Tuesday, June 5, 2012

ಆಚಾರವಿಲ್ಲದ ನಾಲಿಗೆ ನಿನ್ನ ನೀಚಬುದ್ದಿಯ.....!

ಳೆದ ಕೆಲವು ತಿಂಗಳುಗಳಿಂದ ಸಮಾಜದಲ್ಲಿ ಉನ್ನತ ಸ್ಥಾನದಲ್ಲಿರುವ ಕೆಲವು ಮಂದಿ ಮನಬಂದಂತೆ ಸಾರ್ವತ್ರಿಕವಾಗಿ ಒಪ್ಪಿಕೊಳ್ಳಲಾಗದ ಮಾತುಗಳನ್ನು ಸ್ಥಾನದ ಘನತೆಯನ್ನು ಮೀರಿ ಆಡುತ್ತಿದ್ದಾರೆ. ಸಮಾಜದ ವಿವಿಧ ಸ್ಥರಗಳಲ್ಲಿರುವ ಜನರ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನು ಮತ್ತು ಸಂಘರ್ಷಮಯ ವಾತಾವರಣವನ್ನು ಸೃಷ್ಟಿಸುತ್ತಿದೆ. ಸೈದ್ಧಾಂತಿಕ ತಳಹದಿಯ ಮೇಲೆ ಆಚಾರ-ವಿಚಾರಗಳು ಸಮಾನಂತರದಲ್ಲಿದ್ದರೆ ಮಾತ್ರ ಅದಕ್ಕೆ ಮನ್ನಣೆ ಇಲ್ಲದಿದ್ದರೆ ಸಾಮಾಜಿಕ ವ್ಯವಸ್ಥೆಯಲ್ಲಿ ಅಲ್ಲೋಲ ಕಲ್ಲೋಲವಾಗುವುದು ಖಚಿತ. ಅಂತಹ ಪ್ರಮುಖ ವಿದ್ಯಮಾನಗಳತ್ತ ಒಂದು ಮೆಲುಕು ನೋಟ ಇಲ್ಲಿದೆ.
ಸರ್ಕಾರಿ ಶಾಲೆಗಳಲ್ಲಿ ಕಲಿಯುವ ಮಕ್ಕಳು ನಕ್ಸಲೈಟರಾಗುತ್ತಾರೆ ಎಂದು ಈಗ್ಯೆ ಕೆಲ ತಿಂಗಳ ಹಿಂದೆ ಅಪ್ಪಣೆ ಕೊಡಿಸಿದ್ದು ರವಿಶಂಕರ್ ಗುರೂಜಿ ಎಂಬ ಹೆಣ್ಣು ಕಂಠದ ಸ್ವಾಮೀಜಿ. ಧಾರ್ಮಿಕ ಪ್ರವಚನಗಳ ಮೂಲಕ ಹೆಸರು ಮಾಡಿರುವ ಈತ ಆಧ್ಯಾತ್ಮಿಕ ವಿಚಾರಗಳ ಜೊತೆಗೆ ವ್ಯಾಯಾಮವನ್ನು ಮಾಡಿಸುವುದುಂಟು. ಕಾರ್ಪೋರೇಟ್ ಶಕ್ತಿಗಳ ಮೂಲಕ ಆಧ್ಯಾತ್ಮಿಕ ಶಿಬಿರಗಳನ್ನು ನಡೆಸುವ ರವಿಶಂಕರ್ ಗುರೂಜಿ ತನ್ನದೇ ಆದ ಶಕ್ತಿ ವಲಯವನ್ನು ಪ್ರತಿಷ್ಠಾಪಿಸಿಕೊಂಡಿರುವಾತ. ಅನೇಕ ಗಣ್ಯರ ನಡುವೆ ಇವರಿಗೂ ಆಧ್ಯತೆ ಉಂಟು. ನಮ್ಮಲ್ಲಿ 'ಮಠಾಧೀಶರು' ಗಳನ್ನು ಬಾಬಾ ಗಳನ್ನು ನಂಬುವ ಮತ್ತು ಆರಾಧಿಸುವ ಮೂಡಸಂಸ್ಕೃತಿ ಇನ್ನೂ ಜಾರಿಯಲ್ಲಿರುವುದರಿಂದ (ಈ ಪೈಕಿ ಸುಶಿಕ್ಷಿತರೆನಿಸಿಕೊಂಡ ಪ್ರಜ್ಞಾವಂತರೇ ಹೆಚ್ಚು ಎನ್ನುವುದು ಇನ್ನೂ ದುರಂತದ ಸಂಗತಿಯೇ ಹೌದು!) ಇವರು ಹೇಳಿದ್ದನ್ನೆ ಸತ್ಯವೆಂದು ನಂಬುವ ಸಮೂಹವೇ ಇದೆ. ಹೀಗಿರುವಾಗ ಅದ್ಯಾವ ದೃಷ್ಟಿಕೋನದಲ್ಲಿ ಈ ಸ್ವಾಮೀಜಿ ಸರ್ಕಾರಿ ಶಾಲೆಗಳಲ್ಲಿ ಕಲಿಯುವ ಮಕ್ಕಳು ನಕ್ಸಲೈಟರು ಗಳಾಗುತ್ತಾರೆ ಎಂದರೋ ತಿಳಿಯದು. ಕಾರ್ಪೋರೇಟ್ ಶಕ್ತಿಗಳ ಮುಖವಾಡವಾಗಿರುವ ಈತ ಖಾಸಗಿ ಶಿಕ್ಷಣದ ಅಡ್ಡೆಗಳನ್ನು ಪ್ರೋತ್ಸಾಹಿಸಲು ಈ ಮಾತನ್ನು ಆಡಿದಂತಿದೆಯಲ್ಲವೇ?
            ನಡೆದಾಡುವ ದೇವಮಾನವ ಎಂಬ ಬಿರುದಿಗೆ ಪಾತ್ರರಾಗಿರುವ ತುಮಕೂರು ಸಿದ್ದಗಂಗಾ ಮಠದ ಶಿವಕುಮಾರಸ್ವಾಮಿ ಸಮಾಜೋದ್ದಾರಕ್ಕೆ ತಮ್ಮನ್ನು ತೊಡಗಿಸಿಕೊಂಡಿರುವ ಅರ್ಪಣಾ ಭಾವ, ಸಾಧನೆ ಯಾವತ್ತಿಗೂ ನೆನಪಿನಲ್ಲಿಡುವಂತಹದ್ದು. ಸ್ವಾಮಿಗಳು ಶಿಸ್ತಿನ ಮತ್ತು ನ್ಯಾಯದ ಪ್ರತೀಕ ಹಾಗೆಯೇ ಧಾರ್ಮಿಕ ಕೈಂಕರ್ಯದಲ್ಲೂ ಆರಾಧಿಸ ಬಹುದಾದ ವ್ಯಕ್ತಿತ್ವ ಹೊಂದಿದವರು. ಇಂತಹ ಸ್ವಾಮೀಜಿ, ಮುಖ್ಯ ಮಂತ್ರಿ ಸದಾನಂದ ಗೌಡ ತುಮಕೂರಿಗೆ ತೆರಳಿ ಮಠದ ಆವರಣದಲ್ಲಿ ಕೋಟಿ ಲಿಂಗ ಸ್ಥಾಪನೆಗೆ ಕಾರ್ಯಕ್ರಮ ನೆರವೇರಿಸಿ ಹೋದ ಮರುದಿನಕ್ಕೆ ಅದನ್ನು ನಿರಾಕರಿಸಿದ್ದು ಅವರ ವ್ಯಕ್ತಿತ್ವಕ್ಕೆ ಘನತೆ ತರುವಂತಹದ್ದೇ? ಆರೋಪಿಯಾಗಿ ಆಸ್ಪತ್ರೆಯ ಜೈಲಿನಲ್ಲಿದ್ದ ಮಾಜಿ ಸಿಎಂ ಬಿಎಸ್ ವೈ ಯನ್ನು ಖುದ್ದಾಗಿ ಹೋಗಿ ಆಶೀರ್ವದಿಸಿ ಬಂದದ್ದು ಶೋಭೆ ತರುವ ವಿಷಯವೇ? ಸಿಎಂ ಸದಾನಂದ ಗೌಡ ತನ್ನ ಹುಟ್ಟುಹಬ್ಬದ ದಿನದಂದು ಮಠಕ್ಕೆ ಹೋಗಿ ಆಶೀರ್ವಾದ ಬೇಡಿದರೆ ಮೌನವಾಗಿ ಕುಳಿತದ್ದು ಸಾರ್ವತ್ರಿಕ ವಲಯದಲ್ಲಿ ಸ್ವಾಮೀಜಿಯವರ ಬಗೆಗೆ ಎಂತಹ ಭಾವನೆಯನ್ನು ಮೂಡಿಸುತ್ತದೆ ಅಲ್ಲವೇ?
ಮೊನ್ನೆ ಮೊನ್ನೆ ಹಾಸನದಲ್ಲಿ ನಡೆದ ಜಾತಿ ಸಮಾರಂಭವೊಂದಕ್ಕೆ ಆಗಮಿಸಿದ್ದ ಊರಗುಂಡ ಪೆದ್ದಲಿಂಗನೆಂಬ ವಿಚಿತ್ರ ಹೆಸರಿನ ಸ್ವಾಮೀಜಿಯೊಬ್ಬ ಸಾರ್ವಜನಿಕ ವೇದಿಕೆಯಲ್ಲಿ ನಿಂತು ದೇಶದಲ್ಲಿರುವ ಜಾತಿ ವ್ಯವಸ್ಥೆಯನ್ನು ಹಳಿಯುವ ಭರದಲ್ಲಿ ಭಾರತ ನೀಚ ದೇಶ ಎಂದು ಜರಿದನಲ್ಲಾ ಆತ ಜನಿಸಿದ್ದು ಮತ್ತು ಸಂಸ್ಕಾರ ಪಡೆದದ್ದು ವಿದೇಶದಲ್ಲಾ? ಇಲ್ಲೇ ಹುಟ್ಟಿ ಇಲ್ಲೇ ಬೆಳೆದು ದೇಶದ ಸಾಂವಿಧಾನಿಕ ವ್ಯವಸ್ಥೆಯನ್ನು ಗೌರವಿಸುವ ಬದಲಿಗೆ ವರ್ಣ ವ್ಯವಸ್ಥೆಯ ಸಲುವಾಗಿ ದೇಶವನ್ನು ಜರಿಯಲು ನಿಂತವನ ವಿರುದ್ದ ಜಿಲ್ಲಾಡಳಿತ ತುಟಿಪಿಟಕ್ಕೆನ್ನದೇ ಹೋದದ್ದು ಮಾತ್ರ ಮತ್ತೂ ದುರಂತ ಅಲ್ಲವೇ? ಯೋಗಾಸನ ಮಾಡಿಸುವ ಬಾಬಾ ರಾಮದೇವ ತನ್ನದೇ ಒಡೆತನದ ಸಂಸ್ಥೆಗಳಲ್ಲಿ ನಡೆಯುವ ವಂಚನೆ ಮತ್ತು ಶೋಷಣೆಗಳನ್ನು ಇಟ್ಟುಕೊಂಡು ಭ್ರಷ್ಟಾಚಾರದ ವಿರುದ್ದ ಸೆಣಸಲು ನಿಂತು ಬಿಡುತ್ತಾರೆ, ಸಮಯಕ್ಕೆ ತಕ್ಕಂತೆ ಮತೀಯ ಶಕ್ತಿಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಬಿಡುತ್ತಾರೆ ಒಂದು ವರ್ಗದ ಜನ ಅವರ ಬೆಂಬಲಕ್ಕೆ ನಿಂತು ಬಿಡುತ್ತಾರೆ. ಇಂತಹ ಬಾಬಾಗಳಿಂದ ಅದೆಂತಹ ನಾಯಕತ್ವ ಸಿಕ್ಕೀತು ಈ ದೇಶದ ಪ್ರಮುಖ ಹೋರಾಟಕ್ಕೆ ? ದೇಶದ ಸಮುಷ್ಠಿಯೇ ಬೆನ್ನಿಗೆ ನಿಂತು ಬೆಂಬಲಿಸಿದರೆ ಅಣ್ಣಾ ಹಜಾರೆಯಂತಹ ಗಾಂಧೀವಾದಿ ಹೋರಾಟಗಾರ ಸ್ವಾಸ್ಥ್ಯ ಕಳೆದುಕೊಂಡವನಂತೆ ಒಂದು ಹಂತದಲ್ಲಿ ಕಾಂಗ್ರೆಸ್ ಅನ್ನು ತಿರಸ್ಕರಿಸಿ, ಕುಡುಕರಿಗೆ ಹೊಡೆಯಿರಿ ಎಂದು ಬೊಬ್ಬೆ ಇಟ್ಟರೆ ನಂಬಿ ಹಿಂದೆ ಬಂದ ಸಮುದಾಯ ಮತ್ತು ಅವರ ಭಾವನೆಗಳಿಗೆ ಕಿಮ್ಮತ್ತು ಸಿಗೋದಾದರೂ ಹೇಗೆ? ಲೋಕಪಾಲ್ ಬಿಲ್ ಅಣ್ಣಾ ಹಜಾರೆ ಹೇಳಿದಂತೆ ಆಗಬೇಕೆನ್ನುವುದಕ್ಕೆ ಬಿಜೆಪಿ ಪಕ್ಷವೂ ಸಹಾ ಸಂಸತ್ ನಲ್ಲಿ ವ್ಯಾಪಕ ವಿರೋದ ವ್ಯಕ್ತಪಡಿಸಿದೆ ಹೀಗಿರುವಾಗ ಬರಿಯ ಕಾಂಗ್ರೆಸ್ ಏಕೆ ಬಿಜೆಪಿಯನ್ನು ತಿರಸ್ಕರಿಸಲು ಅಣ್ಣಾ ಹಜಾರೆ ಮತ್ತು ತಂಡ ಕರೆ ನೀಡಬೇಕಲ್ಲವೇ? ತನ್ನ ಪ್ರಾಮಾಣಕತೆಗೆ ಮತ್ತು ಸುಧಾರಣೆಗಳಿಗೆ ಹೆಸರು ವಾಸಿಯಾದ ಮಾಜಿ ಪೋಲೀಸ್ ಅಧಿಕಾರಿ ಕಿರಣ್ ಬೇಡಿ ದೇಶದ ಪಾವಿತ್ರ್ಯತೆಯ ಸಂಕೇತವಾಗಿರುವ ಸಂಸತ್ ನ ಸದಸ್ಯರ ಕುರಿತು (ಎಲ್ಲರನ್ನೂ ಸೇರಿಸಿಕೊಂಡು) ಅವಹೇಳನಕಾರಿಯಾದ ಮಾತುಗಳನ್ನಾಡುವುದು ಹೊಣೆಯರಿತವರ ಲಕ್ಷಣವೇ?
           ಇನ್ನು ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ಉಡುಪಿಯ ಪೇಜಾವರ ಶ್ರೀಗಳು, ಮೊನ್ನೆ ವಿಪ್ರ ಸಮಾವೇಶದಲ್ಲಿ ಪಂಕ್ತಿ ಸಹಬೋಜನ ವಿರೋಧಿಸಿ ನೀಡಿದರೆನ್ನಲಾದ ಹೇಳಿಕೆ ಮತ್ತು ಅದರ ಕುರಿತು ನಡೆಯುತ್ತಿರುವ ಪರ-ವಿರೋಧದ ಚರ್ಚೆಗಳು ವ್ಯಕ್ತಿಗತವಾಗಿ ನಡೆಯುತ್ತಿವೆ. ಉಡುಪಿಯ ಪೇಜಾವರರ ಮನಸ್ಥಿತಿ ಯಾರಿಗೂ ತಿಳಿಯದ್ದೇನಲ್ಲ, ಅವರ ಜಾತೀಯ ಮನೋಭಾವಕ್ಕೆ ಶಿವಮೊಗ್ಗದ ಭಾಷಣದ ಆಧಾರವೇ ಬೇಕಿಲ್ಲ, ಇದಕ್ಕೂ ಮುನ್ನ ಶ್ರೀಗಳು ತಮ್ಮ ಶ್ರೇಷ್ಠತೆಗೆ ಕುಂದುಂಟು ಬರುವ ರೀತಿಯಲ್ಲೇ ಹಲವು ಸಂಧರ್ಭಗಳಲ್ಲಿ ನಡೆದುಕೊಂಡಿದ್ದಾರೆ. ದಲಿತ ಕೇರಿಯ ಸಹಭೋಜನಕ್ಕೆ ಕರೆದಾಗ ಕಣ್ಮರೆಯಾಗುತ್ತಾರೆ, ಮಾಂಸ ಹಾರಿಗಳ ಜೊತೆ ಸಹಪಂಕ್ತಿ ಭೋಜನ ಮಾಡಬೇಡಿ ಎನ್ನುತ್ತಾರೆ ಹಾಗಾದರೆ ಹಿಂದೆಲ್ಲಾ ಅದನ್ನು ರೂಡಿಸಿಕೊಂಡಿದ್ದವರು ಯಾರು ಎಂಬ ಪ್ರಶ್ನೆಯನ್ನು ಯತಿಗಳು ಕೇಳಿಕೊಂಡರೆ ಒಳ್ಳೆಯದು. ಹೋಗಲಿ ಹಸುವಿನ ಹಾಲು ಮಾಂಸಜನ್ಯವಾದ ಪದಾರ್ಥವಲ್ಲವೇ? ಸಕ್ಕರೆಯಲ್ಲಿ ಮೂಳೆಯ ಅಂಶವಿಲ್ಲವೇ? ಡಾಲ್ಡಾದಲ್ಲಿ ಏನು ಬಳಕೆಯಾಗುತ್ತದೆಂದು ತಿಳಿದಿಲ್ಲವೇ? ಕಾಲ ಬದಲಾಗಿದೆ ಜನ ವಿಚಾರ ಮಾಡುವ ಶಕ್ತಿ ಬೆಳೆಸಿಕೊಂಡಿದ್ದಾರೆ ತಮ್ಮ ಬೇಳೆ ಹೆಚ್ಚು ದಿನ ಬೇಯದು , ತಾವು ಹೇಳಿದ್ದೆಲ್ಲ ವೇದವಾಕ್ಯ ಎಂಬ ಹುಂಬತನವನ್ನು ಬಿಡದಿದ್ದರೆ ಮುಂದೊಂದು ದಿನ ಜನರೇ ಸರಿಯಾದ ಪಾಠ ಕಲಿಸುವರು ಅಲ್ಲವೇ? ಆಚಾರವಿಲ್ಲದ ನಾಲಿಗೆಗೆ ಕಡಿವಾಣ ಬೀಳದಿದ್ದರೆ ಪ್ರತಿಷ್ಠೆಗಳು ಮುರಿದು ಬೀಳುತ್ತವೆನ್ನುವುದನ್ನು ನೆನಪಿಡಬೇಕಷ್ಟೇ.



Wednesday, May 30, 2012

ಕನಸುಗಾರ ನಾ, ನಿಮಗೆ ಇನ್ನು ನಾ...?

ಕನ್ನಡ ಚಿತ್ರರಂಗ 70ರದಶಕದಲ್ಲಿ ಭಾರತೀಯ ಚಿತ್ರರಂಗಕ್ಕೆ ಹೊಸ ಅಲೆಯ ಚಿತ್ರಗಳನ್ನು ಕೊಡುವ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ ವಿಜೃಂಬಿಸಿತ್ತು. ಸಿನಿಮಾ ಗಳೆಂದರೆ ಕನ್ನಡ ಸಿನಿಮಾಗಳಂತಿರಬೇಕು ಎಂಬ ಹಾಗೆ ಇದ್ದ ಕಾಲವದು. ಪ್ರಯೋಗಶೀಲತೆಗೆ ಹೆಸರುವಾಸಿಯಾಗಿದ್ದ ಸ್ಯಾಂಡಲ್ ವುಡ್ ನಲ್ಲಿ ಆ ವೇಳೆಗಾಗಲೇ 'ರಾಜಣ್ಣ' ಹೆಮ್ಮರವಾಗಿ ಬೆಳೆದುನಿಂತಿದ್ದರು ಶಂಕರ್ ನಾಗ್ ರಂತ ವರ್ಕಾಲಿಕ್ ನಟ-ನಿರ್ದೇಶಕ, ವಿಷ್ಣುವರ್ಧನ್ ರಂತಹ ಮೇರು ನಟರು,ಮಂಡ್ಯದ ಗಂಡು ಅಂಬರೀಷ್ ಉದಯವಾಗಿದ್ದರು.80ರ ದಶಕದ ಆರಂಬದಲ್ಲಿ ಇವರಿಗೆ ಜೊತೆಯಾಗಿದ್ದು ಟೈಗರ್ ಪ್ರಭಾಕರ್ ಇಂತಹ ದಿಗ್ಗಜರುಗಳ ಅಬ್ಬರದ ನಡುವೆಯೇ ಅದ್ದೂರಿ ಕಮರ್ಷಿಯಲ್ ಚಿತ್ರದ ಮೂಲಕ ಕನ್ನಡ ಚಿತ್ರರಂಗದ ಸಾರ್ವಕಾಲಿಕ ಸೂಪರ್ ಡೂಪರ್ ಚಿತ್ರ ಕೊಡುವ ಮೂಲಕ ಇಡೀ ದೇಶದ ಚಿತ್ರ ಪ್ರೇಮಿಗಳು ನಿಬ್ಬೆರಗಾಗಿ ಸ್ಯಾಂಡಲ್ ವುಡ್ ನತ್ತ ನೋಡುವಂತೆ ಮಾಡಿದ ಸಾಹಸಿ ಯುವಕನೇ ವಿ ರವಿಚಂದ್ರನ್! ಯುವಪೀಳಿಗೆಯಲ್ಲಿ ಮತ್ತು ಲಲನಾ ಮಣಿಯರ ನಡುವೆ ರವಿಚಂದ್ರನ್ ಎನ್ನುವ ಹೆಸರೇ ರೋಮಾಂಚನ ಉಂಟು ಮಾಡುವಂತದ್ದು. ರವಿ  ಈಗ 51 ತುಂಬಿ 52ವರ್ಷಕ್ಕೆ ಕಾಲಿಟ್ಟಿದ್ದಾರೆ, ಈ ಸಂಧರ್ಭದಲ್ಲಿ ಕನ್ನಡ ಚಿತ್ರರಂಗಕ್ಕೆ ಹೊಸತನದ ಟ್ರೆಂಡ್ ಸೃಷ್ಟಿಸಿದ ಕನಸುಗಾರ ರವಿಯ ಕುರಿತು ಅವಲೋಕಿಸುವುದು ಸೂಕ್ತವಾಗಬಹುದು.
           ರವಿಚಂದ್ರನ್ ಹೆಸರು ಕೇಳಿದರೆ ಇವತ್ತಿಗೂ ಮೈ ಪುಳಕಗೊಳ್ಳುವವರು ಎಷ್ಟೋ ಮಂದಿ ಇದ್ದಾರೆ! ಅಂತಹ ಮಾಂತ್ರಿಕ ಶಕ್ತಿಯನ್ನು ರವಿ ತನ್ನ ಚಿತ್ರಗಳ ಮೂಲಕ ಪಡೆದುಕೊಂಡ ಹೆಗ್ಗಳಿಕೆ ಪಡೆದಿದ್ದಾರೆ. ಪ್ರಯೋಗಶೀಲತೆ ಮತ್ತು ಕಲಾತ್ಮಕ ಚಿತ್ರಗಳ ಕಾಲಘಟ್ಟದ ನಂತರ ಕನ್ನಡದಲ್ಲಿ ಹೊಸಅಲೆಯ ಕಮರ್ಷಿಯಲ್ ಚಿತ್ರ ನೀಡುವ ಮೂಲಕ ಚಲನಚಿತ್ರದಲ್ಲಿ ಹೊಸ ಸಂಗೀತದ ಪರಿಚಯವನ್ನು, ಸಾಹಿತ್ಯದ ಕಸುವನ್ನು, ಹಂಸಲೇಖರಂತಹ ರತ್ನವನ್ನು ಕನ್ನಡದ ಜನತೆಗೆ ಪರಿಚಯಿಸಿದ್ದು ಒನ್ಸ್ ಎಗೇನ್ ಇದೇ ರವಿಚಂದ್ರನ್. ತಂದೆ ವೀರಾಸ್ವಾಮಿ ಚಿತ್ರ ನಿರ್ಮಾಪಕರಾಗಿದ್ದರೂ ಸಹಾ ಅವರ ಛಾಯೆಯಿಲ್ಲದೇ ಗಾಡ್ ಫಾದರ್ ಗಳ ನೆರವಿಲ್ಲದೇ ದಿಗ್ಗನೆ ಎದ್ದು ನಿಂತದ್ದು ರವಿಚಂದ್ರನ್.  1984ರಲ್ಲಿ ಪ್ರಳಯಾಂತಕ ಚಿತ್ರದ ಮೂಲಕ ಕನ್ನಡ ಬೆಳ್ಳಿತೆರೆಗೆ ಎಂಟ್ರಿ ಪಡೆದ ರವಿ ಖಳನಾಗಿ ಅಭಿನಯಿಸಿದ್ದರು ಅದೂ ಮಾತಿಲ್ಲದ ಪಾತ್ರದಲ್ಲಿ ! ಪೂರ್ಣ ಪ್ರಮಾಣದ ಹೀರೋ ಆಗಿ ಅವತರಿಸಿದ್ದು 'ನಾನೇರಾಜ' ಚಿತ್ರದ ಮೂಲಕ. ಅಲ್ಲಿಂದ ಮುಂದೆ ಬಂದ ಹಲವು ಚಿತ್ರಗಳಲ್ಲಿ ಸೈಕಲ್ ಹೊಡೆದರು, ದೊಡ್ಡ ಬ್ರೇಕ್ ನೀಡಿದ್ದು ಮಾತ್ರ 1987ರಲ್ಲಿ ರವಿ ಆಲ್ ಇನ್ ಒನ್ ಆಗಿ ನಟಿಸಿ ನಿರ್ದೇಶಿಸಿ ನಿರ್ಮಿಸಿದ 'ಪ್ರೇಮಲೋಕ'ಚಿತ್ರ. ಹಲವು ಹೊಸತನಗಳಿಗೆ ಹೊಸಪ್ರತಿಭೆಗಳಿಗೆ ನಾಂದಿ ಹಾಡಿದ ಈ ಚಿತ್ರದ ನಂತರ ರವಿಚಂದ್ರನ್ ನಟಿಸಿದ ರಣದೀರ, ಶಾಂತಿಕ್ರಾಂತಿ, ಯುದ್ದಕಾಂಡ, ಅಂಜದಗಂಡು ಹೀಗೆ ಒಂದೇ ಎರಡೇ ಸಾಲು ಸಾಲಾಗಿ ಯಶಸ್ವಿ ಚಿತ್ರಗಳನ್ನು ಕೊಟ್ಟರು. ಯುವಜನತೆ ರವಿಚಂದ್ರನ್ ಸಿನಿಮಾಗಳೆಂದರೆ ಕಾದು ಕೂರುವಂತ ಪರಿಸ್ಥಿತಿ ಸೃಷ್ಟಿಯಾಯಿತು, ಎಲ್ಲ ವರ್ಗದ ಜನರಿಗೂ ರವಿ ಇಷ್ಟವಾಗುವಂತಹ ಪಾತ್ರಗಳಲ್ಲಿ ಬಂದು ಹೋದರು. ನಿಜ ಹೇಳಬೇಕೆಂದರೆ 80ರ ದಶಕದಲ್ಲಿ ಉತ್ತುಂಗದಲ್ಲಿದ್ದ ಅಂಬಿ ಮತ್ತು ವಿಷ್ಣು ಜೊತೆಗೆ ಸರಿಸಮನಾಗಿ ಮತ್ತು ವಿಭಿನ್ನವಾದ ಇಮೇಜ್ ಸೃಷ್ಟಿಸಿಕೊಂಡರು. ಜನರಿಗೆ ಹೊಸ ನೋಟದ ಸವಿಯನ್ನು ಉಣಬಡಿಸಿದರು. ರವಿ ಚಿತ್ರಗಳ ಹಾಡುಗಳು, ಅದ್ದೂರಿತನ, ಕಲಾತ್ಮಕತೆ, ತಾಂತ್ರಿಕ ನೈಪುಣ್ಯತೆ, ಕಲ್ಪನೆ ಗಳನ್ನು ಬೇರೆಯವರ ಸಿನಿಮಾಗಳಲ್ಲಿ ಕಾಣಲು ಸಾಧ್ಯವೇ ಇಲ್ಲವೇನೋ ಎನ್ನುವಷ್ಟರ ಮಟ್ಟಿಗೆ ರವಿ ಬೆಳೆದು ನಿಂತರು. ಏಕಾಂಗಿ ಎಂಬ ಚಿತ್ರವನ್ನು ಮಹತ್ವಾಕಾಂಕ್ಷೆಯಿಂದ ನಿರ್ಮಿಸಿದರಾದರೂ ಗಲ್ಲಾ ಪೆಟ್ಟಿಗೆಯಲ್ಲಿ ಅದು ಯಶಸ್ಸು ಕಾಣದಿದ್ದುದರಿಂದ ಮಂಕಾದ ರವಿ ನಂತರದ ದಿನಗಳಲ್ಲಿ ಸೋಲುಗಳನ್ನು ಕಂಡರು. ಈ ನಡುವೆ ವಿವಾದಗಳು ರವಿಯನ್ನು ಅರಸಿಕೊಂಡು ಬಂದವು, ಹಳ್ಳಿಮೇಷ್ಟ್ರು ಸಿನಿಮಾ ನಾಯಕಿಯಾಗಿದ್ದ ಬಿಂದಿಯಾ, ರವಿ ಮೇಲೆ ಮಾಡಿದ ಆರೋಪ ಇಮೇಜ್ ಕೆಡಿಸದಿದ್ದರೂ ವಿವಾದಕ್ಕೆ ತಾನೇನೂ ಹೊರತಲ್ಲ ಎಂಬುದನ್ನು ಸಾಬೀತು ಪಡಿಸಿತು. ಬಾಲಿವುಡ್ ಮತ್ತು ಟಾಲಿವುಡ್ ನಲ್ಲಿ ಹೆಸರು ಮಾಡಿದ ಜೂಹಿಚಾವ್ಲಾ ಮತ್ತು ಖುಷ್ ಬೂ ಗೆ ಮೊದಲ ಅವಕಾಶ ನೀಡಿ ಬೆಳ್ಳಿತೆರೆಗೆ ಪರಿಚಯಿಸಿದ ರವಿಚಂದ್ರನ್ ಅನೇಕ ಹೊಸ ಮುಖಗಳನ್ನು ಕನ್ನಡಕ್ಕೆ ತಂದಿದ್ದಾರೆ. 
          ಹೀಗಿರುವಾಗಲೇ ಇತ್ತೀಚಿನ 'ನರಸಿಂಹ', ದಶಮುಖ ದಂತಹ ಪ್ಲಾಪ್ ಚಿತ್ರಗಳ ಸೋಲಿನ ನಡುವೆಯ ಕನಸಿನ ಮಂಜಿನ ಹನಿ ಎಂಬ ಚಿತ್ರವನ್ನು 3-4ವರ್ಷಗಳಿಂದ ನಿರ್ಮಿಸುತ್ತಲೇ ಇದ್ದಾರೆ. ಅದು ತಾನಂದುಕೊಂಡಂತೆ ಬಂದಿಲ್ಲ ಮತ್ತೆ ಮೂರನೇ ಬಾರಿಗೆ ಚಿತ್ರೀಕರಣಕ್ಕೆ ಅಣಿಯಾಗಿದ್ದಾರೆ, ಆ ಚಿತ್ರ ಬರುವ ತನಕ ತನ್ನ ಹುಟ್ಟ ಹಬ್ಬದ ಸಂಭ್ರಮ ಇಲ್ಲ ಎಂದು ಘೋಷಿಸಿದ್ದರು.ಆದರೆ ಅಭಿಮಾನಿಗಳ ಒತ್ತಡಕ್ಕೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಕನ್ನಡ ಚಿತ್ರರಂಗಕ್ಕೆ ರವಿ ಕಾಲಿರಿಸಿ 26ವರ್ಷಗಳು ಸಂದಿವೆ. ಈಗ ಅವರ ಅಭಿನಯದ ಕ್ರೇಜಿ ಲೋಕ ತೆರೆಗೆ ಬರಲು ಸಜ್ಜಾಗಿದೆ. ರಾಜ್ಯದಲ್ಲಿ ಹಾಲಿವುಡ್ ಮಾದರಿಯ ಸಿನಿಮಾ ನಿರ್ಮಾಣಕ್ಕೆ ಎಲ್ಲಾ ಸೌಲಭ್ಯಗಳಿರುವ ಅತ್ಯಾಧುನಿಕ ಸಿನಿ ನಗರವನ್ನು 350ಕೋಟಿ ವೆಚ್ಚದಲ್ಲಿ ನಿರ್ಮಿಸುವ ಮಹತ್ವಕಾಂಕ್ಷೆಯನ್ನು ಕನಸುಗಾರ ವ್ಯಕ್ತಪಡಿಸುತ್ತಾರೆ. ಅದಕ್ಕಾಗಿ ಸಿದ್ದತೆಗಳನ್ನು ಮಾಡಿಕೊಂಡಿದ್ದಾರೆ. ಈ ವರ್ಷದ ಅಂತ್ಯದ ವೇಳೆಗೆ ತಮ್ಮ ಪುತ್ರನನ್ನು ನಾಯಕನನ್ನಾಗಿಸಿ ಚಿತ್ರ ತಂದ ನಂತರ ರವಿಯ ಕನಸಿನ  ಕ್ರೇಜೀಸ್ಟಾರ್ ಸಿನಿಮಾ ಬರಲಿದೆ. ಈಗ ಕನ್ನಡ ಸಿನಿಮಾಗಳಲ್ಲಿ ಹೊಸತನ ಬಂದಿದೆ, ಹೊಸಬರ ಆಗಮನವಾಗಿದೆ ಅಭಿಮಾನಿಗಳು ಮೊದಲಿನಂತಿಲ್ಲ ಬದಲಾವಣೆ ಬಯಸುತ್ತಾರೆ ಈ ಎಲ್ಲಾ ವೈರುದ್ಯಗಳ ನಡುವೆ ಕನಸುಗಾರ ಮತ್ತೊಮ್ಮೆ ಎದ್ದು ಬರುವನೇ ಕಾದು ನೋಡೋಣ..

Monday, May 7, 2012

ಕನ್ನಡ ಕಟ್ಟಾಳು ಅನಕೃ ನೆನಪಾಗ್ತಾರೇನ್ರೀ??



ಮೊನ್ನೆ  ನಡೆದ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ ಅಸಲಿಗೆ ಕನ್ನಡ ಸೇವೆ ಮಾಡುವ, ಕನ್ನಡ ಪರ ಚಿಂತನೆಗಳನ್ನಿಟ್ಟುಕೊಂಡ, ಕನ್ನಡಿಗರ ಭಾವನೆಗಳಿಗೆ ಸ್ಪಂದಿಸುವ ಮನೋಭಾವದ ಜನ ಎಷ್ಟು ಮಂದಿ ಆಯ್ಕೆಯಾಗಿದ್ದರೋ ಗೊತ್ತಿಲ್ಲ. ಆದರೆ ಕನ್ನಡ ತೇರು ಎಳೆಯುವ ಸಾರಥಿಗಳಿಗೆ ಮತ್ತು ಕನ್ನಡಿಗರಿಗೆ ಸದಾ ಕಾಲಕ್ಕೂ ನೆನಪಾಗ ಬೇಕಾದುದು ಮಾತ್ರ ಅರಕಲಗೂಡು ನರಸಿಂಗ ಕೃಷ್ಣರಾಯರು(ಅನಕೃ). ಇವತ್ತು ಕನ್ನಡಿಗರ ಹಿತಾಸಕ್ತಿಗಳಿಗೆ ಧಕ್ಕೆ ತರುವಂತಹ ಹಲವು ಪ್ರಕ್ರಿಯೆಗಳು ಜಾರಿಯಲ್ಲಿವೆ ಇಂತಹವುಗಳ ವಿರುದ್ದ ಮೊದಲ ಬಾರಿಗೆ ಸೆಟೆದು ನಿಂತದ್ದು ಮತ್ತು ಸಮಸ್ತ ಕನ್ನಡಿಗರನ್ನು ಒಗ್ಗೂಡಿಸಿದ ಕೀರ್ತಿ ಮಾತ್ರ ಅನಕೃ ಅವರಿಗೆ ಸಲ್ಲುತ್ತದೆ. ಇದೇ ಮೇ 9ಕ್ಕೆ ಅನಕೃ ಅವರ 104ನೇ ಜನ್ಮಜಯಂತಿ. ಪ್ರಸಕ್ತ ಸಂಧರ್ಭದಲ್ಲಿ ಅನಕೃ ಅವರ ವಿಚಾರ ಮಂಥನ ಹಾಗೂ ಕನ್ನಡದ ಹೋರಾಟಕ್ಕೆ, ತುಡಿತಕ್ಕೆ ಇನ್ನೂ ಹೆಚ್ಚಿನ ಶಕ್ತಿ ತುಂಬ ಬಲ್ಲದು.
ಅನಕೃ ಹುಟ್ಟಿದ್ದು 9ನೇ ಮೇ 1908ರಂದು. ಅವರ ಮೂಲ ಕೋಲಾರ, ಆದರೆ ಅವರ ಅಜ್ಜ ಮತ್ತು ತಂದೆ ನರಸಿಂಗರಾಯ, ತಾಯಿ ಅನ್ನಪೂರ್ಣಮ್ಮ ನೆಲೆಸಿದ್ದು ಹಾಸನ ಜಿಲ್ಲೆಯ ಅರಕಲಗೂಡು. ಉದ್ಯೋಗ ನಿಮಿತ್ತ ನೆಲೆಯಾಗಿದ್ದ ಪೋಷಕರೊಂದಿಗೆ ಬಾಲ್ಯವನ್ನು ಅರಕಲಗೂಡಿನಲ್ಲೇ ಕೆಲ ಕಾಲ ಕಳೆದ ಅನಕೃ ಪ್ರೈಮರಿ ಹಂತದ ಶಿಕ್ಷಣವನ್ನು ಸಹಾ ಇಲ್ಲಿಯೆ ಪೂರೈಸಿದರು.. ಮತ್ತು ಆ ಕಾರಣಕ್ಕಾಗಿಯೇ ತಮ್ಮ ಹೆಸರಿನ ಮುಂದೆ ವಾತ್ಸಲ್ಯದಿಂದ ಅರಕಲಗೂಡು ಎಂದು ಸೇರ್ಪಡೆ ಮಾಡಿಕೊಂಡಿದ್ದರು. ಅದೇ ಕಾರಣಕ್ಕಾಗಿ ಇವತ್ತಿಗೂ ಅನಕೃ ಎಂದೊಡನೆ ನೆನಪಾಗುವುದು ಅರಕಲಗೂಡು ಆಗಿದೆ. ಯಾರೂ ಅವರನ್ನು ಕೋಲಾರ ಜಿಲ್ಲೆಯವರೆಂದು ಹೇಳಲಾರರು. ಇಷ್ಟೇ ಯಾಕೆ ಅನಕೃ ನೆಲೆಯಾಗಿದ್ದ ವಾಸದ ಮನೆ ಇವತ್ತಿಗೂ ಅರಕಲಗೂಡಿನ ಬ್ರಾಹ್ಮಣರ ಬೀದಿಯಲ್ಲಿದೆ. ಆದರೆ ಅವರ ಸಂಬಂಧಿಗಳು ಯಾರೂ ಅಲ್ಲಿಲ್ಲ, ಅದನ್ನು ಬಹಳ ಹಿಂದೆಯೇ ಬೇರೆಯವರಿಗೆ ಮಾರಾಟ ಮಾಡಲಾಗಿದೆ! ಅವರ ಮಕ್ಕಳು ಅನಕೃ ಟ್ರಸ್ಟ್ ಮಾಡಿಕೊಂಡು ರಾಜಧಾನಿ ಬೆಂಗಳೂರಿನಲ್ಲಿ ಸ್ಮರಣೆ ಕಾರ್ಯಕ್ರಮ ಮಾಡುತ್ತಾರೆಯೇ ವಿನಹ ಅರಕಲಗೂಡಿನೆಡೆಗೆ ತಿರುಗಿ ನೋಡಿಲ್ಲ. ಆದರೆ ಅನಕೃ ನೆನಪಿಸಲು ಅರಕಲಗೂಡು ಪಟ್ಟಣದ ಪ್ರಮುಖ ವೃತ್ತಕ್ಕೆ ಅವರ ಹೆಸರನ್ನಿಡಲಾಗಿದೆಯಲ್ಲದೇ ಸುಂದರ ಮೂರ್ತಿಯನ್ನು ಮಂಟಪ ಕಟ್ಟಿ ಇರಿಸಲಾಗಿದೆ. ಪಟ್ಟಣದ ಗ್ರಂಥಾಲಯಕ್ಕೂ ಅನಕೃ ಸ್ಮಾರಕ ಗ್ರಂಥಾಲಯವೆಂದು ಹೆಸರಿಡಲಾಗಿದೆ. ವರ್ಷಕ್ಕೊಮ್ಮೆ ಅವರ ಕುರಿತ ಕಾರ್ಯಕ್ರಮಗಳು ಸ್ಥಳೀಯರ ಆಸಕ್ತಿಯ ಮೇರೆಗೆ ಏರ್ಪಾಡಾಗುತ್ತವೆಯಷ್ಟೇ. ಇರಲಿ ಅನಕೃ ಪ್ರವರ್ಧಮಾನಕ್ಕೆ ಬಂದುದು ಕಥಾಮಂಜರಿ ಹಾಗೂ ವಿಶ್ವವಾಣಿ ಎಂಬ ಪತ್ರಿಕೆಗಳನ್ನು ಸಂಪಾದಿಸುವ ಮೂಲಕ,ಆದರೆ ಸಾರ್ವಜನಿಕವಾಗಿ ಅಧಿಕೃತವಾಗಿ ಪರಿಚಯಗೊಂಡಿದ್ದು ಕನ್ನಡದ ಆಸ್ತಿ ಎಂದೇ ಪರಿಗಣಿತವಾಗಿರುವ ಮಾಸ್ತಿವೆಂಕಟೇಶ ಅಯ್ಯಂಗಾರ್ ಅವರ ಮೂಲಕ. ಅನಕೃ ಅವರ ಸಾಹಿತ್ಯ ಪ್ರೇಮ ಮತ್ತು ವಿದ್ವತ್ತನ್ನು ಗ್ರಹಿಸಿದ್ದ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ತುಂಬಿದ ಸಭೆಯೊಂದರಲ್ಲಿ "ನಾನು ತಮಿಳು ಕನ್ನಡಿಗ, ಸರ್ ಮಿರ್ಜಾ ಇಸ್ಮಾಯಿಲ್ ಮುಸ್ಲಿಂ ಕನ್ನಡಿಗ ಆದರೆ ನಿಮ್ಮ ನಡುವೆ ನಿಮಗೆ ತಿಳಿಯದಂತೆ ಇರುವ ಈ ಯುವಕ ಅನಕೃ ಮಾತ್ರ 'ಅಚ್ಚ ಕನ್ನಡಿಗ" ಎಂದು ಪರಿಚಯಿಸಿದಾಗ ಕಿವಿಗಡಚುಕ್ಕುವ ಕರತಾಡನ ಮೊರೆಯಿತು. ಹೀಗೆ ಕನ್ನಡ ಸಾರಸ್ವತ ಲೋಕಕ್ಕೆ ಪರಿಚಯಗೊಂಡ ಅನಕೃ ಬ್ರಿಟೀಷ್ ಆಡಳಿತದಲ್ಲಿ ಕಂಗೆಟ್ಟು ಹೋಗಿದ್ದ ಕನ್ನಡಿಗರ ಸ್ವಾಭಿಮಾನವನ್ನು ಬಡಿದೆಬ್ಬಿಸುವ ಕೆಲಸವನ್ನು ಸಾಹಿತ್ಯದ ಪರಿಚಾರಿಕೆ ಮಾಡುವ ಮೂಲಕ ಆರಂಭಿಸಿದರು. ಕನ್ನಡ ಸಾಹಿತ್ಯ ಪರಿಷತ್ ಆರಂಭಿಸಿದ "ಕನ್ನಡ ನುಡಿ"ಗೆ ಸಂಪಾದಕರಾಗಿ ಇವರು ಮಾಡಿದ ಸೇವೆ ಅವಿಸ್ಮರಣೀಯವಾದುದು, ಒಮ್ಮೆ 1929ರಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಆರ್ ಆರ್ ದಿವಾಕರ್ಅವರ ಹಿಂದಿ ಬಾಷಾ ನೀತಿಯ ನಿಲುವುಗಳನ್ನು ಖಂಡಿಸಿ ಪರಿಷತ್ ಹೊರತರುತ್ತಿದ್ದ ಕನ್ನಡ ನುಡಿಯಲ್ಲಿ ಟೀಕಾತ್ಮಕ ಲೇಖನ ಬರೆದು ಪ್ರತಿಭಟಿಸಿದರು. ಕಡೆಗೆ ಪ್ರತಿಭಟನೆಯ ಭಾಗವಾಗಿ ತನ್ನ ಸಿದ್ದಾಂತವನ್ನು ಬಿಡದೇ ಕನ್ನಡ ನುಡಿಯ ಸಂಪಾದಕ ಹುದ್ದೆಯನ್ನೆ ತ್ಯಜಿಸಿ ಹೋದರು. ಆ ದಿನಗಳಲ್ಲಿ ಹರಿದು ಹಂಚಿಹೋಗಿದ್ದ ಕನ್ನಡಿಗರನ್ನು ಮೊಟ್ಟ ಮೊದಲ ಬಾರಿಗೆ ಸಂಘಟಿಸಿ ಕನ್ನಡಿಗರ ಹಿತಕ್ಕೆ ಧಕ್ಕೆಯಾಗದಂತೆ ಧ್ವನಿಯೆತ್ತಿದ ಕನ್ನಡದ ಕಟ್ಟಾಳು ಈ ಅನಕೃ.
ಸತತವಾಗ 4ದಶಕಗಳ ಕಾಲ ಅಂದರೆ 40ವರ್ಷಗಳ ಕಾಲ ಸಾಹಿತ್ಯ ಕೃಷಿ ನಡೆಸಿದ ಅನಕೃ ಬರೆದ ಮೊದಲ ಕಾದಂಬರಿ "ಜೀವನಯಾತ್ರೆ", ಹೀಗೆ ಆರಂಭವಾದ ಸಾಹಿತ್ಯ ಸೇವೆಯಲ್ಲಿ 100ಕ್ಕೂ ಹೆಚ್ಚು ಕಾದಂಬರಿಗಳು, ಕಥೆಗಳು, ನಾಟಕಗಳು, ವಿಮರ್ಶೆಗಳು, ಲೇಖನಗಳು ಸಂಪಾದಿತ ಕೃತಿಗಳನ್ನು ಅನಕೃ ರಚಿಸಿದ್ದಾರೆ. ಕನ್ನಡ ಸಾರಸ್ವತ ಲೋಕದಲ್ಲಿ ಅನಕೃ ಬರೆದಷ್ಟು ವೈವಿಧ್ಯಮಯ ಸಾಹಿತ್ಯವನ್ನು ಕನ್ನಡದ ಯಾವ ಸಾಹಿತಿಯೂ ಬರೆದಿಲ್ಲ ಎಂಬುದು ಗಮನಾರ್ಹ. ಅಷ್ಟೇ ಏಕೆ ದೇಶದ ಸಾಹಿತ್ಯ ಲೋಕದಲ್ಲಿ ಇವರಷ್ಟು ಸಂಖ್ಯೆಯ ಕಾದಂಬರಿಗಳನ್ನೂ ಯಾರೂ ಬರೆದಿರಲಾರರು. ಅವರ ಕಾದಂಬರಿಗಳು ಹಾಗೆಯೇ ಕಪೋಲ ಕಲ್ಪಿತವಲ್ಲ, ವಾಸ್ತವಕ್ಕೆ ಹತ್ತಿರವಾದ ಮತ್ತು ಜನಸಾಮಾನ್ಯರ ನಡುವಣ ಕಥಾನಕಗಳೇ ಕಾದಂಬರಿಯ ವಸ್ತುಗಳಾಗಿ ಪಾತ್ರಗಳಾಗಿ ರೂಪು ತಳೆದಿವೆ. ಆಳವಾದ ಅಧ್ಯಯನ ಶೀಲತೆ ಮತ್ತು ಅದನ್ನು ಜನಸಾಮಾನ್ಯರಿಗೆ ಅರ್ಥವಾಗುವಂತೆ ಅಕ್ಷರ ರೂಪದಲ್ಲಿ ಉಣಬಡಿಸುತ್ತಿದ್ದ ರೀತಿ ಸಾಹಿತ್ಯ ಪ್ರಿಯರಿಗೆ ಹಬ್ಬದೂಟವಾಗುತ್ತಿತ್ತು!
      ನವೋದಯ ಸಾಹಿತ್ಯದ ಆರಂಭದ ದಿನಗಳಲ್ಲಿ ಸಾಹಿತ್ಯ ಸೇವೆ ನಡೆಸಿದ ಅನಕೃ ಸತ್ಯ ಮತ್ತು ವಾಸ್ತವ ಅಂಶಗಳಿಗೆ ಹೆಚ್ಚಿನ ಮಹತ್ವ ನೀಡುತ್ತಿದ್ದರಲ್ಲದೇ ಪ್ರಗತಿಶೀಲ ಸಾಹಿತ್ಯ ಚಳುವಳಿಯನ್ನು ತಮ್ಮ ಕೃತಿಗಳ ಮೂಲಕ ಆರಂಭಿಸಿಯೆ ಬಿಟ್ಟರು. ಇದು ಅಂದಿನ ದಿನಗಳಲ್ಲಿ ಬಹು ಚರ್ಚಿತ ವಿಷಯವಾಗಿತ್ತು. ಆ ಕಾಲಕ್ಕೆ ಪ್ರಗತಿ ಶೀಲ ಸಾಹಿತ್ಯದ ಪರಿಣಾಮ ಸಾಮಾಜಿಕ ಬದಲಾವಣೆಗಳಿಗೆ ಕಾರಣವಾಯಿತು, ತ.ರಾ ಸುಬ್ಬರಾಯರು, ಬಸವರಾಜ ಕಟ್ಟಿಮನಿ ಮತ್ತು ನಿರಂಜನ ಪ್ರಗತಿಶೀಲ ಸಾಹಿತ್ಯದ ಮೂಲಕ ಅನಕೃ ಅವರನ್ನು ಹಿಂಬಾಲಿಸಿದರು. ಆ ಮೂಲಕ ಒಂದು ಹೊಸ ಶಕೆಯೇ ಸೃಷ್ಟಿಯಾಯಿತು. ಆ ಅನಕೃ ದಿನಗಳಲ್ಲಿ ಬರೆದ ನಗ್ನಸತ್ಯ, ಸಂಜೆಗತ್ತಲು ಹಾಗೂ ಶನಿಸಂತಾನ ಕೃತಿಗಳು ವೇಶ್ಯಾವೃತ್ತಿಯ ವಿಷಯವನ್ನು ವಿಷಧ ಪಡಿಸಿದ್ದು ಅದೊಂದು ಅಶ್ಲೀಲ ಸಾಹಿತ್ಯ ಎಂದು ಟೀಕೆಗಳು ವ್ಯಕ್ತವಾದವು, ಆದರೆ ಅದಕ್ಕೆ ಪ್ರತ್ಯುತ್ತರವಾಗಿ ಸಾಹಿತ್ಯ ಮತ್ತು ಕಾಮಪ್ರಚೋದನೆ ಎಂಬ ಪುಸ್ತಕ ಬರೆದು ವಿರೋಧಿಗಳಿಗೆ ಸಮರ್ಪಕವಾಗಿ ಉತ್ತರಿಸಿದ ಅನಕೃ ಪ್ರಶಂಸೆಗೂ ಪಾತ್ರರಾದರು. ಅನಕೃ ರಚಿಸಿದ ಹೆಚ್ಚು ಪ್ರಸಿದ್ದಿ ಪಡೆದ ಕಾದಂಬರಿ ಸಂಧ್ಯಾರಾಗ ಕನ್ನಡದಲ್ಲಿ ಸಿನಿಮಾ ಆಗಿಯೂ ಹೊರಬಂತು. ನಾಟಕ ರಚನೆಯಲ್ಲಿ ಜೀವನ್ಮುಖಿ ಪಾತ್ರಗಳನ್ನು ಸೃಷ್ಟಿಸುತ್ತಿದ್ದ ಅನಕೃ ಆ ಪಾತ್ರಗಳ ಮೂಲಕ ಪರಿಣಾಮಕಾರಿ ಸಂಭಾಷಣೆಗಳನ್ನು ಕಟ್ಟಿಕೊಡುತ್ತಿದ್ದರು ಇದು ಅವರ ಜನಪ್ರಿಯತೆಯನ್ನು ಮತ್ತಷ್ಟು ಇಮ್ಮುಡಿಗೊಳಿಸಿತ್ತು. ಮಣಿಪಾಲದಲ್ಲಿ ನಡೆದ 43ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನ ಅಲಂಕರಿಸಿದ ಅನಕೃ ಅವರಿಗೆ ಗೌರವಾರ್ಥವಾಗಿ ಮೈಸೂರು ವಿವಿಯು ಕೂಡ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ಅವರ ಕೃತಿಗಳು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುರಸ್ಕಾರಕ್ಕೂ ಕಾರಣವಾಗಿವೆ.
ಇಂತಹ ಅನಕೃ ಗೋಕಾಕ್ ಚಳುವಳಿಯನ್ನು ಸಂಘಟಿಸುವ ಮೂಲಕ ಕನ್ನಡಿಗರ ಹಿತಕ್ಕೆ ಧಕ್ಕೆ ತರುವ ವಿವಿಧ ಆಯಾಮಗಳ ವಿರುದ್ದ ಸ್ಪಷ್ಟ ಸಂದೇಶ ಸಾರಿದ್ದರು. ಇವತ್ತು ನಡೆಯುತ್ತಿರುವ ಕನ್ನಡ ಚಿತ್ರಗಳ ಡಬ್ಬಿಂಗ್ ವಿವಾದ ಇರಬಹುದು. ಕನ್ನಡಿಗರಿಗೆ ಉದ್ಯೋಗ ಮೀಸಲಾತಿ, ಆಡಳಿತದಲ್ಲಿ ಕನ್ನಡ ಭಾಷೆ, ನದಿ ನೀರಿನ ಹಂಚಿಕೆ, ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ಹಲವು ಕನ್ನಡ ಪರ ಹೋರಾಟಕ್ಕೆ ಮತ್ತು ಚಿಂತನೆಗೆ ಒತ್ತಾಸೆಯಾಗಿ ನಾಯಕತ್ವ ನೀಡಿದ್ದು ಇದೇ ಅನಕೃ. ಆದರೆ ಇವತ್ತಿನಕನ್ನಡ ಚಳುವಳಿಯ ಮಂಚೂಣಿಯಲ್ಲಿ ನಿಂತವರ ಮನಸ್ಥಿತಿ ಹಾಗಿಲ್ಲ ಬದಲಿಗೆ ಕನ್ನಡದ ಹೆಸರಿನಲ್ಲಿ ಮೆರೆಯುವ, ದುಡ್ಡು ದೋಚುವ, ಪ್ರತಿಷ್ಟೆಗಾಗಿ ಹವಣಿಸುವ, ವಿವಿಧ ಅವಕಾಶಗಳಿಗಾಗಿ ಕನ್ನಡದ ಹೆಸರನ್ನು ಬಳಸುವ ಜನರೇ ಹೆಚ್ಚು. ಸಧ್ಯ ರಾಜ್ಯ ಕಸಾಪ ಕ್ಕೆ ಆಯ್ಕೆಯಾಗಿರುವ ಪುಂಡಲಿಕ ಹಾಲಂಬಿ ಆ ನಿಟ್ಟಿನಲ್ಲಿ ಸಜ್ಜನರು ಹಾಗೂ ಬದ್ದತೆ ಪ್ರದರ್ಶಿಸುವ ಮನೋಭಾವದವರು. ಇವರು ಸಹಾ ಹುಟ್ಟಿದ್ದು ಮತ್ತು ಪ್ರೌಢಶಾಲ ಹಂತದ ಶಿಕ್ಷಣ ಪೂರೈಸಿದ್ದು ಅರಕಲಗೂಡಿನಲ್ಲೇ, ಕನ್ನಡ ಜಾನಪದ ಲೋಕಕ್ಕೆ ಮಹತ್ವದ ಕೊಡುಗೆ ನೀಡಿದ ಡಾ ಎಚ್ ಜೆ ಲಕ್ಕಪ್ಪ ಗೌಡ ಕೂಡ ಅರಕಲಗೂಡಿನವರೇ ಆಗಿದ್ದಾರೆ. ಇಂಥಹವರ ಮಾರ್ಗದರ್ಶನದಲ್ಲಿ ಅನಕೃ ಜನ್ಮ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸುವ ಮತ್ತು ಕನ್ನಡ ಚಳುವಳಿಗೆ ಶಕ್ತಿ ತುಂಬುವ ಕೆಲಸ ಆಗಬೇಕಲ್ಲವೇ?

Sunday, April 15, 2012

ಕನ್ನಡ ಸಾಹಿತ್ಯ(ಜಾತಿ) ಪರಿಷತ್ ಚುನಾವಣೆ..!


ನಾನು ಕನ್ನಡ ಜಾತಿಯವನು ಅಂದ್ರೆ ತಪ್ಪಿಲ್ಲ.... ಆದ್ರೆ ಇದೆಂಥಹದು ಮಾರಾಯ್ರೇ ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ ಜಾತಿ ಆಧರಿಸಿದ ರಾಜಕೀಯ? ಪರಮ ಅಸಹ್ಯ ಸೃಷ್ಟಿಸಿರುವ ಸನ್ನಿವೇಶ ಇದು.ಅಸಲಿಗೆ ಕನ್ನಡ ಸಾಹಿತ್ಯ ಪರಿಷತ್ ಅಂದರೆ ಏನು? ಅದರ ದ್ಯೇಯೋದ್ದೇಶಗಳೇನು? ಆ ಮೂಲಕ ಸಾಕಾರ ಆಗಬೇಕಾದುದೇನು? ಅಲ್ಲಿ ಅಧಿಕಾರವೆಂಬ ಹೊಣೆ ಹೊರಲು ಯಾವ ಯೋಗ್ಯತೆ ಇರಬೇಕು ? ಹೊಣೆಗಾರಿಕೆಯ ಆಯ್ಕೆ ಹೇಗಿರಬೇಕು ? ಮತದಾರರ ಜವಾಬ್ದಾರಿ ಏನು ? ಗೆದ್ದು ಬಂದವರು ಕಿಸಿಯುವುದೇನು?ನಾಡು ನುಡಿ ಕುರಿತು  ನಮ್ಮ ಕನಸುಗಳು ಮತ್ತು ಪರಿಷತ್ತಿನ  ಆಶಯಗಳು ಹೇಗೆ ದಿಕ್ಕು ತಪ್ಪಿವೆ ಎಂಬ ಕುರಿತು ಚರ್ಚಿಸಲು ಇದು ಸಕಾಲ.
          ರಾಜ್ಯ ರಾಜಕಾರಣದಲ್ಲಿ ಪರಿಪೂರ್ಣವಾಗಿ ಜಾತಿ ಆಧಾರಿತ ರಾಜಕೀಯ ರಾಡಿಯನ್ನು ಸೃಷ್ಟಿಸಿರುವ ಬಿಎಸ್ ವೈ ಮೊದಲ ಭಾರಿಗೆ ರಾಜ್ಯದ ಮಾನವನ್ನು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಹರಾಜು ಹಾಕಿದ್ದಾರೆ. ಜಾತಿಯನ್ನೇ ಮುಂದು ಮಾಡಿಕೊಂಡು ಸಮಾವೇಶಗಳನ್ನ, ಸಂಚಾರ ಯಾತ್ರೆಗಳನ್ನ ಮಾಡುತ್ತಿದ್ದಾರೆ. ಜಾತಿಯ ಕಾರಣಕ್ಕಾಗಿಯಾದರೂ ಸಿಎಂ ಸದಾನಂದಗೌಡರನ್ನ ಪಟ್ಟದಿಂದ ಕೆಡವಲು ಹುನ್ನಾರ ನಡೆಸಿದ್ದಾರೆ. ಯಡ್ಡಿಯ ತಾಳಕ್ಕೆ ಅನುಗುಣವಾಗಿ ಆ ಜಾತಿಯ ಮಠಾದೀಶರುಗಳು,ಆಧುನಿಕ ದೇವರೆಂಬ ಬಿರುದಾಂಕಿತರು! ಮತ್ತು ಜಾತಿಯ ಜನರು ಹಿಂಬಾಲಿಸುತ್ತಿದ್ದಾರೆ. ಶಿವಮೊಗ್ಗ ಮತ್ತು ಹುಬ್ಬಳ್ಳಿಯಲ್ಲಿ ನಡೆಯುವ ಯಡ್ಡಿಗೆ ಶಕ್ತಿ ತುಂಬುವ ಸಮಾವೇಶಕ್ಕೆ ಆ ವರ್ಗದ ಜನ ರಾಜ್ಯದ ಪ್ರತೀ ತಾಲೂಕು ಕೇಂದ್ರದಿಂದ  ತೆರಳುತ್ತಾರೆಂದರೆ ಜಾತಿ ರಾಜಕಾರಣ ಎಲ್ಲಿಗೆ ಬಂತು ಲೆಕ್ಕ ಹಾಕಿ! ಹೆಚ್ಚು ಕಡಿಮೆ ಇಂಥಹುದೇ ಪರಿಸ್ಥಿತಿ ರಾಜ್ಯದ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ ಕಾಣ ಸಿಗುತ್ತಿದೆ. ಇದು ಕನ್ನಡದ ಪಾಲಿಗೆ ದುರ್ದೈವದ ಸಂಗತಿಯೇ ಹೌದು. 
         ಇರಲಿ ಕನ್ನಡ ಸಾಹಿತ್ಯ ಪರಿಷತ್ ಕುರಿತು ಒಂದು ಕಿರುನೋಟದ ನಂತರ ಅತ್ತ ನೋಡೋಣ ಕನ್ನಡ ಸಾಹಿತ್ಯ ಪರಿಷತ್ತಿನ ಮೊದಲ ಹೆಸರು ಕರ್ಣಾಟಕ ಸಾಹಿತ್ಯ ಪರಿಷತ್ತು. ಬೆಂಗಳೂರಿನ ಶ್ರೀ ಕೃಷ್ಣರಾಜೆ ಪರಿಷನ್ಮಂದಿರದಲ್ಲಿ 1915ರಲ್ಲಿ ಆರಂಭಗೊಂಡ ಪರಿಷತ್ತಿಗೆ ಚಾಲನೆ ನೀಡಿದ್ದು ಮೈಸೂರಿನ ಅರಸ ಮತ್ತು ರಾಜರ್ಷಿಯಾಗಿದ್ದ ನಾಲ್ಮಡಿ ಕೃಷ್ಣರಾಜ ಒಡೆಯರ್. ಪರಿಷತ್ತಿನ ಮೊದಲ ಅಧ್ಯಕ್ಷರಾಗಿದ್ದು ಎಚ್ ವಿ ನಂಜುಂಡಯ್ಯ.. ಮುಂದೆ 1938ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಎಂದು ಮರುನಾಮಕರಣ ಮಾಡಲಾಯಿತು. ಇದು ಕನ್ನಡ ಪುಸ್ತಕಗಳ ಪ್ರಕಟಣೆ ಆ ಮೂಲಕ ಕನ್ನಡ ಬರಹಗಾರರನ್ನು ಪರಿಚಯಿಸುವ ಮತ್ತು ಪ್ರೋತ್ಸಾಹಿಸುವ ಕೆಲಸ, ನಾಡು ನುಡಿಯ ಸಂರಕ್ಷಣೆ ಅಂದರೆ ರಾಜ್ಯದ ಹಿತಕ್ಕೆ ಧಕ್ಕೆ ಆದಾಗ ಧ್ವನಿಯೆತ್ತುವ ಕಾರ್ಯ, ಕನ್ನಡ ಭಾಷೆಯ ಬೆಳವಣಿಗೆ ಮತ್ತು ಉಳಿವಿಗೆ ಪೂರಕ ಕ್ರಿಯೆಗಳನ್ನು ನಿರ್ವಹಿಸುವ ಮಹತ್ತರ ಹೊಣೆಗಾರಿಕೆ ಪರಿಷತ್ತಿಗಿದೆ. ತಿ.ತಾ. ಶರ್ಮ, ಎ.ಎನ್ ಮೂರ್ತಿರಾವ್, ಜಿ. ನಾರಾಯಣ, ಹಂಪನಾಗರಾಜಯ್ಯ, ಎಚ್ ಬಿ ಜ್ವಾಲನಯ್ಯ, ಜಿ ಎಸ್ ಸಿದ್ದಲಿಂಗಯ್ಯ, ಗೊ ರು ಚನ್ನಬಸಪ್ಪ, ಸಾ ಶಿ ಮರುಳಯ್ಯ ಮುಂತಾದ ಮಹನೀಯರು ಪರಿಷತ್ತಿನ ಅಧ್ಯಕ್ಷರಾಗಿ ಗುರುತರವಾದ ಕೆಲಸಗಳನ್ನು ಮಾಡಿದ್ದಾರೆ. ಪ್ರಸಕ್ತ ಅಧಿಕಾರದಲ್ಲಿರುವ ಡಾ ನಲ್ಲೂರು ಪ್ರಸಾದ್ ಪರಿಷತ್ತಿಗೆ 23ನೇ ಅಧ್ಯಕ್ಷರು. ಸಾಹಿತ್ಯ ಪರಿಷತ್ತಿಗೆ ಈಗ 97ತುಂಬಿದೆ ಶತಮಾನದ ಹೊಸ್ತಿಲಲ್ಲಿ ಪರಿಷತ್ತ ನಿಂತಿದೆ. 24ನೇ ಅಧ್ಯಕ್ಷ ಗಿರಿಗೆ ಚುನಾವಣೆ ನಡೆಯುತ್ತಿದೆ.
         ಈ ನಡುವೆ ನಾಡು ನುಡಿಗೆ ಪೂರಕವಾದ ನಿರ್ಣಯಗಳನ್ನು ಇದುವರೆಗೂ ನಡೆದಿರುವ 78ರಾಜ್ಯ ಮಟ್ಟದ ಸಮಾವೇಶಗಳು ದಾಖಲಿಸಿವೆ. ಅದ್ದೂರಿತನ ಮೆರೆದಿವೆ ಆದರೆ ಸರ್ಕಾರಗಳ ಇಚ್ಚಾ ಶಕ್ತಿಯ ಕೊರತೆ ಇನ್ನೂ ಪರಿಪೂರ್ಣತೆ ಸಾಧಿಸಲು ವಿಫಲರಾಗಿದ್ದೇವೆ. ಪರಿಷತ್ತಿನ ಅಧ್ಯಕ್ಷರುಗಳ ಪರಿಶ್ರಮದಿಂದ ಹೆಚ್ಚೆಚ್ಚು ಕನ್ನಡ ಜಾತ್ರೆಗಳನ್ನು ನಡೆಸಲು ಸರ್ಕಾಋ ಅನುದಾನಗಳನ್ನ ಮಂಜೂರು ಮಾಡಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಸಿಬ್ಬಂದಿಗೆ ರಾಜ್ಯ ಸರ್ಕಾರ ಅನುದಾನ ನೀಡುವ ಮಹತ್ವದ ನಿರ್ಣಯಕ್ಕೆ ಸಹಿ ಹಾಕಿದ್ದು 'ಮಣ್ಣಿನ ಮಗ' ಖ್ಯಾತಿಯ ರಾಜ್ಯದ ಅಂದಿನ ಮುಖ್ಯಮಂತ್ರಿ ಎಚ್ ಡಿ ದೇವೇಗೌಡ! ನಂತರದಲ್ಲಿ ವಲಯವಾರು ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನಗಳಿಗೆ 4ಕೋಟಿ, ಜಿಲ್ಲಾ ಸಮ್ಮೇಳನಗಳಿಗೆ 5ಲಕ್ಷ, ತಾಲೂಕು ಸಮ್ಮೇಳನಗಳಿಗೆ 1ಲಕ್ಷ ಹೀಗೆ ಸರ್ಕಾರ ಸಹಾಯ ಹಸ್ತ ನೀಡುವ ಕ್ರಮ ಜಾರಿಗೆ ಬಂದಿದೆ. ಇಷ್ಟೇ ಅಲ್ಲ ಒಂದು ಸಾಹಿತ್ಯ ಸಮ್ಮೇಳನ ನಡೆಯುತ್ತದೆ ಎಂದರೆ ಅದಕ್ಕಾಗಿ ದೇಣಿಗೆ ನೀಡುವ ಮಂದಿ ಸಾವಿರಾರು ಸಂಖ್ಯೆಯಲ್ಲಿದ್ದಾರೆ. ಸಧ್ಯ ಪರಿಷತ್ತಿನ ಸದಸ್ಯತ್ವ ಪಡೆದವರ ಸಂಖ್ಯೆ 1.25ಲಕ್ಷವನ್ನು ಮೀರಿದೆ. ಕನ್ನಡದ ಬಗೆಗಿನ ಪ್ರೀತಿ ಎಷ್ಟು ಮಂದಿಗಿದೆಯೋ ಗೊತ್ತಿಲ್ಲ ಆದರೆ ಭಾವಾಭಿಮಾನಕ್ಕೆ ಹುಕಿಗೆ ಬಿದ್ದು ಸದಸ್ಯರಾದವರೇ ಹೆಚ್ಚು. ಆದರೆ ಇವೆಲ್ಲಾ ಪ್ರಯೋಜನಗಳ ಹಿನ್ನೆಲೆಯಲ್ಲಿ ಅವಕಾಶವನ್ನು ಎನ್ ಕ್ಯಾಶ್ ಮಾಡಿಕೊಂಡು ಸಿಕ್ಕಿದಷ್ಟು ಲೂಟಿ ಹೊಡೆದು ಬಿಟ್ಟಿ ಪ್ರಚಾರ ಮತ್ತು ಕಮಾಯಿ ಪಡೆಯಲು ಪರಿಷತ್ತಿಗೆ ಬರುವವರ ಸಂಖ್ಯೆ ಹೆಚ್ಚಾಗಿದೆ. ಅದನ್ನೇ ದುರ್ದೈವದ ಸಂಗತಿ ಅಂದಿದ್ದು!    
            ಬರೆಯಲು ಕೊಟ್ಟರೆ ನಾಲ್ಕು ಅಕ್ಷರ ಕನ್ನಡ ಬರೆಯಲು ಬಾರದವರು ಮತ್ತು ಸಾಹಿತ್ಯದ ಗಂಧ ಗಾಳಿ ಗೊತ್ತಿಲ್ಲದ ಪುಡಿ ರಾಜಕಾರಣಿಗಳು, ಜಾತಿ ಬೆಂಬಲಿತರು,  ಭಯಂಕರ ಕವಿಗಳೆನಿಸಿಕೊಂಡವರು, ಓರಾಟ ವೀರರು ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಗಳಲ್ಲಿ ತಲೆ ತೂರಿಸಿದ್ದಾರೆ. ದುರಾದೃಷ್ಠಕರ ಸಂಗತಿಯೆಂದರೆ ಬಹುತೇಕರೆಲ್ಲರೂ ಜಾತಿಯ ಹಿನ್ನೆಲೆಯಿಂದ ಅವಕಾಶ ಪಡೆಯುವ ಕನಸು ಹೊತ್ತವರೇ ಆಗಿದ್ದಾರೆ. ಸಾಹಿತ್ಯ ಸಮ್ಮೇಳನಗಳಲ್ಲಿ ತಿಂದುಂಡು ಅಭ್ಯಾಸ ಇರುವವರು ಮತ್ತೆ ಮತ್ತೆ ಚುನಾವಣೆಗಳಿಗೆ ಬರುತ್ತಲೇ ಇದ್ದಾರೆ. ಹಾಸನದ ಮಟ್ಟಿಗೆ ಜಾತಿಯ ಲಾಬಿ ಪರಿಷತ್ ಚುನಾವಣೆಯಲ್ಲಿ ಕೆಲಸ ಮಾಡಲಾರದು ಆದಾಗ್ಯೂ ಕೆಲವು ಅಭ್ಯರ್ಥಿಗಳು ಅದನ್ನೇ ಮುಂದು ಮಾಡಿಕೊಂಡು ಹೋಗುತ್ತಿರುವುದು ವಿಷಾಧನೀಯ ಸಂಗತಿ. ಪರಿಷತ್ ಕೆಲಸ ಮಾಡಲು ಸಾಹಿತ್ಯದ ಗಂಧ ತಿಳಿದವರು, ಕ್ರಿಯಾಶೀಲರು, ಒಗ್ಗೂಡಿಸಿ ಕರೆದೊಯ್ಯುವ ಮನಸ್ಥಿತಿಯವರು ಮಾತ್ರ ಬೇಕು ಆದರೆ ಸಧ್ಯಕ್ಕೆ ಅಂತಹ ಮುಖಗಳು ಕಾಣುತ್ತಿಲ್ಲ. ಕಾಟಾಚಾರಕ್ಕೆ ಒಂದು ಅಂತ ಮತಗಳೂ ಬಿದ್ದರೂ 'ಮತಗಳ ಕೊಳ್ಳುವಿಕೆ' ನಡೆಯುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಕನ್ನಡದ ಕೆಲಸಕ್ಕೆ ಇಂಥ ವಾಮಮಾರ್ಗದ ಅಗತ್ಯವಿಲ್ಲ, ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳ ಕುರಿತು ಬಹುತೇಕರಿಗೆ ಭ್ರಮನಿರಸನ ವಾಗಿದೆ. ದುಡ್ಡು ಮತ್ತು ಜಾತಿಯ ಲಾಬಿಗೆ ಹೆದರಿದ ಮಹಿಳೆಯರು ಮತ್ತು ದಲಿತರು ಚುನಾವಣೆಯಿಂದ ದೂರವೇ ಉಳಿದಿದ್ದಾರೆ,ಈಗ ಹೇಳಿ ಇಂಥಹ ಪರಿಸ್ಥಿತಿ ಬೇಕಿತ್ತಾ? ಕನ್ನಡ ಜಾತಿ ಪರಿಷತ್ತಿಗೆ !!!!

ದಲಿತ ಸೂರ್ಯನ ಕನಸು ನನಸಾಗುವುದೇ?


ಶಿಕ್ಷಣದ ಹಕ್ಕು ಕಾಯ್ದೆಯ ಸಾಂವಿಧಾನಿಕ ಸಿಂಧುತ್ವವನ್ನು ಸುಪ್ರೀಂಕೋರ್ಟು ಎತ್ತಿಹಿಡಿಯುವ ಮೂಲಕ ಅತ್ಯಂತ ಮಹತ್ವದ ತೀರ್ಪನ್ನು ನೀಡಿದೆ. ದಲಿತ ಮತ್ತು ಶೋಷಿತ ವರ್ಗಗಳ ಶ್ರೇಯೋಭಿವೃದ್ದಿಗೆ ಶ್ರಮಿಸಿದ, ಸಮಾನತೆಯ ಹಕ್ಕುಗಳನ್ನು ಪ್ರತಿಪಾದಿಸಿದ ಮಹಾನ್ ಮಾನವತಾ ವಾದಿ ಡಾ|| ಭೀಮರಾವ್ ರಾಮ್ ಜೀ ಅಂಭೇಡ್ಕರ್  ಜನ್ಮ ದಿನಾಚರಣೆಯ ಮುನ್ನಾ ದಿನದಲ್ಲಿ ಹೊರಬಿದ್ದಿರುವ ಈ ತೀರ್ಪು ಐತಿಹಾಸಿಕವೇ ಸರಿ. ಶಿಕ್ಷಣ ಮತ್ತು ಆರೋಗ್ಯ ಇಂದು ಮಾರಾಟದ ಸರಕುಗಳಾಗಿವೆ! ಅತ್ಯಂತ ಹೆಚ್ಚು ಪ್ರಾಮುಖ್ಯತೆ ಪಡೆಯುವ ಇವೆರೆಡು ಅಂಶಗಳು ಒಂದು ದೇಶದ ವ್ಯವಸ್ಥೆಯಲ್ಲಿ ಪ್ರಧಾನ ಪಾತ್ರವನ್ನ ವಹಿಸುತ್ತವೆ.

ಶಿಕ್ಷಣದ ಹಕ್ಕು, ಸಮಾನತೆಯ ಹಕ್ಕು, ಮಹಿಳಾ ಮೀಸಲಾತಿ ಯಂತಹ ಪ್ರಮುಖ ಅಂಶಗಳನ್ನು ಮೊದಲ ಭಾರಿಗೆ ಪ್ರಸ್ತಾವಕ್ಕೆ ತಂದು ಅದರ ಅನುಷ್ಠಾನಕ್ಕೆ ಪಟ್ಟು ಹಿಡಿದಿದ್ದ ಡಾ ಅಂಬೇಡ್ಕರ್ 121ನೇ ಜನ್ಮ ಜಯಂತಿಯಂದು ಇಂತಹ ವಿಚಾರ ಚರ್ಚೆಗೆ ಬಂದಿರುವುದು ಸಂತಸದ ಸಂಗತಿಯೇ. ಈ ಸಮಾಜದ ಕಟ್ಟ ಕಡೆಯ ಮಗುವಿಗೂ ಶಿಕ್ಷಣದ ಹಕ್ಕಿದೆ, ಅದನ್ನು ಪಡೆದು ಜಾಗೃತರಾಗಬೇಕು ಸಶಕ್ತವಾದ ಜಾತಿರಹಿತವಾದ ಮುಕ್ರ ಸಮಾಜ ನಿರ್ಮಾಣವಾಗಬೇಕು ಎಂಬ ಕನಸು ಹೊತ್ತಿದ್ದ ಅಂಬೇಡ್ಕರ್ ರ ದೂರದೃಷ್ಠಿಯ ಫಲಗಳ ಸಾಕಾರ ಇಂದು ಅಲ್ಪಮಟ್ಟಿಗಾದರೂ ನಡೆಯುತ್ತಿದೆ ಎಂಬುದೇ ಸಮಾಧಾನಕರ ಸಂಗತಿ  ಆದಾಗ್ಯೂ ಸಮಾಜದ ಕಟ್ಟ ಕಡೆಯ ಮನುಷ್ಯನಿಗೆ ಜಾಗತೀಕರಣದ ಪ್ರಭಾವ ಅಥವಾ ಅಗತ್ಯ ಸೇವೆಗಳು ಮಾರಾಟದ ಉದ್ದೇಶಗಳಾಗಿ ಬಿಂಬಿತವಾಗುತ್ತಿರುವುದರಿಂದ ಸಮಾಜ ಎಷ್ಟೇ ಮುಂದುವರೆದಿದ್ದರು ಅವನ್ನು ದಕ್ಕಿಸಿಕೊಳ್ಳುವಲ್ಲಿ ಅಸಹಾಯಕತೆ ಅನುಭವಿಸುತ್ತಿದ್ದಾನೆ. ಜಾತೀಯ ವ್ಯವಸ್ಥೆ ಅಷ್ಟರ ಮಟ್ಟಿಗೆ ತನ್ನ ಹಿಡಿತವನ್ನು ಸಾಧಿಸಿದ್ದು ಹಿಂದೆಂದಿಗಿಂತಲೂ ಇಂದು ಅವು ಆಳವಾದ ಬೇರುಗಳನ್ನು ಹಬ್ಬಿಸಿವೆ. ಜಾತೀಯ ಪ್ರಾಧಾನ್ಯತೆ ಹಿಂದಿನಷ್ಟು ಸಾರ್ವಜನಿಕವಾಗಿ ಬಿಂಬಿತವಾಗಿಲ್ಲವಾದರೂ ಆಂತರಿಕವಾಗಿ ಹಿಂದೆಂದಿಗಿಂತಲೂ ಹೆಚ್ಚು ಮೇಲುಗೈ ಸಾಧಿಸಿವೆ ಎಂಬುದೇ ಅತ್ಯಂತ ಅಪಾಯಕಾರಿ ಸಂಗತಿಯಾಗಿದೆ. ಸರ್ಕಾರ ದಲಿತರಿಗೆ ಶೇ.22.5ರಷ್ಟು ಮೀಸಲು ನಿಗದಿಗೊಳಿಸಿದೆ ಆದರೆ ಅದರಲ್ಲೂ 106ಕ್ಕೂ ಹೆಚ್ಚು ಜಾತಿಗಳನ್ನು ಸೇರಿಸಿದೆ. ಇವರೆಲ್ಲಾ ಮೀಸಲು ಪಡೆಯಲು ಮಾತ್ರ ಮುಗಿ ಬೀಳುತ್ತಾರೆಯೇ ವಿನಹ ದಲಿತರಲ್ಲಿ ಪ್ರಾಧಾನ್ಯ ಪಡೆಯುವ ಎರಡು ಸಂಖ್ಯೆಯ ಜಾತಿಗಳವರು  ಶೋಷಣೆಗೊಳಗಾದಾಗ ಒಗ್ಗಟ್ಟು ಪ್ರದರ್ಶಿಸುವುದಿಲ್ಲ.. ಪರಿಣಾಮ ಕೇವಲ ಶೇ.10ರಷ್ಟು ಮೀಸಲು ಅನುಭವಿಸಲು ಸಾಧ್ಯವಾಗಿದೆ, ಅದೇ ರೀತಿ ಶೋಷಿತರ ಸಾಲಿಗೆ ಸೇರುವ ಹಿಂದುಳಿದವರ್ಗಗಳ ಗುಂಪಿಗೆ ನೂರಕ್ಕೂ ಹೆಚ್ಚು ಜಾತಿಗಳು ಸೇರುವುದರಿಂದ ಈ ಗುಂಪಿಗೆ ಇರುವ ಶೇ.27ರ ಮೀಸಲನ್ನು ಸಮರ್ಪಕವಾಗಿ ಬಳಸಲು ಸಾದ್ಯವೇ ಆಗಿಲ್ಲ ಎಂಬುದು ಮತ್ತು ದುರಂತದ ಸಂಗತಿ. ಅಂಬೇಡ್ಕರ್ ಕಲ್ಪನೆಯ ಮೀಸಲಾತಿ ಮನುಷ್ಯನನ್ನು ಭೌದ್ದಿಕವಾಗಿ ಹೆಚ್ಚು ಬುದ್ದಿವಂತನನ್ನಾಗಿ ರೂಪಿಸುವ ದಿಸೆಯಲ್ಲಿ ಇದೆಯಾದರೂ ಅದರ ಅನುಷ್ಠಾನದಲ್ಲಿ ಉಂಟಾಗಿರುವ ದೋಷಗಳು ಅಂಬೇಡ್ಕರ್ ಕನಸುಗಳನ್ನು ಗಾಳಿಗೆ ತೂರಿದಂತಾಗಿದೆ. ಸಮಾನತೆಯ ಕನಸಿನ ಹರಿಕಾರ ಹಾಗೂ ಶ್ರೇಷ್ಠ ದಾರ್ಶನಿಕರೆನಿಸಿದ ಅಂಬೇಡ್ಕರ್ ರ ಆಶಯಗಳು ಪ್ರಸಕ್ತ ದಿನಗಳಲ್ಲಿ ಹಲವು ಕ್ಷುಲ್ಲಕ ಕಾರಣಗಳಿಗೆ ಎರವಾಗುತ್ತಾ ನೈಜ ಅಂಶಗಳಿಗೆ ಹಿನ್ನೆಡೆ ಆಗುತ್ತಿರುವುದು ದುಖದ ಸಂಗತಿ.
ಇನ್ನು ಸುಪ್ರೀಂಕೋರ್ಟು ನೀಡಿರುವ ಶಿಕ್ಷಣ ಕುರಿತ ಹಕ್ಕುಗಳ ಕುರಿತು ಮಾತನಾಡುವುದಾದರೆ, ನಮ್ಮ ದೇಶದಲ್ಲಿ ರೈತರು ಮತ್ತು ಶ್ರಮಿಕ ವರ್ಗಗಳೇ ಹೆಚ್ಚು ಪ್ರಮಾಣದಲ್ಲಿವೆ, ಸಿರಿವಂತರ ಮಕ್ಕಳನ್ನು ಎಲ್ ಕೆ ಜಿ/ಯುಕೆಜಿಯಿಂದಲೇ ಬಾರಿ ಮೊತ್ತದ ಡೊನೇಷನ್ ತೆತ್ತು ಖಾಸಗಿ ಶಾಲೆಗಳೆಂಬ ಅಡ್ಡೆಗಳಿಗೆ ಸೇರಿಸಲಾಗುತ್ತದೆ. ಸರ್ಕಾರಿ ಶಾಲೆಯ ಗುಣಮಟ್ಟಕ್ಕಿಂತ ಖಾಸಗಿ ಶಾಲೆಗಳ ಕಲಿಸುವ ಗುಣಮಟ್ಟ ಶ್ರೇಷ್ಠ ಎಂದು ಯಾವ ಪುಣ್ಯಾತ್ಮ ತಲೆತುಂಬಿದನೋ ಕಾಣೆ. ಖಾಸಗಿ ಶಾಲೆಗಳಲ್ಲಿ ಶಿಕ್ಷಣ ಕೊಡಿಸುವುದೇ ತಮ್ಮ ಜೀವನದ ಪರಮಗುರಿ ಎಂದು ಭಾವಿಸುವ ಪೋಷಕರು ಅದಕ್ಕಾಗಿ ಸಮಯ/ದುಡಿಮೆ ಮತ್ತು ಶಿಫಾರಸ್ಸುಗಳನ್ನು ಬಳಸಿ ತಮ್ಮ ಮಕ್ಕಳಿಗೆ ಸೀಟು ಗಿಟ್ಟಿಸಿಕೊಂಡು ಬಿಡುತ್ತಾರೆ. ತಮ್ಮ ಮಗು/ಮಗ/ಮಗಳು ದಕ್ಷಿಣ ಕನ್ನಡ ಜಿಲ್ಲೆಯ ಯಾವುದಾದರೊಂದು ಖಾಸಗಿ ಅಡ್ಡೆಯಲ್ಲಿ ಕಲಿಯುತ್ತಿದೆ ಎಂಬುದೆ ಒಂದು ಪ್ರತಿಷ್ಠೆಯ ಸಂಗತಿಯಾಗಿ ಬಿಡುತ್ತಿದೆ. ಅಲ್ಲಿ ಸೀಟು ಗಿಟ್ಟಿಕೊಂಡ ಮೇಲೆ ಆ ಮಕ್ಕಳ ಕಲಿಕೆಗೆ ಇವರೇ ಒತ್ತಾಸೆಯಾಗಿ ನಿಂತು ಶ್ರಮಹಾಕಿ ಬಿಡುತ್ತಾರೆ. ಇಂಥಹದ್ದೇ ಆಸ್ಥೆಯನ್ನು ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸುವಾಗ ಯಾಕೆ ತೆಗೆದುಕೊಳ್ಳುವುದಿಲ್ಲ?
            ಇವತ್ತು ವಿಶ್ವ ಸಂಸ್ಥೆಯ ಸಹಯೋಗದೊಂದಿಗೆ ಸರ್ಕಾರ ಶಾಲಾ ಕಾಲೇಜುಗಳನ್ನು ತೆರೆದಿದೆ, ಅತ್ಯುನ್ನತ ದರ್ಜೆಯ ಶಿಕ್ಷಕ/ಶಿಕ್ಷಕಿಯರನ್ನು ನೇಮಿಸಿಕೊಂಡಿದೆ, ಮಕ್ಕಳನ್ನು ಶಾಲೆಗೆ ಆಕರ್ಷಿಸಲು ಅನೇಕ ಕಸರತ್ತುಗಳನ್ನು ಮಾಡುತ್ತಿದೆ, ಬಟ್ಟೆ, ಪುಸ್ತಕ , ಉಚಿತ ಊಟ ಹೀಗೆ ತರಹೇವಾರಿ ಮಾದರಿಯಲ್ಲಿ ಸರ್ಕಾರಿ ಶಾಲೆಗಳು ಇವೆ, ಉಚಿತ ಪ್ರವಾಸ, ವಿಜ್ಞಾನದ ಕಲಿಕೆಗೆ ವಿಶೇಷ ಪ್ರೋತ್ಸಾಹ ಧನ, ಆಟೋಟ ಚಟುವಟಿಕೆಗೆ ವಿಶೇಷ ವೆಚ್ಚದ ಕಾರ್ಯಕ್ರಮಗಳು, ಶಿಕ್ಷಕರನ್ನು ಹುರಿದುಂಬಿಸಲು ವಿಶೇಷ ತರಬೇತಿಗಳು, ಅವರ ಉಸ್ತುವಾರಿಗೆ ಮೇಲಾಳುಗಳು ಹೀಗೆ ಏನೇನೋ ಇದ್ದರೂ ಸರ್ಕಾರಿ ಶಾಲೆಗಳಿಗೆ ಕೇವಲ ದುರ್ಬಲರ ಮಕ್ಕಳು ಮಾತ್ರ ಪ್ರವೇಶ ಪಡೆಯುತ್ತಿವೆ.ಕೆಲವು  ಶಿಕ್ಷಕರುಗಳ ಅಸಡ್ಡಾಳತನದಿಂದಾಗಿ ಆ ಮಕ್ಕಳು ಅರ್ದದಲ್ಲೇ ಶಾಲೆ ಬಿಡುವ ಸಂಧರ್ಭಗಳು ಬರುತ್ತಿವೆ. ರಾಜ್ಯದಾಧ್ಯಂತ 10500ಕ್ಕೂ ಹೆಚ್ಚು ಸಂಖ್ಯೆಯ ಸರ್ಕಾರಿ ಶಾಲೆಗಳನ್ನು ಮುಚ್ಚಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಆದರೆ ಪ್ರಾದೇಶಿಕ ಭಾಷೆಗಳನ್ನು ಉಳಿಸಿ ಬೆಳೆಸುವ ಸಲುವಾಗಿ ಕೇಂದ್ರ ಸರ್ಕಾರ 1500ಕ್ಕೂ ಹೆಚ್ಚು ಶಾಲೆಗಳನ್ನು ತೆರೆಯಲು ರಾಜ್ಯಕ್ಕೆ ಆದೇಶಿಸಿದೆ. ಆದರೆ ಮಾರ್ಗದರ್ಶಿ ಸೂತ್ರಗಳನ್ನು ಉಲ್ಲಂಘಿಸಿ ಲೆಕ್ಕವಿಲ್ಲದಂತೆ ಬಂಡವಾಳಶಾಹಿಗಳೀಗೆ ಖಾಸಗಿ ಅಡ್ಡೆಗಳನ್ನು ತೆರೆಯಲು ಅವಕಾಶ ನೀಡಿರುವ ರಾಜ್ಯ ಸರ್ಕಾರ ಸರಿಯಾದದ್ದೊಂದು ಶಿಕ್ಷಣ ನೀತಿಯನ್ನು ರೂಪಿಸಿಕೊಳ್ಳದೇ ಮನಬಂದಂತೆ ನಿರ್ಧಾರಗಳನ್ನು ಪ್ರಕಟಿಸುತ್ತಿದೆ.ಶಿಕ್ಷಕರಿಗೆ ಸರಿಯಾದ ತರಬೇತಿ ಮತ್ತು ಸಿದ್ದತೆಗಳಿಲ್ಲದೇ ಪ್ರಾಥಮಿಕ ಮತ್ತು ಕಾಲೇಜು ಹಂತದಲ್ಲಿ ಕೇಂದ್ರ ಮಾದರಿಯ ಪಠ್ಯ ರೂಪಿಸಿ ಅನುಷ್ಠಾನಗೊಳಿಸಲು ಮುಂದಾಗಿದೆ.ಪಠ್ಯದಲ್ಲಿ ಇತಿಹಾಸವನ್ನು ತಿರುಚಿ ಕೇಸರಿಮಯವಾದ ಪಠ್ಯಗಳನ್ನು ಬಲವಂತವಾಗಿ ಹೇರುವ ಪ್ರಕ್ರಿಯೆ ಜಾರಿಯಲ್ಲಿದೆ. ಖಾಸಗಿ ಶಿಕ್ಷಣ ಅಡ್ಡೆಗಳು ಮಾತ್ರ ಯಾವ ನಿಯಮಗಳಿಗೂ ಒಳಪಡದೇ ಮನಸೋಇಚ್ಚೆ ಸುಲಿಗೆ ಮಾಡುವ ಕೇಂದ್ರಗಳಾಗಿ ಬಡವರಿಗೆ ಎಟುಕುಲಾರದ ಸ್ಥಿತಿಯಲ್ಲಿದ್ದವು. ಆದರೆ ಈ ಎಲ್ಲಾ ಗೋಂದಲಗಳ ನಡುವೆ   ಶೇ.25ಮೀಸಲು ಸೀಟುಗಳನ್ನು ಖಾಸಗಿ ಶಾಲೆಗಳಲ್ಲೂ ನೀಡುವಂತೆ ಸುಪ್ರೀಂ ಕೋರ್ಟು ಆದೇಶ ನೀಡಿರುವುದು ಸ್ವಾಗತಾರ್ಹವೇ ಆಗಿದೆ. ಆದರೆ ಶೆ.25ರ ಮೀಸಲಿನಿಂದ ಅಲ್ಪ ಸಂಖ್ಯಾತರ ಪಟ್ಟಿಯಲ್ಲಿ ಬರುವ ಮಾರ್ವಾಡಿಗಳು, ಜೈನರು , ಕ್ರಿಶ್ಚಿಯನ್ನರು, ಮುಸ್ಲಿಂರ ವಿದ್ಯಾಸಂಸ್ಥೆಗಳಿಗೆ ವಿನಾಯಿತಿ ನೀಡಿರುವ ಕ್ರಮ ಮಾತ್ರ ಆಕ್ಷೇಪಾರ್ಹಾ ವಾಗಿದೆ. ದೇಶದಲ್ಲಿ ಶಿಕ್ಷಣವನ್ನು ಮಾರಾಟದ ಸರಕಾಗಿ ಇಟ್ಟವರೇ ಈ ಅಲ್ಪಸಂಖ್ಯಾತರು! ಹೀಗಿರುವಾಗ ಇಂತಹವರ ಸಂಸ್ಥೆಗಳಿಗೆ ರಿಯಾಯ್ತಿ ನೀಡುವ ಕ್ರಮ ಸಾಧುವಲ್ಲ.ಅಷ್ಟಕ್ಕೂ ಸುಪ್ರೀಕೋರ್ಟಿನ ಈ ಆದೇಶ ನಿಜಕ್ಕೂ ಜಾರಿಗೆ ಬರುವುದೇ ಎಂಬುದು ಪ್ರಶ್ನೆ? ಏಕೆಂದರೆ ಸಂವಿಧಾನ ಬದ್ದವಾಗಿ ಈ ದೇಶದ ಜನರಿಗೆ ಸಾಮಾಜಿಕ ನ್ಯಾಯಕ್ಕಾಗಿ ಹತ್ತು ಹಲವು ಅವಕಾಶಗಳನ್ನು ಕಲ್ಪಿಸಲಾಗಿದ್ದರೂ ಆಢಳಿತಾಗಾರರ ಇಚ್ಚಾಶಕ್ತಿಯ ಕೊರತೆಯಿಂದಾಗಿ ಅನುಷ್ಠಾನಗೊಳ್ಳದೇ ನೆನೆಗುದಿಗೆ ಬಿದ್ದಿವೆ ಎಂಬುದು ಶೋಚನೀಯಕರ ಸಂಗತಿ.

Wednesday, April 4, 2012

"ಪ್ರೀತಿ"ಯ ಅಗಲಿಕೆ.....:(


//'ಪ್ರೀತಿ'ಯ ಬನದಲ್ಲಿ ಅರಳಿದ
ಬೊಗಸೆ ಕಂಗಳ ಮುದ್ದು ಕಂದ
ಕನಸು, ಬಯಕೆಗಳ ಗಮ್ಯ ತಲುಪುವ
ಮೊದಲೇ ಅನಿರೀಕ್ಷಿತವಾಗಿ
ಅಗಲಿಕೆ ಸರಿಯೇ? 

            //ಬೆಟ್ಟದಷ್ಟು ಆಸೆ
            ದಕ್ಕಿಸಿಕೊಳ್ಳುವ ತವಕ

            ಕುತೂಹಲದ ತುಂಟನಗೆ
            ಕನಸು ತಣಿಯುವ ಮುನ್ನ
            ವಿಧಿ ಕಸಿದದ್ದು ಸರೀನಾ?

//ಅವತ್ತು ಅಮ್ಮನ ದುಗುಡ ಧಾವಂತ
ಕಣ್ಣೀರ ಕಥೆಯ ಅನಾವರಣ
ಅಸಹಾಯಕತೆ, ಅಭದ್ರತೆಯ ಬೀತಿ
ಮದ್ಯೆ ಆಶಾಕಿರಣ,ನಂಬಿದ ದೇವನ
ನೆಮ್ಮದಿಯಲ್ಲಿ ಹೋದದ್ದೆಲ್ಲಿಗೆ?

            //ಸಂಕಟದ ಸಂತೆಯಲ್ಲಿ
            ಬದುಕಿನ ಜಂಜಡದಲ್ಲಿ
            ನಂಬಿದ ಸಖನ ಸೇವೆಯಲ್ಲಿ
            ಉದಿಸಿದ ಅಭದ್ರತೆಯ ಭಾವ
            ವಿಧಿಯಾಟಕ್ಕೆ ಶರಣಾಗಿದ್ದು ಸರಿಯೇ?

(ವರ್ಷದ ಮೊದಲ ರೇವತಿ ಮಳೆ-ಗಾಳಿಗೆ ಹಾಸನ ಜಿಲ್ಲೆಯ ಅರಕಲಗೂಡಿನಲ್ಲಿ ನಡೆದ ರಸ್ತೆ ದುರಂತದಲ್ಲಿ ಪ್ರೀತಿ ಮತ್ತು ಪ್ರೀತಿಯ ಅಮ್ಮ ವಿಧಿವಶರಾದರು ತನಿಮಿತ್ತ ಈ ಅಕ್ಷರ ಕಂಬ

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...