ಶಂಕರ್ ನಾಗ್ ನಿರ್ದೇಶನದ ಮಾಲ್ಗುಡಿ ಡೇಸ್ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿತ್ತು. ಈ ಹೊತ್ತಿಗೂ ಮಾಲ್ಗುಡಿ ಡೇಸ್ ಟಿವಿ ಸರಣಿಯ ನಿರೂಪಣಾ ಶೈಲಿ , ಕಥಾ ಹಂದರವನ್ನು ತೆರೆಗೆ ತಂದ ರೀತಿ ಹೊಸತಾಗಿಯೇ ಉಳಿಯುತ್ತದೆ.
ಭಾರತೀಯ ಚಿತ್ರರಂಗದಲ್ಲಿ ಅಪರೂಪ ಎನಿಸಿದ Under Water Shooting ಗಾಗಿ ಲಂಡನ್ ನಿಂದ ದುಬಾರಿ ವೆಚ್ಚದ ಕೆಮರಾಗಳನ್ನು ತರಿಸಿ ಒಂದು ಮುತ್ತಿನ ಕಥೆ ಸಿನೆಮಾದ ಚಿತ್ರೀಕರಣದಲ್ಲಿ ಬಳಸಿದ್ದರು. 80ರ ದಶಕದಲ್ಲಿ ಜಾನಪದ ಕಥಾ ಹಂದರದ ರಂಗ ನಾಟಕಗಳನ್ನು ದಿಗ್ದರ್ಶಿಸಿ, ನಟಿಸಿ 7ರಾಷ್ಟ್ರಗಳಲ್ಲಿ ಯಶಸ್ವಿ ಪ್ರದರ್ಶನ ನೀಡಿದ್ದ ಶಂಕರ್ ನಾಗ್ , ಅವರದ್ದೇ ಅಭಿನಯದ ಪರಮೇಶಿ ಪ್ರೇಮ ಪ್ರಸಂಗ, *ನೋಡಿ ಸ್ವಾಮಿ ನಾವಿರೋದೆ ಹೀಗೆ ಎಂಬ ಜನಪ್ರಿಯ ನಾಟಕಗಳನ್ನು ಸಿನೆಮಾ ಮಾಡಿ ಗೆದ್ದಿದ್ದು ಇತಿಹಾಸ. ಕನ್ನಡ ಚಿತ್ರರಂಗದಲ್ಲಿ ಇಂತಹ ಪ್ರಯೋಗ ಮಾಡಿ ಯಶಸ್ಸು ಕಂಡ ಮೊದಲ ನಟ ಶಂಕರ್‌ನಾಗ್. ಮತ್ತೊಂದು ಜನಪ್ರಿಯ ನಾಟಕ ಜೋಕುಮಾರಸ್ವಾಮಿ ಸಿನೆಮಾ ಮಾಡಲು ನಿರ್ದರಿಸಲಾಗಿತ್ತು, ಈ ಸಿನೆಮಾದ ಮುಹೂರ್ತದಲ್ಲಿ ಪಾಲ್ಗೊಳ್ಳಲು ಮದ್ಯರಾತ್ರಿ ಪ್ರಯಾಣಿಸಿದ್ದ ಶಂಕರ್ ನಾಗ್ ಕಾರು ಅಪಘಾತದಲ್ಲಿ ಅಕಾಲ ಮೃತ್ಯುವಿಗೆ ತುತ್ತಾದರು.
ರಾಜ್ಯದ ಮೊದಲ ಧ್ವನಿಗ್ರಹಣ ಕೇಂದ್ರ ಸಂಕೇತ್ ಆರಂಭಿಸಿದ ಶಂಕರ್ ನಾಗ್, ಬೆಂಗಳೂರಿಗೆ ಹೊಸತಾದ ಕಂಟ್ರಿಕ್ಲಬ್ ಪರಿಚಯಿಸಿದರು. ತಮ್ಮ ಜೀವಮಾನದ ದುಡಿಮೆಯನ್ನೆಲ್ಲ ಅಲ್ಲಿ ವ್ಯಯಿಸಿದ್ದ ಶಂಕರ್ ನಾಗ್ ಆರ್ಥಿಕ ಕಾರಣಗಳಿಗಾಗಿ ವೃತ್ತಿ ಜೀವನದಲ್ಲಿ ರಾಜಿಯಾಗಲಿಲ್ಲ.
ನಟಿಸಿದ ಮೊದಲ ಸಿನೆಮಾಗೆ ರಾಷ್ಟ್ರಪತಿಗಳ ಗೋಲ್ಡನ್ ಪೀಕಾಕ್ ಅವಾರ್ಡ್ ಪಡೆದ ಶಂಕರ್ ನಾಗ್ , ಯಾವತ್ತಿಗೂ ಹೀರೋ ಇಮೇಜ್ ಬೆಂಬಲಿಸುವ ಕಥಾನಕಗಳನ್ನು ಹೊಂದಿದ ಸಿನೆಮಾಗಳಲ್ಲಿ ನಟಿಸಿದ್ದು ಕಡಿಮೆ. ರಾಜ್, ವಿಷ್ಣು, ಅಂಬರೀಶ್, ರವಿಚಂದ್ರನ್ ರ ಜೊತೆ ನಟಿಸಿದ್ದ ಶಂಕರ್ ನಾಗ್ ಆ ಹೊತ್ತಿನಲ್ಲೂ ಪೂರಕ ಪಾತ್ರಗಳಲ್ಲಿ ನಟಿಸಿದ್ದರೆ ಹೊರತು ಹೀರೋಯಿಸಂ ಪಾತ್ರಗಳ ಹಿಂದೆ ಬಿದ್ದಿರಲಿಲ್ಲ.
ಶಂಕರ್ ನಾಗ್ ನಟಿಸಿದ ಸಿನೆಮಾಗಳನ್ನು ಗಮನಿಸಿದರೆ ಅಲ್ಲಿ ಹೀರೋಯಿಸಂ ಗಿಂತ ಶ್ರಮ ಜೀವಿ, ಶೋಷಿತ ವರ್ಗದ ಪ್ರತಿನಿಧಿ, ಸಮಾಜಕ್ಕೆ ಮಾದರಿಯಾದ ವ್ಯಕ್ತಿತ್ವ ನೀಡುವ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ ಎಂಬುದು ಗಮನಾರ್ಹ. ತನ್ನ ವಾರಗೆಯ ನಟರು ಆ ಹೊತ್ತಿನಲ್ಲಿ ಹುಲಿ, ಸಿಂಹಗಳ ಖದರ್ ಇರುವ ಪಾತ್ರ ಪೋಷಣೆ ಪಡೆಯುತ್ತಿದ್ದ ಕಾಲ ಅದು. ಆದರೆ ಶಂಕರ್ ನಾಗ್ ಮಾನವೀಯತೆ, ಸಂಘರ್ಷ, ವರ್ತಮಾನದ ಸಂಕಟಗಳ ಪ್ರತಿನಿಧಿಸುವ ಪಾತ್ರ ಮತ್ತು ಚಿತ್ರಗಳನ್ನು ನಿರ್ದೇಶಿಸಿದ್ದಾರೆ.
ತಾವು ಬೆಳೆಯುವ ಜೊತೆಗೆ ಸಿನೆಮಾಗೆ ಆಕರ್ಷಿತರಾಗಿ ಬರುವ ನಟರು, ತಂತ್ರಜ್ಞರನ್ನು ಪ್ರೋತ್ಸಾಹಿಸಿ ಒಂದಿಲ್ಲೊಂದು ಕಾಯಕದಲ್ಲಿ ಬ್ಯುಸಿಯಾಗುವಂತೆ ಮಾಡಿ ಬದುಕುವ ದಾರಿ ತೋರಿಸಿದ್ದ ಶಂಕರ್ ನಾಗ್ ಈ ಹೊತ್ತಿಗೂ ಜನಮಾನಸದಲ್ಲಿ ಅನುಕರಣೀಯ ಹಾಗೂ ಮಾದರಿ ನಟರಾಗಿ ವಿರಾಜಮಾನವಾಗಿದ್ದಾರೆ.
ಶಂಕರ್ ನಾಗ್ ತಮ್ಮ ಭಾಗದವರೇ ಆದ ಜನಪ್ರಿಯ ರಾಜಕಾರಣಿ ಹಾಗೂ ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ರಾಮಕೃಷ್ಣ ಹೆಗಡೆ ಅವರ ಮೇಲಿನ ಅಭಿಮಾನದಿಂದ ಚುನಾವಣಾ ಪ್ರಚಾರದಲ್ಲಿ ತೊಡಗುತ್ತಿದ್ದರು ಆದರೆ ರಾಜಕೀಯದಲ್ಲಿ ಯಾವತ್ತಿಗೂ ಸ್ವತ: ಪಾಲ್ಗೊಳ್ಳಲಿಲ್ಲ. ರಾಮಕೃಷ್ಟ ಹೆಗಡೆ ಸಿಎಂ ಆದ ಸಂದರ್ಭ, ಲಂಡನ್ ನಲ್ಲಿ ತಾವು ಕಂಡಿದ್ದ ಮೆಟ್ರೋ ರೈಲು ಯೋಜನೆಯನ್ನು ಬೆಂಗಳೂರಿನಲ್ಲಿ ಯೂ ಅನುಷ್ಟಾನಕ್ಕೆ ತರಬೇಕು ಎಂಬ ಕನಸು ಇಟ್ಟುಕೊಂಡಿದ್ದ ಶಂಕರ್‌ನಾಗ್ ಯೋಜನೆಯ ಮಾಹಿತಿಯನ್ನು ಸರ್ಕಾರದ ಮುಂದೆ ಇರಿಸಿದ್ದರು.
ಬೆಂಗಳೂರಿನಲ್ಲಿ ಮೆಟ್ರೋ ಶುರುವಾದ ಸಂದರ್ಭ ಯೋಜನೆಗೆ ಶಂಕರ್ ನಾಗ್ ಹೆಸರು ಇಡುವಂತೆ ಸಾರ್ವತ್ರಿಕವಾಗಿ ಅಭಿಪ್ರಾಯಗಳಿದ್ದವು, ಅರುಂಧತಿ ನಾಗ್ ಕೂಡಾ ಈ ಕುರಿತು ಮಾತನಾಡಿದ್ದರು. ಆದರೆ ಆಡಳಿತ ಚುಕ್ಕಾಣಿ ಹಿಡಿದವರ ಪೂರ್ವಗ್ರಹ ಪೀಡಿತ ನಿಲುವಿನಿಂದ ಮೆಟ್ರೋ ಯೋಜನೆಗೆ ಶಂಕರ್ ನಾಗ್ ಹೆಸರಿಡುವುದು ಇರಲಿ, ಒಂದು ಮೆಟ್ರೋ ಸ್ಟೇಷನ್ ಗೂ ಅವರ ಹೆಸರಿಡಲಿಲ್ಲ!
ನಂದಿಬೆಟ್ಟದ ರೋಪ್ ವೇ ಯೋಜನೆ, ಬಡವರಿಗೆ ವಿದೇಶಿ ತಂತ್ರಜ್ಞಾನ ಮನೆ ನಿರ್ಮಾಣ ಹೀಗೆ ಹಲವು ಯೋಜನೆಗಳ ಕನಸು ಕಂಡಿದ್ದ ಶಂಕರ್ ನಾಗ್ 35ನೇ ವಯಸ್ಸಿಗೆ ಕಾಲನ ಕರೆಗೆ ಓಗೊಟ್ಟರು. ಇವತ್ತು ಶಂಕರ್ ನಾಗ್ ನೆನಪಿಗೆ ಸ್ಮಾರಕಗಳಿಲ್ಲ, ಆದರೆ ಅವರ ಕೆಲಸ ಮತ್ತು ನೆನಪುಗಳೆ ಸ್ಮಾರಕ ಗಳಾಗಿವೆ!
ಶಂಕರ್ ನಾಗ್ ನಿಧನರಾಗುವ ಹೊತ್ತಿಗೆ ಅಗಾಧವಾದುದನ್ನು ಸಾಧಿಸಿದ್ದರು, ಈ ಸಾಧನೆಗಳು ಮತ್ತು ಅವರ ವರ್ಕಾಲಿಕ್ ಗುಣವೇ ಶಂಕರ್ ನಾಗ್ ರನ್ನು ಸ್ಮರಣೀಯವಾಗಿಸಿದೆ. ಶಂಕರ್ ನಾಗ್ ರಿಗೆ ಫ್ಯಾನ್ ಕ್ಲಬ್ ಇಲ್ಲ ಆದರೆ ಕೋಟ್ಯಾಂತರ ಯುವ ಸಮೂಹದ ಹೃದಯದಲ್ಲಿ ಸ್ಥಾನ ಪಡೆದಿದ್ದಾರೆ.
ಈ ಸಂದರ್ಭ ರಂಗ ಶಂಕರ ದಲ್ಲಿ ಅರುಂಧತಿ ನಾಗ್ ನೇತೃತ್ವದಲ್ಲಿ ಶಂಕರ್ ನೆನಪಿನಲ್ಲಿ ನಾಟಕ ಸಪ್ತಾಹ ನಡೆಯುತ್ತಿದೆ ಹಾಗೆಯೇ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿಯೂ ಶಂಕರ್ ನಾಗ್ ನಾಟಕ ಸಪ್ತಾಹ ನಡೆಯುತ್ತಿದೆ, ರಂಗ ಪಯಣ ಮತ್ತು ಸಾತ್ವಿಕ ರಂಗತಂಡದವರು ಸಪ್ತಾಹ ಆಯೋಜಿಸಿದ್ದಾರೆ. ಇದೇ ತಂಡದವರು ಉತ್ತರ ಕರ್ನಾಟಕದ ಪ್ರತಿಭಾವಂತ ಯುವ ಶಿಕ್ಷಕ, ಕವಿ-ಚಿಂತಕ ವೀರಣ್ಣ ಮಡಿವಾಳರಿಗೆ ಶಂಕರನಾಗ್ ಪ್ರಶಸ್ತಿ ನೀಡಿ ಗೌರವಿಸಿದೆ. ಇಂದು ಸಂತಸದ ಸಂಗತಿ. ಶಂಕರ್ ನಾಗ್ ಹೆಸರೇ ಸ್ಪೂರ್ತಿದಾಯಕ ಸದಾಕಲಾಕ್ಕೂ ಅವರ ಮಾತು ಹಾಗೂ ಕೃತಿಗಳೂ ಕೂಡಾ.
Picture Courtesy:Veeranna Madiwalar
#Shankarnag #NoMonumentToShankarnagButHeRemainsStillInTheHeartsOfFans! #ArkalgudJayakumar
No comments:
Post a Comment