ಇಂದಿನ ಮಕ್ಕಳೇ ಮುಂದಿನ
ಪ್ರಜೆಗಳು ಎಂಬುದು ಬಳಸಿ ಬಳಸಿ ಸವಕಲಾದ ಹಳೆ ಮಾತು, ಭಾರತದ ಪ್ರಧಾನಿಯಾಗಿದ್ದ ಜವಾಹರ ಲಾಲ್ ನೆಹರೂ
ರವರ ಕಾರಣಕ್ಕೆ ಅವರ ಜನ್ಮ ದಿನವನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಿ ಕೊಂಡು ಬಂದಿರುವುದು ಗೊತ್ತಿರುವ
ಸಂಗತಿ. ಇದೇ ನವೆಂಬರ್ 14ಕ್ಕೆ ಮಕ್ಕಳ ದಿನಾಚರಣೆ ಹಾಗೆಯೇ ನವೆಂಬರ್ 10ಕ್ಕೆ ಟಿಪ್ಪು ಜಯಂತಿ. ಈ ಸಂಧರ್ಭದಲ್ಲಿ
ಮಕ್ಕಳ ಸ್ಥಿತಿ ಗತಿ ಮತ್ತು ವರ್ತಮಾನವನ್ನು ಅವಲೋಕಿಸುವ ಜೊತೆಗೆ ಟಿಪ್ಪು ಜಯಂತಿಯನ್ನು ರಾಜ್ಯ ಸರ್ಕಾರ
ಅಧಿಕೃತವಾಗಿ ಆಚರಿಸುತ್ತಿರುವ ಕುರಿತು ಎದ್ದಿರುವ ವಾದ ವಿವಾದಗಳ ಕಡೆಗೆ ಗಮನ ಹರಿಸಿ ಸತ್ಯ-ಅಸತ್ಯಗಳ
ಮಂಥನ ಅಗತ್ಯ.
ವರ್ತಮಾನದ ಈ ಹೊತ್ತಿನಲ್ಲಿ ನಾವೆಲ್ಲಿದ್ದೇವೆ
? ಸಂಬಂಧಗಳ ಪರಿಧಿ ಎಲ್ಲಿದೆ? ಎಂಬ ಪ್ರಶ್ನೆಯನ್ನಿಟ್ಟುಕೊಂಡು ಮಕ್ಕಳ ಕುರಿತ ಸಂಗತಿಗಳನ್ನು ಚರ್ಚೆಗೆ
ಎತ್ತಿಕೊಳ್ಳ ಬಹುದು. ಎರಡು ವರ್ಷದ ಹಿಂದೆ ಪತ್ರಿಕೆ ‘ನನ್ನ ಕನಸಿನ ಭಾರತ’ ಎಂಬ ಶೀರ್ಷಿಕೆಯಡಿ ಮಕ್ಕಳಿಂದ
ಬರಹಗಳನ್ನು ಆಹ್ವಾನಿಸಿ ವಿಶೇಷ ಸಂಚಿಕೆಯನ್ನು ಮಾಡಿತ್ತು, ಸದರಿ ಸಂಚಿಕೆಯ ಖುಷಿಯನ್ನು ಹಂಚಿಕೊಳ್ಳುವ
ವೇದಿಕೆಯಲ್ಲಿ ಮಕ್ಕಳು ಮಾತಿಗೆ ನಿಂತರು.ಪೋಷಕರಿಂದ ಪ್ರೇರಿತವಾದ ಬಹುತೇಕ ಮಕ್ಕಳು ತಮ್ಮ ಕನಸಿನ ಭಾರತದ
ಕುರಿತು ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಲೆ ಮೀಸಲು ನೀತಿಯ ಕುರಿತು ಮಾತನಾಡಲು ತೊಡಗಿದರು. ನಾವು
ಕಷ್ಟಪಟ್ಟು ಓದಿ ಮೆರಿಟ್ ಪಡೀತೀವಿ ಆದ್ರೆ ಮೀಸಲಾತಿ ಪಡೆದ ದಲಿತ ಮಕ್ಕಳು ಕಡಿಮೆ ಅಂಕ ಪಡೆದು ಉನ್ನತ
ವಿದ್ಯಾಭ್ಯಾಸದ ಸೀಟು ಪಡೀತಾರೆ, ಉದ್ಯೋಗ ಪಡೀತಾರೆ, ಉದ್ಯೋಗದಲ್ಲಿ ಬಡ್ತಿ ಪಡೀತಾರೆ ನಮಗೆ ಮಾತ್ರ
ಆ ಯೋಗ ಇಲ್ಲ. ಈ ದೇಶದಲ್ಲಿ ಎಲ್ಲರೂ ಸಮಾನರು ಎಂದು ಸಂವಿಧಾನ ಹೇಳುತ್ತೆ ಆದ್ರೆ ಸಮಾನತೆಗೆ ಮೀಸಲಾತಿ
ಬೇಕಿಲ್ಲ ತೆಗೆದು ಹಾಕಿ ಎಂದು ಒಬ್ಬರ ಮೇಲಾದ ಮೇಲೆ ಒಬ್ಬ ಮಕ್ಕಳು ವೇದಿಕೆಯಲ್ಲಿ ಮಾತನಾಡ ತೊಡಗಿದರು.
ಅದನ್ನು ಕೇಳಿ ನಗಬೇಕೋ ಅಳಬೇಕೋ ತಿಳಿಯಲಿಲ್ಲ ವರ್ತಮಾನದ ಪೂರ್ಣ ಅರಿವಿರದ ಮಕ್ಕಳು ಮೇಲುನೋಟಕ್ಕೆ ಸಿಗುವ
ಸಂಗತಿಗಳನ್ನಷ್ಟೇ ಗ್ರಹಿಸಿ ಅಭಿಪ್ರಾಯಗಳನ್ನು ಹೊರ ಹಾಕಿದ್ದರು. ಈ ಅಭಿಪ್ರಾಯಗಳ ಹಿಂದೆ ಶೂದ್ರ ಮತ್ತು
ಪುರೋಹಿತ ಶಾಹಿಗಳ ಗ್ರಹಣ ಬಡಿದ ಮನಸ್ಥಿತಿಯ ಒತ್ತಾಸೆ ಎದ್ದು ಕಾಣುತ್ತಿತ್ತು. ಇಂತಹ ಸಂಗತಿಗಳನ್ನು
ವಿವೇಚನೆ ಇಟ್ಟು ನೋಡುವುದಾದರೆ, ಸಾಮಾಜಿಕ ಸಮಾನತೆಯ ಅರ್ಥವನ್ನು ನೈಜ ನೆಲಗಟ್ಟಿನಲ್ಲಿ ಗ್ರಹಿಸುವ
ಸೂಕ್ಷ್ಮತೆ ಮರೆಯಾಗಿರುವುದು ಈ ದುರಂತಕ್ಕೆ ಕಾರಣ. ಸಮಾನತೆ ಎಂಬ ಪದದ ಹಿಂದಿನ ಕಹಿ ಸಂಗತಿಗಳು ಎಷ್ಟೋ
ಸಲ ವಾಸ್ತವ ಸಂಗತಿಗಳ ಅರಿವಿನ ಕೊರತೆಯಿಂದ ಉಂಟಾದುದಾಗಿರುತ್ತವೆ. ಹಾಗಾಗಿ ಇಲ್ಲಿ ಒಂದಿಷ್ಟುಮಾಹಿತಿ
ನಿಮ್ಮ ಗಮನಕ್ಕೆ ತರುತ್ತೇನೆ. ಸಂವಿಧಾನದಲ್ಲಿ ಸಮಾನತೆಯ ಸಮಾಜ ಸೃಷ್ಟಿಗಾಗಿ ಶೇ.49.5ರ ಮೀಸಲಾತಿಯನ್ನು
ಉದ್ಯೋಗ, ಶಿಕ್ಷಣ ಕ್ಷೇತ್ರದಲ್ಲಿ ನೀಡಲಾಗಿದೆ. ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಶೇ.
22.5 ಮೀಸಲಿದ್ದರೆ ಈ ವರೆಗೂ ಸದರಿ ಸಮುದಾಯ ಬಳಸಿದ್ದು ಸುಮಾರು 8.5% ಅಷ್ಟೇ, ಪರಿಶಿಷ್ಟ ಪಂಗಡದವರು
ಶೇ.3.5% ಬಳಸಿದ್ದರೆ, ಹಿಂದುಳಿದ ವರ್ಗಕ್ಕೆ ಮೀಸಲಿರುವ ಶೇ.27ರ ಮೀಸಲಾತಿಯಲ್ಲಿ ಬಳಕೆಯಾಗಿರುವುದು
ಶೇ.4.5% ರಿಂದ ಶೇ.5% ಮಾತ್ರ. ಅಂದರೆ ಇನ್ನೂ ಪೂರ್ತಿಯಾಗಿ ಮೀಸಲಾತಿ ಒಂದು ತಲೆಮಾರಿನ ಮೂರನೇ ಒಂದು
ಭಾಗಕ್ಕೂ ತಲುಪಿಲ್ಲ ಆಗಲೆ ಮೀಸಲಾತಿ ಕುರಿತು ಅಸಹನೆ ಎದ್ದಿದೆ. ಹೋಗಲಿ ವರ್ತಮಾನದಲ್ಲಿ ಏನಾದರೂ ಬದಲಾವಣೆ
ಆಗಿದೆಯೇ ಎಂದರೆ ಅದೂ ಇಲ್ಲ ಜಾತಿ ಹಿಂದೆಂದಿಗಿಂತ ಇಂದು ಹೆಚ್ಚು ಜ್ವಲಿಸುತ್ತಿದ್ದು ಸುಪ್ತವಾಗಿ ಎಲ್ಲರ
ಮನದಲ್ಲಿ ಅಡಕವಾಗಿದೆ ಮತ್ತು ಅದರ ವಿರಾಟ್ ಸ್ವರೂಪವನ್ನು ನಿತ್ಯವೂ ಕಾಣುತ್ತಲೇ ಇದ್ದೇವೆ. ಹೀಗಿರುವಾಗ
ಮಕ್ಕಳಿಗೆ ಇಂತಹ ಸಂಗತಿಗಳನ್ನು ಪೋಷಕರು ಹೇಳ ಬೇಕಿತ್ತಲ್ಲವೇ?
ಮಕ್ಕಳಿಗೆ ಇವತ್ತು ಆಯ್ಕೆಯ ಅವಕಾಶಗಳು ಸಿಗುತ್ತಿಲ್ಲ,
ಪೋಷಕರು ಇದಕ್ಕೆ ಅವಕಾಶ ಮಾಡುತ್ತಿಲ್ಲ ಇದು ವ್ಯತಿರಿಕ್ತ ಪರಿಣಾಮಕ್ಕೆ ದಾರಿಯಾಗುತ್ತಿದೆ. ಶಿಕ್ಷಣದ
ವ್ಯಾಪಾರೀಕರಣದ ಈ ಹೊತ್ತಿನಲ್ಲಿ ಜಾಗತಿಕ ವ್ಯವಸ್ಥೆಯಲ್ಲಿ ಆಕರ್ಷಣೆಗೆ ಬಲಿಬಿದ್ದು ಮಕ್ಕಳನ್ನು ಬಾಲ್ಯದಲ್ಲಿಯೇ
ಶಿಕ್ಷಣದ ನೆಪದಲ್ಲಿ ದೂರ ಮಾಡುವ ಪೋಷಕರು ಸಾಮಾಜಿಕ ಬಂಧದ ಎಳೆಯನ್ನೇ ಕಡಿಯುತ್ತಿದ್ದಾರೆ. ಆಸಕ್ತಿಯಿಲ್ಲದ
ಸಂಗತಿಗಳ ಕಲಿಕೆ, ಒತ್ತಾಯ ಪೂರ್ವಕ ಕಲಿಕೆ ಮಕ್ಕಳ ಬದುಕನ್ನು ರೂಪಿಸಲಾರದು. ಹಾಗೆಯೇ ಸಂಬಂಧಗಳ ಅರಿವಿನ
ಕೊರತೆ ತಂದೆ-ಮಗಳು, ಅಣ್ಣ-ತಂಗಿಯ ಸಂಬಂಧವನ್ನೇ ಮರೆಯುವಂತೆ ಮಾಡಿದೆ, ಮಕ್ಕಳು ಲೈಂಗಿಕ ಪೀಡನೆಗೆ ತುತ್ತಾಗುತ್ತಿದ್ದಾರೆ.
ಶಾಲೆ, ಕಾಲೇಜು, ವಿವಿಗಳಲ್ಲಿ ಶಿಕ್ಷಕ/ಅದ್ಯಾಪಕ/ಪ್ರಾಧ್ಯಾಪಕರ ಕಾಮ ತೃಷೆಗೆ ಮಕ್ಕಳು ನಲುಗುವಂತಾಗಿದೆ.
ಬಿಡುವಿರದ ದಿನಚರಿಯ ನಡುವೆ ಮಕ್ಕಳ ಆಗು-ಹೋಗುಗಳನ್ನು ಗಮನಿಸುವ ತಾಳ್ಮೆ ಪೋಷಕರಿಗೆ ಅಗತ್ಯವಾಗಿ ಬೇಕಿದೆ,
ಮಕ್ಕಳಿಗೆ ಒಳ್ಳೆಯ ಸಂಗತಿಗಳ ಮಾರ್ಗದರ್ಶನ, ಮುಕ್ತ ಕಲಿಕೆಯ ಅವಕಾಶಗಳನ್ನು ಪೋಷಕರು ಒದಗಿಸಬೇಕಾಗಿದೆ.
ಟಿಪ್ಪು,
ದಲಿತರನ್ನು ನೀರಗಂಟಿಯಾಗಿ ನೇಮಿಸಿದ, ದಲಿತ-ಹಿಂದುಳಿದವರಿಗೆ ಭೂ ಹಂಚಿಕೆಯನ್ನು ಮಾಡಿದ, ಅಂದು ಜನರು
ಹೊಂದಿರುವ ಭೂಮಿಯಾದಾರದಲ್ಲಿ ತೆರಿಗೆ ಸಂಗ್ರಹವಾಗುತ್ತಿದ್ದಾಗ ಅದನ್ನು ಕೈಬಿಟ್ಟು ನಿಮ್ಮ ಕೈಗೆ ಬಂದ
ಬೆಳೆಯಲ್ಲಿ 1/6 ಭಾಗ ಮಾತ್ರ ತೆರಿಗೆ ನೀಡಿ ಎಂದು ರೈತ ಪರ ರಾಜ ಟಿಪ್ಪು. ಅಂದಿನ ದಿನಗಳಲ್ಲೇ 29ಸಾವಿರಕ್ಕೂ
ಹೆಚ್ಚು ಕೆರೆಗಳ ನಿರ್ಮಾಣಕ್ಕೆ ಮತ್ತು ಕೆರೆಗಳ ಹೂಳೆತ್ತಲು ಸಹಾಯ ಮಾಡಿದ ರಾಜ ಟಿಪ್ಪು ಸುಲ್ತಾನ್.
ಕ್ಷಿಪಣಿಯನ್ನು ಬಳಸಿದ ಮೊದಲ ಅರಸ ಟಿಪ್ಪು. ಅಂದಾಜು 17ವರ್ಷಗಳ ಕಾಲ ಅರಸನಾಗಿದ್ದ ಟಿಪ್ಪು ಮತಾಂಧನಾಗಿದ್ದರೆ
ಮೈಸೂರು ಸುತ್ತಮುತ್ತಲಿನ ಪರಿಸ್ಥಿತಿ ಇವತ್ತು ಹೇಗಿರುತ್ತಿತ್ತು? ಆತನ ಆಡಳಿತದಲ್ಲಿ ಬ್ರಾಹ್ಮಣರು
ಆಡಳಿತಗಾರರಾಗಿದ್ದರು,ಅತೀ ಹೆಚ್ಚು ಹಿಂದೂಗಳು ಸೈನಿಕರಾಗಿದ್ದರು.
ಈತನ ಪ್ರದಾನಿ ಪೂರ್ಣಯ್ಯ, ಕಂದಾಯ ಮಂತ್ರಿ ಕೃಷ್ಣರಾವ್, ಸೇನಾ ದಂಡನಾಯಕ ಶ್ರೀನಿವಾಸ ರಾವ್ ಮುಸ್ಲಿಮರಲ್ಲ
ಅಥವಾ ಮತಾಂತರಕ್ಕೆ ಒಳಪಟ್ಟಿರಲಿಲ್ಲ ಎಂಬುದು ದಿಟವಲ್ಲವೇ? ಟಿಪ್ಪು ಹಿಂದೂ ವಿರೋಧಿಯಾಗಿದ್ದರೆ ಹಿಂದೂ
ದೇಗುಳಗಳು ಉಳಿಯುತ್ತಿದ್ದವೆ? 150ಕ್ಕೂ ಅಧಿಕ ದೇಗುಲಗಳಿಗೆ ನಗ-ನಾಣ್ಯವನ್ನು ಟಿಪ್ಪು ನೀಡಿದ್ದ, ಶೃಂಗೇರಿಯಲ್ಲಿ
ಮರಾಠರು ಅರ್ಚಕನನ್ನು ಕೊಲ್ಲುವ ಮೂಲಕ ಬೀದಿಗೆ ಎಸೆದಿದ್ದ ವಿಗ್ರಹವನ್ನು ಮರಳಿ ಸ್ಥಾಪಿಸಿದ್ದು ಟಿಪ್ಪು
ಅಲ್ಲವೇ?
ಕೊಡಗು
ಪ್ರಾಂತ್ಯದಲ್ಲಿ 77ಸಾವಿರ ಹಿಂದೂಗಳನ್ನು ಟಿಪ್ಪು ಮತಾಂತರಗೊಳಿಸಿದ್ದಾದರೆ ಆ ಕಾಲದಲ್ಲಿ ಕೊಡಗಿನಲ್ಲಿ
ಅಷ್ಟೊಂದು ಸಂಖ್ಯೆಯಲ್ಲಿ ಜನರು ಎಲ್ಲಿದ್ದರು? ಮತಾಂತರವಾದವರು ಎಲ್ಲಿದ್ದಾರೆ? ಟಿಪ್ಪು ಸುಲ್ತಾನ್
ಹಾಸನ, ಶಿವಮೊಗ್ಗ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿತ್ರದುರ್ಗ, ರಾಯಚೂರು, ಬಳ್ಳಾರಿ, ದಾರವಾಡ,
ತುಮಕೂರು ಮತ್ತು ಕೋಲಾರ ಭಾಗದಲ್ಲಿದ್ದ ಸುಮಾರು 200 ಪಾಳೇಗಾರರನ್ನು ಧ್ವಂಸ ಮಾಡಿ ಇಡೀಭಾಗವನ್ನು ಮೈಸೂರು
ಸಂಸ್ಥಾನಕ್ಕೆ ಸೇರಿಸಿ ಪಾಳೇಗಾರರ ಒಡೆತನದಲ್ಲಿದ್ದ ಭೂಮಿಯನ್ನು ಉಳುವ ರೈತರಿಗೆ ಹಂಚಿದ ಖ್ಯಾತಿ ಟಿಪ್ಪುವಿಗೆ
ಸಲ್ಲುತ್ತದೆ. ರೈತಾಪಿ ಸಮುದಾಯಕ್ಕೆ ಬಡ್ಡಿರಹಿತ ಸಾಲವನ್ನು ಕೊಡುವ ವ್ಯವಸ್ಥೆಯನ್ನು ಮಾಡಿದ್ದ ಇಂತಹ
ಟಿಪ್ಪು ಸುಲ್ತಾನನ್ನು ಮರಾಠರು ಮತ್ತು ನಿಜಾಮರ ನೆರವಿನಿಂದ ಮತ್ತು ತನ್ನ ಸೇನೆಯಲ್ಲಿದ್ದ ಪ್ರಮುಖರ
ಕುತಂತ್ರದ ಲಾಭ ಪಡೆದ ಬ್ರಿಟೀಷರು ಮೋಸದಿಂದ ಯುದ್ದದಲ್ಲಿ ಟಿಪ್ಪುವನ್ನು ಹತಗೈದರು. ಇಂತಹ ವೀರನ ಸ್ಮರಣೆ
ಮಾಡುವುದರಲ್ಲಿತಪ್ಪೇನಿದೆ?
ವಾಸ್ತವ
ಸಂಗತಿಗಳನ್ನು ಪರಿಗ್ರಹಿಸುವ ಸೂಕ್ಷ್ಮತೆ ಸಮಾಜದಲ್ಲಿ ಬರಬೇಕಿದೆ, ಸಮಾಜದ ಸಮಾನತೆಯ ಹೊಣೆಯ ಅರಿವನ್ನು
ಇಟ್ಟುಕೊಂಡು ಭವಿಷ್ಯದ ಪ್ರಜೆಗಳನ್ನು ರೂಪಿಸುವ ಪೋಷಕರು, ಶಿಕ್ಷಕರು ಜಾಗೃತಾವಸ್ಥೆಯಲ್ಲಿರ ಬೇಕಾಗುತ್ತದೆ.
ಅಸಹಿಷ್ಣುತೆಯ ಕಾವಿನ ಈ ದಿನಗಳಲ್ಲಿ ಯಾವುದನ್ನಾದರೂ ವಿರೋಧಿಸುವ ಮೊದಲು ಅಲ್ಲಿನ ಸಂಗತಿಗಳನ್ನು ಸೂಕ್ಷ್ಮವಾಗಿ
ಗ್ರಹಿಸುವ, ಬದ್ದತೆ ಪ್ರದರ್ಶಿಸುವ ಜೀವಪರ ನಿಲುವುಗಳನ್ನು ಹೊಂದುವ ಪರಿಸ್ಥಿತಿ ಮೂಡಲಿ ಅಲ್ಲವೇ?
No comments:
Post a Comment