Sunday, September 8, 2019

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

Image result for media job cuts

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತಿದೆ. ಹೀಗೆ ತೆಗೆಯುವಾಗ ಬಯಾಸ್ಡ್ ಆಗಿಯೂ ತೆಗೆಯಲಾಗುತ್ತಿದೆ ಎಂಬ ಮಾಹಿತಿ ಇದೆ. ಟೀಂ ಜೊತೆ ಗುರುತಿಸಿಕೊಂಡು ಬಂದವರ ಕಥೆ ಅಷ್ಟೇ!

ಮಾಧ್ಯಮ ಉದ್ಯಮದ ಸ್ವರೂಪ ಪಡೆದು ಕೊಂಡಿದೆ, ಆದರೆ ಉದ್ದಿಮೆಗಳು ಕಡ್ಡಾಯವಾಗಿ ಪಾಲಿಸ ಬೇಕಾದ ಕಾನೂನು ನಿಯಮಗಳನ್ನು ಪಾಲಿಸದಿರುವುದು ಪತ್ರಕರ್ತರ ಅಸ್ಥಿರತೆಗೆ ಕಾರಣವಾಗಿದೆ. ರಾಜಕಾರಣಿಗಳು, ಬೃಹತ್ ಬಂಡವಾಳಷಾಹಿಗಳು, ರಿಯಲ್ ಎಸ್ಟೇಟ್ ಕುಳಗಳು ಸ್ವಾರ್ಥ ಹಿತಾಸಕ್ತಿ ಸಾಧನೆಗಾಗಿ ಮಾಧ್ಯಮದ ಅಂಗಡಿಗಳನ್ನು ತೆರೆದು ಪತ್ರಿಕೋಧ್ಯಮಕ್ಕೆ ಕಳಂಕ ತಂದಿರುವುದು ಗುಟ್ಟಾಗಿ ಉಳಿದಿರುವ ಸಂಗತಿಯೇನಲ್ಲ. ಅವರಿಗೆ ಬೇಡವೆನಿಸಿದಾಗ ಮಾಧ್ಯಮದ ಅಂಗಡಿಯ ಬಾಗಿಲೆಳೆದು ಬಿಡುತ್ತಾರೆ, ಪತ್ರಕರ್ತ ಅಸಹಾಯಕನಾಗಿ ಬೀದಿಗೆ ನಿಲ್ಲುತ್ತಾನೆ. ಒಂದು ಮೋಟಾರ್ ಕಂಪನಿ, ವಾಚ್ ಕಂಪನಿ ಬಾಗಿಲು ಹಾಕಿಕೊಂಡರೆ ಅಲ್ಲಿನ ಕಾರ್ಮಿಕರಿಗೆ ಸ್ವಾವಲಂಬನೆಯ ಕಸುಬುದಾರಿಕೆ ಕೈ ಹಿಡಿಯುತ್ತದೆ. ಆದರೆ ವರ್ತಮಾನದ‌ ಪತ್ರಕರ್ತ ಅಕ್ಷರಶಃ ನಡು ರಸ್ತೆಯಲ್ಲಿ ನಿಂತ ಬಾಲಕರಾಗಿ ಬಿಡುತ್ತಾರೆ.

ಈ ಹೊತ್ತಿನಲ್ಲಿ ಅಪಾಯಕ್ಕೆ ಸಿಲುಕಿದವನು ಮಾತ್ರ ಪತ್ರಕರ್ತನೇ ಆಗಿದ್ದಾನೆ. ಊರಿನ ಉಸಾಬರಿಗೆ ತಲೆ ಕೆಡಿಸಿಕೊಂಡು ನ್ಯಾಯ ಒದಗಿಸಲು ಪರದಾಡುವವನಿಗೆ ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಅಸಹಾಯಕನಾಗಿ ಬಿಡುತ್ತಾನೆ.  ಒಂದು ದಶಕದಲ್ಲಿ ಪತ್ರಕರ್ತ ವೃತ್ತಿಗೆ ತಿಲಾಂಜಲಿ ಹಾಡಿ ಕರಿಕೋಟು ಹಾಕುವ ವಕೀಲರಾಗಿ, ಎಂಎನ್ ಸಿಗಳಲ್ಲಿ, ಸರ್ಕಾರಿ ವ್ಯವಸ್ಥೆಯಲ್ಲಿ  ವೃತ್ತಿ ಸಂಬಂದಿತ ಉದ್ಯೋಗ ಹುಡುಕಿಕೊಂಡ ಬುದ್ದಿವಂತ ಪತ್ರಕರ್ತರನ್ನು‌ ಗಮನಿಸಿದ್ದೇನೆ.

ಆದರೆ ಹಳೇ ತಲೆಮಾರು, ಹೊಸ ತಲೆಮಾರುಗಳ ವರದಿಗಾರ/ಸಂಪಾದಕ/ಕಾಪಿ ಎಡಿಟರ್/ನ್ಯೂಸ್ ಹೆಡ್ ಎಂಬ ಪದನಾಮಗಳಿಂದ ಆಚೆಗೆ ನೋಡಿಲ್ಲ. ಪತ್ರಕರ್ತ ತನ್ನ ಸಾಮರ್ಥ್ಯ ಕ್ಕೆ ಅನುಗುಣವಾಗಿ ಹೊಸ ಸಾಧ್ಯತೆಗಳನ್ನು ಕಂಡುಕೊಳ್ಳ ಬೇಕಾಗಿದೆ. ಜರ್ನಲಿಸಂ ಎಂದಾಕ್ಷಣ ಅದು ಟಿವಿ ರಿಪೋರ್ಟಿಂಗ್, ಕೆಮರಾಮ್ಯಾನ್, ಪತ್ರಿಕೆ ವರದಿಗಾರನೇ ಆಗಬೇಕಿಲ್ಲ ಅಲ್ಲವೇ? ನನ್ನ ಅನುಭವದ ಪ್ರಕಾರ ಇದಿಷ್ಟೆ ಚಿಂತಿಸುವ ಕ್ರಮವನ್ನು ಬಾವಿಯೊಳಗಿನ ಕಪ್ಪೆಯ‌ ಮನಸ್ಥಿತಿ ಎನ್ನಬಹುದು.

ಕಾಲಕ್ಕನುಗುಣವಾಗಿ ಆಗುತ್ತಿರುವ ಬದಲಾವಣೆಗಳು, ಮಾರುಕಟ್ಟೆಯ ಆದ್ಯತೆ, ಅಲ್ಲಿ ಸೃಷ್ಟಿಯಾಗುತ್ತಿರುವ ಅವಕಾಶಗಳನ್ನು ಗ್ರಹಿಸುವ ಶಕ್ತಿಯನ್ನು ಪತ್ರಕರ್ತರು ಕಳೆದು ಕೊಂಡಿದ್ದಾರೆ. ಇದು ನವೋದ್ಯಮಗಳ ಕಾಲ, ಈ ಸಂದರ್ಭದಲ್ಲಿ ಪತ್ರಕರ್ತ ಕಣ್ಣೋಟ ಏನಿರ ಬೇಕು, ಪರ್ಯಾಯಗಳನ್ನು ಹುಡುಕುವುದು ಹೇಗೆ ಎಂಬುದನ್ನು ಕಂಡುಕೊಳ್ಳದ ಹೊರತು ಪತ್ರಕರ್ತರು ಖಂಡಿತಾ ಉದ್ದಾರ ಅಗುವುದಿಲ್ಲ.

ಮುದ್ರಣ ಮಾಧ್ಯಮ/ದೃಶ್ಯ ಮಾಧ್ಯಮಗಳು (ಸುದ್ದಿ ಮಾಧ್ಯಮಗಳು ಮಾತ್ರ) ಲಾಭದಾಯಕವಾಗಿ ನಡೆಯುತ್ತಿಲ್ಲ. ಅವು ಅಸ್ತಿತ್ವ ಉಳಿಸಿಕೊಳ್ಳಲು ಏನು ಮಾಡುತ್ತಿವೆ ಸೂಕ್ಷ್ಮ ವಾಗಿ ಗಮನಿಸಿ. ಪ್ರಜಾವಾಣಿ/ಡೆಕ್ಕನ್ ಹೆರಾಲ್ಡ್, ಟೈಮ್ಸ್ ಆಫ್ ಇಂಡಿಯಾ, ಪಬ್ಲಿಕ್ ಟಿವಿಯಂತಹ ಬೆರಳೇಣಿಕೆಯ ಕಂಪನಿ ಗಳು ಮಾತ್ರ ಶತಾಯ ಗತಾಯ ಉಳಿವಿಗೆ ಈಗಾಗಲೆ ಇಂತಹ ಪ್ರಯತ್ನ ಮಾಡುತ್ತಿವೆ. ಅವರ ಪ್ರಯತ್ನಕ್ಕೆ ಸಾಥ್ ನೀಡುವ ಸಂಪನ್ಮೂಲವಿದೆ ಆದರೆ ಸಂಪನ್ಮೂಲ ವ್ಯಕ್ತಿಗಳೇ ಸಿಗುತ್ತಿಲ್ಲ. ಅಲ್ಲಿ ನವೋದ್ಯಮದ ಕೆಲಸಗಳು ಖಾಲಿ ಇವೆ! ಇದು ಎಷ್ಟು ಜನರ ಅರಿವಿಗೆ ಬಂದಿದೆ?

ಎಂ ಎನ್ ಸಿ ಗಳು, ಸರ್ಕಾರಿ ಇಲಾಖೆಗಳು ಹೊಸ ಸಾಧ್ಯತೆಗಳಿಗೆ ತೆರೆದುಕೊಳ್ಳಲು ಪ್ರಯತ್ನಿಸುತ್ತಿವೆ,  ಹೊಸ ಹೊಸ ವೃತ್ತಿ ಅವಕಾಶಗಳು ತೆರೆದು ಕೊಂಡಿವೆ. ಎಷ್ಟು ಮಂದಿಗೆ ಇದು ಗೊತ್ತಿದೆ? ನಾವೇ ಸೃಷ್ಟಿಸುವ ಸೃಜನಶೀಲ ಕಸುಬುದಾರಿಕೆಗಳು ಇವೆ.  ವೃತ್ತಿ ಜೀವನದಲ್ಲಿ ಬರಿಯ ಜಾಹೀರಾತು,  ಶಹಬ್ಬಾಸ್ ಗಿರಿ, ಗೌರವ ಇಟ್ಟುಕೊಂಡು ಏನ್ ಮಾಡ್ತೀರಿ? ಬದುಕಿಗೆ ಅದು ಸ್ಥಿರತೆ ಒದಗಿಸುತ್ತಾ? ಸಹದ್ಯೋಗಿಗಳನ್ನೆ ಗೇಲಿ‌ಮಾಡಿಕೊಂಡು,  ಬದುಕುವುದನ್ನೆ ಸಹಿಸದೇ ಅಸೂಯೆ ಬೆಳೆಸಿಕೊಂಡು, ದ್ವೇಷಿಸಿಕೊಂಡು, ಬಕೆಟ್ ಹಿಡಿದುಕೊಂಡು ಬದುಕುವ  ಬದುಕು ಒಂದು ಬದುಕೆ?  ಈಗಲಾದರೂ ಎಚ್ಚೆತ್ತುಕೊಳ್ಳಿ ವೃತ್ತಿ ಜೀವನಕ್ಕೆ ಪರ್ಯಾಯ ಕಂಡುಕೊಳ್ಳಿ, ಯೋಜನೆ ಮಾಡಿ.

ಪತ್ರಕರ್ತರ ಕ್ಷೇಮಾಭಿವೃದ್ದಿಗೆ ಚಿಂತಿಸುವ ಕೆಲಸವನ್ನು, ಪರ್ಯಾಯ ಸಾಧ್ಯತೆಗಳನ್ನು ತಿಳಿಸುವ ಕೆಲಸವನ್ನು ಮಾಧ್ಯಮ ಅಕಾಡೆಮಿ‌ ಮಾಡಬೇಕು. ಆದರೇನು ಮಾಡುವುದು ಅಲ್ಲಿ ಬಂದು ಕೂರುವವರಲ್ಲಿಯೇ ಹೊಸ ಹೊಳಹುಗಳಿಲ್ಲ, ಇಚ್ಛಾಶಕ್ತಿ ಕೊರತೆ. ಹೀಗಿರುವಾಗ ಪತ್ರಕರ್ತರನ್ನ ಅವರವರು ನಂಬಿಕೊಂಡ ದೇವರೇ ಕಾಪಾಡ ಬೇಕಷ್ಟೇ!

Tuesday, August 13, 2019

ದುರ್ಯೋಧನ ಕಣ್ಣೋಟದ ಮುನಿರತ್ನ ಕುರುಕ್ಷೇತ್ರ!



ವ್ಯಾಸ ಮಹರ್ಷಿ ರಚಿಸಿದ ಮಹಾಭಾರತ ಕಥನದ ಪ್ರತೀ ಪಾತ್ರಗಳು ಬಹುತ್ವ ಭಾರತದ ಸಮಾಜದಲ್ಲಿ ಕಾಣಬರುವ ಪಾತ್ರಗಳೇ ಅನಿಸುತ್ತವೆ. ಮಹಾಭಾರತದ ಯಾವುದೇ ಪಾತ್ರಗಳನ್ನು ತೆಗೆದುಕೊಳ್ಳಿ, ಆ ಪಾತ್ರದ ಮೂಲಕ ಮಹಾಭಾರತವನ್ನು ನೋಡಿದರೆ ಅದೇ ಸರಿ ಎನಿಸಿ ಬಿಡುತ್ತದೆ. ಬಹುಶ: ಇಂತಹ ಅಪರೂಪದ ಗುಣ ಜಗತ್ತಿನ ಯಾವುದೇ ಭಾಷೆಯ ಸಾಹಿತ್ಯದ ಪಾತ್ರಗಳಿಗೆ ಲಭಿಸಿರಲಾರದೇನೊ.

ಮಹಾಭಾರತದ ಉಪಕಥೆಗಳನ್ನು ಆಧಾರವಾಗಿಟ್ಟು ಕೊಂಡು ಕೆಲವು ಸಿನಿಮಾಗಳು ಬಂದಿವೆ. ತೆಲುಗಿನಲ್ಲಿ ಎನ್ ಟಿ ರಾಮರಾವ್ ಸೀರಿಸ್ ಸಿನಿಮಾಗಳನ್ನು ಮಾಡಿದರೆ, ಹಿಂದಿಯಲ್ಲಿ ಕಿರು ತೆರೆಯ ಧಾರವಾಹಿಗಳಾಗಿ ಮಹಾಭಾರತದ ಪಾತ್ರಗಳು ಜನರ ಮನಸ್ಸಿನಲ್ಲಿ ಅಚ್ಚೊತ್ತಿವೆ. ಕನ್ನಡದಲ್ಲಿ ಡಾ ರಾಜ್ ಕುಮಾರ್ ಅಭಿನಯದ ‘ಬಬ್ರುವಾಹನ’ ಸಾರ್ವಕಾಲಿಕ ಮುದ್ರೆಯೊತ್ತಿದೆ. ಎನ್ ಟಿ ಆರ್ ಮತ್ತು ಡಾ ರಾಜ್ ಮರೆಯಾದ ನಂತರ ಪೌರಾಣಿಕ ಪಾತ್ರಗಳನ್ನು ಕಣ್ಣೆದುರು ತಂದು ನಿಲ್ಲಿಸುವ ತಾಕತ್ತಿನ ಸಿನಿಮಾಗಳು ಬಾರಲೇ ಇಲ್ಲ.


ಈಗ ಕುರುಕ್ಷೇತ್ರ ಕನ್ನಡ ಸಿನಿಮಾ ತೆರೆಗೆ ಬಂದಿದೆ. ಅದು ಅಪ್ಪಟ ಮುನಿರತ್ನ ಕುರುಕ್ಷೇತ್ರ! ಅದಕ್ಕೆ ತಕ್ಕಂತೆ  ‘ಏ ದಾಸಿ’, ‘ದಾಸ’, ‘ಪಂಚ ಪಲ್ಲಂಗಿನಿ’, ‘ಏ ಗೋಪಾಲ’, ‘ಏ ರಾಯಭಾರಿ’, ‘ಮಾಮಾ’ ಎಂಬ ಚಿತ್ರದ ಸಂಭಾಷಣೆಗಳು ಪಾತ್ರಧಾರಿಗಳ ಬಾಯಲ್ಲಿ ಯಥೇಚ್ಚವಾಗಿ ಥೇಟ್ ಸ್ಲಂ ಭಾಷೆಯಂತೆಯೇ ಕೇಳಿಸುತ್ತವೆ. ಇದು ಸಂಭಾಷಣೆಯ ಸಾಹಿತ್ಯದ ಪ್ರಭಾವವೋ ಅಥವ ಪಾತ್ರಧಾರಿಗಳು ಸಂಭಾಷಣೆ ಹೇಳುವ ರೀತಿಯೋ ಗೊತ್ತಿಲ್ಲ.   ಈ ಸಂಭಾಷಣೆಗಳಲ್ಲಿ ಡಾ ರಾಜ್ ಕುಮಾರ್ ಅಭಿನಯದ ಬಬ್ರುವಾಹನ ಚಿತ್ರದ ಸಂಭಾಷಣೆ ‘ಎಲವೋ ಪಾರ್ಥ’, ‘ಎಲವೋ ಶಿಖಂಡಿ’ ಎಂದು ಕೇಳಿಸಿಕೊಂಡಾಗ ಸಿಗುವ ಆನಂದ , ಮತ್ತೆ ಮತ್ತೆ ಕೇಳಿಸಿಕೊಳ್ಳ ಬೇಕೆನ್ನುವ ಆಪ್ತಅನುಭವ ಆಗುವುದೇ ಇಲ್ಲ.


ಮಹಾಭಾರತವನ್ನು ಸಂಪೂರ್ಣವಾಗಿ ಸೆಲ್ಯೂಲಾಯ್ಡ್ ತೆರೆಯ ಮೇಲೆ ತರುವುದು ತ್ರಾಸದಾಯಕ ಕೆಲಸ. ಹಾಗಾಗಿಯೇ ವಿವಿಧ ಸಂದರ್ಭದ ಕಥಾನಕಗಳನ್ನು ಆಗಾಗ ತೆರೆಯ ಮೇಲೆ ತರಲಾಗುತ್ತಿದೆ. ಮುನಿರತ್ನ ಕುರುಕ್ಷೇತ್ರ ಕೂಡ ಅಂತಹುದ್ದೇ ಪ್ರಯತ್ನಗಳಲ್ಲೊಂದು. ನಿರ್ದೇಶಕ ನಾಗಣ್ಣ ಇಂತಹ ಪ್ರಯತ್ನದಲ್ಲಿ ಭಾಗಶ: ಯಶ ಕಂಡಿದ್ದಾರೆ.  ಈ ವರ್ಷದ ಬಿಗ್ ಬಜೆಟ್ ಪೌರಾಣಿಕ ಚಿತ್ರ, ಬಹು ನಿರೀಕ್ಷೆಯ ಚಿತ್ರ, 3ಡಿ ಎಫೆಕ್ಟ್ ಚಿತ್ರ ಎನ್ನುವುದೇ ಹೆಗ್ಗಳಿಕೆ. ಸಧ್ಯ ಸ್ಯಾಂಡಲ್ ವುಡ್ ನಲ್ಲಿ ಮಂಚೂಣಿ ತಾರೆಯಾಗಿರುವ ದರ್ಶನ್ ರ ಇಮೇಜ್ ಗಾಗಿ ಈ ಸಿನಿಮಾ ತೆಗೆದಂತಿದೆ. ಹಾಗಾಗಿಯೇ ಇಡೀ ಚಿತ್ರದ ಪ್ರಮುಖ ಪಾತ್ರ ದುರ್ಯೋಧನ. ದುರ್ಯೋಧನನ ಕಣ್ಣೋಟದಲ್ಲಿ ಕುರುಕ್ಷೇತ್ರದ ಕಥಾನಕವನ್ನು ಹೊಸೆಯಲಾಗಿದೆ. ದುರ್ಯೋಧನನ ದೃಷ್ಟಿಯಿಂದ ಕುರುಕ್ಷೇತ್ರ ನೋಡುವಾಗ ಪಾಂಡವರು ನೀತಿ ಬಿಟ್ಟವರೆಂದು, ಕೃಷ್ಣ ವಂಚಕನೆಂದು, ಕರ್ಣನನ್ನು ಬಹುದೊಡ್ಡ ತ್ಯಾಗಿಯೆಂದು, ಭೀಮನಿಗಿಂತ ದುರ್ಯೋಧನ ಪ್ರಬಲನೆಂದು ತೋರಿಸಲಾಗಿದೆ. ಜನಪದರ ಮನದಲ್ಲಿ ದಾಖಲಾಗಿರುವ ಮಹಾಭಾರತ ಕಥಾನಕಕ್ಕೆ ಭಿನ್ನವಾದ ಆಯಾಮವನ್ನು ಸೂಕ್ತ ಆಧಾರಗಳಿಲ್ಲದೇ ಕಟ್ಟಿಕೊಟ್ಟಂತೆ ಭಾಸವಾಗುತ್ತದೆ. ಆದರೆ ದುರ್ಯೋಧನ ಜನ ಸಾಮಾನ್ಯರ ಮನದಲ್ಲಿ ಉಳಿಯುವಂತೆ ದರ್ಶನ್,  ಪಾತ್ರ ನಿರ್ವಹಿಸಿದ್ದಾರೆ ಎಂಬುದು ಪ್ರಶಂಸನೀಯ.


ಚಿತ್ರ ಆರಂಭವಾಗುವುದೇ ಹುಟ್ಟಿನ ಕಾರಣಕ್ಕೆ ಯಾರು ಮೇಲು ಯಾರು ಕೀಳು, ಯಾಕೆ ಕೀಳು ಎಂಬುದನ್ನು ವಿವಿಧ ಪಾತ್ರಗಳ ಮೂಲಕ ಹೇಳಿಸುತ್ತಾ ಯಾರೂ ಮೇಲಲ್ಲ, ಯಾರೂ ಕೀಳಲ್ಲ ಎಂಬುದನ್ನು ಅಸ್ಪಷ್ಟವಾಗಿ ನಿರೂಪಿಸುತ್ತದೆ.  ಜಾತಿ ತಾರತಮ್ಯದ ಸೂಕ್ಷ್ಮಗಳನ್ನು ಧರ್ಮ ಸೂಕ್ಷ್ಮದೊಂದಿಗೆ ಬೆರೆಸುತ್ತಾ ಪ್ರೇಕ್ಷಕರನ್ನು ವಿಷಾದಕ್ಕೆ ತಳ್ಳುವುದು ಕೂಡ ಚಿತ್ರದ ಗಮನ ಸೆಳೆಯುವ ಅಂಶ. ಚಿತ್ರದ ಮೊದಲಾರ್ಧದಲ್ಲಿ ವಿಜೃಂಭಿಸುವ ದರ್ಶನ್ ಧುರ್ಯೋಧನ ಪಾತ್ರಧಾರಿಯಾಗಿ ಜನಮನದಲ್ಲಿ ರಿಜಿಸ್ಟರ್ ಆಗುವ ಹಾಗೆ ಪಾತ್ರವನ್ನು ನಿಭಾಯಿಸಿದ್ದಾರೆ. ಕೆಲವು ಕೊರತೆಗಳನ್ನು ಹೊರತು ಪಡಿಸಿದರೆ ಸಂಭಾಷಣೆ ಚೆನ್ನಾಗಿದೆ. ಹಳಗನ್ನಡವನ್ನು ಬಳಸಿದ್ದರೆ, ಸಂಭಾಷಣೆ ಮಾದರಿಯ ಹಾಡುಗಳನ್ನು ಬಳಸಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು. ಅಭಿಮನ್ಯು-ಭೀಷ್ಮ, ಕರ್ಣ-ಕುಂತಿ, ಶ್ರೀಕೃಷ್ಣ-ಅರ್ಜುನರ ನಡುವಿನ ಸಂಭಾಷಣೆ ಪ್ರೇಕ್ಷಕರ ಮನಸ್ಸಿಗೆ ತಾಕುವಲ್ಲಿ ಯಶಸ್ಸು ಕಂಡಿದೆ. ವಿ ಆರ್ ನಾಗೇಂದ್ರ ಪ್ರಸಾದ್ ಈ ಕಾರಣಕ್ಕೆ ಅಬಿನಂದನಾರ್ಹರು.


ಕಥೆಯ ನಿರೂಪಣೆ, ಸಂಗೀತ ಮತ್ತು ಛಾಯಾಗ್ರಹಣ ಚಿತ್ರದ ಪೋಷಣೆಗೆ ಕೆಲವು ದೃಶ್ಯಗಳಲ್ಲಿ ಸಹಕಾರಿಯಾಗಿಲ್ಲ. ಚಿತ್ರದ ಕೆಲವು ಸನ್ನಿವೇಶಗಳಲ್ಲಿ ಕಥೆಯ ಪೂರಕ ಅಂಶಗಳೇ ನಾಪತ್ತೆಯಾಗಿವೆ. ಉದಾಹರಣೆಗೆ ಕರ್ಣನ ಸಾರಥಿಯಾಗುವ ಶಲ್ಯ, ಅರ್ಜುನನ ಮೇಲೆ ಕರ್ಣ ಬಾಣ ಹೂಡುವಾಗ ಉಪಯೋಗಿಸ ಬೇಕಾದ ತಂತ್ರ ಹೇಳಿಕೊಡುವ ಪ್ರಸ್ತಾಪವೇ ಇಲ್ಲ... ಹಾಗೆಯೇ ಅರ್ಜುನ ಕರ್ಣನನ್ನು ಬಲಿ ತೆಗೆದುಕೊಂಡಾಗ, ತನ್ನ ಮಗ ಅಭಿಮನ್ಯುವನ್ನು ಕರ್ಣ ಮೋಸದಿಂದ ಬಿಲ್ಲು ಮುರಿದು ಕೊಂದಿದ್ದಕ್ಕೆ  ಪ್ರತಿಯಾಗಿ  ಕರ್ಣನನ್ನು ಬಲಿ ತೆಗೆದುಕೊಂಡ ವಿಷಯ ಪ್ರಸ್ತಾಪಕ್ಕೆ ಬರುವುದಿಲ್ಲ. ಇದು ಕಥೆಯ ವೀಕ್ ನೆಸ್. ಇಡೀ ಸಿನಿಮಾದಲ್ಲಿ ಸಂಭಾಷಣೆಯೊಂದಿಗೆ, ಸನ್ನಿವೇಶದೊಂದಿಗೆ ಸಾಥ್ ನೀಡ ಬೇಕಿದ್ದ ಸಂಗೀತ ಯಾವ ಹಂತದಲ್ಲಿಯೂ ದಾಖಲಾಗುವುದೇ ಇಲ್ಲ. ಕುರುಕ್ಷೇತ್ರದ ಬಹುದೊಡ್ಡ ನೆಗೆಟೀವ್ ಅಂಶ ಚಿತ್ರದ ಛಾಯಾಗ್ರಹಣ ಎಂದರೂ ತಪ್ಪಾಗಲಾರದರು. ಚಿತ್ರವನ್ನು, ಪಾತ್ರಧಾರಿಯನ್ನು ಪ್ರೇಕ್ಷಕನ ಕಣ್ಣೆದುರು ಅಚ್ಚಳಿಯದಂತೆ ಪ್ರತಿಷ್ಠಾಪಿಸುವ ಕೆಲಸವನ್ನು ಛಾಯಾಗ್ರಹಣ ಮಾಡಬೇಕಿತ್ತು. ಚಿತ್ರದ ಪ್ರಥಮಾರ್ಧದಲ್ಲಿನ ಲಾಂಗ್ ಶಾಟ್ ಗಳು ಚಿತ್ರದ ಓಟಕ್ಕೆ ಧಕ್ಕೆಯಾಗಿವೆ.


ಏಜ್ ಫ್ಯಾಕ್ಟರ್ ಕಾರಣಕ್ಕಾಗಿಯೋ ಏನೋ ಅಂಬರೀಶ್ ಮತ್ತು ಶ್ರೀನಾಥ್ ಅವರ ಸಂಭಾಷಣೆಗಳು ಪಾತ್ರಕ್ಕೆ ತಕ್ಕಂತೆ ಧ್ವನಿಸುವುದಿಲ್ಲ. ದಕ್ಕಿದ ಅವಕಾಶದಲ್ಲಿ ಭಾರತಿ, ಅವಿನಾಶ್ , ರವಿಶಂಕರ್, ರವಿಚಂದ್ರನ್, ಸ್ನೇಹಾ, ಶಶಿಕುಮಾರ್, ಅರ್ಜುನ್ ಸರ್ಜಾ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಅರ್ಜುನ್ ಸರ್ಜಾ ಕರ್ಣನಾಗಿ ಗಮನ ಸೆಳೆಯುವ ನಟನೆ ನೀಡಿದ್ದಾರೆ. ಪಾತ್ರಕ್ಕೆ ತಕ್ಕಂತೆ ಮಾಡ್ಯುಲೇಶನ್ ಮಾಡುವಲ್ಲಿ ದರ್ಶನ್, ರವಿಶಂಕರ್ ಮತ್ತು ಅರ್ಜುನ್ ಸರ್ಜಾ ಗೆಲ್ಲುತ್ತಾರೆ. ಭೀಮಾರ್ಜುನರು ಧುರ್ಯೋಧನ ಪಾತ್ರದ ಮುಂದೆ ಪೇಲವವಾಗಿ ಬಿಡುವುದು ಚಿತ್ರದ ಬಹು ದೊಡ್ಡ ಮೈನಸ್. ಇದ್ದುದರಲ್ಲಿ ದ್ರೌಪದಿಯಾಗಿ ಸ್ನೇಹ ಸಿಕ್ಕಅವಕಾಶದಲ್ಲಿ ಮಿಂಚುವ ಪ್ರಯತ್ನ ಮಾಡಿದ್ದಾರೆ.


ಚಿತ್ರದ ಹೈಲೇಟ್ ಅಂಶಗಳಲ್ಲಿ ದುರ್ಯೋಧನ, ಅಭಿಮನ್ಯು , ಕರ್ಣ, ಶ್ರೀ ಕೃಷ್ಣ, ಶಕುನಿ ಪಾತ್ರಗಳ ನಿರ್ವಹಣೆ, ಸಂಭಾಷಣೆ ಮತ್ತು ನಿರೂಪಣೆ ಚೆನ್ನಾಗಿದೆ. ಪೌರಾಣಿಕ ಚಿತ್ರಗಳಲ್ಲಿ ಇದೇ ಪ್ರಥಮ ಭಾರಿಗೆ ನಟಿಸಿರುವ ನಿಖಿಲ್ ಕುಮಾರ್ ಪಾತ್ರ ನಿರ್ವಹಣೆಗೆ ಶ್ರಮ ವಹಿಸಿರುವುದು ಎದ್ದು ಕಾಣುತ್ತದೆ. ಯುದ್ದದ ಸನ್ನಿವೇಶ ಮತ್ತು ಡೈಲಾಗ್ ಹೇಳುವ ಸಂದರ್ಭದಲ್ಲಿ ನಿಖಿಲ್ ಮಿಂಚುತ್ತಾರೆ ಅಷ್ಟೆ ಅಲ್ಲಿ ಅವರ ರಾಜಕೀಯ ಜೀವನದ ಜೊತೆಗೆ ಕಥಾನಕ ಥಳುಕು ಹಾಕಿಕೊಳ್ಳುವುದು ಕಾಕತಾಳಿಯವೇ ಇರಬೇಕು. ಬಹುಶ  ರವಿಚಂದ್ರನ್ ಅವರಿಗೆ ಪೂರ್ಣ ಪ್ರಮಾಣದ ಪೌರಾಣಿಕ ಚಿತ್ರದ ನಟನೆ ಇದೇ ಮೊದಲು ಇರಬಹುದು. ಸಹಜವಾಗಿ ರವಿಚಂದ್ರನ್ ಚಿತ್ರಗಳಲ್ಲಿ ಕಾಣಬರುವ ಸರಸ-ಸಲ್ಲಾಪದ ಸಂಗತಿಗಳು ಇಲ್ಲಿ ಕಣ್ಮರೆಯಾಗಿವೆ, ಇದು ರವಿಚಂದ್ರನ್ ಪ್ರೇಮಿಗಳಿಗೆ ನಿರಾಸೆ ಉಂಟು ಮಾಡಬಹುದು.


ಕನ್ನಡದಲ್ಲಿ ಪೌರಾಣಿಕ ಚಿತ್ರಗಳನ್ನು ನಿರ್ಮಿಸುವ ಸಾಹಸವನ್ನು ಇತ್ತೀಚಿನ ದಶಕಗಳಲ್ಲಿ ಮಾಡಿದ್ದು ಕಡಿಮೆ. ಅದು ಬೇಡುವ ಬಿಗ್ ಬಜೆಟ್, ದೀರ್ಘ ಕಾಲದ ನಿರ್ಮಾಣ ಹೊರೆಯಾಗುವ ಅಂಶಗಳು. ಇಂತಹ ಸಂದಿಗ್ಧತೆಯ ನಡುವೆಯೂ ಮುನಿರತ್ನ ಕುರುಕ್ಷೇತ್ರ ನಿರ್ಮಿಸುವ ಸಾಹಸಕ್ಕೆ ಕೈ ಹಚ್ಚಿದ್ದು, ತಾವಂದುಕೊಂಡ ಮಟ್ಟಿಗೆ ತೆರೆಯ ಮೇಲೆ ತಂದಿದ್ದು ಮೆಚ್ಚ ಬೇಕಾದ ಅಂಶ. ಮಹಾಭಾರತದ ದುರ್ಯೋಧನ, ಕರ್ಣ,ಅಭಿಮನ್ಯು, ಶಕುನಿ ಪಾತ್ರಗಳನ್ನು ಜನಮನದಲ್ಲಿ ಈ ಚಿತ್ರ ರಿಜಿಸ್ಟರ್ ಮಾಡಿದೆ. ಈ ಪ್ರಯತ್ನಕ್ಕೆ ಮುನಿರತ್ನರ ಜೊತೆ ಕೈ ಜೋಡಿಸಿದ ತಂತ್ರಜ್ಞರು, ಸಾಹಿತಿಗಳು ಅಭಿನಂದನಾರ್ಹರು. ದೊಡ್ಡ ಬಜೆಟ್ ಚಿತ್ರ ಮಾಡಿ ಉಳಿಯುವುದು ಕಷ್ಟ. ಈ ಕಾರಣಕ್ಕಾಗಿಯಾದರು ಚಿತ್ರವನ್ನು ಟೀಕೆ ಟಿಪ್ಪಣಿಗಳ ಹೊರತಾಗಿಯೂ ಗೆಲ್ಲಿಸುವುದು ಮುಖ್ಯ.

ರಾಜ್ಯದಲ್ಲೀಗ ಮಳೆ , ನೆರೆ, ಪ್ರವಾಹ, ಭೂ ಕುಸಿತದಿಂದ ಬಹುತೇಕ ಜಿಲ್ಲೆಗಳಲ್ಲಿ ಜನ ನಲುಗಿದ್ದಾರೆ. ಹೀಗಿರುವಲ್ಲಿ ಬಿಡುಗಡೆಯಾದ ಬಹು ನಿರೀಕ್ಷೆಯ ಚಿತ್ರ ಕುರುಕ್ಷೇತ್ರಕ್ಕೆ ಸಧ್ಯಕ್ಕೆ ಗಳಿಕೆಯಲ್ಲಿ ಯಶ ಕಾಣದಿರಬಹುದು. ಆದರೆ ಬಿಡುಗಡೆಯಾದ ಸ್ಥಳಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ನೆರೆ ಪೀಡಿತ ಜಿಲ್ಲೆಗಳಲ್ಲಿಯೂ ಚಿತ್ರ ಬಿಡುಗಡೆಯಾಗಲಿ,  ಮುಂದಿನ ದಿನಗಳಲ್ಲಿ ಯಶಸ್ಸು ಕಾಣಲಿ. ಚಿತ್ರದಿಂದ ಪಡೆದ ಸಂಭಾವನೆಯನ್ನು ಅಭಿಮನ್ಯು ಪಾತ್ರಧಾರಿ ನಿಖಿಲ್ ನೆರೆ ಸಂತ್ರಸ್ತರಿಗೆ ದಾನ ಮಾಡುವ ಘೋಷಣೆ ಮಾಡಿದ್ದಾರೆ. ಚಿತ್ರದ ಕೆಲವು ಪ್ರದರ್ಶನದ ಗಳಿಕೆಯಲ್ಲಿ ಸ್ವಲ್ಪ ಭಾಗವನ್ನು ಕೊಡಗು ಸಂತ್ರಸ್ತರಿಗೆ ನೀಡುವುದಾಗಿ ಮುನಿರತ್ನ ಮೊದಲೇ ಘೋಷಿಸಿದ್ದರು. ಇದು ಅಬಿನಂದನಾರ್ಹ. ಬಹಳ ದಿನಗಳ ನಂತರ ಬೆಳ್ಳಿ ತೆರೆಗೆ ಬಂದ ಪೌರಾಣಿಕ ಕನ್ನಡ ಚಿತ್ರವನ್ನು ಜನ ಸಾಮಾನ್ಯರು ನೋಡಿ ಪ್ರೋತ್ಸಾಹಿಸ ಬೇಕಾಗಿದೆ. ಸಾಮಾನ್ಯ ಥಿಯೇಟರ್ ಗಳಲ್ಲಿ ಚಿತ್ರದ ಪ್ರದರ್ಶನ ಟಿಕೆಟ್ ಬೆಲೆ ನಿಗದಿತ ದರಕ್ಕಿಂತ ದುಪ್ಪಟ್ಟಾಗಿದೆ.  ಬೆಂಗಳೂರಿನ ದೊಡ್ಡ ದೊಡ್ಡ ಮಾಲ್ ಗಳಲ್ಲಿ ಈ ಚಿತ್ರದ ಪ್ರದರ್ಶನಕ್ಕೆ ಟಿಕೆಟ್ ಒಂದಕ್ಕೆ ತಲಾ 900 ವಸೂಲು ಮಾಡಲಾಗುತ್ತಿದೆ, ಇದು ಹಗಲು ದರೋಡೆಯಲ್ಲದೇ ಮತ್ತೇನು? ನಿಯಂತ್ರಣ ಮಾಡ ಬೇಕಾದ ವಾರ್ತಾ ಇಲಾಖೆ ಏನು ಮಾಡುತ್ತಿದೆ?  

Thursday, July 25, 2019

‘ಪತ್ರಕರ್ತ’ ಆತ್ಮ ವಿಮರ್ಶೆಗೆ ಸಕಾಲ!


‘ಪತ್ರಕರ್ತ’ ಎಂದರೆ ಯಾರು? ವರ್ತಮಾನದ ಸೂಕ್ಷ್ಮಗ್ರಾಹಿ?, ಸಂವೇದನಾಶೀಲ, ವಿಚಾರವಂತ?, ಉತ್ತಮ ಅಭಿವ್ಯಕ್ತಿಕಾರ?, ಪಕ್ಷಾತೀತ ಧೋರಣೆಯವನು?, ಸಾಮಾಜಿಕ ಕಳಕಳಿಯುಳ್ಳವನು?, ಜಾತೀಯ ಧೋರಣೆ ಇಲ್ಲದವನು?, ಅಸಹಾಯಕರ ಖಡಕ್ ಪ್ರತಿನಿಧಿ?, ಸಮಾಜದ ಮಾದರಿ ವ್ಯಕ್ತಿ? ಊಹುಂ ಸುತಾರಾಂ ಇದ್ಯಾವುದು ಅಲ್ಲವೇ ಅಲ್ಲ ಎಂಬ ಧುರಿತ ಕಾಲಘಟ್ಟದಲ್ಲಿದ್ದೇವೆ.

ಒಟ್ಟು ವ್ಯವಸ್ಥೆಯಲ್ಲಿ ಪತ್ರಕರ್ತ ಅಭಿವ್ಯಕ್ತಿಗೆ ಸ್ವಯಂ ಕಡಿವಾಣ ಹಾಕಿಕೊಳ್ಳದೇ ಕೊಂಚ ಎಡವಿದರೂ ‘ಸಿಟಿಜನ್ ಜರ್ನಲಿಸಂ’ನ ಈ ಹೊತ್ತಿನಲ್ಲಿ ಪ್ರಶ್ನಾತೀತರಾಗಿ ಉಳಿಯುವುದು ಸಾಧ್ಯವೇ ಇಲ್ಲ. ಪ್ರತಿ ಸುದ್ದಿಯ ಆಚೀಚೆಗಳನ್ನು ಭೂತಗನ್ನಡಿ ಹಿಡಿದು ಹರಾಜು ಹಾಕಲು ಸಾಮಾಜಿಕ ಜಾಲತಾಣದ ಸೇನಾನಿಗಳು ಸಜ್ಜಾಗಿರುತ್ತಾರೆ. ಹಾಗಾಗಿ ಪತ್ರಕರ್ತನ ಪ್ರತೀ ಹೆಜ್ಜೆಯಲ್ಲೂ ಮುಳ್ಳಿನ ಹಾದಿಯದ್ದೇ ಸವಾಲು!.


ಆಧುನೀಕತೆಗೆ ಮುಂಚೆ ಸಾರ್ವತ್ರಿಕ ಸಂವಹನಕ್ಕಿದ್ದ ಮುಕ್ತ ಆಯ್ಕೆ ಮುದ್ರಣ ಮಾಧ್ಯಮ ಒಂದೇ. ಅವತ್ತಿಗೆ ಸಾಮಾಜಿಕ ಸಂಘಟನೆಗೆ, ಜಾಗೃತಿಗೆ ಸ್ವಾತಂತ್ರ್ಯದ ಕಿಚ್ಚಿಗೆ ಗಾಂಧಿ, ಅಂಬೇಡ್ಕರ್, ಬಾಲ ಗಂಗಾಧರ ತಿಲಕ್  ಆಯ್ಕೆ ಮಾಡಿಕೊಂಡಿದ್ದು ಮಾಧ್ಯಮಗಳನ್ನೆ. ಅತ್ಯಂತ ಯಶಸ್ವಿಯಾಗಿ ಪತ್ರಕರ್ತರಾಗಿದ್ದ ಅವರು ಸಾರ್ವಜನಿಕ ವ್ಯವಸ್ಥೆಯಲ್ಲಿ ದೊಡ್ಡ ಆಂಧೋಲನಗಳನ್ನೆ ಮಾಡಿದರು. ಜನರಿಗೆ ಹೇಳ ಬೇಕಾದ್ದನ್ನು ಪರಿಣಾಮಕಾರಿಯಾಗಿ ಹೇಳಿದರು, ಜನರನ್ನು ಚಿಂತಿಸುವಂತೆ ಮಾಡಿದರು. ಪತ್ರಕರ್ತರೆಂದರೆ ‘ಬುದ್ದಿಜೀವಿ’ ಗಳು, ದಮನಿತರ ಧ್ವನಿ ಎಂಬ ಭರವಸೆ ತುಂಬಿದರು. ಈ ಹೊತ್ತಿಗೂ ಭಾರತ ದೇಶ ಕಂಡ ಗ್ರೇಟ್ ಜರ್ನಲಿಸ್ಟ್ಸ್ ಎಂದರೆ ಅದು ಮಹಾತ್ಮ ಗಾಂಧಿ ಮತ್ತು ಡಾ ಬಿ ಆರ್ ಅಂಬೇಡ್ಕರ್ ಮಾತ್ರ.

ಈಗ ಕಾಲ ಬದಲಾಗಿದೆ, ಆಧುನಿಕತೆ ಬಂದಿದೆ. ಮುದ್ರಣ ಮಾಧ್ಯಮವನ್ನು ಮೀರಿಸುವಂತೆ ಟಿವಿ ವಾಹಿನಿಗಳಿವೆ, ಅಂತರ್ಜಾಲ ತಾಣಗಳಿವೆ, ಎಲ್ಲವನ್ನು ಮೀರಿಸುವಂತೆ ನವ ಮಾಧ್ಯಮ ‘ಡಿಜಿಟಲ್ ಮೀಡಿಯಾ’ ಇದೆ. ಮುದ್ರಣ, ದೃಶ್ಯ, ಧ್ವನಿ ಮಾಧ್ಯಮಗಳ ಉಳಿವಿಗೂ ಡಿಜಿಟಲ್ ಮೀಡಿಯಾ ಮೊರೆ ಹೋಗಲಾಗುತ್ತಿದೆ. ಸಧ್ಯದ ಟ್ರೆಂಡ್ ಅದೇ ಆಗಿದೆ ಡಿಜಿಟಲ್ ಮೀಡಿಯಾ.


ವರ್ತಮಾನದ ವೈರುಧ್ಯ ಸಂದರ್ಭದಲ್ಲಿ ಮಾಧ್ಯಮಗಳೆಲ್ಲ ಬಂಡವಾಳಶಾಹಿಗಳ ಪಾಲಾಗಿರುವುದರಿಂದ ಬಯಾಸ್ಡ್ ಆಗಿಯೇ ಇವೆ. ಇಂತಹ ವ್ಯವಸ್ಥೆಯಲ್ಲಿ ಕೆಲಸ ಮಾಡುವ ಪತ್ರಕರ್ತರು ಕೂಡ ಶುದ್ಧತೆಯನ್ನು ಕಾಣುವುದು ಸಾಧ್ಯವಿಲ್ಲ. ಆದರೂ ಲಭ್ಯವಾಗುವ ಅಷ್ಟಿಷ್ಟು ಸ್ಪೇಸ್ ನಲ್ಲಿಯೇ ನೈತಿಕತೆಯನ್ನು ಉಳಿಸಿಕೊಂಡಿರುವುದನ್ನು ತಳ್ಳಿಹಾಕುವಂತಿಲ್ಲ. ಪರ್ಯಾಯ ಸಾಧ್ಯಗಳನ್ನು ಕಂಡು ಕೊಳ್ಳಬೇಕಾದ ಪತ್ರಕರ್ತ ಪಾಚಿಗಟ್ಟಿದ ಹಳೆ ವ್ಯವಸ್ಥೆಯಲ್ಲಿ ಉಳಿದು ಬದುಕಿಗಾಗಿ ಬಂಡವಾಳಶಾಹಿಗಳ, ರಾಜಕಾರಣಿಗಳ ಗುಲಾಮನಾಗಿ ಉಳಿಯುತ್ತಿರುವುದು ವಿಷಾಧನೀಯ ಸಂಗತಿ.

ಮಾಧ್ಯಮ ಲೋಕಕ್ಕೆ ವಿಚಾರವಂತರು, ಸಾಮಾಜಿಕ ಕಳಕಳಿಯುಳ್ಳವರು ಬರುತ್ತಾರೆ ಎಂಬ ನಿರೀಕ್ಷೆಗಳೆಲ್ಲ ಈಗ ಹುಸಿಯಾಗಿದೆ. ತಲೆ ಹಿಡುಕರು, ದಗಾಕೋರು, ವಂಚಕರು, ಅತ್ಯಾಚಾರಿಗಳು, ಜಾತಿವಾದಿಗಳು, ಬಡ್ಡಿ ಕ್ರಿಮಿಗಳು, ರಾಜಕೀಯ ಪುಡಾರಿಗಳು ಹೀಗೆ ಅನೇಕರು ಮೀಡಿಯಾದ ಮಾಲೀಕರುಗಳಾಗಿ, ಪತ್ರಕರ್ತರೆಂಬ ಹಣೆಪಟ್ಟಿಯಲ್ಲಿ ಪ್ರತಿಷ್ಠಾಪನೆಯಾಗಿದ್ದಾರೆ. ಹೀಗಾಗಿ ಮೀಡಿಯಾ ಎಂದರೆ ‘ಭಯೋತ್ಪಾದನಾ ಕೇಂದ್ರ’, ಪತ್ರಕರ್ತರೆಂದರೆ ಭಯೋತ್ಪಾದಕರು ಎಂಬುದು ಜನಜನಿತವಾಗಿದೆ. ಇಂತಹ ಸಂದರ್ಭದಲ್ಲಿ ಮೀಡಿಯಾ ಹೌಸ್ ಗಳಲ್ಲಿ ಸ್ವಯಂ ನಿಯಂತ್ರಣ ನಿರೀಕ್ಷಿಸುವುದು ಸಾಧ್ಯವೇ? ‘ಪತ್ರಕರ್ತ’ ವೃತ್ತಿಯ ಅಧ:ಪತನ ಆಗಿದೆ. ಕೊಳ್ಳುವ ಸರಕಾಗಿ ಪತ್ರಕರ್ತ ಮತ್ತು ಆತನ ಸುದ್ದಿಗಳು ಬದಲಾಗಿವೆ. ಅಂದರೆ ಪತ್ರಕರ್ತ ಆಗಿ ಸೇರುವವನಿಗೆ ಶಿಕ್ಷಣದ ಅರ್ಹತೆಗಿಂತ ಸಾರ್ವತ್ರಿಕ ಮಾಧ್ಯಮ ನೀತಿ ಸಂಹಿತೆಯ ಮಾರ್ಗಸೂಚಿ ಬೇಕಿದೆ. ಅದನ್ನು ರೂಪಿಸುವವರಾರು? ರಾಜ್ಯಾಂಗ?, ಕಾರ್ಯಾಂಗ?, ನ್ಯಾಯಾಂಗ? . ದೇಶದ ಮುಖ್ಯ ನ್ಯಾಯಾಧೀಶರನ್ನು ಆಯ್ಕೆ ಮಾಡುವಲ್ಲಿ ಅನುಸರಿಸುವ ಕ್ರಮಗಳನ್ನೇ ಮಾಧ್ಯಮಗಳಿಗೆ, ಪತ್ರಕರ್ತರಿಗೆ ರೂಪಿಸ ಬೇಕಾದ ಅಗತ್ಯತೆ ಇದೆ. ಮಾಧ್ಯಮದ ಕೊಳೆ, ಕೂಳೆಗಳನ್ನು ಒರೆಸಿ ಹಾಕಬೇಕಾದ ತುರ್ತು ಇದೆ. ಪತ್ರಕರ್ತ ವೃತ್ತಿಯ ಪಾವಿತ್ರ್ಯತೆಯನ್ನು ಕಾಯ್ದುಕೊಳ್ಳ ಬೇಕಾಗಿದೆ. ಅಂತಹ ಸುದಿನವನ್ನು ಎದುರು ನೋಡುತ್ತಾ, ಎಲ್ಲಾ ಪತ್ರಕರ್ತರು ಆತ್ಮ ವಿಮರ್ಶೆ ಮಾಡಿಕೊಂಡು ಹೊಸ ಸಾಧ್ಯತೆಗಳಿಗೆ ತೆರೆದುಕೊಳ್ಳಿ, ಮನುಷ್ಯರಾಗಿ ಎಂದು ಆಶಿಸುತ್ತೇನೆ. ಎಲ್ಲರಿಗೂ ಪತ್ರಿಕಾ ದಿನಾಚರಣೆಯ ಶುಭಾಶಯಗಳು.

Saturday, May 25, 2019

ನಮ್ಮ ಶಂಕರ ನ ನೆನಪೇ ಸ್ಮಾರಕ!



ಶಂಕರ್‌ನಾಗ್ ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಿರ್ದೇಶಕರಲ್ಲಿ ಒಬ್ಬರು. ಚಿತ್ರ ನಟರಾಗಿ, ನಿರ್ದೇಶಕರಾಗಿ, ರಂಗಕರ್ಮಿಯಾಗಿ ಹಾಗೂ ತಂತ್ರಜ್ಞರಾಗಿ ಭಾರತೀಯ ಚಿತ್ರರಂಗ ಮತ್ತು ಕನ್ನಡ ಚಿತ್ರರಂಗದ ಲ್ಲಿ ಹೆಸರು ಮಾಡಿದವರು.

ಶಂಕರ್ ನಾಗ್ ನಿರ್ದೇಶನದ ಮಾಲ್ಗುಡಿ ಡೇಸ್ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿತ್ತು. ಈ ಹೊತ್ತಿಗೂ ಮಾಲ್ಗುಡಿ ಡೇಸ್ ಟಿವಿ ಸರಣಿಯ ನಿರೂಪಣಾ ಶೈಲಿ , ಕಥಾ ಹಂದರವನ್ನು ತೆರೆಗೆ ತಂದ ರೀತಿ ಹೊಸತಾಗಿಯೇ ಉಳಿಯುತ್ತದೆ.

ಭಾರತೀಯ ಚಿತ್ರರಂಗದಲ್ಲಿ ಅಪರೂಪ ಎನಿಸಿದ Under Water Shooting ಗಾಗಿ ಲಂಡನ್ ನಿಂದ ದುಬಾರಿ ವೆಚ್ಚದ ಕೆಮರಾಗಳನ್ನು ತರಿಸಿ ಒಂದು ಮುತ್ತಿನ ‌ಕಥೆ ಸಿನೆಮಾದ ಚಿತ್ರೀಕರಣದಲ್ಲಿ ಬಳಸಿದ್ದರು. 80ರ ದಶಕದಲ್ಲಿ ಜಾನಪದ ಕಥಾ ಹಂದರದ ರಂಗ ನಾಟಕಗಳನ್ನು ದಿಗ್ದರ್ಶಿಸಿ, ನಟಿಸಿ 7ರಾಷ್ಟ್ರಗಳಲ್ಲಿ ಯಶಸ್ವಿ ಪ್ರದರ್ಶನ ನೀಡಿದ್ದ ಶಂಕರ್ ನಾಗ್ , ಅವರದ್ದೇ ಅಭಿನಯದ  ಪರಮೇಶಿ ಪ್ರೇಮ‌ ಪ್ರಸಂಗ, *ನೋಡಿ ಸ್ವಾಮಿ ನಾವಿರೋದೆ ಹೀಗೆ ಎಂಬ ಜನಪ್ರಿಯ ನಾಟಕಗಳನ್ನು ಸಿನೆಮಾ ಮಾಡಿ ಗೆದ್ದಿದ್ದು ಇತಿಹಾಸ. ಕನ್ನಡ ಚಿತ್ರರಂಗದಲ್ಲಿ ಇಂತಹ ಪ್ರಯೋಗ ಮಾಡಿ  ಯಶಸ್ಸು ಕಂಡ ಮೊದಲ ನಟ ಶಂಕರ್‌ನಾಗ್.  ಮತ್ತೊಂದು ಜನಪ್ರಿಯ ನಾಟಕ ಜೋಕುಮಾರಸ್ವಾಮಿ   ಸಿನೆಮಾ ಮಾಡಲು ನಿರ್ದರಿಸಲಾಗಿತ್ತು, ಈ ಸಿನೆಮಾದ ಮುಹೂರ್ತದಲ್ಲಿ ಪಾಲ್ಗೊಳ್ಳಲು ಮದ್ಯರಾತ್ರಿ ಪ್ರಯಾಣಿಸಿದ್ದ ಶಂಕರ್ ನಾಗ್ ಕಾರು ಅಪಘಾತದಲ್ಲಿ ಅಕಾಲ ಮೃತ್ಯುವಿಗೆ ತುತ್ತಾದರು.


ರಾಜ್ಯದ ಮೊದಲ ಧ್ವನಿಗ್ರಹಣ ಕೇಂದ್ರ ಸಂಕೇತ್ ಆರಂಭಿಸಿದ ಶಂಕರ್‌ ನಾಗ್, ಬೆಂಗಳೂರಿಗೆ ಹೊಸತಾದ ಕಂಟ್ರಿಕ್ಲಬ್ ಪರಿಚಯಿಸಿದರು. ತಮ್ಮ ಜೀವಮಾನದ ದುಡಿಮೆಯನ್ನೆಲ್ಲ ಅಲ್ಲಿ ವ್ಯಯಿಸಿದ್ದ ಶಂಕರ್‌ ನಾಗ್ ಆರ್ಥಿಕ ಕಾರಣಗಳಿಗಾಗಿ ವೃತ್ತಿ ಜೀವನದಲ್ಲಿ ರಾಜಿಯಾಗಲಿಲ್ಲ.

ನಟಿಸಿದ ಮೊದಲ ಸಿನೆಮಾಗೆ ರಾಷ್ಟ್ರಪತಿಗಳ ಗೋಲ್ಡನ್ ಪೀಕಾಕ್ ಅವಾರ್ಡ್ ಪಡೆದ ಶಂಕರ್ ನಾಗ್ , ಯಾವತ್ತಿಗೂ ಹೀರೋ ಇಮೇಜ್ ಬೆಂಬಲಿಸುವ ಕಥಾನಕಗಳನ್ನು‌ ಹೊಂದಿದ ಸಿನೆಮಾಗಳಲ್ಲಿ ನಟಿಸಿದ್ದು ಕಡಿಮೆ. ರಾಜ್, ವಿಷ್ಣು, ಅಂಬರೀಶ್, ರವಿಚಂದ್ರನ್ ರ ಜೊತೆ ನಟಿಸಿದ್ದ ಶಂಕರ್ ನಾಗ್ ಆ ಹೊತ್ತಿನಲ್ಲೂ ಪೂರಕ ಪಾತ್ರಗಳಲ್ಲಿ ನಟಿಸಿದ್ದರೆ ಹೊರತು ಹೀರೋಯಿಸಂ ಪಾತ್ರಗಳ ಹಿಂದೆ ಬಿದ್ದಿರಲಿಲ್ಲ.

ಶಂಕರ್‌ ನಾಗ್ ನಟಿಸಿದ ಸಿನೆಮಾಗಳನ್ನು ‌ಗಮನಿಸಿದರೆ‌ ಅಲ್ಲಿ ಹೀರೋಯಿಸಂ ಗಿಂತ ಶ್ರಮ ಜೀವಿ, ಶೋಷಿತ‌ ವರ್ಗದ   ಪ್ರತಿನಿಧಿ, ಸಮಾಜಕ್ಕೆ‌ ಮಾದರಿಯಾದ ವ್ಯಕ್ತಿತ್ವ ನೀಡುವ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ ಎಂಬುದು‌ ಗಮನಾರ್ಹ. ತನ್ನ ವಾರಗೆಯ ನಟರು ಆ ಹೊತ್ತಿನಲ್ಲಿ ಹುಲಿ, ಸಿಂಹಗಳ ಖದರ್ ಇರುವ ಪಾತ್ರ ಪೋಷಣೆ ಪಡೆಯುತ್ತಿದ್ದ ಕಾಲ ಅದು. ಆದರೆ ಶಂಕರ್‌ ನಾಗ್ ಮಾನವೀಯತೆ, ಸಂಘರ್ಷ, ವರ್ತಮಾನದ ಸಂಕಟಗಳ ಪ್ರತಿನಿಧಿಸುವ ಪಾತ್ರ ಮತ್ತು ಚಿತ್ರಗಳನ್ನು ನಿರ್ದೇಶಿಸಿದ್ದಾರೆ.

ತಾವು ಬೆಳೆಯುವ ಜೊತೆಗೆ ಸಿನೆಮಾಗೆ ಆಕರ್ಷಿತರಾಗಿ ಬರುವ ನಟರು, ತಂತ್ರಜ್ಞರನ್ನು ಪ್ರೋತ್ಸಾಹಿಸಿ ಒಂದಿಲ್ಲೊಂದು ಕಾಯಕದಲ್ಲಿ ಬ್ಯುಸಿಯಾಗುವಂತೆ ಮಾಡಿ‌ ಬದುಕುವ ದಾರಿ ತೋರಿಸಿದ್ದ ಶಂಕರ್ ನಾಗ್ ಈ ಹೊತ್ತಿಗೂ ಜನ‌ಮಾನಸದಲ್ಲಿ ಅನುಕರಣೀಯ ಹಾಗೂ ಮಾದರಿ ನಟರಾಗಿ ವಿರಾಜಮಾನವಾಗಿದ್ದಾರೆ.


ಶಂಕರ್ ನಾಗ್ ತಮ್ಮ ಭಾಗದವರೇ ಆದ ಜನಪ್ರಿಯ ರಾಜಕಾರಣಿ ಹಾಗೂ ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ರಾಮಕೃಷ್ಣ ಹೆಗಡೆ ಅವರ ಮೇಲಿನ ಅಭಿಮಾನದಿಂದ ಚುನಾವಣಾ ಪ್ರಚಾರದಲ್ಲಿ ತೊಡಗುತ್ತಿದ್ದರು ಆದರೆ ರಾಜಕೀಯದಲ್ಲಿ ಯಾವತ್ತಿಗೂ ಸ್ವತ: ಪಾಲ್ಗೊಳ್ಳಲಿಲ್ಲ.‌ ರಾಮಕೃಷ್ಟ ಹೆಗಡೆ ಸಿಎಂ ಆದ ಸಂದರ್ಭ, ಲಂಡನ್ ನಲ್ಲಿ ತಾವು ಕಂಡಿದ್ದ ಮೆಟ್ರೋ ರೈಲು ಯೋಜನೆಯನ್ನು ಬೆಂಗಳೂರಿನಲ್ಲಿ ಯೂ ಅನುಷ್ಟಾನಕ್ಕೆ ತರಬೇಕು ಎಂಬ ಕನಸು ಇಟ್ಟುಕೊಂಡಿದ್ದ ಶಂಕರ್‌ನಾಗ್ ಯೋಜನೆಯ ಮಾಹಿತಿಯನ್ನು ಸರ್ಕಾರದ ಮುಂದೆ ಇರಿಸಿದ್ದರು.

 ಬೆಂಗಳೂರಿನಲ್ಲಿ ಮೆಟ್ರೋ ಶುರುವಾದ ಸಂದರ್ಭ ಯೋಜನೆಗೆ ಶಂಕರ್ ನಾಗ್ ಹೆಸರು ಇಡುವಂತೆ ಸಾರ್ವತ್ರಿಕವಾಗಿ ಅಭಿಪ್ರಾಯಗಳಿದ್ದವು, ಅರುಂಧತಿ ನಾಗ್ ಕೂಡಾ ಈ ಕುರಿತು ಮಾತನಾಡಿದ್ದರು.‌ ಆದರೆ ಆಡಳಿತ ಚುಕ್ಕಾಣಿ ಹಿಡಿದವರ ಪೂರ್ವಗ್ರಹ ಪೀಡಿತ ನಿಲುವಿನಿಂದ ಮೆಟ್ರೋ ಯೋಜನೆಗೆ ಶಂಕರ್ ನಾಗ್ ಹೆಸರಿಡುವುದು ಇರಲಿ, ಒಂದು ಮೆಟ್ರೋ ಸ್ಟೇಷನ್ ಗೂ ಅವರ ಹೆಸರಿಡಲಿಲ್ಲ!


ನಂದಿಬೆಟ್ಟದ ರೋಪ್ ವೇ ಯೋಜನೆ, ಬಡವರಿಗೆ ವಿದೇಶಿ ತಂತ್ರಜ್ಞಾನ ಮನೆ ನಿರ್ಮಾಣ ಹೀಗೆ ಹಲವು ಯೋಜನೆಗಳ ಕನಸು ಕಂಡಿದ್ದ ಶಂಕರ್ ನಾಗ್ 35ನೇ ವಯಸ್ಸಿಗೆ ಕಾಲನ ಕರೆಗೆ ಓಗೊಟ್ಟರು. ಇವತ್ತು ಶಂಕರ್ ನಾಗ್ ನೆನಪಿಗೆ ಸ್ಮಾರಕಗಳಿಲ್ಲ, ಆದರೆ ಅವರ ಕೆಲಸ‌ ಮತ್ತು ನೆನಪುಗಳೆ ಸ್ಮಾರಕ ಗಳಾಗಿವೆ!

ಶಂಕರ್ ನಾಗ್ ನಿಧನರಾಗುವ ಹೊತ್ತಿಗೆ ಅಗಾಧವಾದುದನ್ನು ಸಾಧಿಸಿದ್ದರು, ಈ ಸಾಧನೆಗಳು ಮತ್ತು ಅವರ ವರ್ಕಾಲಿಕ್ ಗುಣವೇ ಶಂಕರ್ ನಾಗ್ ರನ್ನು‌ ಸ್ಮರಣೀಯವಾಗಿಸಿದೆ.‌ ಶಂಕರ್ ನಾಗ್ ರಿಗೆ‌ ಫ್ಯಾನ್‌ ಕ್ಲಬ್ ಇಲ್ಲ ಆದರೆ ಕೋಟ್ಯಾಂತರ ಯುವ ಸಮೂಹದ ಹೃದಯದಲ್ಲಿ ಸ್ಥಾನ ಪಡೆದಿದ್ದಾರೆ.


ಈ ಸಂದರ್ಭ ರಂಗ ಶಂಕರ ದಲ್ಲಿ ಅರುಂಧತಿ ನಾಗ್ ನೇತೃತ್ವದಲ್ಲಿ ಶಂಕರ್ ನೆನಪಿನಲ್ಲಿ ನಾಟಕ ಸಪ್ತಾಹ ನಡೆಯುತ್ತಿದೆ ಹಾಗೆಯೇ ಬೆಂಗಳೂರಿನ‌ ರವೀಂದ್ರ ಕಲಾಕ್ಷೇತ್ರದಲ್ಲಿಯೂ ಶಂಕರ್ ನಾಗ್ ನಾಟಕ ಸಪ್ತಾಹ ನಡೆಯುತ್ತಿದೆ, ರಂಗ ಪಯಣ ಮತ್ತು ಸಾತ್ವಿಕ ರಂಗತಂಡದವರು ಸಪ್ತಾಹ ಆಯೋಜಿಸಿದ್ದಾರೆ. ಇದೇ ತಂಡದವರು ಉತ್ತರ ಕರ್ನಾಟಕದ ಪ್ರತಿಭಾವಂತ ಯುವ ಶಿಕ್ಷಕ, ಕವಿ-ಚಿಂತಕ ವೀರಣ್ಣ ಮಡಿವಾಳರಿಗೆ ಶಂಕರನಾಗ್ ಪ್ರಶಸ್ತಿ ನೀಡಿ ಗೌರವಿಸಿದೆ. ಇಂದು ಸಂತಸದ ಸಂಗತಿ. ಶಂಕರ್ ನಾಗ್ ಹೆಸರೇ ಸ್ಪೂರ್ತಿದಾಯಕ ಸದಾಕಲಾಕ್ಕೂ ಅವರ ಮಾತು ಹಾಗೂ ಕೃತಿಗಳೂ‌ ಕೂಡಾ.

Picture Courtesy:Veeranna Madiwalar

#Shankarnag  #NoMonumentToShankarnagButHeRemainsStillInTheHeartsOfFans! #ArkalgudJayakumar

ಪ್ರೊ ಕೆ ಎಸ್ ಭಗವಾನ್ ರನ್ನು ನಿಂದಿಸುವ ಮುನ್ನಾ........

Image result for prof k s bhagawanಚಿಂತಕ-ಪ್ರಾಧ್ಯಾಪಕರಾದ  ಪ್ರೊ ಕೆ ಎಸ್ ಭಗವಾನ್ ಅನಾರೋಗ್ಯ ನಿಮಿತ್ತ ಆಸ್ಪತ್ರೆಗೆ ದಾಖಲಾಗಿದ್ದಾರೆ. ವಾಸ್ತವ ಸಂಗತಿಗಳನ್ನು ನೇರ ದಾಟಿಯಲ್ಲಿ ಹೇಳುತ್ತಾ ಸತ್ಯವನ್ನು ಒಪ್ಪದವರ ಕೆಂಗಣ್ಣಿಗೆ ಗುರಿಯಾದವರು ಕೆ ಎಸ್ ಭಗವಾನ್. ಅವರು ಬೇಗನೆ ಗುಣಮುಖರಾಗಲಿ.

ಮೈಸೂರು ಮಹರಾಜ ಕಾಲೇಜಿನಲ್ಲಿ ಇಂಗ್ಲೀಷ್ ಪ್ರಾಧ್ಯಾಪಕರಾಗಿದ್ದ ಕೆ ಎಸ್ ಭಗವಾನ್ ವೈಚಾರಿಕ ಸಂಗತಿಗಳನ್ನು ಬರೆಯುತ್ತಾ ಬಲಪಂಥೀಯರು ಹಾಗೂ ಹೇಳುವ ಧಾಟಿಯಿಂದ ಎಡಪಂಥೀಯರ ಅಸಹನೆಗೆ ತುತ್ತಾದವರು. ಅವರು ಬರೆದ ಶಂಕರಾಚಾರ್ಯರ ಕುರಿತಾದ ಪುಸ್ತಕ ಮತ್ತು ಅವರ ವೈಚಾರಿಕ ಬರವಣಿಗೆ, ಚಿಂತನೆಗಳ ಕಾರಣಕ್ಕೆ ಬಾಂಬೆ ಹೈಕೋರ್ಟ್ ನಿಂದ ಅರೆಸ್ಟ್ ವಾರಂಟ್ ಪಡೆದಿದ್ದರು. ಹೀಗೆ ಭಗವಾನ್ ಕುರಿತು ಕುತೂಹಲ ಇದ್ದ ಕಾಲಘಟ್ಟದಲ್ಲಿಯೇ ನಾನು ಅವರ ವಿದ್ಯಾರ್ಥಿಯಾದೆ.

ಕೆ ಎಸ್ ಭಗವಾನ್ ಕಾಲೇಜಿನಲ್ಲಿ ಇಂಗ್ಲೀಷ್ ಪಾಠ ಮಾಡುವ ಜೊತೆಗೆ ಮೈಸೂರು ನಗರದ ಯುನಿವರ್ಸಿಟಿ ಹಾಸ್ಟೆಲ್ ಗಳಲ್ಲಿದ್ದ ಗ್ರಾಮೀಣ ಭಾಗದ ಪದವಿ ವಿದ್ಯಾರ್ಥಿಗಳಿಗೆ ಉಚಿತ ಇಂಗ್ಲೀಷ್ ಪಾಠಗಳನ್ನು ಸರಳವಾಗಿ ಹೇಳಿಕೊಡುತ್ತಿದ್ದರು. ಕಲಾ ವಿದ್ಯಾರ್ಥಿಗಳಿಗೆ ಕಬ್ಬಿಣದ ಕಡಲೆಯಾಗಿದ್ದ ಇಂಗ್ಲೀಷ್ ಕೆ ಎಸ್ ಭಗವಾನ್ ಪ್ರಯತ್ನದಿಂದ ಸುಲಭವಾಗುತ್ತಿತ್ತು. ಇದೇ ವೇಳೆ ವಿದ್ಯಾರ್ಥಿಗಳಲ್ಲಿ ವೈಚಾರಿಕ ಪ್ರಜ್ಞೆ, ಸಾಮಾಜಿಕ ವ್ಯವಸ್ಥೆಯ ಬಗ್ಗೆ ಅರಿವು ಮೂಡಿಸುತ್ತಿದ್ದರು. ಈ ಅಂಶಗಳು ನಾನು ಭಗವಾನ್ ರ ಶಿಷ್ಯ ಎಂದು ಹೆಮ್ಮೆಯಿಂದ ಹೇಳಿಕೊಳ್ಳಲು ಅವಕಾಶ ಮಾಡಿದೆ.

ಇತ್ತೀಚೆಗೆ ಅವರು ಬರೆದ ರಾಮ‌ಮಂದಿರ ಏಕೆ ಬೇಡ? ಪುಸ್ತಕ ವಿವಾದಕ್ಕೀಡಾದಾಗ ತರಿಸಿ ಓದಿದೆ. ಇಡೀ ಪುಸ್ತಕದಲ್ಲಿ ಆಕ್ಷೇಪಾರ್ಹವಾದ ಸಂಗತಿಗಳು ಕಾಣಲಿಲ್ಲ. ಅವರ ಉಲ್ಲೇಖಗಳು ಸಕಾರಣ ಒದಗಿಸಿದ್ದವು. ಆದರೆ  ಪುರೋಹಿಶಾಹಿ ಸ್ಥಾಪಿತ ಹಿತಾಸಕ್ತಿಗಳು ಮಾಧ್ಯಮಗಳಲ್ಲಿ ವಕ್ಕರಿಸಿದ್ದು ದುರುದ್ದೇಶದಿಂದ ಭಗವಾನ್ ರನ್ನು‌ ಹಣಿಯುವ ಪ್ರಯತ್ನ ಮಾಡಿವೆ. ಕೋಮು ವಿಭಜಕ ಶಕ್ತಿಗಳನ್ನು, ಚಿಂತನೆಗಳೇ ಸತ್ತುಹೋದವರನ್ನ, ಜ್ಯೋತಿಷ್ಯ ಹೇಳುವವರನ್ನು ಚಾನಲ್ ಡಿಸ್ಕಷನ್ ಗೆ ಕೂರಿಸಿಕೊಂಡು ಭಗವಾನ್ ರನ್ನು ನಿಂದಿಸುವ ಅನೈತಿಕ ಕೆಲಸ ಮಾಡುತ್ತಿವೆ. ಈ ‌ಮೂಲಕ  ವ್ಯವಸ್ಥೆಯನ್ನು ಪ್ರಚೋದಿಸುತ್ತಾ ಚಿಂತಕರನ್ನು, ವಾಸ್ತವವಾದಿಗಳನ್ನು ಟಾರ್ಗೆಟ್ ಮಾಡುತ್ತಿವೆ. ಇದರ ಮುಂದುವರಿದ ಭಾಗವಾಗಿ ಸಾಮಾಜಿಕ ಜಾಲತಾಣದಲ್ಲಿ ಭಗವಾನ್ ವಿರುದ್ಧ ಆತಂಕಕಾರಿ ಅಭಿಪ್ರಾಯ, ಬೆದರಿಕೆಗಳನ್ನು ಹಾಕಲಾಗುತ್ತಿದೆ. ಭಗವಾನ್ ರಿಗೆ ಪೊಲೀಸ್ ಭದ್ರತೆ ಯಲ್ಲಿ ಮಾತನಾಡ ಬೇಕಾದ ದುಸ್ತಿತಿ ಉಂಟಾಗಿದೆ.

ಭಗವಾನ್ ಹೇಳುವ ಸಂಗತಿಗಳು ಧಾರ್ಮಿಕ ಭಾವನೆಗೆ ಧಕ್ಕೆ ಎನ್ನಲಾಗುತ್ತದೆ. ಹಿಂದೂ‌ಧರ್ಮದ ದೇವತೆಗಳ ಬಗ್ಗೆ ಮಾತನಾಡುತ್ತಾರೆ ಅನ್ಯಧರ್ಮೀಯರ ಬಗ್ಗೆ ಏಕೆ‌ ಮಾತನಾಡಲ್ಲ ಎಂದು ಪ್ರಶ್ನಿಸುತ್ತಾರೆ. ನಾವು ಆರಾದಿಸುವ ದೇವರುಗಳ ಚರಿತ್ರೆಯ ಮೇಲೆ ಬೆಳಕು ಚೆಲ್ಲುವುದು ತಪ್ಪು ಹೇಗಾದೀತು. ನಮ್ಮ ದೇವರುಗಳ ! ಕರಾಳ ಇತಿಹಾಸ 'ಆದರ್ಶ'ದ ಚೌಕಟ್ಟಿನಲ್ಲಿ ಬರಬಾರದು ಎಂಬುದಷ್ಟೆ ಆಶಯ ಅಲ್ಲವೇ?

ಭಗವಾನ್ ವಾಸ್ತವ ಸಂಗತಿ ಹೇಳಿದ ಮಾತ್ರಕ್ಕೆ ಆಸ್ತಿಕರು ದೇವರುಗಳನ್ನೆಲ್ಲ ನಿರಾಕರಿಸಿ ಬಿಡಲು ಸಾಧ್ಯವೇ? ದೇವರು, ನಂಬಿಕೆ, ಪೂಜೆ ಅವರವರ ಆತ್ಮ ತೃಪ್ತಿಯ ಸಂಗತಿ ಹಾಗೆಂದು ಅವುಗಳೆಲ್ಲಾ ಪ್ರಶ್ನಾತೀತವಾದುವಲ್ಲ. ಭಗವಾನ್ ಹಿಂದೂ ಧರ್ಮದಲ್ಲಿ ಹುಟ್ಟಿದವರು, ಹಿಂದು ಧರ್ಮದ ಹುಳುಕುಗಳು ಮತ್ತು ಅವರು ಕಂಡುಕೊಂಡ ವಿಚಾರಗಳನ್ನು ಹೇಳಲು ಸಮರ್ಥರೇ ವಿನಹ ತಿಳಿಯದ ಮುಸ್ಲಿಂ, ಕ್ರೈಸ್ತ ಅಥವ ಇತರೆ ಧರ್ಮದ ಬಗ್ಗೆ ಮಾತನಾಡಲು ಹೇಗೆ ಸಾಧ್ಯ? ಆಯಾ ಧರ್ಮದ ಹುಳುಕುಗಳನ್ನು ಎತ್ತಿ ತೋರಿಸಲು ಅಲ್ಲಿಯೂ ಭಗವಾನ್ ಥರದ ಚಿಂತಕರು ಇದ್ದಾರಲ್ಲ.‌

ಹಿಂದೂ ಧರ್ಮ(ಜೀವನ‌ ಪದ್ಧತಿ) ಪ್ರಶ್ನೆಗಳನ್ನು ಮತ್ತು ಸಮರ್ಥ ಉತ್ತರಗಳನ್ನು ಅಡಕ ಮಾಡಿಕೊಂಡಿದೆಯೇ ವಿನಹ ಪ್ರಶ್ನೆಗಳನ್ನು, ಪ್ರಶ್ನಿಸುವವರನ್ನು ಆತಂಕಕ್ಕೀಡು ಮಾಡುವ ಸಮರ್ಥನೆಗಳನ್ನು ಹೊಂದಿಲ್ಲ. ಆದರೆ ಬೆದರಿಕೆ, ಸಮರ್ಥನೆಗಳನ್ನು ಮುಂದು ಮಾಡಿ ಹಿಂದೂ ಧರ್ಮದ ಆಶಯಕ್ಕೆ ಧಕ್ಕೆ ತರಲಾಗಿದೆ. ವರ್ತಮಾನದಲ್ಲಿ  ಯಾವ ಸಂಗತಿಗಳು ಕೂಡಾ ಮತ್ತೊಂದು ಬದಿಯ ಸತ್ಯವನ್ನ ಮರೆ ಮಾಚಬಾರದು. ವೈಚಾರಿಕತೆಗೆ ತೆರೆದುಕೊಳ್ಳುವ ಹಾದಿಯಲ್ಲಿಯೇ ಆಯ್ಕೆಗಳು ಇರುತ್ತವಲ್ಲ. ಹೀಗಿರುವಾಗ ಭಗವಾನ್ ರು ರಾಮ-ಕೃಷ್ಣ-ಶಿವ ಕುರಿತು ಹೇಳುವ ಸಂಗತಿಗಳನ್ನು ಅರಿವಿಗೆ ತಂದುಕೊಳ್ಳಿ, ವಿಚಾರ ಮಾಡಿ, ಬೇಡವೆಂದರೆ ಬಿಟ್ಟು ಬಿಡಿ. ಭಗವಾನ್ ರನ್ನು ಯಾಕೆ ಆತಂಕದ ಚೌಕಟ್ಟಿಗೆ ತರುತ್ತೀರಿ? ಕೆಡುಕು ಬಯಸುತ್ತೀರಿ?

#ProfKSBhagawan #WhyInsultingProfKSBhagawan #ArkalgudJayakumar

Thursday, October 19, 2017

ಲಂಡನ್ ಪ್ಯಾರಾಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ಹೆಚ್ ಎನ್ ಗಿರೀಶ್ ಎಂಗೇಜ್ ಮೆಂಟ್ ಫಿಕ್ಸ್




  • ಅರಕಲಗೂಡು ಜಯಕುಮಾರ್/7899606841-7338474765


ಐತಿಹಾಸಿಕ ಲಂಡನ್ ಪ್ಯಾರಾಲಿಂಪಿಕ್ ಕ್ರೀಡಾಕೂಟದ ಹೈ ಜಂಪ್ ಬೆಳ್ಳಿ ಪದಕ ವಿಜೇತ ಹೆಚ್ ಎನ್ ಗಿರೀಶ ಕಂಕಣ ಬಂಧನಕ್ಕೆ ಸಜ್ಜಾಗುತ್ತಿದ್ದಾರೆ.ಸಧ್ಯ ಗಿರೀಶ್ ನವೆಂಬರ್ ನಲ್ಲಿ 27 ರಂದು ನೇಪಾಳದ ಕಠ್ಮಂಡುವಿನಲ್ಲಿ ನಡೆಯಲಿರುವ ಸೌತ್ ಏಷಿಯನ್ ಫೆಡರೇಶನ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ತಾಲೀಮು ನಡೆಸುತ್ತಿದ್ದಾರೆ. ಈ ನಡುವೆ ಬೆಳ್ಳಿ ಹುಡುಗನ ಎಂಗೇಜ್ ಮೆಂಟ್ ಸುದ್ದಿ ಹೊರ ಬಿದ್ದಿದೆ. 


ಇದೇ ಅಕ್ಟೋಬರ್ 22 ರಂದು ತವರೂರು ಹಾಸನದ ತನ್ವಿ ತ್ರಿಷಾ ಕಲ್ಯಾಣ ಮಂಟಪದಲ್ಲಿ ಎಂಗೇಜ್ ಮೆಂಟ್ ನಡೆಯುತ್ತಿದೆ. ಎಂಗೇಜ್ ಮೆಂಟ್ ಮುಗಿಸಿದ 3 ದಿನಗಳಿಗೆ ಯುಕೆ ಪೋರ್ಚುಗಲ್ ನಲ್ಲಿ ನಡೆಯುವ ವಿಶ್ವ ಗೇಮ್ಸ್ ನಲ್ಲಿ ಪಾಲ್ಗೊಳ್ಳುವರು. ಸಧ್ಯ ಜಾಗತಿಕ ಹೈಜಂಪ್ ರ್ಯಾಂಕಿಗ್ ನಲ್ಲಿ ಅಗ್ರ ನಾಲ್ಕನೇ ಶ್ರೇಯಾಂಕದಲ್ಲಿದ್ದಾರೆ. ಹಾಸನ ಮೂಲದವರೇ ಆದ ಮತ್ತು ಸರ್ಕಾರಿ ಕರ್ತವ್ಯ ನಿಮಿತ್ತ ಮೈಸೂರಿನಲ್ಲಿ ನೆಲೆಸಿರುವ ನಾಗರತ್ನ ಎಂಬುವವರ ಪುತ್ರಿ ಸಹನಾ ಬೆಳ್ಳಿ ಹುಡುಗನನ್ನು ವರಿಸಲಿದ್ದಾರೆ. ಸಹನಾ ಮೈಕ್ರೋಬಯೋಲಜಿಯಲ್ಲಿ ಎಂ ಎಸ್ಸಿ ಸ್ನಾತಕ ಪದವಿ ಪಡೆದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮಾರ್ಚ್ ಮಾಹೆಯಲ್ಲಿ ಗಿರೀಶ್ ಮದುವೆ ನಿಕ್ಕಿಯಾಗಿದೆ. 




2012ರಲ್ಲಿ ನಡೆದ ಲಂಡನ್ ಪ್ಯಾರಾಲಿಂಪಿಕ್ಸ್ ನಲ್ಲಿ ಹೈಜಂಪ್ ಬೆಳ್ಳಿ ಪದಕ ಜಯಿಸಿದ್ದ ಗಿರೀಶ್ ಆ ವರ್ಷ ಭಾರತಕ್ಕೆ ಪದಕಗಳ ಕೊರತೆಯನ್ನು ನೀಗಿಸಿದ್ದರು ಹಾಗೂ ಪ್ಯಾರಾಲಿಂಪಿಕ್ಸ್ ನಲ್ಲಿ ಮೊದಲ ಬೆಳ್ಳಿ ಪದಕ ಜಯಿಸಿದ ಕನ್ನಡಿಗರು ಹೌದು. ಇವರ ಸಾಧನೆಗಾಗಿ ಭಾರತ ಸರ್ಕಾರ ಪದ್ಮಶ್ರೀ ಪುರಸ್ಕಾರ ಹಾಗೂ ಪ್ರತಿಷ್ಠಿತ ಅರ್ಜುನ ಪುರಸ್ಕಾರವನ್ನು ನೀಡಿ ಗೌರವಿಸಿದೆ. ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ಬೆಂಗಳೂರು ವಲಯದ ಕೇಂದ್ರದಲ್ಲಿ ಕೋಚ್ ಹುದ್ದೆಯನ್ನು ಸಹಾ ಗಿರೀಶ್ ಗೆ ನೀಡಲಾಗಿದೆ. ರಾಜ್ಯ ಸರ್ಕಾರ 6 ನೇ ತರಗತಿಯ ಪಠ್ಯದಲ್ಲಿ ಗಿರೀಶ್ ಸಾಧನೆ ಕುರಿತ ಅಧ್ಯಾಯವನ್ನು ಸೇರಿಸಿದೆ. 




ಹೆಚ್ ಎನ್ ಗಿರೀಶ್ ಹೇಮಾವತಿ ಜಲಾಶಯದ ಪುನರ್ವಸತಿ ಗ್ರಾಮ ಕೊಡಗಿನ ಗಡಿ ಪ್ರದೇಶದಲ್ಲಿರುವ ಹೊಸನಗರದವರು, ತಂದೆ ನಾಗರಾಜೇಗೌಡ, ತಾಯಿ ಜಯಮ್ಮ ಕೃಷಿ ಕಾರ್ಮಿಕರು. ಯಾವ ಗಾಡ್ ಫಾದರ್ ಗಳ ನೆರವಿಲ್ಲದೇ, ಮೂಲ ಸೌಕರ್ಯಗಳ ಕೊರತೆ, ಹಾಗೂ ಅಂಗವೈಕಲ್ಯದ ಕೊರತೆಯ ನಡುವೆಯೂ ಯಶಸ್ಸಿನ ಮೆಟ್ಟಿಲು ಏರಿ ಭಾರತದ ಕೀರ್ತಿ ಪತಾಕೆಯನ್ನು ಬ್ರಿಟೀಷ್ ಅಂಗಳದಲ್ಲಿ ಎತ್ತಿ ಹಿಡಿದ ಹೆಮ್ಮೆ ಹೆಚ್ ಎನ್ ಗಿರೀಶ್ ಅವರದ್ದು.



Padmashree H N Girish Achievements video clips here

ಹೆಚ್ ಎನ್ ಗಿರಿಶ್ ಕುರಿತ ಕೆಲವು ವಿಡಿಯೋ ಲಿಂಕ್ ಗಳು ಇಲ್ಲಿವೆ.









Tuesday, July 25, 2017

ಅಂಬೇಡ್ಕರರನ್ನು ಅರಿಯುವುದೆಂದರೆ….

ಭಾರತದ ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆಮೀಸಲಾತಿನಿಗದಿಯಾಗಿದ್ದು ಹಿಂದುಳಿದ ವರ್ಗದವರಿಗೆ, ಅದೂ ದಕ್ಷಿಣ ಭಾರತದಲ್ಲಿ ಶಾಹು ಮಹಾರಾಜ ಇಚ್ಛಾಶಕ್ತಿಯ ಫಲ. ನಂತರ ಮೈಸೂರು ಸಂಸ್ಥಾನದಲ್ಲಿ ಹಿಂದುಳಿದ ವರ್ಗದವರಿಗೆ ಮೀಸಲಾತಿ ಕೊಡುವ ನಿರ್ದಾರ ಪ್ರಕಟವಾದಾಗ ಪ್ರಖರವಾಗಿ ವಿರೋಧ ವ್ಯಕ್ತಪಡಿಸಿದ ದಿವಾನ್ ವಿಶ್ವೇಶ್ವರಯ್ಯ ದಿವಾನ ಗಿರಿಗೆ ರಾಜೀನಾಮೆ ಒಗೆದು ಹೊರ ಬಿದ್ದರು. ಆದರೆ ಇವತ್ತಿಗೂ ಅರಿವುಗೇಡಿ ಮಂದಿ ಅವರ ಚಿತ್ರಗಳನ್ನಿಟ್ಟುಕೊಂಡು ದೇವರಂತೆ ಪೂಜಿಸುತ್ತಾರೆ ಎಂಬುದು ವಿಷಾದನೀಯ.

ಮುಂದೆ ಕಾಂಗ್ರೆಸ್ ಸರ್ಕಾರ ಬಂದಾಗ ಮುಖ್ಯಮಂತ್ರಿಗಳಾದ ದೇವರಾಜ ಅರಸು ಹಿಂದುಳಿದ ವರ್ಗದ ಹಿತಾಸಕ್ತಿ ರಕ್ಷಿಸಲು ಎಲ್ ಜಿ ಹಾವನೂರು ಸಮಿತಿಯನ್ನು ರಚಿಸಿದರು. ಹಾವನೂರು ವರದಿಯ ಫಲ ಇವತ್ತು ಉದ್ಯೋಗ ಮತ್ತು ಶಿಕ್ಷಣದಲ್ಲಿ ಹಿಂದುಳಿದ ವರ್ಗ ಮೀಸಲಾತಿಯನ್ನು ಅನುಭವಿಸುತ್ತಿದೆ. ಆದರೆ ಅಂಬೇಡ್ಕರ್ ರಚಿಸಿದ ಸಂವಿಧಾನದಲ್ಲಿ ದಲಿತರಿಗಿಂತಲೂ ಹೆಚ್ಚು ಪ್ರಮಾಣದ ಮೀಸಲಾತಿಯನ್ನು ಹಿಂದುಳಿದ ವರ್ಗದವರಿಗೆ ನೀಡಲಾಗಿದೆ (ಶೇ. 27). ಆದರೆ ಗುಂಪುಗಾರಿಕೆ, ಸ್ವಾರ್ಥ ಹಿತಾಸಕ್ತಿ, ಅರಿವಿನ ಪ್ರಜ್ಞೆ, ಸಂಘಟನೆಯ ಕೊರತೆ ಇರುವುದರಿಂದ  ಈ ಮೀಸಲಾತಿಯ ಪೈಕಿ ಸುಮಾರು ಶೇ. 4ರಷ್ಟು ಪ್ರಮಾಣವನ್ನು ಮಾತ್ರ ಅನುಭವಿಸುತ್ತಿದ್ದಾರೆ.

ಹಿಂದುಳಿದ ವರ್ಗದವರು ಸದಾ ಕಾಲಕ್ಕೂ ನೆನಪಿಟ್ಟುಕೊಳ್ಳ ಬೇಕಾದ ಮತ್ತು ಪೂಜಿಸ ಬೇಕಾದ ವ್ಯಕ್ತಿ ಭಾರತದ ಪ್ರಧಾನಿಯಾಗಿದ್ದ ವಿ ಪಿ ಸಿಂಗ್. ವಿ ಪಿ ಸಿಂಗ್ ಅವರು ಪ್ರಧಾನ ಮಂತ್ರಿಯಾಗಿ ಹಿಂದುಳಿದ ವರ್ಗದವರಿಗೆ ಸಾಮಾಜಿಕ ನ್ಯಾಯ ಒದಗಿಸಲು ಮಂಡಲ್ ಆಯೋಗದ ವರದಿ ಜಾರಿಗೆ ತರಲು ಹೊರಟರೆ, ಮೇಲ್ವರ್ಗದ ಚಿತಾವಣೆಗೆ ಸಿಲುಕಿದ ಶೂದ್ರರೇ ಮಂಡಲ್ ಆಯೋಗದ ಅನುಷ್ಠಾನಕ್ಕೆ ಬಹು ದೊಡ್ಡ ತಡೆಗೋಡೆಯಾಗಿ ನಿಂತು ಬಿಟ್ಟರು. ರಾಷ್ಟ್ರಾಧ್ಯಂತ ಮಂಡಲ್ ಆಯೋಗದ ವರದಿಯನ್ನು ವಿರೋಧಿಸಿ ಹರತಾಳ ನಡೆದವು. ದೇಶದ ಪ್ರತಿಷ್ಠಿತ ಐಐಟಿಯಲ್ಲಿ ಹಿಂದುಳಿದ ವರ್ಗಕ್ಕೆ ಮೀಸಲಾತಿ ತರಲು ಹೊರಟರೆ ಅಲ್ಲಿಯೂ ಅರಿವುಗೇಡಿಗಳು ಪ್ರತಿಭಟನೆಗೆ ನಿಂತು ಅಪೂರ್ವ ಅವಕಾಶವನ್ನು ತಪ್ಪಿಸಿಕೊಂಡವು.

ಇಷ್ಟಕ್ಕೂ ಈ ಮೀಸಲಾತಿ ಎಂದರೆ ಏನು? ಯಾಕೆ ಅದನ್ನು ವಿರೋಧಿಸಲಾಗುತ್ತಿದೆ? ಮೀಸಲಾತಿ ಫಲಾನುಭವಿಗಳನ್ನು ತುಚ್ಚವಾಗಿ ನೋಡುವ ಅಗತ್ಯವಿದೆಯೇ? ಎಂಬ ಪ್ರಶ್ನೆಗಳನ್ನು ವರ್ತಮಾನದಲ್ಲಿ ಪ್ರತಿಯೊಬ್ಬರು ಹಾಕಿಕೊಳ್ಳ ಬೇಕಾದ ಅಗತ್ಯವಿದೆ. ಮೀಸಲಾತಿ ಹಿಂದಿನ ಸತ್ಯಗಳನ್ನು ಪುನರಾವಲೋಕನ ಮಾಡಿಕೊಳ್ಳುವಾಗ ಅರಗಿಸಿಕೊಳ್ಳಲಾಗದ ವಾಸ್ತವಗಳನ್ನ ಗ್ರಹಿಕೆಗೆ ತಂದುಕೊಳ್ಳುವ ಸೂಕ್ಷ್ಮತೆ ವರ್ತಮಾನದಲ್ಲಿ ಕಳೆದು ಹೋಗಿರುವುದರಿಂದಮೀಸಲಾತಿಪರಿಧಿಯನ್ನು ಆರ್ಥಿಕತೆಯ ಮಾನದಂಡದಲ್ಲಿ ಗ್ರಹಿಸುವ ಅಪಾಯ ಸನ್ನಿವೇಶದಲ್ಲಿದ್ದೇವೆ.

ಮೀಸಲಾತಿ ಎಂದರೆ ಸಾಮಾಜಿಕ ನ್ಯಾಯದ ಮಾನದಂಡ, ಮನುಷ್ಯರನ್ನು ಮನುಷ್ಯರಂತೆ ಕಾಣುವ ಕ್ರಿಯೆಗಳು ಸತ್ತು ಹೋಗಿರುವ  ಈ ಹೊತ್ತಿನಲ್ಲಿ ಧ್ವನಿ ಅಡಗಿ ಹೋದ ಜೀವಗಳಿಗೆ ಕನಿಷ್ಠ ಉಸಿರಾಡುವಂತೆ ಮಾಡುವ ಕ್ರಿಯೆ. ಜೀವಪರ ಕಾಳಜಿಯ ಸೂಕ್ಷ್ಮ ಮನಸ್ಸುಗಳಿಗೆ ಮಾತ್ರ ಇದು ಅರ್ಥವಾದೀತು. ಸಾಮಾಜಿಕ ಅಸ್ಪೃಶ್ಯತೆಗೂ, ಆರ್ಥಿಕ ಅಸ್ಪೃಶ್ಯತೆಗೂ ಅಜಗಜಾಂತರ ವ್ಯತ್ಯಾಸವಿದೆ. ಹಾಗೆಯೇ ದಲಿತರು ಅನುಭವಿಸುವ ಅಸ್ಪೃಶ್ಯತೆಗೂ, ಅಮೇರಿಕಾದ ನೀಗ್ರೋಗಳು ಅನುಭವಿಸುವ ಅಸ್ಪೃಶ್ಯತೆಗೂ ಸಾಕಷ್ಟು ವ್ಯತ್ಯಾಸವಿದೆ. ದಲಿತರು ಅನುಭವಿಸುವ ಸಾಮಾಜಿಕ ಅಸ್ಪೃಶ್ಯತೆಯಲ್ಲಿ ಬದುಕುವ ಹಕ್ಕುಗಳನ್ನೇ ನಿರಾಕರಿಸಲಾಗುತ್ತದೆ, ನೀಗ್ರೋಗಳು ಅನುಭವಿಸುವ ಅಸ್ಪೃಶ್ಯತೆಯಲ್ಲಿ ಬದುಕುವ ಹಕ್ಕುಗಳಿಗೆ ಧಕ್ಕೆಯಿಲ್ಲ ಆದರೆ ಸಮಾನತೆಯ ಹಕ್ಕುಗಳನ್ನು ನಿರಾಕರಿಸಲಾಗುತ್ತದೆ. ಹಾಗಾಗಿ ಭಾರತದಲ್ಲಿ ದಲಿತರು ಅನುಭವಿಸುವ ಸಾಮಾಜಿಕ ಅಸಹನೆ ಅತ್ಯಂತ ಕ್ರೂರವಾದುದು, ಮತ್ತು ಆ ವರ್ಗಕ್ಕೆ ಮಾನಸಿಕ ಸ್ಥೈರ್ಯ ನೀಡುವ ಕೆಲಸಮೀಸಲಾತಿಯಿಂದ ಮಾತ್ರ ಸಾಧ್ಯ ಎಂಬುದು ಇಂದಿನ ತುರ್ತು.

ಮೀಸಲಾತಿಯ ಫಲಾನುಭವಿಗಳ ಪಟ್ಟಿಯಲ್ಲಿ ಮಹಿಳೆಯರು ವರ್ತಮಾನದಲ್ಲಿ ಮಂಚೂಣಿ ಸ್ಥಾನ ಪಡೆದಿದ್ದಾರೆ. ಸಂಸತ್ ನಲ್ಲಿ ಮಹಿಳೆಯರಿಗೆ ಆಸ್ತಿ ಹಕ್ಕು, ರಾಜಕೀಯ, ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ ಬೇಕು ಎಂದು ಪಟ್ಟು ಹಿಡಿದ ಭಾರತ ರತ್ನ ಸಮತೆಯ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ತಮ್ಮ ಬೇಡಿಕೆ ಈಡೇರದಿದ್ದಾಗ ರಾಜೀನಾಮೆ ಒಗೆದು ಬಂದರು, ಅಧಿಕಾರವನ್ನೇ ತ್ಯಾಗ ಮಾಡಿದರು ಅಂತಹ ಅಂಬೇಡ್ಕರ್ ಗೆ ಇವತ್ತು ಮಹಿಳಾ ವಲಯದಲ್ಲಿ ಸ್ಥಾನವಿಲ್ಲ! ಸಾಮಾಜಿಕ ವಲಯದಲ್ಲಿ ಹಕ್ಕುಗಳನ್ನು ಪ್ರತಿಪಾದಿಸುವ, ಪ್ರಶ್ನೆಗಳನ್ನು ಕೇಳುವ ಚಳುವಳಿ ರೂಪಿತವಾಗಿದ್ದೆ ಡಾ ಬಿ ಆರ್ ಅಂಬೇಡ್ಕರ್ ಅವರಿಂದ. ಪ್ರತಿಫಲನವಾಗಿ ಸ್ವತಂತ್ರ ಭಾರತದಲ್ಲಿ ಸಾರ್ವತ್ರಿಕವಾಗಿ ಹುಟ್ಟಿದ ಎಲ್ಲ ಚಳುವಳಿ ಹಿಂದೆಯೂ ಅಂಬೇಡ್ಕರ್ ಹಾಕಿ ಕೊಟ್ಟ ಬುನಾದಿ ಇದೆ. ಆದರೆ ಅಂಬೇಡ್ಕರ್ ಅವರನ್ನು ಅರಿಯುವ ಪ್ರಯತ್ನಗಳಿಗೆ ಹಿನ್ನೆಡೆಯಾಗಿದೆ. ಅಂಬೇಡ್ಕರ್ ತೋರಿದ ಹಾದಿಯಲ್ಲಿ ನಡೆಯುವ ಬದಲಿಗೆ ಅವರನ್ನೆ ದೇವರಾಗಿ ಪೂಜಿಸುತ್ತಾ ಅದರಾಚೆಗೂ ಅಂಬೇಡ್ಕರ್ ತೋರಿಸದ ಬೆಳಕಿನ ಹಾದಿಯಿದೆ ಎಂಬ ಸತ್ಯ ದಲಿತರಿಗೂ ಅರ್ಥವಾದಂತಿಲ್ಲ. ಇದರ ಪರಿಣಾಮ ದಲಿತೇತರರು ಅಂಬೇಡ್ಕರರನ್ನು ಅರಿಯುವ ಪ್ರಯತ್ನಕ್ಕೆ ಭಾಗಶ: ತಡೆಗೋಡೆಯಾಗಿರ ಬಹುದೇನೋ.

ಇತಿಹಾಸದತ್ತ ಹೊರಳಿ ನೋಡಿದರೆ ಕಠಿಣ ಸ್ಥಿತಿಯಲ್ಲಿ ಬಸವೇಶ್ವರರು 12ನೇ ಶತಮಾನದಲ್ಲಿಯೇ ಸಾಮಾಜಿಕ ನ್ಯಾಯಕ್ಕಾಗಿ ಸೆಣಸಿದರು, ಆದರೆ ಅವತ್ತಿನ ವ್ಯತಿರಿಕ್ತ ಪರಿಸ್ಥಿತಿಯಲ್ಲಿ ಸಾಮಾಜಿಕ ನ್ಯಾಯಕ್ಕೆ ಸಾಂಸ್ಥಿಕ ರೂಪ ಕೊಡುವ ಮುನ್ನವೇ ಕಗ್ಗೊಲೆಯಾದರು. ಬಸವೇಶ್ವರರ ಸಾಮಾಜಿಕ ನ್ಯಾಯದ ಪರಿಕಲ್ಪನೆಗೆ, ಚಳುವಳಿಗೆ ತಾರ್ಕಿಕವಾಗಿ ಸಾಂಸ್ಥಿಕ ರೂಪುಕೊಟ್ಟವರು ಅಂಬೇಡ್ಕರ್. ಅವರು ಸಾಮಾಜಿಕ ನ್ಯಾಯದ ಪರಿಧಿಯಾಚೆಗೂ ತಮ್ಮ ಜ್ಞಾನದ ಹರವನ್ನು ವಿಸ್ತರಿಸಿದ್ದರು. ಅಲ್ಲಿ ಬೆಳಕಿತ್ತು ಆದರೆ ಆ ಬೆಳಕನ್ನು ಗುರುತಿಸಲಾಗದೇ ಅಂಬೇಡ್ಕರರನ್ನು ಸಹಾಮೀಸಲಾತಿಯ ಪರಿಧಿಯಲ್ಲೇ ನೋಡುವ ಮೂಲಕ ಬಹು ಸಂಖ್ಯೆಯ ದಲಿತೇತರರು ರೋಗಗ್ರಸ್ಥ ಮನಸ್ಥಿತಿಯಲ್ಲೇ ಕೊಳೆಯುತ್ತಿದ್ದಾರೆ.


ಅಂಬೇಡ್ಕರರನ್ನು ದಕ್ಕಿಸಿಕೊಳ್ಳುವುದೆಂದರೆ ಪ್ರಶ್ನಾ ಮನೋಭಾವ, ಹಕ್ಕುಗಳ ಪ್ರತಿಪಾದನೆ, ಪ್ರಗತಿಪರವಾದ ಚಿಂತನೆ, ವಾಸ್ತವವನ್ನು ಪರಿಗ್ರಹಿಸಿ ನೋಡುವುದೇ ಆಗಿದೆ. ಆದರೆ ವರ್ತಮಾನದಲ್ಲಿ ಸೂಕ್ಷ್ಮ ಗ್ರಹಿಕೆಗಳೇ ಕಳೆದು ಹೋಗಿವೆ, ಅರಿವಿನ ಬೆಳಕಿಗೆ ವರ್ತಮಾನದಲ್ಲಿ ನಮ್ಮನ್ನು ಒಡ್ಡಿಕೊಳ್ಳ ಬೇಕಿದೆ. ಅಂಬೇಡ್ಕರ್ ಎಂಬ ಹಣತೆಯನ್ನು ಎದೆಯ ಗೂಡಿನಲ್ಲಿ ಇರಿಸಿಕೊಂಡು ಪುನರಾವಲೋಕಿಸಬೇಕಾದ ತುರ್ತು ಇದೆ

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...