನ್ನು ಮಾಡಿದರೆ ಅದು ನಮ್ಮ ಸಂಸ್ಕೃತಿ ಉಳಿದೀತೆ? ಇನ್ನು ಕನ್ನಡದಲ್ಲಿ ಜೀ ಕನ್ನಡದವರು ಬದುಕು ಜಟಕಾ ಬಂಡಿ ಕಾರ್ಯಕ್ರಮ, ಸುವರ್ಣ ದವರು ಕಥೆ ಅಲ್ಲ ಜೀವನ ದಂತಹ ಕಾರ್ಯಕ್ರಮಗಳನ್ನು ಪ್ರಾಯೋಜಿಸುತ್ತಿವೆ. ಇಂತಹ ಕಾರ್ಯಕ್ರಮಗಳಿಂದ ಪ್ರಯೋಜನವೇನು? ಜನರ ಖಾಸಗಿ ಬದುಕಿನ ತಲ್ಲಣಗಳನ್ನು, ಸಾರ್ವಜನಿಕ ಅವಗಾಹನೆಗೆ ಬರಬಾರದಂತಹ ವಿಚಾರಗಳನ್ನು ಇಂತಹ ಕಾರ್ಯಕ್ರಮಗಳಲ್ಲಿ ಪ್ರಸ್ತುತ ಪಡಿಸುವುದರಿಂದ ಜನರ ಖಾಸಗಿ ಬದುಕು ಬಯಲಿಗೆ ಬಂದು ಬದುಕು ಮೂರಾಬಟ್ಟೆಯಾಗುವುದಿಲ್ಲವೇ ? ಇವರಿಗೆ ಯಾವ ಸಾಮಾಜಿಕ ಕಳಕಳಿಯಿದೆ? ಕೆಲ ವರ್ಷಗಳ ಹಿಂದೆ ಕ್ರೈಂ ಡೈರಿ/ ಸ್ಟೋರಿ ಪ್ರಸಾರವಾಗುತ್ತಿದ್ದಾಗಲು ಇಂಥಹ ಪ್ರಶ್ನೆಗಳಿದ್ದವು. ಒಬ್ಬ ವ್ಯಕ್ತಿ ಆರೋಪಿ ಎಂದು ಕೋರ್ಟ್ ಗಳು ಡಸೈಡ್ ಮಾಡುವ ಮುಂಚೆಯೇ ಚಾನಲ್ ಗಳು ಆರೋಪಿಗಳನ್ನಾಗಿ ಮಾಡಿಬಿಡುತ್ತಿದ್ದವು, ಮಾನಸಿಕವಾಗಿ ಜರ್ಝರಿತರಾಗುವಂತೆ ಮಾಡುತ್ತಿದ್ದವು. ಅಂತಹುದೇ ಪರಿಸ್ಥಿತಿ ಸ್ಟಾರ್ ಪ್ಲಸ್ ನ ಸಚ್ ಕಾ ಸಾಮ್ನಾಕಾರ್ಯಕ್ರಮದಲ್ಲಿ ಆಗುತ್ತಿದೆ. ವಿದೇಶದಲ್ಲಿ ಹಳಸಲಾಗಿರುವ ಈ ಕಾರ್ಯಕ್ರಮ ಈಗ ನಮ್ಮ ಮನೆಯಂಗಳಕ್ಕೆ ಬಂದಿದೆ. ಹಿಂದೆ ಬಿಗ್ ಬ್ರದರ್ ರಿಯಾಲಿಟಿ ಶೋ ನಲ್ಲಿ ಜನಾಂಗೀಯ ಅವಹೇಳನವಾಗಿತ್ತು, ಮತ್ತೊಂದು ಕಾರ್ಯಕ್ರಮದಲ್ಲಿ ಮದುವೆಯಾಗುವ ಗಂಡು - ಹೆಣ್ಣುಗಳನ್ನು ಹುಡುಕಿಕೊಳ್ಳುವ ಕಾರ್ಯಕ್ರಮ, ಜೀ ಟಿವಿಯಲ್ಲಿ ಪ್ರಸಾರವಾಗುವ ಡ್ಯಾಡಿ ನಂ.1ರಲ್ಲಿ ಅಪ್ಪಂದಿರು ಪ್ರಶಸ್ತಿ ಗೆಲ್ಲಲು ಕೋಡಂಗಿಗಳಂತೆ ಆಟವಾಡುವ ಕಾರ್ಯಕ್ರಮ ಥೂ.. ಇವೆಲ್ಲ ಬೇಕಾ? ಟಿವಿ ಕಾರ್ಯಕ್ರಮಗಳಿಗೆ ಒಂದು ಮಾರ್ಗಸೂಚಿ ಬೇಕೇ ಬೇಕು. ಎಲ್ಲ ಕಾರ್ಯಕ್ರಮ ನಿರ್ಮಾಪಕರು, ನಿರ್ದೇಶಕರು ಮತ್ತು ಚಾನಲ್ ಧಣಿಗಳು ಟಿ ಎನ್ ಸೀತಾರಾಂ ರಂತೆ ಯೋಚಿಸಿದ್ದರೆ ಎಷ್ಟು ಚೆನ್ನ ಅಲ್ವಾ? ನೀವೇನಂತೀರಿ..?
No comments:
Post a Comment