ಢುಂಢಿ: ಅರಣ್ಯಕನೊಬ್ಬ ಗಣಪತಿಯಾದ ಕಥೆ ವಿವಾದ ನ್ಯಾಯಾಲಯದ ಮೆಟ್ಟಿಲು ಹತ್ತಿದೆ. ಕೃತಿಯ ಕುರಿತು ಪತ್ರಿಕೆ ಗಳಲ್ಲಿ ಬಂದ ವರದಿಯಾದರಿಸಿ ಕೃತಿಯ ಕರ್ತೃ ಯೋಗೇಶ್ ಮಾಸ್ಟರ್ ರನ್ನು ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆಯಲ್ಲದೇ ಪ್ರಕರಣ ಇತ್ಯರ್ಥ ಆಗುವವರೆಗೆ ನ್ಯಾಯಾಲಯ “ಡುಂಢಿ” ಕಾದಂಬರಿಯನ್ನು ಮುಟ್ಟುಗೋಲು ಹಾಕಿಕೊಂಡು ಪ್ರಕಟಣೆ ಇಲ್ಲವೇ ಮಾರಾಟ ಮಾಡದಂತೆ ತಾತ್ಕಾಲಿಕ ನಿರ್ಬಂಧ ಹೇರಿದೆ. ಸೆಕ್ಯುಲರ್ ಹೆಸರಿನ ಪಕ್ಷ ಅಧಿಕಾರದಲ್ಲಿರುವಾಗ ನಡೆದಿರುವ ಇಂತಹ ಘಟನೆ ಈ ಹಿಂದೆಂದೂ ನಡೆದಿರಲಿಲ್ಲ, ಬಂಜಗೆರೆ ಜಯಪ್ರಕಾಶ್, ಬೈರಪ್ಪ, ಶಿವಪ್ರಕಾಶ್ ರ ವಿವಾದಿತ ಕೃತಿಗಳು ಬಂದಾಗ ಹೀಗೆಲ್ಲಾ ಆಗಿರಲಿಲ್ಲ. ಈ ನಡುವೆ ಸೋಕಾಲ್ಡ್ ಬುದ್ದಿಜೀವಿಗಳು ಕೃತಿಯ ವಿರುದ್ದವಾಗಿ ತಮ್ಮ ವೈಯುಕ್ತಿಕ ನಿಲುವುಗಳನ್ನು ಹರಿಯ ಬಿಡುತ್ತಿದ್ದಾರೆ. ಯೋಗೀಶ್ ಮಾಸ್ಟರ್ ರನ್ನು ಬೆಂಬಲಿಸುವವರ ವಿರುದ್ದ ತೀವ್ರ ಟೀಕೆಗಳನ್ನು ಮಾಡಲಾಗುತ್ತಿದೆ. ಕೃತಿಯನ್ನು ಹೊರತು ಪಡಿಸಿ ಯೋಗೀಶ್ ಮಾಸ್ಟರನ ವಿರುದ್ದ ವೈಯುಕ್ತಿಕ ಟೀಕೆ ಟಿಪ್ಪಣಿಗಳನ್ನು ಮಾಡಲಾಗುತ್ತಿದೆ. ಒಂದು ಕೃತಿಯ ಕುರಿತು ಇಷ್ಟೆಲ್ಲಾ ಬೆಳವಣಿಗೆಗಳು ಆಗಿದ್ದೇಕೆ? ಕೃತಿಯಲ್ಲಿ ಯೋಗೇಶ್ ಮಾಸ್ಟರ್ ಹೇಳಿರುವುದೇನು? ಕೃತಿಯ ವಿರುದ್ದದ ಧ್ವನಿ ಎತ್ತಿದ್ದು ಯಾರು ? ಯಾಕೆ? ಇದರ ಹಿಂದಿನ ಹುನ್ನಾರಗಳೇನು? ಎಂಬ ಪ್ರಶ್ನೆಗಳು ಏಳುವುದು ಸಹಜ. ಈ ನಿಟ್ಟಿನಲ್ಲಿ ಯಾವುದೇ ಪೂರ್ವಾಗ್ರಹಗಳಿಲ್ಲದೇ ಒಟ್ಟು ಘಟನೆಯ ಕುರಿತು ಒಂದು ಪುಟ್ಟ ಅವಲೋಕನ ಮತ್ತು ಕೆಲವು ಪ್ರಶ್ನೆಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ.
ಭಾರತ ದೇಶ ವಿವಿಧ ಸಾಂಸ್ಕøತಿಕ ಆಚಾರ ವಿಚಾರಗಳನ್ನು ಮತ್ತು ಧಾರ್ಮಿಕತೆಯನ್ನು ಹೊಂದಿದ ದೇಶ. ಭಾವನಾತ್ಮಕವಾಗಿ ನಿತ್ಯದ ಬದುಕನ್ನು ರೂಪಿಸಿಕೊಂಡ ಜಗತ್ತಿನ ಏಕೈಕ ರಾಷ್ಟ್ರವೂ ಹೌದು. ಇಲ್ಲಿ ಸಾವಿರಾರು ಸಂಖ್ಯೆಯ ಮತಪಂಥಗಳಿವೆಯಾದರೂ ಸಾಂಸ್ಕøತಿಕ ಚೌಕಟ್ಟಿನಲ್ಲಿ ಒಗ್ಗೂಡುವ ಮತ್ತು ಪರಸ್ಪರರ ವಿಚಾರಗಳನ್ನು ಗೌರವಿಸುವ ಪರಿಪಾಠವಿದೆ. ಹಾಗೆಯೇ ತಾವು ಅನುಸರಿಸುವ ದಾರ್ಮಿಕ ಸಂಸ್ಕøತಿಗೆ ಒಗ್ಗುವ ಮತ್ತು ಕಟ್ಟಳೆಗಳನ್ನು ಚೌಕಟ್ಟಿನೊಳಗೆ ವಿಧಿಸಿಕೊಂಡು ಅಗೋಚರವಾದ ಶಕ್ತಿ ಇದೆಯೆಂಬ ಕಲ್ಪನೆಯಲ್ಲಿ ಅದಕ್ಕೆ ದೈವದ ಸ್ವರೂಪ ನೀಡಿ ನಂಬಿಕೆಯ ಬಂಧವನ್ನು ಗಟ್ಟಿಗೊಳಿಸಲಾಗಿದೆ. ಹಾಗೂ ಇವುಗಳಿಗೆ ಪೂರಕವಾಗಿ ಪವಾಡ ಸದೃಶವಾದ ಕಥೆಗಳನ್ನು ಅನುಕೂಲಕ್ಕೆ ತಕ್ಕಂತೆ ರೂಪಿಸಿಕೊಳ್ಳಲಾಗಿದೆ, ಇಂಥಹ ಕಥೆಗಳು ಕಾಲ ಘಟ್ಟದಿಂದ ಕಾಲಘಟ್ಟಕ್ಕೆ ಮತ್ತು ಪರಿಸರಕ್ಕೆ ತಕ್ಕಂತೆ ಸ್ಥಳದಿಂದ ಸ್ಥಳಕ್ಕೆ ಬದಲಾವಣೆಗೆ ಒಳಪಟ್ಟಿದೆ. ಆದು ಆಯಾ ಪರಿಸರದ ಸ್ವರೂಪಕ್ಕೆ ತಕ್ಕಂತೆ ಇರುತ್ತದಾದ್ದರಿಂದ ಅವರವರ ನಂಬಿಕೆಗೆ ಒಳಪಟ್ಟಿರುತ್ತದೆ. ಹೀಗಿರುವಲ್ಲಿ ಇವಕ್ಕೆ ಆಧಾರಗಳು ಪೂರ್ಣ ಪ್ರಮಾಣದಲ್ಲಿ ಇರದೇ ಅದು ಇತಿಹಾಸವಾಗದೇ ಪುರಾಣಗಳಾಗಿ ಮಾರ್ಪಾಡಾಗಿವೆ ಎಂಬುದು ನನ್ನ ಅಭಿಮತ. ಹಾಗೆಯೇ ಮನುಷ್ಯನ ನಿಯಂತ್ರಣಕ್ಕೆ ದೈವ ಸ್ವರೂಪದ ಕಲ್ಪನೆಗಳನ್ನು ಉಳಿಸಿಕೊಂಡು ಅದನ್ನು ಗೌರವದ ನೆಲೆಗಟ್ಟಿನಲ್ಲಿ ಉಳಿಸಿಕೊಳ್ಳಲಾಗಿದೆಯಾದರೂ ವರ್ತಮಾನದಲ್ಲಿ ಕೆಲವೊಮ್ಮೆ ಅಂತಹ ನಂಬಿಕೆಗಳು ಚರ್ಚೆಗೆ ಒಳಪಡುತ್ತಿವೆ, ಇಂತಹ ಚರ್ಚೆಗಳನ್ನು ಹತ್ತಿಕ್ಕುವ ಸ್ಥಾಪಿತ ಹಿತಾಸಕ್ತಿಗಳು ಅದಕ್ಕೆ ಅಡ್ಡಿ ಉಂಟು ಮಾಡುತ್ತಿವೆ. ಇಲ್ಲಿ ಇತಿಹಾಸ ಪುರಾಣವಾಗಿದೆ, ಪುರಾಣ ಇತಿಹಾಸವಾಗುವ ಆತಂಕಗಳು ಇವೆ.
ಢುಂಢಿ ಕಾದಂಬರಿಯ ಕಥಾನಕ ಹಿಂದೂ ಸಮಾಜದ ವಿಘ್ನ ವಿನಾಶಕ ಗಣಗಳ ಅಧಿ ದೇವತೆ ಮಹಾಗಣಪತಿಯ ಕಥೆ. ಗಣಪತಿ ಎಂದರೆ ಅದು ಆಕಾರ ಮತ್ತು ನಿರಾಕಾರಗಳ ಸಮ್ಮಿಲನವೇ ಗಣಪತಿಯ ಪರಿಕಲ್ಪನೆ ಆಗಿದೆ. ಹಾಗಾಗಿ ಗಣಪತಿಯನ್ನು ಪ್ರಕೃತಿಯ ಒಂದು ಭಾಗ, ಸಮಾಜದ ಎಲ್ಲ ಸ್ಥರಗಳಲ್ಲು ಎಲ್ಲ ರೂಪಗಳಲ್ಲು ಗಣಪತಿಯನ್ನು ಕಾಣಲಾಗುತ್ತದೆ ಮತ್ತು ಪೂಜಿಸಲಾಗುತ್ತಿದೆ. ಇಂತಹ ಗಣಪತಿಯ ಕುರಿತಾಗಿ ಕೆಲವು ಬರಹಗಾರರ ಗ್ರಂಥಗಳನ್ನು ಆದರಿಸಿ ಎಷ್ಟೋ ಶತಮಾನಗಳಷ್ಟು ಹಿಂದಿನ ಕಾಲಘಟ್ಟದ ಪರಿಸರದಲ್ಲಿ ಗಣಪತಿ ರೂಪುಗೊಂಡಿದ್ದು ಹೇಗೆ ಎಂಬ ಕಥೆಯನ್ನು ಎಳೆ ಎಳೆಯಾಗಿ ವಿವರಿಸಲಾಗಿದೆ. ಅಂದರೆ ಭಾರತಕ್ಕೆ ಆರ್ಯರು ಆಗಮಿಸಿ ಇಲ್ಲೆ ನೆಲೆಯೂರುವ ಸಂಧರ್ಭ, ಮೂಲ ನಿವಾಸಿಗಳಾದ ದ್ರಾವಿಡರನ್ನು ದಸ್ಯುಗಳನ್ನಾಗಿ ಮಾಡಿಕೊಂಡು ವರ್ಗ ಸಮಾಜವನ್ನು ಸೃಷ್ಠಿಸಿದ ಸಂಧರ್ಭ ಗಣಪತಿ ರೂಪುಗೊಂಡ ಬಗ್ಗೆ ಮತ್ತು ಅಂದಿನ ಕಾಲಘಟ್ಟದ ಆಚಾರ ಪದ್ದತಿಗಳ ಬಗ್ಗೆ ಹೇಳುತ್ತಲೇ ವೈದಿಕಶಾಹಿಯ ಅಧಿಪತ್ಯ ಸ್ಥಾಪಿತವಾದ ಕುರಿತು ಹೇಳಲಾಗಿದೆ ಮತ್ತು ಅದು ಕಥಾನಕ ರೂಪದಲ್ಲಿದೆ. ವಾಸ್ತವಿಕ ನೆಲೆಗಟ್ಟಿನಲ್ಲಿ ಒಪ್ಪಿಕೊಳ್ಳುವ ಮತ್ತು ಒಪ್ಪಿಕೊಳ್ಳಲಾಗದ ಕಹಿ ಸತ್ಯಗಳನ್ನು ಹೇಳಲಾಗಿದೆ. ಬಹುತೇಕವಾಗಿ ದೇವರ ಧೈವತ್ವದ ಕಲ್ಪನೆಗಳನ್ನೆ ಬುಡಮೇಲು ಮಾಡುವಂತೆ ಕಂಡರೂ ಸತ್ಯ ಇಲ್ಲಿ ಅಪಥ್ಯವಾಗಿದೆಯಷ್ಠೆ.
ಭಾರತವೇ ಮೊದಲಾಗಿ ವಿಶ್ವದ ಇತರೆ ಭಾಗಗಳಲ್ಲಿಯೂ ಕೂಡ ಪೌರಾಣಿಕ ಕಥನಗಳ ಮೂಲಗಳನ್ನು ಸಂಶೋಧಿಸಲು ಸಾಮಾನ್ಯ ಜನರು ಹಿಂಜರಿಯುತ್ತಾರೆ. ಅಂತಹ ಪರೀಕ್ಷೆಗಳು ಅವರ ಧಾರ್ಮಿಕ ಭಾವನೆಯನ್ನು ಘಾಸಿಗೊಳಿಸುತ್ತದೆ ಅಥವಾ ಮೌಲ್ಯಗಳನ್ನು ಅಪವಿತ್ರಗೊಳಿಸುತ್ತದೇನೋ ಎಂಬಂತಹ ಮಡಿವಂತಿಕೆಯ ಭಾವವಿದೆ. ಈ ಪೌರಾಣಿಕ ಕಥಾನಕಗಳು ಯಾರೋ ಕೆಲಸಕ್ಕೆ ಬಾರದ ಗೊಡ್ಡು ಹರಟೆ ಮಲ್ಲರು ಹೆಣೆದಿರುವಂತಹ ವಿಷಯಗಳಲ್ಲ. ಅವುಗಳು ಅಧ್ಯಯನಕ್ಕೆ ಯೋಗ್ಯವಾಗಿದ್ದು, ಸೂಕ್ಷ್ಮ ಸ್ವರೂಪದ ಸತ್ಯಗಳೂ, ಹಾಗೂ ಅನೇಕ ಸಾಂಸ್ಕøತಿಕ ವಿಚಾರಗಳೂ ಅವುಗಳಲ್ಲಿರುತ್ತವೆ. ನಮ್ಮ ಪುರಾಣಗಳನ್ನು ಅಧ್ಯಯನ ಯೋಗ್ಯವಾಗಿ ಪರಿಗಣಿಸಿ ಪರಿಶೀಲಿಸುವುದರಿಂದ ಗತಕಾಲದ ಸತ್ಯಗಳು, ನಮಗೆ ಪಥ್ಯವಾದರೂ, ಅಪಥ್ಯವಾದರೂ, ಸಾಮಾಜಿಕ ಮತ್ತು ಸಾಂಸ್ಕøತಿಕ ಬೆಳವಣಿಗೆಯ ಸತ್ಯಗಳು ಗೋಚರವಾಗುತ್ತವೆ. ಈ ಹಿನ್ನೆಲೆಯಲ್ಲಿ ಢುಂಢಿ ಕಾದಂಬರಿಯ ಕಥಾವಸ್ತು ಇದೆಯೆಂದು ಹೇಳಲಾಗಿದೆ.
ಇನ್ನು ಯೋಗೀಶ್ ಮಾಸ್ಟರ್ ಕಥೆ, ಈತ ಒಬ್ಬ ಸಾಮಾನ್ಯ ಲೇಖಕ, ರಂಗಕರ್ಮಿ ಮತ್ತು ಸಂಗೀತ ಪ್ರೇಮಿ. ಇವರೇ ತಮ್ಮ ಮಾಹಿತಿಗಳನ್ನು ಅಂತರ್ಜಾಲದಲ್ಲಿ ಹರಿಯ ಬಿಟ್ಟಿರುವ ಪ್ರಕಾರ ಟಿಸಿಹೆಚ್ ಶಿಕ್ಷಣ ಪಡೆದ ಪ್ರಾಥಮಿಕ ಶಾಲೆಯ ಶಿಕ್ಷಕ.ಹಲವು ವರ್ಷಗಳ ಸೇವೆಯ ಬಳಿಕ ಶಿಕ್ಷಕ ವೃತ್ತಿಗೆ ವಿದಾಯ ಹೇಳಿದ್ದಾರಂತೆ.ಕ್ರಿಯಾಶೀಲ ಸ್ವಭಾವದ ಈ ಮನುಷ್ಯ 16ರ ಹರೆಯದಲ್ಲೇ ಸಾಹಿತ್ಯದೆಡೆಗೆ ಒಲವು ಬೆಳೆಸಿಕೊಂಡವರು. ಆಗಲೇ “ಭಗ್ನ ಹೃದಯ” ಕವನ ಸಂಕಲನದ ಮೂಲಕ ಅಡಿಯಿರಿಸಿ ನೂರಾರು ಲೇಖನಗಳು ಕಥೆ, ಕವನಗಳನ್ನು ಬರೆದಿದಾರಲ್ಲದೇ 208ಕ್ಕೂ ಹೆಚ್ಚು ರಂಗ ಪ್ರದರ್ಶನಗಳಲ್ಲಿ ನಟರಾಗಿ, ನಿರ್ದೇಶಕರಾಗಿ ಕಾಣಿಸಿಕೊಂಡಿದ್ದಾರೆ ತಾವೇ ನಾಟಕಗಳನ್ನು ರಚಿಸಿದ್ದಾರೆ. ವೈಚಾರಿಕ ಪ್ರಜ್ಞೆಯ ಯೋಗೀಶ್ ಆಂಗ್ಲ ನಾಟಕಗಳಲ್ಲಿ ಪೌರಾಣಿಕ ಕಥಾನಕವನ್ನು ವರ್ತಮಾನಕ್ಕೆ ಹೋಲಿಸಿ ರಂಗ ಪ್ರಯೋಗಗಳನ್ನು ಮಾಡಿ ಮೆಚ್ಚುಗೆ ಪಡೆದವರು. ಎಂ ಎಸ್ ಸತ್ಯು, ಹಂಸಲೇಖ ಮತ್ತಿತರೊಂದಿಗೆ ಒಡನಾಡುತ್ತಲೇ ರಾಮಾಯಣ ಪುರಾಣದಲ್ಲಿ ಸೀತಾದೇವಿಯನ್ನು ಹೇಗೆ ಶೋಷಿಸಲಾಯಿತು ಎಂಬ ಎಂಬ ಕುರಿತು “ಜಾನಕಿರಾಂ” ನಾಟಕ ಬರೆದು ರಂಗ ಪ್ರದರ್ಶನ ಮಾಡಿದ್ದರು. ಈಗ ಗಣಪತಿಯ ಕುರಿತು ಇವರು ಬರೆದ ಕೃತಿ ತಾರ್ಕಿಕ ನೆಲೆಗಟ್ಟಿನ ಕಥಾನಕವೇ ಹೊರತು ಸಂಶೋಧನಾ ಕೃತಿಯೂ ಅಲ್ಲ.
ಇಂಥಹ ಸನ್ನಿವೇಶದಲ್ಲಿ ರಾಜ್ಯ ಮಟ್ಟದ ಒಂದೆರೆಡು ಪತ್ರಿಕೆಗಳು ಮತ್ತು ಸುದ್ದಿ ವಾಹಿನಿಗಳು ಏಕಮುಖವಾದ ಚರ್ಚೆಯನ್ನು ತಂದಿದ್ದಲ್ಲದೇ ಈ ಕುರಿತು ಸಾರ್ವಜನಿಕ ಪ್ರತಿಕ್ರಿಯೆಗಳಿಗೆ ಕರೆನೀಡಿ ಪರಿಸ್ಥಿತಿಯನ್ನು ಉಲ್ಭಣಗೊಳ್ಳುವಂತೆ ಮಾಡಿಬಿಟ್ಟರು. ಅದ್ಯಾರೋ ಪಂಚಾಂಗ ಹೇಳುವ ಪುಣ್ಯಾತ್ಮನೊಬ್ಬ ಲಕ್ಷಾಂತರ ಜನ ವೀಕ್ಷಿಸುತ್ತಿದ್ದಾರೆ ಎಂಬುದನ್ನು ಅರಿಯದೇ ಪುಸ್ತಕವನ್ನೇ ಹರಿದು ಹಾಕಿ ಬಿಟ್ಟ, ಮತ್ಯಾರೋ ಒಬ್ಬರು ಟಿವಿಯ ಲೈವ್ ಮಾತುಕತೆಯಲ್ಲೇ ಯೋಗೀಶ್ ಮಾಸ್ಟರನ್ನು ದಂಡಿಸುವಂತೆ ಪ್ರತಿಭಟಿಸುವಂತೆ ಕರೆನೀಡಿ ಬಿಟ್ಟ. ಕನ್ನಡವನ್ನೇ ಸರಿಯಾಗಿ ಆಡಲು ಬಾರದ ಖಾವಿದಾರಿಯೊಬ್ಬ ಪತ್ರಿಕಾ ಹೇಳಿಕೆಯ ಆದಾರದಲ್ಲೇ ದೂರು ದಾಖಲಿಸಿ ಮನಬಂದಂತೆ ಮಾತನಾಡಲಾರಂಭಿಸಿದ ಅಸಲಿಗೆ ಅವರ್ಯಾರೂ “ಢುಂಢಿ” ಪುಸ್ತಕವನ್ನು ಓದಿಯೇ ಇರಲಿಲ್ಲ ಎಂಬುದು ಗಮನಾರ್ಹ. ಇದೊಂದು ದುರಾದೃಷ್ಟಕರ ಬೆಳವಣಿಗೆ. ಹಾಗಾಗಿ ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ಹಲ್ಲೆಯೇ ಸರಿ.
“ಢುಂಢಿ” ಕಾದಂಬರಿ ಯಾಗಿರುವುದರಿಂದ ಅದು ಓದಲು ಸಿಕ್ಕಿದ್ದರೆ ಅಲ್ಲಿನ ಹೂರಣವನ್ನು ಒಪ್ಪುವ ಇಲ್ಲವೆ ಬಿಡುವ ಕುರಿತು ಚರ್ಚಿಸ ಬಹುದಿತ್ತೇನೋ ಆದರೆ ಅಂತಹದ್ದಕ್ಕೆ ಅವಕಾಶವೇ ನೀಡದೇ ವೈದಿಕ ಶಾಹಿ ಹಿತಾಸಕ್ತಿಗಳು ಪ್ರಕರಣವನ್ನು ದಿಕ್ಕು ತಪ್ಪಿಸಿ ಬಿಟ್ಟವು. ಘಟನೆ ಆರಂಭವಾದಂದಿನಿಂದ ಈ ಕುರಿತು ಯಾರೆಲ್ಲ ಮಾತನಾಡಿದರು, ಬರೆದರು ಎಂಬುದನ್ನು ಸೂಕ್ಷ್ಮವಾಗಿ ಗಮನಿಸಿದರೆ ಸಾಕು ಇದರ ಅರಿವಾಗುತ್ತದೆ. ಅಷ್ಟಕ್ಕೂ ನಾವು ನಂಬಿಕೊಂಡ ನಂಬಿಕೆಗಳು ಪ್ರಶ್ನಾತೀತವಾದುವುಗಳೇನಲ್ಲ, ಆದರೂ ಯಾರು ಯಾವ ಕಥೆ ಬರೆದರೂ ನಮ್ಮ ಮೂಲ ನಂಬಿಕೆಗಳಿಗೆ ಧಕ್ಕೆ ಉಂಟಾಗಲಾರದು, ಏಕೆಂದರೆ ಭಾವಗಳು ಅವರವರ ನಂಬಿಕೆಗಳಿಗೆ ನಿಷ್ಠವಾಗಿರುತ್ತವೆ ಹಾಗೆಂದು ಅದನ್ನು ಸಾರ್ವತ್ರಿಕವಾಗಿ ಹಳಿಯುವ ಘಾಸಿಗೊಳಿಸುವ ಪ್ರಯತ್ನವೂ ಆಗಬಾರದು. ಜನಪದರ ಸಂಸ್ಕøತಿಯಲ್ಲಿ ಇಂತಹ ವೈರುದ್ಯಗಳು ಪದೇ ಪದೇ ದಾಖಲಾಗುತ್ತಲೇ ಇರುತ್ತವೆ. ಬೇಕಾದ್ದನ್ನು ಉಳಿಸಿಕೊಂಡು ಬೇಡದ್ದನ್ನು ಬಿಟ್ಟುಬಿಡಿ ಆದರೆ ಹತ್ತಿಕ್ಕುವ ಪ್ರಯತ್ನಗಳು ಕೊನೆಯಾಗಲಿ. ಬದಲಾದ ಕಾಲಘಟ್ಟದಲ್ಲಿ ಬದಲಾವಣೆಯ ಗಾಳಿ ನಿರಂತರ ಅಲ್ಲವೇ ಹಾಗೆಯೇ ಆಯ್ಕೆಯ ಹಕ್ಕು ನಿಮ್ಮದೇ ಆಗಿದೆಯಲ್ಲವೇ?
No comments:
Post a Comment