ಈ ಸಲ ಸೆ.5 ರಂದು ಸಾರ್ವತ್ರಿಕ ಶಿಕ್ಷಕ ದಿನಾಚರಣೆ ಇಲ್ಲ, ಅದೇನೋ ಮೋದಿ ಬಾಷಣ ಮಾಡ್ತಾರಂತೆ ಅದನ್ನ ಮಕ್ಕಳಿಗೆ ಕೇಳಿಸ್ಬೇಕಂತೆ ಎಂದು ಬೇಸರದಿಂದ ನುಡಿದದ್ದು ನನ್ನ ಶಿಕ್ಷಕ ಮಿತ್ರ. ಶಿಕ್ಷಕರ ದಿನದ ಸಂಭ್ರಮದ ಘಳಿಗೆಯನ್ನು ಮಿಸ್ ಮಾಡಿಕೊಂಡ ಬೇಸರವಿತ್ತು ಅವರ ಧ್ವನಿಯಲ್ಲಿ. ಅದೇನು ಮಾರಾಯಾ ಅಂತಹದ್ದು ಮೋದಿ ಬಾಷಣ ಕೇಳೋಕೆ ಶಿಕ್ಷಕ ದಿನಾಚರಣೆ ಕಾರ್ಯಕ್ರಮ ಯಾಕೆ ರದ್ದು ಮಾಡಬೇಕು? ಹಾಗಂತ ಏನಾದರೂ ಆದೇಶ ಇದೆಯಾ ಎಂದು ಪ್ರಶ್ನಿಸಿದೆ, ಗೊತ್ತಿಲ್ಲಾ ಓರಲ್ ಆಗಿ ಹೇಳಿದಾರಂತೆ ನೋಡ ಬೇಕು ಎಂದರು. ಇತರೆ ಶಿಕ್ಷಕ ಮಿತ್ರರು ಮತ್ತು ಅದಿಕಾರಿಗಳನ್ನು ವಿಚಾರಿಸಿದೆ, ಅವತ್ತು ಹಲವೆಡೆ ಸಾರ್ವತ್ರಿಕವಾಗಿ ಸಡಗರದಿಂದ ಏರ್ಪಾಡು ಮಾಡಿಕೊಳ್ಳಲಾಗಿದ್ದ ಶಿಕ್ಷಕರ ದಿನಾಚರಣೆಯನ್ನು ರದ್ದು ಮಾಡಿಕೊಂಡು ಎಲ್ಲರೂ ಹ್ಯಾಪು ಮೋರೆ ಹಾಕಿಕೊಂಡಿದ್ದರು. ಎಲ್ಲಿಯೂ ಈ ಕುರಿತು ಲಿಖಿತ ಆದೇಶವಿಲ್ಲ, ಪ್ರಧಾನಿ ಮೋದಿ ಎಲ್ಲಿದ್ದಾರೆ ಎಂದು ನೋಡಿದರೆ ಜಪಾನ್ ಪ್ರವಾಸ ದಲ್ಲಿದ್ದಾರೆ, ಮೋದಿ ಯಾಕೆ ಹೀಗೆ ಹೇಳಿದರೂ ? ಅತ್ತ ವಾರ್ಷಿಕ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಈ ಸಲ ಯಾರಿಗೂ ಕೊಡಲಿಲ್ಲ, ಸದರಿ ಪ್ರಶಸ್ತಿಯ ಹೆಸರನ್ನೇ ಬದಲಿಸಿ ಕೇಸರಿ ಪಡೆಯ ಹೆಸರುಗಳನ್ನು ಇಡಲು ಮೋದಿ ಹುನ್ನಾರ ನಡೆಸುತ್ತಿದ್ದಾರೆ, ಇದೇ ರೀತಿ ಗಾಂಧಿ ಕುಟುಂಬದ ಹೆಸರುಗಳನ್ನು ಸಾರ್ವತ್ರಿಕ ಯೋಜನೆಗಳಿಗೆ ಇಟ್ಟಿರುವುದನ್ನು ಬದಲಿಸುವ ಪ್ರಯತ್ನ ಮಾಡುತ್ತಿದ್ದಾರೆ ಈ ನಡುವೆ ಇದೆಂತಹದ್ದು ಮಾರಾಯ್ರೆ ಅಂದು ಕೊಂಡು ಸುದ್ದಿ ಮೂಲಗಳನ್ನು ಹುಡುಕಿದೆ.
ಆಗಿರುವುದು ಇಷ್ಟು, ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯ ನಿರ್ದೇಶನದಂತೆ ದೆಹಲಿ ಶಿಕ್ಷಣ ನಿರ್ದೇಶನಾಲಯ ದೆಹಲಿಯ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಕಡ್ಡಾಯವಾಗಿ ಸೆ.5 ರಂದು ಪ್ರದಾನಿ ನರೇಂದ್ರ ಮೋದಿ ಶಿಕ್ಷಕರ ದಿನಾಚರಣೆಯ ಅಂಗವಾಗಿ ಮಾಡುವ ಬಾಷಣವನ್ನು ವಿದ್ಯಾರ್ಥಿಗಳಿಗೆ ಕೇಳಿಸುವಂತೆ ಸೂಚನೆ ನೀಡಿದೆ. ಆಯಾ ಶಾಲೆಗಳಲ್ಲಿ ಲಭ್ಯವಿರುವ ಪರಿಕರಗಳನ್ನ ಬಳಸಿಕೊಂಡು ವೀಕ್ಷಣೆಗೆ, ಆಲಿಸುವಿಕೆಗೆ ಅವಕಾಶ ಮಾಡುವಂತೆ ಹೇಳಲಾಗಿದೆ. ಅದೇ ದಿನ ದೆಹಲಿಯ ಆಯ್ದ ಶಾಲಾ ಮಕ್ಕಳೊಡನೆ ಪ್ರದಾನಿ ಮೋದಿ ಸಂವಾದ ನಡೆಸಲಿದ್ದಾರೆ. ಆಗಸ್ಟ್ 15ರ ಸ್ವಾತಂತ್ರ್ಯ ದಿನದಂದು ಸಹಾ ಪ್ರದಾನಿ ಮೋದಿ ಶಾಲಾ ಮಕ್ಕಳೊಡನೆ ಬೆರೆತು ಸಂವಾದ ನಡೆಸಿದ್ದರು. ಅಂದ ಹಾಗೆ ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ನೀಡಿರುವ ಈ ಸೂಚನೆಯು ಶಾಸನಬದ್ದ ಅಥವ ಕಡ್ಡಾಯವೂ ಅಲ್ಲ ಎಂದು ತಿಳಿಸಿದೆ. ಆದರೆ ದೆಹಲಿ ವ್ಯಾಪ್ತಿಯ ಶಾಲೆಗಳಿಗೆ ಮಾತ್ರ ಕಡ್ಡಾಯವೆಂದು ಸೂಚಿಸಲಾಗಿದೆ.ಅಷ್ಟೇ ಅಲ್ಲ ದೇಶದ ಇತರೆ ರಾಜ್ಯಗಳು ವಿವೇಚನಾನುಸಾರ ನಿಲುವು ತಾಳ ಬಹುದಾಗಿದೆ. ಆದರೆ ಇದನ್ನೇ ದೊಡ್ಡ ಸುದ್ದಿಯಾಗಿ ಮಾಡಿಕೊಂಡು ಸೆ.5 ರಂದು ಏರ್ಪಾಡಾಗಿದ್ದ ಅನೇಕ ಸಾರ್ವತ್ರಿಕ ಕಾರ್ಯಕ್ರಮಗಳನ್ನು ರದ್ದು ಮಾಡಿಕೊಂಡು ಸಂಭ್ರಮವನ್ನು ತಣ್ಣಗಾಗಿಸಲಾಗಿದೆ. ರಾಜ್ಯ ಸರ್ಕಾರ ಈ ದಿಸೆಯಲ್ಲಿ ಸ್ಪಷ್ಟ ನಿಲುವನ್ನು ತಕ್ಷಣ ಪ್ರಕಟಿಸ ಬೇಕು. ಇಷ್ಟಕ್ಕೂ ಶಿಕ್ಷಕ ದಿನಾಚರಣೆಯಂದು ಶಿಕ್ಷಕರ ಜೊತೆಗೆ ಮಕ್ಕಳು ಮೋದಿ ಬಾಷಣವನ್ನು ಯಾಕೆ ಕೇಳಬೇಕು? ರಾಜ್ಯದಲ್ಲಿ ಕನ್ನಡ ಪ್ರಥಮ ಬಾಷೆ, ಇಂಗ್ಲೀಷ್ , ಹಿಂದಿ , ಉರ್ದು ಆಯ್ಕೆ ಬಾಷೆಗಳು. ಹೀಗಿರುವಾಗ ರಾಜ್ಯದ ಮಕ್ಕಳಿಗೆ ಅಷ್ಟೇ ಏಕೆ ಶಿಕ್ಷಕು/ಉಪನ್ಯಾಸಕರಿಗೆ ಬಹುಪಾಲು ಮಂದಿಗೆ ಅರ್ಥವಾಗದ ಹಿಂದಿ ಬಾಷೆಯಲ್ಲಿ ಪ್ರದಾನಿ ಮೋದಿ ಬಾಷಣ ಮಾಡಿದರೆ ಏನು ಅರ್ಥವಾದೀತು? ಮೋದಿಯ ಹಿಂದಿ ಬಾಷಣ ಕೇಳಿಸುವ ನೆಪದಲ್ಲಿ ರಾಜ್ಯದ ಮಕ್ಕಳಿಗೆ ಹಿಂದಿ ಹೇರಿಕೆ ಬೇಡ ಇದನ್ನ ರಾಜ್ಯ ಸರ್ಕಾರ ಅರಿತು ತಕ್ಷಣ ಗೋಂದಲ ಪರಿಹಾರ ಮಾಡಿದರೆ ಒಳ್ಳೆಯದು. ಸದುದ್ದೇಶದಿಂದ ಶಿಕ್ಷಕ ದಿನಾಚರಣೆಯ ದಿನದಂದು ಪ್ರದಾನಿ ಮೋದಿ ಮಾಡುವ ಬಾಷಣವನ್ನ ಕನ್ನಡಿಕರಿಸಿ ಮುದ್ರಿತ ರೂಪದಲ್ಲಿ ಇಲ್ಲವೇ ಭಾಷಾಂತರ ರೂಪದಲ್ಲಿ ಮುಂದಿನ ದಿನಗಳಲ್ಲಿ ಕೇಳಿಸುವ ಪ್ರಯತ್ನವಾಗಲಿ. ಅದು ಬಿಟ್ಟು ಸೆ.5 ರ ಶಿಕ್ಷಕ ದಿನಾಚರಣೆಯ ಸಂಭ್ರಮ ರದ್ದು ಮಾಡುವುದು ಸುತರಾಂ ಒಪ್ಪಿಕೊಳ್ಳಲಾಗದು.
ಅಂದ ಹಾಗೆ ಭಾರತದಲ್ಲಿ ಶಿಕ್ಷಕ ದಿನಾಚರಣೆ ಅಧಿಕೃತವಾಗಿ ಜಾರಿಗೆ ಬಂದದ್ದು 1962ರಲ್ಲಿ, ಭಾರತದ ಎರಡನೇ ರಾಷ್ಟ್ರಪತಿಯಾಗಿದ್ದ ಸರ್ವೆಪಲ್ಲಿ ರಾಧಾಕೃಷ್ಣನ್, ರಾಷ್ಟ್ರಪತಿಯಾಗಿ ಅಧಿಕಾರಕ್ಕೆ ಬಂದದ್ದು 1962 ಅದೇ ವರ್ಷ ಕೆಲವು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಅವರು ಹುಟ್ಟು ಹಬ್ಬ ಆಚರಿಸುವ ಪ್ರಯತ್ನ ಮಾಡಿದಾಗ ಅದೇ ದಿನವನ್ನ ಶಿಕ್ಷಕ ದಿನಾಚರಣೆಯಾಗಿ ಆಚರಿಸಲು ರಾಧಾಕೃಷ್ಣನ್ ಸೂಚಿಸಿದ ಮೇರೆಗೆ ಅಂದಿನಿಂದ ಶಿಕ್ಷಕ ದಿನಾಚರಣೆ ಆಚರಿಸಿಕೊಂಡು ಬರಲಾಗುತ್ತಿದೆ. ಆದರೆ ಅದೇ ಅವರ ನಿಜವಾದ ಹುಟ್ಟು ಹಬ್ಬದ ದಿನಾಂಕವಾ? ಅದು ಮಾತ್ರ ಇವತ್ತಿಗೂ ಗೊತ್ತಿಲ್ಲ, ಈ ಕುರಿತು ಅವರ ಪುತ್ರ ಬರೆದಿರುವ ಪುಸ್ತಕದಲ್ಲಿ ಹೇಳಲಾಗಿದೆ. (ಈಗ ಉಲ್ಲೇಖಿತವಾಗಿರುವ ಜನ್ಮ ದಿನಾಂಕ ಸೆ.5, 1888). ಶಿಕ್ಷಕ ದಿನಾಚರಣೆಯ ಸಂಭ್ರಮಕ್ಕೆ ಇಂದಿಗೆ ಸರಿಯಾಗಿ 4ದಿನಗಳು ಉಳಿದಿವೆ . ಈ ಸಲ 53ನೇ ಶಿಕ್ಷಕರ ದಿನಾಚರಣೆ ಭಾರತದಲ್ಲಿ ಆಗುತ್ತಿದೆ. ಅದೇ ದಿನಕ್ಕೆ ಸಂಭ್ರಮ ಆಚರಿಸುವುದು ಸೂಕ್ತ ಆದರೆ ಅನುಕೂಲ, ವ್ಯವಸ್ಥೆಗಳನ್ನು ನೋಡಿಕೊಂಡು ಸೆಪ್ಟೆಂಬರ್ ತಿಂಗಳ ಯಾವುದಾದರೊಂದು ದಿನದಲ್ಲಿ ಶಿಕ್ಷಕ ದಿನಾಚರಣೆ ಆಚರಿಸುವುದು ಒಂದು ರೀತಿಯಲ್ಲಿ ರಾಧಾಕೃಷ್ಣನ್ ಗೆ ತೋರುವ ಅಗೌರವವೇ ಸರಿ.
ಇನ್ನು ಶಿಕ್ಷಕ ಸಮುದಾಯದ ಕುರಿತು ಒಂದೆರೆಡು ಮಾತು. ವರ್ತಮಾನದ ಈ ಕಾಲಘಟ್ಟದಲ್ಲಿ ಶಿಕ್ಷಕ ಮತ್ತು ವಿದ್ಯಾರ್ಥಿ ಸಂಬಂಧ ಎಲ್ಲಿಗೆ ಬಂದು ನಿಂತಿದೆ ಎಂಬುದನ್ನು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕಾದ ಅನಿವಾರ್ಯ ಪರಿಸ್ಥಿತಿ ಸೃಷ್ಟಿಯಾಗಿರುವುದು ದುರಂತದ ಸಂಗತಿ. ಎಲ್ಲರಿಗೂ ಶಿಕ್ಷಣ, ಗುಣಾತ್ಮಕ ಶಿಕ್ಷಣ ಇತ್ಯಾದಿಗಳ ಕುರಿತು ತಲೆಕೆಡಿಸಿಕೊಂಡ ಸಂಧರ್ಭದಲ್ಲಿಯೇ ವಿದ್ಯಾರ್ಥಿ ಮತ್ತು ಶಿಕ್ಷಕರ ಸಂಬಂಧಗಳ ಕುರಿತು ಗಂಬೀರವಾದ ಚಿಂತನೆಗಳು ಆಗ ಬೇಕಿದೆ. ಸೈದ್ದಾಂತಿಕ ಹಿನ್ನೆಲೆಯಿಲ್ಲದೇ ಪರಿಸ್ಥಿತಿಯ ಕೂಸುಗಳಾಗಿ ನೈತಿಕತೆಯ ಅರಿವಿಲ್ಲದೇ ಶಿಕ್ಷಕ ವೃತ್ತಿಯನ್ನು ಪ್ರವೇಶಿಸುತ್ತಿರುವ ಅನೇಕರು ಆತ್ಮ ವಂಚನೆ ಮಾಡಿಕೊಂಡು ಭವಿಷ್ಯದ ಯುವಶಕ್ತಿಗೆ ದ್ರೋಹ ಎಸಗುವ ಪರಿಯನ್ನು ಸಹಿಸಲು ಸಾಧ್ಯವಿಲ್ಲ. ಇತ್ತೀಚೆಗೆ ನಡೆದ ಬೆಂಗಳೂರು ವಿಬ್ ಗಯಾರ್ ಶಾಲೆಯ ಘಟನೆ ಇಡೀ ಶಿಕ್ಷಕ ಸಮುದಾಯವನ್ನು ಅನುಮಾನದಿಂದ ನೋಡುವ ಪರಿಸ್ಥಿತಿಯನ್ನು ತಂದೊಡ್ಡಿದೆ. ಶಿಕ್ಷಕ ವೃತ್ತಿ ಯಾಂತ್ರಿಕ ಕ್ರಿಯೆಯಲ್ಲ ಅದು ಅರಿವಿನ ಒಳಗಣ್ಣನ್ನಿಟ್ಟುಕೊಂಡು ಭವಿಷ್ಯದ ಸಮಾಜ ರೂಪಿಸುವ, ಸಮಾಜಕ್ಕೆ ಮಾದರಿಯಾಗುವ, ಕಾಲ ಕಾಲಕ್ಕೆ ಅಪ್ ಡೇಟ್ ಆಗುವ ವ್ಯಕ್ತಿತ್ವ ಬೆಳೆಸಿಕೊಂಡವನು ಮಾತ್ರ ಸಮಾಜದ ವಿಶ್ವಾಸದ ಶಿಕ್ಷಕನಾಗಲು ಸಾಧ್ಯ. ಗುರುವನ್ನೇ ದೈವದಂತೆ ಕಾಣುವ, ಎಲ್ಲ ರೀತಿಯಲ್ಲೂ ಆದರ್ಶವೆಂದು ವಿದ್ಯಾರ್ಥಿ ತನ್ನ ಶಿಕ್ಷಕನನ್ನು ಭಾವಿಸುವ ಭೂತಕಾಲದ ದಿನಗಳೇ ವರ್ತಮಾನದಲ್ಲೂ ನೆಲೆಯೂರ ಬೇಕಿದೆ. ಅದಕ್ಕೆ ಶಿಕ್ಷಕ ಎನಿಸಿಕೊಂಡವನು ಶ್ರದ್ದೆಯಿಂದ, ಪ್ರಾಮಾಣಿಕತೆಯಿಂದ, ಸ್ಥಿತ ಪ್ರಜ್ಞ ಮನಸ್ಸಿನಿಂದ ವ್ಯಕ್ತಿತ್ವನ್ನು ರೂಪಿಸಿಕೊಳ್ಳಬೇಕಾಗುತ್ತದೆ ಮತ್ತು ಕರ್ತವ್ಯವನ್ನು ನಿಬಾಯಿಸ ಬೇಕಾಗುತ್ತದೆ. ಗಂಟೆ ಹೊಡೆದಾಗ ಶಾಲೆಗೆ ಬಾ, ಗಂಟೆ ಹೊಡೆದಾಗ ಮನೆಗೆ ಹೋಗು, ತಿಂಗಳಾಗುತ್ತಲೇ ಕೈ ತುಂಬಾ ಸಂಬಳ ಎಣಿಸಿಕೋ, ಆಗಾಗ ಸಿಗುವ ರಜಾ ಮಜೆಯನ್ನು ಅನುಭವಿಸು ಎಂಬ ಸಾರ್ವತ್ರಿಕ ಭಾವನೆಗೆ ಅನ್ವರ್ಥವಾಗುವಂತೆ ಶಿಕ್ಷಕರು ನಡೆದುಕೊಳ್ಳದೇ, ಆತ್ಮ ವಂಚನೆಯನ್ನು ಮಾಡಿಕೊಳ್ಳದೇ ಭವಿಷ್ಯದ ಸತ್ಪ್ರಜೆಗಳನ್ನು ರೂಪಿಸಲಿ, ಭವ್ಯ ಭಾರತದ ಆಶಾ ಸೌಧವನ್ನು ಭದ್ರ ಪಡಿಸಲಿ, ಶಿಕ್ಷಕ ಸಮುದಾಯ ಆತ್ಮ ವಿಮರ್ಶೆ ಮಾಡಿಕೊಳ್ಳಿ ಎಂಬ ಆಶಯದೊಂದಿಗೆ ಸಮಸ್ತ ಶಿಕ್ಷಕರಿಗೂ ಶಿಕ್ಷಕ ದಿನಾಚರಣೆಯ ಶುಬಾಶಯಗಳು!
1 comment:
http://www.prajavani.net/article/ಶಿಕ್ಷಕರ-ದಿನಕ್ಕೆ-ಅರ್ಥ-ಇದೆಯೇನಾವು-ಕಾಣದ-ರಾಧಾಕೃಷ್ಣನ್-ಮುಖ
Post a Comment