Sunday, September 8, 2019

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

Image result for media job cuts

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತಿದೆ. ಹೀಗೆ ತೆಗೆಯುವಾಗ ಬಯಾಸ್ಡ್ ಆಗಿಯೂ ತೆಗೆಯಲಾಗುತ್ತಿದೆ ಎಂಬ ಮಾಹಿತಿ ಇದೆ. ಟೀಂ ಜೊತೆ ಗುರುತಿಸಿಕೊಂಡು ಬಂದವರ ಕಥೆ ಅಷ್ಟೇ!

ಮಾಧ್ಯಮ ಉದ್ಯಮದ ಸ್ವರೂಪ ಪಡೆದು ಕೊಂಡಿದೆ, ಆದರೆ ಉದ್ದಿಮೆಗಳು ಕಡ್ಡಾಯವಾಗಿ ಪಾಲಿಸ ಬೇಕಾದ ಕಾನೂನು ನಿಯಮಗಳನ್ನು ಪಾಲಿಸದಿರುವುದು ಪತ್ರಕರ್ತರ ಅಸ್ಥಿರತೆಗೆ ಕಾರಣವಾಗಿದೆ. ರಾಜಕಾರಣಿಗಳು, ಬೃಹತ್ ಬಂಡವಾಳಷಾಹಿಗಳು, ರಿಯಲ್ ಎಸ್ಟೇಟ್ ಕುಳಗಳು ಸ್ವಾರ್ಥ ಹಿತಾಸಕ್ತಿ ಸಾಧನೆಗಾಗಿ ಮಾಧ್ಯಮದ ಅಂಗಡಿಗಳನ್ನು ತೆರೆದು ಪತ್ರಿಕೋಧ್ಯಮಕ್ಕೆ ಕಳಂಕ ತಂದಿರುವುದು ಗುಟ್ಟಾಗಿ ಉಳಿದಿರುವ ಸಂಗತಿಯೇನಲ್ಲ. ಅವರಿಗೆ ಬೇಡವೆನಿಸಿದಾಗ ಮಾಧ್ಯಮದ ಅಂಗಡಿಯ ಬಾಗಿಲೆಳೆದು ಬಿಡುತ್ತಾರೆ, ಪತ್ರಕರ್ತ ಅಸಹಾಯಕನಾಗಿ ಬೀದಿಗೆ ನಿಲ್ಲುತ್ತಾನೆ. ಒಂದು ಮೋಟಾರ್ ಕಂಪನಿ, ವಾಚ್ ಕಂಪನಿ ಬಾಗಿಲು ಹಾಕಿಕೊಂಡರೆ ಅಲ್ಲಿನ ಕಾರ್ಮಿಕರಿಗೆ ಸ್ವಾವಲಂಬನೆಯ ಕಸುಬುದಾರಿಕೆ ಕೈ ಹಿಡಿಯುತ್ತದೆ. ಆದರೆ ವರ್ತಮಾನದ‌ ಪತ್ರಕರ್ತ ಅಕ್ಷರಶಃ ನಡು ರಸ್ತೆಯಲ್ಲಿ ನಿಂತ ಬಾಲಕರಾಗಿ ಬಿಡುತ್ತಾರೆ.

ಈ ಹೊತ್ತಿನಲ್ಲಿ ಅಪಾಯಕ್ಕೆ ಸಿಲುಕಿದವನು ಮಾತ್ರ ಪತ್ರಕರ್ತನೇ ಆಗಿದ್ದಾನೆ. ಊರಿನ ಉಸಾಬರಿಗೆ ತಲೆ ಕೆಡಿಸಿಕೊಂಡು ನ್ಯಾಯ ಒದಗಿಸಲು ಪರದಾಡುವವನಿಗೆ ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಅಸಹಾಯಕನಾಗಿ ಬಿಡುತ್ತಾನೆ.  ಒಂದು ದಶಕದಲ್ಲಿ ಪತ್ರಕರ್ತ ವೃತ್ತಿಗೆ ತಿಲಾಂಜಲಿ ಹಾಡಿ ಕರಿಕೋಟು ಹಾಕುವ ವಕೀಲರಾಗಿ, ಎಂಎನ್ ಸಿಗಳಲ್ಲಿ, ಸರ್ಕಾರಿ ವ್ಯವಸ್ಥೆಯಲ್ಲಿ  ವೃತ್ತಿ ಸಂಬಂದಿತ ಉದ್ಯೋಗ ಹುಡುಕಿಕೊಂಡ ಬುದ್ದಿವಂತ ಪತ್ರಕರ್ತರನ್ನು‌ ಗಮನಿಸಿದ್ದೇನೆ.

ಆದರೆ ಹಳೇ ತಲೆಮಾರು, ಹೊಸ ತಲೆಮಾರುಗಳ ವರದಿಗಾರ/ಸಂಪಾದಕ/ಕಾಪಿ ಎಡಿಟರ್/ನ್ಯೂಸ್ ಹೆಡ್ ಎಂಬ ಪದನಾಮಗಳಿಂದ ಆಚೆಗೆ ನೋಡಿಲ್ಲ. ಪತ್ರಕರ್ತ ತನ್ನ ಸಾಮರ್ಥ್ಯ ಕ್ಕೆ ಅನುಗುಣವಾಗಿ ಹೊಸ ಸಾಧ್ಯತೆಗಳನ್ನು ಕಂಡುಕೊಳ್ಳ ಬೇಕಾಗಿದೆ. ಜರ್ನಲಿಸಂ ಎಂದಾಕ್ಷಣ ಅದು ಟಿವಿ ರಿಪೋರ್ಟಿಂಗ್, ಕೆಮರಾಮ್ಯಾನ್, ಪತ್ರಿಕೆ ವರದಿಗಾರನೇ ಆಗಬೇಕಿಲ್ಲ ಅಲ್ಲವೇ? ನನ್ನ ಅನುಭವದ ಪ್ರಕಾರ ಇದಿಷ್ಟೆ ಚಿಂತಿಸುವ ಕ್ರಮವನ್ನು ಬಾವಿಯೊಳಗಿನ ಕಪ್ಪೆಯ‌ ಮನಸ್ಥಿತಿ ಎನ್ನಬಹುದು.

ಕಾಲಕ್ಕನುಗುಣವಾಗಿ ಆಗುತ್ತಿರುವ ಬದಲಾವಣೆಗಳು, ಮಾರುಕಟ್ಟೆಯ ಆದ್ಯತೆ, ಅಲ್ಲಿ ಸೃಷ್ಟಿಯಾಗುತ್ತಿರುವ ಅವಕಾಶಗಳನ್ನು ಗ್ರಹಿಸುವ ಶಕ್ತಿಯನ್ನು ಪತ್ರಕರ್ತರು ಕಳೆದು ಕೊಂಡಿದ್ದಾರೆ. ಇದು ನವೋದ್ಯಮಗಳ ಕಾಲ, ಈ ಸಂದರ್ಭದಲ್ಲಿ ಪತ್ರಕರ್ತ ಕಣ್ಣೋಟ ಏನಿರ ಬೇಕು, ಪರ್ಯಾಯಗಳನ್ನು ಹುಡುಕುವುದು ಹೇಗೆ ಎಂಬುದನ್ನು ಕಂಡುಕೊಳ್ಳದ ಹೊರತು ಪತ್ರಕರ್ತರು ಖಂಡಿತಾ ಉದ್ದಾರ ಅಗುವುದಿಲ್ಲ.

ಮುದ್ರಣ ಮಾಧ್ಯಮ/ದೃಶ್ಯ ಮಾಧ್ಯಮಗಳು (ಸುದ್ದಿ ಮಾಧ್ಯಮಗಳು ಮಾತ್ರ) ಲಾಭದಾಯಕವಾಗಿ ನಡೆಯುತ್ತಿಲ್ಲ. ಅವು ಅಸ್ತಿತ್ವ ಉಳಿಸಿಕೊಳ್ಳಲು ಏನು ಮಾಡುತ್ತಿವೆ ಸೂಕ್ಷ್ಮ ವಾಗಿ ಗಮನಿಸಿ. ಪ್ರಜಾವಾಣಿ/ಡೆಕ್ಕನ್ ಹೆರಾಲ್ಡ್, ಟೈಮ್ಸ್ ಆಫ್ ಇಂಡಿಯಾ, ಪಬ್ಲಿಕ್ ಟಿವಿಯಂತಹ ಬೆರಳೇಣಿಕೆಯ ಕಂಪನಿ ಗಳು ಮಾತ್ರ ಶತಾಯ ಗತಾಯ ಉಳಿವಿಗೆ ಈಗಾಗಲೆ ಇಂತಹ ಪ್ರಯತ್ನ ಮಾಡುತ್ತಿವೆ. ಅವರ ಪ್ರಯತ್ನಕ್ಕೆ ಸಾಥ್ ನೀಡುವ ಸಂಪನ್ಮೂಲವಿದೆ ಆದರೆ ಸಂಪನ್ಮೂಲ ವ್ಯಕ್ತಿಗಳೇ ಸಿಗುತ್ತಿಲ್ಲ. ಅಲ್ಲಿ ನವೋದ್ಯಮದ ಕೆಲಸಗಳು ಖಾಲಿ ಇವೆ! ಇದು ಎಷ್ಟು ಜನರ ಅರಿವಿಗೆ ಬಂದಿದೆ?

ಎಂ ಎನ್ ಸಿ ಗಳು, ಸರ್ಕಾರಿ ಇಲಾಖೆಗಳು ಹೊಸ ಸಾಧ್ಯತೆಗಳಿಗೆ ತೆರೆದುಕೊಳ್ಳಲು ಪ್ರಯತ್ನಿಸುತ್ತಿವೆ,  ಹೊಸ ಹೊಸ ವೃತ್ತಿ ಅವಕಾಶಗಳು ತೆರೆದು ಕೊಂಡಿವೆ. ಎಷ್ಟು ಮಂದಿಗೆ ಇದು ಗೊತ್ತಿದೆ? ನಾವೇ ಸೃಷ್ಟಿಸುವ ಸೃಜನಶೀಲ ಕಸುಬುದಾರಿಕೆಗಳು ಇವೆ.  ವೃತ್ತಿ ಜೀವನದಲ್ಲಿ ಬರಿಯ ಜಾಹೀರಾತು,  ಶಹಬ್ಬಾಸ್ ಗಿರಿ, ಗೌರವ ಇಟ್ಟುಕೊಂಡು ಏನ್ ಮಾಡ್ತೀರಿ? ಬದುಕಿಗೆ ಅದು ಸ್ಥಿರತೆ ಒದಗಿಸುತ್ತಾ? ಸಹದ್ಯೋಗಿಗಳನ್ನೆ ಗೇಲಿ‌ಮಾಡಿಕೊಂಡು,  ಬದುಕುವುದನ್ನೆ ಸಹಿಸದೇ ಅಸೂಯೆ ಬೆಳೆಸಿಕೊಂಡು, ದ್ವೇಷಿಸಿಕೊಂಡು, ಬಕೆಟ್ ಹಿಡಿದುಕೊಂಡು ಬದುಕುವ  ಬದುಕು ಒಂದು ಬದುಕೆ?  ಈಗಲಾದರೂ ಎಚ್ಚೆತ್ತುಕೊಳ್ಳಿ ವೃತ್ತಿ ಜೀವನಕ್ಕೆ ಪರ್ಯಾಯ ಕಂಡುಕೊಳ್ಳಿ, ಯೋಜನೆ ಮಾಡಿ.

ಪತ್ರಕರ್ತರ ಕ್ಷೇಮಾಭಿವೃದ್ದಿಗೆ ಚಿಂತಿಸುವ ಕೆಲಸವನ್ನು, ಪರ್ಯಾಯ ಸಾಧ್ಯತೆಗಳನ್ನು ತಿಳಿಸುವ ಕೆಲಸವನ್ನು ಮಾಧ್ಯಮ ಅಕಾಡೆಮಿ‌ ಮಾಡಬೇಕು. ಆದರೇನು ಮಾಡುವುದು ಅಲ್ಲಿ ಬಂದು ಕೂರುವವರಲ್ಲಿಯೇ ಹೊಸ ಹೊಳಹುಗಳಿಲ್ಲ, ಇಚ್ಛಾಶಕ್ತಿ ಕೊರತೆ. ಹೀಗಿರುವಾಗ ಪತ್ರಕರ್ತರನ್ನ ಅವರವರು ನಂಬಿಕೊಂಡ ದೇವರೇ ಕಾಪಾಡ ಬೇಕಷ್ಟೇ!

Tuesday, August 13, 2019

ದುರ್ಯೋಧನ ಕಣ್ಣೋಟದ ಮುನಿರತ್ನ ಕುರುಕ್ಷೇತ್ರ!



ವ್ಯಾಸ ಮಹರ್ಷಿ ರಚಿಸಿದ ಮಹಾಭಾರತ ಕಥನದ ಪ್ರತೀ ಪಾತ್ರಗಳು ಬಹುತ್ವ ಭಾರತದ ಸಮಾಜದಲ್ಲಿ ಕಾಣಬರುವ ಪಾತ್ರಗಳೇ ಅನಿಸುತ್ತವೆ. ಮಹಾಭಾರತದ ಯಾವುದೇ ಪಾತ್ರಗಳನ್ನು ತೆಗೆದುಕೊಳ್ಳಿ, ಆ ಪಾತ್ರದ ಮೂಲಕ ಮಹಾಭಾರತವನ್ನು ನೋಡಿದರೆ ಅದೇ ಸರಿ ಎನಿಸಿ ಬಿಡುತ್ತದೆ. ಬಹುಶ: ಇಂತಹ ಅಪರೂಪದ ಗುಣ ಜಗತ್ತಿನ ಯಾವುದೇ ಭಾಷೆಯ ಸಾಹಿತ್ಯದ ಪಾತ್ರಗಳಿಗೆ ಲಭಿಸಿರಲಾರದೇನೊ.

ಮಹಾಭಾರತದ ಉಪಕಥೆಗಳನ್ನು ಆಧಾರವಾಗಿಟ್ಟು ಕೊಂಡು ಕೆಲವು ಸಿನಿಮಾಗಳು ಬಂದಿವೆ. ತೆಲುಗಿನಲ್ಲಿ ಎನ್ ಟಿ ರಾಮರಾವ್ ಸೀರಿಸ್ ಸಿನಿಮಾಗಳನ್ನು ಮಾಡಿದರೆ, ಹಿಂದಿಯಲ್ಲಿ ಕಿರು ತೆರೆಯ ಧಾರವಾಹಿಗಳಾಗಿ ಮಹಾಭಾರತದ ಪಾತ್ರಗಳು ಜನರ ಮನಸ್ಸಿನಲ್ಲಿ ಅಚ್ಚೊತ್ತಿವೆ. ಕನ್ನಡದಲ್ಲಿ ಡಾ ರಾಜ್ ಕುಮಾರ್ ಅಭಿನಯದ ‘ಬಬ್ರುವಾಹನ’ ಸಾರ್ವಕಾಲಿಕ ಮುದ್ರೆಯೊತ್ತಿದೆ. ಎನ್ ಟಿ ಆರ್ ಮತ್ತು ಡಾ ರಾಜ್ ಮರೆಯಾದ ನಂತರ ಪೌರಾಣಿಕ ಪಾತ್ರಗಳನ್ನು ಕಣ್ಣೆದುರು ತಂದು ನಿಲ್ಲಿಸುವ ತಾಕತ್ತಿನ ಸಿನಿಮಾಗಳು ಬಾರಲೇ ಇಲ್ಲ.


ಈಗ ಕುರುಕ್ಷೇತ್ರ ಕನ್ನಡ ಸಿನಿಮಾ ತೆರೆಗೆ ಬಂದಿದೆ. ಅದು ಅಪ್ಪಟ ಮುನಿರತ್ನ ಕುರುಕ್ಷೇತ್ರ! ಅದಕ್ಕೆ ತಕ್ಕಂತೆ  ‘ಏ ದಾಸಿ’, ‘ದಾಸ’, ‘ಪಂಚ ಪಲ್ಲಂಗಿನಿ’, ‘ಏ ಗೋಪಾಲ’, ‘ಏ ರಾಯಭಾರಿ’, ‘ಮಾಮಾ’ ಎಂಬ ಚಿತ್ರದ ಸಂಭಾಷಣೆಗಳು ಪಾತ್ರಧಾರಿಗಳ ಬಾಯಲ್ಲಿ ಯಥೇಚ್ಚವಾಗಿ ಥೇಟ್ ಸ್ಲಂ ಭಾಷೆಯಂತೆಯೇ ಕೇಳಿಸುತ್ತವೆ. ಇದು ಸಂಭಾಷಣೆಯ ಸಾಹಿತ್ಯದ ಪ್ರಭಾವವೋ ಅಥವ ಪಾತ್ರಧಾರಿಗಳು ಸಂಭಾಷಣೆ ಹೇಳುವ ರೀತಿಯೋ ಗೊತ್ತಿಲ್ಲ.   ಈ ಸಂಭಾಷಣೆಗಳಲ್ಲಿ ಡಾ ರಾಜ್ ಕುಮಾರ್ ಅಭಿನಯದ ಬಬ್ರುವಾಹನ ಚಿತ್ರದ ಸಂಭಾಷಣೆ ‘ಎಲವೋ ಪಾರ್ಥ’, ‘ಎಲವೋ ಶಿಖಂಡಿ’ ಎಂದು ಕೇಳಿಸಿಕೊಂಡಾಗ ಸಿಗುವ ಆನಂದ , ಮತ್ತೆ ಮತ್ತೆ ಕೇಳಿಸಿಕೊಳ್ಳ ಬೇಕೆನ್ನುವ ಆಪ್ತಅನುಭವ ಆಗುವುದೇ ಇಲ್ಲ.


ಮಹಾಭಾರತವನ್ನು ಸಂಪೂರ್ಣವಾಗಿ ಸೆಲ್ಯೂಲಾಯ್ಡ್ ತೆರೆಯ ಮೇಲೆ ತರುವುದು ತ್ರಾಸದಾಯಕ ಕೆಲಸ. ಹಾಗಾಗಿಯೇ ವಿವಿಧ ಸಂದರ್ಭದ ಕಥಾನಕಗಳನ್ನು ಆಗಾಗ ತೆರೆಯ ಮೇಲೆ ತರಲಾಗುತ್ತಿದೆ. ಮುನಿರತ್ನ ಕುರುಕ್ಷೇತ್ರ ಕೂಡ ಅಂತಹುದ್ದೇ ಪ್ರಯತ್ನಗಳಲ್ಲೊಂದು. ನಿರ್ದೇಶಕ ನಾಗಣ್ಣ ಇಂತಹ ಪ್ರಯತ್ನದಲ್ಲಿ ಭಾಗಶ: ಯಶ ಕಂಡಿದ್ದಾರೆ.  ಈ ವರ್ಷದ ಬಿಗ್ ಬಜೆಟ್ ಪೌರಾಣಿಕ ಚಿತ್ರ, ಬಹು ನಿರೀಕ್ಷೆಯ ಚಿತ್ರ, 3ಡಿ ಎಫೆಕ್ಟ್ ಚಿತ್ರ ಎನ್ನುವುದೇ ಹೆಗ್ಗಳಿಕೆ. ಸಧ್ಯ ಸ್ಯಾಂಡಲ್ ವುಡ್ ನಲ್ಲಿ ಮಂಚೂಣಿ ತಾರೆಯಾಗಿರುವ ದರ್ಶನ್ ರ ಇಮೇಜ್ ಗಾಗಿ ಈ ಸಿನಿಮಾ ತೆಗೆದಂತಿದೆ. ಹಾಗಾಗಿಯೇ ಇಡೀ ಚಿತ್ರದ ಪ್ರಮುಖ ಪಾತ್ರ ದುರ್ಯೋಧನ. ದುರ್ಯೋಧನನ ಕಣ್ಣೋಟದಲ್ಲಿ ಕುರುಕ್ಷೇತ್ರದ ಕಥಾನಕವನ್ನು ಹೊಸೆಯಲಾಗಿದೆ. ದುರ್ಯೋಧನನ ದೃಷ್ಟಿಯಿಂದ ಕುರುಕ್ಷೇತ್ರ ನೋಡುವಾಗ ಪಾಂಡವರು ನೀತಿ ಬಿಟ್ಟವರೆಂದು, ಕೃಷ್ಣ ವಂಚಕನೆಂದು, ಕರ್ಣನನ್ನು ಬಹುದೊಡ್ಡ ತ್ಯಾಗಿಯೆಂದು, ಭೀಮನಿಗಿಂತ ದುರ್ಯೋಧನ ಪ್ರಬಲನೆಂದು ತೋರಿಸಲಾಗಿದೆ. ಜನಪದರ ಮನದಲ್ಲಿ ದಾಖಲಾಗಿರುವ ಮಹಾಭಾರತ ಕಥಾನಕಕ್ಕೆ ಭಿನ್ನವಾದ ಆಯಾಮವನ್ನು ಸೂಕ್ತ ಆಧಾರಗಳಿಲ್ಲದೇ ಕಟ್ಟಿಕೊಟ್ಟಂತೆ ಭಾಸವಾಗುತ್ತದೆ. ಆದರೆ ದುರ್ಯೋಧನ ಜನ ಸಾಮಾನ್ಯರ ಮನದಲ್ಲಿ ಉಳಿಯುವಂತೆ ದರ್ಶನ್,  ಪಾತ್ರ ನಿರ್ವಹಿಸಿದ್ದಾರೆ ಎಂಬುದು ಪ್ರಶಂಸನೀಯ.


ಚಿತ್ರ ಆರಂಭವಾಗುವುದೇ ಹುಟ್ಟಿನ ಕಾರಣಕ್ಕೆ ಯಾರು ಮೇಲು ಯಾರು ಕೀಳು, ಯಾಕೆ ಕೀಳು ಎಂಬುದನ್ನು ವಿವಿಧ ಪಾತ್ರಗಳ ಮೂಲಕ ಹೇಳಿಸುತ್ತಾ ಯಾರೂ ಮೇಲಲ್ಲ, ಯಾರೂ ಕೀಳಲ್ಲ ಎಂಬುದನ್ನು ಅಸ್ಪಷ್ಟವಾಗಿ ನಿರೂಪಿಸುತ್ತದೆ.  ಜಾತಿ ತಾರತಮ್ಯದ ಸೂಕ್ಷ್ಮಗಳನ್ನು ಧರ್ಮ ಸೂಕ್ಷ್ಮದೊಂದಿಗೆ ಬೆರೆಸುತ್ತಾ ಪ್ರೇಕ್ಷಕರನ್ನು ವಿಷಾದಕ್ಕೆ ತಳ್ಳುವುದು ಕೂಡ ಚಿತ್ರದ ಗಮನ ಸೆಳೆಯುವ ಅಂಶ. ಚಿತ್ರದ ಮೊದಲಾರ್ಧದಲ್ಲಿ ವಿಜೃಂಭಿಸುವ ದರ್ಶನ್ ಧುರ್ಯೋಧನ ಪಾತ್ರಧಾರಿಯಾಗಿ ಜನಮನದಲ್ಲಿ ರಿಜಿಸ್ಟರ್ ಆಗುವ ಹಾಗೆ ಪಾತ್ರವನ್ನು ನಿಭಾಯಿಸಿದ್ದಾರೆ. ಕೆಲವು ಕೊರತೆಗಳನ್ನು ಹೊರತು ಪಡಿಸಿದರೆ ಸಂಭಾಷಣೆ ಚೆನ್ನಾಗಿದೆ. ಹಳಗನ್ನಡವನ್ನು ಬಳಸಿದ್ದರೆ, ಸಂಭಾಷಣೆ ಮಾದರಿಯ ಹಾಡುಗಳನ್ನು ಬಳಸಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು. ಅಭಿಮನ್ಯು-ಭೀಷ್ಮ, ಕರ್ಣ-ಕುಂತಿ, ಶ್ರೀಕೃಷ್ಣ-ಅರ್ಜುನರ ನಡುವಿನ ಸಂಭಾಷಣೆ ಪ್ರೇಕ್ಷಕರ ಮನಸ್ಸಿಗೆ ತಾಕುವಲ್ಲಿ ಯಶಸ್ಸು ಕಂಡಿದೆ. ವಿ ಆರ್ ನಾಗೇಂದ್ರ ಪ್ರಸಾದ್ ಈ ಕಾರಣಕ್ಕೆ ಅಬಿನಂದನಾರ್ಹರು.


ಕಥೆಯ ನಿರೂಪಣೆ, ಸಂಗೀತ ಮತ್ತು ಛಾಯಾಗ್ರಹಣ ಚಿತ್ರದ ಪೋಷಣೆಗೆ ಕೆಲವು ದೃಶ್ಯಗಳಲ್ಲಿ ಸಹಕಾರಿಯಾಗಿಲ್ಲ. ಚಿತ್ರದ ಕೆಲವು ಸನ್ನಿವೇಶಗಳಲ್ಲಿ ಕಥೆಯ ಪೂರಕ ಅಂಶಗಳೇ ನಾಪತ್ತೆಯಾಗಿವೆ. ಉದಾಹರಣೆಗೆ ಕರ್ಣನ ಸಾರಥಿಯಾಗುವ ಶಲ್ಯ, ಅರ್ಜುನನ ಮೇಲೆ ಕರ್ಣ ಬಾಣ ಹೂಡುವಾಗ ಉಪಯೋಗಿಸ ಬೇಕಾದ ತಂತ್ರ ಹೇಳಿಕೊಡುವ ಪ್ರಸ್ತಾಪವೇ ಇಲ್ಲ... ಹಾಗೆಯೇ ಅರ್ಜುನ ಕರ್ಣನನ್ನು ಬಲಿ ತೆಗೆದುಕೊಂಡಾಗ, ತನ್ನ ಮಗ ಅಭಿಮನ್ಯುವನ್ನು ಕರ್ಣ ಮೋಸದಿಂದ ಬಿಲ್ಲು ಮುರಿದು ಕೊಂದಿದ್ದಕ್ಕೆ  ಪ್ರತಿಯಾಗಿ  ಕರ್ಣನನ್ನು ಬಲಿ ತೆಗೆದುಕೊಂಡ ವಿಷಯ ಪ್ರಸ್ತಾಪಕ್ಕೆ ಬರುವುದಿಲ್ಲ. ಇದು ಕಥೆಯ ವೀಕ್ ನೆಸ್. ಇಡೀ ಸಿನಿಮಾದಲ್ಲಿ ಸಂಭಾಷಣೆಯೊಂದಿಗೆ, ಸನ್ನಿವೇಶದೊಂದಿಗೆ ಸಾಥ್ ನೀಡ ಬೇಕಿದ್ದ ಸಂಗೀತ ಯಾವ ಹಂತದಲ್ಲಿಯೂ ದಾಖಲಾಗುವುದೇ ಇಲ್ಲ. ಕುರುಕ್ಷೇತ್ರದ ಬಹುದೊಡ್ಡ ನೆಗೆಟೀವ್ ಅಂಶ ಚಿತ್ರದ ಛಾಯಾಗ್ರಹಣ ಎಂದರೂ ತಪ್ಪಾಗಲಾರದರು. ಚಿತ್ರವನ್ನು, ಪಾತ್ರಧಾರಿಯನ್ನು ಪ್ರೇಕ್ಷಕನ ಕಣ್ಣೆದುರು ಅಚ್ಚಳಿಯದಂತೆ ಪ್ರತಿಷ್ಠಾಪಿಸುವ ಕೆಲಸವನ್ನು ಛಾಯಾಗ್ರಹಣ ಮಾಡಬೇಕಿತ್ತು. ಚಿತ್ರದ ಪ್ರಥಮಾರ್ಧದಲ್ಲಿನ ಲಾಂಗ್ ಶಾಟ್ ಗಳು ಚಿತ್ರದ ಓಟಕ್ಕೆ ಧಕ್ಕೆಯಾಗಿವೆ.


ಏಜ್ ಫ್ಯಾಕ್ಟರ್ ಕಾರಣಕ್ಕಾಗಿಯೋ ಏನೋ ಅಂಬರೀಶ್ ಮತ್ತು ಶ್ರೀನಾಥ್ ಅವರ ಸಂಭಾಷಣೆಗಳು ಪಾತ್ರಕ್ಕೆ ತಕ್ಕಂತೆ ಧ್ವನಿಸುವುದಿಲ್ಲ. ದಕ್ಕಿದ ಅವಕಾಶದಲ್ಲಿ ಭಾರತಿ, ಅವಿನಾಶ್ , ರವಿಶಂಕರ್, ರವಿಚಂದ್ರನ್, ಸ್ನೇಹಾ, ಶಶಿಕುಮಾರ್, ಅರ್ಜುನ್ ಸರ್ಜಾ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಅರ್ಜುನ್ ಸರ್ಜಾ ಕರ್ಣನಾಗಿ ಗಮನ ಸೆಳೆಯುವ ನಟನೆ ನೀಡಿದ್ದಾರೆ. ಪಾತ್ರಕ್ಕೆ ತಕ್ಕಂತೆ ಮಾಡ್ಯುಲೇಶನ್ ಮಾಡುವಲ್ಲಿ ದರ್ಶನ್, ರವಿಶಂಕರ್ ಮತ್ತು ಅರ್ಜುನ್ ಸರ್ಜಾ ಗೆಲ್ಲುತ್ತಾರೆ. ಭೀಮಾರ್ಜುನರು ಧುರ್ಯೋಧನ ಪಾತ್ರದ ಮುಂದೆ ಪೇಲವವಾಗಿ ಬಿಡುವುದು ಚಿತ್ರದ ಬಹು ದೊಡ್ಡ ಮೈನಸ್. ಇದ್ದುದರಲ್ಲಿ ದ್ರೌಪದಿಯಾಗಿ ಸ್ನೇಹ ಸಿಕ್ಕಅವಕಾಶದಲ್ಲಿ ಮಿಂಚುವ ಪ್ರಯತ್ನ ಮಾಡಿದ್ದಾರೆ.


ಚಿತ್ರದ ಹೈಲೇಟ್ ಅಂಶಗಳಲ್ಲಿ ದುರ್ಯೋಧನ, ಅಭಿಮನ್ಯು , ಕರ್ಣ, ಶ್ರೀ ಕೃಷ್ಣ, ಶಕುನಿ ಪಾತ್ರಗಳ ನಿರ್ವಹಣೆ, ಸಂಭಾಷಣೆ ಮತ್ತು ನಿರೂಪಣೆ ಚೆನ್ನಾಗಿದೆ. ಪೌರಾಣಿಕ ಚಿತ್ರಗಳಲ್ಲಿ ಇದೇ ಪ್ರಥಮ ಭಾರಿಗೆ ನಟಿಸಿರುವ ನಿಖಿಲ್ ಕುಮಾರ್ ಪಾತ್ರ ನಿರ್ವಹಣೆಗೆ ಶ್ರಮ ವಹಿಸಿರುವುದು ಎದ್ದು ಕಾಣುತ್ತದೆ. ಯುದ್ದದ ಸನ್ನಿವೇಶ ಮತ್ತು ಡೈಲಾಗ್ ಹೇಳುವ ಸಂದರ್ಭದಲ್ಲಿ ನಿಖಿಲ್ ಮಿಂಚುತ್ತಾರೆ ಅಷ್ಟೆ ಅಲ್ಲಿ ಅವರ ರಾಜಕೀಯ ಜೀವನದ ಜೊತೆಗೆ ಕಥಾನಕ ಥಳುಕು ಹಾಕಿಕೊಳ್ಳುವುದು ಕಾಕತಾಳಿಯವೇ ಇರಬೇಕು. ಬಹುಶ  ರವಿಚಂದ್ರನ್ ಅವರಿಗೆ ಪೂರ್ಣ ಪ್ರಮಾಣದ ಪೌರಾಣಿಕ ಚಿತ್ರದ ನಟನೆ ಇದೇ ಮೊದಲು ಇರಬಹುದು. ಸಹಜವಾಗಿ ರವಿಚಂದ್ರನ್ ಚಿತ್ರಗಳಲ್ಲಿ ಕಾಣಬರುವ ಸರಸ-ಸಲ್ಲಾಪದ ಸಂಗತಿಗಳು ಇಲ್ಲಿ ಕಣ್ಮರೆಯಾಗಿವೆ, ಇದು ರವಿಚಂದ್ರನ್ ಪ್ರೇಮಿಗಳಿಗೆ ನಿರಾಸೆ ಉಂಟು ಮಾಡಬಹುದು.


ಕನ್ನಡದಲ್ಲಿ ಪೌರಾಣಿಕ ಚಿತ್ರಗಳನ್ನು ನಿರ್ಮಿಸುವ ಸಾಹಸವನ್ನು ಇತ್ತೀಚಿನ ದಶಕಗಳಲ್ಲಿ ಮಾಡಿದ್ದು ಕಡಿಮೆ. ಅದು ಬೇಡುವ ಬಿಗ್ ಬಜೆಟ್, ದೀರ್ಘ ಕಾಲದ ನಿರ್ಮಾಣ ಹೊರೆಯಾಗುವ ಅಂಶಗಳು. ಇಂತಹ ಸಂದಿಗ್ಧತೆಯ ನಡುವೆಯೂ ಮುನಿರತ್ನ ಕುರುಕ್ಷೇತ್ರ ನಿರ್ಮಿಸುವ ಸಾಹಸಕ್ಕೆ ಕೈ ಹಚ್ಚಿದ್ದು, ತಾವಂದುಕೊಂಡ ಮಟ್ಟಿಗೆ ತೆರೆಯ ಮೇಲೆ ತಂದಿದ್ದು ಮೆಚ್ಚ ಬೇಕಾದ ಅಂಶ. ಮಹಾಭಾರತದ ದುರ್ಯೋಧನ, ಕರ್ಣ,ಅಭಿಮನ್ಯು, ಶಕುನಿ ಪಾತ್ರಗಳನ್ನು ಜನಮನದಲ್ಲಿ ಈ ಚಿತ್ರ ರಿಜಿಸ್ಟರ್ ಮಾಡಿದೆ. ಈ ಪ್ರಯತ್ನಕ್ಕೆ ಮುನಿರತ್ನರ ಜೊತೆ ಕೈ ಜೋಡಿಸಿದ ತಂತ್ರಜ್ಞರು, ಸಾಹಿತಿಗಳು ಅಭಿನಂದನಾರ್ಹರು. ದೊಡ್ಡ ಬಜೆಟ್ ಚಿತ್ರ ಮಾಡಿ ಉಳಿಯುವುದು ಕಷ್ಟ. ಈ ಕಾರಣಕ್ಕಾಗಿಯಾದರು ಚಿತ್ರವನ್ನು ಟೀಕೆ ಟಿಪ್ಪಣಿಗಳ ಹೊರತಾಗಿಯೂ ಗೆಲ್ಲಿಸುವುದು ಮುಖ್ಯ.

ರಾಜ್ಯದಲ್ಲೀಗ ಮಳೆ , ನೆರೆ, ಪ್ರವಾಹ, ಭೂ ಕುಸಿತದಿಂದ ಬಹುತೇಕ ಜಿಲ್ಲೆಗಳಲ್ಲಿ ಜನ ನಲುಗಿದ್ದಾರೆ. ಹೀಗಿರುವಲ್ಲಿ ಬಿಡುಗಡೆಯಾದ ಬಹು ನಿರೀಕ್ಷೆಯ ಚಿತ್ರ ಕುರುಕ್ಷೇತ್ರಕ್ಕೆ ಸಧ್ಯಕ್ಕೆ ಗಳಿಕೆಯಲ್ಲಿ ಯಶ ಕಾಣದಿರಬಹುದು. ಆದರೆ ಬಿಡುಗಡೆಯಾದ ಸ್ಥಳಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ನೆರೆ ಪೀಡಿತ ಜಿಲ್ಲೆಗಳಲ್ಲಿಯೂ ಚಿತ್ರ ಬಿಡುಗಡೆಯಾಗಲಿ,  ಮುಂದಿನ ದಿನಗಳಲ್ಲಿ ಯಶಸ್ಸು ಕಾಣಲಿ. ಚಿತ್ರದಿಂದ ಪಡೆದ ಸಂಭಾವನೆಯನ್ನು ಅಭಿಮನ್ಯು ಪಾತ್ರಧಾರಿ ನಿಖಿಲ್ ನೆರೆ ಸಂತ್ರಸ್ತರಿಗೆ ದಾನ ಮಾಡುವ ಘೋಷಣೆ ಮಾಡಿದ್ದಾರೆ. ಚಿತ್ರದ ಕೆಲವು ಪ್ರದರ್ಶನದ ಗಳಿಕೆಯಲ್ಲಿ ಸ್ವಲ್ಪ ಭಾಗವನ್ನು ಕೊಡಗು ಸಂತ್ರಸ್ತರಿಗೆ ನೀಡುವುದಾಗಿ ಮುನಿರತ್ನ ಮೊದಲೇ ಘೋಷಿಸಿದ್ದರು. ಇದು ಅಬಿನಂದನಾರ್ಹ. ಬಹಳ ದಿನಗಳ ನಂತರ ಬೆಳ್ಳಿ ತೆರೆಗೆ ಬಂದ ಪೌರಾಣಿಕ ಕನ್ನಡ ಚಿತ್ರವನ್ನು ಜನ ಸಾಮಾನ್ಯರು ನೋಡಿ ಪ್ರೋತ್ಸಾಹಿಸ ಬೇಕಾಗಿದೆ. ಸಾಮಾನ್ಯ ಥಿಯೇಟರ್ ಗಳಲ್ಲಿ ಚಿತ್ರದ ಪ್ರದರ್ಶನ ಟಿಕೆಟ್ ಬೆಲೆ ನಿಗದಿತ ದರಕ್ಕಿಂತ ದುಪ್ಪಟ್ಟಾಗಿದೆ.  ಬೆಂಗಳೂರಿನ ದೊಡ್ಡ ದೊಡ್ಡ ಮಾಲ್ ಗಳಲ್ಲಿ ಈ ಚಿತ್ರದ ಪ್ರದರ್ಶನಕ್ಕೆ ಟಿಕೆಟ್ ಒಂದಕ್ಕೆ ತಲಾ 900 ವಸೂಲು ಮಾಡಲಾಗುತ್ತಿದೆ, ಇದು ಹಗಲು ದರೋಡೆಯಲ್ಲದೇ ಮತ್ತೇನು? ನಿಯಂತ್ರಣ ಮಾಡ ಬೇಕಾದ ವಾರ್ತಾ ಇಲಾಖೆ ಏನು ಮಾಡುತ್ತಿದೆ?  

Thursday, July 25, 2019

‘ಪತ್ರಕರ್ತ’ ಆತ್ಮ ವಿಮರ್ಶೆಗೆ ಸಕಾಲ!


‘ಪತ್ರಕರ್ತ’ ಎಂದರೆ ಯಾರು? ವರ್ತಮಾನದ ಸೂಕ್ಷ್ಮಗ್ರಾಹಿ?, ಸಂವೇದನಾಶೀಲ, ವಿಚಾರವಂತ?, ಉತ್ತಮ ಅಭಿವ್ಯಕ್ತಿಕಾರ?, ಪಕ್ಷಾತೀತ ಧೋರಣೆಯವನು?, ಸಾಮಾಜಿಕ ಕಳಕಳಿಯುಳ್ಳವನು?, ಜಾತೀಯ ಧೋರಣೆ ಇಲ್ಲದವನು?, ಅಸಹಾಯಕರ ಖಡಕ್ ಪ್ರತಿನಿಧಿ?, ಸಮಾಜದ ಮಾದರಿ ವ್ಯಕ್ತಿ? ಊಹುಂ ಸುತಾರಾಂ ಇದ್ಯಾವುದು ಅಲ್ಲವೇ ಅಲ್ಲ ಎಂಬ ಧುರಿತ ಕಾಲಘಟ್ಟದಲ್ಲಿದ್ದೇವೆ.

ಒಟ್ಟು ವ್ಯವಸ್ಥೆಯಲ್ಲಿ ಪತ್ರಕರ್ತ ಅಭಿವ್ಯಕ್ತಿಗೆ ಸ್ವಯಂ ಕಡಿವಾಣ ಹಾಕಿಕೊಳ್ಳದೇ ಕೊಂಚ ಎಡವಿದರೂ ‘ಸಿಟಿಜನ್ ಜರ್ನಲಿಸಂ’ನ ಈ ಹೊತ್ತಿನಲ್ಲಿ ಪ್ರಶ್ನಾತೀತರಾಗಿ ಉಳಿಯುವುದು ಸಾಧ್ಯವೇ ಇಲ್ಲ. ಪ್ರತಿ ಸುದ್ದಿಯ ಆಚೀಚೆಗಳನ್ನು ಭೂತಗನ್ನಡಿ ಹಿಡಿದು ಹರಾಜು ಹಾಕಲು ಸಾಮಾಜಿಕ ಜಾಲತಾಣದ ಸೇನಾನಿಗಳು ಸಜ್ಜಾಗಿರುತ್ತಾರೆ. ಹಾಗಾಗಿ ಪತ್ರಕರ್ತನ ಪ್ರತೀ ಹೆಜ್ಜೆಯಲ್ಲೂ ಮುಳ್ಳಿನ ಹಾದಿಯದ್ದೇ ಸವಾಲು!.


ಆಧುನೀಕತೆಗೆ ಮುಂಚೆ ಸಾರ್ವತ್ರಿಕ ಸಂವಹನಕ್ಕಿದ್ದ ಮುಕ್ತ ಆಯ್ಕೆ ಮುದ್ರಣ ಮಾಧ್ಯಮ ಒಂದೇ. ಅವತ್ತಿಗೆ ಸಾಮಾಜಿಕ ಸಂಘಟನೆಗೆ, ಜಾಗೃತಿಗೆ ಸ್ವಾತಂತ್ರ್ಯದ ಕಿಚ್ಚಿಗೆ ಗಾಂಧಿ, ಅಂಬೇಡ್ಕರ್, ಬಾಲ ಗಂಗಾಧರ ತಿಲಕ್  ಆಯ್ಕೆ ಮಾಡಿಕೊಂಡಿದ್ದು ಮಾಧ್ಯಮಗಳನ್ನೆ. ಅತ್ಯಂತ ಯಶಸ್ವಿಯಾಗಿ ಪತ್ರಕರ್ತರಾಗಿದ್ದ ಅವರು ಸಾರ್ವಜನಿಕ ವ್ಯವಸ್ಥೆಯಲ್ಲಿ ದೊಡ್ಡ ಆಂಧೋಲನಗಳನ್ನೆ ಮಾಡಿದರು. ಜನರಿಗೆ ಹೇಳ ಬೇಕಾದ್ದನ್ನು ಪರಿಣಾಮಕಾರಿಯಾಗಿ ಹೇಳಿದರು, ಜನರನ್ನು ಚಿಂತಿಸುವಂತೆ ಮಾಡಿದರು. ಪತ್ರಕರ್ತರೆಂದರೆ ‘ಬುದ್ದಿಜೀವಿ’ ಗಳು, ದಮನಿತರ ಧ್ವನಿ ಎಂಬ ಭರವಸೆ ತುಂಬಿದರು. ಈ ಹೊತ್ತಿಗೂ ಭಾರತ ದೇಶ ಕಂಡ ಗ್ರೇಟ್ ಜರ್ನಲಿಸ್ಟ್ಸ್ ಎಂದರೆ ಅದು ಮಹಾತ್ಮ ಗಾಂಧಿ ಮತ್ತು ಡಾ ಬಿ ಆರ್ ಅಂಬೇಡ್ಕರ್ ಮಾತ್ರ.

ಈಗ ಕಾಲ ಬದಲಾಗಿದೆ, ಆಧುನಿಕತೆ ಬಂದಿದೆ. ಮುದ್ರಣ ಮಾಧ್ಯಮವನ್ನು ಮೀರಿಸುವಂತೆ ಟಿವಿ ವಾಹಿನಿಗಳಿವೆ, ಅಂತರ್ಜಾಲ ತಾಣಗಳಿವೆ, ಎಲ್ಲವನ್ನು ಮೀರಿಸುವಂತೆ ನವ ಮಾಧ್ಯಮ ‘ಡಿಜಿಟಲ್ ಮೀಡಿಯಾ’ ಇದೆ. ಮುದ್ರಣ, ದೃಶ್ಯ, ಧ್ವನಿ ಮಾಧ್ಯಮಗಳ ಉಳಿವಿಗೂ ಡಿಜಿಟಲ್ ಮೀಡಿಯಾ ಮೊರೆ ಹೋಗಲಾಗುತ್ತಿದೆ. ಸಧ್ಯದ ಟ್ರೆಂಡ್ ಅದೇ ಆಗಿದೆ ಡಿಜಿಟಲ್ ಮೀಡಿಯಾ.


ವರ್ತಮಾನದ ವೈರುಧ್ಯ ಸಂದರ್ಭದಲ್ಲಿ ಮಾಧ್ಯಮಗಳೆಲ್ಲ ಬಂಡವಾಳಶಾಹಿಗಳ ಪಾಲಾಗಿರುವುದರಿಂದ ಬಯಾಸ್ಡ್ ಆಗಿಯೇ ಇವೆ. ಇಂತಹ ವ್ಯವಸ್ಥೆಯಲ್ಲಿ ಕೆಲಸ ಮಾಡುವ ಪತ್ರಕರ್ತರು ಕೂಡ ಶುದ್ಧತೆಯನ್ನು ಕಾಣುವುದು ಸಾಧ್ಯವಿಲ್ಲ. ಆದರೂ ಲಭ್ಯವಾಗುವ ಅಷ್ಟಿಷ್ಟು ಸ್ಪೇಸ್ ನಲ್ಲಿಯೇ ನೈತಿಕತೆಯನ್ನು ಉಳಿಸಿಕೊಂಡಿರುವುದನ್ನು ತಳ್ಳಿಹಾಕುವಂತಿಲ್ಲ. ಪರ್ಯಾಯ ಸಾಧ್ಯಗಳನ್ನು ಕಂಡು ಕೊಳ್ಳಬೇಕಾದ ಪತ್ರಕರ್ತ ಪಾಚಿಗಟ್ಟಿದ ಹಳೆ ವ್ಯವಸ್ಥೆಯಲ್ಲಿ ಉಳಿದು ಬದುಕಿಗಾಗಿ ಬಂಡವಾಳಶಾಹಿಗಳ, ರಾಜಕಾರಣಿಗಳ ಗುಲಾಮನಾಗಿ ಉಳಿಯುತ್ತಿರುವುದು ವಿಷಾಧನೀಯ ಸಂಗತಿ.

ಮಾಧ್ಯಮ ಲೋಕಕ್ಕೆ ವಿಚಾರವಂತರು, ಸಾಮಾಜಿಕ ಕಳಕಳಿಯುಳ್ಳವರು ಬರುತ್ತಾರೆ ಎಂಬ ನಿರೀಕ್ಷೆಗಳೆಲ್ಲ ಈಗ ಹುಸಿಯಾಗಿದೆ. ತಲೆ ಹಿಡುಕರು, ದಗಾಕೋರು, ವಂಚಕರು, ಅತ್ಯಾಚಾರಿಗಳು, ಜಾತಿವಾದಿಗಳು, ಬಡ್ಡಿ ಕ್ರಿಮಿಗಳು, ರಾಜಕೀಯ ಪುಡಾರಿಗಳು ಹೀಗೆ ಅನೇಕರು ಮೀಡಿಯಾದ ಮಾಲೀಕರುಗಳಾಗಿ, ಪತ್ರಕರ್ತರೆಂಬ ಹಣೆಪಟ್ಟಿಯಲ್ಲಿ ಪ್ರತಿಷ್ಠಾಪನೆಯಾಗಿದ್ದಾರೆ. ಹೀಗಾಗಿ ಮೀಡಿಯಾ ಎಂದರೆ ‘ಭಯೋತ್ಪಾದನಾ ಕೇಂದ್ರ’, ಪತ್ರಕರ್ತರೆಂದರೆ ಭಯೋತ್ಪಾದಕರು ಎಂಬುದು ಜನಜನಿತವಾಗಿದೆ. ಇಂತಹ ಸಂದರ್ಭದಲ್ಲಿ ಮೀಡಿಯಾ ಹೌಸ್ ಗಳಲ್ಲಿ ಸ್ವಯಂ ನಿಯಂತ್ರಣ ನಿರೀಕ್ಷಿಸುವುದು ಸಾಧ್ಯವೇ? ‘ಪತ್ರಕರ್ತ’ ವೃತ್ತಿಯ ಅಧ:ಪತನ ಆಗಿದೆ. ಕೊಳ್ಳುವ ಸರಕಾಗಿ ಪತ್ರಕರ್ತ ಮತ್ತು ಆತನ ಸುದ್ದಿಗಳು ಬದಲಾಗಿವೆ. ಅಂದರೆ ಪತ್ರಕರ್ತ ಆಗಿ ಸೇರುವವನಿಗೆ ಶಿಕ್ಷಣದ ಅರ್ಹತೆಗಿಂತ ಸಾರ್ವತ್ರಿಕ ಮಾಧ್ಯಮ ನೀತಿ ಸಂಹಿತೆಯ ಮಾರ್ಗಸೂಚಿ ಬೇಕಿದೆ. ಅದನ್ನು ರೂಪಿಸುವವರಾರು? ರಾಜ್ಯಾಂಗ?, ಕಾರ್ಯಾಂಗ?, ನ್ಯಾಯಾಂಗ? . ದೇಶದ ಮುಖ್ಯ ನ್ಯಾಯಾಧೀಶರನ್ನು ಆಯ್ಕೆ ಮಾಡುವಲ್ಲಿ ಅನುಸರಿಸುವ ಕ್ರಮಗಳನ್ನೇ ಮಾಧ್ಯಮಗಳಿಗೆ, ಪತ್ರಕರ್ತರಿಗೆ ರೂಪಿಸ ಬೇಕಾದ ಅಗತ್ಯತೆ ಇದೆ. ಮಾಧ್ಯಮದ ಕೊಳೆ, ಕೂಳೆಗಳನ್ನು ಒರೆಸಿ ಹಾಕಬೇಕಾದ ತುರ್ತು ಇದೆ. ಪತ್ರಕರ್ತ ವೃತ್ತಿಯ ಪಾವಿತ್ರ್ಯತೆಯನ್ನು ಕಾಯ್ದುಕೊಳ್ಳ ಬೇಕಾಗಿದೆ. ಅಂತಹ ಸುದಿನವನ್ನು ಎದುರು ನೋಡುತ್ತಾ, ಎಲ್ಲಾ ಪತ್ರಕರ್ತರು ಆತ್ಮ ವಿಮರ್ಶೆ ಮಾಡಿಕೊಂಡು ಹೊಸ ಸಾಧ್ಯತೆಗಳಿಗೆ ತೆರೆದುಕೊಳ್ಳಿ, ಮನುಷ್ಯರಾಗಿ ಎಂದು ಆಶಿಸುತ್ತೇನೆ. ಎಲ್ಲರಿಗೂ ಪತ್ರಿಕಾ ದಿನಾಚರಣೆಯ ಶುಭಾಶಯಗಳು.

Saturday, May 25, 2019

ನಮ್ಮ ಶಂಕರ ನ ನೆನಪೇ ಸ್ಮಾರಕ!



ಶಂಕರ್‌ನಾಗ್ ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಿರ್ದೇಶಕರಲ್ಲಿ ಒಬ್ಬರು. ಚಿತ್ರ ನಟರಾಗಿ, ನಿರ್ದೇಶಕರಾಗಿ, ರಂಗಕರ್ಮಿಯಾಗಿ ಹಾಗೂ ತಂತ್ರಜ್ಞರಾಗಿ ಭಾರತೀಯ ಚಿತ್ರರಂಗ ಮತ್ತು ಕನ್ನಡ ಚಿತ್ರರಂಗದ ಲ್ಲಿ ಹೆಸರು ಮಾಡಿದವರು.

ಶಂಕರ್ ನಾಗ್ ನಿರ್ದೇಶನದ ಮಾಲ್ಗುಡಿ ಡೇಸ್ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿತ್ತು. ಈ ಹೊತ್ತಿಗೂ ಮಾಲ್ಗುಡಿ ಡೇಸ್ ಟಿವಿ ಸರಣಿಯ ನಿರೂಪಣಾ ಶೈಲಿ , ಕಥಾ ಹಂದರವನ್ನು ತೆರೆಗೆ ತಂದ ರೀತಿ ಹೊಸತಾಗಿಯೇ ಉಳಿಯುತ್ತದೆ.

ಭಾರತೀಯ ಚಿತ್ರರಂಗದಲ್ಲಿ ಅಪರೂಪ ಎನಿಸಿದ Under Water Shooting ಗಾಗಿ ಲಂಡನ್ ನಿಂದ ದುಬಾರಿ ವೆಚ್ಚದ ಕೆಮರಾಗಳನ್ನು ತರಿಸಿ ಒಂದು ಮುತ್ತಿನ ‌ಕಥೆ ಸಿನೆಮಾದ ಚಿತ್ರೀಕರಣದಲ್ಲಿ ಬಳಸಿದ್ದರು. 80ರ ದಶಕದಲ್ಲಿ ಜಾನಪದ ಕಥಾ ಹಂದರದ ರಂಗ ನಾಟಕಗಳನ್ನು ದಿಗ್ದರ್ಶಿಸಿ, ನಟಿಸಿ 7ರಾಷ್ಟ್ರಗಳಲ್ಲಿ ಯಶಸ್ವಿ ಪ್ರದರ್ಶನ ನೀಡಿದ್ದ ಶಂಕರ್ ನಾಗ್ , ಅವರದ್ದೇ ಅಭಿನಯದ  ಪರಮೇಶಿ ಪ್ರೇಮ‌ ಪ್ರಸಂಗ, *ನೋಡಿ ಸ್ವಾಮಿ ನಾವಿರೋದೆ ಹೀಗೆ ಎಂಬ ಜನಪ್ರಿಯ ನಾಟಕಗಳನ್ನು ಸಿನೆಮಾ ಮಾಡಿ ಗೆದ್ದಿದ್ದು ಇತಿಹಾಸ. ಕನ್ನಡ ಚಿತ್ರರಂಗದಲ್ಲಿ ಇಂತಹ ಪ್ರಯೋಗ ಮಾಡಿ  ಯಶಸ್ಸು ಕಂಡ ಮೊದಲ ನಟ ಶಂಕರ್‌ನಾಗ್.  ಮತ್ತೊಂದು ಜನಪ್ರಿಯ ನಾಟಕ ಜೋಕುಮಾರಸ್ವಾಮಿ   ಸಿನೆಮಾ ಮಾಡಲು ನಿರ್ದರಿಸಲಾಗಿತ್ತು, ಈ ಸಿನೆಮಾದ ಮುಹೂರ್ತದಲ್ಲಿ ಪಾಲ್ಗೊಳ್ಳಲು ಮದ್ಯರಾತ್ರಿ ಪ್ರಯಾಣಿಸಿದ್ದ ಶಂಕರ್ ನಾಗ್ ಕಾರು ಅಪಘಾತದಲ್ಲಿ ಅಕಾಲ ಮೃತ್ಯುವಿಗೆ ತುತ್ತಾದರು.


ರಾಜ್ಯದ ಮೊದಲ ಧ್ವನಿಗ್ರಹಣ ಕೇಂದ್ರ ಸಂಕೇತ್ ಆರಂಭಿಸಿದ ಶಂಕರ್‌ ನಾಗ್, ಬೆಂಗಳೂರಿಗೆ ಹೊಸತಾದ ಕಂಟ್ರಿಕ್ಲಬ್ ಪರಿಚಯಿಸಿದರು. ತಮ್ಮ ಜೀವಮಾನದ ದುಡಿಮೆಯನ್ನೆಲ್ಲ ಅಲ್ಲಿ ವ್ಯಯಿಸಿದ್ದ ಶಂಕರ್‌ ನಾಗ್ ಆರ್ಥಿಕ ಕಾರಣಗಳಿಗಾಗಿ ವೃತ್ತಿ ಜೀವನದಲ್ಲಿ ರಾಜಿಯಾಗಲಿಲ್ಲ.

ನಟಿಸಿದ ಮೊದಲ ಸಿನೆಮಾಗೆ ರಾಷ್ಟ್ರಪತಿಗಳ ಗೋಲ್ಡನ್ ಪೀಕಾಕ್ ಅವಾರ್ಡ್ ಪಡೆದ ಶಂಕರ್ ನಾಗ್ , ಯಾವತ್ತಿಗೂ ಹೀರೋ ಇಮೇಜ್ ಬೆಂಬಲಿಸುವ ಕಥಾನಕಗಳನ್ನು‌ ಹೊಂದಿದ ಸಿನೆಮಾಗಳಲ್ಲಿ ನಟಿಸಿದ್ದು ಕಡಿಮೆ. ರಾಜ್, ವಿಷ್ಣು, ಅಂಬರೀಶ್, ರವಿಚಂದ್ರನ್ ರ ಜೊತೆ ನಟಿಸಿದ್ದ ಶಂಕರ್ ನಾಗ್ ಆ ಹೊತ್ತಿನಲ್ಲೂ ಪೂರಕ ಪಾತ್ರಗಳಲ್ಲಿ ನಟಿಸಿದ್ದರೆ ಹೊರತು ಹೀರೋಯಿಸಂ ಪಾತ್ರಗಳ ಹಿಂದೆ ಬಿದ್ದಿರಲಿಲ್ಲ.

ಶಂಕರ್‌ ನಾಗ್ ನಟಿಸಿದ ಸಿನೆಮಾಗಳನ್ನು ‌ಗಮನಿಸಿದರೆ‌ ಅಲ್ಲಿ ಹೀರೋಯಿಸಂ ಗಿಂತ ಶ್ರಮ ಜೀವಿ, ಶೋಷಿತ‌ ವರ್ಗದ   ಪ್ರತಿನಿಧಿ, ಸಮಾಜಕ್ಕೆ‌ ಮಾದರಿಯಾದ ವ್ಯಕ್ತಿತ್ವ ನೀಡುವ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ ಎಂಬುದು‌ ಗಮನಾರ್ಹ. ತನ್ನ ವಾರಗೆಯ ನಟರು ಆ ಹೊತ್ತಿನಲ್ಲಿ ಹುಲಿ, ಸಿಂಹಗಳ ಖದರ್ ಇರುವ ಪಾತ್ರ ಪೋಷಣೆ ಪಡೆಯುತ್ತಿದ್ದ ಕಾಲ ಅದು. ಆದರೆ ಶಂಕರ್‌ ನಾಗ್ ಮಾನವೀಯತೆ, ಸಂಘರ್ಷ, ವರ್ತಮಾನದ ಸಂಕಟಗಳ ಪ್ರತಿನಿಧಿಸುವ ಪಾತ್ರ ಮತ್ತು ಚಿತ್ರಗಳನ್ನು ನಿರ್ದೇಶಿಸಿದ್ದಾರೆ.

ತಾವು ಬೆಳೆಯುವ ಜೊತೆಗೆ ಸಿನೆಮಾಗೆ ಆಕರ್ಷಿತರಾಗಿ ಬರುವ ನಟರು, ತಂತ್ರಜ್ಞರನ್ನು ಪ್ರೋತ್ಸಾಹಿಸಿ ಒಂದಿಲ್ಲೊಂದು ಕಾಯಕದಲ್ಲಿ ಬ್ಯುಸಿಯಾಗುವಂತೆ ಮಾಡಿ‌ ಬದುಕುವ ದಾರಿ ತೋರಿಸಿದ್ದ ಶಂಕರ್ ನಾಗ್ ಈ ಹೊತ್ತಿಗೂ ಜನ‌ಮಾನಸದಲ್ಲಿ ಅನುಕರಣೀಯ ಹಾಗೂ ಮಾದರಿ ನಟರಾಗಿ ವಿರಾಜಮಾನವಾಗಿದ್ದಾರೆ.


ಶಂಕರ್ ನಾಗ್ ತಮ್ಮ ಭಾಗದವರೇ ಆದ ಜನಪ್ರಿಯ ರಾಜಕಾರಣಿ ಹಾಗೂ ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ರಾಮಕೃಷ್ಣ ಹೆಗಡೆ ಅವರ ಮೇಲಿನ ಅಭಿಮಾನದಿಂದ ಚುನಾವಣಾ ಪ್ರಚಾರದಲ್ಲಿ ತೊಡಗುತ್ತಿದ್ದರು ಆದರೆ ರಾಜಕೀಯದಲ್ಲಿ ಯಾವತ್ತಿಗೂ ಸ್ವತ: ಪಾಲ್ಗೊಳ್ಳಲಿಲ್ಲ.‌ ರಾಮಕೃಷ್ಟ ಹೆಗಡೆ ಸಿಎಂ ಆದ ಸಂದರ್ಭ, ಲಂಡನ್ ನಲ್ಲಿ ತಾವು ಕಂಡಿದ್ದ ಮೆಟ್ರೋ ರೈಲು ಯೋಜನೆಯನ್ನು ಬೆಂಗಳೂರಿನಲ್ಲಿ ಯೂ ಅನುಷ್ಟಾನಕ್ಕೆ ತರಬೇಕು ಎಂಬ ಕನಸು ಇಟ್ಟುಕೊಂಡಿದ್ದ ಶಂಕರ್‌ನಾಗ್ ಯೋಜನೆಯ ಮಾಹಿತಿಯನ್ನು ಸರ್ಕಾರದ ಮುಂದೆ ಇರಿಸಿದ್ದರು.

 ಬೆಂಗಳೂರಿನಲ್ಲಿ ಮೆಟ್ರೋ ಶುರುವಾದ ಸಂದರ್ಭ ಯೋಜನೆಗೆ ಶಂಕರ್ ನಾಗ್ ಹೆಸರು ಇಡುವಂತೆ ಸಾರ್ವತ್ರಿಕವಾಗಿ ಅಭಿಪ್ರಾಯಗಳಿದ್ದವು, ಅರುಂಧತಿ ನಾಗ್ ಕೂಡಾ ಈ ಕುರಿತು ಮಾತನಾಡಿದ್ದರು.‌ ಆದರೆ ಆಡಳಿತ ಚುಕ್ಕಾಣಿ ಹಿಡಿದವರ ಪೂರ್ವಗ್ರಹ ಪೀಡಿತ ನಿಲುವಿನಿಂದ ಮೆಟ್ರೋ ಯೋಜನೆಗೆ ಶಂಕರ್ ನಾಗ್ ಹೆಸರಿಡುವುದು ಇರಲಿ, ಒಂದು ಮೆಟ್ರೋ ಸ್ಟೇಷನ್ ಗೂ ಅವರ ಹೆಸರಿಡಲಿಲ್ಲ!


ನಂದಿಬೆಟ್ಟದ ರೋಪ್ ವೇ ಯೋಜನೆ, ಬಡವರಿಗೆ ವಿದೇಶಿ ತಂತ್ರಜ್ಞಾನ ಮನೆ ನಿರ್ಮಾಣ ಹೀಗೆ ಹಲವು ಯೋಜನೆಗಳ ಕನಸು ಕಂಡಿದ್ದ ಶಂಕರ್ ನಾಗ್ 35ನೇ ವಯಸ್ಸಿಗೆ ಕಾಲನ ಕರೆಗೆ ಓಗೊಟ್ಟರು. ಇವತ್ತು ಶಂಕರ್ ನಾಗ್ ನೆನಪಿಗೆ ಸ್ಮಾರಕಗಳಿಲ್ಲ, ಆದರೆ ಅವರ ಕೆಲಸ‌ ಮತ್ತು ನೆನಪುಗಳೆ ಸ್ಮಾರಕ ಗಳಾಗಿವೆ!

ಶಂಕರ್ ನಾಗ್ ನಿಧನರಾಗುವ ಹೊತ್ತಿಗೆ ಅಗಾಧವಾದುದನ್ನು ಸಾಧಿಸಿದ್ದರು, ಈ ಸಾಧನೆಗಳು ಮತ್ತು ಅವರ ವರ್ಕಾಲಿಕ್ ಗುಣವೇ ಶಂಕರ್ ನಾಗ್ ರನ್ನು‌ ಸ್ಮರಣೀಯವಾಗಿಸಿದೆ.‌ ಶಂಕರ್ ನಾಗ್ ರಿಗೆ‌ ಫ್ಯಾನ್‌ ಕ್ಲಬ್ ಇಲ್ಲ ಆದರೆ ಕೋಟ್ಯಾಂತರ ಯುವ ಸಮೂಹದ ಹೃದಯದಲ್ಲಿ ಸ್ಥಾನ ಪಡೆದಿದ್ದಾರೆ.


ಈ ಸಂದರ್ಭ ರಂಗ ಶಂಕರ ದಲ್ಲಿ ಅರುಂಧತಿ ನಾಗ್ ನೇತೃತ್ವದಲ್ಲಿ ಶಂಕರ್ ನೆನಪಿನಲ್ಲಿ ನಾಟಕ ಸಪ್ತಾಹ ನಡೆಯುತ್ತಿದೆ ಹಾಗೆಯೇ ಬೆಂಗಳೂರಿನ‌ ರವೀಂದ್ರ ಕಲಾಕ್ಷೇತ್ರದಲ್ಲಿಯೂ ಶಂಕರ್ ನಾಗ್ ನಾಟಕ ಸಪ್ತಾಹ ನಡೆಯುತ್ತಿದೆ, ರಂಗ ಪಯಣ ಮತ್ತು ಸಾತ್ವಿಕ ರಂಗತಂಡದವರು ಸಪ್ತಾಹ ಆಯೋಜಿಸಿದ್ದಾರೆ. ಇದೇ ತಂಡದವರು ಉತ್ತರ ಕರ್ನಾಟಕದ ಪ್ರತಿಭಾವಂತ ಯುವ ಶಿಕ್ಷಕ, ಕವಿ-ಚಿಂತಕ ವೀರಣ್ಣ ಮಡಿವಾಳರಿಗೆ ಶಂಕರನಾಗ್ ಪ್ರಶಸ್ತಿ ನೀಡಿ ಗೌರವಿಸಿದೆ. ಇಂದು ಸಂತಸದ ಸಂಗತಿ. ಶಂಕರ್ ನಾಗ್ ಹೆಸರೇ ಸ್ಪೂರ್ತಿದಾಯಕ ಸದಾಕಲಾಕ್ಕೂ ಅವರ ಮಾತು ಹಾಗೂ ಕೃತಿಗಳೂ‌ ಕೂಡಾ.

Picture Courtesy:Veeranna Madiwalar

#Shankarnag  #NoMonumentToShankarnagButHeRemainsStillInTheHeartsOfFans! #ArkalgudJayakumar

ಪ್ರೊ ಕೆ ಎಸ್ ಭಗವಾನ್ ರನ್ನು ನಿಂದಿಸುವ ಮುನ್ನಾ........

Image result for prof k s bhagawanಚಿಂತಕ-ಪ್ರಾಧ್ಯಾಪಕರಾದ  ಪ್ರೊ ಕೆ ಎಸ್ ಭಗವಾನ್ ಅನಾರೋಗ್ಯ ನಿಮಿತ್ತ ಆಸ್ಪತ್ರೆಗೆ ದಾಖಲಾಗಿದ್ದಾರೆ. ವಾಸ್ತವ ಸಂಗತಿಗಳನ್ನು ನೇರ ದಾಟಿಯಲ್ಲಿ ಹೇಳುತ್ತಾ ಸತ್ಯವನ್ನು ಒಪ್ಪದವರ ಕೆಂಗಣ್ಣಿಗೆ ಗುರಿಯಾದವರು ಕೆ ಎಸ್ ಭಗವಾನ್. ಅವರು ಬೇಗನೆ ಗುಣಮುಖರಾಗಲಿ.

ಮೈಸೂರು ಮಹರಾಜ ಕಾಲೇಜಿನಲ್ಲಿ ಇಂಗ್ಲೀಷ್ ಪ್ರಾಧ್ಯಾಪಕರಾಗಿದ್ದ ಕೆ ಎಸ್ ಭಗವಾನ್ ವೈಚಾರಿಕ ಸಂಗತಿಗಳನ್ನು ಬರೆಯುತ್ತಾ ಬಲಪಂಥೀಯರು ಹಾಗೂ ಹೇಳುವ ಧಾಟಿಯಿಂದ ಎಡಪಂಥೀಯರ ಅಸಹನೆಗೆ ತುತ್ತಾದವರು. ಅವರು ಬರೆದ ಶಂಕರಾಚಾರ್ಯರ ಕುರಿತಾದ ಪುಸ್ತಕ ಮತ್ತು ಅವರ ವೈಚಾರಿಕ ಬರವಣಿಗೆ, ಚಿಂತನೆಗಳ ಕಾರಣಕ್ಕೆ ಬಾಂಬೆ ಹೈಕೋರ್ಟ್ ನಿಂದ ಅರೆಸ್ಟ್ ವಾರಂಟ್ ಪಡೆದಿದ್ದರು. ಹೀಗೆ ಭಗವಾನ್ ಕುರಿತು ಕುತೂಹಲ ಇದ್ದ ಕಾಲಘಟ್ಟದಲ್ಲಿಯೇ ನಾನು ಅವರ ವಿದ್ಯಾರ್ಥಿಯಾದೆ.

ಕೆ ಎಸ್ ಭಗವಾನ್ ಕಾಲೇಜಿನಲ್ಲಿ ಇಂಗ್ಲೀಷ್ ಪಾಠ ಮಾಡುವ ಜೊತೆಗೆ ಮೈಸೂರು ನಗರದ ಯುನಿವರ್ಸಿಟಿ ಹಾಸ್ಟೆಲ್ ಗಳಲ್ಲಿದ್ದ ಗ್ರಾಮೀಣ ಭಾಗದ ಪದವಿ ವಿದ್ಯಾರ್ಥಿಗಳಿಗೆ ಉಚಿತ ಇಂಗ್ಲೀಷ್ ಪಾಠಗಳನ್ನು ಸರಳವಾಗಿ ಹೇಳಿಕೊಡುತ್ತಿದ್ದರು. ಕಲಾ ವಿದ್ಯಾರ್ಥಿಗಳಿಗೆ ಕಬ್ಬಿಣದ ಕಡಲೆಯಾಗಿದ್ದ ಇಂಗ್ಲೀಷ್ ಕೆ ಎಸ್ ಭಗವಾನ್ ಪ್ರಯತ್ನದಿಂದ ಸುಲಭವಾಗುತ್ತಿತ್ತು. ಇದೇ ವೇಳೆ ವಿದ್ಯಾರ್ಥಿಗಳಲ್ಲಿ ವೈಚಾರಿಕ ಪ್ರಜ್ಞೆ, ಸಾಮಾಜಿಕ ವ್ಯವಸ್ಥೆಯ ಬಗ್ಗೆ ಅರಿವು ಮೂಡಿಸುತ್ತಿದ್ದರು. ಈ ಅಂಶಗಳು ನಾನು ಭಗವಾನ್ ರ ಶಿಷ್ಯ ಎಂದು ಹೆಮ್ಮೆಯಿಂದ ಹೇಳಿಕೊಳ್ಳಲು ಅವಕಾಶ ಮಾಡಿದೆ.

ಇತ್ತೀಚೆಗೆ ಅವರು ಬರೆದ ರಾಮ‌ಮಂದಿರ ಏಕೆ ಬೇಡ? ಪುಸ್ತಕ ವಿವಾದಕ್ಕೀಡಾದಾಗ ತರಿಸಿ ಓದಿದೆ. ಇಡೀ ಪುಸ್ತಕದಲ್ಲಿ ಆಕ್ಷೇಪಾರ್ಹವಾದ ಸಂಗತಿಗಳು ಕಾಣಲಿಲ್ಲ. ಅವರ ಉಲ್ಲೇಖಗಳು ಸಕಾರಣ ಒದಗಿಸಿದ್ದವು. ಆದರೆ  ಪುರೋಹಿಶಾಹಿ ಸ್ಥಾಪಿತ ಹಿತಾಸಕ್ತಿಗಳು ಮಾಧ್ಯಮಗಳಲ್ಲಿ ವಕ್ಕರಿಸಿದ್ದು ದುರುದ್ದೇಶದಿಂದ ಭಗವಾನ್ ರನ್ನು‌ ಹಣಿಯುವ ಪ್ರಯತ್ನ ಮಾಡಿವೆ. ಕೋಮು ವಿಭಜಕ ಶಕ್ತಿಗಳನ್ನು, ಚಿಂತನೆಗಳೇ ಸತ್ತುಹೋದವರನ್ನ, ಜ್ಯೋತಿಷ್ಯ ಹೇಳುವವರನ್ನು ಚಾನಲ್ ಡಿಸ್ಕಷನ್ ಗೆ ಕೂರಿಸಿಕೊಂಡು ಭಗವಾನ್ ರನ್ನು ನಿಂದಿಸುವ ಅನೈತಿಕ ಕೆಲಸ ಮಾಡುತ್ತಿವೆ. ಈ ‌ಮೂಲಕ  ವ್ಯವಸ್ಥೆಯನ್ನು ಪ್ರಚೋದಿಸುತ್ತಾ ಚಿಂತಕರನ್ನು, ವಾಸ್ತವವಾದಿಗಳನ್ನು ಟಾರ್ಗೆಟ್ ಮಾಡುತ್ತಿವೆ. ಇದರ ಮುಂದುವರಿದ ಭಾಗವಾಗಿ ಸಾಮಾಜಿಕ ಜಾಲತಾಣದಲ್ಲಿ ಭಗವಾನ್ ವಿರುದ್ಧ ಆತಂಕಕಾರಿ ಅಭಿಪ್ರಾಯ, ಬೆದರಿಕೆಗಳನ್ನು ಹಾಕಲಾಗುತ್ತಿದೆ. ಭಗವಾನ್ ರಿಗೆ ಪೊಲೀಸ್ ಭದ್ರತೆ ಯಲ್ಲಿ ಮಾತನಾಡ ಬೇಕಾದ ದುಸ್ತಿತಿ ಉಂಟಾಗಿದೆ.

ಭಗವಾನ್ ಹೇಳುವ ಸಂಗತಿಗಳು ಧಾರ್ಮಿಕ ಭಾವನೆಗೆ ಧಕ್ಕೆ ಎನ್ನಲಾಗುತ್ತದೆ. ಹಿಂದೂ‌ಧರ್ಮದ ದೇವತೆಗಳ ಬಗ್ಗೆ ಮಾತನಾಡುತ್ತಾರೆ ಅನ್ಯಧರ್ಮೀಯರ ಬಗ್ಗೆ ಏಕೆ‌ ಮಾತನಾಡಲ್ಲ ಎಂದು ಪ್ರಶ್ನಿಸುತ್ತಾರೆ. ನಾವು ಆರಾದಿಸುವ ದೇವರುಗಳ ಚರಿತ್ರೆಯ ಮೇಲೆ ಬೆಳಕು ಚೆಲ್ಲುವುದು ತಪ್ಪು ಹೇಗಾದೀತು. ನಮ್ಮ ದೇವರುಗಳ ! ಕರಾಳ ಇತಿಹಾಸ 'ಆದರ್ಶ'ದ ಚೌಕಟ್ಟಿನಲ್ಲಿ ಬರಬಾರದು ಎಂಬುದಷ್ಟೆ ಆಶಯ ಅಲ್ಲವೇ?

ಭಗವಾನ್ ವಾಸ್ತವ ಸಂಗತಿ ಹೇಳಿದ ಮಾತ್ರಕ್ಕೆ ಆಸ್ತಿಕರು ದೇವರುಗಳನ್ನೆಲ್ಲ ನಿರಾಕರಿಸಿ ಬಿಡಲು ಸಾಧ್ಯವೇ? ದೇವರು, ನಂಬಿಕೆ, ಪೂಜೆ ಅವರವರ ಆತ್ಮ ತೃಪ್ತಿಯ ಸಂಗತಿ ಹಾಗೆಂದು ಅವುಗಳೆಲ್ಲಾ ಪ್ರಶ್ನಾತೀತವಾದುವಲ್ಲ. ಭಗವಾನ್ ಹಿಂದೂ ಧರ್ಮದಲ್ಲಿ ಹುಟ್ಟಿದವರು, ಹಿಂದು ಧರ್ಮದ ಹುಳುಕುಗಳು ಮತ್ತು ಅವರು ಕಂಡುಕೊಂಡ ವಿಚಾರಗಳನ್ನು ಹೇಳಲು ಸಮರ್ಥರೇ ವಿನಹ ತಿಳಿಯದ ಮುಸ್ಲಿಂ, ಕ್ರೈಸ್ತ ಅಥವ ಇತರೆ ಧರ್ಮದ ಬಗ್ಗೆ ಮಾತನಾಡಲು ಹೇಗೆ ಸಾಧ್ಯ? ಆಯಾ ಧರ್ಮದ ಹುಳುಕುಗಳನ್ನು ಎತ್ತಿ ತೋರಿಸಲು ಅಲ್ಲಿಯೂ ಭಗವಾನ್ ಥರದ ಚಿಂತಕರು ಇದ್ದಾರಲ್ಲ.‌

ಹಿಂದೂ ಧರ್ಮ(ಜೀವನ‌ ಪದ್ಧತಿ) ಪ್ರಶ್ನೆಗಳನ್ನು ಮತ್ತು ಸಮರ್ಥ ಉತ್ತರಗಳನ್ನು ಅಡಕ ಮಾಡಿಕೊಂಡಿದೆಯೇ ವಿನಹ ಪ್ರಶ್ನೆಗಳನ್ನು, ಪ್ರಶ್ನಿಸುವವರನ್ನು ಆತಂಕಕ್ಕೀಡು ಮಾಡುವ ಸಮರ್ಥನೆಗಳನ್ನು ಹೊಂದಿಲ್ಲ. ಆದರೆ ಬೆದರಿಕೆ, ಸಮರ್ಥನೆಗಳನ್ನು ಮುಂದು ಮಾಡಿ ಹಿಂದೂ ಧರ್ಮದ ಆಶಯಕ್ಕೆ ಧಕ್ಕೆ ತರಲಾಗಿದೆ. ವರ್ತಮಾನದಲ್ಲಿ  ಯಾವ ಸಂಗತಿಗಳು ಕೂಡಾ ಮತ್ತೊಂದು ಬದಿಯ ಸತ್ಯವನ್ನ ಮರೆ ಮಾಚಬಾರದು. ವೈಚಾರಿಕತೆಗೆ ತೆರೆದುಕೊಳ್ಳುವ ಹಾದಿಯಲ್ಲಿಯೇ ಆಯ್ಕೆಗಳು ಇರುತ್ತವಲ್ಲ. ಹೀಗಿರುವಾಗ ಭಗವಾನ್ ರು ರಾಮ-ಕೃಷ್ಣ-ಶಿವ ಕುರಿತು ಹೇಳುವ ಸಂಗತಿಗಳನ್ನು ಅರಿವಿಗೆ ತಂದುಕೊಳ್ಳಿ, ವಿಚಾರ ಮಾಡಿ, ಬೇಡವೆಂದರೆ ಬಿಟ್ಟು ಬಿಡಿ. ಭಗವಾನ್ ರನ್ನು ಯಾಕೆ ಆತಂಕದ ಚೌಕಟ್ಟಿಗೆ ತರುತ್ತೀರಿ? ಕೆಡುಕು ಬಯಸುತ್ತೀರಿ?

#ProfKSBhagawan #WhyInsultingProfKSBhagawan #ArkalgudJayakumar

Thursday, October 19, 2017

ಲಂಡನ್ ಪ್ಯಾರಾಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ಹೆಚ್ ಎನ್ ಗಿರೀಶ್ ಎಂಗೇಜ್ ಮೆಂಟ್ ಫಿಕ್ಸ್




  • ಅರಕಲಗೂಡು ಜಯಕುಮಾರ್/7899606841-7338474765


ಐತಿಹಾಸಿಕ ಲಂಡನ್ ಪ್ಯಾರಾಲಿಂಪಿಕ್ ಕ್ರೀಡಾಕೂಟದ ಹೈ ಜಂಪ್ ಬೆಳ್ಳಿ ಪದಕ ವಿಜೇತ ಹೆಚ್ ಎನ್ ಗಿರೀಶ ಕಂಕಣ ಬಂಧನಕ್ಕೆ ಸಜ್ಜಾಗುತ್ತಿದ್ದಾರೆ.ಸಧ್ಯ ಗಿರೀಶ್ ನವೆಂಬರ್ ನಲ್ಲಿ 27 ರಂದು ನೇಪಾಳದ ಕಠ್ಮಂಡುವಿನಲ್ಲಿ ನಡೆಯಲಿರುವ ಸೌತ್ ಏಷಿಯನ್ ಫೆಡರೇಶನ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ತಾಲೀಮು ನಡೆಸುತ್ತಿದ್ದಾರೆ. ಈ ನಡುವೆ ಬೆಳ್ಳಿ ಹುಡುಗನ ಎಂಗೇಜ್ ಮೆಂಟ್ ಸುದ್ದಿ ಹೊರ ಬಿದ್ದಿದೆ. 


ಇದೇ ಅಕ್ಟೋಬರ್ 22 ರಂದು ತವರೂರು ಹಾಸನದ ತನ್ವಿ ತ್ರಿಷಾ ಕಲ್ಯಾಣ ಮಂಟಪದಲ್ಲಿ ಎಂಗೇಜ್ ಮೆಂಟ್ ನಡೆಯುತ್ತಿದೆ. ಎಂಗೇಜ್ ಮೆಂಟ್ ಮುಗಿಸಿದ 3 ದಿನಗಳಿಗೆ ಯುಕೆ ಪೋರ್ಚುಗಲ್ ನಲ್ಲಿ ನಡೆಯುವ ವಿಶ್ವ ಗೇಮ್ಸ್ ನಲ್ಲಿ ಪಾಲ್ಗೊಳ್ಳುವರು. ಸಧ್ಯ ಜಾಗತಿಕ ಹೈಜಂಪ್ ರ್ಯಾಂಕಿಗ್ ನಲ್ಲಿ ಅಗ್ರ ನಾಲ್ಕನೇ ಶ್ರೇಯಾಂಕದಲ್ಲಿದ್ದಾರೆ. ಹಾಸನ ಮೂಲದವರೇ ಆದ ಮತ್ತು ಸರ್ಕಾರಿ ಕರ್ತವ್ಯ ನಿಮಿತ್ತ ಮೈಸೂರಿನಲ್ಲಿ ನೆಲೆಸಿರುವ ನಾಗರತ್ನ ಎಂಬುವವರ ಪುತ್ರಿ ಸಹನಾ ಬೆಳ್ಳಿ ಹುಡುಗನನ್ನು ವರಿಸಲಿದ್ದಾರೆ. ಸಹನಾ ಮೈಕ್ರೋಬಯೋಲಜಿಯಲ್ಲಿ ಎಂ ಎಸ್ಸಿ ಸ್ನಾತಕ ಪದವಿ ಪಡೆದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮಾರ್ಚ್ ಮಾಹೆಯಲ್ಲಿ ಗಿರೀಶ್ ಮದುವೆ ನಿಕ್ಕಿಯಾಗಿದೆ. 




2012ರಲ್ಲಿ ನಡೆದ ಲಂಡನ್ ಪ್ಯಾರಾಲಿಂಪಿಕ್ಸ್ ನಲ್ಲಿ ಹೈಜಂಪ್ ಬೆಳ್ಳಿ ಪದಕ ಜಯಿಸಿದ್ದ ಗಿರೀಶ್ ಆ ವರ್ಷ ಭಾರತಕ್ಕೆ ಪದಕಗಳ ಕೊರತೆಯನ್ನು ನೀಗಿಸಿದ್ದರು ಹಾಗೂ ಪ್ಯಾರಾಲಿಂಪಿಕ್ಸ್ ನಲ್ಲಿ ಮೊದಲ ಬೆಳ್ಳಿ ಪದಕ ಜಯಿಸಿದ ಕನ್ನಡಿಗರು ಹೌದು. ಇವರ ಸಾಧನೆಗಾಗಿ ಭಾರತ ಸರ್ಕಾರ ಪದ್ಮಶ್ರೀ ಪುರಸ್ಕಾರ ಹಾಗೂ ಪ್ರತಿಷ್ಠಿತ ಅರ್ಜುನ ಪುರಸ್ಕಾರವನ್ನು ನೀಡಿ ಗೌರವಿಸಿದೆ. ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ಬೆಂಗಳೂರು ವಲಯದ ಕೇಂದ್ರದಲ್ಲಿ ಕೋಚ್ ಹುದ್ದೆಯನ್ನು ಸಹಾ ಗಿರೀಶ್ ಗೆ ನೀಡಲಾಗಿದೆ. ರಾಜ್ಯ ಸರ್ಕಾರ 6 ನೇ ತರಗತಿಯ ಪಠ್ಯದಲ್ಲಿ ಗಿರೀಶ್ ಸಾಧನೆ ಕುರಿತ ಅಧ್ಯಾಯವನ್ನು ಸೇರಿಸಿದೆ. 




ಹೆಚ್ ಎನ್ ಗಿರೀಶ್ ಹೇಮಾವತಿ ಜಲಾಶಯದ ಪುನರ್ವಸತಿ ಗ್ರಾಮ ಕೊಡಗಿನ ಗಡಿ ಪ್ರದೇಶದಲ್ಲಿರುವ ಹೊಸನಗರದವರು, ತಂದೆ ನಾಗರಾಜೇಗೌಡ, ತಾಯಿ ಜಯಮ್ಮ ಕೃಷಿ ಕಾರ್ಮಿಕರು. ಯಾವ ಗಾಡ್ ಫಾದರ್ ಗಳ ನೆರವಿಲ್ಲದೇ, ಮೂಲ ಸೌಕರ್ಯಗಳ ಕೊರತೆ, ಹಾಗೂ ಅಂಗವೈಕಲ್ಯದ ಕೊರತೆಯ ನಡುವೆಯೂ ಯಶಸ್ಸಿನ ಮೆಟ್ಟಿಲು ಏರಿ ಭಾರತದ ಕೀರ್ತಿ ಪತಾಕೆಯನ್ನು ಬ್ರಿಟೀಷ್ ಅಂಗಳದಲ್ಲಿ ಎತ್ತಿ ಹಿಡಿದ ಹೆಮ್ಮೆ ಹೆಚ್ ಎನ್ ಗಿರೀಶ್ ಅವರದ್ದು.



Padmashree H N Girish Achievements video clips here

ಹೆಚ್ ಎನ್ ಗಿರಿಶ್ ಕುರಿತ ಕೆಲವು ವಿಡಿಯೋ ಲಿಂಕ್ ಗಳು ಇಲ್ಲಿವೆ.









Tuesday, July 25, 2017

ಅಂಬೇಡ್ಕರರನ್ನು ಅರಿಯುವುದೆಂದರೆ….

ಭಾರತದ ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ‘ಮೀಸಲಾತಿ’ ನಿಗದಿಯಾಗಿದ್ದು ಹಿಂದುಳಿದ ವರ್ಗದವರಿಗೆ, ಅದೂ ದಕ್ಷಿಣ ಭಾರತದಲ್ಲಿ ಶಾಹು ಮಹಾರಾಜ ಇಚ್ಛಾಶಕ್ತಿಯ ಫಲ. ನಂತರ ಮೈಸೂರು ಸಂಸ್ಥಾನದಲ್ಲಿ ಹಿಂದುಳಿದ ವರ್ಗದವರಿಗೆ ಮೀಸಲಾತಿ ಕೊಡುವ ನಿರ್ದಾರ ಪ್ರಕಟವಾದಾಗ ಪ್ರಖರವಾಗಿ ವಿರೋಧ ವ್ಯಕ್ತಪಡಿಸಿದ ದಿವಾನ್ ವಿಶ್ವೇಶ್ವರಯ್ಯ ದಿವಾನ ಗಿರಿಗೆ ರಾಜೀನಾಮೆ ಒಗೆದು ಹೊರ ಬಿದ್ದರು. ಆದರೆ ಇವತ್ತಿಗೂ ಅರಿವುಗೇಡಿ ಮಂದಿ ಅವರ ಚಿತ್ರಗಳನ್ನಿಟ್ಟುಕೊಂಡು ದೇವರಂತೆ ಪೂಜಿಸುತ್ತಾರೆ ಎಂಬುದು ವಿಷಾದನೀಯ.

ಮುಂದೆ ಕಾಂಗ್ರೆಸ್ ಸರ್ಕಾರ ಬಂದಾಗ ಮುಖ್ಯಮಂತ್ರಿಗಳಾದ ದೇವರಾಜ ಅರಸು ಹಿಂದುಳಿದ ವರ್ಗದ ಹಿತಾಸಕ್ತಿ ರಕ್ಷಿಸಲು ಎಲ್ ಜಿ ಹಾವನೂರು ಸಮಿತಿಯನ್ನು ರಚಿಸಿದರು. ಹಾವನೂರು ವರದಿಯ ಫಲ ಇವತ್ತು ಉದ್ಯೋಗ ಮತ್ತು ಶಿಕ್ಷಣದಲ್ಲಿ ಹಿಂದುಳಿದ ವರ್ಗ ಮೀಸಲಾತಿಯನ್ನು ಅನುಭವಿಸುತ್ತಿದೆ. ಆದರೆ ಅಂಬೇಡ್ಕರ್ ರಚಿಸಿದ ಸಂವಿಧಾನದಲ್ಲಿ ದಲಿತರಿಗಿಂತಲೂ ಹೆಚ್ಚು ಪ್ರಮಾಣದ ಮೀಸಲಾತಿಯನ್ನು ಹಿಂದುಳಿದ ವರ್ಗದವರಿಗೆ ನೀಡಲಾಗಿದೆ (ಶೇ. 27). ಆದರೆ ಗುಂಪುಗಾರಿಕೆ, ಸ್ವಾರ್ಥ ಹಿತಾಸಕ್ತಿ, ಅರಿವಿನ ಪ್ರಜ್ಞೆ, ಸಂಘಟನೆಯ ಕೊರತೆ ಇರುವುದರಿಂದ  ಈ ಮೀಸಲಾತಿಯ ಪೈಕಿ ಸುಮಾರು ಶೇ. 4ರಷ್ಟು ಪ್ರಮಾಣವನ್ನು ಮಾತ್ರ ಅನುಭವಿಸುತ್ತಿದ್ದಾರೆ.

ಹಿಂದುಳಿದ ವರ್ಗದವರು ಸದಾ ಕಾಲಕ್ಕೂ ನೆನಪಿಟ್ಟುಕೊಳ್ಳ ಬೇಕಾದ ಮತ್ತು ಪೂಜಿಸ ಬೇಕಾದ ವ್ಯಕ್ತಿ ಭಾರತದ ಪ್ರಧಾನಿಯಾಗಿದ್ದ ವಿ ಪಿ ಸಿಂಗ್. ವಿ ಪಿ ಸಿಂಗ್ ಅವರು ಪ್ರಧಾನ ಮಂತ್ರಿಯಾಗಿ ಹಿಂದುಳಿದ ವರ್ಗದವರಿಗೆ ಸಾಮಾಜಿಕ ನ್ಯಾಯ ಒದಗಿಸಲು ಮಂಡಲ್ ಆಯೋಗದ ವರದಿ ಜಾರಿಗೆ ತರಲು ಹೊರಟರೆ, ಮೇಲ್ವರ್ಗದ ಚಿತಾವಣೆಗೆ ಸಿಲುಕಿದ ಶೂದ್ರರೇ ಮಂಡಲ್ ಆಯೋಗದ ಅನುಷ್ಠಾನಕ್ಕೆ ಬಹು ದೊಡ್ಡ ತಡೆಗೋಡೆಯಾಗಿ ನಿಂತು ಬಿಟ್ಟರು. ರಾಷ್ಟ್ರಾಧ್ಯಂತ ಮಂಡಲ್ ಆಯೋಗದ ವರದಿಯನ್ನು ವಿರೋಧಿಸಿ ಹರತಾಳ ನಡೆದವು. ದೇಶದ ಪ್ರತಿಷ್ಠಿತ ಐಐಟಿಯಲ್ಲಿ ಹಿಂದುಳಿದ ವರ್ಗಕ್ಕೆ ಮೀಸಲಾತಿ ತರಲು ಹೊರಟರೆ ಅಲ್ಲಿಯೂ ಅರಿವುಗೇಡಿಗಳು ಪ್ರತಿಭಟನೆಗೆ ನಿಂತು ಅಪೂರ್ವ ಅವಕಾಶವನ್ನು ತಪ್ಪಿಸಿಕೊಂಡವು.

ಇಷ್ಟಕ್ಕೂ ಈ ಮೀಸಲಾತಿ ಎಂದರೆ ಏನು? ಯಾಕೆ ಅದನ್ನು ವಿರೋಧಿಸಲಾಗುತ್ತಿದೆ? ಮೀಸಲಾತಿ ಫಲಾನುಭವಿಗಳನ್ನು ತುಚ್ಚವಾಗಿ ನೋಡುವ ಅಗತ್ಯವಿದೆಯೇ? ಎಂಬ ಪ್ರಶ್ನೆಗಳನ್ನು ವರ್ತಮಾನದಲ್ಲಿ ಪ್ರತಿಯೊಬ್ಬರು ಹಾಕಿಕೊಳ್ಳ ಬೇಕಾದ ಅಗತ್ಯವಿದೆ. ಮೀಸಲಾತಿ ಹಿಂದಿನ ಸತ್ಯಗಳನ್ನು ಪುನರಾವಲೋಕನ ಮಾಡಿಕೊಳ್ಳುವಾಗ ಅರಗಿಸಿಕೊಳ್ಳಲಾಗದ ವಾಸ್ತವಗಳನ್ನ ಗ್ರಹಿಕೆಗೆ ತಂದುಕೊಳ್ಳುವ ಸೂಕ್ಷ್ಮತೆ ವರ್ತಮಾನದಲ್ಲಿ ಕಳೆದು ಹೋಗಿರುವುದರಿಂದ “ಮೀಸಲಾತಿ” ಪರಿಧಿಯನ್ನು ಆರ್ಥಿಕತೆಯ ಮಾನದಂಡದಲ್ಲಿ ಗ್ರಹಿಸುವ ಅಪಾಯ ಸನ್ನಿವೇಶದಲ್ಲಿದ್ದೇವೆ.

ಮೀಸಲಾತಿ ಎಂದರೆ ಸಾಮಾಜಿಕ ನ್ಯಾಯದ ಮಾನದಂಡ, ಮನುಷ್ಯರನ್ನು ಮನುಷ್ಯರಂತೆ ಕಾಣುವ ಕ್ರಿಯೆಗಳು ಸತ್ತು ಹೋಗಿರುವ  ಈ ಹೊತ್ತಿನಲ್ಲಿ ಧ್ವನಿ ಅಡಗಿ ಹೋದ ಜೀವಗಳಿಗೆ ಕನಿಷ್ಠ ಉಸಿರಾಡುವಂತೆ ಮಾಡುವ ಕ್ರಿಯೆ. ಜೀವಪರ ಕಾಳಜಿಯ ಸೂಕ್ಷ್ಮ ಮನಸ್ಸುಗಳಿಗೆ ಮಾತ್ರ ಇದು ಅರ್ಥವಾದೀತು. ಸಾಮಾಜಿಕ ಅಸ್ಪೃಶ್ಯತೆಗೂ, ಆರ್ಥಿಕ ಅಸ್ಪೃಶ್ಯತೆಗೂ ಅಜಗಜಾಂತರ ವ್ಯತ್ಯಾಸವಿದೆ. ಹಾಗೆಯೇ ದಲಿತರು ಅನುಭವಿಸುವ ಅಸ್ಪೃಶ್ಯತೆಗೂ, ಅಮೇರಿಕಾದ ನೀಗ್ರೋಗಳು ಅನುಭವಿಸುವ ಅಸ್ಪೃಶ್ಯತೆಗೂ ಸಾಕಷ್ಟು ವ್ಯತ್ಯಾಸವಿದೆ. ದಲಿತರು ಅನುಭವಿಸುವ ಸಾಮಾಜಿಕ ಅಸ್ಪೃಶ್ಯತೆಯಲ್ಲಿ ಬದುಕುವ ಹಕ್ಕುಗಳನ್ನೇ ನಿರಾಕರಿಸಲಾಗುತ್ತದೆ, ನೀಗ್ರೋಗಳು ಅನುಭವಿಸುವ ಅಸ್ಪೃಶ್ಯತೆಯಲ್ಲಿ ಬದುಕುವ ಹಕ್ಕುಗಳಿಗೆ ಧಕ್ಕೆಯಿಲ್ಲ ಆದರೆ ಸಮಾನತೆಯ ಹಕ್ಕುಗಳನ್ನು ನಿರಾಕರಿಸಲಾಗುತ್ತದೆ. ಹಾಗಾಗಿ ಭಾರತದಲ್ಲಿ ದಲಿತರು ಅನುಭವಿಸುವ ಸಾಮಾಜಿಕ ಅಸಹನೆ ಅತ್ಯಂತ ಕ್ರೂರವಾದುದು, ಮತ್ತು ಆ ವರ್ಗಕ್ಕೆ ಮಾನಸಿಕ ಸ್ಥೈರ್ಯ ನೀಡುವ ಕೆಲಸ “ಮೀಸಲಾತಿ” ಯಿಂದ ಮಾತ್ರ ಸಾಧ್ಯ ಎಂಬುದು ಇಂದಿನ ತುರ್ತು.

“ಮೀಸಲಾತಿ”ಯ ಫಲಾನುಭವಿಗಳ ಪಟ್ಟಿಯಲ್ಲಿ ಮಹಿಳೆಯರು ವರ್ತಮಾನದಲ್ಲಿ ಮಂಚೂಣಿ ಸ್ಥಾನ ಪಡೆದಿದ್ದಾರೆ. ಸಂಸತ್ ನಲ್ಲಿ ಮಹಿಳೆಯರಿಗೆ ಆಸ್ತಿ ಹಕ್ಕು, ರಾಜಕೀಯ, ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ ಬೇಕು ಎಂದು ಪಟ್ಟು ಹಿಡಿದ ಭಾರತ ರತ್ನ ಸಮತೆಯ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ತಮ್ಮ ಬೇಡಿಕೆ ಈಡೇರದಿದ್ದಾಗ ರಾಜೀನಾಮೆ ಒಗೆದು ಬಂದರು, ಅಧಿಕಾರವನ್ನೇ ತ್ಯಾಗ ಮಾಡಿದರು ಅಂತಹ ಅಂಬೇಡ್ಕರ್ ಗೆ ಇವತ್ತು ಮಹಿಳಾ ವಲಯದಲ್ಲಿ ಸ್ಥಾನವಿಲ್ಲ! ಸಾಮಾಜಿಕ ವಲಯದಲ್ಲಿ ಹಕ್ಕುಗಳನ್ನು ಪ್ರತಿಪಾದಿಸುವ, ಪ್ರಶ್ನೆಗಳನ್ನು ಕೇಳುವ ಚಳುವಳಿ ರೂಪಿತವಾಗಿದ್ದೆ ಡಾ ಬಿ ಆರ್ ಅಂಬೇಡ್ಕರ್ ಅವರಿಂದ. ಪ್ರತಿಫಲನವಾಗಿ ಸ್ವತಂತ್ರ ಭಾರತದಲ್ಲಿ ಸಾರ್ವತ್ರಿಕವಾಗಿ ಹುಟ್ಟಿದ ಎಲ್ಲ ಚಳುವಳಿ ಹಿಂದೆಯೂ ಅಂಬೇಡ್ಕರ್ ಹಾಕಿ ಕೊಟ್ಟ ಬುನಾದಿ ಇದೆ. ಆದರೆ ಅಂಬೇಡ್ಕರ್ ಅವರನ್ನು ಅರಿಯುವ ಪ್ರಯತ್ನಗಳಿಗೆ ಹಿನ್ನೆಡೆಯಾಗಿದೆ. ಅಂಬೇಡ್ಕರ್ ತೋರಿದ ಹಾದಿಯಲ್ಲಿ ನಡೆಯುವ ಬದಲಿಗೆ ಅವರನ್ನೆ ದೇವರಾಗಿ ಪೂಜಿಸುತ್ತಾ ಅದರಾಚೆಗೂ ಅಂಬೇಡ್ಕರ್ ತೋರಿಸದ ಬೆಳಕಿನ ಹಾದಿಯಿದೆ ಎಂಬ ಸತ್ಯ ದಲಿತರಿಗೂ ಅರ್ಥವಾದಂತಿಲ್ಲ. ಇದರ ಪರಿಣಾಮ ದಲಿತೇತರರು ಅಂಬೇಡ್ಕರರನ್ನು ಅರಿಯುವ ಪ್ರಯತ್ನಕ್ಕೆ ಭಾಗಶ: ತಡೆಗೋಡೆಯಾಗಿರ ಬಹುದೇನೋ.

ಇತಿಹಾಸದತ್ತ ಹೊರಳಿ ನೋಡಿದರೆ ಕಠಿಣ ಸ್ಥಿತಿಯಲ್ಲಿ ಬಸವೇಶ್ವರರು 12ನೇ ಶತಮಾನದಲ್ಲಿಯೇ ಸಾಮಾಜಿಕ ನ್ಯಾಯಕ್ಕಾಗಿ ಸೆಣಸಿದರು, ಆದರೆ ಅವತ್ತಿನ ವ್ಯತಿರಿಕ್ತ ಪರಿಸ್ಥಿತಿಯಲ್ಲಿ ಸಾಮಾಜಿಕ ನ್ಯಾಯಕ್ಕೆ ಸಾಂಸ್ಥಿಕ ರೂಪ ಕೊಡುವ ಮುನ್ನವೇ ಕಗ್ಗೊಲೆಯಾದರು. ಬಸವೇಶ್ವರರ ಸಾಮಾಜಿಕ ನ್ಯಾಯದ ಪರಿಕಲ್ಪನೆಗೆ, ಚಳುವಳಿಗೆ ತಾರ್ಕಿಕವಾಗಿ ಸಾಂಸ್ಥಿಕ ರೂಪುಕೊಟ್ಟವರು ಅಂಬೇಡ್ಕರ್. ಅವರು ಸಾಮಾಜಿಕ ನ್ಯಾಯದ ಪರಿಧಿಯಾಚೆಗೂ ತಮ್ಮ ಜ್ಞಾನದ ಹರವನ್ನು ವಿಸ್ತರಿಸಿದ್ದರು. ಅಲ್ಲಿ ಬೆಳಕಿತ್ತು ಆದರೆ ಆ ಬೆಳಕನ್ನು ಗುರುತಿಸಲಾಗದೇ ಅಂಬೇಡ್ಕರರನ್ನು ಸಹಾ “ಮೀಸಲಾತಿ”ಯ ಪರಿಧಿಯಲ್ಲೇ ನೋಡುವ ಮೂಲಕ ಬಹು ಸಂಖ್ಯೆಯ ದಲಿತೇತರರು ರೋಗಗ್ರಸ್ಥ ಮನಸ್ಥಿತಿಯಲ್ಲೇ ಕೊಳೆಯುತ್ತಿದ್ದಾರೆ.


ಅಂಬೇಡ್ಕರರನ್ನು ದಕ್ಕಿಸಿಕೊಳ್ಳುವುದೆಂದರೆ ಪ್ರಶ್ನಾ ಮನೋಭಾವ, ಹಕ್ಕುಗಳ ಪ್ರತಿಪಾದನೆ, ಪ್ರಗತಿಪರವಾದ ಚಿಂತನೆ, ವಾಸ್ತವವನ್ನು ಪರಿಗ್ರಹಿಸಿ ನೋಡುವುದೇ ಆಗಿದೆ. ಆದರೆ ವರ್ತಮಾನದಲ್ಲಿ ಸೂಕ್ಷ್ಮ ಗ್ರಹಿಕೆಗಳೇ ಕಳೆದು ಹೋಗಿವೆ, ಅರಿವಿನ ಬೆಳಕಿಗೆ ವರ್ತಮಾನದಲ್ಲಿ ನಮ್ಮನ್ನು ಒಡ್ಡಿಕೊಳ್ಳ ಬೇಕಿದೆ. ಅಂಬೇಡ್ಕರ್ ಎಂಬ ಹಣತೆಯನ್ನು ಎದೆಯ ಗೂಡಿನಲ್ಲಿ ಇರಿಸಿಕೊಂಡು ಪುನರಾವಲೋಕಿಸಬೇಕಾದ ತುರ್ತು ಇದೆ. 

Sunday, November 15, 2015

ಅಸಹಿಷ್ಣುತೆ ಮತ್ತು ಪ್ರಶಸ್ತಿ ವಾಪ್ಸಿ!

ದೇಶದಲ್ಲಿ ಅಸಹಿಷ್ಣುತೆಯ ಕೂಗು ದಿನದಿಂದ ದಿನಕ್ಕೆ ಬಲಗೊಳ್ಳುತ್ತಿದೆ. ರಾಜ್ಯದಲ್ಲಿ ಸಂಭವಿಸಿದ ಕಲ್ಬುರ್ಗಿ ಹತ್ಯೆಯ ಪ್ರಕರಣ ನಿಗೂಡವಾಗಿರುವಾಗಲೇ ಅಭಿವ್ಯಕ್ತಿ ಸ್ವಾತಂತ್ರ್ಯದ ದಮನದ ವಿರುದ್ದ ಕೇಂದ್ರ ಸಾಹಿತ್ಯ ಅಕಾಡೆಮಿ ಧ್ವನಿ ಎತ್ತಲಿಲ್ಲ ಎಂಬ ಕಾರಣಕ್ಕೆ ಆರಂಭಗೊಂಡ ಪ್ರಶಸ್ತಿ ವಾಪ್ಸಿ ಚಳುವಳಿ ಇವತ್ತು ವಿರಾಟ್ ಸ್ವರೂಪ ಪಡೆಯುತ್ತಿದೆ. ಪ್ರಶಸ್ತಿ ವಾಪಸಾತಿ ವಿರುದ್ದವೂ ಅನೇಕರು ವಿವಿಧ ನೆಲೆಗಟ್ಟಿನ ಸಮರ್ಥನೆಯ ಮೂಲಕ ಸಾರ್ವತ್ರಿಕ ವಿರೋಧ ವ್ಯಕ್ತ ಪಡಿಸುತ್ತಿದ್ದಾರೆ. ಈ ಪರ-ವಿರೋಧದ ಹೊತ್ತಿನಲ್ಲಿಯೇ ಅನೇಕ ಅನೈತಿಕ ಘಟನೆಗಳ, ನೈತಿಕ ಅಧ:ಪತನದ ಸಂಗತಿಗಳ ವಿಶ್ಲೇಷಣೆಯೂ ನಡೆಯುತ್ತಿದೆ. ಇವೆಲ್ಲ ಒಂದು ಕಾಲಘಟ್ಟದಲ್ಲಿ ಆಗಬೇಕಿತ್ತು ತಡವಾಗಿ ಆಗುತ್ತಿದೆಯಷ್ಟೇ! ಈ ಸಂಧರ್ಭದಲ್ಲಿ ಅನೇಕ ಮುಖವಾಡಗಳು ಸಹಾ ಬಯಲಿಗೆ ಬರುತ್ತಿರುವುದು ಸುಳ್ಳೇನಲ್ಲ.
         ದೇಶದಲ್ಲಿ ಅಸಹಿಷ್ಣುತೆ ಇವತ್ತು ಮತ್ತು ನಿನ್ನೆಯದಲ್ಲ. ಭಾರತಕ್ಕೆ ಸ್ವಾತಂತ್ರ ಬಂದಾಗಿನಿಂದಲೂ, ಅದಕ್ಕೂ ಮುಂಚಿನಿಂದಲೂ ಹಾಗೂ ಇವತ್ತಿಗೂ ಶಾಂತಿ ಕದಡುವ, ಸಾಮಾಜಿಕ ಅಸಹನೆಗೆ ಕಾರಣವಾಗುವ ಘಟನೆಗಳು ಜರುಗುತ್ತಲೇ ಇವೆ. ಆದರೆ ವರ್ತಮಾನದಲ್ಲಿ ಅಸಹಿಷ್ಣುತೆಯ ತೀವ್ರತೆ ಹೆಚ್ಚಿದೆ. ನೈತಿಕತೆಗೆ ಧಕ್ಕೆ ತರುವ,ವಿಚಾರವಾದಕ್ಕೆ ಅಡ್ಡಗಾಲಾಗುವ, ಸಾಮಾಜಿಕ ಸಾಮರಸ್ಯವನ್ನು ಕದಡುವ,ಧಾರ್ಮಿಕ ಕಂದಕ ಹೆಚ್ಚಿಸುವ ಸಂಗತಿಗಳು ಪ್ರತೀ ಕ್ಷಣಕ್ಕೂ ವಿವಿಧ ಆಯಾಮಗಳಲ್ಲಿ ಎದುರಾಗುತ್ತಿವೆ. ಇಂತಹ ಸಂದಿಗ್ದ ಸಂಧರ್ಭದಲ್ಲಿ ಅದರದ್ದೇ ಆದ ತಾತ್ವಿಕ ನೆಲೆಗಟ್ಟಿನಲ್ಲಿ ನಿಂತು ತೋರುವ ಸಾತ್ವಿಕ ಪ್ರತಿಭಟನೆಗೆ ಹೆಚ್ಚಿನ ಮಹತ್ವ ಇದೆ. ಮತ್ತು ಅದು ಹೆಚ್ಚು ಪರಿಣಾಮಕಾರಿಯಾದುದು ಆಗಿದೆ. ವಾಸ್ತವವನ್ನು ಗ್ರಹಿಸುವ ಸೂಕ್ಷ್ಮ ಮನಸ್ಥಿತಿ ಮಾತ್ರವೇ ಅಸಹಿಷ್ಣುತೆಯನ್ನು ಖಂಡಿಸಿ ಪ್ರಶಸ್ತಿ ವಾಪಸ್ ಮಾಡುವ ಕ್ರಿಯೆಯನ್ನು ಒಪ್ಪಿಕೊಳ್ಳುತ್ತದೆ. ಆದರೆ ಗ್ರಹಿಕೆಯ ಸೂಕ್ಷ್ಮವನ್ನು ಕಳೆದುಕೊಂಡ ಮನಸ್ಸುಗಳಿಗೆ ಪ್ರಶಸ್ತಿ ವಾಪಸಾತಿ ಹಿಂದಿನ ಶಕ್ತಿಯ ಅರಿವಿಗೆ ಬರುವುದೇ ಇಲ್ಲ, ಬದಲಿಗೆ ಮೇಲ್ನೋಟಕ್ಕೆ ಸಿಗುವ ಸಂಗತಿಗಳನ್ನೆ ಮುಂದುಮಾಡಿಕೊಂಡು ವಿತಂಡ ವಾದಕ್ಕೆ ಇಳಿದು ಬಿಡುತ್ತಾರೆ. 
        ಒಂದು ಮಾನವೀಯ ಸಂಗತಿಗೆ ನೈತಿಕ ನೆಲಗಟ್ಟಿನಲ್ಲಿ ನಿಂತು ಪ್ರತಿಕ್ರಿಯಿಸ ಬಹುದಾದ ವ್ಯಕ್ತಿ ಮಾತ್ರವೆ ಮುನುಷ್ಯ ಎನಿಸಿಕೊಳ್ಳುತ್ತಾನೆ, ಆದರೆ ಇದಕ್ಕೆ ವ್ಯತಿರಿಕ್ತವಾಗಿ ನಡೆಯುವ, ಪ್ರತಿಕ್ರಿಯಿಸುವ ಕ್ರಿಯೆಗಳು ಅಸಹಿಷ್ಣುತೆಯನ್ನು ಬೆಂಬಲಿಸುವ ಕ್ರಿಯೆಗಳಾಗುತ್ತವೆ. ಯಾವುದಕ್ಕೆ ಯಾವುದನ್ನು ಉದಾಹರಣೆಯಾಗಿ ತೆಗೆದುಕೊಳ್ಳಬೇಕು ಎಂಬ ಅರಿವಿಲ್ಲದೇ ಬೇರೆ ಬೇರೆ ಆಯಾಮದಲ್ಲಿ ಘಟಿಸುವ ಸಂಗತಿಗಳನ್ನು ತುಲನೆಗೆ ತೆಗೆದುಕೊಳ್ಳುವುದು ಪಲಾಯನ ವಾದವಲ್ಲದೇ ಮತ್ತೇನೂ ಆಗಿರದು.

ಕನ್ನಡ ಸಾಹಿತ್ಯ ಲೋಕದ ನೈತಿಕತೆಯ ಅಂತ:ಶಕ್ತಿಯಾಗಿರುವ ಸಾಹಿತಿ ದೇವನೂರ ಮಹದೇವ ಭಾರತ ಸರ್ಕಾರ ನೀಡಿದ ಪದ್ಮಶ್ರೀ ಗೌರವ ಪುರಸ್ಕಾರ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ನೀಡಿದ ಪ್ರಶಸ್ತಿಯನ್ನು ಸಾಂಕೇತಿಕವಾಗಿ ಹಿಂತಿರುಗಿಸಿ ಈ ಹಿನ್ನೆಲೆಯಲ್ಲಿ ಪರೋಕ್ಷವಾಗಿ ಪಡೆದ ಸ್ಥಾನಮಾನಗಳನ್ನು ಹಿಂತಿರುಗಿಸಲಾಗುತ್ತಿಲ್ಲ ಎಂಬ ಸಂಕೋಚ ಇರುವ ಕುರಿತು ಪ್ರಸ್ತಾಪಿಸಿದ್ದಾರೆ. ಬಹುಶ: ಪ್ರಜ್ಞಾವಂತರಾದ ಯಾರೆ ಆದರೂ ಈ ಮಾತುಗಳ ಹಿಂದಿನ ವಾಸ್ತವಗಳನ್ನು ಗ್ರಹಿಸಿದರೆ ಪ್ರಶಸ್ತಿ ವಾಪ್ಸಿ ಚಳುವಳಿಯ ವಿರುದ್ದ ನಿಲ್ಲಲಾರರೇನೋ.
        ಒಟ್ಟಾರೆಯಾಗಿ ಹೇಳುವುದಾದರೆ ಯಾರ ವಿರುದ್ದವಾಗಿ ಮತ್ತು ಯಾರ ಪರವಾಗಿ ಪ್ರಶಸ್ತಿ ಕೊಟ್ಟರು ಎನ್ನುವ ವಾಗ್ವಾದವನ್ನು ಬದಿಗಿಟ್ಟು ನೋಡಿದರೆ ಪ್ರಶಸ್ತಿ ವಾಪಸಿ ಎನ್ನುವ ನಿರ್ದಾರದಡಿ ಸೈದ್ದಾಂತಿಕ ತತ್ವವಿದೆ ಮತ್ತು ಸಾಮಾಜಿಕ ಜಾಗೃತಿಯ ಸಂದೇಶವಿದೆ. ಸಾಹಿತ್ಯ ಮತ್ತು ಬೌದ್ದಿಕತೆ ಎನ್ನುವುದು ಘಟನೆಗಳ ಹಿಂದಿನ ರಾಜಕಾರಣ ಮತ್ತು ಪರಿಣಾಮಗಳೆರಡನ್ನೂ ಭೂತ-ಭವಿಷ್ಯತ್ ನೆಲೆಯಲ್ಲಿ ತರ್ಕಿಸುತ್ತದೆ. ವಿಷಯವೊಂದು ಇಡೀ ದೇಶದ ಮಾನಸಿಕ ಮತ್ತು ಸಾಮಾಜಿಕ ಆರೋಗ್ಯವನ್ನು ಕೆಡಿಸುತ್ತಾ, ಅಸಹನೆಯನ್ನು ಸೃಷ್ಟಿಸಿ ಮುಂದೆ ಬದುಕಲಸಾಧ್ಯವಾದ ಪರಿಸ್ಥಿತಿಗೆ ಕಾರಣವಾಗಬಲ್ಲ ಮನೋಸ್ಥಿತಿಯನ್ನು ನಿರ್ಮಿಸುತ್ತದೆ ಎನ್ನುವ ಬಗ್ಗೆ ಜಾಗೃತಿ ಮೂಡಿಸುವ ಅನಿವಾರ್ಯತೆ ಮತ್ತು ಜರೂರತ್ತು ಖಂಡಿತಾ ಇದೆ. ಅದರ ಒಂದು ಭಾಗವೇ ಪ್ರಶಸ್ತಿ ವಾಪಸ್. ಅಚ್ಚರಿ ಎಂದರೆ ಅವತ್ಯಾಕೆ ಕೊಟ್ಟಿಲ್ಲ, ಇವತ್ಯಾಕೆ ಕೊಡ್ತೀರಿ, ದುಡ್ಡು ವಾಪಸ್ ಕೊಡ್ತೀರಾ ಎನ್ನುವ ಚರ್ಚೆಗಷ್ಟೆ ನಾವು ಸೀಮಿತರಾಗಿದ್ದೇವೆ. ಎತ್ತಿದ ಪ್ರಶ್ನೆ ಮತ್ತು ಅದು ಜಾಗತಿಕವಾಗಿ ಉಂಟು ಮಾಡಿದ ಪರಿಣಾಮಗಳ ಬಗ್ಗೆ ಆದ ಚರ್ಚೆ ಮೂಲ ನೆಲೆಗಳಲ್ಲಿ ಆಗಿಲ್ಲ.ಜಾಗತಿಕ ನೆಲೆಯಲ್ಲಿ ಅದೊಂದು ಗಂಭೀರ ಸಂಗತಿ ಎಂದು ಒಪ್ಪಿಕೊಂಡರೆ ಮೂಲವನ್ನು ಒಪ್ಪಿಕೊಳ್ಳಬೇಕು, ಇಲ್ಲವಾದರೆ ಅದನ್ನು ನಿರ್ಲಕ್ಷ್ಯ ಮಾಡಬೇಕು. ಪ್ರಶಸ್ತಿ ವಾಪಸ್ ಮಾಡುವವರು ಮತ್ತು ಅದನ್ನು ವಿರೋಧಿಸುವವರು ಇಬ್ಬರಿಗೂ ಅವರವರದ್ದೇ ಆದ ಅಜೆಂಡಾಗಳಿವೆ ಆದರೆ ಅವಕ್ಕೆ ಅರ್ಥ ಸಿಗಬೇಕೆಂದರೆ ಪ್ರತಿಭಟನೆ, ಸತ್ಯಾಗ್ರಹ, ಉಪವಾಸ, ಪ್ರಶಸ್ತಿ ವಾಪಸಿಗಳು ನಿಜಾರ್ಥದಲ್ಲಿ ಎಲ್ಲ ನೆಲೆಗಳನ್ನು ಮೀರಿ ಜೀವಪರ ಕಾಳಜಿಯಿಂದ ನಡೆದಾಗ ಮಾತ್ರವೇ ಗಾಢ ಪರಿಣಾಮವನ್ನು ಬೀರುತ್ತವೆ ಎನ್ನುವುದರಲ್ಲಿ ಎಷ್ಟೊಂದು ಸತ್ಯವಿದೆ ಅಲ್ಲವೇ? ಬೌದ್ದಿಕ ದಾರಿದ್ರ್ಯ ಯಾವತ್ತಿಗೂ ಕಂಟಕ ಎನ್ನುವ ಸತ್ಯ ಬೇಗ ಅರಿವಿಗೆ ಬರಲಿ. ಅಂದ ಹಾಗೆ ಜಿಲ್ಲೆಯಲ್ಲಿ ಇಂತಹ ಕ್ರಿಯೆಗೆ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗದೆ ಮುಗುಮ್ಮಾಗಿರುವುದು "ದುರ್ಜನರ ದುಷ್ಟತನಕ್ಕಿಂತ ಸಜ್ಜನರ ಮೌನ ಹೆಚ್ಚು ಅಪಾಯಕಾರಿ" ಎಂಬ ಮಾತನ್ನು ನೆನಪಿಸುತ್ತಿದೆ ;)

Sunday, November 8, 2015

ಮಕ್ಕಳ ದಿನಾಚರಣೆಯೂ, ಟಿಪ್ಪು ಜಯಂತಿಯೂ

ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂಬುದು ಬಳಸಿ ಬಳಸಿ ಸವಕಲಾದ ಹಳೆ ಮಾತು, ಭಾರತದ ಪ್ರಧಾನಿಯಾಗಿದ್ದ ಜವಾಹರ ಲಾಲ್ ನೆಹರೂ ರವರ ಕಾರಣಕ್ಕೆ ಅವರ ಜನ್ಮ ದಿನವನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಿ ಕೊಂಡು ಬಂದಿರುವುದು ಗೊತ್ತಿರುವ ಸಂಗತಿ. ಇದೇ ನವೆಂಬರ್ 14ಕ್ಕೆ ಮಕ್ಕಳ ದಿನಾಚರಣೆ ಹಾಗೆಯೇ ನವೆಂಬರ್ 10ಕ್ಕೆ ಟಿಪ್ಪು ಜಯಂತಿ. ಈ ಸಂಧರ್ಭದಲ್ಲಿ ಮಕ್ಕಳ ಸ್ಥಿತಿ ಗತಿ ಮತ್ತು ವರ್ತಮಾನವನ್ನು ಅವಲೋಕಿಸುವ ಜೊತೆಗೆ ಟಿಪ್ಪು ಜಯಂತಿಯನ್ನು ರಾಜ್ಯ ಸರ್ಕಾರ ಅಧಿಕೃತವಾಗಿ ಆಚರಿಸುತ್ತಿರುವ ಕುರಿತು ಎದ್ದಿರುವ ವಾದ ವಿವಾದಗಳ ಕಡೆಗೆ ಗಮನ ಹರಿಸಿ ಸತ್ಯ-ಅಸತ್ಯಗಳ ಮಂಥನ ಅಗತ್ಯ.
          ವರ್ತಮಾನದ ಈ ಹೊತ್ತಿನಲ್ಲಿ ನಾವೆಲ್ಲಿದ್ದೇವೆ ? ಸಂಬಂಧಗಳ ಪರಿಧಿ ಎಲ್ಲಿದೆ? ಎಂಬ ಪ್ರಶ್ನೆಯನ್ನಿಟ್ಟುಕೊಂಡು ಮಕ್ಕಳ ಕುರಿತ ಸಂಗತಿಗಳನ್ನು ಚರ್ಚೆಗೆ ಎತ್ತಿಕೊಳ್ಳ ಬಹುದು. ಎರಡು ವರ್ಷದ ಹಿಂದೆ ಪತ್ರಿಕೆ ‘ನನ್ನ ಕನಸಿನ ಭಾರತ’ ಎಂಬ ಶೀರ್ಷಿಕೆಯಡಿ ಮಕ್ಕಳಿಂದ ಬರಹಗಳನ್ನು ಆಹ್ವಾನಿಸಿ ವಿಶೇಷ ಸಂಚಿಕೆಯನ್ನು ಮಾಡಿತ್ತು, ಸದರಿ ಸಂಚಿಕೆಯ ಖುಷಿಯನ್ನು ಹಂಚಿಕೊಳ್ಳುವ ವೇದಿಕೆಯಲ್ಲಿ ಮಕ್ಕಳು ಮಾತಿಗೆ ನಿಂತರು.ಪೋಷಕರಿಂದ ಪ್ರೇರಿತವಾದ ಬಹುತೇಕ ಮಕ್ಕಳು ತಮ್ಮ ಕನಸಿನ ಭಾರತದ ಕುರಿತು ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಲೆ ಮೀಸಲು ನೀತಿಯ ಕುರಿತು ಮಾತನಾಡಲು ತೊಡಗಿದರು. ನಾವು ಕಷ್ಟಪಟ್ಟು ಓದಿ ಮೆರಿಟ್ ಪಡೀತೀವಿ ಆದ್ರೆ ಮೀಸಲಾತಿ ಪಡೆದ ದಲಿತ ಮಕ್ಕಳು ಕಡಿಮೆ ಅಂಕ ಪಡೆದು ಉನ್ನತ ವಿದ್ಯಾಭ್ಯಾಸದ ಸೀಟು ಪಡೀತಾರೆ, ಉದ್ಯೋಗ ಪಡೀತಾರೆ, ಉದ್ಯೋಗದಲ್ಲಿ ಬಡ್ತಿ ಪಡೀತಾರೆ ನಮಗೆ ಮಾತ್ರ ಆ ಯೋಗ ಇಲ್ಲ. ಈ ದೇಶದಲ್ಲಿ ಎಲ್ಲರೂ ಸಮಾನರು ಎಂದು ಸಂವಿಧಾನ ಹೇಳುತ್ತೆ ಆದ್ರೆ ಸಮಾನತೆಗೆ ಮೀಸಲಾತಿ ಬೇಕಿಲ್ಲ ತೆಗೆದು ಹಾಕಿ ಎಂದು ಒಬ್ಬರ ಮೇಲಾದ ಮೇಲೆ ಒಬ್ಬ ಮಕ್ಕಳು ವೇದಿಕೆಯಲ್ಲಿ ಮಾತನಾಡ ತೊಡಗಿದರು. ಅದನ್ನು ಕೇಳಿ ನಗಬೇಕೋ ಅಳಬೇಕೋ ತಿಳಿಯಲಿಲ್ಲ ವರ್ತಮಾನದ ಪೂರ್ಣ ಅರಿವಿರದ ಮಕ್ಕಳು ಮೇಲುನೋಟಕ್ಕೆ ಸಿಗುವ ಸಂಗತಿಗಳನ್ನಷ್ಟೇ ಗ್ರಹಿಸಿ ಅಭಿಪ್ರಾಯಗಳನ್ನು ಹೊರ ಹಾಕಿದ್ದರು. ಈ ಅಭಿಪ್ರಾಯಗಳ ಹಿಂದೆ ಶೂದ್ರ ಮತ್ತು ಪುರೋಹಿತ ಶಾಹಿಗಳ ಗ್ರಹಣ ಬಡಿದ ಮನಸ್ಥಿತಿಯ ಒತ್ತಾಸೆ ಎದ್ದು ಕಾಣುತ್ತಿತ್ತು. ಇಂತಹ ಸಂಗತಿಗಳನ್ನು ವಿವೇಚನೆ ಇಟ್ಟು ನೋಡುವುದಾದರೆ, ಸಾಮಾಜಿಕ ಸಮಾನತೆಯ ಅರ್ಥವನ್ನು ನೈಜ ನೆಲಗಟ್ಟಿನಲ್ಲಿ ಗ್ರಹಿಸುವ ಸೂಕ್ಷ್ಮತೆ ಮರೆಯಾಗಿರುವುದು ಈ ದುರಂತಕ್ಕೆ ಕಾರಣ. ಸಮಾನತೆ ಎಂಬ ಪದದ ಹಿಂದಿನ ಕಹಿ ಸಂಗತಿಗಳು ಎಷ್ಟೋ ಸಲ ವಾಸ್ತವ ಸಂಗತಿಗಳ ಅರಿವಿನ ಕೊರತೆಯಿಂದ ಉಂಟಾದುದಾಗಿರುತ್ತವೆ. ಹಾಗಾಗಿ ಇಲ್ಲಿ ಒಂದಿಷ್ಟುಮಾಹಿತಿ ನಿಮ್ಮ ಗಮನಕ್ಕೆ ತರುತ್ತೇನೆ. ಸಂವಿಧಾನದಲ್ಲಿ ಸಮಾನತೆಯ ಸಮಾಜ ಸೃಷ್ಟಿಗಾಗಿ ಶೇ.49.5ರ ಮೀಸಲಾತಿಯನ್ನು ಉದ್ಯೋಗ, ಶಿಕ್ಷಣ ಕ್ಷೇತ್ರದಲ್ಲಿ ನೀಡಲಾಗಿದೆ. ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಶೇ. 22.5 ಮೀಸಲಿದ್ದರೆ ಈ ವರೆಗೂ ಸದರಿ ಸಮುದಾಯ ಬಳಸಿದ್ದು ಸುಮಾರು 8.5% ಅಷ್ಟೇ, ಪರಿಶಿಷ್ಟ ಪಂಗಡದವರು ಶೇ.3.5% ಬಳಸಿದ್ದರೆ, ಹಿಂದುಳಿದ ವರ್ಗಕ್ಕೆ ಮೀಸಲಿರುವ ಶೇ.27ರ ಮೀಸಲಾತಿಯಲ್ಲಿ ಬಳಕೆಯಾಗಿರುವುದು ಶೇ.4.5% ರಿಂದ ಶೇ.5% ಮಾತ್ರ. ಅಂದರೆ ಇನ್ನೂ ಪೂರ್ತಿಯಾಗಿ ಮೀಸಲಾತಿ ಒಂದು ತಲೆಮಾರಿನ ಮೂರನೇ ಒಂದು ಭಾಗಕ್ಕೂ ತಲುಪಿಲ್ಲ ಆಗಲೆ ಮೀಸಲಾತಿ ಕುರಿತು ಅಸಹನೆ ಎದ್ದಿದೆ. ಹೋಗಲಿ ವರ್ತಮಾನದಲ್ಲಿ ಏನಾದರೂ ಬದಲಾವಣೆ ಆಗಿದೆಯೇ ಎಂದರೆ ಅದೂ ಇಲ್ಲ ಜಾತಿ ಹಿಂದೆಂದಿಗಿಂತ ಇಂದು ಹೆಚ್ಚು ಜ್ವಲಿಸುತ್ತಿದ್ದು ಸುಪ್ತವಾಗಿ ಎಲ್ಲರ ಮನದಲ್ಲಿ ಅಡಕವಾಗಿದೆ ಮತ್ತು ಅದರ ವಿರಾಟ್ ಸ್ವರೂಪವನ್ನು ನಿತ್ಯವೂ ಕಾಣುತ್ತಲೇ ಇದ್ದೇವೆ. ಹೀಗಿರುವಾಗ ಮಕ್ಕಳಿಗೆ ಇಂತಹ ಸಂಗತಿಗಳನ್ನು ಪೋಷಕರು ಹೇಳ ಬೇಕಿತ್ತಲ್ಲವೇ?

          ಮಕ್ಕಳಿಗೆ ಇವತ್ತು ಆಯ್ಕೆಯ ಅವಕಾಶಗಳು ಸಿಗುತ್ತಿಲ್ಲ, ಪೋಷಕರು ಇದಕ್ಕೆ ಅವಕಾಶ ಮಾಡುತ್ತಿಲ್ಲ ಇದು ವ್ಯತಿರಿಕ್ತ ಪರಿಣಾಮಕ್ಕೆ ದಾರಿಯಾಗುತ್ತಿದೆ. ಶಿಕ್ಷಣದ ವ್ಯಾಪಾರೀಕರಣದ ಈ ಹೊತ್ತಿನಲ್ಲಿ ಜಾಗತಿಕ ವ್ಯವಸ್ಥೆಯಲ್ಲಿ ಆಕರ್ಷಣೆಗೆ ಬಲಿಬಿದ್ದು ಮಕ್ಕಳನ್ನು ಬಾಲ್ಯದಲ್ಲಿಯೇ ಶಿಕ್ಷಣದ ನೆಪದಲ್ಲಿ ದೂರ ಮಾಡುವ ಪೋಷಕರು ಸಾಮಾಜಿಕ ಬಂಧದ ಎಳೆಯನ್ನೇ ಕಡಿಯುತ್ತಿದ್ದಾರೆ. ಆಸಕ್ತಿಯಿಲ್ಲದ ಸಂಗತಿಗಳ ಕಲಿಕೆ, ಒತ್ತಾಯ ಪೂರ್ವಕ ಕಲಿಕೆ ಮಕ್ಕಳ ಬದುಕನ್ನು ರೂಪಿಸಲಾರದು. ಹಾಗೆಯೇ ಸಂಬಂಧಗಳ ಅರಿವಿನ ಕೊರತೆ ತಂದೆ-ಮಗಳು, ಅಣ್ಣ-ತಂಗಿಯ ಸಂಬಂಧವನ್ನೇ ಮರೆಯುವಂತೆ ಮಾಡಿದೆ, ಮಕ್ಕಳು ಲೈಂಗಿಕ ಪೀಡನೆಗೆ ತುತ್ತಾಗುತ್ತಿದ್ದಾರೆ. ಶಾಲೆ, ಕಾಲೇಜು, ವಿವಿಗಳಲ್ಲಿ ಶಿಕ್ಷಕ/ಅದ್ಯಾಪಕ/ಪ್ರಾಧ್ಯಾಪಕರ ಕಾಮ ತೃಷೆಗೆ ಮಕ್ಕಳು ನಲುಗುವಂತಾಗಿದೆ. ಬಿಡುವಿರದ ದಿನಚರಿಯ ನಡುವೆ ಮಕ್ಕಳ ಆಗು-ಹೋಗುಗಳನ್ನು ಗಮನಿಸುವ ತಾಳ್ಮೆ ಪೋಷಕರಿಗೆ ಅಗತ್ಯವಾಗಿ ಬೇಕಿದೆ, ಮಕ್ಕಳಿಗೆ ಒಳ್ಳೆಯ ಸಂಗತಿಗಳ ಮಾರ್ಗದರ್ಶನ, ಮುಕ್ತ ಕಲಿಕೆಯ ಅವಕಾಶಗಳನ್ನು ಪೋಷಕರು ಒದಗಿಸಬೇಕಾಗಿದೆ.
 ಇನ್ನು ಟಿಪ್ಪು ಜಯಂತಿ, ಜಾತಿ-ಜನಾಂಗಗಳ ಓಲೈಕೆಯ ಹಪಾಹಪಿಗೆ ಬಿದ್ದ ರಾಜ್ಯ ಸರ್ಕಾರ ಟಿಪ್ಪು ಜಯಂತಿಯನ್ನು ಅಧಿಕೃತವಾಗಿ ಆಚರಿಸಲು ಆದೇಶಿಸಿದೆ, ಟಿಪ್ಪು ಜಯಂತಿ ಮಾತ್ರವಲ್ಲ ಭೂತಕಾಲದ ಅನೇಕ ಮಹನೀಯರನ್ನು ಜಾತಿಯಿಂದ ಗುರುತಿಸಿ ಜಯಂತಿ ಆಚರಿಸಿಕೊಂಡು ಬರಲಾಗುತ್ತಿದೆ. ಈ ಜಾತಿ ಜಯಂತಿಗಳ ಸಾಂಕ್ರಾಮಿಕ ಪಿಡುಗೆ ಹೇಗಿದೆಯೆಂದರೆ ಆಯಾ ಮಹನೀಯರ ಜಾತಿಗೆ ಸೇರಿದ ಜನಾಂಗಗಳನ್ನು ಪ್ರಮುಖವಾಗಿ ಸೇರಿಸಿ ಜಯಂತಿ ಆಚರಣೆ ಮಾಡಲಾಗುತ್ತಿದೆ ಇದು ಕೆಟ್ಟ ಸಂಪ್ರದಾಯ. ಟಿಪ್ಪು ಸುಲ್ತಾನ್ ಭಾರತ ದೇಶದ ಇತಿಹಾಸದಲ್ಲಿ ದಾಖಲಾದ ಅರಸರಲ್ಲಿ ಪ್ರಮುಖ ಮತ್ತು ಬ್ರಿಟೀಷರ ವಿರುದ್ದ ಸೆಣಸಿದ ಅಪ್ರತಿಮ ಹೋರಾಟಗಾರ. ಆದರೆ ಟಿಪ್ಪು ಕುರಿತು ಇಲ್ಲದ ಫ್ಯಾಂಟಸಿ ಕಥೆಗಳನ್ನು ಹೆಣೆದು ಮತ್ತೆಲ್ಲೋ ಕೂರಿಸುವ ಬದಲು ವಾಸ್ತವ ಸಂಗತಿಗಳನ್ನು ಇತಿಹಾಸದಿಂದ ಹೆಕ್ಕಿ ನೋಡುವುದಾದರೆ ದೇಶಭಕ್ತಿಯಿಂದ ಹೋರಾಡುತ್ತಾ ರಣರಂಗದಲ್ಲೇ ಹುತಾತ್ಮನಾದ ಟಿಪ್ಪು, ರಣರಂಗದಲ್ಲಿ ಮಡಿದ ಕೆಲವೇ ಕೆಲವು ರಾಜರಲ್ಲಿ ಒಬ್ಬ ಟಿಪ್ಪು ಸುಲ್ತಾನ್.
ಟಿಪ್ಪು, ದಲಿತರನ್ನು ನೀರಗಂಟಿಯಾಗಿ ನೇಮಿಸಿದ, ದಲಿತ-ಹಿಂದುಳಿದವರಿಗೆ ಭೂ ಹಂಚಿಕೆಯನ್ನು ಮಾಡಿದ, ಅಂದು ಜನರು ಹೊಂದಿರುವ ಭೂಮಿಯಾದಾರದಲ್ಲಿ ತೆರಿಗೆ ಸಂಗ್ರಹವಾಗುತ್ತಿದ್ದಾಗ ಅದನ್ನು ಕೈಬಿಟ್ಟು ನಿಮ್ಮ ಕೈಗೆ ಬಂದ ಬೆಳೆಯಲ್ಲಿ 1/6 ಭಾಗ ಮಾತ್ರ ತೆರಿಗೆ ನೀಡಿ ಎಂದು ರೈತ ಪರ ರಾಜ ಟಿಪ್ಪು. ಅಂದಿನ ದಿನಗಳಲ್ಲೇ 29ಸಾವಿರಕ್ಕೂ ಹೆಚ್ಚು ಕೆರೆಗಳ ನಿರ್ಮಾಣಕ್ಕೆ ಮತ್ತು ಕೆರೆಗಳ ಹೂಳೆತ್ತಲು ಸಹಾಯ ಮಾಡಿದ ರಾಜ ಟಿಪ್ಪು ಸುಲ್ತಾನ್. ಕ್ಷಿಪಣಿಯನ್ನು ಬಳಸಿದ ಮೊದಲ ಅರಸ ಟಿಪ್ಪು. ಅಂದಾಜು 17ವರ್ಷಗಳ ಕಾಲ ಅರಸನಾಗಿದ್ದ ಟಿಪ್ಪು ಮತಾಂಧನಾಗಿದ್ದರೆ ಮೈಸೂರು ಸುತ್ತಮುತ್ತಲಿನ ಪರಿಸ್ಥಿತಿ ಇವತ್ತು ಹೇಗಿರುತ್ತಿತ್ತು? ಆತನ ಆಡಳಿತದಲ್ಲಿ ಬ್ರಾಹ್ಮಣರು ಆಡಳಿತಗಾರರಾಗಿದ್ದರು,ಅತೀ ಹೆಚ್ಚು  ಹಿಂದೂಗಳು ಸೈನಿಕರಾಗಿದ್ದರು. ಈತನ ಪ್ರದಾನಿ ಪೂರ್ಣಯ್ಯ, ಕಂದಾಯ ಮಂತ್ರಿ ಕೃಷ್ಣರಾವ್, ಸೇನಾ ದಂಡನಾಯಕ ಶ್ರೀನಿವಾಸ ರಾವ್ ಮುಸ್ಲಿಮರಲ್ಲ ಅಥವಾ ಮತಾಂತರಕ್ಕೆ ಒಳಪಟ್ಟಿರಲಿಲ್ಲ ಎಂಬುದು ದಿಟವಲ್ಲವೇ? ಟಿಪ್ಪು ಹಿಂದೂ ವಿರೋಧಿಯಾಗಿದ್ದರೆ ಹಿಂದೂ ದೇಗುಳಗಳು ಉಳಿಯುತ್ತಿದ್ದವೆ? 150ಕ್ಕೂ ಅಧಿಕ ದೇಗುಲಗಳಿಗೆ ನಗ-ನಾಣ್ಯವನ್ನು ಟಿಪ್ಪು ನೀಡಿದ್ದ, ಶೃಂಗೇರಿಯಲ್ಲಿ ಮರಾಠರು ಅರ್ಚಕನನ್ನು ಕೊಲ್ಲುವ ಮೂಲಕ ಬೀದಿಗೆ ಎಸೆದಿದ್ದ ವಿಗ್ರಹವನ್ನು ಮರಳಿ ಸ್ಥಾಪಿಸಿದ್ದು ಟಿಪ್ಪು ಅಲ್ಲವೇ?
ಕೊಡಗು ಪ್ರಾಂತ್ಯದಲ್ಲಿ 77ಸಾವಿರ ಹಿಂದೂಗಳನ್ನು ಟಿಪ್ಪು ಮತಾಂತರಗೊಳಿಸಿದ್ದಾದರೆ ಆ ಕಾಲದಲ್ಲಿ ಕೊಡಗಿನಲ್ಲಿ ಅಷ್ಟೊಂದು ಸಂಖ್ಯೆಯಲ್ಲಿ ಜನರು ಎಲ್ಲಿದ್ದರು? ಮತಾಂತರವಾದವರು ಎಲ್ಲಿದ್ದಾರೆ? ಟಿಪ್ಪು ಸುಲ್ತಾನ್ ಹಾಸನ, ಶಿವಮೊಗ್ಗ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿತ್ರದುರ್ಗ, ರಾಯಚೂರು, ಬಳ್ಳಾರಿ, ದಾರವಾಡ, ತುಮಕೂರು ಮತ್ತು ಕೋಲಾರ ಭಾಗದಲ್ಲಿದ್ದ ಸುಮಾರು 200 ಪಾಳೇಗಾರರನ್ನು ಧ್ವಂಸ ಮಾಡಿ ಇಡೀಭಾಗವನ್ನು ಮೈಸೂರು ಸಂಸ್ಥಾನಕ್ಕೆ ಸೇರಿಸಿ ಪಾಳೇಗಾರರ ಒಡೆತನದಲ್ಲಿದ್ದ ಭೂಮಿಯನ್ನು ಉಳುವ ರೈತರಿಗೆ ಹಂಚಿದ ಖ್ಯಾತಿ ಟಿಪ್ಪುವಿಗೆ ಸಲ್ಲುತ್ತದೆ. ರೈತಾಪಿ ಸಮುದಾಯಕ್ಕೆ ಬಡ್ಡಿರಹಿತ ಸಾಲವನ್ನು ಕೊಡುವ ವ್ಯವಸ್ಥೆಯನ್ನು ಮಾಡಿದ್ದ ಇಂತಹ ಟಿಪ್ಪು ಸುಲ್ತಾನನ್ನು ಮರಾಠರು ಮತ್ತು ನಿಜಾಮರ ನೆರವಿನಿಂದ ಮತ್ತು ತನ್ನ ಸೇನೆಯಲ್ಲಿದ್ದ ಪ್ರಮುಖರ ಕುತಂತ್ರದ ಲಾಭ ಪಡೆದ ಬ್ರಿಟೀಷರು ಮೋಸದಿಂದ ಯುದ್ದದಲ್ಲಿ ಟಿಪ್ಪುವನ್ನು ಹತಗೈದರು. ಇಂತಹ ವೀರನ ಸ್ಮರಣೆ ಮಾಡುವುದರಲ್ಲಿತಪ್ಪೇನಿದೆ?
ವಾಸ್ತವ ಸಂಗತಿಗಳನ್ನು ಪರಿಗ್ರಹಿಸುವ ಸೂಕ್ಷ್ಮತೆ ಸಮಾಜದಲ್ಲಿ ಬರಬೇಕಿದೆ, ಸಮಾಜದ ಸಮಾನತೆಯ ಹೊಣೆಯ ಅರಿವನ್ನು ಇಟ್ಟುಕೊಂಡು ಭವಿಷ್ಯದ ಪ್ರಜೆಗಳನ್ನು ರೂಪಿಸುವ ಪೋಷಕರು, ಶಿಕ್ಷಕರು ಜಾಗೃತಾವಸ್ಥೆಯಲ್ಲಿರ ಬೇಕಾಗುತ್ತದೆ. ಅಸಹಿಷ್ಣುತೆಯ ಕಾವಿನ ಈ ದಿನಗಳಲ್ಲಿ ಯಾವುದನ್ನಾದರೂ ವಿರೋಧಿಸುವ ಮೊದಲು ಅಲ್ಲಿನ ಸಂಗತಿಗಳನ್ನು ಸೂಕ್ಷ್ಮವಾಗಿ ಗ್ರಹಿಸುವ, ಬದ್ದತೆ ಪ್ರದರ್ಶಿಸುವ ಜೀವಪರ ನಿಲುವುಗಳನ್ನು ಹೊಂದುವ ಪರಿಸ್ಥಿತಿ ಮೂಡಲಿ ಅಲ್ಲವೇ?

Saturday, August 29, 2015

ಏನಿದು ಕಳಸಾ-ಬಂಡೂರಿ ನಾಲಾ ವಿವಾದ?


                        ಚಿತ್ರ:ಗೋವಾದಲ್ಲಿ ಹರಿಯುವ ಮಾಂಡೋವಿ ನದಿ(ಮಹದಾಯಿ ನದಿ)
*****ಅರಕಲಗೂಡು ಜಯಕುಮಾರ್/7899606841
ರಾಜ್ಯದ ಜನತೆಯನ್ನು ಪ್ರತೀ ಬಾರಿ ಕಾಡುವ ಸಮಸ್ಯೆಗಳಲ್ಲಿ ಜಲವಿವಾದದ್ದು ಪ್ರಮುಖವಾದುದು. ಇತ್ತ ರಾಜ್ಯದ ಹಳೆ ಮೈಸೂರು ಭಾಗದಲ್ಲಿ ಆಗಿಂದಾಗ್ಯೆ ಭುಗಿಲೇಳುತ್ತಿದ್ದ ಕಾವೇರಿ ನೀರಿನ ವಿವಾದ ಆತಂಕ ಸೃಷ್ಟಿಸಿದರೆ, ಅತ್ತ ಉತ್ತರ ಕರ್ನಾಟಕದಲ್ಲಿ ಮಹಾದಾಯಿ ನದಿ ಯೋಜನೆಯ ಪಾಲು ಪಡೆಯುವಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗುತ್ತಿದೆ. ಜಲವಿವಾದ ಪ್ರಾಧಿಕಾರ ರಚನೆಯಾದ ಮೇಲೆ ನೀರು ಬಳಕೆಗೆ ಕೇಂದ್ರದ ನ್ಯಾಯಾಧೀಕರಣದ ಒಪ್ಪಿಗೆ ಕಡ್ಡಾಯವಾಗಿರುವುದರಿಂದ ರಾಜ್ಯದಲ್ಲಿ ಅಂದಾಜು 500 ಕೋಟಿ ರೂ ವೆಚ್ಚದ ನೀರಾವರಿ ಕಾಮಗಾರಿಗಳು ನೆನೆಗುದಿಗೆ ಬಿದ್ದಿವೆ.
          ಇಂತಹ ಸಂದಿಗ್ಧ ಸಂಧರ್ಭದಲ್ಲಿ ಕಳಸಾ-ಬಂಡೂರಿ ನಾಲಾ ವಿವಾದ ಹೊತ್ತಿ ಉರಿಯುತ್ತಿದೆ. ರಾಜ್ಯದ ಯಾವುದೇ ಭಾಗದಲ್ಲಿ ನೀರಿನ ವಿವಾದಗಳು ಉಂಟಾದರೆ ಮತ್ತು ಗಡಿ ವಿವಾದಗಳು ಉಂಟಾದರೆ ಸ್ಥಳೀಯ ಹೋರಾಟಗಳಿಗೆ ಸೀಮಿತವಾಗುತ್ತಿರುವುದರಿಂದ ನಿರೀಕ್ಷಿಸಿದ ನ್ಯಾಯ ಪಡೆಯಲು ಅಡ್ಡಗಾಲಾಗಿದೆ ಎನ್ನಬಹುದು. ಕಳಸಾ-ಬಂಡೂರಿ ನಾಲಾ ವಿವಾದದಲ್ಲೂ ಇದೇ ಮನಸ್ಥಿತಿ ಇಲ್ಲವೇ ಅರಿವಿನ ಕೊರತೆ ಒಗ್ಗಟ್ಟಿನ ಹೋರಾಟಕ್ಕೆ ಅವಕಾಶ ಮಾಡುತ್ತಿಲ್ಲ. ಹಾಗಾಗಿ ಈ ಕುರಿತು ಮಾಹಿತಿಯನ್ನು ಇಲ್ಲಿ ಅವಗಾಹನೆಗೆ ತರಲಾಗುತ್ತಿದೆ. ಹೆಚ್ಚು ಕಡಿಮೆ ನೇತ್ರಾವತಿ ನದಿ ನೀರನ್ನು ತಿರುಗಿಸಿ ಎತ್ತಿನ ಹೊಳೆ ಯೋಜನೆ ಮೂಲಕ ದೊಡ್ಡಬಳ್ಳಾಪುರ, ಕೋಲಾರ ಮತ್ತಿತರೆಡೆಗೆ ನೀರು ಹರಿಸುವ ಯೋಜನೆಯ ವಿವಾದಂತೆಯೇ ಇದೆ ಈ ಕಳಸಾ-ಬಂಡೂರಿ ನಾಲಾ ವಿವಾದ. ಆದರೆ ಇದು ರಾಜ್ಯದೊಳಗಿನ ವಿವಾದ, ಅದು ಅಂತರ ರಾಜ್ಯಗಳ ನಡುವಿನ ವಿವಾದ!
ಜೀವ ತಳೆದ ಕನಸು:
    ಗೋವಾ ರಾಜ್ಯದ ಜೀವನದಿ ಎಂದು ಕರೆಯಲ್ಪಡುವ ಮಹದಾಯಿ ನದಿಯ ಮೂಲ ಹೆಸರು ಮಾಂಡೋವಿ ನದಿ. ಸರಿ ಸುಮಾರು 77ಕಿಮೀ ಉದ್ದದ ವಿಸ್ತೀರ್ಣ ಹೊಂದಿರುವ ಮಹದಾಯಿ ನದಿ 59ಕಿಮಿ ಗೋವಾ ರಾಜ್ಯದ ವ್ಯಾಪ್ತಿಯಲ್ಲಿದ್ದರೆ, 29ಕಿಮಿ ಕರ್ನಾಟಕ ರಾಜ್ಯದ ವ್ಯಾಪ್ತಿಯಲ್ಲಿದೆ. ಗೋವಾ ರಾಜ್ಯದ ಉತ್ತರ ಭಾಗದಿಂದ ಹರಿದು ಬರುವ ಈ ನದಿ ರಾಜ್ಯದ ಬೆಳಗಾಂ ಜಿಲ್ಲೆಯ ಪಶ್ಚಿಮ ಘಟ್ಟದ ಸಾಲಿನಲ್ಲಿರುವ ಭೀಮಘಡ  ಅರಣ್ಯದ ಮೂಲಕ 30ಕವಲುಗಳಾಗಿ ಹರಿಯುತ್ತದೆ ಈ ಪೈಕಿ ಗೋವಾ 1580ಚ.ಕಿ.ಮಿ ಜಲಾನಯನ ಪ್ರದೇಶ, ಕರ್ನಾಟಕ 375ಚ.ಕಿ.ಮಿ ಜಲಾನಯನ ಪ್ರದೇಶ ಮತ್ತು ಮಹರಾಷ್ಟ್ರ 77ಚ.ಕಿ.ಮಿ ಜಲಾನಯನ ಪ್ರದೇಶವನ್ನು ಹೊಂದಿದೆ. ಅದೇ ರೀತಿ ಕರ್ನಾಟಕದ ಮೂಲಕ 52.60ಟಿಎಂಸಿ ಅಡಿ, ಮಹರಾಷ್ಟ್ರ 8.33ಟಿಎಂಸಿ ಅಡಿ ಮತ್ತು ಗೋವಾ ರಾಜ್ಯದ ಮೂಲಕ 159.07 ಟಿಎಂಸಿ ಅಡಿ ನೀರು ಅರೇಬಿಯನ್ ಸಮುದ್ರಕ್ಕೆ ಸೇರಿಕೊಳ್ಳುತ್ತದೆ. ಹೀಗೆ ರಾಜ್ಯದ ಮೂಲಕ ಅರೇಬಿಯನ್ ಸಮುದ್ರಕ್ಕೆ ಸೇರಿ ಪೋಲಾಗುವ ನೀರನ್ನು ಸದ್ಭಳಕೆ ಮಾಡಿಕೊಳ್ಳಲು 35ವರ್ಷಗಳ ಹಿಂದೆ ಉತ್ತರ ಕರ್ನಾಟಕ ಜನರ ಆಶಯದಂತೆ ಅಂದಿನ ಮುಖ್ಯಮಂತ್ರಿ ಆರ್. ಗುಂಡೂರಾವ್, ಎಸ್ ಆರ್ ಬೊಮ್ಮಾಯಿ ನೇತೃತ್ವದಲ್ಲಿ ಸಮಿತಿ ರಚಿಸಿ ವರದಿ ನೀಡುವಂತೆ ಸೂಚಿಸಿದರು. ನವಲಗುಂದ ಮತ್ತು ನರಗುಂದ ತಾಲೂಕುಗಳಿಗೆ ಮಲಪ್ರಭಾ ನದಿಯಿಂದ ಕೊರತೆ ಬೀಳುವ ಕುಡಿಯುವ ನೀರನ್ನು ಮಹದಾಯಿ ನದಿಯಿಂದ ಪಡೆದು ಕೊಳ್ಳುವ ಕುರಿತು ವರದಿ ನೀಡುವುದು ಈ ಸಮಿತಿಯ ಆದ್ಯ ಕರ್ತವ್ಯವಾಗಿತ್ತು.

ಯೋಜನೆಯ ರೂಪುರೇಷೆ:
          ಮುಂದೆ 1989ರಲ್ಲಿ ಇದೇ ಎಸ್ ಆರ್ ಬೊಮ್ಮಾಯಿ ರಾಜ್ಯದ ಮುಖ್ಯಮಂತ್ರಿಯಾದರು. ತಾವೇ ತಯಾರಿಸಿದ್ದ ಮಹದಾಯಿ ನದಿ ನೀರಿನ ಯೋಜನೆಗೆ ಜೀವ ತುಂಬಲು ಸಿದ್ದರಾದರು. ಅಂದಿನ ಗೋವಾ ಮುಖ್ಯಮಂತ್ರಿ ಪ್ರತಾಪ್ ಸಿಂಗ್ ರನ್ನು ಭೇಟಿ ಮಾಡಿ ಚರ್ಚಿಸಿದರು, ಸಹಮತದೊಂದಿಗೆ ಯೋಜನೆಯನ್ನು ಅನುಷ್ಠಾನಕ್ಕೆ ತರಬೇಕು ಎನ್ನುವಷ್ಟರಲ್ಲಿ ಬೊಮ್ಮಾಯಿ ಸರ್ಕಾರ ಬಿದ್ದು ಹೋಯಿತು. 2000ನೇ ಇಸ್ವಿಯಲ್ಲಿ ಭಾರೀ ಬಹುಮತದಿಂದ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿಯಾದ ಎಸ್ ಎಂ ಕೃಷ್ಣ ಯೋಜನೆಯನ್ನು ಪುನರ್ ಪರಿಶೀಲಿಸಿ ಕಳಸಾ-ಬಂಡೂರಿ ನಾಲಾ ಯೋಜನೆಯನ್ನು ರೂಪಿಸಿದರು. ಈ ಯೋಜನೆಯ ಪ್ರಕಾರ ಗೋವಾ-ಕರ್ನಾಟಕ-ಮಹರಾಷ್ಟ್ರದ ಗಡಿ ಪ್ರದೇಶವಾದ ಭೀಮಘಡದಲ್ಲಿ ಕವಲಾಗಿ ಹರಿಯುವ ಮಹದಾಯಿ ನದಿಯ 7.56ಟಿಎಂಸಿ ನೀರನ್ನು ರಾಜ್ಯದ ಮಲಪ್ರಭಾ ನದಿಗೆ ಜೋಡಿಸುವ ಮೂಲಕ ರೇಣುಕಾ ಜಲಾಶಯದ ನೀರು ಸಂಗ್ರಹಣಾ ಸಾಮರ್ಥ್ಯವನ್ನು ಹೆಚ್ಚಿಸಿ ಗದಗ, ದಾರವಾಡ, ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳ , ನಗರಗಳ ಮತ್ತು 200ಕ್ಕೂ ಹೆಚ್ಚು ಗ್ರಾಮಗಳ ಕುಡಿಯುವ ನೀರಿನ ದಾಹ ಇಂಗಿಸಲು ನಿರ್ಧರಿಸಲಾಯಿತು. ಯೋಜನೆಯ ಅನುಷ್ಠಾನಕ್ಕಾಗಿ ಕಳಸಾ ಮತ್ತು ಬಂಡೂರಿ ನಾಲಾ ಯೋಜನೆಯನ್ನು ರೂಪಿಸಲಾಯಿತು.

ತಡಯಾಜ್ಞೆ:
          2001ರಲ್ಲಿ ಮುಖ್ಯಮಂತ್ರಿ ಕೃಷ್ಣ ನೇತೃತ್ವದ ಸರ್ಕಾರ  ಕಳಸಾ-ಬಂಡೂರಿ ನಾಲಾ ಯೋಜನೆ ಅನುಷ್ಠಾನಕ್ಕಾಗಿ ಕೇಂದ್ರ ಸರ್ಕಾರದ ಅನುಮತಿಯನ್ನು ಕೋರಿತು, ಕೇಂದ್ರ ಸರ್ಕಾರ ಕಳಸಾ-ಬಂಡೂರಿ ನಾಲಾ ಯೋಜನೆಗೆ ಪ್ರಾಥಮಿಕ ಅನುಮತಿಯನ್ನು ನೀಡಿ ಗೋವಾ ರಾಜ್ಯದ ನಿಲುವಿಗಾಗಿ ಅವಕಾಶ ನೀಡಿತು. ಹೀಗೆ ನೆನೆಗುದಿಗೆ ಬಿದ್ದ ಯೋಜನೆಯ ಅನುಮತಿಗೆ ರಾಜ್ಯ ಸರ್ಕಾರ ಒತ್ತಾಯಿಸುತ್ತಲೇ ಇತ್ತು. 2002ರಲ್ಲಿ ಗೋವಾ ಸರ್ಕಾರ, ರಾಜ್ಯದ ಕಳಸಾ-ಬಂಡೂರಿ ನಾಲಾ ಯೋಜನೆಗೆ ಸುಪ್ರೀಂಕೋರ್ಟಿನಿಂದ ತಡೆಯಾಜ್ಞೆ ತಂದಿತು. ಅಂದು ಗೋವಾದ ಮುಖ್ಯಮಂತ್ರಿಯಾಗಿದ್ದವರು ಇವತ್ತು ಕೇಂದ್ರದ ಬಿಜೆಪಿ ಸರ್ಕಾರದಲ್ಲಿ ರಕ್ಷಣಾ ಸಚಿವರಾಗಿರುವ ಮನೋಹರ್ ಪರಿಕ್ಕರ್ ಎಂಬುದು ಗಮನಾರ್ಹ ಸಂಗತಿ.
          ಕಳಸಾ-ಬಂಡೂರಿ ನಾಲಾ ಯೋಜನೆಯಿಂದ ಕರ್ನಾಟಕ-ಗೋವಾ ಗಡಿ ಪ್ರಾಂತ್ಯದ ಭೀಮಘಡ ಅರಣ್ಯ ದಲ್ಲಿರುವ ತನ್ನ ಭಾಗದಲ್ಲಿಅಮೂಲ್ಯ ಜೀವ ಸಂಕುಲಕ್ಕೆ ಹಾನಿಯಾಗುತ್ತದೆ ಎಂಬ ಕಾರಣ ನೀಡಿ ಗೋವಾ ಸರ್ಕಾರ, ರಾಜ್ಯದ ಯೋಜನೆಗೆ ತಡೆ ನೀಡುವಂತೆ ಸುಪ್ರೀಂಕೋರ್ಟಿಗೆ ಮನವಿ ಮಾಡಿತ್ತು. ಮನವಿಯನ್ನು ಪುರಸ್ಕರಿಸಿದ ಕೋರ್ಟು ಪೂರ್ಣ ಪ್ರಮಾಣದ ಯೋಜನೆಗೆ ತಡೆ ನೀಡಲು ನಿರಾಕರಿಸಿ ಭೀಮಘಡ ಅರಣ್ಯ ಪ್ರದೇಶದಲ್ಲಿ ಮಾತ್ರ ಯೋಜನೆ ಮುಂದುವರೆಸದಂತೆ ತಡೆ ನೀಡಿತು.
ನೆನೆಗುದಿಗೆ:
          ಮತ್ತೆ ಈ ಯೋಜನೆಗೆ ಜೀವ ಬಂದಿದ್ದು ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದಾಗ. ಅಂದಿನ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಮತ್ತು ಬಿ ಎಸ್ ಯಡಿಯೂರಪ್ಪ ಶತಾಯ ಗತಾಯ ಕಳಸಾ-ಬಂಡೂರಿ ನಾಲಾ ಯೋಜನೆ ಜಾರಿಗೆ ತರುವ ಸಲುವಾಗಿ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕಣಕುಂಬಿಯಲ್ಲಿ 100ಕೋಟಿ ರೂ ವೆಚ್ಚದ ಯೋಜನೆಗೆ ಅಡಿಗಲ್ಲು ಹಾಕಿದರು. ಹೀಗೆ 2006ರಲ್ಲಿ ಜೀವತಳೆದ ಯೋಜನೆಯಲ್ಲಿ ಕಳಸಾ ದಿಂದ ಮಲಪ್ರಭಾ ನದಿಯ ವರೆಗಿನ ಕಾಲುವೆ ಉದ್ದ 5.15 ಕಿಮಿ ಯಲ್ಲಿ 3.56ಟಿಎಂಸಿ ಅಡಿ ನೀರು ಹರಿಸುವ ಯತ್ನವಾದರೆ ಭೀಮಘಡ ರಕ್ಷಿತಾರಣ್ಯ ವ್ಯಾಪ್ತಿಯಲ್ಲಿ ಬರುವ ಬಂಡೂರಿ ನಾಲೆಯಲ್ಲಿ 4ಟಿಎಂಸಿ ಅಡಿ ನೀರು ಹರಿಸುವ ಯತ್ನವಿತ್ತು. ಈಗಾಗಲೆ ಕಳಸಾ ಕಾಲುವೆ ಶೇ.98ರಷ್ಟು ಪೂರ್ಣಗೊಂಡಿದೆ, 120ಮೀ ಮಾತ್ರ ಕಳಸಾ ಕಾಲುವೆ ನಿರ್ಮಾಣ ಬಾಕಿ ಇದೆ. ಆದರೆ ಭೀಮಘಡ ರಕ್ಷಿತಾರಣ್ಯದಲ್ಲಿ ಕಾಮಗಾರಿ ಮುಂದುವರೆಸಲು ಕೇಂದ್ರದ ಅರಣ್ಯ ಮತ್ತು ಪರಿಸರ ಇಲಾಖೆ ಅನುಮತಿ ನೀಡದ ಹಿನ್ನೆಲೆಯಲ್ಲಿ ನೆನೆಗುದಿಗೆ ಬಿದ್ದಿದೆ.
          ಮಹದಾಯಿ ನದಿ ನೀರು ಬಳಕೆ ಯೋಜನೆಯ ಸಲುವಾಗಿ ನ್ಯಾಯಾಧೀಶರಾದ ಜೆ ಎಂ ಪಾಂಚಾಲ್ ನೇತೃತ್ವದಲ್ಲಿ 2010ರಲ್ಲಿ ರಚಿಸಲಾಗಿರುವ ಕೇಂದ್ರ ನ್ಯಾಯಾಧಿಕರಣ ಪ್ರಾದಿಕಾರ ಈ ವರೆಗೆ ಆಗಿರುವ ಕಾಮಗಾರಿಯ ಮುಂದಿನ ಆದೇಶದ ವರೆಗೆ ನದಿಗಳ ನೀರು ಬಳಕೆ ಯೋಜನೆ ಅನುಷ್ಠಾನಕ್ಕೆ ತರದಂತೆ ಆದೇಶಿಸಿದೆ, ಆದ್ದರಿಂದ ಬಂಡೂರಿ ಯೋಜನೆ ನೆನೆಗುದಿಗೆ ಬಿದ್ದಿದೆ. ಸದರಿ ಯೋಜನೆ ಅನುಷ್ಠಾನದಲ್ಲಿ ಮಹರಾಷ್ಟ್ರದ ಪಾತ್ರವಿಲ್ಲ ಆದರೆ ಕಳಸಾ-ಬಂಡೂರಿ ನಾಲೆ ಸೇರ್ಪಡೆಯಾಗುವ ಮಹದಾಯಿ ನದಿ ಸ್ವಲ್ಪ ಮಟ್ಟಿಗೆ ಮಹರಾಷ್ಟ್ರ ಗಡಿಯನ್ನು ಬಳಸಿಕೊಂಡು ಹೋಗುತ್ತದೆ ಎಂಬುದನ್ನು ಬಿಟ್ಟರೆ ಮಹರಾಷ್ಟ್ರಕ್ಕೆ ಯಾವುದೇ ಲಾಭವಿಲ್ಲ ಆದಾಗ್ಯೂ ಮಹರಾಷ್ಟ್ರ ಸರ್ಕಾರವನ್ನು ಗಣನೆಗೆ ತೆಗೆದುಕೊಂಡು ವಿವಾದ ಬಗೆ ಹರಿಸಲು ಉತ್ತರ ಕರ್ನಾಟಕದಲ್ಲಿ ಹೋರಾಟ ನಡೆಯುತ್ತಿದೆ.

ಬೇಕಿದೆ ಒಗ್ಗಟ್ಟು:

         ಹೀಗೆ ನಡೆಯುತ್ತಿರುವ ಈ ಹೋರಾಟಕ್ಕೆ ಇವತ್ತಿಗೆ 45 ಅಮೋಘ ದಿನಗಳು. ಕುಡಿಯುವ ನೀರಿನ ಸಂಕಷ್ಠಕ್ಕೆ ಸಿಲುಕಿರುವ ಅಲ್ಲಿನ ಜನರ ನೋವು ಮತ್ತು ಕಳಕಳಿ ರಾಜ್ಯದ ಎಲ್ಲೆಡೆ ಪಸರಿಸ ಬೇಕಿದೆ, ಕಾವೇರಿ ವಿವಾದ ಹಳೇ ಮೈಸೂರು ಜನರಿಗೆ ಮಾತ್ರ, ಗಡಿ ವಿವಾದ ಬೆಳಗಾವಿಗೆ ಮಾತ್ರ, ಕೃಷ್ಣಾ ನದಿ ನೀರಿನ ವಿವಾದ ಗುಲ್ಪರ್ಗಾ-ವಿಜಯಪುರ ಜನರಿಗೆ ಮಾತ್ರ, ಕೋಮು ಸಂಘರ್ಷದ ಸಮಸ್ಯೆ ದಕ್ಷಿಣ ಕನ್ನಡದ ಜನರದ್ದು ಮಾತ್ರ,  ಕಳಸಾ-ಬಂಡೂರಿ ವಿವಾದ ಉತ್ತರ ಕರ್ನಾಟಕದ ಸಮಸ್ಯೆ ಎಂದು ಕೂರುವುದಕ್ಕಿಂತ ಮಾನವೀಯ ನೆಲೆಗಟ್ಟಿನಲ್ಲಿ ರಾಜ್ಯದ ಎಲ್ಲ ಭಾಗಗಳ ಜನರು ಸಕ್ರಿಯವಾಗಿ ಉತ್ತರ ಕರ್ನಾಟಕದ ಜನರ ನೋವಿಗೆ ಸ್ಪಂದಿಸ ಬೇಕಾಗಿದೆಯಲ್ಲವೇ? 
ಈ ಲೇಖನದ ಪೂರ್ಣ ಪಾಠವನ್ನು ಅವಧಿಮ್ಯಾಗ್.ಕಾಮ್ ಪ್ರಕಟಿಸಿದೆ, ಅವದಿ ಸಂಪಾದಕೀಯ ಮಂಡಳಿಗೆ ಧನ್ಯವಾದಗಳು

http://avadhimag.com/2015/09/01/%E0%B2%8F%E0%B2%A8%E0%B2%BF%E0%B2%A6%E0%B3%81-%E0%B2%95%E0%B2%B3%E0%B2%B8%E0%B2%BE-%E0%B2%AC%E0%B2%82%E0%B2%A1%E0%B3%82%E0%B2%B0%E0%B2%BF-%E0%B2%A8%E0%B2%BE%E0%B2%B2%E0%B2%BE-%E0%B2%B5%E0%B2%BF/

Sunday, May 3, 2015

ಆ ದಿನಗಳು ಎಲ್ಲಿ ಹೋದವೋ?

ಕೃಪೆ: ಗೂಗಲ್ ಅಂತರ್ಜಾಲ
ವಾರ್ಷಿಕ ಪರೀಕ್ಷೆಗಳು ಇನ್ನೇನು ಮುಗಿಯುತ್ತಿವೆ ಎನ್ನುವ ಹೊತ್ತಿಗೆ ಸ್ವತಂತ್ರ ಪಕ್ಷಿಗಳಾಗಿ ಸ್ವಚ್ಚಂಧವಾಗಿ ಹಾರಾಡುವ ಮನಸ್ಥಿತಿ, ಅಪ್ಪ ಕೊಟ್ಟ ಕಾಸು ಡಬ್ಬಿಯಲ್ಲಿ ತುಂಬಿಸಿ ಒಡೆಯುವ ಘಳಿಗೆ ಅದು. ಆಟ-ಓಟ ಮಾಮೂಲು, ಹೆಚ್ಚು ಮಳೆ ಸುರಿಯುವ  ಆ ಪ್ರದೇಶದಲ್ಲಿ ರಾತ್ರಿ-ಹಗಲು ಅನುಭವಕ್ಕೆ ತಂದು ಕೊಳ್ಳುವುದೇ ಒಂದು ಅನನ್ಯ ಅನುಭವ. ಶಾಲೆಗೆ ನಾಳೆಯಿಂದ ರಜೆ ಎನ್ನುವಾಗಲೇ ತರಾತುರಿಯಲ್ಲಿ ಗ್ರಾಮದ ಸನಿಹದಲ್ಲಿರುವ ಬೆಟ್ಟಕ್ಕೆ ತೆರಳಿ ಉರುವಲು ಕಟ್ಟಿಗೆ ಆಯುವ ಕೆಲಸ ಅದೆಷ್ಟು ಮಜಾ ಕೊಡುತ್ತಿತ್ತೆಂದರೆ ಹೊತ್ತು ಹೋಗಿದ್ದೆ ತಿಳಿಯುತ್ತಿರಲಿಲ್ಲ. ಬೆಟ್ಟದ ಅರಣ್ಯಕ್ಕೆ ಓಡಿ, ಮರ ಹತ್ತಿ ಇಳಿದು ಎಲೆ, ಹಣ್ಣು ಕಿತ್ತು, ಬಂಡೆಯ ಮೇಲೆ ಪವಡಿಸಿ ತಿಂದು ತೇಗಿ ಝರಿಯ ನೀರ ಕುಡಿದು ಹೊರಲು ಸಾಧ್ಯವಾಗುವಷ್ಟು ಕಟ್ಟಿಗೆ ಹೊರೆ ಹೊತ್ತು ಶಾಲೆಗೆ ಬರುವ ಹೊತ್ತಿಗೆ ಆಯಾಸ ಮನೆ ಮಾಡಿ ಬಿಡುತ್ತಿತ್ತು. ಅಂದ ಹಾಗೆ ಅವತ್ತು ಉರುವಲು ಕಟ್ಟಿಗೆ ಎರಡು ಕಾರಣಗಳಿಗೆ ಸಂಗ್ರಹಿಸಲಾಗುತ್ತಿತ್ತು. ಒಂದು ಶಾಲೆಯಲ್ಲಿ ಪ್ರತೀ ದಿನ ಮದ್ಯಾಹ್ನ ನೀಡುತ್ತಿದ್ದ ಗೋದಿ ಉಪ್ಪಿಟ್ಟು ತಯಾರಿಗೆ ಮತ್ತೊಂದು ಶಾಲಾ ಮುಖ್ಯ ಶಿಕ್ಷಕರ ಮನೆಯ ಉಪಯೋಗಕ್ಕೆ. 
        ಅವತ್ತಿನ ದಿನಗಳಲ್ಲಿ ಯಾವ ಫಲಾಪೇಕ್ಷೆಯಿಲ್ಲದೇ (ಶುಲ್ಕ ರಹಿತವಾಗಿ) ಮನೆ ಪಾಠ ಮಾಡುತ್ತಿದ್ದ ಶಿಕ್ಷಕರು ಪಾಠವನ್ನಷ್ಟೇ ಅಲ್ಲ ಬದುಕಿನ ಪಾಠವನ್ನು ಹೇಳುತ್ತಿದ್ದರು. ಬೇಸಿಗೆ ರಜೆ ಬಂದಾಗ ಅವರನ್ನು ಒತ್ತಾಯ ಪೂರ್ವಕವಾಗಿ ಮನೆಗೆ ಕರೆತಂದು ಊಟ ಮಾಡಿಸಿದರೆ ಅದೇ ತೃಪ್ತಿ ಉಳಿದಂತೆ ಕಟ್ಟಿಗೆ ಸಂಗ್ರಹಿಸಿ ತಂದು ಹಾಕುವುದು. ಇವಷ್ಟೇ ಕೆಲಸ, ಆಮೇಲೆ ಶಾಲೆಯ ರಜೆ ಘೋಷಣೆಯ ದಿನ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಅಂತಲೇ  ಕೊಡಲಾಗುತ್ತಿದ್ದ ಪುಸ್ತಕಗಳನ್ನು ಶಿಕ್ಷಕರು ಮಾತ್ರ ಆಗಾಗ ತೆಗೆದು ಓದುತ್ತಿದ್ದುದನ್ನು ಗಮನಿಸಿದ್ದ ನನಗೆ ತುಂಬಾ ಗಮನ ಸೆಳೆದದ್ದು ಇತಿಹಾಸ, ಪುರಾಣದ ಅಮರ ಚಿತ್ರ ಕಥಾ ಮಾಲಿಕೆ. 
              ಆಗ ಟಿವಿ ಇಲ್ಲ, ಸಿನಿಮಾ ಥಿಯೇಟರ್ ಗಳಿಲ್ಲ, ಬೇಸಿಗೆ ಶಿಬಿರಗಳ ರೇಜಿಗೆ ಇಲ್ಲ, ಓದುವ ಹವ್ಯಾಸ ಒಂದೇ ನಮ್ಮನ್ನು ಬಂಧಿಸಿಟ್ಟಿದ್ದರಿಂದ ಓದಿನ ಹಸಿವು ಇನ್ನು 6-7ನೇ ತರಗತಿಗೆ ಬರುವ ವೇಳೆಗೆ ಜಾಸ್ತಿ ಆಗಿ ಬಿಟ್ಟಿತ್ತು. ಸುದರ್ಶನ, ಟಿ. ಕೆ. ರಾಮರಾವ್, ಹಂದನಕೆರೆ ವೆಂಕಟದಾಸು ಮತ್ತಿತರರ ಕೃತಿಗಳನ್ನು ವನಗೂರು ಕೂಡುರಸ್ತೆಯ ಕುಮಾರ ಲಿಂಗೇಶ್ವರ ಜಾತ್ರೆಗೆ ಹೋದಾಗ ಕೂಡಿಟ್ಟ ಹಣದಲ್ಲಿ ಖರಿದಿಸಿ ಓದುವುದೇ ಒಂದು ಮಜಾ ಆಗಿರ್ತಿತ್ತು. ಅದಕ್ಕೂ ಮುನ್ನ ರಜೆ ಸಿಕ್ಕಾಗಲೆಲ್ಲ ಭಾರತ-ಭಾರತಿ ಪುಸ್ತಕ ಮಾಲಿಕೆಯ ಅಂಗೈ ಅಗಲದ ಪುಟ್ಟ ಪುಸ್ತಕಗಳು ನನ್ನ ಓದಿನ ಹಸಿವನ್ನು ವಿಸ್ತರಿಸಿದವು. ನನಗೆ ನೆನಪಿರುವಂತೆ ಮೊದಲಿಗೆ ಓದಿದ ಪುಸ್ತಕ ವೀಣೆ ಶೇಷಣ್ಣ, ಭಗತ್ ಸಿಂಗ್, ಮಹಾತ್ಮ ಗಾಂಧಿ , ಅಂಬೇಡ್ಕರ್,ವಿವೇಕಾನಂದ, ಸಿದ್ದಾರ್ಥ, ಮಹಾ ಭಾರತ ಮತ್ತು ರಾಮಾಯಣದ ಎಲ್ಲ ಪಾತ್ರಗಳು, ಮೈಸೂರು ಮಹಾರಾಜರ ಕುರಿತಾದ ಪುಸ್ತಕಗಳು,ಹೀಗೆ ತುಂಬಾ ಸಂಕ್ಷಿಪ್ತವಾಗಿರುತ್ತಿದ್ದ ಸಾಹಿತ್ಯದ ಆ ಪುಸ್ತಕಗಳು ಅವತ್ತಿಗೆ ಅಚ್ಚುಮೆಚ್ಚು.  ಆದರೆ ಇವೆಲ್ಲವನ್ನು ಮೀರಿದ್ದು ರಾಮಾಯಣ-ಮಹಾಭಾರತದ ಕಥಾನಕಗಳನ್ನು ಮನಮುಟ್ಟುವಂತೆ ಚಿತ್ರಿಸಿ ಸಾಹಿತ್ಯ ಒದಗಿಸುತ್ತಿದ್ದ ಅಮರ ಚಿತ್ರಕಥಾ ಮಾಲಿಕೆ. ಮಂಗಲ್ ಪಾಂಡೆ ಕುರಿತಾದ ಅಮರ ಚಿತ್ರಕಥಾ ಮಾಲಿಕೆ ಅವತ್ತಿಗೆ ನನ್ನನ್ನು ಬಹುವಾಗಿ ಕಾಡಿತ್ತು, ಹೀಗೆ ಅಂಟಿಕೊಂಡ ಓದಿನ ಜಾಡ್ಯ ತೇಜಸ್ವಿಯವರ ಕರ್ವಾಲೋ ಕೃತಿಯನ್ನು 6ನೇ ಇಯತ್ತೆಯಲ್ಲಿರುವಾಗಲೇ ಓದುವ ಮೂಲಕ ಸಾಹಿತ್ಯದ ಓದಿನ ದಿಕ್ಕನ್ನು ಬದಲಿಸಿತ್ತು. ಶಾಲೆಯಲ್ಲಿದ್ದ ಪುಸ್ತಕಗಳನ್ನು ಓದಿ ಮುಗಿಸಿದ ಮೇಲೆ ಸೋದರ ಮಾವನ ಗೆಳೆಯರ ಮನೆಯಿಂದ ಅವತ್ತಿಗೆ ಪಡೆದು ಓದಿದ ಅಂಬೇಡ್ಕರ್ ಮತ್ತು ಗಾಂಧಿಯ ಪುಸ್ತಕಗಳು ವಾಸ್ತವ ಜಗತ್ತಿಗೆ ನನ್ನನ್ನು ತೆರೆದು ಕೊಳ್ಳುವಂತೆ ಮಾಡಿದವು. ಪತ್ರಿಕೆಗಳು ಬರುವುದನ್ನು ಕಾಯ್ದುಕೊಂಡು ಸಹೋದರನೊಡನೆ ಕಿತ್ತಾಡಿಕೊಂಡು ಒಂದಕ್ಷರವನ್ನು ಧಾವಂತದಲ್ಲಿ ಓದುತ್ತಿದ್ದ ದಿನಗಳು, ಸುಧಾ-ತರಂಗದ ಜೊತೆಗೆ ಆಗಷ್ಟೇ ಬಣ್ಣದ ಹೊಳಪಿನಲ್ಲಿ ಜೀವ ತಳೆಯುತ್ತಿದ್ದ ಲಂಕೇಶ್ ಪತ್ರಿಕೆ, ರಾಜು ಪತ್ರಿಕೆಗಳು ಹೊರ ಜಗತ್ತಿನ ಸಂಪರ್ಕವಿಲ್ಲದ ದಿನಗಳಲ್ಲೂ ಹೊರ ಜಗತ್ತಿನ ಅರಿವು ಮೂಡಿಸುತ್ತಿದ್ದವು, ರಜಾ ಕಾಲದಲ್ಲಿ ರೇಡಿಯೋ ಕೇಳುವುದೇ ಮಜಾ, ರೇಡಿಯೋ ಗೆ ಪತ್ರ ಬರೆಯುವುದು, ರೇಡಿಯೋ ನಾಟಕಗಳನ್ನು ಆಲಿಸುವುದು, ಯುವವಾಣಿಯ ವೈವಿದ್ಯಮಯ ಕಾರ್ಯಕ್ರಮಗಳು, ವಾರ್ತೆಗಳು ಅದರಲ್ಲೂ ವಿದೇಶಿ ರೇಡಿಯೋ ಗಳಲ್ಲಿ ಕನ್ನಡ ಕೇಳುವ ಖುಷಿ ಸಖತ್ತಾಗಿರ್ತಿತ್ತು. ರೇಡಿಯೋ ಮಾಸ್ಕೋ, ರೇಡಿಯೋ ಸಿಲೋನ್, ದಾರವಾಡ ಆಕಾಶವಾಣಿ, ಹಿಂದಿಯ ವಿವಿಧ ಭಾರತಿ ಅಬ್ಬಾ ಅಂತಹ ಸುಖದ ದಿನಗಳು ಮರೆಯಲು ಸಾಧ್ಯವೇ? 
           ಬಹುಶ: ಗಾಂಧಿ-ಅಂಬೇಡ್ಕರ್ ಚಿಂತನೆಗಳು,  ತೇಜಸ್ವಿಯವರ ಸಾಹಿತ್ಯದ ಓಘ, ಪತ್ರಿಕೆಗಳ   ಓದು ನನ್ನೊಳಗಿನ ಚಿಂತಕನನ್ನು, ಬರಹಗಾರನನ್ನು ಜಾಗೃತಗೊಳಿಸಿದ್ದವು, 7ನೇ ತರಗತಿಗೆ ಬರುವ ಹೊತ್ತಿಗೆ ರೈತ ಸಂಘದ ಚಳುವಳಿಯ ಕಾವು ಆದರ್ಶ ಮತ್ತು ಭ್ರಷ್ಟಾಚಾರ ಮುಕ್ತ ಸಮಾಜದ ಕಲ್ಪನೆಯನ್ನು ಅವತ್ತಿಗೆ ನನ್ನಲ್ಲಿ ಒಡ ಮೂಡಿಸಿದ್ದವು.ಕಥೆ-ಕವನ-ಲೇಖನ ಬರೆಯುವ ತಹತಹಿಕೆ ಆರಂಭವಾಗಿತ್ತು. ಪರಿಸರದಲ್ಲಿ ಕಣ್ಣಳತೆಯಲ್ಲೇ ಕಾಣುತ್ತಿದ್ದ ಅಸ್ಪೃಶ್ಯತೆ, ತಾರತಮ್ಯದ ಧ್ವನಿಗಳು, ಶೋಷಣೆಯ ಮುಖಗಳು, ಪತ್ರಿಕೆಗಳಲ್ಲಿ ಓದುತ್ತಿದ್ದ ರೇಡಿಯೋದಲ್ಲಿ ಕೇಳುತ್ತಿದ್ದ ಬದನವಾಳು ದಲಿತರಿಗೆ ಮಲ ತಿನ್ನಿಸಿದ ಪ್ರಕರಣಗಳು ಬಂಡಾಯದ ಮತ್ತು ನಿಷ್ಟುರವಾದ ಗ್ರಹಿಕೆಗಳನ್ನು ಬೆಳೆಸಿಕೊಳ್ಳಲು ಮತ್ತು ಅಕ್ಷರ ರೂಪಕ್ಕೆ ಇಳಿಸಲು ಕಾರಣವಾದವು.  
          ಅಮರ ಚಿತ್ರಕಥೆಗಳನ್ನು ಓದಿದ ಪರಿಣಾಮ ನಮ್ಮ ಆಟಗಳಲ್ಲೂ ಅವೇ ಪಾತ್ರಗಳು ಒಡ ಮೂಡುತ್ತಿದ್ದವು. ಭೀಮ-ದುರ್ಯೋಧನರ ಕಾಳಗ, ಭರತ-ಬಾಹುಬಲಿಯ ಕಾಳಗ, ವೀರ ಅಭಿಮನ್ಯು, ದಾನಶೂರ ಕರ್ಣ,ಭೀಮ-ಬಕಾಸುರ, ಶ್ರೀರಾಮ, ಲವ-ಕುಶ ಹೀಗೆ ಅನೇಕ ಪಾತ್ರಗಳೇ ನಾವಾಗಿ ಆಡುವ ಭರಾಟೆಯಲ್ಲಿ ನಿಜವಾಗಿಯೂ ಗದೆಯಂತಹ ವಸ್ತುಗಳಲ್ಲಿ ಹೊಡೆದಾಡಿ ಅತ್ತದ್ದೆಷ್ಟೋ ದಿನಗಳು ಹಾಗೆಯೇ ಬಿಲ್ಲಿನಿಂದ ಬಿಟ್ಟ ಬಾಣಗಳು ತಗುಲಿ ರಾತ್ರಿಯೆಲ್ಲ ಬವನೆ ಪಟ್ಟ ದಿನಗಳು ಇವೆ. ಇದೆಲ್ಲಕ್ಕಿಂತ ಮಜಾ ಕೊಟ್ಟ ಸಂಗತಿಗಳೆಂದರೆ ದೇವರ ಅನ್ವೇಷಣೆ! ದೇವರನ್ನು ಕಾಣ ಬೇಕಾದರೆ ತಪಸ್ಸು ಮಾಡಬೇಕು, ತಪಸ್ಸು ಮಾಡಿದರೆ ದೇವರು ನಿಜಕ್ಕೂ ಬರುತ್ತಾನಾ ಎಂಬ ಪ್ರಶ್ನೆಯಿಟ್ಟುಕೊಂಡು ಅಮ್ಮನಿಗೆ ತಿಳಿಯದಂತೆ ಉಪವಾಸ ಇದ್ದು, ಮಡಿಯಲ್ಲಿದ್ದು ಅಮ್ಮ ಬಟ್ಟೆ ತೊಳೆಯಲು ಹೊಳೆಗೆ ಹೋಗುತ್ತಿದ್ದಂತೆ ಮನೆಯ ಹಿಂದಿನ ತಿಪ್ಪೆ (ಈಗಿನ ಗಲೀಜು ತಿಪ್ಪೆಗಳಲ್ಲ ಬದಲಿಗೆ ಕಟ್ಟಿಗೆ ಒಲೆ ಉರಿಸುತ್ತಿದ್ದ ಬೂದಿಯನ್ನು ಗುಡ್ಡೆ ಹಾಕುತ್ತಿದ್ದ ತಿಪ್ಪೆ) ಮೇಲೆ ಕುಳಿತು ನಿರ್ವಾಣ ಸ್ಥಿತಿಯಲ್ಲಿ ಲಂಗೋಟಿ ಕಟ್ಟಿಕೊಂಡು ದಂಡದ ಮೇಲೆ ಕೈ ಇಟ್ಟು ತಪಸ್ಸು ಕುಳಿತು ಬಿಡುತ್ತಿದ್ದೆ. ಬೆಳಿಗ್ಗೆ ಮದ್ಯಾಹ್ನ ಕಳೆದು ಸಂಜೆಯಾದರೂ ದೇವರೇ ಪ್ರತ್ಯಕ್ಷ ಆಗುತ್ತಿರಲಿಲ್ಲ, ಅದೊಂದು ದಿನ ಕೇರೆ ಹಾವು ತಿಪ್ಪೆಯ ಮೇಲೆ ಕುಳಿತಿದ್ದ ನನ್ನ ಬಳಿಗೆ ಬಂದಾಗಲೇ ಇನ್ನು ಯಾವ ತಪಸ್ಸು ಬೇಡಪ್ಪಾ ಅನಿಸಿಬಿಟ್ಟಿತ್ತು,. ಇದು ನನ್ನ ಅರಿವಿನ ಪ್ರಜ್ಞೆಯನ್ನು ಮತ್ತಷ್ಟು ಹೆಚ್ಚಿಸಿ ಬಿಟ್ಟಿತು, ಪ್ರಶ್ನಿಸುವ ಮನೋಧರ್ಮವನ್ನು, ವೈಚಾರಿಕೆ ನಿಲುವನ್ನು ಮತ್ತಷ್ಟು ಹೊಳಪುಗೊಳಿಸಿತು. 
            12ನೇ ವಯಸ್ಸಿಗೆ ಕಥೆ ಮತ್ತು ಅಪೂರ್ಣವಾದ ಕಾದಂಬರಿಗಳನ್ನು ಅರ್ದಂಬರ್ದ ಬರೆದು ಹಾಗೆ ಬಿಟ್ಟಿದ್ದೆ. ವರ್ಣ ಚಿತ್ರಗಳನ್ನು ಬಿಳಿಯ ಬಟ್ಟೆಯ ಮೇಲೆ ಬರೆಯುವ ಪ್ರಯತ್ನಗಳನ್ನು ಮಾಡಿದ್ದೆ, ಹಾಗೆ ಬರೆದ ಚಿತ್ರಗಳಲ್ಲಿ ಇವತ್ತಿಗೂ ನೆನಪಿನಲ್ಲಿ ಉಳಿದಿರುವುದು ಬುದ್ದ ಮತ್ತು ಟಿಪ್ಪು ಸುಲ್ತಾನ್ ಚಿತ್ರಗಳು, ಹಾಗೆಯೇ ರೇಡಿಯೋದಲ್ಲಿ ಕೇಳಿದ ಚಲನ ಚಿತ್ರಗಳಲ್ಲಿ ಬಹು ಕಾಲ ನೆನಪಿಗೆ ಉಳಿದದ್ದು ಕಿತ್ತೂರು ರಾಣಿ ಚನ್ನಮ್ಮ ಮತ್ತು ಬಬ್ರುವಾಹನ, ಮಯೂರ. ಚಿಕ್ಕಪ್ಪ-ಚಿಕ್ಕಮ್ಮಂದಿರಿಗೆ ಮತ್ತು ಸೋದರಮಾವ ಹಾಗೂ ಅವರ ಸ್ನೇಹಿತರಿಗೆ ಇನ್ ಲ್ಯಾಂಡ್ ಪತ್ರದಲ್ಲಿ ಆಗಾಗ ಬರೆಯುವ ಗೀಳು ಅಧಿಕವಾಗಿತ್ತು. ಸ್ವತ: ಗ್ರೀಟಿಂಗ್ ಕಾರ್ಡುಗಳನ್ನು ತಯಾರಿಸುವ ಹವ್ಯಾಸವೂ ಇತ್ತು, ಪರಿಸರದ ಪ್ರತಿಕೃತಿಗಳನ್ನು ತಯಾರಿಸುವ ಹುಮ್ಮಸ್ಸಿತ್ತು. ಇನ್ನೊಂದು ಸಂಗತಿ ಹೇಳಲೇ ಬೇಕು. 8ನೇ ತರಗತಿಯಲ್ಲಿ ಕರ್ವಾಲೋ ಪಠ್ಯ ಪುಸ್ತಕವಾಗಿ ಓದಬೇಕಿದ್ದ ನಾನು ಅದನ್ನು 7ನೇ ತರಗತಿಯಲ್ಲಿ ಓದಿ ಅರಗಿಸಿಕೊಂಡಿದ್ದೆ. 
               ಇವತ್ತಿಗೆ ಅಂತಹ ದಿನಗಳೆಲ್ಲಿವೆ? ವಿದ್ಯಾರ್ಥಿ ಜೀವನ, ಟ್ರಕ್ಕಿಂಗ್, ಬೇಸಿಗೆ ಶಿಬಿರ, ಕ್ರಿಕೆಟ್ , ವಂಡರ್ ಲಾ, ಜೂ ಗಾರ್ಡನ್, ಪಿಚ್ಚರ್ರು, ಟೀವಿಗಳ ಚೋಟಾ ಭೀಮ್, ಚಿಂಟೂ ಇತ್ಯಾದಿಗಳಲ್ಲಿ ಕಳೆದು ಹೋಗಿ ಬಿಡುತ್ತಾರೆ. ಪುಸ್ತಕದ ಹುಳುಗಳು ಜ್ಞಾನಾರ್ಜನೆಯೆಂದರೆ ಪಠ್ಯ ಪುಸ್ತಕ ಓದುವುದು ಮತ್ತು ಅಡ್ವಾನ್ಸ್ ಆಗಿ ಟ್ಯೂಷನ್ನು ಕ್ಲಾಸುಗಳಿಗೆ ಹೋಗುವುದು ಎಂದೇ ಭಾವಿಸಿರುವಂತಿದೆ. ಭಾವನಾತ್ಮಕವಾಗಿ ಮತ್ತು ಭೌದ್ದಿಕವಾಗಿ ಬೆಳೆಯ ಬಹುದಾದ ಸಾಧ್ಯತೆಗಳು, ಹಾಗೂ ಸಾಮಾಜಿಕ ಪ್ರಕ್ರಿಯೆಗಳನ್ನು ಅರಿಯುವ ಸಂಗತಿಗಳು ಬಾಲ್ಯದಲ್ಲೇ ಕಳೆದು ಹೋಗುತ್ತಿರುವುದರಿಂದ  ಸಮನಾಂತರ ಸಮಾಜವನ್ನು ಕಾಣಲು ಸಾಧ್ಯವಾಗುತ್ತಿಲ್ಲ, ಸಾಹಿತ್ಯದ ಓದು ಕ್ಷೀಣಿಸಿರುವುದರಿಂದ ಗ್ರಹಿಕೆಗಳು ಸತ್ತು ಹೋಗುತ್ತಿವೆ, ಮನುಷ್ಯ ಜಾತಿಯ ಅಂತರ ಹಾಗೂ ಕೌಟಂಬಿಕ ಸಂಬಂಧಗಳ ಅಂತರವೂ ಹೆಚ್ಚುತ್ತಿದೆ ಅನಿಸುವುದಿಲ್ಲವೇ? 

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...