ಬಚಾವೋ ಯಾತ್ರೆ ಅಂತೆ ಯಾರನ್ನ ಯಾರು ಬಚಾವ್ ಮಾಡ್ಬೇಕ್ರಿ? ಬಳ್ಳಾರಿ ಬಚಾವ್ ಮಾಡ್ಬೇಕೋ? ಬೆಂಗಳೂರು ಬಚಾವ್ ಮಾಡ್ಬೇಕೋ, ರೆಡ್ಡಿಗಳನ್ನು ರಾಜ್ಯ ರಾಜಕೀಯದಿಂದ ಬಚಾವ್ ಮಾಡ್ಬೇಕೋ, ರೆಡ್ಡಿಗಳಿಂದ ಬಿಜೆಪಿ ಸರ್ಕಾರ ಬಚಾವ್ ಮಾಡ್ಬೇಕೋ,ಅಥ್ವ ಬಿಜೆಪಿ ಸರ್ಕಾರದಿಂದ ರೆಡ್ಡಿಗಳನ್ನು ಬಚಾವ್ ಮಾಡ್ಬೇಕೋ? ರೆಡ್ಡಿಗಳಿಂದ ಸಿದ್ದರಾಮಯ್ಯನವರನ್ನ ಬಚಾವ್ ಮಾಡ್ಬೇಕೋ, ಇಲ್ಲ ವಿಧಾನ ಸೌಧನಾ ರಾಜಕೀಯ ಪುಡಾರಿಗಳಿಂದ ಗೂಂಡಾಗಳಿಂದ ಬಚಾವ್ ಮಾಡಬೇಕೋ ,ಕಾಂಗ್ರೆಸ್-ಜೆಡಿಎಸ್ ನವರಿಂದ ಸರ್ಕಾರಾನ ಬಚಾವ್ ಮಾಡಬೇಕೋ? ಯಡಿಯೂರಪ್ಪನವರನ್ನ ರೆಡ್ಡಿಗಳಿಂದ ಬಚಾವ್ ಮಾಡಬೇಕೋ, ಅಂತಿಮವಾಗಿ ರಾಜ್ಯದ ಜನತೆಯನ್ನು ಈ ರಾಜಕಾರಣಿಗಳಿಂದ ಬಚಾವ್ ಮಾಡಬೇಕೋ? ಒಂದೂ ತಿಳಿತಿಲ್ಲ.ಅಧಿಕಾರದ ಹವಣಿಕೆಗೆ ಬಿದ್ದ ಪುಡಾರಿಗಳು ವಿಧಾನಸೌಧದಲ್ಲಿ ಕಿಸಿದಿದ್ದು ಸಾಕಲ್ಲ ಅಂತ ಬೀದಿಗಿಳಿದಿದ್ದಾರೆ ಆ ಮೂಲಕ ಪರಸ್ಪರರನ್ನ ಬೆತ್ತಲು ಮಾಡುತ್ತಿದ್ದಾರೆ. ಈ ನಡುವೆ ಮುಗುಮ್ಮಾಗಿ ಕುಳಿತವರು ಪರಸ್ಪರರನ್ನು ಹಣಿಯುವ, ವೈಯುಕ್ತಿಕ ರಾಜಕೀಯ ಲಾಭ ಪಡೆಯುವ ನಿಟ್ಟಿನಲ್ಲಿ ಅಕ್ರಮ ರಾಜಕೀಯ ಸಂಭಂಧಗಳಿಗೆ ಮುಂದಾಗಿದ್ದಾರೆ. ಇವತ್ತು ಕರ್ನಾಟಕದಲ್ಲಿ ನೈತಿಕವಾಗಿ ಮತ್ತು ಸೈದ್ದಾಂತಿಕವಾಗಿ ಬಡಿದಾಡಲು ರಾಜಕಾರಣಿಗಳಿಗೆ ಹಲವು ವಿಚಾರಗಳಿವೆ, ವಿಧಾನ ಸಭೆಯಲ್ಲಿ, ವಿಧಾನ ಪರಿಷತ್ ನಲ್ಲಿ ಜನರ ಹಿತಾಸಕ್ತಿಗೆ ಧ್ವನಿಯೆತ್ತಲು ಸಮಸ್ಯೆಗಳು ಹಾಸು ಬಿದ್ದಿವೆ ಹೀಗಿರುವಾಗ ರೆಡ್ಡಿಗಳನ್ನು ಕಿತ್ತೆಸೆಯುವ ಜೊತೆಗೆ ಅಧಿಕಾರ ಹಿಡಿಯುವ ಏಕೈಕ ಅಜೆಂಡಾದೊಂದಿಗೆ ಕಾಂಗ್ರೆಸ್ ಬೀದಿಗೆ ಬಂದಿದ್ದರೆ ಹತಾಶರಾದ ರೆಡ್ಡಿಗಳು ಶ್ರೀರಾಮುಲು ತಲೆಬೋಳಿಸಿ ಸ್ವಾಭಿಮಾನ ಯಾತ್ರೆ ಕೈಗೊಂಡಿದ್ದಾರೆ ಆ ಮೂಲಕ ರಾಜ್ಯದಲ್ಲಿ ರಾಜಕೀಯ ಸಂಘರ್ಷದ ವೇದಿಕೆ ಸಿದ್ದಗೊಂಡಿದೆ.
ರಾಜ್ಯದಲ್ಲಿ ಈ ಹೊತ್ತಿಗೆ ತುಂಬಿ ತುಳುಕಬೇಕಾಗಿದ್ದ ಜಲಾಶಯಗಳು ಬರಿದಾಗಿವೆ, ವಿದ್ಯುತ್ ಉತ್ಪಾದನೆ ಸ್ಥಗಿತಗೊಂಡಿದೆ, ಗ್ರಾಮೀಣ ರೈತರಿಗೆ ವಿದ್ಯುತ್ ಒದಗಿಸುವ ಟ್ರಾನ್ಸ್ಫಾರ್ಮರ್ ಗಳ ವಿತರಣೆಗೆ ಬಜೆಟ್ ಕೊರತೆ ಇದೆ, ಜಲಾಶಯದ ನೀರು ಅವಲಂಬಿಸಿರುವ ಹಲವು ನಗರಗಳಿಗೆ ಕುಡಿಯುವ ನೀರಿನ ತತ್ವಾರ ಎದುರಾಗಿದೆ. ರೈತರಿಗೆ ಇದು ಕೃಷಿ ಆರಂಭದ ಸಮಯ, ನಕಲಿ ಬಿತ್ತನೆ ಬೀಜ ಮಾರುಕಟ್ಟೆಗೆ ಬಂದಿದೆ, ರಸಗೊಬ್ಬರ ಕೊರತೆ ಅಲ್ಲಲ್ಲಿ ಇದೆ, ತಂಬಾಕು ಬೆಳೆಗಾರರಿಗೆ ಸಾವಿರಾರು ಟನ್ ನಕಲಿ ಗೊಬ್ಬರ ವಿತರಣೆಯಾಗಿದೆ, ವಾಣಿಜ್ಯ ಬೆಳೆಗಳಿಗೆ ರೋಗ ತಗುಲಿದೆ, ಈಗ ಆರಂಭವಾಗಿರುವ ಮಳೆಯ ಬಿರುಸಿಗೆ ದಕ್ಷಿಣದಲ್ಲಿ ಪ್ರವಾಹ ಪರಿಸ್ಥಿತಿಯಿದೆ. ಉತ್ತರದಲ್ಲಿ ಕಳೆದ ವರ್ಷ ನೆರೆಗೆ ತುತ್ತಾಗಿದ್ದ ಮಂದಿ ಆಸರೆಯಿಲ್ಲದೇ ನರಳುವ ಪರಿಸ್ಥಿತಿ ಇದೆ, ಈ ಗ ಮತ್ತೆ ಅಲ್ಲಿ ಪ್ರವಾಹ ಭೀತಿ ಇದೆ, ರಾಜ್ಯದ ಕೆಲವೇ ಪ್ರದೇಶಗಳಲ್ಲಿ ಮೊಡಬಿತ್ತನೆ ಆಗಬೇಕಿದೆ, ಹಲವು ಮೂಲಭೂತ ಸೌಕರ್ಯ ಅಭಿವೃದ್ದಿ ಕೆಲಸಗಳಿಗೆ ಅನುದಾನ/ಯೋಜನೆ ಮಂಜೂರಾಗಬೇಕಿದೆ, ಕೇಂದ್ರ ಸರ್ಕಾರದ ಮಹತ್ವದ ಯೋಜನೆ ಉದ್ಯೋಗ ಖಾತ್ರಿ ಹಳ್ಳ ಹಿಡಿದಿದೆ, ಹತ್ತು ಹಲವು ಆಶ್ರಯ ಯೋಜನೆಗಳಿದ್ದರೂ ಎಷ್ಟೋ ಮಂದಿಗೆ ಸೂರು ಸಿಕ್ಕಿಲ್ಲ ಬೆಳಕೂ ದಕ್ಕಿಲ್ಲ, ಶಾಲೆಗೆ ಸೇರಿದ ಮಕ್ಕಳಿಗೆ ಪುಸ್ತಕ-ಸೈಕಲ್ ಸಿಕ್ಕಿಲ್ಲ, ಅರೆಕಾಲಿಕ ಉದ್ಯೋಗಿಗಳಿಗೆ ಬದುಕಿನ ಭರವಸೆ ಸಿಕ್ಕಿಲ್ಲ, ನಿರುದ್ಯೋಗಿಗಳಿಗೆ ಬದುಕಿನ ಆಶಾಕಿರಣ ಕಾಣುತ್ತಿಲ್ಲ, ಕಾಡಾನೆಗಳ ಹಾವಳಿ ಹೆಚ್ಚಿದೆ, ಕಾಡಿನ ಆನೆಗಳು ನಾಡಿಗೆ ಬಂದಿವೆ, ಕಾಡಿನ ನಾಶವಾಗುತ್ತಿದೆ, ಅಭಿವೃದ್ದಿಯ ಹೆಸರಿನಲ್ಲಿ ಕೃಷಿ ಜಮೀನು ಕಡಿಮೆಯಾಗುತ್ತಿದೆ, ಔದ್ಯೋಗಿಕರಣಕ್ಕೆ ಮಣೆಹಾಕಲಾಗುತ್ತಿದೆ, ಜಮೀನು ಕಳೆದು ಕೊಂಡ ರೈತ ಸ್ವಾವಲಂಬಿ ಬದುಕು ಕಳೆದುಕೊಂಡು ಕೂಲಿಗೆ ನಗರ ಪ್ರದೆಶಗಳಿಗೆ ಹೋಗಬೇಕಾದ ಪರಿಸ್ಥಿತಿ ಇದೆ, ಜನತೆ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗಿದ್ದಾರೆ ಇಂತಹ ಹೊತ್ತಿನಲ್ಲಿ ಪಾದಯಾತ್ರೆ/ ಪ್ರತಿಭಟನೆಯ ನಾಟಕ ಬೇಕಿತ್ತಾ??
ನೀವೆ ಯೋಚಿಸಿ ಮುಂಗಾರು ಅಧಿವೇಶನ ರಾಜ್ಯದ ಜನತೆಯ ದೃಷ್ಟಿಯಿಂದ ಅತ್ಯಂತ ಮಹತ್ವದ ಅಧಿವೇಶನ, ಜನತೆಗೆ ಅನುಕೂಲ ಕಲ್ಪಿಸುವ ಯಾವುದೇ ಯೋಜನೆಗಳು, ಆಡಳಿತಾತ್ಮಕವಾದ ವಿಚಾರಗಳ ಆಗುಹೋಗುಗಳ ಚರ್ಚೆ ಅತೀ ಗಹನವಾದುದು ಆದರೆ 5-6 ದಿನಗಳು ನಡೆದ ಮುಂಗಾರು ಅಧಿವೇಶನದಲ್ಲಿ ನಡೆದದ್ದೇನು? ಅಧಿವೇಶನದ ಆರಂಭದಲ್ಲಿ ಲೋಕಾಯುಕ್ತರಿಗೆ ನೀಡಬೇಕಾದ ಅಧಿಕಾರದ ಬಗ್ಗೆ ಗದ್ದಲ, ಸಿಎಂ ಯಡಿಯೂರಪ್ಪ ಗಟ್ಟಿ ನಿರ್ಧಾರದೊಂದಿಗೆ ಅಧಿಕಾರ ನೀಡುವ ಚರ್ಚೆಗೆ ಮುಂದಾದಾಗ ರಾಜಕಾರಣಿಗಳ ವಿರುದ್ದ ತನಿಖೆ ಮಾಡುವ ಅಧಿಕಾರ ಒಂದನ್ನು ಬಿಟ್ಟು ಉಳಿದ ವಿಚಾರಗಳ ಬಗ್ಗೆ ಮಾತ್ರ ಆಸ್ಥೆ ವಹಿಸುವ ಮೂಲಕ ರಾಜಕಾರಣಿಗಳೆಲ್ಲ ಒಂದೇ ಎಂಬುದನ್ನು ಸಾಬೀತು ಪಡಿಸಿಬಿಟ್ಟರು. ನಂತರದಲ್ಲಿ ಸಿಎಂ ಯಡಿಯೂರಪ್ಪ ಸಿದ್ದು ಕೇಳಿದ ಪ್ರಶ್ನೆಗೆ ತಾಳ್ಮೆ ಕಳೆದುಕೊಂಡು ನಡೆದುಕೊಂಡ ರೀತಿ ಆಡಳಿತ ಪಕ್ಷದವರನ್ನು ಪ್ರಚೋದಿಸಿಬಿಟ್ಟಿತು, ದಿನೇಶ್ ಗುಂಡೂರಾವ್ ಆಡಿದ ಮಾತಿಗೆ ಸಿಟ್ಟಿಗೆದ್ದ ರೆಡ್ಡಿಗಳು ಗೂಂಡಾಗಳಂತೆ ನಡೆದುಕೊಂಡಿದ್ದು ಈಗ ಇತಿಹಾಸ. ಅದೇ ದಿನ CNN IBN ಚಾನೆಲ್ ನಲ್ಲಿ ಪ್ರತಿಪಕ್ಷದವರ ಧರಣಿ ಪ್ರತಿಭಟನೆ 'ಕರ್ನಾಟಕದಲ್ಲಿ ನಾಟಕ' ಎಂಬ ಶೀರ್ಷಿಕೆಯಲ್ಲಿ ಪ್ರಸಾರವಾಗುತ್ತಿತ್ತು. ಪ್ರತಿಭಟನಾ ನಿರತ ಶಾಸಕರುಗಳು ಹಾಡು-ಹಸೆ ಹೇಳಿಕೊಂಡು ಜೋಕು ಮಾಡುತ್ತಾ ಕಾಲ ಕಳೆಯುತ್ತಿದ್ದರು. ಇದೇ ಸಂಧರ್ಭಕ್ಕೆ ಸರಿಯಾಗಿ ಆಸರೆ ಕಳೆದುಕೊಳ್ಳುವ ಭೀತಿಯಲ್ಲಿ ಹಾವೇರಿಯ ಭಂಗಿ ಸಮುದಾಯದ ಜನರು ಸರ್ಕಾರದ ವಿರುದ್ದ ಪ್ರತಿಭಟಿಸಿ ಮೈಮೇಲೆ ಮಲ ಸುರಿದುಕೊಂಡ ಅತ್ಯಂತ ಭೀಬತ್ಸ ಘಟನೆ ಜರುಗಿತ್ತು. ಮನುಕುಲದ ಅತ್ಯಂತ ಹೇಯವಾದ ಘಟನೆ ನಡೆದ ಸಂಧರ್ಭ ವಿಧಾನ ಸಭೆ/ಪರಿಷತ್ ನಲ್ಲಿ ರಾಜಕೀಯ ಲಾಭಕ್ಕಾಗಿ ಹಣಾಹಣಿ ನಡೆಯುತ್ತಿತ್ತು ಇದು ಪ್ರಜಾಪ್ರಭುತ್ವದ ಕಗ್ಗೊಲೆಯಲ್ಲದೇ ಮತ್ತೇನು? ಅಧಿವೇಶನ ಶುರುವಿಗೆ ಮಾಜಿ ಶಾಸಕ ಎ ಟಿ ರಾಮಸ್ವಾಮಿ ಬಿತ್ತನೆ ಬೀಜ ಬೆಲೆ ನಿಗದಿಯ ಭಾರೀ ಅವ್ಯವಹಾರವನ್ನು ಬಯಲಿಗೆ ತಂದಿದ್ದರು, ನಂತರ ಮಾಜಿ ಸ್ಪೀಕರ್ ಕೃಷ್ಣ, ಮತ್ತು ಸಚಿವ ಕಾಂತಾ ಜೊತೆಗೆ ಸೇರಿ ಉದ್ಯೋಗ ಖಾತ್ರಿ ಅಕ್ರಮದ ವಿರುದ್ದ ಧ್ವನಿಯೆತ್ತಿದರು ಇವಿಷ್ಟು ಅಧಿವೇಶನ ಹೊರಗೆ ನಡೆಯುತ್ತಿದ್ದರೆ ಒಳಗಡೆ ನಡೆಯುತ್ತಿದ್ದ ನಾಟಕವೇ ಬೇರೆ. ಪುಡಾರಿಗಳ ವೈಯುಕ್ತಿಕ ತೆವಲಿಗೆ ಮಹತ್ವದ ಅಧಿವೇಶನ ಬಲಿಗೊಟ್ಟರಲ್ಲ ಜನತೆಯ ಶಾಪ ಇವರಿಗೆ ತಟ್ಟದಿರದೇ?
ಇವತ್ತು ರೆಡ್ಡಿಗಳ ವಿರುದ್ದ ಕಾಂಗ್ರೆಸ್-ಜೆಡಿಎಸ್ ಸಮಾನವಾಗಿ ವಿರೋಧ ವ್ಯಕ್ತಪಡಿಸುತ್ತಿವೆ, ಮೊದಲೇ ಹದಗೆಟ್ಟಿದ್ದ ರಾಜ್ಯ ರಾಜಕೀಯದ ಅಳಿದುಳಿದ ಮೌಲ್ಯಗಳನ್ನು ಹೊಸಕಿ ಹಾಕಿದ್ದು.ರಾಜಕೀಯದಲ್ಲಿ ಅಸಾಧಾರಣವಾದುದನ್ನು ಗಣಿ ಹಣದ ಮೂಲಕ ಸಾಧಾರಣ ವಿಚಾರವನ್ನಾಗಿ ಮಾಡಿದ್ದು ಸರ್ಕಾರವನ್ನೇ ಹೈಜಾಕ್ ಮಾಡಿದ್ದು ಗಣಿಧಣಿಗಳ ಹೆಗ್ಗಳಿಕೆ ಹಾಗೂ ರಾಜಕೀಯ ಪರಂಪರೆಯಲ್ಲಿ ಕರ್ನಾಟಕದ ಮಟ್ಟಿಗೆ ಕೆಟ್ಟ ಸ್ವಪ್ನವೇ ಸರಿ. ಸಿನಿಮಾ ಥಿಯೇಟರಿನಲ್ಲಿ ಬ್ಲಾಕ್ ಟಿಕೇಟ್ ಮಾರುತ್ತಿದ್ದ ಭೂಪನೋರ್ವ ಕೇವಲ 10ವರ್ಷಗಳಲ್ಲಿ 50ಸಾವಿರ ಕೋಟಿಗೂ ಮೀರಿದ ಧನಿಕನಾಗುತ್ತಾನೆಂದರೆ ಅದು ಸುಮ್ಮನೇ ಆಗಿ ಬರುವ ಮಾತಲ್ಲ,ಅಕ್ರಮ ಗಣಿಗಾರಿಕೆ ಮೂಲಕ ರಾಜ್ಯದ ಗಡಿಯನ್ನು ಆಂಧ್ರಕ್ಕೆ ಸೇರುವ ಸ್ಥಿತಿ ತಂದಿದ್ದು ಇದೇ ರೆಡ್ಡಿಗಳು, ನೆರೆ ಸಂತ್ರಸ್ಥರಿಗೆ ಗಣಿ ದುಡ್ಡಿನಲ್ಲಿ ಆಸರೆ ಒದಗಿಸುತ್ತೇವೆಂದು ಬಂಬಡಾ ಬಜಾಯಿಸಿದ ರೆಡ್ಡಿಗಳು ಈಗ ಯಾವ ಆಸರೆ ಎಂದದ್ದು ಅವರ ಬದ್ದತೆಯನ್ನು ಪ್ರಶ್ನಿಸುತ್ತದೆ. ಇಂತಹ ದುಷ್ಟ ಶಕ್ತಿಗಳ ವಿರುದ್ದ ಒಂದು ಬೃಹತ್ ಹೋರಾಟ ಅಗತ್ಯವಾಗಿ ಬೇಕಿತ್ತು ಆದರೆ ಅಧಿವೇಶನವನ್ನು ಬಲಿಗೊಟ್ಟು ಪ್ರತಿಭಟನೆಗಿಳಿಯ ಬೇಕಿರಲಿಲ್ಲ. ಕೇಂದ್ರದಲ್ಲಿ ಅತಿ ಹೆಚ್ಚಿನ ಅವಧಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ, ಅವರ ಪಕ್ಷದಲ್ಲೆ ಶಾಸಕರಾಗಿ,ಸಂಸದರಾಗಿ, ಸಚಿವರಾದ ಎಷ್ಟೋ ಮಂದಿ ಹಲವು ದಶಕಗಳಿಂದ ಗಣಿಯನ್ನು ಲೂಟಿ ಮಾಡಿಕೊಂಡೇ ಬಂದಿದ್ದಾರೆ, ಆ ಸಂಧರ್ಭದಲ್ಲಿ ಇವರಿಗೆ ಬಳ್ಳಾರಿ ಬಚಾವು ಮಾಡುವ ಐಡಿಯಾ ಬರಲಿಲ್ಲ, ಇವತ್ತು ಒಂದು ಟನ್ ಅದಿರಿಗೆ 20ರೂ ತೆರಿಗೆ ಇದೆ ಆದರೆ ಮಾರುಕಟ್ಟೆಯಲ್ಲಿ ಟನ್ ಗೆ 2000 ದಿಂದ 6000ದವರೆಗೆ ಮಾರಿಕೊಳ್ಳಲಾಗುತ್ತಿದೆ, ಬಳ್ಲಾರಿಯಾಧ್ಯಂತ ಗಣಿಗಾರಿಕೆ ವ್ಯಾಪಕವಾಗಿದೆ ಅಲ್ಲಿನ ಪರಿಸರ ಹದಗೆಟ್ಟಿದೆ, ಕಳೆದ 50ವರ್ಷಗಳಿಂದ ಗಣಿನೀತಿ ಬದಲಾಗಿಲ್ಲ. ಈ ಕುರಿತು ಕೇಂದ್ರ ಸರ್ಕಾರ ನಿಯಂತ್ರಣ ಹೇರಲು ಸರ್ವಾಧಿಕಾರವನ್ನು ಪಡೆದಿದೆ ಗಣಿಧಣಿಗಳನ್ನು ಮಟ್ಟ ಹಾಕುವ ಸಾಮರ್ತ್ಯ ಹೊಂದಿದೆ ಆದರೆ ಕಾಂಗ್ರೆಸ್ ಪಕ್ಷ ಕೇಂದ್ರದಲ್ಲಿ ಒತ್ತಡ ಹೇರದೇ ಬಿದಿಗಿಳಿದಿದೆ ಎಂದರೆ ಅದರ ಹಿಂದಿನ ಉದ್ದೇಶ ಸ್ಪಷ್ಟವಲ್ಲವೇ? ಹೇಳಿ ಇವರಿಗೆ ರಾಜ್ಯದ ಜನತೆಯ ಹಿತಾಸಕ್ತಿ ಬೇಕಾ? ಇನ್ನೂ ಯಡಿಯೂರಪ್ಪ ಪಂಚರಂಗಿ ಆಟ ಪ್ರದರ್ಶಿಸುತ್ತಾ ಮುಗುಮ್ಮಾಗಿ ರಾಜಕೀಯ ಲೆಕ್ಕಾಚಾರ ಹಾಕುತ್ತಾ ಸುರಕ್ಷಿತವಾಗುವುದು ಹೇಗೆಂದು ಚಿಂತಿಸುತ್ತಿದ್ದರೆ ಜೆಡಿಎಸ್ ಅಪವಿತ್ರ ಮೈತ್ರಿಗೆ ಮತ್ತೆ ಸಜ್ಜಾಗುತ್ತಿದೆ. ಅತ್ತ ಬಳ್ಳಾರಿಯಲ್ಲಿ ಬೇಸತ್ತ ರೆಡ್ಡಿಗಳು ರಾಮುಲು ತಲೆಬೋಳಿಸಿ ಸ್ವಾಭಿಮಾನಿ ಯಾತ್ರೆ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಜನತೆ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗಿದ್ದಾರೆ, ಸರ್ಕಾರಿ ಆಸ್ಪತ್ರೆಗಳು ರೋಗಗ್ರಸ್ತವಾಗಿವೆ ಆದರೆ ರಾಮುಲು ಮಾತ್ರ ತಲೆಬೋಳಿಸಿಕೊಂಡು ರೆಡ್ಡಿಗಳ ರಕ್ಷಣೆಗೆ ನಿಂತುಬಿಟ್ಟಿದ್ದಾರೆ. ಈಗಲಾದ್ರೂ ಹೇಳ್ರಿ ರಾಜ್ಯದ ಜನತೆಯನ್ನ ಯಾರು ರಕ್ಷಿಸಬೇಕು? ಯಾರಿಂದ ರಕ್ಷಿಸಬೇಕು ? ಯಾಕೆ ರಕ್ಷಿಸಬೇಕು ಅಂತ
1 comment:
ತುಂಬಾ ವಿಚಾರವಂತ ಲೇಖನ..
ವಾಸ್ತವಕ್ಕೆ ಸರಿಯಾಗಿ ಮೂಡಿಬಂದಿದೆ..
ನಮ್ಮ ಜನರನ್ನು ದೇವ್ರೇ ಬಚಾವ್ ಮಾಡ್ಬೇಕು..
Post a Comment