ತಂಬಾಕಾ...? ಅಯ್ಯೋ ಇದನ್ನಾ.. ನಾವು ಕೀಟನಾಶಕವಾಗಿ ಬಳಸ್ತೀವೀ.! ಇದನ್ನಾ ಬೆಳೆಯೋಕೆ ಸಿಕ್ಕಾಪಟ್ಟೆ ಪೆಸ್ಟಿಸೈಡ್, ಕೆಮಿಕಲ್ ಮೆನ್ಯೂರ್ ಎಲ್ಲಾ ಹಾಕಿ ಬೇಳೀತೀರಲ್ಲಾ ದೇವ್ರೇ.. ಎಂದು ಬೇಸರಿಸಿಕೊಂಡವರು ಶಿರಸಿಯ ಸುನೀತಾ ರಾವ್. ಮೊದಲಿಗೆ ಹೇಳಿಬಿಡ್ತೀನಿ ಸುನೀತಾ ರಾವ್ ಅಂದ್ರೆ ಅಗ್ರಿಕಲ್ಚರ್ ಸೈಟಿಂಸ್ಟ್, ಅವರ ಮುತ್ತಾತ ಅರಕಲಗೂಡು ಮೂಲದವರಂತೆ, ಈ ಸುನೀತಾರಾವ್ ಅವರ ಮೊಮ್ಮಗಳು. ಕರ್ನಾಟಕ ಹಾಗೂ ಪಾಂಡಿಚೆರಿಯ ಯುನಿವರ್ಸಿಟಿಗಳಲ್ಲಿ ಎರಡೆರೆಡು ಸ್ನಾತಕ ಪದವಿ ಎಕಾಲಜಿ, ಸಂಶೋಧನೆ ಹೀಗೆ ಶಿಕ್ಷಣ ಮುಗಿಸಿ ದೆಹಲಿ ಹಾಗೂ ದೇಶದ ವಿವಿಧ ಕೃಷಿ ವಿವಿ ಗಳಲ್ಲಿ ಕೆಲಸ ಮಾಡಿ 38-40 ರ ಹರಯದಲ್ಲಿ ಉತ್ತರ ಕನ್ನಡದ ಶಿರಸಿಯಿಂದ 20ಕಿಮಿ ದೂರದಲ್ಲಿ ಒಂದಷ್ಟು ಜಮೀನು ಖರೀದಿಸಿ ಸಾವಯವ ಕೃಷಿಯ ಕಡೆಗೆ ಹೊರಳಿಕೊಂಡಿದ್ದಾರೆ. ಅಲ್ಲಿ ರೈತ ಮಹಿಳೆಯರನ್ನು ಸಂಘಟಿಸುವ ಮಹತ್ತರವಾದ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ ವನಸ್ತ್ರೀ ಎಂಬ ಹೆಸರಿನ ಆ ಸಂಸ್ಥೆ ಮಲೆನಾಡು ಕೈತೋಟ, ಬೀಜ ಸಂರಕ್ಷಣಾ ಗುಂಪು ರಚಿಸಿಕೊಂಡಿದೆ. ಅಲ್ಲಿ ಸಂಶೋಧನೆಯು ನಿರಂತರ. ಮದುವೆಯ ಬಂಧನಕ್ಕೊಳಗಾಗದೇ ಒಂದು ಸಿದ್ದಾಂತವಿಟ್ಟುಕೊಂಡು ಕಾರ್ಯ ನಿರ್ವಹಿಸುತ್ತಿರುವ ಇವರ ಕಾರ್ಯ ವೈಖರಿಯು ಮೆಚ್ಚುವಂತಹುದೆ. ಕಳೆದ ವರ್ಷ ಜೀ ಕನ್ನಡ ವಾಹಿನಿ ಇವರ ಸಾಧನೆಯನ್ನು ಗುರುತಿಸಿ ಪುರಸ್ಕಾರ ನೀಡಿ ಗೌರವಿಸಿದೆ. ಸದಾ ಕೃಷಿಯಲ್ಲಿ ಪ್ರಯೋಗ ಶೀಲ ಮನಸ್ಸು ಹೊಂದಿರುವ ಇಂತಹ ಸುನೀತಾ ರಾವ್ ಅರಕಲಗೂಡು ಮೂಲದವರಾದರು ಅವರಿಗೆ ಸೇರಿದ ಯಾವುದೆ ಮನೆ, ಜಮೀನು, ಇಲ್ಲವೇ ಗುರುತಿರುವವರು ಈಗ ಇಲ್ಲಿ ಬದುಕುಳಿದಿಲ್ಲ. ಆದರೂ ತಂದೆಯ ಹೆಸರಿನೊಂದಿಗೆ ಅಂಟಿಕೊಂಡಿರುವ ಅರಕಲಗೂಡು ಹೆಸರಿನ ಕುತೂಹಲದಿಂದ ನನ್ನ ಮಿತ್ರ ಜೀ ಕನ್ನಡದ ಮಧುಸೂಧನ ರೊಂದಿಗೆ ಭೇಟಿ ನೀಡಿದ ಸುನೀತಾ ರಾವ್ ಇಲ್ಲಿಯ ಪರಿಸರದ ಬೆಳೆ ನೋಡುವ ಇಚ್ಚೆ ವ್ಯಕ್ತಪಡಿಸಿದರು. ಹಾಗಾಗಿ ಅವರನ್ನು ತಾಲೂಕಿನ ರಾಮನಾಥಪುರದ ಬಳಿಯ ಮಲ್ಲಿನಾಥಪುರದ ಪದ್ಮನಾಭರವರ ಸಾವಯವ ಕೃಷಿಯ ಗದ್ದೆ ಹಾಗೂ ತೋಟ ನೋಡಲು ಹೋದೆವು. ಈ ಪದ್ಮನಾಭ ಒಂಥರಾ ವಿಚಿತ್ರ ವ್ಯಕ್ತಿ ಹಾರಂಗಿ ನಾಲೆಯಲ್ಲಿ ನಿರಂತರವಾಗಿ ಹರಿದು ಬರುವ ನೀರಿನಲ್ಲಿ ಸಮೃದ್ದವಾಗಿ ಕೃಷಿ ಮಾಡುವ ಇವರ ಭತ್ತದ ಗದ್ದೆ ನೂರಾರು ಎಕರೆ ಗದ್ದೆ ಬಯಲಿನ ನಡುವೆ 1-2 ಎಕರೆಯಷ್ಟಿದೆ. ಅಲ್ಲಿ ಇವರು ಭತ್ತವನ್ನು ಸಹಾ ಸಾವಯವ ಮಾದರಿಯಲ್ಲೇ ಬೆಳೆದಿದ್ದಾರೆ. ಸುತ್ತಮುತ್ತಲಿನ ಗದ್ದೆಗಳಿಗೆ ಸಿಕ್ಕಾಪಟ್ಟೆ ರಸಗೊಬ್ಬರ ಹಾಕುತ್ತಾರಂತೆ. ಅಲ್ಲ ಮಾರಾಯ್ರೇ ಇದು ಆಧುನಿಕ ಭರಾಟೆಯ ದಿನಗಳು, ನೀವು ಯಾವುದಾದ್ರೂ ಕಮರ್ಷಿಯಲ್ ಕ್ರಾಪು ತಂಬಾಕಿನಂತಹದ್ದು ಯಾಕೆ ಬೆಳೆದಿಲ್ಲ, ಅದರಲ್ಲಿ ಕೈ ತುಂಬಾ ದುಡ್ಡು ಸಿಕ್ಕುತ್ತಲ್ವಾ? ಅಂದೆ. ಇಲ್ಲ ಸಾರ್ ಅದೇನೋ ಮೊದಲಿನಿಂದಲೂ ನಮಗೆ ಅಂತಹ ಬುದ್ದಿ ಬರಲಿಲ್ಲ ನಮ್ಮ ತಂದೆ, ಅವರ ತಂದೆ ಎಲ್ಲಾ ಅದನ್ನ ಬೆಳೆಯೋದು ಬೇಡ ಬಿಟ್ಟರು ನಾನು ಅದನ್ನೇ ಮುಂದುವರೆಸಿದೆ ಅಷ್ಟೇ ಅಂದ್ರು . ಆಗ ಮಧು ಸೂಧನ್ ಹೇಳಿದ ಮಾತು ಒಂದು ಕ್ಷಣ ಮೌನ ಆವರಿಸುವಂತೆ ಮಾಡಿತು. ಈ ತಂಬಾಕು ಕಟಾವು ಮಾಡಿ ಬೇಯಿಸುತ್ತಾರಲ್ಲಾ ಆಗ ಅಂತಹ ಗ್ರಾಮಗಳಿಗೆ ಭೇಟಿ ನೀಡಿ ನೋಡಬೇಕು, ಊರಿನ ಜನ, ಮನೆ ಜನವೆಲ್ಲ ಒಂಥರಾ ಕಾಮಾಲೆ ರೋಗ ಪೀಡಿತರಂತೆ ಆಗಿರುತ್ತಾರೆ, ಏನು ದುಡ್ಡು ದುಡಿದ್ರೆ ಏನು ಮೈಗೆ ಆರೋಗ್ಯ ಸರೀ ಇಲ್ಲ ಅಂದ್ರೆ ಅಂದ್ರು. ಆ ಮಾತಿನಲ್ಲಿ ಸತ್ಯವೂ ಇತ್ತು. ನೋಡಿ ನಮ್ಮ ಅರಕಲಗೂಡು, ಪಿರಿಯಾಪಟ್ನ ಶಿವಮೊಗ್ಗ ಜಿಲ್ಲೆಯ ಕೆಲವು ಭಾಗಗಳು ಇವೆಯಲ್ಲ ಇಲ್ಲೆಲ್ಲಾ ಅಂತರ ರಾಷ್ಟ್ರೀಯ ಗುಣಮಟ್ಟದ ತಂಬಾಕು ಬೆಳೆಯುತ್ತಾರೆ. ಕಳೆದ ಹತ್ತು ವರ್ಷಗಳಲ್ಲಿ 4-5ಸಾವಿರ ಹೆಕ್ಟೇರುಗಳಲ್ಲಿ ಬೆಳೆಯಲಾಗುತ್ತಿದ್ದ ತಂಬಾಕು. ಈಗ ತಂಬಾಕನ್ನು ನಿಷೇದಿಸುವ ಮಾತು ಶುರು ಮಾಡಿದ ಮೇಲೆ 11500 ಹೆಕ್ಟೇರಿಗೆ ವಿಸ್ತರಿಸಿದೆ, ಸುಮಾರು 5000 ದಷ್ಟು ಅನಧಿಕೃತ ಬೆಳೆಗಾರರಿದ್ದಾರೆ. ಎಲ್ಲಾ ಸೇರಿ 20ಸಾವಿರ ದಷ್ಟು ಆಗಬಹುದೇನೋ.. ಆಂಧ್ರದ ವ್ಯಾಪಾರಿಗಳು ಇಲ್ಲಿಯ ಮಾರುಕಟ್ಟೆಗೆ ದಿವಾನರು.
ಈ ತಂಬಾಕಿನ ಚಟದ ತರಹ ಶುಂಠಿಯು ಸಹಾ ಇಲ್ಲಿ ವಿಸ್ತೃತವಾಗಿ ಹರಡಿದೆ ಸಿಕ್ಕ ಸಿಕ್ಕ ಕಡೆಯೆಲ್ಲ ಶುಂಠಿ ಬೆಳೆಯುತ್ತಿದ್ದಾರೆ, ಕಮರ್ಷಿಯಲ್ ಕ್ರಾಪು ಬೆಳೆಯುವ ಭರಾಟೆಯಲ್ಲಿ ಭೂಮಿಗೆ ಬಿಡುವು ಸಿಗುತ್ತಿಲ್ಲ ಪರಿಣಾಮ ಮಣ್ಣಿನ ರೆಸಿಸ್ಟೆನ್ಸ್ ಪವರ್ರೆ ಹೋಗಿಬಿಟ್ಟಿದೆ. ಇನ್ನೂ ಪಿ ಹೆಚ್ ವ್ಯಾಲ್ಯೂ ಬಗ್ಗೆ ಏನೂ ಹೇಳೋಕಾಗಲ್ಲ ಬಿಡಿ. ಇದೇ ಬಾಗದ ರುದ್ರಪಟ್ಟಣದಲ್ಲಿ ನನ್ನ ಹಿರಿಯ ವೈದ್ಯ ಮಿತ್ರರಾದ ನಾಗರಾಜ್ ಎಂಬುವವರು ಇದ್ದಾರೆ, ಓದಿದ್ದು ವೈದ್ಯ ಪದವಿಯಾದರೂ ಹೆಚ್ಚಿನ ಭಾಗ ತೊಡಗಿಸಿಕೊಂಡದ್ದು ಕೃಷಿಯಲ್ಲಿ ಅವರು ಇದುವರೆಗೂ ಅವರ ತೋಟ ಮತ್ತು ಜಮೀನಿಗೆ ಒಂದು ಬಾರಿಯೂ ರಸಗೊಬ್ಬರ ಹಾಕಿಲ್ಲವಂತೆ ರಾಗಿ, ಭತ್ತ, ಹುರುಳಿ, ಹಲಸಂದೆ ಬಿಟ್ಟರೆ ಅವರ ಜಮೀನಿನಲ್ಲಿ ಇದುವರೆಗೂ ಆಲೂಗಡ್ಡೆ, ಶುಂಠಿ ಹಾಗೂ ತಂಬಾಕು ಬೆಳೆದಿಲ್ಲ. ಅಕ್ಕಪಕ್ಕದವರು, ಹೊರಗಿನವರು ಬಂದು ಎಷ್ಟೇ ಒತ್ತಡ ಹೇರಿದರೂ ತಮ್ಮ ನಿಲುವನ್ನು ಅವರು ಬದಲಾಯಿಸಿಲ್ಲವಂತೆ, ಇದೇ ಭಾಗದ ರಾಮನಾಥಪುರದ ಕೃಷ್ಣ ಎಂಬ ರೈತ ಹೊಸ ಹೊಸ ಪ್ರಯೋಗ ಮಾಡುತ್ತ ಸಾವಯವ ಕೃಷಿಗೆ ಮಾರುಹೋಗಿ ಏಕಾಂಗಿ ಬ್ರಹ್ಮಾಚಾರಿಯಾಗಿ ಉಳಿದುಬಿಟ್ಟಿದ್ದಾರೆ, ಕೃಷಿ ಅವರನ್ನು ಅಷ್ಟರ ಮಟ್ಟಿಗೆ ಸೆಳೆದಿದೆ. ಆದರೂ ಸುತ್ತಲಿನ ಜನರಿಗೆ ಈ ಕೃಷ್ಣ , ನಾಗರಾಜ್, ಪದ್ಮನಾಭ ತರಹದವರು ಹುಚ್ಚರ ತರಹ ಕಾಣಿಸುತ್ತಾರೆ ಯಾಕೆಂದ್ರೆ ಅವರು ನಂಬಿದ ಸಿದ್ದಾಂತ ಬಿಟ್ಟಿಲ್ಲ.
ಇನ್ನೊಬ್ಬರು ನಮ್ಮೂರಿನವರೇ ಆದ ಯೋಗಾರಮೇಶ್ ಬೆಂಗಳೂರಿನಲ್ಲಿ ಸರ್ಕಾರಿ ನೌಕರಿಯಲಿದ್ದಾರಾದರೂ ವಾರದ 2ದಿನಗಳಲ್ಲಿ ಹಾಜರಾಗುವುದು ಕೃಷಿ ತೋಟಗಳಿಗೆ, ಜಮೀನುಗಳಿಗೆ. ಪ್ರವಾಸ ನಿಮಿತ್ತ ರಾಜ್ಯದ ಯಾವ ಭಾಗಕ್ಕೆ ಹೋದರು ವಿವಿಧ ಜಾತಿಯ, ವಿವಿಧ ತಳಿಯ ಗಿಡಗಳನ್ನು ತಂದು ಬೆಳೆಸುವುದು ಇವರಿಗೆ ರೂಡಿಯಾಗಿದೆ, ಕಳೆದ ಒಂದೆರೆಡು ವರ್ಷಗಳಿಂದ ವೃಕ್ಷ ಬೆಳೆಸುವ ಆಂಧೋಲನವನ್ನೆ ಆರಂಭಿಸಿ ಬಿಟ್ಟಿದ್ದಾರೆ. ತಾಲೂಕಿನ ಪ್ರತೀ ಹಳ್ಳಿಗೆ ತೆರಳುವುದು ಬೆಲೆ ಬಾಳುವ ಗಿಡಗಳನ್ನು ಉಚಿತವಾಗಿ ರೈತರಿಗೆ ವಿತರಿಸುವುದು, ವಿತರಿಸ ಮೇಲೆ ಅದು ಪಾಲನೆಯ ಯಾವ ಹಂತದಲ್ಲಿ ಇದೆ ಎಂದು ನೋಡುವುದು ಇವರ ಕಾಯಕ. ಇನ್ನು ಆಲೂಗಡ್ಡೆ ಬೆಳೆಯುವುದು ನಮ್ಮಲ್ಲಿ ರೂಡಿಗತ ವಾದುದು. ಕಳೆದ ಬಾರಿ ಹಾಸನ ಜಿಲ್ಲೆಯಲ್ಲಿ 40ಸಾವಿರ ಹೆಕ್ಟೇರು ಆಲೂ ನಾಶವಾದರೂ ಈ ಬಾರಿ ಮತ್ತೆ 18ಸಾವಿರ ಹೆಕ್ಟೇರುಗಳಲ್ಲಿ ಆಲೂಗಡ್ಡೆ ಬೆಳೆಯಲಾಗಿದೆ. ನಷ್ಟವಾದರೂ, ರೋಗ ಬರುತ್ತದೆ ಎಂದು ತಿಳಿದಿದ್ದರೂ ಆಲೂಗಡ್ಡೆಯನ್ನು ಬೆಳೆಯುವ ಪದ್ದತಿಯನ್ನು ನಮ್ಮ ರೈತರು ಬಿಟ್ಟಿಲ್ಲ ಈ ದಿಸೆಯಲ್ಲಿ ಯೋಗಾರಮೇಶ್ ಸಮಸ್ತ ರೈತರನ್ನು ಕಲೆಹಾಕುವ ಕೆಲಸ ಆರಂಭಿಸಿದ್ದಾರೆ. ರೈತರನ್ನು ಪ್ರೊತ್ಸಾಹಿಸುವ, ವಿಜ್ಞಾನಿಗಳಿಂದ ಅಗತ್ಯ ತಿಳುವಳಿಕೆಯನ್ನು ಸಮಯಾನು ಸಂಧರ್ಭ ನೀಡುವ ಕ್ರಿಯೆಯನ್ನು ಜಾರಿಯಲ್ಲಿಡುವ ಪ್ರಯತ್ನ ಮಾಡುತ್ತಿದ್ದಾರೆ. ನನ್ನ ಜೊತೆ ಗಂಗೋತ್ರಿಯಲ್ಲಿ ಪತ್ರಿಕೋಧ್ಯಮ ಕಲಿಯುತ್ತಿದ್ದ ಸ್ನೇಹಿತರೊಬ್ಬರು ಸಿಕ್ಕಿದ್ದರು. ಅವರು ಸರ್ಕಾರಿ ನೌಕರಿಯಲ್ಲಿದ್ದರೂ ಹಾಸನದ ಮನೆ ಮಠ ಮಾರಿ ಹಳೇಬೀಡಿನ ಸಮೀಪದಲ್ಲೆಲ್ಲೋ ಜಮೀನು ತೋಟ ಖರೀದಿಸಿ ಅಲ್ಲೆ ಸೆಟ್ಲ್ ಆಗಿದ್ದಾರಂತೆ ೧೫-೨೦ ಹಸುಕಟ್ಟಿ ಹೈನುಗಾರಿಕೆಯನ್ನು ಮಾಡುತ್ತಾರಂತೆ ಸರ್ಕಾರಿ ಉದ್ಯೋಗಕ್ಕಿಂತ ಕೃಷಿ ಕೆಲಸವೇ ಖುಷಿ ಕೊಡುವ ಬದುಕಂತೆ. ಮದಲಾಪುರ ಗ್ರಾಮವಿದೆ ಅಲ್ಲಿ ಸುಮಾರು 80ಎಕರೆಯಷ್ಟು ಖಾಲಿ ಜಮೀನಿದೆ ಅಲ್ಲಿನ ಜನ ಸದರಿ ಸ್ಥಳದಲ್ಲಿ ಮನೆಗಿಷ್ಟು ಎಂದು ದುಡ್ಡು ಎತ್ತಿ ಗಿಡ ನೆಡುವ ಕೆಲಸ ಮಾಡುತ್ತಿದ್ದಾರೆ, ಅದೇ ಗ್ರಾಮದ ರಂಗಸ್ವಾಮಿ ಎಂಬುವವರು ೫-6ಸಾವಿರ ಗಿಡಗಳನ್ನು ಉಚಿತವಾಗಿ ಕೊಡಿಸಿದ್ದಾರೆ ಅಷ್ಟೇ ಅಲ್ಲ ಮೇಲುಸ್ತುವಾರಿ ನಡೆಸಿದ್ದಾರೆ, ಇದನ್ನೆಲ್ಲ ಯಾರು ಅವರಿಗೆ ಹೇಳಿಕೊಟ್ಟಿಲ್ಲ, ಇದಕ್ಕೆಲ್ಲ ಯಾವ ಸರ್ಕಾರಿ ಯೋಜನೆಗಳು ಬಳಕೆಯಾಗಿಲ್ಲ. ಹೀಗೆ ಹೇಳುತ್ತಾ ಹೋದರೆ ಹಲವರು ಸಿಗುತ್ತಾರೆ. ಆದರೆ ಲಕ್ಷಾಂತರ ಮಂದಿಯ ಪೈಕಿ ಅಂತಹವರು ಕೇವಲ ೫-೧೦% ನಷ್ಟು.
ಇದೆಲ್ಲಾ ನೋಡಿ ನನಗನ್ನಿಸಿದ್ದು ಆಧುನಿಕ ಜಗತ್ತಿನ ಆದ್ಯತೆಗಳು ಬದಲಾದಂತೆ ಮನುಷ್ಯನ ನಡವಳಿಕೆಗಳಲ್ಲು ಕಾಲಾನುಕಾಲಕ್ಕೆ ಬದಲಾವಣೆ ಅನಿವಾರ್ಯವೇ? ಬದಲಾಗದಿದ್ದರೆ ಎಂಥಹ ಪರಿಸ್ಥಿತಿ, ಬದಲಾಯಿಸುವ ಹಠತೊಟ್ಟವರನ್ನು ಅಥವ ಬದಲಾವಣೆಗೆ ಒಳಪಡದವರನ್ನು ಸಮಾಜವಾದರೂ ಯಾಕೆ "ಹುಂಬ"ತನವೆನ್ನಬೇಕು. ಅಲ್ವಾ? ಮೊನ್ನೆ ಸಂಘಟನೆಯೊಂದರೆ ಕಾರ್ಯಕರ್ತರು ರಸ್ತೆಯೊಂದರ ದುಸ್ಥಿತಿ ಕಂಡು ದಾನಿಗಳಿಂದ (ಕಂಟ್ರಾಕ್ಟರುಗಳಿಂದ) ಜೆಲ್ಲಿ ಪಡೆದು ರಸ್ತೆ ಗುಂಡಿ ಮುಚ್ಚಿದರು ಅದನ್ನು ಕಂಡ ಬೇರೆ ಬಾಗದ ಕೆಲ ಮಂದಿ ನಮ್ಮ ಮನೆ ಮುಂದಿನ ರಸ್ತೆ ಗುಂಡಿ ಬಿದ್ದಿದೆ ಅದನ್ನು ಮುಚ್ಚಿ ಎಂದರಂತೆ..! ಸಮಾಜದ ಮನಸ್ಥಿತಿ ಹೀಗಾದರೆ ಬದಲಾವಣೆಯಾದರೂ ಹೇಗೆ ? ನಮ್ಮ ಸಿದ್ದಾಂತಗಳಿಗೇಕೆ ಬೆಲೆ ಇಲ್ಲಾ ಅಥವ ಇದೆಲ್ಲಾ ಓಳಾ? ಒಂದು ಜಾಗೃತ ಹೋರಾಟ ನಡೆದರೆ ಅಲ್ಲಿ ಏನೋ ಲಾಭವಿದೆ ಅದಕ್ಕೆ ಎಂದು ಬಾವಿಸುವವರೇ ಹೆಚ್ಚು, ಹೀಗೆ ಆದುನಿಕ ಜನರ ಮನಸ್ಥಿತಿ ಇದ್ದರೆ ಭವಿಷ್ಯದಲ್ಲಿ ನಮಗೆ ಉಳಿಗಾಲ ಉಂಟೆ?
1 comment:
ಸಾವಯವ ಕೃಷಿಯ ಬಗ್ಗೆ ಇಂದು ಹೆಚ್ಚಿನ ಒಲವು ಎಲ್ಲ ಕಡೆಯೂ ಬೆಳೆಯುತ್ತಿರುವುದು ಒಳ್ಳೆಯ ಬೆಳವಣಿಗೆಯೇ ಸರ್, ನಿಮ್ಮ ಬರಹದಲು ಅದರ ಉದ್ದೇಶ ವ್ಯಕ್ತವಾಗಿದೆ..
Post a Comment