Sunday, January 16, 2011

ಕೋಡಿಮಠದ ಭವಿಷ್ಯ ನಿಜವಾದೀತೆ????

ತುಂಬಿದ ಕೆರೆಯಲ್ಲಿ ತಾಮ್ರದ ಕೊಡಗಳು ಮುಳುಗಿಯಾವು/ತಾವರೆಕೊಳದಲ್ಲಿ ಮೀನುಗಳೂ ಹಾರಾಡ್ಯಾವು. 
       ಮುಂದಿನ ವರ್ಷದ ಆರಂಭದಲ್ಲಿ ಅಗ್ನಿಯ ಪ್ರಭಾವದಿಂದ ಸಾವುನೋವಿನ ಘೋರ ದುರಂತ ಎದುರಾಗುತ್ತದೆ, ಜಲಪ್ರಳಯವೂ ಆಗಬಹುದು, ದೇಶದಲ್ಲಿ ಗಾಳಿಯ ಪ್ರಭಾವ ಜಾಸ್ತಿಯಾಗಲಿದೆ, ಉತ್ತರ ಭಾರತದಲ್ಲಿ ಹೆಸರು ಮಾಡಿದ ರಾಜಕಾರಣಿಗಳ ತಲೆ ಉರುಳುತ್ತದೆ, ರಾಜ್ಯದಲ್ಲಿ ಪ್ರಮುಖ ಅಧಿಕಾರ ಸ್ಥಾನಗಳು ಸ್ಥಿರತೆಯನ್ನು ಕಳೆದುಕೊಂಡು ವ್ಯವಸ್ಥೆಯಲ್ಲಿ ಅಸ್ಥಿರತೆ ಗೋಚರವಾಗಲಿದೆ ಎಂದು ಸ್ಪಷ್ಟವಾಗಿ ಹೇಳಿದ್ದು ಕೋಡಿ ಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾ ಸ್ವಾಮೀಜಿ!
           ಕೋಡಿಮಠದ ಕಾಲಜ್ಞಾನ ಮತ್ತೆ ನಿಜವಾಗುತ್ತಿದೆ, ಇಂದಿಗೆ ಸರಿಯಾಗಿ ಒಂದೂವರೆ ತಿಂಗಳ ಹಿಂದೆ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಸ್ವಾಮೀಜಿ ತುಂಬಿದ ಸಾರ್ವಜನಿಕ ಸಭೆಯಲ್ಲಿ ಒಗಟಿನ ಮಾದರಿಯಲ್ಲಿ ಹೇಳಿದಾಗ ಅದೇನು ಗಂಭೀರ  ಅಂತ ಅನ್ನಿಸಲಿಲ್ಲ, ಯಾಕೆಂದರೆ ನನಗೆ ಜ್ಯೋತಿಷ್ಯ-ಕಾಲಜ್ಞಾನದ ಬಗೆಗಿನ ಒಲವು ಅಷ್ಟಕ್ಕಷ್ಟೇ. ಆದರೆ ನಿಧಾನವಾಗಿ ಒಗಟಿನ ತಾತ್ಪರ್ಯ ತಿಳಿಯುವ, ಕಾಲಜ್ಞಾನವನ್ನು ಓರೆಗೆ ಹಚ್ಚುವ ಸಹಜ ಕುತೂಹಲ ಸ್ವಾಮೀಜಿ ಕಾರ್ಯಕ್ರಮ ಮುಗಿದ ನಂತರ ಕಾಳ ರಾತ್ರಿಯಲ್ಲಿ ಎಲ್ಲಿ ಹೋದರೆಂದು ಅರಸಿ ಹೋದರೆ ಮಠವೊಂದರಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ನೋಡುತ್ತಿದ್ದಂತೆ ಮುಗುಳ್ನಕ್ಕರು, ನನ್ನ ಕುತೂಹಲದ ಪ್ರಶ್ನೆಯನ್ನು ಮುಂದಿಟ್ಟೆ. ನೋಡಪ್ಪಾ ಕಾಲಜ್ಞಾನವನ್ನು ಯಾರೂ ಅಲ್ಲಗೆಳೆಯುವಂತಿಲ್ಲ ಏನಾಗಬೇಕೋ ಅದು ಆಗಿಯೇ ತೀರಬೇಕು ಎಂದು ನನ್ನ ಹೆಗಲ ಮೇಲೆ ಕೈಯಿಟ್ಟು ಕೊಂಡು ನಡೆದು ಬಂದ ಸ್ವಾಮೀಜಿ ಒಗಟಿನ ತಾತ್ಪರ್ಯವನ್ನು ಬಿಡಿಸಿ ಹೇಳಿದರು. ಅರೆಕ್ಷಣ ಮಂಕು ಕವಿದಂತಾಯಿತಾದರೂ ಸಾವರಿಸಿಕೊಂಡು ಬೀಳ್ಕೋಟ್ಟೆ .ಕೆಲಸದ ಒತ್ತಡದ ನಡುವೆ ಸ್ವಾಮೀಜಿಯ ಕಾಲಜ್ಞಾನ ಮರೆತೆ ಹೋಗಿತ್ತು!
          ಕಾಕತಾಳೀಯವೋ, ಕಾಲಜ್ಞಾನದ ಮಹತ್ವವೋ ಎಲ್ಲವೂ ಮತ್ತೆ ನೆನಪಾಗುತ್ತಿದೆ, ಕಣ್ಣೆದುರಿಗೆ ಶಬರಿಮಲೆಯ ದುರಂತವಿದೆ, ಅನಾಮತ್ತು ಸಾವನ್ನಪ್ಪಿದ 130ಕ್ಕೂ ಹೆಚ್ಚು ಅಯ್ಯಪ್ಪ ಭಕ್ತರ ಸಾವು ಬಿಟ್ಟರೂ ಬಿಡದೇ  ಕಾಡುತ್ತಿದೆ. ರಾಜ್ಯದಲ್ಲಿ ನಾಳೆಯಿಂದ ಮತ್ತೆ ರಾಜಕೀಯ ಸಂಕಟ ಪರ್ವ ಆರಂಭವಾಗುವ ಎಲ್ಲ ಸಾಧ್ಯತೆಗಳು ದಟ್ಟವಾಗಿವೆ. ರಾಜ್ಯದ ಜನರ ಹಿತಕಾಪಾಡ ಬೇಕಾಗಿದ್ದ ಸದನ, ರಾಜಕೀಯ ಹಿತಾಸಕ್ತಿಗೆ ಬಲಿಯಾಗಿದೆ. ವಿರೋಧ ಪಕ್ಷದ ಸದಸ್ಯರ ಅಮಾನತ್ತು ಕಾಂಗ್ರೆಸ್ ನಾಯಕರನ್ನು ಕೆರಳಿಸಿದೆ ವಿರೋಧ ಪಕ್ಷಗಳು ಸಾಮೂಹಿಕ ರಾಜೀನಾಮೆ ನೀಡಿ ರಾಜ್ಯ ಸರ್ಕಾರದ ವಿರುದ್ದ ಹೋರಾಟ ನಡೆಸಲು ಸಜ್ಜಾಗಿವೆ, ಜೆಡಿಎಸ್ ಸರ್ಕಾರದ ವಜಾಕ್ಕೆ ಒತ್ತಾಯಿಸಿ ರಾಜ್ಯಪಾಲರ ಬಳಿ ತೆರಳಿ ಪ್ರತಿಭಟನೆ ಸಲ್ಲಿಸಲು ನಿರ್ಧರಿಸಿದೆ ಈ ನಡುವೆ ಮುಖ್ಯ ಮಂತ್ರಿ  ಯಡಿಯೂರಪ್ಪ ಪರಿಸ್ಥಿತಿಯನ್ನು ನಿಭಾಯಿಸುವ ಬದಲು ದೇವೇಗೌಡ ಮತ್ತವರ ಕುಟುಂಬದ ಬಂಡವಾಳವನ್ನು ತೆರೆದಿಡುತ್ತೇನೆಂದು ಹೂಂಕರಿಸುತ್ತಿದ್ದಾರೆ ಅಲ್ಲಿಗೆ ಎಲ್ಲವೂ ಸುಸ್ಪಷ್ಟ ವಾದಂತಾಗಿದೆ. ರಾಜ್ಯ ರಾಜಕೀಯದಲ್ಲಿ ಮತ್ತೆ ಅಸ್ಥಿರತೆಯ ಪರ್ವ ಎದುರಾಗುತ್ತಿದೆ. ಇದು ಸ್ವಾಮೀಜಿಯವರ ಕಾಲಜ್ಞಾನವನ್ನು ಸಮರ್ಥಿಸುವ ಪ್ರಯತ್ನವಂತೂ ಖಂಡಿತಾ ಅಲ್ಲ ಆದರೆ ವಸ್ತುಸ್ಥಿತಿಯ ಸಮೀಕರಣ ಅಷ್ಟೇ!.

             ಹೌದು ಇಲ್ಲಿ ನಂಬಿಕೆಗಳಿಗೆ ಮೌಡ್ಯಗಳಿಗೆ ಹೆಚ್ಚಿನ ಆದ್ಯತೆಯಿದೆ, ವೈವಿದ್ಯಮಯ ಸಂಸ್ಕೃತಿಯ ಹೂರಣವಿದೆ, ಎಲ್ಲ  ಸಂಸ್ಕೃತಿಗಳನ್ನು ಒಂದೇ ವೇದಿಕೆಯಲ್ಲಿ ತರುವ ಆಚರಣೆಗಳಿವೆ. ಆಚರಣೆ ಮತ್ತು ನಂಬಿಕೆ ಸೀಮಿತ ವಲಯವನ್ನು ಬಿಟ್ಟು ಹೊರಕ್ಕೆ ಬಂದಿವೆಯಾದರೂ ಜಾಗತೀಕರಣದ ಪ್ರಭಾವ ಹಬ್ಬಗಳ ಆಚರಣೆ ಹಾಗೂ ಸಂಪ್ರದಾಯಗಳ ಮೇಲೆ ಪರಿಣಾಮ ಬೀರಿದೆ. ಅದನ್ನು ಹೇಳುವ ಮುನ್ನ ಸಂಕ್ರಾಂತಿಯ ಬಗ್ಗೆ ಒಂದಿಷ್ಟು ಮಾಹಿತಿ. ಮಕರ ಸಂಕ್ರಾಂತಿ ವರ್ಷದ ಆರಂಭದ ಹಬ್ಬ, ರೈತ ಸಂಸ್ಕೃತಿಯನ್ನು ಸಾರುವ ಸಮುದಾಯದ ಹಬ್ಬ. ಇದು ನಮ್ಮ ರಾಜ್ಯಕ್ಕೆ , ದೇಶಕ್ಕೆ ಮಾತ್ರ ಸೀಮಿತವಾದ ಹಬ್ಬವಲ್ಲ ವಿದೇಶಗಳಲ್ಲೂ ಈ ಹಬ್ಬದ ಆಚರಣೆಯಿದೆ. ಆಂದ್ರಪ್ರದೇಶ, ಬಿಹಾರ, ಗೋವಾ, ಸಿಕ್ಕಿಂ, ಜಾರ್ಖಾಂಡ್, ಕೇರಳ, ಮಧ್ಯಪ್ರದೇಶ,ಮಹಾರಾಷ್ಟ್ರ, ಮಣಿಪುರ, ಒರಿಸ್ಸಾ, ಉತ್ತರ ಪ್ರದೇಶ, ಉತ್ತರ ಖಂಡ, ಪ.ಬಂಗಾಳ, ಗುಜರಾತ್, ರಾಜಾಸ್ತಾನ್, ಹರ್ಯಾಣ, ಹಿಮಾಚಲ ಪ್ರದೇಶ, ಪಂಜಾಬ್, ತಮಿಳುನಾಡು, ಅಸ್ಸಾಂ, ಕಾಶ್ಮೀರ ಅಷ್ಟೇ ಅಲ್ಲ ಹಿಂದೂಗಳು ನೆಲೆಸಿರುವ ನೇಪಾಳ, ಥೈಲ್ಯಾಂಡ್, ಲಾವೋಸ್, ಮಯನ್ಮಾರ್, ಕಾಂಬೋಡಿಯಾ ದೇಶಗಳಲ್ಲೂ ವಿವಿಧ ಹೆಸರಿನಲ್ಲಿ ಈ ಹಬ್ಬದ ಆಚರಣೆಯಿದೆ. ಲಭ್ಯ ಮಾಹಿತಿಯನುಸಾರ ಸುಮಾರು 6000ವರ್ಷಗಳಷ್ಟು ಹಳೆಯದಾದ ಆಚರಣೆ ಈ ಸಂಕ್ರಾಂತಿ.ಪ್ರಾಚೀನ ಇತಿಹಾಸಗಳು ಹೇಳುವ ಪ್ರಕಾರ ಲ್ಯಾಟೀನ್ ಅಮೇರಿಕಾದ ಮಾಯನ್ನರು ಸಂಕ್ರಾಂತಿಯ ಆಚರಣೆಯನ್ನು ತಂದರು. ಸೂರ್ಯನು ಧನುರ್ ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವ ದಿನವೂ ಮಕರ ಸಂಕ್ರಾಂತಿಯೇ ಆಗಿದೆ. ಕುತೂಹಲದ ಸಂಗತಿಯೆಂದರೆ ಪುರಾಣಗಳ ಪ್ರಕಾರ ಸೂರ್ಯನ ಮಗನಾದ ಮಕರ ರಾಶಿಯ ಅಧಿಪತಿ ಶನಿಯ ಮನೆಗೆ ಬರುತ್ತಾನೆ ಆ ದಿನವೇ ಮಕರ ಸಂಕ್ರಾತಿ ಎಂಬ ಪ್ರತೀತಿ. ವಿಚಿತ್ರವೆಂದರೆ ಈ ಮಾಸವನ್ನು ತಂದೆ-ಮಕ್ಕಳ ಅವಿನಾಭಾವ ಸೌಹಾರ್ಧದ ದಿನವಾಗಿಯೂ ಇದನ್ನು ಆಚರಿಸುವುದನ್ನು ಕಾಣಬಹುದು. ಮಹಾವಿಷ್ಟು ಅಸುರರ ಹಾವಳಿಯನ್ನು ಕೊನೆಗೊಳಿಸಿ ಮಂದಾರ ಪರ್ವತದಲ್ಲಿ ಅಸುರರ ತಲೆಯನ್ನಿರಿಸಿದ ದಿನವೂ ಹೌದು.ಸಾಗರ ಮಹಾರಾಜನ 60ಸಾವಿರ ಮಕ್ಕಳು ಕಪಿಲ ಮಹಾಋಷಿಯ ಕೋಪಕ್ಕೆ ತುತ್ತಾಗಿ ಭಸ್ಮವಾದಾಗ ಅವರಿಗೆ ಮೋಕ್ಷ ಕರುಣಿಸಲು ಭಗೀರಥ ಮಹಾರಾಜ, ಶಿವನ್ನನ್ನು ಕುರಿತು ತಪಸ್ಸು ಮಾಡಿ ಗಂಗೆಯನ್ನು ಭೂಲೋಕ್ಕಕೆ ಕರೆತಂದು ಸತ್ತವರ ಆತ್ಮಗಳಿಗೆ ಮೋಕ್ಷ ಕರುಣಿಸಿದ ದಿನವೂ ಹೌದು.  ಅಂದು ಗಂಗೆ ಹರಿದ ಸ್ಥಳ ಇಂದಿಗೂ ಪ.ಬಂಗಾಳದಲ್ಲಿ ಕಾಣಬಹುದು ಮತ್ತು ಅದು 'ಗಂಗಾ ಸಾಗರ'ವೆಂದೆ ಹೆಸರಾಗಿದೆ. ಸತ್ತವರಿಗೆ ತರ್ಪಣ ಬಿಡುವ ಸಂಕ್ರಾಂತಿ ದಿನ ಸತ್ತುಹೋದ ಆತ್ಮಗಳಿಗೆ ಮೋಕ್ಷ ಕರುಣಿಸುವ ದಿನವೆಂದು ನಂಬಲಾಗುತ್ತದೆ. ಸದರಿ ದಿನದಂದು ಜೀವ ತೆತ್ತವರಿಗೆ ಮೋಕ್ಷ ದೊರೆಯುವುದಲ್ಲದೇ ಅತ್ಮಗಳಿಗೆ ಪುನರ್ಜನ್ಮವಿರುವುದಿಲ್ಲ ಎಂಬನೆಮ್ಮದಿಯ ನಂಬಿಕೆಯೂ ಉಂಟು. ಗಾಳೀಪಟ ಹಾರಿಸುವ ಹಬ್ಬ, ಬಸವಣ್ಣ ನ ಹಬ್ಬ, ಮಾಗಿ, ಬಿಹು ಹೀಗೆ ಹತ್ತಾರು ವಿಧಗಳಲ್ಲಿ ಸಂಕ್ರಾಂತಿಯ ಆಚರಣೆಯಿದೆ. ನಂಬಿಕೆಯ ಚೌಕಟ್ಟು ವಿವಿಧ ರೀತಿಯಲ್ಲಿ ಹಬ್ಬದ ಆಚರಣೆಗೆ ಕಾರಣವಾಗಿದೆ. 
       ಇನ್ನೊಂದು ಇಂಟರೆಸ್ಟಿಂಗ್ ಆದ ಸಂಗತಿಯೆಂದರೆ ಡಿಸೆಂಬರ್ 20-23 ರ ನಡುವೆ ಸೂರ್ಯ ಉತ್ತರದೆಡೆಗೆ ಚಲಿಸುತ್ತಾನೆ. ನಿಖರವಾಗಿ ಅದು 21-22ನೇ ದಿನಾಂಕವೂ ಆಗಬಹುದು, ಆ ದಿನ ವರ್ಷದಲ್ಲೇ ಅತೀ ಕಡಿಮೆ ಅವಧಿಯ ದಿನವೂ ಹೌದು. ಹೀಗಾಗಿ ಡಿಸೆಂಬರ್ 21ನೇ ದಿನಾಂಕವೇ ಮಕರ ಸಂಕ್ರಾಂತಿಯ ನೈಜ ದಿನವಾಗಿದೆ ಎಂಬ ಉಲ್ಲೇಖವಿದೆ.ಕಾಲಾನಂತರದ ಬದಲಾವಣೆಗಳಲ್ಲಿ ಕಾಣ ಬರುವ ವ್ಯತ್ಯಾಸಗಳಿಂದ ಸಾವಿರ ವರ್ಷಗಳ ಹಿಂದೆ ಡಿಸೆಂಬರ್ 31 ಸಂಕ್ರಾಂತಿ ಹಬ್ಬದ ದಿನ. ಕಾಲ ಸರಿದಂತೆ ಈಗ ಜನವರಿ 14ಕ್ಕೆ ಸಂಕ್ರಾಂತಿ ಆಚರಣೆ ನಡೆಯುತ್ತಿದೆ. ಮುಂದಿನ 5ಸಾವಿರ ವರ್ಷಗಳ ತರುವಾಯ ಫೆಬ್ರುವರಿ 28ಕ್ಕೆ ಸಂಕ್ರಾಂತಿ ಹಬ್ಬ ಬರಲಿದೆ ಇನ್ನೂ ಮುಂದುವರೆದು ಹೇಳುವುದಾದರೆ 9000ವರ್ಷಗಳ ನಂತರ ಮಕರ ಸಂಕ್ರಾಂತಿ ಜೂನ್ ತಿಂಗಳಲ್ಲಿ ಬರುವುದಂತೆ! ಬ್ರಹ್ಮಾಂಡದಲ್ಲಿ ಆಕಾಶಕಾಯಗಳ ಚಲನೆಯಲ್ಲಿ ಆಗುವ ಬದಲಾವಣೆಗಳು ಇದಕ್ಕೆ ಕಾರಣವಂತೆ.ಪ್ರಾದೇಶಿಕವಾಗಿ ಬೇರೆ ಬೇರೆ ರೀತಿಯಲ್ಲಿ ಹಬ್ಬದ ಆಚರಣೆಯಿದ್ದರೂ ಅಂತಿಮವಾಗಿ ಎಲ್ಲರ ಪೂಜೆ ಸಲ್ಲುವುದು ಸೂರ್ಯನಿಗೆ. ಸೂರ್ಯನನ್ನು ಬುದ್ದಿವಂತಿಕೆ,ಪರಿಶುದ್ದತೆ ಮತ್ತು ಶ್ರದ್ದೆಯ ಪ್ರತೀಕವಾಗಿ ಪೂಜಿಸಲಾಗುತ್ತದೆ. 
        ಎಳ್ಳು-ಬೆಲ್ಲ ಹಂಚುವ  ಸಮಾನತೆಯನ್ನ, ಒಳ್ಳೆಯ ಮಾತುಗಳನ್ನಾಡುವ ಸಂಕಲ್ಪವನ್ನ ತೊಡುವ ಆಚರಣೆ ಈ ಸಂದರ್ಭ ದಲ್ಲಿ ಕಾಣಬಹುದು. ಹಿಂದಿನ ದಿನಗಳಲ್ಲಿ ಆರ್ಥಿಕ ಕೊರತೆ, ಹಸಿವು, ಬಡತನಗಳ ಕಾರಣದಿಂದಾಗಿ ಬ್ರಾಹ್ಮಣೇತರರು ಈ ಹಬ್ಬದ ಸಂಧರ್ಭದಲ್ಲಿ ಸಕ್ರಿಯವಾಗಿ ಪಾಲುದಾರರಾಗುತ್ತಿರಲಿಲ್ಲ, ಆದರೆ ಕೆಲವು ದಶಕಗಳ ಹಿಂದಿನಿಂದ ಸಾಮೂಹಿಕವಾಗಿ ಹಬ್ಬದ ಆಚರಣೆ ಕಾಣಬರುತ್ತಿತ್ತು, ಹಬ್ಬದ ದಿನದಂದು ಸಂಜೆಯ ವೇಳೆಗೆ ಸಾಂಪ್ರದಾಯಿಕವಾದ ಲಂಗ-ದಾವಣಿ ತೊಟ್ಟ ಮಕ್ಕಳು ಮತ್ತು ಯುವತಿಯರು ಪ್ರತಿಯೊಬ್ಬರ ಮನೆಗೂ ತೆರಳಿ ಎಳ್ಳುಬೀರಿ ಆಶೀರ್ವಾದ ಪಡೆಯುವ ಸಂಪ್ರದಾಯವಿತ್ತು. ಆದರೆ ಕಳೆದ ಕೆಲವು ವರ್ಷಗಳಿಂದ ಇಂತಹ ಕ್ರಿಯೆಗೆ ತಡೆ ಬಿದ್ದಿದೆ. ಹಬ್ಬದ ಸಂಭ್ರಮ ನೀರಸವಾಗಿದೆ, ಹಳ್ಳಿಗಳಲ್ಲಿ ನಡೆಯುತ್ತಿದ್ದ ಹಳ್ಳಿ ಆಟಗಳಿಗೆ ಕಡಿವಾಣ ಬಿದ್ದಿದೆ, ಸಾಮೂಹಿಕವಾಗಿ ಕೊಂಡ ಹಾಯುವ ಜಾನುವಾರು ಆಕರ್ಷಣೆ, ಬಸವಣ್ಣನ ಪೂಜೆ, ಗಾಳಿ ಪಟ ಹಾರಿಸುವ ಸಂಭ್ರಮಗಳು ಮರೆಯಾಗುತ್ತಿವೆ ಎಂಬುದು ವಿಷಾಧನೀಯ ಸಂಗತಿ. ಜಾಗತೀಕರಣದ ಕಬಂಧ ಬಾಹು ಎಲ್ಲೆಡೆ ಆವರಿಸುವ ಮೂಲಕ ಸಂಸ್ಕೃತಿಯ ಮೇಲೂ ಪ್ರಭಾವ ಬೀರಿದೆ. ಜನರ ಭಾವನೆ-ಆಲೋಚನಾ ಕ್ರಮಗಳು ಬದಲಾಗುತ್ತಿವೆ 'ಜನಪದ' ಅಪಾಯದಂಚಿಗೆ ಸರಿದಿದೆ.

2 comments:

Unknown said...

ಆದರೆ ಸ್ವಾಮೀಜಿ ಸರಕಾರದ ಬಗ್ಗೆ ಯಾವುದೇ ನಿಲುವು ವ್ಯಕ್ತಪಡಿಸಿದರು ಅದು ಜಾರಿಗೆ ಬರುತ್ತಿಲ್ಲ

ಮನಸಿನಮನೆಯವನು said...

ಅರಕಲಗೂಡುಜಯಕುಮಾರ ..,

ಇದರ ಬಗ್ಗೆ ಇಷ್ಟೊಂದು ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು..
ನಮ್ಮ ಕಡೆ ಈ ಕೆಲವು ಸಂಪ್ರದಾಯಗಳು ಇನ್ನೂ ಉಳಿದಿವೆ...

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...