ಕಳೆದ ಶನಿವಾರ ಮಾರ್ನಿಂಗ್ ಮಿಸ್ಟ್ ಹೋಂ ಸ್ಟೇ ನಲ್ಲಿ ನಡೆದ ಹಿಂದೂ ಜಾಗರಣ ವೇದಿಕೆಯ ದಾಳಿಯ ಪ್ರಕರಣದ ಕುರಿತು ಪ್ರತಿಭಟನೆಗಳು ನಡೆಯುತ್ತಿವೆ ಮಾದ್ಯಮಗಳಲ್ಲಿ ಚರ್ಚೆಗಳು ಆಗುತ್ತಿವೆ ಫೇಸ್ ಬುಕ್ ನಂತಹ ಸಾಮಾಜಿಕ ತಾಣಗಳಲ್ಲಿ ಪರ-ವಿರೋಧದ ಚರ್ಚೆಗಳು ಜಾರಿಯಲ್ಲಿವೆ, ಯೂಟ್ಯೂಬ್ ನಲ್ಲಿ ಘಟನೆಯ ತುಣುಕುಗಳನ್ನು ಪದೇ ಪದೇ ಮುಗಿಬಿದ್ದು ನೋಡಲಾಗುತ್ತಿದೆ. ಘಟನೆಯ ಕುರಿತು ಸರ್ಕಾರ ಜಾಣತನದ ನಿರ್ಲಕ್ಷ್ಯ ತೋರಿದರೂ ಒತ್ತಡ ಹೆಚ್ಚಾದಂತೆ ಅಪರಾಧಿಗಳನ್ನು ಬಂಧಿಸುತ್ತಿದ್ದಾರೆ. ಈ ಘಟನೆಯಲ್ಲಿ ಬಳಕೆ ಯಾಗುತ್ತಿರುವ ಪುಂಡರ ನೈತಿಕ "ಪೋಲೀಸ್ ಗಿರಿ", ಘಟನೆ ಕುರಿತು ಪೋಲೀಸರ ವರ್ತನೆಗಳು, ಮಾದ್ಯಮದ ಹೊಣೆಗಾರಿಕೆಗಳು, ಸರ್ಕಾರದ ನಿರ್ಲಕ್ಷ್ಯ ಧೋರಣೆಗಳು, ಪೋಷಕರ ನಿರ್ಲಕ್ಷ್ಯತನ, ಪ್ರಕರಣದ ವಾಸ್ತವತೆ ಅರಿಯದೇ ಬೀದಿಗಿಳಿದು ಪ್ರತಿಭಟಿಸುತ್ತಿರುವವರ ಧೋರಣೆಗಳು ಸಧ್ಯ ಚರ್ಚೆಗೆ ಬರುವುದು ಅವಶ್ಯವಾಗಿದೆ.
ಅವತ್ತು ಶನಿವಾರ ರಾತ್ರಿ ಮಂಗಳೂರಿನ ಕಾರ್ಪೋರೇಟರ್ ಮೋಹನ್ ಪಡೀಲ್ ಎಂಬ ಚಡ್ಡಿಯ ನೇತೃತ್ವದಲ್ಲಿ ಹಿಂದೂ ಜಾಗರಣಾ ವೇದಿಕೆ ಹೆಸರಿನಡಿಯಲ್ಲಿ ಪುಂಡರು ಮಾರ್ನಿಂಗ್ ಮಿಸ್ಟ್ ಹೋಂ ಸ್ಟೇ ಮೇಲೆ ನಡೆಸಿದ ದಾಳಿಯ ಸಂಧರ್ಭದಲ್ಲಿ ಪಾರ್ಟಿ ನಡೆಸುತ್ತಿದ್ದವರ ಬಳಿ ನಡೆದುಕೊಂಡ ರೀತಿ ಖಂಡನೀಯ ಹಾಗೂ ಶಿಕ್ಷಾರ್ಹ. ಅದೇ ರೀತಿ ಅನೈತಿಕತೆಯ ಪಾರ್ಟಿ ನಡೆಸುತ್ತಿದ್ದವರು ಕೂಡಾ ಶಿಕ್ಷಾರ್ಹರು ಎಂಬುದು ಅಷ್ಟೇ ಸತ್ಯ. ಮಂಗಳೂರಿನಲ್ಲಿ ಇಂತಹ ಘಟನೆಗಳು ನಡೆಯುತ್ತಿರುವುದು ಇದೇ ಮೊದಲೇನಲ್ಲ ಈ ಹಿಂದೆ ನಡೆದ ಪಬ್ ಅಟ್ಯಾಕ್ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಿತ್ತು ತೀರ ಈಚೆಗೆ ಅಸ್ಸಾಂನ ಗುರ್ ಗಾಂವ್ ನಲ್ಲಿ 16ರ ಬಾಲೆಯನ್ನು ಗುಂಪೊಂದು ನಡು ರಸ್ತೆಯಲ್ಲಿ ಸಾರ್ವಜನಿಕವಾಗಿ ಬಟ್ಟೆ ಬಿಚ್ಚಿ ಅನಾಚಾರ ಎಸಗಲು ಪ್ರಯತ್ನಿಸಿದ ಘಟನೆ ರಾಷ್ಟ್ರಾದ್ಯಂತ ಚರ್ಚೆಯಾಗುತ್ತಿರುವ ಸಂಧರ್ಭದಲ್ಲೇ ಮಂಗಳೂರಿನ ಹೋಂ ಸ್ಟೇ ಪ್ರಕರಣ ನಡೆದದ್ದು ರಾಜ್ಯದ ಜನತೆ ತಲೆ ತಗ್ಗಿಸುವಂತೆ ಮಾಡಿದೆ. ಏಕೆಂದರೆ ರಾಜ್ಯದಲ್ಲಿ ಆಡಳಿತದಲ್ಲಿರುವ ಬಿಜೆಪಿ ಪಕ್ಷದ ಕೃಪಾ ಪೋಷಿತ ಸಂಘಟನೆಯೊಂದು ಈ ಕೃತ್ಯದಲ್ಲಿ ಭಾಗಿಯಾಗಿದ್ದು ಮತ್ತು ತಕ್ಷಣ ಕೃತ್ಯದ ಕುರಿತು ಕ್ರಮ ಜರುಗಿಸುವಲ್ಲಿ ವಿಫಲವಾಗಿದ್ದು ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ. ಹೇಳಿ ಕೇಳಿ ಮಂಗಳೂರು ಪಾಶ್ಚಾತ್ಯ ಸಂಸ್ಕೃತಿಗೆ ಹೆಚ್ಚು ಒಗ್ಗಿಕೊಂಡ ಕಡಲ ತಡಿಯ ಪ್ರದೇಶ, ವಿದೇಶಗಳಲ್ಲೂ ಹೆಚ್ಚಿನವರು ನೆಲೆಸಿರುವುದು ಅಲ್ಲಿನವರೇ ಗೊತ್ತಿದ್ದೊ ಗೊತ್ತಿಲ್ಲದೇಯೋ ದೇಸೀ ಸಂಸ್ಕೃತಿಗಿಂತ ಅಲ್ಲಿ ಬೇರೆ ಸಂಸ್ಕೃತಿಗಳ ಪ್ರಭಾವವೇ ಹೆಚ್ಚಾಗಿದೆ. ಪರಿಣಾಮ ಅನೈತಿಕತೆಯಂತಹ ಸಂಗತಿಗಳು ಅಲ್ಲಿ ನಿತ್ಯ ನೂತನ.! ಉದ್ದಿಮೆಗಳಿಗೆ, ಶಿಕ್ಷಣ ಸಂಸ್ಥೆಗಳಿಗೆ ಮತ್ತು ಸೇವಾ ಸಂಸ್ಥೆಗಳಿಗೆ, ಧಾರ್ಮಿಕತೆಗೆ ಹೆಚ್ಚು ಒತ್ತು ನೀಡುವ ಮಂಗಳೂರು ಅತ್ಯಂತ ಪ್ರಬುದ್ದರನ್ನು ಸಹಾ ನೀಡಿದೆ ಆದರೆ ಅದೇ ನೆಲದಲ್ಲಿ ಇದಕ್ಕೆ ವ್ಯತಿರಿಕ್ತವಾದ ಅಂಶಗಳನ್ನು ತನ್ನ ನೆರಳಲ್ಲಿಯೇ ಪೋಷಿಸುತ್ತಿದೆ ಎನ್ನುವುದು ಸಹಾ ದುರಂತದ ಸಂಗತಿ. ಸಂಘ ಪರಿವಾರದ ಪ್ರಾಬಲ್ಯ ವಿರುವ ಮಂಗಳೂರಿನಲ್ಲಿ ಸಭ್ಯತೆ, ಶಿಷ್ಠಾಚಾರ ಮತ್ತು ಪ್ರಾಮಾಣಿಕತೆಗಳು ಇರುವ ಜೊತೆಗೆ ಕೋಮು ಕಲಹ ಹರಡುವ ಪುಂಡರ ಹಾವಳಿಯನ್ನು ಪೋಷಿಸುವ ಪ್ರಕ್ರಿಯೆಗಳು ಜಾರಿಯಲ್ಲಿವೆ. ವಿಪರ್ಯಾಸವೆಂದರೆ ಅದೇ ನೆಲದಲ್ಲಿ ಹಿಂದುತ್ವ/ಕ್ರೈಸ್ತ/ಮುಸಲ್ಮಾನರ ಮೂಲಭೂತ ವಾದದದ ಪ್ರತಿಪಾದನೆಯಂತೆಯೇ ಕಮ್ಯುನಿಸಂ ಧೋರಣೆಯ ಜನರು ಇದ್ದಾರಾದರೂ ಮೂಲಭೂತವಾದಿಗಳದ್ದೇ ಇಲ್ಲಿ ಕೈ ಮೇಲಾಗಿರುವುದು ಕಾಣ ಸಿಗುತ್ತದೆ. ಆದ್ದರಿಂದಲೇ ಅದು ಸದಾ ಹೊತ್ತಿ ಉರಿಯುವ ಸೂಕ್ಷ್ಮ ಪ್ರದೇಶವೂ ಹೌದು.ಇದೆಲ್ಲಾ ರಾಜಕಾರಣಕ್ಕೆ ಮತ್ತು ವ್ಯವಸ್ಥೆಯನ್ನು ಪಟ್ಟಭದ್ರರು ಹಿಡಿತಕ್ಕೆ ತೆಗೆದುಕೊಳ್ಳಲು ಅನುವು ಮಾಡಿಕೊಟ್ಟಿದೆ. ಅಲ್ಲಿನ ಶಿಕ್ಷಣ ಸಂಸ್ಥೆಗಳಿಗೆ ದೇಶ-ವಿದೇಶಗಳಿಂದ ಮತ್ತು ಹೊರ ರಾಜ್ಯಗಳಿಂದ ವಿದ್ಯಾರ್ಥಿಗಳ ದಂಡೇ ಹರಿದು ಬರುತ್ತದೆ. ಶಿಕ್ಷಣ ಅಲ್ಲಿ ವ್ಯಾಪಾರೀಕರಣದ ಅಡ್ಡೆಯಾಗಿದೆ ಅದೇ ನೆರಳಲ್ಲಿ ಅನಾಚಾರಗಳಿಗೂ ವೇದಿಕೆಯಾಗಿರುವುದು ನೋವಿನ ಸಂಗತಿ. ಕಲಿಯಲು ಬರುವ ಕೆಲವು ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ನೈತಿಕತೆಯ ಅಂಶಗಳನ್ನು ಮರೆಸುವ ವಿಚಾರಗಳತ್ತಲೂ ಆಕರ್ಷಿತರಾಗಿ ಬಿಡುತ್ತಾರೆ. ಮಾದಕ ದ್ರವ್ಯಗಳ ವ್ಯಸ್ನನ,ಕುಡಿತ, ಸೆಕ್ಸ್, ಬಿಡಾಡಿ ವರ್ತನೆಗಳೆಲ್ಲವನ್ನೂ ರೂಡಿಸಿಕೊಂಡು ವ್ಯವಸ್ಥೆಯಲ್ಲಿ ಕಂಟಕಪ್ರಾಯವಾಗಿಬಿಡುತ್ತಾರೆ, ಹೆತ್ತವರಿಗೆ ತಿಳಿಯದಂತೆ ಲಿವಿಂಗ್ ಟುಗೆದರ್ ಬದುಕು ನಡೆಸಿ ಕೋರ್ಸ್ ಪೂರೈಸಿದ ನಂತರ ಅವರವರ ಪಾಡಿಗೆ ಬೇರೆ ಹೋಗಿ ಬಿಡುತ್ತಾರೆ. ಎಷ್ಟೋ ಪೋಷಕರಿಗೆ ತಮ್ಮ ಮಕ್ಕಳು ಏನು ಮಾಡುತ್ತಿದ್ದಾರೆಂಬ ಅರಿವು ಇರುವುದಿಲ್ಲ. ಇಂತಹದ್ದೆಲ್ಲ ಮೇಳೈಸಿ ಪಬ್ ಅಟ್ಯಾಕ್ ಮತ್ತು ಮಾರ್ನಿಂಗ್ ಮಿಸ್ಟ್ ಹೋಂ ನಂತಹ ಘಟನೆಗಳು ಜರುಗಲು ಕಾರಣವಾಗಿ ಬಿಡುತ್ತವೆ ಎಂಬುದು ಸತ್ಯ ಅಲ್ಲವೇ?
http://www.youtube.com/watch?v=22czcPNG-3M&feature=player_embedded#!
ಇನ್ನು ಪಬ್ ಅಟ್ಯಾಕ್ ವಿಷಯಕ್ಕೆ ಬರೋಣ ಹೋಂ ಸ್ಟೇ ಮೇಲೆ ಧಾಳಿ ಮಾಡಿದ ಪುಂಡರು ಅರೆ ನಗ್ನ ಸ್ಥಿತಿಯಲ್ಲಿದ್ದ ಯುವತಿಯರನ್ನು ಮುಟ್ಟಬಾರದ ಜಾಗದಲ್ಲಿ ಮುಟ್ಟಿ ಹೊಡೆದು ಬಡಿದು ರಾಕ್ಷಸಿ ಕೃತ್ಯವನ್ನು ಎಸಗಿದ್ದು ಕ್ಷಮಿಸಲಾಗದ ದುರ್ವರ್ತನೆ, ಪುಂಡರ ಇಂತಹ ಕೃತ್ಯವನ್ನ ನೈತಿಕ ಪೋಲೀಸ್ ಗಿರಿ ಎಂದು ಹೇಳುವುದು ತಪ್ಪು, ವಿಕೃತ ಮನೋಭಾವದವರು ನೈತಿಕತೆಯ ಅಂಶಗಳನಿಟ್ಟುಕೊಂಡು ಅಲ್ಲಿಗೆ ಧಾಳಿ ನಡೆಸಿರಲಿಲ್ಲ ಅದರ ಹಿಂದಿನ ಉದ್ದೇಶಗಳೇ ಬೇರೆ ಎಂಬುದು ಬೆಳಕಿಗೆ ಬರುತ್ತಿದೆ.ನಗರದ ಹೊರವಲಯದಲ್ಲಿ ಅನಧಿಕೃತ ಹೋಂ ಸ್ಟೇ ನಡೆಯುತ್ತಿದ್ದರೂ ಪೋಲೀಸ್ ಮತ್ತು ಜಿಲ್ಲಾ ಆಡಳಿತ ವ್ಯವಸ್ಥೆ ಕಂಡರೂ ಕಾಣದಂತಿತ್ತು ಇದನ್ನು ದುರುಪಯೋಗ ಪಡಿಸಿಕೊಂಡ ಪುಂಡ ಚಡ್ಡಿ ಲೀಡರ್ ಅಲ್ಲಿಂದ 5000ರೂಗಳ ಮಾಮೂಲಿ ಹಫ್ತಾ ಪಡೆಯುತ್ತಿದ್ದ ಅದು ಸಿಗದಿದ್ದಾಗ ಹಿಂದೂ ಸಂಸ್ಕೃತಿಯ ಹೆಸರಿನಲ್ಲ ತನ್ನ ಪಟಾಲಂ ಅನ್ನು ಛೂ ಬಿಟ್ಟ ಅಹಿತಕರ ಘಟನೆಗೆ ಕಾರಣನಾಗಿದ್ದಾನೆ ಹೀಗಿರುವಾಗ ಅದು ನೈತಿಕ ಪೋಲೀಸ್ ಗಿರಿ ಹೇಗಾದೀತು? ಇನ್ನು ಅಲ್ಲಿ ಪಾರ್ಟಿ ನಡೆಸಿದವರ ಕಥೆ, ಪಾರ್ಟಿಯ ಕೇಂದ್ರ ಬಿಂದುಗಳು ವಿದ್ಯಾರ್ಥಿಗಳಲ್ಲ ಎಂಬುದು ಜಗಜ್ಜಾಹಿರಾಗಿರುವ ಸತ್ಯ ಮತ್ತು ಅವರ ಸಾರ್ವಜನಿಕ ನಡವಳಿಕೆಗಳ ಕುರಿತು ಒಳ್ಳೆಯ ಮಾತುಗಳಿಲ್ಲ. ಮದ್ಯಾಹ್ನವೇ ಬರ್ತ್ ಡೇ ಪಾರ್ಟಿ ಏರ್ಪಾಡಾಗಿದ್ದರೂ ಕತ್ತಲಾಗುವ ವೇಳೆಗೆ ಅಲ್ಲಿ ಉಳಿದದ್ದು 4-5 ಹುಡುಗಿಯರು ಮತ್ತು ಹುಡುಗರು. ಮಹಿಳಾ ಆಯೋಗದ ಅಧ್ಯಕ್ಷೆ ಸಿ ಮಂಜುಳಾ ಹೇಳುವ ಪ್ರಕಾರ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ತನ್ನ ಹುಟ್ಟು ಹಬ್ಬ ಆಚರಣೆಗೆ ಪಿಯುಸಿ ಓದುತ್ತಿದ್ದ ಸ್ನೇಹಿತೆಯರನ್ನು ಆಹ್ವಾನಿಸಿದ್ದರು. ಉಳಿದ ಯುವತಿಯರು ಕಾಲೇಜು ಯುನಿಫಾರಂ ನಲ್ಲೆ ಹೋಂ ಸ್ಟೇ ಗೆ ಬಂದಿದ್ದರು, ಅಲ್ಲಿ ಅವರಿಗಾಗಿ ಪಾರ್ಟಿ ಡ್ರೆಸ್ ಸಿದ್ದಪಡಿಸಲಾಗಿತ್ತು, ಅವರೆಲ್ಲ ಯೂನಿಫಾರಂ ಕಳಚಿ ಪಾರ್ಟಿ ಡ್ರೆಸ್ ಧರಿಸಿದ್ದರು(ಅವು ಎಂತಹ ಡ್ರೆಸ್ ಗಳು ಎಂಬುದು ಜನತೆ ಈಗಾಗಲೆ ನೊಡಿದ್ದಾರೆ) ಮತ್ತು ಪಾರ್ಟಿ ಆಯೋಜಿಸಿದ್ದ ಯುವಕರಿಗೆ ಆ ಯುವತಿಯರ ಬಗ್ಗೆ ತಿಳಿದಿರಲಿಲ್ಲ! ಬರ್ತ್ ಡೇ ಗೆ ಬಿಯರ್ ತರಲಾಗಿತ್ತು ಪಾರ್ಟಿಯಲ್ಲಿ ಪಾಲ್ಗೊಂಡ ಬಹುತೇಕ ಹುಡುಗಿಯರ ಮನೆಗಳಲ್ಲಿ ತಮ್ಮ ಮಕ್ಕಳು ಅಲ್ಲಿಗೆ ಹೋಗಿದ್ದಾರೆ ಎಂಬುದು ತಿಳಿದಿರಲಿಲ್ಲ ಅಂದರೆ ಇದನ್ನ ಏನೆಂದು ತಿಳಿಯಬೇಕು ? ಇದೇನು ಸೆಕ್ಸ್ ಟೂರಿಸಂ ? ಇದು ಅನೈತಿಕತೆಯಲ್ಲದೇ ಮತ್ತೇನು? ಅಂದು ಸ್ಥಳಕ್ಕೆ ಬಂದ ಪೋಲೀಸರಿಗೆ ಸುತ್ತಮುತ್ತಲ ನಿವಾಸಿಗಳು ಹಲವಾರು ಭಾರಿ ಹೋಂ ಸ್ಟೇ ಮುಚ್ಚಿಸುವಂತೆ ದೂರು ನೀಡಿದ್ದರೂ ಕ್ರಮವಾಗಿರಲಿಲ್ಲ ಮತ್ತು ಘಟನೆ ನಡೆದಾಗ ಸ್ಥಳಕ್ಕೆ ಬಂದರೂ ದಾಳಿಕೋರ ಪುಂಡರನ್ನು ವಶಕ್ಕೆ ಪಡೆಯಲಿಲ್ಲ! ಅಂದರೆ ಇದರ ಹಿಂದಿನ ಹುನ್ನಾರವೇನು? ಮಾಧ್ಯಮಗಳು ಸಾಮಾಜಿಕ ಕಳಕಳಿಯಿಲ್ಲದೇ ಘಟನೆಯನ್ನು ಪ್ರಸಾರ ಮಾಡಿವೆ ಎಂಬ ಹುಯಿಲೆದ್ದಿದೆ ಆದರೆ ಈ ಕುರಿತು ಮಾಧ್ಯಮಗಳಲ್ಲಿ ಪ್ರಸಾರವಾಗದಿದ್ದರೆ ಇಂತಹ ವಾದಗಳಿಗೆ ಮಾನ್ಯತೆ ಇರುತ್ತಿರಲಿಲ್ಲ ಮಾಧ್ಯಮಗಳ ಕುರಿತು ಒಂದೇ ಆಕ್ಷೇಪಣೆಯೆಂದರೆ ಅರೆನಗ್ನ ಸ್ಥಿತಿ ಯನ್ನು ಮತ್ತು ದಾಳಿಗೀಡಾದವರ ಮುಖಗಳಮರೆಮಾಚಿ ತೋರಿಸಬಹುದಿತ್ತು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹೇಳುವುದಾದರೆ ಚಡ್ಡಿಗಳ ತುತ್ತೂರಿ ಆಗಿರುವ ಹೊಸದಿಗಂತ ಪತ್ರಿಕೆ ಬದ್ಧತೆ ಮರೆತು ಪುಂಡರನ್ನು ಸಮರ್ಥಿಸುವ ಧಾಟಿಯಲ್ಲಿ ವರದಿಗಳನ್ನು ಪ್ರಕಟಿಸುತ್ತಿರುವುದು ಮಾಧ್ಯಮ ಲೋಕದ ದುರಂತದ ಸಂಗತಿ. ಸಾಮಾಜಿಕ ಬದ್ಧತೆ ಉಳ್ಳ ಯಾವ ಪೋಷಕರಾದರೂ ತಮ್ಮ ಹೆಣ್ಣು ಮಕ್ಕಳನ್ನು ಹೊರವಲಯದ ಪಾರ್ಟಿಗಳಿಗೆ ಹೋಗಿ ಬಿಯರ್ ಕುಡೀರಿ, ಅರೆನಗ್ನ ಬಟ್ಟೆ ಧರಿಸಿ ಬೇಕಾದಂತೆ ನಡೆದುಕೊಳ್ಳಿ ಹುಟ್ಟುಹಬ್ಬ ಆಚರಿಸಿಕೊಳ್ಳಿ ಎನ್ನುವುದಿಲ್ಲ, ಅದು ನೈತಿಕ ನೆಲೆಗಟ್ಟಿನ ಸಂಗತಿಯೂ ಅಲ್ಲ. ಘಟನೆ ನಡೆಯುತ್ತಿದ್ದಂತೆ ಘಟನೆಯ ಒಮ್ಮುಖವನ್ನು ಮಾತ್ರ ಖಂಡಿಸಿ ಬೀದಿಗಿಳಿಯುವುದು ಸರಿಯಲ್ಲ ಪ್ರಚಾರವನ್ನೆ ಮುಖ್ಯವಾಗಿರಿಸಿಕೊಂಡು ಹೊರಟಾಗ ಇಂತಹ ಎಡವಟ್ಟುಗಳಾಗುತ್ತವೆ ಎಂಬುದನ್ನು ಸಂಘಟನೆಗಳು ಮತ್ತು ಮುಖಂಡರು ಅರಿಯಬೇಕು. ಪ್ರಕರಣವೊಂದನ್ನೇ ಗುರಿಯಾಗಿಸಿಕೊಂಡು ಅಸಹನೆಯನ್ನು ಪ್ರದರ್ಶಿಸುವಾಗ ಅನೈತಿಕತೆಯನ್ನು ಪೋಷಿಸಬಾರದಲ್ಲವೇ?
5 comments:
"ಯಾವುದ್ರೀ ಅದು "ನೈತಿಕ ಪೋಲೀಸ್ ಗಿರಿ"?" ನಾನೂ ಕೂಡ ಇದೇ ಪ್ರಶ್ನೆ ಕೇಳಬೇಕೆಂದಿದ್ದೇನೆ. ಇವರೆಲ್ಲಾ ಯಾರ್ರೀ? ಯಾಕಾಗಿ ಇವರು ಹೆಣ್ಣುಮಕ್ಕಳ ಮೇಲೆ ಹಲ್ಲೆ ಮಾಡುತ್ತಿದ್ದಾರೆ? ವೇಷ ಭೂಷಣ ಅವರವರ ಇಷ್ಟಕ್ಕೆ ಬಿಟ್ಟಿದ್ದು. ಈ ...ಮಕ್ಕಳು ಯಾರ್ರೀ ಅದನ್ನೆಲ್ಲಾ ಕೇಳೊಕೆ? ಮನುಷ್ಯ ದೊಡ್ಡವನಾದ್ಮೇಲೆ ಅವನಿಷ್ಟದ ಹಾಗೆ ಬದುಕ್ತಾನೆ(ಇನ್ನೊಬ್ಬರಿಗೆ ತೊಂದರೆ ಕೊಡದ ಹಾಗೆ). ಯಾರಿಗೂ ಅದನ್ನು ಪ್ರಶ್ನಿಸುವ ಹಕ್ಕಿಲ್ಲ. ಈ ಜನ ಯಾವುದೋ ಸಾರ್ವಜನಿಕ ರಸ್ತೆ ಯಲ್ಲಿ ಮಸ್ತಿ ಮಾಡುತ್ತಿರಲಿಲ್ಲ. ಹಾಗಿದ್ದಮೇಲೆ, ಯಾರಿಗ್ಯಾಕೆ ಆಗಬಾರದಕಡೆಯಲ್ಲೆಲ್ಲಾ ಉರಿ?
ಮೊದಲು ಆಕ್ರಮಣ ಮಾಡಿದ ಗೂಂಡಾಗಳನ್ನು ಒಳಗೆ ಹಾಕಿ ಬೆಂಡೆತ್ತಬೇಕು.ಆ ಕೆಲಸವನ್ನು ಪೋಲೀಸರು ಎಷ್ಟರ ಮಟ್ತಿಗೆ ಮಾಡ್ತಾರೋ ಅಥವಾ ರಾಜಕಾರಣ ನಡೆಯುತ್ತೋ ಗೊತ್ತಿಲ್ಲ. ಗೂಂದಾಗಿರಿಯನ್ನು ಯಾರೂ ಸಮರ್ಥಿಸಬಾರದು. ಎರಡನೆಯ ಅಂಶ ನಮ್ಮ ಹೆಣ್ಣುಮಕ್ಕಳದ್ದು. ಯಾಕ್ರೀ ಇವರಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳುವುದಕ್ಕೆ ಮನೆ ಇರಲಿಲ್ವಾ? ಛೇ! ಛೇ|| ನಮ್ಮಲ್ಲಿ ಒಂದು ಗಾದೆ ಮಾತಿದೆ. ಎರಡೂ ದದ್ದ ಹೊರಹಾಕು, ಅಂತ. ಹಾಗಾಯ್ತು. ಇವರಲ್ಲಿ ಯಾರನ್ನೂ ಸಮರ್ಥಿಸಿಕೊಳ್ಳುವ ಹಾಗಿಲ್ಲ.ನಿಮ್ಮ ಬರಹ ತೂಕವಾಗಿದೆ.ಆದರೆ ನಾನೂ ಒಬ್ಬ ಆರ್.ಎಸ್.ಎಸ್. ಸಂಬಂಧ ಇರೋನಾದ್ರಿಂದ ಚಡ್ದಿಗಳು ಎನ್ನುವ ಪದ ಪ್ರಯೋಗ ಬೇಸರ ತರಿಸುತ್ತೆ.
ಇಂತಹ ಕೆಟ್ಟ ಸಂದರ್ಭಗಳಲ್ಲಿ ಪಕ್ಷ ಬೇಧ ಮರೆತು ಕೆಟ್ಟದ್ದನ್ನು ಖಂಡಿಸುವ ಮನೋಭಾವ ವನ್ನು ಎಲ್ಲರೂ ಬೆಳೆಸಿಕೊಳ್ಳಬೇಕು. ಆದರೆ ದುರಂತವೆಂದರೆ ಏನೇ ತಪ್ಪು ಮಾಡಿದ್ದರೂ ಅವ ಯಾವುದಾದರೂ ಪಕ್ಷಕ್ಕೆ ಸೇರಿದ್ದವನಾದರೆ ಅವನನ್ನು ಆ ಪಕ್ಷ ರಕ್ಷಿಸಿಬಿಡುತ್ತೆ.ಎಲ್ಲಿಯವರಗೆ ದೇಶದ ಮತ್ತು ಸಮಾಜದ ಹಿತಕ್ಕೆ ಆಧ್ಯತೆ ಕೊಡುವುದಿಲ್ಲ ಅಲ್ಲಿಯವರೆಗೂ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ. ದೇಶ ಮತ್ತು ಸಮಾಜವನ್ನು ಉದ್ಧಾರ ಮಾಡುವುದು ಹಾಗಿರಲಿ, ತಮ್ಮ ಕುಟುಂಬ ನೆಮ್ಮದಿಯಿಂದ ಇರಬೇಕೆಂದರೆ ನಮ್ಮ ಸಂಸ್ಕೃತಿಯಂತೆ ಬಾಳುವುದನ್ನು ಪೋಷಕರು ತಾವೂ ಕಲಿಯಬೇಕು, ಮಕ್ಕಳಿಗೂ ಕಲಿಸಬೇಕು.ಇಲ್ಲದಿದ್ದರೆ ಕುಟುಂಬದ ನೆಮ್ಮದಿ ಉಳಿಯುವುದಿಲ್ಲ.
@ಹರಿಹರಪುರ ಶ್ರೀಧರ್ ಜಿ, ನಿಮ್ಮ ಭಾವನೆಗೆ ನೋವುಂಟಾಗಿದ್ದರೆ ಕ್ಷಮಿಸಿ, ಆರ್ ಎಸ್ ಎಸ್ ಕುರಿತು ನನಗೆ ಗೌರವಭಾವನೆ ಇದೆ.. ಕಾಲೇಜು ದಿನಗಳಿಂದಲೂ ಸುಮಾರು 6-7ವರ್ಷ ರಘುನಂದನ್, ಹಿರೇಂದ್ರ ಷಾ, ಅರವಿಂದ ಲಿಂಬಾವಳಿ, ಶೋಭಾಕರೆಂದ್ಲಾಜೆ, ಶ್ರೀನಿವಾಸ ಶಾನಬಾಳ(ದಿವಂಗತ) ದತ್ತಾತ್ರೇಯ ಹೊಸಬಾಳೆ ಅವರು ಎಬಿವಿಪಿ ನೇತೃತ್ವ ವಹಿಸಿದ್ದ ದಿನಗಳಲ್ಲಿ ಎಬಿವಿಪಿ ಯಲ್ಸಲಿ ಕ್ರಿಯವಾಗಿದ್ದವನು ನಾನು.. ಚಡ್ಡಿ ಎಂಬ ಪದ ಬಳಕೆಯಾಗಿರುವುದು 'ಪುಂಡ'ರಿಗೆ ಮಾತ್ರ.. ಅನ್ಯತಾ ಭಾವಿಸಬೇಡಿ ಸರ್
ಶ್ರೀ ಜಯ್ ಕುಮಾರ್ ,
ನಮಸ್ತೆ
ನಿಮ್ಮ ಸಹೃದಯತೆಗೆ ಶರಣು.ಹೌದು ಜಯಕುಮಾರ್ ನಾವು ನಂಬಿದ ವಿಚಾರಗಳ ಹತ್ತಿರ ಕೆಲವು ದುಷ್ಟ ಜನರೂ ಸೇರಿ ಸ್ಥಾನ ಪಡೆದು ನಮಗೆ ಬಲು ಕಷ್ಟವಾಗಿದೆ. ನನ್ನ ಒಂದು ವಿಚಾರ ಸ್ಪಷ್ಟವಿದೆ. ಆರ್.ಎಸ್.ಎಸ್. ನನಗೆ ಸಾಮಾಜಿಕ ಅರಿವು ಮೂಡಿಸಿತು. ನನ್ನ ವೈಚಾರಿಕ ಅರಿನೆಡೆಗೆ ನನ್ನ ಪಯಣ ಬೆಳೆದಿದೆ. ನನ್ನ ವೆಬ್ ಸೈಟ್ ನೋಡಿದರೆ ನಿಮಗೆ ನನ್ನ ವಿಚಾರ ಅರ್ಥವಾಗಬಹುದು. ಅಸತ್ಯ ಎಲ್ಲಿದ್ದರೂ ಅದು ಅಸಹನೀಯವೇ ಹೌದು. ಪ್ರೀತಿ ಇರಲಿ.ಕಾಮೆಂಟ್ ಬರೆಯಲು ಇರುವ ತೊಡಕು ತೆಗೆದು ಸಲೀಸು ಮಾಡಿದರೆ ಕಾಮೆಂಟ್ ಮಾಡುವವರ ಸಂಖ್ಯೆ ಹೆಚ್ಚಬಹುದು.
ಮಾನ್ಯರೇ,ಈ ಘಟನೆಗಳಿಂದ, ನಮ್ಮ ರಾಜ್ಯ ಯಾವ ಮಟ್ಟಕ್ಕೆ ಹೋಗುತ್ತಿದೆ ಎಂಬುದೇ ಭಯವಾಗುತ್ತಿದೆ. ನಮ್ಮ ನಮ್ಮ ಮನೆಗಳಲ್ಲಿ ಮಕ್ಕಳನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳಬೇಕು. ಅದನ್ನು ಬಿಟ್ಟು ಬೇರೆಯವರು ಯಾರದೋ ಮಕ್ಕಳನ್ನು ಅರೆನಗ್ನಗೊಳಿಸಿ, ಹಲ್ಲೆ ಮಾಡುವುದೆಂದರೆ ಹೇಗೆ? ಈ ರೀತಿಯ ಬುದ್ದಿ ಕಲಿಸಲು ಇವರು ಯಾರು? ಯಾರು ಇವರಿಗೆ ಅಧಿಕಾರ ಕೊಟ್ಟವರು? ಇದನ್ನು ಖಂಡಿಸಬೇಕು. ಪುನ: ಹೀಗಗದಂದೆ ಕ್ರಮ ತೆಗೆದುಕೊಳ್ಳಬೇಕು? ಒಟ್ಟಿನಲ್ಲಿ ಮಂಗಳೂರು ಜಿಲ್ಲೆಯಲ್ಲಿ ಏನೋ ನಡೆಯುತ್ತಿದೆ ಅಂದರೆ ಕಾನೂನು, ಆಡಳಿತ ಸುವ್ಯವಸ್ಥೆ ನಿಯಂತ್ರಣ ಇಲ್ಲವಾಗಿದೆ ಮಂಗಳೂರು ಜನ ಬುದ್ದಿವಂತರೆಂದು ಕೇಳಿದ್ದೇವೆ. ಇಂತಹ ಶೋಷಣೆ ಯನ್ನು ಹೇಗೆ ಸಹಿಸುತ್ತಾರೆ ಎಂಬುದು ಅರ್ಥವಾಗುತ್ತಿಲ್ಲ?
Post a Comment