ನವೆಂಬರ್ 29, 2014 ಲವ್ ಆಫ್ ಕಿಸ್ ಡೇ @ ಬೆಂಗಳೂರು! ಹೈದ್ರಾಬಾದ್ ನಿಂದ ಶುರುವಾದ ಈ ಅಭಿಯಾನ ನವ ದೆಹಲಿ, ಕೋಲ್ಕತ್ತಾ, ಮದರಾಸು, ಬಾಂಬೆ, ಪಾಂಡಿಚೆರಿ, ಕೇರಳದಲ್ಲಿ ನಡೆದು ಈಗಷ್ಟೇ ರಾಜ್ಯದ ರಾಜಧಾನಿಗೆ ಕಾಲಿರಿಸಿದೆ. ಮುಖ್ಯವಾಗಿ ಹದಿ ಹರೆಯದ ಯುವ ಜನರು ಅದರಲ್ಲು ವಿಶ್ವ ವಿದ್ಯಾಲಯಗಳ ವಿದ್ಯಾರ್ಥಿಗಳು ಈ ಅಭಿಯಾನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಉದ್ದೇಶ ನೈತಿಕ ಪೋಲೀಸ್ ಗಿರಿಯನ್ನು ವಿರೋಧಿಸುವುದಷ್ಟೇ! ಭಾರತೀಯ ಸಂಸ್ಕೃತಿಯ ಅನಧಿಕೃತ ಗುತ್ತಿಗೆದಾರರಾಗಿರುವ ಬಿಜೆಪಿ-ಸಂಘ ಪರಿವಾರದ ಇತರೆ ಸಂಘಟನೆಗಳು ಈ ಅಭಿಯಾನವನ್ನು ವಿರೋಧಿಸುತ್ತಿವೆ. ಏನಿದು ಲವ್ ಆಫ್ ಕಿಸ್ ಡೇ? ಈ ಅಭಿಯಾನ ಬೇಕಾ? ಇದನ್ನ ವಿರೋಧಿಸುವ ಸಂಘ ಪರಿವಾರಿಗಳ ಹಕೀಕತ್ತೇನು? ನೈತಿಕ ಪೋಲೀಸ್ ಗಿರಿ ಎಂದರೇನು? ಎಂಬುದನ್ನು ಅರಿಯೋಣ.
ಬಹುಶ ಕೆಲ ವರ್ಷಗಳ ಹಿಂದೆ ರಾಜ್ಯದಲ್ಲಿ ನಡೆದ ಮಂಗಳೂರು ಪಬ್ ಅಟ್ಯಾಕ್ ನಿಮಗೆ ತಿಳಿದಿರಬೇಕು, ಆ ನಂತರ ಮಾರ್ನಿಂಗ್ ಮಿಸ್ಟ್ ಹೋಂ ಸ್ಟೇ ಮೇಲಿನ ದಾಳಿ ಆಮೇಲೆ ರಾಜ್ಯದ ವಿವಿದೆಡೆ ಸಂಘ ಪರಿವಾರಿಗಳಿಂದ ನಡೆದ ಕೃತ್ಯಗಳು ನೈತಿಕ ಪೋಲೀಸ್ ಗಿರಿ ಎಂದು ಹೆಸರು ಪಡೆದವು. ಕೋಮು ಭಾವನೆ ಇಟ್ಟುಕೊಂಡು ನಡೆಸಿದ ಕೃತ್ಯಗಳು ಸಹ ಈ ಪಟ್ಟಿಯಲ್ಲಿ ಸೇರಿದವು. ಪರಿಣಾಮ ಶ್ರೀ ರಾಮಸೇನೆಯ ಪ್ರಮೋದ್ ಮುತಾಲಿಕ್ ಗೆ ಪಿಂಕ್ ಚಡ್ಡಿಗಳ ಮಹಾಪೂರವೇ ಹರಿದು ಬಂತು, ಮರ್ಯಾದ ಹತ್ಯೆ ಮತ್ತಿತರ ಮಹಿಳೆಯರ ಮೇಲಿನ ದೌರ್ಜನ್ಯವನ್ನ ಖಂಡಿಸಿ ಅರೆ ಬೆತ್ತಲೆ ಮೆರವಣಿಗೆಯ ಸ್ಲಟ್ ವಾಕ್ ಮೊದಲ ಬಾರಿಗೆ 2011ರ ಜುಲೈ 16ರಂದು ಮದ್ಯ ಪ್ರದೇಶದ ಭೂಪಾಲ್ ನಲ್ಲಿ ನಡೆಯಿತು. ಸ್ತ್ರೀಯರ ಮೇಲಿನ ಅತ್ಯಾಚಾರ ಖಂಡಿಸಿ ಅದೇ ಜುಲೈ 31 ರಂದು ದೆಹಲಿಯಲ್ಲಿ ಸ್ಲಟ್ ವಾಕ್ ಪ್ರದರ್ಶನ ನಡೆಯಿತು. ಅಸ್ಸಾಂ ನಲ್ಲಿ ಮಹಿಳೆಯರ ಮೇಲೆ ಸಾಮೂಹಿಕ ಬಲಾತ್ಕಾರ ಮಾಡಿ ಕೆಡಿಸಿದ ಸೈನಿಕರ ವಿರುದ್ದ ಮಹಿಳೆಯೋರ್ವಳು ಕಣ್ಣೀರು ಸುರಿಸುತ್ತಾ ಸಂಪೂರ್ಣ ನಗ್ನಳಾಗಿ ಅತ್ಯಾಚಾರ ನಡೆಸಿದ ಸೈನಿಕರ ವಿರುದ್ದ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದು ಇನ್ನು ಕಣ್ಣಿಗೆ ಕಟ್ಟಿದಂತಿದೆ. ಈಗ ಕಿಸ್ ಆಫ್ ಲವ್ ಡೇ ಅಭಿಯಾನ ನೈತಿಕ ಪೋಲೀಸ್ ಗಿರಿಯ ವಿರುದ್ದ ಆಯೋಜನೆಗೊಂಡಿದೆ. ಸಮಾಜದ ಕ್ರೌರ್ಯವನ್ನು ದಿಕ್ಕರಿಸುವ ನಿಟ್ಟಿನಲ್ಲಿ ಇಂತಹ ಅಭಿಯಾನವನ್ನ ನಡೆಸುತ್ತಿದ್ದೇವೆಂದು ಅಭಿಯಾನಗಳ ಸಂಘಟಕರು ಹೇಳುತ್ತಿದ್ದಾರೆ. ಆದರೆ ಇವೆಲ್ಲ ನಮ್ಮ ಸಂಸ್ಕೃತಿಯಲ್ಲ ಎಂದು ಸಂಘ ಪರಿವಾರಿಗಳು ಹೇಳುತ್ತಾರೆ.
ಇಷ್ಟಕ್ಕೂ ಈ ಲವ್ ಆಫ್ ಕಿಸ್ ಡೇ ಅಂದ್ರೆ ಏನು? ಇದು ಹುಟ್ಟಿಕೊಂಡಿದ್ದು ಹೇಗೆ? ಎಂಬ ಸಂಗತಿಗಳನ್ನ ತಿಳಿಯುವುದಾದರೆ ಅಂತರ್ಜಾಲದ ಫೇಸ್ ಬುಕ್ ನಿಂದ ಆರಂಭ ಗೊಂಡ ಈ ಅಭಿಯಾನ ಇವತ್ತು ದೇಶದಾಧ್ಯಂತ ಹರಡಲು ಕಾರಣವಾಗಿದೆ. ಕೇರಳದಲ್ಲಿ 2000ನೇ ಇಸ್ವಿಯಿಂದ ನಡೆದ ಬಹಳಷ್ಟು ನೈತಿಕ ಪೋಲೀಸ್ ಗಿರಿ ಪ್ರಕರಣಗಳಲ್ಲಿ ಸಾವು ನೋವನ್ನು ಅನುಭವಿಸಿದವರೇ ಹೆಚ್ಚು. 26ರ ವಯೋಮಾನದ ಯುವಕನೋರ್ವ ಗೃಹಿಣಿ ಯೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾನೆ ಎಂಬ ಅನುಮಾನದ ಮೇಲೆ ಅವನನ್ನು ಬಡಿದು ಕೊಲೆ ಮಾಡಿದ್ದು, ರಂಗ ಕಲಾವಿದೆಯೊಬ್ಬರು ಸಹ ನಟನೊಂದಿಗೆ ರಾತ್ರಿ ವೇಳೆ ಪ್ರಯಾಣಿಸುತ್ತಿದ್ದಳು ಎಂಬ ಕಾರಣಕ್ಕೆ ಅವರನ್ನು ಹಿಡಿದು ಬಡಿದದ್ದು, ಅಲ್ಹಪ್ಹ್ಪುಜ ಬೀಚ್ ನಲ್ಲಿ ದಂಪತಿ ಜೋಡಿಯೊಂದು ವಿಹರಿಸುತ್ತಿದ್ದ ವೇಳೆ ಮಹಿಳೆ ತಾಳಿಯನ್ನು ಧರಿಸಿರಲಿಲ್ಲ ಎಂಬ ಕಾರಣಕ್ಕೆ ಹಲ್ಲೆ ನಡೆಸಿದ್ದು, ತುಂಬು ಗರ್ಭಿಣಿಯನ್ನು ಬಸ್ ನಿಲ್ದಾಣದಲ್ಲಿ ಕುಳ್ಳಿರಿಸಿ ಎಟಿಎಂ ನಲ್ಲಿ ಹಣ ತರಲು ಗಂಡ ತೆರಳಿದ್ದ ವೇಳೆ ಸ್ಥಳಕ್ಕೆ ಬಂದ ಸಂಘ ಪರಿವಾರಿಗಳ ಗ್ಯಾಂಗ್ ಮಹಿಳೆ ಅನೈತಿಕ ವ್ಯವಹಾರದಲ್ಲಿ ತೊಡಗಿದ್ದಾಳೆ ಎಂದು ಅನುಮಾನಿಸಿ ಉತ್ತರಿಸಲು ಬಿಡದಂತೆ ಬಡಿದು ಕೊಂದು ಬಿಟ್ಟರು. ಹೀಗೆ ಕೇರಳ ರಾಜ್ಯದಲ್ಲಿ ನಿರಂತರವಾಗಿ ನಡೆದ ಹಲ್ಲೆಗಳನ್ನು ಖಂಡಿಸಿ ಕೇರಳ ರಾಜ್ಯದ ಮಹತ್ವಕಾಂಕ್ಷಿ ಯುವ ಸಿನಿಮಾ ನಿರ್ದೇಶಕ ಪಶುಪಾಲನ್ ಮೊದಲ ಬಾರಿಗೆ ಫೇಸ್ ಬುಕ್ ನಲ್ಲಿ "ಕಿಸ್ ಆಫ್ ಲವ್" ಎಂಬ ಪುಟವನ್ನು ತೆರೆದ, ನೈತಿಕ ಪೋಲಿಸ್ ಗಿರಿಯನ್ನು ಖಂಡಿಸುವ ಸಲುವಾಗಿ ಕಿಸ್ ಆಫ್ ಲವ್ ಅಭಿಯಾನವನ್ನು ಆಚರಿಸುವಂತೆ ಕರೆ ನೀಡಿದ. ಇದು ದೇಶದಾಧ್ಯಂತ ಜನರ ಗಮನ ಸೆಳೆಯಿತು.
ಇದರ ಪರಿಣಾಮ ನವೆಂಬರ್ 2, 2014 ರಂದು ಕೇರಳದ ಮೆರೀನ್ ಡ್ರೈವ್ ನಲ್ಲಿ ಸೇರಿದ ಬಹಳಷ್ಟು ಮಂದಿ ಯುವ ಜನರು ಎರ್ನಾಕುಲಂ ಲಾ ಕಾಲೇಜು ಕ್ಯಾಂಪಸ್ ನಲ್ಲಿ ಶಾಂತಿಯುತವಾಗಿ ನೈತಿಕ ಪೋಲೀಸ್ ಗಿರಿಯನ್ನು ಖಂಡಿಸಲು "ಕಿಸ್ ಆಫ್ ಲವ್ " ಆಚರಣೆಗೆ ಮುಂದಾದರು. ಇದನ್ನು ಅನೇಕ ಸಾರ್ವಜನಿಕ ಸಂಘ ಸಂಸ್ಥೆಗಳು ಬೆಂಬಲಿಸಿದವು, ರಾಜಕೀಯ ಪಕ್ಷಗಳು ಸಹಾ ಬೆಂಬಲಕ್ಕೆ ನಿಂತವು. ಆದರೆ ಈ ಅಭಿಯಾನವನ್ನು ವಿರೋಧಿಸುವ ಕ್ರಿಯೆಗಳನ್ನು ತಡೆಯುವಲ್ಲಿ ಕೇರಳ ಪೋಲೀಸರು ವಿಫಲರಾದರು. ಶಿವಸೇನ ಮತ್ತಿತರ ಸಂಘ ಪರಿವಾರಿಗಳು ಲಾಠಿಗಳು ಮತ್ತಿತರ ಮಾರಕಾಸ್ತ್ರಗಳನ್ನು ಹಿಡಿದು ಸ್ಥಳಕ್ಕೆ ಧಾವಿಸಿದಾಗ ಕಿಸ್ ಆಫ್ ಲವ್ ಡೇ ಅಭಿಯಾನದಲ್ಲಿ ಪಾಲ್ಗೊಂಡಿದ್ದ 50ಮಂದಿಯನ್ನೆ ಕೇರಳ ಪೋಲೀಸರು ಬಂದಿಸಿ ಬಿಟ್ಟರು. ಇದು ಸಾಕಷ್ಟು ಟೀಕೆಗೆ ಒಳಗಾಯಿತು. ದೇಶದ ವಿವಿದೆಡೆಯಲ್ಲೂ ಕಾನೂನು ಚೌಕಟ್ಟಿನಲ್ಲಿ ಅನೈತಿಕತೆಗೆ ಶಿಕ್ಷೆ ಕೊಡುವ ಅವಕಾಶಗಳಿದ್ದರೂ ಪ್ರಕರಣಗಳನ್ನು ವಿವೇಚಿಸದೆ ಸಾರ್ವತ್ರಿಕವಾಗಿ ಶಾಂತಿ ಕದಡುವ ಕೆಲಸ ಮಾಡುತ್ತಿದ್ದ ಸಂಘ ಪರಿವಾರಿಗಳ ವಿರುದ್ದ ಕರೆ ನೀಡಿದ ಈ ಅಭಿಯಾನ ಬೇರೆ ಬೇರೆ ರಾಜ್ಯಗಳಿಗೂ ಹರಡಿತು. ಈಗ ರಾಜಧಾನಿ ಬೆಂಗಳೂರಿಗೆ ಕಾಲಿಟ್ಟಿದೆ.
ಬೆಂಗಳೂರಿನಲ್ಲಿ ನವೆಂಬರ್ 29 ರಂದು ಆಯೋಜನೆಗೊಂಡಿರುವ "ಲವ್ ಆಫ್ ಕಿಸ್ ಡೇ" ಕುರಿತು ಸಂಘಟಕರು ಒಂದು ಪತ್ರಿಕಾ ಹೇಳಿಕೆಯನ್ನೇ ಬಿಡುಗಡೆ ಮಾಡಿದ್ದಾರೆ. ಆ ಪ್ರಕಾರ ಯಾರು ಪರಸ್ಪರರನ್ನು ಪ್ರೀತಿಸುತ್ತಾರೋ ಅವರು ಈ ಅಭಿಯಾನದಲ್ಲಿ ಪಾಲ್ಗೊಳ್ಳ ಬಹುದು, ದಂಪತಿಗಳು ಮತ್ತು ಪ್ರೇಮಿಗಳು ಈ ಅಭಿಯಾನದಲ್ಲಿ ಭಾಗವಹಿಸಲು ಅಡ್ಡಿ ಇಲ್ಲವಂತೆ, ಮಾನವೀಯತೆಯ ಮುಖವುಳ್ಳ ಸ್ಚಚ್ಚ ಪ್ರೀತಿಯ ಮೂಲಕ ಸಮಾಜ ಘಾತುಕ ಶಕ್ತಿಗಳಿಗೆ ಎಚ್ಚರಿಕೆಯ ಸಂದೇಶ ನೀಡುವುದು ಅಬಿಯಾನದ ಉದ್ದೇಶವಂತೆ, ಸಾಮಾಜಿಕ ವ್ಯವಸ್ಥೆಯಲ್ಲಿ ಮನುಷ್ಯರನ್ನು ಸಹಜವಾಗಿ ಪ್ರೀತಿಸುವ ಯಾವುದೇ ವಯೋಮಾನದ ಜನ ಇದರಲ್ಲಿ ಪಾಲ್ಗೊಳ್ಳ ಬಹುದು, ಸಹಜ ಪ್ರೀತಿಯನ್ನು ಸಾರ್ವತ್ರಿಕವಾಗಿ ಇಷ್ಟ ಬಂಧುಗಳೊಂದಿಗೆ ಹಂಚಿಕೊಳ್ಳುವ ಮೂಲಕ ಮಾನವ ಪ್ರೀತಿಯ ಸೆಲೆ ಬತ್ತಿಲ್ಲವೆಂಬುದನ್ನು ಸಾರೋಣ ಎಂಬುದು ಸಂಘಟಕರ ಆಶಯ. ಇಂಡಿಯನ್ ಪೀನಲ್ ಕೋಡ್ ಸೆಕ್ಷನ್ 294(ಎ) ಸೆಕ್ಷನ್ ಅನ್ವಯ ನ್ಯಾಯಲಯಗಳು ಸಹಾ ಸಾರ್ವತ್ರಿಕ ಚುಂಬನ ಶಿಕ್ಷಾರ್ಹ ಅಪರಾಧ ಅಲ್ಲ ಎಂದು ಹೇಳಿದೆ. ಏಡ್ಸ್ ಜಾಗೃತಿ ಅಭಿಯಾನದ ಸಲುವಾಗಿ ಭಾರತಕ್ಕೆ ಬಂದಿದ್ದ ಹಾಲಿವುಡ್ ನಟ ರಿಚರ್ಡ್ ಗೇರ್ ಸಾರ್ವತ್ರಿಕ ವೇದಿಕೆಯಲ್ಲಿ ಬಾಲಿವುಡ್ ಹಿರೋಯಿನ್ ಶಿಲ್ಪಾಶೆಟ್ಟಿಯನ್ನು ಬಿಗಿದಪ್ಪಿ ಚುಂಬಿಸಿದ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು. ಆ ಸಂಧರ್ಭದಲ್ಲಿ ಪ್ರಕರಣವನ್ನು ಪರಿಶೀಲಿಸಿದ ಜೈಪುರ ಹೈಕೋರ್ಟು ಸಾರ್ವತ್ರಿಕ ಚುಂಬನ ಶಿಕ್ಷಾರ್ಹ ಅಪರಾಧ ಎಂದು ಕೇಸನ್ನು ಖುಲಾಸೆ ಗೊಳಿಸಿತ್ತು. ಒಂದು ವೇಳೆ ಬಲವಂತದ ಚುಂಬನಗಳು, ಮಾನ ಹಾನಿಕಾರಕ ಚುಂಬನಗಳು ಆಕ್ಷೇಪಾರ್ಹವಾಗಿ ಚುಂಬನಕ್ಕೊಳಗಾದ ವ್ಯಕ್ತಿಗಳಿಂದಲೇ ಪ್ರತಿರೋಧ ವ್ಯಕ್ತವಾದಾಗ ಅದು ಅಪರಾಧವಾಗುವ ಸಾಧ್ಯತೆಯಿದೆ.
ಕಿಸ್ ಆಪ್ ಲವ್ ಡೇ ಕುರಿತು ಸಾರ್ವತ್ರಿಕ ಗೋಂದಲಗಳು ಇವೆ. ಇದು ನಮ್ಮ ಸಂಸ್ಕೃತಿಯ ಸರಕು ಅಲ್ಲ ಪ್ರತಿಭಟನಾ ವಿಧಾನವೂ ಅಲ್ಲ. ಭಾರತೀಯ ಸಂಸ್ಕೃತಿಗೆ ಮಹತ್ವದ ರೀತಿ ನೀತಿಗಳಿವೆ ಹೀಗಿರುವಾಗ ಸಾರ್ವತ್ರಿಕ ಅಸಹ್ಯ ಎನಿಸುವಂತಹ ಕ್ರಿಯೆಗಳನ್ನು ಬೆಂಬಲಿಸುವುದು ಸರಿಯಲ್ಲ, ದೇಶದಲ್ಲಿ ಈಗಾಗಲೇ ಅತ್ಯಾಚಾರ ಪ್ರಕರಣಗಳು ಮೇರೆ ಮೀರಿವೆ ಇಂತಹ ಸಂದಿಗ್ಧ ಸನ್ನಿವೇಶದಲ್ಲಿ ಲವ್ ಕಿಸ್ ಡೇ ಬೇಕಾ? ಎನ್ನುವುದು ಸಾರ್ವತ್ರಿಕವಾಗಿ ಕೆಲವರು ವ್ಯಕ್ತ ಪಡಿಸುತ್ತಿರುವ ಅಭಿಪ್ರಾಯ. ಹಾಗೆಯೇ ವಿಭಿನ್ನ ಪ್ರತಿಕ್ರಿಯೆಗಳು ಇವೆ. ಸಾರ್ವತ್ರಿಕ ಚುಂಬನ ದಲ್ಲಿ ತಪ್ಪೇನಿದೆ. ಪರಸ್ಪರರನ್ನು ಪ್ರೀತಿಸುವ ಮಂದಿ ಅಪ್ಪಿಕೊಂಡು ಮುತ್ತಿಕ್ಕುವುದು ಭಾವನಾತ್ಮಕ ಸಂಬಂಧಗಳನ್ನು ವೃದ್ದಿಸುವ ಕ್ರಿಯೆ, ಮಾನವೀಯ ಸಂಬಂಧಗಳನ್ನು ಅರಿಯದೇ ನೈತಿಕ ಪೋಲೀಸ್ ಗಿರಿಯ ನೆಪದಲ್ಲಿ ದೌರ್ಜನ್ಯ ನಡೆಸುವವರಿಗೆ ಮನುಷ್ಯತ್ವದ ಅರಿವನ್ನು ಮೂಡಿಸಲು ಸಾರ್ವತ್ರಿಕ ಅಪ್ಪುಗೆಯೇ ಬೆಸ್ಟು, ಅಷ್ಟಕ್ಕು ಚುಂಬನ ಕ್ರಿಯೆ ವಿದೇಶದ್ದಲ್ಲ, ಭಾರತ ದೇಶದಲ್ಲೇ ಮೊದಲಿಗೆ ಪ್ರೀತಿಯ ಚುಂಬನವಾಗಿದೆ ನಂತರ ಅದು ದೇಶ ಕೋಶಗಳನ್ನು ದಾಟಿಕೊಂಡು ವಿಸ್ತರಿಸಿದೆ,Love Of Kiss Day ಸಂಘಟಿಸಿರುವ ಫ್ರೀ ಥಿಂಕರ್ಸ್ ಹೀಗೆ ಹೇಳುತ್ತಾರೆ, ಮಹಾಭಾರತದಲ್ಲಿ ಋಷ್ಯಶೃಂಗ ಮನಿ ವೈಶಾಲಿಯನ್ನು ಸಾರ್ವತ್ರಿಕವಾಗಿ ಚುಂಬಿಸಲಿಲ್ಲವೇ ಅಲ್ಲಿ ಮುಜುಗರ ಪಡುವಂತಹದ್ದೇನಿತ್ತು ಹಾಗೆಯೇ ಇದು ವಿನೂತನ ಪ್ರತಿಭಟನೆ ಎನ್ನುತ್ತಾರೆ. ಮುಂದುವರೆದು ಭಾರತೀಯ ದೇಗುಲಗಳಲ್ಲಿ ಅತ್ಯಂತ ಮುಜುಗರ ಪಡುವ ಮಿಥುನ ಶಿಲ್ಪಗಳಿವೆ,ಕುಂಭ ಮೇಳದಲ್ಲಿ ಅರೆಬೆತ್ತಲೆ ಓಡಾಡುವ ನಾಗಾ ಸಾಧುಗಳಿದ್ದಾರೆ, ಮೈಮೇಲೆ ಒಂದೆಳೆ ನೂಲು ಇಲ್ಲದೇ ಧರ್ಮೋಪದೇಶ ಮಾಡುವ ಜೈನ ಮುನಿಗಳಿದ್ದಾರೆ ಅಲ್ಲೆಲ್ಲೂ ಮುಜುಗರದ ಸೋಂಕಿಲ್ಲ ಆದರೆ ಪ್ರೀತಿ ಪಾತ್ರರನ್ನ ಸಾರ್ವತ್ರಿಕವಾಗಿ ಚುಂಬಿಸಿದರೆ ಅದು ತಪ್ಪೇ ಎಂಬುದು ಪ್ರತಿಭಟನೆಯ ಪರವಾಗಿ ವಾದ ಮಂಡಿಸುವವರ ಪ್ರಶ್ನೆ. ಈಗ ಹೇಳಿ ಲವ್ ಕಿಸ್ ಡೇ ಸರಿಯಾ? ಇಲ್ಲಾ ತಪ್ಪಾ? ನಿರ್ದಾರ ನಿಮ್ಮದು.
No comments:
Post a Comment