ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ಮುಗಿದಿದೆ, ಗೋಷ್ಠಿಗಳಲ್ಲಿ ತದುಕಿಸಿಕೊಂಡವರು!, ಅವಕಾಶ ವಂಚಿತರು, ಅತೃಪ್ತರು ಸಮ್ಮೇಳನದ ನಂತರ, ಸಮ್ಮೇಳನವನ್ನು ತಮಗೆ ತೋಚಿದಂತೆ ಪೋಸ್ಟ್ ಮಾರ್ಟಂ ಮಾಡುತ್ತಿದ್ದಾರೆ. ಅವರವರ ಭಾವಕ್ಕೆ ತೋಚಿದಂತೆ ಪಿಂಡ ಪ್ರಧಾನ ಸಮಾರಂಭ ಎಂತಲೋ, ವಾರ್ಷಿಕ ಶ್ರಾದ್ಧವೆಂತಲೋ ಬರೆದು ವಿಕೃತ ಆನಂದವನ್ನು ಅನುಭವಿಸುತ್ತಿದ್ದಾರೆ. ಒಂದಂತೂ ಸತ್ಯ ಎಲ್ಲ ಆಯಾಮಗಳಲ್ಲೂ ಎಲ್ಲರನ್ನೂ ಸಮ್ಮೇಳನ ತಲುಪಿದೆ ಮತ್ತು ಸದ್ಯಕ್ಕೆ ಆರದ ಕಿಚ್ಚನ್ನು ಹಚ್ಚಿದೆ. ಹಾಸನ ಜಿಲ್ಲಾ ಕಸಾಪ ತನಗೆ ವಹಿಸಿದ ಕೆಲಸವನ್ನು ಸಮಸ್ತರ ಸಹಕಾರದೊಂದಿಗೆ ಮಾಡಿ ಮುಗಿಸಿದೆ ಮತ್ತು ಯಶಸ್ಸಿನ ಗರಿಯನ್ನು ಸಿಕ್ಕಿಸಿಕೊಂಡಿದೆ!
ಶ್ರವಣಬೆಳಗೊಳದಲ್ಲಿ ನಡೆದ ಎರಡನೇ ಸಮ್ಮೇಳನವಾದರೆ, ಹಾಸನ ಜಿಲ್ಲೆಯಲ್ಲಿ ನಡೆದ ಐದನೇ ಸಮ್ಮೇಳನ ಇದು. ರೈತ ಚಳುವಳಿ ಮತ್ತು ದಲಿತ ಚಳುವಳಿಯ ಕಾವನ್ನು ರಾಜ್ಯ ಮಟ್ಟದಲ್ಲಿ ಪ್ರತಿನಿಧಿಸಿದ್ದ ಜಿಲ್ಲೆಗೆ ಬೇರೆಯದ್ದೇ ಆದ ಮಹತ್ವವಿದೆ. ಸಂವೇದನಾ ಶೀಲ ಮನಸ್ಸುಗಳ ಮಾನವೀಯ ತುಡಿತದ ಕಿಚ್ಚು ಹಚ್ಚಿಸಿಕೊಂಡವರ ಬಿಸಿ ಕೊಂಚ ಆರಿದೆ ಎಂಬ ಹಂತದಲ್ಲಿ ಶತಮಾನೋತ್ಸವ ವರ್ಷದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಪರಿಷತ್ತು ಗೊಮ್ಮಟನ ನಾಡಿನಲ್ಲಿ ಆಯೋಜಿಸಿದ್ದು ಮತ್ತು 100ವರ್ಷಗಳಿಂದ ಸಮ್ಮೆಳನ ಸರ್ವಾಧ್ಯಕ್ಷತೆಯ ಸ್ಥಾನದಿಂದ ವಂಚಿತವಾಗಿದ್ದ ದಲಿತ ಸಮುದಾಯಕ್ಕೆ ಆದ್ಯತೆಯ ಮೇಲೆ ಅವಕಾಶ ಒದಗಿಸಿದ್ದು ಬಹುಕಾಲ ನೆನಪಿನಲ್ಲುಳಿಯುವಂತಹದ್ದು. ನೈತಿಕತೆಯ ತಳಹದಿಯನ್ನು ಗಟ್ಟಿಯಾಗಿ ಕಾಯ್ದುಕೊಂಡಿರುವ ಖ್ಯಾತ ಸಾಹಿತಿ ದೇವನೂರ ಮಹದೇವ ಸಮ್ಮೇಳನ ಅಧ್ಯಕ್ಷರಾಗ ಬೇಕೆಂಬುದು ಜಾತಿಯ ಎಲ್ಲೆಯನ್ನು ಮೀರಿದ ಸಮಸ್ತ ಜನರ ಆಶಯವೂ ಆಗಿತ್ತು, ಆದರೆ ಸಾರ್ವತ್ರಿಕವಾಗಿ ಮಾತೃಭಾಷಾ ಶಿಕ್ಷಣ ಜಾರಿಯ ಮಹತ್ವವವನ್ನು ಸರ್ಕಾರದ ನೆರವಿಲ್ಲದೇ ಮಾಡಬೇಕೆನ್ನುವ ಆಶಯದೊಂದಿಗೆ ದೇವನೂರು ಹಿಂದುಳಿದರು.
ದೇವನೂರು ಒಲ್ಲೆನೆಂದ ಸ್ಥಾನವನ್ನು ಜನರ ನಡುವೆ ಇದ್ದು ಮಾತೃಭಾಷಾ ಶಿಕ್ಷಣದ ಆಶಯಕ್ಕೆ ಶಕ್ತಿ ತುಂಬುತ್ತೇನೆ ಎಂದು ಸಮ್ಮೇಳನ ಸರ್ವಾಧ್ಯಕ್ಷತೆಯನ್ನು ಒಪ್ಪಿಕೊಂಡವರು 70-80ರ ದಶಕದ ಕ್ರಾಂತಿಕಾರಿ ಕವಿ-ಸಾಹಿತಿ-ಹೋರಾಟಗಾರ-ಚಿಂತಕ ಡಾ ಸಿದ್ದಲಿಂಗಯ್ಯ. ಸಿದ್ದಲಿಂಗಯ್ಯ ಅಧ್ಯಕ್ಷತೆ ಒಪ್ಪಿಕೊಂಡಾಗ ಸಹಜವಾಗಿ ನಿರೀಕ್ಷೆಗಳಿದ್ದವು, ಕ್ರಾಂತಿಕಾರಿ ಸಾಹಿತಿ ಭಾಷಣದಲ್ಲಿ ಸರ್ಕಾರಕ್ಕೆ ನೇರ ಚಾಟಿ ಬೀಸುವ ಧ್ವನಿ ಹೊರಡ ಬಹುದು ಎಂಬುದು. ಆದರೆ ಸದ್ಯಕ್ಕೆ ಅಂತಹ ನಿರೀಕ್ಷೆಗೆ ತಣ್ಣೀರೆರಚಿದಂತಾಗಿದೆ. ಸಮ್ಮೆಳನಾಧ್ಯಕ್ಷರ ಜೊತೆಗಿನ ಸಂವಾದದಲ್ಲಿ ಜಿಲ್ಲೆಯ ಹಿರಿಯ ಸಾಹಿತಿ ಭಾನುಮುಷ್ತಾಕ್ ಎತ್ತಿದ ಖಡಕ್ ಪ್ರಶ್ನೆಗೆ ನೇರ ಉತ್ತರವೂ ಸಿಗಲಿಲ್ಲ, ಸಿದ್ದಲಿಂಗಯ್ಯನವರ ಅಧ್ಯಕ್ಷೀಯ ಭಾಷಣದಲ್ಲೂ ಸಮಸ್ತ ಕನ್ನಡಿಗರ ಭಾವನಾತ್ಮಕವಾದ ಆಶಯಗಳಿಗೆ ಒತ್ತಾಸೆ ಸಿಗಲೇ ಇಲ್ಲ. ಸರ್ಕಾರದ ಪರವಾದ ಭರವಸೆ ಗಳಂತೆ ಭಾಷಣ ಇತ್ತೇ ವಿನಹ ಹಕ್ಕೊತ್ತಾಯ ಮಂಡನೆಯಾಗಲಿಲ್ಲ. ರಾಜ್ಯದಲ್ಲಿ ದಲಿತ ಚಳುವಳಿಗೆ ಕಾವು ಕೊಟ್ಟ ಪ್ರಮುಖರಲ್ಲಿ ಸಿದ್ದಲಿಂಗಯ್ಯ ಒಬ್ಬರು, ದಲಿತ ಮತ್ತು ರೈತ ಚಳುವಳಿ ಉತ್ತುಂಗದಲ್ಲಿದ್ದಾಗ ಹೆಚ್ಚು ಪ್ರಚಲಿತದಲ್ಲಿದ್ದ ಸಿದ್ದಲಿಂಗಯ್ಯ ತಮ್ಮ ಭಾಷಣದಲ್ಲೆಲ್ಲು ಈ ಎರಡು ಸಂಘಟನೆಗಳ ಕುರಿತಾಗಲಿ ವರ್ತಮಾನದ ಸ್ಥಿತಿಯನ್ನಾಗಲಿ ಪ್ರಸ್ತಾಪಿಸಲೇ ಇಲ್ಲ. ದಲಿತರೊಬ್ಬರು ಅಧ್ಯಕ್ಷರಾದರು ಶತಮಾನೊತ್ಸವ ವರ್ಷದಲ್ಲಿ ಎಂಬುದಷ್ಟೇ ತೃಪ್ತಿ!
ಸಮ್ಮೆಳನಗಳನ್ನು ಸಂಘಟಿಸುವ ಹೊಣೆಗಾರಿಕೆ ಎಷ್ಟಿದೆಯೋ ಅದನ್ನು ಜಿಲ್ಲೆಗೆ ತರುವಲ್ಲಿಯೂ ಅಷ್ಟೇ ಪರಿಶ್ರಮವೂ ಇದೆ. ಹಾವೇರಿಯಲ್ಲಿ ನಡೆಯಬೇಕಾದ ಸಮ್ಮೇಳನ ಕೈ ತಪ್ಪಬಹುದು ಎಂಬ ಸೂಚನೆ ಸಿಗುತ್ತಿದ್ದಂತೆಯೆ 5ತಿಂಗಳಿಗೆ ಮುಂಚಿನಿಂದಲೇ ಮಾನಸಿಕವಾಗಿ ಸಿದ್ದತೆಯನ್ನು ಮಾಡಿಕೊಂಡಿದ್ದು ಹಾಸನ ಜಿಲ್ಲಾ ಕಸಾಪ ಅಧ್ಯಕ್ಷ ಡಾ ಎಚ್ ಎಲ್ ಜನಾರ್ಧನ್. ರಾಜ್ಯದ ಉದ್ದಗಲಕ್ಕೂ ನಡೆದ ಪರಿಷತ್ತು ಕಾರ್ಯಕಾರಿಣಿ ಸಭೆಗಳಲೆಲ್ಲಾ ಪಾಲ್ಗೊಂಡ ಅವರಿಗೆ ಸಮ್ಮೇಳನ ಹಾವೇರಿಯ ಕೈ ತಪ್ಪುತ್ತಿದೆ ಎಂಬ ಸೂಚನೆ ಸಿಗುತ್ತಿದ್ದಂತೆಯೇ ಜಿಲ್ಲೆಯಲ್ಲಿ ಸಮ್ಮೇಳನ ಸಂಘಟಿಸುವ ಮಹತ್ವಾಕಾಂಕ್ಷೆಯನ್ನು ಪುಂಡಲೀಕ ಹಾಲಂಬಿಯವರ ಬಳಿ ವ್ಯಕ್ತಪಡಿಸಿಬಿಟ್ಟರು. ಪುಂಡಲೀಕ ಹಾಲಂಬಿ ಕೂಡ ಅಂತಿಮ ಹಂತದವರೆಗು ಕಾಯ್ದು ಶ್ರವಣಬೆಳಗೊಳ ಶ್ರೀ ಕ್ಷೇತ್ರ ಮಠದ ಸ್ವಾಮೀಜಿ ಮತ್ತು ಪ್ರಾಕೃತ ಭಾಷೆಯ ಘನ ವಿದ್ವಾಂಸರಾದ ಭಟ್ಟಾರಕ ಸ್ವಾಮೀಜಿಯವರನ್ನು 2-3 ಬಾರಿ ಭೇಟಿಯಾಗಿ ಭರವಸೆ ಪಡೆದಿದ್ದರು. ಇನ್ನು ಹಾವೇರಿಯಲ್ಲಿ ಸಮ್ಮೇಳನ ಸಾಧ್ಯವೇ ಇಲ್ಲ ಎಂದಾಗ ನವೆಂಬರ್ ನಲ್ಲಿ ನಡೆದ ಹಲ್ಮಿಡಿ ಉತ್ಸವಕ್ಕೆ ಬಂದವರು ಕಾರ್ಯಕಾರಿಣಿ ಸಭೆ ನಡೆಸಿ ಹಾಸನ ಜಿಲ್ಲೆಯಲ್ಲಿಯೇ ಸಮ್ಮೇಳನ ಎಂದು ಘೋಷಿಸಿ ಬಿಟ್ಟರು.
ಹೀಗೆ ದಕ್ಕಿದ ಸಮ್ಮೇಳನವನ್ನು ಕೇವಲ ಒಂದೂವರೆ ತಿಂಗಳಿನಲ್ಲಿ ಸಂಘಟಿಸುವ ಪ್ರಯತ್ನ ಶುರುವಾಯಿತು. ಹಾಸನ ಜಿಲ್ಲೆ ಹೇಳಿ ಕೇಳಿ ರಾಜಕೀಯವನ್ನೇ ಹಾಸಿ ಹೊದ್ದು ಮಲಗುವ ಜಿಲ್ಲೆ, ಇಲ್ಲಿಯ ಜನರ ನಾಡಿ ಮಿಡಿತದಲ್ಲು ರಾಜಕೀಯದ ಮಿಡಿತವೇ ಜಾಸ್ತಿ. ಇದೆಲ್ಲದರ ನೇರ ದಾಳಿಗೆ ಸಿಲುಕಿದವರು ಹಾಸನ ಜಿಲ್ಲಾ ಕಸಾಪ ಅಧ್ಯಕ್ಷ ಡಾ ಜನಾರ್ದನ್. ಆದಾಗ್ಯೂ ಅವರಿಗೆ ದೊರೆತ ಎಲ್ಲ ಸಹಕಾರ ಮತ್ತು ಬೆಂಬಲ ಸಮ್ಮೇಳನದ ಯಶಸ್ಸಿನ ಗರಿಯನ್ನು ಸಿಕ್ಕಿಸಿಕೊಳ್ಳುವಂತೆ ಮಾಡಿದೆ. ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಸಂಯಮ ಮತ್ತು ಮಾರ್ಗದರ್ಶನ, ಹಾಲಂಬಿಯವರ ಒತ್ತಾಸೆ, ಕಾರ್ಯಾಧ್ಯಕ್ಷರಾಗಿ ಸಂಪೂರ್ಣ ಅರ್ಪಿಸಿಕೊಂಡ ಚನ್ನರಾಯಪಟ್ಟಣ ಶಾಸಕ ಬಾಲಕೃಷ್ಣ . ಇದೇ ನೆಪದಲ್ಲಿ 37ಕೋಟಿ ರೂಪಾಯಿಗಳನ್ನು ಮೂಲ ಸೌಕರ್ಯ ಮತ್ತು ರಸ್ತೆ ನಿರ್ಮಾಣಕ್ಕೆ ಬಿಡುಗಡೆ ಮಾಡಿ ಸಮ್ಮೇಳನದ ಯಶಸ್ಸಿಗೆ ಜಿಲ್ಲಾಡಳಿತವನ್ನು ಮುಡುಪಿಟ್ಟ ಡಾ ಎಚ್ ಸಿ ಮಹದೇವಪ್ಪ ಪ್ರಶಂಸೆಗೆ ಅರ್ಹರು.
ಸಮ್ಮೇಳನಕ್ಕೆ ಮುನ್ನಾ ದಿನಗಳಲ್ಲಿ ರಾಜ್ಯ ಸರ್ಕಾರ ಮಾತೃಭಾಷಾ ಶಿಕ್ಷಣಕ್ಕೆ ಸಂಬಂಧಿಸಿದಂತೆ ಸುಗ್ರೀವಾಜ್ಞೆ ಹೊರಡಿಸುವ ಕ್ರಿಯೆಗೆ ಚಾಲನೆ ನೀಡಿದೆ, ಈ ಕುರಿತು ಕೇಂದ್ರದೊಂದಿಗೆ ಸಂಪರ್ಕ ಇಟ್ಟುಕೊಂಡಿದೆ ಮತ್ತು ಸಮ್ಮೆಳನದ ವೇದಿಕೆಗೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮೇಳನಕ್ಕೆ ಕೊರತೆ ಬೀಳುವ 1ಕೋಟಿ ರೂ ಅನುದಾನವನ್ನು ಬಿಡುಗಡೆ ಮಾಡುವ ಮಾತುಗಳನ್ನಾಡಿದ್ದು ಸಂಧರ್ಬೋಚಿತವಾದುದೆ ಆಗಿದೆ. ನುಡಿಜಾತ್ರೆ ಪರಿಷತ್ತಿಗೆ ಸೀಮಿತವಾದ ಕಾರ್ಯಕ್ರಮವಲ್ಲ, ಸಮಸ್ತ ಕನ್ನಡಿಗರ ಭಾವನಾತ್ಮಕ ಆಶಯಗಳಿಗೆ ಇಂಬು ಕೊಡುವ ಪರಿಷೆ! ಹಾಗೂ ಉತ್ತರದಾಯಿಯೂ ಕೂಡಾ ಆಗಿದೆ, ಹಾಲಂಬಿ ಸಮ್ಮೇಳನದ ಒಂದು ಸಾಲಿನ ನಿರ್ಣಯ ಈಡೇರದಿದ್ದರೆ ಬೀದಿಗಿಳಿಯುವ ಎಚ್ಚರಿಕೆ ನೀಡಿದ್ದಾರೆ ಇದು ಮುಂದಿನ ದಿನಗಳಲ್ಲಿ ಪರಿಣಾಮ ಬೀರುವ ಸಾಧ್ಯತೆಯೂ ಇದೆ.
ಸಮ್ಮೇಳನಕ್ಕೆ ಆಗಮಿಸಿ ಗಣ್ಯ ವೀಕ್ಷಕರ ಸಾಲಿನಲ್ಲಿ ಪವಡಿಸಿದ್ದ ರಾಜ್ಯ ಮಟ್ಟದ ದಿನಪತ್ರಿಕೆಯೊಂದರ ಸಂಪಾದಕರಾದ ವಿಶ್ವೇಶ್ವರ ಭಟ್ಟರನ್ನು ಸಂಘಟಕರು ವೇದಿಕೆಗೆ ಕರೆದು ಸನ್ಮಾನಿಸಿ, ಆತಿಥ್ಯ ನೀಡಿ ಕಳುಹಿಸಿ ಕೊಟ್ಟರು. ಅದೇ ಸಂಪಾದಕರು ಸಮ್ಮೇಳನದ ಮರುದಿನದ ಪತ್ರಿಕೆಯಲ್ಲಿ ಅಂಕಣವೊಂದನ್ನು ಬರೆದು ಕನ್ನಡಿಗರ ಶ್ರದ್ದೆಯ ಸಮ್ಮೇಳನವನ್ನು ಪಿಂಡ ಪ್ರಧಾನ ಸಮಾರಂಭ, ವಾರ್ಷಿಕ ಶ್ರಾದ್ಧ ಎಂದು ಬರೆದು ಅಸಹ್ಯ ಸೃಷ್ಟಿಸಿಕೊಂಡರು. ಅವರ ಅಂಕಣದಲ್ಲಿ ಎತ್ತಿದ ಕೆಲವು ಪ್ರಶ್ನೆಗಳು ಉಚಿತವೇ ಆದರೂ ವಾರ್ಷಿಕ ಶ್ರಾದ್ಧ ಎಂದು ಕರೆಯುವ ಮನಸ್ಥಿತಿ ಅವರಿಗೆ ಬರಬಾರದಿತ್ತು. ಸಮ್ಮೇಳನದ ಯಶಸ್ಸಿಗೆ ಚನ್ನರಾಯಪಟ್ಟಣದ ಸಹೃದಯವಂತ ಜನಸಾಮಾನ್ಯರು, ರೈತರು, ವ್ಯಾಪಾರಿಗಳು ಶಕ್ತ್ಯಾನುಸಾರ ಕೊಬ್ಬರಿ, ಬೆಲ್ಲ, ಅಕ್ಕಿ, ದುಡ್ಡು ನೀಡಿದ್ದಲ್ಲದೇ ಸ್ವಯಂಸೇವಕರಾಗಿ ಬಂದರು, ಹಾಸನ ಜಿಲ್ಲೆಯ ವಿವಿಧ ಖಾಸಗಿ ಸಂಘ, ಸಂಸ್ಥೆಗಳಿಂದಲೂ ದನಸಹಾಯ ಹರಿದು ಬಂತು ಹೀಗಿರುವಾಗ ಚನ್ನರಾಯ ಪಟ್ಟಣದವರೇ ಆದ ಬಾಗೂರು ಮಂಜೇಗೌಡ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರೂ ಹೌದು, ಅವರದೇ ನೆಲದಲ್ಲಿ ರಾಜ್ಯ ಮಟ್ಟದ ಸಮ್ಮೇಳನವೂ ಜರುಗಿದೆ, ಆದರೆ ಸಮ್ಮೇಳನಕ್ಕೆ ರಾಜ್ಯ ಸರ್ಕಾರಿ ನೌಕರರ ವೇತನವನ್ನು ನೀಡುವಾಗ ಷರತ್ತುಗಳನ್ನು ಹಾಕಿ ನಗೆಪಾಟಲಿಗೆ ಈಡಾದರು, ಹಾಗೆಂದು ಸಮ್ಮೇಳನವೇನೂ ನಿಲ್ಲಲಿಲ್ಲ ಅಲ್ಲವೇ?
No comments:
Post a Comment