Sunday, December 28, 2014

ಮಠ ನಿಯಂತ್ರಣ ವಿದೇಯಕ್ಕಕೆ ತಾರತಮ್ಯ ಬೇಕೆ?



ಪ್ರಗತಿ ಪರ ನಿಲುವಿನ ಸಿದ್ರಾಮಣ್ಣ ಅಧಿಕಾರಕ್ಕೆ ಬಂದ ಮೇಲೆ ವಿಧಾನ ಸಭಾ  ಅಧಿವೇಶನಗಳಲ್ಲಿ  ಅವರು ಮಂಡಿಸಿದ ವಿಧೇಯಕಗಳು ಹಿನ್ನೆಡೆ ಅನುಭವಿಸಿವೆ. ಎರಡು ವಿಧೇಯಕಗಳು ಸಾರ್ವತ್ರಿಕವಾದ ನಂಬಿಕೆ ಹಾಗೂ ವಿಶ್ವಾಸವನ್ನು ಕುರಿತಾದ ಸಂಗತಿಗಳ ಕುರಿತಾದುದು. ಆದರೆ ಸ್ಪಷ್ಟ ದಿಕ್ಸೂಚಿಯಿಲ್ಲದ ಎಡಬಿಡಂಗಿತನದ ಅಂಶಗಳು ಸದರಿ ವಿದೇಯಕಗಳು ಹಿಮ್ಮೆಟ್ಟಲು ಕಾರಣವಾಗಿದೆ ಎನ್ನಬಹುದು. ಮೊನ್ನೆ ಬೆಳಗಾವಿಯಲ್ಲಿ ನಡೆದ ವಿಧಾನ ಸಭಾ ಅದಿವೇಶನದಲ್ಲಿ ಮಠ-ಮಾನ್ಯಗಳನ್ನು ವ್ಯತಿರಿಕ್ತ ಸನ್ನಿವೇಶಗಳಲ್ಲಿ ನಿಯಂತ್ರಿಸುವ ಕಾನೂನು ಅನುಷ್ಠಾನಕ್ಕೆ ತರುವ ವಿಧೇಯಕಕ್ಕೆ ಪ್ರಭಾವಿ ಶಕ್ತಿಗಳು ಚಿತಾವಣೆಯಿಂದ ಹಿನ್ನೆಡೆ ಅನುಭವಿಸುವಂತಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ವಿದೇಯಕವನ್ನು ಮುಂದಿನ ಅಧಿವೇಶನದಲ್ಲಿ ಹಿಂಪಡೆಯುವ ಮಾತುಗಳನ್ನಾಡಿದ್ದಾರೆ. ಇವುಗಳ ಹಿನ್ನೆಲೆ ಏನು ಹಿತಾಸಕ್ತಿಗಳೇನು ಎಂಬುದು ಸ್ಪಷ್ಟವಾಗಿ ಸಾರ್ವತ್ರಿಕ ಚರ್ಚೆಗೆ ಬರಬೇಕಿದೆ. 

      ಸಧ್ಯ ಮಠ-ಮಾನ್ಯಗಳ ನಿಯಂತ್ರಣ ಕಾಯ್ದೆ ಕುರಿತು ಅಸಹನೆ ಮತ್ತು ತೀವ್ರವಾದ ಪ್ರತಿಭಟನೆ ವ್ಯಕ್ತವಾಗುತ್ತಿರುವುದು ರಾಜ್ಯದ ಸಮಸ್ತ ಮಠಾದಿಪತಿಗಳಿಂದ. ಹಿಂದೆ ಮೌಡ್ಯತೆಯ ನಿಷೇಧದ ಕುರಿತು ಕಾಯ್ದೆ ರೂಪಿಸುವ ಸಲುವಾಗಿ ಸುಮ್ಮನೆ ಒಂದು ಡ್ರಾಫ್ಟ್ ಸರ್ಕಾರಕ್ಕೆ ಸಲ್ಲಿಕೆಯಾಗಿದ್ದಕ್ಕೆ ಸಂಘ-ಪರಿವಾರಿಗಳು ಸಿಡಿದೆದ್ದಿದ್ದರು. ಬಹುಶ: ಇದುವರೆಗಿನ ಸರ್ಕಾರಗಳು ಈ ಕುರಿತು ಅಷ್ಟಾಗಿ ತಲೆಕೆಡಿಸಿಕೊಳ್ಳದ ಹೊತ್ತಿನಲ್ಲಿ ಈಗಿನ ಕಾಂಗ್ರೆಸ್ ಸರ್ಕಾರ ಗಂಭೀರ ಪ್ರಯತ್ನಗಳನ್ನು ಮಾಡುತ್ತಿದೆ ಅದು ಪ್ರಶಂಸನೀಯವೇ ಸರಿ ಆದರೆ ಈ ದಿಸೆಯಲ್ಲಿ ಸರ್ಕಾರ ಮಿತಿಗಳು ಅನುಮಾನಕ್ಕೆ ಎಡೆ ಮಾಡುತ್ತಿವೆ. ಅಲ್ಪಸಂಖ್ಯಾತರಿಗೆ  ಮಾತ್ರ ಶಾದಿ ಭಾಗ್ಯ ಯೋಜನೆಯನ್ನು ಜಾರಿಗೆ ತಂದಂತೆಯೇ ಈ ವಿಧೇಯಕಗಳ ಮಿತಿಯೂ ಇದೆಯಲ್ಲವೇ? ಶಿಕ್ಷಣದ ಹಕ್ಕು ಕಾಯ್ದೆಯಿಂದ ಅಲ್ಪ ಸಂಖ್ಯಾತ ಶಿಕ್ಷಣ ಸಂಸ್ಥೆಗಳನ್ನು ಹೊರತು ಪಡಿಸಿದಂತೆಯೇ ಈ ವಿಧೇಯಕವನ್ನು ಹಿಂದೂ ಸಮಾಜಕ್ಕೆ ಮಾತ್ರ ಅನ್ವಯವಾಗುವಂತೆ ಉಲ್ಲೇಖಿಸಿ ರೂಪಿಸಿದ್ದು ನುಂಗಲಾರದ ತುತ್ತಾಗಿ ಪರಿಣಮಿಸಿದೆ. 
       ಹಿಂದೆ ಎಸ್ ಎಂ ಕೃಷ್ಣ ಸರ್ಕಾರ ಇದ್ದಾಗ ವಿದೇಶದಿಂದ ಬಂದ ಬೆನ್ನಿ ಹಿನ್ ನನ್ನು ವಿಧಾನ ಸೌಧದ ಅಂಗಳಕ್ಕೆ ಕರೆಸಿ ಆತನಿಂದ ಕಣ್ಕಟ್ಟು ವಿದ್ಯೆಯನ್ನು ನಿಜವೆಂಬಂತೆ ಬಿಂಬಿಸಿ ಆತನ ವ್ಯಾಪಾರಿ ನಿಲುವಿಗೆ ಬೆನ್ನು ತಟ್ಟಿದ್ದ ಕಾಂಗ್ರೆಸ್ ಸರ್ಕಾರ ಈಗ ಹಿಂದೂ ಧಾರ್ಮಿಕ ನಂಬಿಕೆಗಳು ಮತ್ತು ಭಕ್ತಿ ಭಾವದ ಕೇಂದ್ರಗಳೆಡೆಗೆ ತನ್ನ ವಕ್ರದೃಷ್ಟಿ ಬೀರಿದೆ ಎಂಬ ವಾದ ಸಾರ್ವತ್ರಿಕವಾಗಿ ಇದೆ. ಇದು ನಿಜವೂ ಹೌದು. ಆದರೆ ಅದೇ ನಂಬಿಕೆಯ ಮತ್ತು ಧಾರ್ಮಿಕ ಕೇಂದ್ರಗಳು ಎಷ್ಟು ಹದಗೆಟ್ಟಿವೆ ಮತ್ತು ಯಾಕೆ ಅವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕು ಎಂಬ ವಾದವೂ ಚಾಲ್ತಿಯಲ್ಲಿದೆ ಅದೂ ಕೂಡಾ ಒಪ್ಪುವಂತಹುದೆ! ದರ್ಗಾಗಳಲ್ಲಿ ನಡೆಯುವ 
ಧಾರ್ಮಿಕ ಕ್ರಿಯೆಗಳು, ದೇಗುಲಗಳಲ್ಲಿ ನಡೆಯುವ ಆಚರಣೆಗಳು, ಚರ್ಚ್ ಗಳಲ್ಲಿ ಕ್ರಿಯೆಗಳು ಎಲ್ಲವೂ ನಂಬಿಕೆಯ ತಳಹದಿಯಲ್ಲೆ ನಡೆಯುವಂತಹವು. ಇವನ್ನು ಹೊರತು ಪಡಿಸಿದಂತೆ ಹೊಟ್ಟೆ ಪಾಡಿಗಾಗಿ ಸಾರ್ವಜನಿಕರನ್ನು ಮೋಸ ಪಡಿಸುವ ಜ್ಯೋತಿಷ್ಯ, ವಾಸ್ತುಶಾಸ್ತ್ರ,ಅಂಕಿ-ಸಂಖ್ಯೆ ಲೆಕ್ಕಾಚಾರಗಳು, ಹೋಮ -ಹವನ ಮಾಡಿಸುವುದು, ಮಂತ್ರ -ತಾಯಿತ ಇತ್ಯಾದಿ ಚಟುವಟಿಕೆಗಳು ನಂಬಿಕೆಯ ಬುಡವನ್ನೇ ಅಲ್ಲಾಡಿಸುವ ಹೀನ ಕೃತ್ಯಗಳೇ ಸರಿ. ದೇವರ ಹೆಸರಿನಲ್ಲಿ, ಧರ್ಮದ ಹೆಸರಿನಲ್ಲಿ ನಡೆಯುವ ಮತಾಂತರ ಪ್ರಕ್ರಿಯೆ, ಅಸಹ್ಯಕರ ಆಚರಣೆ ಗಳಿಗೆ ತಿಲಾಂಜಲಿ ಇಡಲು ಮೌಢ್ಯ ನಿರ್ಬಂಧಕ ಕಾನೂನು ಬೇಕು ನಿಜ ಆದರೆ ಭಾರತೀಯ ಸಾಮಾಜಿಕ ವ್ಯವಸ್ಥೆಯ ಮುಖ್ಯ ಅಡಿಪಾಯ ನಿಂತಿರುವುದೇ ನಂಬಿಕೆಯ ತಳಹದಿಯ ಮೇಲೆ. ಆ ನಂಬಿಕೆ ತಳಹದಿಯ ಪಿಲ್ಲರ್ ಗಳು ಧರ್ಮ-ದೇವರು! ಹಾಗಾಗಿ ಖಚಿತವಾದ ನಿಟ್ಟಿನಲ್ಲಿ ನಿಲುವುಗಳನ್ನು ಮತ್ತು ಫರ್ಮಾನುಗಳನ್ನು ಹೊರಡಿಸುವುದು ತ್ರಾಸದಾಯಕ ಕೆಲಸ. 
      ಪಕ್ಕದ ಮಹಾರಾಷ್ಟ್ರದಲ್ಲಿ ಇಂತಹದ್ದೊಂದು ಕಾನೂನನ್ನು ಜಾರಿಗೆ ತರಲಾಗಿದೆ ಎಂದು ಕೇಳಿದ್ದೇನೆ ಅಲ್ಲಿನ ಇತಿ ಮಿತಿಗಳನ್ನು ನೋಡಿ ರಾಜ್ಯದಲ್ಲೂ ಈ ಕುರಿತು ವಿದೇಯಕ ಜಾರಿಗೆ ತರಬಹುದು.ಇನ್ನು ಮಠ ಮಾನ್ಯಗಳನ್ನು ನಿಯಂತ್ರಣಕ್ಕೆ ತರುವ ಸರ್ಕಾರದ ನಿಲುವು. ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಪ್ರಥಮದಲ್ಲಿಯೇ ಮಠ-ಮಾನ್ಯಗಳನ್ನು ಓಲೈಸುವ ಜೊತೆಗೆ ಅಲ್ಪಸಂಖ್ಯಾತರ ದರ್ಗಾಗಳನ್ನು, ಮಸೀದಿಗಳನ್ನು, ಚರ್ಚಗಳನ್ನು ಅಭಿವೃದ್ದಿ ಪಡಿಸುವ ನಿಟ್ಟಿನಲ್ಲು ಕೋಟಿ ಕೋಟಿ ಅನುದಾನವನ್ನು ಬಿಡುಗಡೆ ಮಾಡಿತ್ತು. ಅಲ್ಲಿ ತಾರತಮ್ಯ ಇರಲಿಲ್ಲ ನಿಜ ! ಆದರೆ ಭಾವನಾತ್ಮಕವಾದ ಓಟ್ ಬ್ಯಾಂಕ್ ಲೆಕ್ಕಾಚಾರ ಕೆಲಸ ಮಾಡಿತ್ತು ಎಂಬುದನ್ನು ತಳ್ಳಿ ಹಾಕುವಂತಿಲ್ಲ. ಈಗ ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರವೂ ಸಹಾ ಅದೇ ಲೆಕ್ಕಾಚಾರವನ್ನು ವಿಭಿನ್ನ ನಿಲುವಿನ ಮೂಲಕ ಮಾಡುತ್ತಿದೆ.ಆದರೆ ತಾರತಮ್ಯದ ನಿಲುವುಗಳ ಮೂಲಕ ಸಾಮಾಜಿಕ ವ್ಯವಸ್ಥೆಯ ಶಾಂತಿ ಸುವ್ಯವಸ್ಥೆಯನ್ನು ಒಡೆಯುವ ಕೆಲಸಕ್ಕೆ ಕೈ ಹಾಕಿರುವುದು ಅತ್ಯಂತ ವಿಷಾಧನೀಯ. 
        ಹಾಗೆಂದ ಮಾತ್ರಕ್ಕೆ ಮಠ-ಮಾನ್ಯ-ಚರ್ಚ್-ಮಸೀದಿಗಳ ಉಸಾಬರಿಗೆ ಹೋಗ ಬಾರದು ಎಂದಲ್ಲ. ಇಲ್ಲಿ ಪ್ರಜಾತಾಂತ್ರಿಕ ವ್ಯವಸ್ಥೆ ಇದೆ, ಹೀಗಿರುವಾಗ ಸಮಾನ ಕಾನೂನಿನ ಪರಿಮಿತಿಯಲ್ಲಿ ಸಮಸ್ತರಿಗೆ ಒಪ್ಪಿಯಾಗುವ ನಿಲುವುಗಳು ಮಾತ್ರ ಹೆಚ್ಚಿನ ಪ್ರಾಶಸ್ತ್ಯ ದಕ್ಕಿಸಿಕೊಳ್ಳುತ್ತವೆ ಎಂಬುದನ್ನು ಅರಿಯಬೇಕಲ್ಲವೇ? ಯಾವುದೇ ಸಾರ್ವತ್ರಿಕವಾದ ಧಾರ್ಮಿಕ ಸಂಸ್ಥೆಗಳು ಜನರಿಗೆ ಉತ್ತರದಾಯಿಗಳಾಗಿರ ಬೇಕು. ಆದರೆ ಅವು ಸರ್ವಾಧಿಕಾರದ ಕೇಂದ್ರಗಳಾಗಿವೆ, ವ್ಯವಹಾರ ವಹಿವಾಟಿನ ಕೇಂದ್ರಗಳಾಗಿವೆ, ಸೇವೆಯನ್ನು ಮಾರಾಟಕ್ಕಿಡುವ, ನಂಬಿಕೆಗಳನ್ನು ವ್ಯಾಪಾರ ಮಾಡಿಕೊಂಡ ಕೇಂದ್ರಗಳಾಗಿವೆ, ಜಾತಿಯನ್ನು ಪೋಷಿಸುವ ಕೆಂದ್ರಗಳಾಗಿವೆ, ಸಮಾಜ ಬಾಹಿರ ಕೃತ್ಯಕ್ಕೆ ಅವಕಾಶ ನೀಡುವ ಚಟುವಟಿಕೆಗಳ ತಾಣವಾಗಿವೆ, ಧಾರ್ಮಿಕ ಆಘಾತ ನೀಡುವ ಮತಾಂತರ ಪ್ರಚೋದಿಸುವ ಕೇಂದ್ರಗಳಾಗಿವೆ ಹೀಗಿರುವಾಗ ಪ್ರಜಾ ತಾಂತ್ರಿಕ ವ್ಯವಸ್ಥೆಯಲ್ಲಿ ಇವಕ್ಕೆಲ್ಲ ಅಂಕುಶ ಬೇಡವೇ? ಸರ್ಕಾರದಿಂದ ಮತ್ತು ಜನರಿಂದ ಕೋಟಿ ಕೋಟಿ ಹಣವನ್ನು, ದ್ರವ್ಯವನ್ನು, ಭೂಮಿಯನ್ನು, ಸ್ಥಿರಾಸ್ತಿಯನ್ನು ಪಡೆಯುವ ಮಠ-ಮಾನ್ಯ-ಚರ್ಚ್, ದರ್ಗಾ, ಮಸೀದಿಗಳಿಂದ ಲೆಕ್ಕ ಕೇಳುವುದು ತಪ್ಪೇ? ಸಾರ್ವಜನಿಕ ಹಿತಾಸಕ್ತಿಗೆ ವಿರುದ್ದವಾಗಿ ಹೋದಾಗ ಅದನ್ನು ಪ್ರಶ್ನಿಸುವವರಾದರು ಯಾರು ? ಕಾನೂನಿಯ ಅಂಕೆಯಿಂದ ಹೊರಗುಳಿಯುವುದು ಎಂದರೆ ಅದಕ್ಕೆ ದುರಂತ ಮತ್ತೊಂದು ಇರಲಾರದು ಎಂಬುದು ನನ್ನ ಭಾವನೆ, ಇದು ದೇಶದ ಸಂವಿಧಾನಕ್ಕೆ ವಿರುದ್ದವಾದುದು ಆಗಿರುತ್ತದಲ್ಲವೇ?

          ಮಠ ಮಾನ್ಯಗಳು ಸಾರ್ವಜನಿಕ ಸ್ವತ್ತುಗಳು, ಈ ಕಾರಣಕ್ಕಾಗಿಯೆ ರಾಜ್ಯ ಸರ್ಕಾರ ಹಿಂದು ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ತಿದ್ದುಪಡಿ ವಿದೇಯಕವನ್ನು ವಿದಾನಸಬಾ ಅದಿವೇಶನದಲ್ಲಿ ಮಂಡಿಸಿದೆ. ವಿದೇಯಕವೂ ಹಿಂದೂ ಧಾರ್ಮಿಕಸಂಸ್ಥೆಗಳಲ್ಲದೇ ಮುಸಲ್ಮಾನ, ಕ್ರೈಸ್ತ, ಜೈನ ಇತರೆ ಧಾರ್ಮಿಕ ಸಂಸ್ಥೆಗಳನ್ನು ಸಹಾ ವಿದೇಯಕದಲ್ಲಿ ತರಬೇಕು, ಅವುಗಳಿಗೆ ವಿನಾಯ್ತಿ ಏಕೆ? ವಿಧೇಯಕದ ವಿರುದ್ದ ರಾಜ್ಯದ ಅನೇಕ ಮಠ ಮಾನ್ಯಗಳ ಮಠಾದೀಶರುಗಳು ಆಕ್ರೋಶ ವ್ಯಕ್ತ ಪಡಿಸಿದ್ದಾರೆ ಇದು ಸಹಜ. ಧಾರ್ಮಿಕ ಐಕ್ಯತೆ ಸಮಾನತೆ ತನ್ನಿ ಶಾಂತಿ ಸಹಬಾಳ್ವೆಗೆ ಅವಕಾಶ ಕಲ್ಪಿಸಿ ಎಂದು ಮಠಾದಿಪತಿಗಳಿಗೆ ಜನ ದೇವರ ಸ್ಥಾನಮಾನ ಕೊಟ್ಟರೆ ಈ ಬೃಹಸ್ಪತಿಗಳು ರಾಜ ಮಹಾರಾಜರಂತೆ ಅಡ್ಡ ಪಲ್ಲಕಿ ಉತ್ಸವ, ಕಿರೀಟದಾರಣೆ, ಐಷಾರಾಮಿ ಕಾರು, ವಿದೇಶ ಪ್ರವಾಸ, ಜ್ಯೋತಿಷ್ಯ, ಮೂಡನಂಬಿಕೆ ಪ್ರೋತ್ಸಾಹ ಇಟ್ಟುಕೊಂಡು ಉತ್ಸವ ಮೂರ್ತಿಗಳಾಗಿ ಮೆರೆಯುತ್ತಿದ್ದಾರೆ, ಅಲ್ಲಲ್ಲಿ ಕೆಲವರು ನೈತಿಕತೆ ಕುಂದುವ ಕ್ರಿಯೆಗಳಲ್ಲಿ ಪಾಲ್ಗೊಳ್ಳುತ್ತ ಸಮಾಜದಲ್ಲಿ ಅಸಹನೆಗೆ ಕಾರಣವಾಗಿದ್ದಾರೆ. ಹೈಟೆಕ್ ಅಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳು, ರಿಯಲ್ ಎಸ್ಟೇಟ್ ಮಾಲೀಕರಾಗಿ, ಚುನಾವಣೆ ಬಂದಾಗ ಜಾತಿಯ ಶಕ್ತಿ ಕೇಂದ್ರಗಳಾಗಿ, ಕೋಮುಸೌಹಾರ್ದದ ವಿರುದ್ದ ಬೊಬ್ಬೆ ಹಾಕುವ ಈ ಮಂದಿ ಸರ್ವಸಮ್ಮತ ವ್ಯಕ್ತಿಗಳಾಗಿ ಉಳಿದಿಲ್ಲ, ಆದ್ದರಿಂದ ಎಲ್ಲ ಧಾರ್ಮಿಕ ಕೇಂದ್ರಗಳ ಮೇಲೆ ಸರ್ಕಾರದ ಅಂಕುಶ ಹಾಕುವ ವಿಧೇಯಕ ಮಂಡನೆಯಾಗಲಿ, ಮಠಾದಿಪತಿಗಳು, ಮುಲ್ಲಾಗಳು, ಪಾದ್ರಿಗಳು,ಧರ್ಮಾದಿಕಾರಿಗಳು, ಮೌಲ್ವಿಗಳು ಕಾನೂನಿಗಿಂತ ದೊಡ್ಡವರಲ್ಲ ಅಲ್ಲವೇ????

No comments:

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...