ಶಿಕ್ಷಣದ ಹಕ್ಕು ಕಾಯ್ದೆಯ ಸಾಂವಿಧಾನಿಕ ಸಿಂಧುತ್ವವನ್ನು ಸುಪ್ರೀಂಕೋರ್ಟು ಎತ್ತಿಹಿಡಿಯುವ ಮೂಲಕ ಅತ್ಯಂತ ಮಹತ್ವದ ತೀರ್ಪನ್ನು ನೀಡಿದೆ. ದಲಿತ ಮತ್ತು ಶೋಷಿತ ವರ್ಗಗಳ ಶ್ರೇಯೋಭಿವೃದ್ದಿಗೆ ಶ್ರಮಿಸಿದ, ಸಮಾನತೆಯ ಹಕ್ಕುಗಳನ್ನು ಪ್ರತಿಪಾದಿಸಿದ ಮಹಾನ್ ಮಾನವತಾ ವಾದಿ ಡಾ|| ಭೀಮರಾವ್ ರಾಮ್ ಜೀ ಅಂಭೇಡ್ಕರ್ ಜನ್ಮ ದಿನಾಚರಣೆಯ ಮುನ್ನಾ ದಿನದಲ್ಲಿ ಹೊರಬಿದ್ದಿರುವ ಈ ತೀರ್ಪು ಐತಿಹಾಸಿಕವೇ ಸರಿ. ಶಿಕ್ಷಣ ಮತ್ತು ಆರೋಗ್ಯ ಇಂದು ಮಾರಾಟದ ಸರಕುಗಳಾಗಿವೆ! ಅತ್ಯಂತ ಹೆಚ್ಚು ಪ್ರಾಮುಖ್ಯತೆ ಪಡೆಯುವ ಇವೆರೆಡು ಅಂಶಗಳು ಒಂದು ದೇಶದ ವ್ಯವಸ್ಥೆಯಲ್ಲಿ ಪ್ರಧಾನ ಪಾತ್ರವನ್ನ ವಹಿಸುತ್ತವೆ.
ಶಿಕ್ಷಣದ ಹಕ್ಕು, ಸಮಾನತೆಯ ಹಕ್ಕು, ಮಹಿಳಾ ಮೀಸಲಾತಿ ಯಂತಹ ಪ್ರಮುಖ ಅಂಶಗಳನ್ನು ಮೊದಲ ಭಾರಿಗೆ ಪ್ರಸ್ತಾವಕ್ಕೆ ತಂದು ಅದರ ಅನುಷ್ಠಾನಕ್ಕೆ ಪಟ್ಟು ಹಿಡಿದಿದ್ದ ಡಾ ಅಂಬೇಡ್ಕರ್ 121ನೇ ಜನ್ಮ ಜಯಂತಿಯಂದು ಇಂತಹ ವಿಚಾರ ಚರ್ಚೆಗೆ ಬಂದಿರುವುದು ಸಂತಸದ ಸಂಗತಿಯೇ. ಈ ಸಮಾಜದ ಕಟ್ಟ ಕಡೆಯ ಮಗುವಿಗೂ ಶಿಕ್ಷಣದ ಹಕ್ಕಿದೆ, ಅದನ್ನು ಪಡೆದು ಜಾಗೃತರಾಗಬೇಕು ಸಶಕ್ತವಾದ ಜಾತಿರಹಿತವಾದ ಮುಕ್ರ ಸಮಾಜ ನಿರ್ಮಾಣವಾಗಬೇಕು ಎಂಬ ಕನಸು ಹೊತ್ತಿದ್ದ ಅಂಬೇಡ್ಕರ್ ರ ದೂರದೃಷ್ಠಿಯ ಫಲಗಳ ಸಾಕಾರ ಇಂದು ಅಲ್ಪಮಟ್ಟಿಗಾದರೂ ನಡೆಯುತ್ತಿದೆ ಎಂಬುದೇ ಸಮಾಧಾನಕರ ಸಂಗತಿ ಆದಾಗ್ಯೂ ಸಮಾಜದ ಕಟ್ಟ ಕಡೆಯ ಮನುಷ್ಯನಿಗೆ ಜಾಗತೀಕರಣದ ಪ್ರಭಾವ ಅಥವಾ ಅಗತ್ಯ ಸೇವೆಗಳು ಮಾರಾಟದ ಉದ್ದೇಶಗಳಾಗಿ ಬಿಂಬಿತವಾಗುತ್ತಿರುವುದರಿಂದ ಸಮಾಜ ಎಷ್ಟೇ ಮುಂದುವರೆದಿದ್ದರು ಅವನ್ನು ದಕ್ಕಿಸಿಕೊಳ್ಳುವಲ್ಲಿ ಅಸಹಾಯಕತೆ ಅನುಭವಿಸುತ್ತಿದ್ದಾನೆ. ಜಾತೀಯ ವ್ಯವಸ್ಥೆ ಅಷ್ಟರ ಮಟ್ಟಿಗೆ ತನ್ನ ಹಿಡಿತವನ್ನು ಸಾಧಿಸಿದ್ದು ಹಿಂದೆಂದಿಗಿಂತಲೂ ಇಂದು ಅವು ಆಳವಾದ ಬೇರುಗಳನ್ನು ಹಬ್ಬಿಸಿವೆ. ಜಾತೀಯ ಪ್ರಾಧಾನ್ಯತೆ ಹಿಂದಿನಷ್ಟು ಸಾರ್ವಜನಿಕವಾಗಿ ಬಿಂಬಿತವಾಗಿಲ್ಲವಾದರೂ ಆಂತರಿಕವಾಗಿ ಹಿಂದೆಂದಿಗಿಂತಲೂ ಹೆಚ್ಚು ಮೇಲುಗೈ ಸಾಧಿಸಿವೆ ಎಂಬುದೇ ಅತ್ಯಂತ ಅಪಾಯಕಾರಿ ಸಂಗತಿಯಾಗಿದೆ. ಸರ್ಕಾರ ದಲಿತರಿಗೆ ಶೇ.22.5ರಷ್ಟು ಮೀಸಲು ನಿಗದಿಗೊಳಿಸಿದೆ ಆದರೆ ಅದರಲ್ಲೂ 106ಕ್ಕೂ ಹೆಚ್ಚು ಜಾತಿಗಳನ್ನು ಸೇರಿಸಿದೆ. ಇವರೆಲ್ಲಾ ಮೀಸಲು ಪಡೆಯಲು ಮಾತ್ರ ಮುಗಿ ಬೀಳುತ್ತಾರೆಯೇ ವಿನಹ ದಲಿತರಲ್ಲಿ ಪ್ರಾಧಾನ್ಯ ಪಡೆಯುವ ಎರಡು ಸಂಖ್ಯೆಯ ಜಾತಿಗಳವರು ಶೋಷಣೆಗೊಳಗಾದಾಗ ಒಗ್ಗಟ್ಟು ಪ್ರದರ್ಶಿಸುವುದಿಲ್ಲ.. ಪರಿಣಾಮ ಕೇವಲ ಶೇ.10ರಷ್ಟು ಮೀಸಲು ಅನುಭವಿಸಲು ಸಾಧ್ಯವಾಗಿದೆ, ಅದೇ ರೀತಿ ಶೋಷಿತರ ಸಾಲಿಗೆ ಸೇರುವ ಹಿಂದುಳಿದವರ್ಗಗಳ ಗುಂಪಿಗೆ ನೂರಕ್ಕೂ ಹೆಚ್ಚು ಜಾತಿಗಳು ಸೇರುವುದರಿಂದ ಈ ಗುಂಪಿಗೆ ಇರುವ ಶೇ.27ರ ಮೀಸಲನ್ನು ಸಮರ್ಪಕವಾಗಿ ಬಳಸಲು ಸಾದ್ಯವೇ ಆಗಿಲ್ಲ ಎಂಬುದು ಮತ್ತು ದುರಂತದ ಸಂಗತಿ. ಅಂಬೇಡ್ಕರ್ ಕಲ್ಪನೆಯ ಮೀಸಲಾತಿ ಮನುಷ್ಯನನ್ನು ಭೌದ್ದಿಕವಾಗಿ ಹೆಚ್ಚು ಬುದ್ದಿವಂತನನ್ನಾಗಿ ರೂಪಿಸುವ ದಿಸೆಯಲ್ಲಿ ಇದೆಯಾದರೂ ಅದರ ಅನುಷ್ಠಾನದಲ್ಲಿ ಉಂಟಾಗಿರುವ ದೋಷಗಳು ಅಂಬೇಡ್ಕರ್ ಕನಸುಗಳನ್ನು ಗಾಳಿಗೆ ತೂರಿದಂತಾಗಿದೆ. ಸಮಾನತೆಯ ಕನಸಿನ ಹರಿಕಾರ ಹಾಗೂ ಶ್ರೇಷ್ಠ ದಾರ್ಶನಿಕರೆನಿಸಿದ ಅಂಬೇಡ್ಕರ್ ರ ಆಶಯಗಳು ಪ್ರಸಕ್ತ ದಿನಗಳಲ್ಲಿ ಹಲವು ಕ್ಷುಲ್ಲಕ ಕಾರಣಗಳಿಗೆ ಎರವಾಗುತ್ತಾ ನೈಜ ಅಂಶಗಳಿಗೆ ಹಿನ್ನೆಡೆ ಆಗುತ್ತಿರುವುದು ದುಖದ ಸಂಗತಿ.
ಇನ್ನು ಸುಪ್ರೀಂಕೋರ್ಟು ನೀಡಿರುವ ಶಿಕ್ಷಣ ಕುರಿತ ಹಕ್ಕುಗಳ ಕುರಿತು ಮಾತನಾಡುವುದಾದರೆ, ನಮ್ಮ ದೇಶದಲ್ಲಿ ರೈತರು ಮತ್ತು ಶ್ರಮಿಕ ವರ್ಗಗಳೇ ಹೆಚ್ಚು ಪ್ರಮಾಣದಲ್ಲಿವೆ, ಸಿರಿವಂತರ ಮಕ್ಕಳನ್ನು ಎಲ್ ಕೆ ಜಿ/ಯುಕೆಜಿಯಿಂದಲೇ ಬಾರಿ ಮೊತ್ತದ ಡೊನೇಷನ್ ತೆತ್ತು ಖಾಸಗಿ ಶಾಲೆಗಳೆಂಬ ಅಡ್ಡೆಗಳಿಗೆ ಸೇರಿಸಲಾಗುತ್ತದೆ. ಸರ್ಕಾರಿ ಶಾಲೆಯ ಗುಣಮಟ್ಟಕ್ಕಿಂತ ಖಾಸಗಿ ಶಾಲೆಗಳ ಕಲಿಸುವ ಗುಣಮಟ್ಟ ಶ್ರೇಷ್ಠ ಎಂದು ಯಾವ ಪುಣ್ಯಾತ್ಮ ತಲೆತುಂಬಿದನೋ ಕಾಣೆ. ಖಾಸಗಿ ಶಾಲೆಗಳಲ್ಲಿ ಶಿಕ್ಷಣ ಕೊಡಿಸುವುದೇ ತಮ್ಮ ಜೀವನದ ಪರಮಗುರಿ ಎಂದು ಭಾವಿಸುವ ಪೋಷಕರು ಅದಕ್ಕಾಗಿ ಸಮಯ/ದುಡಿಮೆ ಮತ್ತು ಶಿಫಾರಸ್ಸುಗಳನ್ನು ಬಳಸಿ ತಮ್ಮ ಮಕ್ಕಳಿಗೆ ಸೀಟು ಗಿಟ್ಟಿಸಿಕೊಂಡು ಬಿಡುತ್ತಾರೆ. ತಮ್ಮ ಮಗು/ಮಗ/ಮಗಳು ದಕ್ಷಿಣ ಕನ್ನಡ ಜಿಲ್ಲೆಯ ಯಾವುದಾದರೊಂದು ಖಾಸಗಿ ಅಡ್ಡೆಯಲ್ಲಿ ಕಲಿಯುತ್ತಿದೆ ಎಂಬುದೆ ಒಂದು ಪ್ರತಿಷ್ಠೆಯ ಸಂಗತಿಯಾಗಿ ಬಿಡುತ್ತಿದೆ. ಅಲ್ಲಿ ಸೀಟು ಗಿಟ್ಟಿಕೊಂಡ ಮೇಲೆ ಆ ಮಕ್ಕಳ ಕಲಿಕೆಗೆ ಇವರೇ ಒತ್ತಾಸೆಯಾಗಿ ನಿಂತು ಶ್ರಮಹಾಕಿ ಬಿಡುತ್ತಾರೆ. ಇಂಥಹದ್ದೇ ಆಸ್ಥೆಯನ್ನು ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸುವಾಗ ಯಾಕೆ ತೆಗೆದುಕೊಳ್ಳುವುದಿಲ್ಲ?
ಇವತ್ತು ವಿಶ್ವ ಸಂಸ್ಥೆಯ ಸಹಯೋಗದೊಂದಿಗೆ ಸರ್ಕಾರ ಶಾಲಾ ಕಾಲೇಜುಗಳನ್ನು ತೆರೆದಿದೆ, ಅತ್ಯುನ್ನತ ದರ್ಜೆಯ ಶಿಕ್ಷಕ/ಶಿಕ್ಷಕಿಯರನ್ನು ನೇಮಿಸಿಕೊಂಡಿದೆ, ಮಕ್ಕಳನ್ನು ಶಾಲೆಗೆ ಆಕರ್ಷಿಸಲು ಅನೇಕ ಕಸರತ್ತುಗಳನ್ನು ಮಾಡುತ್ತಿದೆ, ಬಟ್ಟೆ, ಪುಸ್ತಕ , ಉಚಿತ ಊಟ ಹೀಗೆ ತರಹೇವಾರಿ ಮಾದರಿಯಲ್ಲಿ ಸರ್ಕಾರಿ ಶಾಲೆಗಳು ಇವೆ, ಉಚಿತ ಪ್ರವಾಸ, ವಿಜ್ಞಾನದ ಕಲಿಕೆಗೆ ವಿಶೇಷ ಪ್ರೋತ್ಸಾಹ ಧನ, ಆಟೋಟ ಚಟುವಟಿಕೆಗೆ ವಿಶೇಷ ವೆಚ್ಚದ ಕಾರ್ಯಕ್ರಮಗಳು, ಶಿಕ್ಷಕರನ್ನು ಹುರಿದುಂಬಿಸಲು ವಿಶೇಷ ತರಬೇತಿಗಳು, ಅವರ ಉಸ್ತುವಾರಿಗೆ ಮೇಲಾಳುಗಳು ಹೀಗೆ ಏನೇನೋ ಇದ್ದರೂ ಸರ್ಕಾರಿ ಶಾಲೆಗಳಿಗೆ ಕೇವಲ ದುರ್ಬಲರ ಮಕ್ಕಳು ಮಾತ್ರ ಪ್ರವೇಶ ಪಡೆಯುತ್ತಿವೆ.ಕೆಲವು ಶಿಕ್ಷಕರುಗಳ ಅಸಡ್ಡಾಳತನದಿಂದಾಗಿ ಆ ಮಕ್ಕಳು ಅರ್ದದಲ್ಲೇ ಶಾಲೆ ಬಿಡುವ ಸಂಧರ್ಭಗಳು ಬರುತ್ತಿವೆ. ರಾಜ್ಯದಾಧ್ಯಂತ 10500ಕ್ಕೂ ಹೆಚ್ಚು ಸಂಖ್ಯೆಯ ಸರ್ಕಾರಿ ಶಾಲೆಗಳನ್ನು ಮುಚ್ಚಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಆದರೆ ಪ್ರಾದೇಶಿಕ ಭಾಷೆಗಳನ್ನು ಉಳಿಸಿ ಬೆಳೆಸುವ ಸಲುವಾಗಿ ಕೇಂದ್ರ ಸರ್ಕಾರ 1500ಕ್ಕೂ ಹೆಚ್ಚು ಶಾಲೆಗಳನ್ನು ತೆರೆಯಲು ರಾಜ್ಯಕ್ಕೆ ಆದೇಶಿಸಿದೆ. ಆದರೆ ಮಾರ್ಗದರ್ಶಿ ಸೂತ್ರಗಳನ್ನು ಉಲ್ಲಂಘಿಸಿ ಲೆಕ್ಕವಿಲ್ಲದಂತೆ ಬಂಡವಾಳಶಾಹಿಗಳೀಗೆ ಖಾಸಗಿ ಅಡ್ಡೆಗಳನ್ನು ತೆರೆಯಲು ಅವಕಾಶ ನೀಡಿರುವ ರಾಜ್ಯ ಸರ್ಕಾರ ಸರಿಯಾದದ್ದೊಂದು ಶಿಕ್ಷಣ ನೀತಿಯನ್ನು ರೂಪಿಸಿಕೊಳ್ಳದೇ ಮನಬಂದಂತೆ ನಿರ್ಧಾರಗಳನ್ನು ಪ್ರಕಟಿಸುತ್ತಿದೆ.ಶಿಕ್ಷಕರಿಗೆ ಸರಿಯಾದ ತರಬೇತಿ ಮತ್ತು ಸಿದ್ದತೆಗಳಿಲ್ಲದೇ ಪ್ರಾಥಮಿಕ ಮತ್ತು ಕಾಲೇಜು ಹಂತದಲ್ಲಿ ಕೇಂದ್ರ ಮಾದರಿಯ ಪಠ್ಯ ರೂಪಿಸಿ ಅನುಷ್ಠಾನಗೊಳಿಸಲು ಮುಂದಾಗಿದೆ.ಪಠ್ಯದಲ್ಲಿ ಇತಿಹಾಸವನ್ನು ತಿರುಚಿ ಕೇಸರಿಮಯವಾದ ಪಠ್ಯಗಳನ್ನು ಬಲವಂತವಾಗಿ ಹೇರುವ ಪ್ರಕ್ರಿಯೆ ಜಾರಿಯಲ್ಲಿದೆ. ಖಾಸಗಿ ಶಿಕ್ಷಣ ಅಡ್ಡೆಗಳು ಮಾತ್ರ ಯಾವ ನಿಯಮಗಳಿಗೂ ಒಳಪಡದೇ ಮನಸೋಇಚ್ಚೆ ಸುಲಿಗೆ ಮಾಡುವ ಕೇಂದ್ರಗಳಾಗಿ ಬಡವರಿಗೆ ಎಟುಕುಲಾರದ ಸ್ಥಿತಿಯಲ್ಲಿದ್ದವು. ಆದರೆ ಈ ಎಲ್ಲಾ ಗೋಂದಲಗಳ ನಡುವೆ ಶೇ.25ಮೀಸಲು ಸೀಟುಗಳನ್ನು ಖಾಸಗಿ ಶಾಲೆಗಳಲ್ಲೂ ನೀಡುವಂತೆ ಸುಪ್ರೀಂ ಕೋರ್ಟು ಆದೇಶ ನೀಡಿರುವುದು ಸ್ವಾಗತಾರ್ಹವೇ ಆಗಿದೆ. ಆದರೆ ಶೆ.25ರ ಮೀಸಲಿನಿಂದ ಅಲ್ಪ ಸಂಖ್ಯಾತರ ಪಟ್ಟಿಯಲ್ಲಿ ಬರುವ ಮಾರ್ವಾಡಿಗಳು, ಜೈನರು , ಕ್ರಿಶ್ಚಿಯನ್ನರು, ಮುಸ್ಲಿಂರ ವಿದ್ಯಾಸಂಸ್ಥೆಗಳಿಗೆ ವಿನಾಯಿತಿ ನೀಡಿರುವ ಕ್ರಮ ಮಾತ್ರ ಆಕ್ಷೇಪಾರ್ಹಾ ವಾಗಿದೆ. ದೇಶದಲ್ಲಿ ಶಿಕ್ಷಣವನ್ನು ಮಾರಾಟದ ಸರಕಾಗಿ ಇಟ್ಟವರೇ ಈ ಅಲ್ಪಸಂಖ್ಯಾತರು! ಹೀಗಿರುವಾಗ ಇಂತಹವರ ಸಂಸ್ಥೆಗಳಿಗೆ ರಿಯಾಯ್ತಿ ನೀಡುವ ಕ್ರಮ ಸಾಧುವಲ್ಲ.ಅಷ್ಟಕ್ಕೂ ಸುಪ್ರೀಕೋರ್ಟಿನ ಈ ಆದೇಶ ನಿಜಕ್ಕೂ ಜಾರಿಗೆ ಬರುವುದೇ ಎಂಬುದು ಪ್ರಶ್ನೆ? ಏಕೆಂದರೆ ಸಂವಿಧಾನ ಬದ್ದವಾಗಿ ಈ ದೇಶದ ಜನರಿಗೆ ಸಾಮಾಜಿಕ ನ್ಯಾಯಕ್ಕಾಗಿ ಹತ್ತು ಹಲವು ಅವಕಾಶಗಳನ್ನು ಕಲ್ಪಿಸಲಾಗಿದ್ದರೂ ಆಢಳಿತಾಗಾರರ ಇಚ್ಚಾಶಕ್ತಿಯ ಕೊರತೆಯಿಂದಾಗಿ ಅನುಷ್ಠಾನಗೊಳ್ಳದೇ ನೆನೆಗುದಿಗೆ ಬಿದ್ದಿವೆ ಎಂಬುದು ಶೋಚನೀಯಕರ ಸಂಗತಿ.
No comments:
Post a Comment