Sunday, February 22, 2015

ಫ್ಲಕ್ಸ್ ಬ್ಯಾನರು ಹಾವಳಿಗೊಂದು ಮಸೂದೆ ಇರಲಿ!

ರಾಜ್ಯ ಸರ್ಕಾರ ಬಜೆಟ್ ನಂತರದಲ್ಲಿ ಸಾರ್ವತ್ರಿಕವಾಗಿ ಬಿಡು ಬೀಸಾಗಿ ಫ್ಲಕ್ಸ್ ಮತ್ತು ಬ್ಯಾನರ್ ಹಾಕುವುದನ್ನು ನಿಷೇದಿಸಲು ಚಿಂತನೆ ನಡೆಸಿದೆ ಎಂಬ ಸಂಗತಿ. ಲಕ್ಷಾಂತರ ರೂಪಾಯಿ ಹೂಡಿಕೆ ಮಾಡಿ ಬ್ಯುಸಿನೆಸ್ಸಿಗೆ ಕುಳಿತ ಬಂಡವಾಳಶಾಹಿಗಳ ನಿದ್ದೆಗೆಡಿಸಿದೆ. ಚುನಾವಣೆ ಸಂಧರ್ಭಗಳಲ್ಲಿ ಕಠಿಣ ನಿಯಮಗಳನ್ನು ಜಾರಿಗೆ ತಂದಿದ್ದರಿಂದ ಫ್ಲಕ್ಸ್ ಮತ್ತು ಬ್ಯಾನರ್ ವಹಿವಾಟಿಲ್ಲದೆ ಬಕ್ಕಬಾರಲು ಬಿದ್ದಿತ್ತು, ಬ್ಯಾನರುಗಳಲ್ಲಿ ರಾರಾಜಿಸಲು ಕಾದು ಕುಂತಿದ್ದವರಿಗೂ ದೊಡ್ಡ ನಿರಾಸೆಯಾಗಿತ್ತು, ಈಗ ಮತ್ತೆ ಅದೇ ನಿರಾಸೆ ಇಣುಕುತ್ತಿದೆ. ವರ್ಚಸ್ಸು ಮತ್ತು ಪ್ರತಿಷ್ಠೆಯ ಸಂಕೇತಗಳಾಗಿರುವ ಫ್ಲಕ್ಸ್ ಬ್ಯಾನರುಗಳ ಭರಾಟೆ ಲಂಗು ಲಗಾಮಿಲ್ಲದೇ ಮುಂದುವರೆದಿರುವಾಗ ಅದಕ್ಕೊಂದು ನಿಯಂತ್ರಣ ಹಾಕುವ ಸರ್ಕಾರದ ಉದ್ದೇಶ ಒಳ್ಳೆಯದೇ ಆಗಿದೆ. ಆದರೆ ಹೊಟ್ಟೆಪಾಡಿಗಾಗಿ ಬಂಡವಾಳ ಹಾಕಿ ಕುಳಿತ ನಿರುದ್ಯೋಗಿ ಇಂತಹ ನಿಲುವುಗಳಿಂದ ತತ್ತರಿಸಬಹುದು. ಸರ್ಕಾರ ಬ್ಯಾನರ್ ಹಾವಳಿಯನ್ನು ನಿಯಂತ್ರಿಸಲು ಮುಂದಾಗಿದ್ದೇಕೆ? ಅವುಗಳು ಉಂಟು ಮಾಡುತ್ತಿದ್ದ ಕಿರಿ ಕಿರಿಗಳಾದರೂ ಎಂಥಹವು? ಕಾಲ ಘಟ್ಟಗಳಲ್ಲಿ ಆದ ಬದಲಾವಣೆಗಳು ಯಾವೆಲ್ಲ ಸಂಗತಿಗಳನ್ನು ಆಪೋಶನ ತೆಗೆದುಕೊಂಡವು ಎಂಬ ಇಣುಕು ನೋಟ ಇಲ್ಲಿದೆ. 
      ಆಧುನಿಕ ತಂತ್ರಜ್ಞಾನದಿಂದಾಗಿ ಕೆಲಸಗಳು ತ್ವರಿತ ಗತಿಯಲ್ಲಿ ಶೀಘ್ರವಾಗಿ ಆಗುತ್ತವೆ ಎಂಬ ಕಾರಣಕ್ಕೆ ಯಂತ್ರೋಪಕರಣಗಳನ್ನು ಜನ ಜೀವನದಲ್ಲಿ ಸಾಮಾನ್ಯವಾಗಿ ಬಳಸಲಾಗುತ್ತಿದೆ ಹಾಗಾಗಿ ಇಲ್ಲಿ ಶ್ರಮಕ್ಕಿಂತ 'ಕೌಶಲ್ಯ'ಕ್ಕೆ ಹೆಚ್ಚಿನ ಆದ್ಯತೆ ಸಿಗುತ್ತಿದೆಯಷ್ಟೇ.ವರ್ತಮಾನದ ಪ್ರತೀ ಆಗು ಹೋಗುಗಳು ಸಹಾ ಸಾರ್ವತ್ರಿಕವಾಗಿ ಜಾಹೀರಾಗಬೇಕಾದರೆ ವಿವಿಧ ಆಯಾಮಗಳಲ್ಲಿ ಅದನ್ನು ಪ್ರಸ್ತುತ ಪಡಿಸಲಾಗುತ್ತದೆ. ಜನ ಸಾಮಾನ್ಯರ ಅಗತ್ಯತೆಗಳಿಗೆ ಅನುಗುಣವಾಗಿ ಜಾಹೀರಾತುಗಳನ್ನು ಧ್ವನಿಯ ಮೂಲಕ, ಅಕ್ಷರಗಳ ಮೂಲಕ, ಚಿತ್ರಗಳ ಮೂಲಕ, ಗೋಡೆ ಬರಹಗಳ ಮೂಲಕ, ಕರ ಪತ್ರಗಳ ಮೂಲಕ, ಸುದ್ದಿ ವಾಹಿನಿಗಳ ಮೂಲಕ, ಅಂತರ್ಜಾಲದ ಮೂಲಕ, ಮೊಬೈಲ್ ಗಳ ಮೂಲಕ ಹೀಗೆ ಅನೇಕ ವಿಧಗಳ ಮೂಲಕ ಅಭಿವ್ಯಕ್ತಿಸಲಾಗುತ್ತಿದೆ. ನಿಮಗೆ ಗೊತ್ತಿರ ಬೇಕು ರಾಜ ಮಹಾರಾಜರ ಕಾಲದಲ್ಲಿ ಎಲೆಗಳ ಮೇಲೆ, ತಾಳೆಗರಿಗಳಲ್ಲಿ ಭಿನ್ನವತ್ತಳೆಗಳನ್ನು ಮತ್ತು ಬರಹಗಳನ್ನು ಬರೆಯಲಾಗುತ್ತಿತ್ತು. ಪ್ರಾಚೀನ ಗ್ರೀಸ್ ಮತ್ತು ರೋಂ ದೇಶಗಳಲ್ಲಿ ಮೊದಲ ಬಾರಿಗೆ ಸಾರ್ವತ್ರಿಕವಾದ ಪ್ರಚಾರ ಅಭಿವ್ಯಕ್ತಿಗಳನ್ನು ಕಾಣ ಬಹುದಾಗಿತ್ತು. ಕಲ್ಲುಗಳ ಮೇಲೆ ಅಕ್ಷರಗಳನ್ನು, ಅಂಕಿಗಳನ್ನು ಮತ್ತು ಚಿತ್ರಗಳನ್ನು ಕೆತ್ತನೆ ಮಾಡುವ ಮೂಲಕ ಪ್ರಚಾರದ ತಂತ್ರವನ್ನು ಕಂಡು ಕೊಳ್ಳಲಾಯಿತು. ಇದು ಕಂಡು ಬಂದಿದ್ದು ಕ್ರಿ.ಪೂ.4000 ರಲ್ಲಿ!
     ಮುಂದೆ ಇದೇ ತಂತ್ರವನ್ನು ಬಣ್ಣದ ಮೂಲಕ ಕಲ್ಲಿನ ಮೇಲೆ ಬರೆಯುವ ಕ್ರಿಯೆ ಆರಂಭವಾಗಿ ಅದು ಏಷ್ಯಾ ಖಂಡ, ಆಫ್ರಿಕಾ ಖಂಡ ಮತ್ತು ಅಮೇರಿಕಾ ಖಂಡದ ವಿವಿಧ ದೇಶಗಳಿಗೆ ವಿಸ್ತರಿಸಲ್ಪಟ್ಟಿತು. ವಾಣಿಜ್ಯ ಉದ್ದೇಶಕ್ಕೆ, ಸಾಹಿತ್ಯ ಪ್ರಸಾರಕ್ಕೆ, ಕ್ರಾಂತಿಕಾರಿ ಹೋರಾಟಗಳಿಗೆ, ಸ್ವಾತಂತ್ರ್ಯದ ಹೋರಾಟಗಳಿಗೆ ಜಾಹೀರಾತಿನ ವಿವಿಧ ಆಯಾಮಗಳನ್ನು ಅನ್ವೇಷಿಸಲಾಯಿತು. 7ನೇ ಶತಮಾನದಲ್ಲಿ ಚೀನಾದಲ್ಲಿ ನಡೆದ ಅವಿಷ್ಕಾರದಲ್ಲಿ ಪೇಪರಿನ ಮೇಲೆ ಇಂಕನ್ನು ಬಳಸಿ ಬರೆಯುವ ಮೂಲಕ ಹೊಸ ಸಾಧ್ಯತೆಗಳು ತೆರೆದುಕೊಂಡವು. ಹೀಗೆ ಕಾಲ ಘಟ್ಟದಲ್ಲಿ ಬದಲಾವಣೆಗೊಂಡ ಜಾಹೀರಾತು ಅಭಿವ್ಯಕ್ತಿ ಮಾಧ್ಯಮಗಳು ಫ್ಲಕ್ಸ್ ಮತ್ತು ಬ್ಯಾನರ್ ನ ರೂಪದಲ್ಲಿ ಬಂದುನಿಂತಿವೆ. ಈ ಫ್ಲಕ್ಸ್ ಮತ್ತು ಬ್ಯಾನರ್ ಗೂ ಮೊದಲು ಡಿಜಿಟಲ್ ತಂತ್ರಜ್ಞಾನದಲ್ಲಿ ಹೆಚ್ಚು ಜನ ಸಂದಣಿ ಇರುವ ಸ್ಥಳಗಳಲ್ಲಿ ಬೃಹತ್ ಪರದೆಗಳನ್ನಿಟ್ಟು ಜಾಹೀರಾತುಗಳನ್ನು ಪ್ರದರ್ಶಿಸಲಾಗುತ್ತಿತ್ತು, ಅದರೆ ಅಲ್ಲಿನ ಜಾಹೀರಾತು ದರ ಎಲ್ಲರಿಗೂ ಎಟಕುವಂತಿರಲಿಲ್ಲ ಹಾಗಾಗಿ ಅದು ಬಂದಷ್ಟೇ ವೇಗದಲ್ಲಿ ಅಂತ್ಯ ಕಂಡಿತು. ದೊಡ್ಡ ದೊಡ್ಡ ಎಂ ಎನ್ ಸಿ ಕಂಪನಿಗಳು ಮಾತ್ರ ಅದನ್ನು ಬಳಸುತ್ತಿವೆ. 
      ಸಕಲ ಮಂದಿಗೂ ಸರಳವಾಗಿ ಮತ್ತು ಕಡಿಮೆ ದರದಲ್ಲಿ ಕೈಗೆಟುಕುವಂತಹ ಜಾಹೀರಾತು ಮಾಧ್ಯಮ ಫ್ಲಕ್ಸ್ ಬ್ಯಾನರ್ ಗಳು. ಆದರೆ ಇವು ಮಾಡುವ ಕಿರಿ ಕಿರಿಗಳು ಒಂದೆರೆಡಲ್ಲ. ತಮಿಳು ನಾಡು ಮತ್ತು ಆಂದ್ರ ಪ್ರದೇಶದಲ್ಲಿ ಹುಟ್ಟಿಕೊಂಡ ಬ್ಯಾನರ್ ಹಾವಳಿ ನಂತರ ರಾಜ್ಯಕ್ಕೆ ವಿಸ್ತರಿಸಿತು. ದಶಕಗಳ ಹಿಂದೆ ಒಂದು ಫ್ಲಕ್ಸ್ ಬ್ಯಾನರ್ ಮಾಡಿಸ ಬೇಕೆಂದರೆ ರಾಜಧಾನಿಗೆ ಹೋಗ ಬೇಕಿತ್ತು. ಈಗ ಪ್ರತೀ ಊರುಗಳಲ್ಲೂ ಪ್ರಿಂಟಿಂಗ್ ಮೆಷಿನುಗಳು ಬಂದು ಕುಳಿತಿವೆ. ರಾಜಕೀಯ, ಸಿನಿಮಾ ಮತ್ತು ವಾಣಿಜ್ಯ ಉದ್ದೇಶಕ್ಕೆ ಬಳಕೆಯಾಗುತ್ತಿದ್ದ ಬ್ಯಾನರ್ ಹಾವಳಿ, ಹೋರಾಟದ ಸಂಘಟನೆಗಳ ಪ್ರತಿಷ್ಠೆಗೆ, ಪುಡಾರಿಗಳ ಪ್ರತಿಷ್ಠೆಗೆ, ಮದುವೆಗೆ, ಆರತಿ ಶಾಸ್ತ್ರಕ್ಕೆ, ಹುಟ್ಟಿದ ಹಬ್ಬಕ್ಕೆ, ತಿಥಿಗೆ ಮತ್ತು ಸತ್ತಾಗ, ಕೆಟ್ಟಾಗ ಎಲ್ಲದಕ್ಕೂ ಬ್ಯಾನರ್ ಹಾಕಲಾಗುತ್ತಿದೆ. 
      ಅದ್ಯಾರೋ ರೌಡಿ ಮಾಡ ಬಾರದ ಕೆಲಸ ಮಾಡಿ ಮರ್ಡರ್ ಆದರೆ, ಪೋಲಿ ತಿರುಗಿಕೊಂಡು ಸಮಾಜ ಕಂಟಕ ಎನಿಸಕೊಂಡವ ಕುಡಿದು, ಕೆಟ್ಟ ಚಟಗಳಿಂದ ಮತಿ ಬ್ರಾಂತನಾಗಿ ಸತ್ತು ಹೋದರೆ 'ಮತ್ತೆ ಹುಟ್ಟಿ ಬಾ ಗೆಳೆಯ' ಎಂಬ ಬ್ಯಾನರುಗಳು ರೇಜಿಗೆ ಹುಟ್ಟಿಸಿ ಬಿಡುತ್ತವೆ. ಗೌಪ್ಯವಾಗಿರ ಬೇಕಾದ ಆರತಿ ಶಾಸ್ತ್ರದ ಸಂಗತಿಯನ್ನು ಜಗಜ್ಜಾಹೀರು ಮಾಡುವುದಲ್ಲದೇ ಪ್ರೌಢಾವಸ್ತೆಗೆ ಬಂದ ಹುಡುಗಿಯ ಚಿತ್ರಗಳನ್ನೇ ವಿವಿಧ ಮಾದರಿಯಲ್ಲಿ ಪ್ರಿಂಟು ಹಾಕಿಸಿ ಊರೆಲ್ಲ ಹಚ್ಚಿ ಬಿಡುತ್ತಾರೆ! ಅಯ್ಯಪ್ಪ ಸ್ವಾಮಿ ಮಾಲೆ ಹಾಕಿದಾಗಲಂತೂ ನೂರಾರು ಮಂದಿಯ ಫೋಟೋಗಳನ್ನ್ನು ಒಂದೇ ಬ್ಯಾನರಿಗೆ ಹಾಕಿ ಬೆಳಗಾಗುವುದರೊಳಗೆ ತಂದು ನಿಲ್ಲಿಸಿ ಬಿಡುತ್ತಾರೆ. ಮಂಡ್ಯ ಕಡೆ ಜನರಂತೂ ಗರಿ ಗರಿ ಖಾದಿ ಬಟ್ಟೆಗಳನ್ನು ಹಾಕಿಕೊಂಡು ಒಂದು ಕೈಯಲ್ಲಿ ಫೋನು ಕಿವಿಗೆ ಸಿಕ್ಕಿಸಿಕೊಂಡು ಮತ್ತೊಂದು ಕೈಯಲ್ಲಿ ಜನ ನಾಯಕರ ರೀತಿ ಕೈ ಬೀಸುತ್ತಾ ಇರುವ ಚಿತ್ರಗಳ ಬ್ಯಾನರುಗಳನ್ನು ಹಾಕಿಸಿಕೊಂಡರೆ, ನೆಚ್ಚಿನ ಸಿನಿಮಾ ನಟ ಅಥವ ನಟಿಯ ಕೆನ್ನೆಗೆ, ಕೈಯಿಗೆ ಮುತ್ತಿಡುವ ಚಿತ್ರಗಳನ್ನು ಯಾವುದೇ ಮುಜುಗರವಿಲ್ಲದೇ ಪ್ರಿಂಟು ಹಾಕಿಸಿಕೊಂಡು ಸಾರ್ವತ್ರಿಕ ಸ್ಥಳಗಳಲ್ಲಿ ಪ್ರದರ್ಶಿಸಿ ಬಿಡುತ್ತಾರೆ. ಒಮ್ಮೊಮ್ಮೆ ಈ ಅತಿರೇಕ ಯಾವ ಮಟ್ಟಕ್ಕೆ ಹೋಗಿ ಬಿಡುತ್ತದೆಂದರೆ ಯಾವುದಾದರೂ ಕಾರ್ಯಕ್ರಮ ಇದೆ ಎಂದಾದರೆ ನೂರಾರು ಸಂಖ್ಯೆಯ ಬ್ಯಾನರುಗಳನ್ನು ಮಾಡಿಸಿ ಇಂಚು ಜಾಗ ಬಿಡದಂತೆ ಊರ ತುಂಬ ಹಾಕಿಸುತ್ತಾರೆ. ಇವೆಲ್ಲ ಎಷ್ಟು ಕಿರಿ ಕಿರಿ ಉಂಟು ಮಾಡಿ ಬಿಡುತ್ತವೆಂದರೆ, ಅನೇಕ ಸಲ ಬ್ಯಾನರುಗಳ ವಿಷಯಕ್ಕೆ ದೊಡ್ಡ ಮಟ್ಟದ ಹೊಡದಾಟಗಳು ಆಗಿ ಬಿಡುತ್ತವೆ, ಒಬ್ಬನ ಬ್ಯಾನರಿಗೆ ಇನ್ನೊಬ್ಬ ಬೆಂಕಿ ಹಾಕುತ್ತಾನೆ, ಬ್ಲೇಡು ಹೊಡೆಯುತ್ತಾನೆ ಇಲ್ಲವೇ, ಎದುರಾಳಿಯ ಕಾರ್ಯಕ್ರಮ ಇದ್ದ ದಿನ ಆತನಿಗೆ ಅವಕಾಶ ಸಿಗದಂತೆ ಇವನೇ ಊರತುಂಬ ಇವನ ಚಿತ್ರಗಳ ಬ್ಯಾನರುಗಳನ್ನು ಅಂಟಿಸಿ ಬಿಡುತ್ತಾನೆ. 
    ಬ್ಯಾನರುಗಳು ಬಂದ ಮೇಲೆ ಬಟ್ಟೆಯ ಮೇಲೆ, ಗೋಡೆಯ ಮೇಲೆ ಬರೆಯುತ್ತಿದ್ದ ಕಲಾವಿದರುಗಳು ಕೆಲಸ ಕಳೆದುಕೊಂಡು ಹೊಟ್ಟೆಗೆ ತಣ್ಣೀರು ಬಟ್ಟೆ ಹಾಕಿಕೊಂಡರು, ತಂತ್ರಜ್ಞಾನದ ಅರಿವಿದ್ದವರು ಅಲ್ಲಿ ಪುನರ್ವಸತಿ ಪಡೆದರು, ಆದರೆ ಬಹುತೇಕ ಕಲಾವಿದರ ಬದುಕು ಮೂರಾ ಬಟ್ಟೆ ಆಯಿತು. ಬ್ಯಾನರುಗಳನ್ನು ಅನುಮತಿ ಪಡೆದು, ನಿಗದಿತ ಅವಧಿಗೆ ಮಾತ್ರ ಪ್ರದರ್ಶಿಸುವ ಮಾರ್ಗಸೂಚಿ ತಯಾರಾಗುತ್ತಿದೆ, ಈ ಮಾರ್ಗಸೂಚಿಯಲ್ಲಿ ಯಾವ ಕ್ರಿಯೆಗಳಿಗೆ ಬ್ಯಾನರು ಪ್ರಕಟಣೆ ಮಾಡ ಬಾರದು, ಮತ್ತು ಎಷ್ಟು ಸಂಖ್ಯೆಯಲ್ಲಿರಬೇಕು ಎಂಬುದರ ಜೊತೆಗೆ ಬ್ಯಾನರು ಪ್ರಿಂಟು ಮಾಡಿಸುವವರನ್ನು ಕಡ್ಡಾಯವಾಗಿ ತೆರಿಗೆ ವ್ಯಾಪ್ತಿಗೆ ಒಳಪಡಿಸಿ ನಿಯಂತ್ರಣ ಹೇರಬೇಕಾದುದು ಇಂದಿನ ಅನಿವಾರ್ಯತೆ ಎನಿಸುವುದಿಲ್ಲವೇ? ಅತಿಯಾದರೆ ಎಲ್ಲವೂ ವಿಷವಲ್ಲವೇ? 

Sunday, February 15, 2015

ಭ್ರಮೆಗಳು ಸಾರ್ ಭ್ರಮೆಗಳು!

ಬದುಕು ಸರಾಗವಾದ ಹಾದಿಯಲ್ಲ..! ಅಲ್ಲಿ ಏಳು ಬೀಳುಗಳು ಸಹಜ, ಒಮ್ಮೆ ಉತ್ತುಂಗದಲ್ಲಿದ್ದವರು ಈಗ ಸಾಮಾನ್ಯ ಸ್ಥಿತಿಗೆ ಮರಳಿರ ಬಹುದು.ಸಾಮಾನ್ಯರಾಗಿದ್ದವರು ಎತ್ತರಕ್ಕೆ ತಲುಪಿಕೊಂಡಿರ ಬಹುದು. ಆದರೆ ಎಷ್ಟೋ ಸನ್ನಿವೇಶಗಳಲ್ಲಿ ಪೂರ್ವ ಸ್ಥಿತಿಯನ್ನು ಎಲ್ಲ ಆತಂಕಗಳ ನಡುವೆಯೂ ಕಾಯ್ದುಕೊಂಡು ಹೋಗಲು ಹೆಣಗುವ ವ್ಯಕ್ತಿತ್ವಗಳನ್ನು ನಮ್ಮ ನಡುವೆ ಕಾಣ ಬಹುದು. ಇದು ಕೆಲವೊಮ್ಮೆ ಫನ್ನಿಯಾಗಿ ಮತ್ತೆ ಕೆಲವೊಮ್ಮೆ ವಿಷಾದವಾಗಿ ಕಾಣಬಹುದು. ಅಂತಹ ಕೆಲವು ಸಂಗತಿಗಳನ್ನು ಹಂಚಿಕೊಂಡಿದ್ದೇನೆ ಓದಿಕೊಳ್ಳಿ.
        ಬಹಳಷ್ಟು ಮಂದಿಗೆ ಎಲ್ಲವೂ ಇರುತ್ತದೆ ಆದರೆ ಏನಾದರೊಂದು ಕೊರತೆ ಇದ್ದೆ ಇರುತ್ತೆ ಹಾಗಾಗಿ ಅಂತಹ ವರ್ತುಲದಿಂದ ಆಚೆಗೆ ಅವರು ಬರಲು ಸಾಧ್ಯವಾಗುವುದೇ ಇಲ್ಲ. ನಮ್ಮ ಜಿಲ್ಲೆಯ  ಕಾಫಿ-ಏಲಕ್ಕಿ ಬೆಳೆಗಾರರನ್ನೇ ತೆಗೆದುಕೊಳ್ಳಿ. ದುಡ್ಡಿದ್ದಾಗ ಎಲ್ಲಮ್ಮನ  ಜಾತ್ರೆ, ಕಿಸೆಯಲ್ಲಿ ಕಾಸಿಲ್ಲದಾಗ ಯಾವ ಜಾತ್ರೆಗಳ ಸುಳಿವು ಇಲ್ಲ, ಸಧ್ಯ ನಮ್ಮ ಜೇಬಿನಲ್ಲಿ ಕಾಸಿಲ್ಲವೆಂಬುದು ಜನರಿಗೆ, ಬಂಧುಗಳಿಗೆ ತಿಳಿಯದಿದ್ದರೆ ಸಾಕು ಸಾಲವೋ ಸೋಲವೋ, ಬೇಕಾದರೆ ಸಿಕ್ಕಷ್ಟು ದುಡ್ಡಿಗೆ ಅರೆಬರೆ ತೋಟ ಮಾರುವುದಾಗಲಿ ಜೀವನ ಶೈಲಿಯನ್ನು ಮಾತ್ರ ಬದಲಿಸಿಕೊಳ್ಳಲು ಸಿದ್ದರಿರುವುದಿಲ್ಲ, ಇಂಥಹವರು ನೆಮ್ಮದಿಯಿಲ್ಲದ ಅಂತರ ಪಿಚಾಚಿಗಳಾಗಿ ಮಾನಸಿಕ ಕ್ಷೇಶವನ್ನು ಹಾಳುಮಾಡಿಕೊಂಡು ಅಂತ್ಯ ಕಾಣುತ್ತಾರೆ. ತಂಬಾಕು-ಆಲೂಗಡ್ಡೆ-ಜೋಳದ ಸೀಸನ್ ಗಳು ಹಾಗೆಯೇ ವರ್ಷಪೂರ್ತಿ ಹೊಟ್ಟೆ ಬಟ್ಟೆ ಕಟ್ಟಿ ದುಡಿದದ್ದನ್ನೆಲ್ಲ ದಾಂ ಧೂಂ ಅಂತ ದೇವರು-ದಿಂಡಿರು-ಜಾತ್ರೆ-ಮದುವೆಗಳಿಗೆ ಖರ್ಚು ಮಾಡಿ, ಬೈಕು-ಕಾರು-ಟ್ರಾಕ್ಟರು-ಜೆಸಿಬಿ ಕೊಂಡು ಒಂದಿಷ್ಟು ಸಾಲಗಳನ್ನು ಬೆನ್ನಿಗೆ ತಗಲು ಹಾಕಿಕೊಂಡು ಬಿಡುತ್ತಾರೆ. ಇದರ ಜೊತೆ ಜೊತೆಗೆ ಅವರ ಜೀವನ ಶೈಲಿಯು ಬದಲಾಗಿ ಬಿಡುತ್ತದೆ ತೊಡುವ ಬಟ್ಟೆ, ಕುಡಿಯುವ ಎಣ್ಣೆ,ತಿನ್ನುವ ಊಟ ಎಲ್ಲದರಲ್ಲೂ ಚೇಂಜ್. ಆದರೆ ಕೃಷಿ ಬೆಳೆಗೆ ಮತ್ತು ಮಾರುಕಟ್ಟೆಗೆ ಸ್ಥಿತ್ಯಂತರವಿಲ್ಲ ನೋಡಿ ಆಗ ಉಂಟಾಗುವ ಶಾಕ್ ದೊಡ್ಡ ರೈತರನ್ನು ಹಿಂಡಿ ಹಿಪ್ಪೆ ಮಾಡಿ ಬಿಡುತ್ತದೆ.
      ಅವತ್ತು ನನ್ನೆದುರಿಗೆ ರಾಷ್ಟ್ರ ಪ್ರಶಸ್ತಿ ವಿಜೇತ ಕೃಷಿಕರೊಬ್ಬರು ಕುಳಿತಿದ್ದರು. ನೂರಾರು ಎಕರೆ ಜಮೀನು, ಆಳುಕಾಳು, ಆಧುನಿಕ ಯಂತ್ರೋಪಕರಣಗಳು, ಓಡಾಡಲು ಐಷಾರಾಮಿ ಕಾರು. ಇವರದ್ದು ಸಮೃದ್ದ ಜೀವನ, ಇದ್ದರೆ ಹೀಗಿರ ಬೇಕು ಅಂದುಕೊಂಡು ಪ್ರಶ್ನಿಸಿದೆ. ತಕ್ಷಣ ಕಿವಿಯ ಬಳಿ ಬಂದ ಅವರು ಮೆಲ್ಲಗೆ ಉಸುರಿದರು ನೋಡಿ ಸರ್ ನಾನು ಯಶಸ್ಸು ಪಡೆದ ಕೃಷಿಕನೇ ಹೌದು ಆದರೆ ನೆಮ್ಮದಿಯ ಜೀವನ ಇಲ್ಲ, ನನಗಿರುವ ನೂರಾರು ಎಕರೆ ಜಮೀನು ಉತ್ಪನ್ನ ನೋಡಿ ಬ್ಯಾಂಕ್ ನವರು ಮೇಲೆ ಬಿದ್ದು ಕೋಟಿಗಳ ವರೆಗೆ ಸಾಲ ನೀಡಿದ್ದಾರೆ, ನನ್ನನ್ನು ಗಮನಿಸುವ ಜನರ ಎದುರಿಗೆ ಸ್ಟೇಟಸ್ ಮೈಂಟೇನ್ ಮಾಡ್ಲೇ ಬೇಕಲ್ವಾ ಹಾಗಾಗಿ ಜೀವನ ಶೈಲಿಯನ್ನು ಬದಲಿಸಿಕೊಂಡಿದ್ದೇನೆ , ಕುಟುಂಬದವರು ಶ್ರೀಮಂತಿಕೆಯ ಬದುಕಿಗೆ ಒಗ್ಗಿಕೊಂಡಿದ್ದಾರೆ ಕಷ್ಟ-ಸುಖದ ಅರಿವಿಲ್ಲ ಹೈರಾಣಾಗಿದ್ದೇನೆ ಎಂದು ಅಲವತ್ತುಕೊಂಡರು.
        ಆತನೊಬ್ಬ ಸಿನಿಮಾ ನಿರ್ದೇಶಕ, ಈಗ್ಯೇ 7-8 ವರ್ಷಗಳಿಂದ ಆತನ ಕೈಯಲ್ಲಿ ಕೆಲಸವಿಲ್ಲ ಆದರೂ ಸಾರ್ವತ್ರಿಕವಾಗಿ ತಾನು ತುಂಬಾ ಬ್ಯುಸಿ ಕೆಲಸದಲ್ಲಿದ್ದೇನೆ, ಅಲ್ಲೇಲ್ಲೋ ಸ್ಟಾರ್ ಒಬ್ಬನ ಚಿತ್ರ ನಿರ್ದೇಶಿಸುತ್ತಿದ್ದೇನೆ ಎನ್ನುತ್ತಾನೆ. ಮಾತಿಗೆ ಕುಳಿತರೆ ದೊಡ್ಡ ದೊಡ್ಡವರ ಹೆಸರು ಹೇಳುತ್ತಾನೆ. ಇನ್ನೊಬ್ಬ ಕಮೆಡಿಯನ್ ಮತ್ತು ಸಹ ನಿರ್ದೇಶಕನಾಗಿದ್ದವನು ದಶಕಗಳ ಹಿಂದೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಒಳ್ಳೆಯ ಹೆಸರು ಮಾಡಿದ್ದಾನೆ ಆದರೆ ಈಗ ಕೈಯಲ್ಲಿ ಕೆಲಸವಿಲ್ಲ, ಖಾಲಿ ಖಾಲಿ ಆದರೆ ಸಾರ್ವತ್ರಿಕವಾಗಿ ಆತ ಹಾಗೆ ಹೇಳಿಕೊಳ್ಳಲು ತಯಾರಿಲ್ಲ, ತನ್ನ ಕೆರಿಯರ್, ವರ್ಚಸ್ಸು ಇನ್ನೂ ಚಾಲ್ತಿಯಲ್ಲಿದೆ ಎಂಬ ಭ್ರಮೆಯಲ್ಲೇ ಮಾತಾಡುತ್ತಾನೆ. 
          ದೊಡ್ಡ ನಟರೊಬ್ಬರ ಅನಧಿಕೃತ ಮಗ ಎಂದು ಸಾರ್ವತ್ರಿಕವಾಗಿ ಗುರುತಿಸಲ್ಪಡುವ ನಟನೊಬ್ಬನ ಸಿನಿಮಾ 2ವರ್ಷಗಳ ಹಿಂದೆ ಬಿಡುಗಡೆಗೆ ಸಿದ್ದವಾಗಿತ್ತು. ಸರಿ ಒಂದು ಖಾಸಗಿ ಛಾನಲ್ ನವರು ಪ್ರಸಾರದ ಹಕ್ಕುಗಳನ್ನು ಖರೀದಿಸಲು ಆತನೊಂದಿಗೆ ಮಾತುಕತೆಗೆ ಕುಳಿತರು. ಸರಿ ಸುಮಾರು ಲಾಭದ ಲೆಕ್ಕಾಚಾರದಲ್ಲೇ ಸಂಭಾವನೆ ಕೊಡಲು ಛಾನಲ್ ನವರು ಸಿದ್ದರಾದರು ಆದರೆ ಆತ ಪಟ್ಟು ಬಿಡಲಿಲ್ಲ ತನ್ನ ವರ್ಚಸ್ಸು ಹಾಗೇ ಹೀಗೆ ಅಂತೆಲ್ಲ ಮಾತನಾಡಿ ಹಕ್ಕುಗಳನ್ನು ನಿರಾಕರಿಸಿ ಎದ್ದು ಹೋದ. ಮರುವಾರ ಸಿನಿಮಾ ಬಿಡುಗಡೆಯಾಯಿತು, ನಾಲ್ಕು ದಿನ ಓಡುವುದಿರಲಿ ಹಾಕಿದ ದುಡ್ಡು ಬಾರಲಿಲ್ಲ, ಆತ ಮತ್ತೆ ಸಿನಿಮಾ ಕಡೆಗೆ ತಲೆ ಹಾಕಿಲ್ಲ!
         ಮೊನ್ನೆ ಮೊನ್ನೆ ಮುಗಿದ ನುಡಿಹಬ್ಬದ ಅಧ್ಯಕ್ಷರಾಗಿದ್ದ ಕವಿ ಡಾ ಸಿದ್ದಲಿಂಗಯ್ಯ 70-80ರ ದಶಕಗಳಲ್ಲಿ ಕ್ರಾಂತಿಯ ಕಿಡಿ ಹಚ್ಚಿದ ಮೇರು ವ್ಯಕ್ತಿತ್ವದವರು. ಕಾಲ ಕಳೆದಂತೆ ಅವರೊಳಗಿನ ಸಾರ್ವತ್ರಿಕ ಹೋರಾಟದ ಕಾವು ಕುಂದಿದಂತೆ, ವ್ಯವಸ್ಥೆಯ ಜೊತೆ ರಾಜೀ ಮಾಡಿಕೊಂಡಂತೆ ಭಾಸವಾಗುತ್ತದೆ.  ಸಿದ್ದಲಿಂಗಯ್ಯನವರ ಕುರಿತು ಸಾಮಾನ್ಯ ಜನತೆ ಸಾರ್ವತ್ರಿಕವಾಗಿ ಇಟ್ಟುಕೊಂಡ ನಿರೀಕ್ಷೆಗಳು ದಶಕಗಳ ಹಿಂದಿನ ಕಾವನ್ನೇ ಬೇಡುತ್ತವೆ , ಆದರೆ ಸಿದ್ದಲಿಂಗಯ್ಯನವರ ನಿಲುವುಗಳ ಬದಲಾವಣೆಯನ್ನು ಜನ ಏಕೆ ಒಪ್ಪುವುದಿಲ್ಲ. ಸಮಾಜ ಮುಖಿಯಾದ ಚಿಂತನೆ, ಹೋರಾಟ ಒಬ್ಬರಿಗೆ ಮಾತ್ರ ಸೀಮಿತವೇ ? ಅವರವರ ವೈಯುಕ್ತಿಕ ಬದುಕಿನ ಜಂಜಾಟದಲ್ಲಿ ನಿಲುವುಗಳು ಪಲ್ಲಟವಾಗ ಬಹುದು, ವರ್ತಮಾನದಲ್ಲಿ ಚಲಾವಣೆ ಯಾಗುವ ಸಂಗತಿಗಳಿಗೆ ಆದ್ಯತೆ ಸಿಗಬಹುದೇನೋ ಆದರೆ ಜನ ಅದನ್ನು ಸ್ವೀಕರಿಸಲು ಸಿದ್ದರಿಲ್ಲ. 
       ಎಂದರೆ ಈ ಮೇಲಿನ ಉದಾಹರಣೆಗಳು ವೈಯುಕ್ತಿಕ ನೆಲೆಗಟ್ಟಿನಲ್ಲಿ ಬದಲಾವಣೆ ಬಯಸದೇ  ಮುಂದುವರೆಯುವ ಒಂದು ಗುಂಪು, ಬದಲಾಗುವ ವ್ಯಕ್ತಿತ್ವವನ್ನು ವಾಸ್ತವ ನೆಲೆಗಟ್ಟಿನಲ್ಲಿ ಗ್ರಹಿಸದ ಮತ್ತೊಂದು ಗುಂಪು. ಬದುಕಿಗೆ ಕನಸುಗಳು ಬೇಕು ಭ್ರಮೆಗಳು ಇರಬಾರದಲ್ಲವೇ? 

Sunday, February 8, 2015

ಸಂಪನ್ನ ನುಡಿಹಬ್ಬವೂ, ವಾರ್ಷಿಕ ಶ್ರಾದ್ದವೂ!



ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ಮುಗಿದಿದೆ,  ಗೋಷ್ಠಿಗಳಲ್ಲಿ ತದುಕಿಸಿಕೊಂಡವರು!, ಅವಕಾಶ ವಂಚಿತರು, ಅತೃಪ್ತರು ಸಮ್ಮೇಳನದ ನಂತರ, ಸಮ್ಮೇಳನವನ್ನು ತಮಗೆ ತೋಚಿದಂತೆ ಪೋಸ್ಟ್ ಮಾರ್ಟಂ ಮಾಡುತ್ತಿದ್ದಾರೆ. ಅವರವರ ಭಾವಕ್ಕೆ ತೋಚಿದಂತೆ ಪಿಂಡ ಪ್ರಧಾನ ಸಮಾರಂಭ ಎಂತಲೋ, ವಾರ್ಷಿಕ ಶ್ರಾದ್ಧವೆಂತಲೋ ಬರೆದು ವಿಕೃತ ಆನಂದವನ್ನು ಅನುಭವಿಸುತ್ತಿದ್ದಾರೆ. ಒಂದಂತೂ ಸತ್ಯ ಎಲ್ಲ ಆಯಾಮಗಳಲ್ಲೂ ಎಲ್ಲರನ್ನೂ ಸಮ್ಮೇಳನ ತಲುಪಿದೆ ಮತ್ತು ಸದ್ಯಕ್ಕೆ ಆರದ ಕಿಚ್ಚನ್ನು ಹಚ್ಚಿದೆ. ಹಾಸನ ಜಿಲ್ಲಾ ಕಸಾಪ ತನಗೆ ವಹಿಸಿದ ಕೆಲಸವನ್ನು ಸಮಸ್ತರ ಸಹಕಾರದೊಂದಿಗೆ ಮಾಡಿ ಮುಗಿಸಿದೆ ಮತ್ತು ಯಶಸ್ಸಿನ ಗರಿಯನ್ನು ಸಿಕ್ಕಿಸಿಕೊಂಡಿದೆ!
            ಶ್ರವಣಬೆಳಗೊಳದಲ್ಲಿ ನಡೆದ ಎರಡನೇ ಸಮ್ಮೇಳನವಾದರೆ, ಹಾಸನ ಜಿಲ್ಲೆಯಲ್ಲಿ ನಡೆದ ಐದನೇ ಸಮ್ಮೇಳನ ಇದು. ರೈತ ಚಳುವಳಿ ಮತ್ತು ದಲಿತ ಚಳುವಳಿಯ ಕಾವನ್ನು ರಾಜ್ಯ ಮಟ್ಟದಲ್ಲಿ ಪ್ರತಿನಿಧಿಸಿದ್ದ ಜಿಲ್ಲೆಗೆ ಬೇರೆಯದ್ದೇ ಆದ ಮಹತ್ವವಿದೆ. ಸಂವೇದನಾ ಶೀಲ ಮನಸ್ಸುಗಳ ಮಾನವೀಯ ತುಡಿತದ ಕಿಚ್ಚು ಹಚ್ಚಿಸಿಕೊಂಡವರ ಬಿಸಿ ಕೊಂಚ ಆರಿದೆ ಎಂಬ ಹಂತದಲ್ಲಿ ಶತಮಾನೋತ್ಸವ ವರ್ಷದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಪರಿಷತ್ತು ಗೊಮ್ಮಟನ ನಾಡಿನಲ್ಲಿ ಆಯೋಜಿಸಿದ್ದು  ಮತ್ತು 100ವರ್ಷಗಳಿಂದ ಸಮ್ಮೆಳನ ಸರ್ವಾಧ್ಯಕ್ಷತೆಯ ಸ್ಥಾನದಿಂದ ವಂಚಿತವಾಗಿದ್ದ ದಲಿತ ಸಮುದಾಯಕ್ಕೆ ಆದ್ಯತೆಯ ಮೇಲೆ ಅವಕಾಶ ಒದಗಿಸಿದ್ದು ಬಹುಕಾಲ ನೆನಪಿನಲ್ಲುಳಿಯುವಂತಹದ್ದು. ನೈತಿಕತೆಯ ತಳಹದಿಯನ್ನು ಗಟ್ಟಿಯಾಗಿ ಕಾಯ್ದುಕೊಂಡಿರುವ ಖ್ಯಾತ ಸಾಹಿತಿ ದೇವನೂರ ಮಹದೇವ ಸಮ್ಮೇಳನ ಅಧ್ಯಕ್ಷರಾಗ ಬೇಕೆಂಬುದು ಜಾತಿಯ ಎಲ್ಲೆಯನ್ನು ಮೀರಿದ ಸಮಸ್ತ ಜನರ ಆಶಯವೂ ಆಗಿತ್ತು, ಆದರೆ ಸಾರ್ವತ್ರಿಕವಾಗಿ ಮಾತೃಭಾಷಾ ಶಿಕ್ಷಣ ಜಾರಿಯ ಮಹತ್ವವವನ್ನು ಸರ್ಕಾರದ ನೆರವಿಲ್ಲದೇ ಮಾಡಬೇಕೆನ್ನುವ ಆಶಯದೊಂದಿಗೆ ದೇವನೂರು ಹಿಂದುಳಿದರು. 
         ದೇವನೂರು ಒಲ್ಲೆನೆಂದ ಸ್ಥಾನವನ್ನು ಜನರ ನಡುವೆ ಇದ್ದು ಮಾತೃಭಾಷಾ ಶಿಕ್ಷಣದ ಆಶಯಕ್ಕೆ ಶಕ್ತಿ ತುಂಬುತ್ತೇನೆ ಎಂದು ಸಮ್ಮೇಳನ ಸರ್ವಾಧ್ಯಕ್ಷತೆಯನ್ನು ಒಪ್ಪಿಕೊಂಡವರು 70-80ರ ದಶಕದ ಕ್ರಾಂತಿಕಾರಿ ಕವಿ-ಸಾಹಿತಿ-ಹೋರಾಟಗಾರ-ಚಿಂತಕ ಡಾ ಸಿದ್ದಲಿಂಗಯ್ಯ. ಸಿದ್ದಲಿಂಗಯ್ಯ ಅಧ್ಯಕ್ಷತೆ ಒಪ್ಪಿಕೊಂಡಾಗ ಸಹಜವಾಗಿ ನಿರೀಕ್ಷೆಗಳಿದ್ದವು, ಕ್ರಾಂತಿಕಾರಿ ಸಾಹಿತಿ ಭಾಷಣದಲ್ಲಿ ಸರ್ಕಾರಕ್ಕೆ ನೇರ ಚಾಟಿ ಬೀಸುವ ಧ್ವನಿ ಹೊರಡ ಬಹುದು ಎಂಬುದು. ಆದರೆ ಸದ್ಯಕ್ಕೆ ಅಂತಹ ನಿರೀಕ್ಷೆಗೆ ತಣ್ಣೀರೆರಚಿದಂತಾಗಿದೆ. ಸಮ್ಮೆಳನಾಧ್ಯಕ್ಷರ ಜೊತೆಗಿನ  ಸಂವಾದದಲ್ಲಿ ಜಿಲ್ಲೆಯ ಹಿರಿಯ ಸಾಹಿತಿ ಭಾನುಮುಷ್ತಾಕ್ ಎತ್ತಿದ ಖಡಕ್ ಪ್ರಶ್ನೆಗೆ ನೇರ ಉತ್ತರವೂ ಸಿಗಲಿಲ್ಲ, ಸಿದ್ದಲಿಂಗಯ್ಯನವರ ಅಧ್ಯಕ್ಷೀಯ ಭಾಷಣದಲ್ಲೂ ಸಮಸ್ತ ಕನ್ನಡಿಗರ ಭಾವನಾತ್ಮಕವಾದ ಆಶಯಗಳಿಗೆ ಒತ್ತಾಸೆ ಸಿಗಲೇ ಇಲ್ಲ. ಸರ್ಕಾರದ ಪರವಾದ ಭರವಸೆ ಗಳಂತೆ ಭಾಷಣ ಇತ್ತೇ ವಿನಹ ಹಕ್ಕೊತ್ತಾಯ ಮಂಡನೆಯಾಗಲಿಲ್ಲ. ರಾಜ್ಯದಲ್ಲಿ ದಲಿತ ಚಳುವಳಿಗೆ ಕಾವು ಕೊಟ್ಟ ಪ್ರಮುಖರಲ್ಲಿ ಸಿದ್ದಲಿಂಗಯ್ಯ ಒಬ್ಬರು, ದಲಿತ ಮತ್ತು ರೈತ ಚಳುವಳಿ ಉತ್ತುಂಗದಲ್ಲಿದ್ದಾಗ ಹೆಚ್ಚು ಪ್ರಚಲಿತದಲ್ಲಿದ್ದ ಸಿದ್ದಲಿಂಗಯ್ಯ ತಮ್ಮ ಭಾಷಣದಲ್ಲೆಲ್ಲು ಈ ಎರಡು ಸಂಘಟನೆಗಳ ಕುರಿತಾಗಲಿ ವರ್ತಮಾನದ ಸ್ಥಿತಿಯನ್ನಾಗಲಿ ಪ್ರಸ್ತಾಪಿಸಲೇ ಇಲ್ಲ.  ದಲಿತರೊಬ್ಬರು ಅಧ್ಯಕ್ಷರಾದರು ಶತಮಾನೊತ್ಸವ ವರ್ಷದಲ್ಲಿ ಎಂಬುದಷ್ಟೇ ತೃಪ್ತಿ!
       ಸಮ್ಮೆಳನಗಳನ್ನು ಸಂಘಟಿಸುವ ಹೊಣೆಗಾರಿಕೆ ಎಷ್ಟಿದೆಯೋ ಅದನ್ನು ಜಿಲ್ಲೆಗೆ ತರುವಲ್ಲಿಯೂ ಅಷ್ಟೇ ಪರಿಶ್ರಮವೂ ಇದೆ. ಹಾವೇರಿಯಲ್ಲಿ ನಡೆಯಬೇಕಾದ ಸಮ್ಮೇಳನ ಕೈ ತಪ್ಪಬಹುದು ಎಂಬ ಸೂಚನೆ ಸಿಗುತ್ತಿದ್ದಂತೆಯೆ 5ತಿಂಗಳಿಗೆ ಮುಂಚಿನಿಂದಲೇ ಮಾನಸಿಕವಾಗಿ ಸಿದ್ದತೆಯನ್ನು ಮಾಡಿಕೊಂಡಿದ್ದು ಹಾಸನ ಜಿಲ್ಲಾ ಕಸಾಪ ಅಧ್ಯಕ್ಷ ಡಾ ಎಚ್ ಎಲ್ ಜನಾರ್ಧನ್. ರಾಜ್ಯದ ಉದ್ದಗಲಕ್ಕೂ ನಡೆದ ಪರಿಷತ್ತು ಕಾರ್ಯಕಾರಿಣಿ ಸಭೆಗಳಲೆಲ್ಲಾ ಪಾಲ್ಗೊಂಡ ಅವರಿಗೆ ಸಮ್ಮೇಳನ ಹಾವೇರಿಯ ಕೈ ತಪ್ಪುತ್ತಿದೆ ಎಂಬ ಸೂಚನೆ ಸಿಗುತ್ತಿದ್ದಂತೆಯೇ ಜಿಲ್ಲೆಯಲ್ಲಿ ಸಮ್ಮೇಳನ ಸಂಘಟಿಸುವ ಮಹತ್ವಾಕಾಂಕ್ಷೆಯನ್ನು ಪುಂಡಲೀಕ ಹಾಲಂಬಿಯವರ ಬಳಿ ವ್ಯಕ್ತಪಡಿಸಿಬಿಟ್ಟರು. ಪುಂಡಲೀಕ ಹಾಲಂಬಿ ಕೂಡ ಅಂತಿಮ ಹಂತದವರೆಗು ಕಾಯ್ದು ಶ್ರವಣಬೆಳಗೊಳ ಶ್ರೀ ಕ್ಷೇತ್ರ ಮಠದ ಸ್ವಾಮೀಜಿ ಮತ್ತು ಪ್ರಾಕೃತ ಭಾಷೆಯ ಘನ ವಿದ್ವಾಂಸರಾದ ಭಟ್ಟಾರಕ ಸ್ವಾಮೀಜಿಯವರನ್ನು 2-3 ಬಾರಿ ಭೇಟಿಯಾಗಿ ಭರವಸೆ ಪಡೆದಿದ್ದರು. ಇನ್ನು ಹಾವೇರಿಯಲ್ಲಿ ಸಮ್ಮೇಳನ ಸಾಧ್ಯವೇ ಇಲ್ಲ ಎಂದಾಗ ನವೆಂಬರ್ ನಲ್ಲಿ ನಡೆದ ಹಲ್ಮಿಡಿ ಉತ್ಸವಕ್ಕೆ ಬಂದವರು ಕಾರ್ಯಕಾರಿಣಿ ಸಭೆ ನಡೆಸಿ ಹಾಸನ ಜಿಲ್ಲೆಯಲ್ಲಿಯೇ ಸಮ್ಮೇಳನ ಎಂದು ಘೋಷಿಸಿ ಬಿಟ್ಟರು.
      ಹೀಗೆ ದಕ್ಕಿದ ಸಮ್ಮೇಳನವನ್ನು ಕೇವಲ ಒಂದೂವರೆ ತಿಂಗಳಿನಲ್ಲಿ ಸಂಘಟಿಸುವ ಪ್ರಯತ್ನ ಶುರುವಾಯಿತು. ಹಾಸನ ಜಿಲ್ಲೆ ಹೇಳಿ ಕೇಳಿ ರಾಜಕೀಯವನ್ನೇ ಹಾಸಿ ಹೊದ್ದು ಮಲಗುವ ಜಿಲ್ಲೆ, ಇಲ್ಲಿಯ ಜನರ ನಾಡಿ ಮಿಡಿತದಲ್ಲು ರಾಜಕೀಯದ ಮಿಡಿತವೇ ಜಾಸ್ತಿ. ಇದೆಲ್ಲದರ ನೇರ ದಾಳಿಗೆ ಸಿಲುಕಿದವರು ಹಾಸನ ಜಿಲ್ಲಾ ಕಸಾಪ ಅಧ್ಯಕ್ಷ ಡಾ ಜನಾರ್ದನ್. ಆದಾಗ್ಯೂ ಅವರಿಗೆ ದೊರೆತ ಎಲ್ಲ ಸಹಕಾರ ಮತ್ತು ಬೆಂಬಲ ಸಮ್ಮೇಳನದ ಯಶಸ್ಸಿನ ಗರಿಯನ್ನು ಸಿಕ್ಕಿಸಿಕೊಳ್ಳುವಂತೆ ಮಾಡಿದೆ. ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಸಂಯಮ ಮತ್ತು ಮಾರ್ಗದರ್ಶನ, ಹಾಲಂಬಿಯವರ ಒತ್ತಾಸೆ, ಕಾರ್ಯಾಧ್ಯಕ್ಷರಾಗಿ ಸಂಪೂರ್ಣ ಅರ್ಪಿಸಿಕೊಂಡ ಚನ್ನರಾಯಪಟ್ಟಣ ಶಾಸಕ ಬಾಲಕೃಷ್ಣ . ಇದೇ ನೆಪದಲ್ಲಿ 37ಕೋಟಿ ರೂಪಾಯಿಗಳನ್ನು ಮೂಲ ಸೌಕರ್ಯ ಮತ್ತು ರಸ್ತೆ ನಿರ್ಮಾಣಕ್ಕೆ ಬಿಡುಗಡೆ ಮಾಡಿ ಸಮ್ಮೇಳನದ ಯಶಸ್ಸಿಗೆ ಜಿಲ್ಲಾಡಳಿತವನ್ನು ಮುಡುಪಿಟ್ಟ ಡಾ ಎಚ್ ಸಿ ಮಹದೇವಪ್ಪ ಪ್ರಶಂಸೆಗೆ ಅರ್ಹರು. 
        ಸಮ್ಮೇಳನಕ್ಕೆ ಮುನ್ನಾ ದಿನಗಳಲ್ಲಿ ರಾಜ್ಯ ಸರ್ಕಾರ ಮಾತೃಭಾಷಾ ಶಿಕ್ಷಣಕ್ಕೆ ಸಂಬಂಧಿಸಿದಂತೆ ಸುಗ್ರೀವಾಜ್ಞೆ ಹೊರಡಿಸುವ ಕ್ರಿಯೆಗೆ ಚಾಲನೆ ನೀಡಿದೆ, ಈ ಕುರಿತು ಕೇಂದ್ರದೊಂದಿಗೆ ಸಂಪರ್ಕ ಇಟ್ಟುಕೊಂಡಿದೆ ಮತ್ತು ಸಮ್ಮೆಳನದ ವೇದಿಕೆಗೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮೇಳನಕ್ಕೆ ಕೊರತೆ ಬೀಳುವ 1ಕೋಟಿ ರೂ ಅನುದಾನವನ್ನು ಬಿಡುಗಡೆ ಮಾಡುವ ಮಾತುಗಳನ್ನಾಡಿದ್ದು ಸಂಧರ್ಬೋಚಿತವಾದುದೆ ಆಗಿದೆ. ನುಡಿಜಾತ್ರೆ ಪರಿಷತ್ತಿಗೆ ಸೀಮಿತವಾದ ಕಾರ್ಯಕ್ರಮವಲ್ಲ, ಸಮಸ್ತ ಕನ್ನಡಿಗರ ಭಾವನಾತ್ಮಕ ಆಶಯಗಳಿಗೆ ಇಂಬು ಕೊಡುವ ಪರಿಷೆ! ಹಾಗೂ ಉತ್ತರದಾಯಿಯೂ ಕೂಡಾ ಆಗಿದೆ, ಹಾಲಂಬಿ ಸಮ್ಮೇಳನದ ಒಂದು ಸಾಲಿನ ನಿರ್ಣಯ ಈಡೇರದಿದ್ದರೆ ಬೀದಿಗಿಳಿಯುವ ಎಚ್ಚರಿಕೆ ನೀಡಿದ್ದಾರೆ ಇದು ಮುಂದಿನ ದಿನಗಳಲ್ಲಿ ಪರಿಣಾಮ ಬೀರುವ ಸಾಧ್ಯತೆಯೂ ಇದೆ.
            ಸಮ್ಮೇಳನಕ್ಕೆ ಆಗಮಿಸಿ ಗಣ್ಯ ವೀಕ್ಷಕರ ಸಾಲಿನಲ್ಲಿ ಪವಡಿಸಿದ್ದ ರಾಜ್ಯ ಮಟ್ಟದ ದಿನಪತ್ರಿಕೆಯೊಂದರ ಸಂಪಾದಕರಾದ ವಿಶ್ವೇಶ್ವರ ಭಟ್ಟರನ್ನು ಸಂಘಟಕರು ವೇದಿಕೆಗೆ ಕರೆದು ಸನ್ಮಾನಿಸಿ, ಆತಿಥ್ಯ ನೀಡಿ ಕಳುಹಿಸಿ ಕೊಟ್ಟರು. ಅದೇ ಸಂಪಾದಕರು ಸಮ್ಮೇಳನದ ಮರುದಿನದ ಪತ್ರಿಕೆಯಲ್ಲಿ ಅಂಕಣವೊಂದನ್ನು ಬರೆದು ಕನ್ನಡಿಗರ ಶ್ರದ್ದೆಯ ಸಮ್ಮೇಳನವನ್ನು ಪಿಂಡ ಪ್ರಧಾನ ಸಮಾರಂಭ, ವಾರ್ಷಿಕ ಶ್ರಾದ್ಧ ಎಂದು ಬರೆದು ಅಸಹ್ಯ ಸೃಷ್ಟಿಸಿಕೊಂಡರು. ಅವರ ಅಂಕಣದಲ್ಲಿ ಎತ್ತಿದ ಕೆಲವು ಪ್ರಶ್ನೆಗಳು ಉಚಿತವೇ ಆದರೂ ವಾರ್ಷಿಕ ಶ್ರಾದ್ಧ ಎಂದು ಕರೆಯುವ ಮನಸ್ಥಿತಿ ಅವರಿಗೆ ಬರಬಾರದಿತ್ತು. ಸಮ್ಮೇಳನದ ಯಶಸ್ಸಿಗೆ ಚನ್ನರಾಯಪಟ್ಟಣದ ಸಹೃದಯವಂತ ಜನಸಾಮಾನ್ಯರು, ರೈತರು, ವ್ಯಾಪಾರಿಗಳು ಶಕ್ತ್ಯಾನುಸಾರ ಕೊಬ್ಬರಿ, ಬೆಲ್ಲ, ಅಕ್ಕಿ, ದುಡ್ಡು ನೀಡಿದ್ದಲ್ಲದೇ ಸ್ವಯಂಸೇವಕರಾಗಿ ಬಂದರು, ಹಾಸನ ಜಿಲ್ಲೆಯ ವಿವಿಧ ಖಾಸಗಿ ಸಂಘ, ಸಂಸ್ಥೆಗಳಿಂದಲೂ ದನಸಹಾಯ ಹರಿದು ಬಂತು ಹೀಗಿರುವಾಗ ಚನ್ನರಾಯ ಪಟ್ಟಣದವರೇ ಆದ ಬಾಗೂರು ಮಂಜೇಗೌಡ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರೂ ಹೌದು, ಅವರದೇ ನೆಲದಲ್ಲಿ ರಾಜ್ಯ ಮಟ್ಟದ ಸಮ್ಮೇಳನವೂ ಜರುಗಿದೆ, ಆದರೆ ಸಮ್ಮೇಳನಕ್ಕೆ ರಾಜ್ಯ ಸರ್ಕಾರಿ ನೌಕರರ ವೇತನವನ್ನು ನೀಡುವಾಗ ಷರತ್ತುಗಳನ್ನು ಹಾಕಿ ನಗೆಪಾಟಲಿಗೆ ಈಡಾದರು, ಹಾಗೆಂದು ಸಮ್ಮೇಳನವೇನೂ ನಿಲ್ಲಲಿಲ್ಲ ಅಲ್ಲವೇ? 

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...