Sunday, December 29, 2013

ಅರವಿಂದ ಕೇಜ್ರಿವಾಲ ಎಂಬ ಮಾಂತ್ರಿಕ!

“Change Begins with small things” ಇದು ದೆಹಲಿಯ ಗದ್ದುಗೆ ಏರಿರುವ ಆಮ್ ಆದ್ಮಿ ನೇತಾರ ಅರವಿಂದ ಕೇಜ್ರಿವಾಲರ ಧ್ಯೇಯವಾಕ್ಯ. ಭ್ರಷ್ಟಾಚಾರದ ವಿರುದ್ದ ಚಳುವಳಿ ಮಾಡಿಕೊಂಡು ಅರ್ಧ ಶತಮಾನಗಳಿಂದ ದೇಶವನ್ನು ಆಳುತ್ತಿರುವ ಪ್ರಬಲ ಕಾಂಗ್ರೆಸ್ ವಿರುದ್ದ ಸೆಡ್ಡು ಹೊಡೆದು ಆ ಪಕ್ಷವನ್ನು ಗುಡಿಸಿ ಹಾಕುತ್ತೇನೆ ಎಂದು ಗುಟುರು ಹಾಕುತ್ತಿದ್ದ ಅರವಿಂದ ಕೇಜ್ರಿವಾಲ್ ಇವತ್ತು ಚಳುವಳಿಕಾರರ ಪಾಲಿನ ಐಕಾನ್, ಬದಲಾವಣೆ ಬಯಸುವ ಎಲ್ಲ ಮನಸ್ಸುಗಳ ಹೀರೋ ಆಗಿ ನಿಂತಿದ್ದಾರೆ. ಇದೇನು ಭ್ರಮೆಯೋ ನಿಜವೋ ಎಂಬ ಗೋಂದಲ ಸರಿಯುವ ಮುನ್ನವೇ ಯಾರೂ ನಿರೀಕ್ಷಿಸಿರದ ರೀತಿಯಲ್ಲಿ ಅದಿಕಾರದ ಗದ್ದುಗೆಯೇರಿದ್ದಾರೆ ಅಷ್ಟೇ ಅಲ್ಲ ತನ್ನ ನಿಲುವುಗಳಲ್ಲಿ ಯಾವುದೇ ಬದಲಾವಣೆಗಳಿಲ್ಲದೇ ನಿಚ್ಚಳ ನಿರ್ಧಾರಗಳೊಂದಿಗೆ ಅಧಿಕಾರ ಹಿಡಿದಿದ್ದಾರೆ ಇದು ದೇಶದ ಜಾಗೃತ ಮನಸ್ಥಿತಿಯ ಬದಲಾವಣೆಯ ಕನಸುಗಳ ಸಾಕಾರದ ಪ್ರತಿ ರೂಪದಂತೆ ಭಾಸವಾಗಲಾರಂಬಿಸಿದೆ. ಈ ಹೊತ್ತಿನಲ್ಲಿ ಇದು ಅತ್ಯಂತ ಪ್ರಮುಖವಾಗಿ ಗಮನಿಸಬೇಕಾದ ಸಂಗತಿ ಆಗಿದೆ.

          ಜಾಗತಿಕ ವಿದ್ಯಮಾನಗಳು ಬದಲಾಗುತ್ತಿರುವ ಸಂಧರ್ಭದಲ್ಲಿ ಚಳುವಳಿಗಳು ಸಾಯುತ್ತಿರುವ ಬೆನ್ನಲ್ಲೇ ದೆಹಲಿಯಲ್ಲಿ ಜರುಗಿದ “ನಿರ್ಭಯಾ” ಪ್ರಕರಣ ಹಾಗೂ ಜನಲೋಕ ಪಾಲ್ ಬಿಲ್ ಗೆ ಒತ್ತಾಯಿಸಿ ನಡೆದ ಚಳುವಳಿಗಳು ಪ್ರಮುಖವಾದವು ಮತ್ತು ಕೊಂಚ ಮಟ್ಟಿಗೆ ಗಟ್ಟಿತನ ಉಳಿಸಿಕೊಂಡಂತಹವು. ಚಳುವಳಿ ಎಂದರೆ ಮೂಗು ಮುರಿಯುವ ಮತ್ತು ಅನುಮಾನದಿಂದ ನೋಡುವ ಸಮಾಜದ ನಡುವೆ ವಿಷಯಗಳು ಬದ್ದತೆ ಉಳಿಸಿಕೊಂಡು ಮುಂದುವರೆಯುವುದು ಕಷ್ಟ ಸಾದ್ಯ. ಇದಕ್ಕೆ ಚಳುವಳಿಯ ನಿಖರತೆ ಮತ್ತು ಗಟ್ಟಿತನ, ಮಂಚೂಣಿಯಲ್ಲಿ ಬರುವ ನೇತಾರರ ಪ್ರಾಮಾಣಿಕ ಹಾಗೂ ವಿಶ್ವಾಸಾರ್ಹ ನಡೆಗಳು ಮುಖ್ಯವಾಗುತ್ತವೆ. ಜೆಪಿ ಚಳುವಳಿ, ರೈತ ಚಳುವಳಿ, ದಲಿತ ಚಳುವಳಿ ಸಾಂಸ್ಥಿಕ ಹಾಗೂ ಬೌದ್ದಿಕ ನೆಲೆಗಟ್ಟಿನಲ್ಲಿ ಆರಂಭಗೊಂಡು ಸಾಗಿದರೂ ಸ್ಪಷ್ಟ ರೂಪ ಪಡೆಯುವಲ್ಲಿ ವಿಫಲವಾದವು. ಚಳುವಳಿಗಳ ನೇತಾರರ ಒಳಜಗಳ, ಸ್ವಾರ್ಥ ಲೋಲುಪತೆ , ರಾಜಕೀಯದ ಹಂಬಲ, dependancy ಚಳುವಳಿಗಳನ್ನು ಮತ್ತು ನೇತಾರರನ್ನು ಹೊಸಕಿ ಹಾಕಿದವು. ಅವುಗಳ ಪಳೆಯುಳಿಕೆಗಳು ಅವರಿವರ ಸೆರಗಿನಂಚಿನಲ್ಲಿ ಸೋಗಿನ ಚಳುವಳಿಗಳನ್ನು ಮಾಡಿಕೊಂಡು ಬೆರಳೇಣಿಕೆಯಷ್ಟಿರುವ ಪ್ರಾಮಾಣಿಕ ಹೋರಾಟಗಾರರನ್ನು ಅಣಕಿಸುತ್ತಿರುವ ಈ ಹೊತ್ತಿನಲ್ಲಿ ಅಣ್ಣಾ ಹಜಾರೆಯ ಚಳುವಳಿ ಮತ್ತು ಅದರ ಬೆನ್ನೆಲೆಬುಗಳ ಪೈಕಿ ಪ್ರಮುಖರಾದ ಅರವಿಂದ ಕೇಜ್ರಿವಾಲ್ ರ ನಡೆಗಳು   ಸಧ್ಯದ ಪರಿಸ್ಥಿತಿಯಲ್ಲಿ ಬದಲಾವಣೆಯ ಪರ್ವವನ್ನು ಬಯಸುವವರಿಗೆ ಬೆಳಕಿಂಡಿಯಂತೆ ಗೋಚರಿಸುತ್ತಿವೆ. ಜಾಗತಿಕ ವಿದ್ಯಮಾನಗಳ ಗೋಂದಲದ ನಡುವೆಯೂ ಬದ್ದತೆಯಿಟ್ಟುಕೊಂಡ ಪ್ರಾಮಾಣಿಕ ಚಳುವಳಿಗೆ ಉಳಿಗಾಲವಿದೆ ಎಂಬುದನ್ನು ಗಂಬೀರವಾದ ನೆಲೆಗಟ್ಟಿನಲ್ಲಿ ಮನದಟ್ಟು ಮಾಡುತ್ತಿವೆ.
          ಹರಿಯಾಣ ರಾಜ್ಯದ ಶಾಖಾಹಾರಿ ಕುಟುಂಬದಿಂದ ಬಂದ ಅರವಿಂದ ಕೇಜ್ರಿವಾಲ ದೆಹಲಿಯಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷವನ್ನು ಗುಡಿಸಿ ಹಾಕುವ ಮಾತನಾಡುತ್ತಲೇ ಕೇವಲ ಒಂದು ವರ್ಷದ ಹಿಂದೆ ಆರಂಭಿಸಿದ ಆಂಧೋಲನವನ್ನು ಯಶಸ್ಸಿನ ಮೆಟ್ಟಿಲಿಗೆ ತಂದಿದ್ದಲ್ಲದೇ ತಾನು ಗುಡಿಸಿ ಹಾಕಿದ ಪಕ್ಷದ ಬೆಂಬಲವನ್ನು ಬಾಹ್ಯವಾಗಿ ಪಡೆದು ಅಧಿಕಾರದ ಗದ್ದುಗೆ ಏರಿರುವುದು ಸಾಮಾನ್ಯ ಸಂಗತಿಯಲ್ಲ. ಇಂತಹ ಕೇಜ್ರಿವಾಲ ಕುರಿತು ಕೆಲಸಂಗತಿಗಳನ್ನು ಅರಿಯುವುದು ಅವಶ್ಯ.ಭಾರತದ ಪ್ರತಿಷ್ಠಿತ ಐಐಟಿ ಯಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದ ಕೇಜ್ರಿವಾಲ ಟಾಟಾ ಸ್ಟೀಲ್ ನಲ್ಲಿ ಕೆಲಕಾಲ ಕಾರ್ಯ ನಿರ್ವಹಿಸಿ ನಾಗರೀಕ ಸೇವಾ ಪರೀಕ್ಷೆಗಳನ್ನು ತೆಗೆದುಕೊಳ್ಳುವ ಸಲುವಾಗಿ ಇಂಜಿನಿಯರ್ ಹುದ್ದೆಗೆ ರಾಜೀನಾಮೆ ನೀಡಿದರು. ಕೊಲ್ಕತ್ತಾದ ರಾಮಕೃಷ್ಣ ಮಿಷನ್ ನಲ್ಲಿ ಮತ್ತು ನೆಹರೂ ಯುವ ಕೇಂದ್ರದಲ್ಲಿ ಕೆಲ ದಿನಗಳನ್ನು ಕಳೆದ ಕೇಜ್ರಿವಾಲ್ ಐಆರ್ ಎಸ್ ಪರೀಕ್ಷೆಯಲ್ಲಿ ಯಶಸ್ಸು ಪಡೆದರು. ಮುಂದೆ ಆದಾಯ ತೆರಿಗೆ ಇಲಾಖೆಯಲ್ಲಿ ಜಂಟಿ ಆಯುಕ್ತರಾಗಿ ಭಾರತ ಆಡಳಿತ ಸೇವೆಗೆ ಸೇರ್ಪಡೆಗೊಂಡರು. ಅಲ್ಲಿ ಹಲವು ಪರಿಣಾಮಕಾರಿ ಕ್ರಮಗಳನ್ನು ಅನುಸರಿಸಿದ ಕೇಜ್ರಿವಾಲ ಬಿಗಿಯಾದ ಮತ್ತು ಸರಳವಾದ ತೆರಿಗೆ ನೀತಿಯನ್ನು ಅನುಷ್ಠಾನಕ್ಕೆ ತಂದು ಮೆಚ್ಚುಗೆಗೂ ಪಾತ್ರರಾದರು. ಸತತ 18ತಿಂಗಳುಗಳ ಕಾಲ ಕಾರ್ಯ ನಿರ್ವಹಿಸಿದ ಮೇಲೆ ಅಲ್ಲಿಯೂ ಕೆಲಸ ತೊರೆದರು. ಮುಂದೆ ಪಬ್ಲಿಕ್ ಕಾಸ್ ರೀಸರ್ಚ್ ಪೌಂಡೇಶನ್ (PCRF) ಎಂಬ ಸೇವಾ ಸಂಸ್ಥೆಯನ್ನು ತಮ್ಮ ಬೆಂಬಲಿಗ ಮನಿಶ್ ಸಿಸೋಡಿಯಾ ಜೊತೆ ಸೇರಿ ಸ್ಥಾಪಿಸಿದರು. ಇದೇ ಸಂಧರ್ಭದಲ್ಲಿ ದೊರಕಿದ ಮ್ಯಾಗ್ಸೆಸ್ಸೆ ಪುರಸ್ಕಾರದ ಅಷ್ಟೂ ಹಣವನ್ನು ಸೇವಾ ಸಂಸ್ಥೆಗೆ ನೀಡಿದ ಹೆಗ್ಗಳಿಕೆ ಕೇಜ್ರಿವಾಲರದ್ದು. ಧ್ವನಿಯಿಲ್ಲದ ಕೆಳಸ್ಥರದ ಜನರಿಗೆ ಮದ್ಯಮವರ್ಗದವರಿಗೆ ಬೆಂಬಲವಾಗಿ ನಿಂತ ಪರಿವರ್ತನಾ ಸಂಸ್ಥೆಯೂ ಆಗ ಸ್ಥಾಪಿತವಾಯಿತು.
          ಅಣ್ಣಾ ಹಜಾರೆ ನೇತೃತ್ವದಲ್ಲಿ 2002ರಿಂದ ಮಾಹಿತಿ ಹಕ್ಕು ಕಾಯ್ದೆ ಅನುಷ್ಠಾನಕ್ಕೆ ನಡೆಯುತ್ತಿದ್ದ ಚಳುವಳಿಯಲ್ಲಿ ಕೇಜ್ರೀವಾಲ್ ಕೂಡ ಪ್ರಮುಖರು. ಒತ್ತಡಕ್ಕೆ ಮಣಿದ ಕೇಂದ್ರ ಸರ್ಕಾರ 2005-06ರಲ್ಲಿ ಮಾಹಿತಿ ಹಕ್ಕು ಕಾಯ್ದೆ ರೂಪಿಸಿತು. 2011ರಲ್ಲಿ ಜನಲೋಕಪಾಲ್ ಬಿಲ್ ಗೆ ಒತ್ತಾಯಿಸಿ ನಡೆದ ಬೃಹತ್ ಚಳುವಳಿಯಲ್ಲಿ ಪ್ರಸ್ತಾಪಿಸಲಾಗಿದ್ದ ಪ್ರಮುಖ ಕರಡು ಅಂಶಗಳ ರಚನೆಯಲ್ಲಿಯೂ ಕೇಜ್ರಿವಾಲ್ ಪಾತ್ರ ಪ್ರಮುಖವಾಗಿತ್ತು. ಭ್ರಷ್ಟಾಚಾರ ವಿರುದ್ದದ ಅಣ್ಣಾ ಹಜಾರೆ ನೇತೃತ್ವದ ಚಳುವಳಿಗೆ ದಕ್ಕಿದ ಭಾರೀ ಜನ ಬೆಂಬಲದ ಲಾಭ ಪಡೆಯಲು ಯತ್ನಿಸಿದ್ದ ಬಿಜೆಪಿ ಮತ್ತು ಇತರೆ ಪಕ್ಷಗಳು ಬೆಂಬಲಕ್ಕೆ ನಿಂತಿದ್ದವು ಎಂಬುದು ಎಲ್ಲರಿಗೂ ತಿಳಿದ ಸಂಗತಿ. ಆಗ ಒಗ್ಗೂಡಿದ ಭಾರೀ ಜನಬೆಂಬಲ ಮತ್ತು ಒತ್ತಾಸೆಯನ್ನು ಅಣ್ಣಾ ಹಜಾರೆ ಮತ್ತು ತಂಡ ಹೇಗೆ ನಿಭಾಯಿಸುತ್ತದೆ ಅದಕ್ಕೆ ತಾರ್ಕಿಕ ಅಂತ್ಯ ಸಿಗುವುದೇ ಎಂಬ ಪ್ರಶ್ನೆ ಆಗ ಎದ್ದಿತ್ತು. ಮತ್ತು ಅಂತಹ ಬೃಹತ್ ಶಕ್ತಿಯನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಸಾಧ್ಯವೇ ರಾಜಕೀಯದ ಸುಳಿಗಾಳಿಯಲ್ಲಿ ಎಲ್ಲವೂ ಹೊಸಕಿ ಹಾಕಲಿದೆ ಎಂಬ ಮನಸ್ಥಿತಿಗೆ ಈಗ ತಕ್ಕ ಶಾಸ್ತಿಯಾದಂತಾಗಿದೆ.
          ಉತ್ತರ ಪ್ರದೇಶದಲ್ಲಿ ಅಸೆಂಬ್ಲಿ ಚುನಾವಣೆಗಳು ಎದುರಾಗುತ್ತಿದ್ದಂತೆ ಪ್ರಮುಖ ರಾಜಕೀಯ ಪಕ್ಷಗಳೆ ಎಲ್ಲ 70ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಹಾಕಲು ತಿಣುಕಾಡುತ್ತಿರುವ ಹೊತ್ತಿನಲ್ಲೇ ಜನಸಾಮಾನ್ಯರನ್ನ ಬದ್ದತೆ ಇಟ್ಟುಕೊಂಡ ಅಭ್ಯರ್ಥಿಗಳನ್ನೇ ಹುಡುಕಿ ಕಣಕ್ಕಿಳಿಸಿದ ಕೇಜ್ರಿವಾಲ್ ಆಗಲೇ ಅರ್ಧ ಯಶಸ್ಸನ್ನು ಗಳಿಸಿ ಬಿಟ್ಟಿದ್ದರು. ಚುನಾವಣಾ ಪ್ರಚಾರಕ್ಕೆ ಮತ್ತು ಸಂಘಟನೆಗೆ ದುಡ್ಡಿನ ಮಹತ್ವ ಅರಿತ ಅವರು ಸಾರ್ವಜನಿಕ ದೇಣಿಗೆಯನ್ನು ಅವಶ್ಯವಿರುವಷ್ಟು ಸಂಗ್ರಹಿಸಿದರು. ಮತ್ತು 69ಕ್ಷೇತ್ರಗಳ ಪೈಕಿ 28ರಲ್ಲಿ ಗೆಲುವು ಸಾಧಿಸಿ ಬಿಟ್ಟರು. ಅತಂತ್ರ ಸ್ಥಿತಿ ನಿರ್ಮಾಣವಾದಾಗ ಕಾಂಗೈ ಮತ್ತು ಬಿಜೆಪಿ ಪಕ್ಷಗಳಿಗೆ ಅರಗಿಸಿಕೊಳ್ಳಲಾಗದ 18ಷರತ್ತುಗಳನ್ನು ವಿಧಿಸಿದ್ದಲ್ಲದೇ ಅಧಿಕಾರದ ಹೊಸ್ತಿಲು ಬಳಿಗೆ ಬಂದಾಗಲೂ ಅಧಿಕಾರ ಹಿಡಿಯುವ ಮುನ್ನ ಜನಾಭಿಪ್ರಾಯ ಸಂಗ್ರಹಿಸಿ ಅಧಿಕಾರಕ್ಕೆ ಬಂದಿದ್ದು ಯಾವತ್ತಿಗೂ ಚಾರಿತ್ರಿಕ ಸಂಗತಿಯೇ. ದೆಹಲಿಯಂತಹ ಸೂಕ್ಷ್ಮ ಮತ್ತು ಪ್ರಮುಖ ಪ್ರದೇಶದಲ್ಲಿ ಸರ್ಕಾರಿ ಬಂಗಲೆಯನ್ನು ಪಡೆಯದೇ, ಐಶಾರಾಮಿ ಕಾರುಸೌಲಭ್ಯ ಪಡೆಯದೇ, ಬೆಂಗಾವಲು ಪಡೆಯಿಲ್ಲದೇ ತಾನಂದುಕೊಂಡಂತೆ ಅಧಿಕಾರ ಚಲಾಯಿಸುವ ಮನಸ್ಥಿತಿಯಿಂದ ಕೇಜ್ರಿವಾಲ್ ಮುಖ್ಯ ಮಂತ್ರಿಯಾಗಿರುವುದು ಈ ಶತಮಾನದ ಮಟ್ಟಿಗೆ  ಪ್ರಜಾಪ್ರಭುತ್ವ ವ್ಯವಸ್ಥೆಯ ಬಹುದೊಡ್ಡ ಗೆಲುವೇ ಸರಿ.

          ಕ್ಯೂಬಾ ಕ್ರಾಂತಿಗೆ ಕಾರಣನಾದ ಚೆಗುವಾರ ಯುವ ಸಮುದಾಯದ ಐಕಾನ್ ಆಗಿರುವಂತೆ ಇವತ್ತು ಭಾರತದಲ್ಲಿ ಕೇಜ್ರಿವಾಲ್ ಜ್ವರ ದೇಶದಾದ್ಯಂತ ಹಬ್ಬುತ್ತಿದೆ. ಎಲ್ಲ ರಾಜ್ಯಗಳಲ್ಲೂ ಆಮ್ ಆದ್ಮಿ ಪಕ್ಷದ ಶಾಖೆಗಳು ತೆರೆಯುತ್ತಿವೆ. ಭರವಸೆಯ ಕಂಗಳ ಸಮುದಾಯ ಅಲ್ಲಿ ಜಮಾಯಿಸುತ್ತಿದೆ ಎಂದರೆ ಅದು ವರ್ತಮಾನದ ಜಾಗೃತ ಪ್ರಜ್ಞೆಯ ಪ್ರತೀಕವಲ್ಲದೇ ಮತ್ತೇನೂ ಅಲ್ಲ. ಜನಸಾಮಾನ್ಯರ ನಿರೀಕ್ಷೆಗಳನ್ನು ಕೇಜ್ರಿವಾಲ ಎಷ್ಟರ ಮಟ್ಟಿಗೆ ನಿಭಾಯಿಸುತ್ತಾರೋ ತಿಳಿಯದು ಆದರೆ ಜನಸಾಮಾನ್ಯರ ಆಶಯದ ಪ್ರಜಾಪ್ರಭುತ್ವ ವ್ಯವಸ್ಥೆಯ ಸಂಕೇತವಾಗಿ ನೇತಾರನಾಗಿರುವುದು ಬಹುಕಾಲ ನೆನಪಿನಲ್ಲುಳಿಯುವ ಸಂಗತಿ. 

Sunday, November 17, 2013

ಮೌಢ್ಯಾಚರಣೆ ಕರಡು ವಿರೋಧಿ ನೆಲೆಯ ನಗ್ನ ಸತ್ಯಗಳು

ನಂಬಿಕೆಗಳು ಧರ್ಮವನ್ನ ಪ್ರತಿನಿಧಿಸುತ್ತವೆ, ಧರ್ಮ ಜನರ ಬದುಕನ್ನ ನಿರ್ದೇಶಿಸುತ್ತದೆ, ಜನ ಅದಕ್ಕೆ ತಕ್ಕಂತೆ ಬದುಕನ್ನು ಕಂಡು ಕೊಳ್ಳುತ್ತಾರೆ. ಭಾರತದ ಸಂವಿಧಾನ ಧಾರ್ಮಿಕ ನಂಬಿಕೆಗಳಿಗೆ ಮತ್ತು ಆಚರಣೆಗಳಿಗೆ ಆಯಾ ಧರ್ಮದ ನೆಲೆಗಟ್ಟಿನಲ್ಲಿ ಅವಕಾಶ ನೀಡಿದೆ. ಬಹುಶ: ಶ್ರೇಣೀಕೃತ ವ್ಯವಸ್ಥೆಯಲ್ಲಿಯೇ ಶತಮಾನಗಳಿಂದಲೂ ಸಾಗಿ ಬಂದ ಭಾರತ ದೇಶಕ್ಕೆ ಸ್ವಾತಂತ್ರ್ಯ ದೊರೆತ ಮೇಲೂ ಆ ನೆಲೆಗಟ್ಟನ್ನು ಮೀರುವ ಇಲ್ಲವೇ ಪರ್ಯಾಯವನ್ನು ಕಂಡು ಕೊಳ್ಳುವ ಅವಕಾಶ ಇರಲಿಕ್ಕಿಲ್ಲ. ಅಷ್ಟರ ಮಟ್ಟಿಗೆ ಜಾತೀಯ ಪದ್ದತಿ ತಲೆ ತಲಾಂತರದಿಂದಲೂ ಅನುಸರಿಸಿಕೊಂಡು ಬಂದಿದೆ ಅನಿಸುತ್ತೆ. ಹಾಗಾಗಿ ಒಂದು ಧಾರ್ಮಿಕ ವ್ಯವಸ್ಥೆಯಲ್ಲಿ ಪ್ರಶ್ನಿಸುವ ಇಲ್ಲವೇ ಕೊಂಚ ಬದಲಾವಣೆ ಬೇಕು ಎನ್ನುವವರಿಗೆ ಸ್ಥಾಪಿತ ಹಿತಾಸಕ್ತಿಗಳ ದೊಡ್ಡ ಬೆದರಿಕೆಯನ್ನು ಎದುರಿಸ ಬೇಕಾಗುತ್ತದೆ. ಇವತ್ತು ಸಮಾಜವಾದಿ ಹಿನ್ನೆಲೆಯ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಜಾರಿಗೆ ತರಲು ಹೊರಟಿರುವ ಮೌಡ್ಯಾಚರಣೆ ವಿರೋಧಿ ಕಾನೂನಿನ ಕರಡು ಅಂತಹುದೆ ತೊಡಕನ್ನು ಎದುರಿಸುತ್ತಿದೆ. ಅದು ವಾಸ್ತವ ನೆಲೆಗಟ್ಟಿನಲ್ಲಿ ಚರ್ಚೆಗಳು ನಡೆದಿದ್ದರೆ ಇಲ್ಲಿ ಇದನ್ನು ಪ್ರಸ್ತಾಪಿಸುವ ಅವಶ್ಯಕತೆಯೇ ಇರುತ್ತಿರಲಿಲ್ಲವೇನೋ. ರಾಜ್ಯ ಸರ್ಕಾರದ ಕೋರಿಕೆಯಂತೆ ರಾಷ್ಟ್ರೀಯ ಕಾನೂನು ವಿದ್ಯಾಲಯ ರಚಿಸಿರುವ ಈ ಕರಡು ಪ್ರತಿ ಸರ್ಕಾರಕ್ಕೆ ಸಲ್ಲಿಕೆಯಾಗುತ್ತಿದ್ದಂತೆ ರಾಜ್ಯದಾದ್ಯಂತ ದೊಡ್ಡ ಹುಯಿಲೆದ್ದಿದೆ. ಕಾಂಗ್ರೆಸ್ ಸರ್ಕಾರ ಹಿಂದೂಗಳ ನಂಬಿಕೆಯನ್ನೇ ಪ್ರಶ್ನಿಸುತ್ತಿದೆ, ಇತರೆ ಧರ್ಮಗಳ ನಂಬಿಕೆಗಳನ್ನು ಪ್ರಶ್ನಿಸುತ್ತಿಲ್ಲ, ನಂಬಿಕೆ ಮತ್ತು ಆಚರಣೆ ಪ್ರಶ್ನಿಸುವ ಮೂಲಕ ಹಿಂದೂಗಳ ಧಾರ್ಮಿಕ ಭಾವನೆಗೆ ಭಂಗ ತಂದಿದೆ. ಪೂಜೆ ಮಾಡುವುದು ತಪ್ಪೆ? ಹರಕೆ ತೀರಿಸುವುದು ತಪ್ಪೇ? ಸಿದ್ದರಾಮಯ್ಯ ಮು.ಮಂ. ಆದಾಗ ಕುರ್ಚಿಗೆ ಪೂಜೆ ಮಾಡಿದ್ದರು ಹೀಗಿದ್ದರೂ ಅದ್ಯಾವುದೋ ಸ್ವಘೋಷಿತ ಬುದ್ದಿಜೀವಿಗಳ ಮಾತು ಕೇಳಿಕೊಂಡು ಹಿಂದೂ ಧಾರ್ಮಿಕ ಭಾವನೆಗೆ ಮಸಿ ಬಳಿಯಲು ಹೊರಟಿದ್ದಾರೆ ಇತ್ಯಾದಿಯಾಗಿ ರಾಜ್ಯಾಧ್ಯಂತ ಚರ್ಚೆ ಯಾಗುತ್ತಿದೆ. ಅಷ್ಟಕ್ಕೂ ಮೌಡ್ಯಾಚರಣೆ ನಿಷೇಧ ವಿಧೇಯಕ ಏಕೆ ಬೇಕು? ಈ ಕಾಯ್ದೆ ಏನನ್ನು ಒಳಗೊಂಡಿದೆ? ಧಾರ್ಮಿಕ ಭಾವನೆಗಳಿಗೆ ನಂಬಿಕೆಗಳಿಗೆ ಇದು ಧಕ್ಕೆ ತರುತ್ತಿದೆಯೇ? ಕರಡು ರಚನೆಯ ಹಿಂದಿನ ಉದ್ದೇಶ ಏನು? ಇದರಲ್ಲಿ ಇದ್ದವರು ಯಾರು? ಕರಡನ್ನು ವಿರೋಧಿಸುವವರ ಹುನ್ನಾರಗಳೇನು? ಎಂಬ ಪ್ರಶ್ನೆಗಳಿಗೆ ನನ್ನ ಗ್ರಹಿಕೆ ನಿಲುಕಿದಂತೆ ಉತ್ತರಿಸುವ ಪ್ರಯತ್ನ ಮಾಡಿದ್ದೇನೆ ಓದಿಕೊಳ್ಳಿ.
(ಮುಂದುವರೆಯುವುದು......?)

Tuesday, September 3, 2013

ಢುಂಢಿ ಕಥಾನಕ ಮತ್ತು ವರ್ತಮಾನದ ತಲ್ಲಣಗಳು!

ಢುಂಢಿ: ಅರಣ್ಯಕನೊಬ್ಬ ಗಣಪತಿಯಾದ ಕಥೆ ವಿವಾದ ನ್ಯಾಯಾಲಯದ ಮೆಟ್ಟಿಲು ಹತ್ತಿದೆ. ಕೃತಿಯ ಕುರಿತು ಪತ್ರಿಕೆ ಗಳಲ್ಲಿ ಬಂದ ವರದಿಯಾದರಿಸಿ ಕೃತಿಯ ಕರ್ತೃ ಯೋಗೇಶ್ ಮಾಸ್ಟರ್ ರನ್ನು ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆಯಲ್ಲದೇ ಪ್ರಕರಣ ಇತ್ಯರ್ಥ ಆಗುವವರೆಗೆ ನ್ಯಾಯಾಲಯ “ಡುಂಢಿ” ಕಾದಂಬರಿಯನ್ನು ಮುಟ್ಟುಗೋಲು ಹಾಕಿಕೊಂಡು ಪ್ರಕಟಣೆ ಇಲ್ಲವೇ ಮಾರಾಟ ಮಾಡದಂತೆ ತಾತ್ಕಾಲಿಕ ನಿರ್ಬಂಧ ಹೇರಿದೆ. ಸೆಕ್ಯುಲರ್ ಹೆಸರಿನ ಪಕ್ಷ ಅಧಿಕಾರದಲ್ಲಿರುವಾಗ ನಡೆದಿರುವ ಇಂತಹ ಘಟನೆ ಈ ಹಿಂದೆಂದೂ ನಡೆದಿರಲಿಲ್ಲ, ಬಂಜಗೆರೆ ಜಯಪ್ರಕಾಶ್, ಬೈರಪ್ಪ, ಶಿವಪ್ರಕಾಶ್ ರ ವಿವಾದಿತ ಕೃತಿಗಳು ಬಂದಾಗ ಹೀಗೆಲ್ಲಾ ಆಗಿರಲಿಲ್ಲ.  ಈ ನಡುವೆ ಸೋಕಾಲ್ಡ್ ಬುದ್ದಿಜೀವಿಗಳು ಕೃತಿಯ ವಿರುದ್ದವಾಗಿ ತಮ್ಮ ವೈಯುಕ್ತಿಕ ನಿಲುವುಗಳನ್ನು ಹರಿಯ ಬಿಡುತ್ತಿದ್ದಾರೆ. ಯೋಗೀಶ್ ಮಾಸ್ಟರ್ ರನ್ನು ಬೆಂಬಲಿಸುವವರ ವಿರುದ್ದ ತೀವ್ರ ಟೀಕೆಗಳನ್ನು ಮಾಡಲಾಗುತ್ತಿದೆ. ಕೃತಿಯನ್ನು ಹೊರತು ಪಡಿಸಿ ಯೋಗೀಶ್ ಮಾಸ್ಟರನ ವಿರುದ್ದ ವೈಯುಕ್ತಿಕ ಟೀಕೆ ಟಿಪ್ಪಣಿಗಳನ್ನು ಮಾಡಲಾಗುತ್ತಿದೆ. ಒಂದು ಕೃತಿಯ ಕುರಿತು ಇಷ್ಟೆಲ್ಲಾ ಬೆಳವಣಿಗೆಗಳು ಆಗಿದ್ದೇಕೆ? ಕೃತಿಯಲ್ಲಿ ಯೋಗೇಶ್ ಮಾಸ್ಟರ್ ಹೇಳಿರುವುದೇನು? ಕೃತಿಯ ವಿರುದ್ದದ ಧ್ವನಿ ಎತ್ತಿದ್ದು ಯಾರು ? ಯಾಕೆ? ಇದರ ಹಿಂದಿನ ಹುನ್ನಾರಗಳೇನು? ಎಂಬ ಪ್ರಶ್ನೆಗಳು ಏಳುವುದು ಸಹಜ. ಈ ನಿಟ್ಟಿನಲ್ಲಿ ಯಾವುದೇ ಪೂರ್ವಾಗ್ರಹಗಳಿಲ್ಲದೇ ಒಟ್ಟು ಘಟನೆಯ ಕುರಿತು ಒಂದು ಪುಟ್ಟ ಅವಲೋಕನ ಮತ್ತು ಕೆಲವು ಪ್ರಶ್ನೆಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ. 
       ಭಾರತ ದೇಶ ವಿವಿಧ ಸಾಂಸ್ಕøತಿಕ ಆಚಾರ ವಿಚಾರಗಳನ್ನು ಮತ್ತು ಧಾರ್ಮಿಕತೆಯನ್ನು ಹೊಂದಿದ ದೇಶ. ಭಾವನಾತ್ಮಕವಾಗಿ ನಿತ್ಯದ ಬದುಕನ್ನು ರೂಪಿಸಿಕೊಂಡ ಜಗತ್ತಿನ ಏಕೈಕ ರಾಷ್ಟ್ರವೂ ಹೌದು. ಇಲ್ಲಿ ಸಾವಿರಾರು ಸಂಖ್ಯೆಯ ಮತಪಂಥಗಳಿವೆಯಾದರೂ ಸಾಂಸ್ಕøತಿಕ ಚೌಕಟ್ಟಿನಲ್ಲಿ ಒಗ್ಗೂಡುವ ಮತ್ತು ಪರಸ್ಪರರ ವಿಚಾರಗಳನ್ನು ಗೌರವಿಸುವ ಪರಿಪಾಠವಿದೆ. ಹಾಗೆಯೇ ತಾವು ಅನುಸರಿಸುವ ದಾರ್ಮಿಕ ಸಂಸ್ಕøತಿಗೆ ಒಗ್ಗುವ ಮತ್ತು ಕಟ್ಟಳೆಗಳನ್ನು ಚೌಕಟ್ಟಿನೊಳಗೆ ವಿಧಿಸಿಕೊಂಡು ಅಗೋಚರವಾದ ಶಕ್ತಿ ಇದೆಯೆಂಬ ಕಲ್ಪನೆಯಲ್ಲಿ ಅದಕ್ಕೆ ದೈವದ ಸ್ವರೂಪ ನೀಡಿ ನಂಬಿಕೆಯ ಬಂಧವನ್ನು ಗಟ್ಟಿಗೊಳಿಸಲಾಗಿದೆ. ಹಾಗೂ ಇವುಗಳಿಗೆ ಪೂರಕವಾಗಿ ಪವಾಡ ಸದೃಶವಾದ ಕಥೆಗಳನ್ನು ಅನುಕೂಲಕ್ಕೆ ತಕ್ಕಂತೆ ರೂಪಿಸಿಕೊಳ್ಳಲಾಗಿದೆ, ಇಂಥಹ ಕಥೆಗಳು ಕಾಲ ಘಟ್ಟದಿಂದ ಕಾಲಘಟ್ಟಕ್ಕೆ ಮತ್ತು ಪರಿಸರಕ್ಕೆ ತಕ್ಕಂತೆ ಸ್ಥಳದಿಂದ ಸ್ಥಳಕ್ಕೆ ಬದಲಾವಣೆಗೆ ಒಳಪಟ್ಟಿದೆ. ಆದು ಆಯಾ ಪರಿಸರದ ಸ್ವರೂಪಕ್ಕೆ ತಕ್ಕಂತೆ ಇರುತ್ತದಾದ್ದರಿಂದ ಅವರವರ ನಂಬಿಕೆಗೆ ಒಳಪಟ್ಟಿರುತ್ತದೆ. ಹೀಗಿರುವಲ್ಲಿ ಇವಕ್ಕೆ ಆಧಾರಗಳು ಪೂರ್ಣ ಪ್ರಮಾಣದಲ್ಲಿ ಇರದೇ ಅದು ಇತಿಹಾಸವಾಗದೇ ಪುರಾಣಗಳಾಗಿ ಮಾರ್ಪಾಡಾಗಿವೆ ಎಂಬುದು ನನ್ನ ಅಭಿಮತ. ಹಾಗೆಯೇ ಮನುಷ್ಯನ ನಿಯಂತ್ರಣಕ್ಕೆ ದೈವ ಸ್ವರೂಪದ ಕಲ್ಪನೆಗಳನ್ನು ಉಳಿಸಿಕೊಂಡು ಅದನ್ನು ಗೌರವದ ನೆಲೆಗಟ್ಟಿನಲ್ಲಿ ಉಳಿಸಿಕೊಳ್ಳಲಾಗಿದೆಯಾದರೂ ವರ್ತಮಾನದಲ್ಲಿ ಕೆಲವೊಮ್ಮೆ ಅಂತಹ ನಂಬಿಕೆಗಳು ಚರ್ಚೆಗೆ ಒಳಪಡುತ್ತಿವೆ, ಇಂತಹ ಚರ್ಚೆಗಳನ್ನು ಹತ್ತಿಕ್ಕುವ ಸ್ಥಾಪಿತ ಹಿತಾಸಕ್ತಿಗಳು ಅದಕ್ಕೆ ಅಡ್ಡಿ ಉಂಟು ಮಾಡುತ್ತಿವೆ. ಇಲ್ಲಿ ಇತಿಹಾಸ ಪುರಾಣವಾಗಿದೆ, ಪುರಾಣ ಇತಿಹಾಸವಾಗುವ ಆತಂಕಗಳು ಇವೆ.
      ಢುಂಢಿ ಕಾದಂಬರಿಯ ಕಥಾನಕ ಹಿಂದೂ ಸಮಾಜದ ವಿಘ್ನ ವಿನಾಶಕ ಗಣಗಳ ಅಧಿ ದೇವತೆ ಮಹಾಗಣಪತಿಯ ಕಥೆ. ಗಣಪತಿ ಎಂದರೆ ಅದು ಆಕಾರ ಮತ್ತು ನಿರಾಕಾರಗಳ ಸಮ್ಮಿಲನವೇ ಗಣಪತಿಯ ಪರಿಕಲ್ಪನೆ ಆಗಿದೆ. ಹಾಗಾಗಿ ಗಣಪತಿಯನ್ನು ಪ್ರಕೃತಿಯ ಒಂದು ಭಾಗ, ಸಮಾಜದ ಎಲ್ಲ ಸ್ಥರಗಳಲ್ಲು ಎಲ್ಲ ರೂಪಗಳಲ್ಲು ಗಣಪತಿಯನ್ನು ಕಾಣಲಾಗುತ್ತದೆ ಮತ್ತು ಪೂಜಿಸಲಾಗುತ್ತಿದೆ. ಇಂತಹ ಗಣಪತಿಯ ಕುರಿತಾಗಿ ಕೆಲವು ಬರಹಗಾರರ ಗ್ರಂಥಗಳನ್ನು ಆದರಿಸಿ ಎಷ್ಟೋ ಶತಮಾನಗಳಷ್ಟು ಹಿಂದಿನ ಕಾಲಘಟ್ಟದ ಪರಿಸರದಲ್ಲಿ ಗಣಪತಿ ರೂಪುಗೊಂಡಿದ್ದು ಹೇಗೆ ಎಂಬ ಕಥೆಯನ್ನು ಎಳೆ ಎಳೆಯಾಗಿ ವಿವರಿಸಲಾಗಿದೆ. ಅಂದರೆ ಭಾರತಕ್ಕೆ ಆರ್ಯರು ಆಗಮಿಸಿ ಇಲ್ಲೆ ನೆಲೆಯೂರುವ ಸಂಧರ್ಭ, ಮೂಲ ನಿವಾಸಿಗಳಾದ ದ್ರಾವಿಡರನ್ನು ದಸ್ಯುಗಳನ್ನಾಗಿ ಮಾಡಿಕೊಂಡು ವರ್ಗ ಸಮಾಜವನ್ನು ಸೃಷ್ಠಿಸಿದ ಸಂಧರ್ಭ ಗಣಪತಿ ರೂಪುಗೊಂಡ ಬಗ್ಗೆ ಮತ್ತು ಅಂದಿನ ಕಾಲಘಟ್ಟದ ಆಚಾರ ಪದ್ದತಿಗಳ ಬಗ್ಗೆ ಹೇಳುತ್ತಲೇ ವೈದಿಕಶಾಹಿಯ ಅಧಿಪತ್ಯ ಸ್ಥಾಪಿತವಾದ ಕುರಿತು ಹೇಳಲಾಗಿದೆ ಮತ್ತು ಅದು ಕಥಾನಕ ರೂಪದಲ್ಲಿದೆ. ವಾಸ್ತವಿಕ ನೆಲೆಗಟ್ಟಿನಲ್ಲಿ ಒಪ್ಪಿಕೊಳ್ಳುವ ಮತ್ತು ಒಪ್ಪಿಕೊಳ್ಳಲಾಗದ ಕಹಿ ಸತ್ಯಗಳನ್ನು ಹೇಳಲಾಗಿದೆ. ಬಹುತೇಕವಾಗಿ ದೇವರ ಧೈವತ್ವದ ಕಲ್ಪನೆಗಳನ್ನೆ ಬುಡಮೇಲು ಮಾಡುವಂತೆ ಕಂಡರೂ ಸತ್ಯ ಇಲ್ಲಿ ಅಪಥ್ಯವಾಗಿದೆಯಷ್ಠೆ.
      ಭಾರತವೇ ಮೊದಲಾಗಿ ವಿಶ್ವದ ಇತರೆ ಭಾಗಗಳಲ್ಲಿಯೂ ಕೂಡ ಪೌರಾಣಿಕ ಕಥನಗಳ ಮೂಲಗಳನ್ನು ಸಂಶೋಧಿಸಲು ಸಾಮಾನ್ಯ ಜನರು ಹಿಂಜರಿಯುತ್ತಾರೆ. ಅಂತಹ ಪರೀಕ್ಷೆಗಳು ಅವರ ಧಾರ್ಮಿಕ ಭಾವನೆಯನ್ನು ಘಾಸಿಗೊಳಿಸುತ್ತದೆ ಅಥವಾ ಮೌಲ್ಯಗಳನ್ನು ಅಪವಿತ್ರಗೊಳಿಸುತ್ತದೇನೋ ಎಂಬಂತಹ ಮಡಿವಂತಿಕೆಯ ಭಾವವಿದೆ. ಈ ಪೌರಾಣಿಕ ಕಥಾನಕಗಳು ಯಾರೋ ಕೆಲಸಕ್ಕೆ ಬಾರದ ಗೊಡ್ಡು ಹರಟೆ ಮಲ್ಲರು ಹೆಣೆದಿರುವಂತಹ ವಿಷಯಗಳಲ್ಲ. ಅವುಗಳು ಅಧ್ಯಯನಕ್ಕೆ ಯೋಗ್ಯವಾಗಿದ್ದು, ಸೂಕ್ಷ್ಮ ಸ್ವರೂಪದ ಸತ್ಯಗಳೂ, ಹಾಗೂ ಅನೇಕ ಸಾಂಸ್ಕøತಿಕ ವಿಚಾರಗಳೂ ಅವುಗಳಲ್ಲಿರುತ್ತವೆ. ನಮ್ಮ ಪುರಾಣಗಳನ್ನು ಅಧ್ಯಯನ ಯೋಗ್ಯವಾಗಿ ಪರಿಗಣಿಸಿ ಪರಿಶೀಲಿಸುವುದರಿಂದ ಗತಕಾಲದ ಸತ್ಯಗಳು, ನಮಗೆ ಪಥ್ಯವಾದರೂ, ಅಪಥ್ಯವಾದರೂ, ಸಾಮಾಜಿಕ ಮತ್ತು ಸಾಂಸ್ಕøತಿಕ ಬೆಳವಣಿಗೆಯ ಸತ್ಯಗಳು ಗೋಚರವಾಗುತ್ತವೆ. ಈ ಹಿನ್ನೆಲೆಯಲ್ಲಿ ಢುಂಢಿ ಕಾದಂಬರಿಯ ಕಥಾವಸ್ತು ಇದೆಯೆಂದು ಹೇಳಲಾಗಿದೆ. 
        ಇನ್ನು ಯೋಗೀಶ್ ಮಾಸ್ಟರ್ ಕಥೆ, ಈತ ಒಬ್ಬ ಸಾಮಾನ್ಯ ಲೇಖಕ, ರಂಗಕರ್ಮಿ ಮತ್ತು ಸಂಗೀತ ಪ್ರೇಮಿ. ಇವರೇ ತಮ್ಮ ಮಾಹಿತಿಗಳನ್ನು ಅಂತರ್ಜಾಲದಲ್ಲಿ ಹರಿಯ ಬಿಟ್ಟಿರುವ ಪ್ರಕಾರ ಟಿಸಿಹೆಚ್ ಶಿಕ್ಷಣ ಪಡೆದ ಪ್ರಾಥಮಿಕ ಶಾಲೆಯ ಶಿಕ್ಷಕ.ಹಲವು ವರ್ಷಗಳ ಸೇವೆಯ ಬಳಿಕ ಶಿಕ್ಷಕ ವೃತ್ತಿಗೆ ವಿದಾಯ ಹೇಳಿದ್ದಾರಂತೆ.ಕ್ರಿಯಾಶೀಲ ಸ್ವಭಾವದ ಈ ಮನುಷ್ಯ 16ರ ಹರೆಯದಲ್ಲೇ ಸಾಹಿತ್ಯದೆಡೆಗೆ ಒಲವು ಬೆಳೆಸಿಕೊಂಡವರು. ಆಗಲೇ “ಭಗ್ನ ಹೃದಯ” ಕವನ ಸಂಕಲನದ ಮೂಲಕ ಅಡಿಯಿರಿಸಿ ನೂರಾರು ಲೇಖನಗಳು ಕಥೆ, ಕವನಗಳನ್ನು ಬರೆದಿದಾರಲ್ಲದೇ 208ಕ್ಕೂ ಹೆಚ್ಚು ರಂಗ ಪ್ರದರ್ಶನಗಳಲ್ಲಿ ನಟರಾಗಿ, ನಿರ್ದೇಶಕರಾಗಿ ಕಾಣಿಸಿಕೊಂಡಿದ್ದಾರೆ ತಾವೇ ನಾಟಕಗಳನ್ನು ರಚಿಸಿದ್ದಾರೆ. ವೈಚಾರಿಕ ಪ್ರಜ್ಞೆಯ ಯೋಗೀಶ್ ಆಂಗ್ಲ ನಾಟಕಗಳಲ್ಲಿ ಪೌರಾಣಿಕ ಕಥಾನಕವನ್ನು ವರ್ತಮಾನಕ್ಕೆ ಹೋಲಿಸಿ ರಂಗ ಪ್ರಯೋಗಗಳನ್ನು ಮಾಡಿ ಮೆಚ್ಚುಗೆ ಪಡೆದವರು. ಎಂ ಎಸ್ ಸತ್ಯು, ಹಂಸಲೇಖ ಮತ್ತಿತರೊಂದಿಗೆ ಒಡನಾಡುತ್ತಲೇ ರಾಮಾಯಣ ಪುರಾಣದಲ್ಲಿ ಸೀತಾದೇವಿಯನ್ನು ಹೇಗೆ ಶೋಷಿಸಲಾಯಿತು ಎಂಬ ಎಂಬ ಕುರಿತು “ಜಾನಕಿರಾಂ” ನಾಟಕ ಬರೆದು ರಂಗ ಪ್ರದರ್ಶನ ಮಾಡಿದ್ದರು. ಈಗ ಗಣಪತಿಯ ಕುರಿತು ಇವರು ಬರೆದ ಕೃತಿ ತಾರ್ಕಿಕ ನೆಲೆಗಟ್ಟಿನ ಕಥಾನಕವೇ ಹೊರತು ಸಂಶೋಧನಾ ಕೃತಿಯೂ ಅಲ್ಲ. 
      ಇಂಥಹ ಸನ್ನಿವೇಶದಲ್ಲಿ ರಾಜ್ಯ ಮಟ್ಟದ ಒಂದೆರೆಡು ಪತ್ರಿಕೆಗಳು ಮತ್ತು ಸುದ್ದಿ ವಾಹಿನಿಗಳು ಏಕಮುಖವಾದ ಚರ್ಚೆಯನ್ನು ತಂದಿದ್ದಲ್ಲದೇ ಈ ಕುರಿತು ಸಾರ್ವಜನಿಕ ಪ್ರತಿಕ್ರಿಯೆಗಳಿಗೆ ಕರೆನೀಡಿ ಪರಿಸ್ಥಿತಿಯನ್ನು ಉಲ್ಭಣಗೊಳ್ಳುವಂತೆ ಮಾಡಿಬಿಟ್ಟರು. ಅದ್ಯಾರೋ ಪಂಚಾಂಗ ಹೇಳುವ ಪುಣ್ಯಾತ್ಮನೊಬ್ಬ ಲಕ್ಷಾಂತರ ಜನ ವೀಕ್ಷಿಸುತ್ತಿದ್ದಾರೆ ಎಂಬುದನ್ನು ಅರಿಯದೇ ಪುಸ್ತಕವನ್ನೇ ಹರಿದು ಹಾಕಿ ಬಿಟ್ಟ, ಮತ್ಯಾರೋ ಒಬ್ಬರು ಟಿವಿಯ ಲೈವ್ ಮಾತುಕತೆಯಲ್ಲೇ ಯೋಗೀಶ್ ಮಾಸ್ಟರನ್ನು ದಂಡಿಸುವಂತೆ ಪ್ರತಿಭಟಿಸುವಂತೆ ಕರೆನೀಡಿ ಬಿಟ್ಟ. ಕನ್ನಡವನ್ನೇ ಸರಿಯಾಗಿ ಆಡಲು ಬಾರದ ಖಾವಿದಾರಿಯೊಬ್ಬ ಪತ್ರಿಕಾ ಹೇಳಿಕೆಯ ಆದಾರದಲ್ಲೇ ದೂರು ದಾಖಲಿಸಿ ಮನಬಂದಂತೆ ಮಾತನಾಡಲಾರಂಭಿಸಿದ ಅಸಲಿಗೆ ಅವರ್ಯಾರೂ “ಢುಂಢಿ” ಪುಸ್ತಕವನ್ನು ಓದಿಯೇ ಇರಲಿಲ್ಲ ಎಂಬುದು ಗಮನಾರ್ಹ. ಇದೊಂದು ದುರಾದೃಷ್ಟಕರ ಬೆಳವಣಿಗೆ. ಹಾಗಾಗಿ ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ಹಲ್ಲೆಯೇ ಸರಿ. 
    “ಢುಂಢಿ” ಕಾದಂಬರಿ ಯಾಗಿರುವುದರಿಂದ  ಅದು ಓದಲು ಸಿಕ್ಕಿದ್ದರೆ ಅಲ್ಲಿನ ಹೂರಣವನ್ನು ಒಪ್ಪುವ ಇಲ್ಲವೆ ಬಿಡುವ ಕುರಿತು ಚರ್ಚಿಸ ಬಹುದಿತ್ತೇನೋ ಆದರೆ ಅಂತಹದ್ದಕ್ಕೆ ಅವಕಾಶವೇ ನೀಡದೇ ವೈದಿಕ ಶಾಹಿ ಹಿತಾಸಕ್ತಿಗಳು ಪ್ರಕರಣವನ್ನು ದಿಕ್ಕು ತಪ್ಪಿಸಿ ಬಿಟ್ಟವು. ಘಟನೆ ಆರಂಭವಾದಂದಿನಿಂದ ಈ ಕುರಿತು ಯಾರೆಲ್ಲ ಮಾತನಾಡಿದರು, ಬರೆದರು ಎಂಬುದನ್ನು ಸೂಕ್ಷ್ಮವಾಗಿ ಗಮನಿಸಿದರೆ ಸಾಕು ಇದರ ಅರಿವಾಗುತ್ತದೆ. ಅಷ್ಟಕ್ಕೂ ನಾವು ನಂಬಿಕೊಂಡ ನಂಬಿಕೆಗಳು ಪ್ರಶ್ನಾತೀತವಾದುವುಗಳೇನಲ್ಲ, ಆದರೂ ಯಾರು ಯಾವ ಕಥೆ ಬರೆದರೂ ನಮ್ಮ ಮೂಲ ನಂಬಿಕೆಗಳಿಗೆ ಧಕ್ಕೆ ಉಂಟಾಗಲಾರದು, ಏಕೆಂದರೆ ಭಾವಗಳು ಅವರವರ ನಂಬಿಕೆಗಳಿಗೆ ನಿಷ್ಠವಾಗಿರುತ್ತವೆ ಹಾಗೆಂದು ಅದನ್ನು ಸಾರ್ವತ್ರಿಕವಾಗಿ ಹಳಿಯುವ ಘಾಸಿಗೊಳಿಸುವ ಪ್ರಯತ್ನವೂ ಆಗಬಾರದು. ಜನಪದರ ಸಂಸ್ಕøತಿಯಲ್ಲಿ ಇಂತಹ ವೈರುದ್ಯಗಳು ಪದೇ ಪದೇ ದಾಖಲಾಗುತ್ತಲೇ ಇರುತ್ತವೆ. ಬೇಕಾದ್ದನ್ನು ಉಳಿಸಿಕೊಂಡು ಬೇಡದ್ದನ್ನು ಬಿಟ್ಟುಬಿಡಿ ಆದರೆ ಹತ್ತಿಕ್ಕುವ ಪ್ರಯತ್ನಗಳು ಕೊನೆಯಾಗಲಿ. ಬದಲಾದ ಕಾಲಘಟ್ಟದಲ್ಲಿ ಬದಲಾವಣೆಯ ಗಾಳಿ ನಿರಂತರ ಅಲ್ಲವೇ ಹಾಗೆಯೇ ಆಯ್ಕೆಯ ಹಕ್ಕು ನಿಮ್ಮದೇ ಆಗಿದೆಯಲ್ಲವೇ?

Sunday, August 11, 2013

ಬಾಡೂಟವೂ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವೂ

(ಈ ಲೇಖನ ನಾಲ್ಕು ತಿಂಗಳ ಹಿಂದೆ ಜನತಾ ಮಾಧ್ಯಮಕ್ಕೆ ಬರೆಯಲಾಗಿತ್ತು, ಬ್ಲಾಗ್ ನಲ್ಲಿ ಪ್ರಕಟವಾಗಿರಲಿಲ್ಲ ಇದೀಗ ತಡವಾಗಿ ತಮ್ಮ ಅವಗಾಹನೆಗೆ)
ಗ್ರಹಿಕೆ ತಪ್ಪಿದರೆ ಏನೆಲ್ಲಾ ಆಗಬಹುದು, ಮಾಧ್ಯಮಗಳು ಎಡವಿದರೆ ಎಂಥ ಎಡವಟ್ಟುಗಳು ಸಂಭವಿಸುತ್ತವೆ ಎಂಬುದಕ್ಕೆ ನನ್ನ ಮುಂದಿರುವ ವಿಷಾsÀದನೀಯ ಘಟನೆಯನ್ನು ಹೇಳುವ ಅನಿವಾರ್ಯತೆ ಒದಗಿ ಬಂದಿದೆ. ಇಂತಹ ಕ್ರಿಯೆಗಳಿಂದ ವಿನಾಕಾರಣ ನಿರೀಕ್ಷಿಸದ ವೇದನೆಗೊಳಗಾಗಿದ್ದು ಹಾಸನ ಸಾಹಿತ್ಯ ವಲಯದ ಪ್ರಜ್ಞಾವಂತ ಲೇಖಕಿ, ಕವಿ, ಸಾಮಾಜಿಕ ಕಾರ್ಯಕರ್ತೆ ಹಾಗೂ ಹೋರಾಟಗಾರ್ತಿಯೂ ಆಗಿರುವ ಸೂಕ್ಷ್ಮ ಸಂವೇದನೆಯ ರೂಪಾ ಹಾಸನ. ಇತರರಿಗೆ ಕೇಡು ಬಯಸದೇ ಹಾಸನದ ಸಾಹಿತ್ಯ ವಲಯದಲ್ಲಿ ಕಳೆದ ಒಂದೂವರೆ ದಶಕಗಳಿಂದ ತನ್ನ ಪಾಡಿಗೆ ತಾನು ವಿವೇಚನಾಶೀಲವಾದ ಕ್ರಿಯೆಗಳಲ್ಲಿ ತೊಡಗಿಕೊಳ್ಳುತ್ತಲೇ ಭರವಸೆಯ ಛಾಪು ಮೂಡಿಸಿ ಹೆಸರು ಮಾಡಿದವರು ರೂಪ ಹಾಸನ. ಪ್ರೇರಣಾ ವಿಕಾಸ ವೇದಿಕೆಯನ್ನು ರಚಿಸಿಕೊಂಡು ಆ ಮೂಲಕ ಕನ್ನಡ ಪರವಾದ ಕಾಳಜಿ ಇಟ್ಟುಕೊಂಡು ಮಕ್ಕಳು ಮತ್ತು ಯುವಜನರಿಗೆ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗುವಂತಹ ಚಟುವಟಿಕೆಗಳು, ಲಿಂಗ ಸಮಾನತೆ, ದೌರ್ಜನ್ಯ, ಶೋಷಣೆ ಕುರಿತು ಜಾಗೃತಿ ಮೂಡಿಸುತ್ತಾ ವಿಶಿಷ್ಠವಾಗಿ ಸಾಮಾಜಿಕ ವಲಯದಲ್ಲಿ ಸ್ಥಾನವನ್ನು ಭದ್ರಪಡಿಸಿಕೊಂಡದ್ದು ರೂಪ ಹಾಸನ. ಇಂತಹ ಹೆಣ್ಣು ಮಗಳು ಹಾಸನ ಜಿಲ್ಲಾ ಕಸಾಪ ದಲ್ಲಿ ಕರ್ನಾಟಕ ಜಾನಪದ ಪರಿಷತ್ ಆಯೋಜಿಸಿದ್ದ ಆಹಾರ ಮೇಳದ ಕುರಿತು ವಿಜಯವಾಣಿ ಪತ್ರಿಕೆಯ ಲೌಡ್ ಸ್ಪೀಕರ್ ಕಾಲಂ ಗೆ ಪ್ರತಿಕ್ರಿಯೆ ನೀಡಿದ್ದನ್ನೆ ತಪ್ಪಾಗಿ ಗ್ರಹಿಸಿ ಜೈನ ಸಮುದಾಯಕ್ಕೆ ಸಮೀಕರಿಸಿ ಸ್ಥಳೀಯ ಪತ್ರಿಕೆಯೊಂದು ವರದಿ ಮಾಡಿದ್ದರಿಂದಾಗಿ ಮಾನಸಿಕ ವೇದನೆಯನ್ನು ಅನುಭವಿಸಬೇಕಾಗಿ ಬಂತು ಅಲ್ಲದೇ ಸಮುದಾಯದಿಂದ ಅವಗಣನೆಗೆ ಒಳಗಾಗುವ ಸಂಧರ್ಭವೂ ಎದುರಾಗಿದ್ದು ವಿಷಾದನೀಯಕರ ಸಂಗತಿ.
ಇದೆಲ್ಲಾ ನಡೆದದ್ದು ಹಾಸನ ದಲ್ಲಿ, ಹೇಳಿ ಕೇಳಿ ಶಕ್ತಿ ರಾಜಕಾರಣಕ್ಕೆ ಹೆಸರಾಗಿರುವ ಮತ್ತು ರಾಜಕೀಯವನ್ನು ಉಂಡೇಳುವ ಇಲ್ಲಿಯ ಜನರ ಮನಸ್ಥಿತಿಗಳ ನಡುವೆ ಪ್ರತೀ ಹಂತದಲ್ಲೂ ಕೆಟ್ಟ ರಾಜಕಾರಣವೇ ಬೇಕಿಲ್ಲದೆಯೂ ಬೆರೆತು ಹೋಗಿ ಬಿಡುತ್ತದೆ ಅದು ವಿಷಾsÀದನೀಯಕರ ಸಂಗತಿ. ಈಗ್ಯೆ 3ವಾರಗಳ ಹಿಂದೆ ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆವರಣದಲ್ಲಿ ನೂತನವಾಗಿ ಕರ್ನಾಟಕ ಜಾನಪದ ಪರಿಷತ್ ನ ಅಧ್ಯಕ್ಷತೆ ವಹಿಸಿಕೊಂಡ ಹಂಪನಹಳ್ಳಿ ತಿಮ್ಮೇಗೌಡ ಆಹಾರ ಮೇಳ ಆಯೋಜಿಸಿದ್ದರು. ಈ ಸಂಬಂಧ ಪತ್ರಿಕಾಗೋಷ್ಠಿ ನಡೆದಾಗಲೇ ಅಲ್ಲಿ ಎಂತೆಂಥಹ ತಿನಿಸು ಮಾರಾಟವಾಗಬಹುದು ಎಂಬ ಬಗ್ಗೆ ಪತ್ರಕರ್ತರಲ್ಲೂ ಜಿಜ್ಞಾಸೆ ಇತ್ತು. ಆದರೆ ಇದ್ಯಾವುದನ್ನು ಲೆಕ್ಕಿಸದೇ ಸಹಜವಾಗಿ ಆಹಾರ ಮೇಳ ಕಸಾಪ ಭವನದ ಹೊರ ಆವರಣದಲ್ಲಿ ಆಯೋಜನೆ ಗೊಂಡಿತು.ಮೇಳದಲ್ಲಿ ಮನೆಯಿಂದ ಸಿದ್ದಪಡಿಸಿ ತಂದ ಆಹಾರವನ್ನಷ್ಟೇ ಮಾರಾಟಕ್ಕಿಡಲಾಗಿತ್ತು. ಅಲ್ಲಿ ಹಾಸನದ ಸೋಕಾಲ್ಡ್ ಗಳು ಸೇರಿದಂತೆ ಹಲವರು ನಿಸ್ಸಂಕೋಚವಾಗಿ ಇಷ್ಟಕ್ಕನುಗುಣವಾಗಿ ಮಾಂಸಹಾರವನ್ನು ಸವಿದರು, ಸಸ್ಯಾಹಾರವನ್ನು ಸವಿದರು. ಆದರೆ ಮರುದಿನ ಈ ಕುರಿತು ಪತ್ರಿಕೆಯೊಂದರಲ್ಲಿ ಕಸಾಪ ಆವರಣದಲ್ಲಿ ಬಾಡೂಟ ಅದರಲ್ಲಿಯೂ ಹಂದಿ ಕರಿ ಮಾರಾಟ ಮತ್ತು ಸೇವನೆ ಸರಿಯೇ ಎಂಬ ವರದಿ ಜೊತೆಗೆ ಕೆಲವು ಗಣ್ಯರ ವಿರೋಧಿ ಹೇಳಿಕೆಗಳು ಪ್ರಕಟವಾದವು. ಆಹಾರ ಮೇಳ ಆಯೋಜಿಸಿದ್ದು ಜನಪದ ಪರಿಷತ್ ಆದರೆ ಅದಕ್ಕೆ ಜಾಗ ಒದಗಿಸಿದ ಕಸಾಪ ಟೀಕೆ ಟಿಪ್ಪಣಿಗಳಿಗೆ ಎರವಾಯಿತು. ಮುಂದುವರೆದ ಚರ್ಚೆಯಲ್ಲಿ ಆಹಾರಮೇಳ ಆಯೋಜಿಸಿದ್ದ ತಿಮ್ಮೇಗೌಡ “ಬಾಡೂಟ ಮಾರಾಟ ಅಥವ ಸೇವನೆ ಮಾಡದಿರಲು ಕಸಾಪ ಏನು ಶಂಕರ ಮಠವಲ್ಲ” ಎಂಬ ತೀಕ್ಷ್ಣ ಹೇಳಿಕೆ ನೀಡುವ ಜೊತೆಗೆ ಆಹಾರ ಕ್ರಮ ಮತ್ತು ಸೇವನೆ ಕುರಿತು ಲೇಖನ ಬರೆದು ಸಮರ್ಥಿಸಿಕೊಂಡರು. ಇವರ ಪ್ರತಿಕ್ರಿಯೆಗೆ ಬೇಸರಗೊಂಡ ಹಾಸನದ ಶಂಕರ ಮಠದ ಮುಖಂಡರುಗಳು ಬಾಡೂಟದ ಚರ್ಚೆಗೆ ಶಂಕರಮಠ ಎಳೆದು ತಂದ ಕ್ರಮವನ್ನು ಖಂಡಿಸಿದರು.
ಇಷ್ಟೆಲ್ಲ ಆಗಿ ತಣ್ಣಗಾಗುವ ವೇಳೆಗೆ ರಾಜ್ಯಮಟ್ಟದ ಪತ್ರಿಕೆಯ ಉತ್ಸಾಹಿ ವರದಿಗಾರರೊಬ್ಬರು ಆ ಪತ್ರಿಕೆಯ ಯಲ್ಲಿ ವಿಷಯ ಪ್ರಸ್ತಾಪಿಸಿ ಹಾಸನದ ಸಾರಸ್ವತ ಲೋಕದ ಪ್ರಮುಖರು ಮತ್ತು ಯುವಜನರನ್ನು ಮಾತನಾಡಿಸಿದರು. ಈ ಪೈಕಿ ಆರ್.ಪಿ ವೆಂಕಟೇಶಮೂರ್ತಿ, ರೂಪಹಾಸನ, ಎಚ್.ಕೆ ಶರತ್ ಮಾಂಸಹಾರ ಮಾರಾಟವಾಗಿದ್ದು ತಪ್ಪೇನಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರೆ, ದಲಿತ ಸಾಹಿತ್ಯ ಪರಿಷತ್‍ನ ನಾಗರಾಜ್ ಸದರಿ ಆಹಾರ ಮೇಳದಲ್ಲಿ ದನದ ಮಾಂಸ ಸೇರಿಲ್ಲದಿದುದರ ಕುರಿತು ಬೇಸರ ವ್ಯಕ್ತಪಡಿಸಿ ದನ ತಿಂದವರೂ ಸಾಹಿತ್ಯ ರಚಿಸಿದ್ದಾರೆ.! ಎಂದರು. ಉಳಿದವರು ಮಾಂಸಹಾರ ಸೇವನೆಗೆ ಪರಿಷತ್ ಸೂಕ್ತ ಆವರಣವಲ್ಲ ಎಂದರೆ, ಪರಿಷತ್ ಆವರಣದಲ್ಲಿ ಮಾಂಸಹಾರಕ್ಕೆ ಇತಿಮಿತಿ ಬೇಕು ಜನಪದರ ಆಹಾರವೆಂದು ಕೋಣ ಕಡಿಯಲು ಸಾಧ್ಯವೇ ? ಕಳ್ಳು ಸೇಂದಿ ಕುಡಿಯಲು ಸಾಧ್ಯವೆ? ಎಂದು ಪ್ರಶ್ನಿಸಿದವರು ಕೆಲವರು. ಹೀಗೆ ಅವರವರ ಭಾವಕ್ಕೆ ಪ್ರತಿಕ್ರಿಯಿಸಿ ಅವರವರದೇ ನೆಲೆಗಟ್ಟಿನಲ್ಲಿ ಅದಕ್ಕೆ ಸಮರ್ಥನೆ ಕೊಟ್ಟುಕೊಂಡಿದ್ದರೆ ಏನು ಆಗುತ್ತಿರಲಿಲ್ಲವೇನೋ..

ಆದರೆ ಮರುದಿನ ಸ್ಥಳೀಯ ದಿನಪತ್ರಿಕೆಯೊಂದರಲ್ಲಿ  ರೂಪ ಹಾಸನ ಅವರ ಹೇಳಿಕೆಯನ್ನು ಮಾತ್ರ ಹೆಕ್ಕಿ ತಿರುಚಿ ಜೈನ ಸಮುದಾಯ ಅಹಿಂಸೆಯನ್ನು ಪ್ರತಿಪಾದಿಸುತ್ತದೆ ಆದರೆ ಸಮುದಾಯದ ಪ್ರತಿನಿಧಿಯಂತಿರುವ ರೂಪ ಹಾಸನ ಮಾಂಸಾಹಾರವನ್ನು ಬೆಂಬಲಿಸಿದ್ದಾರೆ ಆ ಮೂಲಕ ಜೈನ ಸಮುದಾಯದ ಆಶಯಗಳಿಗೆ ಧಕ್ಕೆಯಾಗುವಂತೆ ಮಾಡಿದ್ದಾರೆ ಎಂದು ಬರೆದು ತಾತ್ವಿಕ ನೆಲೆಗಟ್ಟಿನಲ್ಲಿ ನಡೆಯುತ್ತಿದ್ದ ಹೋರಾಟಕ್ಕೆ ಮತೀಯ ತಿರುವು ನೀಡಿ ಬಿಟ್ಟರು. ಸಹಜವಾಗಿಯೇ ಮುಜುಗುರಕ್ಕೆ ಈಡಾದ ಜೈನ ಸಮುದಾಯದ ಮಂದಿ ರೂಪಾ ಅವರನ್ನು ಕನಿಷ್ಟ ಸಭೆಗೆ ಕರೆದು ಸ್ಪಷ್ಟೀಕರಣ ಕೇಳುವ ಸೌಜನ್ಯ ತೋರದೇ ತಾವಷ್ಟೇ ಸಭೆ ಸೇರಿ ಚರ್ಚಿಸಿ ರೂಪಹಾಸನ ಹೇಳಿಕೆಯನ್ನು ವಾಪಾಸು ಪಡೆಯಬೇಕು ವಿಷಾದ ವ್ಯಕ್ತಪಡಿಸಬೇಕು ಎಂದು ತೀರ್ಮಾನಿಸಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದರಲ್ಲದೇ ರೂಪಹಾಸನ ಅವರಿಗೂ ನೋಟೀಸು ಜಾರಿ ಮಾಡಿದರು. ಬಹುಶ: ಪ್ರಜ್ಞಾವಂತಿಕೆ ಇದ್ದಿದ್ದರೆ ಇಂತಹ ತೀರ್ಮಾನದ ಅಗತ್ಯ ಬೀಳುತ್ತಿರಲಿಲ್ಲವೇನೋ ಏಕೆಂದರೆ ರೂಪ ಹಾಸನ ಸಾಂಸ್ಕøತಿಕ ಪ್ರತಿನಿಧಿಯಾಗಿ ಲೇಖಕಿಯಾಗಿ ಪ್ರತಿಕ್ರಿಯೆ ನೀಡಿದ್ದರೆ ಹೊರತು ಸಮುದಾಯದ ಪ್ರತಿನಿಧಿಯಾಗಿ ಹೇಳಿಕೆ ನೀಡಿರಲಿಲ್ಲ. ಅಷ್ಟಕ್ಕೂ ತಾನು ಜೈನ ಸಮುದಾಯದ ಪ್ರತಿನಿಧಿ ಎಂದು ರೂಪಹಾಸನ ಗುರುತಿಸಿಕೊಂಡ ಉದಾಹರಣೆಗಳಿಲ.್ಲ ಹೀಗಿರುವಾಗ ಜೈನ ಸಮುದಾಯದ ಮುಖಂಡರು ರೂಪ ಹಾಸನ ಪ್ರತಿಕ್ರಿಯೆಗೂ ಜೈನ ಸಮುದಾಯಕ್ಕೂ ಸಂಬಂಧವಿಲ್ಲ ಅದು ಅವರ ವೈಯಕ್ತಿಕ ನಿಲುವು, ಜೈನ ಸಮಾಜ ತನ್ನ ಸಿದ್ದಾಂತಗಳಿಗೆ ಬದ್ದವಾಗಿದೆ ಎಂದು ಹೇಳಿದ್ದರೆ ಪ್ರಕರಣ ಮುಗಿಯುತ್ತಿತ್ತು. ಆದರೆ ಆ ರೀತಿ ಆಗಲೇ ಇಲ್ಲ ಎಂದರೆ ಅದರ ಹಿಂದಿನ ಹುನ್ನಾರಗಳೇನು? ಎಂಬುದು ಸ್ಪಷ್ಟ. ಈ ತಿರುವು ಅಭಿವ್ಯಕ್ತಿ ಸ್ವಾತಂತ್ರ್ಯ ಹರಣದ ಕೆಟ್ಟ ಬೆಳವಣಿಗೆ ಮತ್ತು ಸಮುದಾಯವನ್ನು ಪ್ರಚೋದಿಸಿದ ಖಂಡನಾರ್ಹ ಬೆಳವಣಿಗೆಯಲ್ಲವೇ?
ಇಷ್ಟೆಲ್ಲ ಆದರೂ ಹಾಸನದ ಸಂವೇದನಾಶೀಲ ಮನಸ್ಸುಗಳು ಧ್ವನಿಯೆತ್ತುವ ಪ್ರಯತ್ನವನ್ನೇ ಮಾಡಲಿಲ್ಲ, ರೂಪ ಹಾಸನ ಕೂಡ ಧೃತಿಗೆಡಲಿಲ್ಲ ಬದಲಿಗೆ ಗಟ್ಟಿ ಮನಸ್ಸಿನ ಆ ಹೆಣ್ಣುಮಗಳು ತಾನು ವ್ಯಕ್ತಪಡಿಸಿದ ಪ್ರತಿಕ್ರಿಯೆಗೆ ಬದ್ದತೆ ಇಟ್ಟುಕೊಂಡರು, ಜೈನ ಸಮುದಾಯಕ್ಕೆ ಸೂಕ್ತ ಸಮಜಾಯಿಷಿಯನ್ನೇ ಕೊಟ್ಟರು. ಆಗ ಎಚ್ಚೆತ್ತುಕೊಂಡ ಹಾಸನದ ಪ್ರಗತಿಪರ ಧೋರಣೆಯ ಮಂದಿ ರೂಪಹಾಸನ ನಿಲುವಿಗೆ ಬೆಂಬಲಿಸಿ ಪ್ರತಿಕ್ರಿಯಿಸಿದರು, ದೇವನೂರ ಮಹದೇವ, ಹಿ ಶಿ ರಾಮಚಂದ್ರಗೌಡ, ಬಂಜಗೆರೆ ಜಯಪ್ರಕಾಶ್ ಮತ್ತಿತರರು ಅಭಿವ್ಯಕ್ತಿ ಸ್ವಾತಂತ್ರ್ಯ ಹರಣದ ಕುರಿತು ಖಂಡಿಸಿ ಹೇಳಿಕೆ ನೀಡಿದರಲ್ಲದೇ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದರು. ಎಲ್ಲ ಪ್ರಕರಣದ ಕೇಂದ್ರ ಬಿಂದುವಾಗಿದ್ದ ವಿಜಯವಾಣಿ, ಗಣ್ಯರ ಹೇಳಿಕೆಯನ್ನು ಪ್ರಕಟಿಸಿತು. ಆದರೆ ಪ್ರಕರಣದ ತೀವ್ರತೆಗೆ ಕಾರಣರಾಗಿದ್ದ ಸ್ಥಳೀಯ ಪತ್ರಿಕೆ ಮಾತ್ರ ತಾವೇ ಆರಂಭಿಸಿದ ಚರ್ಚೆಗೆ ಸೂಕ್ತ ತಾರ್ಕಿಕ ಅಂತ್ಯ ಕಾಣಿಸುವಲ್ಲಿ ವಿಫಲರಾದರು. ಪರಿಣಾಮ ಸಾರ್ವಜನಿಕವಾಗಿ ಅವಗಣನೆಗೆ ಟೀಕೆ ಟಿಪ್ಪಣಿಗಳಿಗೆ ಆಹಾರವಾಗಬೇಕಾಯಿತು.

ಇಡೀ ಪ್ರಕರಣವನ್ನು ಗಂಬೀರವಾಗಿ ಅವಲೋಕಿಸುತ್ತಾ ಯಾವುದೇ ವಿವಾದಗಳಿಗೆ ಆಸ್ಪದ ನೀಡದೆ ಪ್ರಜ್ಞಾವಂತಿಕೆ ಮೆರೆದದ್ದು ಮಾತ್ರ ಕನ್ನಡ ಸಾಹಿತ್ಯ ಪರಿಷತ್‍ನ ಅಧ್ಯಕ್ಷ ಡಾ ಜನಾರ್ಧನ್. ಹಾಸನದ ಕೇಂದ್ರ ಸ್ಥಾನದಲ್ಲಿರುವ ಸಾಹಿತ್ಯ ಪರಿಷತ್‍ನ ಆವರಣದಲ್ಲಿ ಬಾಡೂಟ ಇಂದು ನಿನ್ನೆಯದೇನಲ್ಲ. ಮಾಂಸಹಾರ ಇಲ್ಲವೇ ಸಸ್ಯಾಹಾರ ಆಹಾರ ಪದ್ದತಿಯ ಒಂದು ಕ್ರಮ ಅದನ್ನು ಸೇವಿಸುವುದು ಬಿಡುವುದು ಅವರವರಿಗೆ ಬಿಟ್ಟದ್ದು ಹಾಗಾಗಿ ಸಾಹಿತ್ಯ ಪರಿಷತ್ ಆವರಣದಲ್ಲಿ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿದ್ದ ಎಚ್ ಬಿ ರಮೇಶ್ ಅವಧಿ ಹೊರತು ಪಡಿಸಿ ಉಳಿದೆಲ್ಲರ ಅವಧಿಯಲ್ಲೂ ಒಂದಿಲ್ಲೊಂದು ಕಾರಣಕ್ಕೆ ಬಾಡೂಟದ ಸಮಾರಾಧನೆ ನಡೆದಿದೆ, ಕೆಲವೊಮ್ಮೆ ಖಾಸಗಿ ಕಾರ್ಯಕ್ರಮಗಳಿಗೂ ಹೊರ ಆವರಣವನ್ನ ನೀಡಿದಾಗ ಮಾಂಸಹಾರ ಸೇವನೆ ಆಗಿದೆ. ತೀರ್ಥ ಸೇವನೆ ಮತ್ತು ಧೂಮಪಾನ ನಡೆದಿರುವುದನ್ನು ತಳ್ಳಿಹಾಕಲು ಸಾಧ್ಯವಿಲ್ಲ. ಆಗೆಲ್ಲಾ ಅಪವಿತ್ರವಾಗದಿದ್ದ ಕಸಾಪ ಆವರಣ ಈಗ ಮಾತ್ರ ಅಪವಿತ್ರವಾಯ್ತು ಎಂಬ ಹುಯ್ಲಿನ ಹಿಂದೆ ದೊಡ್ಡ ರಾಜಕಾರಣವೇ ಇದೆ ಎಂಬ ಚರ್ಚೆಗಳು ಈಗ ನಡೆಯುತ್ತಿವೆ.

 ಯಾವುದನ್ನೇ ಆಗಲಿ ನಿಷೇಧಿಸುವುದು ಎಂದರೆ ತಾತ್ವಿಕ ನೆಲೆಗಟ್ಟಿನಲ್ಲಿ ನಮಗೆ ನಾವೆ ವಿಧಿಸಿಕೊಳ್ಳುವ ಒಂದು ಶಿಸ್ತಿನ ಪ್ರತೀಕ, ಅಂತಹ ಜಾಗೃತಿ ನಮ್ಮೊಳಗೆ ಬರಬೇಕು. ಆದರೆ ಅದು ಯಾವುದಕ್ಕೆ ಬೇಕು ಯಾವುದಕ್ಕೆ ಬೇಡ ಎಂಬ ವಿವೇಚನೆಯೂ ಅಗತ್ಯ. ಎಲ್ಲವೂ ಇತಿಮಿತಿಯ ಚೌಕಟ್ಟಿನಲ್ಲಿದ್ದರೆ ಯಾವ ತೊಂದರೆಯೂ ಆಗದು. ಆದರೆ ವಿವೇಚನೆಗಳಿಗೆ ಬ್ರೇಕ್ ಹಾಕಿ ಒಟ್ಟು ವಿಷಯವನ್ನು ಬೇರೆ ಬೇರೆ ಆಯಾಮಗಳಲ್ಲಿ ವಿಷಯಾಂತರ ಮಾಡಿ ಹಾಸನದ ಸಾಂಸ್ಕøತಿಕ ಮತ್ತು ಸಾರಸ್ವತ ಪ್ರಜ್ಞೆಗೆ ಕಪ್ಪು ಮಸಿ ಬಳಿದದ್ದು ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಬರುವಂತೆ ನಡೆದುಕೊಂಡದ್ದು ಅತ್ಯಂತ ನೋವಿನ ಸಂಗತಿ.  ವರ್ತಮಾನದಲ್ಲಿ ಗ್ರಹಿಕೆಗೆ ಗ್ರಹಣ ಹಿಡಿದರೆ ಇಂತಹ ಘಟನೆಗಳು ಸಮಾಜದ ಶಾಂತಿಯನ್ನು ಹಾಳುಮಾಡುವುದು ಖಚಿತ ಇಂತಹ ಕ್ರಿಯೆಗಳು ಇಲ್ಲಿಗೆ ಕೊನೆಯಾಗಲಿ ಒಟ್ಟು ಸಮಾಜವನ್ನು ಸದಾಶಯದಿಂದ ಕರೆದೊಯ್ಯುವ ಬೆಳವಣಿಗೆಗಳು ಆಗಲಿ.

Sunday, July 14, 2013

ಎತ್ತಿನಹೊಳೆ ಯೋಜನೆ: ಬೇಕಿತ್ತಾ ಇದು?

ಮೊನ್ನೆ ಸಿಎಂ ಸಿದ್ದರಾಮಯ್ಯ ರಾಜ್ಯ ಸರ್ಕಾರದ ಚೊಚ್ಚಲ ಬಜೆಟ್ ಮಂಡಿಸಿದರು, ಸಹಜವಾಗಿ ತಮ್ಮ ಬೆಂಬಲಿಗರ ಜಿಲ್ಲೆಗಳಿಗೆ ಮತ್ತು ಸ್ವಕ್ಷೇತ್ರಕ್ಕೆ ಹೆಚ್ಚಿನ ಅನುದಾನದ ಯೋಜನೆಗಳನ್ನು ಘೋಷಿಸಿ ಕೊಂಡರು ಬಜೆಟ್ "ರಾಜಕಾರಣ"ಕ್ಕೆ ತಾವೇನೂ ಹೊರತಲ್ಲ ಎಂಬುದನ್ನು ಸಾಬೀತು ಪಡಿಸಿದರು. ಇರಲಿ ಹಾಸನ ಜಿಲ್ಲೆಗೆ ಬಜೆಟ್ ನಲ್ಲಿ ಸಿಕ್ಕಿದ್ದು 3ಯೋಜನೆಗಳು ಮಾತ್ರ, ಒಂದು ಬೆಂಗಳೂರಿನಿಂದ ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಹಾಸನ ಕೇಂದ್ರದಲ್ಲಿ ಟ್ರಕ್ ಟರ್ಮಿನಲ್, ಎರಡನೆಯದ್ದು ಬಹುದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಅರಸೀಕೆರೆ-ತಿಪಟೂರು ಟೋಲ್ ರಸ್ತೆ, ಮೂರನೆಯದ್ದು ಎತ್ತಿನಹೊಳೆಯ ಯೋಜನೆಗೆ ಒಟ್ಟು ಯೋಜನಾ ವೆಚ್ಚದ ಶೇ.9ರ ಅನುದಾನ. ಈ ಹೊತ್ತಿನಲ್ಲಿ ಪ್ರಜ್ಞಾಪೂರ್ವಕವಾಗಿ fb update ಮೂಲಕ ಯೋಜನೆಯ ಕುರಿತು ಅಸಹನೆ ವ್ಯಕ್ತ ಪಡಿಸುವ ಮೂಲಕ ಗಮನ ಸೆಳೆದದ್ದು "ಜನ ನಾವೂ ಇದ್ದೇವೆ" ಸಂಘಟನೆಯ ಗೆಳೆಯ ಮಂಜುಬನವಾಸೆ. ಆದರೆ ಯೋಜನೆ ಕುರಿತು ಅಸಹನೆ ವ್ಯಕ್ತಪಡಿಸಬೇಕಿದ್ದ ಕೆಲವರು ಇದೇ ಸಂಧರ್ಭದಲ್ಲಿ ವ್ಯತಿರಿಕ್ತವಾಗಿ ಮಾಧ್ಯಮಗಳಲ್ಲಿ ಹೇಳಿಕೆ ನೀಡಿದ್ದು ಜಿಲ್ಲೆಯ ಮಟ್ಟಿಗೆ ಮುಜುಗುರದ ಸಂಗತಿ. ಇದೇನಿದು ಎತ್ತಿನ ಹೊಳೆ ಯೋಜನೆ? ಯಾಕೆ ಇದನ್ನು ಬೆಂಬಲಿಸಬೇಕು ? ಯಾವ ಕಾರಣಕ್ಕೆ ವಿರೋಧಿಸ ಬೇಕು? ಮತ್ತು ಅಲ್ಲಿನ ವಾಸ್ತವಗಳೇನು ಎಂಬುದನ್ನು ? ಕೆದಕುವ ಪ್ರಯತ್ನ ಮಾಡಿದಾಗ  ಮಾಹಿತಿಗೆ ನೆರವಾಗಿದ್ದು ಜಾಗೃತ ಪ್ರಜ್ಞೆಯ ಕವಯಿತ್ರಿ ರೂಪಹಾಸನ.ಎತ್ತಿನ ಹೊಳೆ ಯೋಜನೆಯ ಕುರಿತು ನನ್ನ ಗ್ರಹಿಕೆಗೆ ದಕ್ಕಿದ ಸಂಗತಿಗಳನ್ನು ನಿಮ್ಮೆದುರು ಹರಹುತ್ತಿದ್ದೇನೆ. ಇದು ನಮ್ಮ ಜಿಲ್ಲೆಗೆ ಎಷ್ಟು ಪೂರಕ ಮತ್ತು ಮಾರಕ ಹಾಗೂ ಒಟ್ಟು ಯೋಜನೆಯ ಪರಿಣಾಮಗಳೇನು? ಎಂಬುದನ್ನಷ್ಟೇ ಇಲ್ಲಿ ಚರ್ಚೆಗೆ ತರುತ್ತಿದ್ದೇನೆ, ಮುಂದಿನ ನಿಲುವುಗಳು ನಿಮಗೆ ಸೇರಿದ್ದು.
        ಹಾಸನ ಜಿಲ್ಲೆಯ ಸಕಲೇಶಪುರದ ದೋಣಿಗಾಲ್ ಬಳಿಯ ಪಶ್ಚಿಮಘಟ್ಟದ ಸರಹದ್ದಿನಲ್ಲಿ ಹಾದು ಹೋಗಿರುವ ರೈಲ್ವೇ ಟ್ರಾಕ್ ಪಕ್ಕದಲ್ಲೇ  ಎತ್ತಿನಹೊಳೆ ಎಂಬ ನದಿಯ ನೀರು 80ಅಡಿ ಎತ್ತರದಿಂದ ಧುಮ್ಮಿಕ್ಕುವ ನಯನ ಮನೋಹರ ದೃಶ್ಯವನ್ನು ನೋಡಬಹುದು.ಹೀಗೆ ಪಶ್ಚಿಮಘಟ್ಟದಲ್ಲಿ ಹರಿಯುವ ನೀರು ಮಳೆಗಾಲದಲ್ಲಿ ಹರಿದು ಹೋಗಿ ಅರೇಬಿಯನ್ ಸಮುದ್ರವನ್ನು ಸೇರುತ್ತದೆ. ಸಮುದ್ರ ಸೇರಿ ಪೋಲಾಗುತ್ತಿದೆ ಎಂದು ಭಾವಿಸಲಾಗುತ್ತಿರುವ ಈ ನೀರನ್ನು ನದಿ ತಿರುವು ಯೋಜನೆಯ ಮೂಲಕ ಕುಡಿಯುವ ನೀರು ಯೋಜನೆಗೆ ಬಳಸಿಕೊಳ್ಳಲು ಕೇಂದ್ರ ಸರ್ಕಾರ ಯೋಜನೆಯನ್ನು ರೂಪಿಸಿದೆ. ಸುಮಾರು 9000ಕೋಟಿ ರೂಪಾಯಿಗಳ ಈ ಯೋಜನೆಯ ಮೂಲಕ ಬರದ ಜಿಲ್ಲೆಗಳಾದ ಕೋಲಾರ, ತುಮಕೂರು ಮತ್ತು ಬೆಂಗಳೂರು ಗ್ರಾಮಾಂತರ ಪ್ರದೇಶಗಳಿಗೆ ಕುಡಿಯುವ ನೀರು ಒದಗಿಸಲು ನಿರ್ಧರಿಸಲಾಗಿದೆ. ಪಕ್ಷ ಭೇಧ ಮರೆತು ರಾಜಕೀಯ ಹಿತಾಸಕ್ತಿಗಳು ಈ ಯೋಜನೆಯ ಜಾರಿಗೆ ಪಣ ತೊಟ್ಟಿವೆ. ಇದು ಕುಡಿಯುವ ನೀರಿನ ಯೋಜನೆಯಾಗಿರುವುದರಿಂದ ಪರಿಸರ ಕಾಯ್ದೆ 2006ರ ಅನ್ವಯ ಸಾರ್ವಜನಿಕ ಅಹವಾಲು ಹಾಗೂ ಪರಿಸರ ಪರಿಣಾಮದ ಅಧ್ಯಯನವನ್ನು ರಾಜ್ಯ ಸರ್ಕಾರ ಮಾಡಬೇಕಿಲ್ಲ! ಆದ್ದರಿಂದ ಕೇಂದ್ರ ಸರ್ಕಾರದ ಪರಿಸರ ಮಂತ್ರಾಲಯ ಇದಕ್ಕೆ ಅನುಮತಿ ನೀಡಿದೆ.

             ಇತ್ತೀಚೆಗಷ್ಟೆ ಪಶ್ಚಿಮ ಘಟ್ಟವನ್ನು ವಿಶ್ವ ಪರಂಪರೆಯ ಪಟ್ಟಿಗೆ ಸೇರಿಸಲಾಗಿದೆ. ಇದರ ಉದ್ದೇಶ ಇಲ್ಲಿರುವ ಅಪರೂಪದ ಪ್ರಾಕೃತಿಕ ಸಂಪತ್ತು ಹಾಗೂ ಪ್ರಾಣಿ ಸಂಕುಲವನ್ನು ರಕ್ಷಿಸುವುದಾಗಿದೆ. ಇಂತಹ ಕ್ರಿಯೆಗೆ ಮುನ್ನವೇ ಈ ಭಾಗದಲ್ಲಿ 22ಕ್ಕೂ ಹೆಚ್ಚು ಸಣ್ಣ ಮತ್ತು ದೊಡ್ಡದಾದ ವಿದ್ಯುತ್ ಉತ್ಪಾದನಾ ಘಟಕಗಳನ್ನು ತೆರೆಯಲು ರಾಜಕಾರಣಿಗಳ ಹಿತಾಸಕ್ತಿಗೆ ಅನುಗುಣವಾಗಿ  ಅನುಮತಿ ನೀಡಿದ್ದು ಯಾರಿಗೂ ತಿಳಿಯದ ಸಂಗತಿಯೇನಲ್ಲ, ಈ ನಡುವೆ ಎತ್ತಿನ ಹೊಳೆ ನದಿ ನೀರನ್ನು ತಿರುಗಿಸುವ ಯೋಜನೆಗೆ 2500ಎಕರೆ ಕ್ಷೇತ್ರ ಹಾಗೂ 1250ಎಕರೆ ಅರಣ್ಯ ಪ್ರದೇಶ ಮತ್ತು ಅಲ್ಲಿನ ಜೀವ ಸಂಕುಲ ಬಲಿಗಾಗಿ ಕಾದಿವೆ. ಈ ನಷ್ಟದ ಜೊತೆಗೆ 9000ಕೋಟಿಯಷ್ಟು ಬೃಹತ್ ಮೊತ್ತವನ್ನು ಕೇವಲ 24 ಟಿಎಂಸಿ ಕುಡಿಯುವ ನೀರಿಗಾಗಿ ವೆಚ್ಚ ಮಾಡಲಾಗುತ್ತಿದೆ. ಉದ್ದೇಶಿತ ಎತ್ತಿನಹೊಳೆ ಜಲಾನಯನ ಪ್ರದೇಶದ ವ್ಯಾಪ್ತಿ 176ಚದುರ ಕಿಲೋಮೀಟರ್, ಎತ್ತಿನಹೊಳೆ, ಕಾಡುಮನೆ ಹೊಳೆ, ಕೆರೆಹೊಳೆ ಹಾಗೂ ಹಂಗದಹಳ್ಳದ ಹರಿವು ನೇತ್ರಾವತಿ ನದಿಗೆ ನೀರು ಹರಿಯುವ ಉಪಮೂಲಗಳು. ಈ ವ್ಯಾಪ್ತಿಯ 8ಕಡೆಗಳಲ್ಲಿ ಚೆಕ್ ಡ್ಯಾಂ ಗಳನ್ನು ನಿರ್ಮಿಸಿ ಏತನೀರಾವರಿ ಮೂಲಕ ಹರವನಹಳ್ಳಿಗೆ ಹರಿಸಲಾಗುತ್ತದೆ. ಇದರ ಮೂಲಕ 233ಕಿಮಿ ದೂರದ ತುಮಕೂರಿನ ದೇವರಾಯನ ದುರ್ಗದ ಬಳಿ ನಿರ್ಮಿಸಲಾಗಿರುವ ಜಲಾಶಯಕ್ಕೆ ಪಂಪ್ ಮಾಡಲಾಗುತ್ತದೆ, ಈ ಚೆಕ್ ಡ್ಯಾಂ ಸಾಮರ್ಥ್ಯ ಕೇವಲ 10ಟಿಎಂಸಿ! ಆದರೆ ಒಟ್ಟಾರೆಯಾಗಿ ಯೋಜನೆಯಲ್ಲಿ 422ಟಿಎಂಸಿ ನೀರನ್ನು ಕಾಲುವೆ ಮೂಲಕ ತಿರುಗಿಸಿ, ದಾರಿಯಲ್ಲಿರುವ ಕೆರೆ, ಕುಂಟೆಗಳನ್ನು ತೂಮಬಿಸಿ, ಬರಪೀಡಿತ ಜಿಲ್ಲೆಗಳಾದ ತುಮಕೂರು ಹಾಗೂ ಕೋಲಾರಕ್ಕೆ ನೀರನ್ನು ತೆಗೆದುಕೊಂಡು ಹೋಗುವುದರಿಂದ ಒಟ್ಟು 8684ಹಳ್ಳಿಗಳಿಗೆ ಪೂರೈಸುವ ಅಂದಾಜು ಇದು. ರಾಜಕೀಯ ಹಿತಾಸಕ್ತಿಗಾಗಿ ರೂಪಿಸಿರುವ ಈ ಯೋಜನೆಯ ಕಡೆಯಿಂದ ಜನರ ಗಮನವನ್ನು ದಿಕ್ಕು ತಪ್ಪಿಸಲು ಈ ಮೊದಲಿದ್ದ "ನೇತ್ರಾವತಿ ನದಿ ತಿರುವು ಯೋಜನೆ" ಎಂಬ ಹೆಸರನ್ನು ಬದಲಿಸಿ ಅನಾಮತ್ತಾಗಿ ನೇತ್ರಾವತಿ ನದಿಯ ಉಪನದಿಯಾದ "ಎತ್ತಿನಹೊಳೆ ನದಿ ತಿರುವು ಯೋಜನೆ" ಎಂದು ಹೆಸರಿಸಲಾಗಿದೆ. ಆ ಮೂಲಕ ಪಶ್ಚಿಮಘಟ್ಟ ಸಾಲಿನ ಜನರನ್ನು ವಂಚಿಸಿದೆ ಮತ್ತು ಜೀವಸಂಕುಲಕ್ಕೆ ಸಂಚಕಾರ ತಂದಿದೆ. 
           ಎತ್ತಿನಹೊಳೆ ನದಿ ತಿರುವು ಯೋಜನೆಯಿಂದ ದಕ್ಷಿಣ ಕನ್ನಡದ ನೇತ್ರಾವತಿ ಕಣಿವೆಯಲ್ಲಿನ 10ಲಕ್ಷ ಕೃಷಿಕರು, 3.5ಲಕ್ಷ ಎಕರೆ ಭೂಮಿಯನ್ನು ಉಳುಮೆ ಮಾಡಲು ನೀರಿನ ಅಭಾವವನ್ನು ಎದುರಿಸುವುದು ಖಚಿತವೇ. ಜೊತೆಗೆ ಮಂಗಳೂರಿನ ಜನತೆಗೆ ಕುಡಿಯುವ ನೀರನ್ನು ಪೂರೈಸುವುದು ನೇತ್ರಾವತಿ ಇದು ಬರಡಾದರೆ ಆ ಭಾಗದ ರೈತ ಸಮುದಾಯದ ಕಥೆ ನಮೋ ನಮಹ. ಇದರ ಜತೆಗೆ ಕರಾವಳಿಯ ಸಾವಿರಾರು ಮೀನುಗಾರರು ತಮ್ಮ ಕಸುಬನ್ನು ಬಿಡುವಂತಹ ಪರಿಸ್ಥಿತಿ ನಿರ್ಮಾಣವಾಗಬಹುದು, ಕರಾವಳಿ ಮೀನುಗಾರ ಕ್ರಿಯಾ ಸಮಿತಿಯ ಸದಸ್ಯರು ಹೇಳುವಂತೆ "ನದಿ ನೀರು ಮಳೆಗಾಲದಲ್ಲಿ ಸಮುದ್ರ ಸೇರುವಾಗ ಆಹಾರ ಹೊತ್ತು ತರುತ್ತದೆ, ಸಮುದ್ರದ ಮೇಲ್ಭಾಗದ ಬೆಚ್ಚಗಿನ ನೀರು ಮೀನುಗಳಿಗೆ ಮೊಟ್ಟೆ ಇಡಲು ಸೂಕ್ತವಾದುದು. ನೇತ್ರಾವತಿಯಲ್ಲಿ ಮಳೆಗಾಲದಲ್ಲಿ ನೀರು ಹರಿದು ಸಮುದ್ರ ತಲುಪದಿದ್ದರೆ ಮೀನು ಕ್ಷಾಮ ಉಂಟಾಗಿ ಮೀನುಗಾರರ ಜೀವನಕ್ಕೆ ಹಾನಿ ಆಗಲಿದೆ. ಪಶ್ಚಿಮದಿಂದ ಹರಿಯುವ ಚಕ್ರ ನದಿಯನ್ನು ಪೂರ್ವಕ್ಕೆ ಕಾಲುವೆ ಮೂಲಕ ತಿರುಗಿಸಿ ಲಿಂಗನಮಕ್ಕೆ ಜಲಾಶಯಕ್ಕೆ ನೀರುಣಿಸಿದ್ದರ ಪರಿಣಾಮವಾಗಿ ನದಿ ಬರಡಾಗಿದ್ದನ್ನು ಸಧ್ಯ ಉಡುಪಿ ಜಿಲ್ಲೆಯ ಜನ ಅನುಭವಿಸುತ್ತಿದ್ದಾರೆ. ಇದರಿಂದ ಪಾಠ ಕಲಿಯದೆ, ಕೇವಲ ತಾಂತ್ರಿಕ ಸಲಹೆ ಹಾಗೂ ಪೊಳ್ಳು ಭರವಸೆಯ ಮೇಲೆ ರಾಜಕಾರಣಿಗಳು ಎತ್ತಿನಹೊಳೆ ಯೋಜನೆಯನ್ನು ಬೆಂಬಲಿಸುತ್ತಿರುವುದು ಹಾಗೂ ಇವರೊಂದಿಗೆ ಸ್ಥಾಪಿತ ಹಿತಾಸಕ್ತಿಗಳು ಕೈ ಜೋಡಿಸಿರುವುದು ದುರಂತವೇ ಸರಿ. 
        ಎತ್ತಿನ ಹೊಳೆ ಯೋಜನೆಯ ಹಿಂದೆ ಕಾಣದ ಕೈ ಕೆಲಸ ಮಾಡುತ್ತಿದ್ದು ಕುಡಿಯುವ ನೀರಿನ ಪೂರೈಕೆ ಎಂಬುದು ಕೇವಲ ತೋರಿಕೆಗೆ ಮಾತ್ರ ಆದರೆ ಇದರ ನಿಜವಾದ ಉದ್ದೇಶ ಜಾಗತೀಕರಣದಿಂದ ರಾಜ್ಯದಲ್ಲಿ ತಳವೂರುತ್ತಿರುವ ಉದ್ಯಮಕ್ಕೆ ಮತ್ತು ಕೈಗಾರಿಕೆಗೆ ನೇತ್ರಾವತಿ ನದಿಯ ನೀರನ್ನು ಕುಡಿಯುವ ನೀರಿನ ನೆಪದಲ್ಲಿ ಒದಗಿಸುವುದು ಮುಖ್ಯ ಅಜೆಂಡಾ! ಹಾಗೂ ವಾಣಿಜ್ಯ ಉದ್ದೇಶಕ್ಕಾಗಿ ಬೆಳೆಯುವ ಕೃಷಿಬೆಳೆಗಳಿಗೆ ನೀರು ಒದಗಿಸುವುದು ಮತ್ತೊಂದು ಉದ್ದೇಶ! ಕೋಲಾರ, ತುಮಕೂರು ಮತ್ತು ಚಿಕ್ಕಬಳ್ಳಾಪುರ ಹಿಂದಿನಿಂದಲೂ ಕಡಿಮೆ ಮಳೆ ಬರುವ ಪ್ರದೇಶಗಳು, ಅಲ್ಲಿನ ಕೃಷಿಯಲ್ಲಿ ರಾಗಿ, ನವಣೆ ಹಾಗೂ ಇತರೆ ಧವಸ ದಾನ್ಯಗಳನ್ನು ಬೆಳೆಯುವ ಒಣಬೇಸಾಯದ ಪರಿಪಾಠಕ್ಕೆ ಎಳ್ಳುನೀರು ಬಿಟ್ಟು ಹೆಚ್ಚು ನೀರು ಬೇಡುವ ದ್ರಾಕ್ಷಿ, ತೋಟಗಾರಿಕೆ ಬೆಳೆಗಳು ಮತ್ತು ಬತ್ತ ಬೆಳೆಯಲು ಸರ್ಕಾರ ಪ್ರೇರಣೆ ನೀಡಿರುವುದರಿಂದ ಆ ಭಾಗದಲ್ಲಿ ನೀರಿನ ಬೇಡಿಕೆ ಹೆಚ್ಚಾಗಿದೆ. ಅಷ್ಟೇ ಅಲ್ಲ ದಕ್ಷಿಣ ಕನ್ನಡ ಜಿಲ್ಲೆಯವರೇ ಆದ ವೀರಪ್ಪ ಮೊಯ್ಲಿ ಸಧ್ಯ ಚಿಕ್ಕಬಳ್ಳಾಪುರದಲ್ಲಿ ಸಂಸದರಾಗಿರುವುದರಿಂದ ನೇತ್ರಾವತಿ ನದಿಯ ನೀರನ್ನು ಅಲ್ಲಿಗೆ ಹರಿಸಲು ಉತ್ಸುಕರಾಗಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸಹಜವಾಗಿ ಮತಬ್ಯಾಂಕ್ ಮೇಲೆ ಕಣ್ಣಿಟ್ಟಿರುವುದರಿಂದ ಕಳೆದ ಬಾರಿಯೇ ಯೋಜನೆಗೆ ತರಾತುರಿಯ ಪಡೆಯಲಾಗಿದೆ, ಅಂದರೆ ಯೋಜನೆಯನ್ನು ಸಲ್ಲಿಸಿದ ಕೇವಲ 22ದಿನಗಳಲ್ಲಿ ಇದಕ್ಕೆ ಅನುಮೋದನೆ ದೊರಕಿಸಲಾಗಿದೆ, ಮುಖ್ಯಮಂತ್ರಿ ಆಗುವ ಮುನ್ನ ಈ ಯೋಜನೆಯನ್ನು ವಿರೋಧಿಸಿದ್ದ ಸದಾನಂದಗೌಡ, ಮುಖ್ಯ ಮಂತ್ರಿಯಾಗುತ್ತಿದ್ದಂತೆ ಯೋಜನೆಗೆ ಅಸ್ತು ಎಂದದ್ದು ದುರಂತದ ಮುನ್ನುಡಿ! ಇದಕ್ಕೆ ಲೋಕಸಭಾ ಚುನಾವಣೆಯ ಸಲುವಾಗಿ ರಾಜ್ಯ ಸರ್ಕಾರ 9000ಕೋಟಿ ವೆಚ್ಚದ ಯೋಜನೆಗೆ ಕೇವಲ 1000ಕೋಟಿಯನ್ನು ಬಜೆಟ್ ನಲ್ಲಿ ಘೋಷಿಸಿದೆ. ಅಷ್ಟೇ ಅಲ್ಲ ಈ ಕುರಿತು ಸ್ಥಳೀಯವಾಗಿ ಎದ್ದಿರುವ ಕೂಗಿಗೆ ಮಾನ್ಯತೆ ಕೊಡದ ಸರ್ಕಾರ ಎತ್ತಿನ ಹೊಳೆಯ ಯೋಜನೆಯನ್ನು ಜಾರಿಗೆ ತರಲು ಹೊರಟಿರುವುದು ಪ್ರಜಾಪ್ರಭುತ್ವ ವಿರೋಧಿ ಕ್ರಮ. ಇದಕ್ಕೆ 2006ರ ಪರಿಸರ ಕಾಯ್ದೆಯನ್ನು ಮುಂದಿಟ್ಟುಕೊಂಡು ಹೋರಾಟವನ್ನು ಹತ್ತಿಕ್ಕುವ ಸರ್ಕಾರದ ಪ್ರಯತ್ನ ಅಕ್ಷಮ್ಯ. ಪ್ರಜಾತಂತ್ರ ವಿರೋಧಿ ನಿಲುವನ್ನು ಯಾವತ್ತಿಗೂ ಒಪ್ಪಲು ಸಾಧ್ಯವಿಲ್ಲ, ಅಷ್ಟೇ ಅಲ್ಲ ವಿಶ್ವ ಪರಂಪರೆಯ ಪಟ್ಟಿಗೆ ಸೇರಿರುವ ಈ ಪ್ರದೇಶದಲ್ಲಿ ಇಂತಹ ಯೋಜನೆಯನ್ನು ಜಾರಿಗೆ ತರುವುದು ಸಹಾ ಅಪರಾಧವೇ ಸರಿ. ಈಗ ಹೇಳಿ ನಿಮ್ಮ ನಿಲುವು ಯಾವ ಕಡೆಗೆ ?
             

Wednesday, June 19, 2013

ಅಹಿಂಸೆ ಪ್ರತಿಪಾದನೆಯ ಅವಿವೇಕಗಳು!!

ಧುನಿಕ ಜಗತ್ತಿನಲ್ಲಿ ಬದಲಾಗುತ್ತಿರುವ ಸಮಾಜದಲ್ಲಿ ಜನರ ಆಧ್ಯತೆಗಳು ಬದಲಾವಣೆ ಆಗುತ್ತಿರುವಂತೆ ಸಾಮಾಜಿಕ ವ್ಯವಸ್ಥೆಗಳಲ್ಲಿ ಹಾಗೂ ಧಾರ್ಮಿಕ ವ್ಯವಸ್ಥೆಯಲ್ಲಿಯೂ ಬದಲಾವಣೆಗಳನ್ನು ನಿರೀಕ್ಷಿಸಲು ಸಾಧ್ಯವಾಗುತ್ತಿಲ್ಲ, ಸಾಮಾಜಿಕ ಬದಲಾವಣೆಗಳು ಮೇಲ್ನೋಟಕ್ಕೆ ಬದಲಾದಂತೆ ಕಂಡರೂ ಒಳಗೆ ಬೆಂಕಿ ಉರಿಯುತ್ತಲೇ ಇದೆ ಅವಕಾಶವಾದಾಗಲೆಲ್ಲ ಅದು ತನ್ನ ನಾಲಗೆಯನ್ನು ಚಾಚುತ್ತ ಸಮಾಜದಲ್ಲಿ ಅಸಹನೆಯನ್ನು ಸೃಷ್ಟಿಸುತ್ತಿದೆ. ಅದೇ ರೀತಿ ಧಾರ್ಮಿಕ ಬದಲಾವಣೆಯನ್ನು ಬದಲಾದ ಸಮಾಜಕ್ಕೆ ನಾವು ಹೋಲಿಕೆ ಮಾಡಿ ನೋಡುವಂತಿಲ್ಲ ಏಕೆಂದರೆ ಅದು ಧರ್ಮ ಅಷ್ಟೇ! ಧರ್ಮದ ಆಚರಣೆಗಳು ಸಿದ್ದಾಂತಗಳು ಯಾವ ಕಾಲಕ್ಕೂ ಬದಲಾಗಲಾರದೇನೋ ಅನ್ನುವಷ್ಟು ಜಿಡ್ಡುಗಟ್ಟಿದೆ. ಮೂಲಭೂತವಾದಿ ಮನಸ್ಸುಗಳಿಗೂ ಅದರ ಬದಲಾವಣೆ ಬೇಕಿಲ್ಲ ಅದಕ್ಕೆಂದೇ ಸ್ಥಾಪಿತ ಹಿತಾಸಕ್ತಿಗಳ ಮೂಲಕ ಸದಾ ಕಾಲಕ್ಕೂ ಅದನ್ನು ಜೀವಂತವಾಗಿಡಲು ಯತ್ನಿಸುತ್ತಲೇ ಇದೆಯಾದ್ದರಿಂದ ಬದಲಾವಣೆ ನಿಯಮ ಅದಕ್ಕೆ ಅನ್ವಯಿಸದು ಎಂದು ವಿಷಾದದಿಂದಲೇ ಹೇಳಬೇಕಾಗಿದೆ. ಇಲ್ಲಿ ಯಾವುದು ಸರಿ ಮತ್ತು ಯಾವುದು ತಪ್ಪು ಎಂದು ಹೇಳುವುದಕ್ಕಿಂತ ವಾಸ್ತವ ನೆಲೆಗಟ್ಟಿನಲ್ಲಿ ಆರೋಗ್ಯಕರವಾದ ಚಿಂತನೆ ಮತ್ತು ಚರ್ಚೆಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಅನಿವಾರ್ಯವೆನಿಸಿದ ಚರ್ಚೆಯೊಂದನ್ನು ನಿಮ್ಮ ಮುಂದಿಡುತ್ತಿದ್ದೇನೆ.
         ಸನಾತನ ಪರಂಪರೆಯನ್ನು ಹೊಂದಿದೆ ಭಾರತ ದೇಶದಲ್ಲಿ ಅನೇಕ ಧಾರ್ಮಿಕ ಪಂಥಗಳಿವೆ ಮತ್ತು ಅದಕ್ಕನುಸಾರವಾಗಿ ಜನರು ಅವರಿಗಿಷ್ಟವಾದ ಧರ್ಮವನ್ನು ಅವರದ್ದೇ ಆದ ಚೌಕಟ್ಟಿನಲ್ಲಿ ಅನುಸರಿಸಿಕೊಂಡು ಬರುತ್ತಿದ್ದಾರೆ ಅದಕ್ಕೆ ಯಾವ ಅಭ್ಯಂತರವೂ ಇಲ್ಲ, ದೇಶದ ಸಂವಿಧಾನದಲ್ಲೂ ಅದಕ್ಕೆ ಮುಕ್ತ ಅವಕಾಶವನ್ನ ಕಲ್ಪಿಸಲಾಗಿದೆ. ಆದರೆ ಸಮಸ್ಯೆ ಇರುವುದು ಅದಲ್ಲ ಸಂವಿಧಾನದ ಆಶಯಗಳಿಗೆ ತದ್ವಿರುದ್ದವಾದ ಕ್ರಿಯೆಗಳು ಸಾರ್ವತ್ರಿಕವಾಗಿ ವ್ಯಕ್ತವಾಗುವ ಮೂಲಕ ಹೇರಿಕೆಯಂತಹ ಕೃತ್ಯಗಳು ನಡೆದಾಗ ಪ್ರಶ್ನಿಸುವುದು ಅನಿವಾರ್ಯವೂ ಹೌದು. 
          ಹೌದು ಇದನ್ನಿಲ್ಲಿ ಪ್ರಸ್ತಾಪಿಸುವ ಕಾರಣವಿಷ್ಟೇ ಕೆಲ ದಿನಗಳ ಹಿಂದೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾದ ಅಭಯಚಂದ್ರ ಜೈನ್ ಮೀನುಗಾರಿಕೆ ಖಾತೆಯನ್ನು ವಹಿಸಿಕೊಂಡರು ಮತ್ತು ಅದನ್ನು ನಿರ್ವಹಿಸಿಕೊಂಡು ಬಂದರು, ಈ ನಡುವೆ ಅದೇ ಸಚಿವರು ಸಾರ್ವಜನಿಕ ಸಭೆಯೊಂದರಲ್ಲಿ ನಾನು ಜೈನ ಸಮುದಾಯಕ್ಕೆ ಸೇರಿದವನಾದ್ದರಿಂದ ಅಹಿಂಸಾ ಧರ್ಮ ಮತ್ತು ನಂಬಿಕೆಗೆ ವಿರುದ್ದವಾಗಿ ಮೀನುಗಾರಿಕೆ ಇಲಾಖೆ ಸಚಿವನಾಗಿ ಕೆಲಸ ಮಾಡಲು ಕಷ್ಟ. ಇದನ್ನು ಬದಲಾಯಿಸಬೇಕು ಎಂದು ಸಾರ್ವಜನಿಕ ಸಭೆಯಲ್ಲಿ ಇಲಾಖೆ ಬದಲಾವಣೆಗೆ ಒತ್ತಾಯ ಮಾಡುವ ಮೂಲಕ ಮುಖ್ಯಮಂತ್ರಿಗಳ ಪರಮಾಧಿಕಾರವನ್ನು ಪ್ರಶ್ನಿಸಿ ಅಪಮಾನ ಮಾಡಿಬಿಟ್ಟರು! ಸಚಿವರ ಈ ನಿಲುವಿಗೆ ಅವರ ಸಮುದಾಯದ ಒತ್ತಾಯವೂ ಇತ್ತು. ಇಲ್ಲಿ ಎದುರಾಗುವ ಮೂಲಭೂತ ಪ್ರಶ್ನೆಯೆಂದರೆ ಸಚಿವ ಅಭಯಚಂದ್ರ ಜೈನ್ ಅವರು ವಿಧಾನ ಸಭಾ ಚುನಾವಣೆಯಲ್ಲಿ ಮೀನು ಹಿಡಿಯುವವರು, ಮೀನು ಕೃಷಿ ಮಾಡುವವರು ಮತ್ತು ಮೀನು ತಿನ್ನುವವರ ಮತವನ್ನು ಪಡೆದು ಗೆದ್ದಿರುವುದರಿಂದ ಅವರ ಧರ್ಮ ಅಪವಿತ್ರವಾಯಿತೇ? ಆಗ ಜೈನ ಮುನಿಗಳ ಮಾತು ಕೇಳದ ಸಚಿವರು ಈಗ ಏಕೆ ಕೇಳುತ್ತಿದ್ದಾರೆ? ಸಚಿವರಾಗಿ ಅವರು ಕೆಲಸ ಮಾಡಬೇಕಾಗಿರುವುದು ಭಾರತ ಸಂವಿಧಾನದಲ್ಲಿ ಈಗಾಗಲೇ ರೂಪಿತವಾಗಿರುವ ಕಾನೂನು ಅಡಿಯಲ್ಲಿ ಮತ್ತು ಸರ್ವ ಜಾತಿ-ಧರ್ಮೀಯರ ಜನಸೇವಕನಾಗಿ. ಜೈನ ಧರ್ಮದ ನಂಬಿಕೆಯ ನೆಲೆಯಲ್ಲಿ ಅಲ್ಲ ಎಂಬುದು ಸಚಿವರಿಗೆ ಯಾವಾಗಲೂ ನೆನಪಿರ ಬೇಕಾದ್ದು ಅವಶ್ಯ.ಸಚಿವರ ಬೇಡಿಕೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸಾರಸಗಟಾಗಿ ತಿರಸ್ಕರಿಸಿದ ಮೇಲೆ ಸದರಿ ಖಾತೆಯಲ್ಲಿಯೇ ಮುಂದುವರೆಯುವ ಮಾತನ್ನು ಅಭಯಚಂದ್ರ ಜೈನ್ ಆಡಿರುವುದು ಮತ್ತು ಮುಂದುವರೆದಿರುವುದು ಪ್ರಜಾಪ್ರಬುತ್ವದ ಸದಾಶಯಗಳನ್ನು ಗೌರವಿಸಿದಂತೆ ಆಗಿದೆ. ಆದರೆ ಈ ಕುರಿತು ಸ್ಥಾಪಿತ ಹಿತಾಸಕ್ತಿಗಳು ಧ್ವಂಧ್ವ ನಿಲುವುಗಳನ್ನು ಸಾರ್ವಜನಿಕವಾಗಿ ಹರಿಯ ಬಿಡುತ್ತಿರುವುದು ವಿನಾಕಾರಣ ಅಸಹನೀಯ ವಾತಾವರಣ ಸೃಷ್ಟಿಸಿದೆ. ಕೆಲ ದಿನಗಳ ಹಿಂದೆ ಹಾಸನದ ಸಾಹಿತಿ-ಕವಯಿತ್ರಿ ರೂಪಹಾಸನ ಮಾಂಸಹಾರ ಮಾರಾಟ ಕುರಿತು ನೀಡಿದ ಹೇಳಿಕೆ ವಿವಾದಕ್ಕೆ ಸಿಲುಕಿತ್ತಲ್ಲದೇ ವ್ಯತಿರಿಕ್ತವಾದ ಪರಿಣಾಮವನ್ನು ಉಂಟುಮಾಡುವ ಮೂಲಕ ರಾಜ್ಯಾಧ್ಯಂತ ಸಂಚಲನ ಸೃಷ್ಟಿಸಿತ್ತು. 
        ಇಂಥಹ ವಿವಾದಗಳ ನಡುವೆ ಸಮುದಾಯದ ಜನರಿಗೆ ಚೌಕಟ್ಟಿನಲ್ಲಿ  ಧಾರ್ಮಿಕ ಕಟ್ಟಳೆಗಳನ್ನು ಹೇರುವ ಪ್ರಯತ್ನ ಮತ್ತೊಮ್ಮೆ ಕಾಣಬರುತ್ತಿದೆ. ನಿನ್ನೆ ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಜೈನ ಮುನಿ ಗುಣಧರನಂದಿ ಮಹಾರಾಜರು 'ಜೈನ ಸಮಾಜದವರು ಅಹಿಂಸಾವಾದಿಗಳು, ಹೀಗಿರುವಾಗ ಅಭಯಚಂದ್ರಜೈನ್ ಅವರಿಗೆ ಮೀನುಗಾರಿಕೆ ಖಾತೆಯನ್ನು ನೀಡಿದರೆ ಅವರ ಆ ಖಾತೆಯನ್ನು ನಿಭಾಯಿಸುವುದು ಅಸಾಧ್ಯ. ಆ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಲು ಸಾಧ್ಯವೇ? ಎಂದು ಪ್ರಶ್ನಿಸಿದ್ದಾರಲ್ಲದೇ ಕಳೆದ ಮೇ 26ರಂದು ಕುಂತುಗಿರಿಯಲ್ಲಿ ಸಭೆ ಸೇರಿದ್ದ 150ಕ್ಕೂ ಹೆಚ್ಚು ಜೈನ ಮುನಿಗಳು ಅಭಯಚಂದ್ರ ಜೈನ್ ಅವರಿಗೆ ಮೀನುಗಾರಿಕೆ ಖಾತೆಯನ್ನು ನೀಡಿರುವ ಬಗ್ಗೆ ಸಾರ್ವತ್ರಿಕವಾಗಿ ಅಸಮಧಾನ ವ್ಯಕ್ತಪಡಿಸಿದ್ದಾರಲ್ಲದೇ ಸರ್ಕಾರದ ಕ್ರಮವನ್ನು ಖಂಡಿಸಿದ್ದಾರೆ. ಆ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಅಭಯಚಂದ್ರ ಜೈನ್ ಅವರಿಗೆ ನೀಡಿರುವ ಮೀನು ಖಾತೆ ಬದಲಾಯಿಸ ಬೇಕೆಂದು ಮನವಿ ಮಾಡಲಾಗಿತ್ತು ಆದರೆ ಸಿಎಂ ಯಾವುದೇ ನಿರ್ಧಾರ ಪ್ರಕಟಿಸದಿರುವ ಹಿನ್ನೆಲೆಯಲ್ಲಿ ಜೂನ್ 30ರಂದು ಪುನಹ ಜೈನ ಮುನಿಗಳು ಹಾಗು ಸಮಾಜದ ಮುಖಂಡರು ಸಭೆ ಸೇರಿ ಮುಖ್ಯ ಮಂತ್ರಿಗಳ ಬಳಿ ನಿಯೋಗ ಕೊಂಡೊಯ್ಯುವ ಬಗ್ಗೆ ನಿರ್ಧರಿಸಲಾಗುವುದು ಎಂದಿದ್ದಾರೆ. ಈ ರೀತಿಯ ಪ್ರಯತ್ನಗಳು ಪ್ರಜಾಪ್ರಭುತ್ವದಲ್ಲಿ ಪುನಹ ಪುನಹ ಜರುಗುವುದು ಒಳ್ಳೆಯ ಲಕ್ಷಣವಲ್ಲ. ಅಭಯಚಂದ್ರ ಜೈನ್ ಆ ಖಾತೆಯನ್ನು ನಿರ್ವಹಿಸುವುದು ಬೇಡ ಎನ್ನುವುದಾದರೆ ಅವರಿಂದ ರಾಜೀನಾಮೆ ಕೊಡಿಸಿ ಧಾರ್ಮಿಕ ಚೌಕಟ್ಟಿನಲ್ಲಿ ಕಟ್ಟಿಹಾಕಲಿ ಅಲ್ಲವೇ? ಅಷ್ಟಕ್ಕೂ ಅಹಿಂಸೆ ಪ್ರತಿಪಾದಿಸುವ ಜನರು ತಿನ್ನುವ ಅಕ್ಕಿ, ರಾಗಿ, ಬೇಳೆ ಇತ್ಯಾದಿ ಆಹಾರ ಪದಾರ್ಥಗಳನ್ನು ಬೆಳೆಯುವವರಲ್ಲಿ ಮಾಂಸಹಾರಿಗಳು ಇರುತ್ತಾರಲ್ಲವೇ ? ಅವರ ದೈನಂದಿನ ಚಟುವಟಿಕೆಗಳಲ್ಲಿ ಸಹಾಯಕ್ಕೆ ಬರುವವರು ಮಾಂಸಹಾರಿಗಳಿರುತ್ತಾರಲ್ಲವೇ ? ಅವರಿಂದ ಸಹಾಯ ಪಡೆಯುವುದು ಇಲ್ಲವೇ ಅವರು ಬೆಳೆದ ಮತ್ತು ಮುಟ್ಟಿದ ಪದಾರ್ಥಗಳನ್ನು ಉಪಯೋಗಿಸುವುದು ಧಾರ್ಮಿಕ ನೆಲೆಗಟ್ಟಿನಲ್ಲಿ ತಪ್ಪಲ್ಲವೇ? ಸಮುದಾಯದಲ್ಲಿ ಒಪ್ಪುವ ಆದರೆ ಸಾರ್ವಜನಿಕವಾಗಿ ಸಹ್ಯವೆನಿಸದ ನಡವಳಿಕೆಗಳನ್ನು ಕೂಡ 'ಧರ್ಮ' ಕಾರಣಕ್ಕೆ ಎಲ್ಲರೂ ಗೌರವಿಸುತ್ತಿದ್ದಾರಲ್ಲವೇ ? ಹೀಗಿರುವಾಗ ಪ್ರಜಾಪ್ರಬುತ್ವದ ಆಶಯದಂತೆ ಆಯ್ಕೆಯಾದ ಮತ್ತು ಸಂವಿಧಾನದ ಚೌಕಟ್ಟಿನಲ್ಲಿ ನಡೆಯುವ ಪ್ರಕ್ರಿಯೆಗಳಿಗೆ ತದ್ವಿರುದ್ದದ ನಿಲುವು ಹೊಂದುವುದು ಆರೊಗ್ಯಕರ ಎಂದೆನಿಸುತ್ತದೆಯೆ?
       ಇದೇ ಸಂಧರ್ಭದಲ್ಲಿ ಪೇಜಾವರ ಶ್ರಿಗಳು ಉಡುಪಿಯಲ್ಲಿ ಜಾರಿಯಲ್ಲಿರುವ ಬ್ರಾಹ್ಮಣರ ಪ್ರತ್ಯೇಕ ಪಂಕ್ತಿ ಬೋಜನವನ್ನು ವಿಲಕ್ಷಣವಾಗಿ ಸಮರ್ಥಿಸಿಕೊಳ್ಳುವುದಲ್ಲದೇ ಧರ್ಮಸ್ಥಳದಲ್ಲೂ ಅಂತಹ ಪದ್ದತಿ ಜಾರಿಯಲ್ಲಿದೆ ಎಂಬ ಹೇಳಿಕೆಗಳನ್ನು ನೀಡುತ್ತಾ ಸೆಕ್ಯುಲರ್ ರಾಷ್ಟ್ರದ ಧಾರ್ಮಿಕ ಮೂಲಭೂತವಾದದ ಜೀವಂತಿಕೆಯ ಪ್ರತಿನಿಧಿಯಾಗಿ ಕಾಣಿಸುತ್ತಾರೆ. ಇವೆಲ್ಲಾ ಸಾರ್ವಜನಿಕ ವಲಯದಲ್ಲಿ ಅರಗಿಸಿಕೊಳ್ಳಲಾಗದ ಮತ್ತು ಕಂದಕ ಸೃಷ್ಟಿಸುವ ಕ್ರಿಯೆಗಳಲ್ಲವೇ? ಇದೆಲ್ಲಾ ಬೇಕಾ ನೀವೇ ಹೇಳಿ? ಇನ್ನು ಗೋಹತ್ಯೆ ನಿಷೇಧ ರದ್ದು ಕುರಿತು ವಿವಿಧ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ ಹಾಗೆ ಮಾತನಾಡುತ್ತಿರುವವರು ಎಷ್ಟು ಮಂದಿ ಗೋವುಗಳ ಸ್ಥಿತಿಗತಿಯ ಬಗ್ಗೆ ಅರಿತಿದ್ದಾರೆ? ಅವರು ಕುಡಿಯುವ ಹಾಲು ಮಾಂಸಜನ್ಯವಲ್ಲವೇ? ಇದಕ್ಕೆ ತಾರ್ಕಿಕ ನೆಲೆಗಟ್ಟಿನಲ್ಲಿ ಚರ್ಚಿಸದೆ ಕಂತೆ ಪುರಾಣಗಳ ನಿದರ್ಶನಗಳ ಮೂಲಕ ಸಮರ್ಥನೆಗೆ ಮುಂದಾಗುತ್ತಾರೆ, ಅವುಗಳಿಗೆ ತಾತ್ವಿಕವಾದ ನೆಲೆಗಟ್ಟಿಲ್ಲ. ಗೋವುಗಳ ಅಮಾನುಷ ಹತ್ಯೆ ಕುರಿತು ಚರ್ಚೆಯಾಗಲಿ, ಅವುಗಳ ಸಂರಕ್ಷಣೆಗೆ ಅಗತ್ಯ ಪರಿಸರ ಇದೆಯೇ ಎಂದು ಅವಲೋಕಿಸಲಿ. ಈ ನಿಟ್ಟಿನಲ್ಲಿ ವಿತಂಡವಾದ, ತಾತ್ವಿಕ ನೆಲಗಟ್ಟಿಲ್ಲದ ಚರ್ಚೆಗಳು ಬೇಕಾ?  
      ಸಚಿವ ಅಭಯಚಂದ್ರ ಜೈನ್ ಪ್ರಕರಣವನ್ನು  ಸಮಾಜವಾದಿ ನೆಲೆಯ ಸೂಕ್ಷ್ಮದೃಷ್ಠಿ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಸಧ್ಯಕ್ಕೆ  ಸಮರ್ಥವಾಗಿ ನಿರ್ವಹಿಸಿದ್ದಾರೆ. ಸಂವಿಧಾನದ ಪ್ರಿಯಾಂಬಲ್ ನಲ್ಲಿ ಸಾರ್ವಭೌಮ, ಸಾಮಾಜಿಕ, ಜಾತ್ಯಾತೀತ ಪ್ರಜಾತಂತ್ರ ಗಣರಾಜ್ಯದಲ್ಲಿ ಎಲ್ಲ ನಾಗರೀಕರಿಗೂ ಸಾಮಾಜಿಕ ನ್ಯಾಯ, ಸ್ವಾತಂತ್ರ್ಯ ಮತ್ತು ಸೋದರತ್ವವನ್ನು ಹೊಂದುವಂತೆ ಮಾಡುವುದೇ ಅಭಿವೃದ್ದಿ ಎಂದು ಹೇಳಲಾಗಿದೆ. ಇವೆಲ್ಲ ಸಾಧ್ಯವಾಗಬೇಕಾದರೆ ತೋಟಿ ತಳವಾರ, ಕುಂಬಾರ, ಮೀನುಗಾರ, ಕಸಾಯಿ ಖಾನೆಯಲ್ಲಿ ಕೆಲಸ ಮಾಡುವವರ, ಮಾಂಸ ತಿನ್ನದವರ ಹೀಗೆ ಎಲ್ಲರೂ ಒಟ್ಟಿಗೆ ಸೇರಿ ಕೆಲಸ ಮಾಡಿದರೆ ಮಾತ್ರ ಅಭಿವೃದ್ದಿ ಪ್ರಕ್ರಿಯೆಗೆ ವೇಗ ನೀಡಲು ಸಾಧ್ಯ. ಇದನ್ನೇ ಕರ್ನಾಟಕದ ಜನತೆ ಬಯಸುವುದು ಆಗಿದೆ. ಇದು ಧರ್ಮ ಮತ್ತು ಜಾತಿಯ ಆಶಯದ ನೆಲೆಯಲ್ಲಿ ಮುಳುಗದಂತೆ ಆಢಳಿತಗಾರರು ಎಚ್ಚರ ವಹಿಸಬೇಕಾಗಿದೆ. ಈ ನಡುವೆ ಧಾರ್ಮಿಕ ಮುಖಂಡರು ಸಮಾಜದಲ್ಲಿ ಕಂದಕ ಸೃಷ್ಟಿಸುವ ಪ್ರಯತ್ನಗಳನ್ನು ಕೈ ಬಿಟ್ಟು ಸಂವಿಧಾನದ ಆಶಯಕ್ಕೆ ವಿರುದ್ದವಾಗಿ ಧಾರ್ಮಿಕ ಕಟ್ಟಳೆಗಳನ್ನು ಹೇರುವ ಪ್ರಯತ್ನವನ್ನು ಮಾಡದೇ ವಿವೇಕಯುತವಾದ ನಿಲುವುಗಳನ್ನು ಹೊಂದಲಿ ಅಲ್ಲವೇ?

Sunday, January 20, 2013

ಮುಸ್ಲಿಂ ವಿವಿ ವಿವಾದದ ಕರಿನೆರಳು.!



ಕೇಂದ್ರ ಸಚಿವ ರೆಹಮಾನ್ ಖಾನ್ ಅವರ ಉದ್ದೇಶಿತ ಟಿಪ್ಪು ವಿಶ್ವವಿದ್ಯಾಲಯ ಸ್ಥಾಪನೆಗೆ ಗೆ ಯಾವುದೇ ಸಹಕಾರ ನೀಡುವುದಿಲ್ಲ. ಟಿಪ್ಪು ವಿವಿ ಸ್ಥಾಪಿಸಿದರೆ ಉಗ್ರಗಾಮಿಗಳ ಕೇಂದ್ರವಾಗಲಿದೆ. ಈಗಾಗಲೇ ಆಲಿಗಢ ಉಗ್ರರ ತಾಣವಾಗಿದೆ ಎಂದು ಗೋ ಮಧುಸೂದನ್  ಹೇಳಿದ ನಂತರ ಟಿಪ್ಪು ವಿವಿ ಸ್ಥಾಪನೆಗೆ ಸಂಚಕಾರ ಎದುರಾಗಿದೆ. ಇದರ ಬೆನ್ನಲ್ಲೇ, ಅಲಿಘರ್ ವಿವಿ ಸ್ಥಾಪಿಸಿ ಈಗಾಗಲೇ ಮಾಡಿಕೊಂಡಿರುವ ರಗಳೆ ಸಾಕು, ಮುಸ್ಲಿಂ ವಿವಿ ಬೇಡ. ಮುಸ್ಲಿಂ ವಿವಿ ಸ್ಥಾಪನೆ ಆಗುವುದಾದರೆ ಅದಕ್ಕೆ ಬೇರೆ ಹೆಸರಿಡಿ. ಟಿಪ್ಪು ದೇಶ ದ್ರೋಹಿ, ಹೀಗೆ ನಾನಾ ತರದ ಪ್ರತಿಕ್ರಿಯೆಗಳು ನಿತ್ಯವೂ ಕೇಳಿ ಬರುತ್ತಿವೆ. ಹಾಗಾದರೆ ಮುಸ್ಲಿಂ ವಿವಿ   ಏಕೆ ಬೇಕು, ಯಾಕೆ ಬೇಡ ಇವೆರೆಡರ ಹಿಂದಿನ ಹುನ್ನಾರಗಳೇನು? ಗೋ ಮಧುಸೂಧನ್ ಮತ್ತು ಚಿದಾನಂದ ಮೂರ್ತಿ ಮಾತುಗಳಲ್ಲಿ ಸತ್ಯ ಎಷ್ಟು ? ಮಿಥ್ಯ ಎಷ್ಟು? ಇವುಗಳ ಲಾಭ ಯಾರಿಗೆ ಎಂಬ ಪ್ರಶ್ನೆಗಳು ಸಹಜವೇ.

      ಬಹುಶ: ವಿವಿ ಗಳಿಗೆ ಹೆಸರಿಡುವುದು, ಪ್ರತಿಮೆ ಸ್ಥಾಪಿಸುವುದು ಕೇವಲ ಸ್ವಾರ್ಥ ಸಾಧನೆಯ ಉದ್ದೇಶಗಳೇ ವಿನಹ ಇದರಿಂದ ಜನಸಾಮಾನ್ಯನಿಗೆ ಕಿಂಚಿತ್ತೂ ಒಳ್ಳೆಯದಾಗುವುದಿಲ್ಲ, ಹಾಗೆಯೇ ಒಳ್ಳೆಯ ಭಾವನೆಗಳು ಬೆಳೆಯುವುದಿಲ್ಲ ಬದಲಿಗೆ ಕೋಮು ಭಾವನೆಗಳು ಜಾಗೃತವಾಗುತ್ತವಷ್ಟೇ! ಅದು ಸತ್ಯವಾದ ವಿಚಾರ ಸ್ಥೀರಾಸ್ಥಿಗಳಿಗೆ ಹೆಸರಿಟ್ಟ ಮಾತ್ರಕ್ಕೆ ಆ ಪುಣ್ಯಾತ್ಮರ ಹೆಸರಿಗೆ ಸಾರ್ಥಕತೆ ದಕ್ಕುವುದಿಲ್ಲ ಆದರೆ ಕೆಡುಕುಗಳಾದಾಗ ಆ ಕಳಂಕಗಳು ತಟ್ಟಿ ಬಿಡುತ್ತವೆ ಇದು ಸಾಬೀತಾದ ವಿಚಾರ. ಈ ಮೊದಲೇ ಪ್ರಸ್ಥಾಪಿಸಿದಂತೆ ವೈಯುಕ್ತಿಕ ಜಾತೀಯ ಭಾವನೆಗಳಿಗೆ ಇಂಥವು ಬಳಕೆಯಾಗುವುದು ದುರಂತವೇ ಸರಿ. ಅಂದ ಹಾಗೆ ಮುಸ್ಲಿಂ ವಿವಿ ಸ್ಥಾಪನೆಗೆ ಯಾಕೆ ಇಷ್ಟು ವಿರೋಧ? ನಿಜಕ್ಕೂ ಅಲಿಘರ್ ವಿವಿ ಉದ್ದೇಶ ಏನಾಗಿತ್ತು? ಆದರೆ ಅದು ದುರ್ಭಳಕೆ ಆಗಿದ್ದು ಹೇಗೆ? ಎಂಬುದು ಇಂಟರೆಸ್ಟಿಂಗ್ ಸಂಗತಿ ನಂತರ ರಾಜ್ಯದ ವಿಚಾರಕ್ಕೆ ಬರೋಣ.

       ಉತ್ತರ ಪ್ರದೇಶದಲ್ಲಿ ಅಲೀಘರ್ ನಲ್ಲಿ ಸ್ಥಾಪಿತವಾದ ಮುಸ್ಲಿಂ ವಿಶ್ವ ವಿದ್ಯಾನಿಲಯಕ್ಕೆ ಅಜಮಾಸು 138ವರ್ಷಗಳು ಸಂದಿವೆ. ಸ್ವಾತಂತ್ರ್ಯ ಪೂರ್ವದಲ್ಲಿಯೇ ಸ್ತಾಪನೆಗೊಂಡ ಈ  ವಿವಿ ಅಸ್ತಿತ್ವಕ್ಕೆ ಬಂದಿದ್ದು 1875ರಲ್ಲಿ, ಇದನ್ನು ಸ್ಥಾಪಿಸಿದ್ದು ಸೈಯ್ಯದ್ ಅಹಮದ್ ಖಾನ್  ಆತ ಭಾರತೀಯ ಮುಸ್ಲಿಂ ಸಮಾಜದ ತತ್ವಜ್ಞಾನಿ ಹಾಗೂ ಸಾಮಾಜಿಕ ಕಾರ್ಯಕರ್ತ. 18ನೇ ಶತಮಾನದಲ್ಲಿ ಬದುಕಿದ್ದ 2ನೇ ಶಾ ಆಲಂ ಎಂಬ ಚಕ್ರವರ್ತಿ ಮರಿಮೊಮ್ಮಗ ನಾಗಿದ್ದ ಸೈಯ್ಯದ್ ಆಲಂ ಖಾನ್ ಸರ್ ಪದವಿ ಪಡೆದ ಪ್ರಾಜ್ಞರು ಹೌದು. ಬಿಟೀಷ್ ಆಡಳಿತದಲ್ಲಿ ಜ್ಯೂರಿಸ್ಟ್ ಆಗಿದ್ದ ಮಹತ್ವಕಾಂಕ್ಷಿ ಆಗಿದ್ದ ಈತ ಪಾಶ್ಚಿಮಾತ್ಯ ಶೈಲಿಯ ಶಿಕ್ಷಣವನ್ನು ದೇಶೀಯವಾಗಿ ಅಳವಡಿಸಿ,ಹಿಂದೂ ರಾಜ ಜೈಕಿಸನ್ ಎಂಬುವವರ ಸಹಾಯ ಪಡೆದು  ದೇಸೀ ಮುಸ್ಲಿಂ ರ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ದಿಗಾಗಿ 'ಮಹಮಡನ್ ಆಂಗ್ಲೋ ಓರಿಯಂಟಲ್ ಕಾಲೇಜು' ನ್ನು ತೆರೆದ. ಈ ಸೈಯ್ಯದ್, ಅಂದಿನ ದಿನಗಳಲ್ಲಿ  ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರದಾನ ಪಾತ್ರ ವಹಿಸಿದ್ದ ಭಾರತ ರಾಷ್ಟ್ರೀಯ ಕಾಂಗ್ರೆಸ್ ಅನ್ನು ವಿರೋಧಿಸುತ್ತಿದ್ದ ಮತ್ತು ಬ್ರಿಟೀಷ್ ರಾಜ್ ಅನ್ನು ಬೆಂಬಲಿಸುವ ಸಂಶಯಾಸ್ಪದ ಧೋರಣೆಗಳನ್ನು ಹೊಂದಿದ್ದ, ಮತ್ತು ಬ್ರಿಟೀಷ್ ರಿಗೆ ಸಹಕಾರಿಯಾಗುವಂತೆ ಪ್ರತ್ಯೇಕ ಮುಸ್ಲಿಂ ಸಂಘಟನೆಯನ್ನು ಹುಟ್ಟುಹಾಕಿದ್ದ. ಉರ್ದು ಪ್ರಾತಿನಿದ್ಯಕ್ಕಾಗಿ ಪ್ರತಿಪಾದಿಸುತ್ತಿದ್ದ ಈತ ಪ್ರತಿಭಟನೆಗಳು ಎದುರಾದಾಗ ಹಿಂದಿ-ಉರ್ದು ದೇಶದ ಎರಡು ಕಣ್ಣುಗಳಿದ್ದಂತೆ ಎಂದು ಹೇಳಿದ. ಆದರೆ ನಂತರದ ದಿನಗಳಲ್ಲಿ ತನ್ನ ಅಸಲು ಬಣ್ಣವನ್ನು ವ್ಯಕ್ತಪಡಿಸುತ್ತ ಹಿಂದೂ ವಿರೋಧಿ ಧೋರಣೆ ಹೊಂದಿದ್ದ. ಇಂತಹ ಕೋಮುವಾದಿ ಹುಟ್ಟುಹಾಕಿದ ಕಾಲೇಜು ಮುಂದೆ 1920ರಲ್ಲಿ ಅಲಿಘರ್ ಮುಸ್ಲಿಂ ವಿವಿ ಯಾಗಿ ಬದಲಾಯಿತು. 1939ರ ವರೆಗೆ ಭಾರತ ರಾಷ್ಟ್ರೀಯ ಸ್ವಾತಂತ್ರ್ಯ ಹೋರಾಟವನ್ನು ಬೆಂಬಲಿಸುತ್ತಿದ್ದ ವಿವಿ ನಂತರದ ದಿನಗಳಲ್ಲಿ ಅಸಲಿ ಮುಖವನ್ನು ಪ್ರದರ್ಶಿಸಲಾರಂಭಿಸಿತು, ವಿವಿ ಯ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರುಗಳು ಮುಸಲ್ಮಾನ ಪ್ರತ್ಯೇಕವಾದದ ಚಳುವಳಿಗೆ ಬೆಂಬಲಿಸಲು ನಿಂತು ಬಿಟ್ಟರು, ಅವತ್ತು ಈ ವಿವಿ ಬೆಂಬಲಕ್ಕೆ ನಿಂತಿದ್ದು ಭಾರತ ವಿಭಜನೆಗೆ ಕಾರಣಕರ್ತನಾದ ಮೊಹಮ್ಮದ್ ಆಲಿ ಜಿನ್ನಾ ಬೆನ್ನ ಹಿಂದೆ! ಸರಿ ಸುಮಾರು 1155ಎಕರೆ ವಿಸ್ತೀರ್ಣವನ್ನು ಹೊಂದಿರುವ ಅಲೀಘರ್ ವಿವಿ 300ಕ್ಕೂ ಹೆಚ್ಚು ಕೋರ್ಸುಗಳನ್ನು ಹೊಂದಿದೆ. ದೇಶ ವಿದೇಶಗಳಿಂದ ಅಲ್ಲಿಗೆ ವಿದ್ಯಾರ್ಥಿಗಳು ಬರುತ್ತಾರೆ.ದೇಶದ 20ಸಂಶೋಧನಾ ವಿವಿ ಗಳ ಪೈಕಿ ಈ ವಿವಿ ಗೆ 8ನೇ ಸ್ಥಾನವಿದೆ. 30000ಕ್ಕೂ ಹೆಚ್ಚು ವಿದ್ಯಾರ್ಥಿಗಳು, 2000ಕ್ಕೂ ಹೆಚ್ಚು ಪ್ರಾಧ್ಯಾಪಕರುಗಳು, 95ವಿಭಾಗಗಳು ಇರುವ ಪ್ರತಿಷ್ಠಿತ ವಿವಿ ಗಳಲ್ಲಿ ಒಂದು. 

       ದೇಶದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲು ಸಂವಿಧಾನತ್ಮಕವಾಗಿ ಅವಕಾಶಗಳನ್ನು ನೀಡಲಾಗಿದೆ, ಆದರೆ ಪ್ರತ್ಯೇಕತೆಯ ಭಾವನೆಗಳನ್ನು ಸೃಷ್ಟಿಸುವ ಕ್ರಿಯೆಗಳು ಇಂತಹ ಅವಕಾಶವನ್ನು ದುರುಪಯೋಗ ಪಡಿಸಿಕೊಳ್ಳುವ ಮೂಲಕ ನಡೆಯುತ್ತಿದೆ. ಚುನಾವಣೆಗಳು ಹತ್ತಿರ ಬರುತ್ತಿರುವಾಗಲೇ ಮತಬ್ಯಾಂಕಿಗಾಗಿ ಕೇಂದ್ರ ಸರ್ಕಾರ ಇಂತಹದ್ದೊಂದು ಕ್ರಿಯೆಗೆ ಕೈ ಹಚ್ಚಿದ್ದು ಮಾತ್ರ  ಅಪರಾಧವೇ ಸರಿ. ರಾಜೇಂದ್ರ ಸಾಚಾರ್ ಮುಸ್ಲಿಂರ ಏಳಿಗೆಗಾಗಿ ಅನೇಕ ಅಂಶಗಳ ಅಧ್ಯಯನ ವರದಿಯನ್ನು ಕೇಂದ್ರಕ್ಕೆ ಸಲ್ಲಿಸಿ 23ವರ್ಷ ಕಳೆದಿದೆ, ಆಗೆಲ್ಲ ಮುಸಲ್ಮಾನರ ಏಳಿಗೆಗೆ ಕ್ರಮ ಜರುಗಿಸದ ಕೇಂದ್ರ ಸರ್ಕಾರ ಚುನಾವಣೆ ಹತ್ತಿರ ವಿರುವ ದಿನಗಳಲ್ಲೆ ಅದು ಬಿಜೆಪಿ ಸರ್ಕಾರ ಅಧಿಕಾರದಲ್ಲಿರುವ ರಾಜ್ಯದಲ್ಲಿ ಮುಸ್ಲಿಂ ವಿವಿ ಸ್ಥಾಪಿಸುವ ಅಗತ್ಯವಿತ್ತೆ? ರಾಜ್ಯದಲ್ಲಿ ಈಗಾಗಲೇ 10 ವಿವಿಗಳು ಅಸ್ತಿತ್ವದಲ್ಲಿವೆ ಹೀಗಿರುವಾಗ ಪ್ರತ್ಯೇಕವಾಗಿ ಮುಸ್ಲಿಂ ವಿವಿ ಅಗತ್ಯತೆ ಏನು? ಇದು ಯಾರನ್ನು ಓಲೈಸುವ ಕ್ರಮ ? ಇದರಿಂದ ಮುಸ್ಲಿಂ ರಿಗೆ ಯಾವ ರೀತಿಯ ಪ್ರಯೋಜನವಾಗಲು ಸಾಧ್ಯ? ಅಲ್ಲವೇ. ದೇಶದಲ್ಲಿ ಮುಸ್ಲಿಂರ ಪರವಾಗಿ ಯಾವುದೇ ಪರಿಣಾಮಕಾರಿಯಾದ ಯೋಜೆನಗಳನ್ನು ಅನುಷ್ಠಾನಗೊಳಿಸುವ ಯೋಗ್ಯತೆಯಿಲ್ಲದ ಸರ್ಕಾರ ವಿವಿ ಹೆಸರಿನಲ್ಲಿ ಬೇಳೆ ಬೇಯಿಸಿಕೊಳ್ಳಬೇಕೇ? 
      ಇನ್ನು ಬಿಜೆಪಿಗಳು ಟಿಪ್ಪು ಸುಲ್ತಾನ್ ನ ದೇಶಭಕ್ತಿಯ ಬಗೆಗೆ ಹಲವು ವರ್ಷಗಳಿಂದಲೂ ವಿವಾದಗಳು ಇದ್ದೇ ಇವೆ. ಚಿದಾನಂದ ಮೂರ್ತಿ, ಡಿ ಎಚ್ ಶಂಕರ ಮೂರ್ತಿ ಇತ್ಯಾದಿಗಳು ಈ ಕುರಿತು ತಮ್ಮದೇ ಧಾಟಿಯಲ್ಲಿ ವಾದ ಮುಂದಿಡುತ್ತಾರಾದರೂ ಆತ ಬ್ರಿಟೀಷರ ವಿರುದ್ದ ಮೈಸೂರು ರಾಜ್ಯ ಉಳಿಸಿಕೊಳ್ಳಲು ಹೋರಾಡಿದ್ದ ಎಂಬುದು ನಿರ್ವಿವಾದ. ಮುಸ್ಲಿಂ ವಿವಿ ಸ್ಥಾಪನೆಗೆ ಕೇಂದ್ರದಲ್ಲಿ ಸಚಿವರಾಗಿರುವ ರೆಹಮಾನ್ ಖಾನ್ ಹೇಳಿಕೆ ನೀಡಿದಾಗ ಬಿಜೆಪಿ ಯ ಗೋ ಮಧುಸೂಧನ್ , ಸಿ ಟಿ ರವಿ ಕೋಮು ನಾಲಗೆಯನ್ನು ಹರಿಬಿಟ್ಟಿದ್ದಾರೆ. ಮುಸ್ಲಿಂ ವಿವಿ ಸ್ಥಾಪನೆ ಆದಾಕ್ಷಣ ಅದು ಮುಸ್ಲಿಂ ರಿಗೆ ಸೀಮಿತವಾಗಿರೊಲ್ಲ ಅಲ್ಲಿ ಹಿಂದೂ ಮತ್ತು ಮುಸ್ಲಿಂ ಎರಡೂ ಕೋಮುಗಳಿಗೂ ಸಮಾನ ಪ್ರವೇಶಾವಕಾಶ ಇದ್ದೇ ಇರುತ್ತದೆ ಮತ್ತು ಭಾರತ ದೇಶದ ಕಾನೂನಿನಂತೆ ಕಾರ್ಯ ನಿರ್ವಹಿಸುತ್ತದೆ ವಿನಹ ಪಾಕೀಸ್ತಾನದ ಕಾನೂನಿನಂತೆ ಅಲ್ಲ. ಆದರೆ ಅಲೀಘರ್ ವಿವಿ ಯ ನೆಪದಲ್ಲಿ ಮುಸ್ಲಿಂ ಭಾವನೆಯ ಬೆಂಕಿಗೆ ತುಪ್ಪ ಸುರಿಯುವ ಕೆಲಸವನ್ನು ಬಿಜೆಪಿಯ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಮಾಡುವುದು ತಪ್ಪು. ಮುಸ್ಲಿಂ ವಿವಿ ಮುಸಲ್ಮಾನರ ಅಡಗು ತಾಣವಾಗುತ್ತದೆ ಎಂಬ ಹೇಳಿಕೆ ನೀಡುವ ಮಧುಸೂಧನ ಮರುದಿನವೇ ಶ್ರೀರಂಗ ಪಟ್ಟಣದ ಮಸೀದಿಗಳಿಗೆ ತೆರಳಿ ಅಲ್ಲಿನ ಗೋಡೆಗಳಲ್ಲಿ ಶ್ರೀ ರಂಗನಾಥನ ಕುರುಹುಗಳನ್ನು ಪರೀಕ್ಷಿಸ ಹೊರಡುವುದು ಆ ಮೂಲಕ ಕೋಮುಭಾವನೆಯನ್ನು ಪ್ರಚೋದಿಸದಂತೆ ಅಲ್ಲವೇ? ಇತಿಹಾಸದಲ್ಲಿ ಸಾಕಷ್ಟು ತಪ್ಪುಗಳು ಆಗಿ ಹೋಗಿವೆ ಆದರೆ ಮತ್ತೆ ಮರುಕಳಿಸ ಬೇಕೆ? ಅಯೋದ್ಯೆ ಘಟನೆ ನಮ್ಮ ಕಣ್ಣ ಮುಂದಿದೆ ಅದಕ್ಕಾಗಿ ನಾವು ತೆತ್ತ ಸಾವು ನೋವುಗಳು ಅವರಿಗೆ ಅರಿವಾಗ ಬೇಕಿದೆ. ಸಚಿವ ರೆಹಮಾನ್ ಖಾನ್ ಕೂಡ ಮುಸ್ಲಿಂರ ಭಾವನೆಯನ್ನು ಪ್ರಚೋದಿಸುವ ದಾಟಿಯಲ್ಲಿ ರಾಜ್ಯದಲ್ಲಿ ಮುಸ್ಲಿಂ ವಿವಿ ಸ್ಥಾಪಿಸಿಯೇ ಸಿದ್ದ ಎಂದು ಹೇಳುವುದು ಸರಿಯಲ್ಲ.
         ಇಲ್ಲಿನ ಮುಸಲ್ಮಾನರಿಗೆ ಇಲ್ಲಿರುವ ವಿವಿ ಗಳೇ ಸಾಕು, ಸಧ್ಯ ಅವರ ಶಿಕ್ಷಣಕ್ಕೆ ಪೂರಕವಾದ ಸೌಲಭ್ಯಗಳ ಜೊತೆಗೆ ಆರ್ಥಿಕ ಸಹಾಯ ಮಾಡಿ, ಬಡ ಮುಸಲ್ಮಾನರ ಬದುಕು ಸುಧಾರಣೆಗೆ ಸಾಚಾರ್ ಆಯೋಗದ ಶಿಫಾರಸ್ಸಿನಂತೆ ಪ್ರಯೋಜನ ಕಾರಿಯಾದ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತನ್ನಿ, ಚುನಾವಣೆ ಸಮಯ ಇದಕ್ಕೆ ಮಾನದಂಡ ಅಗಬೇಕಿಲ್ಲ ಸಮಯಸಾಧಕತನ ಬೇಡ ಅಂದ ಹಾಗೆ ರಾಜ್ಯ ಮುಸ್ಲಿಂ ವಿವಿ ಬೇಕು ಅಥವ ಬೇಡ ಎಂಬ ಬಗ್ಗೆ ಆಕ್ರೋಶಗೊಂಡಿಲ್ಲ ಬದಲಿಗೆ ಟಿಪ್ಪು ಸುಲ್ತಾನ್ ನನ್ನು ದೇಶದ್ರೋಹಿ ಎನ್ನುವುದನ್ನು ಸಹಿಸುತ್ತಿಲ್ಲ, ಅಂಬೇಡ್ಕರ್ ದಲಿತರ ಭಾವನೆಗೆ , ಬಸವಣ್ಣ ವೀರಶೈವರ ಭಾವನೆಗೆ ಪ್ರಾಮುಖ್ಯತೆ ಪಡೆದಿರುವಂತೆಯೇ ಟಿಪ್ಪು ಸಧ್ಯಕ್ಕೆ ಮುಸ್ಲಿಂ ಭಾವನೆಗಳಲ್ಲಿ ಇದ್ದಾನೆ. ಆತನನ್ನು ನಿರಾಕರಿಸುವುದು ಮುಸ್ಲಿಂರ ಅಸ್ಥಿತ್ವವನ್ನೇ ಭಾರತದಲ್ಲಿ ನಿರಾಕರಿಸಿದಂತೆ ಎಂದು ಭಾವಿಸಲಾಗುತ್ತಿದೆ ಇವೆಲ್ಲವೂ ಅಪಾಯಕಾರಿ ಲಕ್ಷಣಗಳೇ ಆದರೆ ಇವೆಲ್ಲವನ್ನು ಮೀರಿ ನಿಲ್ಲುವ ರಾಷ್ಟ್ರೀಯ ಭಾವನೆ ಬೆಳೆಯಬೇಕಾದರೆ ರಾಷ್ಟ್ರ ನಾಯಕರುಗಳನ್ನು ಸ್ವತಂತ್ರಗೊಳಿಸುವ ಅವಶ್ಯಕತೆಯೂ ಇದೆ. ಅದಕ್ಕೆ ಸ್ವಲ್ಪ ಸಮಯ ಬೇಕು. ಮುಸ್ಲಿಂ ವಿವಿ ಬಂದರೆಷ್ಟು ಬಿಟ್ಟರೆಷ್ಟು ಕಾಂಗ್ರೆಸ್ಸಿಗರು ಮತ್ತು ಬಿಜೆಪಿ ಗಳು ಮತ್ತು ಯಾರಾದರೊಬ್ಬರನ್ನು ಬೆಂಬಲಿಸುವ ಇತರೆ ರಾಜಕೀಯ ಪಕ್ಷಗಳ ಬೇಳೆ ಬೇಯದಿದ್ದರೆ ಸಾಕಷ್ಟೇ. 
          


ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...