Thursday, September 24, 2009

ಮನಸಿಟ್ಟು "ಮನಸಾರೆ" ಮಾಡಿದ್ದೀನಿ: ಯೋಗರಾಜ್ ಭಟ್



ಯೋಗರಾಜ್ ಭಟ್ ಕನ್ನಡ ಚಿತ್ರರಂಗಕ್ಕೆ ಮುಂಗಾರು ಮಳೆಯ ಮೂಲಕ ಹೊಸತನದ ಸ್ಪರ್ಶ ನೀಡಿದವರು, ಇದಕ್ಕೂ ಮುನ್ನ "ಮಣಿ","ರಂಗಎಸ್ ಎಸ್ ಎಲ್ ಸಿ" ಯಂತಹ ಪ್ರಯೋಗಾತ್ಮಕ ಚಿತ್ರಗಳನ್ನು ನೀಡಿದರು ಅವರ ವೃತ್ತಿ ಬದುಕಿಗೆ ತಿರುವು ನೀಡಿದ್ದು ಮಾತ್ರ "ಮುಂಗಾರುಮಳೆ" ಚಿತ್ರ. ತದನಂತರ ನಿರ್ದೇಶಿಸಿದ "ಗಾಳೀಪಟ" ಸಹ ಯಶಸ್ಸು ಪಡೆಯಿತು. ಈಗ "ಮನಸಾರೆ" ಎಂಬ ನೂತನ ಚಿತ್ರದೊಂದಿಗೆ ಬರುತ್ತಿದ್ದಾರೆ. ಚಿತ್ರಕಥೆ-ಸಂಭಾಷಣೆ-ಗೀತಸಾಹಿತ್ಯ-ನಿರ್ದೇಶನ ಎಲ್ಲವನ್ನೂ ನಿಬಾಯಿಸಿರುವ ಭಟ್ಟರು ಮನಸಾರೆಯನ್ನು ವಿಭಿನ್ನವಾಗಿ ನಿರ್ದೇಶಿಸಿದ್ದಾರಂತೆ. ಮನಸಾರೆ ಇದೇ ಶುಕ್ರವಾರ(ಸೆ.25)ದಂದು ರಾಜ್ಯಾಧ್ಯಂತ ತೆರೆಗೆ ಬರಲಿದೆ. ಈ ಸಂಧರ್ಭದಲ್ಲಿ ಅವರು ಪತ್ರಿಕೆಗೆ ವಿಶೇಷ ಸಂದರ್ಶನ ನೀಡಿದರು.
**ಒಂದೂವರೆ ವರ್ಷದ ಗ್ಯಾಪ್ ನಲ್ಲಿ ಸಿನಿಮಾ ಮಾಡ್ತಾ ಇದೀರಿ, ಈ ಮಧ್ಯೆ ಲಗೋರಿ ಪ್ರಾಜೆಕ್ಟ್ ರದ್ದಾಯಿತು..
  • ಹೌದು ನಿರ್ದೇಶಕನಾದ ನನಗೆ ಅಂತಹದ್ದೊಂದು ಗ್ಯಾಪ್ ಬೇಕಾಗುತ್ತೆ, ಎಲ್ಲ ಹಂತದಲ್ಲೂ ಎಚ್ಚರವಹಿಸಿ ಕೆಲಸ ಮಾಡಬೇಕಲ್ವಾ?
**ಮನಸಾರೆ ಚಿತ್ರ ಹೇಗಿದೆ ? ಅದರ ಥೀಮ್ ಏನು?
  • ಮನಸಾರೆ ಪ್ರೆಶ್ ಆಗಿದೆ, ನಾನಂದು ಕೊಂಡಂತೆ ಚಿತ್ರಕ್ಕೆ ಎಲ್ಲವೂ ಕೂಡಿ ಬಂದಿದೆ. ನನ್ನ ಇತರೆ ಚಿತ್ರಗಳಿಗಿಂತ ಭಿನ್ನವಾಗಿದೆ. ಯಂಗ್ ಫೀಲ್ ಇದೆ, ಸಂಭಾಷಣೆ ಗಮನ ಸೆಳೆಯುವಂತಿದೆ. ಚಿತ್ರಕ್ಕೆ ಪೂರಕವ಻ದ ಪರಿಸರದಲ್ಲೂ ಹೊಸತನವಿದೆ. ಥೀಮ್ ಚಿತ್ರ ನೋಡಿ ತಿಳ್ಕೊಳ್ಳಿ.
**ಮನಸಾರೆ ಪ್ರೇಮ ಕಥೇನಾ?
  • ಹೌದು ಪ್ರೇಮ ಕಥೇನೇ.. ಈ ಚಿತ್ರ ಪ್ರೇಕ್ಷಕರನ್ನು ವಿಪರೀತ ನಗಿಸುತ್ತೆ ಮತ್ತೆ ವಿಪರೀತ ಅಳಿಸುತ್ತೆ. ಆದರೆ ಕಥೆ ಬಗ್ಗೆ ಹೇಳಲ್ಲ, ಸಿನಿಮಾ ನೋಡಿ.
**ನಿಮ್ಮ ಹಿಂದಿನ ಚಿತ್ರಗಳಲ್ಲಿ ಗಣೇಶ್ ಇದ್ರು ಇಲ್ಲಿ ದಿಗಂತ್ ಇದ್ದಾರಲ್ಲ?
  • ಮನಸಾರೆ ಚಿತ್ರದ ಪಾತ್ರಕ್ಕೆ ದಿಗಂತ್ ಸೂಟಬಲ್ ಬಾಯ್ ಅನಿಸ್ತು. ಇದು ಗಣೇಶ್ ಗೆ ಹೊಂದುವಂತಹ ಪಾತ್ರವಲ್ಲ, ನನ್ನ ಎರಡು ಸಿನಿಮಾಗಳಲ್ಲಿ ದಿಗಂತ್ ನಟಿಸಿದ್ದ, ಇಲ್ಲಿ ಪೂರ್ಣ ಪ್ರಮಾಣದ ನಾಯಕನಾಗಿ ನಟಿಸಿದ್ದಾನೆ ಪಾತ್ರ ನಿರ್ವಹಣೆ ಚೆನ್ನಾಗಿ ಮಾಡಿದ್ದಾನೆ.
**ಚಿತ್ರದ ಪರಿಸರದ ಬಗ್ಗೆ ಹೇಳಿ
  • ಉತ್ತರ ಕರ್ನಾಟಕದ ಬಯಲು ಸೀಮೆ, ಗಂಗಾವತಿ, ಸಂಡೂರು ಗಳಲ್ಲಿ ಹಾಡಿನ ಚಿತ್ರೀಕರಣವಾಗಿದೆ. ಉಳಿದ ಮಾತಿನ ಭಾಗವನ್ನು ಮೈಸೂರು, ಮಡಿಕೇರಿ, ಮಂಡ್ಯ, ಕಾರಾವಾರ ಮತ್ತು ಬೆಂಗಳೂರಿನ ಸ್ಟುಡಿಯೋಗಳಲ್ಲಿ ಮಾಡಿದ್ದೇನೆ ಎಲ್ಲವೂ ಚೆನ್ನಾಗಿ ಒಡಮೂಡಿದೆ, ಪ್ರೇಕ್ಷಕರಿಗೂ ಇಷ್ಟವಾಗಬಹುದು.
**ಮನಸಾರೆಯಲ್ಲಿ ಏನೋ ನಿಮ್ಮ ಹೊಸಕಲ್ಪನೆಗಳು ಇವೆ ಎಂಬ ಸುದ್ದಿ ಇತ್ತು.
  • ನನ್ನ ಹುಟ್ಟೂರು ಹಾನಗಲ್, ಅಲ್ಲಿನ ಪರಿಸರದಲ್ಲಿ ನಾನು ಕಂಡ ಕನಸು ಅಂದುಕೊಂಡ ಸಾಧ್ಯತೆಗಳನ್ನು ಈ ಚಿತ್ರದಲ್ಲಿ ಸಾಕಾರ ಮಾಡಿಕೊಂಡಿದ್ದೇನೆ. ಈ ಪೈಕಿ ನಾನು ಪದವಿ ವಿದ್ಯಾರ್ತಿಯಾಗಿದ್ದಾಗ ಮಾಡಿದ್ದ ಒಂದು ಪ್ರಾಜೆಕ್ಟ್ ಅನ್ನು ಇಲ್ಲಿ ಸಾಕ್ಷಿಕರಿಸಿದ್ದೇನೆ, ಹೆಚ್ಚು ವಾಹನಗಳು ಓಡಾಡುವ ರಸ್ತೆಯಲ್ಲಿ ಡುಬ್ಬು ನಿರ್ಮಿಸಿ ಅಲ್ಲಿ ಬೀಳುವ ಒತ್ತಡದಿಂದ ವಿದ್ಯುತ್ ಚ್ಚಕ್ತಿ ನಿರ್ಮಿಸಬಹುದೆಂಬ ಕಲ್ಪನೆಯಿತ್ತು. ಅದು ಈಗ ವಾಸ್ತವದಲ್ಲೂ ಸಾಧ್ಯವಿದೆ ಅದರ ಒಂದು ತುಣುಕನ್ನು ಮನಸಾರೆ ಹಾಡಿನ ಸನ್ನಿವೇಶದಲ್ಲಿ ಬಳಸಿದ್ದೇನೆ. ಮತ್ತೆ specific ಆಗಿ ಚಿತ್ರದಲ್ಲಿ ಬರುವ ತಿರುವುಗಳು shocking ಆಗಿವೆ, ಮನಸ್ಸನ್ನು ಆವರಿಸುವಂತಹ ಎಷ್ಟೋ ಸಂಗತಿಗಳಿವೆ.
**ಸಂಗೀತ ಮತ್ತು ಸಾಹಿತ್ಯದಲ್ಲಿ ಹೊಸತೇನಿದೆ?
  • ಮನಸಾರೆಯಲ್ಲಿ ಸರಳ ಸಾಹಿತ್ಯ ಮತ್ತು ಸಂಗೀತವಿದೆ, ಇಲ್ಲಿ ಸಂಪೂರ್ಣ ತಾಕತ್ತು ಬಳಕೆಯಾಗಿದೆ. ಸಿಂಪಲ್ ಮೆಲೋಡಿಯಿದೆ. ಮೊದಲು ನನಗೆ ತುಂಬಾ ಹೆದರಿಕೆಯಾಗಿತ್ತು, ಆದರೆ ಧ್ವನಿ ಸುರುಳಿ ಬಿಡುಗಡೆಯಾಗಿ ಮಾರ್ಕೆಟ್ ಹಿಟ್ ಆಗಿದೆ. ಜನ ಹಾಡುಗಳನ್ನು ಸಂಗೀತವನ್ನು ಇಷ್ಟ ಪಟ್ಟಿದ್ದಾರೆ, ಜಯಂತ್ ಕಾಯ್ಕಿಣಿ ಸಾಹಿತ್ಯ ಮನೋಮೂರ್ತಿ ಸಂಗೀತ ಫೈನ್. ಎಲ್ಲೋ ಮಳೆಯಾಗಿದೆ..... ಎಂಬ ಟ್ರಾಕ್ ತುಂಬಾ ಇಷ್ಟ.
**ಚಿತ್ರೀಕರಣ ಸಂಧರ್ಭ ಹಾಗೂ ಚಿತ್ರದ ನಾಯಕಿ ಬಗ್ಗೆ ಹೇಳಿ?
  • ನಾಯಕಿ ಅಂದ್ರಿತಾ ರೇ ನನ್ನ ನಿರೀಕ್ಷೆಗೂ ಮೀರಿ ಅಭಿನಯ ಮಾಡಿದ್ದಾಳೆ. ಆ ಹುಡುಗಿ ಅಭಿನಯದಲ್ಲಿ ತುಂಬಾ Involvement ತಗೊಂಡಿದ್ದಾಳೆ.ರೋಮ್ಯಾಂಟಿಕ್ ಸೀನ್ ನಲ್ಲಂತೂ ಸೂಪರ್ ಒಳ್ಳೆ Glamorous ಗೊಂಬೆ ಅವಳು. ಅವಳ ಅಭಿನಯವನ್ನ ನೋಡೀನೇ ಆನಂದಿಸಬೇಕು. ದಿಗಂತ್ ಕೂಡ ವಿಶಿಷ್ಠವಾಗಿ ಅಭಿನಯಿಸಿದ್ದಾನೆ. ಅಂದ್ರಿತಾ ಹಾಗೂ ದಿಗಂತ್ ಕೆಮಿಸ್ಟ್ರಿ ಚೆನ್ನಾಗಿ workout ಆಗಿದೆ.ಎಲ್ಲರೂ ಶ್ರಮವಹಿಸಿ ಚಿತ್ರ ಮಾಡಿದ್ದೇವೆ, ಚಿತ್ರೀಕರಣ ಸಂಧರ್ಭ ೆಲ್ರೂ Normal ಆಗಿದ್ದೆವು. ಕ್ರಿಕೆಟ್ ಆಡಿಕೊಂಡು, ತಮಾಷೆಯಾಗಿ ಕೆಲಸ ಮಾಡಿದ್ವಿ. ನಿರ್ಮಾಪಕರು ನಮಗೆ ಒತ್ತಾಸೆಯಾಗಿ ಇದ್ರು.
**ಮನಸಾರೆ ಸಂದೇಶ ನೀಡುವ ಚಿತ್ರಾನಾ? ಅಥವಾ ಬರೀ ಎಂಟರ್ ಟೈನ್ ಮೆಂಟಾ ?
  • ಹೌದು, ಮನಸಾರೆ ಸಂದೇಶ ನೀಡುವ ಚಿತ್ರ. ತುಂಬಾ ಪವರ್ ಫುಲ್ ಆಗಿದೆ... ಚಿತ್ರ ನೋಡಿ. ಮನಸಾರೆ ಚಿತ್ರವನ್ನು ಮನಸಿಟ್ಟು ಮಾಡಿದ್ದೇನೆ, ಸಹೃದಯ ಪ್ರೇಕ್ಷಕರಿಗೆ ಅರ್ಪಿಸುತ್ತಿದ್ದೇನೆ. ಇದು ಮೂರುವರೆ ಕೋಟಿ ಬಜೆಟ್ ನಲ್ಲಿ ತಯಾರಾದ ಸಿನಿಮಾ, ಪ್ರೇಕ್ಷಕರಿಗೆ ಖಂಡಿತಾ ಇಷ್ಟವಾಗುತ್ತೆ.
**ಚಿತ್ರದ promotion campaign ಏನಾದ್ರೂ..
  • ಹಾಗೇನಿಲ್ಲ, ಸಹಜವಾಗಿ ಕೆಲವು ಟಿವಿ ಮಾಧ್ಯಮಗಳಲ್ಲಿ ಸಂದರ್ಶನ ಇರುತ್ತೆ. ಆದರೆ ಚಿತ್ರ ಓಡಬೇಕು ಎಲ್ಲರಿಗು ಇಷ್ಟವಾಗಬೇಕು... ಆಮೇಲೆ ಅವೆಲ್ಲಾ....
**ಮುಂದಿನ ಚಿತ್ರ ಯಾವಾಗ? ಪುನೀತ್ ನಿಮ್ಮ ಚಿತ್ರದಲ್ಲಿ ನಟಿಸುತ್ತಾರೆ ಎಂಬ ರೂಮರ್ ಇದೆಯಲ್ಲ?
  • ಹೌದು, ಮನಸಾರೆ ಬಿಡುಗಡೆಯಾದ ಮೇಲೆ ಮುಂದಿನ ಚಿತ್ರದ ಸಿದ್ದತೆ ಆಗಲಿದೆ. ಪುನೀತ್ ನನ್ನ ಹೊಸಚಿತ್ರದ ನಾಯಕ ನಾಯಕರಾಗ್ತಾರೆ. ಮುಂದಿನ ವರ್ಷದ ಮೇ-ಜೂನ್ ತಿಂಗಳಲ್ಲಿ ಚಿತ್ರ ಸೆಟ್ಟೇರಲಿದೆ. ಕಡೆಯ ಬಾರಿ ಕೇಳ್ಕೋಳೋದು ಇಷ್ಟೆ, ಮನಸಾರೆ Good Feel ಇರುವ, Fresh Young Team ಇರೋ ವಿಭಿನ್ನ ಅಭಿರುಚಿಯ ಸಿನಿಮಾ, ನೋಡಿ ಆನಂದಿಸಿ ಎಂದು ಮಾತು ಮುಗಿಸಿದರು ಯೋಗರಾಜ್ ಭಟ್

This featured article published in thatskannada.com, I thank to Web Editor Sham Sundar. If you want read web article plz click on this link

http://thatskannada.oneindia.in/movies/headlines/2009/09/25-an-interview-with-yograj-bhat.html

Saturday, September 12, 2009

ಆಧುನೀಕರಣದ ಭರಾಟೆಯಲ್ಲಿ ಸಿದ್ದಾಂತ ಬರೀ ಓಳಾ..?


ತಂಬಾಕಾ...? ಅಯ್ಯೋ ಇದನ್ನಾ.. ನಾವು ಕೀಟನಾಶಕವಾಗಿ ಬಳಸ್ತೀವೀ.! ಇದನ್ನಾ ಬೆಳೆಯೋಕೆ ಸಿಕ್ಕಾಪಟ್ಟೆ ಪೆಸ್ಟಿಸೈಡ್, ಕೆಮಿಕಲ್ ಮೆನ್ಯೂರ್ ಎಲ್ಲಾ ಹಾಕಿ ಬೇಳೀತೀರಲ್ಲಾ ದೇವ್ರೇ.. ಎಂದು ಬೇಸರಿಸಿಕೊಂಡವರು ಶಿರಸಿಯ ಸುನೀತಾ ರಾವ್. ಮೊದಲಿಗೆ ಹೇಳಿಬಿಡ್ತೀನಿ ಸುನೀತಾ ರಾವ್ ಅಂದ್ರೆ ಅಗ್ರಿಕಲ್ಚರ್ ಸೈಟಿಂಸ್ಟ್, ಅವರ ಮುತ್ತಾತ ಅರಕಲಗೂಡು ಮೂಲದವರಂತೆ, ಈ ಸುನೀತಾರಾವ್ ಅವರ ಮೊಮ್ಮಗಳು. ಕರ್ನಾಟಕ ಹಾಗೂ ಪಾಂಡಿಚೆರಿಯ ಯುನಿವರ್ಸಿಟಿಗಳಲ್ಲಿ ಎರಡೆರೆಡು ಸ್ನಾತಕ ಪದವಿ ಎಕಾಲಜಿ, ಸಂಶೋಧನೆ ಹೀಗೆ ಶಿಕ್ಷಣ ಮುಗಿಸಿ ದೆಹಲಿ ಹಾಗೂ ದೇಶದ ವಿವಿಧ ಕೃಷಿ ವಿವಿ ಗಳಲ್ಲಿ ಕೆಲಸ ಮಾಡಿ 38-40 ರ ಹರಯದಲ್ಲಿ ಉತ್ತರ ಕನ್ನಡದ ಶಿರಸಿಯಿಂದ 20ಕಿಮಿ ದೂರದಲ್ಲಿ ಒಂದಷ್ಟು ಜಮೀನು ಖರೀದಿಸಿ ಸಾವಯವ ಕೃಷಿಯ ಕಡೆಗೆ ಹೊರಳಿಕೊಂಡಿದ್ದಾರೆ. ಅಲ್ಲಿ ರೈತ ಮಹಿಳೆಯರನ್ನು ಸಂಘಟಿಸುವ ಮಹತ್ತರವಾದ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ ವನಸ್ತ್ರೀ ಎಂಬ ಹೆಸರಿನ ಆ ಸಂಸ್ಥೆ ಮಲೆನಾಡು ಕೈತೋಟ, ಬೀಜ ಸಂರಕ್ಷಣಾ ಗುಂಪು ರಚಿಸಿಕೊಂಡಿದೆ. ಅಲ್ಲಿ ಸಂಶೋಧನೆಯು ನಿರಂತರ. ಮದುವೆಯ ಬಂಧನಕ್ಕೊಳಗಾಗದೇ ಒಂದು ಸಿದ್ದಾಂತವಿಟ್ಟುಕೊಂಡು ಕಾರ್ಯ ನಿರ್ವಹಿಸುತ್ತಿರುವ ಇವರ ಕಾರ್ಯ ವೈಖರಿಯು ಮೆಚ್ಚುವಂತಹುದೆ. ಕಳೆದ ವರ್ಷ ಜೀ ಕನ್ನಡ ವಾಹಿನಿ ಇವರ ಸಾಧನೆಯನ್ನು ಗುರುತಿಸಿ ಪುರಸ್ಕಾರ ನೀಡಿ ಗೌರವಿಸಿದೆ. ಸದಾ ಕೃಷಿಯಲ್ಲಿ ಪ್ರಯೋಗ ಶೀಲ ಮನಸ್ಸು ಹೊಂದಿರುವ ಇಂತಹ ಸುನೀತಾ ರಾವ್ ಅರಕಲಗೂಡು ಮೂಲದವರಾದರು ಅವರಿಗೆ ಸೇರಿದ ಯಾವುದೆ ಮನೆ, ಜಮೀನು, ಇಲ್ಲವೇ ಗುರುತಿರುವವರು ಈಗ ಇಲ್ಲಿ ಬದುಕುಳಿದಿಲ್ಲ. ಆದರೂ ತಂದೆಯ ಹೆಸರಿನೊಂದಿಗೆ ಅಂಟಿಕೊಂಡಿರುವ ಅರಕಲಗೂಡು ಹೆಸರಿನ ಕುತೂಹಲದಿಂದ ನನ್ನ ಮಿತ್ರ ಜೀ ಕನ್ನಡದ ಮಧುಸೂಧನ ರೊಂದಿಗೆ ಭೇಟಿ ನೀಡಿದ ಸುನೀತಾ ರಾವ್ ಇಲ್ಲಿಯ ಪರಿಸರದ ಬೆಳೆ ನೋಡುವ ಇಚ್ಚೆ ವ್ಯಕ್ತಪಡಿಸಿದರು. ಹಾಗಾಗಿ ಅವರನ್ನು ತಾಲೂಕಿನ ರಾಮನಾಥಪುರದ ಬಳಿಯ ಮಲ್ಲಿನಾಥಪುರದ ಪದ್ಮನಾಭರವರ ಸಾವಯವ ಕೃಷಿಯ ಗದ್ದೆ ಹಾಗೂ ತೋಟ ನೋಡಲು ಹೋದೆವು. ಈ ಪದ್ಮನಾಭ ಒಂಥರಾ ವಿಚಿತ್ರ ವ್ಯಕ್ತಿ ಹಾರಂಗಿ ನಾಲೆಯಲ್ಲಿ ನಿರಂತರವಾಗಿ ಹರಿದು ಬರುವ ನೀರಿನಲ್ಲಿ ಸಮೃದ್ದವಾಗಿ ಕೃಷಿ ಮಾಡುವ ಇವರ ಭತ್ತದ ಗದ್ದೆ ನೂರಾರು ಎಕರೆ ಗದ್ದೆ ಬಯಲಿನ ನಡುವೆ 1-2 ಎಕರೆಯಷ್ಟಿದೆ. ಅಲ್ಲಿ ಇವರು ಭತ್ತವನ್ನು ಸಹಾ ಸಾವಯವ ಮಾದರಿಯಲ್ಲೇ ಬೆಳೆದಿದ್ದಾರೆ. ಸುತ್ತಮುತ್ತಲಿನ ಗದ್ದೆಗಳಿಗೆ ಸಿಕ್ಕಾಪಟ್ಟೆ ರಸಗೊಬ್ಬರ ಹಾಕುತ್ತಾರಂತೆ. ಅಲ್ಲ ಮಾರಾಯ್ರೇ ಇದು ಆಧುನಿಕ ಭರಾಟೆಯ ದಿನಗಳು, ನೀವು ಯಾವುದಾದ್ರೂ ಕಮರ್ಷಿಯಲ್ ಕ್ರಾಪು ತಂಬಾಕಿನಂತಹದ್ದು ಯಾಕೆ ಬೆಳೆದಿಲ್ಲ, ಅದರಲ್ಲಿ ಕೈ ತುಂಬಾ ದುಡ್ಡು ಸಿಕ್ಕುತ್ತಲ್ವಾ? ಅಂದೆ. ಇಲ್ಲ ಸಾರ್ ಅದೇನೋ ಮೊದಲಿನಿಂದಲೂ ನಮಗೆ ಅಂತಹ ಬುದ್ದಿ ಬರಲಿಲ್ಲ ನಮ್ಮ ತಂದೆ, ಅವರ ತಂದೆ ಎಲ್ಲಾ ಅದನ್ನ ಬೆಳೆಯೋದು ಬೇಡ ಬಿಟ್ಟರು ನಾನು ಅದನ್ನೇ ಮುಂದುವರೆಸಿದೆ ಅಷ್ಟೇ ಅಂದ್ರು . ಆಗ ಮಧು ಸೂಧನ್ ಹೇಳಿದ ಮಾತು ಒಂದು ಕ್ಷಣ ಮೌನ ಆವರಿಸುವಂತೆ ಮಾಡಿತು. ಈ ತಂಬಾಕು ಕಟಾವು ಮಾಡಿ ಬೇಯಿಸುತ್ತಾರಲ್ಲಾ ಆಗ ಅಂತಹ ಗ್ರಾಮಗಳಿಗೆ ಭೇಟಿ ನೀಡಿ ನೋಡಬೇಕು, ಊರಿನ ಜನ, ಮನೆ ಜನವೆಲ್ಲ ಒಂಥರಾ ಕಾಮಾಲೆ ರೋಗ ಪೀಡಿತರಂತೆ ಆಗಿರುತ್ತಾರೆ, ಏನು ದುಡ್ಡು ದುಡಿದ್ರೆ ಏನು ಮೈಗೆ ಆರೋಗ್ಯ ಸರೀ ಇಲ್ಲ ಅಂದ್ರೆ ಅಂದ್ರು. ಆ ಮಾತಿನಲ್ಲಿ ಸತ್ಯವೂ ಇತ್ತು. ನೋಡಿ ನಮ್ಮ ಅರಕಲಗೂಡು, ಪಿರಿಯಾಪಟ್ನ ಶಿವಮೊಗ್ಗ ಜಿಲ್ಲೆಯ ಕೆಲವು ಭಾಗಗಳು ಇವೆಯಲ್ಲ ಇಲ್ಲೆಲ್ಲಾ ಅಂತರ ರಾಷ್ಟ್ರೀಯ ಗುಣಮಟ್ಟದ ತಂಬಾಕು ಬೆಳೆಯುತ್ತಾರೆ. ಕಳೆದ ಹತ್ತು ವರ್ಷಗಳಲ್ಲಿ 4-5ಸಾವಿರ ಹೆಕ್ಟೇರುಗಳಲ್ಲಿ ಬೆಳೆಯಲಾಗುತ್ತಿದ್ದ ತಂಬಾಕು. ಈಗ ತಂಬಾಕನ್ನು ನಿಷೇದಿಸುವ ಮಾತು ಶುರು ಮಾಡಿದ ಮೇಲೆ 11500 ಹೆಕ್ಟೇರಿಗೆ ವಿಸ್ತರಿಸಿದೆ, ಸುಮಾರು 5000 ದಷ್ಟು ಅನಧಿಕೃತ ಬೆಳೆಗಾರರಿದ್ದಾರೆ. ಎಲ್ಲಾ ಸೇರಿ 20ಸಾವಿರ ದಷ್ಟು ಆಗಬಹುದೇನೋ.. ಆಂಧ್ರದ ವ್ಯಾಪಾರಿಗಳು ಇಲ್ಲಿಯ ಮಾರುಕಟ್ಟೆಗೆ ದಿವಾನರು.
ತಂಬಾಕಿನ ಚಟದ ತರಹ ಶುಂಠಿಯು ಸಹಾ ಇಲ್ಲಿ ವಿಸ್ತೃತವಾಗಿ ಹರಡಿದೆ ಸಿಕ್ಕ ಸಿಕ್ಕ ಕಡೆಯೆಲ್ಲ ಶುಂಠಿ ಬೆಳೆಯುತ್ತಿದ್ದಾರೆ, ಕಮರ್ಷಿಯಲ್ ಕ್ರಾಪು ಬೆಳೆಯುವ ಭರಾಟೆಯಲ್ಲಿ ಭೂಮಿಗೆ ಬಿಡುವು ಸಿಗುತ್ತಿಲ್ಲ ಪರಿಣಾಮ ಮಣ್ಣಿನ ರೆಸಿಸ್ಟೆನ್ಸ್ ಪವರ್ರೆ ಹೋಗಿಬಿಟ್ಟಿದೆ. ಇನ್ನೂ ಪಿ ಹೆಚ್ ವ್ಯಾಲ್ಯೂ ಬಗ್ಗೆ ಏನೂ ಹೇಳೋಕಾಗಲ್ಲ ಬಿಡಿ. ಇದೇ ಬಾಗದ ರುದ್ರಪಟ್ಟಣದಲ್ಲಿ ನನ್ನ ಹಿರಿಯ ವೈದ್ಯ ಮಿತ್ರರಾದ ನಾಗರಾಜ್ ಎಂಬುವವರು ಇದ್ದಾರೆ, ಓದಿದ್ದು ವೈದ್ಯ ಪದವಿಯಾದರೂ ಹೆಚ್ಚಿನ ಭಾಗ ತೊಡಗಿಸಿಕೊಂಡದ್ದು ಕೃಷಿಯಲ್ಲಿ ಅವರು ಇದುವರೆಗೂ ಅವರ ತೋಟ ಮತ್ತು ಜಮೀನಿಗೆ ಒಂದು ಬಾರಿಯೂ ರಸಗೊಬ್ಬರ ಹಾಕಿಲ್ಲವಂತೆ ರಾಗಿ, ಭತ್ತ, ಹುರುಳಿ, ಹಲಸಂದೆ ಬಿಟ್ಟರೆ ಅವರ ಜಮೀನಿನಲ್ಲಿ ಇದುವರೆಗೂ ಆಲೂಗಡ್ಡೆ, ಶುಂಠಿ ಹಾಗೂ ತಂಬಾಕು ಬೆಳೆದಿಲ್ಲ. ಅಕ್ಕಪಕ್ಕದವರು, ಹೊರಗಿನವರು ಬಂದು ಎಷ್ಟೇ ಒತ್ತಡ ಹೇರಿದರೂ ತಮ್ಮ ನಿಲುವನ್ನು ಅವರು ಬದಲಾಯಿಸಿಲ್ಲವಂತೆ, ಇದೇ ಭಾಗದ ರಾಮನಾಥಪುರದ ಕೃಷ್ಣ ಎಂಬ ರೈತ ಹೊಸ ಹೊಸ ಪ್ರಯೋಗ ಮಾಡುತ್ತ ಸಾವಯವ ಕೃಷಿಗೆ ಮಾರುಹೋಗಿ ಏಕಾಂಗಿ ಬ್ರಹ್ಮಾಚಾರಿಯಾಗಿ ಉಳಿದುಬಿಟ್ಟಿದ್ದಾರೆ, ಕೃಷಿ ಅವರನ್ನು ಅಷ್ಟರ ಮಟ್ಟಿಗೆ ಸೆಳೆದಿದೆ. ಆದರೂ ಸುತ್ತಲಿನ ಜನರಿಗೆ ಈ ಕೃಷ್ಣ , ನಾಗರಾಜ್, ಪದ್ಮನಾಭ ತರಹದವರು ಹುಚ್ಚರ ತರಹ ಕಾಣಿಸುತ್ತಾರೆ ಯಾಕೆಂದ್ರೆ ಅವರು ನಂಬಿದ ಸಿದ್ದಾಂತ ಬಿಟ್ಟಿಲ್ಲ.
ಇನ್ನೊಬ್ಬರು ನಮ್ಮೂರಿನವರೇ ಆದ ಯೋಗಾರಮೇಶ್ ಬೆಂಗಳೂರಿನಲ್ಲಿ ಸರ್ಕಾರಿ ನೌಕರಿಯಲಿದ್ದಾರಾದರೂ ವಾರದ 2ದಿನಗಳಲ್ಲಿ ಹಾಜರಾಗುವುದು ಕೃಷಿ ತೋಟಗಳಿಗೆ, ಜಮೀನುಗಳಿಗೆ. ಪ್ರವಾಸ ನಿಮಿತ್ತ ರಾಜ್ಯದ ಯಾವ ಭಾಗಕ್ಕೆ ಹೋದರು ವಿವಿಧ ಜಾತಿಯ, ವಿವಿಧ ತಳಿಯ ಗಿಡಗಳನ್ನು ತಂದು ಬೆಳೆಸುವುದು ಇವರಿಗೆ ರೂಡಿಯಾಗಿದೆ, ಕಳೆದ ಒಂದೆರೆಡು ವರ್ಷಗಳಿಂದ ವೃಕ್ಷ ಬೆಳೆಸುವ ಆಂಧೋಲನವನ್ನೆ ಆರಂಭಿಸಿ ಬಿಟ್ಟಿದ್ದಾರೆ. ತಾಲೂಕಿನ ಪ್ರತೀ ಹಳ್ಳಿಗೆ ತೆರಳುವುದು ಬೆಲೆ ಬಾಳುವ ಗಿಡಗಳನ್ನು ಉಚಿತವಾಗಿ ರೈತರಿಗೆ ವಿತರಿಸುವುದು, ವಿತರಿಸ ಮೇಲೆ ಅದು ಪಾಲನೆಯ ಯಾವ ಹಂತದಲ್ಲಿ ಇದೆ ಎಂದು ನೋಡುವುದು ಇವರ ಕಾಯಕ. ಇನ್ನು ಆಲೂಗಡ್ಡೆ ಬೆಳೆಯುವುದು ನಮ್ಮಲ್ಲಿ ರೂಡಿಗತ ವಾದುದು. ಕಳೆದ ಬಾರಿ ಹಾಸನ ಜಿಲ್ಲೆಯಲ್ಲಿ 40ಸಾವಿರ ಹೆಕ್ಟೇರು ಆಲೂ ನಾಶವಾದರೂ ಈ ಬಾರಿ ಮತ್ತೆ 18ಸಾವಿರ ಹೆಕ್ಟೇರುಗಳಲ್ಲಿ ಆಲೂಗಡ್ಡೆ ಬೆಳೆಯಲಾಗಿದೆ. ನಷ್ಟವಾದರೂ, ರೋಗ ಬರುತ್ತದೆ ಎಂದು ತಿಳಿದಿದ್ದರೂ ಆಲೂಗಡ್ಡೆಯನ್ನು ಬೆಳೆಯುವ ಪದ್ದತಿಯನ್ನು ನಮ್ಮ ರೈತರು ಬಿಟ್ಟಿಲ್ಲ ಈ ದಿಸೆಯಲ್ಲಿ ಯೋಗಾರಮೇಶ್ ಸಮಸ್ತ ರೈತರನ್ನು ಕಲೆಹಾಕುವ ಕೆಲಸ ಆರಂಭಿಸಿದ್ದಾರೆ. ರೈತರನ್ನು ಪ್ರೊತ್ಸಾಹಿಸುವ, ವಿಜ್ಞಾನಿಗಳಿಂದ ಅಗತ್ಯ ತಿಳುವಳಿಕೆಯನ್ನು ಸಮಯಾನು ಸಂಧರ್ಭ ನೀಡುವ ಕ್ರಿಯೆಯನ್ನು ಜಾರಿಯಲ್ಲಿಡುವ ಪ್ರಯತ್ನ ಮಾಡುತ್ತಿದ್ದಾರೆ. ನನ್ನ ಜೊತೆ ಗಂಗೋತ್ರಿಯಲ್ಲಿ ಪತ್ರಿಕೋಧ್ಯಮ ಕಲಿಯುತ್ತಿದ್ದ ಸ್ನೇಹಿತರೊಬ್ಬರು ಸಿಕ್ಕಿದ್ದರು. ಅವರು ಸರ್ಕಾರಿ ನೌಕರಿಯಲ್ಲಿದ್ದರೂ ಹಾಸನದ ಮನೆ ಮಠ ಮಾರಿ ಹಳೇಬೀಡಿನ ಸಮೀಪದಲ್ಲೆಲ್ಲೋ ಜಮೀನು ತೋಟ ಖರೀದಿಸಿ ಅಲ್ಲೆ ಸೆಟ್ಲ್ ಆಗಿದ್ದಾರಂತೆ ೧೫-೨೦ ಹಸುಕಟ್ಟಿ ಹೈನುಗಾರಿಕೆಯನ್ನು ಮಾಡುತ್ತಾರಂತೆ ಸರ್ಕಾರಿ ಉದ್ಯೋಗಕ್ಕಿಂತ ಕೃಷಿ ಕೆಲಸವೇ ಖುಷಿ ಕೊಡುವ ಬದುಕಂತೆ. ಮದಲಾಪುರ ಗ್ರಾಮವಿದೆ ಅಲ್ಲಿ ಸುಮಾರು 80ಎಕರೆಯಷ್ಟು ಖಾಲಿ ಜಮೀನಿದೆ ಅಲ್ಲಿನ ಜನ ಸದರಿ ಸ್ಥಳದಲ್ಲಿ ಮನೆಗಿಷ್ಟು ಎಂದು ದುಡ್ಡು ಎತ್ತಿ ಗಿಡ ನೆಡುವ ಕೆಲಸ ಮಾಡುತ್ತಿದ್ದಾರೆ, ಅದೇ ಗ್ರಾಮದ ರಂಗಸ್ವಾಮಿ ಎಂಬುವವರು ೫-6ಸಾವಿರ ಗಿಡಗಳನ್ನು ಉಚಿತವಾಗಿ ಕೊಡಿಸಿದ್ದಾರೆ ಅಷ್ಟೇ ಅಲ್ಲ ಮೇಲುಸ್ತುವಾರಿ ನಡೆಸಿದ್ದಾರೆ, ಇದನ್ನೆಲ್ಲ ಯಾರು ಅವರಿಗೆ ಹೇಳಿಕೊಟ್ಟಿಲ್ಲ, ಇದಕ್ಕೆಲ್ಲ ಯಾವ ಸರ್ಕಾರಿ ಯೋಜನೆಗಳು ಬಳಕೆಯಾಗಿಲ್ಲ. ಹೀಗೆ ಹೇಳುತ್ತಾ ಹೋದರೆ ಹಲವರು ಸಿಗುತ್ತಾರೆ. ಆದರೆ ಲಕ್ಷಾಂತರ ಮಂದಿಯ ಪೈಕಿ ಅಂತಹವರು ಕೇವಲ ೫-೧೦% ನಷ್ಟು.
ಇದೆಲ್ಲಾ ನೋಡಿ ನನಗನ್ನಿಸಿದ್ದು ಆಧುನಿಕ ಜಗತ್ತಿನ ಆದ್ಯತೆಗಳು ಬದಲಾದಂತೆ ಮನುಷ್ಯನ ನಡವಳಿಕೆಗಳಲ್ಲು ಕಾಲಾನುಕಾಲಕ್ಕೆ ಬದಲಾವಣೆ ಅನಿವಾರ್ಯವೇ? ಬದಲಾಗದಿದ್ದರೆ ಎಂಥಹ ಪರಿಸ್ಥಿತಿ, ಬದಲಾಯಿಸುವ ಹಠತೊಟ್ಟವರನ್ನು ಅಥವ ಬದಲಾವಣೆಗೆ ಒಳಪಡದವರನ್ನು ಸಮಾಜವಾದರೂ ಯಾಕೆ "ಹುಂಬ"ತನವೆನ್ನಬೇಕು. ಅಲ್ವಾ? ಮೊನ್ನೆ ಸಂಘಟನೆಯೊಂದರೆ ಕಾರ್ಯಕರ್ತರು ರಸ್ತೆಯೊಂದರ ದುಸ್ಥಿತಿ ಕಂಡು ದಾನಿಗಳಿಂದ (ಕಂಟ್ರಾಕ್ಟರುಗಳಿಂದ) ಜೆಲ್ಲಿ ಪಡೆದು ರಸ್ತೆ ಗುಂಡಿ ಮುಚ್ಚಿದರು ಅದನ್ನು ಕಂಡ ಬೇರೆ ಬಾಗದ ಕೆಲ ಮಂದಿ ನಮ್ಮ ಮನೆ ಮುಂದಿನ ರಸ್ತೆ ಗುಂಡಿ ಬಿದ್ದಿದೆ ಅದನ್ನು ಮುಚ್ಚಿ ಎಂದರಂತೆ..! ಸಮಾಜದ ಮನಸ್ಥಿತಿ ಹೀಗಾದರೆ ಬದಲಾವಣೆಯಾದರೂ ಹೇಗೆ ? ನಮ್ಮ ಸಿದ್ದಾಂತಗಳಿಗೇಕೆ ಬೆಲೆ ಇಲ್ಲಾ ಅಥವ ಇದೆಲ್ಲಾ ಓಳಾ? ಒಂದು ಜಾಗೃತ ಹೋರಾಟ ನಡೆದರೆ ಅಲ್ಲಿ ಏನೋ ಲಾಭವಿದೆ ಅದಕ್ಕೆ ಎಂದು ಬಾವಿಸುವವರೇ ಹೆಚ್ಚು, ಹೀಗೆ ಆದುನಿಕ ಜನರ ಮನಸ್ಥಿತಿ ಇದ್ದರೆ ಭವಿಷ್ಯದಲ್ಲಿ ನಮಗೆ ಉಳಿಗಾಲ ಉಂಟೆ?

Friday, September 4, 2009

ಶಿಕ್ಷಕರ ಸ್ಥಿತಿ ಏನಾಗಿದೆ ಗೊತ್ತಾ ???

ಈ ಮಾಸವಿಡೀ ಶಿಕ್ಷಕರ ದಿನಾಚರಣೆ, ಶಿಕ್ಷಕರನ್ನು ಸ್ಮರಿಸುವ ಗೌರವಿಸುವ ಸುದಿನ. ದಿನಾಚರಣೆಯ ಮುನ್ನಾ ದಿನ ಪತ್ರಿಕೆಗಳಲ್ಲಿ ಪ್ರಕಟವಾಗುವ ಲೇಖನಗಳು, ಸಮಾರಂಭ ಗಳಲ್ಲಿ ಪಾಲ್ಗೊಳ್ಳುವ ಗಣ್ಯರು ಎಲ್ಲರೂ ಶಿಕ್ಷಕರನ್ನು ಸ್ತುತಿಸುವವರೇ. ಕಾರ್ಯಕ್ರಮಕ್ಕೆ ಬಂದ ಕೆಲ ಗಣ್ಯರೆನಿಸಿಕೊಂಡವರಿಂದ ಉಚಿತ ಗೀತೋಪದೇಶ ಬೇರೆ. ಕರೆಸಿದ ತಪ್ಪಿಗೆ ಅದನ್ನು ಸಹಿಸಿಕೊಳ್ಳುವ ದುರ್ಗತಿ ಶಿಕ್ಷಕರದ್ದು. ಶಿಕ್ಷಕರನ್ನು ಗೌರವಿಸುವ ವೇದಿಕೆಗಳಲ್ಲೂ ರಾಜಕಾರಣಿಗಳದ್ದೇ ಕಾರುಬಾರು ಇರುತ್ತದೆ. ಶಾಲಾ-ಕಾಲೇಜುಗಳ ಎಲ್ಲಾ ಸಮಾರಂಭಗಳಲ್ಲೂ ದಾಂಗುಡಿ ಇಡುವ ರಾಜಕಾರಣಿಗಳು ಇಂತಹ ಸ್ಮರಣೀಯ ದಿನಗಳಲ್ಲಾದರೂ ಸಾಧನೆ ಮಾಡಿದ ಶಿಕ್ಷಕರು, ಹಿರಿಯ ಶಿಕ್ಷಕರುಗಳು ಮಾತ್ರ ವೇದಿಕೆಯಲ್ಲಿ ಕೂರಿಸಿ ರಾಜಕಾರಣಿಗಳು ಮತ್ತು ಇತರೆ ಗಣ್ಯರು ವೇದಿಕೆಯ ಕೆಳಗೆ ಕುಳಿತು ಸಹಕರಿಸಿದರೆ ಶಿಕ್ಷಕರ ದಿನಾಚರಣೆಗೂ ಒಂದು ಅರ್ಥ ಬಂದೀತು.

ಶಿಕ್ಷಕ ವೃತ್ತಿ ಜಗತ್ತಿನೆಲ್ಲೆಡೆ ಗೌರವಿಸಲ್ಪಡುವಂತಹದ್ದು, ಸಮಾಜದ ವಿವಿಧ ಸ್ಥರಗಳಲ್ಲಿ ಹಂಚಿ ಹೋಗುವ ಕೋಟ್ಯಾಂತರ ವ್ಯಕ್ತಿತ್ವಗಳನ್ನು ಸೃಷ್ಟಿಸುವ ಸಂಚಲನಾತ್ಮಕ ಕ್ರಿಯೆಯಲ್ಲಿ 'ಗುರು' ಸದಾ ನಿರತ. ಬದುಕುಗಳನ್ನು ರೂಪಿತವಾಗುವ ಮುನ್ನಾ ದಿನಗಳಲ್ಲಿ ಅಕ್ಷರದ ಅಕ್ಕರೆಯನ್ನು ಕಲಿಕೆಯ ಸೊಬಗನ್ನು ಭಾವನಾತ್ಮಕವಾಗಿ ಚಿಂತನ-ಮಂಥನಗಳನ್ನು ಸೃಷ್ಟಿಸುವ ಗುರು, ಮಾರ್ಗದರ್ಶಿಯಾಗಿ ಆಪ್ತಮಿತ್ರನಾಗಿ, ಸಹೋದರನಾಗಿ, ಮಾತಾ-ಪಿತರಿಗಿಂತ ಹೆಚ್ಚು ಸ್ಪಂದನೆಗೆ ಸಿಗುವ ಏಕೈಕ ವ್ಯಕ್ತಿಯಾಗಿರುತ್ತಾನೆ.

ಹಿಂದಿನ ಪರಿಸರದಲ್ಲಿ ಗುರುವಿಗೆ ಇದ್ದ ಸ್ಥಾನ-ಮಾನ-ಆದ್ಯತೆಗಳು ಇಂದಿನ ಆಧುನಿಕ ಪರಿಸರದಲ್ಲಿ ಇರುವ ಸ್ಥಾನ-ಮಾನ-ದ್ಯತೆಗಳಿಗೆ ಹೋಲಿಸಿದರೆ ಅಜಗಜಾಂತರ ವ್ಯತ್ಯಾಸವಿದೆ. ಶಿಕ್ಷಕರನ್ನು ಸಮಾಜ ನೋಡುವ ನೋಟ ಬದಲಾಗಿದೆ. ಅದಕ್ಕೆ ಹತ್ತು ಹಲವು ಕಾರಣಗಳು ಇರಬಹುದು. ಮೊದಲಾದರೆ ಶಿಕ್ಷಕ ಎನಿಸಿಕೊಂಡವರಿಗೆ ಅರ್ಪಣಾ ಮನೋಭಾವ ಇತ್ತು. ಈಗ ಆ ಭಾವ ಬದಲಾಗಿದೆ. ಹೀಗಾಗಲು ವ್ಯವಸ್ಥೆಯ ದೋಷಗಳು ಕಾರಣ ಇರಬಹುದು. ಹ಻ಗಾಗಿಯೇ ಇಂದು ಶಿಕ್ಷಕ ವೃತ್ತಿಯಲ್ಲಿ ಸಂಪೂರ್ಣವಾಗಿ ಪಾವಿತ್ರತೆ ಕಾಣುವುದು ಸಾಧ್ಯವಿಲ್ಲ. ಇಂತಹ ಬೆಳವಣಿಗೆಯಿಂದ ಶಿಕ್ಷಕ ವೃತ್ತಿಯಲ್ಲಿರುವ ಎಷ್ಟೋ ಮಂದಿ ವೃತ್ತಿಯನ್ನೇ ತೊರೆದು ಬೇರೆ ಕೆಲಸಗಳಿಗೆ ಹೋಗುವ ಚಿಂತನೆಯಲ್ಲಿರುತ್ತಾರೆ. ಬದಲಾದ ಪರಿಸರ ಇಂತಹದ್ದಕ್ಕೆ ಒತ್ತು ನೀಡುತ್ತದೆ.

ಶಿಕ್ಷಕನಾಗಿ ನೇಮಕವಾಗುವ ವ್ಯಕ್ತಿಯ ಹೆಗಲನ್ನು ಹತ್ತು ಹಲವು ಜವಾಬ್ದಾರಿ ಹೇರಿಕೊಳ್ಳುತ್ತವೆ ಮತ್ತು ಅಣಕಿಸಲಾರಂಬಿಸುತ್ತವೆ. ಶಿಕ್ಷಕರಿಗೆ ಯೋಜನಾ ಹೊರೆ ಜಾಸ್ತಿಯಾಗಿದೆ. ಶಿಕ್ಷಣದ ಗುಣಮಟ್ಟ ಕಾಯ್ದು ಕೊಳ್ಳುವುದು ಸಾಧ್ಯವಾಗುತ್ತಿಲ್ಲ. ಕಾಲಕಾಲಕ್ಕೆ ಇಲಾಖಾಧಿಕಾರಿಗಳು ಬೇಡುವ ವರದಿನೀಡಲಾಗುತ್ತಿಲ್ಲ. ಶಾಲಾ ಸಮಿತಿಗಳ ಗೂಂಡಾ ವರ್ತನೆ, ಯಾವುದೇ ಇಲಾಖಾಧಿಕಾರಿಯೂ ಸಹಾ ಯಾವುದೇ ಶಾಲೆಗೆ ಭೇಟಿ ನೀಡಿ ತಪಾಸಣೆ ಮಾಡುವ ಅಧಿಕಾರ ಿರುವಾಗ ಮುಕ್ತ ವಾತಾವರಣದಲ್ಲ ಶಿಕ್ಷಕರು ಕಾರ್ಯ ನಿರ್ವಹಿಸುವುದಾದರೂ ಹೇಗೆ ? ಪ್ರಸಕ್ತ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ಶಿಕ್ಷಕನೂ 15ಕ್ಕೂ ಹೆಚ್ಚು ತರಬೇತಿಗಳು ಮತ್ತು ಯೋಜನಾ ಅನುಷ್ಠಾನಗಳಲ್ಲಿ ಪಾಲ್ಗೊಳ್ಳಬೇಕಾಗುತ್ತದೆ.

ಶೈಕ್ಷಣಿಕ ವರ್ಷದ ಆರಂಭದಿಂದಲೇ ಅಕ್ಷರ ದಾಸೋಹ, ಪ್ರತಿಬಾ ಕಾರಂಜಿ, ಕ್ರೀಡಾಕೂಟ, ಶಾಲಾ ಕಟ್ಟಡ ನಿರ್ಮಾಣ, ಗೈರು ಹಾಜರಾತಿ ಆಂಧೋಲನ, ಸಮುದಾಯದತ್ತ ಶಾಲೆ, ನನ್ನೊಳಗಿನ ನಾನು,ಜೀವನ ವಿಜ್ಞಾನ, ಜೀವನ ಶಿಕ್ಷಣ,ಆಂಗ್ಲಭಾಷೆ ತರಭೇತಿ, ಚೈತನ್ಯ, ತರಣಿ-1, ತರಣಿ-2, ನಲಿಕಲಿ, ಬಹುಮುಖಿ, ರಂಗಕಲೆ, ಕ್ರಿಯಾ ಸಂಶೋಧನೆ, ವಿಷಯ ಸಂಪದ್ದೀಕರಣ, ಗಣಕ ತರಭೇತಿ, ಮೂಲಭೂತ ಸೌಕರ್ಯಾಭಿವೃದ್ದಿ, ಕಟ್ಟಡಗಳ ನವೀಕರಣ, ಶಾಲಾಭಿವೃದ್ದಿ ಸಮಿತಿ, ಜನಗಣತಿ, ಮಕ್ಕಳ ಗಣತಿ ಹೀಗೆ ಒಂದೇ ಎರಡೇ? ವರ್ಷವಿಡೀ ಬಿಡುವಿಲ್ಲದಂತೆ ಹೀಗೆ ಶಿಕ್ಷಕ ಪಾಲ್ಗೊಂಡರೆ ಅದೆಷ್ಟರ ಮಟ್ಟಿಗೆ ಮಕ್ಕಳಿಗೆ ಪಾಠ ಹೇಳಿಕೊಡಲು ಸಾಧ್ಯ? ಗುಣಮಟ್ಟ ಕಾಯ್ದು ಕೊಳ್ಳುವುದು ಹೇಗೆ? ಶಿಕ್ಷಕರನ್ನು ಹೈರಾಣ ಮಾಡುವ ಇಂತಹ ಯೋಜನೆಗಳು, ಉಸ್ತುವಾರಿಗಳು ಬೇಕೆ? ಶಿಕ್ಷಣದ ಅಭಿವೃದ್ದಿಗೆ ವಿಶ್ವಬ್ಯಾಂಕ್ ನೆರವು ನೀಡುತ್ತದೆ. ಪೊಗದಸ್ತಾಗಿ ಅಲ್ಲಿಂದ ಬರುವ ಹಣವನ್ನು ಥೈಲಿಗೆ ತುಂಬಿಸಿಕೊಳ್ಳುವ ನಿಟ್ಟಿನಲ್ಲಿ ಮಂತ್ರಿ ಮಹೋದಯರು ಹಾಗೂ ಹಿರಿಯ ಐ ಎ ಎಸ್ ಅಧಿಕಾರಿಗಳು ತಳಮಟ್ಟದಲ್ಲಿ ಏನಾಗುತ್ತಿದೆ ಎಂಬುದರ ಅರಿವಿಲ್ಲದೆ ಯೋಜನೆಯನ್ನು ಜಾರಿಗೆ ತರುತ್ತಾರೆ. ಅದೂ ಸಾಲದೆಂಬಂತೆ ಕ್ಷೆತ್ರ ಶಿಕ್ಷಣಾಧಿಕಾರಿಗಳ ಅಧಿಕಾರವನ್ನು ವಿಕೇಂದ್ರೀಕರಣಗೊಳಿಸಿ ಅನೇಕ ಉಪ ಹುದ್ದೆಗಳನ್ನು ಸೃಷ್ಟಿಸಲಾಗಿದೆ, ಅಲ್ಲಿಗೂ ಪಾಠ ಹೇಳುವ ಶಿಕ್ಷಕರನ್ನೇ ನೇಮಿಸಲಾಗಿದೆ. ಈ ಬೆಳವಣಿಗೆಯಂತೂ ಶಿಕ್ಷಕರಿಗೆ ನುಂಗಲಾರದಂತಹ ತುತ್ತಾಗಿದೆ. ಇಲಾಖೆಯು ಜಾರಿಗೆ ತರುವ ಯೋಜನೆಗಳ ಬಗ್ಗೆ ಕನಿಷ್ಟ ತಿಳುವಳಿಕೆಯಿಲ್ಲದ ವ್ಯಕ್ತಿಗಳು ಸಹಾ ಶಾಲಾಭಿವೃದ್ದಿ ಸಮಿತಿಯಲ್ಲಿ ಸೇರಿ ಶಿಕ್ಷಕರನ್ನು ನಿಯಂತ್ರಣದಲ್ಲಿಡ ಬಯಸುತ್ತಾರೆ.ರಾಜಕೀಯ ಬೆರೆಸುತ್ತಾರೆ. ಇವೆಲ್ಲಾ ಸೇರಿ ಶಿಕ್ಷಕರನ್ನು ಹಿಂಡಿ ಹಿಪ್ಪೆ ಮಾಡಿ ಬಿಡುತ್ತವೆ.

ಶಿಕ್ಷಕ ಸಮುದಾಯದಲ್ಲಿ ವೃತ್ತಿಗೆ ಅಗೌರವ ತಂದು ಕೊಡುವಂತೆ ನಡೆದುಕೊಳ್ಳುವ ಮಂದಿಯೂ ನಮ್ಮ ನಡುವೆ ಇದ್ದಾರೆ. ಕುಡಿತ, ತಂಬಾಕು, ಇಸ್ಪೀಟು, ಕೇರಂ, ಕಾಮ, ರಾಜಕೀಯ ಹೀಗೆ ಎಲ್ಲವೂ ಬೆರೆತ ಶಿಕ್ಷಕರೂ ಇಡೀ ಸಮುದಾಯಕ್ಕೆ ಕಂಟಕ ಪ್ರಾಯರು, ಅವರ ಸಂಖ್ಯೆ ಕಡಿಮೆ ಎನ್ನುವುದು ನೆಮ್ಮದಿಯ ಸಂಗತಿಯಾಗಿದೆ. ಇದೆಲ್ಲಾ ಒತ್ತಟ್ಟಿಗಿರಲಿ ಶಿಕ್ಷಕ ಸಮುದಾಯವನ್ನು ಅನಗತ್ಯವಾಗಿ ಹಾಡಿ ಹೊಗಳುವುದನ್ನು ಬಿಟ್ಟು ಅವರ ಸಮಸ್ಯೆಗಳನ್ನು ಆಲಿಸಿ-ಮುಕ್ತ ವಾತಾವರಣದಲ್ಲಿ ಶಿಕ್ಷಕ ವೃತ್ತಿಯನ್ನು ನಿರ್ವಹಿಸಲು ಅವಕಾಸ ಮಾಡಿದರೆ ಅದಕ್ಕಿಂತ ಬೇರೆ ಗೌರವ ಬೇಕಿಲ್ಲ ಅಲ್ಲವೇ? ಅಂದ ಹಾಗೆ ನಿಮ್ಮ ಬದುಕಿಗೆ ತಿರುವು ನೀಡಿದ, ಬದುಕು ರೂಪಿಸಿದ ಗುರುಗಳನ್ನು ನೆನಪು ಮಾಡಿಕೊಂಡಿರಾ ? ಅವರಿಗೆ ಶುಬಾಶಯ ಹೇಳಿದ್ರಾ?

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...