(ಈ ಲೇಖನ ನಾಲ್ಕು ತಿಂಗಳ ಹಿಂದೆ ಜನತಾ ಮಾಧ್ಯಮಕ್ಕೆ ಬರೆಯಲಾಗಿತ್ತು, ಬ್ಲಾಗ್ ನಲ್ಲಿ ಪ್ರಕಟವಾಗಿರಲಿಲ್ಲ ಇದೀಗ ತಡವಾಗಿ ತಮ್ಮ ಅವಗಾಹನೆಗೆ)
ಗ್ರಹಿಕೆ ತಪ್ಪಿದರೆ ಏನೆಲ್ಲಾ ಆಗಬಹುದು, ಮಾಧ್ಯಮಗಳು ಎಡವಿದರೆ ಎಂಥ ಎಡವಟ್ಟುಗಳು ಸಂಭವಿಸುತ್ತವೆ ಎಂಬುದಕ್ಕೆ ನನ್ನ ಮುಂದಿರುವ ವಿಷಾsÀದನೀಯ ಘಟನೆಯನ್ನು ಹೇಳುವ ಅನಿವಾರ್ಯತೆ ಒದಗಿ ಬಂದಿದೆ. ಇಂತಹ ಕ್ರಿಯೆಗಳಿಂದ ವಿನಾಕಾರಣ ನಿರೀಕ್ಷಿಸದ ವೇದನೆಗೊಳಗಾಗಿದ್ದು ಹಾಸನ ಸಾಹಿತ್ಯ ವಲಯದ ಪ್ರಜ್ಞಾವಂತ ಲೇಖಕಿ, ಕವಿ, ಸಾಮಾಜಿಕ ಕಾರ್ಯಕರ್ತೆ ಹಾಗೂ ಹೋರಾಟಗಾರ್ತಿಯೂ ಆಗಿರುವ ಸೂಕ್ಷ್ಮ ಸಂವೇದನೆಯ ರೂಪಾ ಹಾಸನ. ಇತರರಿಗೆ ಕೇಡು ಬಯಸದೇ ಹಾಸನದ ಸಾಹಿತ್ಯ ವಲಯದಲ್ಲಿ ಕಳೆದ ಒಂದೂವರೆ ದಶಕಗಳಿಂದ ತನ್ನ ಪಾಡಿಗೆ ತಾನು ವಿವೇಚನಾಶೀಲವಾದ ಕ್ರಿಯೆಗಳಲ್ಲಿ ತೊಡಗಿಕೊಳ್ಳುತ್ತಲೇ ಭರವಸೆಯ ಛಾಪು ಮೂಡಿಸಿ ಹೆಸರು ಮಾಡಿದವರು ರೂಪ ಹಾಸನ. ಪ್ರೇರಣಾ ವಿಕಾಸ ವೇದಿಕೆಯನ್ನು ರಚಿಸಿಕೊಂಡು ಆ ಮೂಲಕ ಕನ್ನಡ ಪರವಾದ ಕಾಳಜಿ ಇಟ್ಟುಕೊಂಡು ಮಕ್ಕಳು ಮತ್ತು ಯುವಜನರಿಗೆ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗುವಂತಹ ಚಟುವಟಿಕೆಗಳು, ಲಿಂಗ ಸಮಾನತೆ, ದೌರ್ಜನ್ಯ, ಶೋಷಣೆ ಕುರಿತು ಜಾಗೃತಿ ಮೂಡಿಸುತ್ತಾ ವಿಶಿಷ್ಠವಾಗಿ ಸಾಮಾಜಿಕ ವಲಯದಲ್ಲಿ ಸ್ಥಾನವನ್ನು ಭದ್ರಪಡಿಸಿಕೊಂಡದ್ದು ರೂಪ ಹಾಸನ. ಇಂತಹ ಹೆಣ್ಣು ಮಗಳು ಹಾಸನ ಜಿಲ್ಲಾ ಕಸಾಪ ದಲ್ಲಿ ಕರ್ನಾಟಕ ಜಾನಪದ ಪರಿಷತ್ ಆಯೋಜಿಸಿದ್ದ ಆಹಾರ ಮೇಳದ ಕುರಿತು ವಿಜಯವಾಣಿ ಪತ್ರಿಕೆಯ ಲೌಡ್ ಸ್ಪೀಕರ್ ಕಾಲಂ ಗೆ ಪ್ರತಿಕ್ರಿಯೆ ನೀಡಿದ್ದನ್ನೆ ತಪ್ಪಾಗಿ ಗ್ರಹಿಸಿ ಜೈನ ಸಮುದಾಯಕ್ಕೆ ಸಮೀಕರಿಸಿ ಸ್ಥಳೀಯ ಪತ್ರಿಕೆಯೊಂದು ವರದಿ ಮಾಡಿದ್ದರಿಂದಾಗಿ ಮಾನಸಿಕ ವೇದನೆಯನ್ನು ಅನುಭವಿಸಬೇಕಾಗಿ ಬಂತು ಅಲ್ಲದೇ ಸಮುದಾಯದಿಂದ ಅವಗಣನೆಗೆ ಒಳಗಾಗುವ ಸಂಧರ್ಭವೂ ಎದುರಾಗಿದ್ದು ವಿಷಾದನೀಯಕರ ಸಂಗತಿ.
ಇದೆಲ್ಲಾ ನಡೆದದ್ದು ಹಾಸನ ದಲ್ಲಿ, ಹೇಳಿ ಕೇಳಿ ಶಕ್ತಿ ರಾಜಕಾರಣಕ್ಕೆ ಹೆಸರಾಗಿರುವ ಮತ್ತು ರಾಜಕೀಯವನ್ನು ಉಂಡೇಳುವ ಇಲ್ಲಿಯ ಜನರ ಮನಸ್ಥಿತಿಗಳ ನಡುವೆ ಪ್ರತೀ ಹಂತದಲ್ಲೂ ಕೆಟ್ಟ ರಾಜಕಾರಣವೇ ಬೇಕಿಲ್ಲದೆಯೂ ಬೆರೆತು ಹೋಗಿ ಬಿಡುತ್ತದೆ ಅದು ವಿಷಾsÀದನೀಯಕರ ಸಂಗತಿ. ಈಗ್ಯೆ 3ವಾರಗಳ ಹಿಂದೆ ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆವರಣದಲ್ಲಿ ನೂತನವಾಗಿ ಕರ್ನಾಟಕ ಜಾನಪದ ಪರಿಷತ್ ನ ಅಧ್ಯಕ್ಷತೆ ವಹಿಸಿಕೊಂಡ ಹಂಪನಹಳ್ಳಿ ತಿಮ್ಮೇಗೌಡ ಆಹಾರ ಮೇಳ ಆಯೋಜಿಸಿದ್ದರು. ಈ ಸಂಬಂಧ ಪತ್ರಿಕಾಗೋಷ್ಠಿ ನಡೆದಾಗಲೇ ಅಲ್ಲಿ ಎಂತೆಂಥಹ ತಿನಿಸು ಮಾರಾಟವಾಗಬಹುದು ಎಂಬ ಬಗ್ಗೆ ಪತ್ರಕರ್ತರಲ್ಲೂ ಜಿಜ್ಞಾಸೆ ಇತ್ತು. ಆದರೆ ಇದ್ಯಾವುದನ್ನು ಲೆಕ್ಕಿಸದೇ ಸಹಜವಾಗಿ ಆಹಾರ ಮೇಳ ಕಸಾಪ ಭವನದ ಹೊರ ಆವರಣದಲ್ಲಿ ಆಯೋಜನೆ ಗೊಂಡಿತು.ಮೇಳದಲ್ಲಿ ಮನೆಯಿಂದ ಸಿದ್ದಪಡಿಸಿ ತಂದ ಆಹಾರವನ್ನಷ್ಟೇ ಮಾರಾಟಕ್ಕಿಡಲಾಗಿತ್ತು. ಅಲ್ಲಿ ಹಾಸನದ ಸೋಕಾಲ್ಡ್ ಗಳು ಸೇರಿದಂತೆ ಹಲವರು ನಿಸ್ಸಂಕೋಚವಾಗಿ ಇಷ್ಟಕ್ಕನುಗುಣವಾಗಿ ಮಾಂಸಹಾರವನ್ನು ಸವಿದರು, ಸಸ್ಯಾಹಾರವನ್ನು ಸವಿದರು. ಆದರೆ ಮರುದಿನ ಈ ಕುರಿತು ಪತ್ರಿಕೆಯೊಂದರಲ್ಲಿ ಕಸಾಪ ಆವರಣದಲ್ಲಿ ಬಾಡೂಟ ಅದರಲ್ಲಿಯೂ ಹಂದಿ ಕರಿ ಮಾರಾಟ ಮತ್ತು ಸೇವನೆ ಸರಿಯೇ ಎಂಬ ವರದಿ ಜೊತೆಗೆ ಕೆಲವು ಗಣ್ಯರ ವಿರೋಧಿ ಹೇಳಿಕೆಗಳು ಪ್ರಕಟವಾದವು. ಆಹಾರ ಮೇಳ ಆಯೋಜಿಸಿದ್ದು ಜನಪದ ಪರಿಷತ್ ಆದರೆ ಅದಕ್ಕೆ ಜಾಗ ಒದಗಿಸಿದ ಕಸಾಪ ಟೀಕೆ ಟಿಪ್ಪಣಿಗಳಿಗೆ ಎರವಾಯಿತು. ಮುಂದುವರೆದ ಚರ್ಚೆಯಲ್ಲಿ ಆಹಾರಮೇಳ ಆಯೋಜಿಸಿದ್ದ ತಿಮ್ಮೇಗೌಡ “ಬಾಡೂಟ ಮಾರಾಟ ಅಥವ ಸೇವನೆ ಮಾಡದಿರಲು ಕಸಾಪ ಏನು ಶಂಕರ ಮಠವಲ್ಲ” ಎಂಬ ತೀಕ್ಷ್ಣ ಹೇಳಿಕೆ ನೀಡುವ ಜೊತೆಗೆ ಆಹಾರ ಕ್ರಮ ಮತ್ತು ಸೇವನೆ ಕುರಿತು ಲೇಖನ ಬರೆದು ಸಮರ್ಥಿಸಿಕೊಂಡರು. ಇವರ ಪ್ರತಿಕ್ರಿಯೆಗೆ ಬೇಸರಗೊಂಡ ಹಾಸನದ ಶಂಕರ ಮಠದ ಮುಖಂಡರುಗಳು ಬಾಡೂಟದ ಚರ್ಚೆಗೆ ಶಂಕರಮಠ ಎಳೆದು ತಂದ ಕ್ರಮವನ್ನು ಖಂಡಿಸಿದರು.
ಇಷ್ಟೆಲ್ಲ ಆಗಿ ತಣ್ಣಗಾಗುವ ವೇಳೆಗೆ ರಾಜ್ಯಮಟ್ಟದ ಪತ್ರಿಕೆಯ ಉತ್ಸಾಹಿ ವರದಿಗಾರರೊಬ್ಬರು ಆ ಪತ್ರಿಕೆಯ ಯಲ್ಲಿ ವಿಷಯ ಪ್ರಸ್ತಾಪಿಸಿ ಹಾಸನದ ಸಾರಸ್ವತ ಲೋಕದ ಪ್ರಮುಖರು ಮತ್ತು ಯುವಜನರನ್ನು ಮಾತನಾಡಿಸಿದರು. ಈ ಪೈಕಿ ಆರ್.ಪಿ ವೆಂಕಟೇಶಮೂರ್ತಿ, ರೂಪಹಾಸನ, ಎಚ್.ಕೆ ಶರತ್ ಮಾಂಸಹಾರ ಮಾರಾಟವಾಗಿದ್ದು ತಪ್ಪೇನಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರೆ, ದಲಿತ ಸಾಹಿತ್ಯ ಪರಿಷತ್‍ನ ನಾಗರಾಜ್ ಸದರಿ ಆಹಾರ ಮೇಳದಲ್ಲಿ ದನದ ಮಾಂಸ ಸೇರಿಲ್ಲದಿದುದರ ಕುರಿತು ಬೇಸರ ವ್ಯಕ್ತಪಡಿಸಿ ದನ ತಿಂದವರೂ ಸಾಹಿತ್ಯ ರಚಿಸಿದ್ದಾರೆ.! ಎಂದರು. ಉಳಿದವರು ಮಾಂಸಹಾರ ಸೇವನೆಗೆ ಪರಿಷತ್ ಸೂಕ್ತ ಆವರಣವಲ್ಲ ಎಂದರೆ, ಪರಿಷತ್ ಆವರಣದಲ್ಲಿ ಮಾಂಸಹಾರಕ್ಕೆ ಇತಿಮಿತಿ ಬೇಕು ಜನಪದರ ಆಹಾರವೆಂದು ಕೋಣ ಕಡಿಯಲು ಸಾಧ್ಯವೇ ? ಕಳ್ಳು ಸೇಂದಿ ಕುಡಿಯಲು ಸಾಧ್ಯವೆ? ಎಂದು ಪ್ರಶ್ನಿಸಿದವರು ಕೆಲವರು. ಹೀಗೆ ಅವರವರ ಭಾವಕ್ಕೆ ಪ್ರತಿಕ್ರಿಯಿಸಿ ಅವರವರದೇ ನೆಲೆಗಟ್ಟಿನಲ್ಲಿ ಅದಕ್ಕೆ ಸಮರ್ಥನೆ ಕೊಟ್ಟುಕೊಂಡಿದ್ದರೆ ಏನು ಆಗುತ್ತಿರಲಿಲ್ಲವೇನೋ..
ಆದರೆ ಮರುದಿನ ಸ್ಥಳೀಯ ದಿನಪತ್ರಿಕೆಯೊಂದರಲ್ಲಿ ರೂಪ ಹಾಸನ ಅವರ ಹೇಳಿಕೆಯನ್ನು ಮಾತ್ರ ಹೆಕ್ಕಿ ತಿರುಚಿ ಜೈನ ಸಮುದಾಯ ಅಹಿಂಸೆಯನ್ನು ಪ್ರತಿಪಾದಿಸುತ್ತದೆ ಆದರೆ ಸಮುದಾಯದ ಪ್ರತಿನಿಧಿಯಂತಿರುವ ರೂಪ ಹಾಸನ ಮಾಂಸಾಹಾರವನ್ನು ಬೆಂಬಲಿಸಿದ್ದಾರೆ ಆ ಮೂಲಕ ಜೈನ ಸಮುದಾಯದ ಆಶಯಗಳಿಗೆ ಧಕ್ಕೆಯಾಗುವಂತೆ ಮಾಡಿದ್ದಾರೆ ಎಂದು ಬರೆದು ತಾತ್ವಿಕ ನೆಲೆಗಟ್ಟಿನಲ್ಲಿ ನಡೆಯುತ್ತಿದ್ದ ಹೋರಾಟಕ್ಕೆ ಮತೀಯ ತಿರುವು ನೀಡಿ ಬಿಟ್ಟರು. ಸಹಜವಾಗಿಯೇ ಮುಜುಗುರಕ್ಕೆ ಈಡಾದ ಜೈನ ಸಮುದಾಯದ ಮಂದಿ ರೂಪಾ ಅವರನ್ನು ಕನಿಷ್ಟ ಸಭೆಗೆ ಕರೆದು ಸ್ಪಷ್ಟೀಕರಣ ಕೇಳುವ ಸೌಜನ್ಯ ತೋರದೇ ತಾವಷ್ಟೇ ಸಭೆ ಸೇರಿ ಚರ್ಚಿಸಿ ರೂಪಹಾಸನ ಹೇಳಿಕೆಯನ್ನು ವಾಪಾಸು ಪಡೆಯಬೇಕು ವಿಷಾದ ವ್ಯಕ್ತಪಡಿಸಬೇಕು ಎಂದು ತೀರ್ಮಾನಿಸಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದರಲ್ಲದೇ ರೂಪಹಾಸನ ಅವರಿಗೂ ನೋಟೀಸು ಜಾರಿ ಮಾಡಿದರು. ಬಹುಶ: ಪ್ರಜ್ಞಾವಂತಿಕೆ ಇದ್ದಿದ್ದರೆ ಇಂತಹ ತೀರ್ಮಾನದ ಅಗತ್ಯ ಬೀಳುತ್ತಿರಲಿಲ್ಲವೇನೋ ಏಕೆಂದರೆ ರೂಪ ಹಾಸನ ಸಾಂಸ್ಕøತಿಕ ಪ್ರತಿನಿಧಿಯಾಗಿ ಲೇಖಕಿಯಾಗಿ ಪ್ರತಿಕ್ರಿಯೆ ನೀಡಿದ್ದರೆ ಹೊರತು ಸಮುದಾಯದ ಪ್ರತಿನಿಧಿಯಾಗಿ ಹೇಳಿಕೆ ನೀಡಿರಲಿಲ್ಲ. ಅಷ್ಟಕ್ಕೂ ತಾನು ಜೈನ ಸಮುದಾಯದ ಪ್ರತಿನಿಧಿ ಎಂದು ರೂಪಹಾಸನ ಗುರುತಿಸಿಕೊಂಡ ಉದಾಹರಣೆಗಳಿಲ.್ಲ ಹೀಗಿರುವಾಗ ಜೈನ ಸಮುದಾಯದ ಮುಖಂಡರು ರೂಪ ಹಾಸನ ಪ್ರತಿಕ್ರಿಯೆಗೂ ಜೈನ ಸಮುದಾಯಕ್ಕೂ ಸಂಬಂಧವಿಲ್ಲ ಅದು ಅವರ ವೈಯಕ್ತಿಕ ನಿಲುವು, ಜೈನ ಸಮಾಜ ತನ್ನ ಸಿದ್ದಾಂತಗಳಿಗೆ ಬದ್ದವಾಗಿದೆ ಎಂದು ಹೇಳಿದ್ದರೆ ಪ್ರಕರಣ ಮುಗಿಯುತ್ತಿತ್ತು. ಆದರೆ ಆ ರೀತಿ ಆಗಲೇ ಇಲ್ಲ ಎಂದರೆ ಅದರ ಹಿಂದಿನ ಹುನ್ನಾರಗಳೇನು? ಎಂಬುದು ಸ್ಪಷ್ಟ. ಈ ತಿರುವು ಅಭಿವ್ಯಕ್ತಿ ಸ್ವಾತಂತ್ರ್ಯ ಹರಣದ ಕೆಟ್ಟ ಬೆಳವಣಿಗೆ ಮತ್ತು ಸಮುದಾಯವನ್ನು ಪ್ರಚೋದಿಸಿದ ಖಂಡನಾರ್ಹ ಬೆಳವಣಿಗೆಯಲ್ಲವೇ?
ಇಷ್ಟೆಲ್ಲ ಆದರೂ ಹಾಸನದ ಸಂವೇದನಾಶೀಲ ಮನಸ್ಸುಗಳು ಧ್ವನಿಯೆತ್ತುವ ಪ್ರಯತ್ನವನ್ನೇ ಮಾಡಲಿಲ್ಲ, ರೂಪ ಹಾಸನ ಕೂಡ ಧೃತಿಗೆಡಲಿಲ್ಲ ಬದಲಿಗೆ ಗಟ್ಟಿ ಮನಸ್ಸಿನ ಆ ಹೆಣ್ಣುಮಗಳು ತಾನು ವ್ಯಕ್ತಪಡಿಸಿದ ಪ್ರತಿಕ್ರಿಯೆಗೆ ಬದ್ದತೆ ಇಟ್ಟುಕೊಂಡರು, ಜೈನ ಸಮುದಾಯಕ್ಕೆ ಸೂಕ್ತ ಸಮಜಾಯಿಷಿಯನ್ನೇ ಕೊಟ್ಟರು. ಆಗ ಎಚ್ಚೆತ್ತುಕೊಂಡ ಹಾಸನದ ಪ್ರಗತಿಪರ ಧೋರಣೆಯ ಮಂದಿ ರೂಪಹಾಸನ ನಿಲುವಿಗೆ ಬೆಂಬಲಿಸಿ ಪ್ರತಿಕ್ರಿಯಿಸಿದರು, ದೇವನೂರ ಮಹದೇವ, ಹಿ ಶಿ ರಾಮಚಂದ್ರಗೌಡ, ಬಂಜಗೆರೆ ಜಯಪ್ರಕಾಶ್ ಮತ್ತಿತರರು ಅಭಿವ್ಯಕ್ತಿ ಸ್ವಾತಂತ್ರ್ಯ ಹರಣದ ಕುರಿತು ಖಂಡಿಸಿ ಹೇಳಿಕೆ ನೀಡಿದರಲ್ಲದೇ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದರು. ಎಲ್ಲ ಪ್ರಕರಣದ ಕೇಂದ್ರ ಬಿಂದುವಾಗಿದ್ದ ವಿಜಯವಾಣಿ, ಗಣ್ಯರ ಹೇಳಿಕೆಯನ್ನು ಪ್ರಕಟಿಸಿತು. ಆದರೆ ಪ್ರಕರಣದ ತೀವ್ರತೆಗೆ ಕಾರಣರಾಗಿದ್ದ ಸ್ಥಳೀಯ ಪತ್ರಿಕೆ ಮಾತ್ರ ತಾವೇ ಆರಂಭಿಸಿದ ಚರ್ಚೆಗೆ ಸೂಕ್ತ ತಾರ್ಕಿಕ ಅಂತ್ಯ ಕಾಣಿಸುವಲ್ಲಿ ವಿಫಲರಾದರು. ಪರಿಣಾಮ ಸಾರ್ವಜನಿಕವಾಗಿ ಅವಗಣನೆಗೆ ಟೀಕೆ ಟಿಪ್ಪಣಿಗಳಿಗೆ ಆಹಾರವಾಗಬೇಕಾಯಿತು.
ಇಡೀ ಪ್ರಕರಣವನ್ನು ಗಂಬೀರವಾಗಿ ಅವಲೋಕಿಸುತ್ತಾ ಯಾವುದೇ ವಿವಾದಗಳಿಗೆ ಆಸ್ಪದ ನೀಡದೆ ಪ್ರಜ್ಞಾವಂತಿಕೆ ಮೆರೆದದ್ದು ಮಾತ್ರ ಕನ್ನಡ ಸಾಹಿತ್ಯ ಪರಿಷತ್‍ನ ಅಧ್ಯಕ್ಷ ಡಾ ಜನಾರ್ಧನ್. ಹಾಸನದ ಕೇಂದ್ರ ಸ್ಥಾನದಲ್ಲಿರುವ ಸಾಹಿತ್ಯ ಪರಿಷತ್‍ನ ಆವರಣದಲ್ಲಿ ಬಾಡೂಟ ಇಂದು ನಿನ್ನೆಯದೇನಲ್ಲ. ಮಾಂಸಹಾರ ಇಲ್ಲವೇ ಸಸ್ಯಾಹಾರ ಆಹಾರ ಪದ್ದತಿಯ ಒಂದು ಕ್ರಮ ಅದನ್ನು ಸೇವಿಸುವುದು ಬಿಡುವುದು ಅವರವರಿಗೆ ಬಿಟ್ಟದ್ದು ಹಾಗಾಗಿ ಸಾಹಿತ್ಯ ಪರಿಷತ್ ಆವರಣದಲ್ಲಿ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿದ್ದ ಎಚ್ ಬಿ ರಮೇಶ್ ಅವಧಿ ಹೊರತು ಪಡಿಸಿ ಉಳಿದೆಲ್ಲರ ಅವಧಿಯಲ್ಲೂ ಒಂದಿಲ್ಲೊಂದು ಕಾರಣಕ್ಕೆ ಬಾಡೂಟದ ಸಮಾರಾಧನೆ ನಡೆದಿದೆ, ಕೆಲವೊಮ್ಮೆ ಖಾಸಗಿ ಕಾರ್ಯಕ್ರಮಗಳಿಗೂ ಹೊರ ಆವರಣವನ್ನ ನೀಡಿದಾಗ ಮಾಂಸಹಾರ ಸೇವನೆ ಆಗಿದೆ. ತೀರ್ಥ ಸೇವನೆ ಮತ್ತು ಧೂಮಪಾನ ನಡೆದಿರುವುದನ್ನು ತಳ್ಳಿಹಾಕಲು ಸಾಧ್ಯವಿಲ್ಲ. ಆಗೆಲ್ಲಾ ಅಪವಿತ್ರವಾಗದಿದ್ದ ಕಸಾಪ ಆವರಣ ಈಗ ಮಾತ್ರ ಅಪವಿತ್ರವಾಯ್ತು ಎಂಬ ಹುಯ್ಲಿನ ಹಿಂದೆ ದೊಡ್ಡ ರಾಜಕಾರಣವೇ ಇದೆ ಎಂಬ ಚರ್ಚೆಗಳು ಈಗ ನಡೆಯುತ್ತಿವೆ.
ಯಾವುದನ್ನೇ ಆಗಲಿ ನಿಷೇಧಿಸುವುದು ಎಂದರೆ ತಾತ್ವಿಕ ನೆಲೆಗಟ್ಟಿನಲ್ಲಿ ನಮಗೆ ನಾವೆ ವಿಧಿಸಿಕೊಳ್ಳುವ ಒಂದು ಶಿಸ್ತಿನ ಪ್ರತೀಕ, ಅಂತಹ ಜಾಗೃತಿ ನಮ್ಮೊಳಗೆ ಬರಬೇಕು. ಆದರೆ ಅದು ಯಾವುದಕ್ಕೆ ಬೇಕು ಯಾವುದಕ್ಕೆ ಬೇಡ ಎಂಬ ವಿವೇಚನೆಯೂ ಅಗತ್ಯ. ಎಲ್ಲವೂ ಇತಿಮಿತಿಯ ಚೌಕಟ್ಟಿನಲ್ಲಿದ್ದರೆ ಯಾವ ತೊಂದರೆಯೂ ಆಗದು. ಆದರೆ ವಿವೇಚನೆಗಳಿಗೆ ಬ್ರೇಕ್ ಹಾಕಿ ಒಟ್ಟು ವಿಷಯವನ್ನು ಬೇರೆ ಬೇರೆ ಆಯಾಮಗಳಲ್ಲಿ ವಿಷಯಾಂತರ ಮಾಡಿ ಹಾಸನದ ಸಾಂಸ್ಕøತಿಕ ಮತ್ತು ಸಾರಸ್ವತ ಪ್ರಜ್ಞೆಗೆ ಕಪ್ಪು ಮಸಿ ಬಳಿದದ್ದು ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಬರುವಂತೆ ನಡೆದುಕೊಂಡದ್ದು ಅತ್ಯಂತ ನೋವಿನ ಸಂಗತಿ. ವರ್ತಮಾನದಲ್ಲಿ ಗ್ರಹಿಕೆಗೆ ಗ್ರಹಣ ಹಿಡಿದರೆ ಇಂತಹ ಘಟನೆಗಳು ಸಮಾಜದ ಶಾಂತಿಯನ್ನು ಹಾಳುಮಾಡುವುದು ಖಚಿತ ಇಂತಹ ಕ್ರಿಯೆಗಳು ಇಲ್ಲಿಗೆ ಕೊನೆಯಾಗಲಿ ಒಟ್ಟು ಸಮಾಜವನ್ನು ಸದಾಶಯದಿಂದ ಕರೆದೊಯ್ಯುವ ಬೆಳವಣಿಗೆಗಳು ಆಗಲಿ.
1 comment:
good. sariyaada grahikeya abhivyakthi!
Post a Comment