Sunday, May 2, 2010

'ಪೃಥ್ವಿ' ,ದೇವೇಗೌಡರಿಗೆ ಇಷ್ಟವಾಗಿದ್ದೇಕೆ ಗೊತ್ತಾ?

ಮೊನ್ನೆ ಶನಿವಾರ ಹಾಲಿ ಸಂಸದ-ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ 'ಪೃಥ್ವಿ' ಸಿನಿಮಾಕ್ಕೆ ಹೊರಟ ಸುದ್ದಿ ವೆಬ್ ಪೋರ್ಟಲ್ ಪ್ರಕಟವಾಗುತ್ತಿದ್ದಂತೆಯೇ ನನಗೆ ಕುತೂಹಲ ತಡೆಯಲಾಗಲಿಲ್ಲ, ಅಂತಹದ್ದೇನಿದೆ ಎಂಬ ಕುತೂಹಲ ತಡೆಯಲಾರದೇ ನಾನು ಸಿನಿಮಾ ನೋಡಲು ಹೊರಟೆ. ದೇವೇಗೌಡರಂತಹ ಪ್ರಬುದ್ದ ರಾಜಕಾರಣಿ ಒಂದು ಸಿನಿಮಾ ನೋಡಲು ಹೊರಡುತ್ತಾರೆಂದರೆ ಅದು ತಳ್ಳಿಹಾಕು ವ ಮಾತಲ್ಲ, ಏಕೆಂದರೆ ಇವತ್ತು ರಾಷ್ಟ್ರ ರಾಜಕಾರಣದಲ್ಲಿ ತಮ್ಮ ಛಾಪು ಮೂಡಿಸಿರುವ ದೇವೇಗೌಡರು ಯಾವುದನ್ನು ಕಾರಣವಿಲ್ಲದೇ ಮಾಡಲಾರರು.
ಇರಲಿ ಇನ್ನು ಸಿನಿಮಾ ವಿಚಾರಕ್ಕೆ ಬರೋಣ. 'ಪೃಥ್ವಿ' ಒಂದು ಸಮಕಾಲೀನ ವ್ಯವಸ್ಥೆಯ ಲೋಪದೋಷವನ್ನು ಯಾವುದೇ ಮಸಾಲೆ ಬೆರೆಸದೇ ತುಂಬಾ ನೇರಾ ನೇರವಾಗಿ ಹಾಗೂ ತಣ್ಣಗೆ ಸತ್ಯವನ್ನು ಹೇಳುವ ಚಿತ್ರ. ಇದರಲ್ಲಿ ಯಾವುದೆ ಸಿನಿಮಾ ಗಿಮಿಕ್ ಗಳಿಲ್ಲ. ಪಾತ್ರಕ್ಕೆ ತಕ್ಕಂತಹ ಮ್ಯಾನರಿಸಂ ಪ್ರದರ್ಶಿಸಿರುವ ಪುನೀತ್ ಇದೇ ಪ್ರಥಮ ಭಾರಿಗೆ ತಮ್ಮ ಮಾಮೂಲು ಇಮೇಜ್ ಬಿಟ್ಟು ಹೊಸ ಶೈಲಿಯಲ್ಲಿ ನಟಿಸಿದ್ದಾರೆ. ಕಥೆ ಮಾತ್ರ ಪಕ್ಕಾ ಅಸಲು ಬಳ್ಳಾರಿ ಗಣಿ ಧಣಿಗಳ ಕಥೆ! ಇನ್ನು ನೇರವಾಗಿ ಹೇಳ ಬೇಕೆಂದರೆ ಜನಾರ್ಧನ ರೆಡ್ಡಿ ಕಥೆ! ಸಿನಿಮಾದಲ್ಲಿ ಕಥೆ ಹೇಳುವಾಗ ಸಣ್ಣಪುಟ್ಟ ದೋಷಗಳಿದ್ದರೂ ಕಥೆ ಸಾಗುವ ಧಾಟಿ, ಹೇಳ ಬೇಕಾದ್ದನ್ನು ಹೇಳುವ ನಿರ್ದೇಶಕರ ಜಾಣತನ ಸಿನಿಮಾವನ್ನು ಎತ್ತರಕ್ಕೆ ತಂದು ನಿಲ್ಲಿಸಿದೆ. ತಂದೆಯ ಆಸೆಯಂತೆ ಭಾರತೀಯ ಸಾರ್ವಜನಿ ಕಸೇವೆಗೆ ಆಯ್ಕೆಯಾಗುವ ಮಗ ಪೃಥ್ವಿ ಜಿಲ್ಲಾಧಿಕಾರಿಯಾಗಿ ಬರುವುದು ಬಳ್ಳಾರಿಗೆ! ಬಳ್ಳಾರಿಯ ಜನತೆ ಗಣಿಗಾರಿಕೆಯಿಂದ ಹೇಗೆ ಸಂಕಷ್ಟಕ್ಕೆ ಸಿಲುಕಿದ್ದಾರೆ? ಗಣಿಧಣಿಗಳ ಅಟ್ಟಹಾಸ ಅಲ್ಲಿ ಹೇಗಿದೆ? ಅಲ್ಲಿನ ಸರ್ಕಾರಿ ವ್ಯವಸ್ಥೆ ಹೇಗಿದೆ? ಯಾಕೆ ಆ ರೀತಿ ಆಗಿದೆ? ಸತ್ಯ ಶೋಧಿಸಲು ಹೋಗುವವರಿಗೆ ಅಲ್ಲಿ ಸಿಗು ವಗೌರವ ಏನು? ಎಂಬ ಪ್ರಶ್ನೆಗಳಿಗೆಲ್ಲಾ ಉತ್ತರ ಕೊಡುತ್ತಾ ಸಾಗುವ ಪೃಥ್ವಿ ಸಿನಿಮಾ ಪ್ರೇಕ್ಷಕರನ್ನು ಆವರಿಸಿಕೊಳ್ಳುತ್ತದೆ. ಮುಂದೇನು ಎಂದು ಕಾಯು ವಕುತೂಹಲವನ್ನು ನೀಡುತ್ತದೆ. ಚಿತ್ರದ ಓಟಕ್ಕೆ ಪೂರಕವಾಗುವಂತೆ ಅತ್ಯಂತ ಸರಳ ಆದರೆ ಸಾಹಿತ್ಯ ಶ್ರೀಮಂತಿಕೆಯನ್ನು ಜಯಂತ್ ಕಾಯ್ಕಿಣಿ ನೀಡಿದ್ದಾರೆ. ಮಣಿಕಾಂತ್ ಕದ್ರಿ ಯವರ ಹೊಸತನದ ಸಂಗೀತ, ಜೋರ್ಡಾನ ದೇಶದ ದೃಶ್ಯ ವೈಭವ ಕಣ್ಣಿಗೆ ಕಟ್ಟುತ್ತದೆ. ಸಾಕ್ಷ್ಯ ಚಿತ್ರಗಳನ್ನು ಮಾಡಿಕೊಂಡಿದ್ದ ಜೇಕಬ್ ವರ್ಗೀಸ್ ಕಳೆದ ವರ್ಷ 'ಸವಾರಿ' ಎಂಬ ಯಶಸ್ವಿ ಚಿತ್ರ ನೀಡಿದ್ದರು. ಈಗ ಗಣಿಧಣಿಗಳ ಕಥೆಯನ್ನು ಹೊಂದಿದ 'ಪೃಥ್ವಿ' ನಿರ್ದೇಶಿಸಿದ್ದಾರೆ.
ಕನ್ನಡ ಸಿನಿಮಾಗಳಲ್ಲಿ ಪ್ರಯೋಗ ಶೀಲತೆ ಯುಗ ಮುಗಿದು ಹೆಚ್ಚುಕಮ್ಮಿ 2ದಶಕಗಳಾಗಿದೆ. ಶಂಕರ್ ನಾಗ್ ನಿರ್ದೇಶನದ 'ಮಿಂಚಿನ ಓಟ', ಆಕ್ಸಿಡೆಂಟ್, ನಂತರ ಬಂದದ್ದು ಹಸಿ ಹಸಿ ಸತ್ಯವನ್ನು ತೆರೆದಿಟ್ಟ ಎಂ ಎಸ್ ಸತ್ಯು ನಿರ್ದೇಶನದ 'ಬರ' ಚಿತ್ರ. ಇವೆಲ್ಲಾ ಸಮಕಾಲಿನ ಸತ್ಯಗಳನ್ನು ಯಾವುದೇ ಗಿಮಿಕ್ ಇಲ್ಲದೇ ನೇರವಾಗಿ ಹೇಳಿದ ಆಫ್ ಬೀಟ್ ಸಿನಿಮಾಗಳು. ಇಂತಹ ಪ್ರಯತ್ನ ವನ್ನು ಮತ್ತೆ ಮಾಡುವ ಪ್ರಯತ್ನವಾಯಿತೇ ವಿನಹ ಪೂರ್ಣ ಪ್ರಮಾಣದ Off beat ಸಿನಿಮಾಗಳು ಬಂದದ್ದು ಕಡಿಮೆ. ಬರ ಸಿನಿಮಾ ಸರ್ಕಾರದ ಕಣ್ಣು ತೆರೆಸುವ ಮಹತ್ವದ ಪ್ರಯತ್ನವನ್ನು ಮಾಡಿತಲ್ಲದೇ ರಾಜ್ಯ-ರಾಷ್ಟ್ರದ ಜನತೆಗೆ ಬೀದರ್ ಜಿಲ್ಲೆಯ ಅಂದಿನ ಬರ ಪರಿಸ್ಥಿತಿಯನ್ನ ಮನವರಿಕೆ ಮಾಡುವಲ್ಲಿ ಯಶಸ್ವಿಯಾಗಿತ್ತು. ಅಂತಹುದೇ ಪ್ರಯತ್ನವನ್ನು ಈ 'ಪೃಥ್ವಿ' ಸಿನಿಮಾ ಮಾಡಿದೆ ಎಂದರೆ ತಪ್ಪಾಗಲಾರದು. ಒಂದು ಸತ್ಯವನ್ನು ಹೇಳುವಾಗ ಲೋಪವಾಗದಂತೆ ಕಾಯ್ದುಕೊಳ್ಳುವುದು ಬಹಳ ಮುಖ್ಯವಾಗುತ್ತದೆ ಅಂತಹ ಎಚ್ಚರಿಕೆಯನ್ನು ಇಡೀ ಚಿತ್ರದಲ್ಲಿ ನಿರ್ದೇಶಕರು ತೆಗೆದುಕೊಂಡಿದ್ದಾರಾದರೂ ಅಂತಿಮ ಹಂತದಲ್ಲಿ ನಾಯಕ ನಟ ಹತಾಶನಾಗಿ ಕಾನೂನು ಕೈಗೆತ್ತಿಕೊಳ್ಳುವ ರೀತಿ ಮಾತ್ರ ಸರಿಯೋ ? ತಪ್ಪೋ ಎಂಬ ಗೋಂದಲ ಹುಟ್ಟುಹಾಕುತ್ತದೆ. ಅಷ್ಟರ ಮಟ್ಟಿಗೆ ಒಂದು ಪ್ರಜ್ಞಾವಂತ ಮನಸ್ಥಿತಿಯನ್ನು ಆವರಿಸಿಕೊಳ್ಳುವ ಚಿತ್ರ ಪೃಥ್ವಿ. ಕೆಲವು ಟ್ಯಾಬ್ಲಾಯ್ಡ್ ಪತ್ರಿಕೆಗಳಲ್ಲಿ ಸದರಿ ಚಿತ್ರವನ್ನು ಜನಾರ್ಧನ ರೆಡ್ಡಿಯ ವಿರೋಧಿ ಬಣದ ಸಂಸದ ಅನಿಲ್ ಲಾಡ್ ಪರೋಕ್ಷವಾಗಿ ನಿರ್ಮಿಸಿದ್ದಾನೆ, ಇಂತಹ ಚಿತ್ರದಲ್ಲ ನಟಿಸಲು ಪುನೀತ್ ಯೋಚನೆ ಮಾಡಬೇಕಿತ್ತು ಎಂದು ಬರೆದಿವೆ. ಆದರೆ ಅದೇ ವಾರಪತ್ರಿಕೆಗಳು ರೌಡಿಗಳ, ದೇಶ ದ್ರೋಹಿಗಳ ಎಂಜಲು ತಿಂದು ಕ್ರೈಂ, ಸೆಕ್ಸ್ ಬರೆಯುವಾಗ ಸಿದ್ದಾಂತಗಳು ನೆನಪಿಗೆ ಬಾರದು.
ಒಂದು ತಣ್ಣಗಿನ ಸತ್ಯ ಎಂತಹವರನ್ನು ನಡುಗಿಸಿ ಬಿಡುತ್ತದೆ, ಅಂತಹ ಸತ್ಯದ ಹುಡುಕಾಟ, ವಾಸ್ತವ ನೆಲೆಗಟ್ಟಿನ ಚಿಂತನೆಗಳು ನಮಗೆ ಅಗತ್ಯವಾಗಿ ಬೇಕಿವೆ. ಅದು ಮಾಧ್ಯಮಗಳಲ್ಲಿ ಮಾತ್ರ ಪರಿಣಾಮಕಾರಿಯಾಗಿ ಕಾಣಲು ಸಾಧ್ಯ, ವ್ಯವಸ್ಥೆಗೆ ಅದು ಎಚ್ಚರಿಕೆಯ ಗಂಟೆಯೂ ಆಗಬಲ್ಲದು. ಗಣಿಗಾರಿಕೆಯ ಬಗ್ಗೆ ಲೋಕಾಯುಕ್ತ ಸಂತೋಷ ಹೆಗಡೆ ವರ್ಷದ ಹಿಂದೆಯೇ ವಸ್ತುನಿಷ್ಟ ವರದಿ ನೀಡಿದ್ದರೂ ಸಹಾ ಕ್ರಮ ಜರುಗಿಸು ವ ಯೋಗ್ಯತೆ ಮಾತ್ರ ಸರ್ಕಾರಕ್ಕಿಲ್ಲ, ಗಣಿಧಣಿಗಳ ದುಡ್ಡು ಪಡೆದು ಶಾಸಕರನ್ನು ಸೆಳೆಯುವ ಪಕ್ಷ, ಅದೇ ಪಕ್ಷದ ಶಾಸಕ-ಮಂತ್ರಿಯ ಸೆಕ್ಸ್ ಬೀದಿಗೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲವೆಂಬ ಧೋರಣೆ ಪ್ರದರ್ಶಿಸಿ ಖುಲ್ಲಂ ಖುಲ್ಲ ಕೇಸು ಮುಚ್ಚಿಸಿ ಕ್ಯಾಬಿನೆಟ್ ದರ್ಜೆ ನೀಡು ವಸರ್ಕಾರ, ನೇರಾ ನೇರವಾಗಿ ಲಂಚ ಪಡೆದು ಸಿಕ್ಕಿಬಿದ್ದ ಶಾಸಕನಿಗೆ ಕ್ಲಿನ್ ಚಿಟ್ ಪಡೆದುಕೊಳ್ಳುವ ಸರ್ಕಾರ, ಅತ್ಯಾಚಾರಿ ಮಂತ್ರಿಯನ್ನು ಬಗಲಲ್ಲಿಟ್ಟುಕೊಳ್ಳುವ ಸರ್ಕಾರ, ಗಣಿಧಣಿಗ ಳ ಕಪಿಮುಷ್ಟಿಗಗೆ ಸಿಲುಕಿ ಅಸಹಾಯಕತೆ ಪ್ರದರ್ಶಿಸುವ ಮುಖ್ಯಮಂತ್ರಿಯನ್ನಿಟ್ಟುಕೊಂಡ ಸರ್ಕಾರ ಇದ್ದರೆಷ್ಟು ಬಿಟ್ಟರೆಷ್ಟು? ಒಬ್ಬ ಅಯೋಗ್ಯ ಮಂತ್ರಿ ಹರತಾಳು ಹಾಲಪ್ಪ ಅತ್ಯಾಚಾರ ಪ್ರಕರಣದಿಂ ದ ಮನೆಗೆ ಹೋಗಿದ್ದಾನೆ. ಇನ್ನೊಬ್ಬ ಕಾಮುಕ ಮಂತ್ರಿಯಾಗಿದ್ದಾನೆ, ಇಂತ ಹ ಸರ್ಕಾರ ಜನತೆಗೆ ನೆಮ್ಮದಿಯ ಆಡಳಿತ ನೀಡಿತೆ. ಒಬ್ಬ ಸಚಿವ ಹರತಾಳು ಹಾಲಪ್ಪನನ್ನು ಮನೆಗೆ ಕಳಿಸಿದಂತೆ ಅಬಕಾರಿ ಸಚಿವ ರೇಣುಕಾಚಾರ್ಯ, ಶಾಸಕ ಸಂಪಂಗಿಯನ್ನ, ಸಿಬಿಐ ತನಿಖೆಗೆ ಒಳಪಟ್ಟಿರುವ ರೆಡ್ಡಿ ಸಹೋದರರನ್ನು ಯಾಕೆ ಮನೆಗೆ ಕಳಿಸಿಲ್ಲ? ಜನ ಸರ್ಕಾರ ದ ಮೇಲೆ ವಿಶ್ವಾಸ ಇಟ್ಟಿರುತ್ತಾರೆ, ಆದರೆ ಎಡಬಿಡಂಗಿ ಧೋರಣೆಗಳು ವ್ಯಕ್ತವಾದಾಗ ಜನರ ಜಾಗೃತಾವಸ್ಥೆ ಸರಿಯಾದ ಪಾಠ ಕಲಿಸುತ್ತದೆ. ಇವತ್ತು ಬಿಜೆಪಿ ಸರ್ಕಾರ ದಮೇಲೆ ಜನ ಅಪಾರ ವಿಶ್ವಾಸ ಇಟ್ಟು ವಿಧಾನ ಸೌಧದಲ್ಲಿ ಕೂರಿಸಿದ್ದಾರೆ. ಅದಕ್ಕೆ ಪೂರಕವಾಗಿ ಆಢಳಿತಗಾರರು ನಡೆದು ಕೊಳ್ಳಬೇಕು ಇಲ್ಲವಾದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ.

No comments:

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...