Friday, October 2, 2009

ನಮ್ಮ "ಶಂಕರ"ನ ನೆನಪು.. ರಂಗನಮನ,ಸಿನಿಮಾ ಇತ್ಯಾದಿ



ಫೋಟೋಗಳು ವಿಸ್ಮಯ ಶಿವೂ




ಶಂಕರ್ ನಾಗ್ ಜೀವಿತದ ಅಲ್ಪ ಕಾಲದಲ್ಲಿಯೇ ಊಹೆಗೂ ನಿಲುಕದ ಮಹತ್ಸಾಧನೆಯನ್ನು ಮಾಡಿದ ಸಾಧಕ,ಸಾಹಸಿ ಮತ್ತು ಕ್ರಿಯಾಶೀಲ. ಚಲನ ಚಿತ್ರ, ನಾಟಕ ಮತ್ತಿತರ ವಿಭಾಗಗಳಲ್ಲಿ ತಾನು ಕಂಡ ಕನಸುಗಳನ್ನು ನಿಜವಾಗಿಸುವೆಡೆಗೆ ತುಡಿತವಿರಿಸಿಕೊಂಡಿದ್ದ ಶಂಕರ್ ಒಂದು ಪ್ರಬುದ್ದ ಮನಸ್ಥಿತಿಯ ವ್ಯಕ್ತಿತ್ವ. ತಾನೂ ಎತ್ತರಕ್ಕೆ ಬೆಳೆಯುವ ಜೊತೆಗೆ ತನ್ನೊಂದಿಗೆ ದುಡಿಯುವ ಒಬ್ಬ ಸಾಮಾನ್ಯನನ್ನು ಸಹಾ ಅತ್ಯಂತ ಗೌರವದಿಂದ ಕಾಣುತ್ತಿದ್ದ ಶಂಕರ್ ನಾಗ್ , ಅವರನ್ನು ತನ್ನ ಜೊತೆಗೆ ಬೆಳೆಸುತ್ತಿದ್ದ! ಬಹುಶ: ಶಂಕರ್ ನಾಗ್ ಒಬ್ಬ ಕ್ರಿಯಾಶೀಲ ನಿರ್ದೇಶಕನಾಗಿ ನಟನಾಗಿ ಮಾತ್ರ ನಮ್ಮ ಬಹುತೇಕ ಜನರಿಗೆ ಗೊತ್ತೇ ವಿನಹ ಆತ ಸಮಾಜದ ಅಭಿವೃದ್ದಿಗೆ ಚಿಂತಿಸುತ್ತಿದ್ದುದು, ಮತ್ತು ನಾವು ಈಗ ಕಾಣುತ್ತಿರುವ ಕನಸನ್ನು ಅವರು ಬಹಳ ಹಿಂದೆಯೇ ಸಾಕಾರ ಗೊಳಿಸಲು ಯತ್ನಿಸಿದ್ದರು ಮತ್ತು ಆ ಮೂಲಕ ಸಮಾಜಕ್ಕೆ ತನ್ನದೇ ಆದ ಕೊಡುಗೆಯನ್ನು ಅವರು ನೀಡಿದ್ದರು ಎಂಬು ಬಹುತೇಕ ಮಂದಿಗೆ ತಿಳಿದಿರಲಾರದು. ಶಂಕರ್ ವಿಧಿವಶರಾಗಿದ್ದು 35ನೇ ವಯಸ್ಸಿನಲ್ಲಿ, ಇಂದಿಗೆ ಅವರು ಗತಿಸಿ 19ವರ್ಷ 10ತಿಂಗಳು 21ದಿನಗಳು ಸಂದಿವೆ.
ವಿಧಿಯೇ ಹಾಗೇ ಒಳ್ಳೆಯವರನ್ನು, ಸಾಧಕರನ್ನು ಇನ್ನೂ ಬದುಕಿರಬೇಕಿತ್ತು ಎಂದು ಕೊಳ್ಳುವಾಗಲೇ ಕರೆದುಕೊಂಡು ಹೋಗಿ ಬಿಡುತ್ತದೆ. ಶಂಕರ್ ಸಹಾ ಹಾಗೇಯೇ 'ಒಂದಾನೊಂದು ಕಾಲದಲ್ಲಿ' ಬಂದು 'ಮಿಂಚಿನ ಓಟ' ಗಾರನಾಗಿ 'ಆಕ್ಸಿಡೆಂಟ್ 'ಮೂಲಕ ಅಂತರ ರಾಷ್ಟ್ರೀಯ ಮನ್ನಣೆಗೆ ಪಾತ್ರರಾಗಿ 'ಸುಂದರ ಕಾಂಡ' ಬರೆದು 'ನಿಗೂಡ ರಹಸ್ಯ' ಲೋಕಕ್ಕೆ ಹೊರಟು ಹೋದರು. ಶಂಕರ್ ನಾಗ್ ಬಗ್ಗೆ ಯಾಕೆ ಇಷ್ಟೆಲ್ಲಾ ಬರೆಯಬೇಕು? ಅವರೇನು ಸಮಾಜ ಸುಧಾರಕರೇ? ಯ:ಕಶ್ಚಿತ್ ಒಬ್ಬ ನಟ ನಿರ್ದೇಶಕ-ನಟ ಅಷ್ಟೇ ಎಂದು ಮೂಗೆಳೆಯುವವರು ಉಂಟು. ಹೌದಲ್ವಾ ಯಾಕೆ ಶಂಕರ್ ನಾಗ್ ನೆನಪಾಗ ಬೇಕು ? ಇಂತಹದ್ದೊಂದು ಪ್ರಶ್ನೆ ಎದುರಾಗಿದ್ದು ಸಮಾನ ಮನಸ್ಕ ಗೆಳೆಯರೆಲ್ಲ ಸೇರಿ ಹಾಸನ ಜಿಲ್ಲೆಯ ಅರಕಲಗೂಡಿನಲ್ಲಿ "ಶಂಕರನ ನೆನಪು..." ಕಾರ್ಯಕ್ರಮ ಮಾಡಲು ಹೊರಟಾಗ.
ಮೊದಲಿಗೆ ಹೇಳಿ ಬಿಡ್ತೀನಿ ಅಸಲಿಗೆ ನಾವು ಶಂಕರ್ ನಾಗ್ ಅಭಿಮಾನಿ ಸಂಘದವರಲ್ಲ.., ಆದರೆ ಶಂಕರ್ ಅಲ್ಪ ಕಾಲದಲ್ಲಿ ಬಿಟ್ಟು ಹೋದ ತಾನೇ ಸೃಜಿಸಿದ ರಂಗ ಪರಂಪರೆಯನ್ನು,ಹೊಸ ದಿಕ್ಕಿನಲ್ಲಿ ಯೋಚಿಸುವ ಚಿತ್ರಗಳನ್ನಅತ್ಯಂತ ಆಧುನಿಕವಾದ ಅಭಿವೃದ್ದಿ ಚಿಂತನೆಯ ಪ್ರಯತ್ನಗಳನ್ನು ಬಲ್ಲವರು. ಹಾಗಾಗಿಯೇ ಶಂಕರನ ನೆನಪು ಜೊತೆಗೆ ಒಂದು ಸಾಂಸ್ಕೃತಿಕ ಪರಂಪರೆಯನ್ನು ಮುಂದುವರೆಸುವ ಪ್ರಯತ್ನವಷ್ಟೇ ಆಗಿತ್ತು. ಇದಕ್ಕೆ ಕಾರಣಗಳು ಇಲ್ಲದಿಲ್ಲ, ನಮ್ಮೂರಿನಲ್ಲಿ ರಾಜಕೀಯ ಹಾಸಿ ಹೋದ್ದು ಮಲಗುವಂತಹ ಸ್ಥಿತಿ ಇದೆ. ಯಾವುದೇ ಕಾರ್ಯಕ್ರಮಕ್ಕೆ ರಾಜಕೀಯ ಥಳುಕು ಹಾಕಿ ಕೊಂಡಿರುತ್ತದೆ. ಇಂತಹ ವಾತಾವರಣದಿಂದ ಹೊರತಾದ ಕಾರ್ಯಕ್ರಮ ಮಾಡುವುದಷ್ಟೇ ಗುರಿಯಾಗಿತ್ತು. ಇರಲಿ ಇಲ್ಲಿ ವಿಷಯ ಅದಲ್ಲ. ಕಳೆದ ಒಂದು ವರ್ಷದ ಹಿಂದೆ ನಮ್ಮ ಪತ್ರಿಕೆಯ ಸಂಪಾದಕರಾದ ಆರ್ ಪಿ ವಿ ಯವರಿಗೆ ಶ್ರೇಷ್ಠ ಪತ್ರಕರ್ತ ಪ್ರಶಸ್ತಿ ಬಂದಾಗ ಝಿ ಕನ್ನಡದ ಮುಖ್ಯ ಛಾಯಾಗ್ರಾಹಕ ರಾಮ್ ಕಿ ಎಂಬುವವರ ಪರಿಚಯವಾಗಿತ್ತು, ಆತ ಶಂಕರ್ ನಾಗ್ ಶಿಷ್ಯ ರಂತೆ. ಮಂಡ್ಯ ಜಿಲ್ಲೆಯವರಾದ ರಾಮಕ್ರಿಷ್ಣ ಪದವಿ ಮುಗಿಸಿ ನಿರುದ್ಯೋಗಿ ಯಾಗಿದ್ದ ದಿನಗಳಲ್ಲಿ ರಂಗ ತಾಲೀಮು ನೋಡಲು ಹೋಗುತ್ತಿದ್ದರಂತೆ. ಅಂತಹ ದಿನಗಳಲ್ಲಿ ಈತನ ಆಸಕ್ತಿಯನ್ನು ಗುರುತಿಸಿದ ಶಂಕರ್ ನಾಗ್ ಆತನ ಹೆಗಲ ಮೇಲೆ ಕೈ ಇರಿಸಿ "ಬಾ ಗೆಳೆಯ ನಮ್ಮ ತುತ್ತಿನಲ್ಲಿ ನಿನಗೂ ಒಂದು ತುತ್ತಿದೆ" ಎಂದರಲ್ಲದೇ ನಾಟಕದ ಎಲ್ಲ ವಿಭಾಗಗಳಲ್ಲೂ ಆತನನ್ನು ಯಶಸ್ವಿಯಾಗಿ ಬೆಳೆಸಿದರಂತೆ. ಹಾಗೆಯೇ ರಾಮಕ್ರಷ್ಟ , ಶಂಕರ್ ನಾಗ್ ರ ಸಹಚರ್ಯದಿಂದ ಅವರ ಬಾಯಲ್ಲೇ ರಾಮ್ ಕಿ ಯಾದರಂತೆ ಇಷ್ಟು ಹೇಳಿ ಕಣ್ಣೀರಾದರು. ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎಂಬ ಧೋರಣೆ ಬೆಳೆಸಿಕೊಂಡಿದ್ದ ಶಂಕರ್ ನಾಗ್ ಮರಾಠಿ ರಂಗಭೂಮಿಯ ಮೂಲಕ ಬೆಳಕಿಗೆ ಬಂದರಾದರೂ ಅಪ್ರತಿಮ ಸಾಧನೆಗೈದಿದ್ದು ಎತ್ತರಕ್ಕೆ ಬೆಳೆದು ನಿಂತದ್ದು ಮಾತ್ರ ಕನ್ನಡದಲ್ಲಿ. ತನ್ನದೇ ಆದ ಸಂಕೇತ್ ತಂಡ ಕಟ್ಟಿದ ಶಂಕರ್ ಕನ್ನಡ ನಾಟಕ ಪರಂಪರೆಯನ್ನು ಬೆಳೆಸಿದ ರೀತಿ ಎಂತಹವರು ಹುಬ್ಬೇರಿಸುವಂತಹದ್ದು. ಕನ್ನಡದ ನಾಟಕಗಳನ್ನು ಸಪ್ತ ಸಾಗರದಾಚೆಗೂ ತೆಗೆದುಕೊಂಡು ಹೋದ ಶಂಕರ್ ೭-8ರಾಷ್ಟ್ರಗಳಲ್ಲಿ ನಾಟಕಗಳ ಪ್ರದರ್ಶನ ನೀಡಿದ್ದರು. ಸ್ವಾಭಿಮಾನದ ಪ್ರತೀಕದಂತಿದ್ದ ಶಂಕರ್ ನಾಗ್ ನಮ್ಮವರು ಚಲನ ಚಿತ್ರದ ಧ್ವನಿ ಗ್ರಹಣಕ್ಕಾಗಿ ತಮಿಳುನಾಡಿಗೆ ಹೋಗುತ್ತಿದ್ದಂತಹ ದಿನಗಳಲ್ಲಿ ನಮ್ಮದೇ ಆದ ಧ್ವನಿಗ್ರಹಣ ಕೇಂದ್ರವನ್ನು ಮೊದಲಿಗೆ ಆರಂಭಿಸಿದರು. ನಮಗೆ ಸಂಪೂರ್ಣ ಅಪರಿಚಿತವಾಗಿದ್ದ ರೆಸಾರ್ಟ್ ಮಾದರಿಗಳನ್ನು ವಿದೇಶಗಳಲ್ಲಿ ಸುತ್ತಿ ಬಂದಿದ್ದ ಶಂಕರ್ ಕೋಟ್ಯಾಂತರ ರೂಪಾಯಿ ಸಾಲ ಮಾಡಿ ಇಡೀ ಭಾರತ ದೇಶದಲ್ಲಿಯೇ ಅಪರೂಪವೆನಿಸುವಂತಹ ಮತ್ತು ಮೊದಲ ಕಂಟ್ರಿಕ್ಲಬ್ ನಿರ್ಮಾಣಕ್ಕೆ ಮುಂದಾದರು. ಅಲ್ಲಿ ರಂಗ ಚಟುವಟಿಕೆ, ಸಿನಿಮಾ, ವಸತಿ, ಹೋಟೆಲ್, ಕಾರ್ಯಕ್ರಮ ಸಭಾಂಗಣ, ಹಳ್ಳಿ ಮಾದರಿಯ ಮನೆಗಳು ಮತ್ತು ಈಜುಕೊಳ ಹೀಗೆ ಎಲ್ಲವನ್ನು ಸೃಜಿಸಿದರು.ನಂದಿ ಬೆಟ್ಟಕ್ಕೆ ರೋಪ್ ವೇ ಹಾಕುವ ಯೋಜನೆಯನ್ನು ಸಿದ್ದಪಡಿಸಿ ಸರ್ಕಾರಕ್ಕೆ ಸಲ್ಲಿಸಿದ್ದರು. ಸಮಾಜದಲ್ಲಿನ ಬಡವರಿಗೆ ಅತ್ಯಂತ ಕಡಿಮ ವೆಚ್ಚದಲ್ಲಿ ಮನೆ ನಿರ್ಮಿಸಿಕೊಡುವ ಹಾಲೆಂಡ್ ದೇಶದ ತಂತ್ರಜ್ಙಾನವನ್ನು ಭಾರತಕ್ಕೆ ತರುವ ಮಹತ್ವದ ಕನಸು ಕಂಡಿದ್ದರು. ನಾವು ಈಗ ಕಾಣುತ್ತಿರುವ ಮಲ್ಟಿಪ್ಲೆಕ್ಷ್ ಚಿತ್ರಮಂದಿರಗಳು ಮತ್ತು ಮೆಟ್ರೋ ರೈಲ್ವೇ ಯೋಜನೆಯ ನೀಲಿ ನಕಾಶೆಯನ್ನು 20ವರ್ಷಗಳ ಹಿಂದೆ ಮೊದಲಿಗೆ ಸಿದ್ದಪಡಿಸಿದ್ದು ಇದೇ ಶಂಕರ್ ನಾಗ್.
ನಮ್ಮ "ಶಂಕರನ ನೆನಪು" ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದ ಪ್ರಜಾವಾಣಿಯ ಹಿರಿಯ ಪತ್ರಕರ್ತರು ಹಾಗೂ ಸಿನಿಮಾಗಳಲ್ಲಿ ತೊಡಗಿಕೊಂಡಿರುವ, ಶಂಕರ್ ನಾಗ್ ಒಡನಾಟವಿರಿಸಿಕೊಂಡಿದ್ದ ಎಂ ಕೆ ಭಾಸ್ಕರ್ ರಾವ್ ಹೇಳಿದ ಮಾತು ಸಹ ಶಂಕರ್ ನಾಗ್ ವ್ಯಕ್ತಿತ್ವಕ್ಕೆ ಇನ್ನೂ ಹೆಚ್ಚಿನ ಹೊಳಪು ಸಿಗುವಂತೆ ಮಾಡಿತು. "ಅದು ಎರ್ಜೆನ್ಸಿ ಸಂಧರ್ಭ, ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣವಾಗುತ್ತಿದ್ದ ಸಮಯದಲ್ಲಿ ಜೆಪಿ ಚಳುವಳಿಯ ಅಲೆ ಸೃಷ್ಟಿಯಾಗಿತ್ತು, ಆಗ ಶಂಕರ್ ನಾಗ್ ಅಭಿವ್ಯಕ್ತಿ ಸ್ವಾತಂತ್ರ್ಯ ಹರಣದ ವಿರುದ್ದ ದೊಡ್ಡ ಧ್ವನಿ ಎತ್ತಿದ್ದರು", "ತನ್ನ ನಾಟಕದ ತಂಡದ ಮೂಲಕ "ಸತ್ತವರ ನೆರಳು" ನಾಟಕವನ್ನು ಆಡಿ ಸರ್ಕಾರದ ವಿರುದ್ದ ತಮ್ಮ ಅಸಹನೆ ವ್ಯಕ್ತಪಡಿಸಿದ್ದರು, ತಮ್ಮ ನಿರ್ದೇಶನದ ಸಿನಿಮಾಗಳಲ್ಲೂ ಅದನ್ನು ಒಡಮೂಡಿಸಿದರು, ಆದರೆ ವಿರೋಧ ಪಕ್ಷದ ಮಂದಿ ಅವರನ್ನು ಜನತಾ ಪಕ್ಷದ ಬೆಂಬಲಿಗನೆಂದು ಗುರುತಿಸಿದರು, ಇದು ಅತ್ಯಂತ ನೋವಿನ ಸಂಗತಿ ಎಂದರು. ಶಂಕರ್ ಯಾವತ್ತಿಗೂ ರಾಜಕೀಯ ಪಕ್ಷದ ಬೆಂಬಲಿಗನಾಗಿರಲಿಲ್ಲ ಆದರೆ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರ ಬೆಂಬಲಿಗರಾಗಿದ್ದರು. ಆದರೆ ಯಾವತ್ತೂ ಪಕ್ಷ ರಾಜಕಾರಣಕ್ಕೆ ಮತ್ತು ಸ್ವತ: ರಾಜಕೀಯಕ್ಕೆ ಧುಮುಕುವುದಕ್ಕೆ ಅವರು ಆಸಕ್ತರಾಗಿರಲಿಲ್ಲವೆವೆಂಬುದು ಗಮನಾರ್ಹ. ಶಂಕರನ ನೆನಪು.. ರೂವಾರಿ ಶಶಿಧರಗೇರುಕುಪ್ಪೆ ಇದಕ್ಕೆ ಸಾಥ್ ನೀಡಿದ್ದು ನಾನು, ಪತ್ರಕರ್ತ ಮಿತ್ರರಾದ ಚಂದ್ರಶೇಖರ್, ಸುಬ್ಬರಾವ್, ಶ್ರೀಕಾಂತ್,ಶಂಕರ್,ಝೀ ಕನ್ನಡದ ಮದುಸೂಧನ ಮತ್ತು ಇತರರು. ಶಂಕರ್ ನಾಗ್ ರೊಂದಿಗೆ ಬೆಳೆದ, ಶಂಕರ್ ಬೆಳೆಸಿದ ಅನೇಕರು ಇವತ್ತು ಚಿತ್ರರಂಗದಲ್ಲಿದ್ದಾರೆ. ಈ ಪೈಕಿ ಪಂಚಮ ವೇದ ಚಿತ್ರದ ನಿರ್ದೇಶಕ ಪಿ ಎಚ್ ವಿಶ್ವನಾಥ್, ನಿರ್ಧೇಶಕ ನಾಗಾಭರಣ, ಶಿವಮಣಿ,ಸುನಿಲ್ ಕುಮಾರ್ ದೇಸಾಯಿ ನಟರಾದ ರಮೇಶ್ ಭಟ್, ಮನದೀಪ್ ರಾಯ್, ಸಂಕೇತ್ ಕಾಶಿ ಮಾಸ್ಟರ್ ಮಂಜುನಾಥ್ ಹೀಗೆ ಎಷ್ಟೋ ಮಂದಿ ಶಂಕರ್ ಗರಡಿಯಲ್ಲಿ ಪಳಗಿದವರು. ಶಂಕರ್ ನಿಧನದ ನಂತರ ಅವರ ಸಹೋದರ ಅನಂತ್ ನಾಗ್ ಮತ್ತು ಅರುಂಧತಿ ಸೇರಿದಂತೆ ಎಲ್ಲರೂ ದಿಕ್ಕಾಪಾಲಾಗಿ ಚದುರಿಹೋಗಿದ್ದಾರೆ. ಸಂಕೇತ್ ಧ್ವನಿಗ್ರಹಣ ಕೇಂದ್ರ ಮುಚ್ಚಿ ಹೋಗಿದೆ, ಶಂಕರ್ ಕನಸಿನ ಕಂಟ್ರಿಕ್ಲಬ್ ಮಾರಾಟವಾಗಿದೆ, ಸಂಕೇತ್ ತಂಡದ ರಂಗಚಟುವಟಿಕೆ ನಿಂತ ನೀರಾಗಿದೆ, ಅಲ್ಲೀಗ Hi-Profile ಜನರಿಗೆ ಟೆಕ್ಕಿಗಳಿಗೆ ಪಾಶ್ಚಿಮಾತ್ಯ ರಂಗನಾಟಕಗಳನ್ನು ಪ್ರದರ್ಶಿಸಲಾಗುತ್ತಿದೆ. ಶಂಕರ್ ನೆನಪು ಮಾಡಿಕೊಳ್ಳುವ ಕಾರ್ಯಕ್ರಮಕ್ಕೂ ಕಾಲ್ ಶೀಟ್ ಮನಿ ನಿರೀಕ್ಷೆ ಮಾಡುವ ಮಟ್ಟಕ್ಕೆ ಅವರಿಂದ ಬೆಳೆದವರು ತಲುಪಿದ್ದಾರೆ. ಯಾರಿಗೂ ಈಗ ಶಂಕರನ ನೆನಪಾಗುತ್ತಿಲ್ಲವೇಕೆ? ಕೇವಲ 35ವರ್ಷಗಳ ಕಾಲ ಬದುಕಿದ್ದ ಶಂಕರ್ ನಾಗ್ ಕ್ರಿಯಾಶೀಲತೆಗೆ ಮತ್ತೊಂದು ಹೆಸರು.ಆತನ ವರ್ಕಾಲಿಕ್ ನೇಚರ್, ಆತನ ಕನಸು, ಛಲ ಹಿಡಿದು ಸಾಧಿಸಿದ ಕೆಲಸ, ಬೆಳೆದ ಎತ್ತರವನ್ನು ಯಾರೂ ಸರಿಗಟ್ಟಲಾರರು ಆ ಕಾರಣಕ್ಕಾದರೂ ಶಂಕರನ ನೆನಪಾಗಬೇಕು.ಈಗ ಹೇಳಿ ಶಂಕರ್ ನಮ್ಮ ನಡುವಿನ ಸಾಕ್ಷಿ ಪ್ರಜ್ಞೆಯಲ್ಲವೇ.. ಆತನ ನೆನಪು ಮಾಡಿಕೊಳ್ಳುವುದು ಸೂಕ್ತವೆನಿಸುವುದಿಲ್ಲವೇ. ಒಂದು ಚಲನಶೀಲತೆಯನ್ನು ಹುಟ್ಟುಹಾಕಿದ ಶಂಕರ್ ಒಮ್ಮೆ ಹೀಗೆ ಹೇಳಿದ್ದರು "ಸತ್ತ ಮೇಲೆ ಗೋರಿಯಲ್ಲಿ ಹಾಯಾಗಿ ನಿದ್ರೆ ಮಾಡಲು ಬೇಕಾದಷ್ಟು ಸಮಯವಿರುತ್ತೆ, ಆದ್ದರಿಂದ ಸೋಮಾರಿಗಳಾಗಬೇಡಿ, ಸಮಯ ಹಾಳುಮಾಡಬೇಡಿ ಕ್ರಿಯಾಶೀಲರಾಗಿರಿ" ಅದು ಅಂದಿಗೂ, ಇಂದಿಗೂ ಮತ್ತು ಮುಂದೆಂದಿಗೂ ಸಮಾಜಕ್ಕೆ ಆದರ್ಶ, ಅನುಕರಣೀಯ ಆ ಮೂಲಕ ಶಂಕರ್ ನಮ್ಮೊಂದಿಗೆ ಜೀವಂತವಾಗಿದ್ದಾರೆ ಅಲ್ಲವೇ?



2 comments:

ಆಶಾವಾದಿ said...

REally its so interesting... I like him very much. I'm a big fan of him. If u know his personel detail tel me pls...

ಅರಕಲಗೂಡುಜಯಕುಮಾರ್ said...

yeah...:) i have full details about Shankarnag, might be i wrote a book on him next time.You know I hv bn produced a documentary clippings on Shankarnag film. i wil put that in my blog next time wait.. thanks for giving reply.If possible, While u r coming Deepavali plz come to my office. wil give u a hardcopy of his biography.

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...