Sunday, December 28, 2014

ಮಠ ನಿಯಂತ್ರಣ ವಿದೇಯಕ್ಕಕೆ ತಾರತಮ್ಯ ಬೇಕೆ?



ಪ್ರಗತಿ ಪರ ನಿಲುವಿನ ಸಿದ್ರಾಮಣ್ಣ ಅಧಿಕಾರಕ್ಕೆ ಬಂದ ಮೇಲೆ ವಿಧಾನ ಸಭಾ  ಅಧಿವೇಶನಗಳಲ್ಲಿ  ಅವರು ಮಂಡಿಸಿದ ವಿಧೇಯಕಗಳು ಹಿನ್ನೆಡೆ ಅನುಭವಿಸಿವೆ. ಎರಡು ವಿಧೇಯಕಗಳು ಸಾರ್ವತ್ರಿಕವಾದ ನಂಬಿಕೆ ಹಾಗೂ ವಿಶ್ವಾಸವನ್ನು ಕುರಿತಾದ ಸಂಗತಿಗಳ ಕುರಿತಾದುದು. ಆದರೆ ಸ್ಪಷ್ಟ ದಿಕ್ಸೂಚಿಯಿಲ್ಲದ ಎಡಬಿಡಂಗಿತನದ ಅಂಶಗಳು ಸದರಿ ವಿದೇಯಕಗಳು ಹಿಮ್ಮೆಟ್ಟಲು ಕಾರಣವಾಗಿದೆ ಎನ್ನಬಹುದು. ಮೊನ್ನೆ ಬೆಳಗಾವಿಯಲ್ಲಿ ನಡೆದ ವಿಧಾನ ಸಭಾ ಅದಿವೇಶನದಲ್ಲಿ ಮಠ-ಮಾನ್ಯಗಳನ್ನು ವ್ಯತಿರಿಕ್ತ ಸನ್ನಿವೇಶಗಳಲ್ಲಿ ನಿಯಂತ್ರಿಸುವ ಕಾನೂನು ಅನುಷ್ಠಾನಕ್ಕೆ ತರುವ ವಿಧೇಯಕಕ್ಕೆ ಪ್ರಭಾವಿ ಶಕ್ತಿಗಳು ಚಿತಾವಣೆಯಿಂದ ಹಿನ್ನೆಡೆ ಅನುಭವಿಸುವಂತಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ವಿದೇಯಕವನ್ನು ಮುಂದಿನ ಅಧಿವೇಶನದಲ್ಲಿ ಹಿಂಪಡೆಯುವ ಮಾತುಗಳನ್ನಾಡಿದ್ದಾರೆ. ಇವುಗಳ ಹಿನ್ನೆಲೆ ಏನು ಹಿತಾಸಕ್ತಿಗಳೇನು ಎಂಬುದು ಸ್ಪಷ್ಟವಾಗಿ ಸಾರ್ವತ್ರಿಕ ಚರ್ಚೆಗೆ ಬರಬೇಕಿದೆ. 

      ಸಧ್ಯ ಮಠ-ಮಾನ್ಯಗಳ ನಿಯಂತ್ರಣ ಕಾಯ್ದೆ ಕುರಿತು ಅಸಹನೆ ಮತ್ತು ತೀವ್ರವಾದ ಪ್ರತಿಭಟನೆ ವ್ಯಕ್ತವಾಗುತ್ತಿರುವುದು ರಾಜ್ಯದ ಸಮಸ್ತ ಮಠಾದಿಪತಿಗಳಿಂದ. ಹಿಂದೆ ಮೌಡ್ಯತೆಯ ನಿಷೇಧದ ಕುರಿತು ಕಾಯ್ದೆ ರೂಪಿಸುವ ಸಲುವಾಗಿ ಸುಮ್ಮನೆ ಒಂದು ಡ್ರಾಫ್ಟ್ ಸರ್ಕಾರಕ್ಕೆ ಸಲ್ಲಿಕೆಯಾಗಿದ್ದಕ್ಕೆ ಸಂಘ-ಪರಿವಾರಿಗಳು ಸಿಡಿದೆದ್ದಿದ್ದರು. ಬಹುಶ: ಇದುವರೆಗಿನ ಸರ್ಕಾರಗಳು ಈ ಕುರಿತು ಅಷ್ಟಾಗಿ ತಲೆಕೆಡಿಸಿಕೊಳ್ಳದ ಹೊತ್ತಿನಲ್ಲಿ ಈಗಿನ ಕಾಂಗ್ರೆಸ್ ಸರ್ಕಾರ ಗಂಭೀರ ಪ್ರಯತ್ನಗಳನ್ನು ಮಾಡುತ್ತಿದೆ ಅದು ಪ್ರಶಂಸನೀಯವೇ ಸರಿ ಆದರೆ ಈ ದಿಸೆಯಲ್ಲಿ ಸರ್ಕಾರ ಮಿತಿಗಳು ಅನುಮಾನಕ್ಕೆ ಎಡೆ ಮಾಡುತ್ತಿವೆ. ಅಲ್ಪಸಂಖ್ಯಾತರಿಗೆ  ಮಾತ್ರ ಶಾದಿ ಭಾಗ್ಯ ಯೋಜನೆಯನ್ನು ಜಾರಿಗೆ ತಂದಂತೆಯೇ ಈ ವಿಧೇಯಕಗಳ ಮಿತಿಯೂ ಇದೆಯಲ್ಲವೇ? ಶಿಕ್ಷಣದ ಹಕ್ಕು ಕಾಯ್ದೆಯಿಂದ ಅಲ್ಪ ಸಂಖ್ಯಾತ ಶಿಕ್ಷಣ ಸಂಸ್ಥೆಗಳನ್ನು ಹೊರತು ಪಡಿಸಿದಂತೆಯೇ ಈ ವಿಧೇಯಕವನ್ನು ಹಿಂದೂ ಸಮಾಜಕ್ಕೆ ಮಾತ್ರ ಅನ್ವಯವಾಗುವಂತೆ ಉಲ್ಲೇಖಿಸಿ ರೂಪಿಸಿದ್ದು ನುಂಗಲಾರದ ತುತ್ತಾಗಿ ಪರಿಣಮಿಸಿದೆ. 
       ಹಿಂದೆ ಎಸ್ ಎಂ ಕೃಷ್ಣ ಸರ್ಕಾರ ಇದ್ದಾಗ ವಿದೇಶದಿಂದ ಬಂದ ಬೆನ್ನಿ ಹಿನ್ ನನ್ನು ವಿಧಾನ ಸೌಧದ ಅಂಗಳಕ್ಕೆ ಕರೆಸಿ ಆತನಿಂದ ಕಣ್ಕಟ್ಟು ವಿದ್ಯೆಯನ್ನು ನಿಜವೆಂಬಂತೆ ಬಿಂಬಿಸಿ ಆತನ ವ್ಯಾಪಾರಿ ನಿಲುವಿಗೆ ಬೆನ್ನು ತಟ್ಟಿದ್ದ ಕಾಂಗ್ರೆಸ್ ಸರ್ಕಾರ ಈಗ ಹಿಂದೂ ಧಾರ್ಮಿಕ ನಂಬಿಕೆಗಳು ಮತ್ತು ಭಕ್ತಿ ಭಾವದ ಕೇಂದ್ರಗಳೆಡೆಗೆ ತನ್ನ ವಕ್ರದೃಷ್ಟಿ ಬೀರಿದೆ ಎಂಬ ವಾದ ಸಾರ್ವತ್ರಿಕವಾಗಿ ಇದೆ. ಇದು ನಿಜವೂ ಹೌದು. ಆದರೆ ಅದೇ ನಂಬಿಕೆಯ ಮತ್ತು ಧಾರ್ಮಿಕ ಕೇಂದ್ರಗಳು ಎಷ್ಟು ಹದಗೆಟ್ಟಿವೆ ಮತ್ತು ಯಾಕೆ ಅವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕು ಎಂಬ ವಾದವೂ ಚಾಲ್ತಿಯಲ್ಲಿದೆ ಅದೂ ಕೂಡಾ ಒಪ್ಪುವಂತಹುದೆ! ದರ್ಗಾಗಳಲ್ಲಿ ನಡೆಯುವ 
ಧಾರ್ಮಿಕ ಕ್ರಿಯೆಗಳು, ದೇಗುಲಗಳಲ್ಲಿ ನಡೆಯುವ ಆಚರಣೆಗಳು, ಚರ್ಚ್ ಗಳಲ್ಲಿ ಕ್ರಿಯೆಗಳು ಎಲ್ಲವೂ ನಂಬಿಕೆಯ ತಳಹದಿಯಲ್ಲೆ ನಡೆಯುವಂತಹವು. ಇವನ್ನು ಹೊರತು ಪಡಿಸಿದಂತೆ ಹೊಟ್ಟೆ ಪಾಡಿಗಾಗಿ ಸಾರ್ವಜನಿಕರನ್ನು ಮೋಸ ಪಡಿಸುವ ಜ್ಯೋತಿಷ್ಯ, ವಾಸ್ತುಶಾಸ್ತ್ರ,ಅಂಕಿ-ಸಂಖ್ಯೆ ಲೆಕ್ಕಾಚಾರಗಳು, ಹೋಮ -ಹವನ ಮಾಡಿಸುವುದು, ಮಂತ್ರ -ತಾಯಿತ ಇತ್ಯಾದಿ ಚಟುವಟಿಕೆಗಳು ನಂಬಿಕೆಯ ಬುಡವನ್ನೇ ಅಲ್ಲಾಡಿಸುವ ಹೀನ ಕೃತ್ಯಗಳೇ ಸರಿ. ದೇವರ ಹೆಸರಿನಲ್ಲಿ, ಧರ್ಮದ ಹೆಸರಿನಲ್ಲಿ ನಡೆಯುವ ಮತಾಂತರ ಪ್ರಕ್ರಿಯೆ, ಅಸಹ್ಯಕರ ಆಚರಣೆ ಗಳಿಗೆ ತಿಲಾಂಜಲಿ ಇಡಲು ಮೌಢ್ಯ ನಿರ್ಬಂಧಕ ಕಾನೂನು ಬೇಕು ನಿಜ ಆದರೆ ಭಾರತೀಯ ಸಾಮಾಜಿಕ ವ್ಯವಸ್ಥೆಯ ಮುಖ್ಯ ಅಡಿಪಾಯ ನಿಂತಿರುವುದೇ ನಂಬಿಕೆಯ ತಳಹದಿಯ ಮೇಲೆ. ಆ ನಂಬಿಕೆ ತಳಹದಿಯ ಪಿಲ್ಲರ್ ಗಳು ಧರ್ಮ-ದೇವರು! ಹಾಗಾಗಿ ಖಚಿತವಾದ ನಿಟ್ಟಿನಲ್ಲಿ ನಿಲುವುಗಳನ್ನು ಮತ್ತು ಫರ್ಮಾನುಗಳನ್ನು ಹೊರಡಿಸುವುದು ತ್ರಾಸದಾಯಕ ಕೆಲಸ. 
      ಪಕ್ಕದ ಮಹಾರಾಷ್ಟ್ರದಲ್ಲಿ ಇಂತಹದ್ದೊಂದು ಕಾನೂನನ್ನು ಜಾರಿಗೆ ತರಲಾಗಿದೆ ಎಂದು ಕೇಳಿದ್ದೇನೆ ಅಲ್ಲಿನ ಇತಿ ಮಿತಿಗಳನ್ನು ನೋಡಿ ರಾಜ್ಯದಲ್ಲೂ ಈ ಕುರಿತು ವಿದೇಯಕ ಜಾರಿಗೆ ತರಬಹುದು.ಇನ್ನು ಮಠ ಮಾನ್ಯಗಳನ್ನು ನಿಯಂತ್ರಣಕ್ಕೆ ತರುವ ಸರ್ಕಾರದ ನಿಲುವು. ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಪ್ರಥಮದಲ್ಲಿಯೇ ಮಠ-ಮಾನ್ಯಗಳನ್ನು ಓಲೈಸುವ ಜೊತೆಗೆ ಅಲ್ಪಸಂಖ್ಯಾತರ ದರ್ಗಾಗಳನ್ನು, ಮಸೀದಿಗಳನ್ನು, ಚರ್ಚಗಳನ್ನು ಅಭಿವೃದ್ದಿ ಪಡಿಸುವ ನಿಟ್ಟಿನಲ್ಲು ಕೋಟಿ ಕೋಟಿ ಅನುದಾನವನ್ನು ಬಿಡುಗಡೆ ಮಾಡಿತ್ತು. ಅಲ್ಲಿ ತಾರತಮ್ಯ ಇರಲಿಲ್ಲ ನಿಜ ! ಆದರೆ ಭಾವನಾತ್ಮಕವಾದ ಓಟ್ ಬ್ಯಾಂಕ್ ಲೆಕ್ಕಾಚಾರ ಕೆಲಸ ಮಾಡಿತ್ತು ಎಂಬುದನ್ನು ತಳ್ಳಿ ಹಾಕುವಂತಿಲ್ಲ. ಈಗ ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರವೂ ಸಹಾ ಅದೇ ಲೆಕ್ಕಾಚಾರವನ್ನು ವಿಭಿನ್ನ ನಿಲುವಿನ ಮೂಲಕ ಮಾಡುತ್ತಿದೆ.ಆದರೆ ತಾರತಮ್ಯದ ನಿಲುವುಗಳ ಮೂಲಕ ಸಾಮಾಜಿಕ ವ್ಯವಸ್ಥೆಯ ಶಾಂತಿ ಸುವ್ಯವಸ್ಥೆಯನ್ನು ಒಡೆಯುವ ಕೆಲಸಕ್ಕೆ ಕೈ ಹಾಕಿರುವುದು ಅತ್ಯಂತ ವಿಷಾಧನೀಯ. 
        ಹಾಗೆಂದ ಮಾತ್ರಕ್ಕೆ ಮಠ-ಮಾನ್ಯ-ಚರ್ಚ್-ಮಸೀದಿಗಳ ಉಸಾಬರಿಗೆ ಹೋಗ ಬಾರದು ಎಂದಲ್ಲ. ಇಲ್ಲಿ ಪ್ರಜಾತಾಂತ್ರಿಕ ವ್ಯವಸ್ಥೆ ಇದೆ, ಹೀಗಿರುವಾಗ ಸಮಾನ ಕಾನೂನಿನ ಪರಿಮಿತಿಯಲ್ಲಿ ಸಮಸ್ತರಿಗೆ ಒಪ್ಪಿಯಾಗುವ ನಿಲುವುಗಳು ಮಾತ್ರ ಹೆಚ್ಚಿನ ಪ್ರಾಶಸ್ತ್ಯ ದಕ್ಕಿಸಿಕೊಳ್ಳುತ್ತವೆ ಎಂಬುದನ್ನು ಅರಿಯಬೇಕಲ್ಲವೇ? ಯಾವುದೇ ಸಾರ್ವತ್ರಿಕವಾದ ಧಾರ್ಮಿಕ ಸಂಸ್ಥೆಗಳು ಜನರಿಗೆ ಉತ್ತರದಾಯಿಗಳಾಗಿರ ಬೇಕು. ಆದರೆ ಅವು ಸರ್ವಾಧಿಕಾರದ ಕೇಂದ್ರಗಳಾಗಿವೆ, ವ್ಯವಹಾರ ವಹಿವಾಟಿನ ಕೇಂದ್ರಗಳಾಗಿವೆ, ಸೇವೆಯನ್ನು ಮಾರಾಟಕ್ಕಿಡುವ, ನಂಬಿಕೆಗಳನ್ನು ವ್ಯಾಪಾರ ಮಾಡಿಕೊಂಡ ಕೇಂದ್ರಗಳಾಗಿವೆ, ಜಾತಿಯನ್ನು ಪೋಷಿಸುವ ಕೆಂದ್ರಗಳಾಗಿವೆ, ಸಮಾಜ ಬಾಹಿರ ಕೃತ್ಯಕ್ಕೆ ಅವಕಾಶ ನೀಡುವ ಚಟುವಟಿಕೆಗಳ ತಾಣವಾಗಿವೆ, ಧಾರ್ಮಿಕ ಆಘಾತ ನೀಡುವ ಮತಾಂತರ ಪ್ರಚೋದಿಸುವ ಕೇಂದ್ರಗಳಾಗಿವೆ ಹೀಗಿರುವಾಗ ಪ್ರಜಾ ತಾಂತ್ರಿಕ ವ್ಯವಸ್ಥೆಯಲ್ಲಿ ಇವಕ್ಕೆಲ್ಲ ಅಂಕುಶ ಬೇಡವೇ? ಸರ್ಕಾರದಿಂದ ಮತ್ತು ಜನರಿಂದ ಕೋಟಿ ಕೋಟಿ ಹಣವನ್ನು, ದ್ರವ್ಯವನ್ನು, ಭೂಮಿಯನ್ನು, ಸ್ಥಿರಾಸ್ತಿಯನ್ನು ಪಡೆಯುವ ಮಠ-ಮಾನ್ಯ-ಚರ್ಚ್, ದರ್ಗಾ, ಮಸೀದಿಗಳಿಂದ ಲೆಕ್ಕ ಕೇಳುವುದು ತಪ್ಪೇ? ಸಾರ್ವಜನಿಕ ಹಿತಾಸಕ್ತಿಗೆ ವಿರುದ್ದವಾಗಿ ಹೋದಾಗ ಅದನ್ನು ಪ್ರಶ್ನಿಸುವವರಾದರು ಯಾರು ? ಕಾನೂನಿಯ ಅಂಕೆಯಿಂದ ಹೊರಗುಳಿಯುವುದು ಎಂದರೆ ಅದಕ್ಕೆ ದುರಂತ ಮತ್ತೊಂದು ಇರಲಾರದು ಎಂಬುದು ನನ್ನ ಭಾವನೆ, ಇದು ದೇಶದ ಸಂವಿಧಾನಕ್ಕೆ ವಿರುದ್ದವಾದುದು ಆಗಿರುತ್ತದಲ್ಲವೇ?

          ಮಠ ಮಾನ್ಯಗಳು ಸಾರ್ವಜನಿಕ ಸ್ವತ್ತುಗಳು, ಈ ಕಾರಣಕ್ಕಾಗಿಯೆ ರಾಜ್ಯ ಸರ್ಕಾರ ಹಿಂದು ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ತಿದ್ದುಪಡಿ ವಿದೇಯಕವನ್ನು ವಿದಾನಸಬಾ ಅದಿವೇಶನದಲ್ಲಿ ಮಂಡಿಸಿದೆ. ವಿದೇಯಕವೂ ಹಿಂದೂ ಧಾರ್ಮಿಕಸಂಸ್ಥೆಗಳಲ್ಲದೇ ಮುಸಲ್ಮಾನ, ಕ್ರೈಸ್ತ, ಜೈನ ಇತರೆ ಧಾರ್ಮಿಕ ಸಂಸ್ಥೆಗಳನ್ನು ಸಹಾ ವಿದೇಯಕದಲ್ಲಿ ತರಬೇಕು, ಅವುಗಳಿಗೆ ವಿನಾಯ್ತಿ ಏಕೆ? ವಿಧೇಯಕದ ವಿರುದ್ದ ರಾಜ್ಯದ ಅನೇಕ ಮಠ ಮಾನ್ಯಗಳ ಮಠಾದೀಶರುಗಳು ಆಕ್ರೋಶ ವ್ಯಕ್ತ ಪಡಿಸಿದ್ದಾರೆ ಇದು ಸಹಜ. ಧಾರ್ಮಿಕ ಐಕ್ಯತೆ ಸಮಾನತೆ ತನ್ನಿ ಶಾಂತಿ ಸಹಬಾಳ್ವೆಗೆ ಅವಕಾಶ ಕಲ್ಪಿಸಿ ಎಂದು ಮಠಾದಿಪತಿಗಳಿಗೆ ಜನ ದೇವರ ಸ್ಥಾನಮಾನ ಕೊಟ್ಟರೆ ಈ ಬೃಹಸ್ಪತಿಗಳು ರಾಜ ಮಹಾರಾಜರಂತೆ ಅಡ್ಡ ಪಲ್ಲಕಿ ಉತ್ಸವ, ಕಿರೀಟದಾರಣೆ, ಐಷಾರಾಮಿ ಕಾರು, ವಿದೇಶ ಪ್ರವಾಸ, ಜ್ಯೋತಿಷ್ಯ, ಮೂಡನಂಬಿಕೆ ಪ್ರೋತ್ಸಾಹ ಇಟ್ಟುಕೊಂಡು ಉತ್ಸವ ಮೂರ್ತಿಗಳಾಗಿ ಮೆರೆಯುತ್ತಿದ್ದಾರೆ, ಅಲ್ಲಲ್ಲಿ ಕೆಲವರು ನೈತಿಕತೆ ಕುಂದುವ ಕ್ರಿಯೆಗಳಲ್ಲಿ ಪಾಲ್ಗೊಳ್ಳುತ್ತ ಸಮಾಜದಲ್ಲಿ ಅಸಹನೆಗೆ ಕಾರಣವಾಗಿದ್ದಾರೆ. ಹೈಟೆಕ್ ಅಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳು, ರಿಯಲ್ ಎಸ್ಟೇಟ್ ಮಾಲೀಕರಾಗಿ, ಚುನಾವಣೆ ಬಂದಾಗ ಜಾತಿಯ ಶಕ್ತಿ ಕೇಂದ್ರಗಳಾಗಿ, ಕೋಮುಸೌಹಾರ್ದದ ವಿರುದ್ದ ಬೊಬ್ಬೆ ಹಾಕುವ ಈ ಮಂದಿ ಸರ್ವಸಮ್ಮತ ವ್ಯಕ್ತಿಗಳಾಗಿ ಉಳಿದಿಲ್ಲ, ಆದ್ದರಿಂದ ಎಲ್ಲ ಧಾರ್ಮಿಕ ಕೇಂದ್ರಗಳ ಮೇಲೆ ಸರ್ಕಾರದ ಅಂಕುಶ ಹಾಕುವ ವಿಧೇಯಕ ಮಂಡನೆಯಾಗಲಿ, ಮಠಾದಿಪತಿಗಳು, ಮುಲ್ಲಾಗಳು, ಪಾದ್ರಿಗಳು,ಧರ್ಮಾದಿಕಾರಿಗಳು, ಮೌಲ್ವಿಗಳು ಕಾನೂನಿಗಿಂತ ದೊಡ್ಡವರಲ್ಲ ಅಲ್ಲವೇ????

Sunday, December 7, 2014

ಶಿಕ್ಷಕ(ಕಿ)ರಿದ್ದಾರೆ ಎಚ್ಚರಿಕೆ!

ಆ ಪ್ರೊಫೆಸರ್ ಡಿಪಾರ್ಟ್ ಮೆಂಟಲ್ಲಿ ಅವಳಿಗೆ ಜಾಸ್ತಿ ಮಾರ್ಕ್ಸ್ ಜಾಸ್ತಿ ಕೊಡ್ತಾನೆ, ಅದು ಯಾವಾಗ್ಲೂ ಹ್ಯಾಪ ಮೋರೆ ಹಾಕ್ಕೊಂಡು ಬರುತ್ತೆ ಯಾರ್ನೂ ಮಾತಾಡ್ಸಲ್ಲ, ಆದ್ರೆ ಅವಳ ಚೆಂದಕ್ಕೆ ಬಿದ್ದವ್ನೇ ಅದ್ಕೆ ಅವಳಿಗೆ ಪರೀಕ್ಷೆಲಿ ಒಳ್ಳೆ ಮಾರ್ಕು ಕೋಡ್ತಾನೆ, ಪಿಎಚ್ ಡಿ ಗೂ ಅದೇ ಪ್ರೊಫೆಸರ್ ಹತ್ರಾನೆ ಅವಳು ರಿಜಿಸ್ಟರ್ ಮಾಡ್ಸಿರ್ ಬೇಕು ಬಿಡು ಮಗಾ ಇನ್ನ ಅವಳ ಕಥೆ! ಅನ್ನೋ ಕಾಲ ಒಂದಿತ್ತು,ಈಗ ಅದು ಮಾಮೂಲು! ಆಮೇಲೆ ಡಿಗ್ರೀ ಕಾಲೇಜುಗಳ ಕಾರೀಡಾರಿನಲ್ಲೂ ಇಂಥವೇ ಡೈಲಾಗುಗಳು ಕೇಳಿ ಕೇಳಿ ಸಾಕಾಗಿತ್ತು. ನಾವು ಮಹರಾಜ ಕಾಲೇಜಿನಲ್ಲಿ ಪಿಜಿ ಕಲಿಯುವ ಹೊತ್ತಿಗೆಲ್ಲ ಮಂಡ್ಯದ ಪಿಜಿ ಸೆಂಟರ್ ಕೋಆರ್ಡಿನೇಟರ್ ಒಬ್ಬ ವಿದ್ಯಾರ್ಥಿನಿಯೋರ್ವರಿಗೆ ಲೈಂಗಿಕ ಕಿರುಕುಳ ನೀಡಿ ಕೆಲಸದಿಂದಲೇ ವಜಾ ಆಗಿದ್ದ, ಆತನಿಗೆ ಖ್ಯಾತ ಸಾಹಿತಿ ಎಂಬ ಹೆಸರು ಬೇರೆ, ದುರಾದೃಷ್ಟಕ್ಕೆ ನಾನು ಪದವಿ ಕಲಿಯುವಾಗ ಆತನೇ ಬರೆದ ಪುಸ್ತಕ ನನಗೆ ಪಠ್ಯ ಮತ್ತು ಆತನೇ ನನಗೆ ಅದ್ಯಾಪಕ, ಸದರಿ ಅದ್ಯಾಪಕ ತರಗತಿಗಳಲ್ಲಿ ಬಾಯಿ ಬಿಟ್ಟರೆ ಬರೀ ಪೋಲೀ ಮಾತು! ಈಗಲೂ ವರ್ತಮಾನದಲ್ಲಿ ನಮ್ಮೊಡನೆ ಆತ ಇದ್ದಾನೆಂದು ಹೇಳಿಕೊಂಡರೆ ಅದು ಶಿಕ್ಷಕ ಸಮದಾಯಕ್ಕೆ ನಾಚಿಕೆಗೇಡು. 
         ವಿಶ್ವ ವಿದ್ಯಾಲಯಗಳಲ್ಲಿ ಮಾತ್ರ ಕಾಣ ಬರುತ್ತಿದ್ದ ಈ ಕಾಯಿಲೆ ಮುಂದೆ ಪದವಿ ಕಾಲೇಜು, ಪಿಯು ಕಾಲೇಜಿಗೂ ವಿಸ್ತರಿಸಿತು. ಅದರಲ್ಲೂ ಮುಖ್ಯವಾಗಿ ಬಿಎಡ್ ಮತ್ತು ಟಿ ಸಿ ಹೆಚ್ ಕಾಲೇಜುಗಳಲ್ಲಿ ಇದು ಅತಿಯಾಗಿತ್ತು. ವಾರ್ಷಿಕ ಟೂರು ಶೈಕ್ಷಣಿಕ ಟೂರು, ಅದಕ್ಕೆ ಎಲ್ಲರೂ ಕಡ್ಡಾಯವಾಗಿ ಬರಲೇ ಬೇಕು, ಹೆಣ್ಣು ಮಕ್ಕಳು ಚೆಂದ ವಾಗಿದ್ದರಂತೂ ಮುಗಿಯಿತು, ಮನೆಗಳಿಗೆ ತೆರಳಿ ಪೋಷಕರಿಗೆ ಒತ್ತಡ ಹಾಕಿ ವಾರ, ಹದಿನೈದು ದಿನ ಶೈಕ್ಷಣಿಕ ಪ್ರವಾಸದ ಹೆಸರಿನಲ್ಲಿ ಮಜವೋ ಮಜ. ಪ್ರವಾಸದ ಮಜಾ ಮುಗಿಸಿಕೊಂಡು ಬಂದಾದ ಮೇಲೆ ರಾಮಾಯಣ-ಮಹಾಭಾರತ ರಂಪವಾಗಿ ಒಂದೋ ಆತ ಅಥವಾ ಆಕೆ ಮದುವೆಯಾಗಿ ಬಿಡುತ್ತಿದ್ದರು ಇಲ್ಲವೇ ಊರು ಬಿಡುತ್ತಿದ್ದರು. ಅವತ್ತಿನ ಪಳೆಯುಳಿಕೆಗಳು ಇಂದಿಗೂ ಕಣ್ಣೆದುರಿಗಿವೆ. ನಂತರದ್ದು ಪಿಯುಸಿ, 14-15ರ ವಿದ್ಯಾರ್ಥಿ/ನಿ ಯರುಗಳನ್ನು ನಾಲ್ಕೈದು ದಿನ ಶೈಕ್ಷಣಿಕ ಪ್ರವಾಸ ಅಂತ ಕರೆದುಕೊಂಡು ಹೋದರೆ ವಿದ್ಯಾರ್ಥಿನಿಯರ ಪಾಡು ಬೇಡ. ನನ್ನ ಪರಿಚಯದ ಪಿಯು ವಿದ್ಯಾರ್ಥಿನಿಯೋರ್ವಳನ್ನು ಕುತೂಹಲಕ್ಕೆ ಕೇಳಿದ್ದೆ ಎಲ್ಲಿಗೆ ಟೂರ್ ಹೋಗ್ತಿದ್ದೀರಿ? ಅದು ಬಾಲಕಿಯರ ಪಿಯು ಕಾಲೇಜು. ಬೆಂಗಳೂರು ಹೋಗ್ತಿದ್ದೀವಿ, ಮತ್ತೊಂದು ಕಾಲೇಜು ವಿದ್ಯಾರ್ಥಿನಿ ಹೇಳಿದಳು ಕೊಡೈಕೆನಾಲ್ ಗೆ, ಕ್ಷಣ ಕಾಲ ಗಾಬರಿಯಾಗಿ ಹೋಯ್ತು ಸರಿ ಬೆಂಗಳೂರಿನಲ್ಲಿ ಏನು ನೋಡಲಿಕ್ಕಿದೆ ? ವಂಡರ್ ಲಾಗೆ ಹೋಗ್ತಿದೀವಿ. ಸರಿ ಟೂರು ಮುಗೀತು, ಮಕ್ಕಳು ಮರಳಿ ಬಂದರು , ನಾನು ಮತ್ತೆ ಕೇಳಿದೆ ಹೇಗಿತ್ತು ಟೂರು? ಸಾರ್ ಒಬ್ಬರು ಮಿಸ್ ಇನ್ನ ನಾಲ್ಕೈದು ಜನ ಸರ್ ಗಳು, ನಾನು ಮತ್ತೆ ಸರ್ ಮೇಲಿಂದ ಜಾರಿ ನೀರಿಗೆ ಬೀಳುವ ಆಟ ಆಡಿದ್ವಿ, ಸರ್ರು ನನ್ನ ಗಟ್ಟಿಯಾಗಿ ಹಿಡ್ಕೊಂಡಿದ್ರು, ಬಟ್ಟೆ ಬದಲಿಸೋಕೆ ಹೋದ್ವಾ ಸರ್ರು ನಮ್ ಜೊತೆನೆ ಬಟ್ಟೆ ಚೇಂಚ್ ಮಾಡಿದ್ರು! ಆಮೇಲೆ ರಾತ್ರಿ ಉಳ್ಕೊಂಡಿದ್ವಲ್ಲ ಯಾವ್ದೋ ಚೌಲ್ಟ್ರಿ ಒಂದೇ ಹಾಲ್  ಅಲ್ಲಿ ಸರ್ರ್ ಗಳು ನಮಗೆ ಸೀರೆ ಉಡಿಸೋದು ನಾವು ಅವರಿಗೆ ಸೀರೆ ಉಡಿಸಿದ್ವಿ ಸಖತ್ ಖುಷಿಯಾಯ್ತು ಸರ್ ಅಂದವಳ ಮುಖದಲ್ಲಿ ಮುಗ್ಧತೆಯಿತ್ತೆ ವಿನಹ ಆಕೆ ವಿವರಿಸಿದ ಅಷ್ಟೂ ಸಂಗತಿಗಳ ಸೀರಿಯಸ್ ನೆಸ್ ಗೊತ್ತಿರಲಿಲ್ಲ. ನಾನಂತೂ ಅದೆಲ್ಲ ಕೇಳಿಸಿಕೊಂಡು ದಂಗು ಬಡಿದವನಂತಾಗಿದ್ದೆ. 
        ಪದವಿ ಓದುವ ದಿನಗಳಲ್ಲಿ ಬಿಂದಾಸ್ ಜೀವನ ಶೈಲಿಯ ಕೊಡಗು ಭಾಗದ ಯುವತಿಯೊಬ್ಬಳು ಅತಿಥಿ ಉಪನ್ಯಾಸಕಿ, ಆಕೆಯ ಗಂಡ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದ, ಮೊದಲೇ ಸಿರಿವಂತದ ಕುಟುಂಬದ ಆ ಯುವತಿ ತರಗತಿಗಳಲ್ಲಿ ಹುಡುಗರೆಡೆಗೆ ಮಾದಕ ನೋಟ ಬೀರುತ್ತಿದ್ದಳು ವೀಕೆಂಡ್ ಗಳಲ್ಲಿ ಅದೇ ಕಾಲೇಜಿನ ಸಿರಿವಂತ ಹುಡುಗರ ಜೊತೆ ಕಲರ್ ಕಲರ್ ಟೀ ಶರ್ಟು ಮತ್ತು ಟೈಟು ಜೀನ್ಸ್ ತೊಟ್ಟು ಬೈಕ್ ಗಳಲ್ಲಿ ಹೊರಟು ಬಿಡುತ್ತಿದ್ದಳು. ಪ್ರೌಢಶಾಲಾ ಹಂತದಲ್ಲಿ ಪಿಟಿ ಮಾಸ್ಟರ್ ಮೊದಲ ಸೆಲೆಬ್ರಿಟಿ, ಆ ಮೇಲೆ ಪಾಠದ ಬದಲಿಗೆ ಮೋಜಿನ ಮಾತುಗಳನ್ನು ಪುಂಖಾನು ಪುಂಖವಾಗಿ ಆಡುವ ಶಿಕ್ಷಕ ಹೆಚ್ಚು ಅಚ್ಚುಮೆಚ್ಚಿನ ಶಿಕ್ಷಕನಾಗಿ ಬಿಡುತ್ತಾನೆ ಹದಿಹರೆಯದ ಮಕ್ಕಳಿಗೆ. ಪಿಟಿ ಮಾಸ್ಟರ್(ಕ್ಷಮಿಸಿ ಎಲ್ಲರೂ ಅಲ್ಲ) ವಿದ್ಯಾರ್ಥಿಗಳ ದೈಹಿಕ ಸೌಂದರ್ಯವನ್ನು ಕಣ್ಣಂಚಲ್ಲೇ ಅಳೆದು ಎಲ್ಲಾ ಹಂತದಲ್ಲೂ ಆಧ್ಯತೆ ಕೊಡುತ್ತಾ ಹೋಗುತ್ತಾನೆ, ಕ್ರೀಡಾ ಕೂಟಗಳಿಗೆ ಬೇಕು ಬೇಕಾದವರನ್ನು ಆಯ್ದು ಕರೆದುಕೊಂಡು ಹೋಗುತ್ತಾನೆ, ಅಲ್ಲಿ ಏನೇನು ನಡೆಯ ಬಹುದು ಎಂಬುದನ್ನು ಬರೆದರೆ ಇನ್ನೊಂದು ಕಥೆಯಾಗ ಬಹುದು. ಇವೆಲ್ಲ ಹಾಳಾಗಿ ಹೋಗಲಿ ಎಂದರೆ ಪೂರ್ವ ಪ್ರಾಥಮಿಕ ಹಂತದಿಂದ ಪ್ರಾಥಮಿಕ ಹಂತಕ್ಕೆ ಬರುವ ಮಕ್ಕಳಿಗೆ ಶಿಕ್ಷಕರೆ ಮಾದರಿ. ಅವರು ಏನು ಹೇಳಿದರೂ ಅದೇ ವೇದ ವಾಕ್ಯ. ಮಕ್ಕಳ ಮನಸ್ಥಿತಿಯ ಸದುಪಯೋಗ ಪಡೆಯುವ ಶಿಕ್ಷಕ/ಕಿ ನೈತಿಕ ಪ್ರಜ್ಞೆಯನ್ನು ಮೀರಿ ವರ್ತಿಸಿ ಬಿಡುತ್ತಾರೆ. ಬೆಳೆಯುತ್ತಿರುವ ಮಕ್ಕಳ ಹೆಗಲ ಮೇಲೆ ಕೈ ಹಾಕುವುದು, ತೊಡೆ ಚಿವುಟುವುದು, ಪಾಠ ಮಾಡುವಾಗ ಶಿಕ್ಷಿಸುವ ನೆಪದಲ್ಲಿ ಇಲ್ಲವೇ ಶಹಬ್ಬಾಸ್ ಗಿರಿ ಹೇಳುವ ನೆಪದಲ್ಲಿ ಬಿಗಿದಪ್ಪುವುದು, ಕೆನ್ನೆ ಚಿವುಟುವುದು ಇತ್ಯಾದಿ ಕ್ರಿಯೆಗಳನ್ನು ಮಾಡುವುದು ಮಾಮೂಲು. ಒಮ್ಮೆ ಹಳ್ಳಿಯೊಂದರಿಂದ ಫೋನ್ ಕರೆ ಮಕ್ಕಳೊಂದಿಗೆ ಅಶ್ಲೀಲವಾಗಿ ವರ್ತಿಸಿದ ಮುಖ್ಯ ಶಿಕ್ಷಕನ ನಡವಳಿಕೆ ಖಂಡಿಸಿ ಶಾಲಾ ಕೊಠಡಿಯಲ್ಲಿ ಬೀಗ ಹಾಕಲಾಗಿದೆ, ಸರಿ ಇದೇನಪ್ಪಾ ಅಂದುಕೊಂಡು ಶಿಕ್ಷಣಾಧಿಕಾರಿಗಳ ಜೊತೆ ಸ್ಥಳಕ್ಕೆ ಧಾವಿಸಿದೆವು, ಮಕ್ಕಳೆಲ್ಲ ಗೋಡೆ ಸ್ಲೇಟುಗಳ ಮೇಲೆ ಶಿಕ್ಷಕನ ಕೃತ್ಯಗಳ ಕುರಿತು ತೋಚಿದಂತೆ ಬರೆದು ಪ್ರತಿಭಟನೆ ನಡೆಸುತ್ತಿದ್ದವು ಅವರೊಂದಿಗೆ ಪೋಷಕರು ಸೇರಿಕೊಂಡಿದ್ದರು. ಅಲ್ಲಿ ಏನಾಯ್ತು ಎಂದು ನೋಡಿದರೆ ತರಗತಿಯಲ್ಲಿ 7ನೇ ಇಯತ್ತೆ ಕಲಿಯುವ ಹುಡುಗಿ  ಋತುಮತಿಯಾಗಿದ್ದಾಳೆ, ಸರಿ ಶಾಲೆಗೆ ಬಂದಿಲ್ಲ, ಕೆಲ ದಿನಗಳ ನಂತರ ಆ ಹುಡುಗಿ ಶಾಲೆಗೆ ಬಂದಿದ್ದಾಳೆ, ಮಕ್ಕಳು ಕೇಳಿವೆ ಋತುಮತಿ ಆಗೋದು ಅಂದ್ರೆ ಏನು? ಶಾಲೆಯ ಮುಖ್ಯ ಶಿಕ್ಷಕ ಏನು ಮಾಡಿದ್ದಾನೆ ಗೊತ್ತೆ ಆ ಬಾಲೆಯ ದಾವಣಿಯೆತ್ತಿ ಇದನ್ನೆ ಹಾಗನ್ನೋದು ಅನ್ನೋದ, ಈ ಘಟನೆಯಿಂದ ಶಾಕ್ ಗೆ ಒಳಗಾದ ಆ ಬಾಲೆ ಅಳುತ್ತಲೇ ಮನೆಗೆ ಓಡಿ ಪೋಷಕರಿಗೆ ಹೇಳಿದ್ದಾಳೆ, ಗಾಬರಿಯಾದ ಪೋಷಕರು ಶಾಲೆಗೆ ಧಾವಿಸಿದ್ದಾರೆ , ಆಗ ಮುಖ್ಯ ಶಿಕ್ಷಕನ ರಂಕು ರಂಕಿನ ಕಥೆಗಳು ಬೀದಿಗೆ ಬಿದ್ದಿವೆ. ದಿನಾ ರಿಯಾಲಿಟಿ ಶೋ ಮತ್ತು ಟೀವಿ ಸೀರಿಯಲ್ ನೋಡುವ ಆತ ಅದರಲ್ಲಿ ಬರುವ ಪಾತ್ರಗಳನ್ನು ವರ್ಣನೆ ಮಾಡ ಮಕ್ಕಳೊಂದಿಗೆ ಚರ್ಚಿಸುತ್ತಿದ್ದ, ಟೀವಿ ಸೀರಿಯಲ್ ನಲ್ಲಿ ಯಾವುದು ತಾನೆ ಒಳ್ಳೆಯದಿದೆ? ಎಲ್ಲವೂ ಹಾದರದ ಕಥೆಗಳೇ ಇಲ್ಲವೇ ಬಾಲ್ಯ ವಿವಾಹಗಳದ್ದು. ಮನೆಯಂಗಳದಲ್ಲಿ ತಪ್ಪದೇ ಇವನ್ನು ನೋಡುವ ಮಕ್ಕಳೊಂದಿಗೆ ಶಾಲೆಯಲ್ಲೂ ಆ ಕುರಿತು ಚರ್ಚಿಸಿದರೆ ಪಾತ್ರಗಳೊಂದಿಗೆ ಮಕ್ಕಳನ್ನು ಥಳುಕು ಹಾಕಿದರೆ ಅದರ ಪರಿಣಾಮವೇನು? 
      ಮೊನ್ನೆ ಮೊನ್ನೆ ರಾಜಧಾನಿಯಲ್ಲಿ 2-3 ಶಾಲೆಗಳಲ್ಲಿ 3,4,5,6 ವರ್ಷದ ಪುಟ್ಟ ಕಂದಮ್ಮಗಳ ಮೇಲೆ ಕಂಡರಿಯದಂತಹ ಅತ್ಯಾಚಾರ ಪ್ರಕರಣಗಳು ಬೆಳಕಿಗೆ ಬಂದವು, ಕೆಲವು ಪ್ರಕರಣಗಳಲ್ಲಿ ಪಿ ಟಿ ಮಾಸ್ತರ್, ಶಿಕ್ಷಕ, ಅಟೆಂಡರ್, ಮಕ್ಕಳನ್ನು ಶಾಲೆಗೆ ಬಿಡಲು ಕರೆದೊಯ್ಯುವ ವಾಹನ ಚಾಲಕ-ನಿರ್ವಾಹಕರುಗಳು ಕಂಡು ಬಂದರು. ಬಹುತೇಕ ಪ್ರಕರಣಗಳಲ್ಲಿ ಇಂತಹ ಶೋಷಣೆಗೆ ಒಳಗಾದವರು ಹೆಣ್ಣು ಮಕ್ಕಳು ಎಂದು ಕೊಂಡರೂ ಸಹಾ ಸರಿ ಸುಮಾರು ಅಷ್ಟೆ ಪ್ರಮಾಣದಲ್ಲಿ ಗಂಡು ಮಕ್ಕಳು ಸಹಾ ಲೈಂಗಿಕ ತೃಷೆಗೆ ಬಲಿಯಾಗಿದ್ದಾರೆ. ಹೈಸ್ಕೂಲ್ ನಲ್ಲಿ ಮನೆ ಪಾಠಕ್ಕೆ ಹೋಗುವ ಗಂಡು ಮಕ್ಕಳ ಜನನಾಂಗಗಳನ್ನು ಮುಟ್ಟಿ ಮುಟ್ಟಿ ನೋಡುತ್ತಿದ್ದ ಶಿಕ್ಷಕನೊಬ್ಬನಿದ್ದ, ಕಳೆದ ವರ್ಷ ಹಾಸನ ಜಿಲ್ಲೆಯ ಡಿಪ್ಲೋಮ ವಿದ್ಯಾರ್ತಿಯೊಬ್ಬ ಅನೈಸರ್ಗಿಕ ಕ್ರಿಯೆಗೆ ಬಲಿಯಾಗಿ ಪ್ರಕರಣವನ್ನು ಸಾರ್ವತ್ರಿಕ ಗೊಳಿಸಿದ್ದು ಬೆಚ್ಚಿ ಬೀಳಿಸುವ ಸಂಗತಿ. ಅದೊಂದು ದಿನ ನನ್ನ   ಆಪ್ತ ಮಿತ್ರರಾಗಿರುವ ಶಿಕ್ಷಾಣಾದಿಕಾರಿಯೊಬ್ಬರು ಹೀಗೆ ಹೇಳಿದ್ದರು, ನೋಡಿ ನಮ್ಮ ಶಾಲೆಗಳಲ್ಲಿ ಅಕ್ಷರ ದಾಸೋಹ ಯೋಜನೆ ಬರಲಾಗಿ ಎಷ್ಟೋ ಮಕ್ಕಳು ದೌರ್ಜನ್ಯಕ್ಕೊಳಗಾಗುವುದರಿಂದ ಪಾರಾಗಿದ್ದಾರೆ! 

       ತಂದೆ ತಾಯಿಯನ್ನು ಬಿಟ್ಟರೆ ಮಕ್ಕಳು ಸುರಕ್ಷಿತ ಎಂಬ ಭಾವನೆಯಿದ್ದುದು ಶಾಲೆಗಳಲ್ಲಿ ಅದೂ ಶಿಕ್ಷಕರುಗಳ ಮೇಲುಸ್ತುವಾರಿಯಲ್ಲಿ. ಈಗ ಅಂತಹ ನಂಬಿಕೆಗಳೇ ಮಣ್ಣಾಗುತ್ತಿವೆ, ಕಾಮವೇ ಪ್ರಧಾನವಾಗಿ ನೈತಿಕತೆಯ ಅಧ:ಪತನವಾಗುತ್ತಿರುವುದನ್ನು ಕಾಣ ಬಹುದು. ಶಿಕ್ಷಕ/ಉಪನ್ಯಾಸಕ/ಅದ್ಯಾಪಕ/ಪ್ರಾದ್ಯಾಪಕ ರಿಗೆ ನೀತಿ ನಿಯಮಗಳನ್ನು ರೂಪಿಸ ಬೇಕಿದೆ. ಎಲ್ಲಕ್ಕಿಂತ ಹೆಚ್ಚಾಗಿ ವೃತ್ತಿಯ ಘನತೆಯನ್ನರಿತು ಅವರೇ ಸಮಾಜ ತಮ್ಮನ್ನು ಗಮನಿಸುತ್ತಿದೆ, ನಾವು ಮಾದರಿ ವ್ಯಕ್ತಿತ್ವಗಳು ಆಗ ಬೇಕು ಎಂಬುದನ್ನು ಮನಗಾಣ ಬೇಕಿದೆ.ಯಾವಾಗ ಪೂರ್ವ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳ ಮೇಲೆ ದೌರ್ಜನ್ಯದ ಪ್ರಕರಣಗಳು ಹೆಚ್ಚಾದವೋ ಆಗ ಎಚ್ಚೆತ್ತುಕೊಂಡ ಸರ್ಕಾರ ಶಾಲಾ-ಕಾಲೇಜುಗಳಿಗೆ ಪೋಲೀಸ್ ನೀತಿ ನಿಯಮಗಳನ್ನು ರೂಪಿಸಿ ನವೆಂಬರ್ 11, 2014ರಿಂದಲೇ ಜಾರಿಗೆ ಬರುವಂತೆ ಆದೇಶಿಸಿದೆ. ಸಧ್ಯಕ್ಕೆ ಖಾಸಗಿ ಶಾಲೆಗಳಲ್ಲಿ ನಡೆದ ದೌರ್ಜನ್ಯಗಳು ಮಾತ್ರ ಬೆಳಕಿಗೆ ಬಂದಿವೆ ಸರ್ಕಾರಿ ಶಾಲೆಗಳಲ್ಲಿ ಇಂತಹ ಪ್ರಕರಣಗಳು ಜರುಗುತ್ತಿರುವ ಕುರಿತು ಸರ್ಕಾರ ಎಚ್ಚರಿಕೆ ವಹಿಸ ಬೇಕಿದೆ. ಶಿಕ್ಷಕರು ಮಾನವೀಯ ಮತ್ತು ನೈತಿಕ ಮೌಲ್ಯಗಳನ್ನು ಹೊರತು ಪಡಿಸಿದಂತಹ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿರುವ ಕುರಿತು ಕಟ್ಟೆಚ್ಚರ ವಹಿಸುವ ಸಲುವಾಗಿ ಪ್ರತೀ ತರಗತಿಯ ಕೋಣೆಗಳಲ್ಲಿ ಸಿಸಿಟೀವಿಗಳನ್ನು ಅಳವಡಿಸಲು ಸೂಚಿಸಲಾಗಿದೆ, ಪ್ರತೀ ಶಿಕ್ಷಕರ ವೈಯುಕ್ತಿಕ ಮಾಹಿತಿ, ಕೌಟುಂಬಿಕ ಹಿನ್ನೆಲೆಯ ಮಾಹಿತಿಯನ್ನು ಸ್ಥಳೀಯ ಠಾಣೆಗಳಿಗೆ ಒಪ್ಪಿಸಲು ಸೂಚಿಸಲಾಗಿದೆ. ದೇವರುಗಳ ಸ್ಥಾನದಲ್ಲಿರುವ ಶಿಕ್ಷಕರುಗಳು ಇವತ್ತು ಸಾರ್ವತ್ರಿಕ ಕಟಕಟೆಯಲ್ಲಿ ನಿಲ್ಲುವಂತಾಗಿರುವುದು ವ್ಯವಸ್ಥೆಯ ದುರಂತ. ವ್ಯವಸ್ಥೆಯಲ್ಲಿ ಎಲ್ಲಾ ಶಿಕ್ಷಕರುಗಳಿಗೂ ಈ ಮಾತು ಅನ್ವಯಿಸುವುದಿಲ್ಲ   ಆದರೆ ನೂರು ಮಂದಿಯ ಪೈಕಿ ಒಬ್ಬ  ಇಂಥ ಹೀನಸುಳಿಯ ಶಿಕ್ಷಕರಿದ್ದರೂ ಅದು ಸಮಸ್ತ ಶಿಕ್ಷಕ ಸಮುದಾಯಕ್ಕೆ ಕೇಡು ಅಲ್ಲವೇ? ಅಂತಹ ಹೀನಸುಳಿಗಳ ನಿವಾರಣೆಗೆ ಅನ್ವಯಿಸುವ ಕಾನೂನು ಒಳ್ಳೆಯ ಶಿಕ್ಷಕರನ್ನು ಬಲಿ ತೆಗೆದುಕೊಳ್ಳುತ್ತದಲ್ಲವೇ? 

Sunday, November 23, 2014

ಲವ್ ಆಫ್ ಕಿಸ್ ಡೇ ! ಎಂಥದ್ರಿ ಇದು

ವೆಂಬರ್ 29, 2014 ಲವ್ ಆಫ್ ಕಿಸ್ ಡೇ @ ಬೆಂಗಳೂರು! ಹೈದ್ರಾಬಾದ್ ನಿಂದ ಶುರುವಾದ ಈ ಅಭಿಯಾನ ನವ ದೆಹಲಿ, ಕೋಲ್ಕತ್ತಾ, ಮದರಾಸು, ಬಾಂಬೆ, ಪಾಂಡಿಚೆರಿ, ಕೇರಳದಲ್ಲಿ ನಡೆದು ಈಗಷ್ಟೇ ರಾಜ್ಯದ ರಾಜಧಾನಿಗೆ ಕಾಲಿರಿಸಿದೆ. ಮುಖ್ಯವಾಗಿ ಹದಿ ಹರೆಯದ ಯುವ ಜನರು ಅದರಲ್ಲು ವಿಶ್ವ ವಿದ್ಯಾಲಯಗಳ ವಿದ್ಯಾರ್ಥಿಗಳು ಈ ಅಭಿಯಾನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಉದ್ದೇಶ ನೈತಿಕ ಪೋಲೀಸ್ ಗಿರಿಯನ್ನು ವಿರೋಧಿಸುವುದಷ್ಟೇ!  ಭಾರತೀಯ ಸಂಸ್ಕೃತಿಯ ಅನಧಿಕೃತ ಗುತ್ತಿಗೆದಾರರಾಗಿರುವ  ಬಿಜೆಪಿ-ಸಂಘ ಪರಿವಾರದ ಇತರೆ ಸಂಘಟನೆಗಳು ಈ ಅಭಿಯಾನವನ್ನು ವಿರೋಧಿಸುತ್ತಿವೆ. ಏನಿದು ಲವ್ ಆಫ್ ಕಿಸ್ ಡೇ? ಈ ಅಭಿಯಾನ ಬೇಕಾ? ಇದನ್ನ ವಿರೋಧಿಸುವ ಸಂಘ ಪರಿವಾರಿಗಳ ಹಕೀಕತ್ತೇನು? ನೈತಿಕ ಪೋಲೀಸ್ ಗಿರಿ ಎಂದರೇನು? ಎಂಬುದನ್ನು ಅರಿಯೋಣ.
     ಬಹುಶ ಕೆಲ ವರ್ಷಗಳ ಹಿಂದೆ ರಾಜ್ಯದಲ್ಲಿ  ನಡೆದ ಮಂಗಳೂರು ಪಬ್ ಅಟ್ಯಾಕ್ ನಿಮಗೆ ತಿಳಿದಿರಬೇಕು, ಆ ನಂತರ ಮಾರ್ನಿಂಗ್ ಮಿಸ್ಟ್ ಹೋಂ ಸ್ಟೇ ಮೇಲಿನ ದಾಳಿ ಆಮೇಲೆ ರಾಜ್ಯದ ವಿವಿದೆಡೆ ಸಂಘ ಪರಿವಾರಿಗಳಿಂದ ನಡೆದ ಕೃತ್ಯಗಳು ನೈತಿಕ ಪೋಲೀಸ್ ಗಿರಿ ಎಂದು ಹೆಸರು ಪಡೆದವು. ಕೋಮು ಭಾವನೆ ಇಟ್ಟುಕೊಂಡು ನಡೆಸಿದ ಕೃತ್ಯಗಳು ಸಹ ಈ ಪಟ್ಟಿಯಲ್ಲಿ ಸೇರಿದವು. ಪರಿಣಾಮ ಶ್ರೀ ರಾಮಸೇನೆಯ ಪ್ರಮೋದ್ ಮುತಾಲಿಕ್ ಗೆ ಪಿಂಕ್ ಚಡ್ಡಿಗಳ ಮಹಾಪೂರವೇ ಹರಿದು ಬಂತು, ಮರ್ಯಾದ ಹತ್ಯೆ ಮತ್ತಿತರ ಮಹಿಳೆಯರ ಮೇಲಿನ ದೌರ್ಜನ್ಯವನ್ನ ಖಂಡಿಸಿ ಅರೆ ಬೆತ್ತಲೆ ಮೆರವಣಿಗೆಯ ಸ್ಲಟ್ ವಾಕ್ ಮೊದಲ ಬಾರಿಗೆ 2011ರ ಜುಲೈ 16ರಂದು ಮದ್ಯ ಪ್ರದೇಶದ ಭೂಪಾಲ್ ನಲ್ಲಿ ನಡೆಯಿತು. ಸ್ತ್ರೀಯರ ಮೇಲಿನ ಅತ್ಯಾಚಾರ ಖಂಡಿಸಿ ಅದೇ ಜುಲೈ 31 ರಂದು ದೆಹಲಿಯಲ್ಲಿ ಸ್ಲಟ್ ವಾಕ್ ಪ್ರದರ್ಶನ ನಡೆಯಿತು. ಅಸ್ಸಾಂ ನಲ್ಲಿ ಮಹಿಳೆಯರ ಮೇಲೆ ಸಾಮೂಹಿಕ ಬಲಾತ್ಕಾರ ಮಾಡಿ ಕೆಡಿಸಿದ ಸೈನಿಕರ ವಿರುದ್ದ ಮಹಿಳೆಯೋರ್ವಳು ಕಣ್ಣೀರು ಸುರಿಸುತ್ತಾ ಸಂಪೂರ್ಣ ನಗ್ನಳಾಗಿ ಅತ್ಯಾಚಾರ ನಡೆಸಿದ ಸೈನಿಕರ ವಿರುದ್ದ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದು ಇನ್ನು ಕಣ್ಣಿಗೆ ಕಟ್ಟಿದಂತಿದೆ. ಈಗ ಕಿಸ್ ಆಫ್ ಲವ್ ಡೇ ಅಭಿಯಾನ ನೈತಿಕ ಪೋಲೀಸ್ ಗಿರಿಯ ವಿರುದ್ದ ಆಯೋಜನೆಗೊಂಡಿದೆ.   ಸಮಾಜದ ಕ್ರೌರ್ಯವನ್ನು ದಿಕ್ಕರಿಸುವ ನಿಟ್ಟಿನಲ್ಲಿ ಇಂತಹ ಅಭಿಯಾನವನ್ನ ನಡೆಸುತ್ತಿದ್ದೇವೆಂದು  ಅಭಿಯಾನಗಳ ಸಂಘಟಕರು ಹೇಳುತ್ತಿದ್ದಾರೆ. ಆದರೆ ಇವೆಲ್ಲ ನಮ್ಮ ಸಂಸ್ಕೃತಿಯಲ್ಲ ಎಂದು ಸಂಘ ಪರಿವಾರಿಗಳು ಹೇಳುತ್ತಾರೆ. 

       ಇಷ್ಟಕ್ಕೂ ಈ ಲವ್ ಆಫ್ ಕಿಸ್ ಡೇ ಅಂದ್ರೆ ಏನು? ಇದು ಹುಟ್ಟಿಕೊಂಡಿದ್ದು ಹೇಗೆ? ಎಂಬ ಸಂಗತಿಗಳನ್ನ ತಿಳಿಯುವುದಾದರೆ ಅಂತರ್ಜಾಲದ ಫೇಸ್ ಬುಕ್ ನಿಂದ ಆರಂಭ ಗೊಂಡ ಈ ಅಭಿಯಾನ ಇವತ್ತು ದೇಶದಾಧ್ಯಂತ ಹರಡಲು ಕಾರಣವಾಗಿದೆ. ಕೇರಳದಲ್ಲಿ 2000ನೇ ಇಸ್ವಿಯಿಂದ ನಡೆದ ಬಹಳಷ್ಟು ನೈತಿಕ ಪೋಲೀಸ್ ಗಿರಿ ಪ್ರಕರಣಗಳಲ್ಲಿ ಸಾವು ನೋವನ್ನು ಅನುಭವಿಸಿದವರೇ ಹೆಚ್ಚು. 26ರ ವಯೋಮಾನದ ಯುವಕನೋರ್ವ ಗೃಹಿಣಿ ಯೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾನೆ ಎಂಬ ಅನುಮಾನದ ಮೇಲೆ ಅವನನ್ನು ಬಡಿದು ಕೊಲೆ ಮಾಡಿದ್ದು, ರಂಗ ಕಲಾವಿದೆಯೊಬ್ಬರು ಸಹ ನಟನೊಂದಿಗೆ ರಾತ್ರಿ ವೇಳೆ ಪ್ರಯಾಣಿಸುತ್ತಿದ್ದಳು ಎಂಬ ಕಾರಣಕ್ಕೆ ಅವರನ್ನು ಹಿಡಿದು ಬಡಿದದ್ದು, ಅಲ್ಹಪ್ಹ್ಪುಜ ಬೀಚ್ ನಲ್ಲಿ ದಂಪತಿ ಜೋಡಿಯೊಂದು ವಿಹರಿಸುತ್ತಿದ್ದ ವೇಳೆ ಮಹಿಳೆ ತಾಳಿಯನ್ನು ಧರಿಸಿರಲಿಲ್ಲ ಎಂಬ ಕಾರಣಕ್ಕೆ ಹಲ್ಲೆ ನಡೆಸಿದ್ದು, ತುಂಬು ಗರ್ಭಿಣಿಯನ್ನು ಬಸ್ ನಿಲ್ದಾಣದಲ್ಲಿ ಕುಳ್ಳಿರಿಸಿ ಎಟಿಎಂ ನಲ್ಲಿ ಹಣ ತರಲು ಗಂಡ ತೆರಳಿದ್ದ ವೇಳೆ ಸ್ಥಳಕ್ಕೆ ಬಂದ ಸಂಘ ಪರಿವಾರಿಗಳ ಗ್ಯಾಂಗ್ ಮಹಿಳೆ ಅನೈತಿಕ ವ್ಯವಹಾರದಲ್ಲಿ ತೊಡಗಿದ್ದಾಳೆ ಎಂದು ಅನುಮಾನಿಸಿ ಉತ್ತರಿಸಲು ಬಿಡದಂತೆ ಬಡಿದು ಕೊಂದು ಬಿಟ್ಟರು. ಹೀಗೆ ಕೇರಳ ರಾಜ್ಯದಲ್ಲಿ ನಿರಂತರವಾಗಿ ನಡೆದ ಹಲ್ಲೆಗಳನ್ನು ಖಂಡಿಸಿ ಕೇರಳ ರಾಜ್ಯದ ಮಹತ್ವಕಾಂಕ್ಷಿ ಯುವ ಸಿನಿಮಾ ನಿರ್ದೇಶಕ ಪಶುಪಾಲನ್ ಮೊದಲ ಬಾರಿಗೆ ಫೇಸ್ ಬುಕ್ ನಲ್ಲಿ "ಕಿಸ್ ಆಫ್ ಲವ್" ಎಂಬ ಪುಟವನ್ನು ತೆರೆದ, ನೈತಿಕ ಪೋಲಿಸ್ ಗಿರಿಯನ್ನು ಖಂಡಿಸುವ ಸಲುವಾಗಿ ಕಿಸ್ ಆಫ್ ಲವ್ ಅಭಿಯಾನವನ್ನು ಆಚರಿಸುವಂತೆ ಕರೆ ನೀಡಿದ. ಇದು ದೇಶದಾಧ್ಯಂತ ಜನರ ಗಮನ ಸೆಳೆಯಿತು. 
       ಇದರ ಪರಿಣಾಮ ನವೆಂಬರ್ 2, 2014 ರಂದು ಕೇರಳದ ಮೆರೀನ್ ಡ್ರೈವ್ ನಲ್ಲಿ ಸೇರಿದ ಬಹಳಷ್ಟು ಮಂದಿ ಯುವ ಜನರು ಎರ್ನಾಕುಲಂ ಲಾ ಕಾಲೇಜು ಕ್ಯಾಂಪಸ್ ನಲ್ಲಿ ಶಾಂತಿಯುತವಾಗಿ ನೈತಿಕ ಪೋಲೀಸ್ ಗಿರಿಯನ್ನು ಖಂಡಿಸಲು "ಕಿಸ್ ಆಫ್ ಲವ್ " ಆಚರಣೆಗೆ ಮುಂದಾದರು. ಇದನ್ನು ಅನೇಕ ಸಾರ್ವಜನಿಕ ಸಂಘ ಸಂಸ್ಥೆಗಳು ಬೆಂಬಲಿಸಿದವು, ರಾಜಕೀಯ ಪಕ್ಷಗಳು ಸಹಾ ಬೆಂಬಲಕ್ಕೆ ನಿಂತವು. ಆದರೆ ಈ ಅಭಿಯಾನವನ್ನು ವಿರೋಧಿಸುವ ಕ್ರಿಯೆಗಳನ್ನು ತಡೆಯುವಲ್ಲಿ ಕೇರಳ ಪೋಲೀಸರು ವಿಫಲರಾದರು.  ಶಿವಸೇನ ಮತ್ತಿತರ ಸಂಘ ಪರಿವಾರಿಗಳು ಲಾಠಿಗಳು ಮತ್ತಿತರ ಮಾರಕಾಸ್ತ್ರಗಳನ್ನು ಹಿಡಿದು ಸ್ಥಳಕ್ಕೆ ಧಾವಿಸಿದಾಗ ಕಿಸ್ ಆಫ್ ಲವ್ ಡೇ ಅಭಿಯಾನದಲ್ಲಿ ಪಾಲ್ಗೊಂಡಿದ್ದ 50ಮಂದಿಯನ್ನೆ ಕೇರಳ ಪೋಲೀಸರು ಬಂದಿಸಿ ಬಿಟ್ಟರು. ಇದು ಸಾಕಷ್ಟು ಟೀಕೆಗೆ ಒಳಗಾಯಿತು. ದೇಶದ ವಿವಿದೆಡೆಯಲ್ಲೂ ಕಾನೂನು ಚೌಕಟ್ಟಿನಲ್ಲಿ ಅನೈತಿಕತೆಗೆ ಶಿಕ್ಷೆ ಕೊಡುವ ಅವಕಾಶಗಳಿದ್ದರೂ ಪ್ರಕರಣಗಳನ್ನು ವಿವೇಚಿಸದೆ ಸಾರ್ವತ್ರಿಕವಾಗಿ ಶಾಂತಿ ಕದಡುವ ಕೆಲಸ ಮಾಡುತ್ತಿದ್ದ ಸಂಘ ಪರಿವಾರಿಗಳ ವಿರುದ್ದ ಕರೆ ನೀಡಿದ ಈ ಅಭಿಯಾನ ಬೇರೆ ಬೇರೆ ರಾಜ್ಯಗಳಿಗೂ ಹರಡಿತು. ಈಗ ರಾಜಧಾನಿ ಬೆಂಗಳೂರಿಗೆ ಕಾಲಿಟ್ಟಿದೆ. 
       ಬೆಂಗಳೂರಿನಲ್ಲಿ ನವೆಂಬರ್ 29 ರಂದು ಆಯೋಜನೆಗೊಂಡಿರುವ "ಲವ್ ಆಫ್ ಕಿಸ್ ಡೇ" ಕುರಿತು ಸಂಘಟಕರು ಒಂದು ಪತ್ರಿಕಾ ಹೇಳಿಕೆಯನ್ನೇ ಬಿಡುಗಡೆ ಮಾಡಿದ್ದಾರೆ. ಆ ಪ್ರಕಾರ ಯಾರು ಪರಸ್ಪರರನ್ನು ಪ್ರೀತಿಸುತ್ತಾರೋ ಅವರು ಈ ಅಭಿಯಾನದಲ್ಲಿ ಪಾಲ್ಗೊಳ್ಳ ಬಹುದು, ದಂಪತಿಗಳು ಮತ್ತು ಪ್ರೇಮಿಗಳು ಈ ಅಭಿಯಾನದಲ್ಲಿ ಭಾಗವಹಿಸಲು ಅಡ್ಡಿ ಇಲ್ಲವಂತೆ, ಮಾನವೀಯತೆಯ ಮುಖವುಳ್ಳ ಸ್ಚಚ್ಚ ಪ್ರೀತಿಯ ಮೂಲಕ ಸಮಾಜ ಘಾತುಕ ಶಕ್ತಿಗಳಿಗೆ ಎಚ್ಚರಿಕೆಯ ಸಂದೇಶ ನೀಡುವುದು ಅಬಿಯಾನದ ಉದ್ದೇಶವಂತೆ, ಸಾಮಾಜಿಕ ವ್ಯವಸ್ಥೆಯಲ್ಲಿ ಮನುಷ್ಯರನ್ನು ಸಹಜವಾಗಿ ಪ್ರೀತಿಸುವ ಯಾವುದೇ ವಯೋಮಾನದ ಜನ ಇದರಲ್ಲಿ ಪಾಲ್ಗೊಳ್ಳ ಬಹುದು, ಸಹಜ ಪ್ರೀತಿಯನ್ನು ಸಾರ್ವತ್ರಿಕವಾಗಿ ಇಷ್ಟ ಬಂಧುಗಳೊಂದಿಗೆ  ಹಂಚಿಕೊಳ್ಳುವ ಮೂಲಕ ಮಾನವ ಪ್ರೀತಿಯ ಸೆಲೆ ಬತ್ತಿಲ್ಲವೆಂಬುದನ್ನು ಸಾರೋಣ ಎಂಬುದು ಸಂಘಟಕರ ಆಶಯ. ಇಂಡಿಯನ್ ಪೀನಲ್ ಕೋಡ್ ಸೆಕ್ಷನ್ 294(ಎ) ಸೆಕ್ಷನ್ ಅನ್ವಯ ನ್ಯಾಯಲಯಗಳು ಸಹಾ ಸಾರ್ವತ್ರಿಕ ಚುಂಬನ ಶಿಕ್ಷಾರ್ಹ ಅಪರಾಧ ಅಲ್ಲ ಎಂದು ಹೇಳಿದೆ. ಏಡ್ಸ್ ಜಾಗೃತಿ ಅಭಿಯಾನದ ಸಲುವಾಗಿ ಭಾರತಕ್ಕೆ ಬಂದಿದ್ದ ಹಾಲಿವುಡ್ ನಟ ರಿಚರ್ಡ್ ಗೇರ್  ಸಾರ್ವತ್ರಿಕ ವೇದಿಕೆಯಲ್ಲಿ ಬಾಲಿವುಡ್ ಹಿರೋಯಿನ್ ಶಿಲ್ಪಾಶೆಟ್ಟಿಯನ್ನು ಬಿಗಿದಪ್ಪಿ ಚುಂಬಿಸಿದ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು. ಆ ಸಂಧರ್ಭದಲ್ಲಿ ಪ್ರಕರಣವನ್ನು ಪರಿಶೀಲಿಸಿದ ಜೈಪುರ ಹೈಕೋರ್ಟು ಸಾರ್ವತ್ರಿಕ ಚುಂಬನ ಶಿಕ್ಷಾರ್ಹ ಅಪರಾಧ ಎಂದು ಕೇಸನ್ನು ಖುಲಾಸೆ ಗೊಳಿಸಿತ್ತು. ಒಂದು ವೇಳೆ ಬಲವಂತದ ಚುಂಬನಗಳು, ಮಾನ ಹಾನಿಕಾರಕ ಚುಂಬನಗಳು ಆಕ್ಷೇಪಾರ್ಹವಾಗಿ ಚುಂಬನಕ್ಕೊಳಗಾದ ವ್ಯಕ್ತಿಗಳಿಂದಲೇ ಪ್ರತಿರೋಧ ವ್ಯಕ್ತವಾದಾಗ ಅದು ಅಪರಾಧವಾಗುವ ಸಾಧ್ಯತೆಯಿದೆ. 
      ಕಿಸ್ ಆಪ್ ಲವ್ ಡೇ ಕುರಿತು ಸಾರ್ವತ್ರಿಕ ಗೋಂದಲಗಳು ಇವೆ. ಇದು ನಮ್ಮ ಸಂಸ್ಕೃತಿಯ ಸರಕು ಅಲ್ಲ ಪ್ರತಿಭಟನಾ ವಿಧಾನವೂ ಅಲ್ಲ. ಭಾರತೀಯ ಸಂಸ್ಕೃತಿಗೆ ಮಹತ್ವದ ರೀತಿ ನೀತಿಗಳಿವೆ ಹೀಗಿರುವಾಗ ಸಾರ್ವತ್ರಿಕ ಅಸಹ್ಯ ಎನಿಸುವಂತಹ ಕ್ರಿಯೆಗಳನ್ನು ಬೆಂಬಲಿಸುವುದು ಸರಿಯಲ್ಲ, ದೇಶದಲ್ಲಿ ಈಗಾಗಲೇ ಅತ್ಯಾಚಾರ ಪ್ರಕರಣಗಳು ಮೇರೆ ಮೀರಿವೆ ಇಂತಹ ಸಂದಿಗ್ಧ ಸನ್ನಿವೇಶದಲ್ಲಿ ಲವ್ ಕಿಸ್ ಡೇ ಬೇಕಾ? ಎನ್ನುವುದು ಸಾರ್ವತ್ರಿಕವಾಗಿ ಕೆಲವರು ವ್ಯಕ್ತ ಪಡಿಸುತ್ತಿರುವ ಅಭಿಪ್ರಾಯ. ಹಾಗೆಯೇ ವಿಭಿನ್ನ ಪ್ರತಿಕ್ರಿಯೆಗಳು ಇವೆ. ಸಾರ್ವತ್ರಿಕ ಚುಂಬನ ದಲ್ಲಿ ತಪ್ಪೇನಿದೆ. ಪರಸ್ಪರರನ್ನು ಪ್ರೀತಿಸುವ ಮಂದಿ ಅಪ್ಪಿಕೊಂಡು ಮುತ್ತಿಕ್ಕುವುದು ಭಾವನಾತ್ಮಕ ಸಂಬಂಧಗಳನ್ನು ವೃದ್ದಿಸುವ ಕ್ರಿಯೆ, ಮಾನವೀಯ ಸಂಬಂಧಗಳನ್ನು ಅರಿಯದೇ ನೈತಿಕ ಪೋಲೀಸ್ ಗಿರಿಯ ನೆಪದಲ್ಲಿ ದೌರ್ಜನ್ಯ ನಡೆಸುವವರಿಗೆ ಮನುಷ್ಯತ್ವದ ಅರಿವನ್ನು ಮೂಡಿಸಲು ಸಾರ್ವತ್ರಿಕ ಅಪ್ಪುಗೆಯೇ ಬೆಸ್ಟು, ಅಷ್ಟಕ್ಕು ಚುಂಬನ ಕ್ರಿಯೆ ವಿದೇಶದ್ದಲ್ಲ, ಭಾರತ ದೇಶದಲ್ಲೇ ಮೊದಲಿಗೆ ಪ್ರೀತಿಯ ಚುಂಬನವಾಗಿದೆ ನಂತರ ಅದು ದೇಶ ಕೋಶಗಳನ್ನು ದಾಟಿಕೊಂಡು ವಿಸ್ತರಿಸಿದೆ,Love Of Kiss Day ಸಂಘಟಿಸಿರುವ ಫ್ರೀ ಥಿಂಕರ್ಸ್ ಹೀಗೆ ಹೇಳುತ್ತಾರೆ, ಮಹಾಭಾರತದಲ್ಲಿ ಋಷ್ಯಶೃಂಗ ಮನಿ ವೈಶಾಲಿಯನ್ನು ಸಾರ್ವತ್ರಿಕವಾಗಿ ಚುಂಬಿಸಲಿಲ್ಲವೇ ಅಲ್ಲಿ ಮುಜುಗರ ಪಡುವಂತಹದ್ದೇನಿತ್ತು ಹಾಗೆಯೇ ಇದು ವಿನೂತನ ಪ್ರತಿಭಟನೆ ಎನ್ನುತ್ತಾರೆ. ಮುಂದುವರೆದು ಭಾರತೀಯ ದೇಗುಲಗಳಲ್ಲಿ ಅತ್ಯಂತ ಮುಜುಗರ ಪಡುವ ಮಿಥುನ ಶಿಲ್ಪಗಳಿವೆ,ಕುಂಭ ಮೇಳದಲ್ಲಿ ಅರೆಬೆತ್ತಲೆ ಓಡಾಡುವ ನಾಗಾ ಸಾಧುಗಳಿದ್ದಾರೆ, ಮೈಮೇಲೆ ಒಂದೆಳೆ ನೂಲು ಇಲ್ಲದೇ ಧರ್ಮೋಪದೇಶ ಮಾಡುವ ಜೈನ ಮುನಿಗಳಿದ್ದಾರೆ ಅಲ್ಲೆಲ್ಲೂ ಮುಜುಗರದ ಸೋಂಕಿಲ್ಲ ಆದರೆ ಪ್ರೀತಿ ಪಾತ್ರರನ್ನ ಸಾರ್ವತ್ರಿಕವಾಗಿ ಚುಂಬಿಸಿದರೆ ಅದು ತಪ್ಪೇ ಎಂಬುದು ಪ್ರತಿಭಟನೆಯ ಪರವಾಗಿ ವಾದ ಮಂಡಿಸುವವರ ಪ್ರಶ್ನೆ. ಈಗ ಹೇಳಿ ಲವ್ ಕಿಸ್ ಡೇ ಸರಿಯಾ? ಇಲ್ಲಾ ತಪ್ಪಾ? ನಿರ್ದಾರ ನಿಮ್ಮದು.             

Sunday, August 31, 2014

ಮೋದಿ ಬಾಷಣವೂ, ಶಿಕ್ಷಕರ ದಿನಾಚರಣೆಯೂ!

ಸಲ ಸೆ.5 ರಂದು ಸಾರ್ವತ್ರಿಕ ಶಿಕ್ಷಕ ದಿನಾಚರಣೆ ಇಲ್ಲ, ಅದೇನೋ ಮೋದಿ ಬಾಷಣ ಮಾಡ್ತಾರಂತೆ ಅದನ್ನ ಮಕ್ಕಳಿಗೆ ಕೇಳಿಸ್ಬೇಕಂತೆ ಎಂದು ಬೇಸರದಿಂದ ನುಡಿದದ್ದು ನನ್ನ ಶಿಕ್ಷಕ ಮಿತ್ರ. ಶಿಕ್ಷಕರ ದಿನದ ಸಂಭ್ರಮದ ಘಳಿಗೆಯನ್ನು ಮಿಸ್ ಮಾಡಿಕೊಂಡ ಬೇಸರವಿತ್ತು ಅವರ ಧ್ವನಿಯಲ್ಲಿ. ಅದೇನು ಮಾರಾಯಾ ಅಂತಹದ್ದು ಮೋದಿ ಬಾಷಣ ಕೇಳೋಕೆ ಶಿಕ್ಷಕ ದಿನಾಚರಣೆ ಕಾರ್ಯಕ್ರಮ ಯಾಕೆ ರದ್ದು ಮಾಡಬೇಕು? ಹಾಗಂತ ಏನಾದರೂ ಆದೇಶ ಇದೆಯಾ ಎಂದು ಪ್ರಶ್ನಿಸಿದೆ, ಗೊತ್ತಿಲ್ಲಾ ಓರಲ್ ಆಗಿ ಹೇಳಿದಾರಂತೆ ನೋಡ ಬೇಕು ಎಂದರು. ಇತರೆ ಶಿಕ್ಷಕ ಮಿತ್ರರು ಮತ್ತು ಅದಿಕಾರಿಗಳನ್ನು ವಿಚಾರಿಸಿದೆ, ಅವತ್ತು ಹಲವೆಡೆ ಸಾರ್ವತ್ರಿಕವಾಗಿ ಸಡಗರದಿಂದ  ಏರ್ಪಾಡು ಮಾಡಿಕೊಳ್ಳಲಾಗಿದ್ದ ಶಿಕ್ಷಕರ ದಿನಾಚರಣೆಯನ್ನು ರದ್ದು ಮಾಡಿಕೊಂಡು ಎಲ್ಲರೂ ಹ್ಯಾಪು ಮೋರೆ ಹಾಕಿಕೊಂಡಿದ್ದರು. ಎಲ್ಲಿಯೂ  ಈ ಕುರಿತು ಲಿಖಿತ ಆದೇಶವಿಲ್ಲ, ಪ್ರಧಾನಿ ಮೋದಿ ಎಲ್ಲಿದ್ದಾರೆ ಎಂದು ನೋಡಿದರೆ ಜಪಾನ್ ಪ್ರವಾಸ ದಲ್ಲಿದ್ದಾರೆ, ಮೋದಿ ಯಾಕೆ ಹೀಗೆ ಹೇಳಿದರೂ ? ಅತ್ತ ವಾರ್ಷಿಕ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಈ ಸಲ ಯಾರಿಗೂ ಕೊಡಲಿಲ್ಲ, ಸದರಿ ಪ್ರಶಸ್ತಿಯ ಹೆಸರನ್ನೇ ಬದಲಿಸಿ ಕೇಸರಿ ಪಡೆಯ ಹೆಸರುಗಳನ್ನು  ಇಡಲು ಮೋದಿ ಹುನ್ನಾರ ನಡೆಸುತ್ತಿದ್ದಾರೆ, ಇದೇ ರೀತಿ ಗಾಂಧಿ ಕುಟುಂಬದ ಹೆಸರುಗಳನ್ನು ಸಾರ್ವತ್ರಿಕ ಯೋಜನೆಗಳಿಗೆ ಇಟ್ಟಿರುವುದನ್ನು ಬದಲಿಸುವ ಪ್ರಯತ್ನ ಮಾಡುತ್ತಿದ್ದಾರೆ ಈ ನಡುವೆ ಇದೆಂತಹದ್ದು ಮಾರಾಯ್ರೆ ಅಂದು ಕೊಂಡು ಸುದ್ದಿ ಮೂಲಗಳನ್ನು ಹುಡುಕಿದೆ. 
        ಆಗಿರುವುದು ಇಷ್ಟು, ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯ ನಿರ್ದೇಶನದಂತೆ ದೆಹಲಿ ಶಿಕ್ಷಣ ನಿರ್ದೇಶನಾಲಯ ದೆಹಲಿಯ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಕಡ್ಡಾಯವಾಗಿ ಸೆ.5 ರಂದು ಪ್ರದಾನಿ ನರೇಂದ್ರ ಮೋದಿ ಶಿಕ್ಷಕರ ದಿನಾಚರಣೆಯ ಅಂಗವಾಗಿ ಮಾಡುವ ಬಾಷಣವನ್ನು ವಿದ್ಯಾರ್ಥಿಗಳಿಗೆ ಕೇಳಿಸುವಂತೆ ಸೂಚನೆ ನೀಡಿದೆ. ಆಯಾ ಶಾಲೆಗಳಲ್ಲಿ ಲಭ್ಯವಿರುವ ಪರಿಕರಗಳನ್ನ ಬಳಸಿಕೊಂಡು ವೀಕ್ಷಣೆಗೆ, ಆಲಿಸುವಿಕೆಗೆ ಅವಕಾಶ ಮಾಡುವಂತೆ ಹೇಳಲಾಗಿದೆ. ಅದೇ ದಿನ ದೆಹಲಿಯ ಆಯ್ದ ಶಾಲಾ ಮಕ್ಕಳೊಡನೆ ಪ್ರದಾನಿ ಮೋದಿ ಸಂವಾದ ನಡೆಸಲಿದ್ದಾರೆ. ಆಗಸ್ಟ್ 15ರ ಸ್ವಾತಂತ್ರ್ಯ ದಿನದಂದು ಸಹಾ ಪ್ರದಾನಿ ಮೋದಿ ಶಾಲಾ ಮಕ್ಕಳೊಡನೆ ಬೆರೆತು ಸಂವಾದ ನಡೆಸಿದ್ದರು. ಅಂದ ಹಾಗೆ ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ನೀಡಿರುವ ಈ ಸೂಚನೆಯು ಶಾಸನಬದ್ದ ಅಥವ ಕಡ್ಡಾಯವೂ ಅಲ್ಲ ಎಂದು ತಿಳಿಸಿದೆ. ಆದರೆ ದೆಹಲಿ ವ್ಯಾಪ್ತಿಯ ಶಾಲೆಗಳಿಗೆ ಮಾತ್ರ ಕಡ್ಡಾಯವೆಂದು ಸೂಚಿಸಲಾಗಿದೆ.ಅಷ್ಟೇ ಅಲ್ಲ ದೇಶದ ಇತರೆ ರಾಜ್ಯಗಳು ವಿವೇಚನಾನುಸಾರ ನಿಲುವು ತಾಳ ಬಹುದಾಗಿದೆ. ಆದರೆ ಇದನ್ನೇ ದೊಡ್ಡ ಸುದ್ದಿಯಾಗಿ ಮಾಡಿಕೊಂಡು ಸೆ.5 ರಂದು ಏರ್ಪಾಡಾಗಿದ್ದ ಅನೇಕ ಸಾರ್ವತ್ರಿಕ ಕಾರ್ಯಕ್ರಮಗಳನ್ನು ರದ್ದು ಮಾಡಿಕೊಂಡು ಸಂಭ್ರಮವನ್ನು ತಣ್ಣಗಾಗಿಸಲಾಗಿದೆ. ರಾಜ್ಯ ಸರ್ಕಾರ ಈ ದಿಸೆಯಲ್ಲಿ ಸ್ಪಷ್ಟ ನಿಲುವನ್ನು ತಕ್ಷಣ ಪ್ರಕಟಿಸ ಬೇಕು. ಇಷ್ಟಕ್ಕೂ ಶಿಕ್ಷಕ ದಿನಾಚರಣೆಯಂದು ಶಿಕ್ಷಕರ ಜೊತೆಗೆ ಮಕ್ಕಳು ಮೋದಿ ಬಾಷಣವನ್ನು ಯಾಕೆ ಕೇಳಬೇಕು? ರಾಜ್ಯದಲ್ಲಿ ಕನ್ನಡ ಪ್ರಥಮ ಬಾಷೆ, ಇಂಗ್ಲೀಷ್ , ಹಿಂದಿ , ಉರ್ದು ಆಯ್ಕೆ ಬಾಷೆಗಳು. ಹೀಗಿರುವಾಗ ರಾಜ್ಯದ ಮಕ್ಕಳಿಗೆ ಅಷ್ಟೇ ಏಕೆ ಶಿಕ್ಷಕು/ಉಪನ್ಯಾಸಕರಿಗೆ ಬಹುಪಾಲು ಮಂದಿಗೆ ಅರ್ಥವಾಗದ ಹಿಂದಿ ಬಾಷೆಯಲ್ಲಿ ಪ್ರದಾನಿ ಮೋದಿ ಬಾಷಣ ಮಾಡಿದರೆ ಏನು ಅರ್ಥವಾದೀತು? ಮೋದಿಯ ಹಿಂದಿ ಬಾಷಣ ಕೇಳಿಸುವ ನೆಪದಲ್ಲಿ ರಾಜ್ಯದ ಮಕ್ಕಳಿಗೆ ಹಿಂದಿ ಹೇರಿಕೆ ಬೇಡ ಇದನ್ನ ರಾಜ್ಯ ಸರ್ಕಾರ ಅರಿತು ತಕ್ಷಣ ಗೋಂದಲ ಪರಿಹಾರ ಮಾಡಿದರೆ ಒಳ್ಳೆಯದು. ಸದುದ್ದೇಶದಿಂದ ಶಿಕ್ಷಕ ದಿನಾಚರಣೆಯ ದಿನದಂದು ಪ್ರದಾನಿ ಮೋದಿ ಮಾಡುವ ಬಾಷಣವನ್ನ ಕನ್ನಡಿಕರಿಸಿ ಮುದ್ರಿತ ರೂಪದಲ್ಲಿ ಇಲ್ಲವೇ ಭಾಷಾಂತರ ರೂಪದಲ್ಲಿ ಮುಂದಿನ ದಿನಗಳಲ್ಲಿ ಕೇಳಿಸುವ ಪ್ರಯತ್ನವಾಗಲಿ. ಅದು ಬಿಟ್ಟು ಸೆ.5 ರ ಶಿಕ್ಷಕ ದಿನಾಚರಣೆಯ ಸಂಭ್ರಮ ರದ್ದು ಮಾಡುವುದು ಸುತರಾಂ ಒಪ್ಪಿಕೊಳ್ಳಲಾಗದು. 
          ಅಂದ ಹಾಗೆ ಭಾರತದಲ್ಲಿ ಶಿಕ್ಷಕ ದಿನಾಚರಣೆ ಅಧಿಕೃತವಾಗಿ ಜಾರಿಗೆ ಬಂದದ್ದು 1962ರಲ್ಲಿ, ಭಾರತದ ಎರಡನೇ ರಾಷ್ಟ್ರಪತಿಯಾಗಿದ್ದ ಸರ್ವೆಪಲ್ಲಿ ರಾಧಾಕೃಷ್ಣನ್, ರಾಷ್ಟ್ರಪತಿಯಾಗಿ ಅಧಿಕಾರಕ್ಕೆ ಬಂದದ್ದು 1962 ಅದೇ ವರ್ಷ ಕೆಲವು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಅವರು ಹುಟ್ಟು ಹಬ್ಬ ಆಚರಿಸುವ ಪ್ರಯತ್ನ ಮಾಡಿದಾಗ ಅದೇ ದಿನವನ್ನ ಶಿಕ್ಷಕ ದಿನಾಚರಣೆಯಾಗಿ ಆಚರಿಸಲು ರಾಧಾಕೃಷ್ಣನ್ ಸೂಚಿಸಿದ ಮೇರೆಗೆ ಅಂದಿನಿಂದ ಶಿಕ್ಷಕ ದಿನಾಚರಣೆ ಆಚರಿಸಿಕೊಂಡು ಬರಲಾಗುತ್ತಿದೆ. ಆದರೆ ಅದೇ ಅವರ ನಿಜವಾದ ಹುಟ್ಟು ಹಬ್ಬದ ದಿನಾಂಕವಾ? ಅದು ಮಾತ್ರ ಇವತ್ತಿಗೂ ಗೊತ್ತಿಲ್ಲ, ಈ ಕುರಿತು ಅವರ ಪುತ್ರ ಬರೆದಿರುವ ಪುಸ್ತಕದಲ್ಲಿ ಹೇಳಲಾಗಿದೆ. (ಈಗ ಉಲ್ಲೇಖಿತವಾಗಿರುವ ಜನ್ಮ ದಿನಾಂಕ ಸೆ.5, 1888). ಶಿಕ್ಷಕ ದಿನಾಚರಣೆಯ ಸಂಭ್ರಮಕ್ಕೆ ಇಂದಿಗೆ ಸರಿಯಾಗಿ 4ದಿನಗಳು ಉಳಿದಿವೆ . ಈ ಸಲ 53ನೇ ಶಿಕ್ಷಕರ ದಿನಾಚರಣೆ ಭಾರತದಲ್ಲಿ ಆಗುತ್ತಿದೆ. ಅದೇ ದಿನಕ್ಕೆ ಸಂಭ್ರಮ ಆಚರಿಸುವುದು ಸೂಕ್ತ ಆದರೆ ಅನುಕೂಲ, ವ್ಯವಸ್ಥೆಗಳನ್ನು ನೋಡಿಕೊಂಡು ಸೆಪ್ಟೆಂಬರ್ ತಿಂಗಳ ಯಾವುದಾದರೊಂದು ದಿನದಲ್ಲಿ ಶಿಕ್ಷಕ ದಿನಾಚರಣೆ ಆಚರಿಸುವುದು ಒಂದು ರೀತಿಯಲ್ಲಿ ರಾಧಾಕೃಷ್ಣನ್ ಗೆ ತೋರುವ ಅಗೌರವವೇ ಸರಿ.
          ಇನ್ನು ಶಿಕ್ಷಕ ಸಮುದಾಯದ ಕುರಿತು ಒಂದೆರೆಡು ಮಾತು. ವರ್ತಮಾನದ ಈ ಕಾಲಘಟ್ಟದಲ್ಲಿ ಶಿಕ್ಷಕ ಮತ್ತು ವಿದ್ಯಾರ್ಥಿ ಸಂಬಂಧ ಎಲ್ಲಿಗೆ ಬಂದು ನಿಂತಿದೆ ಎಂಬುದನ್ನು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕಾದ ಅನಿವಾರ್ಯ ಪರಿಸ್ಥಿತಿ ಸೃಷ್ಟಿಯಾಗಿರುವುದು ದುರಂತದ ಸಂಗತಿ. ಎಲ್ಲರಿಗೂ ಶಿಕ್ಷಣ, ಗುಣಾತ್ಮಕ ಶಿಕ್ಷಣ ಇತ್ಯಾದಿಗಳ ಕುರಿತು ತಲೆಕೆಡಿಸಿಕೊಂಡ ಸಂಧರ್ಭದಲ್ಲಿಯೇ ವಿದ್ಯಾರ್ಥಿ ಮತ್ತು ಶಿಕ್ಷಕರ ಸಂಬಂಧಗಳ ಕುರಿತು ಗಂಬೀರವಾದ ಚಿಂತನೆಗಳು  ಆಗ ಬೇಕಿದೆ. ಸೈದ್ದಾಂತಿಕ ಹಿನ್ನೆಲೆಯಿಲ್ಲದೇ ಪರಿಸ್ಥಿತಿಯ ಕೂಸುಗಳಾಗಿ ನೈತಿಕತೆಯ ಅರಿವಿಲ್ಲದೇ ಶಿಕ್ಷಕ ವೃತ್ತಿಯನ್ನು ಪ್ರವೇಶಿಸುತ್ತಿರುವ ಅನೇಕರು ಆತ್ಮ ವಂಚನೆ ಮಾಡಿಕೊಂಡು ಭವಿಷ್ಯದ ಯುವಶಕ್ತಿಗೆ ದ್ರೋಹ ಎಸಗುವ ಪರಿಯನ್ನು ಸಹಿಸಲು ಸಾಧ್ಯವಿಲ್ಲ. ಇತ್ತೀಚೆಗೆ ನಡೆದ ಬೆಂಗಳೂರು ವಿಬ್ ಗಯಾರ್ ಶಾಲೆಯ ಘಟನೆ ಇಡೀ ಶಿಕ್ಷಕ ಸಮುದಾಯವನ್ನು ಅನುಮಾನದಿಂದ ನೋಡುವ ಪರಿಸ್ಥಿತಿಯನ್ನು ತಂದೊಡ್ಡಿದೆ. ಶಿಕ್ಷಕ ವೃತ್ತಿ ಯಾಂತ್ರಿಕ ಕ್ರಿಯೆಯಲ್ಲ ಅದು ಅರಿವಿನ ಒಳಗಣ್ಣನ್ನಿಟ್ಟುಕೊಂಡು ಭವಿಷ್ಯದ ಸಮಾಜ ರೂಪಿಸುವ, ಸಮಾಜಕ್ಕೆ ಮಾದರಿಯಾಗುವ, ಕಾಲ ಕಾಲಕ್ಕೆ ಅಪ್ ಡೇಟ್ ಆಗುವ ವ್ಯಕ್ತಿತ್ವ ಬೆಳೆಸಿಕೊಂಡವನು ಮಾತ್ರ ಸಮಾಜದ ವಿಶ್ವಾಸದ ಶಿಕ್ಷಕನಾಗಲು ಸಾಧ್ಯ. ಗುರುವನ್ನೇ ದೈವದಂತೆ ಕಾಣುವ, ಎಲ್ಲ ರೀತಿಯಲ್ಲೂ ಆದರ್ಶವೆಂದು ವಿದ್ಯಾರ್ಥಿ ತನ್ನ ಶಿಕ್ಷಕನನ್ನು ಭಾವಿಸುವ ಭೂತಕಾಲದ ದಿನಗಳೇ ವರ್ತಮಾನದಲ್ಲೂ ನೆಲೆಯೂರ ಬೇಕಿದೆ. ಅದಕ್ಕೆ ಶಿಕ್ಷಕ ಎನಿಸಿಕೊಂಡವನು ಶ್ರದ್ದೆಯಿಂದ, ಪ್ರಾಮಾಣಿಕತೆಯಿಂದ, ಸ್ಥಿತ ಪ್ರಜ್ಞ ಮನಸ್ಸಿನಿಂದ ವ್ಯಕ್ತಿತ್ವನ್ನು ರೂಪಿಸಿಕೊಳ್ಳಬೇಕಾಗುತ್ತದೆ ಮತ್ತು ಕರ್ತವ್ಯವನ್ನು ನಿಬಾಯಿಸ ಬೇಕಾಗುತ್ತದೆ. ಗಂಟೆ ಹೊಡೆದಾಗ ಶಾಲೆಗೆ ಬಾ, ಗಂಟೆ ಹೊಡೆದಾಗ ಮನೆಗೆ ಹೋಗು, ತಿಂಗಳಾಗುತ್ತಲೇ ಕೈ ತುಂಬಾ ಸಂಬಳ ಎಣಿಸಿಕೋ, ಆಗಾಗ ಸಿಗುವ ರಜಾ ಮಜೆಯನ್ನು ಅನುಭವಿಸು ಎಂಬ ಸಾರ್ವತ್ರಿಕ ಭಾವನೆಗೆ ಅನ್ವರ್ಥವಾಗುವಂತೆ ಶಿಕ್ಷಕರು ನಡೆದುಕೊಳ್ಳದೇ, ಆತ್ಮ ವಂಚನೆಯನ್ನು ಮಾಡಿಕೊಳ್ಳದೇ ಭವಿಷ್ಯದ ಸತ್ಪ್ರಜೆಗಳನ್ನು ರೂಪಿಸಲಿ, ಭವ್ಯ ಭಾರತದ ಆಶಾ ಸೌಧವನ್ನು ಭದ್ರ ಪಡಿಸಲಿ, ಶಿಕ್ಷಕ ಸಮುದಾಯ ಆತ್ಮ ವಿಮರ್ಶೆ ಮಾಡಿಕೊಳ್ಳಿ ಎಂಬ ಆಶಯದೊಂದಿಗೆ ಸಮಸ್ತ ಶಿಕ್ಷಕರಿಗೂ ಶಿಕ್ಷಕ ದಿನಾಚರಣೆಯ ಶುಬಾಶಯಗಳು!

Sunday, August 3, 2014

ಬೆಳಗಾವಿಯಲ್ಲೊಂದು ಶಿಖಂಡಿ ಕದನ!

ಹಾಜನ್ ವರದಿಯ ನಂತರ ಮುಗಿದ ಅಧ್ಯಾಯವೆಂದೆ ಬಣ್ಣಿಸಲಾಗುತ್ತಿರುವ ವಿವಾದವನ್ನ ಮಹಾರಾಷ್ಟ್ರ ಸರ್ಕಾರ ಕೆದಕುವ ಮೂಲಕ ಭಾಷಿಕ ಸಮುದಾಯಗಳಲ್ಲಿ ಗೋಂದಲ ಮೂಡಿಸುತ್ತಿದೆಯಲ್ಲದೇ ಕನ್ನಡಿಗರ ಭಾವನಾತ್ಮಕವಾದ ನೆಲೆಗಟ್ಟಿಗೆ ಕಿರಿ ಕಿರಿ ಉಂಟು ಮೂಡುತ್ತಿದೆ. ಇವತ್ತು ಕರ್ನಾಟಕ ರಾಜ್ಯದಲ್ಲಿ ಮಕುಟ ಪ್ರಾಯದಂತಿರುವ ಬೆಳಗಾವಿ ಮತ್ತು ಕೇರಳದಲ್ಲಿರುವ ಕಾಸರಗೋಡು ಮತ್ತು ಅಲ್ಲಿನ ಕನ್ನಡಿಗರು ಆತಂಕದಲ್ಲಿ ಬದುಕುವ ಸ್ಥಿತಿಯನ್ನು ಸೃಷ್ಟಿಸುತ್ತಿದೆ. ಕಾನೂನಾತ್ಮಕವಾಗಿ ಪ್ರಾದೇಶಿಕ ಬಾಷಾ ರಾಜ್ಯಗಳ ವಿಂಗಡಣೆ ಆಯಾ ಪ್ರಾಂತ್ಯದ ಜನ ಸಾಮಾನ್ಯರ ಒಪ್ಪಿಗೆಯನುಸಾರವಾಗಿ ಆಗಿದ್ದರೂ ಸಹಾ ರಾಜಕೀಯ ಹಿತಾಸಕ್ತಿಗಳು ಮತ್ತು ಕೋಮು ಸಂಘಟನೆಗಳ ಅವಿವೇಕತನದಿಂದ ರಾದ್ದಾಂತವಾಗುತ್ತಿದೆ. ಕರ್ನಾಟಕದ ಬೆಳಗಾವಿ ಕುರಿತು  ಮಹರಾಷ್ಟ್ರ ದ  ನಿಲುವು ಭಾರತದ ಕಾಶ್ಮೀರ ಹಾಗೂ ಪಾಕೀಸ್ಥಾನದ ನಡುವಣ ಸ್ಥಿತಿ ಇರುವಂತೆಯೇ ಇದೆ. ಆದರೆ ವ್ಯತ್ಯಾಸ ಒಂದೇ ಮಹರಾಷ್ಟ್ರ ಮತ್ತು ಕರ್ನಾಟಕ ಬೇರೆ ದೇಶಗಳಲ್ಲ ಎರಡೂ ಭಾರತ ದೇಶದ ರಾಜ್ಯಗಳು! ಹೀಗಿರುವಾಗ ಪದೇ ಪದೇ ಗಡಿನಾಡ ವಿವಾದ ಯಾಕೆ ಭುಗಿಲೇಳುತ್ತಿದೆ? ಇದರ ಹಿನ್ನೆಲೆ ಏನು? ಎಂಬ ಕುರಿತು ಅರಿಯುವ ಸಂಧರ್ಭ ಇದು.

     1947ರಲ್ಲಿ ಭಾರತಕ್ಕೆ ಸ್ವತಂತ್ರ ಬಂದ ಮೇಲೆ ಬೆಳಗಾಂ ಜಿಲ್ಲೆ ಬಾಂಬೆ ರಾಜ್ಯದ ಭಾಗವಾಗಿತ್ತು.1948ರಲ್ಲಿ ಬೆಳಗಾಂ ಮುನಿಸಿಪಲ್ಟಿ ಮಾಡಿಕೊಂಡ ಮನವಿ ಮೇರೆಗೆ ಗಣರಾಜ್ಯಗಳ ಒಕ್ಕೂಟಗಳ ಸಂಯುಕ್ತ ಮಹರಾಷ್ಟ್ರಕ್ಕೆ ಸೇರ್ಪಡೆಯಾಯಿತು. ಆದರೆ 1956ರಲ್ಲಿ ಗಣರಾಜ್ಯಗಳ ವಿಂಗಡಣೆಯಾದಾಗ ರಾಜ್ಯಗಳ ಪುನರ್ ಸಂಯೋಜನೆ ಕಾಯ್ದೆಯಡಿ ಮೈಸೂರು ಸಂಸ್ಥಾನಕ್ಕೆ ಸೇರ್ಪಡೆಯಾಯಿತು. ಅಂದರೆ ಇಂದಿನ ಕರ್ನಾಟಕ ರಾಜ್ಯ.ಹಾಗೆಯೇ ನಮ್ಮ ರಾಜ್ಯದ ಪರಿಮಿತಿಯಲ್ಲಿದ್ದ ಹಲವು ಪ್ರದೇಶಗಳು ಮಹರಾಷ್ಟ್ರ ರಾಜ್ಯಕ್ಕೆ ಸೇರ್ಪಡೆಯಾಯಿತು. ಈ ಸಂಧರ್ಭದಲ್ಲಿ ಭಾಷಿಕರು ಹಾಗೂ ಆಡಳಿತಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಬೆಳಗಾಂ ಜಿಲ್ಲೆಯ ಸೇರ್ಪಡೆಯಾಯಿತಾದರೂ ಬೆಳಗಾಂ ನಲ್ಲಿ ಮಾತ್ರ ಮರಾಠಿ ಭಾಷಿಕರ ಸಂಖ್ಯೆಯದ್ದೇ ಮೇಲುಗೈ ಮತ್ತು ಅವರದ್ದೇ ದರ್ಬಾರು ಎನ್ನುವಂತಾಯಿತು. 
       ಐತಿಹಾಸಿಕವಾಗಿ ಬೆಳಗಾಂ ಕನ್ನಡಿಗರ ಪಾಲಿನ ಆಸ್ತಿಯಾಗಿತ್ತು ಮತ್ತು ಅನೇಕ ಅರಸರ ಸಂಸ್ಥಾನಕ್ಕೆ ಒಳಪಟ್ಟಿತ್ತು ಆದರೆ 18ನೇ ಶತಮಾನದಲ್ಲಿ ಬದಲಾದ ಪರಿಸ್ಥಿತಿಯಲ್ಲಿ ಈ ಭಾಗ ಮರಾಠರ ದಾಳಿಗೆ ಸಿಲುಕಿ ಪೇಶ್ವೆಗಳ ಆಡಳಿತಕ್ಕೆ ಸೇರ್ಪಡೆಯಾಯಿತಲ್ಲದೇ "ದಕ್ಷಿಣ ಮರಾಠ ದೇಶ" ಎಂದು ಕರೆಯಲ್ಪಟ್ಟಿದ್ದು ನಮ್ಮ ಉತ್ತರ ಕರ್ನಾಟಕದ ಭಾಗದ ದುರಂತ ಕಥನಗಳಲ್ಲೊಂದು.ಬ್ರೀಟೀಷರು ಭಾರತವನ್ನ ಅತಿಕ್ರಮಣ ಮಾಡಿದ ಮೇಲೆ ಜಹಗೀರುಗಳಾಗಿ ಅದನ್ನು ಹರಿದು ಹಂಚಿದರು, ಅಲ್ಲೆಲ್ಲ ಬಹುತೇಕ ಕನ್ನಡಿಗ ಭಾಷಿಕರ ಸಂಖ್ಯೆಯೆ ಹೆಚ್ಚಿತ್ತು.ಮುಂದೆ ಭಾಷಾ ಒಕ್ಕೂಟ ರಾಜ್ಯಗಳು ರಚನೆಯಾದ ಮೇಲೆ ಬೆಳಗಾವಿ ಜಿಲ್ಲೆ ಕನ್ನಡಕ್ಕೆ ಸೇರ್ಪಡೆಗೊಂಡಿದ್ದು ಇತಿಹಾಸ. ಆದರೆ  ಮಹರಾಷ್ಟ್ರ ರಾಜ್ಯದ ತಂಟೆ ತಕರಾರನ್ನು ಸಲ್ಲಿಸಿದ ಮೇಲೆ ಭಾರತ ಸರ್ಕಾಗ ಗಡಿ ವಿವಾದ ಬಗೆಹರಿಸಲು 5ನೇ ಜೂನ್ 1960ರಂದು 4ಜನ ಸದಸ್ಯರುಗಳನ್ನೊಳಗೊಂಡ ಮಹಾಜನ್ ಆಯೊಗದ ರಚನೆ ಮಾಡಿ ವರದಿ ನೀಡುವಂತೆ ಹೇಳಿತು. ಈ ಸಮಿತಿಯಲ್ಲಿ ಮೈಸೂರು ರಾಜ್ಯದ ಇಬ್ಬರು ಸದಸ್ಯರು ಹಾಗೂ ಮಹರಾಷ್ಟ್ರದ ಇಬ್ಬರು ಪ್ರತಿನಿಧಿಗಳಿದ್ದರು. ಮಹರಾಷ್ಟ್ರದ ಕ್ಯಾತೆಯಿಂದಾಗಿ ಈ ಸಮಿತಿ ವರದಿ ನೀಡುವಲ್ಲಿ ವಿಫಲವಾಯಿತು. ಹಾಗಾಗಿ ಯಥಾ ಸ್ಥಿತಿಯನ್ನು ಕಾಯ್ದುಕೊಳ್ಳುವಂತೆ ಸೂಚಿಸಲಾಗಿತ್ತು. 
       ಮುಂದೆ ಮತ್ತೆ ಮತ್ತೆ ಗಡಿ ವಿವಾದವನ್ನು ಕೆದಕುತ್ತಿದ್ದ ಮಹಾರಾಷ್ಟ್ರದಲ್ಲಿ ಸೇನಾಪತಿ ಬಾಪಟ್ ಎಂಬ ಜನನಾಯಕನೊಬ್ಬ ಗಡಿ ವಿವಾದ ಬಗೆ ಹರಿಸುವಂತೆ ಉಪವಾಸ ಸತ್ಯಾಗ್ರಹ ನಡೆಸಿ ಒತ್ತಡ ಹೇರಿದ್ದರಿಂದ ಭಾರತ ಸರ್ಕಾರ ಮತ್ತೊಮ್ಮೆ 1966ರಲ್ಲಿ ಮಹಾಜನ್ ಆಯೊಗವನ್ನು ಪುನರ್ ರಚಿಸಿತು. 1967ರಲ್ಲಿ ಈ ಆಯೋಗವನ್ನು ಅಧಿಕೃತವಾಗಿ ಘೋಷಣೆ ಮಾಡಲಾಯಿತು. ಭಾರತ ದೇಶದ ಸುಪ್ರೀಂ ಕೊರ್ಟಿನ 3ನೇ ಮುಖ್ಯ ನ್ಯಾಯಮೂರ್ತಿಯಾಗಿದ್ದ ಮೆಹರ್ ಚಂದ್ ಮಹಾಜನ್ ಆಯೋಗದ ಅಧ್ಯಕ್ಷರಾಗಿದ್ದರಿಂದ ಆಯೋಗದ ವರದಿಗೆ ಮಹಾಜನ್ ಆಯೊಗದ ವರದಿ ಎಂದೆ ಹೆಸರಾಗಿದೆ. ಆಯೋಗವೂ ಎರಡು ರಾಜ್ಯಗಳ ವಾದ ವಿವಾದವನ್ನು ಆಲಿಸಿ ಪರಿಶೀಲಿಸಿ ಪ್ರದೇಶಗಳ ಅದಲು ಬದಲು ಮಾಡಿಕೊಳ್ಳಲು ಸೂಚಿಸಿತಲ್ಲದೇ ಮಹರಾಷ್ಟ್ರ ಕೇಳಿದ್ದ ಬೆಳಗಾಂ ಕೇಂದ್ರ ಸ್ಥಾನ ನಗರವನ್ನು ಬದಲಿಸಲು ಸ್ಪಷ್ಠವಾಗಿ ನಿರಾಕರಿಸಿತು. ಇದಕ್ಕಾಗಿ ಆಯೋಗವು 2240ಕ್ಕೂ ಹೆಚ್ಚು ಮನವಿಗಳನ್ನು ಆಲಿಸಿತು, 7572ಕ್ಕೂ ಹೆಚ್ಚು ಜನರನ್ನು ಖುದ್ದಾಗಿ ಮಾತನಾಡಿಸಿತು ನಂತರವಷ್ಟೇ ತನ್ನ ವರದಿಯನ್ನು ಕೆಂದ್ರಕ್ಕೆ ಸಲ್ಲಿಸಿತು. ಈ ಸಂಧರ್ಭದಲ್ಲಿ ಮಹರಾಷ್ಟ್ರ ಬೆಳಗಾಂ ಸೇರಿದಂತೆ 814ಪ್ರದೇಶಗಳನ್ನು ಕೇಳಿದ್ದಕ್ಕೆ ದಕ್ಕಿದ್ದು ನಿಪ್ಪಾಣಿ, ಖಾನಾಪುರ ಮತ್ತು ನಂದಗಢ್ ಸೇರಿದಂತೆ 262ಗ್ರಾಮಗಳು, ಮೈಸೂರು ಸಂಸ್ಥಾನವೂ  ಬಯಸಿದ್ದ 516 ಹಳ್ಳಿಗಳ ಪೈಕಿ ಸಿಕ್ಕಿದ್ದು ಕೇವಲ 247. ಹೀಗೆ ಮಹಾಜನ್ ಆಯೋಗ ತನ್ನ ವರದಿ ನೀಡಿದ ಸಂಧರ್ಭದಲ್ಲಿ ಮತ್ತೊಂದು ಪ್ರಮುಖ ಅಂಶವನ್ನು ಹೇಳಿತ್ತು. 1920ರಲ್ಲಿ ಕಾಸ್ಮೋಪಾಲಿಟನ್ ಸಿಟಿಯಾಗಿದ್ದ ಬೆಳಗಾಂ ನಗರದಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಮಹಾ ಸಭೆ ನಡೆದಾಗ ಯಾವೊಬ್ಬ ಮರಾಠಿ ನಾಯಕನೂ ಬೆಳಗಾಂ ಮಹಾರಾಷ್ಟ್ರಕ್ಕೆ ಸೇರಬೇಕೆಂದು ಹೇಳಿರಲಿಲ್ಲ, ಬೆಳಗಾಂ ನಗರ ಹೊರತು ಪಡಿಸಿ ಜಿಲ್ಲೆಯ ಎಲ್ಲಾ ಪಟ್ಟಣಗಳು ಮತ್ತು ಹಳ್ಳಿಗಳು ಅಪ್ಪಟ ಕನ್ನಡಿಗರಿಂದಲೇ ಕೂಡಿರುವುದರಿಂದ ಬೆಳಗಾಂ ಮೈಸೂರು ಸಂಸ್ಥಾನದ ಭಾಗ ಎಂದು ಸಾರಿತ್ತು. ಮುಂದೆ ಆಯೋಗದ ಅಂತಿಮ ವರದಿ ಸಲ್ಲಿಕೆಯಾದಾಗ ಅಂದಿನ ಪ್ರಧಾನಿಯಾಗಿದ್ದ ರಾಜೀವ್ ಗಾಂಧಿ ಮಹಾಜನ್ ಆಯೋಗದ ಶಿಫಾರಸ್ಸುಗಳಿಗೆ ಅನುಮೋದನೆ ನೀಡಿದ್ದರು. 
       ಆದರೆ ಮಹರಾಷ್ಟ್ರ ಸರ್ಕಾರ ಸುತರಾಂ ಒಪ್ಪದೇ ಮಹಾಜನ್ ಆಯೋಗದ ವರದಿಯನ್ನ ತಿರಸ್ಕರಿಸಿತ್ತು. ಆದಾಗ್ಯೂ ವಿವಾದ ನ್ಯಾಯಾಲಯದ ಮೆಟ್ಟಿಲೇರಿದಾಗ ನ್ಯಾಯಾಲಯವೂ ಸಹಾ ಮಹಾಜನ್ ಆಯೋಗದ ವರದಿ ಅಂತಿಮ ಎಂದೇ ಸಾರಿದೆ. ಆದರೆ ಬೆಂಬಿಡದೇ ತಕರಾರು ತೆಗೆಯುತ್ತಿರುವ ಮಹರಾಷ್ಟ್ರ ನ್ಯಾಯಾಲಯದ ಆದೇಶಗಳನ್ನ ಉಲ್ಲಂಘಿಸಿ ಪ್ರಾದೇಶಿಕ ಭಾಷಿಗರ ಭಾವನಗೆ ಧಕ್ಕೆ ಬರುವಂತೆ ನಡೆದುಕೊಳ್ಳುತ್ತಿದೆ. ಅದರ ಪರಿಣಾಮವೇ ಬೆಳಗಾವಿ ಜಿಲ್ಲೆಯ ಯಳ್ಳೂರ ಘಟನೆ. ಇದ್ದಕ್ಕಿಂದತೆಯೇ ರಾತ್ರೋ ರಾತ್ರಿ ಕರ್ನಾಟಕಕ್ಕೆ ಸೇರಿದ ಹಳ್ಳಿಯೊಂದರಲ್ಲಿ ಮಹರಾಷ್ಟ್ರ ರಾಜ್ಯ ಯಳ್ಳುರು ಎಂದು ನಾಮಫಲಕ ಹಾಕಿದರೆ ಅದನ್ನ ಒಪ್ಪಿಕೊಳ್ಳಬೇಕೆ? ಈ ಘಟನೆಯನ್ನ ನ್ಯಾಯಾಲಯ ಪರಿಮಿತಿಗೆ ತಂದು ಜಿಲ್ಲಾಡಳಿತದ ಮೂಲಕ ತೆರವು ಮಾಡಿಸಿದರೆ ತಪ್ಪೇ? ಇದನ್ನೇ ದೊಡ್ಡ ಸಮಸ್ಯೆಯಂತೆ ಬಿಂಬಿಸಿದ ಶಿವಸೇನಾ ಎಂಬ ಕೋಮು ಕಪಿಗಳ ತಂಡ ರಾಜ್ಯದ ಬಸ್ ಗಳ ಮೇಲೆ ಕಲ್ಲು ತೂರಿ ಕನ್ನಡ ಭಾಷಿಕರ ಮೇಲೆ ದೌರ್ಜನ್ಯ ಎಸಗಿದರೆ ಸಹಿಸಬೇಕೆ? ನಾಮಫಲಕ ತೆರವು ಗೊಳಿಸುವ ಸಂಧರ್ಭದಲ್ಲಿ ಗಲಭೆ ಉಂಟಾಯಿತೆಂಬ ಕುಂಟು ನೆಪ ಹೇಳಿ ಮಹರಾಷ್ಟ್ರ ಸರ್ಕಾರ ತನ್ನ ಜಿಲ್ಲಾಧಿಕಾರಿಯನ್ನು ಬೆಳಗಾವಿಗೆ ಕಳುಹಿಸುವುದನ್ನು ಸಹಿಸಬೇಕೆ? ಎಂಇಎಸ್ ಎಂಬ ಪುಂಡರ ತಂಡ ಮರಾಠಿ ಮೇಳ, ಸಭೆ ಇತ್ಯಾದಿಗಳನ್ನು ಮಾಡಿ ನಮ್ಮ ಶಾಂತಿಗೆ ಭಂಗ ತರುವುದನ್ನು ಎಷ್ಟು ದಿನ ನೋಡಿಕೊಂಡಿರಲು ಸಾಧ್ಯ? ಎಂಇಎಸ್ ಎಂಬ ಪುಂಡರ ಪಡೆ ಚುನಾವಣೆಗಳಲ್ಲಿ ಮರಾಠಿಗರನ್ನೇ ಆಯ್ಕೆ ಮಾಡಿಕೊಂಡು ಕನ್ನಡಿಗರಿಗೆ ಆಡಳಿತ ದಕ್ಕದಂತೆ ಮಹಾನಗರಪಾಲಿಕೆಯಲ್ಲಿ ಪುಂಡಾಟಿಕೆ ನಡೆಸುತ್ತದೆ. ಕನ್ನಡದ ಮೇಯರ್ ಗಳಿಗೆ ಸದಸ್ಯರುಗಳಿಗೆ ಚಪ್ಪಲಿ ಸೇವೆ ಹಿಯಾಳಿಕೆ ಮಾಡುತ್ತದೆ ಎಂಬುದನ್ನು ಸಹಿಸಬೇಕೆ? ಕರ್ನಾಟಕ ರಕ್ಷಣ ವೇದಿಕೆಯ ನಾರಾಯಣಗೌಡರಿಗೆ ಈ ವಿಚಾರದಲ್ಲಿ ಹ್ಯಾಟ್ಸ್ ಆಫ್ ಹೇಳಲೇ ಬೇಕು, ರಾಜ್ಯ ಸರ್ಕಾರ ಮೈ ಮರೆತು ಕೂತಾಗ ಗಡಿನಾಡ ಜನರ ರಕ್ಷಣೆಗೆ ದಾವಿಸಿ ಹೋರಾಟದ ಮೂಲಕ ಬಿಸಿ ಮುಟ್ಟಿಸಿ ಕನ್ನಡಿಗರು ಆಡಳಿತ ಚುಕ್ಕಾಣಿ ಹಿಡಿಯುವಂತಹ ಕಾರ್ಯ ಮಾಡಿದ್ದು  ಒಬ್ಬ ಹೋರಾಟಗಾರ ಎಂಬುದು ಸಾಮಾನ್ಯ ಸಂಗತಿಯಲ್ಲ. 
      ಇವತ್ತು ಮತ್ತೆ ತಕರಾರು ಭುಗಿಲೆದ್ದಿದೆ, ಅಲ್ಲಿ ಶಾಸಕನಾಗಿರುವ ಎಂಇಎಸ್ ಪಡೆಯ ಶಾಸಕ ಸಂಭಾಜಿ ಪಾಟೀಲ ಪುಂಡಾಟಿಕೆಗೆ ಕುಮ್ಮಕ್ಕು ನೀಡುತ್ತ ಪರೋಕ್ಷವಾಗಿ ಯಳ್ಳೂರು ಸಮಸ್ಯೆಗೆ ಕಾರಣಕರ್ತನಾಗಿದ್ದಾನೆ. ಮಹರಾಷ್ಟ್ರ ಭಾಗದಲ್ಲಿ ಇನ್ನೆರೆಡು ತಿಂಗಳಲ್ಲಿ ನಡೆಯುವ ಚುನಾವಣೆಯಲ್ಲಿ ತನ್ನ ಕಡೆಯ ಎಂಇಎಸ್ ಪುಂಡನೊಬ್ಬನಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಭಾವನೆಗಳನ್ನು ಕೆದಕುವ ಕೆಲಸ ಮಾಡಿದ್ದಾನೆ. ತಕ್ಷಣದಿಂದ ಈತನ ವಿಧಾನ ಸಭಾ  ಸದಸ್ಯತ್ವ ರದ್ದಾಗುವಂತೆ ಕ್ರಮ ಜರುಗಿಸ ಬೇಕಾದಂತ ಅಗತ್ಯವಿದೆ. ರಾಜ್ಯ ಸರ್ಕಾರ ಸಧ್ಯ ಪರಿಸ್ಥಿತಿಯನ್ನು ನಿಭಾಯಿಸಲು ಹೇಮಂತ್ ನಿಂಬಾಳ್ಕರ್ ಎಂಬ ಐಪಿಎಸ್ ಅಧಿಕಾರಿಯನ್ನು ಕಳುಹಿಸಿದೆ ಆತನೊ ಮಹರಾಷ್ಟ್ರೀಯ ಅಲ್ಲಿ ಎಂತಹ ನ್ಯಾಯ ನಿರೀಕ್ಷಿಸಲು ಸಾಧ್ಯ? ಸರ್ಕಾರ ಕೋಟ್ಯಾಂತ ವೆಚ್ಚ ಮಾಡಿ ವಿಧಾನ ಸೌಧ ನಿರ್ಮಿಸಿ ಅಲ್ಲಿ ವರ್ಷಕ್ಕೊಂದು ಸಲ ಪಿಕ್ ನಿಕ್ ಹೋಗಿ ಸದನ ನಡೆಸಿದರೆ ಸಾಲದು ಕಠಿಣ ನಿರ್ದಾರಗಳನ್ನು ಗಡಿ ರಕ್ಷಣೆ ಕುರಿತು ತೆಗೆದುಕೊಳ್ಳಬೇಕಿದೆ. ಗಡಿನಾಡ ಶಾಲೆಗಳ ಸ್ಥಾಪನೆ, ಮೂಲ ಸೌಕರ್ಯಗಳು, ಜನಸಾಮಾನ್ಯರ ಬದುಕುಗಳನ್ನು ಹಸನಾಗಿಸುವ ಯೋಜನೆಗಳನ್ನು ಜಾರಿಗೆ ತರಬೇಕಿದೆ. ಎಂಇಎಸ್ ಪುಂಡಾಟಿಕೆಯನ್ನು ನಿರ್ನಾಮ ಮಾಡುವ ಜೊತೆಗೆ ರಾಜ್ಯದಲ್ಲಿ ಆ ಸಂಘಟನೆಯನ್ನೆ ನಿಷೇದಿಸ ಬೇಕಿದೆ. ಬೆಳಗಾಂ ನಲ್ಲಿ ಕನ್ನಡಿಗರ ಕಾರ್ಯಕ್ರಮಗಳು, ಹೋರಾಟಗಳು ನಡೆಯಲು ಅವಕಾಶವನ್ನು ಕಲ್ಪಿಸಬೇಕು, ವಿವಾದ ಭುಗಿಲೆದ್ದಾಗ ಮಾತ್ರ ಎಚ್ಚರವಿದ್ದು ಬಾಕಿಯ ಸಮಯದಲ್ಲಿ ನಿದ್ರಿಸುವುದನ್ನು ಬಿಡಬೇಕು. ಗಡಿನಾಡ ಕನ್ನಡಿಗರ ಪರವಾಗಿ ಹೋರಾಟ ನಡೆಸುವ ಸಂಘಟನೆಗಳ ಕಾರ್ಯಕರ್ತರು ಮತ್ತು ಮುಖಂಡರುಗಳ ಗಣ್ಯರ ವಿರುದ್ದ ಯಾವ ದೂರುಗಳನ್ನು ಹಾಕಬಾರದು ಮತ್ತು ಗಡಿ ನಾಡ ಹೋರಾಟಗಳಿಗೆ ಹಾಕಿರುವ ಎಲ್ಲ ಮೊಕದ್ದಮೆಗಳನ್ನು ಹಿಂಪಡೆದು ಮಹರಾಷ್ಟ್ರದ ಶಿಖಂಡಿ ಕದನಕ್ಕೆ ಬ್ರೇಕ್ ಹಾಕುವ ಇಚ್ಚಾಶಕ್ತಿಯನ್ನು ಕರ್ನಾಟಕ ರಾಜ್ಯ ಪ್ರದರ್ಶಿಸಲಿ.

Sunday, July 20, 2014

ಹುಚ್ಚುಮನಸ್ಸಿನ ವಿಕೃತಿಗಳು ಮತ್ತು ಒಂದು ಅನ್ಯಾಯ!


ಇವತ್ತಿಗೆ ಸರಿಯಾಗಿ ಹದಿನೈದು ದಿನಗಳಷ್ಠೆ! ಬೆಳಿಗ್ಗೆ 10.30ರ ವೇಳೆಗೆ ಬಂದ ದೂರವಾಣಿ ಕರೆಯೊಂದು ನನ್ನ ಮನಸ್ಸಿಗೆ ಆಘಾತ ಉಂಟುಮಾಡಿತ್ತು.ಹಾಸನ ಜಿಲ್ಲೆಯ ಕೊಣನೂರು ಗ್ರಾಮದ ಪರಿಧಿಯಲ್ಲಿ ಬರುವ ಗ್ರಾಮವೊಂದರಲ್ಲಿ ಪಕ್ಕದ ಮನೆಯ ವಿಕೃತ ಯುವಕನೊಬ್ಬ ಮನೆ ಮುಂದೆ ಆಡುತ್ತಿದ್ದ 4-5ವಯಸ್ಸಿನ ಪುಟ್ಟ ಮಗುವನ್ನ ಮನಯೊಳಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದನಲ್ಲದೇ ನಂತರವೂ ಅತ್ಯಂತ ಹೀನಾಯವಾಗಿ ಮಗುವಿನೊಂದಿಗೆ ನಡೆದುಕೊಂಡಿದ್ದ. 2ದಿನಗಳ ನಂತರ ಮಗು ತೀವ್ರ ಜ್ವರ ಮತ್ತು ಉದರ ಬಾಧೆಯಿಂದ ನರಳಿ ಮಲಗಿತು, ಗಾಬರಿಗೊಂಡ ಪೋಷಕರು ಕೊಣನೂರು ಠಾಣೆಯ ಪಕ್ಕದಲ್ಲೇ ಇರುವ ಸರ್ಕಾರಿ ಆಸ್ಪತ್ರೆಗೆ ಕರೆತಂದಾಗಲೇ ಘೋರ ಸತ್ಯದ ಅನಾವರಣಗೊಂಡಿದ್ದು. ಬಹುಶ: ಅಲ್ಲಿ ಪರೀಕ್ಷಿಸಿದ ವೈದ್ಯರು ಮಗುವಿನ ಮೇಲೆ ಅತ್ಯಾಚಾರವಾಗಿದೆ ಎಂದು ಹೇಳದಿದ್ದರೆ ಹೊರ ಜಗತ್ತಿಗೆ ಅದು ತಿಳಿಯುತ್ತಿರಲಿಲ್ಲವೇನೋ. ಇದು ಒತ್ತಟ್ಟಿಗಿರಲಿ ಇದಕ್ಕಿಂತಲೂ ಅತ್ಯಂತ ಕೆಟ್ಟ ಸಂಗತಿಯೆಂದರೆ ಜಾತೀಯ ಹಿನ್ನೆಲೆಯಲ್ಲಿ ಇಡೀ ಪ್ರಕರಣವನ್ನ ಮುಚ್ಚಿ ಹಾಕಿ ರಾಜೀ ಮಾಡಿಸಲು ಸಮುದಾಯದ ಮಂದಿ ಪ್ರಯತ್ನಿಸಿದ್ದು. ಅದೃಷ್ಠವಶಾತ್ ಹೀನ ಮನಸ್ಥಿತಿಯ ಜನರ ಪ್ರಯತ್ನ ಕೈಗೂಡಲಿಲ್ಲ ಕೇಸು ದಾಖಲಾಯ್ತು, ವಿಕೃತನನ್ನು ಜೈಲಿಗಟ್ಟಲಾಯ್ತು. ಸುದ್ದಿ ಮಾಧ್ಯಮಗಳಲ್ಲೂ ಪ್ರಕಟವಾಯಿತು, ಭಾವನಾತ್ಮಕವಾಗಿ ಮಿಡಿಯಬೇಕಾದ ಹೃದಯಗಳು ಈ ಸಂಧರ್ಭದಲ್ಲಿ ನಿದ್ರಾವಸ್ಥೆಯಲ್ಲಿದ್ದವು ಈ ಸುದ್ದಿಗಿಂತ ಅವತ್ತು ಕೇಂದ್ರ ಬಜೆಟ್ ಎಲ್ಲರಿಗೂ ಮುಖ್ಯವಾಗಿತ್ತು. ಮಾನವೀಯತೆಯ ತುಡಿತ ಸತ್ತು ಮಲಗಿತ್ತು.  ಮೀಡಿಯಾಗಳಲ್ಲೂ ಈ ಸುದ್ದಿಗೆ ಆಧ್ಯತೆ ಇರಲಿಲ್ಲ ಎಂಬುದು ಅಷ್ಟೇ ವಿಷಾಧನೀಯ ಸಂಗತಿ. 
         ಇವತ್ತು ಬೆಂಗಳೂರಿನಲ್ಲೇನಾಗಿದೆ? 1ನೇ ತರಗತಿಯಲ್ಲಿ ಓದುತ್ತಿದ್ದ ವಿಬ್ ಗಯಾರ್ ಶಾಲೆಯ ಮಗುವಿನ ಮೇಲೆ ಶಾಲೆಯಲ್ಲೇ ವಿಕೃತಿಯನ್ನ ಪ್ರದರ್ಶಿಸಲಾಗಿದೆ ಎರಡು ದಿನಗಳ ನಂತರ ಘಟನೆ ಬೆಳಕಿಗೆ ಬಂದಿದೆ. ಹಾಗೆಯೇ ಕಳೆದ ವಾರ ಯುವತಿಯೋರ್ವಳ ಮೇಲೆ ವಿಕೃತರ ಗ್ಯಾಂಗ್ ದೌರ್ಜನ್ಯ ನಡೆಸಿದ್ದಲ್ಲದೇ ಅನೈಸರ್ಗಿಕ ವಿಕೃತಿಯನ್ನೆಸಗಿದೆ. ಮೀಡಿಯಾಗಳಲ್ಲಿ , ವಿಧಾನ ಸಭೆಗಳಲ್ಲಿ, ಜನಸಾಮಾನ್ಯರ ನಡುವೆ ಇದೇ ಚರ್ಚೆ ತಮಗೆ ತೋಚಿದ ರೀತಿಯಲ್ಲಿ ನಡೆಯುತ್ತಿದೆ. ನಗರ ಪ್ರದೇಶದಲ್ಲಿ ನಡೆದರೆ ಮಾತ್ರ ಅಂತಹ ವಿಕೃತಿಗಳಿಗೆ ಮಾನ್ಯತೆಯೇ ? ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಅನಾಚಾರ ನಡೆದಾಗ ಕಠಿಣ ಕ್ರಮಕ್ಕೆ ಮತ್ತು ಕಾನೂನು ಜಾರಿಗೆ ಯಾಕೆ ಚರ್ಚೆಗಳು ನಡೆಯುವುದಿಲ್ಲ? ಮಿಡಿಯಾಗಳಲ್ಲಿ ಆಧ್ಯತೆ ಸಿಗಬೇಕಾದ ವಿಚಾರಗಳಿಗಿಂತ ವಿಕೃತಿಯ ಪರಮಾವಧಿಯನ್ನೆ ಎಳೆ ಎಳೆಯಾಗಿ ವಿವರಿಸಿ ಮತ್ತಷ್ಟು ವಿಕೃತಿಗೆ ಅವಕಾಶ ಮಾಡಿಕೊಡುವುದು ಸರಿಯೇ? ಸಾಮಾಜಿಕ ಸ್ವಾಸ್ತ್ಯ ಕಾಪಾಡ ಬೇಕಾದವರು ಯಾರು ? ಅರಿವಿನ ಪ್ರಜ್ಞೆ ಮೂಡಿಸುವ ಹೊಣೆಗಾರಿಕೆ ಯಾರದ್ದು ? ವಿಕೃತಿಯ ಬಲಿಪಶುವಾದವರು ಇಂತಹ ಕ್ರಿಯೆಗಳಿಂದ ಅನುಭವಿಸುವ ನೋವಿಗೆ ಪರಿಹಾರ ಏನು?

             ಹೌದು ಇಂತಹದ್ದೊಂದು ಚರ್ಚೆ ಇವತ್ತು ಅನಿವಾರ್ಯ,ಅತ್ಯಾಚಾರದಂತಹ ಹೀನ ಕ್ರಿಯೆಗೆ ಪೋಸ್ಕೋ ದಂತಹ ಕಠಿಣ ಕಾನೂನು ಜಾರಿಗೆ ಬರಲು ನಿರ್ಭಯಾ ಪ್ರಕರಣ ನಾಂದಿ ಹಾಡ ಬೇಕಾಯ್ತು, ಅದೇ ರೀತಿ ಬೆಂಗಳೂರಿನಲ್ಲಿ ನಡೆದಿರುವ  ಎರಡು ಹೀನ ಪ್ರಕರಣಗಳು ರಾಜ್ಯ ಸರ್ಕಾರ ಮತ್ತಷ್ಟು ಕಠಿಣ ಕಾನೂನು ಜಾರಿಯಾಗುವಂತೆ ಕ್ರಿಯೆಗೆ ಸಾಕ್ಷಿಯಾಗಿದೆ. ಇವತ್ತು ಇಡೀ ಪ್ರಕರಣಗಳು ದೃಶ್ಯ ಮಾಧ್ಯಮಗಳ ಅತಿರೇಕದ ವರದಿಗಳಿಂದ ಆಗುತ್ತಿವೆಯೆಂಬುದು ಸ್ಪಷ್ಟವಾಗಿ ಗೋಚರವಾಗುತ್ತಿದೆ, ಸುಪ್ರಿಂ ಕೋರ್ಟು ನಿರ್ದೇಶನದಂತೆ ಅತ್ಯಾಚಾರಕ್ಕೊಳಗಾದ ಸಂತ್ರಸ್ತರ ಪೋಷಕರು, ಗೆಳೆಯರು, ಶಾಲೆ, ಕಾಲೇಜು ಮತ್ತು ಸಂತ್ರಸ್ಥರ ಯಾವುದೇ ಗುರುತಿಸಲ್ಪಡುವ ಸಂಗತಿಗಳನ್ನು ಪ್ರಕಟಿಸುವಂತಿಲ್ಲ, ಇಂತಹ ಕ್ರಿಯೆಗಳು ಸಂತ್ರಸ್ಥರನ್ನು ಭೂಮಿಯ ಮೇಲೆ ಬದುಕಿದ್ದು ಸತ್ತಂತೆ ಮಾಡಿ ಬಿಡುತ್ತವೆ ಮತ್ತು ನಿಖರವಾಗಿ ಹೇಳುವುದಾದರೆ ಯಾರಿಗಾದರೂ ತಿಳಿಯದಂತೆ ಅತ್ಯಾಚಾರ ಎಸಗುವ ಕಾಮುಕರಿಗಿಂತ ಸಾರ್ವತ್ರಿಕವಾಗಿ ಇದನ್ನು ಪ್ರಸಾರ ಮಾಡುವವರು ಹೆಚ್ಚು ಕ್ರೂರಿಗಳಾಗಿ ಬಿಡುತ್ತಾರೆ. ಅತ್ಯಾಚಾರ ನಡೆದಾಗ ಮಾನವೀಯ ತುಡಿತದ ವಿಚಾರಗಳಿಗೆ ಆಸ್ಪದವಾಗಬೇಕು ಕಾಮುಕರ ಶಿಕ್ಷೆಯ ಕುರಿತು ಚರ್ಚೆಗಳಾಗ ಬೇಕು ಆದರೆ ಮತೀಯ ಲಾಭದ ಕುರಿತ ಚರ್ಚೆ, ಅತ್ಯಾಚಾರ ಹೇಗೆ ಆಯಿತು ಎಂಬುದನ್ನು ಚಿತ್ರಗಳ ಮೂಲಕ ಸವಿವರವಾಗಿ ತಿಳಿಸುವ ಸಂಗತಿ ಇದೆಯಲ್ಲ ಅರಗಿಸಿಕೊಳ್ಳಲಾಗದ್ದು. 


           ಈ ಸಂಧರ್ಬದಲ್ಲಿ ಚರ್ಚೆಯಾಗಬೇಕಾದ ಮತ್ತೊಂದು ಅಂಶವೆಂದರೆ ಅತ್ಯಾಚಾರ ಪ್ರಕರಣದ ತನಿಖಾಧಿಕಾರಿಯ ಮೇಲೆ ದೇಶದಲ್ಲೇ ಮೊದಲ ಬಾರಿಗೆ 166(ಎ) ಪ್ರಕರಣ ದಾಖಲಾಗಿರುವುದು!ಬೆಂಗಳೂರು ಮಹಾನಗರದ ಪುಲಿಕೇಶಿ ನಗರ ಠಾಣ ವ್ಯಾಪ್ತಿಯಲ್ಲಿ ಯುವತಿಯೋರ್ವಳ ಮೇಲೆ  ಜರುಗಿದ ಅನೈಸರ್ಗಿಕ ಅತ್ಯಾಚಾರ ಪ್ರಕರಣದಲ್ಲಿ ಮೀಡಿಯಾಗಳ ವಿಕೃತಿಯಿಂದ ದಕ್ಷ ಮತ್ತು ಪ್ರಾಮಾಣಿಕರೆಂದೇ ಹೆಸರು ಮಾಡಿದ್ದ ರಾಜಧಾನಿಯ ಇನ್ಸ್ ಪೆಕ್ಟರ್  ಮೊಹಮ್ಮದ್ ರಫಿ ಅಮಾನತುಗೊಂಡಿದ್ದಲ್ಲದೇ ಬಂಧನಕ್ಕೊಳಗಾಗಿದ್ದು.  ಬಹುಶ: ಹಾಸನ ಜಿಲ್ಲೆಯ ಜನತೆಗೆ ತಿಳಿದಿರಲಾರದು ಈ ಮೊಹಮ್ಮದ್ ರಫಿ ಜಿಲ್ಲೆಯ ಅರಕಲಗೂಡು ಪಟ್ಟಣದವರು. ಇಡೀ ಪ್ರಕರಣದಲ್ಲಿ ತನ್ನದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸುತ್ತ ದಿನಕ್ಕೊಂದು ಗಾಸಿಪ್ ಸುದ್ದಿಗೆ ಆಹಾರವಾಗಿದ್ದಾರೆ. ಮೊಹಮ್ಮದ್ ರಫಿ ಬಿಎ, ಬಿಡಿ ಪಧವೀಧರ 1997 ರಿಂದ 1998ರ ವರೆಗೆ ಪ್ರೌಢಶಾಲಾ ಶಿಕ್ಷಕ ವೃತ್ತಿಯಲ್ಲಿದ್ದವರು. ಬೀಡಿ ಕಟ್ಟುವ ವೃತ್ತಿಯಲ್ಲಿ ತೊಡಗಿಸಿಕೊಂಡ ಬಡಕುಟುಂಬದಿಂದ ರಫಿ 1998ರಲ್ಲಿ ರಾಜ್ಯ ಪೋಲೀಸ್ ಸೇವೆಗೆ ಸೇರಿ ಎಸ್ಸೈ ಆದರು. ಕೋಲಾರ ಜಿಲ್ಲೆಯಲ್ಲಿ ವೃತ್ತಿ ಜೀವನ ಆರಂಭಿಸಿದ ರಫಿ ಕೋಲಾರ ಜಿಲ್ಲೆಯಲ್ಲಿ ಬೀಡು ಬಿಟ್ಟಿದ್ದ ರೌಡಿಗಳನ್ನು ಮಟ್ಟ ಹಾಕಿದರು, ಅನೇಕ ಪಾತಕಿಗಳನ್ನು ಎನ್ ಕೌಂಟರ್ ಮಾಡಿದರು, ಕೊಲೆಗೈದು 14ಕೆಜಿ ಚಿನ್ನ ಹೊತ್ತೊಯ್ದಿದ್ದ ಪಾತಕಿಯೇ ಠಾಣೆಯ ಮುಂದೆ ಜನರನ್ನ ಕಲೆಹಾಕಿ ಅಪರಾಧಿಗಳನ್ನು ಹಿಡಿಯುವಂತೆ ಪ್ರತಿಭಟನೆ ನಡೆಸುತ್ತಿದ್ದಾಗ ಕುಶಲತೆಯಿಂದ ಆತನನ್ನ ಹೆಡೆಮುರಿದು ಕಟ್ಟಿ ಜೈಲಿಗೆ ದಬ್ಬಿದ್ದು ರಫಿ ಹೆಸರನ್ನು ಇವತ್ತಿಗೂ ಅಜರಾಮರವಾಗಿಸಿದೆ. ಬೆಂಗಳೂರಿಗೆ ಇನ್ಸ್ ಪೆಕ್ಟರ್ ಆಗಿ ಬಂದ ಮೇಲೆ 1999 ರಿಂದ 2011ರ ವರೆಗೆ ಬೆಂಗಳೂರು ರೌಡಿ ನಿಗ್ರಹ ದಳದ ಮುಖ್ಯಸ್ಥರಾಗಿದ್ದ ರಫಿ , ಜಾನ್ ಸನ್ ಎಂಬ ಪುರಾತನ ಪಾತಕಿಯನ್ನು ಮತ್ತು 14ವಿವಿಧ ಕೊಲೆ ಪ್ರಕರಣದಲ್ಲಿ ಬೇಕಾಗಿದ್ದ ನಮ್ರಾಜ್ ಬಹಾದ್ದೂರ್ ಥಾಪ ಎಂಬಾತನನ್ನು ಶೂಟೌಟ್ ಮಾಡಿ ಕೆಡವಿ ಹಾಕಿದ್ದರು. ಅಷ್ಟೇ ಅಲ್ಲ 70ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಬೇಕಾಗಿದ್ದ ದೊಡ್ಡ ಗ್ಯಾಂಗ್ ಅನ್ನು ಸೆರೆಹಿಡಿದು ಶಿಕ್ಷೆಯಾಗುವಂತೆ ನೋಡಿಕೊಂಡಿದ್ದರು, ಮಹಾನಗರದಲ್ಲಿರುವ ಯುಟಿವಿ ಮೋಷನ್ ಬೆದರಿಕೆ ಪ್ರಕರಣದಲ್ಲಿ ರವಿ ಪೂಜಾರಿ ಗ್ಯಾಂಗ್ ಅನ್ನು ಸದೆ ಬಡಿದಿದ್ದರಲ್ಲದೇ 37ಕೆಜಿ ಚಿನ್ನ ಮತ್ತು ನಗದು ವಶಪಡಿಸಿಕೊಂಡು 8ಕ್ಕೂ ಹೆಚ್ಚು ಪ್ರಕರಣದಲ್ಲಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆಯಾಗುವಂತೆ ನೋಡಿಕೊಂಡಿದ್ದರು. ಇದೇ ಕಾರಣಕ್ಕಾಗಿ ರಫಿಗೆ ಬಿಜೆಪಿ ಸರ್ಕಾರವಿದ್ದಾಗ  ಎರಡು ಬಾರಿ ಪುರಸ್ಕಾರವೂ ದೊರಕಿದೆ. ವೈಜ್ಞಾನಿಕ ತನಿಖೆಗಾಗಿ ಅತ್ಯುತ್ತಮ ವೈಜ್ಞಾನಿಕ ತನಿಖೆ ಪ್ರಶಸ್ತಿ ದಕ್ಕಿದ್ದರೆ, ಸೇವಾ ಶ್ರೇಷ್ಠತೆಗಾಗಿ ಮುಖ್ಯಮಂತ್ರಿಗಳ ಪದಕವನ್ನು ಪಡೆದಿದ್ದಾರೆ. ಇಂತಹ ರಫಿ ಅತ್ಯಾಚಾರದಂತಹ ಪ್ರಕರಣದಲ್ಲಿ ಅಮಾನತು ಮತ್ತು ಬಂದನಕ್ಕೊಳಗಾಗುವುದೆಂದರೆ ಚಕಿತಗೊಳ್ಳುವ ಸಂಗತಿ ಇದು. 
    ಪ್ರಕರಣದ ಹಿನ್ನೆಲೆಯನ್ನು ಕೆದಕಿದಾಗ ತಿಳಿದದ್ದು ಇಷ್ಟು ಕಳೆದ ಜುಲೈ 10ರಂದು ಬೆಂಗಳೂರಿನ ಯುವತಿಯ ಮೇಲೆ ನಡೆದ ದೌರ್ಜನ್ಯದ ಪ್ರಕರಣ ಠಾಣೆಯಲ್ಲಿ ದಾಖಲಾಗಿದ್ದುಜುಲೈ 13ರಂದು ಮದ್ಯ ರಾತ್ರಿ, ಅವತ್ತು ಪುಲಿಕೇಶಿ ನಗರ ಠಾಣೆಗೆ ಗೆಳೆಯನೊಂದಿಗೆ ಬಂದ ಯುವತಿ ಆರೋಪಿಯನ್ನು ಪೋಲೀಸ್ ವಶಕ್ಕೆ ನೀಡಿದಳೆ ಹೊರತು ಅತ್ಯಾಚಾರ ಪ್ರಕರಣ ದಾಖಲಿಸಲು ಸಿದ್ದಳಿರಲಿಲ್ಲ, ಕರ್ತವ್ಯದಲ್ಲಿದ್ದ ಎಎಸ್ಸೈ , ಠಾಣೆಯ ಇನ್ಸ್ ಪೆಕ್ಟರ್ ರಫಿಗೆ ಕರೆ ಮಾಡಿ ವಿಷಯ ತಿಳಿಸಿದಾಗ ಯುವತಿಯೊಂದಿಗೆ ಮಾತನಾಡಿದ ಅವರು ಪ್ರಕರಣದ ತೀವ್ರತೆ ಅರಿತು ದೂರು ನೀಡುವಂತೆ ಸಲಹೆ ಮಾಡಿದ್ದಾರೆ ಮತ್ತು ಅದೇ ಪ್ರಕಾರವಾಗಿ ಎಎಸ್ಸೈ ಸೆ.354 ಮತ್ತು 377ರಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಂತರ ಬಂದ ಇನ್ಸ್ ಪೆಕ್ಟರ್ ರಫಿ ಅಪರಾಧಿಯನ್ನ ವಿಚಾರಣೆಗೊಳಪಡಿಸಿದ್ದಾರೆ, ಆ ವೇಳೆಗೆ ದೂರುದಾರರು ಸ್ಥಳದಲ್ಲಿಲ್ಲ, ಸೋಮವಾರ ಅಪರಾಧಿಯನ್ನ ಜೈಲಿಗೆ ಅಟ್ಟಲಾಗಿದೆ, ಮಂಗಳವಾರ ಗೆಳೆಯನ ಜೊತೆ ಠಾಣೆಗೆ ಬಂದ ಯುವತಿ ದೂರಿನ ದೃಢೀಕರಣ ಪಡೆಯುವ ಸಂಧರ್ಬ ಬೆಂಗಳೂರಿನ ಸಂಜೆ ಆಂಗ್ಲ ಪತ್ರಿಕೆಯೊಂದರ ವರದಿಗಾರ ಗಮನಿಸಿದ್ದಾನೆ. ಪ್ರಕರಣದ ಪೂರ್ವಾಪರ ತಿಳಿಯುವ ಮುನ್ನವೇ ತನಗೆ ತೋಚಿದಂತೆ ಸುದ್ದಿ ಪ್ರಕಟಿಸಿದ್ದಾನೆ. ಕ್ಷಣ ಮಾತ್ರದಲ್ಲಿ ಸುದ್ದಿ ಮಿಂಚಿನಂತೆ ಹರಡಿ ದೃಶ್ಯ ಮಾಧ್ಯಮದ ಮಂದಿ ತಮಗೆ ತಿಳಿದಂತೆ ಸುದ್ದಿಯನ್ನು ವರದಿ ಮಾಡಿದ್ದಾರೆ. ರಫಿ ಪ್ರಕರಣವನ್ನ ರಾಜಿ ಮಾಡಲು ಯತ್ನಿಸಿದರು, ಸರಿಯಾದ ಪ್ರಕರಣ ದಾಖಲಿಸುವಲ್ಲಿ ನಿರ್ಲಕ್ಷ್ಯ ತೋರಿದರು ಆ ಮೂಲಕ ಅಪರಾಧಿಯನ್ನು ರಕ್ಷಿಸಲು ಯತ್ನಿಸಿದರು ಇತ್ಯಾದಿ ಅಷ್ಟೇ ಅಲ್ಲ ಮರುದಿನ ಬಂಧನಕ್ಕೊಳಗಾಗಿ ಅತ್ಯಾಚಾರ ಪ್ರಕರಣದ ಕೇಸು ದಾಖಲಿಸಲು ಸೆಕ್ಷನ್ ತಿಳಿದಿರಲಿಲ್ಲ ಎಂದೆಲ್ಲ ವರದಿಯಾಗಿದೆ. ಆದರೆ ಪೋಲೀಸ್ ದಾಖಲೆಗಳು ಹೇಳುವುದೇ ಬೇರೆ. ಅಸಲಿಗೆ ಪ್ರಕರಣ ದಾಖಲಿಸಿದ್ದು ಎಎಸ್ಸೈ ಮತ್ತು ಎಸ್ಸೈ, ಅಪರಾಧಿ ಬಂದನವಾಗಿ ಜೈಲಿಗಟ್ಟಿದ ಮೇಲೆ ಸುದ್ದಿ ಮಾಧ್ಯಮಗಳಲ್ಲಿ ಕಲ್ಪಿತ ಸುದ್ದಿಗಳ ಪ್ರಕಟವಾಗಿದೆ, ಬಂಧನಕ್ಕೊಳಗಾದ ರಫಿ ತನಿಖಾ ವೇಳೆ ಸೆಕ್ಷನ್ ಅರಿವಿರಲಿಲ್ಲ ಎಂದು ಹೇಳಿಕೆಯನ್ನೇ ನೀಡಿಲ್ಲ ಎಂದು ಪೋಲೀಸ್ ಮೂಲಗಳು ಖಚಿತವಾಗಿ ಹೇಳುತ್ತವೆ. ಸುದ್ದಿ ಮೀಡಿಯಾಗಳಲ್ಲಿ ಬಂದ ನಂತರ ಸ್ವತ: ಯುವತಿಯೇ ಪೋಲೀಸ್ ಕಮಿಷನರ್ ಬಳಿ ತೆರಳಿ ಇನ್ಸ್ ಪೆಕ್ಟರ್ ರಫಿಯದ್ದು ತಪ್ಪಿಲ್ಲ ಎಂದು ಹೇಳಿದ್ದಾಳೆ ಮತ್ತು ಪ್ರಕರಣದ ಕುರಿತು ಕಲ್ಪಿತ ಸುದ್ದಿ ಪ್ರಕಟಿಸಿದ ಮತ್ತು ತನ್ನ ಗುರುತನ್ನು ಪತ್ತೆ ಹಚ್ಚುವ ರೀತಿ ಸುದ್ದಿ ಪ್ರಸಾರ ಮಾಡಿದ ಮಾಧ್ಯಮಗಳ ವಿರುದ್ದ ಅದೇ ಪುಲಿಕೇಶಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ. ಆದರೆ ಇದ್ಯಾವುದು ಇವತ್ತಿಗೂ ಸುದ್ದಿಯಾಗಿಲ್ಲ ಆದರೆ ಅಮಾಯಕ ಇನ್ಸ್ ಪೆಕ್ಟರ್ ಮೇಲೆ ವಿನಾಕಾರಣ ಕ್ರಮ ಜರುಗಿಸಲಾಗಿದೆ. ಅತ್ಯಾಚಾರದ ಪ್ರಕರಣ ತೀವ್ರತೆ ಒಬ್ಬ ಇನ್ಸ್ಪೆಕ್ಟರನನ್ನು ಆತನ ಪ್ರಾಮಾಣಿಕತೆ ಮತ್ತು ವಾಸ್ತವತೆಗಿಂತ ಜಾತೀಯ ನೆಲೆಗಟ್ಟಿನಲ್ಲಿ ನೋಡುವಂತಾಗಿದದು ಅತ್ಯಂತ ದುರದೃಷ್ಠಕರ. ಇನ್ಸ್ ಪೆಕ್ಟರ್ ಮೊಹಮ್ಮದ್ ರಫಿ  ಪ್ರಕರಣದಿಂದ ನೊಂದಿದ್ದಾರೆ  ಸಾರ್ವತ್ರಿಕವಾಗಿ ವಾಸ್ತವ ಸಂಗತಿಗಳನ್ನು ಅರುಹುವ ದೃಷ್ಟಿಯಿಂದ ಪ್ರಕರಣ ಸಮಾಪ್ತಿಯಾದ ಮೇಲೆ ಹೈಕೋರ್ಟುನಲ್ಲಿ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸುತ್ತಿದ್ದಾರೆ. ಸತ್ಯ ಬೇಗ ಹೊರ ಬರಲಿ, ಅಪರಾಧಿಗಳಿಗೆ ಶಿಕ್ಷೆಯಾಗಲಿ, ಅತ್ಯಾಚಾರದಂತಹ ಪ್ರಕರಣಗಳಿಗೆ ಕಡಿವಾಣ ಬೀಳಲಿ

Sunday, May 4, 2014

ಶತಮಾನೋತ್ಸವದ ಹೊಸ್ತಿಲಲ್ಲಿ ಕಸಾಪ

ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತಿಗೆ ಬರೋಬ್ಬರಿ 100ವರ್ಷ! ಕನ್ನಡ ಭಾಷೆ, ಸಂಸ್ಕೃತಿ ಮತ್ತು ಸಾಹಿತ್ಯದ ಉಳಿವಿಗೆ, ಅಭಿವೃದ್ದಿಗೆ ಕನ್ನಡ ಸಾಹಿತ್ಯ ಪರಿಷತ್ತು ವಿವಿಧ ಆಯಾಮಗಳಲ್ಲಿ ಕೆಲಸ ಮಾಡಿಕೊಂಡು ಬಂದಿದೆ, ಆದಾಗ್ಯೂ ಅನೇಕ ಟೀಕೆ ಟಿಪ್ಪಣಿಗಳು ಪರಿಷತ್ ಕುರಿತು ಇದ್ದೇ ಇದೆ. ಕೆಲ ವರ್ಷಗಳ ಹಿಂದೆ ಪರಿಷತ್ ಅಧ್ಯಕ್ಷ ಗಿರಿಗೆ ಕಿತ್ತಾಡಿಕೊಂಡು ಗಾದಿಯಿಂದ ವಂಚಿತಗೊಂಡ ಅತೃಪ್ತ ಆತ್ಮಗಳು ಕನ್ನಡ ಸಾಹಿತ್ಯ ಪರಿಷತ್ ಗೆ ಪರ್ಯಾಯ ಸಂಸ್ಥೆ ಕಟ್ಟುವ ವ್ಯರ್ಥ ಪ್ರಯತ್ನವನ್ನು ಮಾಡಿದ್ದುಂಟು. ಇಂಥವೆಲ್ಲ ಕ್ರಿಯೆಗಳ ಮದ್ಯೆ ಕನ್ನಡ ಸಾಹಿತ್ಯ ಪರಿಷತ್ ಯಾವ ಹಿತಾಸಕ್ತಿಗಳಿಗೂ ಮನ್ನಣೆ ಕೊಡದೇ ತನ್ನ ಕೆಲಸವನ್ನ ಸದ್ದಿಲ್ಲದೇ ಮಾಡಿಕೊಂಡು ಹೋಗುತ್ತಿದೆ. ಬಹುಶ: ಆ ಕಾರಣಕ್ಕಾಗಿಯೇ ಪರಿಷತ್ ಸ್ವತಂತ್ರ ಸಂಸ್ಥೆಯಾಗಿ ತನ್ನ ತನವನ್ನು ಉಳಿಸಿಕೊಂಡಿದೆ, ಹಾಗೂ ಹಿಂದೆಂದಿಗಿಂತಲೂ ಈ ಕಾಲಘಟ್ಟಕ್ಕೆ ಬದಲಾದ ಪರಿಸರದಲ್ಲಿ ಲಭ್ಯ ಸಂಪನ್ಮೂಲಗಳನ್ನು ಬಳಸಿಕೊಂಡು ಸಾಹಿತ್ಯ ಸೇವೆಯನ್ನ, ಭಾಷೆಯನ್ನು, ಸಂಸ್ಕೃತಿಯನ್ನ ಉಳಿಸುವ ಪ್ರಯತ್ನ ಮಾಡುತ್ತಿದೆ. 
     ಮೈಸೂರು ಸಂಸ್ಥಾನದ ನಾಲ್ಕನೇ ಕೃಷ್ಣರಾಜ ಒಡೆಯರ ಕಾಲದಲ್ಲಿ ದಿವಾನರಾಗಿದ್ದ ಮೋಕ್ಷಗುಂಡುಂ ವಿಶ್ವೇಶ್ವರಯ್ಯ, ಒಡೆಯರ್ ಮಾರ್ಗದರ್ಶನದಲ್ಲಿ ಮೇ 3, 1915ರಂದು ಕನ್ನಡ ಭಾಷೆಯ ಉಳಿವು ಮತ್ತು ಅಭಿವೃದ್ದಿಗಾಗಿ ಹೆಚ್ ವಿ ನಂಜುಂಡಯ್ಯ ನೇತೃತ್ವದಲ್ಲಿ ಉಪಸಮಿತಿಯನ್ನು ರಚನೆ ಮಾಡಿದರು. ಹೆಚ್ ವಿ ನಂಜುಂಡಯ್ಯ ಮೈಸೂರು ವಿವಿಯ ಪ್ರಥಮ ಕುಲಪತಿಯಾಗಿದ್ದರು, ಕೆಲ ಕಾಲ ಒಡೆಯರ್ ಸಂಸ್ಥಾನದಲ್ಲಿ ಕಾರ್ಯನಿರ್ವಾಹಕ ದಿವಾನರಾಗಿಯೂ ಕೆಲಸ ಮಾಡಿದ್ದರೂ ಅಷ್ಠೇ ಅಲ್ಲ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನಾಂದಿ ಹಾಡಿದ ಪ್ರಮುಖರೂ ಆಗಿದ್ದಾರೆ. ಅವತ್ತಿಗೆ ಕನ್ನಡದ ಸಲುವಾಗಿ ರಚನೆಯಾಗಿದ್ದ ಉಪಸಮಿತಿಯ ಉದ್ದೇಶ ರಾಜ್ಯ ಮತ್ತು ರಾಜ್ಯದ ಹೊರಗೆ ಹಂಚಿಹೋಗಿರುವ ಕನ್ನಡಿಗರಲ್ಲಿ ಏಕತೆ ತರುವುದು, ಪ್ರಾದೇಶಿಕ ಕನ್ನಡದ ಅಭಿವೃದ್ದಿಗೆ ಸಲಹೆಗಳನ್ನು ಸ್ವೀಕರಿಸುವುದು, ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಕನ್ನಡ ಭಾಷೆ ಪಠ್ಯವನ್ನು ಓದುವಂತೆ ಮಾಡುವುದು, ಕನ್ನಡ ಭಾಷಾ ಜ್ಞಾನಾಭಿವೃದ್ದಿಗೆ ಕನ್ನಡ ಪುಸ್ತಕಗಳ ಪ್ರಕಟಣೆ, ಬೇರೆ ಭಾಷೆಗಳಲ್ಲಿ ಬಳಕೆಯಾಗುವ ಪದಗಳ ಕನ್ನಡೀಕರಣ ಮುಖ್ಯವಾಗಿ ವಿಜ್ಞಾನದಲ್ಲಿ ಕನ್ನಡ ಬಳಕೆ ಅವತ್ತಿನ ಪ್ರಮುಖ ಆದ್ಯತೆಯಾಗಿತ್ತು. 
         ಉಪಸಮಿತಿ ಸಾರ್ವಜನಿಕ ಸಂವಹನ ನಡೆಸಿ ನೀಡಿದ ವರದಿಯ ಮೇರೆಗೆ ಬೆಂಗಳೂರಿನ ಸರ್ಕಾರಿ ಹೈಸ್ಕೂಲು ಆವರಣದಲ್ಲಿ ಸೇರಿದ್ದ ಸಾಹಿತಿಗಳು, ಕವಿಗಳು, ಪ್ರಗತಿ ಪರರು, ಕನ್ನಡಾಭಿಮಾನಿಗಳು, ಪತ್ರಕರ್ತರು, ಬುದ್ದಿಜೀವಿಗಳು ಕನ್ನಡ ಸಾಹಿತ್ಯ ಪರಿಷತ್ತು ರಚನೆಗೆ ಸಾಮೂಹಿಕ ಅನುಮೋದನೆ ನೀಡಿದರು ಹಾಗೆಯೇ ಹೆಚ್ ವಿ ನಂಜುಂಡಯ್ಯ ಸರ್ವಾನುಮತದಿಂದ ಮತ್ತು ಅವಿರೋಧವಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಪ್ರಥಮ ಅಧ್ಯಕ್ಷರಾಗಿ ಚುನಾಯಿತರಾದರು. ಹೀಗೆ ಆರಂಭಗೊಂಡ ಕನ್ನಡ ಸಾಹಿತ್ಯ ಪರಿಷತ್ತು ಏಕಕಾಲದಲ್ಲಿ ಮದ್ರಾಸ್, ಮುಂಬೈ, ಹೈದ್ರಾಬಾದ್ ಮತ್ತು ಕೊಡಗು ನಲ್ಲಿ ಕಾರ್ಯ ಆರಂಬಿಸಿತು. ಹೀಗೆ ಪ್ರಥಮವಾಗಿ 5ವರ್ಷಗಳ ಅವಧಿಗೆ ಅಧಿಕಾರ ನಡೆಸಿದ ಹೆಚ್ ವಿ ನಂಜುಂಡಯ್ಯ ಮೊದಲ ಅಕ್ಷರ ಜಾತ್ರೆಗೆ ನಾಂದಿ ಹಾಡಿದರು. ನಂತರ ಕರ್ಪೂರ ಶ್ರೀನಿವಾಸ್ ರಾವ್ ಅಧ್ಯಕ್ಷರಾಗಿದ್ದ ಅವಧಿಗೆ ಈಗಿನ ಕನ್ನಡ ಸಾಹಿತ್ಯ ಪರಿಷತ್ತು ಕಟ್ಟಡಕ್ಕೆ ಶಂಕು ಸ್ಥಾಪನೆಯಾಗಿ ಕೆಲಸವೂ ಆರಂಭಗೊಂಡಿತು, ಕಟ್ಟಡ ಒಂದೇ ವರ್ಷದಲ್ಲಿ ಪೂರ್ಣಗೊಂಡು ಶ್ರೀ ಕೃಷ್ಣರಾಜ ಪರಿಷನ್ಮಂದಿರವೆಂದು ನಾಮಕರಣಗೊಂಡಿತು. ಮುಂದೆ ಬಿ ಎಂ ಶ್ರೀಕಂಠಯ್ಯ ಅಧ್ಯಕ್ಷರಾಗಿದ್ದಾಗ ಅದುವರೆಗೂ ಕರ್ನಾಟಕ ಸಾಹಿತ್ಯ ಪರಿಷತ್ತು ಆಗಿದ್ದುದು ಶ್ರೀಕಂಠಯ್ಯನವರ ಸಲಹೆ ಮೇರೆಗೆ ಕನ್ನಡ ಸಾಹಿತ್ಯ ಪರಿಷತ್ತು ಎಂದು 1938ರಲ್ಲಿ ಹೆಸರು ಬದಲಿಸಿಕೊಂಡಿತು. 
           ಸಾಹಿತ್ಯ ಪರಿಷತ್ತಿನ ಕಾರ್ಯ ವಿಸ್ತರಣೆಗೊಂಡು ಪ್ರತೀ ತಾಲೂಕು ಕೇಂದ್ರಗಳಲ್ಲೂ ಕನ್ನಡ ಸಾಹಿತ್ಯ ಪರಿಷತ್ತು ಅಸ್ತಿತ್ವ ಕಂಡು ಕೊಂಡಿತು. ಪ್ರತೀ ವರ್ಷ ಕನ್ನಡ ಸಾಹಿತ್ಯ ಸಮ್ಮೇಳನ, ಪುಸ್ತಕಗಳ ಪ್ರಕಟಣೆ, ದತ್ತಿ ಸ್ಥಾಪನೆ, ಸಾಹಿತಿಗಳ, ಕನ್ನಡ ಹೋರಾಟಗಾರರ ಪುರಸ್ಕಾರ, ಕಟ್ಟಡಗಳ ನಿರ್ಮಾಣ ಹೀಗೆ ಪರಿಷತ್ತು ತನ್ನದೇ ಆದ ರೀತಿಯಲ್ಲಿ ಅಂದಿನಿಂದ ಕಾರ್ಯ ನಿರ್ವಹಿಸಿಕೊಂಡು ಬಂದಿದೆ. ಅನೇಕ ಮಂದಿ ಘಟಾನುಘಟಿಗಳು ಸಾಹಿತಿಗಳು, ಸಾಹಿತ್ಯಾಸಕ್ತರು, ಸರ್ಕಾರಿ ಅಧಿಕಾರಿಗಳಾಗಿದ್ದವರು, ನೌಕರರಾಗಿದ್ದವರು, ಕನ್ನಡಾಭಿಮಾನಿಗಳು ಕೇಂದ್ರ ಪರಿಷತ್ತಿನ ಗದ್ದುಗೆಗೆ ಬಂದಿದ್ದಾರೆ. ಪರಿಷತ್ತಿನ ಚಟುವಟಿಕೆಗಳಿಗೆ ಸರ್ಕಾರವೂ ಸಹಾ ಪ್ರತೀ ವರ್ಷ ಆರ್ಥಿಕ ಸಹಾಯವನ್ನು ಮಾಡುತ್ತಾ ಬಂದಿದೆ. ಈ ನಡುವೆ 1987ರಲ್ಲಿ ಲೆಕ್ಕ ಪತ್ರಗಳ ವ್ಯತ್ಯಾಸವಾದಾಗ ಸರ್ಕಾರ ಪರಿಷತ್ತಿಗೆ ಆಡಳಿತಾಧಿಕಾರಿಯನ್ನು ನೇಮಕ ಮಾಡಿತ್ತು 1989ರಲ್ಲಿ ಆಡಳಿತಾಧಿಕಾರಿಯನ್ನು ವಾಪಾಸ್ ಪಡೆಯಿತು. 
          ಪರಿಷತ್ತಿಗೆ ಅಧ್ಯಕ್ಷರಾಗಿ ಬಂದವರೆಲ್ಲ ಒಂದಲ್ಲ ಒಂದು ರೀತಿ ಹೊಸ ಕಾರ್ಯಕ್ರಮಗಳ ಮೂಲಕ ಒಳ್ಳೆ ಕೆಲಸಗಳನ್ನೇ ಮಾಡಿ ಹೋಗಿದ್ದಾರೆ, ಈ ನಡುವೆ ರಾಜಕಾರಣಿಗಳು ಇಲ್ಲವೇ ಸರ್ಕಾರ ಪರಿಷತ್ತನ್ನು ಅಂಕೆಯಲ್ಲಿಟ್ಟುಕೊಳ್ಳುವ ವ್ಯರ್ಥ ಪ್ರಯತ್ನವನ್ನು ಹಲವು ಸಲ ಮಾಡಿದ್ದರೂ ಅದನ್ನು ಮೀರಿ ಪರಿಷತ್ತು ಬೆಳೆಯುತ್ತಿದೆಯೆಂಬುದು ಹೆಮ್ಮೆಯ ಸಂಗತಿ. ಪರಿಷತ್ತಿಗೆ ಆರ್ಥಿಕ ಶಕ್ತಿ ಮತ್ತು ರಚನಾತ್ಮಕವಾದ ಕೆಲಸಗಳಾಗಿದ್ದು ಡಾ ನಲ್ಲೂರು ಪ್ರಸಾದ್ ಅವರ ಅವಧಿಯಲ್ಲಿ. ಅತ್ಯಂತ ಕಡಿಮೆ ಅನುದಾನದಲ್ಲಿ ಕುಂಟುತ್ತಾ ಸಾಗಿದ್ದ ಕೆಲಸಗಳು ಇವರ ಅವಧಿಯಲ್ಲಿ ಚೈತನ್ಯ ಪಡೆದು ಪರಿಷತ್ತು ಸೆಟೆದು ನಿಲ್ಲುವಂತಾಗಿದ್ದು ಹೆಮ್ಮೆಯ ಸಂಗತಿ. ನಲ್ಲೂರು ಕನ್ನಡ ಸಾಹಿತ್ಯ ಪರಿಷತ್ತಿಗೆ ಹೆಚ್ಚಿನ ಅನುದಾನವನ್ನು ರಾಜ್ಯದ ಬಜೆಟ್ ನಲ್ಲಿ ಮೀಸಲಿಡುವಂತ ಮಾಡಿದ್ದು ಮತ್ತು ಪ್ರತೀ ತಾಲೂಕುಗಳಿಗೆ ಸಾಹಿತ್ಯ ಸಮ್ಮೇಳನ ನಡೆಸಲು ಅನುದಾನ, ಪರಿಷತ್ತು ಘಟಕಗಳ ನಿರ್ವಹಣೆಗೆ ಅನುದಾನ ಒದಗಿಸಿದೆ ಕೀರ್ತಿಗೆ ಭಾಜನರಾಗುತ್ತಾರೆ. ಪ್ರಸಕ್ತ ಸಾಲಿನಲ್ಲಿ ಅಧ್ಯಕ್ಷರಾಗಿರುವ ಪುಂಡಲೀಕ ಹಾಲಂಬಿ ಕೂಡ ಒಳ್ಳೆಯ ಸಂಘಟನಾ ಚಾತುರ್ಯ ಉಳ್ಳವರು ಜೊತೆಗೆ ಪರಿಷತ್ತಿಗೆ ಶಾಶ್ವತವಾದ ಕೆಲಸಗಳನ್ನು ಮಾಡುವ ಉತ್ಸಾಹದಲ್ಲಿದ್ದಾರೆ. ಆದ್ದರಿಂದಲೆ ಶತಮಾನೋತ್ಸವಕ್ಕೆ ಮಹತ್ವದ ಕಾರ್ಯಕ್ರಮಗಳು ರೂಪಿಗೊಂಡಿವೆ. 
       ಇದೆಲ್ಲಾ ಸರಿ ಆದರೆ ಕನ್ನಡ ಸಾಹಿತ್ಯ ಪರಿಷತ್ತು ರಾಜ್ಯದಲ್ಲಿ ಕಣ್ಮುಚ್ಚುತ್ತಿರುವ ಕನ್ನಡ ಶಾಲೆಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಗಟ್ಟಿಯಾದ ಪ್ರಯತ್ನ ಮಾಡುತ್ತಿಲ್ಲ, ಗಡಿನಾಡ ಕನ್ನಡಿಗರ ಹಿತಾಸಕ್ತಿ ಮತ್ತು ಅಲ್ಲಿನ ಕನ್ನಡ ಶಾಲೆಗಳ ಕುರಿತು ಗಮನ ಹರಿಸುವಲ್ಲಿ ನಿರ್ಲಕ್ಷ್ಯ ವಹಿಸಿದೆ ಎನ್ನುವ ಗಂಭೀರ ಆರೋಪಗಳಿವೆ. ಹಾಗೆಯೇ ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳಲ್ಲಿ ಸಮಾಜದ ಎಲ್ಲ ಸ್ಥರದ ಜನರನ್ನು ಒಂದೇ ಮುಖ್ಯ ವಾಹಿನಿಯಲ್ಲಿ ಕರೆದೊಯ್ಯುವ ಗುರುತರ ಜವಾಬ್ದಾರಿಯೂ ಇದೆ ಇದನ್ನು ನಿರ್ವಹಿಸುವಲ್ಲಿ ಎಡವಿದೆ, ಕನ್ನಡ ಸಂಸ್ಕೃತಿಯ ಅಭಿವೃದ್ದಿಗೆ, ಭಾಷೆಯ ಬೆಳವಣಿಗೆಗೆ ಸಮುದಾಯದ ಎಲ್ಲ ಜನರನ್ನು ಒಳಗೊಳ್ಳಬೇಕು ಎಂಬುದು ಅಳಲು. ರಾಜಕೀಯ ರಹಿತವಾದ ಮತ್ತು ಸರ್ಕಾರಗಳ ಹಸ್ತಕ್ಷೇಪವಿಲ್ಲದೇ ಪರಿಷತ್ತು ನಡೆಯುತ್ತಿದೆ ಮುಂದೆಯೂ ಇದು ಇನ್ನಷ್ಟು ಸಬಲೀಕರಣಗೊಂಡು ಕನ್ನಡಿಗರ ಹಿತಕಾಯುವ ಪ್ರಾತಿನಿಧಿಕ ಸಂಸ್ಥೆಯಾಗಿ ಮುಂದುವರೆಯಲಿ ಎಂಬುದು ಆಶಯ 

Sunday, April 27, 2014

ಮರ್ಯಾದಾ ಹತ್ಯೆ, ಜಾತೀಯ ವ್ಯವಸ್ಥೆ!

ಅವತ್ತು ನಿಗಿ ನಿಗಿ ಉರಿಯುವ ಬಿಸಿಲು, ಹೊರಗೆ ಕಾಲಿಡುವುದು ಹೇಗಪ್ಪಾ ಎಂದು ಯೋಚಿಸುವ ಹೊತ್ತಲ್ಲಿಯೇ ಒಂದು ಅನಾಮಿಕ ಕರೆ. ಇಂಥಹ ಊರಿನಲ್ಲಿ ಪ್ರೇಮಿಸಿದ ಅನ್ಯ ಜಾತಿಯ ಪ್ರೇಮಿಗಳನ್ನು ರೆಡ್ ಹ್ಯಾಂಡಾಗಿ ಹಿಡಿದು ಮರಕ್ಕೆ ಕಟ್ಟಿ ಹಾಕಲಾಗಿದೆ ಬನ್ನಿ. ಸರಿ ತಕ್ಷಣ ಆ ಹಳ್ಳಿಗೆ ಧಾವಿಸಿದೆ, ಹುಡುಗಿ ಪರಿಶಿಷ್ಠ ಜಾತಿ, ಹುಡುಗ ಕುರುಬ ಸಮುದಾಯದವ ಇಬ್ಬರನ್ನು ಹಿಂದಿನ ದಿನದ ಸಂಜೆಯಿಂದ ಮರುದಿನದ ಮದ್ಯಾಹ್ನದ ವರೆಗೂ ಕಟ್ಟಿಹಾಕಲಾಗಿತ್ತು. ಅಷ್ಟಕ್ಕೂ ಕಟ್ಟಿ ಹಾಕಿದ್ದು ಯಾರು ಎಂದರೆ ತಂದೆ ತಾಯಿಗಳಲ್ಲ ಗ್ರಾಮದ ಜನ! ಹುಡುಗ ಹುಡುಗಿ ಬೇರೆ ಜಾತಿಯವರು ಹೇಗೆ ಮದುವೆ ಆಗುತ್ತಾರೆ ಅದೆಲ್ಲಾದರೂ ಸಾಧ್ಯವೇ ಎಂಬ ಪ್ರಶ್ನೆ ಎಸೆದರು, ಅಷ್ಟೊತ್ತಿಗೆ ಪೋಲೀಸ್ ಬಂದು ಹುಡುಗ ಹುಡುಗಿಯನ್ನು ಬಿಡುಗಡೆ ಮಾಡಿ ಪೋಷಕರ ಸಮೇತ ಸ್ಟೇಷನ್ ಗೆ ಕರೆದೊಯ್ದರು. ಅಲ್ಲಿ ಮಾಮೂಲಿ ರಾಜೀ ಪಂಚಾಯ್ತಿ ಕಡೆಗೆ ಹುಡುಗ-ಹುಡುಗಿ ಅವರವರ ಮನೆಗೆ ವಾಪಾಸಾಗಿ ಬಿಟ್ಟರು, ಪೆಚ್ಚಾಗುವ ಸರದಿ ನನ್ನದು. 
        ಮರುದಿನವೇ ಮಂಡ್ಯದ ಹಳ್ಳಿಯೊಂದರಲ್ಲಿ ದಲಿತ ಹುಡುಗ, ಗೌಡರ ಹುಡುಗಿಯನ್ನು ಮದುವೆ ಓಡಿ ಹೋದರು, ತಿಂಗಳಾದ ಮೇಲೆ ಎಲ್ಲ ಮರೆತಿರುತ್ತಾರೆ ಎಂದು ಊರಿಗೆ ಬಂದರೆ ಹುಡುಗಿಯ ಅಪ್ಪನೇ ಉಪಾಯವಾಗಿ ಹುಡುಗಿಯನ್ನು ಕರೆತಂದು ದನಕ್ಕೆ ಬಡಿದ ಹಾಗೆ ಬಡಿದು ಎಲ್ಲರೂ ನೋಡುತ್ತಿದ್ದ ಹಾಗೆಯೇ ನೇಣು ಬಿಗಿದು ಬಿಟ್ಟ. ಅದೇ ರೀತಿ ರಾಮನಗರದಲ್ಲಿ ಉಪ್ಪಾರರ ಹುಡುಗನೊಬ್ಬ ಲಿಂಗಾಯಿತರ ಹುಡುಗಿಯನ್ನು ಮದುವೆಯಾಗಿದ್ದ ನೆಂಬ ಕಾರಣಕ್ಕೆ ಅವನನ್ನು ಅಟ್ಟಾಡಿಸಿ ಬಡಿದು ಹುಡುಗಿಯನ್ನು ನಡು ರಸ್ತೆಯಲ್ಲೇ ಕಗ್ಗೊಲೆ ಮಾಡಲಾಯಿತು. ಕಳೆದ ವರ್ಷ ದಲಿತನೋರ್ವನನ್ನು ಮದುವೆಯಾದ ಲಿಂಗಾಯಿತ ಸಮುದಾಯದ ಉಪನ್ಯಾಸಕಿಯನ್ನು ಅವಳ ಅಣ್ಣನೇ ಕೊಲೆಗೈದು ಬಿಟ್ಟ! ಇದೀಗ ಮತ್ತೆ ಅಂತಹುದೇ ಸುದ್ದಿ ಬಂದಿದೆ. ಅದೇ ಮಂಡ್ಯ ಜಿಲ್ಲೆಯಿಂದ ನಾಯಕರ ಪೈಕಿ ಹುಡುಗಿಯನ್ನು ಎರಡೂ ಕಡೆಯ ಪೋಷಕರ ವಿರೋಧದ ನಡುವೆಯೇ ಮದುವೆಯಾದ ದಲಿತ ಹುಡುಗ ತಿಂಗಳು ಬಾಳಿಸಲಿಲ್ಲ, ಚಿಕ್ಕಪ್ಪ-ಚಿಕ್ಕಮ್ಮ ಎನಿಸಿಕೊಂಡವರೇ  ಬೆಂಕಿ ಹಾಕಿ ಬರ್ಭರವಾಗಿ ಕೊಲೆಗೈದಿದ್ದಾರೆ. 

    12ನೇ ಶತಮಾನದ ಕ್ರಾಂತಿ ಪುರುಷ ಬಸವೇಶ್ವರರ ಜಯಂತಿ ಮುನ್ನಾ ದಿನಗಳಲ್ಲೇ ಇಂತಹ ಕೃತ್ಯ ವರದಿಯಾಗಿರುವುದು ಆಧುನಿಕ ಸಮಾಜದಲ್ಲಿ ಕ್ರೌರ್ಯ ಮತ್ತು ಜಾತಿ ವ್ಯವಸ್ಥೆ ಇನ್ನೂ ಜೀವಂತವಾಗಿದೆ ಎಂಬುದನ್ನು ಸಾರಿ ಹೇಳುತ್ತಿರುವುದು ಅತ್ಯಂತ ನೋವಿನ ಸಂಗತಿ. ಮರ್ಯಾದಾ ಹತ್ಯೆ ಎನ್ನುವುದು ಆಧುನಿಕ ಸಮಾಜದ ಕೊಡುಗೆ ಮತ್ತು ಅರಗಿಸಿಕೊಳ್ಳಲಾಗದ ಅಮಾನವೀಯ ಕೃತ್ಯ. ಇದುವರೆವಿಗೂ ಮರ್ಯಾದಾ ಹತ್ಯೆಗಳು ಅನಕ್ಷರತೆ, ಮೌಡ್ಯ, ಜಾತೀಯತೆ ಹೆಚ್ಚಿರುವ ಉತ್ತರದ ಭಾರತದ ವಿವಿಧ ರಾಜ್ಯಗಳಿಂದ ಮಾತ್ರ ವರದಿಯಾಗುತ್ತಿತ್ತು. ಈಗ ನಮ್ಮ ಕಣ್ಣ ಮುಂದೆಯೇ ನಮ್ಮ ರಾಜ್ಯದಲ್ಲಿಯೇ ಅದು ಅಸ್ತಿತ್ವ ಕಂಡು ಕೊಂಡಿರುವುದು ಎಷ್ಟೊಂದು ಅಸಹನೀಯ ಅಲ್ಲವೇ?
        ಜಾತೀಯ ವ್ಯವಸ್ಥೆಯನ್ನು ತೊಡೆಯಲು ಮುಕ್ತ ವ್ಯವಸ್ಥೆಯಲ್ಲಿ ಅಂತರ್ಜಾತೀಯ ವಿವಾಹಗಳಾಗಬೇಕು ಎಂದು 70 ಮತ್ತು 80ರ ದಶಕದಲ್ಲಿ ಬುದ್ದಿ ಜೀವಿ ವಲಯ ಆಲೋಚಿಸಿದ್ದಲ್ಲದೇ ಅದನ್ನು ಕಾರ್ಯಗತ ಗೊಳಿಸಿ ಬಿಟ್ಟಿದ್ದರು. ಸಾಹಿತಿ ಯು ಆರ್ ಅನಂತಮೂರ್ತಿ, ಪ್ರೊ. ರಾಮದಾಸ್, ದೇವನೂರ ಮಹಾದೇವ, ಪೂರ್ಣಚಂದ್ರ ತೇಜಸ್ವಿ, ಅರವಿಂದ ಮಾಲಗತ್ತಿ ಹೀಗೆ ಅನೇಕ ಮಂದಿ ಅಂತರ್ಜಾತೀಯ ವಿವಾಹ ಬಂಧನಕ್ಕೊಳಗಾದವರು. ಅಲ್ಲಿ ಜಾತಿಗಿಂತ ಪ್ರೀತಿ ಹೆಚ್ಚಿನ ಪ್ರಾಮುಖ್ಯತೆ ಗಳಿಸಿತ್ತು. ಜಗತ್ತಿನಲ್ಲಿ ಮೊದಲು ಹುಟ್ಟಿದ್ದೇ ಪ್ರೀತಿ, ಅದು ಹುಟ್ಟುವಾಗ ಜಾತಿ ಯಾವುದು ಎಂದು ನೋಡಿ ಹುಟ್ಟುವಂತಹದ್ದಲ್ಲ, ಹೀಗಿರುವಾಗ ಅದು ಗಟ್ಟಿಗೊಳ್ಳಲು ಜಾತಿ ಅಗತ್ಯವಿರಲಿಲ್ಲ ಅವತ್ತು. ಆದರೆ ಇವತ್ತು ಪರಿಸ್ಥಿತಿ ಬದಲಾಗಿದೆ, ಜಾತೀಯ ಕಂದಕಗಳು ಮೊದಲಿಗಿಂತ ಹೆಚ್ಚು ತೆರೆದುಕೊಂಡಿವೆ, ಪ್ರೀತಿ ಹುಟ್ಟುವ ಮೊದಲು ಜಾತಿ ನೋಡಿ ಪ್ರೀತಿಸುವ ಪರಿಪಾಠ ಬೆಳೆಯುತ್ತಿರುವುದು ಇಲ್ಲವೇ ಜಾತಿ ನೋಡದೇ ಪ್ರೀತಿಸಿದ ಯುವ ಮನಸ್ಸುಗಳನ್ನು ಕೊಲ್ಲುವ ಮನಸ್ಥಿತಿ ಸೃಷ್ಟಿಯಾಗುತ್ತಿದೆ.      
         ಪ್ರಬುದ್ದತೆಯ ಕೊರತೆಯ ಜೊತೆಗೆ ಸಂಕುಚಿತ ಜಾತಿ ಮನಸ್ಸು ಪ್ರತೀ ಹಂತದಲ್ಲೂ ಜಾಗೃತವಾಗುವಂತಹ ಕ್ರಿಯೆಗಳು ವಿವಿಧ ಆಯಾಮಗಳಲ್ಲಿ ನಡೆಯುತ್ತಿರುವುದು ಮತ್ತು ಜಾತಿ ಮೀರುವ ಕ್ರಿಯೆಗೆ ಪೂರಕವಾದ ವಾತಾವರಣ ಇಲ್ಲದಿರುವುದು ಮರ್ಯಾದಾ ಹತ್ಯೆಯಂತಹ ಕೃತ್ಯಗಳಿಗೆ ಅವಕಾಶ ಮಾಡುತ್ತಿದೆ. ಮಹಾಪುರುಷರು ಶತಮಾನಗಳ ಆದಿಯಿಂದಲೇ ಜಾತಿ ಮೀರುವ ಕ್ರಿಯೆಗೆ ಚಾಲನೆ ನೀಡಿದ್ದಾರೆ, ಅನೇಕ ಪರಿವರ್ತನೆಗಳಿಗೆ ನಾಂದನೆ ಹಾಡಿದ್ದಾರೆ, ದೀಕ್ಷೆ ನೀಡಿದ್ದಾರೆ ಆದರೆ ವರ್ತಮಾನದಲ್ಲಿ ಅವೆಲ್ಲ ಜಾತೀಯ ವಿಷಬೀಜಗಳಾಗಿ ಬದಲಾಗಿವೆ. ಸಮಾಜದ ಎಲ್ಲ ಸ್ಥರದಲ್ಲೂ ಜಾತೀಯತೆ ಮೇರೆ ಮೀರಿದೆ. ಇದಕ್ಕೆ ಸಾಮಾಜಿಕ ಕಾರಣಗಳು ಮಾತ್ರವಲ್ಲ ರಾಜಕೀಯ ಪಕ್ಷಗಳ ಮನಸ್ಥಿತಿ, ಸರ್ಕಾರಗಳ ದುರ್ಬಲ ನೀತಿಗಳು ಕಾರಣವಾಗಿರ ಬಹುದು. ತಮ್ಮ ಮತ ಬ್ಯಾಂಕ್ ಗಾಗಿ ತರುವ ಯೋಜನೆಗಳು ಜಾತಿಯ ನಡುವೆ ಕಂದಕ ಸೃಷ್ಟಿಸಿದರೆ, ಸಾಮಾಜಿಕ ನ್ಯಾಯದ ನೆಪದಲ್ಲಿ ಎಲ್ಲ ಜಾತಿಗಳನ್ನು ಮೀಸಲು ಅಡಿಯಲ್ಲಿ ತರುವ ಕ್ರಿಯೆಯೂ ಸಹಾ ಕಂದಕಕ್ಕೆ ಅವಕಾಶ ಕಲ್ಪಿಸಿದೆ. ಸಂವಿಧಾನಾತ್ಮಕವಾಗಿ ಸಮಾಜದ ಅತ್ಯಂತ ಕೆಳಸ್ಥರದ ವರ್ಗಕ್ಕೆ ಮೀಸಲಾತಿಯನ್ನು ಆದ್ಯತೆ ಮೇಲೆ ಕೊಟ್ಟರೂ ಸಹಾ ಮತಬ್ಯಾಂಕ್ ನ ಉದ್ದೇಶದಿಂದ ಸ್ಪೃಶ್ಯ ಸಮುದಾಯಗಳನ್ನು ಸಹಾ ಮೀಸಲು ಅಡಿಗೆ ತರಲಾಗಿದೆ. 

       ಸರ್ಕಾರದ ಯೋಜನೆಗಳನ್ನು ಒಂದು ವರ್ಗ ಪಡೆಯುತ್ತಿದೆ ಅಥವಾ ಮೀಸಲು ಅನುಕೂಲವನ್ನು ಪಡೆಯುತ್ತಿದೆ ಎಂದರೆ ಅದರಲ್ಲಿ ಶೇ.10ರಷ್ಟು ಮಂದಿ ವಾಸ್ತವ ನೆಲೆಗಟ್ಟಿನಲ್ಲಿ ಅರ್ಹತೆ ಗಿಟ್ಟಿಸಿದ್ದರೆ ಅದರೊಳಗೆ ಸೇರಿರುವ ಸ್ಪೃಶ್ಯ ಸಮುದಾಯ ಕೊಡ ಫಲಾನುಭವಿಯಾಗಿ ಇತರರ ಕಣ್ಣು ಕೆಂಪಗಾಗಲು ಕಾರಣವಾಗಿಬಿಡ ಬಹುದು. ಎದೆಗೆ ಬಿದ್ದ ಅಕ್ಷರದಲ್ಲಿ ದೇವನೂರ ಮಹಾದೇವ ಹೀಗೆ ಬರೆಯುತ್ತಾರೆ, ನಂಜನಗೂಡಿನ ಹಾಸ್ಟೆಲ್ ಒಂದರಲ್ಲಿ ಒಬ್ಬ ಗಿರಿಜನ ಯುವಕನಿಗೆ ಮೇಲಿನಿಂದ ಎತ್ತಿ ನೀರನ್ನು ಕೊಡಲಾಗುತ್ತಿತ್ತು ಕುಡಿಯಲೋಸುಗ, ಅದೇ ರೀತಿ ಒಕ್ಕಲಿಗನ ಮನೆಯ ಆಹಾರವನ್ನು ಮೇಲ್ಜಾತಿಯ ಮಗುವೊಂದು ಪಡೆದುದನ್ನು ಅವರಮ್ಮ ಆಕ್ಷೇಪಿಸುತ್ತಿದ್ದಳು ಎಂಬುದು. ಕಳೆದ ವರ್ಷ ಪತ್ರಿಕೆಯಲ್ಲಿ ಬಂದ ಒಂದು ಸುದ್ದಿಯನ್ನು ಓದಿದ್ದೆ ಗುಂಡ್ಲುಪೇಟೆ, ಚಾಮರಾಜನಗರ ಭಾಗದಲ್ಲಿ ನಾಗರೀಕತೆಯನ್ನೇ ಕಾಣದ ಗಿರಿಜನರು ತಮ್ಮೂರಿನ ಸರ್ಕಾರಿ ಶಾಲೆಯಲ್ಲಿ ಪರಿಶಿಷ್ಠ ಜಾತಿಯ ಮಹಿಳೆ ಅಡುಗೆ ಮಾಡುವುದನ್ನು ಮತ್ತು ತಮ್ಮ ಮಕ್ಕಳು ಅದನ್ನು ತಿನ್ನುವುದನ್ನು ಸಹಿಸಲಾಗದೇ ಶಾಲೆಗೆ ಮಕ್ಕಳನ್ನೇ ಕಳುಹಿಸಲಿಲ್ಲ. ಈ ಘಟನೆಗಳು ಏನನ್ನು ಸಾಕ್ಷೀಕರಿಸುತ್ತವೆ ಮತ್ತು ಜಾತೀಯ ತೀವ್ರತೆಯನ್ನು ಹೇಗೆ ಪ್ರತಿನಿಧಿಸುತ್ತವೆ ಎಂದರೆ ಸರಪಳಿ ಮಾದರಿಯ ಜಾತೀಯ ವ್ಯವಸ್ಥೆಯಿಂದ  ವರ್ತಮಾನದಲ್ಲೂ ಬಿಡುಗಡೆಯಿಲ್ಲ ಎನ್ನುವುದು. ಜನರ ಸಾಮಾಜಿಕ ಮತ್ತು ಆರ್ಥಿಕ ಕಾರಣಗಳು ಕೂಡ ಜಾತೀಯ ವ್ಯವಸ್ಥೆಯನ್ನು ಹಿಂದೆಂದಿಗಿಂತ ಹೆಚ್ಚು ಪೋಷಿಸಲು ಅವಕಾಶ ಮಾಡಿದೆ. ಪರಿಣಾಮ ತಮ್ಮ ಮಗ ಅಥವಾ ಮಗಳು ಬೇರೆ ಜಾತಿಯವರನ್ನು ಇಷ್ಟ ಪಡಬಹುದು ಎಂಬ ಕಾರಣಕ್ಕೆ ಬಾಲ್ಯ ವಿವಾಹಗಳು ಹೆಚ್ಚುತ್ತಿವೆ ಈ ಆಧುನಿಕ ದಿನಮಾನದಲ್ಲಿಯೂ. ಬಾಲ್ಯದಿಂದಲೇ ಜಾತೀಯ ಪಾಠಗಳನ್ನು ಪೋಷಕರು ಹೇಳಿಕೊಡುತ್ತಿದ್ದಾರೆ ಕಂದಕಗಳು ಹೆಚ್ಚಾಗಲು ಕಾರಣರಾಗುತ್ತಿದ್ದಾರೆ, ನಮ್ಮ ರಾಜಕೀಯ ನಾಯಕರು ಕೂಡಾ ಜಾತಿಗೊಬ್ಬ ಸ್ವಾಮೀಜಿಗಳನ್ನು ಹುಟ್ಟು ಹಾಕುತ್ತಾ ಮಠ ಮಾನ್ಯಗಳನ್ನು ಬೆಳೆಸುತ್ತಾ ಜಾತಿಯ ಭಾವನೆ ಇನ್ನಷ್ಟು ಕೆರಳುವಂತೆ ಮಾಡಿದ್ದಾರೆ, ನಾವೆಲ್ಲ ಪ್ರೀತಿಸುವ ಕವಿರತ್ನ ಕಾಳಿದಾಸ, ಕನಕದಾಸ, ಸಂಗೊಳ್ಳಿ ರಾಯಣ್ಣ, ಭಗೀರಥ, ವಿಶ್ವಕರ್ಮ, ಬಸವಣ್ಣ, ವಾಲ್ಮೀಕ , ಟಿಪ್ಪುಸುಲ್ತಾನ್ ಇವರಿಗೆಲ್ಲ ಒಂದೊಂದು ಜನ್ಮ ಜಯಂತಿಯನ್ನು ಘೋಷಣೆ ಮಾಡಿ ಜಾತಿಗಳನ್ನು ಓಲೈಸುವ ಪ್ರಯತ್ನ ಮಾಡುತ್ತಿದ್ದಾರೆ, ಇವು ಸಮಾಜವನ್ನು ಕಟ್ಟುವ ಕ್ರಿಯೆಗಳಲ್ಲ ಬದಲಿಗೆ ಸಮಾಜದ ಕಂದಕವನ್ನು ಹೆಚ್ಚಿಸುವ ಕ್ರಿಯೆಗಳು. ಮತ್ತು ಮರ್ಯಾದ ಹತ್ಯೆಯಂತ ಕ್ರಿಯೆಗಳಿಗೆ ಇಂತಹ ಕ್ರಿಯೆಗಳ ಕೊಡುಗೆಯೇ ಹೆಚ್ಚು ಅಲ್ಲವೇ?

Sunday, April 20, 2014

ವಿದ್ಯಾರ್ಥಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಬೇಕು!


ಎಷ್ಟೋ ಸಲ ಬದುಕು ಎಲ್ಲಿಂದೆಲ್ಲಿಗೋ ನಮ್ಮನ್ನು ತಂದು ನಿಲ್ಲಿಸಿ ಬಿಡುತ್ತವೆ. ಹಾಗೆ ಎಲ್ಲಿಂದೆಲ್ಲಿಗೋ ತಂದು ನಿಲ್ಲಿಸುವ ಮುನ್ನ ನಾವೇನಾಗಿದ್ದೇವು ? ಏನಾಯಿತು?ಎಂಬ ಸಿಂಹಾವಲೋಕನ ಭವಿಷ್ಯದ ದಿನಗಳಲ್ಲಿ ಒಂದು ಫ್ರೇಮಿನೊಳಗೆ ನಮ್ಮನ್ನು ತಂದು ಬಿಡಬಹುದು ಇಲ್ಲವೇ ಮುಂದಿನ ಪೀಳಿಗೆಗೆ ಹೀಗೆಯೇ ನಡೆಯ ಬೇಕು ಎಂಬ ಕಟ್ಟಲೆಯನ್ನು ಹೇರ ಬಹುದು. ಇವೆಲ್ಲವೂ ವಾಸ್ತವ ಜಗತ್ತಿನ ವೈರುದ್ಯಗಳು.

        ವಿದ್ಯಾರ್ಥಿ ಜೀವನದಲ್ಲಿ ಇದು ಬಹು ಮುಖ್ಯವಾದ ಅಂಶ, ಬದುಕಿನ ಟರ್ನಿಂಗ್ ಪಾಯಿಂಟ್ ಶುರುವಾಗುವುದೇ ಪ್ರೌಢಶಾಲ ಹಂತ ದಾಟಿದ ಮೇಲೆ ಮತ್ತು ಪಿಯು ಹಂತವನ್ನು ಮುಗಿಸಿದ ಮೇಲೆ. ಮೊದಲೆಲ್ಲ ಹಾಗಿರಲಿಲ್ಲ ಬಿಡಿ ನಾವಂದುಕೊಂಡದ್ದೇ ಹಾದಿ, ಸಾಗಿದ್ದೇ ದಿಕ್ಕು. ಆದರೆ ಬದಲಾದ ಪರಿಸ್ಥಿತಿಯಲ್ಲಿ  ಎಲ್ಲವೂ ನಿರೀಕ್ಷಿತ, ಕುತೂಹಲಕ್ಕೆ ಇಲ್ಲಿ ಜಾಗವಿಲ್ಲ. ಆಗೆಲ್ಲಾ ಎಷ್ಟು ಕಷ್ಟ ವಿತ್ತು, ಸರ್ಕಾರಿ ಶಾಲೆಯಾದರೂ ಉಸಿರು ಗಟ್ಟಿಸುವ ವಾತಾವರಣ ತರಗತಿಯಲ್ಲಿ, ಆಟೋಟಗಳಲ್ಲಿ ಅಷ್ಟೆ ಉತ್ಸಾಹ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಆಡಿದ್ದೇ ಆಟ-ನೋಟ, ಓದಲಿಕ್ಕೆ ಕಪಾಟಿನಿಂದ ಪುಸ್ತಕಗಳು ದಂಡಿಯಾಗಿ ಬರುತ್ತಿದ್ದವು, ಪಠ್ಯೇತರ ಚಟುವಟಿಕೆಗಳಲ್ಲೂ ಉತ್ಸಾಹ, ಪೋಷಕರಿಂದ ಕಾಳಜಿ ವಹಿಸುವ ಸಂಗತಿಗಳು ಅಷ್ಟಕ್ಕಷ್ಟೆ. ನಮ್ಮ ನೋಟ್ಸ್ ನಾವೇ ಮಾಡ್ಕೋತಿದ್ವಿ, ಹೋಂ ವರ್ಕ್ ಬರೆಯೋದು, ಪಾಠ ಓದೋದು, ನಿರ್ವಂಚನೆಯಿಂದ ಮತ್ತು ವ್ಯಾಪಾರದ ಸೋಂಕಿಲ್ಲದೇ ಉಚಿತ ಮನೆ ಪಾಠ ಹೇಳುತ್ತಿದ್ದ ಶಿಕ್ಷಕರು! ಇಂತಹ ಪರಿಸರ ಸೃಜನಶೀಲತೆಗೂ ಒತ್ತು ಕೊಡುತ್ತಿತ್ತು, ಆದರೆ ಈಗೆಲ್ಲಿದೆ ಅಂತಹ ಪರಿಸರ? ಸರ್ಕಾರಿ ಶಾಲೆಗಳಿಗೆ ನೇಮಕವಾಗುವ ಶಿಕ್ಷಕರು ಎಷ್ಟರ ಮಟ್ಟಿಗೆ (ಕ್ಷಮಿಸಿ ಎಲ್ಲ ಶಿಕ್ಷಕರನ್ನು ಉದ್ದೇಶಿಸಿಲ್ಲ) ತಮ್ಮ ಕರ್ತವ್ಯಕ್ಕೆ ನ್ಯಾಯ ಒದಗಿಸುತ್ತಿದ್ದಾರೆ? ತಮ್ಮ ಮಕ್ಕಳನ್ನೇ ಸರ್ಕಾರಿ ಶಾಲೆಗಳಲ್ಲಿ ಕಳುಹಿಸದ ಶಿಕ್ಷಕರು, ಸರ್ಕಾರಿ ನೌಕರರು, ಸರ್ಕಾರ ಸಂಬಳ ಸವಲತ್ತು ಮಾತ್ರ ಅಪೇಕ್ಷಿಸುತ್ತಾರೆ. ಇಂತಹ ನಿಲುವುಗಳೇ ಶಿಕ್ಷಣ ವ್ಯಾಪಾರಕ್ಕೆ ಅವಕಾಶ ಕಲ್ಪಿಸಿದೆಯಲ್ಲವೇ? ಸರ್ಕಾರ ನಿಯಮಗಳನ್ನ ಉಲ್ಳಂಘಿಸಿ ಶಿಕ್ಷಣದ ಹೈಟೆಕ್ ಅಂಗಡಿಗಳಿಗೆ ಅವಕಾಶ ಕಲ್ಪಿಸುತ್ತಿದೆ ಮತ್ತು ಸುಂದರ ಪರಿಸರದ ಕನ್ನಡ ಶಾಲೆಗಳನ್ನು ತಾನೇ ಮುಂದಾಗಿ ನಿಂತು ಕಗ್ಗೊಲೆ ಮಾಡುತ್ತಿದೆ. 
             
            ಜಾಗತೀಕರಣದ ಗಾಳಿಯೇ ಹಾಗೆ ನಮ್ಮ ಮನಸ್ಸನ್ನು ಅದು ಬದಲಿಸುತ್ತದೆ, ಕ್ಷಣಿಕ ಆಮಿಷಗಳಿಗೆ ಬಲಿಬೀಳುವ ಮನಸ್ಸು ವಾಸ್ತವವನ್ನ ಅರಿಯದೇ ಮೂಲಕ್ಕೆ ಧಕ್ಕೆ ಯಾಗುವ ಸಂಗತಿಗಳೆಡೆಗೆ ನಮ್ಮನ್ನು ಸೆಳೆದು ಬಿಡುತ್ತದೆ. ಕನ್ನಡ ಶಾಲೆಗಳ ವಿಷಯವೂ ಹಾಗೆಯೇ, ತಮ್ಮ ಮಗುವಿಗೆ ಇಷ್ಟವಿರಲಿ ಬಿಡಲಿ ಹೈಟೆಕ್ ಕಲ್ಚರ್ ನ ಶಾಲೆಗಳಲ್ಲಿ ಅವು ಕಲಿಯಬೇಕು ಎಂಬ ಇರಾದೆಗೆ ಬಿದ್ದು ಒತ್ತಡದಿಂದ ಕಲಿಕೆಗೆ ಹಚ್ಚಲಾಗುತ್ತದೆ. ಇದನ್ನೆ ಅನುಸರಿಸುವ ಆಜುಬಾಜಿನ ಮಂದಿ ತಮಗೆ ಸಾಮರ್ಥ್ಯವಿರಲಿ ಬಿಡಲಿ ತಾವು ಪಕ್ಕದವರನ್ನು ಅನುಸರಿಸುವ ಉಮೇದಿಗೆ ಬಿದ್ದು ಬಿಡುತ್ತಾರೆ. ಹಾಗಾಗಿ ಶಿಕ್ಷಣ ವ್ಯಾಪಾರದ ಅಡ್ಡೆಗಳಿಗೆ ಮಕ್ಕಳು ಸೇರುವ ಮತ್ತು ಕಲಿಯುವ ಅನಿವಾರ್ಯತೆ ಸೃಷ್ಟಿಸುತ್ತಾರೆ. ಆಗ ಮಗುವಿನ ಪ್ರತೀ ಹಂತದಲ್ಲೂ ಪೋಷಕರ ಹಸ್ತಕ್ಷೇಪವೇ ಜಾಸ್ತಿ, ಮಕ್ಕಳ ನೋಟ್ಸ್ ತಾವೇ ಬರೆಯಬೇಕು, ಸ್ನಾನ ಮಾಡಿಸಬೇಕು, ಬಟ್ಟೆ ಹಾಕಬೇಕು, ಶಾಲೆಗೆ ಕರೆದೊಯ್ಯಬೇಕು, ಹೊತ್ತು ಹೊತ್ತಿಗೆ ಬಾಕ್ಸ್ ತೆಗೆದುಕೊಂಡು ಹೋಗಿ ಊಟ ಮಾಡಿಸಬೇಕು, ಪರೀಕ್ಷೆ ಬಂದಾಗ ಇಂಥದ್ದೇ Rank ಬರಬೇಕು, ಕಾರ್ಯಕ್ರಮಗಳಲ್ಲಿ ಇಂಥದ್ದೇ ಸಿನಿಮಾ ಸಾಂಗಿಗೆ ಕುಣಿಯಬೇಕು ಹೀಗೆ ಇತ್ಯಾದಿ ಒತ್ತಡಕ್ಕೆ ಮಕ್ಕಳ ಮೇಲೆ ಒತ್ತಡ ಸೃಷ್ಠಿಯಾಗುತ್ತದೆ. 10ನೇ ತರಗತಿ ಮತ್ತು ಪಿಯು ಮುಗಿಸುವಾಗ ಇನ್ನಿಲ್ಲದ ಒತ್ತಡ ಹೇರಿ ಪರೀಕ್ಷೆ ಬರೆಸುತ್ತಾರೆ ನಂತರ ಅವನು/ಳು ಇಂಜಿನಿಯರ್ರೇ ಆಗಬೇಕು, ಡಾಕ್ಟರ್ ಆಗಬೇಕು ಎಂಬ ಹಪಾಹಪಿಗೆ ಬಿದ್ದು ವೃತ್ತಿ ಶಿಕ್ಷಣಕ್ಕೆ ಸೇರಿಸುತ್ತಾರೆ. ಹೀಗೆ ಒತ್ತಡದಲ್ಲೇ ಸೃಷ್ಟಿಯಾಗುವ ಆತ/ಅವಳು ಬದುಕಿನಲ್ಲಿ ದುಡ್ಡು ಮಾಡುವುದನ್ನು ಕಲಿಯಬಹುದಷ್ಟೇ ಆದರೆ ಸಾಮಾಜಿಕ ಜೀವನದಲ್ಲಿ ಸಂಪೂರ್ಣವಾಗಿ ವಿಫಲವಾಗುವ ಸಂಧರ್ಭಗಳೇ ಅಧಿಕ. 

           ಹೀಗೆ ದುಡ್ಡು ಮಾಡುವುದನ್ನು ಕಲಿಸುವ ಪೋಷಕರು ಅದೇ ಮಕ್ಕಳಿಗೆ ನೈತಿಕ ಪಾಠವನ್ನ, ಸಾಮಾಜಿಕ ಬಾಂಧವ್ಯದ ಪಾಠವನ್ನ ಹೇಳಿ ಕೊಡುವುದಿಲ್ಲ, ಅವರಿಗೆ ಅದೆಲ್ಲ ಗಮನಿಸುವ ಪುರುಸೊತ್ತು ಕಡಿಮೆಯೇ. ಹೀಗಿರುವಲ್ಲಿ ಆತ/ಅವಳು ವೃದ್ದಾಪ್ಯದಲ್ಲಿ ಒಂಟಿ ಮಾಡಿ ದೂರ ಸರಿದಾಗ ಅನುಭವಿಸುವ ಯಾತನೆಯೇ ಅದಕ್ಕೆ ಉತ್ತರವಾಗ ಬಹುದು. ಕಲಿಯುವ ಮಗುವಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಇರಬೇಕು, ಒಳ್ಳೆಯದ್ದು ಮತ್ತು ಕೆಟ್ಟದ್ದನ್ನು ನಿರ್ಧರಿಸುವ ಗುಣ ಬೆಳೆಸುವ ಜೊತೆಗೆ ಪರಿಸರದಲ್ಲಿ ಅನೇಕ ಸಂಗತಿಗಳನ್ನ ಗ್ರಹಿಕೆ ತಂದು ಕೊಳ್ಳುವ ಅವಕಾಶಗಳನ್ನ ಮುಕ್ತವಾಗಿ ನೀಡಬೇಕು. ಮಕ್ಕಳ ಪ್ರೌಢಾವಸ್ಥೆ ಮಕ್ಕಳಿಗೆ ಮಾತ್ರ ಟರ್ನಿಂಗ್ ಪಾಯಿಂಟ್ ಅಲ್ಲ ಪೋಷಕರಿಗೂ ಇದು ಟರ್ನಿಂಗ್ ಪಾಯಿಂಟ್ ಎಂಬುದನ್ನು ತಿಳಿದುಕೊಂಡಾಗ ಮಾತ್ರ ವ್ಯವಸ್ಥೆಯ ಸುಧಾರಣೆ ನಿರೀಕ್ಷಿಸ ಬಹುದು ಅಲ್ಲವೇ? 

Sunday, April 13, 2014

ಸಂವಿಧಾನದ ಸದಾಶಯ ಮತ್ತು ಅಂಬೇಡ್ಕರ್

ಭಾರತಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆ ಯಾಕೆ ಬೇಕು? ಸಮಾಜವಾದ, ಕಮ್ಯುನಿಸಂ ವ್ಯವಸ್ಥೆ ಆಗುವುದಿಲ್ಲವೇ ಅಲ್ಲಿಯೂ ಸಮಾನತೆಯನ್ನು ಪ್ರತಿಪಾದಿಸಲಾಗುತ್ತದಲ್ಲವೇ? ಭಾತರ ದೇಶದ ಪ್ರಜಾಪ್ರಬುತ್ವಕ್ಕೆ ಮಾದರಿ ಯಾವುದು? ಪ್ರೆಂಚ್ ಕ್ರಾಂತಿಯಿಂದ ಪ್ರೇರೇಪಿತರಾಗಿದ್ದೀರ? ಎಂಬ ಪ್ರಶ್ನೆಗಳನ್ನು ಅವತ್ತು ಭಾರತ ದೇಶದ ಮೊದಲ ಕಾನೂನು ಮಂತ್ರಿಯ ಮುಂದೆ ಪತ್ರಕರ್ತರು ಕೇಳಿದ್ದರು. ಅವೆಲ್ಲಾ ಪ್ರಶ್ನೆಗಳಿಗೂ ಸಾವಧಾನದಿಂದ ಮತ್ತು ದೃಢವಾಗಿ ಉತ್ತರಿಸಿದ ಮಂತ್ರಿಗಳು ಭಾರತ ಬಹುದೊಡ್ಡ ಸಾಂಸ್ಕೃತಿಕ ರಾಷ್ಟ್ರ. ಇಲ್ಲಿ ಜಗತ್ತಿನ ಬೇರೆ ಯಾವ ಭಾಗದಲ್ಲೂ ಇಲ್ಲದ ವಿವಿಧ ಮತ-ಧರ್ಮಗಳ ಜನರು ಇದ್ದಾರೆ ಅವರೆಲ್ಲರಿಗೂ ಸಮಾನ ಅವಕಾಶಗಳನ್ನ ಸಮಾಜವಾದ ಇಲ್ಲವೇ ಕಮ್ಯುನಿಸಂ ನಿಂದ ಪರಿಪೂರ್ಣವಾಗಿ ಕಟ್ಟಿಕೊಡಲು ಸಾಧ್ಯವಿಲ್ಲ, ಏಕೆಂದರೆ ದೇಶದಲ್ಲಿ ಈಗಾಗಲೇ ಅಸಮಾನತೆ ಇದೆ ಸಂಪನ್ಮೂಲ ಒಂದೆಡೆ ಕೇಂದ್ರೀಕೃತವಾಗಿದೆ ಇತರೆ ರಾಷ್ಟ್ರಗಳಂತೆ ಇಲ್ಲಿ ಕೆಲವು ಜನಾಂಗಗಳು, ಧರ್ಮಿಯರು ಇಲ್ಲ ಹಾಗಾಗಿ ಪ್ರಜಾಪ್ರಭುತ್ವ ಬಂದರೆ ಸಮಾಜದ ಅತ್ಯಂತ ಕೆಳಸ್ಥರದ ಪ್ರಜೆಗೂ ಎಲ್ಲ ಅವಕಾಶಗಳು ಆಧ್ಯತೆಯ ಮೇಲೆ ದಕ್ಕುತ್ತವೆ, ವ್ಯವಸ್ಥೆಯಲ್ಲಿ ಪಾಲ್ಗೊಳುವಿಕೆಗೆ ಅವಕಾಶ ದೊರೆಯುತ್ತದೆ ಆದ್ದರಿಂದ ಪ್ರಜಾಪ್ರಭುತ್ವ ದಿಂದ ಮಾತ್ರ ಭಾರತ ದೇಶ ಸದೃಢತೆಯನ್ನು ಹೊಂದಲು ಸಾದ್ಯ, ಪ್ರಜಾತಾಂತ್ರಿಕ ವ್ಯವಸ್ಥೆ ಉಸಿರು ಕಟ್ಟಿದ ವಾತಾವರಣದಿಂದ ಮುಕ್ತತೆಯೆಡೆಗೆ ಎಲ್ಲ ಜನರನ್ನು ಕರೆದೊಯ್ಯುತ್ತದೆ ಎಂದು ನುಡಿದ ಅವರು ದೇಶದ ಪ್ರಜಾಪ್ರಬುತ್ವ ವ್ಯವಸ್ಥೆಯನ್ನು ಪ್ರೆಂಚ್ ನಿಂದಲೋ ಮತ್ತೆಲ್ಲಿಂದಲೋ ಎರವಲು ಪಡೆದಿಲ್ಲ ನಮ್ಮ ಜನತಂತ್ರ ವ್ಯವಸ್ಥೆಯನ್ನು ಸ್ಥಳೀಯ ನಾಡಿಮಿಡಿತವನ್ನು ಅರಿತು ರೂಪಿಸಲಾಗಿದೆ. ಪ್ರೆಂಚ್ ಕ್ರಾಂತಿಯ ನಂತರ ಅಲ್ಲಿ ಪ್ರಜಾಪ್ರಭುತ್ವ ಹುಟ್ಟಿರ ಬಹುದು ಆದರೆ ಭಾರತದಲ್ಲಿ ಬುದ್ದನ ಕಾಲದಿಂದಲೇ ಪ್ರಜಾಪ್ರಭುತ್ವ ವ್ಯವಸ್ಥೆ ರೂಪುಗೊಂಡಿದೆ. ಭಗವಾನ್ ಬುದ್ದ ಸಮ ಪಾಲು: ಸಮ ಬಾಳು ಎಂಬುದನ್ನು ಪ್ರತಿಪಾದಿಸಿದ್ದರು ನಮ್ಮ ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲೂ ಅದನ್ನೇ ಆಶಯವಾಗಿ ಇಟ್ಟುಕೊಳ್ಳಲಾಗಿದೆ ಎಂದು ಸಮರ್ಥವಾಗಿ ಪ್ರಜಾಪ್ರಭುತ್ವವನ್ನು ಪ್ರತಿಪಾದಿಸಿದ್ದ ಆ ಕಾನೂನು ಮಂತ್ರಿಯೇ  ಡಾ. ಬಿ ಆರ್ ಅಂಬೇಡ್ಕರ್ !

            ಹೌದು ಅಂಬೇಡ್ಕರ್ ವಿಚಾರಗಳೇ ಹಾಗೆ ಭಾರತ ದೇಶದ ಬಹುದೊಡ್ಡ ವಿದ್ವಾಂಸರಾಗಿದ್ದ ಅವರು ರಾಜಕೀಯ, ಆರ್ಥಿಕ, ಸಾಮಾಜಿಕ ಹೀಗೆ ಅನೇಕ ಸಂಗತಿಗಳಿಗೆ ಸಂಬಂಧಿಸಿದಂತೆ ದೂರ ದೃಷ್ಟಿ ಹೊಂದಿದ್ದರು. ಆದರೆ ದೇಶದ ಜಾತೀಯ ಶಕ್ತಿಗಳು ಅವರನ್ನು ದಲಿತ ಲೀಡರ್ ಎಂದು ಬಿಂಬಿಸಿದ್ದು ಮತ್ತು ಅವರ ವಿರುದ್ದ ಸದಾ ಮಸಲತ್ತು ಮಾಡುತ್ತ ಅವರ ವಿಚಾರಧಾರೆಗಳ ಕುರಿತು ಅರಿಯುವ ಕ್ರಿಯೆಗೆ ಅಡ್ಡಗಾಲು ಹಾಕುತ್ತಲೇ ಬಂದವು . ಸಮಾನತೆಗಾಗಿ ಅಂಬೇಡ್ಕರ್ ಕೇಳಿದ್ದು ಪ್ರತ್ಯೇಕ ಮತದಾನ ಪದ್ದತಿ ಆದರೆ ಗಾಂಧೀಜಿ ಅಣತಿಯಂತೆ ದೊರೆತ್ತದ್ದು ಮೀಸಲು ರಾಜಕೀಯ ವ್ಯವಸ್ಥೆ. ಇದು ಅಂಬೇಡ್ಕರ್ ರನ್ನು ಹತಾಶಗೊಳಿಸಿತ್ತು. ದಲಿತ ಮೀಸಲು ಕ್ಷೇತ್ರಗಳಿಂದ ಗೆಲ್ಲುವ ದಲಿತರ ದಲಿತ ಹಿತಾಸಕ್ತಿಗಳನ್ನು ಪಾಲಿಸದೇ ಮೇಲ್ವರ್ಗದ ಗುಲಾಮರಂತೆ ನಡೆದುಕೊಂಡು ತಮ್ಮ ಸ್ವಾರ್ಥ ಹಿತಾಸಕ್ತಿಗಳನ್ನು ಮಾತ್ರ ಸಾಧಿಸಿಕೊಳ್ಳುತ್ತಾರೆ ಆದ್ದರಿಂದ ಈ ವ್ಯವಸ್ಥೆಯನ್ನು ರದ್ದು ಮಾಡಿ ಎಂದು 1952ರ ಸುಮಾರಿಗೆ ಅಂಬೇಡ್ಕರ್ ಪಟ್ಟು ಹಿಡಿದಿದ್ದರು. ಆದರೆ ಅದಾಗಲೇ 121ಕ್ಷೇತ್ರಗಳಲ್ಲಿ ಗೆದ್ದು ಬಂದಿದ್ದ ಮೀಸಲು ದಲಿತ ಕ್ಷೇತ್ರಗಳ ಪ್ರತಿನಿಧಿಗಳು ಅಂಬೇಡ್ಕರ್ ನಿಲುವನ್ನು ಖಂಡಿಸಿದ್ದರು, ಅವತ್ತು ಅಂಬೇಡ್ಕರ್ ವಿಚಾರಕ್ಕೆ ಬಹುದೊಡ್ಡ ಹೊಡೆತ ಬಿದ್ದಿತ್ತು. ಇವತ್ತಿಗೂ ಅವೇ ಸ್ಥಾನಗಳು ಹಾಗೆಯೇ ಮುಂದುವರೆದುಕೊಂಡು ಬಂದಿವೆ ದಲಿತ ಮೀಸಲು ಕ್ಷೇತ್ರಗಳು ದಲಿತರಿಗೆ ನೀಡಿದ ರಾಜಕೀಯ ಬಿಕ್ಷೆಯಂತೆ ಭಾಸವಾಗುತ್ತ ಪ್ರಜಾಪ್ರಭುತ್ವವನ್ನು ಇಂದಿಗೂ  ಅಣಕಿಸುತ್ತಲೇ ಇದೆ. 

       ಮೀಸಲಾತಿ ವ್ಯವಸ್ಥೆಯ ಆಶಯಗಳು ಸಮಾಜದ ಅತ್ಯಂತ ಕೆಳಸ್ಥರದಲ್ಲಿರುವ ದಲಿತರಿಗೆ ಸಾಮಾಜಿಕ ವ್ಯವಸ್ಥೆಯಲ್ಲಿ ಸಮಾನತೆಯನ್ನು ಕಲ್ಪಿಸುವುದೇ ಆಗಿದೆ. ಒಬ್ಬ ದಲಿತ ವಿದ್ಯಾವಂತನಾಗುವುದು,ಆರ್ಥಿಕವಾಗಿ ಮುಂದೆ ಬರುವುದು ಅಬಿವೃದ್ದಿಯೆಡೆಗೆ ಹೆಜ್ಜೆ ಇಡುವುದನ್ನು ಸರಳವಾಗಿ ಕಲ್ಪಿಸಿಕೊಳ್ಳುವುದು ಭಾರತೀಯ ಸಮಾಜ ವ್ವವಸ್ಥೆಯಲ್ಲಿ ಬಹು ದೊಡ್ಡ ತೊಡಕು. ಏಕೆಂದರೆ ಇಲ್ಲಿ ಜಾತೀಯ ಸ್ವಾರ್ಥ ಹಿತಾಸಕ್ತಿಗಳು ಸದಾ ಜಾಗೃತವಾಗಿದ್ದು ತಮ್ಮವರ ಹಿತ ಕಾಯಲು ಬದ್ದವಾಗಿರುತ್ತವೆ ಮತ್ತು ಅದಕ್ಕಾಗಿ ಏನೂ ಮಾಡಲು ಸಿದ್ದವಾಗಿರುತ್ತವೆ. ಇವೆಲ್ಲ ಸುಲಭ ಸಾಧ್ಯವಾಗಿ ನಿವಾರಣೆಯಾಗುವಂತಹದ್ದಲ್ಲ. ಜಾತೀಯ ವ್ಯವಸ್ಥೆಯಿಂದ ಹೊರತಾಗಿ ನಿಂತು ಕೆಳಸ್ಥರದವರ ಬಗೆಗೆ ಮಾತನಾಡುವಷ್ಟು ಸುಲಭವಾಗಿ, ಕೆಳ ಸ್ಥರದಲ್ಲಿ ನಿಂತು ಜಾತೀಯ ವ್ಯವಸ್ಥೆಯನ್ನು ಮೀರುವ ಮಾತನಾಡಲು ಸಾಧ್ಯವಾಗುವುದಿಲ್ಲ ಏಕೆಂದರೆ ಅನುಭವವೇ ಬೇರೆ ಗ್ರಹಿಕೆಯೇ ಬೇರೆ. ಮೇಲ್ನೋಟದ ಗ್ರಹಿಕೆಯಷ್ಟು ತೆಳು ವಾಗಿ ಸಮಾನತೆಯ ಅಂಶಗಳು ದಕ್ಕಲಾರವು ಹಾಗಾಗಿ ಸಂವಿಧಾನ ಬದ್ದವಾಗಿ ಮೀಸಲು ನೀತಿಯನ್ನು ನೀಡಲಾಗಿದೆ. ಆದರೆ ಸಾರ್ವತ್ರಿಕವಾಗಿ ಮೀಸಲು ನೀತಿಯ ಕುರಿತು ಕುಹಕದ ಚರ್ಚೆಗಳು ನಡೆಯುತ್ತಿರುವುದು ಆ ಬಗೆಗಿನ ತಿಳುವಳಿಕೆಯ ಕೊರತೆಯನ್ನು ಎತ್ತಿ ತೋರಿಸುತ್ತಿದೆ ಇದು ಸಂವಿಧಾನ ಆಶಯದ ವಿರುದ್ದದ ಸಂಗತಿಯೂ ಆಗಿದೆ. ಮೀಸಲಾತಿ ನೀತಿಯ ಕುರಿತ ವಿಸ್ತೃತ ಚರ್ಚೆಗಳು ಮಾತ್ರ ಆ ಕುರಿತ ಅನುಕಂಪದ, ಕೀಳು ನೋಟವನ್ನು ತಡೆಯಲು ಸಾಧ್ಯವಾಗ ಬಹುದು. 

         ಇನ್ನು ಚುನಾವಣೆಗಳ ಸಂಗತಿ, ಭಾರತ ದೇಶದಲ್ಲಿ ಚುನಾವಣೆ ಎಂದಾಕ್ಷಣ ಅಲ್ಲಿ ಕೋಮುವಾದ ಹಾಗೂ ಜಾತೀಯತೆಯೇ ಪ್ರದಾನ ಅಂಶಗಳಾಗುವುದನ್ನು ಕಾಣಬಹುದು. ಸ್ವಾತಂತ್ರ್ಯ  ಪೂರ್ವದಿಂದಲೂ ಇಂತಹದ್ದೊಂದು ಸಮಸ್ಯೆ ನಮ್ಮನ್ನು ಬಾಧಿಸುತ್ತಲೇ ಬಂದಿದೆ. ಜಗತ್ತಿನ ಬಹುದೊಡ್ಡ ಸಂವಿಧಾನವನ್ನು ನಾವು ಹೊಂದಿದ ಮೇಲೂ ಈ ವೈರುದ್ಯ ನಮ್ಮನ್ನು ಬಿಡದೇ ಕಾಡಲಾರಂಬಿಸಿದೆ.  ಸಂವಿಧಾನದ ಆಶಯಗಳಿಗೆ ವಿರುದ್ದವಾಗಿ ಪ್ರಜಾಪ್ರಬುತ್ವವನ್ನು ದುರ್ಬಲಗೊಳಿಸುವ ಕ್ರಿಯೆಗಳು ಜಾರಿಯಲ್ಲಿವೆ. ಬೇರೆ ರಾಷ್ಟ್ರಗಳಲ್ಲಿ ನಮ್ಮ ದೇಶದಂತೆ ಬಹು ಸಂಸ್ಕೃತಿಯ ಧರ್ಮೀಯರು ಕಡಿಮೆಯೇ ಹಾಗಾಗಿ ಅಲ್ಲಿ ಕಡಿಮೆ ರಾಜಕೀಯ ಪಕ್ಷಗಳಿವೆ, ಆದರೆ ನಮ್ಮಲ್ಲಿ ಮುಕ್ತ ವಾಗಿ ರಾಜಕೀಯ ಪಕ್ಷಗಳ ಸ್ಥಾಪನೆಗೆ ಪ್ರಜಾಪ್ರಭುತ್ವ ಅವಕಾಶ ಮಾಡಿಕೊಟ್ಟಿದೆ. ಅಂದರೆ ಸಮಾಜದ ಎಲ್ಲ ಸ್ಥರದ ಜನರು ತಮಗೆ ಒಪ್ಪಿತವಾದ ಯಾವುದೇ ರಾಜಕೀಯ ಪಕ್ಷವನ್ನು ಸ್ಥಾಪಿಸಿಕೊಳ್ಳಬಹುದು ಮತ್ತು ಆ ಮೂಲಕ ಭಾರತೀಯ ಚುನಾವಣಾ ವ್ವವಸ್ಥೆಯಲ್ಲಿ ತೊಡಗಿಕೊಳ್ಳಬಹುದು. ಹೀಗಿದ್ದಾಗ್ಯೂ ಸ್ವಾತಂತ್ರ್ಯ ಪೂರ್ವದಲ್ಲಿ ಅಸ್ತಿತ್ವಕ್ಕೆ ಬಂದ ರಾಜಕೀಯ ಪಕ್ಷದ ಜೊತೆಗೆ ರಾಷ್ಟ್ರೀಯ ಮಟ್ಟದಲ್ಲಿ ಬೆರಳೇಣಿಕಯ ಪಕ್ಷಗಳು ದೊಡ್ಡ ಮಟ್ಟದ ಅಡಿಪಾಯ ಹಾಕಿಕೊಂಡಿವೆ. ಇವುಗಳ ಪೈಕಿ ಒಂದು ಜಾತೀಯ ರಾಜಕೀಯವನ್ನು ಪೋಷಿಸುವ ರಾಷ್ಟ್ರೀಯ ನೀತಿಗಳನ್ನು ಮತ್ತು ಯೋಜನೆಗಳನ್ನು ಜಾರಿಗೆ ತಂದರೆ ಮತ್ತೊಂದು ಪಕ್ಷ ಕೋಮುವಾದಿ ನಿಲುವನ್ನು ಪ್ರತಿಪಾತಿಸುತ್ತಾ ಪ್ರಜಾತಾಂತ್ರಿಕ ವ್ಯವಸ್ಥೆಗೆ ಪೆಟ್ಟು ನೀಡುತ್ತಿವೆ. ಇತರೆ ಪಕ್ಷಗಳು ಸಹಾ ಇಂಥಹವುಗಳಿಂದ ಹೊರತಾಗಿಲ್ಲ ಅವು ನೇರವಾಗಿಯೇ ಜಾತೀಯತೆಯ ಬಿರುಕನ್ನು ಚುನಾವಣೆಗಳಲ್ಲಿ ಬಿತ್ತುತ್ತಿವೆ ಇವು ಪ್ರಜಾತಾಂತ್ರಿಕ  ವ್ಯವಸ್ಥೆಗೆ ಮಾರಕವಾಗಿದೆ. 

      ಚುನಾವಣೆಗಳು ಎದುರಾಗುತ್ತಿದ್ದಂತೆ ಓಲೈಕೆಯ ರಾಜಕಾರಣ ಶುರುವಾಗುತ್ತದೆ, ಜನರದ್ದೇ ದುಡ್ಡು ಬಳಸಿಕೊಂಡು ಲಾಭದಾಯಕ ಮತಬ್ಯಾಂಕ್ ಯೋಜನೆಗಳನ್ನು ರೂಪಿಸುವು ರಾಜಕೀಯ ಪಕ್ಷಗಳು ಒಡೆದು ಆಳುವ ನೀತಿಯನ್ನು ನಡೆಸಿಕೊಂಡು ಬಂದಿವೆ. ಚುನಾವಣೆಗಳಲ್ಲಿ ಗ್ರಾಮೀಣ ಭಾಗದ ಮತದಾರರನ್ನು ವಿವೇಚನೆ ಮಾಡಲು ಬಿಡದೇ ಅಗ್ಗದ ಆಮಿಷಗಳನ್ನು ಒಡ್ಡುವ ಪಕ್ಷಗಳು ಭಾವನಾತ್ಮಕವಾಗಿ ಮತ್ತು ಧಾರ್ಮಿಕವಾಗಿಯೂ ಪ್ರತ್ಯೇಕಿಸಿ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತವೆ. ನಗರ ಪ್ರದೇಶದ ಮತದಾರ ರಾಜಕೀಯ ಶಾಸ್ತ್ರದ ಅರಿವಿನ ಕೊರತೆಯಿಂದ ಚುನಾವಣೆಗಳನ್ನು ಗಂಬೀರವಾಗಿ ಪರಿಗಣಿಸಿದೇ ಹಿಂದುಳಿಯುತ್ತಿದ್ದಾರೆ ಮತ್ತು ಗ್ರಾಮೀಣ ಪ್ರದೇಶದ ಮತದಾರರಿಗಿಂತ ಹೆಚ್ಚು ಚುನಾವಣಾ ಅನೈತಿಕ ಅಂಶಗಳಿಗೆ ಬಲಿಯಾಗುತ್ತಿದ್ದಾರೆ. ಪರಿಣಾಮ ಮತದಾನದ ಪ್ರಾಮುಖ್ಯತೆ ಕಡಿಮೆಯಾಗಿ ಪ್ರಜಾತಾಂತ್ರಿಕ ವ್ಯವಸ್ಥೆಗೆ ದೂರ್ತರೇ ಆಯ್ಕೆಯಾಗುತ್ತಿದ್ದಾರೆ. 

       ಜನಸಾಮಾನ್ಯರು, ಯುವ ಜನರು ರಾಜಕೀಯ ಪಕ್ಷಗಳ ರಾಷ್ಟ್ರೀಯ ನೀತಿಯನ್ನು ಅರಿಯುವ ಅಗತ್ಯವಿದೆ. ಈ ನಿಟ್ಟಿನಲ್ಲಿ ವಿವಿಧ ರಾಜಕೀಯ ಪಕ್ಷಗಳ ಭರವಸೆಗಳನ್ನು ನೀತಿಗಳನ್ನ ಅರಿಯುವುದು ಅಗತ್ಯ ಹಾಗೆಯೇ ಚುನಾವಣೆಗಳಲ್ಲಿ ಸ್ಪರ್ದಿಸುವ ಅಭ್ಯರ್ಥಿಗಳ ಹಿನ್ನೆಲೆ ನಿಲುವುಗಳನ್ನು ಅರಿತು ಮತ ಚಲಾಯಿಸುವ ಅಗತ್ಯವಿದೆ. ಈ ಮೂಲಕ ಭಾರತ ದೇಶದ ಪ್ರಜಾತಾಂತ್ರವನ್ನು ಬಲಪಡಿಸುವ ಪ್ರಯತ್ನ ಆಗಬೇಕಿದೆ. ಮತದಾನದ ದಿನ ಹಿಂದುಳಿಯದೇ ಏ.17 ರಂದು ಮತ ಚಲಾಯಿಸಿ ನಿಮ್ಮ ಹಕ್ಕನ್ನು ಧೃಢಪಡಿಸಿಕೊಳ್ಳಿ .

Sunday, April 6, 2014

ಕೀಳು ಅಭಿರುಚಿ ಮತ್ತು ಚುನಾವಣಾ ರಾಜಕೀಯ!

ಲೋಕಸಭಾ ಚುನಾವಣೆ ರಂಗೇರುತ್ತಿರುವ ದಿನಗಳಲ್ಲೇ ಕೆಲವು ಅನುಚಿತ ಸಂಗತಿಗಳು ಮೇಲಿಂದ ಮೇಲೆ ವರದಿಯಾಗುತ್ತಲೇ ಇವೆ. ಅದು ನೈತಿಕತೆಗೆ ಧಕ್ಕೆ ತರುವಂತಹ ಸಂಗತಿಗಳು. ಸಾರ್ವತ್ರಿಕವಾಗಿ ಜರುಗುತ್ತಿರುವ ಈ ಘಟನೆಗಳಿಗೆ ಮೂಲ ಪ್ರೇರಣೆ ಏನಿರುತ್ತದೆಯೋ ಗೊತ್ತಿಲ್ಲ ಆದರೆ ಪರಿಣಾಮ ಮಾತ್ರ ವ್ಯತಿರಿಕ್ತವೇ ಸರಿ.

     ಕೇವಲ ಹತ್ತು ತಿಂಗಳ ಅವಧಿಯಲ್ಲಿ ಯಾರೂ ನಿರೀಕ್ಷಿಸಿರದ ರೀತಿಯಲ್ಲಿ ಐತಿಹಾಸಿಕ ರಾಜಕೀಯ ಪುಟಗಳನ್ನು ತೆರೆದದ್ದು ಆಮ್ ಆದ್ಮಿ ಪಕ್ಷದ ಅರವಿಂದ ಕೇಜ್ರಿವಾಲ್ ಎಂಬುದು ನಿಸ್ಸಂಶಯವಾದುದ್ದು. ಭಾರತದ ಕೈಗಾರಿಕಾ ವಸಾಹತು ರಾಜ್ಯವಾದ ಗುಜರಾತ್ ನಲ್ಲಿ ಚಹಾ ಮಾರುತ್ತಿದ್ದ ಸಾಮಾನ್ಯನಾಗಿದ್ದ ನರೆಂದ್ರ ಮೋದಿ ನಂತರ ರಾಷ್ಟ್ರೀಯ ಪಕ್ಷವೊಂದರ ಮಂಚೂಣಿ ಪ್ರಧಾನಿ ಅಭ್ಯರ್ಥಿಯಾಗಿದ್ದು ಸಾಮಾನ್ಯ ಸಂಗತಿಯೇನಲ್ಲ. ಸಿವಿಲ್ ಕಂಟ್ರಾಕ್ಟರ್ ಮತ್ತು ರೈತಾಪಿಯೂ ಆಗಿದ್ದ  ಹಳ್ಳಿಗಾಡಿನ ರೈತನ ಮಗ ಹೆಚ್ ಡಿ ದೇವೇಗೌಡ ಪ್ರಾದೇಶಿಕ ಪಕ್ಷವೊಂದರ ಸಂಸದನಾಗಿ ಭಾರತ ದೇಶದ ಪ್ರಧಾನಿ ಪಟ್ಟ ಅಲಂಕರಿಸಿದ್ದು ಹೆಮ್ಮೆಯ ಸಂಗತಿ. ಹಾಗೆಯೇ ಚಿತ್ರರಂಗದಲ್ಲಿ ಬಿಂದಾಸ್ ತಾರೆಯಾಗಿ ಹೆಸರು ಮಾಡಿದ್ದ ನಗ್ಮಾ ಸಂಸದೆಯಾಗಿದ್ದು, ರಾಜಕೀಯವನ್ನು ನಿರಾಕರಿಸುತ್ತಲೇ ಮುಂಗೋಪ, ಹುಡುಗಾಟ ಪ್ರದರ್ಶಿಸುತ್ತಾ ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿದ್ದ ನಾಯಕಿ ನಟಿ ರಮ್ಯಾ ಅಭಿಮಾನದ ಬಲದಿಂದಲೇ ಸಂಸತ್ ಭವನಕ್ಕೆ ಅತೀ ಚಿಕ್ಕ ವಯೋಮಾನದಲ್ಲೇ ಪ್ರವೇಶ ಪಡೆದಿದ್ದು ದಾಖಲೆಯೇ ಸರಿ. 
       ಇದು ಒಂದೆಡೆ ಇರಲಿ ಈ ಸಂಗತಿಗಳನ್ನು ಇಲ್ಲಿ ಯಾಕೆ ಪ್ರಸ್ತಾಪಿಸಿದೆ ಎಂದರೆ ಸಾರ್ವತ್ರಿಕವಾಗಿ ಹೀಗೆ ಐಕಾನ್ ಗಳಾಗಿರುವವರ ವಿರುದ್ದ ಕೀಳು ಅಭಿರುಚಿಯನ್ನು ಪ್ರದರ್ಶಿಸುವುದಿದೆಯಲ್ಲ ಅದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಆಮ್ ಆದ್ಮಿ ಪಕ್ಷದ ಹೀರೋ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮೇಲೆ ಚುನಾವಣಾ ಪ್ರಚಾರದ ಸಂಧರ್ಭ ನಡೆಯುತ್ತಿರುವ ಹಲ್ಲೆಗಳು, ಮಸಿ ಎರಚುವಿಕೆ, ತಡೆಯೊಡ್ಡುವುದು ಸರಿಯೇ? ಹೋಗಲಿ ಲೋಕಸಭಾ ಚುನಾವಣೆಯಲ್ಲಿ ಪ್ರಮುಖವಾಗಿ ಬಿಂಬಿತವಾಗುತ್ತಿರುವ ಎರಡು ರಾಷ್ಟ್ರೀಯ ಪಕ್ಷಗಳಿಗೆ ಅರವಿಂದ ಕೇಜ್ರಿವಾಲ್ ಅಷ್ಟೊಂದು ತೊಡಕಾಗಿ ಪರಿಣಮಿಸಿದ್ದಾರೆಯೇ ? ಗೂಂಡಾ ಪ್ರವೃತ್ತಿ ಹಲ್ಲೆ ಖಂಡನೀಯ. ನರೇಂದ್ರ ಮೋದಿ ಹವಾ ಇಲ್ಲ ಎಂದು ವಿರೋಧ ಪಕ್ಷಗಳು ಹೇಳುತ್ತವಾದರೂ ಭಾರತದ ಅನೇಕ ರಾಜ್ಯಗಳಲ್ಲಿ ಬಿಜೆಪಿ ಹವಾ ಇದೆಯೋ ಇಲ್ಲವೋ ನಮೋ ಹವಾ ಅಂತು ಇದ್ದೇ ಇದೆ ಎಂಬುದು ನಿರ್ವಿವಾದ, ಆದರೆ ಇದನ್ನು ಸಹಿಸದ ಕಾಂಗೈ ಸಂಸತ ಅಭ್ಯರ್ಥಿಯೊಬ್ಬ ನರೇಂದ್ರ ಮೋದಿಯನ್ನು ಕತ್ತರಿಸುತ್ತೇನೆ ಎಂದು ಮಾತನಾಡುತ್ತಾನೆ, ಇದೆಲ್ಲ ಎಂತಹ ನಡವಳಿಕೆಯನ್ನು ಪ್ರದರ್ಶಿಸಿದಂತಾಗುತ್ತದೆ ಅಲ್ಲವೇ? ಇಂಥಹವರು ಗೆದ್ದ ಮೇಲೆ ಶಾಂತಿ ಸುವ್ಯವಸ್ಥೆ ಕಾಪಾಡುತ್ತಾರೆಯೇ ? ವ್ಯಕ್ತಿಗತವಾಗಿ ಆತ ಮಾತನಾಡಿದ್ದು ಒಂದು ಪಕ್ಷಕ್ಕೆ, ಒಂದು ಸಮುದಾಯಕ್ಕೆ ಕೆಟ್ಟ ಹೆಸರು ತಂದಂತಲ್ಲವೇ ಇವುಗಳ ಒಟ್ಟು ಪರಿಣಾಮ ವ್ಯತಿರಿಕ್ತವಾಗ ಬಹುದಲ್ಲವೇ?
         ದೃಶ್ಯ ಮಾಧ್ಯಮಗಳಿಗೆ ಕಡಿವಾಣ ಇಲ್ಲದಿರುವುದರಿಂದ ಅನೇಕ ಪ್ರಚೋದನಾತ್ಮಕ ಚಟುವಟಿಕೆಗಳು ಕಾರ್ಯಕ್ರಮವಾಗಿ ಪ್ರಸಾರ ಕಾಣುತ್ತಿವೆ. ಇಂತಹದ್ದೊಂದು ಚುನಾವಣ ಕಾರ್ಯಕ್ರಮದಲ್ಲಿ ರಾಜ್ಯ ಕಾಂಗ್ರೆಸ್ ನ ಅಧ್ಯಕ್ಷ ಪರಮೇಶ್ವರ್, ಮಾಜಿ ಪ್ರಧಾನಿ ದೇವೇಗೌಡ ವಿರುದ್ದ ಆಡಬಾರದ ಮಾತನ್ನು ಉತ್ಸಾಹದಲ್ಲಿ ಆಡಿದ್ದಾರೆ. ಉತ್ತಮ ಶೈಕ್ಷಣಿಕ ಹಿನ್ನೆಲೆಯಿರುವ ಪರಮೇಶ್ವರ್ ಮುತ್ಸದ್ದಿ ತನವನ್ನು ಪ್ರದರ್ಶಿಸಿ ಸಮತೂಕದ ಮಾತನ್ನು ಆಡಬಹುದಿತ್ತು, ಆದರೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಉತ್ಸಾಹದಲ್ಲಿ ನಾಲಗೆಯನ್ನು ಹರಿಯಬಿಟ್ಟಿದ್ದಾರೆ, ಬಿಜೆಪಿಯ ಈಶ್ವರಪ್ಪ, ಪ್ರತಾಪ್ ಸಿಂಹ, ಕಾಂಗೈನ ಜನಾರ್ಧನ ಪೂಜಾರಿ ಕೂಡಾ ಎಗ್ಗು ತಗ್ಗಿಲ್ಲದೇ ಮಾತನಾಡಿ ತಮ್ಮ ಘನತೆ ಗೌರವಕ್ಕೆ ಕುಂದು ತಂದುಕೊಂಡಿದ್ದಾರೆ. ಹಿಂದೊಮ್ಮೆ ಇದೇ ದೇವೇಗೌಡ ಕೂಡ ಮುಖ್ಯ ಮಂತ್ರಿಯಾಗಿದ್ದ ಯಡಿಯೂರಪ್ಪ ವಿರುದ್ದ ಕೀಳು ಅಭಿರುಚಿಯ ಮಾತನ್ನು ಆಡಿದ್ದರು. ಅದು ಒಂದು ರೀತಿಯಲ್ಲಿ ಯಡಿಯೂರಪ್ಪ ಗೆ ಒಳ್ಳೆಯದೇ ಆಗಿತ್ತೆನ್ನಿ. ಈಗ ಅದೇ ಲಾಭ ದೇವೇಗೌಡರಿಗೂ ಪರೋಕ್ಷವಾಗಿ ಆಗುವ ಸಾಧ್ಯತೆಗಳೇ ಹೆಚ್ಚು!
         ನಗ್ಮಾ ಸಂಸತ್ ಅಭ್ಯರ್ತಿಯಾಗಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ವೇಳೆ ಹಿರಿಯ ರಾಜಕಾರಣಿಯೊಬ್ಬ ಕಿವಿಯಲ್ಲಿ ಏನೋ ಹೇಳುವವನಂತೆ ನಟಿಸುತ್ತಾ ಆಕೆಯನ್ನು ಸಾರ್ವತ್ರಿಕವಾಗಿ ಅಪ್ಪಿ ಮುತ್ತಿಟ್ಟಿದ್ದು ಅವನ ನೈತಿಕತೆಯ ಪರಮಾವಧಿಯನ್ನು ಪ್ರಶ್ನಿಸುವಂತೆ ಮಾಡುತ್ತದೆ. ರಮ್ಯಾ ಲೋಕಸಭಾ ಚುನಾವಣೆಗೆ ನಿಂತಾಗ ಆಕೆಯ ಹುಟ್ಟಿನ ಕುರಿತು ಅನೈತಿಕ ಹೇಳಿಕೆ ನೀಡಿದ್ದು ರಮ್ಯಾಗೆ ಮತಗಳಾಗಿ ಪರಿವರ್ತನೆಯಾಗಿದ್ದು ಸುಳ್ಳೇನಲ್ಲ. ಈ ಸಲ ರಮ್ಯಾ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾಗ ಅಭಿಮಾನಿಗಳು ಮುಜುಗುರವಾಗುವಂತೆ ಸಾರ್ವತ್ರಿಕವಾಗಿ ಆಕೆಯನ್ನು ಅಪ್ಪಿ ಮುದ್ದಾಡಿದ ಘಟನೆಯೂ ವರದಿಯಾಗಿದೆ. 
      ಇದೆಲ್ಲಾ ಎಂಥದ್ದು ಮಾರಾಯ್ತೇ? ಪ್ರಜಾತಾಂತ್ರಿಕ ವ್ಯವಸ್ಥೆಗೆ ಗಂಭೀರ ನೆಲೆಗಟ್ಟಿನಲ್ಲಿ ಸಾಗಬೇಕಾದ ಚುನಾವಣೆಗಳಲ್ಲಿ ಇಂಥಹ ಕೀಳು ಅಭಿರುಚಿಗಳು ಕೊನೆಯಾಗಬೇಕು. ಸಾರ್ವತ್ರಿಕವಾದ ದುರ್ವರ್ತನೆಗಳು,ಕೀಳು ಅಭಿರುಚಿಯ ಭಾಷಣಗಳು, ಪ್ರಚೋದನಾಕಾರಿಯಾದ ಮಾತುಗಳು ವ್ಯಕ್ತಿತ್ವವನ್ನು ಹಾಳು ಮಾಡುವ ಜೊತೆಗೆ ಪರಿಸರಕ್ಕೂ ಕೆಟ್ಟ ಪಾಠವನ್ನೇ ಕಲಿಸುತ್ತವೆ. ಆರೋಗ್ಯಕರವಾದ ವಾತಾವರಣಕ್ಕೆ ಅಡ್ಡಿಯಾಗುವಂತಹ ಇಂತಹ ಸಂಗತಿಗಳನ್ನೇ ರಾಜಕೀಯ ಪಕ್ಷಗಳ ಓಟಿನ ಅಸ್ತ್ರವನ್ನಾಗಿ ಮಾಡಿಕೊಂಡು ಚುನಾವಣೆ ಎದುರಿಸುವುದು ಇನ್ನೂ ಅಸಹ್ಯಕರ ಸಂಗತಿಯಲ್ಲವೇ. ಭಾರತ ದೇಶದ ಒಟ್ಟು ಚುನಾವಣಾ ಪ್ರಕ್ರಿಯೆಗಳನ್ನು ಬಹಳ ವೇಗವಾಗಿ ಮತದಾರ ಗ್ರಹಿಸುತ್ತಿರುತ್ತಾನೆ ಮತ್ತು ಸರಿಯಾದ ಸಂಧರ್ಭದಲ್ಲಿ ತಕ್ಕ ಪಾಠವನ್ನು ಕಲಿಸುತ್ತಾನೆ ಎಂಬುದನ್ನು ಅರಿಯಬೇಕಾದ ತುರ್ತು ಇದೆ. 

Sunday, March 30, 2014

ಯುವಜನರ ಮತ ದೇಶಕ್ಕೆ ಹಿತ!

ಆರೋಗ್ಯಕರ ಭಾರತಕ್ಕೆ ಯುವ ಜನತೆ ಎಂಬ ಸಂಗತಿ ಸದ್ಯದ ಸ್ಥಿತಿಯಲ್ಲಿ ಬಹು ಮುಖ್ಯವಾದುದು. ವಿದ್ಯಾವಂತ ಯುವಜನರಲ್ಲಿ ಪ್ರಜ್ಞಾವಂತಿಕೆಯ ಕೊರತೆಯಿಂದ ದೇಶದ ಪ್ರಜಾಪ್ರಭುತ್ವ ಮೌಲ್ಯಗಳಿಗೆ ಪೂರಕವಾದ ಸಂಗತಿಗಳು ಜರುಗುತ್ತಿಲ್ಲ. ಯುವಜನರ ಹತಾಶ ಮನೋಸ್ತಿತಿ ದೇಶದ ಭದ್ರತೆಗೆ ಶಾಂತಿ ಸುವ್ಯವಸ್ಥೆಗೆ ಅಡ್ಡಿಯಾಗಿದೆ ಎಂಬುದು ಸಧ್ಯದ ವಿಷಾಧನೀಯ ಸಂಗತಿ. ಶಿಕ್ಷಣ ಮಾತ್ರ ನಮ್ಮ ಬದುಕಿನ ಭಾಗವಲ್ಲ ಬದಲಿಗೆ ಪರಿಸರದ ಸಂಗತಿಗಳು, ನೈತಿಕತೆಯ ಅಂಶಗಳು ಮತ್ತು ಬದ್ದತೆ ಇಂದು ಯುವಜನರಿಗೆ ತೀರಾ ಅತ್ಯಗತ್ಯವಾಗಿ ಬೇಕಾಗಿದೆ.
           ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಅರಿವು ಎಷ್ಟು ಜನರಿಗಿದೆ? ಸುಮಾರು 130ದೇಶಗಳಿಗೆ ಮಾದರಿಯಾದ ನಮ್ಮ ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಜಗತ್ತಿಗೆ ಮಾದರಿ. ಇಲ್ಲಿ ವಿವಿಧ ಸಮುದಾಯಗಳ ವಿವಿಧ ಧಾರ್ಮಿಕ ಪಂಥಗಳ ಜನರಿದ್ದಾರೆ ಆದಾಗ್ಯೂ ಇದನ್ನೆಲ್ಲ ಸರಿದೂಗಿಸಿಕೊಂಡು ಹೋಗಬೇಕಾದರೆ ಉತ್ತಮ ಪ್ರಜಾಪ್ರತಿನಿಧಿಗಳು ನಮಗೆ ಬೇಕು ಮತ್ತು ಅವರು ಪ್ರಾಮಾಣಿಕವಾಗಿ ಜನಸೇವೆ ಮಾಡುವವರಾಗಿರಬೇಕು ಎಂದರೆ ಅದಕ್ಕೆ ಚುನಾವಣೆಯಲ್ಲಿ ಮತಹಾಕುವುದು ಮುಖ್ಯವಾಗುತ್ತದೆ. ಜಾಗತೀಕರಣದ ಈ ದಿನಗಳಲ್ಲಿ ಉದ್ಯೋಗ-ಆರ್ಥಿಕತೆಯ ಕಡೆಗೆ ಗಮನ ಕೊಟ್ಟಷ್ಟು ಪ್ರಜಾತಂತ್ರ ವ್ಯವಸ್ಥೆಯನ್ನು ರೂಪಿಸುವ ಚುನಾವಣೆಗೆ ಮಹತ್ವ ಕೊಟ್ಟದ್ದು ಕಡಿಮೆಯೇ. ಚುನಾವಣಾ ರಜೆ ಬಂದರೆ ಪಿಕ್ನಿಕ್, ಟ್ರಿಪ್, ಆಟ, ನೋಟ, ಮೋಜು ಇತ್ಯಾದಿಗಳಲ್ಲಿ ತೊಡಗಿ ಮತಹಾಕುವುದನ್ನು ಮರೆಯುವವರೆ ಹೆಚ್ಚು. 
        ಅಷ್ಠೆ ಏಕೆ ಎಷ್ಟೋ ಮಂದಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿರುವ ವಿವಿಧ ಹಂತಗಳು ಮತ್ತು ಅಧಿಕಾರಸ್ಥರ ಜವಾಬ್ದಾರಿಗಳು ಏನೆಂದು ಅರಿವು ಇರೊಲ್ಲ, ಸ್ಥಳೀಯ ಸರ್ಕಾರ ಎಂದರೆ ಏನು? ಅಲ್ಲಿರುವವರ ಜವಾಬ್ದಾರಿಗಳೇನು? ಎಂಎಲ್ ಎ ವ್ಯಾಪ್ತಿ ಏನು, ಎಂಪಿ ಏನು ಕೆಲಸ ಮಾಡುತ್ತಾನೆ, ಪ್ರಧಾನಿಯನ್ನು ಆರಿಸುವವರು ಯಾರು ಇತ್ಯಾದಿ ಸಾಮಾನ್ಯ ಸಂಗತಿಗಳು ತಿಳಿಯದ ವ್ಯಕ್ತಿ ಮತದಾನ ಮಾಡಲು ಯೋಗ್ಯನಾಗಿರುವುದಿಲ್ಲ, ಆಗ ಅಧಿಕಾರ ಹಿಡಿಯ ಬಯಸುವ ರಾಜಕಾರಣಿಗಳು ತಮಗೆ ಬೇಕಾದವರನ್ನು ಓಲೈಸುತ್ತಾ ಆಮಿಷಗಳನ್ನು ಒಡ್ಡುತ್ತಾ, ಜಾತೀ ರಾಜಕಾರಣ, ಕೋಮುರಾಜಕಾರಣ ಮತ್ತು ತೋಳ್ಬಲದ ರಾಜಕಾರಣದ ಮೂಲಕ ಅಧಿಕಾರಕ್ಕೆ ಬಂದು ಬಿಡುತ್ತಾರೆ. ಮೈಮರೆತು ಕುಳಿತ ಜನರನ್ನು ತಮಗೆ ಬೇಕಾದಂತೆ ಆಳುತ್ತಾರೆ, ಭ್ರಷ್ಟಾಚಾರ ತಾಂಡವವಾಡುತ್ತದೆ, ಸಾಮಾನ್ಯ ಜನ ಅಸಹಾಯಕತೆಯ ಬದುಕನ್ನು ಸವೆಸುತ್ತಾರೆ, ಸಮಸ್ಯೆಗೆ ಪರಿಹಾರವಿಲ್ಲ ಎಂದು ಕುಳಿತು ಬಿಡುತ್ತಾರೆ. ಇಂತಹ ಪರಿಸ್ಥಿತಿ ಬೇಕಾ? 

       ನೋಡಿ ಭಾರತದ ಚುನಾವಣೆ ವಿಶ್ವದಲ್ಲೆ ಅತೀ ದೊಡ್ಡ ಪ್ರಮಾಣದ್ದು! ಸಂಖ್ಯೆ ವಿಸ್ತಾರ ಮತ್ತು ಪ್ರಮಾಣ ಗಮನಿಸಿದಾಗ ಇದೊಂದು ವಿಸ್ಮಯ ಎನಿಸಿ ಬಿಡುತ್ತದೆ. ಯೂರೋಪ್, ಅಮೇರಿಕಾ, ಕೆನಡಾ ಮತ್ತು ಆಸ್ಟ್ರೇಲಿಯಾ ರಾಷ್ಟ್ರಗಳ ಚುನಾವಣೆಯನ್ನು ಒಟ್ಟಾಗಿ ಸೇರಿಸಿದರೂ ಭಾರತದ ಒಂದು ಚುನಾವಣೆಯನ್ನು ಮೀರುವುದು ಅಸಾಧ್ಯ. 2009ರಲ್ಲಿ ನಡೆದ ಲೋಕಸಭಾ ಚುನಾವಣೆಯ ಅಂಕಿ ಅಂಶಗಳನ್ನು ಗಮನಿಸಿದಾಗ ಅದರ ಬೃಹದಾಕಾರ ತಿಳಿಯುತ್ತದೆ. ದೇಶದಾಧ್ಯಂತ ಸುಮಾರು 829000 ಮತಗಟ್ಟೆಗಳನ್ನು ನಿರ್ಮಿಸಲಾಗಿತ್ತು. ಮತಪಟ್ಟಿಯಲ್ಲಿ 714ದಶಲಕ್ಷ ಮತದಾರರ ಹೆಸರು ದಾಖಲಾಗಿತ್ತು ಮತ್ತು ಅಂದಿನ ಚುನಾವಣೆಗೆ ಮೀಸಲಿಟ್ಟ ಹಣ ರೂ.1120ಕೋಟಿ. ಈ ಮೊತ್ತವನ್ನು ದೇಶದ ಪ್ರತಿಯೊಬ್ಬ ಪ್ರಜೆ ತಾವು ಪಾವತಿಸುವ ತೆರಿಗೆ ಹಣದಿಂದ ಭರಿಸುತ್ತಾರೆ ಎಂಬುದು ಇಲ್ಲಿ ಗಮನಾರ್ಹ. 

       ಭಾರತ ಸಂವಿಧಾನದ 15ನೇ ಭಾಗದಲ್ಲಿರುವ 324 ರಿಂದ 320ರ ವರೆಗಿನ ವಿಧಿಗಳು ಚುನಾವಣಾ ಆಯೋಗದ ಸಂರಚನೆ, ಅಧಿಕಾರ, ಕರ್ತವ್ಯ ಇತ್ಯಾದಿ ವಿಷಯಗಳನ್ನು ಒಳಗೊಂಡಿವೆ. ಜನವರಿ 25, 1950ರಂದು ಚುನಾವಣಾ ಆಯೋಗ ಅಸ್ತಿತ್ವಕ್ಕೆ ಬಂದಿದೆ. ಇನ್ನು ಮತದಾನ ವಿಚಾರ, ಪ್ರಜಾಪ್ರಭುತ್ವ, ಚುನಾವಣೆ ಮತ್ತು ಮತದಾನ ನಿಕಟವಾದ ಸಂಪರ್ಕ ಹೊಂದಿರುವ ತ್ರಿಕೋನ ವ್ಯವಸ್ಥೆ. ಒಂದಿಲ್ಲದೇ ಮತ್ತೊಂದು ಇರಲು ಸಾಧ್ಯವಿಲ್ಲ. ಮತದಾನ ಮೂಲಕ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಲಾಗುತ್ತದೆ, ಹಾಗೆ ಆಯ್ಕೆಯಾದ ಪ್ರಜಾಪ್ರತಿನಿಧಿಗಳು ಈ ರಾಷ್ಟ್ರದ ಭವಿಷ್ಯವನ್ನು ನಿರ್ಧರಿಸುತ್ತಾರೆ. ಆದ್ದರಿಂದ ಮತದಾನ ಮಾಡುವುದು ಕಡ್ಡಾಯ ಎಂಬುದನ್ನು ಅರಿಯಬೇಕು. ಆದರೆ ಭಾರತದ ಕಾನೂನು ವ್ಯವಸ್ಥೆಯಲ್ಲಿ ಮತದಾನ ಕಡ್ಡಾಯವಲ್ಲ. ಒಂದು ವೇಳೆ ನಾಗರಿಕರು ತಮ್ಮ ಮತ ಚಲಾಯಿಸದಿದ್ದರೂ ಅವರಿಗೆ ಯಾವುದೇ ಶಿಕ್ಷೆ ಇಲ್ಲ, ಈ ಸಲ ಮತವನ್ನು ಯಾವುದೇ ಅಭ್ಯರ್ಥಿಗೆ ಚಲಾಯಿಸದೇ ತಿರಸ್ಕರಿಸುವ ಅವಕಾಶವನ್ನು ನೀಡಲಾಗುತ್ತಿದೆ. ಆದರೆ ಪ್ರಜಾತಂತ್ರ ಮಾದರಿ ಆಡಳಿತವನ್ನು ಆಯ್ಕೆ ಮಾಡಿಕೊಂಡಿರುವ ನಾವು ಖಂಡಿತವಾಗಿಯೂ ಮತದಾನದಲ್ಲಿ ಭಾಗವಹಿಸಬೇಕು. ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೆ ನೀಡಿರುವ ಹಕ್ಕುಗಳಲ್ಲಿ ಮತದಾನವೂ ಒಂದು ಆ ಹಕ್ಕನ್ನು ಚಲಾಯಿಸಿದಾಗ ಮಾತ್ರ ಪ್ರಜಾತಂತ್ರಕ್ಕೆ ಮತ್ತು ಪ್ರಜಾಪ್ರಭುತ್ವಕ್ಕೆ ಒಂದು ಅರ್ಥ ಇರುತ್ತದಲ್ಲವೇ?

           ಪ್ರಜಾಪ್ರಭುತ್ವ ವ್ಯವಸ್ಥೆಗೆ ಶಕ್ತಿ ತುಂಬಲು ಯುವ ಜನರು ರಾಜಕೀಯ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು. ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳ ಯೋಗ್ಯತೆ, ಕೆಲಸ ಮಾಡುವ ಸಾಮರ್ಥ್ಯ ಹಾಗೂ ಪ್ರಾಮಾಣಿಕತನಗಳು ಆಯ್ಕೆಗೆ ಮಾನದಂಡ ವಾಗಬಹುದು. ಅಭ್ಯರ್ಥಿಗಳ ಆಮಿಷಗಳಿಗೆ ಬಲಿಯಾಗಿ ಕುರಿಗಳಾಗದೇ ಅರಿವಿನ ಪ್ರಜ್ಞೆ ಬೆಳೆಸಿಕೊಳ್ಳಿ, ಚುನಾವಣೆಗಳೆಡೆಗೆ ಇರುವ ಅಸಡ್ಡೆಯನ್ನು ಬಿಟ್ಟು ಜಾಗೃತರಾಗಿ. ನಿಮ್ಮ ಹಿರಿಯರು ಯಾವುದೋ ಆಸೆ ಆಮಿಷಕ್ಕೆ ಬಲಿಯಾಗಿ, ಕಟ್ಟುಬಿದ್ದು ಅನುಸರಿಸುವ ಮಾರ್ಗಗಳ ಕುರಿತು ಅವರನ್ನು ಜಾಗೃತರನ್ನಾಗಿ ಮಾಡಿ ಯುವ ಜನರ ಮತ ದೇಶಕ್ಕೆ ಹಿತ ಎಂಬುದನ್ನು ಮರೆಯದಿರಿ.

Sunday, March 23, 2014

ಮೌಡ್ಯ ಮತ್ತು ವಾಸ್ತವ!


ಲೇಶಿಯಾದ ನಾಗರಿಕ ಸೇವಾ ವಿಮಾನ ಎಂ ಹೆಚ್ 307 ಕಣ್ಮರೆಯಾಗಿ 16ದಿನಗಳಾಗುತ್ತಿವೆ. ಆಧುನಿಕತೆ ತಂತ್ರಜ್ಞಾನ ಮುಂದುವರೆದಿದ್ದರೂ ಸಹಾ ವಿಮಾನದ ಸುಳಿವನ್ನು ಪತ್ತೆ ಹಚ್ಚುವಲ್ಲಿ ತಂತ್ರಜ್ಞರು ವಿಫಲರಾಗಿದ್ದಾರೆ. ಬರೀ ಊಹಾಪೋಹಗಳ ಕಂತೆಯಲ್ಲೆ ದಿನಗಳನ್ನು ತಳ್ಳಲಾಗುತ್ತಿದೆ. ಸಂಬಂಧಿಕರನ್ನು ಕಳೆದುಕೊಂಡ ಬಂಧುಗಳು ಕಣ್ಣೀರ ಕಡಲಲ್ಲಿ ಮುಳುಗಿದ್ದಾರೆ. ಐವರು ಭಾರತೀಯರು ಸಹಾ ಸದರಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು ಎಂಬುದು ದುಖಕರ ಸಂಗತಿ. ಜಾಗತಿಕವಾಗಿ ಎಲ್ಲಾ ರಾಷ್ಟ್ರಗಳು ಸಹಾ ವಿಮಾನ ಪತ್ತೆಗೆ ಸಹಾಯ ಹಸ್ತ ಚಾಚಿವೆ, ಕೋಟ್ಯಾಂತರ ರೂಪಾಯಿಗಳ ವೆಚ್ಚವಾಗುತ್ತಿದೆ ಆದರೆ ಇನ್ನು ಸುಳಿವು ಸಿಗದಿರುವುದು ಮತ್ತು ವಿಮಾನ ನಾಪತ್ತೆ ಪ್ರಕರಣ ನಿಗೂಢವಾಗುತ್ತಿರುವುದು ವಿಷಾಧನೀಯ ಸಂಗತಿ. 

        ವಿಮಾನ ನಾಪತ್ತೆ ಕುರಿತಂತೆ ಸ್ವತ: ಮಲೇಶಿಯಾ ಸರ್ಕಾರವೇ ಸ್ಪಷ್ಟ ನಿಲುವುಗಳನ್ನು ಹೊಂದದೆ ಅನುಮಾನಸ್ಪದ ರೀತಿಯಲ್ಲಿ ವರ್ತಿಸುತ್ತಿರುವುದು ಆ ದೇಶದ ಹೊಣೆಗೇಡಿತನವನ್ನ ಪ್ರದರ್ಶನಕ್ಕಿಟ್ಟಂತಿದೆ. ಇಷ್ಟೆಲ್ಲಾ ತಂತ್ರಜ್ಞಾನ ಅಭಿವೃದ್ದಿ ಹೊಂದಿದ್ದರೂ ಸಹಾ ವಿಮಾನವೊಂದನ್ನು ಪತ್ತೆ ಹಚ್ಚಲಾಗಿಲ್ಲ ಎಂಬುದು ವಿಪರ್ಯಾಸವೇ ಸರಿ. ಮಲೇಶಿಯಾದಲ್ಲೂ ಮೌಢ್ಯವೇ ಹೆಚ್ಚಿರುವುದರಿಂದ ಅಲ್ಲಿ ಗಂಭೀರ ಕ್ರಮವನ್ನು ವಾಸ್ತವ ನೆಲೆಗಟ್ಟಿನಲ್ಲಿ ಕೈಗೊಳ್ಳದೇ ನಂಬಿಕೆಗಳ ಆಚರಣೆಗೆ ಮೊರೆ ಹೋಗಿದ್ದಾರೆ ಎಂಬ ಸಂಗತಿ ಕೇಳಿದ್ದೇನೆ. ಇದು ಅತ್ಯಂತ ದೊಡ್ಡ ಮೂರ್ಖತನವೇ ಸರಿ. 

       ಇರಲಿ ಭಾರತದಲ್ಲಿ , ಮಲೇಶಿಯಾ ನಾಗರಿಕ ವಿಮಾನ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂತಹ ಕ್ರಮವಾಗುತ್ತಿದೆ ಎಂದು ನೋಡುವುದಾದರೆ, ಭಾರತ ಸರ್ಕಾರವೂ ಸಹಾ ಮಲೇಶಿಯಾದ ನೆರವಿಗೆ ನಿಂತಿದೆ ತನ್ನ ವ್ಯಾಪ್ತಿಯಲ್ಲಿ ಪರಿಶೀಲನೆ ನಡೆಸುತ್ತಿದೆ ಹಾಗೂ ತನ್ನ ಸೆಟಿಲೈಟ್ ನೆರವನ್ನು ನೀಡಿದೆ. ಇವೆಲ್ಲ ಸರಿ ಬಿಡಿ ಆದರೆ ರಾಜ್ಯದ ಅಷ್ಟೂ ಟಿವಿಗಳಲ್ಲಿ ಅಟಕಾಯಿಸಿಕೊಂಡಿರುವ ಜ್ಯೋತಿಷಿಗಳು, ಬಾಬಾಗಳು, ಸ್ವಾಮೀಜಿಗಳು ಈಗ ವಿಮಾನ ನಾಪತ್ತೆ ಕುರಿತಂತೆ ಹಾಸ್ಯಾಸ್ಪದ ಹೇಳಿಕೆಗಳನ್ನು ನೀಡಿ ಜನರಿಗೆ ಮನರಂಜನೆ ನೀಡುತ್ತಿರುವುದು ಮತ್ತು ದೃಶ್ಯ ಮಾಧ್ಯಮಗಳು ಅಂತಹ ಸುದ್ದಿಗೆ ಮಾನ್ಯತೆ ನೀಡುತ್ತಾ ಜನರನ್ನು ದಿಕ್ಕು ತಪ್ಪಿಸುತ್ತಿರುವುದು ಮಾತ್ರ ಖಂಡನಾರ್ಹ!

         ವಿಮಾನ ನಾಪತ್ತೆಯಾದ ನಾಲ್ಕೈದು ದಿನಗಳಿಗೆ ಅದ್ಯಾರೋ ಕಣ್ಕಟ್ಟು ಮಾಡುವ ಕಲೆಯನ್ನು ಕರಗತ ಮಾಡಿಕೊಂಡಿರುವ ರಾಮಚಂದ್ರ ಗುರೂಜಿ ಎಂಬಾತ ಚಾನಲ್ ಒಂದರಲ್ಲಿ ಒಂದಿಬ್ಬರು ಪ್ರಾಯೋಜಿತ ಗಿರಾಕಿಗಳನ್ನ ಕರೆತಂದು ಲೈವ್ ಆಗಿ ಅವರನ್ನು ಮಾತನಾಡಿಸಿ ವಿಮಾನದಲ್ಲಿದ್ದ ಆತ್ಮವನ್ನ ಅವಾಹನೆ ಮಾಡಿಬಿಟ್ಟ! ವಿಮಾನ ಸುರಕ್ಷಿತವಾಗಿದೆ ವಾರದಲ್ಲೇ ಪತ್ತೆಯಾಗಲಿದೆ ಎಂದು ಘೋಷಿಸಿ ಬಿಟ್ಟ! ಅಷ್ಠೇ ಅಲ್ಲ ವಿಮಾನದಲ್ಲಿರುವ ಪ್ರಯಾಣಿಕರ ಮೊಬೈಲ್ ಗಳು ರಿಂಗಣಿಸುತ್ತಿವೆ ಇತ್ಯಾದಿ ಪ್ರವರವನ್ನು    ತೇಲಿಬಿಟ್ಟ, ಅದನ್ನೇ ಬಿಟ್ಟ ಕಣ್ಣು ಬಿಟ್ಟ ಹಾಗೆ ನೋಡಿದ ವೀಕ್ಷಕರು ಮಂಗಗಳಾಗಿ ಹೋದರು. ಸುವರ್ಣ ಸುದ್ದಿ ವಾಹಿನಿ ತನ್ನ ವಾಹಿನಿಯ ಟಿ ಆರ್ ಪಿ ಗಾಗಿ ಇಂತಹ ಕೀಳು ದರ್ಜೆಯ ಲೈವ್ ಕಾರ್ಯಕ್ರಮವನ್ನು ಮಾಡಿ  ಸಾಮಾಜಿಕ ಹೊಣೆಗೇಡಿತನವನ್ನ ಪ್ರದರ್ಶಿಸಿತು. ಹೋಗಲಿ ಇಷ್ಟೆಲ್ಲ ಆದ ಮೇಲೆ ಆತ ಹೇಳಿದಂತೆ ಏನಾದರೂ ನಡೆಯಿತೆ ಎಂದರೆ ಅದು ಶೂನ್ಯ!

       ರಾಜ್ಯದಲ್ಲಿ ಎಗ್ಗಿಲ್ಲದೇ ನ್ಯೂಸ್ ಚಾನಲ್ ಗಳು ಹುಟ್ಟಿಕೊಂಡ ಮೇಲೆ ಜನಸಾಮಾನ್ಯರ ಹಿತಾಸಕ್ತಿಗಳಿಗಿಂತ ಮುಖ್ಯವಾಗಿ ವ್ಯಾಪಾರಿಕರಣದ ಪ್ರತಿನಿಧಿಗಳಾಗಿ, ಖಾಸಗಿ ವ್ಯಕ್ತಿಗಳ ದರ್ದಿಗೆ  ಕಾರ್ಯಕ್ರಮಗಳನ್ನ ಕಿರುತೆರೆ ವಾಹಿನಿಗಳು ಪ್ರಸ್ತುತ ಪಡಿಸುತ್ತಿವೆ. ಜಾಗತೀಕರಣದ ಪ್ರಭಾವದಿಂದಾಗಿ ದುಡ್ಡು ಮಾಡುವ ಉಮ್ಮೇದಿಗೆ ಹುಟ್ಟಿಕೊಂಡ ಚಾನಲ್ ಗಳನ್ನು ದೊಡ್ಡ ದೊಡ್ಡ ಉದ್ಯಮದ ಪ್ರಚಾರದ ಭಾಗವಾಗಿ ಸಾರ್ವಜನಿಕರ ಮುಂದೆ ತರಲಾಗುತ್ತಿದೆ. ಆಂದ್ರ, ತಮಿಳು ನಾಡು ಮತ್ತು ಕೇರಳ ರಾಜ್ಯದಲ್ಲಿ ವ್ಯಕ್ತಿಗಳು ಮತ್ತು ಪಕ್ಷಗಳ ಹಿತಾಸಕ್ತಿಗಾಗಿ ಮುದ್ರಣ ಮಾಧ್ಯಮಗಳು ಮತ್ತು ದೃಶ್ಯ ವಾಹಿನಿಗಳು ಕೆಲಸ ಮಾಡುತ್ತಿವೆ ಹಾಗೂ ಸಾರ್ವತ್ರಿಕವಾಗಿ ಮಾನ್ಯತೆಯನ್ನು ಕಳೆದುಕೊಂಡಿವೆ. ರಾಜ್ಯದಲ್ಲೂ ಅಂತಹ ಸ್ಥಿತಿ ಇದೆ ಆದರೆ ಸ್ವಲ್ಪ ಭಿನ್ನವಾಗಿದೆ, 80ರ ದಶಕದಲ್ಲಿ ಲಂಕೇಶ್ ಪತ್ರಿಕೆ ಯಂತಹ ಟ್ಯಾಬ್ಲಾಯ್ಡ್ ಪತ್ರಿಕೆ ಬಂದಾಗ ರಾಜ್ಯ ರಾಜಕಾರಣದಲ್ಲಿ ಮತ್ತು ಸಾಹಿತ್ಯ ಸಾಂಸ್ಕೃತಿಕ ಲೋಕದಲ್ಲಿ ಮಹತ್ತರವಾದ ಬದಲಾವಣೆಗೆ ಮತ್ತು ಹೊಸ ತುಡಿತಗಳಿಗೆ ನಾಂದಿ ಹಾಡುವ ಕ್ರಿಯೆ ನಡೆದಿತ್ತು. ಜನರ ಭಾವನೆಗೆ ಪೂರಕವಾಗಿ ಮಾಧ್ಯಮಗಳು ಕಾರ್ಯನಿರ್ವಹಿಸದ್ದನ್ನ ಪಿ ಲಂಕೇಶ್ ಸಾಕ್ಷೀಕರಿಸಿದ್ದರು. ಆದರೆ ಇವತ್ತು ಪರಿಸ್ಥಿತಿ ಬೇರೆಯೇ ಆಗಿದೆ. 

      ಪ್ರಜಾಪ್ರಭುತ್ವದಲ್ಲಿ ಅತ್ಯಂತ ವಿಶ್ವಾಸಾರ್ಹವಾಗಿ ಮತ್ತು ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಿಬೇಕಿದ್ದ ಮಾಧ್ಯಮ ಅದರಲ್ಲೂ ದೃಶ್ಯ ಮಾಧ್ಯಮಗಳು ಬೇಜವಾಬ್ದಾರಿತನದಿಂದ ನಡೆದುಕೊಳ್ಳುತ್ತಿವೆ. ಜನಸಾಮಾನ್ಯರ ಭಾವನೆಗಳ ಮೇಲೆ ಹೇರಿಕೆಯಾಗುವ ಕಾರ್ಯಕ್ರಮಗಳನ್ನು, ಮೌಡ್ಯವನ್ನು ಜತನದಿಂದ ಬಿತ್ತುವ ಕೆಲಸವನ್ನ ಮಾಡುತ್ತಿವೆ. ಅಪರಾಧ ಮತ್ತು ಅನೈತಿಕತೆಗೆ ನೀಡುವ ಮಾನ್ಯತೆಯನ್ನ ವೈಚಾರಿಕ ಮತ್ತು ಅಭಿವೃದ್ದಿ ಸಂಬಂಧಿತ ಕಾರ್ಯಕ್ರಮಗಳಿಗೆ ನೀಡುತ್ತಿಲ್ಲ! ದಿನಬೆಳಗೆದ್ದರೆ ಟಿವಿ ಯಲ್ಲಿ ವಕ್ಕರಿಸಿಕೊಳ್ಳುವ ಜ್ಯೋತಿಷಿಗಳು ಮತ್ತು ಬಾಬಾಗಳು ವಿವಿಧ ರೀತಿಯಲ್ಲಿ ಜಾತಕಗಳನ್ನು ಫಲಗಳನ್ನ ಮತ್ತು ಪರಿಹಾರಗಳನ್ನು ತಮಗೆ ತೋಚಿದಂತೆ ಹೇಳುತ್ತಾರೆ. ಭಾರತ ಹೇಳಿ ಕೇಳಿ ವೈವಿದ್ಯಮಯ ಸಾಂಸ್ಕೃತಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಬಲವಾಗಿ ಪ್ರತಿಪಾದಿಸುವ ಮನಸ್ಸುಗಳನ್ನು ಹೊಂದಿದ ದೇಶ, ಹೀಗಿರುವಾಗ ನಂಬಿಕೆಗಳನ್ನ ವಾಸ್ತವದ ನೆಲೆಗಟ್ಟಿನಿಂದ ಹೊರತು ಪಡಿಸಿದಂತೆ ಮತ್ತು ಹಣ ಮಾಡುವ ಹಪಾಹಪಿಯಿಂದ ದುರ್ಬಲ ನಂಬಿಕೆಗಳನ್ನ ಬಂಡವಾಳ ಮಾಡಿಕೊಂಡು ಜನಸಾಮಾನ್ಯರ ಸ್ವಾಸ್ಥ್ಯಕ್ಕೆ ಭಂಗ ತರಲಾಗುತ್ತಿದೆ. 

       ಒಂದೆರೆಡು ದಶಕಗಳ ಹಿಂದೆ ಅದ್ಯಾರೋ ಜೈನ್ ಎಂಬಾತ ಉದಯ ಟೀವಿಯಲ್ಲಿ ಜಾತಕ ಹೇಳುತ್ತಿದ್ದರು, ಒಮ್ಮೆ ತುಮಕೂರಿನಲ್ಲಿ ಮನೆಯ ಮುಂದೆ ಆಡುತ್ತಿದ್ದ ಮಗು ನಾಪತ್ತೆಯಾಯಿತು. ಪೋಷಕರು ಪ್ರಸಿದ್ದ ಜ್ಯೋತಿಷಿ ಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದ ಜೈನ್ ನನ್ನ ಭೇಟಿ ಯಾದರು. ಆತ ಮಗು ಬದುಕಿದೆ ಇಂತಹ ದಿಕ್ಕಿನಲ್ಲಿ ಹುಡುಕಿ ಎಂದ, ನಾಲ್ಕೈದು ದಿನ ಹುಡುಕಿ ಸುಸ್ತಾದ ಪೋಷಕರು ಮನೆಯ ಮುಂದೆ ಕಾರು ನಿಲ್ಲಿಸಿ ಒಳಹೋಗುವಾಗ ಡಿಕ್ಕಿಯಲ್ಲಿ ಅದೆಂತಹುದೋ ಕೆಟ್ಟ ವಾಸನೆ ತೆರೆದು ನೋಡಿದರೆ ಆ ಪುಟ್ಟ ಕಂದ ಕಾರಿನ ಡಿಕ್ಕಿಯಲ್ಲಿ ಸಾವನ್ನಪ್ಪಿದ್ದ, ಅಕಸ್ಮಿಕವಾಗಿ ತೆರೆಯಲ್ಪಟ್ಟಿದ ಡಿಕ್ಕಿ ಒಳಗೆ ಹೋಗಿ ಕುಳಿತ ಮಗುವಿಗೆ ಹೊರಬರಲಾಗಿರಲಿಲ್ಲ ಪೋಷಕರು ನೋಡಿರಲಿಲ್ಲ. ಅದೇ ರೀತಿ ಹಾಸನ ಬಳಿಯ ರಾಜಘಟ್ಟದ ಬಳಿ ದಶಕಗಳ ಹಿಮದೆ ಓರ್ವ ಮಹಿಳೆ ಸತ್ತು ಹೋದ ಬಾಲಕಯೊಬ್ಬಳನ್ನು ಬದುಕಿಸುತ್ತೇನೆ ಎಂದು ಅಮಾಯಕ ರೈತ ದಂಪತಿಗಳ ಬಳಿ ಹಣ ಪಡೆದು ಹೋಮ ಹವನ ಪೂಜೆ ಮಾಡಿದ್ದಳು, ಮದ್ಯರಾತ್ರಿಯ ಪೂಜೆಯ ನಂತರ ಬಾಲಕಿ ಎದ್ದು ಬರುತ್ತಾಳೆಂದು ತಿಳಿಸಲಾಗಿತ್ತು, ಸರಿ ಈ ಸಂಗತಿ ಬಾಯಿಂದ ಬಾಯಿಗೆ ಹರಡಿ ಸಾವಿರಾರು ಜನ ಪವಾಡ ನೋಡಲು ಅವತ್ತು ನೆರೆದು ಬಿಟ್ಟಿದ್ದರು! ಮದ್ಯರಾತ್ರಿ ಕಳೆದರೂ ಬಾಲಕಿ ಬದುಕಿ ಬರದಿದ್ದಾಗ ಜನ ಆಕೆಯಿದ್ದ ಮನೆಗೆ ಬೆಂಕಿ ಹಚ್ಚಿ ಅಟ್ಟಾಡಿಸಿ ಹೊಡೆದಿದ್ದರು. ಹೀಗೆ ಅನೇಕ ಸಂಗತಿಗಳು ನಮ್ಮ ನಡುವೆಯೇ ನಡೆಯುತ್ತಿದ್ದರೂ ಸಹಾ ದುರ್ಬಲ ಮನಸ್ಸಿನ ಮಂದಿ ನಂಬಿಕೆಗಳಿಗೆ ಜೋತು ಬಿದ್ದಿದ್ದಾರೆ. ಇಂತಹವರ ನಂಬಿಕೆಗಳನ್ನು ಪ್ರೋತ್ಸಾಹಿಸಲು ಚಾನಲ್ ಗಳು ಕಾರ್ಯಕ್ರಮವನ್ನ ಪ್ರಸಾರ ಮಾಡುತ್ತಿವೆ. 
  
      ಅದ್ಯಾರೋ ಒಬ್ಬ ಬಿಕನಾಸಿ ಸಂಖ್ಯಾಶಾಸ್ತ್ರಜ್ಞ ಲೈವ್ ನಲ್ಲಿ ಮಹಿಳೆಯೋರ್ವರ ಕರೆ ಸ್ವೀಕರಿಸುತ್ತಾನೆ, ಅತ್ತಲಿಂದ ಆ ಮಹಿಳೆ ತಮ್ಮ ಸಂಸಾರ ಗುಟ್ಟುಗಳ  ಕುರಿತು ಹೇಳಿಕೊಳ್ಳುತ್ತಾಳೆ, ಇವನು ಲೈವ್ ನಲ್ಲಿಯೇ ಅವಳ ಮೊಬೈಲ್ ಸಂಖ್ಯೆಯನ್ನು ಪಡೆದುಕೊಂಡು ಬೇಟಿ ಯಾಗುವಂತೆ ತಿಳಿಸುತ್ತಾನೆ! ಮುಂದೆ ಏನಾಯ್ತು ಗೊತ್ತಿಲ್ಲ. ಇನ್ನು ಕೆಲವು ಬೃಹಸ್ಪತಿಗಳಿದ್ದಾರೆ, ವಿಳ್ಯದೆಲೆ ಜೋಡಿಸಿ ನೋಡುವುದು, ಕವಡೆ ಬಿಟ್ಟು ಹೇಳುವುದು, ಇನ್ನೊಬ್ಬ ಕರ್ಣ ಪಿಚಾಚಿ ಇದ್ದಾನೆ ಅದೇನೋ ಕಿವಿಯ ಬಳಿ ಕೇಳಿಸಿಕೊಂಡಂತೆ ನಟಿಸುತ್ತಾನೆ ಮತ್ತೊಬ್ಬ ತನ್ನ ಮುಂದಿರುವ ತಟ್ಟೆಯ ನೀರನ್ನು ನೋಡಿ ಮತ್ತೇನೋ ಬೊಗಳುತ್ತಾನೆ. ಅಷ್ಠೇ ಆದರೆ ಪವಾಗಿಲ್ಲ ತಾವು ಹೇಳಿದ್ದು ವೇದ ವಾಕ್ಯವೆಂಬಂತೆ ಮತ್ತು ಪಾಲಿಸಲೇ ಬೇಕೆಂಬ ಆಜ್ಞೆಯನ್ನು ಮಾಡಿ ಬಿಡುತ್ತಾರೆ. ಚಾನಲ್ ನಲ್ಲಿ ಬಂದ ಕೆಲ ದಿನಗಳ ನಂತರ ಊರೂರು ಸುತ್ತಿ ತಾಯತ ಮತ್ತಿತರ ಪದಾರ್ಥಗಳನ್ನ ನೀಡಿ ಜನರನ್ನ ವಂಚಿಸುವ ಈ ವಂಚಕರು ಖಾಸಗಿಯಾಗಿ ಅದೆಷ್ಟರ ಮಟ್ಟಿಗೆ ಬೆಳೆದಿರುತ್ತಾರೆಂದರೆ ಅದು ಊಹೆಗೂ ನಿಲುಕದ್ದು. 
  
       ಕೆಲ ದಿನಗಳ ಹಿಂದೆ ಕುತೂಹಲದಿಂದ ಛಾನಲ್ ನಲ್ಲಿ ಬರುವ ಗುರೂಜಿ ಯೊಬ್ಬನನ್ನು ನೋಡಲು ಅಚಾನಕ್ಕಾಗಿ ಹೋಗ ಬೇಕಾಯ್ತು. ಬೆಂಗಳೂರು ಹೊರವಲಯದಲ್ಲಿ ಆತನ ಮಠ, ಮುಖ್ಯ ನಗರದಿಂದ 10-15ಕಿಮಿ ಒಳ ರಸ್ತೆಯಲ್ಲಿ ಹೋದರೆ ಸುಮಾರು ನೂರಾರು ಎಕರೆಯಲ್ಲಿ ವಿಶಾಲವಾಗಿ ಸ್ಥಾಪಿಸಲ್ಪಟ್ಟ ಮಠ! ಅದಕ್ಕೆ ಭದ್ರ ಬೇಲಿ, ಸೆಕ್ಯುರಿಟಿ ಗುರೂಜಿಯ ಅಪ್ಪಣೆಯಿಲ್ಲದೇ ಒಳಗೆ ಪ್ರವೇಶವಿಲ್ಲ. ಇನ್ನು ಅವನ ಹಿನ್ನೆಲೆ ಕೇಳಿ ದಂಗಾಗುವ ಸರದಿ ನನ್ನದು, ಆತ ಒಬ್ಬ ಉಂಡಾಡಿ ಗುಂಡ, ಸರಿಯಾಗಿ ಓದದೇ ಬೆಂಗಳೂರಿನ ಗಲ್ಲಿಯಲ್ಲಿ ಕಾಲ ಕಳೆಯುತ್ತಾ ಕೀಟಲೆ ಮಾಡಿಕೊಂಡಿದ್ದವನು, ಕೇವಲ ನಾಲ್ಕೈದು ವರ್ಷಗಳಲ್ಲಿ ಹೀಗಾಗಿ ಬಿಟ್ಟಿದ್ದ, ಅವನ ವೇಷಭೂಷಣವೂ ಬದಲಾಗಿದೆ, ಓಡಾಟಕ್ಕೆ ಐಷಾರಾಮಿ ಕಾರು ಬಂದಿದೆ, ಟಿವಿ ಯಲ್ಲಿ ನೋಡಿ ಬರುವವರಿಗೆ ಸಾವಿರ ಗಟ್ಟಲೇ ಫೀಸು ಸುಲಿಯುತ್ತಾನೆ. ಇದು ಇವನೊಬ್ಬನ ಕಥೆಯಲ್ಲ ಟೀವಿಯಲ್ಲಿ ಬರುವ ಬಹುತೇಕ ಎಲ್ಲಾ ಅಸಾಮಿಗಳ ಕಥೆ. ಇನ್ನೂ ಕೆಲವರಿದ್ದಾರೆ ವಾಸ್ತು ತಜ್ಞರೆಂಬ ಕೋಡು ಬೇರೆ ಇವರಿಗೆ, ಹೊಟ್ಟೆ ಹೊರೆಯಲು ಪ್ರಾಮಾಣಿಕವಾದ ಹಲವು ದಾರಿಗಳಿದ್ದರೂ ಸಹಾ ನಂಬಿಕೆಗಳನ್ನ ಬಂಡವಾಳವಾಗಿ ಮಾಡಿಕೊಂಡು ಜನರನ್ನು ಹೆದರಿಸುತ್ತಾ ದುಡ್ಡು ಮಾಡಲು ನಿಂತು ಬಿಟ್ಟಿದ್ದಾರೆ. ದೃಶ್ಯ ಮಾಧ್ಯಮಗಳು ಇಂಥಹವರಿಗೆ ಸಾಥ್ ನೀಡುತ್ತಾ ಬೇಜವಾಬ್ದಾರಿತನ ಪ್ರದರ್ಶಿಸುತ್ತಿವೆ. 
  
      ರಾಜ್ಯ ಸರ್ಕಾರ ಮೌಡ್ಯಗಳ ನಿರ್ಬಂಧ ಕಾಯ್ದೆಯನ್ನು ಜಾರಿಗೆ ತರಲು ಪ್ರಯತ್ನ ಆರಂಭಿಸಿದೆ, ಸಧ್ಯ ಲೋಕಸಭಾ ಚುನಾವಣೆ ಮುಗಿದ ಮೇಲಾದರೂ ಈ ಕುರಿತು ನಿಷ್ಟುರವಾದ ನಿಲುವನ್ನು ಪ್ರದರ್ಶಿಸಿ ಮೌಡ್ಯದ ಪರಿಮಿತಿಯನ್ನು ಗುರುತಿಸಿ ಜ್ಯೋತಿಷಿಗಳಿಗೆ, ಬಾಬಾಗಳಿಗೆ, ವಾಸ್ತುತಜ್ಞರಿಗೆ, ಮೌಢ್ಯ ಪ್ರಸಾರ ಮಾಡುವವರಿಗೆ ನಿರ್ಬಧ ಹಾಕುವುದು ಒಳಿತು. ಜನರಿಗೆ ಸೌಲಭ್ಯಗಳು ಹೆಚ್ಚಾದಂತೆ ದುಡ್ಡು ಹೆಚ್ಚಾದಂತೆ ನಂಬಿಕೆಗಳಿಗೆ ಹೆಚ್ಚು ಮೊರೆ ಹೋಗುತ್ತಿದ್ದಾರೆ, ಮೌಡ್ಯ-ಕಂದಾಚಾರಗಳಿಗೆ ಬಲಿಯಾಗುತ್ತಿದ್ದಾರೆ ಅದು ವರ್ತಮಾನದ ದುರಂತಗಳಲ್ಲೊಂದು, ನಂಬಿಕೆಗಳನ್ನು ಸಹಾ ವೈಚಾರಿಕವಾಗಿ ವಿಶ್ಲೇಷಿಸುವ ಮತ್ತು ಚೌಕಟ್ಟಿನಲ ಎಲ್ಲೆಯೊಳಗೆ ಸರಿ ಕಂಡಿದ್ದನ್ನು ಒಪ್ಪಿಕೊಳ್ಳುವ ಜಾಗೃತ ಸ್ಥಿತಿಯನ್ನ ಪ್ರದರ್ಶಿಸಬೇಕಿದೆ. 
      

Sunday, March 16, 2014

ಭ್ರಮೆ ಮತ್ತು ಬದುಕು!

ಭ್ರಮೆ ಮತ್ತು ಬದುಕು ಹಲವು ಸಲ ತಳುಕು ಹಾಕಿಕೊಂಡಿರುತ್ತವೆ. ಬದಲಾಗುವ ಕಾಲಘಟ್ಟದಲ್ಲಿ ಸಿದ್ದಾಂತಗಳು ಬ್ರಷ್ ಅಪ್ ಆಗಬೇಕು, ನಿಲುವುಗಳು ಬದಲಾಗ ಬೇಕು, ಸಾರ್ವಜನಿಕವಾಗಿ ಹೇಗೆ ತೆರೆದುಕೊಳ್ಳಬೇಕು ಎಂಬುದು ಸಹಾ ಮುಖ್ಯವಾಗುತ್ತದೆ. ಇದು ಕೆಲವೊಮ್ಮೆ ನಗೆಪಾಟಲಿಗೂ ಈಡು ಮಾಡುತ್ತದೆ. ಭ್ರಮೆಯ ಬದುಕಿನಿಂದ ಅನೇಕ ಅವಕಾಶಗಳು ಕಳೆದು ಹೋಗಬಹುದು, ಹತ್ತಿರದಲ್ಲಿದ್ದವರು ದೂರ ಸರಿದು ಹೋಗಬಹುದು. ಇದು ಬದುಕುಗಳನ್ನು ಎಲ್ಲಿಂದೆಲ್ಲಿಗೋ ತಂದು ನಿಲ್ಲಿಸಿ ಬಿಡಬಹುದು. 
      ಅವರೊಬ್ಬ ಕನ್ನಡದ ಹೆಸರಾಂತ ಕವಿ, ಗ್ರಾಮೀಣ ಸೊಗಡಿನಲ್ಲಿ ಬರೆಯುತ್ತಿದ್ದ ಅವರು ಸಾಹಿತ್ಯ ವಲಯದಲ್ಲಷ್ಟೇ ಅಲ್ಲ ಶೈಕ್ಷಣಿಕ ವಲಯದಲ್ಲೂ ಛಾಪು ಮೂಡಿಸಿದವರು.  ಮುಂದೆ ಅವರು ದೊಡ್ಡ ಪ್ರಶಸ್ತಿಯ ಹಿರಿಮೆಗೂ ಪಾತ್ರರಾದರೆನ್ನಿ, ಸರಿ ಅವರನ್ನು ಓಲೈಸುವ, ಸಭೆಗಳಿಗೆ ಕರೆಯುವ ಉಮ್ಮೇದಿಯೂ ಇರುತ್ತದಲ್ಲಾ, ಇದನ್ನೇ ಒಂದು ಛಾನ್ಸ್ ಆಗಿ ತೆಗೆದುಕೊಂಡ ಮಹಾಶಯರು ಒಂದು ಕಾರ್ಯಕ್ರಮಕ್ಕೆ ಇಂತಿಷ್ಟು ಹಣ, ಐಷಾರಾಮಿ ವಾಹನ, 5ಸ್ಟಾರ್ ದರ್ಜೆಯ ಹೋಟೆಲ್, ರಾತ್ರಿಗೆ ನಾಲ್ಕಂಕಿ ಬೆಲೆ ಬಾಳುವ ಪಾನೀಯ ಹೀಗೆ ಪಟ್ಟಿ ಇದರ ಜೊತೆಗೆ ಅವರೇ ಹೇಳುವ ದಿನಾಂಕಕ್ಕೆ ಕಾರ್ಯಕ್ರಮ! ಯಾವುದೇ ಷೆಡ್ಯೂಲ್ ಇಲ್ಲದಿದ್ದರೂ ಸಂಘಟಕರು ಹೇಳುವ ದಿನಾಂಕಕ್ಕೆ ಇವರು ಬ್ಯುಸಿ ಎಂಬುದನ್ನು ಹೇಳಲು ಮರೆಯುತ್ತಿರಲಿಲ್ಲ. ಕಾರ್ಯಕ್ರಮ ಸಂಘಟಕರು ಮತ್ತು ಸಾಹಿತ್ಯ ಚಟುವಟಿಕೆ ನಡೆಸುವ ಸಂಸ್ಥೆಗಳೂ ಸಹಾ ಈ ಡಿಮ್ಯಾಂಡ್ ನೋಡಿ ಕರೆಯುವುದನ್ನೇ ಬಿಟ್ಟು ಬಿಟ್ಟರು. 

      ಅವನು ಹಳ್ಳಿ ಹೈದ ತುಂಬಾ ಕಷ್ಟ ಪಟ್ಟು ಆಟೋಟ ಗಳಲ್ಲಿ ಪಾಲ್ಗೊಳ್ಳುತ್ತಿದ್ದ, ನಿರಾಸೆಯಾದರೂ ಅಂದು ಕೊಂಡಿದ್ದನ್ನು ದಕ್ಕಿಸಿಕೊಳ್ಳುವಲ್ಲಿ ನಿಸ್ಸೀಮ! ಪದವಿ ನಂತರ ಮಹಾನಗರಿ ಬೆಂಗಳೂರು ತಲುಪಿಕೊಂಡ, ಅವಕಾಶವಾದಾಗಲೆಲ್ಲ ರಾಷ್ಟ್ರ-ಅಂತರ ರಾಷ್ಟ್ರೀಯ ಕ್ರೀಡೆಗಳಲ್ಲಿ ಪಾಲ್ಗೊಳ್ಳುತ್ತಿದ್ದ ಪದಕಗಳನ್ನು ತರುತ್ತಿದ್ದ, ಆಗೆಲ್ಲ ಖರ್ಚಿಗೆ ದುಡ್ಡು ಬೇಕಿತ್ತಲ್ಲ ಹಾಗಾಗಿ ನನ್ನದೊಂದು ಫೋಟೋ ಸುದ್ದಿ ಹಾಕಿ ಎಂದು ಪತ್ರಿಕಾಲಯಗಳಿಗೆ ಎಡತಾಕುತ್ತಿದ್ದ, ಅಧಿಕಾರಸ್ಥರ ಮನೆಗಳಿಗೆ ವೆಚ್ಚ ಬರಿಸಲು ಕೋರಿ ಎಡತಾಕುತ್ತಿದ್ದ! ಅಂತಹ ಹೈದ ಅದೊಂದು ದಿನ ಅಂತರ ರಾಷ್ಟ್ರೀಯ ಮಟ್ಟದ ಪದಕವನ್ನ ಗಿಟ್ಟಿಸಿಯೇ ಬಿಟ್ಟಿದ್ದ. ಸರಿ ಆತನಿಗೆ ದಕ್ಕಿದ ದಿಡೀರ್ ಹೆಸರನ್ನು ಜನಪ್ರಿಯತೆಯನ್ನ ನಿಭಾಯಿಸುವುದು ಹೇಗೆ ಎಂಬುದನ್ನು ವಿವೇಚಿಸದೇ ಏಕಾಏಕಿ ಪ್ರತಿಷ್ಠಾ ಮನೋಭಾವಕ್ಕೆ ಒಳಗಾಗಿ ಬಿಟ್ಟ(superiority complex). ಜನ ಪ್ರೀತಿಯಿಂದ ಕರೆದರೆ ಮಾತನಾಡಿಸಿದರೆ ಇವನದ್ದು ಪ್ರತಿಷ್ಠೆಯ ಮಾತು, ಕಾರ್ಯಕ್ರಮಗಳಿಗೆ ಕರೆದರೆ ಇಂತಿಷ್ಟು ದುಡ್ಡು ಎಂದು ನಿಗದಿ ಮಾಡಿಬಿಟ್ಟ! ಜನ ಕರೆಯುವುದನ್ನೇ ನಿಲ್ಲಿಸಿ ಬಿಟ್ಟರು, ಥೂ ಇವನಾ ನಾವು ಇಷ್ಟಪಟ್ಟ ಸಾಧಕ ಎಂಬ ಮಾತುಗಳು ಕೇಳಿ ಬಂದವು!

     ಅದು ಸಾಹಿತ್ಯ ಸಂಸ್ಥೆಯೊಂದರ ಕಾರ್ಯಕ್ರಮ ಸಂಘಟಕರು ಸಾಹಿತಿಯೊಬ್ಬರಿಗೆ ದೂರವಾಣಿ ಕರೆ ಮಾಡಿ ಇಂಥ ಕಾರ್ಯಕ್ರಮ ನೀವು ಬರಬೇಕು ಎಂದು ಮನವಿ ಮಾಡಿದರು, ಆ ಸಾಹಿತಿ ಶೈಕ್ಷಣಿಕ ವಲಯದಲ್ಲಿ ಉದ್ಯೊಗದಲ್ಲಿರುವಾತ ನಿರೀಕ್ಷಿಸಿದ್ದಕ್ಕಿಂತ ಹೆಚ್ಚಾಗಿ 6ಅಂಕಿ ಸಂಬಳ ಪಡಯುವಾತ, ನೋಡಿ ಇವ್ರೆ ನಾನು ಆ ಕಾರ್ಯಕ್ರಮಕ್ಕೆ ಬರೋಲ್ಲ, ಉದ್ಘಾಟನೆಗೆ ಬಂದು ಬಿಡ್ತೀನಿ ಎನ್ನಬೇಕೆ, ಸಂಘಟಕರಿಗೆ ಕಸಿವಿಸಿ ಬೇಡ ಉದ್ಘಾಟನೆಗೆ ಬೇರೆಯವರು ಇದ್ದಾರೆ ಎಂದು ಹೇಳುವ ಅವಕಾಶವೇ ಸಿಗಲಿಲ್ಲ, ಸರಿ ಕಾರ್ಯಕ್ರಮದ ದಿನ ಸಾಹಿತಿ ಮಹಾಶಯರು ಬಂದರು ಇನ್ನೂ ವೇದಿಕೆ ಏರಿ ನಾಡಗೀತೆ ಹೇಳಬೇಕು ತಕ್ಷಣವೆ ವೇದಿಕೆಯ ಹಿಂದೆ ನಿಂತಿದ್ದ ಸಂಘಟಕರೆಡೆಗೆ ತಿರುಗಿ ನೋಡ್ರೀ ನಾನು ಕಾರ್ ಮಾಡ್ಕೊಂಡು ಬಂದಿದೀನಿ, ನನಗೆ ಇಷ್ಟು ಕಾರ್ಯಕ್ರಮ ಮುಗಿದ ತಕ್ಷಣ ಹೊರಡ್ತೀನಿ ಬೇಗ ವ್ಯವಸ್ಥೆ ಮಾಡಿ ಎಂದು ಬಡಬಡಿಸಿದರು. ಸಂಘಟಕರು ಸುಸ್ತೋ ಸುಸ್ತು!

      ಅದು ಮದ್ಯಮ ವರ್ಗದ ಕುಟುಂಬ, ಜಿಲ್ಲೆಯವರೇ ಆದರೂ ರಾಜಧಾನಿಯಲ್ಲಿ ನೆಲೆಸಿದ್ದಾರೆ. ಆ ಕುಟುಂಬದ ಪೈಕಿ ಒಬ್ಬಾಕೆ ಕಲಾವಿದೆಯಾಗಿ ಹೆಸರು ಮಾಡಿದ್ದಾರೆ! ಅದು ಮಾತಾಡುವ ಗೊಂಬೆಯ ಒಡತಿ! ಸರಿ ನಮ್ ಜಿಲ್ಲೆಯವರಲ್ವಾ ಒಮ್ಮೆ ಕರೆದು ಸಾರ್ವಜನಿಕ ಸನ್ಮಾನ ಮಾಡೋಣ ಎಂದು ಕೊಂಡ ಆಕೆಯ ತಾಲೂಕಿನ ತಹಸೀಲ್ದಾರರು ಫೋನಾಯಿಸಿದರು. ಸದರಿ ಯುವತಿಯ ತಂದೆ ಫೋನ್ ಎತ್ತಿಕೊಂಡರು. ರೀ ಸನ್ಮಾನ ಅತ್ಲಾಗಿರ್ಲಿ ಮೊದ್ಲು ನಮ್ ನಂಬರ್ ನಿಮಗೆ ಕೊಟ್ಟಿದ್ದು ಯಾರು? ಅವರು ಇಲ್ಲ ಬಾಂಬೆ ಲಿ ಕಾರ್ಯಕ್ರಮ ಇದೆ, ಸುಖಾ ಸುಮ್ಮನೆ ನಮ್ ಹೆಸರು ಹೇಳಿಕೊಂಡು ಕಾರ್ಯಕ್ರಮ ಆಯೋಜಿಸ ಬೇಡಿ, ನಮ್ದು ಏನಿದ್ರು 5ಅಂಕಿ ಸಂಭಾವನೆ ಕೊಡೋ ಹಾಗಿದ್ರೆ ಹೇಳಿ ಆಮೇಲೆ ನಾವೇ ಡೇಟ್ ಕೊಡ್ತೀವಿ ಅಂತ ಹೇಳಿ ಫೋನ್ ಕುಕ್ಕಿಬಿಡಬೇಕೆ. ತಹಸೀಲ್ದಾರ್ ಸುಸ್ತೋ ಸುಸ್ತು. ಸರಿ ಒಮ್ಮೆ ರಾಜಧಾನಿಗೆ ಹೋದಾಗ ಅವರ ಮನೆಗೆ ಹೋಗುವ ಅವಕಾಶ ಬಂತು. ಏನಾಶ್ಚರ್ಯ ಮನೆ ಬಾಗಿಲಿಗೆ ಬಂದು ನಮ್ಮೂರು ಕಡೇವ್ರಾ ಬನ್ನಿ ಅಂತ ಸ್ವಾಗತಿಸಿ ಕರೆದರು. ನಮ್ಮೂರಿಗೆ ಬಂದು ಕಾರ್ಯಕ್ರಮ ಮಾಡಬೇಕು ಹೊರಗಡೆ ಏನ್ ಹೆಸರು ಮಾಡಿದ್ರೆ ಏನು ನಮ್ಮೂರಲ್ಲಿ ಗುರುತಿಸಿದ ಹಾಗೆ ಆಗಲ್ಲ ನೋಡಿ ದುಡ್ಡು ನಾವು ಗಣನೆಗೆ ತಗೊಳ್ಳಲ್ಲ ಅನ್ನಬೇಕೆ ಸುಸ್ತಾಗುವ ಸರದಿ ನಮ್ಮದು. 

        ಅವರು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ವಿದ್ವಾಂಸರು ಖ್ಯಾತ ಗಾಯಕರು, ತಾವು ಪ್ರೀತಿಸುವ ಗಾಯನದ ಬೆನ್ನು ಬಿದ್ದ ಅವರು ಬ್ಯಾಂಕ್ ನೌಕರಿಗೆ ರಾಜೀನಾಮೆ ನೀಡಿ ಹುಟ್ಟಿದ ಹಳ್ಳಿಗೆ ಮರಳಿ ಬಂದು ಬಿಟ್ಟರು. ಒಂದು ಕಾಲದಲ್ಲಿ ದೊಡ್ಡ ಸಂಗೀತಗಾರರನ್ನು ಹೊಂದಿ ಹೆಸರು ಮಾಡಿದ್ದ ಊರಿನ ಪರಂಪರೆಯನ್ನು ಮರಳಿಸುವ ಧೃಢ ಸಂಕಲ್ಪ ಮಾಡಿದರು ಮತ್ತು ಅದನ್ನು ಸಾಕಾರ ಮಾಡಿಸಿಕೊಳ್ಳುವ ದಿಸೆಯಲ್ಲಿ ಇಂದಿಗೂ ಪ್ರಯತ್ನ ಮಾಡುತ್ತಲೇ ಇದ್ದಾರೆ, ತಮ್ಮ ಉದ್ದೇಶದಲ್ಲಿ ಸಾಫಲ್ಯತೆಯನ್ನು ಪಡೆದುಕೊಂಡಿದ್ದಾರೆ. ಇಂತಹವರನ್ನು ನಮ್ಮೂರಲ್ಲೂ ಕರೆಸಬೇಕು ಹಾಡಿಸಬೇಕು ಆದರೆ ಹೊರಗೆ ಇವರ ಕಾರ್ಯಕ್ರಮಕ್ಕೆ 50ಸಾವಿರದವರೆಗೆ 1-2ಗಂಟೆಗೆ ಗಾಯನಕ್ಕೆ ದುಡ್ಡು ಕೊಡುವವರಿದ್ದಾರೆ ನಮಗೆ ಇದು ಸಾಧ್ಯವೇ ಎಂದು ಯೋಚಿಸುವ ಹೊತ್ತಿಗೆ ಒಮ್ಮೆ ಭೇಟಿಯಾದ ಅವರು ನೋಡಿ ಇದು ನನ್ನೂರು, ನನ್ನ ಜಿಲ್ಲೆ ನಯಾ ಪೈಸೆಯೂ ಬೇಕಿಲ್ಲ ನಾನೇ ಬಂದು ಹಾಡುತ್ತೇನೆ ನೀವು ಕರೆದಲ್ಲಿಗೆ ಬಂದು ಪಾಲ್ಗೋಳ್ಳುತ್ತೇನೆ ಎನ್ನುವ ಮೂಲಕ ಇಂಥಹವರು ಇದ್ದಾರ ಎಂದು ಅನಿಸುವಂತೆ ನಡೆದುಕೊಂಡರು.

        ಅದು ಮಹಿಳಾ ದಿನಾಚರಣೆಯ ಕಾರ್ಯಕ್ರಮ, ಸರಿ ಮಹಿಳೆಯರಿಗೆ ಸ್ಪೂರ್ತಿದಾಯಕವಾಗಿ ಒಬ್ಬ ಸೆಲೆಬ್ರಿಟಿಯನ್ನು ಕರೆಯೋಣ ಅವರಿಗೆ ವಾಹನ, ಸ್ವಲ್ಪಮಟ್ಟಿನ ಸಂಭಾವನೆ ಕೊಡೋಣ ಎಂದು ಕೊಂಡು ಒಂದು ಕಾಲದಲ್ಲಿ ತುಂಬಾ ಹೆಸರು ಮಾಡಿದ್ದ ಸೆಲೆಬ್ರಿಟಿ ನಟಿಯೊಬ್ಬರನ್ನು ಕರೆದೆವು ಅವರು ತಕ್ಷಣ ಒಪ್ಪಿಕೊಂಡರು. ಅವರದ್ದೇ ವಾಹನದಲ್ಲಿ ಬರುತ್ತೇನೆ ಯಾವ ವಸತಿ ವ್ಯವಸ್ಥೆ, ಸಂಭಾವನೆ ಏನೂ ಬೇಡ 200ಕಿಮಿ ಯಾದರೂ ಪರವಾಗಿಲ್ಲ ಖುಷಿ ಬರೋಕೆ ಅಂದರು. ಆದರೆ ಕಾರ್ಯಕ್ರಮದ ದಿನ ಯಾವುದೋ ಪ್ರಮುಖ ಷೆಡ್ಯೂಲ್ ಬೆಂಗಳೂರಿನಲ್ಲೇ ಇದ್ದುದರಿಂದ ಬರಲಾಗುತ್ತಿಲ್ಲ ಎಂದು ವಿಷಾದಿಸಿದರು. ಆಯ್ತು ಎಂದು ಗೊತ್ತಿರುವ ಇತರೆ ಮಹಿಳಾ ಸೆಲೆಬ್ರಿಟಿಗಳನ್ನು ಕರೆದರೆ ಅವರ ಬೇಡಿಕೆಗಳ ಪಟ್ಟಿ ದೊಡ್ಡದಿತ್ತು, ಅದು ಸಂಘಟಕರ ಮಟ್ಟಕ್ಕೆ ನಿಲುಕುವುದಿರಲಿ ಅವರನ್ನ ಕರೆಯದೇ ಹಾಗೆ ಕಾರ್ಯಕ್ರಮ ಮಾಡಿದರು. 

       ಜನಪ್ರಿಯತೆ ಎನ್ನುವುದು ಸಾರ್ವತ್ರಿಕವಾಗಿ ದೊರೆತಾಗ ಅದು ದೀರ್ಘಕಾಲಕ್ಕೆ ಉಳಿಯಲಾರದು, ಆಕ್ಷಣಕ್ಕೆ ಮತ್ತು ಸ್ವಲ್ಪ ದಿನಕ್ಕೆ ಮಾತ್ರ ಅದು ಜೀವಂತವಾಗಿರುತ್ತೆ. ಅದನ್ನ ಹೇಗೆ ಬಳಸಿಕೊಳ್ಳಬೇಕು ಜನರಿಗೆ ಹತ್ತಿರವಾಗಿ ಹೇಗೆ ಉಳಿಯಬೇಕು ಎಂಬ ಕಾಮನ್ ಸೆನ್ಸ್ ಇಷ್ಟೋ ಜನರಿಗೆ ಇರುವುದಿಲ್ಲ ಹಾಗಾಗಿ ಅವರು ಎಂತಹ ದೊಡ್ಡ ಸಾಧಕರೇ ಆಗಿದ್ದರೂ ಅವೆಲ್ಲವೂ ಅವರ ನಡವಳಿಕೆಗಳಿಂದ ಸಾರ್ವತ್ರಿಕವಾಗಿ ಶೂನ್ಯವಾಗಿ ಬಿಡುತ್ತವೆ. ಹಾಗೆಯೇ ತಾವು ನಂಬಿಕೊಂಡದ್ದು ಮತ್ತು ಅಂದು ಕೊಂಡದ್ದೇ ಅಲ್ಟಿಮೇಟ್ ಎಂಬ ಮನಸ್ಥಿತಿಯೂ ಸಹಾ ಸಮಾಜದಲ್ಲಿ ಒಪ್ಪಿತವಾಗದು. ಪ್ರತೀ ಕಾಲಘಟ್ಟಕ್ಕು ಅಪ್ ಡೇಟ್ ಅನ್ನು ವ್ಯವಸ್ಥೆ ಬಯಸುತ್ತದೆ ಹಾಗೆಯೇ ಫ್ಲೆಕ್ಸಿಬಿಲಿಟಿಯನ್ನೂ ಸಹಾ ಇವನ್ನು ನಿಭಾಯಿಸುವುದನ್ನು ಕಲಿಯಬೇಕಾದರೆ ಮುಖ್ಯವಾಗಿ ಇಗೋ ಬಿಡಬೇಕು. ಹೊಸತನಕ್ಕೆ ತೆರೆದುಕೊಳ್ಳುವ ಮನಸ್ಥಿತಿಯು ಇರಬೇಕಲ್ಲವೇ?

Sunday, March 9, 2014

ಆಮ್ ಆದ್ಮಿಯ ಗುಂಗು ಮತ್ತು ಕೇಜ್ರಿವಾಲ್!



ಸಮಾಜ ಜೀವನದಲ್ಲಿ ಅನೇಕ ಕಾರಣಗಳಿಗೆ ಅನೇಕರು ಪ್ರಸಿದ್ದಿಗೆ ಬಂದು ಬಿಡಬಹುದು, ರಾಜಕಾರಣಿ, ಕಳ್ಳ, ಭಯೋತ್ಪಾದಕ, ಆಟಗಾರ, ಹಾಡುಗಾರ, ಕಲಾವಿದ, ಶಿಕ್ಷಣ ತಜ್ಞ ಹೀಗೆ ವಿವಿಧ ಆಯಾಮಗಳಲ್ಲಿ ಸಾದನೆ! ಗೈದಿದ್ದಕ್ಕಾಗಿ ಅಥವ ಅವರ ಕನಸುಗಳನ್ನು ನನಸು ಮಾಡಿಕೊಂಡಿದ್ದಕ್ಕಾಗಿ! ದಿಡೀರ್ ಪ್ರಸಿದ್ದಿಗೆ ಬಂದು ಬಿಡಬಹುದು. ಅನೇಕ ವೇಳೆ ಹಾಗೆ ಹೆಸರು ಮಾಡುವ ಮುನ್ಸೂಚನೆ ಇಲ್ಲದೇ ಇದ್ದಕ್ಕಿದ್ದ ಹಾಗೆ ಅದು ದಕ್ಕಿ ಬಿಡಬಹುದು ಒಳ್ಳೆಯ ಕಾರಣಕ್ಕೊ ಕೆಟ್ಟ ಕಾರಣಕ್ಕೋ ಏನೂ ಆಗಬಹುದು. ಅದು ಒಂದು ಕಡೆಯಾದರೆ ಇನ್ನು ಅಂತಹದ್ದೊಂದು ಜನಪ್ರಿಯತೆ! ದಕ್ಕಿದ ಮೇಲೆ ಅದನ್ನು ಹೇಗೆ ನಿಭಾಯಿಸುತ್ತಾರೆ ಎಂಬುದು ಸಹಾ ಮತ್ತೊಂದು ಅಧ್ಯಾಯವನ್ನ ತೆರೆದಿಡುತ್ತದೆ. ಹಾಗಾದರೆ ಜನಪ್ರಿಯತೆಯ ಮಾನದಂಡ ಏನು? ಜನಪ್ರಿಯ ಎಂದರೆ ಅದು ಹೇಗಿರಬೇಕು? ಜನಪ್ರಿಯರೆನಿಸಿಕೊಂಡವರು ಅದನ್ನು ಹೇಗೆ ಬಳಸುತ್ತಾರೆ ಎಂಬುದನ್ನು ತೆರೆದಿಡುವ ಪುಟ್ಟ ಪ್ರಯತ್ನವಷ್ಟೇ ಇದು. 


          ಬಹುಶ: ನಿಮಗೂ ಇಂತಹ ಅನುಭವಗಳು ಆಗಿರುತ್ತವೆ ಎಂದು ಕೊಳ್ಳುತ್ತಾ. ನನ್ನ ವೈಯುಕ್ತಿಕ ಅನುಭವದಿಂದಲೇ ನಿಮ್ಮ ಮುಂದೆ ತೆರೆದುಕೊಳ್ಳುತ್ತೇನೆ. ಅವನು ಕನಸುಗಾರ! ಒಂದೇ ಮುಟಿಗೆ ವ್ಯವಸ್ಥೆಯನ್ನು ಸುಧಾರಿಸುತ್ತೇನೆ ಭ್ರಷ್ಟಾಚಾರವನ್ನು ಸದೆಬಡಿಯುತ್ತೇನೆ ಮತ್ತು ಅದಕ್ಕೆ ಮೂಲ ಕಾರಣರಾದವರನ್ನ ಬೆದರಿಸುತ್ತೇನೆ ಆ ಮೂಲಕ ಜಾಗೃತಿಯ ಸಂಚಲನವನ್ನ ಉಂಟು ಮಾಡುತ್ತೇನೆ ಎಂದು ಕೊಂಡಿದ್ದು ಆ ಸಬ್ ಇನ್ಸ್ ಪೆಕ್ಟರ್! ಆತ ಕಟ್ಟಾ ಸಿದ್ದಾಂತದ ಪಾಲಕ ಮತ್ತು ನೈತಿಕತೆ ಪ್ರಾಮಾಣಿಕತೆ ಇತ್ಯಾದಿಗಳನ್ನ ಇಟ್ಟುಕೊಂಡಿದ್ದವರು, ಆದರ್ಶದ ಬೆನ್ನು ಹತ್ತಿ ಉನ್ನತ ವ್ಯಾಸಂಗ ಮಾಡಿದ್ದರೂ ಸಹಾ ಆಯ್ದು ಕೊಂಡದ್ದು ಮಾತ್ರ ಸಬ್ ಇನ್ಸ್ ಪೆಕ್ಟರ್ ಹುದ್ದೆ, ವೃತ್ತಿಯನ್ನು ಹಾಗೆ ನಿಭಾಯಿಸುತ್ತಿದ್ದರೆನ್ನಿ! ಯಾವ ರಾಜಕಾರಣಿಯ ಶಿಫಾರಸ್ಸುಗಳಿಗೂ ಬೆಲೆ ಕೊಡುತ್ತಿರಲಿಲ್ಲ, ನ್ಯಾಯಯುತವಾದುದಕ್ಕೆ ಮಾತ್ರ ಮನ್ನಣೆ, ಶಾಲಾ ಕಾಲೇಜು ಗಳಿಗೆ ತೆರಳಿ ಅಧ್ಯಾಪಕರಿಲ್ಲದ ವಿಷಯಗಳ ಕ್ಲಾಸುಗಳಿಗೆ ಲೆಕ್ಚರ್ ಕೊಡುತ್ತಿದ್ದ, ಹುಡುಗರ ದಂಡು ಕಟ್ಟಿಕೊಂಡು ಆಟೋಟ ಪಂದ್ಯಗಳನ್ನು ಏರ್ಪಡಿಸುತ್ತಿದ್ದ ಒಟ್ಟಾರೆ ಆತ ಕಾರ್ಯ ನಿರ್ವಹಿಸುತ್ತಿದ್ದ ಕಡೆಗಳಲೆಲ್ಲ ಜನರ ಕಣ್ಮಣಿಯಾಗಿದ್ದ. ಸಖತ್ ಉತ್ಸಾಹಿಯಾಗಿದ್ದ ಆ ಎಸ್ ಐ ಇಲಾಖೆಯ ಕ್ರೀಡೆಗಳಲ್ಲೂ ಮುಂದು ಮುಖ್ಯವಾಗಿ ರೈಫಲ್ ಶೂಟಿಂಗ್ ನಲ್ಲಿ ರಾಜ್ಯಕ್ಕೆ ನಂ.1. ಸದಾ ರೈಫಲ್ ಅನ್ನು ಬಗಲಲ್ಲೇ ಇಟ್ಟುಕೊಂಡು ಸಮಾಜ ಬದಲಾವಣೆಯ ಕನಸು ಕಾಣುತ್ತಾ ಮಲಗುತ್ತಿದ್ದ ಆತ ಸಹಪಾಠಿಗಳೊಂದಿಗೆ ಬೆರೆತದ್ದು ಕಮ್ಮಿ ಹೀಗಿದ್ದ ಮನುಷ್ಯ ಒಮ್ಮೆ ಇಲಾಖೆಯ ರಾಷ್ಟ್ರೀಯ ಮಟ್ಟದ ಕ್ರೀಡೆಗೆ ಆಯ್ಕೆಯಾಗಿದ್ದ ಬೆಂಗಳೂರಿನಲ್ಲಿ ಅಭ್ಯಾಸಕ್ಕೆ ಬಂದವನು ಮರುದಿನ ಬೆಂಗಳೂರು ಬಿಡಬೇಕಿತ್ತು ಆದರೆ ಆಗಿದ್ದೇ ಬೇರೆ, ಅವತ್ತು ಶಾಸಕರ ಭವನಕ್ಕೆ ಹುಸಿ ಬಾಂಬ್ ಇಟ್ಟು ಬಿಟ್ಟಿದ್ದ! ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿದಿದ್ದ ಶಕ್ತಿಕೇಂದ್ರದ ವಾರಸುದಾರ ಭವನ ಅದು, ಈ ನಡುವೆ ತಾನೇ ಮಾಡಿಕೊಂಡ ಎಡವಟ್ಟಿನಿಂದ ಪೋಲೀಸರಿಗೆ ಸಿಕ್ಕುಬಿದ್ದ ಮತ್ತು ಪರಪ್ಪನ ಅಗ್ರಹಾರ ಜೈಲು ಪಾಲಾಗಿಬಿಟ್ಟ! ಅಷ್ಟೇ ಸಾಕಿತ್ತು ಆತನ ಜನಪ್ರಿಯತೆಗೆ, ಆದರ್ಶ ಸರಿ ಆದರೆ ಅದನ್ನು ನಿಭಾಯಿಸುವಲ್ಲಿ ಎಡವಿ ಹುಂಬತನ ಪ್ರದರ್ಶಿಸಿದ್ದ ಆ ಎಸ್ ಐ ಇದೇ ಕಾರಣಕ್ಕೆ ತನ್ನ ಪ್ರೀತಿಯ ಖಾಕಿಯನ್ನು ಕಳಚ ಬೇಕಾಯ್ತು! ಜೈಲು ಸೇರಿದ ಆತ 15ದಿನಕ್ಕೆ ಬಿಡುಗಡೆಯಾದಾಗ ಆತನನ್ನು ಎದುರುಗೊಳ್ಳಲು ದೊಡ್ಡ ಗುಂಪು ಕಾದಿತ್ತು. ಹೆಸರು ಮಾಡಿದ ಅನೇಕ ಬುದ್ದಿಜೀವಿಗಳು ಆತನ ಬೆನ್ನಿಗೆ ನಿಂತಿದ್ದರು, ಜನಪ್ರೀತಿಯನ್ನು ಸಕಾರಾತ್ಮಕವಾಗಿ ತೆಗೆದುಕೊಂಡ ಆತ ಆ ಹೊತ್ತಿಗೆ ತಣ್ಣಗೆ ಬಿಚ್ಚಿಕೊಳ್ಳುತ್ತಿದ್ದ ಮಾಹಿತಿ ಹಕ್ಕಿನ ಹೋರಾಟದ ಕಾವು ಹರಡಲು ರಾಜ್ಯದಾಧ್ಯಂತ ಸುತ್ತಿದ,ಜನಪ್ರಿಯತೆಯಿಂದಾಗಿ ಕಿರುತೆರೆಯ ದಾರವಾಹಿ ಗಳಲ್ಲಿ ಸಿನಿಮಾಗಳಲ್ಲಿ ಅವಕಾಶವೂ ಬಂತು, ತಾನೇ ಬೆರಳೇಣಿಕೆಯ ಚಿತ್ರಗಳಲ್ಲಿ ನಾಯಕನೂ ಆದ ಬರಕತ್ತಾಗಲಿಲ್ಲ. ಮುಂದೆ ಬಿಜೆಪಿ ಸರ್ಕಾರ ಆತನ ಜನಪ್ರಿಯತೆಯನ್ನು ಎನ್ ಕ್ಯಾಶ್ ಮಾಡಿಕೊಳ್ಳಲು ನಿಗಮವೊಂದಕ್ಕೆ ಅಧ್ಯಕ್ಷನನ್ನಾಗಿ ಮಾಡಿತು. ಕ್ಯಾಬಿನೇಟ್ ದರ್ಜೆಯ ಸ್ಥಾನಮಾನ ನೀಡಿತು, ಅದೇ ಗುಂಗಲ್ಲಿ ಉತ್ತರ ಕರ್ನಾಟಕದ ಜಿಲ್ಲೆಯೊಂದರಲ್ಲಿ ಕಳೆದ ಸಲ ವಿಧಾನ ಸಭೆಯ ಚುನಾವಣೆಗೂ ನಿಂತ ಸಬ್ ಇನ್ಸ್ ಪೆಕ್ಟರ್ ಹೀನಾಯ ಸೋಲು ಅನುಭವಿಸಿದರು! ಈಗ ಅವರ ಹೆಸರು ಯಾವ ಗಲ್ಲಿಯಲ್ಲೂ ಕೇಳಿ ಬರುತ್ತಿಲ್ಲ!ಎಲ್ಲ ಗಪ್ ಚುಪ್!


         ಇವತ್ತು ಆಮ್ ಆದ್ಮಿ ಪಕ್ಷದ ಕೇಜ್ರಿವಾಲ್, ನರೇಂದ್ರ ಮೋದಿ ಮತ್ತು ಅಣ್ಣಾ ಹಜಾರೆಯ ವಿಷಯದಲ್ಲೂ ಅಷ್ಟೇ ಆಗುತ್ತಿದೆ. ಆಡಳಿತ ಸೇವೆಯ ಅಧಿಕಾರಿಯಾಗಿದ್ದ ಅರವಿಂದ ಕೇಜ್ರಿವಾಲ್ ಅವತ್ತು ಅಣ್ಣಾ ಹಜಾರೆಯ ಬೆನ್ನೆಲುಬಾಗಿ ನಿಂತು ಲೋಕಪಾಲ್ ಬಿಲ್ ಅನುಷ್ಠಾನಕ್ಕೆ ನಡೆಸಿದ ಹೋರಾಟ ಇಡೀ ದೇಶವನ್ನೇ ಸೆಳೆದು ಬಿಟ್ಟಿತ್ತು. ಒಂದು ಬೃಹತ್ ಸಮೂಹ ಸನ್ನಿಯನ್ನು ಸರಿಯಾದ ರೀತಿಯಲ್ಲಿ ಕಾಯ್ದುಕೊಳ್ಳದೇ ಅಣ್ನಾಹಜಾರೆ ತೆರೆಮರೆಗೆ ಸರಿದ ಮೇಲೆ ಅದನ್ನು ಸರಿಯಾದ ರೀತಿಯಲ್ಲಿ ಎನ್ ಕ್ಯಾಶ್ ಮಾಡಿಕೊಂಡಿದ್ದು ಇದೇ ಅರವಿಂದ ಕೇಜ್ರಿವಾಲ್ ! ಯಾರೂ ನಿರೀಕ್ಷಿಸಿರದ ರೀತಿಯಲ್ಲಿ ದೆಹಲಿ ವಿಧಾನ ಸಭೆ ಚುನಾವಣೆಗಳಲ್ಲಿ ಯಶ ಕಂಡ ಆಮ್ ಆದ್ಮಿ ಕಾಂಗೈ ಬೆಂಬಲ ಪಡೆದು ಅಧಿಕಾರಕ್ಕೆರಿದ್ದು ಎಂಥಹವರು ತಲೆತೂಗುವಂತೆ ಮಾಡಿತ್ತು, ಆದರೆ ಅಧಿಕಾರಕ್ಕೆ ಬಂದ ಮೇಲೆ ಆಡಳಿತಗಾರ ಎಂಬುದನ್ನೆ ಮರೆತು ಬೀದಿ ಹೋರಾಟಕ್ಕಿಳಿದ ಕೇಜ್ರಿ ಎಲ್ಲ ವಿಷಯಗಳಲ್ಲೂ ದುಡುಕಿನ ನಿರ್ಧಾರ ತೆಗೆದುಕೊಂಡರು ಎನಿಸುತ್ತದೆ, ಆದರೆ ಅಧಿಕಾರಕ್ಕೆ ಅಂಟಿ ಕೂರದೇ ಆಡಿದ ಮಾತಿನಂತೆ 48ದಿನಗಳಿಗೆ ಖುರ್ಚಿ ಬಿಟ್ಟು ಇಳಿದು ಹೋಗಿದ್ದು ದೇಶದ ರಾಜಕಾರಣಿಗಳಿಗೆ ಮಾದರಿಯೇ ಸರಿ! ಆದರೆ ಇಂತಹ ಕೇಜ್ರಿವಾಲ್ ಲೋಕಸಭಾ ಚುನಾವಣೆಗಳ ಮೇಲೆ ಕಣ್ಣಿಟ್ಟು ಅಧಿಕಾರ ಕಳೆದುಕೊಂಡಿದ್ದು ಮಾತ್ರ ಮೂರ್ಖತನವೇ ಸರಿ! ಇವತ್ತು ಆಮ್ ಆದ್ಮಿ ಪಾರ್ಟಿಯಿಂದ ಇಡೀ ದೇಶದಾಧ್ಯಂತ 45000ಕ್ಕೂ ಅದಿಕ ಮಂದಿ ಸಂಸತ್ ಚುನಾವಣೆಗೆ ಅಭ್ಯರ್ಥಿಗಳಾಗಲು ಅರ್ಜಿ ಸಲ್ಲಿಸಿದ್ದಾರೆ ಈ ಪೈಕಿ 3500ಕ್ಕೂ ಹೆಚ್ಚು ಮಂದಿ ಪತ್ರಕರ್ತರು ಎಂಬುದು ದಿಟ. ದೆಹಲಿಯಲ್ಲಿ ಅಧಿಕಾರ ಹಿಡಿಯುವ ಮುನ್ನ ಕೇಜ್ರಿಯ ಪಾರದರ್ಶಕ ನಡೆ, ಅಧಿಕಾರಕ್ಕೇರಿದ ನಂತರ ಪ್ರದರ್ಶಿಸಿದ ನಿಲುವುಗಳು ವಿಭಿನ್ನ ನೆಲೆಗಟ್ಟಿನಲ್ಲಿ ಒಪ್ಪಿತವಾಗಬಹುದು ಇಲ್ಲ ನಿರಾಕರಣೆಗೆ ಒಳಗಾಗಬಹುದು ಆದರೆ ಆತನಿಗೆ ಮತ್ತು ಪಕ್ಷಕ್ಕೆ ದಕ್ಕಿದ ಜನಪ್ರಿಯತೆ ಅದೇ ಮೈಲೇಜನ್ನು ಕಾಯ್ದು ಕೊಂಡಿದೆಯೆ ಎಂಬ ಪ್ರಶ್ನೆಗೆ ಮಾತ್ರ ಸಿಗುವ ಉತ್ತರ ನಿರಾಸೆಯನ್ನು ಹುಟ್ಟಿಸುತ್ತದೆ. ಭರವಸೆಯ ಕ್ರಿಯೆಗಳು ಜನಪ್ರಿಯತೆಯ ಅಮಲಿನಲ್ಲಿ ಕೈಗೊಳ್ಳುವ ನಿರ್ಧಾರಗಳು ಎಲ್ಲ ಕಾಲಕ್ಕೂ ತುಡಿತವನ್ನು ಕಾಯ್ದಿಟ್ಟುಕೊಳ್ಳಲಾರದೇನೋ. ಕೆಲವೊಮ್ಮೆ ಅಂತಹ ನಿರ್ಧಾರಗಳು ಆತ್ಮ ವಂಚನೆಯ ನಿಲುವುಗಳಾಗಿ ನೈತಿಕ ಅಧ:ಪತನಕ್ಕೆ ದೂಡುತ್ತವೆ. ಸಧ್ಯ ಕೇಜ್ರಿವಾಲ್ ಹಾಗಾಗದಿರಲಿ, ಪಕ್ಷದ ಸಂಘಟನೆ ಮತ್ತು ಚುನಾವಣೆಯ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಆಗಮಿಸುತ್ತಿರುವ ಕೇಜ್ರಿವಾಲ್ ಆಯ್ದ ಜನರನ್ನು ಉದ್ದೆಶಿಸಿ ಮಾತುಕತೆ ನಡೆಸಲಿದ್ದಾರೆ. ಪಕ್ಷಕ್ಕೆ ದೇಣಿಗೆ ಸಂಗ್ರಹಿಸುವುದು ಈ ಮಾತುಕತೆಯ ಗುರಿಯಂತೆ. ಬೆಂಗಳೂರಿನ ಟೆಕ್ಕಿಯೊಬ್ಬರ ನೇತೃತ್ವದಲ್ಲಿ ಆಯೋಜಿಸಲಾಗುತ್ತಿರುವ ಈ ಕೂಟದಲ್ಲಿ ಪಾಲ್ಗೊಳ್ಳುವವರು ತಲಾ 20ಸಾವಿರ ದೇಣಿಗೆಯನ್ನು ಪಕ್ಷಕ್ಕೆ ನೀಡಬೇಕಂತೆ. ಈಗಾಗಲೇ ಆಮ್ ಆದ್ಮಿ ಪಕ್ಷ ಬುದ್ದಿಜೀವಿಗಳೆನಿಸಿಕೊಂಡವರನ್ನ ಸಮಾಜವಾದಿಗಳನ್ನ ತೆಕ್ಕೆಗೆ ತಂದುಕೊಂಡಿದೆ, ಬದಲಾವಣೆಯ ಭ್ರಮೆ ಹೊತ್ತವರನ್ನು ಸಹಾ, ಈ ನಡುವೆ ಕಳ್ಳ ಕಾಕರೂ ಸಹಾ ನುಸುಳುವ ಪ್ರಯತ್ನ ಮಾಡಿದ್ದಾರೆ. ಅಂದಹಾಗೆ AAP ಕಡಿದಾಳು ಶಾಮಣ್ಣ, ಹಾಜಬ್ಬ, ಕೋದಂಡರಾಮಯ್ಯ,  ರವಿಕೃಷ್ಣಾರೆಡ್ಡಿ, ಅರಕೇಶ್, ಶಶಿಧರ್ ಭಟ್ ರಂಥ ಕಳಂಕರಹಿತರನ್ನು ಕಣಕ್ಕೆ ಇಳಿಸಲು ಪ್ರಯತ್ನಿಸುತ್ತಿದೆಯಂತೆ.AAP ಬೇರೆ ರಾಜ್ಯಗಳಿಂದ ಎರವಲು ತಂದ ನಾಯಕರು-ಕಾರ್ಪಟೇಟ್ ಕುಳಗಳನ್ನು ಕಣಕ್ಕೆ ಇಳಿಸುತ್ತಿಲ್ಲವೆನಿಸುತ್ತದೆ. ಇದು ಒಳ್ಳೆಯ ಸುದ್ದಿ.

          

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...