Sunday, April 13, 2014

ಸಂವಿಧಾನದ ಸದಾಶಯ ಮತ್ತು ಅಂಬೇಡ್ಕರ್

ಭಾರತಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆ ಯಾಕೆ ಬೇಕು? ಸಮಾಜವಾದ, ಕಮ್ಯುನಿಸಂ ವ್ಯವಸ್ಥೆ ಆಗುವುದಿಲ್ಲವೇ ಅಲ್ಲಿಯೂ ಸಮಾನತೆಯನ್ನು ಪ್ರತಿಪಾದಿಸಲಾಗುತ್ತದಲ್ಲವೇ? ಭಾತರ ದೇಶದ ಪ್ರಜಾಪ್ರಬುತ್ವಕ್ಕೆ ಮಾದರಿ ಯಾವುದು? ಪ್ರೆಂಚ್ ಕ್ರಾಂತಿಯಿಂದ ಪ್ರೇರೇಪಿತರಾಗಿದ್ದೀರ? ಎಂಬ ಪ್ರಶ್ನೆಗಳನ್ನು ಅವತ್ತು ಭಾರತ ದೇಶದ ಮೊದಲ ಕಾನೂನು ಮಂತ್ರಿಯ ಮುಂದೆ ಪತ್ರಕರ್ತರು ಕೇಳಿದ್ದರು. ಅವೆಲ್ಲಾ ಪ್ರಶ್ನೆಗಳಿಗೂ ಸಾವಧಾನದಿಂದ ಮತ್ತು ದೃಢವಾಗಿ ಉತ್ತರಿಸಿದ ಮಂತ್ರಿಗಳು ಭಾರತ ಬಹುದೊಡ್ಡ ಸಾಂಸ್ಕೃತಿಕ ರಾಷ್ಟ್ರ. ಇಲ್ಲಿ ಜಗತ್ತಿನ ಬೇರೆ ಯಾವ ಭಾಗದಲ್ಲೂ ಇಲ್ಲದ ವಿವಿಧ ಮತ-ಧರ್ಮಗಳ ಜನರು ಇದ್ದಾರೆ ಅವರೆಲ್ಲರಿಗೂ ಸಮಾನ ಅವಕಾಶಗಳನ್ನ ಸಮಾಜವಾದ ಇಲ್ಲವೇ ಕಮ್ಯುನಿಸಂ ನಿಂದ ಪರಿಪೂರ್ಣವಾಗಿ ಕಟ್ಟಿಕೊಡಲು ಸಾಧ್ಯವಿಲ್ಲ, ಏಕೆಂದರೆ ದೇಶದಲ್ಲಿ ಈಗಾಗಲೇ ಅಸಮಾನತೆ ಇದೆ ಸಂಪನ್ಮೂಲ ಒಂದೆಡೆ ಕೇಂದ್ರೀಕೃತವಾಗಿದೆ ಇತರೆ ರಾಷ್ಟ್ರಗಳಂತೆ ಇಲ್ಲಿ ಕೆಲವು ಜನಾಂಗಗಳು, ಧರ್ಮಿಯರು ಇಲ್ಲ ಹಾಗಾಗಿ ಪ್ರಜಾಪ್ರಭುತ್ವ ಬಂದರೆ ಸಮಾಜದ ಅತ್ಯಂತ ಕೆಳಸ್ಥರದ ಪ್ರಜೆಗೂ ಎಲ್ಲ ಅವಕಾಶಗಳು ಆಧ್ಯತೆಯ ಮೇಲೆ ದಕ್ಕುತ್ತವೆ, ವ್ಯವಸ್ಥೆಯಲ್ಲಿ ಪಾಲ್ಗೊಳುವಿಕೆಗೆ ಅವಕಾಶ ದೊರೆಯುತ್ತದೆ ಆದ್ದರಿಂದ ಪ್ರಜಾಪ್ರಭುತ್ವ ದಿಂದ ಮಾತ್ರ ಭಾರತ ದೇಶ ಸದೃಢತೆಯನ್ನು ಹೊಂದಲು ಸಾದ್ಯ, ಪ್ರಜಾತಾಂತ್ರಿಕ ವ್ಯವಸ್ಥೆ ಉಸಿರು ಕಟ್ಟಿದ ವಾತಾವರಣದಿಂದ ಮುಕ್ತತೆಯೆಡೆಗೆ ಎಲ್ಲ ಜನರನ್ನು ಕರೆದೊಯ್ಯುತ್ತದೆ ಎಂದು ನುಡಿದ ಅವರು ದೇಶದ ಪ್ರಜಾಪ್ರಬುತ್ವ ವ್ಯವಸ್ಥೆಯನ್ನು ಪ್ರೆಂಚ್ ನಿಂದಲೋ ಮತ್ತೆಲ್ಲಿಂದಲೋ ಎರವಲು ಪಡೆದಿಲ್ಲ ನಮ್ಮ ಜನತಂತ್ರ ವ್ಯವಸ್ಥೆಯನ್ನು ಸ್ಥಳೀಯ ನಾಡಿಮಿಡಿತವನ್ನು ಅರಿತು ರೂಪಿಸಲಾಗಿದೆ. ಪ್ರೆಂಚ್ ಕ್ರಾಂತಿಯ ನಂತರ ಅಲ್ಲಿ ಪ್ರಜಾಪ್ರಭುತ್ವ ಹುಟ್ಟಿರ ಬಹುದು ಆದರೆ ಭಾರತದಲ್ಲಿ ಬುದ್ದನ ಕಾಲದಿಂದಲೇ ಪ್ರಜಾಪ್ರಭುತ್ವ ವ್ಯವಸ್ಥೆ ರೂಪುಗೊಂಡಿದೆ. ಭಗವಾನ್ ಬುದ್ದ ಸಮ ಪಾಲು: ಸಮ ಬಾಳು ಎಂಬುದನ್ನು ಪ್ರತಿಪಾದಿಸಿದ್ದರು ನಮ್ಮ ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲೂ ಅದನ್ನೇ ಆಶಯವಾಗಿ ಇಟ್ಟುಕೊಳ್ಳಲಾಗಿದೆ ಎಂದು ಸಮರ್ಥವಾಗಿ ಪ್ರಜಾಪ್ರಭುತ್ವವನ್ನು ಪ್ರತಿಪಾದಿಸಿದ್ದ ಆ ಕಾನೂನು ಮಂತ್ರಿಯೇ  ಡಾ. ಬಿ ಆರ್ ಅಂಬೇಡ್ಕರ್ !

            ಹೌದು ಅಂಬೇಡ್ಕರ್ ವಿಚಾರಗಳೇ ಹಾಗೆ ಭಾರತ ದೇಶದ ಬಹುದೊಡ್ಡ ವಿದ್ವಾಂಸರಾಗಿದ್ದ ಅವರು ರಾಜಕೀಯ, ಆರ್ಥಿಕ, ಸಾಮಾಜಿಕ ಹೀಗೆ ಅನೇಕ ಸಂಗತಿಗಳಿಗೆ ಸಂಬಂಧಿಸಿದಂತೆ ದೂರ ದೃಷ್ಟಿ ಹೊಂದಿದ್ದರು. ಆದರೆ ದೇಶದ ಜಾತೀಯ ಶಕ್ತಿಗಳು ಅವರನ್ನು ದಲಿತ ಲೀಡರ್ ಎಂದು ಬಿಂಬಿಸಿದ್ದು ಮತ್ತು ಅವರ ವಿರುದ್ದ ಸದಾ ಮಸಲತ್ತು ಮಾಡುತ್ತ ಅವರ ವಿಚಾರಧಾರೆಗಳ ಕುರಿತು ಅರಿಯುವ ಕ್ರಿಯೆಗೆ ಅಡ್ಡಗಾಲು ಹಾಕುತ್ತಲೇ ಬಂದವು . ಸಮಾನತೆಗಾಗಿ ಅಂಬೇಡ್ಕರ್ ಕೇಳಿದ್ದು ಪ್ರತ್ಯೇಕ ಮತದಾನ ಪದ್ದತಿ ಆದರೆ ಗಾಂಧೀಜಿ ಅಣತಿಯಂತೆ ದೊರೆತ್ತದ್ದು ಮೀಸಲು ರಾಜಕೀಯ ವ್ಯವಸ್ಥೆ. ಇದು ಅಂಬೇಡ್ಕರ್ ರನ್ನು ಹತಾಶಗೊಳಿಸಿತ್ತು. ದಲಿತ ಮೀಸಲು ಕ್ಷೇತ್ರಗಳಿಂದ ಗೆಲ್ಲುವ ದಲಿತರ ದಲಿತ ಹಿತಾಸಕ್ತಿಗಳನ್ನು ಪಾಲಿಸದೇ ಮೇಲ್ವರ್ಗದ ಗುಲಾಮರಂತೆ ನಡೆದುಕೊಂಡು ತಮ್ಮ ಸ್ವಾರ್ಥ ಹಿತಾಸಕ್ತಿಗಳನ್ನು ಮಾತ್ರ ಸಾಧಿಸಿಕೊಳ್ಳುತ್ತಾರೆ ಆದ್ದರಿಂದ ಈ ವ್ಯವಸ್ಥೆಯನ್ನು ರದ್ದು ಮಾಡಿ ಎಂದು 1952ರ ಸುಮಾರಿಗೆ ಅಂಬೇಡ್ಕರ್ ಪಟ್ಟು ಹಿಡಿದಿದ್ದರು. ಆದರೆ ಅದಾಗಲೇ 121ಕ್ಷೇತ್ರಗಳಲ್ಲಿ ಗೆದ್ದು ಬಂದಿದ್ದ ಮೀಸಲು ದಲಿತ ಕ್ಷೇತ್ರಗಳ ಪ್ರತಿನಿಧಿಗಳು ಅಂಬೇಡ್ಕರ್ ನಿಲುವನ್ನು ಖಂಡಿಸಿದ್ದರು, ಅವತ್ತು ಅಂಬೇಡ್ಕರ್ ವಿಚಾರಕ್ಕೆ ಬಹುದೊಡ್ಡ ಹೊಡೆತ ಬಿದ್ದಿತ್ತು. ಇವತ್ತಿಗೂ ಅವೇ ಸ್ಥಾನಗಳು ಹಾಗೆಯೇ ಮುಂದುವರೆದುಕೊಂಡು ಬಂದಿವೆ ದಲಿತ ಮೀಸಲು ಕ್ಷೇತ್ರಗಳು ದಲಿತರಿಗೆ ನೀಡಿದ ರಾಜಕೀಯ ಬಿಕ್ಷೆಯಂತೆ ಭಾಸವಾಗುತ್ತ ಪ್ರಜಾಪ್ರಭುತ್ವವನ್ನು ಇಂದಿಗೂ  ಅಣಕಿಸುತ್ತಲೇ ಇದೆ. 

       ಮೀಸಲಾತಿ ವ್ಯವಸ್ಥೆಯ ಆಶಯಗಳು ಸಮಾಜದ ಅತ್ಯಂತ ಕೆಳಸ್ಥರದಲ್ಲಿರುವ ದಲಿತರಿಗೆ ಸಾಮಾಜಿಕ ವ್ಯವಸ್ಥೆಯಲ್ಲಿ ಸಮಾನತೆಯನ್ನು ಕಲ್ಪಿಸುವುದೇ ಆಗಿದೆ. ಒಬ್ಬ ದಲಿತ ವಿದ್ಯಾವಂತನಾಗುವುದು,ಆರ್ಥಿಕವಾಗಿ ಮುಂದೆ ಬರುವುದು ಅಬಿವೃದ್ದಿಯೆಡೆಗೆ ಹೆಜ್ಜೆ ಇಡುವುದನ್ನು ಸರಳವಾಗಿ ಕಲ್ಪಿಸಿಕೊಳ್ಳುವುದು ಭಾರತೀಯ ಸಮಾಜ ವ್ವವಸ್ಥೆಯಲ್ಲಿ ಬಹು ದೊಡ್ಡ ತೊಡಕು. ಏಕೆಂದರೆ ಇಲ್ಲಿ ಜಾತೀಯ ಸ್ವಾರ್ಥ ಹಿತಾಸಕ್ತಿಗಳು ಸದಾ ಜಾಗೃತವಾಗಿದ್ದು ತಮ್ಮವರ ಹಿತ ಕಾಯಲು ಬದ್ದವಾಗಿರುತ್ತವೆ ಮತ್ತು ಅದಕ್ಕಾಗಿ ಏನೂ ಮಾಡಲು ಸಿದ್ದವಾಗಿರುತ್ತವೆ. ಇವೆಲ್ಲ ಸುಲಭ ಸಾಧ್ಯವಾಗಿ ನಿವಾರಣೆಯಾಗುವಂತಹದ್ದಲ್ಲ. ಜಾತೀಯ ವ್ಯವಸ್ಥೆಯಿಂದ ಹೊರತಾಗಿ ನಿಂತು ಕೆಳಸ್ಥರದವರ ಬಗೆಗೆ ಮಾತನಾಡುವಷ್ಟು ಸುಲಭವಾಗಿ, ಕೆಳ ಸ್ಥರದಲ್ಲಿ ನಿಂತು ಜಾತೀಯ ವ್ಯವಸ್ಥೆಯನ್ನು ಮೀರುವ ಮಾತನಾಡಲು ಸಾಧ್ಯವಾಗುವುದಿಲ್ಲ ಏಕೆಂದರೆ ಅನುಭವವೇ ಬೇರೆ ಗ್ರಹಿಕೆಯೇ ಬೇರೆ. ಮೇಲ್ನೋಟದ ಗ್ರಹಿಕೆಯಷ್ಟು ತೆಳು ವಾಗಿ ಸಮಾನತೆಯ ಅಂಶಗಳು ದಕ್ಕಲಾರವು ಹಾಗಾಗಿ ಸಂವಿಧಾನ ಬದ್ದವಾಗಿ ಮೀಸಲು ನೀತಿಯನ್ನು ನೀಡಲಾಗಿದೆ. ಆದರೆ ಸಾರ್ವತ್ರಿಕವಾಗಿ ಮೀಸಲು ನೀತಿಯ ಕುರಿತು ಕುಹಕದ ಚರ್ಚೆಗಳು ನಡೆಯುತ್ತಿರುವುದು ಆ ಬಗೆಗಿನ ತಿಳುವಳಿಕೆಯ ಕೊರತೆಯನ್ನು ಎತ್ತಿ ತೋರಿಸುತ್ತಿದೆ ಇದು ಸಂವಿಧಾನ ಆಶಯದ ವಿರುದ್ದದ ಸಂಗತಿಯೂ ಆಗಿದೆ. ಮೀಸಲಾತಿ ನೀತಿಯ ಕುರಿತ ವಿಸ್ತೃತ ಚರ್ಚೆಗಳು ಮಾತ್ರ ಆ ಕುರಿತ ಅನುಕಂಪದ, ಕೀಳು ನೋಟವನ್ನು ತಡೆಯಲು ಸಾಧ್ಯವಾಗ ಬಹುದು. 

         ಇನ್ನು ಚುನಾವಣೆಗಳ ಸಂಗತಿ, ಭಾರತ ದೇಶದಲ್ಲಿ ಚುನಾವಣೆ ಎಂದಾಕ್ಷಣ ಅಲ್ಲಿ ಕೋಮುವಾದ ಹಾಗೂ ಜಾತೀಯತೆಯೇ ಪ್ರದಾನ ಅಂಶಗಳಾಗುವುದನ್ನು ಕಾಣಬಹುದು. ಸ್ವಾತಂತ್ರ್ಯ  ಪೂರ್ವದಿಂದಲೂ ಇಂತಹದ್ದೊಂದು ಸಮಸ್ಯೆ ನಮ್ಮನ್ನು ಬಾಧಿಸುತ್ತಲೇ ಬಂದಿದೆ. ಜಗತ್ತಿನ ಬಹುದೊಡ್ಡ ಸಂವಿಧಾನವನ್ನು ನಾವು ಹೊಂದಿದ ಮೇಲೂ ಈ ವೈರುದ್ಯ ನಮ್ಮನ್ನು ಬಿಡದೇ ಕಾಡಲಾರಂಬಿಸಿದೆ.  ಸಂವಿಧಾನದ ಆಶಯಗಳಿಗೆ ವಿರುದ್ದವಾಗಿ ಪ್ರಜಾಪ್ರಬುತ್ವವನ್ನು ದುರ್ಬಲಗೊಳಿಸುವ ಕ್ರಿಯೆಗಳು ಜಾರಿಯಲ್ಲಿವೆ. ಬೇರೆ ರಾಷ್ಟ್ರಗಳಲ್ಲಿ ನಮ್ಮ ದೇಶದಂತೆ ಬಹು ಸಂಸ್ಕೃತಿಯ ಧರ್ಮೀಯರು ಕಡಿಮೆಯೇ ಹಾಗಾಗಿ ಅಲ್ಲಿ ಕಡಿಮೆ ರಾಜಕೀಯ ಪಕ್ಷಗಳಿವೆ, ಆದರೆ ನಮ್ಮಲ್ಲಿ ಮುಕ್ತ ವಾಗಿ ರಾಜಕೀಯ ಪಕ್ಷಗಳ ಸ್ಥಾಪನೆಗೆ ಪ್ರಜಾಪ್ರಭುತ್ವ ಅವಕಾಶ ಮಾಡಿಕೊಟ್ಟಿದೆ. ಅಂದರೆ ಸಮಾಜದ ಎಲ್ಲ ಸ್ಥರದ ಜನರು ತಮಗೆ ಒಪ್ಪಿತವಾದ ಯಾವುದೇ ರಾಜಕೀಯ ಪಕ್ಷವನ್ನು ಸ್ಥಾಪಿಸಿಕೊಳ್ಳಬಹುದು ಮತ್ತು ಆ ಮೂಲಕ ಭಾರತೀಯ ಚುನಾವಣಾ ವ್ವವಸ್ಥೆಯಲ್ಲಿ ತೊಡಗಿಕೊಳ್ಳಬಹುದು. ಹೀಗಿದ್ದಾಗ್ಯೂ ಸ್ವಾತಂತ್ರ್ಯ ಪೂರ್ವದಲ್ಲಿ ಅಸ್ತಿತ್ವಕ್ಕೆ ಬಂದ ರಾಜಕೀಯ ಪಕ್ಷದ ಜೊತೆಗೆ ರಾಷ್ಟ್ರೀಯ ಮಟ್ಟದಲ್ಲಿ ಬೆರಳೇಣಿಕಯ ಪಕ್ಷಗಳು ದೊಡ್ಡ ಮಟ್ಟದ ಅಡಿಪಾಯ ಹಾಕಿಕೊಂಡಿವೆ. ಇವುಗಳ ಪೈಕಿ ಒಂದು ಜಾತೀಯ ರಾಜಕೀಯವನ್ನು ಪೋಷಿಸುವ ರಾಷ್ಟ್ರೀಯ ನೀತಿಗಳನ್ನು ಮತ್ತು ಯೋಜನೆಗಳನ್ನು ಜಾರಿಗೆ ತಂದರೆ ಮತ್ತೊಂದು ಪಕ್ಷ ಕೋಮುವಾದಿ ನಿಲುವನ್ನು ಪ್ರತಿಪಾತಿಸುತ್ತಾ ಪ್ರಜಾತಾಂತ್ರಿಕ ವ್ಯವಸ್ಥೆಗೆ ಪೆಟ್ಟು ನೀಡುತ್ತಿವೆ. ಇತರೆ ಪಕ್ಷಗಳು ಸಹಾ ಇಂಥಹವುಗಳಿಂದ ಹೊರತಾಗಿಲ್ಲ ಅವು ನೇರವಾಗಿಯೇ ಜಾತೀಯತೆಯ ಬಿರುಕನ್ನು ಚುನಾವಣೆಗಳಲ್ಲಿ ಬಿತ್ತುತ್ತಿವೆ ಇವು ಪ್ರಜಾತಾಂತ್ರಿಕ  ವ್ಯವಸ್ಥೆಗೆ ಮಾರಕವಾಗಿದೆ. 

      ಚುನಾವಣೆಗಳು ಎದುರಾಗುತ್ತಿದ್ದಂತೆ ಓಲೈಕೆಯ ರಾಜಕಾರಣ ಶುರುವಾಗುತ್ತದೆ, ಜನರದ್ದೇ ದುಡ್ಡು ಬಳಸಿಕೊಂಡು ಲಾಭದಾಯಕ ಮತಬ್ಯಾಂಕ್ ಯೋಜನೆಗಳನ್ನು ರೂಪಿಸುವು ರಾಜಕೀಯ ಪಕ್ಷಗಳು ಒಡೆದು ಆಳುವ ನೀತಿಯನ್ನು ನಡೆಸಿಕೊಂಡು ಬಂದಿವೆ. ಚುನಾವಣೆಗಳಲ್ಲಿ ಗ್ರಾಮೀಣ ಭಾಗದ ಮತದಾರರನ್ನು ವಿವೇಚನೆ ಮಾಡಲು ಬಿಡದೇ ಅಗ್ಗದ ಆಮಿಷಗಳನ್ನು ಒಡ್ಡುವ ಪಕ್ಷಗಳು ಭಾವನಾತ್ಮಕವಾಗಿ ಮತ್ತು ಧಾರ್ಮಿಕವಾಗಿಯೂ ಪ್ರತ್ಯೇಕಿಸಿ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತವೆ. ನಗರ ಪ್ರದೇಶದ ಮತದಾರ ರಾಜಕೀಯ ಶಾಸ್ತ್ರದ ಅರಿವಿನ ಕೊರತೆಯಿಂದ ಚುನಾವಣೆಗಳನ್ನು ಗಂಬೀರವಾಗಿ ಪರಿಗಣಿಸಿದೇ ಹಿಂದುಳಿಯುತ್ತಿದ್ದಾರೆ ಮತ್ತು ಗ್ರಾಮೀಣ ಪ್ರದೇಶದ ಮತದಾರರಿಗಿಂತ ಹೆಚ್ಚು ಚುನಾವಣಾ ಅನೈತಿಕ ಅಂಶಗಳಿಗೆ ಬಲಿಯಾಗುತ್ತಿದ್ದಾರೆ. ಪರಿಣಾಮ ಮತದಾನದ ಪ್ರಾಮುಖ್ಯತೆ ಕಡಿಮೆಯಾಗಿ ಪ್ರಜಾತಾಂತ್ರಿಕ ವ್ಯವಸ್ಥೆಗೆ ದೂರ್ತರೇ ಆಯ್ಕೆಯಾಗುತ್ತಿದ್ದಾರೆ. 

       ಜನಸಾಮಾನ್ಯರು, ಯುವ ಜನರು ರಾಜಕೀಯ ಪಕ್ಷಗಳ ರಾಷ್ಟ್ರೀಯ ನೀತಿಯನ್ನು ಅರಿಯುವ ಅಗತ್ಯವಿದೆ. ಈ ನಿಟ್ಟಿನಲ್ಲಿ ವಿವಿಧ ರಾಜಕೀಯ ಪಕ್ಷಗಳ ಭರವಸೆಗಳನ್ನು ನೀತಿಗಳನ್ನ ಅರಿಯುವುದು ಅಗತ್ಯ ಹಾಗೆಯೇ ಚುನಾವಣೆಗಳಲ್ಲಿ ಸ್ಪರ್ದಿಸುವ ಅಭ್ಯರ್ಥಿಗಳ ಹಿನ್ನೆಲೆ ನಿಲುವುಗಳನ್ನು ಅರಿತು ಮತ ಚಲಾಯಿಸುವ ಅಗತ್ಯವಿದೆ. ಈ ಮೂಲಕ ಭಾರತ ದೇಶದ ಪ್ರಜಾತಾಂತ್ರವನ್ನು ಬಲಪಡಿಸುವ ಪ್ರಯತ್ನ ಆಗಬೇಕಿದೆ. ಮತದಾನದ ದಿನ ಹಿಂದುಳಿಯದೇ ಏ.17 ರಂದು ಮತ ಚಲಾಯಿಸಿ ನಿಮ್ಮ ಹಕ್ಕನ್ನು ಧೃಢಪಡಿಸಿಕೊಳ್ಳಿ .

No comments:

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...