ನಾನು ಕನ್ನಡ ಜಾತಿಯವನು ಅಂದ್ರೆ ತಪ್ಪಿಲ್ಲ.... ಆದ್ರೆ ಇದೆಂಥಹದು ಮಾರಾಯ್ರೇ ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ ಜಾತಿ ಆಧರಿಸಿದ ರಾಜಕೀಯ? ಪರಮ ಅಸಹ್ಯ ಸೃಷ್ಟಿಸಿರುವ ಸನ್ನಿವೇಶ ಇದು.ಅಸಲಿಗೆ ಕನ್ನಡ ಸಾಹಿತ್ಯ ಪರಿಷತ್ ಅಂದರೆ ಏನು? ಅದರ ದ್ಯೇಯೋದ್ದೇಶಗಳೇನು? ಆ ಮೂಲಕ ಸಾಕಾರ ಆಗಬೇಕಾದುದೇನು? ಅಲ್ಲಿ ಅಧಿಕಾರವೆಂಬ ಹೊಣೆ ಹೊರಲು ಯಾವ ಯೋಗ್ಯತೆ ಇರಬೇಕು ? ಹೊಣೆಗಾರಿಕೆಯ ಆಯ್ಕೆ ಹೇಗಿರಬೇಕು ? ಮತದಾರರ ಜವಾಬ್ದಾರಿ ಏನು ? ಗೆದ್ದು ಬಂದವರು ಕಿಸಿಯುವುದೇನು?ನಾಡು ನುಡಿ ಕುರಿತು ನಮ್ಮ ಕನಸುಗಳು ಮತ್ತು ಪರಿಷತ್ತಿನ ಆಶಯಗಳು ಹೇಗೆ ದಿಕ್ಕು ತಪ್ಪಿವೆ ಎಂಬ ಕುರಿತು ಚರ್ಚಿಸಲು ಇದು ಸಕಾಲ.
ರಾಜ್ಯ ರಾಜಕಾರಣದಲ್ಲಿ ಪರಿಪೂರ್ಣವಾಗಿ ಜಾತಿ ಆಧಾರಿತ ರಾಜಕೀಯ ರಾಡಿಯನ್ನು ಸೃಷ್ಟಿಸಿರುವ ಬಿಎಸ್ ವೈ ಮೊದಲ ಭಾರಿಗೆ ರಾಜ್ಯದ ಮಾನವನ್ನು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಹರಾಜು ಹಾಕಿದ್ದಾರೆ. ಜಾತಿಯನ್ನೇ ಮುಂದು ಮಾಡಿಕೊಂಡು ಸಮಾವೇಶಗಳನ್ನ, ಸಂಚಾರ ಯಾತ್ರೆಗಳನ್ನ ಮಾಡುತ್ತಿದ್ದಾರೆ. ಜಾತಿಯ ಕಾರಣಕ್ಕಾಗಿಯಾದರೂ ಸಿಎಂ ಸದಾನಂದಗೌಡರನ್ನ ಪಟ್ಟದಿಂದ ಕೆಡವಲು ಹುನ್ನಾರ ನಡೆಸಿದ್ದಾರೆ. ಯಡ್ಡಿಯ ತಾಳಕ್ಕೆ ಅನುಗುಣವಾಗಿ ಆ ಜಾತಿಯ ಮಠಾದೀಶರುಗಳು,ಆಧುನಿಕ ದೇವರೆಂಬ ಬಿರುದಾಂಕಿತರು! ಮತ್ತು ಜಾತಿಯ ಜನರು ಹಿಂಬಾಲಿಸುತ್ತಿದ್ದಾರೆ. ಶಿವಮೊಗ್ಗ ಮತ್ತು ಹುಬ್ಬಳ್ಳಿಯಲ್ಲಿ ನಡೆಯುವ ಯಡ್ಡಿಗೆ ಶಕ್ತಿ ತುಂಬುವ ಸಮಾವೇಶಕ್ಕೆ ಆ ವರ್ಗದ ಜನ ರಾಜ್ಯದ ಪ್ರತೀ ತಾಲೂಕು ಕೇಂದ್ರದಿಂದ ತೆರಳುತ್ತಾರೆಂದರೆ ಜಾತಿ ರಾಜಕಾರಣ ಎಲ್ಲಿಗೆ ಬಂತು ಲೆಕ್ಕ ಹಾಕಿ! ಹೆಚ್ಚು ಕಡಿಮೆ ಇಂಥಹುದೇ ಪರಿಸ್ಥಿತಿ ರಾಜ್ಯದ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ ಕಾಣ ಸಿಗುತ್ತಿದೆ. ಇದು ಕನ್ನಡದ ಪಾಲಿಗೆ ದುರ್ದೈವದ ಸಂಗತಿಯೇ ಹೌದು.
ಇರಲಿ ಕನ್ನಡ ಸಾಹಿತ್ಯ ಪರಿಷತ್ ಕುರಿತು ಒಂದು ಕಿರುನೋಟದ ನಂತರ ಅತ್ತ ನೋಡೋಣ ಕನ್ನಡ ಸಾಹಿತ್ಯ ಪರಿಷತ್ತಿನ ಮೊದಲ ಹೆಸರು ಕರ್ಣಾಟಕ ಸಾಹಿತ್ಯ ಪರಿಷತ್ತು. ಬೆಂಗಳೂರಿನ ಶ್ರೀ ಕೃಷ್ಣರಾಜೆ ಪರಿಷನ್ಮಂದಿರದಲ್ಲಿ 1915ರಲ್ಲಿ ಆರಂಭಗೊಂಡ ಪರಿಷತ್ತಿಗೆ ಚಾಲನೆ ನೀಡಿದ್ದು ಮೈಸೂರಿನ ಅರಸ ಮತ್ತು ರಾಜರ್ಷಿಯಾಗಿದ್ದ ನಾಲ್ಮಡಿ ಕೃಷ್ಣರಾಜ ಒಡೆಯರ್. ಪರಿಷತ್ತಿನ ಮೊದಲ ಅಧ್ಯಕ್ಷರಾಗಿದ್ದು ಎಚ್ ವಿ ನಂಜುಂಡಯ್ಯ.. ಮುಂದೆ 1938ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಎಂದು ಮರುನಾಮಕರಣ ಮಾಡಲಾಯಿತು. ಇದು ಕನ್ನಡ ಪುಸ್ತಕಗಳ ಪ್ರಕಟಣೆ ಆ ಮೂಲಕ ಕನ್ನಡ ಬರಹಗಾರರನ್ನು ಪರಿಚಯಿಸುವ ಮತ್ತು ಪ್ರೋತ್ಸಾಹಿಸುವ ಕೆಲಸ, ನಾಡು ನುಡಿಯ ಸಂರಕ್ಷಣೆ ಅಂದರೆ ರಾಜ್ಯದ ಹಿತಕ್ಕೆ ಧಕ್ಕೆ ಆದಾಗ ಧ್ವನಿಯೆತ್ತುವ ಕಾರ್ಯ, ಕನ್ನಡ ಭಾಷೆಯ ಬೆಳವಣಿಗೆ ಮತ್ತು ಉಳಿವಿಗೆ ಪೂರಕ ಕ್ರಿಯೆಗಳನ್ನು ನಿರ್ವಹಿಸುವ ಮಹತ್ತರ ಹೊಣೆಗಾರಿಕೆ ಪರಿಷತ್ತಿಗಿದೆ. ತಿ.ತಾ. ಶರ್ಮ, ಎ.ಎನ್ ಮೂರ್ತಿರಾವ್, ಜಿ. ನಾರಾಯಣ, ಹಂಪನಾಗರಾಜಯ್ಯ, ಎಚ್ ಬಿ ಜ್ವಾಲನಯ್ಯ, ಜಿ ಎಸ್ ಸಿದ್ದಲಿಂಗಯ್ಯ, ಗೊ ರು ಚನ್ನಬಸಪ್ಪ, ಸಾ ಶಿ ಮರುಳಯ್ಯ ಮುಂತಾದ ಮಹನೀಯರು ಪರಿಷತ್ತಿನ ಅಧ್ಯಕ್ಷರಾಗಿ ಗುರುತರವಾದ ಕೆಲಸಗಳನ್ನು ಮಾಡಿದ್ದಾರೆ. ಪ್ರಸಕ್ತ ಅಧಿಕಾರದಲ್ಲಿರುವ ಡಾ ನಲ್ಲೂರು ಪ್ರಸಾದ್ ಪರಿಷತ್ತಿಗೆ 23ನೇ ಅಧ್ಯಕ್ಷರು. ಸಾಹಿತ್ಯ ಪರಿಷತ್ತಿಗೆ ಈಗ 97ತುಂಬಿದೆ ಶತಮಾನದ ಹೊಸ್ತಿಲಲ್ಲಿ ಪರಿಷತ್ತ ನಿಂತಿದೆ. 24ನೇ ಅಧ್ಯಕ್ಷ ಗಿರಿಗೆ ಚುನಾವಣೆ ನಡೆಯುತ್ತಿದೆ.
ಈ ನಡುವೆ ನಾಡು ನುಡಿಗೆ ಪೂರಕವಾದ ನಿರ್ಣಯಗಳನ್ನು ಇದುವರೆಗೂ ನಡೆದಿರುವ 78ರಾಜ್ಯ ಮಟ್ಟದ ಸಮಾವೇಶಗಳು ದಾಖಲಿಸಿವೆ. ಅದ್ದೂರಿತನ ಮೆರೆದಿವೆ ಆದರೆ ಸರ್ಕಾರಗಳ ಇಚ್ಚಾ ಶಕ್ತಿಯ ಕೊರತೆ ಇನ್ನೂ ಪರಿಪೂರ್ಣತೆ ಸಾಧಿಸಲು ವಿಫಲರಾಗಿದ್ದೇವೆ. ಪರಿಷತ್ತಿನ ಅಧ್ಯಕ್ಷರುಗಳ ಪರಿಶ್ರಮದಿಂದ ಹೆಚ್ಚೆಚ್ಚು ಕನ್ನಡ ಜಾತ್ರೆಗಳನ್ನು ನಡೆಸಲು ಸರ್ಕಾಋ ಅನುದಾನಗಳನ್ನ ಮಂಜೂರು ಮಾಡಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಸಿಬ್ಬಂದಿಗೆ ರಾಜ್ಯ ಸರ್ಕಾರ ಅನುದಾನ ನೀಡುವ ಮಹತ್ವದ ನಿರ್ಣಯಕ್ಕೆ ಸಹಿ ಹಾಕಿದ್ದು 'ಮಣ್ಣಿನ ಮಗ' ಖ್ಯಾತಿಯ ರಾಜ್ಯದ ಅಂದಿನ ಮುಖ್ಯಮಂತ್ರಿ ಎಚ್ ಡಿ ದೇವೇಗೌಡ! ನಂತರದಲ್ಲಿ ವಲಯವಾರು ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನಗಳಿಗೆ 4ಕೋಟಿ, ಜಿಲ್ಲಾ ಸಮ್ಮೇಳನಗಳಿಗೆ 5ಲಕ್ಷ, ತಾಲೂಕು ಸಮ್ಮೇಳನಗಳಿಗೆ 1ಲಕ್ಷ ಹೀಗೆ ಸರ್ಕಾರ ಸಹಾಯ ಹಸ್ತ ನೀಡುವ ಕ್ರಮ ಜಾರಿಗೆ ಬಂದಿದೆ. ಇಷ್ಟೇ ಅಲ್ಲ ಒಂದು ಸಾಹಿತ್ಯ ಸಮ್ಮೇಳನ ನಡೆಯುತ್ತದೆ ಎಂದರೆ ಅದಕ್ಕಾಗಿ ದೇಣಿಗೆ ನೀಡುವ ಮಂದಿ ಸಾವಿರಾರು ಸಂಖ್ಯೆಯಲ್ಲಿದ್ದಾರೆ. ಸಧ್ಯ ಪರಿಷತ್ತಿನ ಸದಸ್ಯತ್ವ ಪಡೆದವರ ಸಂಖ್ಯೆ 1.25ಲಕ್ಷವನ್ನು ಮೀರಿದೆ. ಕನ್ನಡದ ಬಗೆಗಿನ ಪ್ರೀತಿ ಎಷ್ಟು ಮಂದಿಗಿದೆಯೋ ಗೊತ್ತಿಲ್ಲ ಆದರೆ ಭಾವಾಭಿಮಾನಕ್ಕೆ ಹುಕಿಗೆ ಬಿದ್ದು ಸದಸ್ಯರಾದವರೇ ಹೆಚ್ಚು. ಆದರೆ ಇವೆಲ್ಲಾ ಪ್ರಯೋಜನಗಳ ಹಿನ್ನೆಲೆಯಲ್ಲಿ ಅವಕಾಶವನ್ನು ಎನ್ ಕ್ಯಾಶ್ ಮಾಡಿಕೊಂಡು ಸಿಕ್ಕಿದಷ್ಟು ಲೂಟಿ ಹೊಡೆದು ಬಿಟ್ಟಿ ಪ್ರಚಾರ ಮತ್ತು ಕಮಾಯಿ ಪಡೆಯಲು ಪರಿಷತ್ತಿಗೆ ಬರುವವರ ಸಂಖ್ಯೆ ಹೆಚ್ಚಾಗಿದೆ. ಅದನ್ನೇ ದುರ್ದೈವದ ಸಂಗತಿ ಅಂದಿದ್ದು!
ಬರೆಯಲು ಕೊಟ್ಟರೆ ನಾಲ್ಕು ಅಕ್ಷರ ಕನ್ನಡ ಬರೆಯಲು ಬಾರದವರು ಮತ್ತು ಸಾಹಿತ್ಯದ ಗಂಧ ಗಾಳಿ ಗೊತ್ತಿಲ್ಲದ ಪುಡಿ ರಾಜಕಾರಣಿಗಳು, ಜಾತಿ ಬೆಂಬಲಿತರು, ಭಯಂಕರ ಕವಿಗಳೆನಿಸಿಕೊಂಡವರು, ಓರಾಟ ವೀರರು ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಗಳಲ್ಲಿ ತಲೆ ತೂರಿಸಿದ್ದಾರೆ. ದುರಾದೃಷ್ಠಕರ ಸಂಗತಿಯೆಂದರೆ ಬಹುತೇಕರೆಲ್ಲರೂ ಜಾತಿಯ ಹಿನ್ನೆಲೆಯಿಂದ ಅವಕಾಶ ಪಡೆಯುವ ಕನಸು ಹೊತ್ತವರೇ ಆಗಿದ್ದಾರೆ. ಸಾಹಿತ್ಯ ಸಮ್ಮೇಳನಗಳಲ್ಲಿ ತಿಂದುಂಡು ಅಭ್ಯಾಸ ಇರುವವರು ಮತ್ತೆ ಮತ್ತೆ ಚುನಾವಣೆಗಳಿಗೆ ಬರುತ್ತಲೇ ಇದ್ದಾರೆ. ಹಾಸನದ ಮಟ್ಟಿಗೆ ಜಾತಿಯ ಲಾಬಿ ಪರಿಷತ್ ಚುನಾವಣೆಯಲ್ಲಿ ಕೆಲಸ ಮಾಡಲಾರದು ಆದಾಗ್ಯೂ ಕೆಲವು ಅಭ್ಯರ್ಥಿಗಳು ಅದನ್ನೇ ಮುಂದು ಮಾಡಿಕೊಂಡು ಹೋಗುತ್ತಿರುವುದು ವಿಷಾಧನೀಯ ಸಂಗತಿ. ಪರಿಷತ್ ಕೆಲಸ ಮಾಡಲು ಸಾಹಿತ್ಯದ ಗಂಧ ತಿಳಿದವರು, ಕ್ರಿಯಾಶೀಲರು, ಒಗ್ಗೂಡಿಸಿ ಕರೆದೊಯ್ಯುವ ಮನಸ್ಥಿತಿಯವರು ಮಾತ್ರ ಬೇಕು ಆದರೆ ಸಧ್ಯಕ್ಕೆ ಅಂತಹ ಮುಖಗಳು ಕಾಣುತ್ತಿಲ್ಲ. ಕಾಟಾಚಾರಕ್ಕೆ ಒಂದು ಅಂತ ಮತಗಳೂ ಬಿದ್ದರೂ 'ಮತಗಳ ಕೊಳ್ಳುವಿಕೆ' ನಡೆಯುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಕನ್ನಡದ ಕೆಲಸಕ್ಕೆ ಇಂಥ ವಾಮಮಾರ್ಗದ ಅಗತ್ಯವಿಲ್ಲ, ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳ ಕುರಿತು ಬಹುತೇಕರಿಗೆ ಭ್ರಮನಿರಸನ ವಾಗಿದೆ. ದುಡ್ಡು ಮತ್ತು ಜಾತಿಯ ಲಾಬಿಗೆ ಹೆದರಿದ ಮಹಿಳೆಯರು ಮತ್ತು ದಲಿತರು ಚುನಾವಣೆಯಿಂದ ದೂರವೇ ಉಳಿದಿದ್ದಾರೆ,ಈಗ ಹೇಳಿ ಇಂಥಹ ಪರಿಸ್ಥಿತಿ ಬೇಕಿತ್ತಾ? ಕನ್ನಡ ಜಾತಿ ಪರಿಷತ್ತಿಗೆ !!!!
No comments:
Post a Comment